Connect with us

ಭಾವ ಭೈರಾಗಿ

ಏನೆಂದು ಹೆಸರಿಡಲಿ ಈ ಚಂದ ಅನುಭವಕೆ..!

Published

on

ಹೃದಯದ ರಾಜ,

ಹೌದು ಕಣೋ ನಾನು ನಿನ್ನನ್ನು ಹೀಗಂತಲೇ ಕರೆಯುತ್ತಿದ್ದದ್ದು. ಹಾಗೆ ಕರೆದಾಗಲೆಲ್ಲಾ ನಾನೇ ನಿನ್ನ ರಾಣಿ, ಈ ಜಗವೇ ನಮ್ಮ ರಾಜ್ಯ, ನಾವಿಬ್ಬರೇ ಅರಸನ ಮನೆಯವರು, ನಾವು ಹೇಳಿದಂತೆ ಪ್ರಜೆಗಳೆಲ್ಲಾ ಕೇಳಬೇಕು ಎಂಬೆಲ್ಲಾ ಅತಿಯಾದ ಹುಚ್ಚು ಕಲ್ಪನೆಗಳಲ್ಲಿ ಬೀಗುತ್ತಿದ್ದೆ. ಆದರೆ ನಿನ್ನನ್ನು ಇಷ್ಟ ಪಡುತ್ತಿದ್ದದ್ದು ಮಾತ್ರ ಸುಳ್ಳಲ್ಲ. ವ್ಯವಸ್ಥಿತ ಮನೆಯ ಸುತ್ತಲೂ ಗೋಡೆ, ಒಳಗೆ ಯಾರೂ ಬರಬಾರದೆಂದು ಕಬ್ಬಿಣದ ಗೇಟಿಗೆ ದಪ್ಪನೆಯ ಬೀಗ, ರಾತ್ರಿ ಎಂಟರ ನಂತರ ಯಾರೂ ಹೊರ ಹೋಗುವಂತಿರಲಿಲ್ಲ. ತಡವಾದರೆ ಕರೆ ಮಾಡಿ ತಿಳಿಸಿರಬೇಕು, ಬಸ್ ನಿಲ್ದಾಣಕ್ಕೆ ಬಂದು ಕಾಯುತ್ತಿದ್ದರು. ಇದು ನನ್ನಪ್ಪನ ಆಜ್ಞೆ. ಇದು ಮಕ್ಕಳ ಮೇಲಿನ ಅತಿಯಾದ ಪ್ರೀತಿಯೋ ಅಥವಾ ಮಕ್ಕಳೆಂಬ ಮಮಕಾರವೋ ಗೊತ್ತಿಲ್ಲ.ಹದ್ದಿನ ಕಣ್ಣಿನಂತೆ ನಮ್ಮನ್ನ ನೋಡಿಕೊಳ್ಳುತ್ತಿದ್ದರು.

ಅಂಥ ಮನೆಯಲ್ಲಿನ ತೋಟದ ಮಲ್ಲಿಗೆಯ ಮರದ ಬಳ್ಳಿಯ ಎಲೆ ಮರೆಯಲ್ಲಿ ಇಣುಕುತಿದ್ದವಳು ನಾನು. ಯಾರಿಗೂ ಕಾಣದೆ ಅರಳಿ ನಿಂತ ಮಲ್ಲಿಗೆಯ ಹೂವಿನಂತಿದ್ದೆ. ಅದಾವ ಮಾಯದಲಿ ನೀ ಗಿಡದಿಂದ ಕಿತ್ತುಕೊಂಡೆಯೋ ಗೊತ್ತಿಲ್ಲ. ಶಿವನ ಪೂಜೆಗೆ ಅರ್ಪಿತವಾಗಬೇಕೆಂದಿದ್ದವಳು ನಾನು. ನಿನ್ನ ಪ್ರೀತಿಯ ಅಪ್ಪುಗೆಯಲಿ ಕರಗಿ ಜಾರಿ ಪಾದಕ್ಕೆ ಸೇರಿದಾಗ ನೀನೇ ನನ್ನ ಶಿವನಂತೆ ಕಂಡಿದ್ದೆ. ಆಗಲೇ ನನ್ನ ಜನ್ಮ ಸಾರ್ಥಕ ಎಂದೆನಿಸಿತು. ನಿನ್ನ ಮೇಲಿನ ಪ್ರೀತಿ ದುಪ್ಪಟವಾಯಿತು.

ಒಮ್ಮೊಮ್ಮೆ ನೀ ಫೋನಿನಲ್ಲಿ ಸಿಗದೆ ಬೇಸರವಾದಾಗ ನನ್ನೊಳಗೆ ನಾನೇ “ನಾ ಹೇಗೆ ಇವನಿಗೆ ಸೇರಿದೆ.. ? , ಯಾವ ಮಾಯರೂಪ ಇವನನ್ನು ಇಷ್ಟ ಪಡುವಂತೆ ಮಾಡಿತು..?. ಕಾಲೇಜಾಯಿತು ಮನೆಯಾಯಿತು ಎಂಬ ಅಮ್ಮನ ನುಡಿಯನ್ನ ಚಾಚೂ ತಪ್ಪದೆ ಪಾಲಿಸುತ್ತಿದ್ದವಳು ನಾನು. ಕಾಲೇಜಿನಲ್ಲಿ, ನಮ್ಮೂರಿನಲ್ಲಿ ಅದೆಷ್ಟೋ ಸ್ಪುರದ್ರೂಪಿ ಯುವಕರು ಈ ಮಲ್ಲಿಗೆಯ ಸುವಾಸನೆಯ ನೆತ್ತಿಗೇರಿಸಿಕೊಳ್ಳಲು ಹರಸಾಹಸ ಪಟ್ಟರೂ ದಕ್ಕದವಳು ಅದ್ಹೇಗೆ , ನೀ ಮಾತ್ರ ನನ್ನ ಹೃದಯದ ಅಂತಃಪುರದೊಳಗೆ ಮಯೂರವರ್ಮನಂತೆ ಚಾಣಾಕ್ಷತೆಯಿಂದ ನುಗ್ಗಿಬಿಟ್ಟಿದ್ದೆ…?. ಇನ್ನೂ ಅರ್ಥವಾಗದೇ ಪ್ರಶ್ನೆಯಾಗೇ ಉಳಿದಿದೆ ನನಗೆ. ಅತಿಯಾದ ಅಕ್ಕರೆ, ಮುದ್ದುತನ, ಕೆಟ್ಟ ಕಣ್ಣುಗಳು ಬೀಳಬಾರದೆಂಬ ರಕ್ಷಣೆಯ ಭರವಸೆಯಿಂದಲೋ ಏನೋ ಬುದ್ಧ ರಾಜ್ಯ ತೊರೆದು ಹೋಗಲು ಪ್ರೇರೇಪಿಸಿರಬೇಕು.

ಮನೆಬಿಟ್ಟು ಹೋದ ಅವರೊಬ್ಬ ಜಗತ್ತಿಗೆ ಜ್ಞಾನಿಗಳಾದರು, ಮಾರ್ಗದರ್ಶಕರಾದರು. ಅಂತೆಯೇ ನಮ್ಮ ಮನೆಯ ಕಟ್ಟು ನಿಟ್ಟಿನ ವಾತಾವರಣವೇ ಹೊರ ಬಂದು ನಿನ್ನನ್ನು ಪ್ರೀತಿಸಲು ಪ್ರೇರೇಪಿಸಿರಬೇಕು. ಅಪ್ಪನ ಗದರಿಕೆಗೆ ಹೆದರಿ ಮಾತೇ ಆಡುತ್ತಿರಲಿಲ್ಲ. ಅಮ್ಮನೋ ಅಪ್ಪನ ಮಾತಿಗೆ ಎದುರಾಡದೆ ಹಾಕಿದ ಗೆರೆಯಲ್ಲೇ ನಡೆಯುತ್ತಿದ್ದಳು.ನಮ್ಮ ಇಷ್ಟ ಕಷ್ಟದ ಬಗ್ಗೆ ಒಮ್ಮೆಯೂ ಪ್ರೀತಿಯಿಂದ ಮಾತನಾಡಿರಲಿಲ್ಲ. ಅಕ್ಕ ಪಕ್ಜದವರ ಜೊತೆನೂ ಹೆಚ್ಚು ಬೆರೆಯಲು ಬಿಡುತ್ತಿರಲಿಲ್ಲ. ಅಷ್ಟು ಬಿಗಿಯಾಗಿತ್ತು ನಮ್ಮ ಮನೆ. ಮಧ್ಯಮ ವರ್ಗದ ಸಂಸಾರ ನಮ್ಮದು. ಹಾಗೆಂದು ಎಂದೂ ಉಪವಾಸ ಬೀಳಿಸಿದವರಲ್ಲ ನನ್ನಪ್ಪ. ಹಗಲು ರಾತ್ರಿಗಳೆನ್ನದೆ ದುಡಿದು ಸಲಹುತ್ತಿದ್ದರು.

ಇಂಥ ವೇಳೆ ಓದು ಮುಗಿದ ನನಗೆ ಅಪ್ಪನ ಕಷ್ಟವನ್ನು ಸ್ವಲ್ಪ ನೀಗಿಸಲು ಮುಂದಾದೆ. ಅಪ್ಪ ಅಮ್ಮ ಇಬ್ಬರಿಗೂ ಹೇಗೋ ಒಪ್ಪಿಸಿ ಸ್ನೇಹಿತೆಯೊಂದಿಗೆ ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿಕೊಂಡೆ. ಊರು ಬಿಟ್ಟು ಬಂದದ್ದು ಒಂದು ಕಡೆ ನನಗೆ ಸ್ವಾತಂತ್ರ್ಯ ಸಿಕ್ಕಿತು ಎನಿಸಿದರೆ, ಅಷ್ಟು ವರ್ಷಗಳಿಂದ ಜೊತೆಗಿದ್ದ ಅಪ್ಪ ಅಮ್ಮನನ್ನು ಬಿಟ್ಟು ಇರಬೇಕಲ್ಲ ಎಂದು ಇನ್ನೊಂದೆಡೆ. ಒಳ್ಳೆ ಕೆಲಸವೇನೋ ಸಿಕ್ಕಿತು, ಆರಂಭದಲ್ಲಿ ಕಸಿವಿಸಿ ಎನಿಸಿದರೂ ತದನಂತರ ಹೊಂದಿಕೊಳ್ಳಬೇಕಾಯಿತು.

ಹೀಗ್ಗೆ ಹತ್ತು ವರ್ಷಗಳ ಹಿಂದೆ ನಡೆದ ಘಟನೆಯೊಂದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಹೀರೋ ಹೋಂಡಾ ಫ್ಯಾಶನ್ ಬೈಕ್ ಹೊಸತು, ಕಂಪನಿಯವರು ಆಗ ತಾನೆ ಚಾಲನೆ ಕೊಟ್ಟಿದ್ದ ಹೊಸ ಬ್ರಾಂಡ್, ಜರ್ರ್….ನೆ ಬಂದು ನೀನು ಆಫೀಸಿನ ಎದುರು ನಿಲ್ಲಿಸಿದೆ. ಆ ಶಬ್ಧಕ್ಕೆ ಮೆಟ್ಟಿಲುಗಳ ಹತ್ತುತ್ತಿದ್ದವಳು ಒಮ್ಮೆ ತಿರುಗಿ ನೋಡಿದೆ. ಬೈಕ್ ನಿಂದ ಇಳಿದವನೇ ಹೆಲ್ಮೆಟ್ ತೆಗೆದು ಬಾಜಿಗರ್ ಸಿನಿಮಾದಲ್ಲಿ ಶಾರುಖ್ ಖಾನ್ ಒದರುವಂತೆ ನಿನ್ನ ತಲೆಯನ್ನೊಮ್ಮೆ ಒದರಿದೆ. ನಿನ್ನ ಅನಿಸಿಕೆಗೆ ತಕ್ಕಂತೆ ಆ ನಿನ್ನ ನೀಳಕೂದಲು ಅದರ ಜಾಗವನ್ನು ಸಲೀಸಾಗಿ ಕೂರಿತು. ಸಾಲದೆಂಬಂತೆ ಕೈಯಬೆರಳುಗಳಿಂದ ಹಿಂದಕ್ಕೆ ಸರಿಸಿದಾಗಲಂತೂ ಅದಕ್ಕೆ ಮೆರಗು ಬಂತು. ಎತ್ತರದ ನಿಲುವು, ಸುಂದರ ವದನ, ಸದೃಢ ಮೈಕಟ್ಟು, ಬ್ಲೂ ಜೀನ್ಸ್ ಪ್ಯಾಂಟ್ ಗೆ ಸರಿಹೊಂದುವ ಟೀ ಶರ್ಟ್, ಹುಡುಕಿದರೂ ಎಳ್ಳಷ್ಟೂ ಕೊಂಕಿರದ ದೇಹ ಸೌಂದರ್ಯ, ಸಿನಿಮಾ ಹೀರೋಗಳಿಗೆ ಇರಬೇಕಾದ ಎಲ್ಲಾ ಸ್ವಭಾವ, ಗುಣಲಕ್ಷಣಗಳು ನಿನ್ನಲ್ಲಿದ್ದವು.ನಿನ್ನ ಕಣ್ಣ ಕಾಂತಿಗೆ ಒಮ್ಮೆ ಅವಾಕ್ಕಾದೆ. ಬಹುಶಃ ನಾ ಸೋತಿದ್ದು ನಿನಗೆ ಅಂದೇ ಇರಬೇಕು. ಇಷ್ಟೆಲ್ಲಾ ನಡೆದದ್ದು ಎರಡು ನಿಮಿಷದಲ್ಲಿ ಮಾತ್ರ. ಆ ಎರಡು ನಿಮಿಷ ನನ್ನ ಮನಸ್ಸನ್ನೇ ಪ್ರಫುಲ್ಲಗೊಳಿಸಿತ್ತು. ಬಂದವನೆ ಸರಸರನೆ ಮೆಟ್ಟಿಲುಗಳ ಹತ್ತಿ ನನ್ನನ್ನೇ ಹಿಂದಿಕ್ಕಿ ಹೊರಟು ಬಿಟ್ಟೆ. ಇಲ್ಲೊಬ್ಬಳು ಹುಡುಗಿ ನಿಂತಿದ್ದಾಳೆ, ಅವಳ ಮುಖವನ್ನೊಮ್ಮೆಯಾದರೂ ನೋಡೋಣ ಎನಿಸಲೇ ಇಲ್ಲ ನಿನಗೆ. ಆವಾಗಲೇ ನಿರ್ಧರಿಸಿದೆ ನೀನೇ ನನಗೆ ಸರಿಯಾದ ಜೋಡಿಯೆಂದು.

ಕಂಪನಿ ಸೇರಿ ಮೂರು ತಿಂಗಳಾದರೂ ಒಮ್ಮೆಯೂ ನೋಡದಿದ್ದವನು ಯಾರಿವನು..? ಎಂಬ ಪ್ರಶ್ನೆ ಗುನುಗುತ್ತಲೇ ಎರಡನೇ ಮಹಡಿ ಮೆಟ್ಟಿಲುಗಳ ಹತ್ತಿದ್ದೇ ನೆನಪಿಲ್ಲ. ಸಿನಿಮಾಗಳಲ್ಲಿ ಹೀರೋಗಳನ್ನ ನೋಡಿ ಎಂಜಾಯ್ ಮಾಡುತ್ತಿದ್ದವಳು, ಅಂದು ಮಾತ್ರ ನೀನೇ ನನ್ನ ಹೀರೋ ಎನಿಸಿಬಿಟ್ಟಿತು. ಆ ಸಮಯದಲ್ಲಿ ಪ್ರೇಮಲೋಕ ಸಿನಿಮಾದ ಯಾರಿವನು….? ಈ ಮನ್ಮಥನೂ…ಎಂಬ ಹಾಡು ನನಗರಿವಿಲ್ಲದಂತೆ ನಾಲಿಗೆಯಲ್ಲಿ ನಲಿಯುತ್ತಿತ್ತು.

ನೆನಪಿರಬಹುದು ಅಂದು ಸೋಮವಾರ, ವಾರದ ಮೊದಲ ದಿನ ನಾನು ಅಲ್ಲಿ ರಿಸಪ್ಸನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರಿಂದ ನಮ್ಮ ಬಾಸ್ ಗೆ ಹಿಂದಿನ ವಾರದ ಹಾಜರಾತಿ ಪುಸ್ತಕ, ಕಂಪನಿಯ ಕೆಲಸಗಾರರ ಒಳ ಬರುವ ಮತ್ತು ಹೊರ ಹೋಗುವ ಸಮಯದ ಪುಸ್ತಕವನ್ನು ತೋರಿಸುವುದು ರೂಢಿ. ಅಂತೆಯೇ ಬಹಳ ನಿಷ್ಠೆಯಿಂದ ಮತ್ತು ಗಂಭೀರವಾಗಿ ಎಲ್ಲವನ್ನೂ ಸಿದ್ಧಗೊಳಿಸುತ್ತಿದ್ದೆ. ಗಡುಸು ಧ್ವನಿಯೊಂದು ” ಹಲೋ ಎಕ್ಸ್ ಕ್ಯೂಸ್ ಮಿ ಮೈ ನೇಮ್ ಇಸ್ ಅಶೋಕ್, ಕ್ಯಾನು ಪ್ಲೀಸ್ ಎಂಟರ್ ಮೈ ನೇಮ್ ಇನ್ ಸ್ಟಾಫ್ ರಿಜಿಸ್ಟರ್ , ಐಯಾಮ್ ನ್ಯೂಲಿ ಜಾಯ್ನ್ಡ್ ” ಯಾರಪ್ಪ ಇದು ಬರೀ ಇಂಗ್ಲೀಷೇ ಮಾತನಾಡುತ್ತಾನೆ ಅಂತ ತಲೆ ಎತ್ತಿ ನೋಡಿದೆ. ನನಗೆ ಇದು ಕನಸೋ ಇಲ್ಲ ನನಸೋ ಅನುಸಿಬಿಟ್ಟಿತು.

ಮೊನ್ನೆ ಬಿರುಗಾಳಿಯಂತೆ ಹೋದವನು ಇಂದು ತಂಗಾಳಿಯಂತೆ ಬಂದು ನಿಂತಿದ್ದಾನಲ್ಲ ಅಂತ ತುಂಬಾ ಖುಷಿಯಾಯಿತು.
ಯಾರಿವನು ಎಂದು ತಲೆ ಕೆಡಿಸಿಕೊಂಡಿದ್ದಕ್ಕೆ ಅಂದು ಉತ್ತರ ಸಿಕ್ಕಿತ್ತು. ಎರಡು ಅಡಿಯ ಅಂತರದಲ್ಲಿ ಮುಖಾಮುಖಿಯಲ್ಲಿದ್ದೆವು. ಕಳೆದ ಭೇಟಿಯಲ್ಲಿ ಸ್ಪಷ್ಟವಾಗಿ ನೋಡದಿದ್ದ ಆ ನಿನ್ನ ಚಂದಿರನಂತ ವದನವನ್ನು ಅಂದು ಹಾಗೇ ದಿಟ್ಟಿಸುತ್ತ ನಿಂತುಬಿಟ್ಟಿದ್ದೆ. ಚಿಗುರು ಮೀಸೆ, ಸೊಂಪಾಗಿ ಬೆಳೆದ ಕುರುಚಲು ಗಡ್ಡ ಮತ್ತದೇ ಜೀನ್ಸ್ ಪ್ಯಾಂಟ್, ಅರ್ಧ ತೋಳಿನ ಫಾರ್ಮಲ್ ಚೆಕ್ಸ್ ಶರ್ಟ್ ನಿನ್ನ ಅಂದಕ್ಕೆ ಮೆರಗು ಕೊಟ್ಟಿತ್ತು.

“ಹಲೋ ಏನಾಯಿತು” ಎಂದಾಗಲೇ ನಾನು ನಿಧಾನಿಸಿ ಎಚ್ಚರವಾಗಿ ಸಾರಿ… ಎಸ್ ಪ್ಲೀಸ್ , ಮೈನೇಮ್ ಇಸ್ ಆಶಾ ಎಂದು ನನ್ನ ನಾಮಾಂಕಿತವನ್ನ ಪರಿಚಯ ಮಾಡಿಕೊಂಡೆ. ನಿನ್ನ ಹೆಸರು ಅಶೋಕ್ ಎಂದಾಗಲೇ ನಾನು ಎಚ್ಚೆತ್ತುಕೊಳ್ಳಬೇಕಿತ್ತು ನೀನು ನನಗೆ ಸಿಗುವವನಲ್ಲ ಎಂದು. ಏಕೆಂದರೆ ಹೃದಯ ಗೀತೆ ಸಿನಿಮಾದಲ್ಲಿ ಅಶೋಕ್ ಆಶಾ ಎಂಬ ಎರಡು ಕ್ಯಾರೆಕ್ಟರ್ ಗಳು ಕೊನೆಗೂ ಒಂದಾಗುವುದೇ ಇಲ್ಲ. ಅರುಣ ಎಂಬ ಇನ್ನೊಂದು ಕ್ಯಾರೆಕ್ಟರ್ ಅಶೋಕನಿಗೆ ಜೋಡಿಯಾಗುತ್ತದೆ. ಕಾಕತಾಳೀಯ ನೋಡು ಆ ಸಿನಿಮಾದಂತೆಯೇ ನಮ್ಮ ಜೀವನವು ಆಗಿ ಹೋಯಿತು. ನಾವು ಒಂದಾಗಲು ಸಾಧ್ಯವೇ ಆಗಲಿಲ್ಲ…..ನೀನು ಮಾತನಾಡುವ ಇಂಗ್ಲೀಷ್ ಎಷ್ಟು ಸ್ಪಷ್ಟವಾಗಿರುತ್ತಿತ್ತು ಎಂದರೆ ನುರಿತ ಇಂಗ್ಲೀಷ್ ಪ್ರೊಫೆಸರ್ ರೀತಿ ಇರುತ್ತಿತ್ತು.

ಆ ನಿನ್ನ ನಿರರ್ಗಳ ಮಾತನ್ನು ಕೇಳುತ್ತಲೇ ಇರಬೇಕು ಎನಿಸುತ್ತಿತ್ತು. ಬಹುಶಃ ಆ ಒಂದು ಮಾಯವೂ ಕೂಡ ನಿನ್ನಲ್ಲಿ ನಾ ಬಂಧಿಯಾಗಲು ಪ್ರೇರಣೆಯಾಗಿರಬಹುದು….. ಸರಿ..ನನ್ನ ಪರಿಚಯವನ್ನು ನಾನೇ ಮಾಡಿಕೊಂಡಾಗಲಾದರೂ ಸ್ವಲ್ಪ ನಗಬಾರದಿತ್ತೆ…? ಮುಖವನ್ನು ಊದಿಸಿಕೊಂಡವನಂತೇ ಇದ್ದೆ.” ಆಯ್ತಾ ನಾ ಹೊರಡಬೇಕು ” ಎಂದು ನನ್ನನ್ನು ನೋಯಿಸಿದಂತ್ತಿತ್ತು. ಏಕೆಂದರೆ ಇನ್ನೂ ಸ್ವಲ್ಪ ಸಮಯ ಇಲ್ಲೇ ಇರಲಿ ಎಂಬ ಹಂಬಲ. “ಆಯ್ತು ” ಎನ್ನುವಷ್ಟರಲ್ಲಿ ಹೊರಟೇ ಬಿಡೋದೆ…?. ” ಹೋಗು ಹೋಗು..ಎಲ್ಲೋಗ್ತೀಯ ಊರಿಗೆ ಬಂದೋಳು ನೀರಿಗೆ ಬರೋದಿಲ್ವ” ಎಂದು ಮನಸೊಳಗೇ ಹೇಳಿಕೊಂಡು ಕಾರ್ಯಮಗ್ನಳಾದೆ. ಅಂದಿನಿಂದ ದಿನಾ ಬರುವೆ ಹೋಗುವೆ. ನನಗಂತೂ ಧೈರ್ಯವಿಲ್ಲ ನಿನ್ನ ಜೊತೆ ಮಾತನಾಡಲು. ನೀ ಬಂದಾಗಲಂತೂ ಕೋಗಿಲೆಗೆ ಮಾವು ಚಿಗುರಿದಾಗ ಎಷ್ಟು ಸಂತೋಷ ಪಡುತ್ತದೋ, ಬೆಳದಿಂಗಳ ಕಂಡ ನವಿಲು ಹೇಗೆ ಗರಿಬಿಚ್ಚಿ ಕುಣಿಯುತ್ತದೋ ಹಾಗೆ ಆಗುತ್ತಿತ್ತು ನನಗೆ. ನಿನ್ನನ್ನು ನೋಡುವುದೇ ನನ್ನ ಭಾಗ್ಯವೆನಿಸುತ್ತಿತ್ತು.

ಅಂದು ದಸರಾ ಪೂಜೆ, ಹಬ್ಬಕ್ಕಿಂತ ಎರಡುದಿನ ಮುಂಚಿತವಾಗಿಯೇ ಮಾಡುತ್ತಿದ್ದರು. ನಾನು ರಿಸೆಪ್ಷನಿಸ್ಟ್ ಆಗಿದ್ದರಿಂದ ಎಲ್ಲರಂತೆ ನಾನೂ ತುಸು ಹೆಚ್ಚಾಗೇ ಮೇಕಪ್ ಮಾಡಿಕೊಂಡು ಒಂದೊಳ್ಳೆ ಮೆರೂನ್ ಬಣ್ಣದ ರೇಷಿಮೆ ಸೀರೆಗೆ ಕುಚ್ಚು ಹಾಕಿಸಿ ಅದಕ್ಕೊಪ್ಪುವ ಆಭರಣಗಳನ್ನು ಹಾಕಿಕೊಂಡು ಬಂದಿದ್ದೆ. ಅದಕ್ಕೆ ವಾರಗಳ ತಯಾರಿ ಇತ್ತು. ನೀನೋ ಹೇಗೇ ಇದ್ದರೂ ಸುಂದರವಾಗಿದ್ದೀಯ, ಆಕರ್ಷಿತನಾಗಿದ್ದೀಯ ನಿನ್ನ ಸೆಳೆಯಲು ಸ್ವಲ್ಪ ಪ್ರಯತ್ನ ಮಾಡೋಣ ಎಂದು. ಇಷ್ಟು ದಿವಸ ಜೀನ್ಸ್ ಹಾಕುತ್ತಿದ್ದವನು ಅಂದು ಮಾತ್ರ ನೀನು ಫಾರ್ಮಲ್ ಶರ್ಟ್ ಮತ್ತು ಪ್ಯಾಂಟ್ ಧರಿಸಿ, ಕಪ್ಪು ಬಣ್ಣದ ಶೂ, ಮೇಲೊಂದು ಬ್ಲೇಜರ್ ಹಾಕಿ, ಕಣ್ಣಿಗೆ ಗ್ಲಾಸ್ ಧರಿಸಿ ಒಳಗೆ ಎಂಟ್ರಿ ಕೊಟ್ಟೆ ನೋಡು…ಕಳೆದೋದೆ ನಾನು ಆ ನಿನ್ನ ನೋಟಕ್ಕೆ. ಅದ್ಯಾವ ತಾಯಿ ಹೆತ್ತ ಮಗನೋ ನೀನು ಎನಿಸಿದ್ದು ಸುಳ್ಳಲ್ಲ. ಅಷ್ಟು ಜನರ ಗುಂಪಲ್ಲಿ ನನಗೆ ಕಾಣುತ್ತಿದ್ದದ್ದು ನೀನೊಬ್ಬನೇ. ನಿನ್ನಂದನೇ ನನ್ನ ಕಣ್ಣು ತುಂಬಿಹೋಗಿತ್ತು. ಪೂಜೆ ಪುನಸ್ಕಾರಗಳು ನಡೆಯುತ್ತಿತ್ತು. ಆದರೆ ಅದ್ಯಾವ ಪರಿಜ್ಞಾನವೂ ನನಗಿರಲಿಲ್ಲ.

ಇವತ್ತಾದರೂ ನಿನ್ನ ಜೊತೆ ಮನಬಿಚ್ಚಿ ಮಾತನಾಡಲೇ ಬೇಕು ಎನಿಸಿಬಿಟ್ಟಿತ್ತು. ಪೂಜೆ ಏನೋ ಸರಾಗವಾಗಿ, ಸುಸೂತ್ರವಾಗಿ ಮುಗಿಯಿತು. ಆದರೆ ನನ್ನ ದೇವರ ಪೂಜೆನೇ ಇನ್ನೂ ಮಾಡಲಿಲ್ಲವಲ್ಲ , ವರವನ್ನು ಕೇಳಲೇ ಇಲ್ಲವಲ್ಲ ಎಂದುಕೊಳ್ಳುವಷ್ಟರಲ್ಲಿ ನನ್ನ ಗೆಳತಿಯೊಬ್ಬಳು ಒಂದು ಫೋಟೋ ತೆಗೆದುಕೊಳ್ಳೋಣವೆಂದು ಅಣಿಯಾಗುತ್ತಿದ್ದೆವು. ಆಕಸ್ಮಾತ್ ನಮ್ಮ ಬಳಿಗೆ ನೀನು ಬಂದೆ. ನನ್ನ ಗೆಳತಿಗೆ ನನ್ನ ಮನದಾಸೆ ಅರಿತಿತ್ತು ಎನಿಸುತ್ತದೆ.” ಸರ್ ನಿಮ್ಮ ಜೊತೆ ಒಂದು ಫೋಟೋ ತೆಗೆದುಕೊಳ್ಳುತ್ತೇವೆ ನಿಂತುಕೊಳ್ಳಿ” ಎಂದೇ ಬಿಟ್ಟಳು. ನೀನು ಅರೆ ಮನಸ್ಸಿನಿಂದಲೋ ಅಥವಾ ಒಳ್ಳೆ ಮನಸ್ಸಿನಿಂದಲೋ “ವೈ ನಾಟ್” ಎಂದೇ ಬಿಟ್ಟೆ. ಫೋಟೋ ತೆಗೆಯಬೇಕು ಸರಿ ತೆಗೆಯಲು ಯಾರಿರಲಿಲ್ಲ. ನನ್ನ ಗೆಳತಿನೇ ಮೊಬೈಲ್ ಎತ್ತಿಕೊಂಡು ನಮ್ಮಿಬ್ಬರನ್ನು ಜೊತೆಮಾಡಿ ನಿಲ್ಲಿಸಿಯೇ ಬಿಟ್ಟಳು. ರೋಗಿ ಬಯಸಿದ್ದು ವೈದ್ಯ ಹೇಳಿದ್ದು ಎರಡೂ ಒಂದೇ ಆಗಿಹೋಗಿತ್ತು.” ಸ್ಮೈಲ್” ಎಂದು ಮೂರು ನಾಲ್ಕು ಕ್ಲಿಕ್ಕಿಸಿ ಬಿಟ್ಟಳು. ಓಕೆ ಸರ್ ಆಯ್ತು ಎಂದು ಫೋಟೋ ನೋಡುತ್ತಲೇ “ಸರ್ ಡೋಂಟ್ ಮೈಂಡ್ ನಿಮ್ಮಿಬ್ಬರದು ಒಳ್ಳೆ ಜೋಡಿ ” ಎಂದು ನೇರವಾಗಿಯೇ ಹೇಳಿಬಿಡೋದೆ. ನೀನೋ ಹುಸಿನಗುತ ಅಲ್ಲಿಂದ ಜಾರಿಕೊಂಡೆ. ಆದರೆ ನಿಜವಾಗಿ ಜಾರಿದ್ದು ನಾನು. ನಿನ್ನ ಮೋಹದ ಆಳದೊಳಕ್ಕೆ ಜಾರಿ ಬಿದ್ದಿದ್ದವಳು ನಾನು.

ನನ್ನ ಹುಚ್ಚು ಎಷ್ಟಿತ್ತೆಂದರೆ ಅಂದು ತೆಗೆದಿದ್ದ ಜೋಡಿ ಫೋಟೋವನ್ನ ನನ್ನ ಮೊಬೈಲ್ ನ ಸ್ಕ್ರೀನ್ ಸೇವರ್ ಗೆ ಹಾಕಿಕೊಂಡಿದ್ದೆ. ಅದ ನೋಡಿದ ಅದೆಷ್ಟೋ ಗೆಳತಿಯರು ಯಾವಾಗ ಮದುವೆಯಾಯಿತು ಎಂದು ಛೇಡಿಸುವಂತೆ ಕಾಲೆಳೆಯುತ್ತಿದ್ದರು. ಮನಸ್ಸಿನೊಳಗೆ ಸಂತೋಷ ಭರಿತವಾಗಿದ್ದರೂ ಮೇಲು ನೋಟಕ್ಕೆ ಛೆ…ಹೋಗ್ರೇ ಎಂದು ಮೂದಲಿಸುವಂತೆ ಹೇಳಿಬಿಡುತ್ತಿದ್ದೆ. ಗೆಳತಿ ಅಂದು ಹೇಳಿದ ಮಾತು ನನ್ನ ಮನಸ್ಸನ್ನೇ ವಿಚಲಿತಗೊಳಿಸಿತ್ತು. ಅವಳು ಹೇಳಿದ ಮಾತು ನಿಜವಾದರೆ ಹೇಗಿರುತ್ತದೆ ಜೀವನ, ಬೆಸ್ಟ್ ಜೋಡಿ ಅವಾರ್ಡ್ ಸಿಗಬಹುದೇ ಎಂದೆಲ್ಲಾ ಯೋಚಿಸುತ್ತಲೇ ಇದ್ದೆ. ಒಂದು ಮುಖ್ಯವಾದ ವಿಷಯ ನಾನು ನಿನ್ನ ಮೂರ್ತಿಯನ್ನು ನನ್ನ ಹೃದಯದ ಗುಡಿಯಲ್ಲಿಟ್ಟು ಪೂಜೆ ಮಾಡುತ್ತಿದ್ದದ್ದು, ಮನಸಿನ ಭಾವನೆಗಳು ಇದಾವುದನ್ನೂ ನನ್ನ ಗೆಳತಿಯ ಜೊತೆಗೆ ಹಂಚಿಕೊಂಡವಳಲ್ಲ. ಸದ್ದಿಲ್ಲದೇ ಅರಳಿದ ನಿಶಬ್ಧದ ಪ್ರೀತಿ ನನ್ನದು.

ನಮ್ಮ ಪ್ರಥಮ ಖಾಸಗಿ ಭೇಟಿಯ ಬಗ್ಗೆ ಹೇಳಲೇಬೇಕು. ಅಂದು ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಆಫೀಸಿಗೆ ರಜಾ ಇತ್ತು. ನನ್ನ ಗೆಳತಿ ಲಾಲ್ ಬಾಗ್ ಗೆ ಹೋಗೋಣ ಎಂದು ಒತ್ತಾಯಿಸಿದಳು. ನನಗೂ ಬೆಂಗಳೂರು ಹೊಸದಾಗಿತ್ತು ಮತ್ತು ಅದೂ ಅಲ್ಲದೆ ಲಾಲ್ ಬಾಗ್ ಎಂದು ಹೆಸರು ಮಾತ್ರ ಕೇಳಿದ್ದೆ, ನೋಡಿರಲಿಲ್ಲ. ನಾನೂ ಆಸೆಯಿಂದ ಅವಳಿಗೆ ಹಸಿರು ನಿಶಾನೆ ತೋರಿಸಿಬಿಟ್ಟೆ. ಮನಸೊಳಗೆ ನೀನು ಜೊತೆಯಲ್ಲಿ ಬಂದಿದ್ದರೆ ಚನ್ನಾಗಿರುತ್ತಿತ್ತು ಎನಿಸಿದರೂ ಮತ್ತೊಂದು ಭಾವ ಅದೆಲ್ಲಾ ದೂರದ ಮಾತು ಎಂದು ನನಗೆ ನಿರಾಶೆಗೊಳುಸುತ್ತಿತ್ತು. ಅದೇ ಚಿಂತೆಯಲ್ಲಿ ಮುಳುಗಿ ಹೋಗಿದ್ದ ನನಗೆ ” ಇಳಿಯಮ್ಮ ಲಾಲ್ ಬಾಗ್ ಬಂತು” ಎಂದಾಗ ವಾಸ್ತವತೆಗೆ ಬಂದು ಪ್ರವೇಶ ದ್ವಾರದ ಕಡೆ ಹೊರಟೆವು. ನಮ್ಮೂರಿನ ಸಂತೆ, ಜಾತ್ರೆಗೆ ಹೋಗಿ ರೂಢಿಯಿದ್ದ ನನಗೆ ಅದೇ ದೊಡ್ಡದು ಎನಿಸಿತ್ತು. ಆದರೆ ಲಾಲ್ ಬಾಗ್ ನೋಡಿ ಇದು ಸಮುದ್ರ ಎನಿಸಿಬಿಟ್ಟಿತ್ತು. ಎಲ್ಲೆಲ್ಲಿ ಮೋಡಿದರೂ ಜನ ಕಾಲಿಡಲು ಜಾಗವೇ ಇರುತ್ತಿರಲಿಲ್ಲ. ಅಷ್ಟೊಂದು ಜನಸಾಗರವೇ ತುಂಬಿಹೋಗಿತ್ತು. ಊರಿನಲ್ಲಿ ಅಪ್ಪನ ಬೆರಳ ಹಿಡಿದು ಜಾತ್ರೆಗೆ ಹೋಗುತ್ತಿದ್ದವಳು, ನನಗೆ ಅದು ಬೇಕು ಇದು ಬೇಕು ಎಂದು ಕೇಳಿ ತೆಗೆಸಿಕೊಳ್ಳುತ್ತಿದ್ದೆ. ಇಂದು ಪ್ರಥಮವಾಗಿ ನಾನೇ ಏನು ಬೇಕಾದರೂ ತೆಗೆದುಕೊಳ್ಳುವ ನಿರ್ಧಾರವಿತ್ತು. ಆದರೆ ಅದೇಕೋ ಅಪ್ಪ ನನಗೆ ತುಂಬಾ ನೆನಪಾಗಿ ಹೋಗಿದ್ದ.

ಲಾಲ್ ಬಾಗ್ ಒಳಗಿನ ಕೆರೆಯಲ್ಲಿ ವಿಹಾರಕ್ಕೆಂದು ಜನ ತುಂಬಿದ್ದರು. ನನಗೂ ಒಮ್ಮೆ ಅದರಲ್ಲಿ ಕೂರಬೇಕು ಎನಿಸಿತ್ತು. ಗೆಳತಿಗೆ ಒತ್ತಾಯಿಸಿ ಹೋದೆವು. ಒಂದು ಬೋಟಿನಲ್ಲಿ ಇಬ್ಬರಿಗೇ ಅವಕಾಶವಿರುತ್ತಿತ್ತು. ಯಾರೋ ಅಪರಿಚಿತರು ಮೊದಲೇ ಕುಳಿತಿದ್ದರಿಂದ ಇನ್ನೊಬ್ಬರು ಕೂರಬಹುದಿತ್ತು. ನನ್ನ ಗೆಳತಿಯನ್ನೇ ಮೊದಲು ಕೂರಿಸಿ ಕಳುಹಿಸಿದೆ. ನಂತರ ನಾನು ಹೋಗೋಣವೆಂದು. ಅದೃಷ್ಟ ನೋಡು ನನ್ನ ಹಿಂದೆಯೇ ನೀನು ನಿಂತಿರೋದೇ..” ಹಾಯ್…ಏನು ಒಬ್ಬರೇ ಬಂದಿದ್ದೀರ..? ” ಎಂಬ ನಿನ್ನ ಪ್ರಶ್ನೆಗೆ ಕಣ್ಣಲ್ಲಿ ಅರಳಿದ ಆಸೆಯೊಂದಿಗೆ ನಗು ಮೊಗದಿಂದ ” ಇಲ್ಲ ನನ್ನ ಸ್ನೇಹಿತೆ ಜೊತೆ ಬಂದಿದ್ದೇನೆ. ಅವಳು ಬೋಟಿಂಗ್ ಹೋಗಿದ್ದಾಳೆ. ನಾವಿಬ್ಬರೂ ಜೊತೆ ಹೋಗೋಣ ” ಎಂದು ನಾನೇ ನಿನಗೆ ಆಹ್ವಾನವಿಟ್ಟೆ. ಅದೇನೋ ಅಂದು ನೀನೂ ಒಳ್ಳೆಯ ಮೂಡಿನಲ್ಲಿದ್ದೆ ಅನಿಸುತ್ತೆ ಹೋಗೋಣವೆಂದುಬಿಟ್ಟೆ. ನನ್ನ ಗಳತಿ ಬಂದ ತಕ್ಷಣ ನಾವಿಬ್ಬರೇ ಕುಳಿತು ಹೊರಟೆವು.

ಅಂದು ನನ್ನ ಜೀವನದ, ಪ್ರೇಮದ ಮೊದಲ ಹೆಜ್ಜೆಯಾಗಿತ್ತು. ಒಂದು ಹುಡುಗನ ಜೊತೆ ಏಕಾಂಗಿ ಪ್ರಯಾಣ ಅದಾಗಿತ್ತು. ” ನನಗೆ ನೀರನ್ನು ಕಂಡರೆ ಭಯ. ನಿಮ್ಮನ್ನು ಹಿಡಿದುಕೊಳ್ಳಬಹುದುದೇ ..? ” ಎಂದು ಕೇಳಿದಾಗ ಓಕೆ ಅಂದು ಬಿಟ್ಟಿದ್ದೆ. ನನ್ನ ಖುಷಿಯ ಕೇಳಬೆಕೇ ನಿನ್ನ ತೋಳ ಒಳಗೆ ನನ್ನ ಕೈಗಳನು ತೂರಿಸಿ ಬಂಧಿಮಾಡಿಬಿಟ್ಟೆ. ಪುರುಷನ ಪ್ರಥಮ ಸ್ಪರ್ಶಕ್ಕೆ ನನ್ನ ಹೆಣ್ತನದ ಆಸೆಗಳು ಗರಿಗೆದರಿ ಕುಣಿಯಲಾರಂಭಿಸಿದವು.ಮೈಯೆಲ್ಲಾ ನಡುಗುವಂತಾಗಿ ನಾಚಿಕೆ ಕೇಕೆ ಹಾಕುತ್ತಿತ್ತು. ತೋಳ ಬಂಧನವನ್ನು ಮೆಲ್ಲನೆ ಎಳೆದುಕೊಳ್ಳೋಣ ಎನಿಸಿತ್ತು. ಆದರೆ ಬಯಸದೆ ಬಂದ ಭಾಗ್ಯವನ್ನು ಬಿಡಬಾರದು ಎಂದು ತೀರ್ಮಾನಿಸಿದ್ದೆ. ನೀನು ನೋಡಲೆಂದೇ ಒಮ್ಮೊಮ್ಮೆ ನನ್ನ ಮೊಬೈಲನ್ನು ತೆಗೆದು ನಮ್ಮಿಬ್ಬರ ಜೋಡಿ ಫೋಟೋವನ್ನ ಕಾಣುವಂತೆ ಇಡುತ್ತಿದ್ದೆ. ಆದರೆ ನೀನು ಮಾತ್ರ ಏನು ಗೊತ್ತೇ ಇಲ್ಲವೇನೋ ಎಂಬಂತೆ ನಟಿಸುತ್ತಿದ್ದೆ. ಇಬ್ಬರೂ ಜಿದ್ದಿಗೆ ಬಿದ್ದವರಂತೆ ಮೌನವಾಗಿದ್ದೆವು. ತುಂಬಿದ ಯೌವ್ವನದ ರಸಭರಿತ ಹೆಣ್ಣೊಂದು ಬಳಿ ಇದೆ, ತೋಳ ತೆಕ್ಕೆಯಲಿ ಬಂಧನವಾಗಿದ್ದಾಳೆ ಏನಾದರೂ ಮಾತನಾಡೋಣ ಎನಿಸಲೇ ಇಲ್ಲ ನಿನಗೆ. ಆ ಕಡೆ ಈ ಕಡೆ ಪ್ರಕೃತಿಯನ್ನೇ ದಿಟ್ಟಿಸುತ್ತಿದ್ದೆ. ನಾನು ಹೆಣ್ಣು ದುಡುಕಬಾರದು ಎಂದು ಎಷ್ಟೇ ಪ್ರಯತ್ನ ಪಟ್ಟರೂ ಕೊನೆಗೆ ನಾನೇ ಮೌನ ಮುರಿದು ” ಯಾಕೆ ಮೌನವಾಗಿದ್ದೀರ …,? ಏನಾದರೂ ಮಾತನಾಡಿ…ಸುಮ್ಮನೆ ಕೂರಲು ಬೇಸರವಾಗುವುದಿಲ್ಲವೇ…? ಎಂದು ನಾನೇ ಮೌನ ಮುರಿದು ಕೇಳಿಯೇಬಿಟ್ಟೆ. ” ಹಾಗೇನಿಲ್ಲಾ ನೀವೇ ಮಾತನಾಡಿ. ನಾನು ಹೆಚ್ಚಿಗೆ ಮಾತನಾಡಿ ಅಭ್ಯಾಸವಿಲ್ಲ” ಇದು ನಿನ್ನ ಉತ್ತರವಾಗಿತ್ತು. ವಿಧಿಯಿಲ್ಲದೆ ನನ್ನ ಮನದಾಳದ ಮಾತನ್ನ ನಾಚಿಕೆಯಿಂದ ತಲೆತಗ್ಗಿಸಿ “ನನಗೆ ನೀವಂದ್ರೆ ಇಷ್ಟ, ಯಾವಾಗಲೂ ನಿಮ್ಮ ಜೊತೆ ಹೀಗೆ ಇರಬೇಕು ಎನಿಸುತ್ತದೆ ನನ್ನ ಈ ಪ್ರೇಮ ನಿವೇದನೆಯನ್ನ ಒಪ್ಪಿಕೊಳ್ಳುವಿರಾ..?” ಎಂದು ಒಂದೇ ಸಮನೆ ಒಪ್ಪಿಸಿಬಿಟ್ಟೆ. ” ದಯವಿಟ್ಟು ಕ್ಷಮಿಸಿ ಸದ್ಯಕ್ಕೆ ನಾನು ಏನನ್ನೂ ಹೇಳಲಾರೆ.

ಸ್ವಲ್ಪ ದಿನಗಳ ಕಾಲಾವಕಾಶ ಬೇಕು ಎಂದುಬಿಟ್ಟೆ. ಆ ಹೊತ್ತಿನಲ್ಲಿ ನಿನ್ನ ನೀರಸವಾದ ಉತ್ತರಕ್ಕೆ ಬೇಸರವೇನು ತರಲಿಲ್ಲವಿದ್ದರೂ “ಪರವಾಗಿಲ್ಲ ಯೋಚಿಸಿ ಉತ್ತರಿಸಿ” ಎನ್ನುವಷ್ಟರಲ್ಲಿ ಬೋಟಿನಿಂದ ಇಳಿಯಬೇಕಾದ ಅನಿವಾರ್ಯತೆ ಬಂತು. ಅಷ್ಟರಲ್ಕಾಗಲೇ ಸಮಯ ಎರಡನ್ನು ದಾಟಿತ್ತು. ನಿನಗೆ ಏನನಿಸಿತೋ ಏನೋ ಊಟ ಮಾಡೋಣವೆಂದು ಅಲ್ಲೇ ಇದ್ದ ಮೊಬೈಲ್ ಹೋಟೆಲ್ ಗೆ ನೀನೇ ಕರೆದೊಯ್ದೆ. ನನಗೆ ಒಂದು ಮೂಲೆಯಲ್ಲಿ ಒಪ್ಪಿಕೊಂಡರೆ ಎಷ್ಟು ಚನ್ನಾಗಿರಬಹುದು ಎಂದು ಮುಂದಿನದನ್ನು ಲೆಕ್ಕ ಹಾಕುತ್ತಿದ್ದೆ.ಊಟ ಮುಗಿಸಿ ಬೈ ಹೇಳಿ ಹೊರಟೇಬಿಟ್ಟೆ.

ಮನೆಗೆ ಬಂದವಳೇ ಸ್ವಲ್ಪ ಮೌನಿಯಾದೆ. ನಾನು ಏನಾದರೂ ತಪ್ಪು ಮಾಡಿದೆನೇ..? ಹಾಗೆ ಹೇಳಬಾರದಿತ್ತೇ..? ನನ್ನ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ ಅವರು..? ಎಂಬೆಲ್ಲಾ ಪ್ರಶ್ನೆಗಳು ಕಾಡಲಾರಂಭಿಸಿದವು. ಇಷ್ಟಪಟ್ಟಿದ್ದು ಸಿಗಬೇಕಂದ್ರೆ ರಿಸ್ಕ್ ತೆಗೆದುಕೊಂಡರೂ ಪರವಾಗಿಲ್ಲ ಎಂದು ನಾನೇ ಸಮಾಧಾನ ಪಟ್ಟುಕೊಂಡೆ. ನನ್ನ ಮೌನದ ವಾತಾವರಣವನ್ನು ಗಮನಿಸಿದ ನನ್ನ ಗೆಳತಿ “ಲಾಲ್ ಬಾಗ್ ಗೆ ಹೋಗಿ ಬಂದಾಗಿನಿಂದ ನಿನ್ನಲ್ಲೇನೋ ಬದಲಾವಣೆ ಕಾಣಿಸುತ್ತಾ ಇದೆ ಏನಾಯಿತು..? ” ಎಂಬ ಅನುಮಾನದ ಪ್ರಶ್ನೆ ಕೇಳಲಾರಂಭಿಸಿದಳು.ಏನೋ ಸಬೂಬು ಹೇಳಿ ಮರೆಸಿಬಿಟ್ಟಿದ್ದೆ.

ಡಿಸೆಂಬರ್ 30 ನೇ ತಾರೀಖು ನೀನು ಎಂದಿನಂತೆ ಸ್ಮಾರ್ಟ್ ಆಗಿ ನಗುಮುಖದೊಂದಿಗೆ ನನ್ನ ಬಳಿ ಬಂದು ನಿಂತೆ. ಆ ರೀತಿಯ ನಗುವನ್ನು ನಾನು ಅಲ್ಲಿಯವರೆಗೂ ನೋಡಿಯೇ ಇರಲಿಲ್ಲ. ಹುಬ್ಬಿನ ಸನ್ನೆಯಲ್ಲೇ ಏನು ವಿಶೇಷ ಎಂಬಂತೆ ನಟಿಸಿದೆ. ” ನಾಳೆ ನಿಮಗೊಂದು ಸರ್ ಪ್ರೈಜ್ ನೀಡುತ್ತೇನೆ ಗೆಟ್ ರೆಡಿ ಟು ಗೊ ಬ್ರಿಗೇಡ್ ರೋಡ್ ಟು ಸೆಲೆಬ್ರೇಟ್ ನ್ಯೂ ಇಯರ್” ಎಂದು ಹೊರಟುಬಿಟ್ಟೆ. ನಾನು ತಲೆ ಕೆಡಿಸಿಕೊಂಡು ಯೋಚಿಸುತ್ತಾ ಕುಳಿತೆ. ಆಮೇಲೆ ಗೊತ್ತಾಯಿತು ನಾಳಿದ್ದು ನ್ಯೂ ಇಯರ್ ಇರುವುದರಿಂದ ಕರೆಯುತ್ತಿದ್ದಾರೆಂದು. ಆದರೆ ಸರ್ ಪ್ರೈಜ್ ಏನು ಎಂಬುದರೆ ಬಗ್ಗೆ ಕುತೂಹಲ ಹೆಚ್ಚಾಯಿತು. ಅದೇ ಗುಂಗಿನಲ್ಲಿ ರಾತ್ರಿ ಸರಿಯಾಗಿ ನಿದ್ರೆನೇ ಬಾರಲಿಲ್ಲ. ಮಾರನೆಯ ದಿನ ಸಂತೋಷದಿಂದ ಆಫೀಸಿಗೆ ಬೇಗ ಹೊರಟು ಬಂದೆ. ಎಲ್ಲಾ ಕೆಲಸಗಳನ್ನು ಬೇಗ ಮುಗಿಸಿ ಸಂಜೆ ಐದಕ್ಕೆ ನೀನೇ ಬಂದು ನನ್ನ ಕರೆದುಕೊಂಡು ಹೋದೆ. ಅಲ್ಲೊಂದು ಗೊಂದಲ ಎರಡೂ ಕಡೆ ಕೂರಬೇಕೆ, ಒಂದು ಕಡೆ ಕೂರಬೇಕೆಂದು. ಕೊನೆಗೆ ನೀನೇ ಎರಡು ಕಡೆ ಕೂರಲು ತಿಳಿಸಿದೆ.

ಅದು ಎರಡನೆ ಬಾರಿ ನಿನ್ನ ಜೊತೆ ಹೊರಟಿದ್ದು. ರಸ್ತೆಯಲ್ಲಿ ಹೋಗುವಾಗ ಅದೆಷ್ಟೋ ಪ್ರೇಮಿಗಳನ್ನ ಬೈಕಲ್ಲಿ ಹೋಗುವುದನ್ನ ನೋಡಿದ್ದೆ. ಹಿಂದಿನ ಸೀಟಿನಲ್ಲಿ ಕುಳಿತ ಹುಡುಗಿ ಅವಳ ಪ್ರಿಯತಮನನ್ನು ಹಿಂದಿನಿಂದ ಬಾಚಿ ತಬ್ಬಿ ಹಿಡಿದಿರುವುದನ್ನೂ ನೋಡಿದ್ದೆ. ಹಾಗೆ ನೋಡಿದಾಗ ನಾನೂ ಹೀಗೆ ಹೋಗುವುದು ಯಾವಾಗ ಎನಿಸಿದ್ದು ಸುಳ್ಳಲ್ಲ. ಆ ಆಸೆ ಈಗ ಈಡೇರುತ್ತದೆ ಎಂದುಕೊಳ್ಳುವಾಗಲೇ ಧೈರ್ಯಮಾಡಿ ನಿನ್ನೆಗಲ ಮೇಲೆ ಕೈ ಇಟ್ಟೇಬಿಟ್ಟೆ. ನೀನು ಮರುಮಾತನಾಡದೆ ನಿನ್ನಷ್ಷಕ್ಕೆ ಬೈಕ್ ಓಡಿಸುತ್ತಿದ್ದೆ.

ಬ್ರಿಗೇಡ್ ರೋಡ್ ತುಂಬ ಜನಜಂಗುಳಿ. ಎಲ್ಲಿ ನೋಡಿದರೂ ಹೊಸ ವರ್ಷದ ಆಚರಣೆಗೆಂದು ಬಂದ ಜನರು. ಅದರಲ್ಲಿ ಪ್ರೇಮಿಗಳೇ ಹೆಚ್ಚು. ಅದು ನನಗೆ ಹೊಸತು ಇದರ ಯಾವ ಗಂಧ ಗಾಳಿಯೂ ಗೊತ್ತಿರಲಿಲ್ಲ. ಅಲ್ಲಿ ನಿನ್ನ ಕೈಬೆರಳನ್ನೇ ಹಿಡಿದುಕೊಂಡು ಪುಟ್ಟ ಮಗುವಿನಂತೆ ನಿನ್ನ ಹಿಂದೆಯೇ ಬರುತ್ತಿದ್ದೆ. ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆಗಳೆಲ್ಲವನ್ನು ಒಮ್ಮೆ ಸುತ್ತು ಹಾಕಿ ಬರುವಷ್ಟರಲ್ಲಿ ರಾತ್ರಿ ಹನ್ನೊಂದರ ಸಮಯ. ಜಗಮಗಿಸುವ ಬಣ್ಣದ ಲೈಟುಗಳು, ಕುಣಿಯಲೆಂದೇ ಹುಚ್ಚೆಬ್ಬಿಸುವಂಥ ಹಾಡುಗಳು ಗುಯ್ ಗುಡುತ್ತಿದ್ದವು. ಹನ್ನೆರಡು ಗಂಟೆ ಆಗುತ್ತಿದ್ದಂತೇ ಎಲ್ಲರೂ ಹರ್ಷೋದ್ಘಾರದಿಂದ ” ಹ್ಯಾಪಿ ನ್ಯೂ ಇಯರ್ ” ಎಂದು ಕೂಗಲಾರಂಭಿಸಿದರು. ಆದರೆ ನೀನು ಮಾತ್ರ ನನ್ನ ಕೈಹಿಡಿದು ಮುಂಗೈಯಿಗೆ ಮುತ್ತಿಟ್ಡು ” ಐ ಲವ್ ಯು ” ಎಂದುಬಿಟ್ಟೆ. ನನಗೆ ಆ ಕ್ಷಣದ ಸಂತೋಷವನ್ನು ಹೇಳಿಕೊಳ್ಳಲಾಗುತ್ತಿರಲಿಲ್ಲ. ಮೌನಿಯಾದೆ, ಕಣ್ಣಲ್ಲಿ ಪನ್ನೀರು ಬಂತು. ಇವತ್ತಿಗೆ ನನ್ನ ಬಹುದಿನದ ಕನಸು ಈಡೇರಿತು ಎಂದು ಮನದೊಳಗೆ ಹರ್ಷಿತಗೊಂಡೆ.

ಅಂದಿನಿಂದ ನನ್ನ ಹೃದಯದ ಅರಮನೆಗೆ ನೀನೇ ಅಧಿಪತಿಯಾದೆ. ನಾನಿನ್ನ ದಾಸಿಯಾದೆ. ನನ್ನ ಇಷ್ಟ ಕಷ್ಟ ಎಲ್ಲವನ್ನೂ ಕೇಳುತ್ತಿದ್ದೆ. ನನ್ನನ್ನು ಸಂತೋಷಗೊಳುಸುವುದೇ ನಿನ್ನ ಕಾಯಕವಾಗಿ ಹೋಗಿತ್ತು. ನಿನ್ನ ಮಾತಿಗೆ , ಪ್ರೀತಿಗೆ ಸಂಪೂರ್ಣ ಶರಣಾಗಿ ಹೋಗಿದ್ದೆ. ಇಷ್ಟೆಲ್ಲಾ ನಡೆದರೂ ಒಮ್ಮೆಯೂ ನೀನು ಸಂಯಮ ಮೀರಲಿಲ್ಲ. ಅಸಭ್ಯವಾಗಿ ವರ್ತಿಸಲಿಲ್ಲ. ನಿನ್ನ ಆ ಗುಣನೇ ಇರಬೇಕು ನಾನಿಂದು ಇಷ್ಟು ಹೊಗಳಲು. ಒಮ್ಮೆ ನನ್ನಪ್ಪನಿಂದ ಕರೆ ಬಂತು ಊರಿಗೆ ಬೇಗನೆ ಬರಬೇಕೆಂದು. ಏನೋ ಗಾಢವಾದ ವಿಷಯವಿರಬೇಕೆಂದು ನಿನಗೂ ಹೇಳದೆ ಹೊರಟು ಬಿಟ್ಟೆ. ಆಮೇಲೆ ತಿಳಿಯಿತು ನನ್ನ ಮದುವೆಯ ಸಲುವಾಗಿ ಎಂದು. ನನ್ನಪ್ಪನ ಆಸೆ, ಕನಸಿನ ಮುಂದೆ ನನ್ನ ಪ್ರೀತಿ ಚಿಕ್ಕದೆನಿಸಿತು. ಮರು ಮಾತನಾಡದೆ ಒಪ್ಪಿಕೊಂಡೆ. ಆದರೆ ನಿನ್ನ ಜೊತೆ ಕಳೆದ ಆ ಒಂದೊಂದು ಕ್ಷಣಕ್ಕೆ, ಅನುಭವಕ್ಕೆ ಏನೆಂದು ಹೆಸರಿಟ್ಟು ಕರೆಯಲಿ. ಹೌದು ಈ ನೆನಪುಗಳೇ ಹಾಗೆ ಬೇಡವೆಂದರೂ ಅಕ್ಷಿ ಪಟಲದ ಮುಂದೆ ಬಂದು ಹಳೆಯ ಪಾತ್ರಗಳು ನಟಿಸುತ್ತಾ ಹೋಗುತ್ತವೆ. ಮತ್ತೆ ಕಾಣದಾಗುತ್ತವೆ.

ಮತ್ತೊಮ್ಮೆ ನಿನ್ನನ್ನು ಹೃದಯದ ರಾಜ ಎನ್ನುತ ಮುಗಿಸುತ್ತಿರುವೆ. ನೀ ಎಲ್ಲೇ ಇದ್ದರೂ ಸುಖವಾಗಿರೆಂದು ಆಶಿಸುತ್ತೇನೆ.

ಇಂತಿ ನಿನ್ನ ಪ್ರೇಮದಾಸಿ

ಮಹದೇವ್ ಬಿಳುಗಲಿ
9611339024

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ಮಣ್ಣ ಮಕ್ಕಳು

Published

on

ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
  • ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ

ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.

ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.

ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು

Published

on


ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.

ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.

  • ಬಸವರಾಜ ಹೂಗಾರ

ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.

ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.

  • ಡಾ.ರಹಮತ್ ತರೀಕೆರೆ

ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.

  • ಬಿ.ಶ್ರೀನಿವಾಸ,ಕೃತಿ ಲೇಖಕ

ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.

ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.

“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.

ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.

ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.

ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ

  • ಡಾ.ರಾಮಚಂದ್ರ ಹಂಸನೂರು, ಬೆಟಗೇರಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಅಂತಃಕರಣೆಯ ಹುಡುಕುತ್ತಾ..

Published

on

  • ಬಿ.ಶ್ರೀನಿವಾಸ

ಒಂದು ಊರಿನ ಮೌನ ಅರ್ಥವಾಗಬೇಕಾದರೆ, ದುಃಖ ಅರ್ಥವಾಗಬೇಕಾದರೆ ನಾವು ಏನನ್ನು ಮಾಡಬೇಕು? ನಾವು ಹೇಗೆ ಬದುಕಬೇಕು? ಗಾಯಗೊಂಡ ಬೆಟ್ಟ-ಗುಡ್ಡ ,ನದಿ ತೊರೆಗಳ ಬತ್ತಿಹೋದ ನೆಲದ ಕಣ್ಣಿಂದ ಪ್ರಾಣಿ-ಪಕ್ಷಿಗಳ ಆ ದೈನೇಸಿ ನೋಟಗಳಿಂದ ತಪ್ಪಿಸಿಕೊಳ್ಳುವುದಾದರೂ ಹೇಗೆ? ಪ್ರೀತಿ ,ಸಹಾನುಭೂತಿ ಗಳನ್ನು ಕಳೆದುಕೊಂಡವರು ಮಾತ್ರ ನಮ್ಮ ಸುತ್ತಮುತ್ತಲ ಬದುಕು ನರಕ ಸದೃಶವಾಗಿದ್ದರೂ ನೆಮ್ಮದಿಯಿಂದ ಉಣ್ಣ ಬಲ್ಲರು. ನಿದ್ರಿಸಬಲ್ಲರು, ಬರೆಯಬಲ್ಲರು.

ಬಳ್ಳಾರಿ ಜಿಲ್ಲೆಯ ಸೊಂಡೂರು ಮತ್ತು ಸುತ್ತಮುತ್ತಲಿನ ಪ್ರದೇಶದ ಬಹುತೇಕ ಹಳ್ಳಿಗಳು ರೋಗಗ್ರಸ್ತ ಪೀಡಿತರಂತೆ ಕಾಣುತ್ತಿವೆ .ಕಳೆದ ದಶಕದ ಅವಧಿಯೊಂದರಲ್ಲಿ ನಡೆದ ಗಣಿಗಾರಿಕೆಯಿಂದಾಗಿ ಇಡೀ ಪ್ರದೇಶ ಶಾಶ್ವತ ಬರಪೀಡಿತ ಪ್ರದೇಶವಾಗಿ ಬಿಟ್ಟಿದೆ. ಅದಿರು ಸಾಗಾಣಿಕೆಯ ಹೆಚ್ಚಳದಿಂದಾಗಿ ಕಾರ್ಬನ್ ಡೈಯಾಕ್ಸೈಡ್ ಆಸ್ಫೋಟಿಸಿದೆ. ಅಪರೂಪದ ಗಿಡ-ಮರಗಳು, ಪಕ್ಷಿಗಳು ,ಅಳಿವಿನಂಚಿಗೆ ತಳ್ಳಲ್ಪಟ್ಟಿವೆ.

ಶಾಲೆಗಳು ಮಕ್ಕಳಿಲ್ಲದೆ ಮುಚ್ಚಲ್ಪಟ್ಟವು. ಅದಿರು ಹೊತ್ತ ಲಾರಿಗಳಲ್ಲಿ ಮಕ್ಕಳ ಅಕ್ಷರಗಳನ್ನು ತುಂಬಿ ಕಳುಹಿಸಲಾಯಿತು. ಜನರು ಇಂತಹ ಬದುಕಿಗೆ ಹೊಂದಿಕೊಳ್ಳದೆ ಅನ್ಯ ಮಾರ್ಗವೇ ಇರಲಿಲ್ಲ. ಸತತ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ನಡೆದ ಗಣಿಗಾರಿಕೆಯಿಂದಾಗಿ ಜನರ ಸಾಕ್ಷರತೆಯ ಪ್ರಮಾಣ ಮತ್ತು ಜೀವನಾಯುಷ್ಯ ಪ್ರಮಾಣ ಪಾತಾಳಕ್ಕೆ ಕುಸಿದಿದೆ . ರಕ್ತಹೀನತೆಯಿಂದ ಬಳಲುವ ಮಹಿಳೆಯರ ಸಂಖ್ಯೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಗಿಂತಲೂ ಜಾಸ್ತಿಯಾಗಿದೆ. 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವು ಅಧಿಕವಾಗಿದೆ.

ಇಲ್ಲಿನ ಸಂಪನ್ಮೂಲ ಇರುವುದೇ ತಮ್ಮ ಭೋಗ ವಿಲಾಸಕ್ಕೆ ಎಂದು ರಾಜಕೀಯವರ್ಗ,ಉದ್ಯಮಿಗಳು ಮತ್ತು ಕೆಲ ಆಡಳಿತಶಾಹಿ ಅಧಿಕಾರಿಗಳು ತಿಳಿದುಕೊಂಡಿದ್ದರು ಬಳ್ಳಾರಿ ಜಿಲ್ಲೆ ಇರುವುದೇ ಲೋಲುಪತೆ ಗೋಸ್ಕರ ಇಲ್ಲಿ ಹಣವೊಂದಿದ್ದರೆ ಏನೆಲ್ಲಾ ಸಾಧಿಸಬಹುದು ಮತಗಳನ್ನು ಮತದಾರರನ್ನು ಕೊಂಡುಕೊಳ್ಳಬಹುದು, ರಾಜಕೀಯ ಚುನಾವಣಾ ಪ್ರಚಾರಕ್ಕೆ ದಿನವೊಂದಕ್ಕೆ ಲಕ್ಷದಂತೆ ತಿಂಗಳುಗಟ್ಟಲೆ ಪ್ರಚಾರ ಮಾಡಿದ ಸಿನಿತಾರೆಯರಿಗೇನೂ ಕಡಿಮೆ ಇಲ್ಲ.ಸಂಪನ್ಮೂಲಗಳ ಹಗಲು ದರೋಡೆ ರಾಜಾರೋಷವಾಗಿ ನಡೆದುಹೋಯಿತು.

ಈ ಊರುಗಳಲ್ಲಿ ಬುಡುಬುಡುಕಿಯವರಿದ್ದರು, ಹಗಲುವೇಷಗಾರರು, ನಕ್ಕುನಗಿಸುವ ಹಾಡುಗಾರರು, ಬಯಲಾಟದವರು,ಕುರ್ರಮಾಮುಡು ವಸ್ತುನ್ನಾಡು…ಟಿಮ್ ಟಿಮ್….ಎನ್ನುತ್ತ ಬರುವವರು,ಗಿಣಿಶಾಸ್ತ್ರ ಹೇಳುವವರು ,ಬಣ್ಣಬಣ್ಣದ ಹರಳು ಮಾರುವ ಮಹಾ ಗಟ್ಟಿಗಿತ್ತಿಯರು, ಕಾಡಿನ ಗರ್ಭ ಹೊಕ್ಕು ಒಣ ಮರದ ಕಟ್ಟಿಗೆ ತಂದು, ಹೊತ್ತು ಮಾರಿ ಜೀವಿಸುವ ಲಂಬಾಣಿ ಯಾಡಿಗಳಿದ್ದರು. ಜೊತೆಗೆ ಅವರ ಉಡಿಗಳಲ್ಲಿ ಕಾರಿ, ಕವಳಿ,ಪುಟ್ಲಾಸು, ಬಿಕ್ಕಿ ಹಣ್ಣಿನಂತಹ ಹಣ್ಣುಗಳು ಇರುತ್ತಿದ್ದವು.

ಆಹಾರ ಸಂಪಾದನೆಯ ಬೇರೆ ಮೂಲಗಳೇ ಗೊತ್ತಿಲ್ಲದ ಇವರಿಗೆ ಭಿಕ್ಷೆಯೊಂದೇ ಉಳಿದಿರುವ ಮಾರ್ಗ. ಇವರುಗಳೆಲ್ಲಾ ಸಮಾಜದ ಕಣ್ಣಿನಲ್ಲಿ ಅಪರಾಧಿಗಳಂತೆ ಕಾಣುತ್ತಿರುವುದು ಪರಿಸ್ಥಿತಿಯ ವ್ಯಂಗ್ಯ .ಇವರನ್ನು ಇವರ ಕಲೆಯನ್ನು ಗೌರವಿಸುವ ಒಂದು ಸಮುದಾಯವೇ ನಾಶವಾಗಿಹೋಯಿತು.ರೊಕ್ಕಾ ಕೊಟ್ಟರೆ ಏನು ಬೇಕಾದುದನ್ನು ಪಡೆಯಬಹುದೆಂಬ ಅಹಂ-ಭಾವಹೀನ ಮನುಷ್ಯರನ್ನು ಸೃಷ್ಟಿಸುತ್ತಾ ನಡೆದಿದೆ.

ಸೊಂಡೂರು -ಬಳ್ಳಾರಿ ಜಿಲ್ಲೆಯ ಮಲೆನಾಡು .ಪುಟ್ಟ ಕಾಶ್ಮೀರ. ಬೆಟ್ಟ ಗುಡ್ಡಗಳಿಂದ ಆವೃತವಾದ ಸುಂದರನಾಡು .ಅತಿ ಫಲವತ್ತಾದ ಮಣ್ಣು ತುಂಬಿದ ನೆಲ. ಜಲಮೂಲಗಳುಳ್ಳ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ, ಸೊಂಡೂರಿನ ಸುತ್ತಮುತ್ತ ಸುಮಾರು 40 ಕಿಲೋಮೀಟರ್ ಉದ್ದದ, 15 ಕಿಲೋಮೀಟರುಗಳಷ್ಟು ಅಗಲದ ಬೆಟ್ಟಗಳಲ್ಲಿ ಕಬ್ಬಿಣ, ತಾಮ್ರ ಮತ್ತು ಮ್ಯಾಂಗನೀಸ್ ಅದಿರಿನ ಗಣಿಗಳಿವೆ. ಇಲ್ಲಿ ದೊರೆಯುವ ಹೆಮಟೈಟ್ ಉತ್ತಮ ದರ್ಜೆಯ ಕಬ್ಬಿಣದ ಅದಿರು. ಹಾಗೆಯೇ ಮ್ಯಾಂಗನೀಸ್ ಕೂಡ ಡೇರಸ್ ಫಿಲೈಟ್ ಎಂಬ ಕಲ್ಲುಗಳಲ್ಲಿ ಹೇರಳವಾಗಿ ದೊರೆಯುತ್ತದೆ.

ಇದೇ ರೀತಿಯ ಸಂಪತ್ತು ಬೇರೆ ಕಡೆಗಳಲ್ಲಿ ಸಿಗುವುದಿಲ್ಲ ಎಂದಲ್ಲ. ವಿಶ್ವದರ್ಜೆಯ ಶ್ರೇಷ್ಠ ಮಟ್ಟದ ಮ್ಯಾಂಗನೀಸ್ ಅದಿರಿನ ನಿಕ್ಷೇಪಗಳು ಸುಬ್ರಾಯನಹಳ್ಳಿ ,ರಾಮಘಡಗಳಂತಹ ಹಳ್ಳಿಗಳ ಶಿಖರಗಳಲ್ಲಿ ದೊರೆಯುತ್ತವೆ. ಈ ಅದಿರಿನ ವಿಶೇಷವೆಂದರೆ ಬಹುತೇಕ ಅದಿರುಗಳಲ್ಲಿ ಸೇರಿಹೋಗಿರುವ ಫಾಸ್ಪೇಟ್ ಮತ್ತು ಸಲ್ಫರ ನಿಗದಿತ ಅಂಶಕ್ಕಿಂತ ಕಡಿಮೆ ಇರುವುದರಿಂದ ಇಲ್ಲಿನ ಮ್ಯಾಂಗನೀಸ್ ವಿಶ್ವ ಪ್ರಸಿದ್ಧವಾಗಿದೆ ಹಾಗಾಗಿ ಇಲ್ಲಿನ ಅದಿರಿಗೆ ವಿಶೇಷ ಬೇಡಿಕೆ.

ಬಳ್ಳಾರಿ ಜಿಲ್ಲೆಯ ಸೊಂಡೂರು ಕೇವಲ ಒಂದು ಊರು,ಪ್ರದೇಶ ಆಗಿರಬಹುದು .ಆದರೆ ಆತ ಊರಿನ ದುರಂತ ಇಡೀ ಪ್ರಪಂಚವನ್ನೇ ಪ್ರತಿನಿಧಿಸುವುದರ ಸಂಕೇತ. ಗಣಿಗಾರಿಕೆ ಆರಂಭವಾದಾಗಲೇ ಊರಿನ ಅವನತಿಯ ಆರಂಭವಾಯಿತು. ಯಥೇಚ್ಛವಾಗಿ ಗಣಿಗಾರಿಕೆಗೆ ಸರ್ಕಾರವೇ ಅನುಮತಿ ನೀಡುವಾಗ ಅದರ ಹೆಸರಿನಲ್ಲಿ ರಾಜಕಾರಣಿಗಳು ಅಕ್ರಮ ಗಣಿಗಾರಿಕೆ ನಡೆಸುವಾಗಲಂತೂ ಊರು ಆಹುತಿಯಾಗಿ ಬಿಟ್ಟಿತ್ತು. ಮನುಷ್ಯರು ಕೂಲಿಯ ಯಂತ್ರಗಳಾಗಿ ಹೋದರು.

ಮನುಷ್ಯನೇ ಸಂಶೋಧಿಸಿದ ಮೂಲ ಕಸುಬುಗಳಾದ ಕೃಷಿ ,ಬಡಗಿತನ, ಕ್ರೀಡೆ ಹಾಗೂ ಮೈಥುನಗಳು ಸಹ ಕೇವಲ ಯಾಂತ್ರಿಕವೆಂಬಂತೆ ಆಗಿಹೋದವು.ಎಷ್ಟೋ ದಿನಗಟ್ಟಲೆ,ತಿಂಗಳುಗಟ್ಟಲೆ, ಗಣಿಗಾರಿಕೆ ಬೆಟ್ಟಗಳ ತುತ್ತತುದಿಯಲ್ಲಿ ನಡೆಯುತ್ತಿತ್ತು.ಕೂಲಿಯವರೂ ಅಷ್ಟೂ ದಿನಗಳ ಕಾಲ ಅಲ್ಲಿಯೇ ಇರಬೇಕಾಗುತ್ತಿತ್ತು. ಕೂಲಿಯ ಹೆಣ್ಣು ಗಂಡುಗಳು ಅದಿರಿನ ನಿಕ್ಷೇಪದ ಬಯಲಿನಲ್ಲಿಯೇ ಮೈಥುನಕ್ಕಿಳಿದುಬಿಡುತ್ತಿದ್ದರು.ಮಕ್ಕಳು ಉಣ್ಣುವ ಅನ್ನದಲ್ಲಿ ಕೆಂಪುಧೂಳು ಸೇರಿಸಿಯೇ ಉಣ್ಣಬೇಕಾಗುತ್ತತ್ತು. ಕಂಟೇನರುಗಳಲ್ಲಿಯೇಇವರ ಜೀವನ ಮುಗಿದುಹೋಗಿರುತ್ತಿತ್ತು.ಮನುಷ್ಯ ಹೀಗೂ ಬದುಕಬಲ್ಲ ಎಂಬುದನ್ನು ಯಾರೂ ಕೂಡ ಯೋಚಿಸಲಿಲ್ಲ.

ಗಣಿ ಸಾವ್ಕಾರಗಳು ಸಾಮಾನ್ಯ ಜನರ ಕಣ್ಣಿಗೆ ಇಂದಿಗೂ ವೈಭೋಗದ ತುಣುಕುಗಳ ಹಾಗೆ ಕಾಣಿಸುತ್ತಿದ್ದಾರೆ. ಜನರನ್ನು ,ಅವರ ಗಮನವನ್ನು ಬೇರೆಡೆಗೆ ಸೆಳೆಯದಂತೆ ಎಷ್ಟು ಪ್ರಯತ್ನಗಳು ನಡೆದಿರುತ್ತವೆ ಎಂದರೆ, ಊರಿನಲ್ಲಿ ಎಲೆಕ್ಷನ್ ಇರಲಿ ,ಇಲ್ಲದಿರಲಿ ,ಧಣಿ- ರಾಜಕಾರಣಿಯ ವಿವಿಧ ರೀತಿಯ ಬಣ್ಣಬಣ್ಣದ ಕಟೌಟುಗಳು ದಾರಿಯುದ್ದಕ್ಕೂ ರಾರಾಜಿಸುತ್ತವೆ. ಪ್ರತಿವಾರವೂ ಕಟೌಟ್ಗಳು ಬದಲಾಗುತ್ತಲೇ ಇರುತ್ತದೆ.

ಇನ್ನು ಕೆಲ ಸಾಹುಕಾರ ಗಳಂತೂ ತಾವೇ ಆಧುನಿಕ ಶ್ರೀ ಕೃಷ್ಣದೇವರಾಯ ಎಂದು ಭಾವಿಸಿ ,ಅವನಂತೆಯೇ ವೇಷಧರಿಸಿ ನಿಂತು ಬೃಹತ್ ಕಟೌಟುಗಳನ್ನು ನಗರದ ವಿವಿಧ ಕಡೆಗಳಲ್ಲಿ ನಿಲ್ಲಿಸಲಾಯಿತು.ಬಳ್ಳಾರಿಯ ಗಣಿಧಣಿಗಳದ್ದೂ ಇನ್ನೊಂದು ರೀತಿ.ಮುಂಜಾನೆಯ ಟಿಫನ್ನಿಗೆ ಬೆಂಗಳೂರಿನ ಎಂ.ಟಿ.ಆರ್.ಹೋಟೆಲ್ಲಿಗೆ ಹೆಲಿಕಾಪ್ಟರ್ ನಲ್ಲಿ ಹೋದರೆ,ಅದಕ್ಕೂ ಮುನ್ನ ಹೆಲಿಕಾಪ್ಟರ್ ನಲ್ಲಿ ಹೈದರಾಬಾದ್ ವರೆಗೂ ವಾಕಿಂಗ್ ಹೋಗುವವರಿದ್ದರು.ವಿಮಾನದಲ್ಲಿ ಮಧ್ಯಾನ್ಹದ ಊಟಕ್ಕೆ ಬೊಂಬಾಯಿಗೆ ಹೋಗುತ್ತಿದ್ದರು.ರಾತ್ರಿ ಮತ್ತೆಲ್ಲಿಗೋ…!ಎಷ್ಟೋ ಜನ ಸಿನಿಮಾದವರು ರಾತ್ರೋರಾತ್ರಿ ಬಂದುಹೋಗುವುದನ್ನು ನೋಡಿದವರು ಇದ್ದರು.

ಲೋಲುಪತೆಗೆ ಜನರ ಬದುಕನ್ನೆ ಆಹುತಿ ತೆಗೆದುಕೊಂಡ ಧಣಿಗಳು,ಕೊನೆಗೆ ಜನರು ತಮ್ಮ ಕಡೆಗೆ ದೃಷ್ಟಿ ಹರಿಸಲೆಂದು ಸದಾ ಒಂದಿಲ್ಲೊಂದು ಸುದ್ದಿಯಿಂದ ಜನರನ್ನು ಭ್ರಮಾಲೋಕದಲ್ಲಿ ತಿರುಗುವಂತೆ ನೋಡಿಕೊಂಡರು.”ಸಾಮೂಹಿಕ ಮದುವೆ”ಗಳಂತಹ ಕೃತ್ರಿಮ ಕಾರ್ಯಕ್ರಮಗಳಿಗೆ ಕೈ ಹಾಕಿದರು.ಆ ಮೂಲಕ ಅಲ್ಲಿ ಬಂದ ವಧು-ವರರಿಗೆ ತಾಳಿ- ಬಟ್ಟೆ ಕೊಡುವುದರ ಮೂಲಕ “ದಾನಶೂರ”ರು ಎನಿಸಿಕೊಂಡರು.ಆದರೆ ಇಂತಹ ವಿವಾಹಗಳು ಹೆಸರಿನಲ್ಲಿ ಜನರು ಪ್ರಶ್ನೆ ಕೇಳುವುದನ್ನು,ಆಲೋಚನೆಯನ್ನೆ ಮಾಡದಿರುವ ಹಾಗೆ,ಅರ್ಥಮಾಡಿಕೊಳ್ಳುವ ಅವರು ಗುಣವನ್ನೆ ನಾಶಪಡಿಸಲಾಯಿತು.ಇಂತಹ ಗಣಿಧಣಿಗಳ ಭಿಕ್ಷೆಗೆ ಕೆಲ ಮಠಾಧೀಶರು ಕೈಚಾಚಿದರು.

ಜನರ ಬದುಕು ಕುಸಿಯಲು ಎಷ್ಟೊಂದು ಜನ ಒಂದಾದರು?
ನೆನೆಸಿಕೊಂಡರೆ ರೋಷ ಆವೇಶವೂ ಅಂತಕರುಣೆಯೂ ಒಟ್ಟಿಗೆಉಕ್ಕಿಬರುತ್ತದೆ.

ಜಿಲ್ಲೆಯ ಗಡಿಪ್ರದೇಶದ ಒಂದು ಬಹುಮುಖ್ಯವಾದ ಹಳ್ಳಿ ಕಮ್ಮತ್ತೂರು. ಈ ಊರಿನಲ್ಲಿ ನಡೆದಷ್ಟು ಗಣಿಗಾರಿಕೆ ಮತ್ತು ಡಿಪ್ಪಿಂಗ್ ಬೇರೆಲ್ಲೂ ನಡೆದಿರಲಿಕ್ಕಿಲ್ಲ .ಊರಿನ ಮನೆ ಗಳಿಗಿಂತಲೂ ಅಧಿಕವಾದ ಸ್ಟಾಕ್ ಯಾರ್ಡ್ಗಳು ನಿರ್ಮಾಣವಾದವು. ಧೂಳಿನಿಂದಾಗಿ ಮತ್ತು ವಿಪರೀತ ಶಬ್ದದಿಂದಾಗಿ ಅಸ್ತಮಕ್ಕೆ, ಕಿವುಡುತನಕ್ಕೆ ಬಲಿಯಾದವರಿಗೆ ಲೆಕ್ಕವಿಲ್ಲ. ಅಪರಿಮಿತ ಗಣಿಗಾರಿಕೆಯ ಪ್ರಭಾವದಿಂದಾಗಿ ಆಕ್ಸಿಜನ್ ಪ್ರಮಾಣ ಕುಸಿತ ಕಂಡಿತು. ಇಡೀ ಊರಿಗೆ ಊರೇ ಐಸಿಯುನಲ್ಲಿ ಇರುವಂತೆ ಭಾಸವಾಗುತ್ತಿದೆ.ಇಂತಹ ಎಷ್ಟೋ ಹಳ್ಳಿಗಳು ಉಸಿರಾಡಲು ಕಷ್ಟಪಡುತ್ತಿವೆ.

ಒಂದು ಕಾಲದ ರೈತ ಹೊಲ, ಗದ್ದೆ, ಮಣ್ಣನ್ನು ಪೂಜಿಸುತ್ತಿದ್ದ. ಆರಾಧಿಸುತ್ತಿದ್ದ .ಗುಡ್ಡಬೆಟ್ಟ ಸೂರ್ಯ ಚಂದ್ರ ತಾರೆಯರೇ ಆತನ ದೇವರುಗಳಾಗಿದ್ದವು. ದುಡಿಮೆಯೇ ಆತನ ಸಂಪತ್ತು. ಇಂತಹ ಕುಟುಂಬಗಳು ಇಲ್ಲದ, ಪ್ರಕೃತಿಯೂ ಇಲ್ಲದ ,ಅಭಿಶಾಪದ ಊರುಗಳಲ್ಲಿ ಶಾಪಗ್ರಸ್ತರಂತೆ ಮತ್ತೊಮ್ಮೆ ಯುದ್ಧಕ್ಕೆ ಹೊರಟ ಕೆಂಪು ಸೈನಿಕರಂತೆ ಇಲ್ಲಿನ ಜನ ಕಾಣಿಸುತ್ತಾರೆ.

ಎಲ್ಲಾ ಮುಗಿದ ಮೇಲೆ ಊರ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ದಿನಾಂಕ: 6 -10-2016 ರಂದು ಸರ್ಕಾರ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ ಆದೇಶಿಸಿತು.

ಕಾಲವೀಗ ತಣ್ಣಗೆ ನಿಶ್ಯಬ್ದ..!

ಯಾರದ್ದೋ ಹೆಣವೊಂದು ಸದ್ದಿಲ್ಲದೆ ಬಿದ್ದುಕೊಂಡಿರುವ, ಇನ್ನೂ ಯಾರೋ ಬರುವವರಿದ್ದಾರೆ ಎಂದು ಹೆಣವನ್ನು ಎತ್ತದೆ, ಕಾದು ಕುಳಿತಿರುವಂತೆ ಸೊಂಡೂರಿನ ಬೀದಿಗಳಿವೆ.

ಬಡತನದ ರೇಖೆಗಳನ್ನೆಲ್ಲಾ ಮೈಮೇಲೆ ಹೊದ್ದು ಕುಳಿತವರಂತೆ ಕಾಣುವ ಮುದುಕರು ,ಸಾಯಲಿಕ್ಕೂ ಆಗದೆ ಬದುಕಲೂ ಆಗಿದೆ, ದುಸ್ಥಿತಿಗೆ ಕಾರಣವನ್ನು ಹುಡುಕುತ್ತಿರುವವರ ಹಾಗೆ ಹಣೆಗೆ ಕೈ ಹಚ್ಚಿ ಕುಳಿತ ದೃಶ್ಯಗಳು ಹೃದಯವನ್ನು ಕಲಕುತ್ತದೆ .ಇದು ನಾಗರಿಕ ಸಮಾಜವೊಂದು ತನ್ನದೇ ಊರಿನ ಸಮುದಾಯವನ್ನು ಚಿತ್ರಹಿಂಸೆಗೆ ಒಳಪಡಿಸಿದ ಹಾಗೆ.ನಾನು ಕಂಡು ಮಾತನಾಡಿಸಿದರವಲ್ಲಿ ” ನನ್ನ ಹಣೆಬರಹ…ನೋಡಪಾ, ಅಲಸಂದಿ,ಅವರೆ,ಜ್ವಾಳ,ನವಣಿ,
ಸಜ್ಜಿ ಬೆಳೀತಿದ್ದೆ. ಏಪೆಂಪ್ಸಿಗೆ ಹಾಕಿ ರೊಕ್ಕ ಎಣಿಸ್ಕಂಡು ಬರ್ತಿದ್ದೆ.ಮಕ್ಕಳು ಮೀರಿ ಎಲ್ಲ ಆರಾಮಾಗಿದ್ವಿ…ಮೈನ್ಸು ಮೈನ್ಸೂ ಅಂತಂದು ಮೈಯೆಲ್ಲಾ ತಗಂಬುಡ್ತು ನನ್ನಪ್ಪನೆ” ಎಂದು ವಿಷಾದದಿಂದ ಹೇಳುತ್ತಾರೆ.

ದೂರದ ಊರುಗಳ ಗೆಳೆಯರಿಗೆ ಸೊಂಡೂರು ಎನ್ನುವುದು ಸುಂದರ ಸ್ವಪ್ನದ ಹಾಗೆ, ಕಾಡುತ್ತಲೇ ಇರುತ್ತದೆ. ಗಣಿಗಾರಿಕೆಯಿಂದ ರಾಜ್ಯ,ದೇಶ ವ್ಯಾಪಿ ಸುದ್ದಿಯಾಗಿ, ಅಂತರಾಷ್ಟ್ರೀಯ ಪ್ರಖ್ಯಾತಿಯನ್ನು ಗಳಿಸಿಬಿಟ್ಟಿತು. ಈಗಲೂ ‘ಚುನಾವಣೆ ‘ಎಂಬ ಶಬ್ದ ಕೇಳಿದರೆ ಸಾಕು, ಜನರ ಕಣ್ಣಲ್ಲಿ ಹೊಳಪು ಮೂಡುತ್ತದೆ. ಬಾಯಲ್ಲಿ ನೀರೂರುತ್ತದೆ. ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬ ಎಂದು ನಾವು ಭಾವಿಸಿದ್ದು ,ಇಲ್ಲಿ ಅಣಕದಂತೆ ಭಾಸವಾಗುತ್ತಿದೆ.

*******

ಆದರೆ ,ಅಭಿವೃದ್ಧಿಯ ದೃಷ್ಟಿಯಿಂದ ಹೊರಗಿನ ಪ್ರಪಂಚಕ್ಕೆ ಸಾಕಷ್ಟು ಶ್ರೀಮಂತ, ಎಲ್ಲಾ ಬ್ರಾಂಡೆಡ್ ಕಂಪನಿಗಳ ಅಂಗಡಿಗಳಿರುವ ಹೊಸಪೇಟೆ-ಬಳ್ಳಾರಿಯಂತಹ ಊರುಗಳಲ್ಲಿ ಸ್ಟಾರ್ ಹೋಟೆಲ್ಗಳು ನಡೆಯುತ್ತಿವೆ. ಸೊಂಡೂರಿನ ಗಾಂಧಿ ಕರಕುಶಲ ಕೈಗಾರಿಕಾ ಕೇಂದ್ರಕ್ಕೂ ಬೀಗ ಬಿದ್ದಿದೆ.

ಹೌದು, ಅಭಿವೃದ್ಧಿಯೆಂದರೆ ಈ ಪ್ರದೇಶಗಳ ಜನತೆ ಹಸಿವಿನಿಂದ ಸ್ವಾತಂತ್ರ್ಯ ಪಡೆದಿದ್ದಾರೆಯೆ ?ಲಿಂಗ ಅಸಮಾನತೆಯಿಂದ ಸಾಮಾಜಿಕ ಅಸಮಾನತೆಯ,ಅವಮಾನಳಿಂದ ಸ್ವಾತಂತ್ರ್ಯ ಪಡೆದಿದ್ದಾರೆಯೆ ?ಎನ್ನುವ ಅಮರ್ತ್ಯಸೇನರು ಕೇಳುವ ಪ್ರಶ್ನೆಗಳನ್ನು ಕೇಳಿಕೊಂಡರೆ…ಎಲ್ಲಾ ಪ್ರಶ್ನೆಗಳಿಗೂ “ಇಲ್ಲ”ಎಂಬ ರೆಡಿ ಉತ್ತರ ದೊರಕುವುದು.

ಈ ಎಲ್ಲಾ ಸ್ವಾತಂತ್ರ್ಯಗಳನ್ನು ಯಾರೋ ಕೊಡಲು ಸಾಧ್ಯವಿಲ್ಲ.ಅವರು ಪಡೆದುಕೊಳ್ಳುವ ಸಾಮರ್ಥ್ಯವನ್ನು ನಿರ್ಮಾಣ ಮಾಡುವುದು ನಮ್ಮ ನಿಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ.

***

ವಯಸ್ಸಾಗಿ ಮುದುಕರಾದಾಗ ಮೂಲೆಯಲ್ಲಿ ಎಲ್ಲೋ ಒಂದು ಕಡೆ ಕುಳಿತು ಅಂತರ್ಮುಖಿಗಳಾಗಿಬಿಡುವುದು ವಯೋಸಹಜ ಗುಣ. ಆದರಿಲ್ಲಿ ಮಕ್ಕಳೂ ಅಂತರ್ಮುಖಿಗಳಾದರೆ… ?ಕಥೆಗಳು ಬೆಂಕಿಯ ಕೆನ್ನಾಲಗೆ ಹಾಗೆ ಸುಡುತ್ತಿವೆ. ಈ ಜನಗಳು ಅನುಭವಿಸಿದ, ಅನುಭವಿಸುತ್ತಿರುವ ಕರಾಳ ನೋವುಗಳನ್ನು ಹಿಡಿದಿಡಲು ಒಂದು ಜೀವನ ಸಾಕಾಗುವುದಿಲ್ಲ ಎನಿಸುತ್ತಿದೆ.

ಇಲ್ಲಿನ ಎಲ್ಲಾ ಅಕ್ಷರಗಳು ವರ್ತಮಾನದ ಒತ್ತಡಗಳಿಂದಲೇ ಬಂದಿರುವುವು ಎಂದೇ ಭಾವಿಸಿದ್ದೇನೆ. ಹಿಂದಿನಿಂದಲೂ ನನ್ನನ್ನು ಕಾಡುತ್ತಿದ್ದ ಘಟನೆಗಳು, ನಂತರದಲ್ಲಿ ಗಣಿಗಾರಿಕೆಯೆಂಬ ಪೀಕ್ ಅವಧಿಯಲ್ಲಿನ ಘಟನೆಗಳು ,ಜನರ ಬದುಕು, ನಂತರದ ದಿನಗಳಲ್ಲಿ ಅಕ್ರಮ ಗಣಿಗಾರಿಕೆಯಿಂದ ಬೀದಿಪಾಲಾದ ಕುಟುಂಬಗಳ ರೋದನವನ್ನು ಕೆಲಮಟ್ಟಿಗಾದರೂ ತಿಳಿಸಬೇಕಿತ್ತು.

ಬರಹಗಾರನೊಬ್ಬ ಯಾಕೆ ಬರೆಯುತ್ತಾನೆ ಎಂಬುದನ್ನು ಪೂರ್ಣ ಅರ್ಥಮಾಡಿಸಿದ್ದು ಈ ಬರಹಗಳೆ.ಎದೆಯ ಮೂಲೆಯಲ್ಲಿ ಅಡಗಿದ್ದ ಭಾವಗಳು ಕಾಡಿದಾಗಲೆಲ್ಲ ಸಣ್ಣ ಸಣ್ಣ ಚೀಟಿಗಳಲ್ಲಿ ಬರೆದು,ಇತ್ತೀಚೆಗೆ ಮೊಬೈಲಿನಲ್ಲಿ ಟೈಪಿಸಿ ಕೊಂಡು ನಿರಾಳವಾಗುತ್ತಿದ್ದೆ.ಬಹಳ ವರ್ಷಗಳ ಹಿಂದಿನಿಂದಲೂ ಹಿಡಿದಿಟ್ಟುಕೊಂಡಿದ್ದ ಕರಾಳ ಸತ್ಯಗಳನ್ನು ಬರೆಯುವಾಗ ಕಣ್ಣು ಮುಂಜಾದದ್ದು,ಎದೆ ಭಾರವಾದದ್ದೂ ಇದೆ.ಸಾಮಾನ್ಯ ಕೃಷಿಕನೋರ್ವ ಕಣ್ಣೆದುರೇ ಹುಚ್ಚನಾಗಿ ತಿರುಗಾಡುವಾಗ ತುಂಬಾ ಡಿಸ್ಟರ್ಬ್ ಆಗಿದ್ದಿದೆ.

ಹೀಗೆ ನನ್ನನ್ನು ,ಡಿಸ್ಟರ್ಬ್ ಮಾಡಿದ ಈ ಭಾವಗಳು ನನ್ನ ಎದೆಯಿಂದ ಹಾರಿ ಹೀಗೆ ಹೊರಬರುವ ತನಕವೂ ಸಮಾಧಾನವಿದ್ದಿಲ್ಲ.ನಾನು ಸಾಮಾಜಿಕ ಜವಾಬ್ದಾರಿಯೊಂದಿಗೆ ನನಗನಿಸಿದ ಭಾವಗಳನ್ನು ಹೊರಹಾಕಿರುವೆ…..ನಿಟ್ಟುಸಿರಿನೊಂದಿಗೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ3 days ago

ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ

ಸುದ್ದಿದಿನ, ಚನ್ನಗಿರಿ (ಬಸವಾಪಟ್ಟಣ) : ಭಾರತೀಯ ಸಮಾಜದಲ್ಲಿ ಮೀಸಲಾತಿಯಿಂದ ಮಾತ್ರ ಮಹಿಳಾ ಪ್ರಗತಿ ಸಾಧ್ಯವಿಲ್ಲ. ಅವಳಿಗೆ ಪುರುಷನಂತೆ ಸಮಾನವಾದ ಪ್ರಾತಿನಿಧ್ಯ ನೀಡಿದಲ್ಲಿ‌ ಮಾತ್ರವೇ ಮಹಿಳಾ ಪ್ರಗತಿ ಸಾಧ್ಯ....

ದಿನದ ಸುದ್ದಿ4 days ago

ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್

ಸುದ್ದಿದಿನ,ದಾವಣಗೆರೆ : ಸಂವಿಧಾನ ಪೂರ್ವದ ಭಾರತದ ಸ್ಥಿತಿಗತಿ ಹಾಗೂ ಸಂವಿಧಾನದ ನಂತರ ಭಾರತದಲ್ಲಾದ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಬದಲಾವಣೆಗ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಾಗೆಯೇ...

ದಿನದ ಸುದ್ದಿ6 days ago

ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು

ಪುರಂದರ್ ಲೋಕಿಕೆರೆ ಸುದ್ದಿದಿನ, ದಾವಣಗೆರೆ : ಸರ್ಕಾರದ ಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಇಲಾಖೆಯ ಚಿತಾವಣೆಗೆ ಸೆಡ್ಡು ಹೊಡೆದು ಕೇವಲ 110-120 ದಿನಗಳ ಒಳಗಾಗಿಅಲ್ಪಾವಧಿ ತಳಿ ನಾಟಿ...

ದಿನದ ಸುದ್ದಿ6 days ago

ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ

ಸುದ್ದಿದಿನ, ಚನ್ನಗಿರಿ : ಪಟ್ಟಣದ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ತಮ್ಮ ಸೇವಾ ಖಾಯಂಯಾತಿ ಆಗಿ ಸರ್ಕಾರಕ್ಕೆ ಒತ್ತಾಯಿಸಿ ಶುಕ್ರವಾರ...

ದಿನದ ಸುದ್ದಿ1 week ago

ದೇಹದಾಡ್ಯ ಸ್ಪರ್ಧೆ | ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರೇಮ್ ಕುಮಾರ್ ಗೆ ‘ಮಿಸ್ಟರ್ ದಾವಣಗೆರೆ’ ಪ್ರಶಸ್ತಿ

ಸುದ್ದಿದಿನ, ಚನ್ನಗಿರಿ : ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿ ಪ್ರೇಮ್ ಕುಮಾರ್ ದಾವಣಗೆರೆ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಸರ್ಕಾರಿ ಪ್ರಥಮ...

ದಿನದ ಸುದ್ದಿ1 week ago

‘ಸಪ್ತ ಸಾಗರದಾಚೆ ಎಲ್ಲೋ – ಸೈಡ್‍ ಬಿ’ ಚಿತ್ರದ ಟಿಕೆಟ್‍ ಮೇಲೆ ಶೆ.20ರಷ್ಟು ಕಡಿತ

ಸುದ್ದಿದಿನ ಡೆಸ್ಕ್ : ರಕ್ಷಿತ್‍ ಶೆಟ್ಟಿ ಮತ್ತು ರುಕ್ಷಿಣಿ ವಸಂತ್‍ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್‍ ಬಿ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿ, ಯಶಸ್ವಿಯಾಗಿ...

ದಿನದ ಸುದ್ದಿ1 week ago

‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿದ ಮೊದಲ‌ ಪ್ರೇಕ್ಷಕ ದರ್ಶನ್

ಸುದ್ದಿದಿನ ಡೆಸ್ಕ್ : ಸೂರಿ ನಿರ್ದೇಶನದಲ್ಲಿ ಅಭಿಷೇಕ್‍ ಅಂಬರೀಶ್‍ ಅಭಿನಯಿಸಿರುವ ‘ಬ್ಯಾಡ್‍ ಮ್ಯಾನರ್ಸ್’ ಚಿತ್ರವು ಇದೇ ನ.24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಇತ್ತೀಚೆಗೆ ಚಿತ್ರತಂಡ ಆಯೋಜಿಸಿದ್ದ...

ದಿನದ ಸುದ್ದಿ2 weeks ago

ಕವಿತೆ | ಮಣ್ಣ ಮಕ್ಕಳು

ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ ಮಣ್ಣ ಮಕ್ಕಳು ನಾವು ಹಗಳಿರುಳೆನ್ನದೆ ಬೆವರು ಬಸಿದು ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ...

ದಿನದ ಸುದ್ದಿ2 weeks ago

10,000 ಅಡಿ ಉದ್ದದ ‘ಘೋಸ್ಟ್’ ಪೋಸ್ಟರ್ ಬಿಡುಗಡೆ

ಸುದ್ದಿದಿನ ಡೆಸ್ಕ್ : ಶಿವರಾಜಕುಮಾರ್‍ ಅಭಿನಯದ ‘ಘೋಸ್ಟ್’ ಚಿತ್ರವು ಈಗಾಗಲೇ ನವೆಂಬರ್‌ 17ರಂದು ಜೀ5ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಪ್ರಮೋಷನ್ಗೆ ಬರೋಬ್ಬರಿ 10 ಸಾವಿರ ಚದರ ಅಡಿಯ...

ದಿನದ ಸುದ್ದಿ2 weeks ago

ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ. ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು...

Trending