Connect with us

ದಿನದ ಸುದ್ದಿ

ಕರ್ನಾಟಕದ 16 ಸಾವಿರ ಕಿಲೋಮೀಟರ್ ರೈಲ್ವೆ ಮಾರ್ಗ ವಿದ್ಯುದೀಕರಣ; ರಾಜ್ಯದ ಅಭಿವೃದ್ಧಿಗೆ ವಿಶೇಷ ಆದ್ಯತೆ : ಪ್ರಧಾನಿ ನರೇಂದ್ರ ಮೋದಿ

Published

on

ಸುದ್ದಿದಿನ ಡೆಸ್ಕ್ : ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 280 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಮೆದುಳು ಸಂಶೋಧನಾ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದರು. 425ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ದಾನಿಗಳಾದ ಕ್ರಿಸ್ ಗೋಪಾಲಕೃಷ್ಣನ್ ದಂಪತಿ ಹಾಗೂ ಬಾಗ್ಚಿ ಮತ್ತು ಪಾರ್ಥಸಾರಥಿ ಕುಟುಂಬದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಳಿಕ ಪ್ರಧಾನಿ ಅವರು, ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಯೂನಿವರ್ಸಿಟಿಯಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಉನ್ನತೀಕರಿಸಿದ ರಾಜ್ಯದ 150ಸರ್ಕಾರಿ ಐಟಿಐ ಸಂಸ್ಥೆಗಳನ್ನು ಲೋಕಾರ್ಪಣೆ ಮಾಡಿದರು.

ಬೆಂಗಳೂರು ನಗರದ ಕೊಮ್ಮಘಟ್ಟದಲ್ಲಿ ಬೆಂಗಳೂರು ಉಪನಗರ ರೈಲ್ವೆ ಯೋಜನೆಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಗಳ ಪ್ರದರ್ಶನ ವೀಕ್ಷಿಸಿ, ಬೆಂಗಳೂರಿನ ಸರ್. ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಯಲಹಂಕ-ಪೆನುಕೊಂಡ ಮತ್ತು ಅರಸೀಕೆರೆ-ತುಮಕೂರು ಜೋಡಿ ರೈಲು ಮಾರ್ಗ ಹಾಗೂ ಶೇಕಡ 100ರಷ್ಟು ವಿದ್ಯುದೀಕರಣಗೊಂಡ ಕೊಂಕಣ ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ತುಮಕೂರು, ಅರಸೀಕೆರೆ, ಯಲಹಂಕ, ರತ್ನಗಿರಿ, ಮಡಗಾಂವ್ ಮತ್ತು ಉಡುಪಿ ನಗರವನ್ನು ಸಂಪರ್ಕಿಸುವ ಹೊಸ ರೈಲು ಸೇವೆಗೆ ಹಸಿರು ನಿಶಾನೆ ತೋರಿದರು.

ಬೆಂಗಳೂರು ಉಪನಗರ ರೈಲು ಯೋಜನೆ, ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣ ಮತ್ತು ಯಶವಂತಪುರ ರೈಲು ನಿಲ್ದಾಣದ ಪುನರಾಭಿವೃದ್ಧಿ, ಬೆಂಗಳೂರಿನ ವರ್ತುಲ ರಸ್ತೆ-2 ಪ್ಯಾಕೇಜ್‌ಗಳು, ನೆಲಮಂಗಲ ತುಮಕೂರು ವಿಭಾಗದ 6-ಲೈನಿಂಗ್, ರಾಷ್ಟ್ರೀಯ ಹೆದ್ದಾರಿ 73ರ ಪುಂಜಾಲಕಟ್ಟೆಯಿಂದ ಚಾರ್ಮಾಡಿ ಭಾಗದವರೆಗಿನ ರಸ್ತೆ ಅಗಲೀಕರಣ, ರಾಷ್ಟ್ರೀಯ ಹೆದ್ದಾರಿ 69ರ ಮಧುಗಿರಿ-ಗೌರಿಬಿದನೂರು-ಚಿಕ್ಕಬಳ್ಳಾಪುರ ವಿಭಾಗದ ಪುನರ್ವಸತಿ ಮತ್ತು ಉನ್ನತೀಕರಣ, ಬೆಂಗಳೂರಿನಲ್ಲಿ ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿ ಹಾಗೂ ಬೆಂಗಳೂರು ಉಪ ನಗರ ರೈಲು ಯೋಜನೆಯ ಅಂಚೆ ಚೀಟಿ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಪ್ರಧಾನಮಂತ್ರಿ ಅವರು, ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಬದ್ಧವಾಗಿದೆ. ಬೆಂಗಳೂರು ಶರವೇಗದಲ್ಲಿ ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿನ ಅಭಿವೃದ್ಧಿಗೆ ಕಳೆದ ೮ ವರ್ಷಗಳಿಂದಲೂ ಕೇಂದ್ರ ಸರ್ಕಾರ ಬೆಂಬಲ, ಸಹಕಾರ ನೀಡುತ್ತಿದೆ. ಉನ್ನತ ಶಿಕ್ಷಣ, ಸಂಶೋಧನೆ, ಸಾರಿಗೆ, ಮೂಲಸೌಲಭ್ಯದ ಈ ಮಹತ್ವದ ಯೋಜನೆಗಳು ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ನಕ್ಷೆಯನ್ನು ಬದಲಾವಣೆ ಮಾಡಲಿದೆ ಎಂದು ಹೇಳಿದರು.
ಬೆಂಗಳೂರು ನಾಗರಿಕರು ಎದುರಿಸುತ್ತಿರುವ ಸಂಚಾರ ದಟ್ಟಣೆಯಿಂದ ಮುಕ್ತಿ ಪಡೆಯಲಿದ್ದಾರೆ. ಈ ಎಲ್ಲ ಯೋಜನೆಗಳು ಬೆಂಗಳೂರು ಜನತೆಯ ಜೀವನ ಮಟ್ಟವನ್ನು ಸುಧಾರಿಸುತ್ತವೆ. ಹಾಗೂ ಉದ್ಯಮಿಗಳು ಹೆಚ್ಚು ಬಂಡವಾಳ ತೊಡಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಬೆಂಗಳೂರು ಶ್ರೇಷ್ಟ ಭಾರತದ ಪ್ರತಿಬಿಂಬವಾಗಿದೆ. ರಾಜ್ಯದ ಜನತೆಯ ಕನಸನ್ನು ನನಸು ಮಾಡಲು ರಾಜ್ಯ ಬಿಜೆಪಿ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಕಳೆದ ೮ ವರ್ಷಗಳ ಅವಧಿಯಲ್ಲಿ ಅನೇಕ ಮಹತ್ವದ ಯೋಜನೆಗಳನ್ನು ತರಲಾಗಿದೆ. ಅದರಲ್ಲೂ ಕೋವಿಡ್ ಸಮಯದಲ್ಲಿ ಎರಡು ವರ್ಷಗಳ ಕಾಲ ೮೦ ಕೋಟಿ ಜನರಿಗೆ ಉಚಿತ ಆಹಾರ ಪೂರೈಕೆ ಮಾಡಿರುವುದು ವಿಶ್ವದ ದೊಡ್ಡ ಸಾಧನೆಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಐದು ಟ್ರಿಲಿಯನ್ ಆರ್ಥಿಕ ಗುರಿ ಸಾಧಿಸಬೇಕು ಎಂಬ ಪ್ರಧಾನಿಯವರ ಕನಸನ್ನು ನನಸು ಮಾಡಲು ಕರ್ನಾಟಕ ದೊಡ್ಡ ಮಟ್ಟದ ಕೊಡುಗೆ ನೀಡುವ ಸಂಕಲ್ಪ ಮಾಡಿದೆ. ಕಳೆದ 8ವರ್ಷಗಳ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಹಲವು ಮಹತ್ವದ ಕೊಡುಗೆಗಳನ್ನು ನೀಡಿದೆ ಎಂದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ 53ಲಕ್ಷ, ಪ್ರಧಾನಮಂತ್ರಿ ಉಜ್ವಲ ಯೋಜನೆಯಿಂದ 34 ಲಕ್ಷ ಹಾಗೂ ಜಲಜೀವನ್ ಮಿಷನ್ ಯೋಜನೆ ಜಾರಿಯಿಂದ ೪೮ ಲಕ್ಷ ಜನರಿಗೆ ಉಪಯೋಗವಾಗಿದೆ. 2024ರ ವೇಳೆಗೆ ರಾಜ್ಯದ ಪ್ರತಿಯೊಂದು ಹಳ್ಳಿಗೂ ಕೊಳಾಯಿ ನೀರು ಪೂರೈಸುವ ಸಂಕಲ್ಪವನ್ನು ಮಾಡಲಾಗಿದೆ ಎಂದು ಹೇಳಿದರು.

ಬಳಿಕ ಪ್ರಧಾನಮಂತ್ರಿ ಅವರು, ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಮೈಸೂರಿನ ವಾಕ್ ಶ್ರವಣ ಸಂಸ್ಥೆಯ ಉತ್ಕೃಷ್ಟತಾ ಕೇಂದ್ರವನ್ನು ಉದ್ಘಾಟಿಸಿದರು. ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಅವರು ಸಂವಾದ ನಡೆಸಿದರು.

ಬಳಿಕ ಮಾತನಾಡಿದ ಪ್ರಧಾನಮಂತ್ರಿ ಅವರು, ಕೇಂದ್ರ ಸರ್ಕಾರ ಆತ್ಮವಿಶ್ವಾಸದಿಂದ ಜನಪರ ಕೆಲಸ ಮಾಡುತಿದ್ದು, ಬಡವರ ಬದುಕಿನಲ್ಲಿ ಸುಧಾರಣೆ ತರುತ್ತಿದೆ. ಹಲವಾರು ಯೋಜನೆಗಳ ಮೂಲಕ ಬದಲಾವಣೆಗೆ ನಾಂದಿ ಹಾಡಿದೆ. ಮಹಿಳೆಯರ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದು, ಕರ್ನಾಟಕದ ರೈತರ ಖಾತೆಗಳಿಗೆ ಕೃಷಿ ಸಮ್ಮಾನ್ ನಿಧಿ ಮೂಲಕ 10 ಸಾವಿರ ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಲಾಗಿದೆ ಎಂದರು.

ರಾಜ್ಯದ 2 ಲಕ್ಷಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ, ಮುದ್ರಾ ಯೋಜನೆಯಡಿ ಕರ್ನಾಟಕಕ್ಕೆ ಹೆಚ್ಚಿನ ನೆರವು ನೀಡಲಾಗಿದೆ. ಕರ್ನಾಟಕದ 4 ಲಕ್ಷ ಜನರಿಗೆ ವಸತಿ ಸೌಲಭ್ಯ ಕಲ್ಪಿಸುತ್ತಿದ್ದು, ಅಮೃತ ಕಾಲದಲ್ಲಿ ಅಭಿವೃದ್ಧಿಯ ಪರ್ವದಲ್ಲಿ ಪ್ರತಿಯೊಬ್ಬರನ್ನು ಪಾಲುದಾರರನ್ನಾಗಿ ಮಾಡಲಾಗುವುದು. ದಿವ್ಯಾಂಗ ಸಮುದಾಯದ ಅಭಿವೃದ್ಧಿ ಪಥದಲ್ಲಿ ಯುವಸಮೂಹ ಕೈಜೋಡಿಸಬೇಕು ಎಂದು ಕರೆ ನೀಡಿದರು.

ರಾಜ್ಯದ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿದ್ದು, 16 ಸಾವಿರ ಕಿಲೋಮೀಟರ್ ರೈಲು ಮಾರ್ಗವನ್ನು ವಿದ್ಯುದೀಕರಣ ಮಾಡಲಾಗಿದೆ. ರಾಜ್ಯದ ಅಭಿವೃದ್ಧಿಗೆ ವೇಗ ನೀಡುತ್ತಿದ್ದು, ಇದರಲ್ಲಿ ಜನರ ಸಹಭಾಗಿತ್ವ ಮತ್ತಷ್ಟು ಹೆಚ್ಚಾಗಬೇಕೆಂದು ಪ್ರಧಾನಿ ಅವರು ಕರೆ ನೀಡಿದರು.

ಬಳಿಕ ಪ್ರಧಾನಮಂತ್ರಿ ಅವರು ಸುತ್ತೂರಿನ ಶಾಖಾ ಮಠಕ್ಕೆ ಭೇಟಿ ನೀಡಿ, ಸುತ್ತೂರು ಮಠದ ದೇಶಿ ಕೇಂದ್ರ ಸ್ವಾಮೀಜಿ ಅವರೊಂದಿಗೆ ಚರ್ಚಿಸಿದರು. ನಂತರ ಸಂಸ್ಕೃತ ಪಾಠಶಾಲೆ ಮತ್ತು ವಸತಿ ಕಟ್ಟಡವನ್ನು ಉದ್ಘಾಟಿಸಿದರು. ನಂತರ ನರೇಂದ್ರ ಮೋದಿ ಅವರು ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | 18 ನೇ ವಾರ್ಡ್ ನಲ್ಲಿ ಕೈ ಅಭ್ಯರ್ಥಿ ಸಮರ್ಥ ಶಾಮನೂರು ಪ್ರಚಾರ

Published

on

ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರು ಮಂಗಳವಾರ 18 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದರು.

ನಗರದ ಬಾರ್ ಲೈನ್ ದರ್ಗಕ್ಕೆ ತೆರಳಿ ಚಾದರ ಅರ್ಪಿಸಿದ ಸಮರ್ಥ ಶಾಮನೂರು ಅವರಿಗೆ ಮುಸ್ಲಿಂ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ಪ್ರಚಾರವನ್ನು ಆರಂಭಿಸಿದ ಅವರು ಎಂ.ಬಿ ಕೇರಿ, ಮಟನ್ ಮಾರ್ಕೇಟ್, ಗಡಿಯಾರ ಕಂಬ, ಸ್ವಾಗೇರ್ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಯ ಮನೆ ಮನೆಗೆ ತೆರಳಿ ಮತಯಾಚಿಸಿದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಪ್ಪ, ರವಿಕುಮಾರ್, ಕಾಶಿನಾಥ್ ಅವರ ಮನೆಗೆ ಅಭ್ಯರ್ಥಿ ಸಮರ್ಥ ಶಾಮನುರು ಅವರು ಭೇಟಿ ನೀಡಿದಾಕ್ಷಣ ಕುಟುಂಬಸ್ಥರು ದಿವಂಗತರಾದ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಭಾವುಕರಾದರು. ಶಾಮನೂರು ಸಮರ್ಥ ಅವರಿಗೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಂಡ ಬಹುಮತವನ್ನು ನೀಡಿ ಗೆಲ್ಲಿಸುತ್ತೇವೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಮುಖಂಡರಾದ ಚಂದ್ರ ಶೇಖರ್, ಸೋಗಿ ಶಾಂತಕುಮಾರ್, ಪ್ರವೀಣ್ ರಾವ್, ಬಕ್ಕೇಶ್, ಪರಮೇಶ್, ಜಯರಾಜ್, ಹನುಮಂತ್, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ

Published

on

ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ‌ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ‌. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.

ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.

ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending