Connect with us

ರಾಜಕೀಯ

ಭಾಷೆ, ರಾಜಕಾರಣ ಮತ್ತು ವ್ಯಾಕರಣ

Published

on

ಭಾಷೆಯೊಂದರ ಉಳಿವಿನ ಪ್ರಶ್ನೆ ಚಾಲ್ತಿಗೆ ಬಂದಾಗಲೆಲ್ಲ ಅಧಿಕಾರ ಕೇಂದ್ರವು ಪ್ರತಿಕ್ರಿಯಿಸುವ ಉತ್ಸಾಹವನ್ನೇನೋ ತೋರುತ್ತದೆ. ತಾನು ಈ ವಿಷಯದಲ್ಲಿ ಗಂಭೀರವಾಗಿರುವುದಾಗಿ ಸಂದೇಶ ರವಾನಿಸುತ್ತದೆ. ಭವಿಷ್ಯದಲ್ಲಿ ಭಾಷೆಯ ಬಳಕೆಗಳ ಬಗ್ಗೆ ಎಚ್ಚರ ಇರುವುದಾಗಿಯೂ ಸ್ಪಷ್ಟಪಡಿಸುತ್ತದೆ. ಎಲ್ಲ ಸಮುದಾಯಗಳ ಜನರೂ ಜಾಗತಿಕ ಮನ್ನಣೆ ಪಡೆದ ಪರಭಾಷೆಯ ಮೇಲೆ ಹಿಡಿತ ಸಾಧಿಸಿ ಸಾಮಾಜಿಕ ಪ್ರತಿಷ್ಠೆಯನ್ನು ಗಳಿಸಿಕೊಳ್ಳುವಂತಾಗಲಿ ಎಂಬ ಸದುದ್ದೇಶದೊಂದಿಗೆ ಹೆಜ್ಜೆಯಿರಿಸುತ್ತಿರುವುದಾಗಿ ಸಮಜಾಯಿಷಿ ನೀಡುತ್ತದೆ. ಆದರೆ, ನಮ್ಮದಲ್ಲದ ಭಾಷೆಯ ಮೇಲೆ ಹಿಡಿತ ಸಾಧಿಸಿ ಪ್ರತಿಷ್ಠೆ ಗಳಿಸಿಕೊಳ್ಳುವ ಉಮೇದು ಅತ್ಯಂತ ಸಂಕುಚಿತವಾದದ್ದು ಎಂಬುದು ಅದಕ್ಕೆ ಅರ್ಥವಾಗುವುದಿಲ್ಲ. ಇನ್ನೊಂದು ಭಾಷೆಯ ಮೇಲೆ ಹಿಡಿತ ಸಾಧಿಸುವುದಷ್ಟೇ ಮುಖ್ಯ ಎಂಬ ಸಾರ್ವತ್ರಿಕ ಭಾವನೆಯನ್ನೇ ಆಧರಿಸಿಕೊಂಡು ನಿರ್ಧಾರ ಕೈಗೊಳ್ಳುವುದರಲ್ಲಿಯೇ ಆಸಕ್ತಿ ತೋರುತ್ತದೆ.

ಪ್ರಾಯೋಗಿಕವಾಗಿ 1000 ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಸರ್ಕಾರಿ ಪ್ರಸ್ತಾವವು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಆಯೋಜಿತವಾದ 84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ತಾರ್ಕಿಕ ಚರ್ಚೆಯನ್ನೂ ಹುಟ್ಟುಹಾಕಿದೆ. ಈ ವೇದಿಕೆಯ ಮೂಲಕ ವ್ಯಕ್ತವಾದ ತಾರ್ಕಿಕ ಪ್ರಶ್ನೆಗಳು ಅಧಿಕಾರ ಕೇಂದ್ರದ ಪ್ರತಿನಿಧಿಗಳೊಳಗೆ ನಿಜವಾದ ಭಾಷಾ ಪ್ರಜ್ಞೆಯನ್ನು ಬಿತ್ತುವ ರೀತಿಯಲ್ಲಿಯೇ ಇವೆ. ಆದರೆ, ಇವು ಮುನ್ನೆಲೆಗೆ ತಂದ ಚರ್ಚೆಯು ಸಂವಾದವನ್ನು ಹುಟ್ಟುಹಾಕುವ ಬದಲು ವಿವಾದವನ್ನೇ ಸೃಷ್ಟಿಸಿದೆ. ಇದಕ್ಕೆ ಕಾರಣ ಚರ್ಚೆಯ ವೇಳೆ ವ್ಯಕ್ತವಾದ ಅಭಿಪ್ರಾಯಗಳನ್ನು ವಿಶಾಲವಾಗಿ ಗ್ರಹಿಸದೇ ಇರುವುದು.

ರಾಜಕೀಯ ಚಾಣಾಕ್ಷತೆ

ಈ ಬಗೆಯ ವಿವಾದ ಇದೇ ಮೊದಲೇನಲ್ಲ. ಭಾಷೆ ಕುರಿತಾದ ಸರ್ಕಾರಿ ನಿರ್ಧಾರ ವ್ಯಕ್ತವಾದಾಗ ಸಹಜವಾಗಿಯೇ ಗೊಂದಲಗಳು ಏರ್ಪಡುತ್ತವೆ. ಅಂಥದ್ದೊಂದು ಗೊಂದಲದ ವಾತಾವರಣ ಸೃಷ್ಟಿಯಾಗುವಂತೆ ಅಧಿಕಾರ ರಾಜಕಾರಣ ಅತ್ಯಂತ ಚಾಣಾಕ್ಷಯುತವಾಗಿ ನೋಡಿಕೊಳ್ಳುತ್ತದೆ. ಭಾಷಾ ಸಂಬಂಧಿ ಚರ್ಚೆಯನ್ನು ಸಂವಾದಕ್ಕೆ ತಿರುಗಿಸಿ ಮಹತ್ವಪೂರ್ಣ ಭಾಷಾ ಆಂದೋಲನಕ್ಕೆ ಪ್ರೇರಣೆ ನೀಡುವ ಬದಲು ವಿವಾದದ ಸೀಮಿತ ಚೌಕಟ್ಟಿನೊಳಗೆ ಕಟ್ಟಿಹಾಕುವ ವೈಚಿತ್ರ್ಯವನ್ನು ಸೃಷ್ಟಿಸುತ್ತದೆ. ಇಂಥ ಸಂದರ್ಭದಲ್ಲೆಲ್ಲಾ ಭಾಷೆಯ ಉಳಿವಿನ ಕುರಿತು ಧ್ವನಿಯೆತ್ತುವ ನಾಟಕವಾಡುವ ಸಂಘಟನೆಗಳ ಪ್ರತಿನಿಧಿಗಳು ಮೌನಪ್ರೇಕ್ಷಕರಾಗಿಯೇ ಉಳಿದುಬಿಡುತ್ತಾರೆ. ನಿಜವಾದ ಕಾಳಜಿಯೊಂದಿಗೆ ಧ್ವನಿಯೆತ್ತುವ ಬೆರಳೆಣಿಕೆಯ ಹೋರಾಟಗಾರರು, ಚಿಂತಕರು ಮತ್ತು ರಾಜಕೀಯ ವಲಯದ ಪ್ರತಿನಿಧಿಗಳ ನಡುವೆ ಮಾತಿನ ಸಮರವೇ ನಿರ್ಮಾಣವಾಗಿಬಿಡುತ್ತದೆ. ಇಂಥ ವೇಳೆ ಸಾಹಿತ್ಯ ಸಮ್ಮೇಳನಗಳಂಥ ವೇದಿಕೆಗಳು ಜನಸಮೂಹದಲ್ಲಿ ಸರಿಯಾಗಿ ಆಲೋಚಿಸುವ ಒತ್ತಡವನ್ನುಂಟುಮಾಡುತ್ತವೆ. ಈ ವಿಷಯದಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ನಿಜವಾದ ಕಾಳಜಿಯನ್ನು ವ್ಯಕ್ತಪಡಿಸಿದೆ.

ತೀಕ್ಷ್ಣ ಪ್ರತಿಕ್ರಿಯೆ

ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ನಿರ್ಧಾರ ಪ್ರಚುರಪಡಿಸಿ ಸಾರ್ವಜನಿಕ ಶಿಕ್ಷಣ ವಲಯವನ್ನು ಪ್ರತಿಷ್ಠಿತವಾಗಿಸುವ ಯೋಚನೆಗೆ ಪ್ರತಿಯಾಗಿ ಸಮ್ಮೇಳನವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಉದ್ಘಾಟನೆಯ ದಿನದಿಂದಲೇ ಸ್ಪಷ್ಟ ಸಂದೇಶ ರವಾನಿಸಿದ ಸಮ್ಮೇಳನವು ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ನಿರ್ಧಾರವನ್ನು ಅನುಷ್ಠಾನಗೊಳಿಸಬಾರದು ಎಂಬ ಬಹುಮುಖ್ಯ ಆಗ್ರಹವನ್ನು ನಿರ್ಣಯದ ರೂಪದಲ್ಲಿ ಮುಂದಿಟ್ಟಿತು.

ಉದ್ಘಾಟನೆಯ ದಿನದಂದು ಸಾಹಿತಿ ಡಾ.ಚಂದ್ರಶೇಖರ ಪಾಟೀಲ್ ಅವರು ತಮ್ಮ ಎಂದಿನ ವ್ಯಂಗ್ಯದ ಧಾಟಿಯಲ್ಲಿ ಆಂಗ್ಲಮಾಧ್ಯಮ ಶಾಲೆಗಳ ಪರವಾದ ಪ್ರಸ್ತಾಪವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇಂಗ್ಲಿಷ್ ಪರವಾದ ನಿರ್ಧಾರಗಳನ್ನು ಅನುಷ್ಠಾನಗೊಳಿಸುವ ಉತ್ಸಾಹವು ಕನ್ನಡದ ಮೇಲೆ ಬಹುದೊಡ್ಡ ಪ್ರಹಾರದ ಮುನ್ಸೂಚನೆ ಎಂಬರ್ಥದ ವಿಶ್ಲೇಷಣೆಯನ್ನು ನೀಡಿದ್ದರು. ಆದರೆ, ಅವರ ಮಾತುಗಳಲ್ಲಿನ ತಾರ್ಕಿಕತೆಯು ಹಿನ್ನೆಲೆಗೆ ಸರಿದು ವ್ಯಕ್ತಿಗತ ದೃಷ್ಟಿಕೋನಗಳು ಆದ್ಯತೆ ಪಡೆದು ಚರ್ಚೆಗೊಳಪಟ್ಟವು.

ಭಾಷೆಯ ಬಗ್ಗೆ ಚರ್ಚಿಸುವಾಗಲೆಲ್ಲಾ ವ್ಯಕ್ತಿಗತ ಬದ್ಧತೆಯ ಪ್ರಶ್ನೆಗಳು ನುಸುಳಿಕೊಂಡು ಸಂವಾದದ ಸಾಧ್ಯತೆಯನ್ನು ಮೊಟಕುಗೊಳಿಸುತ್ತವೆ. ನಿಮ್ಮ ಮಕ್ಕಳು, ಮೊಮ್ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಕಳುಹಿಸಿ ಉಳಿದವರ ಮಕ್ಕಳು ಕನ್ನಡವನ್ನು ಕಲಿಯಬೇಕು ಎಂಬ ವಾದವನ್ನು ಮಂಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ವಾದವನ್ನು ಮುಂದಿಡಲಾಗುತ್ತದೆ. ಈ ಚಿಂತಕರು, ಬುದ್ಧಿಜೀವಿಗಳ ಜಾಯಮಾನವೇ ಹಾಗೆ ಎಂಬ ಉಡಾಫೆ ದೃಷ್ಟಿಕೋನದಲ್ಲಿ ಮಾತೃಭಾಷೆಯಲ್ಲಿನ ಪ್ರಾಥಮಿಕ ಶಿಕ್ಷಣದ ವ್ಯಾಪಕ ಪ್ರಯೋಜನಗಳ ಸಾಧ್ಯತೆಯನ್ನು ಅವಸರವಸರದಲ್ಲಿ ಅಲ್ಲಗಳೆಯಲಾಗುತ್ತದೆ.

ಗಟ್ಟಿತನದ ಅಡಿಪಾಯ

ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವುದನ್ನು ವ್ಯಕ್ತಿತ್ವವೊಂದು ಗಟ್ಟಿತನದ ಬೌದ್ಧಿಕ ಅಡಿಪಾಯ ರೂಪಿಸಿಕೊಳ್ಳುವ ಕ್ರಮ ಎಂದೇ ಪರಿಭಾವಿಸಿಕೊಳ್ಳಬೇಕು. ಪ್ರಾಥಮಿಕ ಸರ್ಕಾರಿ ಶಾಲೆಗಳನ್ನು ಈ ನೆಲೆಯಲ್ಲಿಯೇ ಬಲಪಡಿಸಬೇಕು. ಇಂಗ್ಲಿಷ್, ಹಿಂದಿ ಸೇರಿದಂತೆ ಇತರೆ ಭಾಷೆಗಳನ್ನು ಗ್ರಹಿಸಿಕೊಳ್ಳುವ ಶೈಕ್ಷಣಿಕ ಮಾದರಿಗಳನ್ನು ರೂಪಿಸಬೇಕು. ಅದಕ್ಕಾಗಿ ಶಿಕ್ಷಕ ಸಮುದಾಯವನ್ನು ಸಿದ್ಧಗೊಳಿಸಬೇಕು. ನೇಮಕಾತಿಯ ನಂತರ ಆಯಾ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಆದ್ಯತೆ ಪಡೆಯುವ ಭಾಷಾ ಶಿಕ್ಷಣದ ಹೊಸ ಆಯಾಮಗಳನ್ನು ಪರಿಚಯಿಸಿ ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ಮೇಲೆ ಹಿಡಿತ ಸಾಧಿಸುವ ಸರಳ ಕ್ರಮಗಳ ಕಲಿಕೆಯ ಕಡೆಗೆ ಗಮನವೀಯುವ ಸಮಗ್ರ ನೀತಿಯನ್ನು ವಿನ್ಯಾಸಗೊಳಿಸಿ ಜಾರಿಗೆ ತರುವ ಬದ್ಧತೆಯನ್ನು ಸರ್ಕಾರದ ಶೈಕ್ಷಣಿಕ ಸಚಿವಾಲಯ ತೋರ್ಪಡಿಸಬೇಕು.

ಬದ್ಧತೆಯ ಕೊರತೆ

ಇಂಥ ಬದ್ಧತೆಯ ಕೊರತೆಯ ಕಾರಣಕ್ಕಾಗಿಯೇ ಪ್ರಾಥಮಿಕ ಹಂತದಿಂದಲೇ ಸರ್ಕಾರಿ ಶಾಲೆಯ ಮಕ್ಕಳು ಭಾಷೆಗೆ ಸಂಬಂಧಿಸಿದಂತೆ ಹಲವಾರು ಸಂಕೀರ್ಣ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂಗ್ಲಿಷ್ ಕಲಿಯಲೇಬೇಕು, ಕಲಿಯದಿದ್ದರೆ, ಆ ವಿಷಯದಲ್ಲಿ ಅನುತ್ತೀರ್ಣರಾದರೆ ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂಬ ಸಾಮಾಜಿಕ ಅಂಜಿಕೆಯು ಅವರೊಳಗೆ ಕೀಳರಿಮೆಯನ್ನು ಮೂಡಿಸುತ್ತದೆ. ಕಾನ್ವೆಂಟ್ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳನ್ನು ಉದಾಹರಿಸಿ ಅವರೊಂದಿಗೆ ಹೋಲಿಸಿ ‘ಅವರ ಮುಂದೆ ನೀವೇನೂ ಅಲ್ಲ’ ಎಂಬ ತಿವಿತದೊಂದಿಗಿನ ಸಂಬಂಧಿಕರು ಮತ್ತು ಹಿರಿಯರ ಮಾತುಗಳು ಅವರೊಳಗಿನ ಸಕಾರಾತ್ಮಕ ದೃಷ್ಟಿಕೋನಗಳನ್ನೇ ಕೊಂದುಬಿಡುತ್ತವೆ.

ಇಂಗ್ಲಿಷ್ ಭಾಷೆಯ ವ್ಯಾಮೋಹದ ಗುಂಗಿನಲ್ಲಿ ಕನ್ನಡವನ್ನು ತುಚ್ಛವಾಗಿ ನೋಡುವ ಈ ಮನುಷ್ಯಮಿತಿಯು ಕೌಟುಂಬಿಕ ಆದ್ಯತೆಯನ್ನು ಪಡೆಯಬಾರದು. ಅಷ್ಟೇ ಅಲ್ಲ, ಆ ಆದ್ಯತೆಯು ಸರ್ಕಾರಿ ವಲಯದ ಪ್ರಾಶಸ್ತ್ಯವನ್ನೂ ಪಡೆಯಬಾರದು. ಹಾಗಾದರೆ, ಒಂದು ಪೀಳಿಗೆಯ ಭಾಷಿಕ ಸಾಮಥ್ರ್ಯ ಮತ್ತು ವೈಚಾರಿಕ ವಿವೇಚನೆಯ ಬೆಳವಣಿಗೆಯ ತೀವ್ರತೆಗೆ ಕುಂದುಂಟಾಗುತ್ತದೆ.

ಕನ್ನಡ ಶೈಕ್ಷಣಿಕ ಸಂಸ್ಕಾರದ ಶ್ರೇಷ್ಠತೆ

ಪ್ರಾಥಮಿಕ ಶಾಲಾಹಂತದ ಮಕ್ಕಳಿಗೆ ಕನ್ನಡದಿಂದಲೇ ಶಿಕ್ಷಣದ ಸಂಸ್ಕಾರ ಪ್ರಾಪ್ತವಾಗಬೇಕು ಎಂಬ ಪ್ರತಿಪಾದನೆಯು ಕೇವಲ ಭಾವುಕ ಲೇಪವನ್ನಷ್ಟೇ ಹೊಂದಿಲ್ಲ. ಅದು ಮಕ್ಕಳ ಕಲಿಕೆಯ ಸಾಮಥ್ರ್ಯಕ್ಕೆ ಬೇಕಾದ ಆಶಾವಾದವನ್ನು ನೆಲೆಗೊಳಿಸುವ ವೈಜ್ಞಾನಿಕ ಮಾರ್ಗೋಪಾಯದ ಆಧಾರವನ್ನೂ ಹೊಂದಿರುವುದನ್ನು ಗಮನಿಸಲೇಬೇಕು.

ಮಗುವೊಂದು ಮತ್ತೊಂದು ಭಾಷೆಯೊಂದಿಗೆ ಸಂಪರ್ಕ ಸಾಧಿಸುವುದಕ್ಕೆ ಮುನ್ನ ತಾನಿರುವ ಕೌಟುಂಬಿಕ ಪರಿಸರದ ಭಾಷಿಕ ಸಂವಹನದ ಕ್ರಮಗಳ ಅರಿವು ಹೊಂದಿರಬೇಕಾಗುತ್ತದೆ. ನೇರವಾಗಿ ಅದು ಬೇರೊಂದು ಭಾಷೆಯ ಸಂಪರ್ಕ ಸಾಧಿಸಲು ಸಾಧ್ಯವಾಗುವುದಿಲ್ಲ. ಉದಾಹರಣೆ ಹಿಂದಿ ಅಥವಾ ಇಂಗ್ಲಿಷ್ ಭಾಷೆಗಳನ್ನು ಕನ್ನಡದ ಪರಿಸರದಲ್ಲಿ ಬೆಳೆದ ಮಕ್ಕಳು ಕನ್ನಡದ ಮೂಲಕವೇ ಕಂಡುಕೊಳ್ಳಬೇಕಾಗುತ್ತದೆ. ನೇರವಾಗಿ ಇಂಗ್ಲಿಷ್ ಪದಗಳನ್ನು ಹೇಳಿ ಅದೇ ಭಾಷೆಯ ವಾಕ್ಯಗಳನ್ನು ಉಲ್ಲೇಖಿಸಿ ಆ ಭಾಷೆಯನ್ನು ಕಲಿಸಲಾಗದು. ಮಾತೃಭಾಷೆಯ ನೆರವಿನೊಂದಿಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳ ವ್ಯಾಕರಣ ಮತ್ತು ಅಭಿವ್ಯಕ್ತಿ ವಿಧಾನಗಳನ್ನು ಗೊತ್ತುಮಾಡಿಕೊಂಡರೆ ಮಕ್ಕಳೊಳಗೆ ಭಾಷಿಕ ಪ್ರಬುದ್ಧತೆ ಭಿನ್ನವಾಗಿ ನೆಲೆಯೂರುತ್ತದೆ. ಮಾತೃಭಾಷೆಯಲ್ಲಿ ಮಾತನಾಡುವ, ಮಾತನಾಡಿದ್ದನ್ನು ಸ್ಪಷ್ಟವಾಗಿ ಗ್ರಹಿಸುವ, ಗ್ರಹಿಸಿಕೊಂಡಿದ್ದನ್ನು ವಿವೇಚಿಸಿ ಅಭಿವ್ಯಕ್ತಿಸುವ ಕ್ರಮಗಳೊಂದಿಗೆ ಗುರುತಿಸಿಕೊಳ್ಳಲು ಅನುವಾಗುತ್ತದೆ. ಇದು ಪರಭಾಷೆಗಳ ಕಲಿಕೆಯಲ್ಲಿ ಗಮನಾರ್ಹ ಪಾತ್ರವಹಿಸುತ್ತದೆ.

ಭಾಷಾ ಸಂಕೀರ್ಣತೆಯ ಸವಾಲು

ಈ ಸೂಕ್ಷ್ಮವನ್ನು ಅರಿಯದೇ ಇದ್ದರೆ ಹೊಸ ಪೀಳಿಗೆಯ ಮಕ್ಕಳು ಭಾಷಾ ಸಂಕೀರ್ಣತೆಯನ್ನು ಎದುರಿಸುತ್ತಾರೆ. ಮುಂದಾಗುವ ಅಪಾಯವನ್ನು ಈಗಲೇ ಗ್ರಹಿಸಿರುವ ಕಾರಣಕ್ಕಾಗಿಯೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಉಳಿದೆಲ್ಲ ಪ್ರಚಲಿತ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳದೇ ಕೇವಲ ಭಾಷಿಕ ಸಮಸ್ಯೆಯನ್ನಷ್ಟೇ ಕಾಡಿಸಿಕೊಂಡು ಮಹತ್ವದ ಸಂದೇಶವನ್ನು ಸಾರುವಲ್ಲಿ ಯಶಸ್ವಿಯಾಗಿದೆ. ಸಾವಿರ ಆಂಗ್ಲಮಾಧ್ಯಮ ಶಾಲೆಗಳನ್ನು ಆರಂಭಿಸುವ ಯೋಚನೆಯನ್ನು ಅನುಷ್ಠಾನಗೊಳಿಸಬಾರದು ಎಂಬ ಸಮ್ಮೇಳನದ ಆಗ್ರಹ, ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವಂತೆ ಮುಂದಿಟ್ಟಿರುವ ಅದರ ಸಲಹಾತ್ಮಕ ನಿರ್ಣಯ ಮಹತ್ವಪೂರ್ಣ. ಆ ಮೂಲಕ ಸಮ್ಮೇಳನವು ಭಾಷೆಯ ಉಳಿವಿನ ಕುರಿತಾದ ತನ್ನ ಕಾಳಜಿ ಮತ್ತು ಬದ್ಧತೆಯನ್ನು ಸಾಬೀತುಪಡಿಸಿದೆ.

ಇಡೀ ಜಗತ್ತು ವಾಣಿಜ್ಯಿಕ ಲಾಭದ ಗುಂಗಿನೊಂದಿಗಿದ್ದಾಗ ಭಾಷೆ, ಸಂಸ್ಕøತಿ ಉಳಿವಿನ ಪ್ರಶ್ನೆಗಳು ಹಿನ್ನೆಲೆಗೆ ಸರಿಯುತ್ತವೆ. ಹಾಗೆ ಹಿನ್ನೆಲೆಗೆ ಸರಿಸುವ ಉದ್ದೇಶಪೂರ್ವಕ ಹುನ್ನಾರಗಳು ನಡೆದುಬಿಡುತ್ತವೆ. ವಾಣಿಜ್ಯಿಕ ಹಿತಾಸಕ್ತಿ ಮತ್ತು ಸಂಕುಚಿತ ರಾಜಕಾರಣದ ವಿಕಾರಗಳ ವಿಜೃಂಭಣೆಯ ಕಾರಣಕ್ಕಾಗಿಯೇ ಕನ್ನಡವು ಆಡಳಿತಾತ್ಮಕ ಆದ್ಯತೆಯ ಆವರಣದಿಂದ ಕ್ರಮೇಣ ಮರೆಯಾಗುವ ಮುನ್ಸೂಚನೆಗಳು ದೊರಕುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಸಮ್ಮೇಳನದ ಭಾಷಿಕ ನಿರ್ಣಯಗಳನ್ನು ಸಕಾಲಿಕ ಎಂದೇ ಪರಿಗಣಿಸಬೇಕಾಗುತ್ತದೆ.

ಮಾತೃಭಾಷೆಯೊಂದಿಗಿನ ಕಲಿಕಾನಂಟು

ಕಲಿಕೆಯು ಅತ್ಯಂತ ಸಹಜ ಪ್ರಕ್ರಿಯೆ. ಮಗುವಿನ ಬೆಳವಣಿಗೆಯ ವೇಳೆ ಕ್ರಮಾನಗುತವಾಗಿ ಆಂತರ್ಯದಲ್ಲಿ ಅಂತಸ್ಥಗೊಳ್ಳುವ ಪರಿಕಲ್ಪನೆ. ಇದನ್ನು ಒಳಗೊಳ್ಳುವ ಹಂಬಲದೊಂದಿಗೆ ಹೆಜ್ಜೆಯಿರಿಸುವ ಮಗು ಹಂತಹಂತವಾಗಿ ಪ್ರಬುದ್ಧತೆಯ ಹಾದಿಯನ್ನು ಕ್ರಮಿಸಲು ಸಾಧ್ಯವಾಗುತ್ತದೆ. ಈ ಹಾದಿಯಲ್ಲಿ ಮಾತೃಭಾಷೆಯದ್ದು ಅತ್ಯಂತ ಪ್ರಭಾವೀ ಪಾತ್ರ. ಆದರೆ, ಇದನ್ನು ನಿರ್ಲಕ್ಷಿಸಿ ಬೇರೊಂದು ಭಾಷೆಯನ್ನು ಮಕ್ಕಳ ಮನೋಲೋಕದಲ್ಲಿ ಒತ್ತಾಯಪೂರ್ವಕವಾಗಿ ಸೇರ್ಪಡೆಗೊಳಿಸುವ ಪ್ರಯತ್ನವು ಆಘಾತಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಸಮಗ್ರ ತಿಳುವಳಿಕೆಯನ್ನು ದಾಟಿಸುವುದಕ್ಕೆ ದಾರಿಮಾಡಿಕೊಡುವ ಕಲಿಕೆಯು ಭಾಷೆಯ ಪ್ರಸ್ತುತಿಯ ನೆರವಿನೊಂದಿಗೇ ಏರ್ಪಡಬೇಕಾಗುತ್ತದೆ.

ಮಗು ತನ್ನದಲ್ಲದ ಬೇರೊಂದು ಭಾಷೆಗೆ ಆರಂಭದಲ್ಲಿಯೇ ಒಗ್ಗಿಕೊಳ್ಳುವುದಿಲ್ಲ. ಅಪರಿಚಿತರನ್ನು ಕಂಡಾಕ್ಷಣ ಆತಂಕಗೊಳ್ಳುವ ಮನಸ್ಥಿತಿಯೇ ಬೇರೊಂದು ಭಾಷೆಯ ಅಭಿವ್ಯಕ್ತಿ ಎದುರುಗೊಂಡಾಗ ಪುನರಾವರ್ತಿತವಾಗುತ್ತದೆ. ಆಗ ಭಯ, ಆತಂಕ, ಅರ್ಥಕ್ಕೆಟುಕ್ಕುತ್ತಿಲ್ಲ ಎಂಬ ಕೊರಗುಗಳೆಲ್ಲವೂ ಒಟ್ಟಿಗೇ ದಾಳಿಗೈದು ಉದ್ದೇಶಿತ ಕಲಿಕೆ ಸಾಧ್ಯವಾಗುವುದೇ ಇಲ್ಲ. ಈ ಸೂಕ್ಷ್ಮತೆ ಅರಿತುಕೊಳ್ಳಲು ಭಾರೀ ಸಂಶೋಧನೆಯನ್ನೇನೋ ಕೈಗೊಳ್ಳಬೇಕಿಲ್ಲ. ಇಂಗ್ಲಿಷ್‍ನಿಂದಲೇ ಮಗುವಿನ ಕಲಿಕೆ ಆರಂಭವಾಗಬೇಕು ಎಂದು ವಾದಿಸುವ ಕನ್ನಡಿಗರು ತಮ್ಮ ತಮ್ಮ ಪ್ರಾಥಮಿಕ ಶಾಲಾ ದಿನಗಳನ್ನು ನೆನಪಿಸಿಕೊಂಡರೆ ಈ ಸೂಕ್ಷ್ಮ ಗಮನಕ್ಕೆ ಬರುತ್ತದೆ.

ಅಪಾಯದ ಮುನ್ಸೂಚನೆ

ಇಂಥ ಯಾವ ಸೂಕ್ಷ್ಮತೆಗಳನ್ನು ಪರಿಗಣಿಸದೇ ಪ್ರತಿಷ್ಠೆಯನ್ನಷ್ಟೇ ಕಾಡಿಸಿಕೊಂಡು ಮಕ್ಕಳ ಉದ್ಧಾರಕ್ಕೆ ಇಂಗ್ಲಿಷ್ ಮೂಲಕವೇ ಕಲಿಕೆಯ ಯಾನ ಶುರುವಾಗಬೇಕು ಎಂದು ಪ್ರತಿಪಾದಿಸುವುದು ತಾರ್ಕಿಕವೆನ್ನಿಸಿಕೊಳ್ಳುವುದಿಲ್ಲ. ಸಾಹಿತ್ಯ ಸಮ್ಮೇಳನಗಳಂಥ ವೇದಿಕೆಯ ಮೂಲಕ ಹೊರಹೊಮ್ಮುವ ಅಮೂಲ್ಯ ಚಿಂತನೆಗಳನ್ನು ಪರಿಗಣಿಸುವ ಆಡಳಿತಾತ್ಮಕ ಬದ್ಧತೆಯ ಕೊರತೆ ಎದ್ದುಕಾಣುತ್ತಿರುವಾಗ ಇಂಥ ವಿತಂಡವಾದಿ ದೃಷ್ಟಿಕೋನಗಳು ಕನ್ನಡದ ಮಕ್ಕಳ ಕಲಿಕಾ ಸಾಮಥ್ರ್ಯವನ್ನು ಮೊಟಕುಗೊಳಿಸುತ್ತವೆ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ನಮಗೆ ನಾಡಿನ ಕುರಿತಾದ ಹೆಮ್ಮೆಯ ಭಾವ ಮೂಡಿಸುವಂಥ ಗೀತೆಗಳನ್ನು ಶಿಕ್ಷಕರು ರಾಜ್ಯೋತ್ಸವದ ಸಂದರ್ಭದಲ್ಲಿ ಪರಿಚಯಿಸುತ್ತಿದ್ದರು.

ಕನ್ನಡದ ಕಲಿಕೆಯ ಜೊತೆಜೊತೆಗೇ ಇಂಥ ಪರಿಚಯಾತ್ಮಕ ಪ್ರಯತ್ನಗಳು ನಾಡಿನ ಕುರಿತಾದ ಹೆಮ್ಮೆಯನ್ನೂ ಹೆಚ್ಚಿಸುತ್ತಿದ್ದವು. ‘ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಕವಿತೆಯು ನಾಡಗೀತೆಯ ಆಡಳಿತಾತ್ಮಕ ಮನ್ನಣೆ ಪಡೆದು ಕಡ್ಡಾಯ ನಿಯಮಾವಳಿಯ ವ್ಯಾಪ್ತಿಗೆ ಬರುವುದಕ್ಕಿಂತ ಮುಂಚೆಯೇ ಕರ್ನಾಟಕದ ಶಾಲೆಗಳಲ್ಲಿ ಕನ್ನಡದ ವೈವಿಧ್ಯಮಯ ಜಗತ್ತು ಅದರ ಭಾಷಿಕ ಸೊಗಡಿನೊಂದಿಗೇ ಪರಿಚಿತವಾಗುತ್ತಿತ್ತು. ಈಗ ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಇಂಗ್ಲಿಷ್ ಮಾಧ್ಯಮದ ಆವರಣದ ಕೂಪಕ್ಕೆ ಮಕ್ಕಳನ್ನು ತಳ್ಳುವ ಪ್ರಯೋಗಾರ್ಥ ಪ್ರಯತ್ನದ ಹೆಜ್ಜೆಗಳು ಅಂಥ ವಾತಾವರಣವನ್ನು ಇಲ್ಲವಾಗಿಸುವ ಆತಂಕವನ್ನು ಮೂಡಿಸಿವೆ. ಮಕ್ಕಳ ಭಾಷಿಕ ಸಾಮಥ್ರ್ಯಕ್ಕೆ ಕೊಡಲಿಪೆಟ್ಟು ನೀಡುವ ಸುಳಿವು ನೀಡಿವೆ.

ಕಂಬಾರರ ಮೌಲಿಕ ಚಿಂತನೆ

ಸಮ್ಮೇಳನದ ಅಧ್ಯಕ್ಷರಾದ ಡಾ.ಚಂದ್ರಶೇಖರ ಕಂಬಾರ ಅವರ ನುಡಿಗಳಲ್ಲಿಯೇ ಆಡಳಿತವು ಕನ್ನಡ ಭಾಷೆಯ ಕುರಿತು ಯಾವ ನಿಲುವುಗಳನ್ನು ತಳೆಯಬೇಕು ಎಂಬ ಸ್ಪಷ್ಟ ಮಾರ್ಗದರ್ಶನವಿದೆ.“ಮಾತೃಭಾಷೆಯು ಬದುಕನ್ನು ಅಥಪೂರ್ಣಗೊಳಿಸುತ್ತದೆ. ಸಾಂಸ್ಕøತಿಕ ನಂಬಿಕೆ ಮತ್ತು ಮೌಲ್ಯಗಳು ಮಾತೃಭಾಷೆಯೊಂದಿಗೆ ತಳುಕುಹಾಕಿಕೊಂಡಿರುತ್ತವೆ. ಕನ್ನಡವನ್ನು ಸರಿಯಾಗಿ ಕಲಿಯುವುದರಿಂದ ಇಂಗ್ಲಿಷ್ ಸೇರಿದಂತೆ ಉಳಿದ ಭಾಷೆಗಳನ್ನು ಕಲಿಯುವುದಕ್ಕೂ ಸಹಾಯಕವಾಗುತ್ತದೆ” ಎಂಬ ಅವರ ನಿಲುವುಗಳು ಕೇವಲ ತಾತ್ವಿಕ ಚೌಕಟ್ಟನ್ನಷ್ಟೇ ಹೊಂದಿಲ್ಲ. ಸಮಸ್ತ ಕನ್ನಡಿಗರ ಅನುಭವಕ್ಕೆ ಬಂದ ಮೌಲಿಕ ಅಂಶಗಳನ್ನಾಗಿಯೂ ನಾವು ಅವುಗಳನ್ನು ಗ್ರಹಿಸಬೇಕು.

ಈ ರೀತಿಯಾಗಿ ಗ್ರಹಿಸುವ ಸಂಯಮ ಆಡಳಿತಾತ್ಮಕ ವಲಯದಿಂದ ವ್ಯಕ್ತವಾದರೆ ಕನ್ನಡ ಭಾಷೆಯು ಭವಿಷ್ಯದಲ್ಲಿ ಆತಂಕ ಎದುರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ವಾಣಿಜ್ಯಿಕ ಹಿತಾಸಕ್ತಿಯ ಪ್ರಲೋಭನೆಗೆ ಒಳಗಾಗಿ ಭಾಷೆಗೆ ಸಂಬಂಧಿಸಿದಂತೆ ಅತಾರ್ಕಿಕವಾದ, ಪ್ರಾಯೋಗಿಕವಲ್ಲದ ತೀರ್ಮಾನಗಳು ಪ್ರಕಟವಾಗುವುದಿಲ್ಲ.

ಇಂಗ್ಲಿಷ್ ಗುಂಗಿನ ಕೃತಕತೆ

ಇಂಗ್ಲಿಷ್ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವ ಭಾಷೆಯಾಗಿ ನಮ್ಮೊಳಗೆ ಬೆರೆತುಹೋಗಬೇಕಿಲ್ಲ. ಆ ಭಾಷೆಯನ್ನು ಬಲವಂತವಾಗಿ ಪ್ರಾಥಮಿಕ ಹಂತದಿಂದಲೇ ಮಕ್ಕಳೊಳಗೆ ಬೆರೆಸುವ ಪ್ರಯತ್ನವು ಅವರ ಬೆಳವಣಿಗೆಯ ಸಹಜತೆಗೆ ಕಡಿವಾಣ ಬಿಗಿಯುತ್ತದೆ. ಆ ಸಹಜತೆಯ ಜಾಗವನ್ನು ಕೃತಕತೆ ಆವರಿಸಿಕೊಂಡುಬಿಡುತ್ತದೆ.

ಇಂಗ್ಲಿಷ್ ಗುಂಗಿನ ಕೃತಕ ಚೌಕಟ್ಟಿನೊಳಗೆ ಬಂಧಿಯಾಗಿ ಕನ್ನಡದ ಬಗ್ಗೆ ಕೀಳರಿಮೆ ರೂಪುಗೊಳ್ಳುತ್ತದೆ. ಇಂಗ್ಲಿಷ್ ಶ್ರೇಷ್ಠ ಎಂಬ ತಪ್ಪುಕಲ್ಪನೆಯನ್ನೇ ಮಕ್ಕಳು ಪರಮ ಆದರ್ಶವನ್ನಾಗಿ ಸ್ವೀಕರಿಸುತ್ತಾರೆ. ಹಾಗಾದಾಗ ಮಾತೃಭಾಷೆ, ಅದರೊಂದಿಗಿನ ಕರಳುಬಳ್ಳಿಯ ಸಂಬಂಧ, ಸಂಸ್ಕøತಿಯ ವೈವಿಧ್ಯಮಯ ಸ್ವರೂಪ ಅವರಿಂದ ಕ್ರಮೇಣ ದೂರವಾಗುತ್ತಾ ಹೋಗುತ್ತದೆ. ಅವರನ್ನು ಹೀಗೆ ಉದ್ದೇಶಪೂರ್ವಕವಾಗಿ ಕನ್ನಡದ್ದೇ ಪರಂಪರೆಯ ಬೇರುಗಳಿಂದ ಬೇರ್ಪಡಿಸುವಂಥ ಹೆಜ್ಜೆಗಳು ಭಾಷಿಕ ಸಂದಿಗ್ಧತೆಯನ್ನೇ ಸೃಷ್ಟಿಸುತ್ತವೆ.

ಕರುಳುಬಳ್ಳಿಯ ಸಂಬಂಧ

ಮಕ್ಕಳು ಕನ್ನಡದೊಂದಿಗಿನ ಕರುಳುಬಳ್ಳಿಯ ಸಂಬಂಧ ಕಡಿದುಕೊಂಡರೆ ಏನಾಗುತ್ತದೆ? ಬೆಳೆದು ದೊಡ್ಡವರಾದಾಗ ಕನ್ನಡದ ಭಾಷಿಕ ಸೊಗಡನ್ನೇ ವ್ಯಂಗ್ಯಕ್ಕೀಡುಮಾಡುತ್ತಾರೆ. ಕನ್ನಡದ ಉಳಿವಿನ ಕುರಿತು ಜನಪ್ರಿಯ ಶೈಲಿಯಲ್ಲಿ ಸಿನಿಮಾ ಹೀರೋಗಳು ಹೇಳುವ ಡೈಲಾಗ್‍ಗಳನ್ನಷ್ಟೇ ಕೇಳಿ ಚಪ್ಪಾಳೆ ಹೊಡೆದು ಆ ಕ್ಷಣಕ್ಕೇ ಮರೆತುಬಿಡುವ ಮನಃಸ್ಥಿತಿಗೆ ಪಕ್ಕಾಗಿಬಿಡುತ್ತಾರೆ. ಇಂಗ್ಲಿಷ್ ಮಾತನಾಡಿದರಷ್ಟೇ ಮರ್ಯಾದೆ ಎಂದುಕೊಂಡು ಪ್ರತಿಷ್ಠೆ ಮೆರೆಯುವ ಕೃತಕತೆಯನ್ನೇ ಗುಣಸ್ವಭಾವವನ್ನಾಗಿಸಿಕೊಳ್ಳುತ್ತಾರೆ.

ಕನ್ನಡದಲ್ಲೇ ಲಭ್ಯವಾಗುವ ಅದೆಷ್ಟೋ ಜ್ಞಾನ ಮಾದರಿಗಳ ಸಂಪರ್ಕದಿಂದ ದೂರವೇ ಉಳಿದುಬಿಡುತ್ತಾರೆ. ಎಲ್ಲದಕ್ಕೂ ಇಂಗ್ಲಿಷ್‍ನ್ನೇ ನೆಚ್ಚಿಕೊಂಡು ಅದರ ಮೂಲಕ ಹರಿದುಬರುವ ಮಾಹಿತಿಗಳನ್ನು ಮೇಲ್ನೋಟಕ್ಕಷ್ಟೇ ಗ್ರಹಿಸುವ ಅವಸರದ ಮಾದರಿಯನ್ನೇ ಅನುಸರಿಸುತ್ತಾರೆ. ವಿವಿಧ ಭಾಷೆಗಳಲ್ಲಿ ಲಭ್ಯವಾಗುವ ಮಾಹಿತಿಗಳನ್ನುಜ್ಞಾನಸಂಪನ್ಮೂಲವಾಗಿಸಿಕೊಳ್ಳುವ ಸಂಯಮ ರೂಢಿಸಿದ ಕನ್ನಡ ಓದಿನ ಸೊಗಡು ಸವಿಯುವ ಅಪೂರ್ವ ಅವಕಾಶದಿಂದ ಅವರು ವಂಚಿತರಾಗುತ್ತಾರೆ.ಮುಂದೆ ಎದುರಾಗಲಿರುವ ಅಂಥದ್ದೊಂದು ಸನ್ನಿವೇಶದಿಂದ ಕನ್ನಡದ ಮಕ್ಕಳನ್ನು ಪಾರುಮಾಡಬೇಕಿದೆ. ಸಮ್ಮೇಳನದ ನಿರ್ಣಯಗಳನ್ನು ಗಂಭೀರವಾಗಿ ಪರಿಗಣಿಸಿ ಕನ್ನಡಕ್ಕಿರುವ ಉಜ್ವಲ ಭವಿಷ್ಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಭಾಷೆಗೆ ಸಂಬಂಧಿಸಿದಂತೆ ಕವಲು ಹಾದಿ ತುಳಿಯುವ ರಾಜಕಾರಣದ ಸಂಕುಚಿತ ವ್ಯಾಕರಣವನ್ನುಭಗ್ನಗೊಳಿಸಬೇಕಿದೆ.

-ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ

ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!

Published

on

ಆಗಸ್ಟ್ 2023 ರಿಂದ ಜುಲೈ 2026 ರವರೆಗೆ ₹28,759 ಕೋಟಿ ಸಬ್ಸಿಡಿ ಬಿಡುಗಡೆ; ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್‌ನಿಂದ ಕೋಟ್ಯಂತರ ಕುಟುಂಬಗಳ ಆರ್ಥಿಕ ಸಬಲೀಕರಣ

ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.

ಹೌದು! 2023ರ ಆಗಸ್ಟ್‌ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್‌ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.

http://Visit : www.suddidina.com

ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ: 

ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್‌ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.

ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್‌ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.

ಕುಟುಂಬದ ಬಜೆಟ್‌ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:

ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.

ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

Continue Reading

ದಿನದ ಸುದ್ದಿ

ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!

Published

on

ಕರ್ನಾಟಕದ ವೈಟ್‌ಫೀಲ್ಡ್-ಬಂಗಾರಪೇಟೆ, ಹೊಸೂರು-ಓಮಲೂರು ಮಾರ್ಗ ಸೇರಿ 9 ರಾಜ್ಯಗಳ 1200 ಕಿ.ಮೀ ರೈಲು ಜಾಲ ವಿಸ್ತರಣೆಗೆ ಪ್ರಧಾನಿ ಮೋದಿ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ಅನುಮೋದನೆ

ಸುದ್ದಿದಿನ, ಹೊಸದಿಲ್ಲಿ: ದೇಶದ ರೈಲ್ವೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 20ಕ್ಕೂ ಹೆಚ್ಚು ಜಿಲ್ಲೆಗಳನ್ನು ಸಂಪರ್ಕಿಸುವ 20,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ 8 ಬಹು ಟ್ರ್ಯಾಕಿಂಗ್ (Multi-Tracking) ರೈಲು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ (ಸೆ.09) ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಯೋಜನೆಗಳು ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅನುಷ್ಠಾನಗೊಳ್ಳಲಿವೆ.

http://Visit : www.suddidina.com

ಈ ಯೋಜನೆಗಳಿಂದ ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವು ಬರೋಬ್ಬರಿ 1,200 ಕಿಲೋಮೀಟರ್‌ಗಳಷ್ಟು ವಿಸ್ತರಣೆಯಾಗಲಿದೆ. ಇದರಿಂದ 6,900ಕ್ಕೂ ಹೆಚ್ಚು ಗ್ರಾಮಗಳಿಗೆ ಸುಧಾರಿತ ಸಂಪರ್ಕ ಸಿಗಲಿದ್ದು, ರೈಲುಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಗಣನೀಯವಾಗಿ ಹೆಚ್ಚಾಗಲಿದೆ.

ಯಾವೆಲ್ಲ ಯೋಜನೆಗಳಿಗೆ ಅನುಮೋದನೆ?
ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಪ್ರಮುಖ ಯೋಜನೆಗಳು ಹೀಗಿವೆ:

1. ಅರಾಕೋಣಂ-ರೇಣಿಗುಂಟಾ ಮತ್ತು ವೈಟ್‌ಫೀಲ್ಡ್-ಬಂಗಾರಪೇಟೆ ನಡುವೆ 3 ಮತ್ತು 4ನೇ ಮಾರ್ಗ: ಇದು ಕರ್ನಾಟಕ ಮತ್ತು ತಮಿಳುನಾಡು, ಆಂಧ್ರಪ್ರದೇಶಕ್ಕೆ ಅತ್ಯಂತ ಮಹತ್ವದ ಯೋಜನೆಯಾಗಿದೆ.

2. ಸಿಕಂದರಾಬಾದ್-ಕಾಜಿಪೇಟೆ ನಡುವೆ ಮಲ್ಟಿ ಟ್ರ್ಯಾಕಿಂಗ್: ತೆಲಂಗಾಣದ ಪ್ರಮುಖ ಮಾರ್ಗದ ದಟ್ಟಣೆ ಕಡಿಮೆ ಮಾಡಲಿದೆ.

3. ಹೊಸೂರು-ಓಮಲೂರು, ಸೇಲಂ-ಕರೂರ್-ದಿಂಡಿಗಲ್ ಜೋಡಿ ಹಳಿ ಯೋಜನೆ: ತಮಿಳುನಾಡು ಮತ್ತು ಕರ್ನಾಟಕದ ಗಡಿ ಭಾಗದ ಸಂಪರ್ಕವನ್ನು ಬಲಪಡಿಸಲಿದೆ.

4. ಖರಗ್‌ಪುರ-ಝಾರ್ಸುಗುಡ ಮತ್ತು ಕತ್ನಿ-ಪೆಂದ್ರ ರಸ್ತೆ ನಡುವೆ 4ನೇ ಮಾರ್ಗ ಮತ್ತು ಬಿಲಾಸ್‌ಪುರ್-ಪೆಂದ್ರ ರಸ್ತೆ ನಡುವೆ 3ನೇ ಮಾರ್ಗ: ಛತ್ತೀಸ್‌ಗಢ, ಒಡಿಶಾ, ಮಧ್ಯಪ್ರದೇಶದ ಕಲ್ಲಿದ್ದಲು ಮತ್ತು ಖನಿಜ ಸಾಗಣೆಗೆ ಸಹಕಾರಿಯಾಗಲಿದೆ.

ಈ ಎಲ್ಲಾ ಯೋಜನೆಗಳು ಕರ್ನಾಟಕ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ಛತ್ತೀಸ್‌ಗಢ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಒಳಗೊಳ್ಳಲಿವೆ.

ಕರ್ನಾಟಕಕ್ಕೆ ಏನು ಲಾಭ?

ಈ ಬಹು ಟ್ರ್ಯಾಕಿಂಗ್ ಯೋಜನೆಗಳಿಂದ ಕರ್ನಾಟಕಕ್ಕೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ.ಕೈಗಾರಿಕೆಗಳಿಗೆ ಅನುಕೂಲ: ರಾಜ್ಯದ ಉಕ್ಕು ಕಾರ್ಖಾನೆಗಳಿಗೆ ಕಚ್ಚಾ ವಸ್ತುಗಳಾದ ಖನಿಜ ಸಾಗಿಸಲು ವಾಡಿ-ತಂದೂರು, ಮೋಟುಮಾರಿ-ವಿಷ್ಣುಪುರಂ ಮಾರ್ಗದಲ್ಲಿನ ಅಭಿವೃದ್ಧಿಯಿಂದ ಹೆಚ್ಚಿನ ಅನುಕೂಲವಾಗಲಿದೆ. ಹೂಟಗಿ, ಕೂಡಗಿ, ಯಾದ್ಲಾಪುರ, ಬಳ್ಳಾರಿ ಮತ್ತು ಯರಮರಸ್‌ನಲ್ಲಿರುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಣೆ ಇನ್ನಷ್ಟು ವೇಗ ಮತ್ತು ಸುಲಭವಾಗಲಿದೆ.

ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ದಟ್ಟಣೆ ಕಡಿಮೆ: ವೈಟ್‌ಫೀಲ್ಡ್-ಬಂಗಾರಪೇಟೆ ನಡುವಿನ 47 ಕಿ.ಮೀ ಉದ್ದದ 3 ಮತ್ತು 4ನೇ ಮಾರ್ಗವು ಅತ್ಯಂತ ದಟ್ಟಣೆಯ ಮನ್ಮಾಡ-ಹುಬ್ಬಳ್ಳಿ-ಬೆಂಗಳೂರು-ಜೋಳರಪೇಟೆ ವಿಭಾಗದಡಿ ಬರುತ್ತದೆ. ಇದು ಬೆಂಗಳೂರು-ಚೆನ್ನೈ ನಡುವಿನ ರೈಲು ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಿ, ಹೆಚ್ಚಿನ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದೆ.

ಪ್ರವಾಸೋದ್ಯಮ ಮತ್ತು ಸರಕು ಸಾಗಣೆಗೆ ಉತ್ತೇಜನ: ಹೊಸೂರು-ಓಮಲೂರು ಜೋಡಿ ಹಳಿ ಮಾರ್ಗದಿಂದ ಕನ್ಯಾಕುಮಾರಿ, ರಾಮೇಶ್ವರಂನಂತಹ ಪುಣ್ಯಕ್ಷೇತ್ರಗಳಿಗೆ ತೆರಳುವ ಲಕ್ಷಾಂತರ ಯಾತ್ರಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಸರಕು ಸಾಗಣೆಯೂ ವೇಗವಾಗಲಿದೆ.ಒಟ್ಟಾರೆಯಾಗಿ, ಈ ಯೋಜನೆಗಳು ಕೇವಲ ರೈಲು ಮಾರ್ಗಗಳ ವಿಸ್ತರಣೆಯಷ್ಟೇ ಅಲ್ಲ, ದೇಶದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಪ್ರಾದೇಶಿಕ ಸಂಪರ್ಕಕ್ಕೆ ಹೊಸ ಶಕ್ತಿ ತುಂಬಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Continue Reading

ದಿನದ ಸುದ್ದಿ

ಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು

Published

on

ಸೆ.10 ರಂದು ವಿಧಾನಸೌಧದಲ್ಲಿ ಶತದಿನೋತ್ಸವ ಸಮಾರಂಭ; ಮಾಜಿ ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನೆ, ಗ್ಯಾರಂಟಿ ಫಲಾನುಭವಿಗಳೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಸಂವಾದ

ಸುದ್ದಿದಿನ, ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 100 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಶತಕದ ಸಂಭ್ರಮವನ್ನು ಆಚರಿಸಲು ರಾಜ್ಯ ಸರ್ಕಾರವು `ದೃಢ ಕರ್ನಾಟಕದ ಸಂಕಲ್ಪ – ಶತಕದ ಪಥ, ಪ್ರಗತಿಯ ರಥ’ ಎಂಬ ವಿಶೇಷ ಮತ್ತು ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

 

ಈ ಕಾರ್ಯಕ್ರಮವು ನಾಳೆ ಅಂದರೆ 2026ನೇ ಸೆಪ್ಟೆಂಬರ್ 10ರ ಗುರುವಾರ ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದ ಪ್ರತಿಷ್ಠಿತ ಬ್ಯಾಂಕ್ವೇಟ್ ಸಭಾಂಗಣದಲ್ಲಿ ನಡೆಯಲಿದೆ. ಸರ್ಕಾರದ ನೂರು ದಿನಗಳ ಸಾಧನೆ, ಜನಪರ ಯೋಜನೆಗಳ ಅನುಷ್ಠಾನ ಮತ್ತು ಮುಂದಿನ ಅಭಿವೃದ್ಧಿಯ ದೂರದೃಷ್ಟಿಯನ್ನು ಜನರ ಮುಂದಿಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಗಣ್ಯರ ದಂಡು, ಸಿದ್ದರಾಮಯ್ಯರಿಂದ ಉದ್ಘಾಟನೆ:

ಈ ಶತದಿನೋತ್ಸವ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಇದು ಕಾಂಗ್ರೆಸ್ ಪಕ್ಷದಲ್ಲಿನ ಒಗ್ಗಟ್ಟು ಮತ್ತು ನಾಯಕತ್ವದ ನಿರಂತರತೆಯನ್ನು ಸಂಕೇತಿಸುತ್ತದೆ.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ಜಿ. ಪರಮೇಶ್ವರ್, ರಾಜ್ಯ ಸಂಪುಟದ ಎಲ್ಲಾ ಸಚಿವರು, ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಭಾಗವಹಿಸಲಿದ್ದಾರೆ. ಇದರ ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.

http://Visit : www.suddidina.com

ಫಲಾನುಭವಿಗಳೊಂದಿಗೆ ನೇರ ಸಂವಾದ – ಕಾರ್ಯಕ್ರಮದ ಪ್ರಮುಖ ಆಕರ್ಷಣೆ

ಈ ಕಾರ್ಯಕ್ರಮದ ಅತ್ಯಂತ ಪ್ರಮುಖ ಆಕರ್ಷಣೆ ಎಂದರೆ ಮುಖ್ಯಮಂತ್ರಿಗಳೊಂದಿಗೆ ಫಲಾನುಭವಿಗಳ ನೇರ ಸಂವಾದ. ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಮತ್ತು ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳು ಈ ವೇದಿಕೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಕೇವಲ ಗ್ಯಾರಂಟಿ ಯೋಜನೆಗಳಷ್ಟೇ ಅಲ್ಲದೆ, ಸಮಾಜದ ವಿವಿಧ ವರ್ಗಗಳ ಶ್ರಮಿಕರು ಮತ್ತು ಕಾರ್ಮಿಕರು ಕೂಡ ಈ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೃಷಿಕರು, ಆಟೋ ಚಾಲಕರು, ಹಮಾಲಿಗಳು, ಗಿಗ್ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೌರಕಾರ್ಮಿಕರು ತಮ್ಮ ಬದುಕಿನಲ್ಲಿ ಸರ್ಕಾರದ ಯೋಜನೆಗಳಿಂದ ಆಗಿರುವ ಬದಲಾವಣೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಮುಕ್ತವಾಗಿ ಮಾತನಾಡಲಿದ್ದಾರೆ.

100 ದಿನಗಳಲ್ಲಿ ಸರ್ಕಾರವು ಕೈಗೊಂಡಿರುವ ಜನಪರ ನಿರ್ಧಾರಗಳು, ಅಭಿವೃದ್ಧಿ ಕಾಮಗಾರಿಗಳು ಮತ್ತು ಆಡಳಿತದಲ್ಲಿ ತಂದಿರುವ ಪಾರದರ್ಶಕತೆಯ ಬಗ್ಗೆ ಈ ವೇದಿಕೆಯಲ್ಲಿ ಚರ್ಚೆ ನಡೆಯಲಿದೆ. ಸರ್ಕಾರದ ಸಾಧನೆಗಳನ್ನು ಕೇವಲ ಭಾಷಣದ ಮೂಲಕವಲ್ಲ, ಬದಲಾಗಿ ಫಲಾನುಭವಿಗಳ ಬಾಯಿಂದಲೇ ಜನರಿಗೆ ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ದಿನಗಳಲ್ಲಿ ದೃಢ ಕರ್ನಾಟಕ’ ನಿರ್ಮಾಣದ ನಿಟ್ಟಿನಲ್ಲಿ ಸರ್ಕಾರದ ಮುಂದಿನ 5 ವರ್ಷಗಳ ಕಾರ್ಯಯೋಜನೆ ಮತ್ತು ರೂಪುರೇಷೆಗಳನ್ನು ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

Continue Reading
Advertisement

Title

ದಿನದ ಸುದ್ದಿ3 days ago

ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!

ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ...

ದಿನದ ಸುದ್ದಿ3 days ago

ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!

ಸುದ್ದಿದಿನ, ಹೊಸದಿಲ್ಲಿ: ದೇಶದ ರೈಲ್ವೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 20ಕ್ಕೂ ಹೆಚ್ಚು...

ದಿನದ ಸುದ್ದಿ3 days ago

ಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು

ಸುದ್ದಿದಿನ, ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 100 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ....

ದಿನದ ಸುದ್ದಿ3 days ago

ಇಂದಿನ ರಾಶಿ ಭವಿಷ್ಯ: ಯಾವ ರಾಶಿಗೆ ಶುಭ? ಯಾವ ರಾಶಿಗೆ ಎಚ್ಚರಿಕೆ? ಇಲ್ಲಿದೆ 12 ರಾಶಿಗಳ ಸಂಪೂರ್ಣ ಭವಿಷ್ಯ!

ಸುದ್ದಿದಿನ,ನಿತ್ಯಭವಿಷ್ಯ: ಸೆಪ್ಟೆಂಬರ್ 10, 2026 ರ ನಿಮ್ಮ ಜಾತಕವನ್ನು ಅನ್ವೇಷಿಸಿ. ವೃತ್ತಿ, ಹಣ, ಪ್ರೀತಿ ಮತ್ತು ಆರೋಗ್ಯದ ಸಂಪೂರ್ಣ ಭವಿಷ್ಯವಾಣಿಗಳನ್ನು ಓದಿ. http://Visit : www.suddidina.com ಮೇಷ:...

ದಿನದ ಸುದ್ದಿ3 days ago

ದೇಶದಲ್ಲಿ ಏಕರೂಪ ರಾಷ್ಟ್ರೀಕೃತ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು: ಡಾ.ಮೂಡ್ನಾಕೂಡು ಚಿನ್ನಸ್ವಾಮಿ

ಕೆಪಿಸಿಎಲ್ ಹಾಗೂ ಕೆಪಿಸಿಎಲ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಸಂಘದಿಂದ ಅಂಬೇಡ್ಕರ್ ಜಯಂತಿ ಆಚರಣೆ ಎಸ್ಎಸ್ಎಲ್ ಸಿ, ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ...

ದಿನದ ಸುದ್ದಿ3 days ago

5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!

ಸುದ್ದಿದಿನ, ಬೆಂಗಳೂರು: ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಚಂದಾದಾರರಲ್ಲಿ ಬಹುದಿನಗಳಿಂದ ಒಂದು ದೊಡ್ಡ ಗೊಂದಲವಿದೆ. ನಾನು ಕೆಲಸ ಬಿಟ್ಟಿದ್ದೇನೆ, ಕಳೆದ 5 ವರ್ಷಗಳಿಂದ ಪಿಎಫ್ ಖಾತೆಗೆ...

ದಿನದ ಸುದ್ದಿ3 days ago

ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್‌ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!

ಸುದ್ದಿದಿನ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಲಕ್ಷಾಂತರ ಬಿಎಂಟಿಸಿ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಬಸ್‌ಗಾಗಿ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ...

ದಿನದ ಸುದ್ದಿ3 days ago

ಬರ ನಿರ್ವಹಣೆಗೆ ಸಚಿವ ಸಂಪುಟ ಉಪಸಮಿತಿ ಸಭೆ – ದಾವಣಗೆರೆಯಲ್ಲಿ ಕುಡಿಯುವ ನೀರು, ಮೇವು ಕೊರತೆ ಬಗ್ಗೆ ಸಚಿವ ಮಲ್ಲಿಕಾರ್ಜುನ್ ಪ್ರಸ್ತಾಪ

ಸುದ್ದಿದಿನ,ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ಎದುರಾಗಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಮತ್ತು ಪರಿಹಾರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ಕುರಿತು ವಿಧಾನಸೌಧದಲ್ಲಿ ಇಂದು ಸಚಿವ ಸಂಪುಟ ಉಪಸಮಿತಿ...

ನಿವೃತ್ತ ನೌಕರರ ಸಂಘದಿಂದ ತೀಕ್ಷ್ಣ ಅಂಧ ಮಕ್ಕಳ ಶಾಲೆಗೆ ಸಂಗೀತ ವಾದ್ಯಗಳ ಕೊಡುಗೆ; ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಸಮಾಜದ ಕರ್ತವ್ಯ ನಿವೃತ್ತ ನೌಕರರ ಸಂಘದಿಂದ ತೀಕ್ಷ್ಣ ಅಂಧ ಮಕ್ಕಳ ಶಾಲೆಗೆ ಸಂಗೀತ ವಾದ್ಯಗಳ ಕೊಡುಗೆ; ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಸಮಾಜದ ಕರ್ತವ್ಯ
ದಿನದ ಸುದ್ದಿ3 days ago

ವಿಶೇಷ ಚೇತನ ಮಕ್ಕಳು ದೇವರ ಮಕ್ಕಳು – ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್

ಸುದ್ದಿದಿನ,ಚಿತ್ರದುರ್ಗ: ದೈವಿಕ ಕೊರತೆ ಹಾಗೂ ವಿಕಲಚೇತನ ಹೊಂದಿರುವ ಮಕ್ಕಳು ದೇವರ ಮಕ್ಕಳೆಂದೇ ಪರಿಗಣಿಸಲ್ಪಡುತ್ತಾರೆ. ಅಂತಹ ಮಕ್ಕಳಿಗೆ ಪ್ರೀತಿ, ವಾತ್ಸಲ್ಯ ನೀಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಿ, ಸ್ವಾವಲಂಬಿ...

ದಿನದ ಸುದ್ದಿ3 days ago

ಭದ್ರೆ ಆಗಮನದಿಂದ ರೈತರಲ್ಲಿ ಹೊಸ ಭರವಸೆ – ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ

ಸುದ್ದಿದಿನ,ಚಿತ್ರದುರ್ಗ: ಜಿಲ್ಲೆಯ ಬಹುದಿನಗಳ ನೀರಾವರಿ ಕನಸಾಗಿರುವ ಭದ್ರಾ ಮೇಲ್ದಂಡೆ ಯೋಜನೆಯ ನೀರು ಚಿತ್ರದುರ್ಗ ಜಿಲ್ಲೆಗೆ ಹರಿದುಬಂದಿರುವುದು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ನೀರಾವರಿ...

Trending