ಭಾವ ಭೈರಾಗಿ
ಪತ್ನಿಗೆ ಮೆಚ್ಚುಗೆಯ ಮಾತು ಹೇಳೋ ದಿನ
(ಸೆಪ್ಟಂಬರ್ 15 ವಿಶ್ವ ಹೆಂಡತಿಯರ ಹೊಗಳುವ ದಿನ ; ಅದರ ಪ್ರಯುಕ್ತ ಈ ಲೇಖನ)
ನನ್ನ ಹೃದಯದ ಪಟ್ಟದರಸಿಗೆ,
ನನಗಿನ್ನೂ ನೆನಪಿದೆ ನಿನ್ನನ್ನು ನೋಡಲು ಮೊದಲ ಬಾರಿ ನಿಮ್ಮ ಮನೆಗೆ ಬಂದಾಗ ನಿನ್ನ ಮುಖದಲ್ಲಿ ನಗುವೇ ಇರಲಿಲ್ಲ. ಏನೋ ಕಾಟಾಚಾರಕ್ಕೆ ನಾಲ್ಕೈದು ಟೀ ತುಂಬಿದ ಟ್ರೇಯನ್ನು ಹಿಡಿದು ನೀ ಬಂದೆ. ಸಾಮಾನ್ಯವಾಗಿ ಹೆಣ್ಣು ತಲೆ ತಗ್ಗಿಸಿ ಬರುವುದು ರೂಢಿ. ಆದರೆ ನೀನು ಸದೃಢವಾಗಿಯೇ ಬಂದು ನೀಡಿದೆ. ಸಂಪ್ರದಾಯದಂತೆ ನಾನು ನಿನ್ನ ಒಮ್ಮೆ ನೋಡಿದೆ, ನೀನೂ ನನ್ನ ನೋಡಿದೆ. ನನಗೇನೋ ನೀನು ಇಷ್ಟವಾಗಿ ಹೋಗಿದ್ದೆ. ಆದರೆ ನಿನ್ನ ನೋಟದ ಮಜಲಿನಲ್ಲೇ ತಿಳಿದು ಹೋಗಿತ್ತು, ನನ್ನ ಬಗ್ಗೆ ನಿರೀಕ್ಷೆಯ ಭಾವ ಇರಲಿಲ್ಲವೆಂದು. ಆದರೆ ಆದದ್ದೇ ಬೇರೆ. ನಿನ್ನ ಕಡೆಯಿಂದ ಒಪ್ಪಿಗೆ ಸಿಕ್ಕಿಬಿಟ್ಟಿತ್ತು. ನಮ್ಮ ಮದುವೆ ಆಗುವಾಗ ಕೋಟಿ ದೇವರಲ್ಲಿ ಪ್ರಾರ್ಥಿಸಿದ್ದೆ ನಮ್ಮಿಬ್ಬರ ಜೀವನ ಸುಖಮಯವಾಗಿರಲೆಂದು. ದೇವರು ನಮ್ಮಾಣತಿಯಂತೆ ಆಶೀರ್ವದಿಸಿದ್ದಾರೆ.
ಈ ಏಳು ವರ್ಷಗಳ ದಾಂಪತ್ಯದಲ್ಲಿ ನನ್ನ ಇಷ್ಟಕಷ್ಟಗಳಿಗಿಂತ ನಿನ್ನ ಅಭಿಲಾಷೆಯಂತೆಯೇ ನಾನು ಬುದುಕಿದ್ದು ಹೆಚ್ಚು. ಬುದ್ದಿವಂತರು ಹೇಳುತ್ತಾರೆ, ಹೆತ್ತವಳು ಮೊದಲ ತಾಯಿಯಾದರೆ, ಮದುವೆಯಾದವಳು ಎರಡನೆ ತಾಯಿಯಂತೆ. ಹೌದು ಮಗುವಾಗಿದ್ದಾಗಿನಿಂದ ನನ್ನ ಇಷ್ಟಕಷ್ಟ, ಸಿಹಿಕಹಿ, ನೋವು ನಲಿವು ಎಲ್ಲವನ್ನು ಹೆತ್ತವಳೇ ನೋಡಿಕೊಂಡಿದ್ದಳು. ಮದುವೆಯಾದ ಮೇಲೆ ಆ ಸ್ಥಾನವನ್ನು ತುಂಬಿ ಅಷ್ಟೇ ಭಾವನಾತ್ಮಕ ರಕ್ಷಣೆ ಮತ್ತು ಆರೈಕೆಯನ್ನು ಮಡದಿಯಾದ ನಿನ್ನಿಂದ ಕಾಣುತ್ತಿರುವೆ. ಯಾವ ಬಟ್ಟೆ ತೊಡಬೇಕು, ಯಾವ ಊಟ ಮಾಡಬೇಕು ಎಲ್ಲವನ್ನು ನೀನೇ ನಿರ್ಧರಿಸುವೆ. ಹಾಗೆಂದ ಮಾತ್ರಕ್ಕೆ ನನಗೆ ಸ್ವಂತ ಬುದ್ಧಿ ಇಲ್ಲವೆಂದಲ್ಲ. ಬದಲಾಗಿ ನಿನಗೆ ನನ್ನ ಮೇಲಿರುವ ಅಗಾಧವಾದ ಪ್ರೀತಿಯನ್ನ ತೋರಿಸುತ್ತದೆ. ಹೆಂಡತಿಯ ಆಸೆಯಂತೆ ನಡೆಯುವ ಭಾಗ್ಯ ಎಷ್ಟು ಜನರಿಗೆ ಸಿಗುತ್ತದೆ.
ಹೆಂಡತಿಯಾದ ಮಾತ್ರಕ್ಕೆ ಸಂಬಂಧಗಳ ಬಿಡಿಸುವವಳು ಎಂಬ ಅಪವಾದದ ಹಣೆಪಟ್ಟಿ ಕೇಳಿರುವೆ. ಆದರೆ ನಿನ್ನ ವಿಷಯದಲ್ಲಿ ಅದು ನಿರರ್ಥಕ. ನಾನು, ನನ್ನದು, ನನ್ನಿಂದ ಎನ್ನುವಂತಿದ್ದವನು ನೀನು ಜೊತೆಯಾದಾಗಿಂದ ಅದು ನಾವು, ನಮ್ಮದು ಮತ್ತು ನಮ್ಮಿಂದ ಆಗಿದೆ. ಹೆಂಡತಿಯಾದವಳು ಗಂಡನ ಯಶಸ್ಸಿನ ಬಗ್ಗೆ ಸದಾ ಯೋಚಿಸುತ್ತಾಳೆ. ಅಂತೆಯೇ ನೀನೂ ಕೂಡ ಇದಕ್ಕೆ ಹೊರತಾಗಿಲ್ಲ. ನನ್ನ ಪ್ರತಿ ಹೆಜ್ಜೆಗೆ ಪ್ರತಿಹೆಜ್ಜೆಯಾಗಿ ಮುನ್ನಡೆಸುತ್ತಿರುವೆ. ನೀನು ನನ್ನ ಜೊತೆಗಿದ್ದರೆ ಸಾಕು ಸಾವಿರ ತಡೆಗಳನ್ಬು ಹಿಮ್ಮಟ್ಟಿ ಬರುವೆನೆಂಬ ಧೈರ್ಯ ನನಗೆ. ನಿನ್ನ ಕೈಯ್ಯಾರೆ ಮಾಡುವ ಟೀ ಯನ್ನು ಎಷ್ಟು ಬಾರಿ ಸವಿದರೂ ಸಾಕೆನಿಸುವುದಿಲ್ಲ. ಆ ಸ್ವಾದ, ಆ ಪರಿಮಳ, ಅದರಲ್ಲಿನ ಸಿಹಿ ಪ್ರತಿ ಗುಟುಕಿನಲ್ಲೂ ನಿನ್ನೆಸರ ಹೇಳುವಂತೆ ಮಾಡುತ್ತದೆ. ಅದನ್ನರಿತೇ ಅಲ್ಲವೇ ನಿನಗಾಗಿಯೇ ಒಂದು ಹನಿಗವನವನ್ನು ಬರೆದದ್ದು.
ಮಡದಿ,
ನಿನ್ನ ಮನಸ್ಸಿನಲ್ಲಿ ಸಿಹಿ ಜಾಸ್ತಿ
ನೀ ಕೊಡುವ ಟೀಯಲ್ಲೂ ಸಿಹಿ ಜಾಸ್ತಿ
ನಿನ್ಮ ಮನಸ್ಸು ಸಿಹಿಯಾಗಿದ್ದರೆ
ನನ್ನ ಬಾಳು ಅರಳುತ್ತದೆ
ನೀ ಕೊಡುವ ಟೀ ಸಿಹಿಯಾಗಿದ್ದರೆ
ನನ್ನ ಆರೋಗ್ಯ ಮುದುಡುತ್ತದೆ
ನನ್ನಿಚ್ಛೆಯನ್ನರಿತು ನಾ ಹೇಳುವ ಮೊದಲೇ ನನ್ನಿಷ್ಟದ ಪುಳಿಯೊಗರೆ ಮಾಡಿದಾಗಲಂತೂ ನಿನ್ನ ಹೊಗಳಲು ಪದಗಳೇ ಸಾಕಾಗುವುದಿಲ್ಲ. ಊಟದ ವಿಷಯದಲ್ಲಿ ಒಮ್ಮೆಯೂ ಅತೃಪ್ತವೆನಿಸಿದ ಭಾವ ಒಮ್ಮೆಯೂ ನನ್ನ ಮನಸ್ಸಲ್ಲಿ ಮೂಡಲೇ ಇಲ್ಲ. ನಳಪಾಕ, ಭೀಮಪಾಕ ಎನ್ನುವುದು ಎಷ್ಟು ಸತ್ಯವೋ, ಯಶೋಧ ಪಾಕವೆಂದು ಮತ್ತೊಂದು ನಾಮಧೇಯ ಸೇರಿಸಿದರೆ ತಪ್ಪಿಲ್ಲವೆನಿಸುತ್ತದೆ.ನಿನ್ನ ಕೈರುಚಿಯ ಸವಿದು ಸವಿದು ಹೋಟೆಲ್ಲಿನ ರುಚಿಯೇ ಮರೆತು ಹೋಗಿದೆ.
‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ, ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ’. ಈ ಹಾಡು ನಮಗೆ ಎಷ್ಟು ಹತ್ತಿರವಾಗಿದೆಯಲ್ಲವೇ…?. ಹೆಂಡತಿಯನ್ನು ಹೆಚ್ಚಾಗಿ ಪ್ರೀತಿಸುವವರೇ ನಮ್ಮಂಥವರಿಗಾಗಿಯೇ ಬರೆದಂತಿದೆ ಈ ಸಾಲುಗಳು. ಕವಲೊಡೆದ ದಾರಿಯಂತಿದ್ದ ನನ್ನ ಬದುಕನ್ನು ಎಳೆದು ಒಂದು ಮುಖ್ಯ ದಾರಿಗೆ ತಂದು ನಿಲ್ಲಿಸಿ ನನ್ನ ಬಾಳಿಗೆ ಹೊಸ ಭಾಷ್ಯವನ್ನು ಬರೆದವಳು ನೀನು. ಒಡಹುಟ್ಟಿದವರನ್ನು ಬಿಟ್ಟು ಅಪರಿಚಿತನಾದ ನನ್ನನ್ನು ಅದ್ಹೇಗೆ ನಂಬಿ ಬಂದುಬಿಟ್ಟೆ. ನಿನ್ನ ಛಲ ಮತ್ತು ನಂಬಿಕೆಯೇ ನಾನು ನಿನಗೆ ಸೋಲುವಂತೆ ಮಾಡಿರುವುದು. ಇಂದು ಸಮಾಜದಲ್ಲಿ ನನ್ನನ್ನು ಒಬ್ಬ ಸುಸಂಸ್ಕೃತ ವ್ಯಕ್ತಿಯನ್ನಾಗಿ ಮಾಡಿದವಳು ನೀನು.ನನ್ನ ಗೌರವವನ್ನು ಎತ್ತರಕ್ಕೆ ಏರಿಸಿ ಬೇರೆಯವರ ಸಮದಲ್ಲಿ ಎದೆಯುಬ್ಬಿಸಿ ನಿಲ್ಲುವಂತೆ ಮಾಡುದವಳು ನೀನು.
ಕಾರ್ಯೇಶು ದಾಸಿ
ಕರುಣೇಶು ಮಂತ್ರಿ
ಭೂಜ್ಯೇಶು ಮಾತಾ
ಸಮಯಾ ಧರಿತ್ರಿ
ಶಹನೇಶು ರಂಭಾ..
ಈ ಮೇಲಿನ ಸಾಲುಗಳೇ ಹೇಳುತ್ತವೆ ಹೆಂಡತಿಯಾದವಳು ಮದುವೆಯಾದ ಮನೆಗೆ ಮಗಳಾಗಿ, ಸೊಸೆಯಾಗಿ, ಅತ್ತಿಗೆಯಾಗಿ, ನಾದಿನಿಯಾಗಿ, ಮೊಮ್ಮಗಳಾಗಿ ಎಲ್ಲಕ್ಕೂ ಮಿಗಿಲು ತಮ್ಮ ಕರುಳ ಬಳ್ಳಿಗಳಿಗೆ ತಾಯಿಯಾಗಿ ಸೇವೆಗೈತುತ್ತಾಳೆ. ಅದಕ್ಕಾಗಿಯಲ್ಲವೇ ನನಗೆ ನಿನ್ನ ಮೇಲಿರುವ ಪ್ರೇಮದ ಉತ್ಕಟೆಯನ್ನು ಹೀಗೆ ಕವನ ರೂಪದಲ್ಲಿ ಬರೆದದ್ದು…….
ಮಡದಿ
ನಿನ್ನೊಂದಿಗಿನ ಜೀವನ
ಬೇಸರ ತಂದಿಲ್ಲಾ ಎಂದೂ
ಮೆಚ್ಚುಗೆಯಾಗಿದೆ ನನಗೆ
ನೀ ನನ್ನ ಮೆಚ್ಚಿದೆ ಎಂದು
ಬೇಡುವೆನು ಸೇರಿಸಿದ ದೇವರ
ದೂರ ಮಾಡದಿರು ಎಂದು
ನಿನ್ನ ಋಣದ ಭಾರ ಹೆಚ್ಚಾಗಿದೆ
ಈ ಜನ್ಮಕ್ಕೆ ಇದು ಸಾಕೆನಿಸಿದೆ
ಯಾತನೆ ಎಷ್ಟಿದ್ದರೂ ಸರಿಯೇ
ಕರಗುವೆನು ನಿನ್ನ ನಗುವಿಗೊಮ್ಮೆ
ದುಃಖ ಅನುಭವಿಸಲು ಭಯವಿಲ್ಲ
ನೀ ಜೊತೆಯಿರಲು ಮರೆವುದೆಲ್ಲ
ನೀ ಕೇಳುವ ಮುಗ್ಧತೆಯ ಪ್ರಶ್ನೆಗೆ
ಉತ್ತರ ನೀಡಲು ಉತ್ಸುಕ ನನಗೆ
ಹೀಗೆ ಇರಬೇಕು ಎಂದವನಲ್ಲ
ಹೀಗೂ ಇರಬಹುದು ಎಂದೆಯಲ್ಲ
ನಿನ್ನ ಪಡೆದದ್ದು ಒಂದು ಸಾಹಸ
ನೀ ನನ್ನ ಬದಲಿಸಿದ್ದು ಇತಿಹಾಸ
ನಮ್ಮಿಬ್ಬರಲ್ಲಿ ವೈಮನಸ್ಸು ಒಮ್ಮೆಯೂ ಬಂದಿಲ್ಲವೆಂದಲ್ಲ. ಸಂಸಾರವೆಂದ ಮೇಲೆ ಸರಸ-ವಿರಸ, ಕೋಪ-ನಗು, ಹುಸಿನಗು-ಹುಸಿಮೌನ ಎಲ್ಲಾ ನವರಸಗಳು ಇರಲೇಬೇಕು. ನಮ್ಮಲ್ಲೂ ಇರದೆ ಇರಲಾರದು. ಆದರೆ ನಾವೆಂದೂ ಅತಿರೇಕಕ್ಕೆ ಹೋದವರಲ್ಲ. ಸೋಲುವುದಿದ್ದರೆ ಸೋತು ನಿನ್ನ ಮನಸ್ಸನ್ಬು ಸಂತೊಇಷಗೊಳಿಸುವಯದೇ ನನ್ನ ಕಾಯಕವಾಗಿದೆ. ನಾನು ಹೆಚ್ಚು ನೀನು ಕಡಿಮೆ ಎಂದು ಎಂದೂ ಬೀಗಿದವರಲ್ಲ. ಗಂಡು ಹೆಣ್ಣು ಸಮಾನವೆಂದೇ ಬದುಕುತ್ತಿರುವವರು. ನೀರು ಮತ್ತು ಹಾಲಿನ ಮಿಶ್ರಣದಲ್ಲಿ ಹಂಸ ಹೇಗೆ ಹಾಲನ್ನೇ ಬೇರ್ಪಡಿಸಿ ಕುಡಿಯುತ್ತದೆಯೋ ಹಾಗೆ ನಮ್ಮಲ್ಲಿ ಎಷ್ಟೇ ಮನಸ್ತಾಪಗಳಿದ್ದರೂ ಹಂಸದ ನ್ಯಾಯದಂತೆ ಒಳ್ಳೆಯದನ್ನೇ ಆಯ್ದುಕೊಂಡು ಸಂತೋಷದಿಂದಿರುತ್ತೇವೆ. ನೆನಪಿರಬಹುದು ಸಂಪೂರ್ಣ ಅರ್ಥ ಮಾಡಿಕೊಂಡ ಮೇಲೆ ನಿನ್ನ ಬಗ್ಗೆ ಒಂದು ಕವನವನ್ನು ಬರೆದಿದ್ದೆ. ಅದರಲ್ಲಿ ನಿನ್ನ ಕೋಪ, ತಾಪ, ಕರುಣೆ,ನುಡಿ ನಡೆ ಎಲ್ಲದರ ಬಗ್ಗೆಯೂ ಇತ್ತು. ಈ ಕೆಳಗಿನಂತೆ..
ಎಲ್ಲರಂತಲ್ಲ ನನ್ನ ಹೆಂಡತಿ
ನನ್ನ ಬಾಳ ಮುದ್ದು ಸಂಗಾತಿ
ಇನ್ನೂ ಅರ್ಥವಾಗದವಳು
ಮಾತಲ್ಲೆ ಚಾಟಿ ಬೀಸುವವಳು
ತಾಯಿಯ ವಾತ್ಸಲ್ಯದವಳು
ಅದಕ್ಕೆ ಅವಳೆಂದರೆ ಬಲು ಪ್ರೀತಿ ನನಗೆ
ಎಲ್ಲರಂತಲ್ಲ ನನ್ನ ಹೆಂಡತಿ
ನನ್ನ ಜೀವನದ ಗೆಳತಿ
ಮೋಡವಿದ್ದರೂ ಮಳೆಯಾಗದವಳು
ನೇರ ನಡೆಯವಳು
ಕಷ್ಟಕ್ಕೆ ಕರಗುವವಳು
ಅದಕ್ಕೆ ಅವಳೆಂದರೆ ಬಲು ಪ್ರೀತಿ ನನಗೆ
ಎಲ್ಲರಂತಲ್ಲ ನನ್ನ ಹೆಂಡತಿ
ನನ್ನ ಮನದ ಒಡತಿ
ನಿಷ್ಠೂರ ನುಡಿಯವಳು
ಪ್ರೇಮದ ಸಾಗರದವಳು
ಮೋಹದ ಸೆಲೆಯವಳು
ಅದಕ್ಕೆ ಅವಳೆಂದರೆ ಬಲು ಪ್ರೀತಿ ನನಗೆ
ಎಲ್ಲರಂತಲ್ಲ ನನ್ನ ಹೆಂಡತಿ
ನನ್ನ ಪಯಣದ ಜೊತೆಗಾತಿ
ಮೀನಿನ ಚುರುಕಿನವಳು
ನನ್ನ ನೋವಿಗೆ ನಲುಗುವವಳು
ನಲಿವಿಗೆ ಸ್ಪಂದಿಸುವವಳು
ಅದಕ್ಕೆ ಅವಳೆಂದರೆ ಬಲು ಪ್ರೀತಿ ನನಗೆ
ನಮ್ಮಿಬ್ಬರಲ್ಲಿ ಎಲ್ಲವೂ ಇತ್ತು. ಆದರೆ, ಮನುಷ್ಯ ಪರಿಪೂರ್ಣನಾಗಲು ಮುಖ್ಯವಾದ ಅಂಶವೇ ನಮ್ಮ ಬಾಳಿನಲ್ಲಿರಲಿಲ್ಲ. ಇಬ್ಬರು ಮೂವರಾಗಿದ್ದೆವು. ಆ ದೇವರಿಗೆ ಸಹಿಸಲಾಗಲಿಲ್ಲ ಎನಿಸುತ್ತದೆ. ಆ ನಮ್ಮ ಎಳೆಕಂದಮ್ಮನನ್ನು ಬೇಗನೆ ಕರೆದುಕೊಂಡು ಬಿಟ್ಟಿದ್ದ. ಸತತ ಆರು ವರ್ಷಗಳ ಫಲದಿಂದ ಮುದ್ದಾದ ಒಂದು ದೇವತೆಯನ್ನು ನನ್ನ ಮಡಿಲಲ್ಲಿರಿಸಿ ನನ್ನನ್ನು ಅಪ್ಪ ಎಂಬ ಉನ್ನತ ಸ್ಥಾನದಲ್ಲಿ ಕೂರಿಸಿರುವೆ. ಈ ವಿಷಯದಲ್ಲಿ ನಾನು ನಿನಗೆ ಧನ್ಯವಾದಗಳನ್ನು ಹೇಳಲೇಬೇಕು. ಈ ಸಮಯದಲ್ಲಿ ಒಂದು ಪ್ರತಿಜ್ಞೆ ಮಾಡುವೆ. ನನ್ನ ಕೊನೆಯುಸಿರು ಇರುವ ತನಕ ನಿನ್ನನ್ನು ನಮ್ಮ ಮಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತೇನೆಂದು ಹೇಳುತ್ತಾ…ಈ ನನ್ನ ಪ್ರೀತಿ ತುಂಬಿದ ಪದಗುಚ್ಚಗಳನ್ನು ಮುಗಿಸುತ್ತಿದ್ದೇನೆ.
ಇತಿ ನಿನ್ನ ಯಶೋಧರಸ
ಮಹದೇವ್ ಬಿಳುಗಲಿ
9611339024

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
~ಯೋಗೇಶ್ ಮಾಸ್ಟರ್, ಚಿಂತಕರು
ಆಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.
ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!
ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!
ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.
ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.
ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.
ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!
ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


