Connect with us

ದಿನದ ಸುದ್ದಿ

ಮತ್ತಿ ಗ್ರಾಮ ಪಂಚಾಯಿತಿಯಿಂದ ನನಗೆ ನ್ಯಾಯ ಕೊಡಿಸಿ : ಬಿ. ನಾಗರತ್ನಮ್ಮ ಮನವಿ

Published

on

ನನ್ನ ಹೆಸರು ಬಿ. ನಾಗರತ್ನಮ್ಮ. 76ರ ವಯೋವೃದ್ಧೆಯಾದ ನಾನು ಪ್ರಸ್ತುತ ದಾವಣಗೆರೆ ವಿನೋಬನಗರದ ಬಾಡಿಗೆ ಮನೆ ನಿವಾಸಿ. 2008 ರಲ್ಲಿ ಆಧ್ಯಾತ್ಮ ಮಂದಿರ ನಿರ್ಮಾಣದ ಉದ್ದೇಶದಿಂದ ದಾವಣಗೆರೆ ತಾಲ್ಲೂಕು ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ತಿಮ್ಮಪ್ಪನ ಕ್ಯಾಂಪ್ ನಲ್ಲಿ ಸರ್ಕಾರಿ ಜಾಗದಲ್ಲಿ ಖಾತಾ ಸಂಖ್ಯೆ 154/1 , 30 x 40 ಅಳತೆಯ ನಿವೇಶನ ಮಂಜೂರು ಮಾಡಿಸಿಕೊಂಡು, ಈವರೆಗೂ ನಿವೇಶನ ಕಂದಾಯ ಪಾವತಿಸುತಿದ್ದೇನೆ.

ಆದರೆ ಆಗಿನ ಗ್ರಾಪಂ ಅಧಿಕಾರಿಗಳು ತೋರಿಸಿದ್ದ ಜಾಗದಲ್ಲಿ ಈಗ ನನ್ನ ಹೆಸರಿಗೆ ಜಾಗವೇ ಇಲ್ಲ. ನನ್ನ ಖಾತಾ ಎಕ್ಸಾಟ್ರಕ್ಷನ್ ನಲ್ಲಿ ನಮೂದಿಸಿರುವ ಚಕ್ಕುಬಂದಿ ಪ್ರಕಾರ ನನಗೆ ತೋರಿಸಿರುವ ಅಳತೆಯ ಜಾಗವೇ ಇಲ್ಲ. ಹಕ್ಕುಪತ್ರವನ್ನು ಸಹ ನೀಡಿಲ್ಲ. 76 ವರ್ಷದ ಇಳಿವಯಸ್ಸಿನ ನಾನು ಈ ಸಂಬಂಧ ಹಲವಾರು ವರ್ಷ ಅಲೆದಾಡಿ ಸಾಕಾಗಿ ಬೇಸತ್ತು ಹೋಗಿದೆ. ಅತ್ತ ಕಂದಾಯದ ಹಣ ಮತ್ತು ಅಧಿಕಾರಿಗಳ ಬಳಿ ಅಡ್ಡಾಡಿದ ಪ್ರಯಾಣದ ವೆಚ್ಚ ಎರಡೂ ಸಹ ನೀರಿನಲ್ಲಿ ಹೋಮ ಆದಂತಾಗಿ ಕಂಗಾಲಾಗಿದ್ದೇನೆ.

ಈ ಸಂಬಂಧ ಮಾನ್ಯ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಕಂದಾಯ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಹಾಗೂ ಮಾಧ್ಯಮ ಬಂಧುಗಳು ಮತ್ತಿ ಗ್ರಾಪಂನಿಂದ ನನಗೆ ನ್ಯಾಯ ದೊರಕಿಸಿಕೊಡಬೇಕಾಗಿ ಈ ಮೂಲಕ ಕಳಕಳಿಯ ಪ್ರಾರ್ಥನೆ.

ವಿವರ

ನನ್ನ ದೀಕ್ಷಾ ಗುರುಗಳ ಹೆಸರಿನಲ್ಲಿ ” ಪೂಜ್ಯ ಶ್ರೀ ಕೆ. ಎನ್ ಸ್ವಾಮಿ ಅವಧೂತರ ಆಧ್ಯಾತ್ಮ ಮಂದಿರದ ” ಮೂಲಕ 40 ವರ್ಷಗಳಿಂದ ಆಧ್ಯಾತ್ಮ ಸೇವೆಯಲ್ಲಿ ತೊಡಗಿರುವ ನಾನು ಗುರುಗಳಿಂದ ಕಲಿತ ಬ್ರಹ್ಮ ಜ್ಞಾನ, ಕಾಲಜ್ಞಾನ, ಕಾಲನಿರ್ಣಯ, ಸಾಂಖ್ಯಾ ತಾರಕ, ಛಾಯಾಪುರುಷ ಲಕ್ಷಣ ಇತ್ಯಾದಿ ಆಧ್ಯಾತ್ಮ ಬೋಧನೆ ಮೂಲಕ ಆತ್ಮೋನ್ನತಿಯ ಸೇವೆಯಲ್ಲಿ ತೊಡಗಿದ್ದೇನೆ. ಅಲ್ಲದೆ ವಿಷಜಂತು ಕಡಿದವರಿಗೆ ಗಿಡಮೂಲಿಕೆಯ ಔಷಧ ನೀಡಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದವರ ಜೀವ ಉಳಿಸುವ ಕೈಂಕರ್ಯವನ್ನೂ ಹಲವು ವರ್ಷಗಳಿಂದ ಮಾಡುತ್ತಲೇ ಇದ್ದೇನೆ.

ವೃದ್ಧಾಪ್ಯದ ಕಾರಣ ಒಂದು ಕಡೆ ನೆಲೆನಿಂತು ಈ ಸೇವೆಯನ್ನು ಸುಗಮವಾಗಿ ನೆರವೇರಿಸಿಕೊಂಡು ಹೋಗುವ ಸಂಕಲ್ಪದೊಂದಿಗೆ 2008 ರಲ್ಲಿ ಪರಿಚಿತರೊಬ್ಬರ ಸಹಕಾರದೊಂದಿಗೆ ಅರ್ಜಿ ಸಲ್ಲಿಸಿ ಆಗ ಬಿಲ್ ಕಲೆಕ್ಟರ್ ಆಗಿದ್ದ ನಾಗರಾಜ್ ಎಂಬುವರು ತೋರಿಸಿದ ಅನ್ವಯ ಮತ್ತಿಯಿಂದ 2 ಕಿಮೀ ದೂರದಲ್ಲಿರುವ ತಿಮ್ಮಪ್ಪನ ಕ್ಯಾಂಪ್ ನ ಶ್ರೀ ಸಿದ್ಧಾರೂಢ ಆಶ್ರಮದ ಪಕ್ಕ ತಾತ್ಕಾಲಿಕವಾಗಿ ಮುಂಡದ ಕಟ್ಟಿಗೆಯ ನೆರೆಕೆ ಮನೆ ನಿರ್ಮಿಸಿಕೊಂಡು ಒಬ್ಬಂಟಿಯಾಗಿ ಸೇವಾ ಕಾರ್ಯ ಮುಂದುವರಿಸುತಲಿದ್ದೆ .

ಆಗ ಆ ಸ್ಥಳ ನಿರ್ಜನ ಪ್ರದೇಶವಾಗಿತ್ತು. ನಮ್ಮ ಆಶ್ರಮ ಬಿಟ್ಟರೆ ಬೇರಾವ ಮನೆಗಳೂ ಇರಲಿಲ್ಲ. 2013ನೇ ಇಸವಿಯಲ್ಲಿ ಒಮ್ಮೆ ನನಗೆ ಅತೀವ ವಾಂತಿ, ಭೇದಿ, ಜ್ವರ ಉಂಟಾದ ಕಾರಣ ನನ್ನ ಚಿಕ್ಕ ಮಗಳಾದ ಶ್ರೀಮತಿ ಕಲ್ಪನಾ ನನ್ನನ್ನು ದಾವಣಗೆರೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಸುಶ್ರೂಷೆ ಮಾಡಿಸಿದಳು. ವಯಸ್ಸಾದ ನೀನು ಮತ್ತಿ ಕ್ಯಾಂಪ್ ನಲ್ಲಿ ಒಬ್ಬಂಟಿಗಳಾಗಿ ಇರುವುದು ಬೇಡ.

ವಾರಕ್ಕೊಮ್ಮೆ ತಿಮ್ಮಪ್ಪನ ಕ್ಯಾಂಪ್ ಗೆ ಹೋಗಿ ಸೇವಾ ಕಾರ್ಯ ಮುಗಿಸಿ ಬಾ ಎಂದು ಒತ್ತಾಯಿಸಿ ಕೆಲವು ದಿನಗಳ ಕಾಲ ತನ್ನೊಂದಿಗೆಯೇ ಇರಿಸಿಕೊಂಡಳು. ಹಾಗಾಗಿ ಅಂದಿನಿಂದ ನಾನು ವಾರಕ್ಕೆ ಒಂದೆರಡು ಬಾರಿ ಅಲ್ಲಿಗೆ ಹೋಗಿ ಬರತೊಡಗಿದೆ. ಆದರೆ 2014 ರಲ್ಲಿ ಒಂದು ದಿನ ಇದ್ದಕ್ಕಿದ್ದ ಹಾಗೇ ತಿಮ್ಮಪ್ಪನ ಕ್ಯಾಂಪ್ ನ ಸಿದ್ಧಾರೂಢ ಮಠದ ಪಕ್ಕ ಇದ್ದ ನನ್ನ ನೆರಕೆ ಮನೆ ಕಾಣೆಯಾಗಿತ್ತು. ಯಾರು ಕೆಡವಿದ್ದಾರೆಂದು ಪತ್ತೆಯಾಗಲೇ ಇಲ್ಲ. ಈ ವಿಚಾರವನ್ನು ಮತ್ತಿ ಗ್ರಾಮ ಪಂಚಾಯಿತಿಗೆ ತಿಳಿಸಿದರೆ ನಾವೆಲ್ಲಾ ಸರಿಪಡಿಸುತ್ತೇವೆ ಎಂದು ತಿಳಿಸಿದರೆ ಹೊರತು ಸಮಸ್ಯೆ ನಿವಾರಣೆಯಾಗಲಿಲ್ಲ.

ಅಂದಿನಿಂದ ಪ್ರಯತ್ನಿಸುತ್ತಲೇ ಇದ್ದ ನಾನು 2020 ರಲ್ಲಿ ಕಂದಾಯ ಪಾವತಿಸಲು ಮತ್ತಿ ಗ್ರಾಪಂ ಗೆ ತೆರಳಿದ ಸಮಯದಲ್ಲಿ ಇನ್ನು ಮುಂದೆ ಭಕ್ತರ ಸಹಾಯದೊಂದಿಗೆ ನಾನು ತಿಮ್ಮಪ್ಪನ ಕ್ಯಾಂಪ್ ನಲ್ಲಿಯೇ ನೆಲೆಸಿ ಆಧ್ಯಾತ್ಮ ಸೇವೆ ಮಾಡುವುದಾಗಿ ತೀರ್ಮಾನಿಸಿ ” ಈ ಸ್ವತ್ತಿಗೆ ” ಅರ್ಜಿ ಹಾಕುವ ಕುರಿತು ಮಾಹಿತಿ ಕೇಳಿದಾಗ ಸತ್ಯಾಂಶ ಬೆಳಕಿಗೆ ಬಂದಿತು.

ಆಗ ನಾವು ಜಾಗ ಅಳತೆ ಮಾಡಿ ಕೊಡುವಂತೆ ಅರ್ಜಿ ಹಾಕಿದೆವು. ಆದರೆ ನಿಮ್ಮ ಜಾಗ ಎಲ್ಲಿದೆ ನೀವೇ ತೋರಿಸಿ ಎಂದು ಕೇಳುವ ಮತ್ತಿ ಗ್ರಾಪಂ ಅಧಿಕಾರಿಗಳು , ನಾವು ಇಲ್ಲಿ ಮಂಜೂರು ಮಾಡಿರುವ ಎಲ್ಲರಿಗೂ ಹಕ್ಕುಪತ್ರ ನೀಡಿದ್ದೇವೆ. ನಿಮ್ಮ ಹೆಸರಿನಲ್ಲಿ ನಿವೇಶನ ಮಂಜೂರು ಆಗಿದ್ದಲ್ಲಿ ನಿಮಗೂ ಹಿಂದಿನ ಅಧಿಕಾರಿಗಳು ಹಕ್ಕು ಪತ್ರ ನೀಡಿರಬೇಕಲ್ಲವೇ.

ಹಕ್ಕುಪತ್ರ ತೋರಿಸದಿದ್ದರೆ ನಾವು ಎಲ್ಲಿಂದ ತಂದು ಕೊಡಬೇಕು ಎಂದು ನಮ್ಮನ್ನೇ ಅನುಮಾನಿಸುವ ರೀತಿ ಈಗಿನ ಅಧಿಕಾರಿಗಳು ಪ್ರಶ್ನಿಸಿ ವಾಪಸ್ ಕಳುಹಿಸಿದ್ದಾರೆ. ಅದರೆ ನಾನು ಹಲವಾರು ವರ್ಷಗಳಿಂದ ಮತ್ತಿ ಗ್ರಾಪಂ ಅಧಿಕಾರಿಗಳ ಬಳಿ ಹೋಗಿ ಸತತವಾಗಿ ಪ್ರಯತ್ನಿಸಿದರೂ ಅಂದಿನ ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳಿ ಮುಂದೆ ತಳ್ಳುತ್ತಲೇ ಬಂದರು.

ನಮ್ಮ ಹೆಸರಿನಲ್ಲಿ ಜಾಗವೇ ಇಲ್ಲವೆಂದ ಮೇಲೆ ಈವರೆಗೂ ಪ್ರತಿವರ್ಷ ಕಂದಾಯ ಪಾವತಿಸಿಕೊಂಡದ್ದು ಹೇಗೆ ? ವಯೋವೃದ್ಧಳಾದ ನಾನು ಇದಕ್ಕಾಗಿ ಹಲವಾರು ವರ್ಷಗಳಿಂದ ವಿವಿಧ ಕಚೇರಿ ಮತ್ತು ಅಧಿಕಾರಿಗಳ ಬಳಿ ಅಲೆದಾಡಿ ಸೋತು ಹೋಗಿದ್ದೇನೆ. ಅಲ್ಲದೆ ವಿಪರೀತ ಹಣ ಕೂಡ ಖರ್ಚು ಮಾಡಿಕೊಂಡಿದ್ದೇನೆ. ಅಲ್ಲದೆ ನನ್ನ ನಂಬಿಕೆ, ವಿಶ್ವಾಸ, ಆಧ್ಯಾತ್ಮಿಕ ಸೇವೆಯ ಕನಸಿಗೆ ಕೊಡಲಿ ಪೆಟ್ಟು ಬಿದ್ದಿದೆ. ಈ ಮೋಸಕ್ಕೆ ಮನನೊಂದು ಹೈರಾಣಾಗಿದೆ.

ಈಗ ನನಗೆ ನ್ಯಾಯ ಬೇಕು. ಮತ್ತಿ ಗ್ರಾಮ ಪಂಚಾಯಿತಿಯು ಖಾತೆಯಲ್ಲಿ ತೋರಿಸಿರುವ ನಿವೇಶನದ ಹಕ್ಕುಪತ್ರ ನೀಡಬೇಕು. ಅಲ್ಲಿ ನೆಲೆಸಿ ನನ್ನ ಕನಸಿನ ಕೂಸಾದ ನನ್ನ ಗುರುಗಳ ಹೆಸರಿನ ಆಧ್ಯಾತ್ಮ ಮಂದಿರ ನಿರ್ಮಾಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು.

ಸನ್ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಮೇಲಧಿಕಾರಿಗಳು ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು ಹಾಗೂ ಮಾಧ್ಯಮ ಬಂಧುಗಳು ವಯೋವೃದ್ಧಳ ಈ ಸಮಸ್ಯೆ ನಿವಾರಣೆಗೆ ಸಹಕರಿಸಬೇಕಾಗಿ ಕೋರಿಕೆ. ಶೀಘ್ರ ಪರಿಹಾರ ಲಭಿಸದಿದ್ದರೆ ಮತ್ತಿ ಗ್ರಾಮ ಪಂಚಾಯಿತಿ ಮುಂದೆ ಅಮರಣಾಂತ ಧರಣಿ ನಡೆಸಲಾಗುವುದು.

ಇಂತಿ ತಮ್ಮ ವಿಶ್ವಾಸಿ
ಬಿ. ನಾಗರತ್ನಮ್ಮ
ಮೊ.ನಂ : 9741458905

ಸುದ್ದಿದಿನ.ಕಾಂ | ವಾಟ್ಸಾಪ್ | 9980346243

ದಿನದ ಸುದ್ದಿ

ದಾವಣಗೆರೆ | 197 ಹೊಸ ಕೊರೋನಾ ಪ್ರಕರಣಗಳು ಪತ್ತೆ, ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು ಎಷ್ಟಿವೆ ಗೊತ್ತಾ..?

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿಂದು 197 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಮೂರು ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ದಾವಣಗೆರೆ ನಗರ ಸೇರಿದಂತೆ ತಾಲೂಕುಗಳಲ್ಲಿ ಪತ್ತೆಯಾದ ಕೊರೋನಾ ಪ್ರಕರಣಗಳ ಸಂಖ್ಯೆ ಹೀಗಿದೆ. ದಾವಣಗೆರೆ 142, ಹರಿಹರ 20, ಜಗಳೂರು 2, ಚನ್ನಗಿರಿ 13, ಹೊನ್ನಾಳಿ 11, ಹೊರ ಜಿಲ್ಲೆಯಿಂದ 09 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 29,905ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ : ದಾವಣಗೆರೆ : ಆಸ್ತಿ ತೆರಿಗೆ ರಿಯಾಯಿತಿ ಸೌಲಭ್ಯ ಅವಧಿ ವಿಸ್ತರಣೆ

ಸೋಮವಾರ 301 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವೆಗೆ ಒಟ್ಟು 26,495 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 304 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇನ್ನು 3,106 ಸಕ್ರಿಯ ಕೇಸ್ ಗಳಿವೆ. 68 ವರ್ಷದ ಗೋಪನಾಳ ವೃದ್ಧ, ಹರಿಹರದ 25 ವರ್ಷದ ಯುವಕ, ದಾವಣಗೆರೆಯ 28 ವರ್ಷದ ಯುವಕ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ : ಆಸ್ತಿ ತೆರಿಗೆ ರಿಯಾಯಿತಿ ಸೌಲಭ್ಯ ಅವಧಿ ವಿಸ್ತರಣೆ

Published

on

ಸುದ್ದಿದಿನ,ದಾವಣಗೆರೆ : ಆಸ್ತಿ ತೆರಿಗೆ ಮೇಲೆ ಶೇ.5 ರಷ್ಟು ರಿಯಾಯಿತಿ ಸೌಲಭ್ಯವನ್ನು 2021 ರ ಏ.30 ರವರೆಗೆ ನೀಡಲಾಗಿತ್ತು. ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ಲಾಕ್‍ಡೌನ್ ಇರುವ ಪ್ರಯುಕ್ತ ಶೇ.5 ರಷ್ಟು ರಿಯಾಯಿತಿ ಸೌಲಭ್ಯವನ್ನು ಸರ್ಕಾರದ ಸುತ್ತೋಲೆಯನ್ವಯ ಪ್ರಸಕ್ತ ಸಾಲಿನ ಜೂನ್ 30 ರವರೆಗೆ ವಿಸ್ತರಿಸಲಾಗಿದ್ದು ನಿಗದಿತ ದಿನಾಂಕದೊಳಗಾಗಿ ಆಸ್ತಿ ತೆರಿಗೆಯನ್ನು ಪಾವತಿಸಿ ಈ ಸೌಲಭ್ಯವನ್ನು ಆಸ್ತಿ ಮಾಲೀಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಹರಿಹರ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ | ಕೋವಿಡ್ 19 ಪರೀಕ್ಷೆ ಮತ್ತು ಲಸಿಕೆ ಹಾಕಿಸಿಕೊಳ್ಳಲು ಮನವಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೋವಿಡ್ 19 ಪರೀಕ್ಷೆ ಮತ್ತು ಲಸಿಕೆ ಹಾಕಿಸಿಕೊಳ್ಳಲು ಮನವಿ

Published

on

ಸುದ್ದಿದಿನ,ದಾವಣಗೆರೆ : ಕೋವಿಡ್ 19 ಸಾಂಕ್ರಾಮಿಕ ರೋಗ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಿಎಸ್‍ಆರ್ ಪಾರ್ಟನರ್ಸ್ ಇವರ ಸಹಯೋಗದೊಂದಿಗೆ ಅಲ್ಪಸಂಖ್ಯಾತ ಜನಾಂಗದವರು ಹೆಚ್ಚಾಗಿ ವಾಸಿಸುವ ಪ್ರದೇಶಗಳನ್ನು ಗುರುತಿಸಿ ಕೋವಿಡ್ ಪರೀಕ್ಷೆ ಮತ್ತು ಲಸಿಕೆ ಮಾಡಿಸಲು ನಿರ್ದೇಶನ ನೀಡಿದ್ದು, ಜಿಲ್ಲೆಯ ಎಲ್ಲ ಅಲ್ಪಸಂಖ್ಯಾತರು ಲಕ್ಷಣಗಳಿದ್ದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ಲಸಿಕೆ ಹಾಕಿಸಿಕೊಂಡು ಎಲ್ಲರೂ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending