Connect with us

ದಿನದ ಸುದ್ದಿ

ಕುಡಿಯುವ ನೀರಿನ ಅವಶ್ಯಕತೆ ಹಾಗೂ ನೈಜ ಪರಿಸರವಾಗಿ ಉಳಿಸಲು ಕುಂದವಾಡ ಕೆರೆ ಅಭಿವೃದ್ಧಿ : ಸಂಸದ ಜಿ.ಎಂ. ಸಿದ್ದೇಶ್ವರ

Published

on

ಸುದ್ದಿದಿನ,ದಾವಣಗೆರೆ : ಕುಂದವಾಡ ಕೆರೆಯು ದಾವಣಗೆರೆ ನಗರದ ಕುಡಿಯುವ ನೀರಿನ ಪ್ರಮುಖ ಸಂಗ್ರಹಗಾರವಾಗಿದ್ದು, ಸ್ಮಾರ್ಟ್ ಸಿಟಿ ಯೋಜನೆಯಡಿ ಜನರಿಗೆ ಅಗತ್ಯ ಕುಡಿಯುವ ನೀರು ಪೂರೈಸಲು ಹಾಗೂ ಕೆರೆಯ ಸುತ್ತಮುತ್ತಲ ಪ್ರದೇಶದಲ್ಲಿ ಪರಿಸರವನ್ನು ಜೀವವೈವಿಧ್ಯಗಳ ವಿಕಸನಕ್ಕೆ ಅನುಕೂಲವಾಗುವಂತೆ ನೈಜ ರೀತಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ವಾಸ್ತವಾಂಶಗಳನ್ನು ಸಾರ್ವಜನಿಕರಿಗೆ ತಲುಪುವ ದಿಸೆಯಲ್ಲಿ ಜನಜಾಗೃತಿ ಮೂಡಿಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಿಟಿ ಲೆವೆಲ್ ಅಡೈಸರಿ ಫೋರಂ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಅವರು ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿ, ಕೆರೆಯು ದಾವಣಗೆರೆ ನಗರದ ಕುಡಿಯುವ ನೀರಿನ ಪ್ರಮುಖ ಸಂಗ್ರಹಗಾರವಾಗಿದ್ದು, ಬೇಸಿಗೆಯಲ್ಲಿ ಕೆರೆ ಏರಿ ಮೇಲಿನ ಕಳೆ, ಗಿಡಗಂಟೆ ಇತ್ಯಾದಿಗಳ ಕೊಳೆಯುವಿಕೆಯಿಂದ ನೀರು ಹಸಿರುಗಟ್ಟಿ ಕುಡಿಯಲು ಯೋಗವಾಗದ ರೀತಿ ಪರಿವರ್ತನೆಯಾಗುತ್ತದೆ, ನೀರು ಕಲುಷಿತಗೊಳ್ಳುವುದರಿಂದ ಕೆರೆಯಲ್ಲಿನ ಮೀನುಗಳು, ಜೀವವೈವಿಧ್ಯಗಳು ಸಾಯುತ್ತವೆ. ಇದನ್ನು ಈ ಹಿಂದೆಯೂ ಗಮನಿಸಲಾಗಿದೆ.

ಕೆರೆಯ ಏರಿಯಲ್ಲಿನ ನೀರು ಬಸಿಯುವಿಕೆ, ಹಾಳಾಗಿರುವ ಏರಿ ಮೇಲಿನ ಕಲ್ಲುಹೊದಿಕೆ ಮುಂತಾದ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಕೆರೆ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದ್ದು, ಒಂದೂವರೆ ವರ್ಷದ ಹಿಂದೆಯೇ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕೆ ಏರಿಯ ಮೇಲೆ ವಿದ್ಯುತ್ ದೀಪ ಅಳವಡಿಕೆ, ಹೂವಿನ ಗಿಡಗಳನ್ನು ಹಾಕುವುದು, ಕಲ್ಲು ಬೆಂಚು ಅಳವಡಿಕೆ, ವಾಕಿಂಗ್ ಪಾತ್, ಸೈಕಲ್ ಟ್ರಾಕ್ ನಿರ್ಮಾಣ ಮಾಡಲಾಗುತ್ತಿದೆ. ಕೆರೆಯ ಒಳಗೆ ಸಾರ್ವಜನಿಕರು ಹಾಗೂ ಪ್ರಾಣಿಗಳು ಹೋಗದಂತೆ ಚೈನ್ ಲಿಂಕ್ ತಂತಿ ಬೇಲಿ ಅಳವಡಿಸಲು ಉದ್ದೇಶಿಸಲಾಗಿದೆ.

ಈ ಕೆರೆಗೆ ಯಾವುದೇ ಮಳೆ ನೀರಿನ ಒಳಹರಿವು ಇಲ್ಲದಿರುವುದರಿಂದ, ತುಂಗಭದ್ರಾ ನದಿ ಮತ್ತು ಭದ್ರಾ ಕಾಉವೆ ಮೂಲಕ ಹರಿಸಿ ತುಂಬಿಸಲಾಗುತ್ತಿದೆ. ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಯ ವಿಷಯವಾಗಿರುವುದರಿಂದ, ಕೆರೆಯಲ್ಲಿ ಸ್ವಚ್ಛ ಪರಿಸರ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಸತ್ಯಾಂಶಗಳ ಬಗ್ಗೆ ಜನಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಜಿ.ಎಂ. ಸಿದ್ದೇಶ್ವರ ಅವರು, ವಾಸ್ತವ ಸಂಗತಿಗಳನ್ನು ಅರಿಯದೆ, ಕುಂದವಾಡ ಕೆರೆ ಅಭಿವೃದ್ಧಿ ಯೋಜನೆಯು ಪರಿಸರ ವಿರೋಧಿಯೆಂದು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕುಂದವಾಡ ಕೆರೆ ಪ್ರಸ್ತುತ ಕೇವಲ ಕೆರೆ ಮಾತ್ರವಲ್ಲದೆ, ನಗರಕ್ಕೆ ಕುಡಿಯುವ ನೀರಿಗೆ ಆಧಾರವಾಗಿರುವ ಪ್ರಮುಖ ನೀರು ಸಂಗ್ರಹಗಾರವಾಗಿದೆ. ಅಧಿಕಾರಿಗಳು ಕುಂದವಾಡ ಕೆರೆ ಅಭಿವೃದ್ಧಿಯ ಉದ್ದೇಶ ಕುರಿತ ವಾಸ್ತವ ಅಂಶಗಳನ್ನು ಸರಿಯಾದ ರೀತಿಯಲ್ಲಿ ಪ್ರಚುರಪಡಿಸಿದಲ್ಲಿ, ಯೋಜನೆ ಅಭಿವೃದ್ಧಿ ಕುರಿತಂತೆ ಇರುವ ತಪ್ಪು ಅಭಿಪ್ರಾಯಗಳು ದೂರವಾಗಲು ಸಾಧ್ಯ, ಈ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಜನಜಾಗೃತಿ ಮೂಡಿಸಿ ಎಂದು ಸೂಚನೆ ನೀಡಿದರು.

ಚರಂಡಿ, ರಾಜಕಾಲುವೆ ನಿರ್ಮಾಣಕ್ಕೆ ಅಡ್ಡಿ

ನಗರದಲ್ಲಿ ಮಳೆ ಹೆಚ್ಚು ಬಂದಾಗ, ನೀರು ಸರಾಗವಾಗಿ ಹರಿಯದೆ, ತಗ್ಗು ಪ್ರದೇಶಗಳಿಗೆ ನುಗ್ಗಿ, ತೊಂದರೆ ಉಂಟಾಗುವುದನ್ನು ತಪ್ಪಿಸಲು ರಾಜ ಕಾಲುವೆ ಹಾಗೂ ಚರಂಡಿಗಳ ನಿರ್ಮಾಣವಾಗುತ್ತಿದ್ದು ಶೇ. 50 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ನಗರದಲ್ಲಿನ ರಾಜ ಕಾಲುವೆ (ಮುಖ್ಯ ಚರಂಡಿ) ಮಾರ್ಗಕ್ಕೆ ಹಲವೆಡೆ ಅನುಮೋದಿತ ಬಡಾವಣೆಯಲ್ಲಿ ಸೂಕ್ತ ಸ್ಥಳಾವಕಾಶ ಇಲ್ಲದಿರುವುದರಿಂದ ತೊಂದರೆ ಉಂಟಾಗಿದೆ.

ಅಲ್ಲದೆ ನಗರದ ಹಳೆಯ ಭಾಗದಲ್ಲಿ ಚರಂಡಿ ಹಾಗೂ ರಸ್ತೆಯಲ್ಲಿ ನೀರಿನ ತೊಟ್ಟಿ, ಶೌಚಾಲಯ, ಮೆಟ್ಟಿಲುಗಳು, ಸ್ಟೇರ್‍ಕೇಸ್, ಸ್ಟೋರ್‍ರೂಂ ಇತ್ಯಾದಿಗಳನ್ನು ಅನಧಿಕೃತವಾಗಿ ಕಟ್ಟಿಕೊಂಡಿರುವುದನ್ನು ಗಮನಿಸಲಾಗಿದ್ದು, ಕಾಮಗಾರಿಗಳಿಗೆ ತೀವ್ರ ತೊಂದರೆಯಾಗಿದೆ. ಮಹಾನಗರಪಾಲಿಕೆಯಿಂದ ತೆರವು ಮಾಡಿಕೊಟ್ಟಲ್ಲಿ, ಚರಂಡಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ರವೀಂದ್ರ ಮಲ್ಲಾಪುರ ಹೇಳಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಪ್ರತಿಕ್ರಿಯಿಸಿ, ಮಹಾನಗರಪಾಲಿಕೆ ಆಯುಕ್ತರು ಕೂಡಲೆ ಅಂತಹ ಒತ್ತುವರಿಯನ್ನು ತೆರವುಗೊಳಿಸಿ, ಚರಂಡಿ ನಿರ್ಮಾಣ ಕಾರ್ಯಕ್ಕೆ ಅನುವು ಮಾಡಿಕೊಡಬೇಕು. ಇದರಲ್ಲಿ ಯಾವುದೇ ಪ್ರಭಾವಗಳಿಗೆ ಮಣಿಯದೆ, ತುರ್ತಾಗಿ ತೆರವುಗೊಳಿಸುವಂತೆ ನಿರ್ದೇಶನ ನೀಡಿದರು.

ಇ-ಟಾಯ್ಲೆಟ್ ಸಮರ್ಪಕ ನಿರ್ವಹಣೆ

ನಗರ ವ್ಯಾಪ್ತಿಯಲ್ಲಿ ಈಗಾಗಲೆ 1 ಮತ್ತು 2 ನೇ ಹಂತದಲ್ಲಿ ಒಟ್ಟು 29 ಇ-ಟಾಯ್ಲೆಟ್‍ಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾಗಿದ್ದು, ಇನ್ನೂ 17 ನಿರ್ಮಾಣವಾಗಬೇಕಿದೆ. ಆದರೆ ಹಲವೆಡೆ ಇ-ಟಾಯ್ಲೆಟ್‍ಗಳ ಅಸಮರ್ಪಕ ನಿರ್ವಹಣೆಯಿಂದ ಹಾಳಾಗಿದ್ದು, ದೂರುಗಳು ಕೇಳಿಬರುತ್ತಿವೆ ಎಂದು ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯ ರವೀಂದ್ರ ಮಲ್ಲಾಪುರ ಉತ್ತರಿಸಿ, ಇ-ಟಾಯ್ಲೆಟ್‍ಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಸದುದ್ದೇಶದಿಂದ ನಿರ್ಮಿಸಿದ್ದು, ಕೆಲವು ಕಿಡಿಗೇಡಿಗಳು ಕಾಯಿನ್ ಬಾಕ್ಸ್‍ನಲ್ಲಿ ಕಬ್ಬಿಣದ ತುಂಡು, ಕಟ್ಟಿಗೆ ತುಂಡುಗಳನ್ನು ಹಾಕಿ ಹಾಳು ಮಾಡುತ್ತಿದ್ದಾರೆ. ನಗರದಲ್ಲಿ ಎಲ್ಲ 46 ಇ-ಟಾಯ್ಲೆಟ್‍ಗಳನ್ನು ನಿರ್ಮಾಣ ಮಾಡಿ, ನಿರ್ವಹಣೆಗಾಗಿ ಮಹಾನಗರಪಾಲಿಕೆಗೆ ಹಸ್ತಾಂತರ ಮಾಡಲಾಗುವುದು.

ರಸ್ತೆ ಸುರಕ್ಷತೆಗಾಗಿ ನಗರದಲ್ಲಿ ಹಾಕಿರುವ ಫ್ಲೆಕ್ಸಿಬಲ್ ಮೀಡಿಯನ್, ಮಾರ್ಕರ್, ಸೋಲಾರ್ ಬ್ಲಿಂಕರ್ಸ್‍ಗಳನ್ನು ದುಷ್ಕರ್ಮಿಗಳು ಕತ್ತರಿಸಿ, ಕಳುವು ಮಾಡಿಕೊಂಡು, ತಮ್ಮ ವಾಹನಗಳಿಗೆ ಅಳವಡಿಸಿರುವುದು ಕಂಡುಬಂದಿದ್ದು, ಅಂತಹ ವಾಹನಗಳ ಫೋಟೋ ಸಹಿತ ನಗರದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸ್ ಅಧಿಕಾರಿಗಳು ಇನ್ನೂ ಕ್ರಮ ಕೈಗೊಂಡಿಲ್ಲ ಎಂದರು.

ಸಭೆಯ ಮಧ್ಯದಲ್ಲಿಯೇ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿದ ಸಂಸದರು, ಇದುವರೆಗೂ ಕ್ರಮ ಕೈಗೊಳ್ಳದ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕೂಡಲೆ ಅಂತಹ ವಾಹನಗಳನ್ನು ವಶಕ್ಕೆ ಪಡೆದು ಕಾನೂನು ರೀತ್ಯ ಕ್ರಮ ಜರುಗಿಸುವಂತೆ ತಾಕೀತು ಮಾಡಿದರು.

ಸಭೆಯಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮಹಾನಗರಪಾಲಿಕೆ ಮಹಾಪೌರ ಅಜಯ್‍ಕುಮಾರ್, ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ಸಿಟಿ ಲೆವೆಲ್ ಅಡೈಸರಿ ಫೋರಂ ಸದಸ್ಯರು, ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು, ಇಂಜಿನಿಯರ್‍ಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ

Published

on

~ಗೋವರ್ಧನ ನವಿಲೇಹಾಳು 

ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು‌ ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.

ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .

ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.

ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.

ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.

ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.

ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.

ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.

ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ

Published

on

ಸುದ್ದಿದಿನ,ದಾವಣಗೆರೆ:ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುತ್ತಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ದಾವಣಗೆರೆಯ ಬಾಷಾನಗರ,ಆನೆಕೊಂಡ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮನೆಮನೆಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಮತಯಾಚನೆ ಮಾಡಿ ನಂತರ ಮಾತನಾಡಿದರು.

ರಾಜ್ಯದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರವಿದ್ದು, ಅದನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದೆ ಎಂದ ಅವರು ಶಾಮನೂರು ಕುಟುಂಬವು ಸದಾ ಜನರ ಸಮಸ್ಯೆಗಳ ಪರಿಹಾರಕ್ಕೆ ನಿಂತುಕೊಳ್ಳುತ್ತದೆ ಎಂಬ ಭರವಸೆಯನ್ನೂ ನೀಡಿದರು.

ಪ್ರಚಾರದ ವೇಳೆ ಸ್ಥಳೀಯರು ತಮ್ಮ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರ ಬಗ್ಗೆ ಜನರಿಗೆ ಭರವಸೆ ನೀಡಿದರು. ಜನರ ಹಕ್ಕುಪತ್ರದ ಸಮಸ್ಯೆಗಳು ಕುರಿತು ಈ ಹಿಂದೆ ಶಾಮನೂರು ಶಿವಶಂಕರಪ್ಪ ಅವರು ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಿದ್ದರು.ಈಗ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಜನರ ಎಲ್ಲಾ ಸಮಸ್ಯೆಗಳ ಪರಿಹಾರ ಮಾಡುತ್ತಿದ್ದಾರೆ ಎಂದರು.

ಯುವ ನಾಯಕ ಸಮರ್ಥ್ ಶಾಮನೂರು ಕುರಿತು ಮಾತನಾಡಿದ ಅವರು ಸಮರ್ಥ್ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವುದಾಗಿ ತಿಳಿಸಿದರು. ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಭಾಗವಹಿಸಿ, ಏಪ್ರಿಲ್ 9 ರಂದು ಮತಗಟ್ಟೆಗೆ ಬಂದು ಕ್ರಮ ಸಂಖ್ಯೆ 3ರ ‘ಹಸ್ತ’ ಚಿಹ್ನೆಗೆ ಮತ ಹಾಕಿ ಸಮರ್ಥ್ ಅವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು. ಈ ವೇಳೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ

Published

on

~ಗೋವರ್ಧನ ನವಿಲೇಹಾಳು

ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.

ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.

ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.

ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.

ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?

ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.

ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.

ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending