Connect with us

ಅಂತರಂಗ

ಅರಿಮೆಯ ಅರಿವಿರಲಿ-5 : ಮನೋಲೈಂಗಿಕ ಸಂಘರ್ಷಗಳು

Published

on

Jocasta and Oedipus
  • ಯೋಗೇಶ್ ಮಾಸ್ಟರ್

ಗನು ತಾಯಿಯ ಜೊತೆಗೆ ಹೊಂದಿರುವಂತಹ ಅತಿಯಾದ ವ್ಯಾಮೋಹದ ಕತೆಗಳನ್ನೆಲ್ಲಾ ಮಾತೃಪ್ರೇಮವೆಂದು ಕರೆಯುತ್ತೇವೆ. ಹಾಗೆಯೇ ಮಗಳು ತಂದೆಯನ್ನು ಹುಚ್ಚಳಂತೆ ಹಚ್ಚಿಕೊಂಡಿದ್ದರೆ ಪಿತೃಪ್ರೇಮ ಅಪಾರವಾಗಿದೆ ಎನ್ನುತ್ತೇವೆ. ಅನ್ನೋಣ ತಪ್ಪೇನಿಲ್ಲ. ಆದರೆ ಮಗುವಿಗೆ ಸಾಮಾನ್ಯವಾಗಿ ತನ್ನ ವಿರುದ್ಧಲಿಂಗಿಯ ಪೋಷಕರೊಡನೆ ಪ್ರೀತಿ ಅಥವಾ ವಾತ್ಸಲ್ಯವು ಕೊಂಚ ಹೆಚ್ಚೇ ಇರುತ್ತದೆ. ತಂದೆಯೂ ಕೂಡಾ ಮಗಳನ್ನು ಹೆಚ್ಚು ಲಾಲಿಸಿದರೆ, ತಾಯಿ ಮಗನನ್ನು ಹೆಚ್ಚು ತಲೆಯ ಮೇಲೆ ಹೊತ್ತು ತಿರುಗುತ್ತಾಳೆ. ಅದೇ ರೀತಿ ಸಂಘರ್ಷಗಳು ಕೂಡಾ ಮಗಳಿಗೆ ಹೆಚ್ಚು ತಕರಾರು ಇರುವುದು ತಾಯಿಯ ಜೊತೆಗೆ. ಮಗಳ ಮೇಲಿನ ದೂರುಗಳ ಪಟ್ಟಿ ತಾಯಿಗೆ ಸಾಮಾನ್ಯವಾಗಿ ದೊಡ್ಡದಿರುತ್ತದೆ.

ಹಾಗೆಯೇ ಮಗನನ್ನು ಶಿಸ್ತಿಗೊಳಪಡಿಸಲು ತಂದೆ ಹೆಚ್ಚು ನಿಷ್ಟುರವಾಗಿರುತ್ತಾರೆ. ಕಾಠಿಣ್ಯ ತೋರುತ್ತಾನೆ. ಅದೇ ಕಠೋರ ಮತ್ತು ನಿಷ್ಟುರ ಧೋರಣೆ ಮಗಳ ವಿಷಯದಲ್ಲಿರುವುದಿಲ್ಲ. ಮಗಳೂ ಹಾಗೆಯೇ, ಅಮ್ಮನ ಕಂಡರೆ ಭಯವಿದ್ದರೂ ಅಥವಾ ಅವಳು ಬೈಯುತ್ತಾಳೆ ಅಥವಾ ಹೊಡೆಯುತ್ತಾಳೆ ಎಂಬ ಅಂಜಿಕೆ ಇದ್ದರೂ ಅವಳ ಜೊತೆಗೆ ವರ್ತಿಸುವಾಗ ಒರಟುತನ ಪ್ರದರ್ಶಿಸುತ್ತಾಳೆ.

ಎದುರು ಜವಾಬು ಕೊಡುತ್ತಾಳೆ. ಸಂಘರ್ಷವನ್ನು ಹೆಚ್ಚಿಸಿಕೊಳ್ಳುತ್ತಾಳೆ. ಅದೇ ತನ್ನ ಬೈಯದ, ಹೊಡೆಯದ ತಂದೆಯ ಜೊತೆಗೆ ಅಕ್ಕರೆಯನ್ನೇ ತೋರುತ್ತಾಳೆ. ಎದುರು ವಾದಿಸುವುದು ಇಲ್ಲವೇ ಇಲ್ಲ ಎನ್ನಿಸುವಷ್ಟು ತೀರಾ ಕಡಿಮೆ. ಅವನ ಕಂಡರೆ ಭಯವಿರುವುದಿಲ್ಲ. ಭಯಪಡುವುದು ತೀರಾ ಅಪರೂಪಕ್ಕೆ. ತೀರಾ ಭಯವಿದೆ ಎಂದರೆ ಅಪ್ಪನಲ್ಲಿ ಕೆಲವು ಕ್ರೌರ್ಯ ಅಥವಾ ಹಿಂಸೆಯ ವರ್ತನೆಗಳನ್ನು ಪುನರಾವರ್ತಿತವಾಗಿ ಕಾಣುತ್ತಿರಬೇಕು.

ಈಡಿಪಸ್ ಕಾಂಪ್ಲೆಕ್ಸ್

ಈಡಿಪಸ್ ಕಾಂಪ್ಲೆಕ್ಸ್ ಎಂದರೆ ತಾಯರಿಮೆ ಎಂದು ಸರಳವಾಗಿ ಹೇಳಬಹುದು. ಶಿಶುವೊಂದು ತನ್ನ ಎಳೆತನದಲ್ಲಿ ತನ್ನ ತಾಯಿಯಿಂದ ಸಂಪೂರ್ಣ ಗಮನವನ್ನೂ ಮತ್ತು ಪ್ರೇಮವನ್ನೂ ತನಗಾಗಿ ಬಯಸುವುದು. ಅದರಲ್ಲೂ ಅದು ಗಂಡು ಮಗುವಾಗಿದ್ದು, ತಾಯಿಯ ಸಾಮಿಪ್ಯ ಮತ್ತು ಸ್ಪರ್ಷವನ್ನು ಗಾಢವಾಗಿ ಬಯಸುತ್ತಾ ತಂದೆಯ ಅಧಿಕಾರಯುತ ಮಧ್ಯ ಪ್ರವೇಶವನ್ನು ಧಿಕ್ಕರಿಸುವುದಕ್ಕೆ ತಾಯರಿಮೆ ಅಥವಾ ಈಡಿಪಸ್ ಕಾಂಪ್ಲೆಕ್ಸ್ ಎನ್ನುವುದು.
ಸಿಗ್ಮಂಡ್ ಫ್ರಾಯ್ಡ್, ಜರ್ಮನಿಯ ಮನಶಾಸ್ತ್ರಜ್ಞ ಈ ವಿಚಾರ ಸರಣಿಯನ್ನು ತಾತ್ವಿಕವಾಗಿ ಮುಂದಿಟ್ಟು ಶಾಸ್ತ್ರೀಯವಾಗಿ ಮಂಡಿಸಿದರು.

ಈ ಥಿಯರಿಗೆ ಅವರು ಈಡಿಪಸ್ ಎಂಬ ಗ್ರೀಕ್ ಪಾತ್ರದಿಂದ ಗುರುತಿಸಲು ಕಾರಣವಿದೆ.
ಆ ಈಡಿಪಸ್ ಕತೆಯೇನೆಂದರೆ; ಲೇಯಾಸ್ ಎಂಬುವನು ತಿಬೀಸ್ ರಾಜ. ಅವನ ರಾಣಿ ಜೊಕಾಸ್ಟಾ. ಅವರಿಗೆ ಹುಟ್ಟುವ ಮಗುವು ಅವನನ್ನು ಕೊಲ್ಲುತ್ತದೆ ಎಂಬ ಭವಿಷ್ಯವಾಣಿಯನ್ನು ಕೇಳಿ ಅದನ್ನು ಕೊಲ್ಲಲು ಲೇಯಾಸ್ ಕಳುಹಿಸುತ್ತಾನೆ. ಕಟುಕರ ಹೃದಯದಲ್ಲೂ ಹುಟ್ಟಿದ ಅನುಕಂಪದಿಂದಾಗಿ ಮಗುವು ಸಾಯದೇ ಕುರುಬನೊಬ್ಬನ ಪಾಲಾಗುತ್ತದೆ. ಆ ಕುರುಬನಿಂದ ಕೊರಿಂತ್ ಎಂಬ ರಾಜ್ಯದ ರಾಜ ಪಾಲಿಬಸ್ ಮತ್ತು ಅವನ ಹೆಂಡತಿ ಮಗುವನ್ನು ದತ್ತು ಪಡೆದು ತಮ್ಮದೇ ಮಗುವಿನಂತೆ ಸಾಕುತ್ತಾರೆ. ಅವರಿಗೆ ಈ ಮಗುವು ಲೇಯಾಸ್ ಮತ್ತು ಜೊಕಾಸ್ಟಾ ದಂಪತಿಗಳ ಮಗುವೆಂದು ತಿಳಿದಿರುವುದಿಲ್ಲ. ಆ ಮಗುವೇ ಈಡಿಪಸ್.

ಈಡಿಪಸ್ ಬೆಳೆದಂತೆ ತನ್ನ ಅಧ್ಯಯನದ ಪ್ರವಾಸದಲ್ಲಿ ತಿಬೀಸ್‍ಗೆ ಹೋಗುತ್ತಾನೆ. ಅಲ್ಲಿ ಹುಟ್ಟುವ ಜಗಳವೊಂದರಿಂದಾಗಿ ಲೇಯಾಸನನ್ನು ಕೊಲ್ಲುತ್ತಾನೆ. ಅಲ್ಲಿಯೇ ರಾಜ್ಯಕ್ಕೆ ಉಪದ್ರವಕಾರಿಯಾಗಿದ್ದ ಸಿಂಹನಾರಿ ಅಥವಾ ಸ್ಪಿಂಕ್ಸ್ ಕೇಳುವ ಒಗಟನ್ನು ಸರಿಯಾಗಿ ಈಡಿಪಸ್ ಬಿಡಿಸಿ ಉತ್ತರ ಹೇಳುತ್ತಾನೆ. ಇದರಿಂದ ಸಿಂಹನಾರಿ ತನ್ನನ್ನು ತಾನು ಕೊಂದುಕೊಂಡು ತಿಬೀಸ್ ಸಮಸ್ಯೆಯಿಂದ ಮುಕ್ತವಾಗುತ್ತದೆ. ಅವನೇ ತಿಬೀಸ್ ರಾಜನೂ ಆಗುತ್ತಾನೆ. ಲೇಯಾಸನ ಹೆಂಡತಿಯಾಗಿದ್ದು ವಿಧವೆಯಾದ ಜೊಕಾಸ್ಟಾಳನ್ನು ಈಡಿಪಸ್ ಗೆದ್ದರಸರ ವಾಡಿಕೆಯಂತೆ ಮದುವೆಯಾಗುತ್ತಾನೆ. ಅವರಿಬ್ಬರಿಗೆ ನಾಲ್ವರು ಮಕ್ಕಳು ಹುಟ್ಟುತ್ತಾರೆ. ನಂತರ ಮುಂದೆ ಯಾವಾಗಲೋ ಜೊಕಾಸ್ಟಾಗೆ ತಾನು ತನ್ನ ಮಗನನ್ನೇ ಮದುವೆಯಾದ ವಿಷಯ ತಿಳಿಯುತ್ತದೆ.

ಇದರಿಂದ ಮನನೊಂದು ನೇಣು ಹಾಕಿಕೊಂಡು ಸಾಯುತ್ತಾಳೆ. ಈ ಗ್ರೀಕಿನ ಜನಪದ ಕತೆಯಲ್ಲಿ ಈಡಿಪಸ್‍ಗೆ ತನ್ನ ತಾಯಿ ಎಂದು ತಿಳಿಯದೇ ಜೊಕಾಸ್ಟಾಳನ್ನು ಮೋಹಿಸುತ್ತಾನೆ ಮತ್ತು ಮದುವೆಯಾಗುತ್ತಾನೆ. ಈ ಕತೆಯ ನಾಯಕನ ಅರಿವಿಲ್ಲದೆ ತಾಯಿಯನ್ನು ಮದುವೆಯಾಗುವ ಪ್ರಕರಣವನ್ನೇ ಸಾಂಕೇತಿಕವಾಗಿ ಸಿಗ್ಮಂಡ್ ಫ್ರಾಯ್ಡ್ ಈ ಅರಿಮೆಯನ್ನು ಈಡಿಪಸ್ ಕಾಂಪ್ಲೆಕ್ಸ್ ಎಂದು ಹೆಸರಿಸುತ್ತಾರೆ. ಅವರ ಅನೇಕಾನೇಕ ವಿವಾದಾತ್ಮಕ ವಿಷಯ ಮಂಡನೆಗಳಲ್ಲಿ ಇದೂ ಒಂದು.
ಆದರೆ ಸಿಗ್ಮಂಡ್ ಫ್ರಾಯ್ಡ್‍ಗೆ ನಮ್ಮ ಭಾರತೀಯ ಪುರಾಣಗಳಲ್ಲಿನ ದೈವಿಕ ಪಾತ್ರವಾದ ಗಣಪತಿಯ ಬಗ್ಗೆ ತಿಳಿದಿರಲಿಲ್ಲವೆನಿಸುತ್ತದೆ. ತಾಯಿಯ ಗಾಢ ಪ್ರೇಮಕ್ಕೆ ಒಳಗಾದ ಮಗನು ಅವಳ ಖಾಸಗೀತನಕ್ಕೂ ತಂದೆಯ ಅಧಿಕಾರಯುತವಾದ ಪ್ರವೇಶವನ್ನು ತಡೆಯುವ ತಾಯರಿಮೆಯ ಸರಿಯಾದ ಉದಾಹರಣೆ ಗಣಪತಿಯ ಕತೆಯಲ್ಲಿ ಸಿಗುತ್ತದೆ.

ಶಿವನು ತಾನು ಪಾರ್ವತಿಯ ಗಂಡನೆಂಬ ಅಧಿಕಾರವನ್ನು ಪಾರ್ವತಿ ಎಂಬ ತಾಯಿಯ ಮಗನಾದ ಗಣಪತಿಯು ಒಪ್ಪುವುದಿಲ್ಲ. ಬದಲಾಗಿ ತಾಯಿಯ ಅಪ್ಪಣೆ ಎಂಬ ಕಾರಣದಿಂದ ಶಿವನನ್ನು ತಡೆಯುವಲ್ಲಿ ಪಟ್ಟು ಹಿಡಿಯುತ್ತಾನೆ. ಸಾಲದಕ್ಕೆ ತಂದೆ ಮತ್ತು ಮಗನ ಸಂಘರ್ಷಕ್ಕೆ ಶಿವ ಮತ್ತು ಗಣಪತಿಯ ಹೋರಾಟವು ಉದಾಹರಣೆಯಾಗುತ್ತದೆ. ಗಣಪತಿ ಎಂಬ ಮಗನಿಗೆ ಪಾರ್ವತಿ ಎಂಬ ತಾಯಿಯು ಸ್ನಾನ ಮಾಡುವಂತಹ ಖಾಸಗೀತನದ ಸಮಯದಲ್ಲಿ ಶಿವನೆಂಬ ತಂದೆಯನ್ನು ಪ್ರವೇಶಗೊಡದೇ ಹೋಗುವ ಪ್ರಸಂಗವು ತಾಯರಿಮೆಗೆ ಹೇಳಿ ಮಾಡಿಸಿದ ಉದಾಹರಣೆಯಾಗಿದೆ. ಈಡಿಪಸ್‍ಗಾದರೂ ಅವಳು ತನ್ನ ತಾಯೆಂದು ಅರಿವಿರುವುದಿಲ್ಲ.

ತಾನು ಕೊಲ್ಲುವ ರಾಜನು ತನ್ನ ತಂದೆ ಎಂದೂ ಅರಿವಿರುವುದಿಲ್ಲ. ಆದರೆ ಗಣಪನರಿಮೆಯಲ್ಲಿ ಗಣಪತಿಗೆ ತನ್ನ ತಾಯಿ ಎಂಬ ಅರಿವಿತ್ತು ಮತ್ತು ನಂತರ ತಾನು ಗಂಡನೆಂಬ ಅಹಂಕಾರದಿಂದ ಒಳಗೆ ಹೋಗುವವನು ತನ್ನ ತಾಯಿಯ ಪತಿ ಅಥವಾ ತನ್ನ ತಂದೆಯೆಂಬ ಅರಿವೂ ಇತ್ತು. ಆದರೆ ಆ ತಂದೆಯ ಅಧಿಕಾರಯುತವಾದ ಪ್ರವೇಶವು ತಾಯಿಯ ಖಾಸಗೀತನದಲ್ಲಿ ಅತಿಕ್ರಮ ಪ್ರವೇಶವೆಂದೇ ಮಗನ ಪ್ರತಿಭಟನೆಯಾದ್ದರಿಂದ ತಾಯರಿಮೆಗೆ ಗಣಪತಿಯ ಉದಾಹರಣೆ ಈಡಿಪಸ್‍ಗಿಂತ ಹೆಚ್ಚು ಸೂಕ್ತವಾಗುತ್ತದೆ.

ಇನ್ನು ಪ್ರಪಂಚದ ಇತಿಹಾಸದಲ್ಲಿ ತಂದೆ ಮತ್ತು ಮಗನ ಸಂಘರ್ಷದ ಅನೇಕಾನೇಕ ಸಂಗತಿಗಳು ದಾಖಲಾಗಿವೆ.ಮಗಧ ಸಾಮ್ರಾಜ್ಯವನ್ನು ಆಳಿದ ಬಿಂಬಿಸಾರ (ಕ್ರಿಸ್ತಪೂರ್ವ 546-494) ಮತ್ತು ಅವರ ಮಗ ಅಜಾತಶತ್ರು ನಡುವೆ ಮೂಡಿದ ಮನಸ್ತಾಪ ತೀವ್ರತರವಾದಂತಹ ಸಂಘರ್ಷಗಳಿಗೆ ಎಡೆ ಮಾಡಿಕೊಟ್ಟಿತ್ತು. ತಾಯಿಗೆ ಮೆದುಹೃದಯದವನಾಗಿದ್ದ ಅಮೋಘವರ್ಷ ತನ್ನ ತಂದೆಯನ್ನು ಕಾರಾಗೃಹದಲ್ಲಿರಿಸಿದ್ದಾಗ ಕದ್ದು ಉಪಚರಿಸುತ್ತಿದ್ದಳೆಂದು ಕೋಪಗೊಂಡು ಅವಳನ್ನೂ ತಂದೆಯೊಂದಿಗೆ ಬಂಧಿಸಿದ. ಪರಿಸ್ಥಿತಿಗಳು ವಿಕೋಪಕ್ಕೆ ತಿರುಗಿ ಕೊನೆಗೆ ತನ್ನ ತಂದೆ ತಾಯಿಯನ್ನು ಕೊಲ್ಲಿಸಿದ. ಅರಿಮೆಯೇ ಮೊದಲಾದ ಮಾನಸಿಕ ಸಮಸ್ಯೆಗಳು ಗಾಢವಾದರೆ, ಮಿತಿ ಮೀರಿದರೆ ಯಾರೂ ಏನೂ ಮಾಡಲಾಗದು ಎಂಬುವುದಕ್ಕೆ ಇದೊಂದು ಉದಾಹರಣೆ. ಬಿಂಬಿಸಾರ ಬುದ್ಧನ ಶಿಷ್ಯನೂ, ಪೋಷಕನೂ, ಸ್ನೇಹಿತನೂ ಆಗಿದ್ದ. ಬುದ್ಧನ ತಂಗುವಿಕೆಗೆ ಮತ್ತು ಬೋಧನೆಗೆ ಅನುವಾಗುವಂತೆ ವೇಣುವನವನ್ನು ಬಿಟ್ಟುಕೊಟ್ಟಿದ್ದ. ಸಾವಿರಾರು ಜನರು ಸೇರುತ್ತಿದ್ದರು.

ಆದರೆ ಬುದ್ಧನ ಕಸಿನ್ ದೇವದತ್ತ ಬುದ್ಧನ ಬಗ್ಗೆಗಿದ್ದ ತನ್ನ ದಾಯಾದಿ ಮತ್ಸರದಿಂದ ಅಜಾತಶತ್ರುವಿನೊಂದಿಗೆ ಸೇರಿಕೊಂಡು ತನ್ನ ವೈರ ಸಾಧನೆಗೆ ಪೂರಕವಾಗುವಂತೆ ಅಮೋಘವರ್ಷ ತನ್ನ ತಂದೆಯ ವಿರುದ್ಧ ಕತ್ತಿ ಮಸೆಯುವಂತೆ ಮಾಡಿದ. ಬುದ್ಧನ ಸಾಂಗತ್ಯಕ್ಕೆ, ವರ್ಚಸ್ಸಿಗೆ ಬಿಂಬಿಸಾರನನ್ನು ಅಜಾತಶತ್ರುವಿನಿಂದ ಕಾಪಾಡಲು ಆಗಲಿಲ್ಲ. ಬುದ್ಧನ ಚರಿತ್ರೆಯಲ್ಲಿ ಕರುಳು ಹಿಂಡುವ ದುರಂತವಿದು.

ರಾಷ್ಟ್ರಕೂಟರ ದೊರೆ ಅಮೋಘವರ್ಷ ನೃಪತುಂಗ (ಕ್ರಿಸ್ತಶಕ 800 ರಿಂದ 878) ಮತ್ತು ಅವರ ಮಗ ಎರಡನೆಯ ಕೃಷ್ಣನ ಜೊತೆ ಮನಸ್ತಾಪ ಮತ್ತು ಸಂಘರ್ಷಗಳಿದ್ದು ಕುಟುಂಬ ಮತ್ತು ರಾಜಕಾರಣವೆರಡರಲ್ಲೂ ಅದರ ನೆರಳು ಬಿದ್ದಿತ್ತು. ಮೊಗಲ್ ಸಾಮ್ರಾಟ ಅಕ್ಬರ್ ಮತ್ತು ಅವನ ಮಗ ಸಲೀಂ (ಜಹಂಗೀರ್) ನಡುವಿನ ಮನಸ್ತಾಪಗಳು ಮತ್ತು ಸಂಘರ್ಷಗಳು ಅತಿರೇಕಕ್ಕೆ ಮುಟ್ಟಿ 1599ರಲ್ಲಿ ತಂದೆಯ ವಿರುದ್ಧ ದಂಗೆ ಎದ್ದಿದ್ದ. ಅವರಿಬ್ಬರ ಸಂಘರ್ಷಗಳು ನಿಜಕ್ಕೂ ಯಾವುದೇ ಮನೆಯೊಂದರಲ್ಲಿ ತಂದೆ ಮಗನ ನಡುವಿನ ಮನಸ್ತಾಪಗಳಂತೆ ವಿಧವಿಧವಾದ ಸನ್ನಿವೇಶಗಳಿಂದ, ವ್ಯಕ್ತಿಗಳಿಂದಾಗುತ್ತಾ ಹೋಗುತ್ತವೆ.

1657ರಲ್ಲಿ ಷಾಜಹಾನ್‍ನನ್ನು ಬಂಧಿಸಿದ ಔರಂಗಜೇಬ್ ತಂದೆಯ ವಿರುದ್ಧ ತನ್ನ ಭಿನ್ನತೆಯನ್ನು ಸ್ಪಷ್ಟಪಡಿಸಿದ್ದ.
ಬಿಜಾಪುರದ ಮಹ್ಮದ್ ಆದಿಲ್ ಶಾ ಮತ್ತು ಅವನ ಎರಡನೆಯ ಮಗ ಅಲಿ ಆದಿಲ್ ಶಾ (ಆಳ್ವಿಕೆ 1656 ರಿಂದ 1672) ನಡುವಿನ ಪೈಪೋಟಿ ಮತ್ತು ಮನಸ್ತಾಪವು ಬೇರೊಂದು ರೀತಿಯಲ್ಲಿ ನಮಗೆ ಸ್ಮಾರಕವಾಗಿ ನಿಂತಿದೆ. ಮಹ್ಮದ್ ಆದಿಲ್ ಶಾ ಗೋಳಗುಮ್ಮಟವನ್ನು ಕಟ್ಟಿಸಿದ. ತಂದೆಯ ಮೇಲಿನ ಸ್ಪರ್ಧೆಗೆ ಅಲಿ ಅದಕ್ಕಿಂತಲೂ ಉನ್ನತವಾದ ಕಟ್ಟಡವಾದ ಅಲಿರೋಜಾ ಕಟ್ಟಿಸಲು ಪ್ರಾರಂಭಿಸಿದ.

ಆದರೆ, ಕೆಲಸವು ಪೂರ್ತಿಯಾಗದೇ ಬಾರಾ ಕಮಾನ್ ಆಗಿ ಉಳಿಯಿತು. ತಂದೆಯ ವಿರುದ್ಧವಾಗಿ ಹೂಡಿದ ಸ್ಪರ್ಧೆಯಲ್ಲಿ ಅಲಿ ವಿಜಯಿಯಾಗಲಿಲ್ಲ. ಅವನ ಸೋಲಿನ ಸ್ಮಾರಕವಾಗಿ ಬಾರಾಕಮಾನ್ ನಿಂತಿದೆ. ಒಂದು ವೇಳೆ ಅದು ಪೂರ್ಣಗೊಂಡಿದ್ದರೆ ವಿಶ್ವದಲ್ಲಿಯೇ ಅದೂ ಒಂದು ಅತ್ಯದ್ಭುತವಾದ ಕಟ್ಟಡವಾಗಿ ನಿಂತಿರುತ್ತಿತ್ತು. ಮನುಷ್ಯನ ಮನಸ್ಸಿರುವವರಿಗೆಲ್ಲಾ ಒಂದಲ್ಲಾ ಒಂದು ಮಾನಸಿಕ ಸಮಸ್ಯೆಗಳು ಇದ್ದೇ ಇರುತ್ತವೆ ಮೂಗಿರುವವರಿಗೆ ನೆಗಡಿ ತಪ್ಪದಂತೆ. ನೆಗಡಿಗಾದರೂ ಔಷಧಿ ಇಲ್ಲವೇನೋ ಆದರೆ ಮನೋರೋಗಕ್ಕೆ ಮದ್ದಿದೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ

Published

on

~ಯೋಗೇಶ್ ಮಾಸ್ಟರ್, ಚಿಂತಕರು

ಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.

ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!

ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!

ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.

ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.

ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.

ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!

ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending