ದಿನದ ಸುದ್ದಿ
ಮೈಕ್ರೋ ಫೈನಾನ್ಸ್ ಕಿರುಕುಳ ನೀಡಿದಲ್ಲಿ ಎಫ್.ಐ.ಆರ್ ದಾಖಲಿಸಿ : ಡಿಸಿ ಗಂಗಾಧರಸ್ವಾಮಿ.ಜಿ.ಎಂ ಸೂಚನೆ

ಸುದ್ದಿದಿನ,ದಾವಣಗೆರೆ:ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್‌ಐಆರ್ ದಾಖಲಿಸುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದರು.
ಗುರುವಾರ (ಜ.30) ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕಿರುಹಣಕಾಸು ಸಂಸ್ಥೆಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಸಾಲ ವಿತರಣೆ ಮತ್ತು ಮರುಪಾವತಿ ಪ್ರಕ್ರಿಯೆಗಳಲ್ಲಿ ಕೈಗೊಳ್ಳುವ ಕ್ರಮಗಳ ಕುರಿತು ಸಲಹೆ ಮತ್ತು ಸೂಚನೆಗಳ ಕುರಿತು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. ಮೈಕ್ರೋ ಫೈನಾನ್ಸ್ ಕಂಪನಿಗಳು ನ್ಯಾಯಬದ್ಧವಾಗಿ ವ್ಯವಹರಿಸಲಿ, ಆದರೆ ಕಿರುಕುಳ ಮರುಕಳಿಸಿದರೆ ಸ್ವಯಂ ಹಿತಾಸಕ್ತಿಯಿಂದ ಎಫ್‌ಐಆರ್ ದಾಖಲಿಸುವಂತೆ ತಿಳಿಸಿದರು.
ಸಾಲವನ್ನು ನೀಡುವಾಗ ಸಾಲ ಪಡೆಯುವ ವ್ಯಕ್ತಿಯ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯವನ್ನು ಪರಿಗಣಿಸಬೇಕು. ಮಾಸಿಕ ಒಟ್ಟು ಆದಾಯದ ಶೇ 50 ರಷ್ಟು ಮೊತ್ತವನ್ನು ಮಾತ್ರ ಸಾಲ ಮರುಪಾವತಿ ಸಾಮರ್ಥ್ಯ ಎಂದು ಪರಿಗಣಿಸಬೇಕು. ವ್ಯಕ್ತಿಯು ಬೇರೆಯ ಮೂಲಗಳಿಂದ ಈಗಾಗಲೇ ಪಡೆದಿರುವ ಸಾಲದ ಮರುಪಾವತಿ ಕಂತಿನ ಮೊತ್ತವು. ಆದಾಯದ ಮೂಲಕ್ಕಿಂತ ಶೇ. 50 ರಷ್ಟು ಮೀರುತ್ತಿದ್ದರೆ, ಅಂತಹ ವ್ಯಕ್ತಿಗೆ ಸಾಲ ನೀಡುವಂತಿಲ್ಲ. ಒಂದೊಮ್ಮೆ ನೀಡದರೆ, ಅದು ಮೈಕ್ರೋ ಪೈನಾನ್ಸ್ ಕಂಪನಿ ಕಡೆಯಿಂದ ಆದ ಲೋಪ ಎಂದು ಹೇಳಲಾಗುವುದು. ಜನರಿಗೆ ಅವರ ಅಗತ್ಯಕ್ಕಿಂತ ಹೆಚ್ಚಾಗಿ ಸಾಲವನ್ನು ನೀಡುತ್ತಿದ್ದಾರೆ. ಸಾಲ ಮರುಪಾವತಿಲು ನಿಮ್ಮ ಚೌಕಟ್ಟುನ್ನು ಮೀರಿ ಅವರಿಗೆ ತೊಂದರೆ ನೀಡುತ್ತಿದ್ದಿರಿ. ಇದರ ಬಗ್ಗೆ ಪ್ರಕರಣ ದಾಖಲು ಮಾಡಲಾಗುವುದು. ಗ್ರಾಮೀಣ ಭಾಗದ ಜನರಿಗೆ ಸಾಲದ ಅವಶ್ಯಕತೆ ತುಂಬಾ ಇರುವುದರಿಂದ ಆರ್.ಬಿ.ಐ ನಿಯಮಾನುಸಾರ ಸಾಲ ನೀಡಿ, ಅವರ ಅಗತ್ಯಕ್ಕೆ ತಕ್ಕಂತೆ ಸಾಲ ನೀಡಬೇಕು ಎಂದರು.
ಸಾರ್ವಜನಿಕರಿಗೆ ನಿಮ್ಮ ಪೈನಾನ್ಸ್ ಕಂಪನಿಯ ಬಡ್ಡಿ ಎಷ್ಟು ಅಂತ ತಿಳಿಸಿ, ಮೈಕ್ರೋ ಫೈನಾನ್ಸ್ 2 ಲಕ್ಷ ರೂ ವರೆಗೆ ಮಾತ್ರ ಸಾಲ ನೀಡಲು ಅವಕಾಶವಿದೆ. ಸಾಲ ನೀಡುವ ಸಂಧರ್ಭದಲ್ಲಿ ಅರ್ಜಿ ಹಾಗೂ ಷರತ್ತುಗಳು ಕನ್ನಡದಲ್ಲಿರಬೇಕು. ಸಾಲ ಮತ್ತು ಬಾಕಿ ವಸೂಲಾತಿ ಸಂದರ್ಭದಲ್ಲಿ ಸಾಲ ಪಡೆದ ವ್ಯಕ್ತಿಯ ಕುಟುಂಬದ ಯಾವ ವ್ಯಕ್ತಿಗಳನ್ನು ಕೆವೈಸಿ ಕೇಳುವಂತಿಲ್ಲ. ಬಾಕಿ ಪಾವತಿ ಮಾಡಿ ಎಂದು ಒತ್ತಾಯಿಸುವಂತಿಲ್ಲ. ಅತ್ಯಂತ ಕಡಿಮೆ ಮೊತ್ತದ ಸಾಲವಾದರೂ ವಿಮೆ ಮಾಡಿಸಬೇಕು. ಸಾಲ ಪಡೆದ ವ್ಯಕ್ತಿಯು ಮೃತಪಟ್ಟಲ್ಲಿ ವಿಮೆಯ ಮೂಲಕ ಸಾಲದ ಮೊತ್ತವನ್ನು ಪಡೆಯಬೇಕು. ಬಡ್ಡಿ ದರ ಗರಿಷ್ಠ ಶೇ.18 ರಷ್ಟು ಮಾತ್ರ, ಇದಕ್ಕಿಂತ ಹೆಚ್ಚಿನ ಬಡ್ಡಿದರ ವಸೂಲಿ ಮಾಡುವಂತಿಲ್ಲ.
ವಸೂಲಿ ಸಿಬ್ಬಂದಿ ಬೆದರಿಕೆ ಹಾಕಬಾರದು, ಬೈಗುಳ-ಅವಾಚ್ಯ ಶಬ್ದಗಳ ಬಳಕೆ ಮಾಡಬಾರದು. ಸಾಲ ಪಡೆದವರಿಗೆ ಪದೇ ಪದೇ ಕರೆ ಮಾಡಬಾರದು. ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯ ಒಳಗೆ ಮಾತ್ರ ಕರೆ ಮಾಡಬೇಕು. ಸಾಲ ಪಡೆದ ವ್ಯಕ್ತಿಯ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಮತ್ತು ಸಹದ್ಯೋಗಿಗಳಿಗೆ ಕರೆ ಮಾಡುವಂತಿಲ್ಲ. ಸಾಲ ಪಡೆದವರ ಹೆಸರು ಮತ್ತು ವಿವರಗಳನ್ನು ಯಾವುದೇ ಕಾರಣಕ್ಕೂ ಸಾರ್ವಜನಿಕವಾಗಿ ಪ್ರದರ್ಶಿಸುವಂತಿಲ್ಲ. ಸಾಲ ಪಡೆದ ಕುಟುಂಬದವರ ಮೇಲೆ ಹಲ್ಲೆ ನಡೆಸುವಂತಿಲ್ಲ. ಯಾವುದೇ ರೀತಿಯ ಕಿರುಕುಳ ನೀಡುವಂತಿಲ್ಲ. ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಕೃತ್ಯವನ್ನು ಎಸಗುವಂತಿಲ್ಲ. ಸಾಲ ಪಡೆದವರ ಆಸ್ತಿ-ಸ್ವತ್ತುಗಳಿಗೆ ಹಾನಿ ಮಾಡುವಂತಿಲ್ಲ. ಬಾಕಿ ಪಾವತಿ ಮಾಡದೇ ಇದ್ದಾಗ ಎದುರಾಗಬಹುದಾದ ಪರಿಸ್ಥಿತಿಯ ಬಗ್ಗೆ ಸುಳ್ಳು ಮಾಹಿತಿ ನೀಡಬಾರದು. ತಡವಾಗಿ ಕಂತು ಪಾವತಿಸಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ಬಡ್ಡಿ ಹಾಕುವಂತಿಲ್ಲ. ಸಾಲ ವಸೂಲಿಗೆ ರೌಡಿಗಳನ್ನು ಬಿಟ್ಟು ದಬ್ಬಾಳಿಕೆ ಮಾಡುವಂತಿಲ್ಲ. ಆರ್.ಬಿ.ಐ ನಿಯಾಮಾನುಸಾರ ಕ್ರಮ ಕೈಗೊಳ್ಳಬೇಕು ಎಂದರು. ಫೆನಾನ್ಸ್ ಕಂಪನಿಯವರು ಯಾವುದೇ ಕಾರಣಕ್ಕೂ ಆಧಾರ್ ಕಾರ್ಡ್ ತೆಗೆದುಕೊಳ್ಳಬಾರದು. ಪಾನ್ ಬ್ರೋಕರ‍್ಸ್ ತಮ್ಮ ಅಂಗಡಿಗಳ ಮುಂದೆ ಸಿಸಿಟಿವಿ ಹಾಕಿಸಿ ನಿಮ್ಮಿಂದಲೂ ಜನರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಜಗಳೂರು, ಮಾಯಕೊಂಡ, ಹೊನ್ನಾಳಿಯಿಂದ ಸಾಕಷ್ಟು ದೂರುಗಳು ಬಂದಿರುತ್ತವೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿಯನ್ನು ಸ್ಥಾಪಿಸಲಾಗಿರುತ್ತದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತಾನಾಡಿ, ರಾಜ್ಯದೆಲ್ಲೆಡೆ ಮೈಕ್ರೋ ಫೈನಾನ್ಸ್ ಕಿರುಕುಳ ಮಿತಿಮೀರಿದೆ. ಸಾಕಷ್ಟು ಜನ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ರೈತರು, ಕಾರ್ಮಿಕರು ಚಿಕ್ಕ ಅತಿ ಚಿಕ್ಕ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು ಸಾಲ ತೆಗೆದುಕೊಂಡಿದ್ದಾರೆ. ಕಿರುಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸಾಲ ವಿತರಣೆ ಮತ್ತು ಮರಪಾವತಿಯಲ್ಲಿ ಗ್ರಾಹಕರನ್ನು ಹಾಗೂ ಸಿಬ್ಬಂದಿಗಳನ್ನು ಗೌರವದಿಂದ ನೋಡಿಕೊಳ್ಳಬೇಕು ಎಂದರು.
ಕಂತು ಕಟ್ಟಲು ತಪ್ಪಿದ ಗ್ರಾಹಕರೊಂದಿಗೆ ವ್ಯವಹರಿಸಲು ಆರ್.ಬಿ.ಐ ನಿರ್ದೇಶಗಳನ್ನು ಪಾಲಿಸುವುದು, ಗ್ರಾಹಕ ಸ್ನೇಹಿ ಮತ್ತು ನ್ಯಾಯಸಮ್ಮತವಾಗಿರಬೇಕು. ನೀವು ಸೂಕ್ತವಲ್ಲದ ಸಮಯದಲ್ಲಿ ಗ್ರಾಹಕರನ್ನು ಸಂಪರ್ಕ ಮಾಡುವುದಾಗಲಿ ಅಥವಾ ಸಾಲ ವಸೂಲಾತಿ ಮಾಡಬಾರದು. ಅವರ ಮನೆಯಲ್ಲಿ ಮೃತ್ಯು ಸಂಭವಿಸಿದಾಗ, ಅನಾರೋಗ್ಯದ ಸಂದರ್ಭದಲ್ಲಿ ಸಾಲ ಮಸೂಲಾತಿ ಮಾಡಬಾರದು. ಪ್ರತಿಯೊಂದು ಕಿರುಹಣಕಾಸು ಸಂಸ್ಥೆಯೂ ಸಾಲಗಾರರೊಂದಿಗೆ ಸಂವಹನ ಮಾರ್ಗದರ್ಶನ ನೀಡಬೇಕೆಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಿದ್ದಾರ್ಥ ಆಚಾರ್ಯ, ಡಿವೈಎಸ್‌ಪಿ ಬಸವರಾಜ, ಚನ್ನಗಿರಿ ಉಪವಿಭಾಗದ ಎಎಸ್ಪಿ ಶ್ಯಾಮ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಮ್ಮ ಪೂರ್ವಿಕ ಶಿವನೂ ; ಅವರ ಡುಬಾಕು ಸನಾತನವೂ..

- ಹರ್ಷಕುಮಾರ್ ಕುಗ್ವೆ
ಲಿಂಗವು ದೇವರಲ್ಲ ಶಿವನು ದೇವರಲ್ಲ
ಶಕ್ತಿಯೂ ದೇವರಲ್ಲ. ಮನುಷ್ಯನ ಕಲ್ಪನೆಯ ಆಳವನ್ನು ಮೀರಿದ ಯಾವ ದೇವರೂ ಇಲ್ಲ. ಅಸಲಿಗೆ ಇಡೀ ಜಗತ್ತನ್ನು ನಡೆಸುವ ದೇವರೆಂಬುದೇ ಇಲ್ಲ.
ಶಿವನು ನಮ್ಮ ಪೂರ್ವಿಕ, ಗೌರಿ ಅತವಾ ಶಕ್ತಿ ನಮ್ಮ ಪೂರ್ವಿಕಳು. ಗಂಗೆ ನಮ್ಮ ಬದುಕು. ಶಿವನ ಕೊರಳಿನ ನಾಗ ನಮ್ಮ ಕುಲ. ಲಿಂಗ ಫಲವಂತಿಕೆಯ ಸಂಕೇತವೂ ಹೌದು, ಶಿವ ಶಕ್ತಿಯರ ಸಮಾಗಮದ ಸಂಕೇತವೂ ಹೌದು. ನಮ್ಮ ಜನರಿಗೆ ಸಂಕೇತಗಳು ಶಕ್ತಿಯಾಗಿದ್ದವು, ಪ್ರೇರಣೆಯಾಗಿದ್ದವು. ಡೊಳ್ಳು ಹೊಡೆದು ಕೇಕೆ ಹಾಕಿದಾಗ ಮಳೆ ಬಂದರೆ, ನಮ್ಮ ಡೊಳ್ಳಿನ ಸದ್ದಿನ ಶಕ್ತಿಯಿಂದಲೇ, ನಮ್ಮ ಕೇಕೆಯಿಂದಲೇ ಮಳೆ ಬಂತು ಎಂದು ನಂಬಿದರು. ಇದನ್ನು primitive magic ಪರಿಕಲ್ಪನೆ ಎನ್ನಲಾಗಿದೆ. ನಮ್ಮ ಬಳ್ಳಾರಿಯ ಸಂಗನಕಲ್ಲಿನಲ್ಲಿ 3000 ವರ್ಷಗಳ ಹಿಂದೆ ಕಲ್ಲು ಬಂಡೆಗಳ ಮೇಲೆ ಕೆತ್ತಿದ ಹೋರಿ ಮತ್ತು ಉದ್ದ ಕೊಂಬಿನ ಕೆತ್ತನೆಗಳು ಸಹ ಇಂತಹ ಒಂದು ಆದಿಮ ಮಾಂತ್ರಿಕ ಶಕ್ತಿಯ ಆಚರಣೆಯಾಗಿದೆ.
ನಂಬಿಕೆಗಳನ್ನು ಸಂಸ್ಕೃತಿಯಾಗಿ, ಪರಂಪರೆಯಾಗಿ ಗ್ರಹಿಸಬೇಕೇ ಹೊರತು ದೇವರಾಗಿ ಅಲ್ಲ. ದೇವ ಎಂಬ ಕಲ್ಪನೆಯೇ ದ್ರಾವಿಡರಲ್ಲಿ ಇರಲಿಲ್ಲ. 50 ಸಾವಿರ ವರ್ಷಗಳಿಂದ ಬಂದ ಲಿಂಗ- ಯೋನಿ ಪೂಜೆ, ಗೌರಿ ಪೂಜೆ, 9,000 ವರ್ಷಗಳಿಂದ ಬಂದ ಬೂಮ್ತಾಯಿ ಪೂಜೆ, ಅರಳಿ ಮರದ ಪೂಜೆ, ಐದು ಸಾವಿರ ವರ್ಷಗಳಿಂದ ಬಂದ ಶಿವನ ಪೂಜೆ, ಗಣಪತಿ ಪೂಜೆ, ನಾಗನ ಪೂಜೆ, 4000 ವರ್ಷಗಳಿಂದ ಬಂದ ಗತಿಸಿದ ಹಿರೀಕರ ಪೂಜೆ, ಇದರ ಮುಂದುವರಿಕೆಯಾಗಿಯೇ 2600 ವರ್ಷಗಳ ಹಿಂದೆ ಬುದ್ದ ಗುರುವು ತೀರಿದ ಬಳಿಕ ಅವನ ಅಸ್ತಿಯನ್ನು ಇಟ್ಟ ಸ್ತೂಪಗಳನ್ನು ಪೂಜಿಸಿದೆವು, ದೂಪ ಹಾಕಿದೆವು... ಇದುವೇ ಈ ನೆಲದ ಪೂಜನ ಸಂಸ್ಕತಿಯಾಗಿತ್ತು.
‘ದೇವ’ ಮತ್ತು ಅಸುರ ಇಬ್ಬರೂ ಬಂದಿದ್ದು ಮಧ್ಯ ಏಷ್ಯಾದಿಂದ ಹೊರಟಿದ್ದ ಆರ್ಯರಿಂದಲೇ. ಅವರಿಗೆ ಪೂಜೆ ಗೊತ್ತಿರಲಿಲ್ಲ. ಯಜ್ಞ ಗೊತ್ತಿತ್ತು, ಹೋಮ ಗೊತ್ತಿತ್ತು. ‘ದೇವ’ ಅತವಾ “ದ-ಏವ” ಕೂಡಾ ಮೂಲದಲ್ಲಿ ಆರ್ಯರ ಪೂರ್ವಿಕ ಕುಲ ನಾಯಕರೇ ಆಗಿದ್ದಾರು... ಹೀಗಾಗಿಯೇ ಆರ್ಯ ವೈದಿಕರ ದೇವ ಎಂದರೆ ಅವರ ದಾಯಾದಿಗಳಾಗಿದ್ದ ಪಾರ್ಸಿಯನ್ (ಜೊರಾಸ್ಟ್ರಿಯನ್) ಆರ್ಯ ಅವೆಸ್ತನ್ನರಿಗೆ ಕೆಡುಕಿನ ಸಂಕೇತವಾಗಿತ್ತು. ಹಾಗೇ ಆರ್ಯ ವೈದಿಕರು ಕೆಡುಕು ಎಂದ ಅಸುರ (ಅಹುರ) ಆರ್ಯ ಅವೆಸ್ತನ್ನರ ಪಾಲಿಗೆ “ನಾಯಕ”ನಾಗಿದ್ದ. ಅವರನ್ನು ಅಹುರ ಮಜ್ದಾ ಎಂದು ಕರೆದು ಆರಾದಿಸಿದರು.
ಭಾರತಕ್ಕೆ ಪ್ರವೇಶಿಸಿದ ಬಳಿಕ ಆರ್ಯ ವೈದಿಕರಿಗೆ ಈ ನೆಲದ ಮೊದಲ ನಿವಾಸಿಗಳ ಮೇಲೆ ಯಜಮಾನಿಕೆ ಸ್ತಾಪಿಸಬೇಕಿತ್ತು. ಅದಕ್ಕಾಗಿ ನಮ್ಮಿಂದ ಪೂಜೆಗೊಳ್ಳುತ್ತಿದ್ದ ಪೂರ್ವಿಕರನ್ನು ತಮ್ಮ “ದೇವರು” ಮಾಡಿದರು. ಆ ದೇವರ ಪೂಜೆಗೆ ಅವರೇ ನಿಂತರು. ತಮ್ಮ ಜುಟ್ಟು ಬಿಟ್ಟುಕೊಂಡು ನಮ್ಮ ಜುಟ್ಟು ಹಿಡಿದರು. ನಾವು ಪೂರ್ವಿಕರನ್ನು ಬಿಟ್ಟು ಕೊಟ್ಟು, ಅವರ ಕೈಯಲ್ಲಿ ದೇವರುಗಳ ಪೂಜೆ ನಡೆಯುವಾಗ ನಮ್ಮ ಪೂರ್ವಿಕರಿಗೆ ಗೊತ್ತೇ ಇರದಿದ್ದ ವೇದ ಮಂತ್ರಗಳನ್ನ ಕೇಳಿ ಪುನೀತರಾದೆವು. ಈ ಮಂತ್ರ ಭಾಷೆಯೇ ದೇವರಿಗೆ ಅರ್ಥವಾಗುವುದು ಎಂದು ಪುಂಗಿದ್ದಕ್ಕೆ ತಲೆಯಾಡಿಸಿ ಕೈಮುಗಿದು ಗರ್ಭಗುಡಿಯ ಹೊರಗೆ ಸಾಲಿನಲ್ಲಿ ನಿಂತೆವು. ಮುಂದಿನ 2000 ವರ್ಷಗಳ ಕಾಲ ಗುಲಾಮರಾದೆವು. ಪುರಾಣಗಳನ್ನು ಕೇಳಿದೆವು, ನಂಬಿದೆವು ಮತಿಗೆಟ್ಟೆವು, ಗತಿಗೆಟ್ಟೆವು.
ಇನ್ನೂ ಉಳಿದಿರುವುದೇನು?
ನಾವು ಶಿವನ ವಕ್ಕಲು, ಗೌರಿ- ಗಂಗೆಯರ ಒಕ್ಕಲು. ಅವರು ಇಂದ್ರ ಅಗ್ನಿಯರ ವಕ್ಕಲಾಗಿದ್ದವರು ತಮ್ಮ ದೇವರಿಗೆ ಕಿಮ್ಮತ್ತಿಲ್ಲ ಎಂದರಿತು ಅವರನ್ನೇ ಬಿಟ್ಟರು. ಈಗ ಹೇಳುತ್ತಾರೆ ನಾವೇ ಸನಾತನರು ಎಂದು! ಅವರ ಡುಬಾಕು ಸನಾತನದಲ್ಲಿ ನಮ್ಮತನ ಕಳೆದುಕೊಂಡ “ಶೂದ್ರ ಮುಂಡೇಮಕ್ಕಳಾಗಿ”, ಅವರಿಗಾಗಿ ಬಾಳು ಬದುಕು ಹಾಳುಮಾಡಿಕೊಂಡು, ಅವರ ಹೋಮ ಹವನ ಮಾಡಿಸಿ, ನಮ್ಮ ಉಳಿಕೆ ಕಾಸು ಕಳೆದುಕೊಂಡು, ಗೌರವ ಗನತೆ ಕಳೆದುಕೊಳ್ಳುವುದೇ ಇವತ್ತಿನ ಸನಾತನ!
– ಹರ್ಷಕುಮಾರ್ ಕುಗ್ವೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿಕ್ಕಮಗಳೂರು | ಕಾಡ್ಗಿಚ್ಚಿನಿಂದ ಕಾಫಿ ತೋಟ, ಅರಣ್ಯ ಪ್ರದೇಶ ನಾಶ

ಸುದ್ದಿದಿನ,ಚಿಕ್ಕಮಗಳೂರು:ಜಿಲ್ಲೆಯ ಮೂಡಿಗೆರೆ ಹಾಗು ಕಳಸ ತಾಲೂಕುಗಳಲ್ಲಿ ಉಂಟಾದ ಪ್ರತ್ಯೇಕ ಕಾಡ್ಗಿಚ್ಚು ಪ್ರಕರಣಗಳಲ್ಲಿ 15 ಎಕರೆ ಕಾಫಿ ತೋಟ ಮತ್ತು 25 ಕ್ಕು ಹೆಚ್ಚು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಬಾಳೂರು ಮೀಸಲು ಅರಣ್ಯ ಪ್ರದೇಶದ ದೇವರಮನೆ ಗುಡ್ಡದಲ್ಲಿ ಕಾಡ್ಗಿಚ್ಚು ಉಂಟಾಗಿ 10 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಸುಟ್ಟು ನಾಶವಾಗಿದೆ. ಕುಂದೂರು ಸಮೀಪದ ಕಣೇಗದ್ದೆ ಗ್ರಾಮದಲ್ಲಿ ಕಾಫಿತೋಟಕ್ಕೆ ಬೆಂಕಿ ಬಿದ್ದು ಸುಮಾರು 15 ಎಕರೆ ಕಾಫಿ ತೋಟ ನಾಶವಾಗಿದೆ. ಮೂಡಿಗೆರೆ ಅಗ್ನಿ ಶಾಮಕದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.
ಕಳಸ ತಾಲೂಕು ಬಲಿಗೆ ಅರಣ್ಯದಲ್ಲಿ ಕಾಡ್ಗಿಚ್ಚು ಉಂಟಾಗಿದ್ದು ಸಾಕಷ್ಟು ಅರಣ್ಯ ನಾಶವಾಗಿದೆ. ಅರಣ್ಯಾಧಿಕಾರಿಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕಂದಗಲ್ ಗ್ರಾಮ ಪಂಚಾಯಿತಿ ನೂತನ ಆಧ್ಯಕ್ಷರಾಗಿ ಎಲ್.ಆರ್. ಚಂದ್ರಪ್ಪ ಆಯ್ಕೆ

ಸುದ್ದಿದಿನ,ದಾವಣಗೆರೆ:ತಾಲೂಕಿನ ಕಂದಗಲ್ ಗ್ರಾಮ ಪಂಚಾಯಿತಿಯ ನೂತನ ಆಧ್ಯಕ್ಷರಾಗಿ ಫೆ.21 ರಂದು ಎಲ್.ಆರ್. ಚಂದ್ರಪ್ಪ ಆಯ್ಕೆಯಾಗಿದ್ದಾರೆ. ಎರಡನೇ ಅವಧಿಗೆ ಸಾಮಾನ್ಯ ಪುರುಷ ಮೀಸಲಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಆಧಿಕಾರಿಯಾಗಿ ಕೋಆಪರೇಟಿವ್ ಸೊಸೈಟಿಯ ನಿಬಂಧಕರಾದ ಮಂಜುಳಾ ಅವರು ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಪಿಡಿಓ ಬಿ.ಆರ್ ಹೇಮಲತ, ಕಾರ್ಯದರ್ಶಿ ಪುಟ್ಟಣ್ಣ, ಉಪಾಧ್ಯಕ್ಷೆ ಶ್ವೇತ ಮಾರುತಿ ಗ್ರಾಮ ಪಂಚಾಯತಿ ಸದಸ್ಯರಾದ ಬಕ್ಕಳ್ಳಿ ಹನುಮಮ್ಮ, ಸುಂದರಮ್ಮ, ಶಿವಲಿಂಗಮ್ಮ, ಕರಿಯಮ್ಮ, ಜ್ಯೋತಿ ಮುಧೋಳ, ಓಂಕಾರಪ್ಪ ಕೆ.ವಿ, ಎಂ.ಬಿ ಹಾಲೇಶ್, ಕೋಟ್ಯಪ್ಪ, ಚನ್ನಬಸಪ್ಪ ಜಿ.ಎಸ್, ಕೆ.ಜಿ.ರಾಜೇಶ್, ಪಂಚಾಯಿತಿ ಸಿಬಂಧಿ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಮಾರ್ಚ್ 2 ರಂದು ಕೆ.ಶ್ರೀಧರ್ ಅವರ ನಾಲ್ಕು ಪುಸ್ತಕಗಳ ಬಿಡುಗಡೆ
-
ದಿನದ ಸುದ್ದಿ5 days ago
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ
-
ದಿನದ ಸುದ್ದಿ7 days ago
ಕಾನೂನು ಚೌಕಟ್ಟಿನಲ್ಲಿ ವ್ಯವಹರಿಸಿ, ಸಾಲ ಕಟ್ಟಿಸಲು ಬಲವಂತದ ಕ್ರಮಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ : ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ6 days ago
ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲಿ ಡೇ-ಕೇರ್, ಕಿಮೊಥೆರಪಿ ಕೇಂದ್ರ ಸ್ಥಾಪನೆಗೆ ಸರ್ಕಾರದ ನಿರ್ಧಾರ
-
ದಿನದ ಸುದ್ದಿ3 days ago
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಲಿಂಗಾಯತ ಮಠಾಧೀಶರಿಂದ ಸಿಎಂಗೆ ಮನವಿ
-
ದಿನದ ಸುದ್ದಿ5 days ago
ಕವಿತೆ | ಗಾಯದ ಬೆಳಕು
-
ದಿನದ ಸುದ್ದಿ4 days ago
ಲೇಬರ್ ಕಾಲೋನಿ ಶ್ರೀ ಕರಿಬಸಜಯ್ಯ ದೇವಸ್ಥಾನದಲ್ಲಿ 57 ನೇ ವರ್ಷದ ಶಿವರಾತ್ರಿ ಜಾಗರಣ ಮಹೋತ್ಸವ
-
ದಿನದ ಸುದ್ದಿ4 days ago
ತ್ಯಾವಣಿಗೆ | ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗುರುವಂದನೆ ; ಸ್ನೇಹ ಸಮ್ಮಿಲನ ಬೆಳ್ಳಿಹಬ್ಬ