Connect with us

ದಿನದ ಸುದ್ದಿ

ನಿರ್ಭಯಾ ನೆನಪಾಗಿಯೇ ಉಳಿಯುವುದೇಕೆ..?

Published

on

  • ನಾ ದಿವಾಕರ

ತ್ತರ ಪ್ರದೇಶದ ಹಥ್ರಾಸ್ ಎಂಬ ಕುಗ್ರಾಮದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಮತ್ತೊಮ್ಮೆ ಹೆಣ್ತನದ ಘನತೆ, ರಕ್ಷಣೆ ಮತ್ತು ಗೌರವದ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ. ಹಥ್ರಾಸ್ ಘಟನೆ ನಡೆದು ಒಂದು ತಿಂಗಳು ಕಳೆದಿದೆ. ದೇಶಾದ್ಯಂತ ಪ್ರತಿರೋಧದ ದನಿಗಳು ಇನ್ನೂ ಕೇಳಿಬರುತ್ತಿವೆ. ಆರೋಪಿಗಳಿಗೆ ಶಿಕ್ಷೆಯಾಗುವುದೋ ಇಲ್ಲವೋ ಎನ್ನುವ ಪ್ರಶ್ನೆಯೂ ಕಾಡತೊಡಗಿದೆ.

ಏಕೆಂದರೆ ಸಿಬಿಐ ಎಂಬ ಸೂತ್ರದ ಗೊಂಬೆ ತನಿಖೆಯನ್ನು ಕೈಗೆತ್ತಿಕೊಂಡಿದೆ. ಭಾರತದ ಸಾರ್ವಭೌಮ ಪ್ರಜೆಗಳು ಸಾಂವಿಧಾನಿಕ ಸಂಸ್ಥೆಗಳಲ್ಲಿ ಮತ್ತು ಪ್ರಭುತ್ವದ ನ್ಯಾಯ ನಿರ್ವಹಣೆಯಲ್ಲಿ ವಿಶ್ವಾಸ ಕಳೆದುಕೊಳ್ಳಲು ಇನ್ನೇನೂ ಉಳಿದಿಲ್ಲ ಎನ್ನುವುದನ್ನು ಬಾಬ್ರಿ ಮಸೀದಿಯ ಧ್ವಂಸವನ್ನು ಕುರಿತ ತೀರ್ಪು ನಿರೂಪಿಸಿದೆ.

70 ವರ್ಷಗಳ ಭಾರತ ಆರು ವರ್ಷಗಳಲ್ಲಿ ಬದಲಾಗಿದೆ ಎಂದು ಹೇಳುವುದೇ ಆದರೆ, ಸಾಂವಿಧಾನಿಕ ಮೌಲ್ಯಗಳ ಮತ್ತು ಸಾಂಸ್ಥಿಕ ಅಧಃಪತನದ ವಿಚಾರದಲ್ಲಿ ನಿರ್ವಿವಾದವಾಗಿ ಒಪ್ಪಿಬಿಡಬಹುದು. ಅತ್ಯಾಚಾರ ನಮ್ಮ ಸಂಸ್ಕೃತಿಯ ಒಂದು ಭಾಗ ಎನ್ನುವ ಸಂಸದರು ನಮ್ಮ ನಡುವೆ ಇದ್ದಾರೆ, ಅತ್ಯಾಚಾರ ನಡೆದರೆ ಸುಖ ಪಡಬೇಕು ಎನ್ನುವ ಪಕ್ಷದ ಮಹಿಳಾ ವಕ್ತಾರರೂ ಇದ್ದಾರೆ.

ಸಾವು ಮತ್ತು ದೌರ್ಜನ್ಯಗಳನ್ನು ರಾಜಕೀಯ ಮೇಲು-ಕೀಳು ಪುಂಡಾಟಕ್ಕೆ ಬಳಸಿಕೊಳ್ಳುವ ರಾಜಕೀಯ ನಾಯಕರೂ ನಮ್ಮ ನಡುವೆ ಇದ್ದಾರೆ. ಸಾವಿಗೆ ಬೆಲೆ ಇಲ್ಲದ, ಜೀವಕ್ಕೆ ಮೌಲ್ಯವಿಲ್ಲದ ಒಂದು ದೇಶದಲ್ಲಿ ನಾವು ಬದುಕುತ್ತಿದ್ದೇವೆ, ನಿಜ, ಆದರೆ ಸಾವು ಎನ್ನುವುದು ಸಹಜೀವಿಗಳನ್ನು ಕಳೆದುಕೊಂಡವರನ್ನು ಜೀವಮಾನವಿಡೀ ಬಾಧಿಸುವ ಒಂದು ವಿದ್ಯಮಾನ ಎನ್ನುವ ಕನಿಷ್ಟ ಮಾನವೀಯ ಪ್ರಜ್ಞೆ ಮತ್ತು ಸಂವೇದನೆ ಆಡಳಿತ ವ್ಯವಸ್ಥೆಗೆ, ನಾಗರಿಕ ಸಮಾಜಕ್ಕೆ ಇರಬೇಕಲ್ಲವೇ ?

ಈ ಸಂವೇದನೆಯನ್ನು ಕಳೆದುಕೊಂಡಿರುವ ಸಮಾಜೋ-ರಾಜಕೀಯ ವ್ಯವಸ್ಥೆಯಲ್ಲಿ ಭಾರತ ಬದುಕುತ್ತಿದೆ. ಹಾಗೆಂದ ಮಾತ್ರಕ್ಕೆ ಈ ಮೊದಲು ಭಾರತದ ಆಳುವ ವರ್ಗಗಳಲ್ಲಿ ಸಂವೇದನೆ ಮತ್ತು ಮಾನವೀಯ ಪ್ರಜ್ಞೆ ಸದಾ ಜಾಗೃತವಾಗಿತ್ತು ಎಂದರ್ಥವಲ್ಲ. ಇದು ಕೇವಲ ಐದಾರು ವರ್ಷಗಳ ಬೆಳವಣಿಗೆಯೂ ಅಲ್ಲ. ಇಂದು ಅಧಿಕಾರಸ್ಥರ ದಿವ್ಯ ಮೌನದ ಹಿಂದೆ ನಮಗೆ ಕಾಣುತ್ತಿರುವ ಕ್ರೌರ್ಯ ಹಿಂದೆಯೂ ಕಂಡಿದೆ. ಇನ್ನು ಮುಂದೆಯೂ ಕಾಣುತ್ತದೆ.

ಏಕೆಂದರೆ ಈ ಮೌನದ ಹಿಂದೆ ಮೇಲರಿಮೆಯ ಅಹಮಿಕೆ ಇರುವಷ್ಟೇ ಪ್ರಮಾಣದಲ್ಲಿ ಕೀಳರಿಮೆಯ ತಾರತಮ್ಯವೂ ಅಡಗಿದೆ. ಸಾವು ಎಲ್ಲರಿಗೂ ಪೂರ್ವನಿರ್ಧರಿತವೇ ಆಗಿದ್ದರೂ ಭಾರತದಲ್ಲಿ ಇದಕ್ಕೆ ಸಾಮುದಾಯಿಕ ಸ್ಪರ್ಶ ಇದೆ. ಅಸಹಜ ಸಾವುಗಳು ಈ ಸಾಮುದಾಯಿಕ ಅಸ್ಮಿತೆಗಳನ್ನಾಧರಿಸಿ ಮಾನ್ಯತೆ, ಸ್ವೀಕೃತಿ, ಸಾಂತ್ವನ ಮತ್ತು ಶ್ರದ್ಧಾಂಜಲಿಗಳಿಗೆ ಅರ್ಹತೆ ಪಡೆಯುತ್ತವೆ. ಈ ಪರಂಪರೆಗೆ ಬಹಿರಂಗ ಮೌಖಿಕ ಅಭಿವ್ಯಕ್ತಿಯನ್ನು ಕಳೆದ ಆರು ವರ್ಷಗಳಿಂದ ಕಾಣುತ್ತಿದ್ದೇವೆ. ಹಾಗಾಗಿಯೇ ಹಥ್ರಾಸ್ ಘಟನೆಗೆ ಪ್ರಧಾನಮಂತ್ರಿ ಏಕೆ ಪ್ರತಿಕ್ರಯಿಸಬೇಕು ಎಂದು ಕೇಳುವ ಸಂವೇದನೆಯಿಲ್ಲದ ಸಂಸದರೂ ನಮ್ಮ ನಡುವೆ ಇದ್ದಾರೆ.

ಶಿಕ್ಷಕರು ಸಾಯ್ತಾರೆ ಅಂತ ಶಾಲೆ ಮುಚ್ಚೋಕಾಗುತ್ಯೇ ಎಂದು ಕೇಳುವ ರಾಜ್ಯ ಸಚಿವರೂ ನಮ್ಮ ನಡುವೆ ಇದ್ದಾರೆ. ಸತ್ರೆ ಸಾಯ್ತಾರೆ ನಾವೇನ್ಮಾಡೋಕಾಗುತ್ತೆ ಎಂದ ಸಂಸದರೊಬ್ಬರು ಈಗಾಗಲೇ ಇಹಲೋಕ ತ್ಯಜಿಸಿದ್ದಾರೆ. ಈ ಅಸೂಕ್ಷ್ಮತೆಗಳ ನಡುವೆಯೇ ಒಂದು ಆಡಳಿತ ವ್ಯವಸ್ಥೆ ತನ್ನ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳುತ್ತಿದೆ. ಹಥ್ರಾಸ್ ಘಟನೆಯನ್ನು ಕುರಿತು ಬಿಜೆಪಿ ನಾಯಕರು ನೀಡಿರುವ ಹೇಳಿಕೆಗಳನ್ನು ಗಮನಿಸಿದರೆ ಈ ಅಸೂಕ್ಷ್ಮತೆ ಎಷ್ಟು ಆಳವಾಗಿ ಬೇರೂರಿದೆ ಎನ್ನುವುದನ್ನು ಗ್ರಹಿಸಬಹುದು.

ಈ ಜನ ನಾಯಕರಿಗೆ ಮನುಜ ಜೀವಗಳು ಲಿಂಗ ಭೇದಗಳ ನೆಲೆಯಲ್ಲಿ, ಜಾತಿ ಭೇದಗಳ ನೆಲೆಯಲ್ಲಿ ಮತ್ತು ಮತ ಭೇದಗಳ ನೆಲೆಯಲ್ಲಿ ಕಾಣುತ್ತವೆ. ರಾಜಧಾನಿ ದೆಹಲಿಯಿಂದ ಕೇವಲ 200 ಕಿಲೋಮೀಟರ್ ದೂರದಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಈ ದೇಶದ ಪ್ರಧಾನಮಂತ್ರಿಯ ಹೃದಯವನ್ನು ತಟ್ಟುವುದೇ ಇಲ್ಲ. ಗೃಹ ಸಚಿವರು ಕಾಣೆಯಾಗಿರುವುದರಿಂದ ಏನೂ ಹೇಳಲಾಗುವುದಿಲ್ಲ.

ಇರಲಿ, ಇದು ರಾಜಕೀಯ ವಿಕೃತಿಯ ಪರ್ವಕಾಲ. ಸಾವಿರಾರು ಅಮಾಯಕರ ಮಾರಣ ಹೋಮ ನಡೆದಾಗಲೂ ನಮ್ಮ ದೇಶ ಹೀಗೆಯೇ ಇದ್ದಿತಲ್ಲವೇ ? ವಿಕೃತ ರಾಜಕೀಯ ಪ್ರಜ್ಞೆ ಭಾರತದ ಪ್ರಜ್ಞಾವಂತ ಮನಸುಗಳನ್ನು ಎಷ್ಟು ಕೆಡಿಸಿದೆ ಎನ್ನುವುದು ನಮ್ಮ ಮುಂದಿನ ಗಹನವಾದ ವಿಚಾರ. ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯಗಳು ನಿತ್ಯ ಬದುಕಿನ ವಿದ್ಯಮಾನಗಳೇನೋ ಎನ್ನುವಂತೆ ವರ್ತಿಸುವ ಒಂದು ಬೃಹತ್ ಸಮುದಾಯದ ನಡುವೆ ನಾವು ಬದುಕುತ್ತಿದ್ದೇವೆ.

ಈ ಸಮುದಾಯ ಸುಶಿಕ್ಷಿತವಾಗಿದೆ, ಹಿತವಲಯದಲ್ಲಿದೆ ಮತ್ತು ಸುರಕ್ಷಿತವಾಗಿದೆ ಎಂದು ಹೇಳಬೇಕಿಲ್ಲ. ಒಂದು ಅತ್ಯಾಚಾರದ ಘಟನೆಗೆ ಇಡೀ ದೇಶವೇ ಭುಗಿಲೇಳುವುದಿಲ್ಲ ಆದರೆ ಸಾಮಾಜಿಕ ವಲಯದಲ್ಲಿ ಇಂತಹ ಘಟನೆಗಳು ಕೊಂಚವಾದರೂ ಪ್ರಕ್ಷುಬ್ಧತೆಯನ್ನು ಉಂಟುಮಾಡಬೇಕಲ್ಲವೇ ?

ಈ ನಿರ್ಲಜ್ಜತೆಯ ನಡುವೆಯೇ ಭಾರತದ ಮಹಿಳೆಯರು ತಮ್ಮ ಹೆಣ್ತನದ ರಕ್ಷಣೆಗಾಗಿ, ಸ್ವಾಭಿಮಾನದ ಸಂರಕ್ಷಣೆಗಾಗಿ, ಸಮಾನತೆ, ಘನತೆ ಮತ್ತು ಗೌರವಕ್ಕಾಗಿ ದಿನನಿತ್ಯ ಹೋರಾಡಬೇಕಿದೆ. ಅತ್ಯಾಚಾರ ನಡೆದ ಕೂಡಲೇ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎನ್ನುವ ದನಿಗಳು ಮುಗಿಲು ಮುಟ್ಟುತ್ತವೆ. ಆದರೆ ಗಲ್ಲಿಗೇರಿಸಲು ಕಾನೂನು ಪ್ರಕ್ರಿಯೆ ಶೀಘ್ರವಾಗಿ ನಡೆಯಬೇಕು. ನ್ಯಾಯವ್ಯವಸ್ಥೆಯಲ್ಲಿನ ಲೋಪಗಳು ಸರಿಹೋಗಬೇಕು.

ಪೊಲೀಸ್ ಇಲಾಖೆಯಲ್ಲಿ ಸುಧಾರಣೆಗಳು ಜಾರಿಯಾಗಬೇಕು. ಸಿಬಿಐನಂತಹ ಸಾಂವಿಧಾನಿಕ ಸಂಸ್ಥೆಗಳು ಸ್ವಾಯತ್ತತೆ ಪಡೆಯಬೇಕು. ಸರ್ಕಾರಗಳೇ ನೇಮಿಸುವ ವಿಶೇಷ ತನಿಖಾ ದಳ (ಎಸ್ ಐ ಟಿ) ನಿಷ್ಪಕ್ಷಪಾತವಾಗಬೇಕು. ರಾಜಕೀಯ ಹಸ್ತಕ್ಷೇಪಕ್ಕೆ ಅಂತ್ಯ ಹಾಡಬೇಕು. ಈ ಎಲ್ಲ ಆಡಳಿತ ಸುಧಾರಣೆಗಳನ್ನು ತರಲು ನಮ್ಮ ಜನಪ್ರತಿನಿಧಿಗಳಿಗೆ ಮೂಲತಃ ಮಾನವೀಯ ಪ್ರಜ್ಞೆ ಮತ್ತು ಸಂವೇದನೆ ಇರಬೇಕು. ಇಲ್ಲವಲ್ಲಾ !

ದುರಂತ ಎಂದರೆ ಜನಪ್ರತಿನಿಧಿಗಳು ಹೊಲಸು ಮಾತುಗಳ ಸರದಾರರಾಗಿದ್ದಾರೆ. ಹಥ್ರಾಸ್ ಘಟನೆಯ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರದ ವರ್ತನೆಯನ್ನು ಹೈಕೋರ್ಟ್ ಪ್ರಶ್ನಿಸಿರುವುದೇ ಅಲ್ಲದೆ ಕಟುವಾಗಿ ಟೀಕಿಸಿದೆ. ಆದರೆ ಭಾರತದ ನಾಗರಿಕ ಸಮಾಜದ ಪ್ರಜ್ಞೆ ಇದರಿಂದ ಕೊಂಚವೂ ವಿಚಲಿತವಾಗಿಲ್ಲ. ಪಕ್ಷ ರಾಜಕಾರಣ ಮತ್ತು ಇದರಿಂದ ಪ್ರಭಾವಿತವಾಗುವ ಅಸ್ಮಿತೆಯ ರಾಜಕಾರಣ ಭಾರತದ ಪ್ರಜ್ಞಾವಂತ ಸಮುದಾಯವನ್ನು ನಿಷ್ಕ್ರಿಯಗೊಳಿಸಿರುವುದನ್ನು ಕಳೆದ ಎರಡು ದಶಕಗಳಲ್ಲಿ ಕಂಡಿದ್ದೇವೆ.

1984ರ ಸಿಖ್ ಹತ್ಯಾಕಾಂಡ ಮತ್ತು 1980-90ರ ದಶಕದ ರಥಯಾತ್ರೆ ಮತ್ತು ಕೋಮು ಗಲಭೆಗಳಲ್ಲಿ ಮಡಿದ ಸಾವಿರಾರು ಜೀವಗಳಿಗೆ ನ್ಯಾಯ ಒದಗಿಸಲು ನಮ್ಮ ನ್ಯಾಯ ವ್ಯವಸ್ಥೆಗೆ ಸಾಧ್ಯವಾಗಿಲ್ಲ. 2002ರ ಗುಜರಾತ್ ಹತ್ಯಾಕಾಂಡದಲ್ಲಿ ಬಲಿಯಾದ ಜೀವಗಳನ್ನು ನಾವು ಮರೆತೇ ಹೋಗಿದ್ದೇವೆ. ಇದನ್ನು ಪ್ರಸ್ತಾಪಿಸಿದ ಕೂಡಲೇ ಕಾಶ್ಮೀರ ಮತ್ತು ಪಂಡಿತರ ಪ್ರಶ್ನೆ ಧುತ್ತೆಂದು ಎದುರಾಗುತ್ತದೆ. ಪಂಡಿತರಿಗೆ ಮಿಡಿಯುವ ಮನಸುಗಳು, ಕಾಶ್ಮೀರದಲ್ಲಿ ಒಂದೆಡೆ ಉಗ್ರಗಾಮಿಗಳ ಗುಂಡಿಗೆ ಮತ್ತೊಂದೆಡೆ ಸೇನೆಯ ಗುಂಡಿಗೆ ಬಲಿಯಾದ ಲಕ್ಷಾಂತರ ಅಮಾಯಕ ಕಾಶ್ಮೀರಿಗಳಿಗೆ ಮಿಡಿಯುವುದಿಲ್ಲ. ಅಲ್ಲಿ ಮತ್ತೆ ಅಸ್ಮಿತೆ ಮತ್ತು ರಾಜಕಾರಣ ಅಡ್ಡಿಯಾಗುತ್ತದೆ.

ಅಸಹಜ ಸಾವುಗಳಿಂದ ವಿಚಲಿತರಾಗದ ಮನಸ್ಥಿತಿಯನ್ನು ಭಾರತ ರೂಢಿಸಿಕೊಂಡು ವರುಷಗಳೇ ಕಳೆದಿವೆ. ಸತ್ತವರು ನಮ್ಮವರೋ ಅನ್ಯರೋ ಎಂದು ಶವಗಳನ್ನು ವಿಂಗಡಿಸುವ ಪರಂಪರೆಯನ್ನು ಈ ದೇಶದ ಸಾಂಸ್ಕೃತಿಕ ರಾಜಕಾರಣ ವ್ಯವಸ್ಥಿತವಾಗಿ ಬೆಳೆಸಿಕೊಂಡುಬಂದಿದೆ. ರಾಶಿರಾಶಿ ಶವಗಳಲ್ಲೂ ಹೆಕ್ಕಿ ತೆಗೆಯುವ ವಿಕೃತ ಪರಂಪರೆಯೂ ಇಲ್ಲಿ ನೆಲೆಯೂರಿದೆ.

ಈ ಪರಂಪರೆಗೆ ಜನಸಾಮಾನ್ಯರು ಬಲಿಯಾಗಿರುವುದೇ ಅಲ್ಲದೆ ಸಾಂವಿಧಾನಿಕ ಸಂಸ್ಥೆಗಳೂ ಬಲಿಯಾಗಿರುವುದನ್ನು ಇತ್ತೀಚಿನ ಬಾಬ್ರಿ ಮಸೀದಿ ಧ್ವಂಸದ ತೀರ್ಪಿನಲ್ಲಿ ಕಾಣಬಹುದು. ಇಡೀ ದೇಶವೇ ಗಮನಿಸಿದಂತೆ ಲಕ್ಷಾಂತರ ಯುವಕರನ್ನು ಪ್ರಚೋದಿಸಿ ಉರುಳಿಸಲಾದ 400 ವರ್ಷಗಳ ಒಂದು ಸ್ಥಾವರ ತಂತಾನೇ ಕುಸಿದಿದೆ, ಅದೊಂದು ಅಪಘಾತ ಎಂದು ಬಣ್ಣಿಸುವ ನ್ಯಾಯಾಂಗ, ಈ ಕುಸಿದ ಸ್ಥಾವರದ ಅವಶೇಷಗಳಡಿ ಸಿಲುಕಿರುವ ನೂರಾರು ಮೃತ ಜೀವಗಳಿಗೆ ನ್ಯಾಯ ಒದಗಿಸಲು ಸಾಧ್ಯವೇ ?

ಇಂತಹ ಒಂದು ವ್ಯವಸ್ಥೆಯಲ್ಲಿ ಶೋಷಿತ ಸಮುದಾಯದ ಹೆಣ್ಣು ಮಗಳಿಗೆ ನ್ಯಾಯ ದೊರೆಯುತ್ತದೆ ಎಂದು ನಿರೀಕ್ಷಿಸುವುದಾದರೂ ಹೇಗೆ ? ಅಪರಾಧಿಗಳ ರಕ್ಷಣೆಗಾಗಿ ಪ್ರತ್ಯಕ್ಷ ಸಾಕ್ಷಿಗಳನ್ನು ಎನ್ಕೌಂಟರ್ ಮೂಲಕ ಇಲ್ಲವಾಗಿಸುವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಒಂದು ಷಡ್ಯಂತ್ರಕ್ಕೆ ಈಗ ವ್ಯವಸ್ಥಿತ ಚೌಕಟ್ಟನ್ನು ನಿರ್ಮಿಸಲಾಗಿರುವುದನ್ನೂ ಕಾಣುತ್ತಿದ್ದೇವೆ.

ಹಥ್ರಾಸ್‍ನಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಯ ಮೃತ ದೇಹವನ್ನು ಪೊಲೀಸರೇ ಸುಟ್ಟುಹಾಕಿರುವುದು ಈ ವಿದ್ಯಮಾನದ ಒಂದು ಆಯಾಮವಷ್ಟೇ. ಇದೆರ ವಿರಾಟ್ ಸ್ವರೂಪವನ್ನು 2002ರ ಗುಜರಾತ್ ಹತ್ಯಾಕಾಂಡದ ನಂತರ ಕಂಡಿದ್ದೇವೆ. ಬೆಲ್ಚಿಯಿಂದ ಕಂಬಾಲಪಲ್ಲಿ, ಊನ ಘಟನೆಗಳವರೆಗೆ ಕಂಡಿದ್ದೇವೆ. ಸ್ವತಂತ್ರ ಭಾರತದಲ್ಲಿ ಸಂಭವಿಸಿದ ಸಾಮೂಹಿಕ ಹತ್ಯಾಕಾಂಡಗಳಲ್ಲಿ ಯಾರಿಗೂ ಶಿಕ್ಷೆಯಾಗಿಲ್ಲ ಎನ್ನುವುದನ್ನು ನೆಲ್ಲಿ ಹತ್ಯಾಕಾಂಡದಿಂದ ಗುಜರಾತ್ ಹತ್ಯಾಕಾಂಡದವರೆಗೂ ಕಂಡಿದ್ದೇವೆ. ಇಲ್ಲಿಯೂ ನಮ್ಮ ಪ್ರಜ್ಞೆ ಪಕ್ಷ ರಾಜಕಾರಣ ಮತ್ತು ಅಸ್ಮಿತೆಗಳ ಸರಳುಗಳಲ್ಲಿ ಬಂಧಿತವಾಗಿಬಿಡುತ್ತದೆ.

ಸಂಭವಿಸಿದ ಅಪರಾಧಗಳನ್ನು ಮುಖಾಮುಖಿಯಾಗಿಸುವ ಮೂಲಕ ಅಪರಾಧಿಗಳನ್ನು ಸಮರ್ಥಿಸಿಕೊಳ್ಳುವ ವಿಕೃತ ಪರಂಪರೆಯನ್ನು ಪೋಷಿಸುತ್ತಲೇ ಬಂದಿರುವ ಭಾರತದ ನಾಗರಿಕ ಸಮಾಜ, ಇಂದಿಗೂ ಅಪರಾಧಿಗಳನ್ನು ಶಾಸನ ಸಭೆಗಳಲ್ಲಿ ಸಹಿಸಿಕೊಳ್ಳುತ್ತಲೇ ಬಂದಿದೆ.

ಭ್ರಷ್ಟಾಚಾರ ರಹಿತ ಭಾರತದಲ್ಲಿ ಅನೇಕಾನೇಕ ಭ್ರಷ್ಟರು ಅಧಿಕಾರ ಪೀಠದಲ್ಲಿ ವಿರಾಜಮಾನರಾಗಿದ್ದಾರೆ. ಮತ್ತದೇ ಪಕ್ಷ ರಾಜಕಾರಣ ಮತ್ತು ಅಸ್ಮಿತೆಯ ಗುಂಗು. ಐದು ವರ್ಷಕ್ಕೊಮ್ಮೆ ಮತ ಚಲಾಯಿಸುವಾಗ ಬೆರಳ ತುದಿಗೆ ಹಚ್ಚುವ ಶಾಯಿಯ ಗುರುತು ಸ್ವಲ್ಪ ದಿನಗಳ ನಂತರ ಅಳಿಸಿಹೋಗುತ್ತದೆ. ಆದರೆ ಇಂದು ನಮ್ಮ ಪ್ರಜಾತಂತ್ರ ದೇಶದಲ್ಲಿ ಅಧಿಕಾರ ಪೀಠಗಳಲ್ಲಿ ಕುಳಿತು ಆದರ್ಶ, ನೈತಿಕತೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಮಾತುಗಳನ್ನಾಡುತ್ತಿರುವವರ ಕೈಗಳಿಗೆ ಮೆತ್ತಿರುವ ಅಮಾಯಕ ಜನರ ನೆತ್ತರ ಕಲೆ ಅಳಿಸಲು ಸಾಧ್ಯವೇ ಇಲ್ಲ.

ಆದರೆ ನಮಗೆ ಅದು ಗೆಲುವಿನ ಸಂಕೇತದಂತೆ ಕಾಣುತ್ತದೆ, ವಿಜಯೋತ್ಸವದ ಚಿಹ್ನೆಯಂತೆ ಕಾಣುತ್ತದೆ. ಇದು ನಮ್ಮ ದೇಶದ ದುರಂತ. ನಾವು ಪ್ರಜಾತಂತ್ರವನ್ನು ಬಯಸುತ್ತೇವೆ ಆದರೆ ಪ್ರಜಾಸತ್ತಾತ್ಮಕ ಮನಸ್ಥಿತಿಯನ್ನು ಅಸ್ಮಿತೆಗಳ ಭ್ರಮೆಗೆ ಸಿಲುಕಿ ಹೊಸಕಿ ಹಾಕುತ್ತಿದ್ದೇವೆ. ಮಾನವ ಹಕ್ಕುಗಳು ನಮಗೆ ಅಪಥ್ಯವಾಗುತ್ತದೆ, ಕೆಲವೊಮ್ಮೆ ಸಹಮಾನವರೇ ಅಪಥ್ಯವಾಗಿಬಿಡುತ್ತಾರೆ.

ಹಥ್ರಾಸ್ ಘಟನೆಯಲ್ಲಿ ಮೃತಪಟ್ಟ ಮನೀಷಾ ಈ ಅಪಥ್ಯರಾದವರ ಗುಂಪಿಗೆ ಸೇರುತ್ತಾಳೆ. ಆಕೆಯ ಮೇಲೆ ಅತ್ಯಾಚಾರ ಎಸಗಿದ ಠಾಕೂರರು ಕೆಲವು ವರ್ಷಗಳ ನಂತರ ಕೇಂದ್ರ ಸಚಿವರಾದರೂ ನಾವು ವಿಚಲಿತರಾಗುವುದಿಲ್ಲ. ಈ ಮನಸ್ಥಿತಿ ನಾಗರಿಕ ಸಮಾಜವನ್ನು ಆವರಿಸಿರುವುದರಿಂದಲೇ ನಿರ್ಭಯ ನಮಗೆ ನೆನಪಾಗಿಯೇ ಉಳಿಯಲಿದ್ದಾಳೆ. ಜಾತಿ, ಮತಧರ್ಮ ಮತ್ತು ಲಿಂಗಭೇದಗಳ ಚೌಕಟ್ಟಿನಲ್ಲಿ ಸಾವು ಸ್ವೀಕೃತವಾಗುತ್ತಿರುವಂತೆಯೇ ಮನುಷ್ಯನ ಪ್ರಜ್ಞೆಯೂ ಸಹ ವಿಕೃತಿಯ ಪರಾಕಾಷ್ಠೆ ತಲುಪುತ್ತಿದೆ. ಇದಕ್ಕೆ ಪರಿಹಾರವೇನು ? ಪ್ರತಿರೋಧಗಳ ನಡುವೆಯೇ ನಾವು ಶೋಧಿಸಬೇಕಿರುವುದು ಇದನ್ನೇ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ಗೌಡ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ: ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ವಿಭಾಗ-2ರ ವ್ಯಾಪ್ತಿಗೆ 2023-24 ರಿಂದ 2025-26 ರವರೆಗೆ ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ಅನುದಾನಗಳ ಖರ್ಚು-ವೆಚ್ಚವನ್ನು ಇಲಾಖಾ ತನಿಖೆ ನಡೆಸುವಂತೆ ದೂರು ನೀಡಿ 5 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷö್ಯ ತೋರಿದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್ ಗೌಡ ಎಂ.ಬಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತಾಗೆ ದೂರು ಸಲ್ಲಿಸಿದ್ದಾರೆ.

ದಾವಣಗೆರೆ ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ವಿಭಾಗ-2 ರ ವ್ಯಾಪ್ತಿಗೆ ಒಳಪಡುವ ಮಾಯಕೊಂಡ, ಹೊನ್ನಾಳಿ, ಚನ್ನಗಿರಿ ಉಪ ವಿಭಾಗಗಳು ಹಾಗೂ ವಿಭಾಗ-2ರ ಕಛೇರಿಯ ವ್ಯಾಪ್ತಿಗೆ 2023-24 ರಿಂದ 2025-26ನೇ ಸಾಲಿನ ಅವಧಿಯಲ್ಲಿ ಬಿಡುಗಡೆಯಾಗಿರುವ ಸ್ಥಳೀಯ ಶಾಸಕರ ಅನುದಾನದಲ್ಲಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಹಣವನ್ನು ಇಲಾಖೆಯ ವಾಹನಗಳ ಇಂಧನ ವೆಚ್ಚಕ್ಕೆಂದು ನಿಯಮಬಾಹಿರವಾಗಿ ದುರ್ಬಳಕೆ ಮಾಡಿಕೊಂಡಿರುವುದು ಮಾತ್ರವಲ್ಲದೆ, ಬಹುತೇಕ ಕಡೆಗಳಲ್ಲಿ ಯಾವುದೇ ಕಾಮಗಾರಿ ನಡೆಸದೆ ನಕಲಿ ಕಡತ ಸೃಷ್ಟಿಸಿ ಸ್ಥಳೀಯ ಶಾಸಕರ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ವಿಷಯವು ಅಧಿಕೃತ ಮೂಲಗಳಿಂದ ತಿಳಿದು ಬಂದ ಕಾರಣ ಮಾಹಿತಿಹಕ್ಕು ಅಡಿಯಲ್ಲಿ ಹಲವಾರು ಭಾರಿ ಅರ್ಜಿ ಸಲ್ಲಿಸಿ, ಮಾಹಿತಿ ಕೋರಿದಾಗಲೂ ನಿಯಮಬಾಹಿರವಾಗಿ ಹಿಂಬರಹ ನೀಡುತ್ತ ಬಂದಿರುತ್ತಾರೆ.

ಆದ ಕಾರಣ ದಾವಣಗೆರೆ ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ವಿಭಾಗ-2ರ ವ್ಯಾಪ್ತಿಗೆ 2023-24 ರಿಂದ 2025-26 ರವರೆಗೆ ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ಅನುದಾನಗಳ ಖರ್ಚು-ವೆಚ್ಚವನ್ನು ಇಲಾಖಾ ತನಿಖೆಗೆ ಒಳಪಡಿಸಿ, ಕೈಗೊಂಡ ಕ್ರಮದ ವರದಿಯನ್ನು ನೀಡುವಂತೆ ವ್ಯವಸ್ಥಾಪಕ ನಿರ್ದೇಶಕರು, ಕೆ.ಆರ್.ಐ.ಡಿ.ಎಲ್, ಬೆಂಗಳೂರು ಇವರಿಗೆ ದಿನಾಂಕ: 06-02-2026 ರಂದು ದೂರು ನೀಡಲಾಗಿತ್ತು. ಆದರೆ ದೂರು ನೀಡಿ 2 ತಿಂಗಳು ಕಳೆದರೂ ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ದಿನಾಂಕ: 21-04-2026 ರಂದು ಜ್ಞಾಪನ ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ 2 ತಿಂಗಳು ಕಳೆದರೂ ಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್‌ಗೌಡ ಎಂ.ಬಿ ಇವರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.

ಆದ ಕಾರಣ ನಿರ್ಲಕ್ಷö್ಯ ತೋರಿದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್‌ಗೌಡ ಎಂ.ಬಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತ ಕಾಯ್ದೆಯ ಅನುಸಾರ ಪ್ರಕರಣ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ಸಲ್ಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ

Published

on

ಸುದ್ದಿದಿನ,ಚಿತ್ರದುರ್ಗ:ಮಾಜಿ ರಾಜ್ಯಸಭಾ ಸದಸ್ಯರು ಹೆಚ್ ಹನುಮಂತಪ್ಪನವರು (95ವರ್ಷ) ವಯೋಸಹಜ ಅನಾರೋಗ್ಯದಿಂದ ದೈವಧೀನರಾಗಿದ್ದಾರೆ ಎಂದು ಪುತ್ರ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹೆಚ್ ಮೋಹನ್ ಅವರು  ತಿಳಿಸಿದ್ದಾರೆ.

ಅಂತ್ಯಕ್ರಿಯೆಯನ್ನು ನಾಳೆ (ಸೋಮವಾರ) ಮಧ್ಯಾಹ್ನ 4:00 ಗಂಟೆಗೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆ ಮುಕ್ತಿದಾಮದಲ್ಲಿ ನೆರವೇರಿಸಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ‌.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending