ಲೈಫ್ ಸ್ಟೈಲ್
ರಕ್ತದಾನ–ಜೀವದಾನ
“ಮಾನವ ಮೂಳೆ ಮಾಂಸದ ತಡಿಕೆ” ಈ ಸಾಲನ್ನು ಕೇಳಿದ ಎಲ್ಲರಿಗೂ ಈ ವಿಚಾರ ತಿಳಿದೇ ಇರುತ್ತದೆ. ಮಾನವನ ದೇಹದ ಒಳಗೆ ಮಿದುಳು, ಹೃದಯ, ಯಕೃತ್ತು, ಮೂತ್ರಪಿಂಡ ಸೇರಿದಂತೆ ಇನ್ನೂ ಕೆಲವು ಅಂಗಗಳು ಮಾನವನ ‘ಜೀವ’ಕ್ಕೆ ಅವಶ್ಯಕವಾದರೆ ಕೇವಲ ಮೂಳೆ ಮಾಂಸಗಳನ್ನೊಳಗೊಂಡ ಕೈ ಕಾಲುಗಳು ‘ಜೀವನಕ್ಕೆ ಬೇಕಾಗಿವೆ.
ಜೀವ ಮತ್ತು ಜೀವನ ಎರಡೂ ಹೊಂದಿಕೊಂಡು ಸಾಗಬೇಕಾದರೆ ದೇಹದ ಒಳಗೆ ನಿತ್ಯವೂ ಪ್ರತಿಕ್ಷಣವೂ ಸಂಚರಿಸುವ ರಕ್ತ ಈ ಎಲ್ಲ ಅಂಗಾಂಗಗಳ ಜೀವಕ್ಕೆ ಬೇಕು. ಆದರೆ ದೇಹದಲ್ಲಿ ರಕ್ತದ ಪ್ರಮಾಣವೇ ಕಡಿಮೆಯಾದರೆ, ಜೀವ ಮತ್ತು ಜೀವನ ಎರಡಕ್ಕೂ ಅಪಾಯ ಕಟ್ಟಿಟ್ಟದ್ದು.
ಎಲ್ಲೋ ಒಂದು ರಸ್ತೆ ಅಪಘಾತವಾಗುತ್ತದೆ. ಕಾಲು ಮುರಿದು ವಿಪರೀತ ರಕ್ತಸ್ರಾವವಾಗಿ ಆಸ್ಪತ್ರೆಗೆ ಸಾಗಿಸಿದರೆ ಅಲ್ಲಿ ವೈದ್ಯರು ಬರೀ ಐ.ವಿ. ಫ್ಲೂಯಿಡ್ಸ್‍ನಲ್ಲಿ ಉಪಚರಿಸಲು ಸಾಧ್ಯವಾಗದೆ ರಕ್ತದ ಅವಶ್ಯಕತೆಯ ಬಗ್ಗೆ ತಿಳಿಸುತ್ತಾರೆ.
ಒಂದೊಮ್ಮೆ ಗರ್ಭಿಣಿ ತಿಂಗಳು ತುಂಬಿ ಪ್ರಸವದ ನಂತರ ತಡೆಯಲಾರದ ರಕ್ತಸ್ರಾವವಾಗಿ ವೈದ್ಯರು ರಕ್ತ ಬೇಕಾಗುತ್ತದೆ ಎನ್ನುತ್ತಾರೆ. ಇನ್ನೊಂದು ಕಡೆ ಒಬ್ಬ ವ್ಯಕ್ತಿ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ರಕ್ತದಲ್ಲಿ ಪ್ಲೇಟಲೆಟ್ಸ್ ಕಡಿಮೆಯಾಗಿ ರಕ್ತ ಹಾಕದೇ ಉಳಿಗಾಲವಿಲ್ಲವೆಂಬ ಸ್ಥಿತಿಗೆ ತಲುಪುತ್ತಾನೆ. ಅಲ್ಲೊಬ್ಬ ತಲಸೀಮಿಯ, ಇಲ್ಲೊಬ್ಬ ಹೀಮೋಫೀಲಿಯ ರೋಗಗಳಿಂದ ಪೀಡಿತರಾಗಿರುತ್ತಾರೆ. ಈ ಎಲ್ಲಾ ಸನ್ನಿವೇಶಗಳನ್ನೂ ದಿನನಿತ್ಯ ಎಲ್ಲಾದರೊಂದು ಕಡೆ ಕಂಡಿರುತ್ತೇವೆ ಇಲ್ಲವೆ ಕೇಳಿರುತ್ತೇವೆ. ಈ ಎಲ್ಲಕ್ಕೂ ಪರಿಹಾರ ರಕ್ತವೇ ಆಗಿರುತ್ತದೆ. ಅಂದರೆ ದೇಹದಲ್ಲಿರುವ ರಕ್ತ ಅಥವಾ ರಕ್ತದ ಯಾವುದೇ ಒಂದು ಅಂಶ ಕಡಿಮೆಯಾದರೂ ರಕ್ತ ಹಾಕಬೇಕಾದ ಪರಿಸ್ಥಿತಿ ತಲುಪುತ್ತದೆ.
ಒಬ್ಬ ವ್ಯಕ್ತಿಗೆ ರಕ್ತ ಹಾಕಬೇಕಾದರೆ ಅದು ಇನ್ನೊಬ್ಬ ವ್ಯಕ್ತಿ ದಾನ ಮಾಡಿದರೇನೆ ಸಾಧ್ಯವಾಗುತ್ತದೆಯೇ ಹೊರತು ಬೇರೆಲ್ಲಿಂದಲೂ ಅಲ್ಲ. ರಕ್ತದಾನವೆಂದರೆ ಜೀವದಾನ. ಒಬ್ಬ ವ್ಯಕ್ತಿಯ ಒಂದು ಬಾಟಲಿ ರಕ್ತದಿಂದ ಮೂರು ಜೀವಗಳನ್ನು ಉಳಿಸಬಹುದು. ಒಬ್ಬ ವ್ಯಕ್ತಿಯ ಕೇವಲ ಐದು ನಿಮಿಷದ ಸಮಯ ಇನ್ನೊಬ್ಬರ ಜೀವಿತಾವಧಿಯೂ ಆಗಬಲ್ಲದು. ಹಾಗಿದ್ದರೆ ರಕ್ತದಾನದ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.
ರಕ್ತವನ್ನು ಯಾರು ದಾನ ಮಾಡಬಹುದು?:
ಆರೋಗ್ಯವಂತ ವ್ಕಕ್ತಿ ಯಾರಾದರೂ ರಕ್ತವನ್ನು ದಾನ ಮಾಡಬಹುದು. ಆದರೂ ರಕ್ತದಾನದ ನಂತರ ದಾನಿಯ ಆರೋಗ್ಯವೂ ಮುಖ್ಯವಾಗುವ ಕಾರಣ ಕೆಲವು ನಿಬಂಧನೆಗಳನ್ನು ಹಾಕಲಾಗುತ್ತದೆ. ವಯೋಮಿತಿ 18 ರಿಂದ 60 ವರ್ಷಗಳೊಳಗೆ ಮತ್ತು ದೇಹದ ತೂಕ 50 ಕೆ.ಜಿ.ಗಿಂತ ಜಾಸ್ತಿಯಿರಬೇಕಾಗುತ್ತದೆ.
ರಕ್ತದಾನವನ್ನು ಯಾರು ಮಾಡಲಾಗುವುದಿಲ್ಲ?
- ರಕ್ತದಲ್ಲಿ ಹೀಮೊಗ್ಲೊಬಿನ್ ಅಂಶ ಕಡಿಮೆಯಿರುವವರು
- ಕಳೆದೊಂದು ವರ್ಷದಲ್ಲಿ ಯಾವುದೇ ಸಾಂಕ್ರಾಮಿಕ ರೋಗಗಳಿಂದ ಪೀಡಿತರಾಗಿದ್ದರೆ.
ಕಳೆದೊಂದು ವರ್ಷದಲ್ಲಿ ಯಾವುದೇ ಶಸ್ತ್ರಚಿಕಿತ್ಸೆಗಳಪಟ್ಟಿದ್ದರೆ ಸ್ವತಃ ರಕ್ತ ಹಾಕಿಸಿಕೊಂಡಿದ್ದರೆ. - ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿರುವವರು.
- ದೇಹದ ಒಳಗಿನ ಯಾವುದೇ ಅಂಗಾಂಗವು, ರೋಗಪೀಡಿತವಾಗಿದ್ದರೆ.
- ಕಳೆದ 6 ತಿಂಗಳಲ್ಲಿ ಹಚ್ಚೆ ಹಾಕಿಸಿಕೊಂಡಿದ್ದರೆ, ಕಿವಿ ಚುಚ್ಚಿಸಿಕೊಂಡಿದ್ದರೆ, ಅಥವಾ ಹಲ್ಲು ಕೀಳಿಸಿಕೊಂಡಿದ್ದರೆ.
- ಕಳೆದ ಮೂರು ದಿನಗಳಲ್ಲಿ ಯಾವುದೇ ಮಾತ್ರೆ, ಔಷಧಿ/ಇಂಜೆಕ್ಷನ್‍ಗಳನ್ನು ತೆಗೆದುಕೊಂಡಿದ್ದರೆ.
ರಕ್ತದಾನದ ಮೊದಲು ಅನುಸರಿಸಬೇಕಾದ ಅಂಶಗಳು
- ರಕ್ತದಾನದ ಮೂರು ದಿನಗಳ ಅವಧಿಯಲ್ಲಿ ಮಧ್ಯಪಾನ ಹಾಗೂ 10 ರಿಂದ 12 ತಾಸಿನ ಅವಧಿಯಲ್ಲಿ ಧೂಮಪಾನವನ್ನು ಮಾಡಿರಬಾರದು.
- ರಕ್ತದಾನದ ಹಿಂದಿನ ದಿನ ಸಾಕಷ್ಟು ನೀರು ಹಾಗೂ ಹೆಚ್ಚಿನ ದ್ರವ ಪದಾರ್ಥಗಳನ್ನು ಸೇವಿಸಿದ್ದರೆ ಒಳಿತು
- ರಕ್ತದಾನದ ಹಿಂದಿನ ರಾತ್ರಿ ಸಂಪೂರ್ಣ ನಿದ್ರೆ ಮಾಡಿರಬೇಕು.
- ಉಪಾಹಾರ ಹಾಗೂ ರಕ್ತದಾನ ಮಾಡುವ ನಡುವೆ 3 ತಾಸುಗಳಿಗಿಂತ ಜಾಸ್ತಿ ಸಮಯ ಕಳೆದಿರಬಾರದು, ಹಾಗೇನಾದರೂ ಇದ್ದಲ್ಲಿ ಇನ್ನೊಮ್ಮೆ ಉಪಾಹಾರ ಸೇವಿಸುವುದು ಸೂಕ್ತ
ರಕ್ತದಾನದ ನಂತರ ಅನುಸರಿಸಬೇಕಾದ ಅಂಶಗಳು
- ಮುಂದಿನ 2-3 ತಾಸುಗಳವರೆಗೆ ವಾಹನ ಚಲಾಯಿಸುವಂತಿಲ್ಲ, ಮತ್ತು ಅಂದಿನ ಯಾವುದೇ ಪ್ರಯಾಣಗಳನ್ನು ಮುಂದೂಡುವುದು ಸೂಕ್ತ.
- ನಂತರ ದಾನಿಗಳು ಮುಂದಿನ 2 ದಿನಗಳ ನಂತರ ಸಾಕಷ್ಟು ನೀರು ಮತ್ತು ಇತರೆ ದ್ರವ ಆಹಾರಗಳನ್ನು ಸೇವಿಸಬೇಕಾಗುತ್ತದೆ.
- ಮುಂದಿನ 3 ತಿಂಗಳವರೆಗೆ(ಪುರುಷರು) ಮತ್ತು 4 ತಿಂಗಳವರೆಗೆ(ಮಹಿಳೆಯರು) ಮತ್ತೆ ರಕ್ತದಾನ ಮಾಡುವಂತಿಲ್ಲ.
ರಕ್ತದಾನದ ನಂತರ ಸಂಭವಿಸಬಹುದಾದ ತೊಂದರೆಗಳು
- ರೋಗಿಯ ಆರೋಗ್ಯದಷ್ಟೇ ದಾನಿಯ ಆರೋಗ್ಯವು ಮುಖ್ಯವಾಗುತ್ತದೆ. ಆದ್ದರಿಂದ ರಕ್ತದಾನ ಮಾಡುವ ಸ್ಥಳಗಳಲ್ಲಿಯೇ ದಾನಿಗಳನ್ನು ಪರೀಕ್ಷಿಸಿ ಸಂಭವಿಸಬಹುದಾದ ತೊಂದರೆಗಳಿದ್ದಲ್ಲಿ ಅವರನ್ನು ಅನರ್ಹರೆಂದು ಪರಿಗಣ ಸಿ ತಿರಸ್ಕರಿಸಲಾಗುತ್ತದೆ ಮತ್ತು ಅರ್ಹರಾದವರನ್ನು ಆ ಅವಧಿಯ ಪೂರ್ತಿಯೂ ಪರಿವೀಕ್ಷಣೆಯಲ್ಲಿರಿಸಲಾಗುತ್ತದೆ.
- ಸುಸ್ತಾಗುವುದು, ನಿಶ್ಯಕ್ತಿಯೆನಿಸುಬಹುದು
ರಕ್ತ ತೆಗೆದುಕೊಂಡ ಜಾಗದಲ್ಲಿ ರಕ್ತಸ್ರಾವವಾಗಬಹುದು - ತುಂಬಾ ವಿರಳವಾಗಿ ಕೈ ಕಾಲುಗಳು ಸೆಳೆತಕ್ಕೊಳಗಾಗಬಹುದು.
- ಈ ಎಲ್ಲಾ ತೊಂದರೆಗಳನ್ನು ಗಮನಿಸಲೆಂದೇ ರಕ್ತದಾನದ ನಂತರ 10-15 ನಿಮಿಷಗಳ ಕಾಲ ದಾನಿಯನ್ನು ಅಲ್ಲೇ ಇರಿಸಿಕೊಳ್ಳಲಾಗುತ್ತದೆ. ಹಾಗೇನಾದರೂ ಸಂಭವಿಸಿದಲ್ಲಿ ತಕ್ಷಣದಲ್ಲಿ ಅವರಿಗೆ ಅಲ್ಲೇ ಉಪಚರಿಸಿ ಅಲ್ಲಿರುವ ವೈದ್ಯಾಧಿಕಾರಿಗಳ ಸಲಹೆಯಂತೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ.
ರಕ್ತದಾನದಿಂದಾಗುವ ಲಾಭಗಳೇನು?
ದೇಹದ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗುತ್ತದೆ
ದೇಹದಲ್ಲಿ ಹೊಸ ರಕ್ತಕಣಗಳ ಉತ್ಪತ್ತಿ ಹೆಚ್ಚಾಗುತ್ತದೆ
ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಅಂಶಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತದೆ
ಬೊಜ್ಜು ಕರಗಿಸುವಲ್ಲಿ ಸಹಕಾರಿಯಾಗುತ್ತದೆ
ವಿವಿಧ ಕಾನ್ಸರ್‍ಗಳ ಸಂಭವವನ್ನು ಕಡಿಮೆ ಮಾಡುತ್ತದೆ.
ಈ ಎಲ್ಲದಕ್ಕೂ ಹೆಚ್ಚಾಗಿ ಬೇರೊಬ್ಬರ ಜೀವ ಉಳಿಸುವಲ್ಲಿ ಸಹಕಾರಿಯಾಗುತ್ತದೆ. ಒಬ್ಬರಲ್ಲಿ ಹರಿಯುವ ರಕ್ತ ಇನ್ನೊಬ್ಬರ ಜೀವನಾಡಿಗಳಲ್ಲಿ ಸಂಚರಿಸಿ ಅವರ ಜೀವವನ್ನೂ ಕಾಪಾಡುತ್ತದೆ. ಇದಕ್ಕಿಂತ ಇನ್ಯಾವ ಸಾರ್ಥಕತೆ ಬೇಕು ಹೇಳಿ.

ದಿನದ ಸುದ್ದಿ
ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್
ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.
ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.
ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.
ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ದಾವಣಗೆರೆಯ ಪಾಪು ಗುರು ಆಯ್ಕೆ
ಸುದ್ದಿದಿನ,ದಾವಣಗೆರೆ: ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಹಾಗೂ ಗವಿಸಿದ್ಧ ಎನ್. ಬಳ್ಳಾರಿ ಸಾಂಸ್ಕೃತಿಕ, ಕಲಾ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕೊಪ್ಪಳ ವತಿಯಿಂದ ನೀಡಲಾಗುವ **”ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – 2026″**ಕ್ಕೆ ದಾವಣಗೆರೆಯ ಕವಿ ಹಾಗೂ ಪತ್ರಕರ್ತ ಪಾಪು ಗುರು ಅವರ “ಈ ಹೊತ್ತಿಗೆ ಇಷ್ಟು ಸಾಕು” ಕವನ ಹಸ್ತ ಪ್ರತಿ ಆಯ್ಕೆಯಾಗಿದೆ.
ಪ್ರಶಸ್ತಿಗೆ ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 53 ಕವನ ಹಸ್ತಪ್ರತಿಗಳು ಬಂದಿದ್ದು, ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಪಾಪು ಗುರು ಅವರ ಕೃತಿ ಪ್ರಶಸ್ತಿಗೆ ಪಾತ್ರವಾಗಿದೆ.
ಪ್ರಶಸ್ತಿಯು ₹5,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನವೆಂಬರ್ ತಿಂಗಳಲ್ಲಿ ಕೊಪ್ಪಳದಲ್ಲಿ ನಡೆಯಲಿರುವ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಸಾಹಿತ್ಯೋತ್ಸವದ ಸಂಚಾಲಕ ಮಹೇಶ್ ಬಳ್ಳಾರಿ ತಿಳಿಸಿದ್ದಾರೆ.
ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪಾಪು ಗುರು ಅವರ ‘ಮುಳ್ಳೆಲೆಯ ಮದ್ದು’, ‘ಮಣ್ಣೇ ಮೊದಲು’ ಕವನ ಸಂಕಲನಗಳು ಹಾಗೂ ‘ಸೂಜಿ’ ಕಾದಂಬರಿ ಪ್ರಕಟವಾಗಿವೆ. ಅಲ್ಲದೆ ‘ಕೆಂಪು ಕಾಂಡದ ಹೂ’ ಮತ್ತು ‘ಹಸಿರು ಹಾದಿಯ ಹೆಜ್ಜೆಗಳು’ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಅವರ ಸೂಳೆಕೆರೆಯ ಇತಿಹಾಸದ ಹಿನ್ನೆಲೆ ಇರುವ ‘ಶಾಂತದೇವಿ’ ಕಾದಂಬರಿ ಮುದ್ರಣ ಹಂತದಲ್ಲಿದೆ.
ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಪಾಪು ಗುರು ಅವರಿಗೆ ದೊರೆತಿರುವ ಈ ಪ್ರಶಸ್ತಿ ಸಾಹಿತ್ಯ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಇವರಿಗೆ ಜಿಲ್ಲೆಯ ಅಭಿಮಾನಿಗಳು, ಪತ್ರಕರ್ತರು ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಹಾಗೂ ಹೆಚ್ ಬಿ. ಇಂದ್ರಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


