ದಿನದ ಸುದ್ದಿ
ಕೊಡಗು ಪ್ರವಾಹ : ನಿರಾಶ್ರಿತರಿಗೆ ಮನೆ ನಿರ್ಮಾಣ ಸದ್ಯದಲ್ಲೇ ಆರಂಭ

ಸುದ್ದಿದಿನ,ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯ ಜನಜೀವನ ಅಸ್ತವ್ಯಸ್ತ ಉಂಟಾಗಿತ್ತು. ಇದರಿಂದ ಹಲವು ಕುಟುಂಬಗಳು ಮನೆ-ಮಠ ಕಳೆದುಕೊಂಡು ನಿರಾಶ್ರಿತರಾದರು. ಪ್ರಕೃತಿ ವಿಕೋಪದಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಯಿತು. ಆ ದಿಸೆಯಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ವಸತಿ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಜಾಗ ಗುರುತಿಸಿದ್ದು, ಸಮತಟ್ಟು ಮಾಡುವ ಕಾರ್ಯ ಪೂರ್ಣಗೊಂಡು, ಬಡಾವಣೆ ನಿರ್ಮಾಣ ಸಂಬಂಧ ಅನುಮೋದನೆ ಪಡೆಯುವ ಕಾರ್ಯ ಪ್ರಗತಿಯಲ್ಲಿದೆ.
ಆ ನಿಟ್ಟಿನಲ್ಲಿ ಬಡಾವಣೆಯ ನೀಲ ನಕಾಶೆ ತಯಾರಾಗಿದ್ದು, ಒಳಚರಂಡಿ ವ್ಯವಸ್ಥೆ, ವಿದ್ಯುತ್ ಮಾರ್ಗ, ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳ ತಂಡವು ಶುಕ್ರವಾರ ಪರಿಶೀಲನೆ ಮಾಡಿದರು ಎಂದು ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಅವರು ತಿಳಿಸಿದ್ದಾರೆ.
ಬಡಾವಣೆ ನಿರ್ಮಾಣ ಸಂಬಂಧ ಇನ್ನೂ ಒಂದು ವಾರದಲ್ಲಿ ಅನುಮೋದನೆ ದೊರೆಯಲಿದ್ದು, ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅನುಮೋದನೆ ದೊರತೆ ನಂತರ ನಿರಾಶ್ರಿತರಿಗೆ ಒಪ್ಪಿಗೆಯಾಗುವ ಮನೆ ನಿರ್ಮಿಸುವ ಕಾರ್ಯ ಶುರುವಾಗಲಿದೆ ಎಂದು ಜಗದೀಶ್ ಅವರು ಮಾಹಿತಿ ನೀಡಿದರು.
ಹಾಗೆಯೇ ಪ್ರಕೃತಿ ವಿಕೋಪದಿಂದಾಗಿ ಅಪಾರ ಪ್ರಮಾಣದಲ್ಲಿ ಕೃಷಿ, ತೋಟಗಾರಿಕೆ, ಕಾಫಿ, ಕರಿಮೆಣಸು, ಏಲಕ್ಕಿ, ಬಾಳೆ ಹೀಗೆ ವಿವಿಧ ಬೆಳೆಗಳು ನಷ್ಟ ಉಂಟಾಗಿದ್ದು, ಬೆಳೆ ನಷ್ಟ ಪರಿಹಾರಕ್ಕೆ 100 ಕೋಟಿ ರೂ ಹೆಚ್ಚು ಹಣ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.
ಪ್ರಕೃತಿ ವಿಕೋಪದಿಂದಾಗಿ ಆಸ್ತಿ-ಪಾಸ್ತಿ, ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ವಿವಿಧ ಗ್ರಾಮಗಳಲ್ಲಿ ನಿವೇಶನ ಗುರುತು ಮಾಡಿದೆ.
ಎಲ್ಲೆಲ್ಲಿ ಜಾಗ? ಕರ್ಣಂಗೇರಿ ಗ್ರಾಮದಲ್ಲಿ ನಾಲ್ಕು ಎಕರೆ ಗುರುತಿಸಲಾಗಿದ್ದು, ಸುಮಾರು 80 ನಿವೇಶನಗಳು ಲಭ್ಯವಾಗಲಿದೆ. ಈ ಗ್ರಾಮದಲ್ಲಿ ಕರ್ಣಂಗೇರಿಯ 13, ಮಕ್ಕಂದೂರಿನ 11, ಹಚ್ಚಿನಾಡಿ 1, ಹೊದಕಾನ 9 ಹಾಗೂ ನಗರದ 43 ಕುಟುಂಬಗಳಿಗೆ ಒಟ್ಟು 65 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಉದ್ದೇಶಿಸಿಲಾಗಿದೆ.
ಕೆ.ನಿಡುಗಣೆ ಗ್ರಾಮದಲ್ಲಿ ಅಂದಾಜು 5 ಎಕರೆ ಜಾಗ ಗುರುತಿಸಲಾಗಿದ್ದು, ಕಾಲೂರು ಗ್ರಾಮದ 22 ಕುಟುಂಬಗಳಿಗೆ, ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಸರ್ವೆ ನಂ.103 ರಲ್ಲಿ 7 ಎಕರೆ ಜಾಗ ಗುರುತಿಸಲಾಗಿದ್ದು, ಹೆಬ್ಬೆಟ್ಟಗೇರಿಯ 90 ಕುಟುಂಬಗಳಿಗೆ, ಗಾಳಿಬೀಡು ಗ್ರಾಮದಲ್ಲಿ 13 ಎಕರೆ ಜಾಗ ಗುರುತಿಸಲಾಗಿದ್ದು, 19 ಕುಟುಂಬಗಳಿಗೆ, ನಿಡುವಟ್ಟಿನ 26 ಕುಟುಂಬಗಳಿಗೆ ಬಾರಿಬೆಳ್ಳಚ್ಚು 2 ಕುಟುಂಬಗಳಿಗೆ, ಒಂದನೇ ಮೊಣ್ಣಂಗೇರಿ 9 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ.
ಮದೆ ಗ್ರಾಮದ 10 ಎಕರೆ ಜಾಗ ಗುರುತಿಸಲಾಗಿದ್ದು, ಎರಡನೇ ಮೊಣ್ಣಂಗೇರಿಯ 188 ಕುಟುಂಬಗಳಿಗೆ, ಮದೆ ಗ್ರಾಮದ 79 ಕುಟುಂಬಗಳಿಗೆ, ಸಂಪಾಜೆಯಲ್ಲಿ 1.50 ಎಕರೆ ಗುರುತಿಸಲಾಗಿದ್ದು, ಸಂಪಾಜೆಯ 4 ಕುಟುಂಬಗಳಿಗೆ, ಬಿಳಿಗೇರಿಯಲ್ಲಿ 1.88 ಎಕರೆ ಜಾಗ ಗುರುತಿಸಲಾಗಿದ್ದು, ಹೆರವನಾಡಿನ 10 ಕುಟುಂಬಗಳಿಗೆ ಒಟ್ಟು 281 ಕುಟುಂಬಗಳಿಗೆ, ಜಂಬೂರು ಗ್ರಾಮದಲ್ಲಿ 50 ಎಕರೆ ಜಾಗ ಗುರುತಿಸಲಾಗಿದ್ದು, ಮಕ್ಕಂದೂರು ಗ್ರಾಮದ 99 ಕುಟುಂಬಗಳಿಗೆ, ಎಮ್ಮೆತಾಳು ಗ್ರಾಮದ 39 ಕುಟುಂಬಳಿಗೆ, ಮುಕ್ಕೋಡ್ಲು ಗ್ರಾಮದ 9 ಕುಟುಂಬಗಳಿಗೆ, ಮೇಘತ್ತಾಳು ಗ್ರಾಮದ 26 ಕುಟುಂಬಗಳಿಗೆ ಒಟ್ಟು 173 ಕುಟುಂಬಗಳಿಗೆ ಜಾಗ ಗುರುತಿಸಲಾಗಿದೆ.
ಸೋಮವಾರಪೇಟೆ ತಾಲ್ಲೂಕಿನ ಚೌಡ್ಲು 2 ಕುಟುಂಬಗಳಿಗೆ, ಕಿರಂಗಂದೂರು 6, ಬೇಳೂರು 4, ಹಾನಗಲ್ಲು 3, ನೆರುಗಳಲೆ 1, ಹಾಡಗೇರಿ 22, ಮುವತ್ತೋಕ್ಲು 4, ಇಗ್ಗೋಡ್ಲು 9, ಕಡಗದಾಳು 11, ಕಾಂಡನಕೊಲ್ಲಿ 5, ಕೊಪ್ಪತ್ತೂರು 3, ಜಂಬೂರು 4, ಗರ್ವಾಲೆ 2, ಶಿರಂಗಳ್ಳಿ 1, ಮಂಕ್ಯ 1, ಕಿಕ್ಕರಳ್ಳಿ 1, ಹಾಲೇರಿ 5 ಒಟ್ಟು 84 ಕುಟುಂಬಗಳಿಗೆ ನಿವೇಶನ ಗುರುತಿಸಲಾಗಿದೆ ಎಂದು ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಕೆ.ಜಗದೀಶ್ ಅವರು ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ

ಸುದ್ದಿದಿನ, ಚನ್ನಗಿರಿ (ಬಸವಾಪಟ್ಟಣ) : ಭಾರತೀಯ ಸಮಾಜದಲ್ಲಿ ಮೀಸಲಾತಿಯಿಂದ ಮಾತ್ರ ಮಹಿಳಾ ಪ್ರಗತಿ ಸಾಧ್ಯವಿಲ್ಲ. ಅವಳಿಗೆ ಪುರುಷನಂತೆ ಸಮಾನವಾದ ಪ್ರಾತಿನಿಧ್ಯ ನೀಡಿದಲ್ಲಿ ಮಾತ್ರವೇ ಮಹಿಳಾ ಪ್ರಗತಿ ಸಾಧ್ಯ. ಆಗ ಮಾತ್ರವೇ ಸದೃಢವಾದ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಸಂತೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತ ಸಪ್ತಾಹದ ಅಡಿಯಲ್ಲಿ ‘ಭಾರತೀಯ ಸಮಾಜ ಹಾಗೂ ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆಯರ ಪ್ರಾಮುಖ್ಯತೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮಹಿಳೆಗೆ ಎಲ್ಲಿಯವರೆಗೆ ಮುಕ್ತವಾದ ಪ್ರಾತಿನಿಧ್ಯ ಲಭಿಸುವುದಿಲ್ಲವೋ ಅಲ್ಲಿಯವರೆಗೆ ಎಷ್ಟೇ ಕಾಯ್ದೆ, ಕಾನೂನುಗಳು ಜಾರಿಯಾದರೂ ಮಹಿಳೆಯರ ಬದುಕಿನಲ್ಲಿ ಸಮಗ್ರ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ.ಎಂ.ಆರ್. ಲೋಕೇಶ್ ಅವರು ಮಾತನಾಡಿ ಭಾರತೀಯ ಸಮಾಜದಲ್ಲಿ ಹೆಣ್ಣು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವುದು ಕೇವಲ ಆರ್ಥಿಕತೆಯಿಂದ ಸಾಧ್ಯವಿಲ್ಲ ಎಂದರು.
ನೈತಿಕತೆ, ಸಂಸ್ಕಾರವು ಕೂಡ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿಯೇ ಶರಣರು ಗಂಡು-ಹೆಣ್ಣು ಎಂಬ ಬೇಧವನ್ನು ಮೆಟ್ಟಿ ನಿಂತು ‘ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ, ಗಂಡು ಅಲ್ಲ’ ಎಂಬ ತಾತ್ವಿಕತೆಯ ಮೂಲಕ ಸರ್ವರನ್ನು ಸಮಾನವಾಗಿ ಕಾಣುವಂತಹ ಸಮಾಜಕ್ಕಾಗಿ ಶ್ರಮಿಸಿದರು. ಭಾರತದ ನೆಲದಲ್ಲಿ ಶರಣರು, ದಾರ್ಶನಿಕರು ರೂಪಿಸಿಕೊಟ್ಟ ಮಾರ್ಗದಲ್ಲಿ ನಡೆದು ಇಂದಿನ ಮಹಿಳೆಯರು ಸಬಲರಾಗಬೇಕು ಎಂಬುದಾಗಿ ತಿಳಿಸಿದರು.
ಸಮಾಜಶಾಸ್ತ್ರದ ಮುಖ್ಯಸ್ಥರಾದ ಡಾ.ಎ.ಡಿ.ಬಸವರಾಜ್ ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬೋಧಕರಾದ ಹನುಮಂತಪ್ಪ, ಪ್ರಕಾಶ್, ಮಧುಸೂಧನ್, ರೆಹಮತ್ಬಿ, ಸಂದೀಪ್ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಗೋವಿಂದರೆಡ್ಡಿ ಅವರು ನಿರೂಪಿಸಿದರು. ವಿದ್ಯಾರ್ಥಿನಿ ಸೌಂದರ್ಯ ಸ್ವಾಗತಿಸಿದರು, ಯಶೋಧ, ಸಹನಾ ಪ್ರಾರ್ಥಿಸಿದರು, ರಕ್ಷಿತ ವಂದಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್

ಸುದ್ದಿದಿನ,ದಾವಣಗೆರೆ : ಸಂವಿಧಾನ ಪೂರ್ವದ ಭಾರತದ ಸ್ಥಿತಿಗತಿ ಹಾಗೂ ಸಂವಿಧಾನದ ನಂತರ ಭಾರತದಲ್ಲಾದ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಬದಲಾವಣೆಗ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಾಗೆಯೇ ಸಂವಿಧಾನ ರಚನೆ ಮಾಡುವ ಸಮಯದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮುಂದಿದ್ದ ಬಿಕ್ಕಟ್ಟುಗಳನ್ನು ಏಕಾಂತಗಿರಿ ಟ್ರಸ್ಟ್ ನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಅವರು ತಿಳಿಸಿಕೊಟ್ಟರು.
ನಗರದ ಪ್ರೇರಣ ಮಕ್ಕಳ ಆರೈಕೆ ಕೇಂದ್ರದಲ್ಲಿ ವಿ.ಬಿ.ಪಿ ಫೌಂಡೇಷನ್ ಹಾಗೂ ಏಕಾಂತಗಿರಿ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ದೇವನಗರಿ ಸುದ್ಧಿದಿನ ಪತ್ರಿಕೆಯ ಸಂಪಾದಕರಾದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಕಳಶದಂತಿರುವ ಸಂವಿಧಾನ ಪೀಠಿಕೆಯ ಮಹತ್ವವನ್ನು ಪರಿಚಯಿಸುವ ಮೂಲಕ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಕೈ ಲೈನ್ ಸಂಸ್ಥೆಯ ಸಂಸ್ಥಾಪಕರಾದ ಬಾಲಚಂದ್ರ ಅವರು ಸಂವಿಧಾನ ಇರುವ ಕಾಲದಲ್ಲಿಯೇ ದಲಿತರು, ದಮನಿತರು ಹಾಗೂ ಮಹಿಳೆಯರ ಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ಆದರೆ ಸಂವಿಧಾನವಿಲ್ಲದ ಭಾರತವನ್ನು ನಾವು ಊಹಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬುದಾಗಿ ತಿಳಿಸಿದರು.
ಪ್ರೇರಣ ಆರೈಕೆ ಕೇಂದ್ರದ ಶಿಕ್ಷಕರಾದ ಕುಮಾರ್ ಅವರು ಮಾತನಾಡಿ, ಸರ್ವರನ್ನು ಸಮಾನವಾಗಿ ಕಾಣುವ ಸಂವಿಧಾನವು ನಮ್ಮೆಲ್ಲರ ಪವಿತ್ರ ಗ್ರಂಥ ಎಂಬುದಾಗಿ ತಿಳಿಸಿದರು. ಕುಮಾರಿ ಪೂಜಾ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರೇರಣ ಸಂಸ್ಥೆಯ ಮಕ್ಕಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು

- ಪುರಂದರ್ ಲೋಕಿಕೆರೆ
ಸುದ್ದಿದಿನ, ದಾವಣಗೆರೆ : ಸರ್ಕಾರದ ಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಇಲಾಖೆಯ ಚಿತಾವಣೆಗೆ ಸೆಡ್ಡು ಹೊಡೆದು ಕೇವಲ 110-120 ದಿನಗಳ ಒಳಗಾಗಿಅಲ್ಪಾವಧಿ ತಳಿ ನಾಟಿ ಮಾಡಿ ಯಶಸ್ವಿಯಾಗಿ ಕಾಲುವೆ ನೀರು ಬಳಸಿಕೊಂಡು ಭತ್ತ ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ ದಾವಣಗೆರೆ ಭಾಗದ ರೈತರು.
ಬೇಸಿಗೆ ಕಾಲದಲ್ಲಿ ನಮಗೆ ತೋಟಗಳಿಗೆ ನೀರು ಹರಿಸಲು ಆನ್ ಆಪ್ ಪದ್ದತಿ ಮಾಡಿ ಎಂದು ಒತ್ತಡ ಹಾಕಿದ ಶಿವಮೊಗ್ಗ ಜಿಲ್ಲೆಯ ಅಡಿಕೆ ದಣಿಗಳಿಗೇ ಮುಖಕ್ಕೆ ಹೊಡೆದಂತೆ ಭತ್ತ ಬೆಳೆದು ತೋರಿಸಿರುವುದು ಶ್ಲಾಘನೀಯ.
100 ದಿನಗಳು ನೀರು ಹರಿಸಲು ಆದೇಶ ಹೊರಡಿಸಿ ರೈತರೆಲ್ಲ ನಾಟಿ ಮಾಡಿದ ಮೇಲೆ ಎಂದೂ ಗದ್ದೆ ನೀರು ಕಟ್ಟದ ಐಷಾರಾಮೀ ರಾಜಕಾರಣಿ ಪುತ್ರ ರತ್ನ ಸಚಿವ ಮಧು ಬಂಗಾರಪ್ಪ ಅಡಿಕೆ ತೋಟದ ರೈತರಿಗೆ ಮನ ಸೋತವರು.
ಕಲ್ಲು ಬಂಡೆ ಹೊಡೆದು ಭರ್ಜರಿ ಜೀವನ ಸಾಗಿಸುವ ಸಂಪನ್ಮೂಲ ಸಚಿವ, ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಬೇಸತ್ತ ರೈತ ರಸ್ತೆ ತಡೆದು ನೀರು ಕೊಡಿ ಎಂದು ಹೋರಾಟ ಮಾಡಿದರೂ ಕಿವಿ ಕೇಳೋಲ್ಲ ಎಂಬಂತೆ ವರ್ತಿಸಿದೆ ಆಡಳಿತ ಯಂತ್ರ.
ಆದರೆ ಈ ನಡುವೆ ಎರಡು ಭಾರಿ ಪ್ರಕೃತಿ ವರದಾನ ದಿಂದ ಭತ್ತ ಬೆಳೆಯುವ ಮೂಲಕ ಅನ್ನನೀಡುವ ರೈತ ಭತ್ತ ಬೆಳೆದು ಬಿಟ್ಟ. ಈ ಮೂರು ತಿಂಗಳ ಭತ್ತಕ್ಕೆ ನೀರು ಬಿಡುವುದು ಎಷ್ಟು ತ್ರಾಸದಾಯಕ. ಸರ್ಕಾರಗಳು ಯಾರು ಪರ ಎಂದು ಬೆತ್ತಲೆ ತೋರಿಸಿಕೊಂಡಿವೆ.
ಈಗಲಾದರೂ ಕಾಲ ಮಿಂಚಿಲ್ಲ ಕಟಾವು ಮಾಡಿದ ಭತ್ತ ಒಳ್ಳೆಯ ಗುಣಮಟ್ಟದ್ದು ಆಗಿದೆ.3000-3500 ರೂಂ ದರ ನಿಗದಿ ಮಾಡಿದರೆ ರೈತ ಸಾಲಶೂಲದಿಂದಮುಕ್ತಿ ಆಗಬಹುದು. ಭದ್ರಾ ನೀರು ಬೇಸಿಗೆ ಕಾಲದಲ್ಲಿ ಕೊಡುವುದೇ ಇಲ್ಲ ಎಂದು ಹೇಳಿರುವುದು ರೈತ ವಿರೋಧಿ ನೀತಿ.
ಗುಂಡುರಾವ್ ಕಾಲಾವಧಿಯಲ್ಲಿ 158ಅಡಿ ನೀರಿದ್ದರೂ ಭದ್ರಾ ನೀರು ಹರಿಸಲಾಗಿರುವ ದಾಖಲೆ ಇದೆ. ಕಡೆ ಪಕ್ಷ ಈ ಭಾರಿಯ ಭತ್ಖಕ್ಕೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಇಲ್ಲವೇ ಯಾವ ರೈತರ ಬಳಿ ಭತ್ತ ಖರೀದಿ ನಿಲ್ಲಿಸಿ. ರೈತರೇ ಸ್ವಂತ ಮಾರುಕಟ್ಟೆ ಹುಡುಕಿಕೊಳ್ಳುವ ಪ್ರಯತ್ನ ಮಾಡಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ
-
ದಿನದ ಸುದ್ದಿ6 days ago
ದೇಹದಾಡ್ಯ ಸ್ಪರ್ಧೆ | ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರೇಮ್ ಕುಮಾರ್ ಗೆ ‘ಮಿಸ್ಟರ್ ದಾವಣಗೆರೆ’ ಪ್ರಶಸ್ತಿ
-
ದಿನದ ಸುದ್ದಿ2 days ago
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್
-
ದಿನದ ಸುದ್ದಿ4 days ago
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು
-
ದಿನದ ಸುದ್ದಿ1 day ago
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ