Connect with us

ನೆಲದನಿ

ನುಡಿಯ ಒಡಲು – 08 | ನೋಮ್ ಚಾಮ್‍ಸ್ಕಿಯ ಭಾಷಿಕ ಚಿಂತನೆಗಳು

Published

on

  • ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

When we study human language, we are approaching what some might call the “human essence,” the distinctive qualities of mind that are, so far as we know, unique to man. – NOAM CHOMSKY, Language and Mind, 1968

ನುಡಿಯೆಂಬುದು ಮನುಷ್ಯರಲ್ಲಿ ಅಂತಸ್ಥಗೊಂಡಿರುತ್ತದೆ. ಅದೊಂದು ಸಾಮರ್ಥ್ಯ ಎಂಬೆಲ್ಲ ಸಂಗತಿಗಳಿಗೆ ಪೂರಕವಾದ ಕೆಲವು ಸುಳಿವುಗಳು ಫರ್ಡಿನಾಂಡ್ ಡಿ. ಸಸ್ಯೂರ್‍ನ ಚಿಂತನೆಗಳಿಂದ ಸಿಕ್ಕಿವೆ. ಇಂತಹ ಸಾಮರ್ಥ್ಯ ಎಲ್ಲಿ? ಹೇಗೆ? ಮತ್ತು ಯಾವ? ಸ್ವರೂಪದಲ್ಲಿ ಮಾನವರಲ್ಲಿ ಅಂತಸ್ಥವಾಗಿರುತ್ತದೆ ಎಂಬ ತಿಳಿವನ್ನು ಅರಿಯಲು ಈಗ ಚಾಮ್‍ಸ್ಕಿಯ ಚಿಂತನೆಗಳನ್ನು ಚರ್ಚಿಸೋಣ.

ಹೊರನೋಟಕ್ಕೆ ನುಡಿಯ ಸಾಮರ್ಥ್ಯ ದೇಹದ ಬೇರೆ ಬೇರೆ ಅಂಗಾಂಗಳಲ್ಲಿ ನೆಲೆಗೊಂಡಂತೆ ಕಾಣುತ್ತದೆ. ನುಡಿಯ ಆಚರಣೆಯ (ಲಿಂಗ್ವಿಸ್ಟಿಕ್ ಪರ್ಫಾರ್‍ಮನ್ಸ್) ನೆಲೆಯಿಂದ ನೋಡಿದಾಗ, ಈ ಮಾತು ದಿಟವಾಗಿ ಕಾಣುತ್ತದೆ. ಅಂದರೆ ನುಡಿಯ ವಾಸ್ತವದ ಪರಿಚಯ ನಮಗಾಗುವುದೇ ದೇಹದ ಬೇರೆ ಬೇರೆ ಅಂಗಗಳಿಂದ ಮಾತ್ರ.

ಎತ್ತುಗೆಗಾಗಿ ಬಾಯಿ, ತುಟಿ, ಹಲ್ಲು, ಗಂಟಲು, ಕಿರುನಾಲಿಗೆ, ಮೂಗು, ಶ್ವಾಸಕೋಶ, ಎದೆ, ಪಿತ್ತಾಶಯ [ಲೀವರ್] ಮುಂತಾದವುಗಳನ್ನು ಇಲ್ಲಿ ಹೆಸರಿಸಬಹುದು. ದಿಟ, ನುಡಿಯ ಬಳಕೆ ಹಾಗೂ ಉಪಯೋಗ ಸಮುದಾಯಗಳಲ್ಲಿ ನೆಲೆಗೊಳ್ಳುವುದೇ ಇಂತಹ ಅಂಗಗಳನ್ನು ಬಳಸಿಕೊಳ್ಳುವುದರಿಂದ ಮಾತ್ರ ಸಾಧ್ಯ. ಈ ಕಾರಣಗಳಿಂದಲೇ ಇರಬೇಕು ಜನರು ತಮ್ಮ ಸಾಂಸ್ಕೃತಿಕ ಸನ್ನಿವೇಶದಲ್ಲಿ ನುಡಿಗೆ ಬದಲಾಗಿ ನಾಲಿಗೆ, ಬಾಯಿಬಿಡು, ಮಾತುಕೊಡು, ತುಟಿಬಿಚ್ಚು, ಪಿಟಕ್ಕನ್ನು, ಎಂಬೆಲ್ಲ ಪರಿಭಾಷೆಗಳನ್ನು ಬಳಸುತ್ತಾರೆ.

ಈ ಎಲ್ಲ ವಿವರಗಳು ನುಡಿಯೊಂದು ವಾಸ್ತವಗೊಳ್ಳುವ ಬಗೆಗಳು ಯಾವವು ಹಾಗೂ ಯಾವುದೇ ಒಂದು ನುಡಿಸಮುದಾಯ ತನ್ನ ನುಡಿಯನ್ನು ಹೇಗೆಲ್ಲ ಸಾಂಸ್ಕೃತಿಕವಾಗಿ ಕಲ್ಪಿಸಿಕೊಂಡಿರುತ್ತದೆ ಎಂಬ ತಿಳಿವು ಮಾತ್ರ ಈ ಚರ್ಚೆಗಳಿಂದ ತಿಳಿಯುತ್ತದೆ. ಚಾಮ್‍ಸ್ಕಿಗೆ ಈ ಯಾವ ವಿವರಗಳು ಮುಖ್ಯವಲ್ಲ. ಅಂದರೆ ನುಡಿ ಕುರಿತ ಅವನ ತಾತ್ವಿಕ ಚೌಕಟ್ಟುಗಳಿಗೆ ಇಂತಹ ಚರ್ಚೆಗಳಿಂದ ಯಾವ ಪ್ರಯೋಜನವು ಆಗುವುದಿಲ್ಲ.

ಬದಲಾಗಿ ಅರಿವಿನ ನುಡಿಯರಿಮೆ (ಕಾಗ್ನಿಟಿವ್ ಲಿಂಗ್ವಿಸ್ಟಿಕ್ಸ್)ಯ ಕಣ್ನೋಟದಿಂದ ಚಾಮ್‍ಸ್ಕಿಯ ನುಡಿ ಬಗೆಗಿ ಚಿಂತನೆಗಳನ್ನು ತಿಳಿಯುವ ಜರೂರಿದೆ. ನುಡಿಯನ್ನು ಅರಿಯುವ, ನಿರ್ವಚಿಸುವ ಕ್ರಮಗಳು ಮೆದಳು, ಮನಸ್ಸು ಹಾಗೂ ಚಿಂತನೆಯ ಸ್ವರೂಪವನ್ನು ಅರಿಯುವ ಬಗೆಗಳಾಗಿವೆ. ಇಪ್ಪತ್ತನೇ ಶತಮಾನದ ಇಂತಹ ‘ಅರಿವಿನ ಕ್ರಾಂತಿ’ (ಕಾಗ್ನಿಟಿವ್ ರೆವಲ್ಯೂಶನ್)ಗೆ ಚಾಮ್‍ಸ್ಕಿಯ ಈ ಆಲೋಚನಾಕ್ರಮವೇ ಕಾರಣ. ನುಡಿಯರಿಮೆಯ ಓದಿನಲ್ಲಿಯೇ ಇಂತಹವೊಂದು ಆಲೋಚನಾ ಪಲ್ಲಟಕ್ಕೆ ಚಾಮ್‍ಸ್ಕಿ ಕಾರಣವೆಂಬುದು ಗಮನಾರ್ಹ ಸಂಗತಿ.

ಹಾಗಾದರೆ, ಚಾಮ್‍ಸ್ಕಿಗೆ ನುಡಿ ಬಗೆಗಿನ ಚಿಂತನೆಗಳನ್ನು ಬೆಳೆಸಲು ಬೇಕಾಗಿರುವ ಸಂಗತಿಗಳಾವವು? ಇವನು ನುಡಿ ಕುರಿತ ತನ್ನ ಚಿಂತನೆಗಳನ್ನು ಮುಂದೊಡ್ಡಲು ಮೆದಳು, ಮನಸ್ಸು, ಜೈವಿಕ ನೆಲೆಗಳು ಹಾಗೂ ಅವುಗಳಲ್ಲಿ ಅಡಕವಾಗಿರುವ ಸಾಮರ್ಥ್ಯದಂತಹ ಸಂಗತಿಗಳನ್ನು ಬಳಸಿಕೊಳ್ಳುತ್ತಾನೆ.

ಅದಕ್ಕಾಗಿ ಚಾಮ್‍ಸ್ಕಿ “ನುಡಿಯೆಂಬುದು ಕಲಿಯುವುದಲ್ಲ ಬದಲಾಗಿ ಅದನ್ನು ಕಲಿಯುವುದಕ್ಕೆ ಬೇಕಾಗುವ ಸಾಮರ್ಥ್ಯ ಮಾನವರ ಮೆದುಳಿನಲ್ಲಿ ಅಡಕವಾಗಿರುತ್ತದೆ” ಎಂದು ಹೇಳುತ್ತಾನೆ. ಈ ತಿಳಿವನ್ನು ಮೂರು ಬೇರೆ ಬೇರೆ ಬಗೆಯಲ್ಲಿ ವಿಂಗಡಿಸಿ ನೋಡುವುದರಿಂದ ಈ ಚಿಂತನೆಯ ಬೇರೆ ಬೇರೆ ಆಯಾಮಗಳನ್ನು ಕಾಣಬಹುದು;

  1. ಸಾಮಥ್ರ್ಯ ಮಾದರಿ (ಕಾಂಪಿಟನ್ಸ್ ಮಾಡಲ್)
  2. ಆಚರಣೆ ಮಾದರಿ (ಪರ್ಫಾರ್‍ಮೆನ್ಸ್ ಮಾಡಲ್)
  3. ನುಡಿ ಗಳಿಕೆಯ ಮಾದರಿ (ಆಕ್ವಿಜೇಶನ್ ಮಾಡಲ್)

ಈ ಮೂರು ನೆಲೆಗಳು ಪರಸ್ಪರ ನಂಟುಳ್ಳವುಗಳಾಗಿವೆ. ಇವುಗಳ ಗುಣವೆಂತಹದು ಎಂಬುದನ್ನು ಬಿಡಿಸಿ ನೋಡಿದರೆ, ಚಾಮ್‍ಸ್ಕಿಯ ನುಡಿ ಬಗೆಗಿನ ತಿಳಿವಳಿಕೆಗಳು ನಮ್ಮರಿವಿಗೆ ಬರುತ್ತವೆ. ಇವುಗಳಲ್ಲಿ ಯಾವುದೇ ಒಂದನ್ನು ಹೊರತುಪಡಿಸಿ, ಚಾಮ್‍ಸ್ಕಿಯ ನುಡಿ ಬಗೆಗಿನ ಚಿಂತನೆಗಳನ್ನು ಅರಿಯುವುದು ಕೊಂಚ ದುಸ್ತರವೇ ಸರಿ.

ನುಡಿಯಿಗರು (ಜನರು) ನುಡಿಯನ್ನು ಹೇಗೆ ಗಳಿಸಿಕೊಳ್ಳುತ್ತಾರೆ. ಹಾಗೇ ಗಳಿಸಿಕೊಳ್ಳಲು ಯಾವ ಬಗೆಯ ಜೈವಿಕ ನೆರವು ಅವರಿಗೆ ಸಿಗುತ್ತದೆ. ಹಾಗೂ ಅದೆಲ್ಲವೂ ಹೇಗೆ ಒಂದು ಮಾನಸಿಕ ಸಾಮರ್ಥ್ಯವಾಗಿ ಅವರಿಗೆ ದಕ್ಕುತ್ತದೆ? ನುಡಿಯಿಗರ ಸೃಜನಶೀಲ ಕಸುವು ಎಂತಹದು? ಹಾಗೂ ಆಡುಗನು ತಾನು ಈ ಹಿಂದೆ ಯಾವತ್ತು ಉತ್ಪಾದಿಸದ ಹೊಸ ಹೊಸ ವಾಕ್ಯಗಳನ್ನು ಹೇಗೆ ಕಟ್ಟುತ್ತಾನೆ.

ಹಾಗೇನೆ ಕೇಳುವ ಯಾವತ್ತು ಈ ಹಿಂದೆ ಕೇಳದೇ ಇರುವ ಆ ಹೊಸ ಹೊಸ ವಾಕ್ಯಗಳನ್ನು ಹೇಗೆ ಅರಿತುಕೊಳ್ಳುತ್ತಾನೆ. ಇಂತಹ ಸೊಲ್ಲುಗಳ ಉತ್ಪಾದನೆ ಹಾಗೂ ಗ್ರಹಿಕೆಗೆ ಯಾವುದೇ ಮಿತಿಯಿರುವುದಿಲ್ಲ. ಅಪರಿಮಿತವಾಗಿ ಈ ಕೆಲಸ ನುಡಿಯಲ್ಲಿ ನಡೆಯುತ್ತದೆ. ಇದರಿಂದ ಮಾನವರಿಗೆ ಅಂತಸ್ಥ ಸಾಮರ್ಥ್ಯವಿದೆ ಎಂದಾಯ್ತು. ಇದನ್ನೇ ಚಾಮ್‍ಸ್ಕಿ ಅನಂತತ್ವ (ಇನ್‍ಫಿನಿಟಿ) ಎಂದು ಹೇಳುತ್ತಾನೆ. ಇಂತಹ ಎಲ್ಲ ನಿಲುವುಗಳನ್ನು ಕುರಿತು ಚರ್ಚಿಸುವುದೇ ಸಾಮರ್ಥ್ಯದ ಮಾದರಿ.

ಸಾಮರ್ಥ್ಯ ಮಾದರಿ

(ಸೊಲ್ಲರಿಮೆ/ವ್ಯಾಕರಣ)

ಉಲಿಗಳು     (ಸೌಂಡ್ಸ್)

ಭಾಷಿಕ ಅರ್ಥ  ‌‌ (ಲಿಂಗ್ವಿಸ್ಟಿಕ್ಸ್ ಮೀನಿಂಗ್)

ಚಿತ್ರ 1.ಅ ಸಾಮರ್ಥ್ಯ ಮಾದರಿ

ನುಡಿಯಿಗರ ಮೆದುಳಿನಲ್ಲಿ ಅಂತಸ್ಥವಾಗಿರುವ ನುಡಿಯ ತಿಳಿವು (ನಾಲೇಜ್ ಆಫ್ ಲಾಂಗ್ವೇಜ್) ಹೇಗೆ ಒಂದು ಉತ್ಪಾದಕ – ರೂಪಾಂತರ ನೆಲೆಯಾಗಿ ಬರ್ಹಿರೂಪವನ್ನು ಪಡೆಯುತ್ತದೆ. ನುಡಿಯ ಸೊಲ್ಲುಗಳನ್ನು ಕಟ್ಟುವ, ಸೊಲ್ಲುಗಳ ನಡುವಣ ನಂಟಸ್ತಿಕೆ ಹಾಗೂ ಭಿನ್ನತೆಗಳನ್ನು ಗುರುತಿಸುವ, ಹಾಗೂ ನುಡಿಯ ಮೂಲ ದತ್ತದಿಂದ (ಪ್ರೈಮರಿ ಲಿಂಗ್ವಿಸ್ಟಿಕ್ಸ್ ಡೇಟ) ಅಂತಸ್ಥ ಸಾಮರ್ಥ್ಯದ ಲಕ್ಷಣಗಳು ಆಚರಣೆಯ ನೆಲೆಯನ್ನು ಹೇಗೆ ಪಡೆಯುತ್ತವೆ.

ಅವುಗಳ ಮೂಲಕ ಆಯಾ ನುಡಿಯ ಅಂತರ್ನಿಹಿತ ನಿಯಮಗಳನ್ನು ಹೇಗೆ ಗುರುತಿಸುತ್ತೇವೆ, ಹಾಗೂ ಒಳಪದರ (ಡೀಪ್ ಸ್ಟ್ರಕ್ಚರ್) ರಚನೆ ಮತ್ತು ಹೊರಪದರ (ಸರ್ಫೇಸ್ ಸ್ಟ್ರಕ್ಚರ್) ರಚನೆಗಳು ಪರಸ್ಪರವಾಗಿ ಹೇಗೆ ವ್ಯವರಿಸುತ್ತವೆ ಎಂಬಿತ್ಯಾದಿ ಸಂಗತಿಗಳನ್ನು ಈ ಆಚರಣೆಯ ಮಾದರಿಯಿಂದ ತಿಳಿಯುತ್ತೇವೆ. ಇನ್ನೊಂದು ಸಂಗತಿಯನ್ನು ಈ ಆಚರಣೆಯ ನೆಲೆಯಿಂದ ಅರಿತುಕೊಳ್ಳಲು ಅನಕೂಲವಾಗುತ್ತದೆ.

ಅದೇನೆಂದರೆ, ಮಾನವರ ವರ್ತನೆ ಮತ್ತು ಇತರ ಪ್ರಾಣಿಗಳ ವರ್ತನೆಗಳ ನಡುವೆ ಯಾವ ಬಗೆಯ ಗುಣಾತ್ಮಕ, ಭಾಷಿಕ, ವೈಚಾರಿಕ ವ್ಯತ್ಯಾಸಗಳಿರುತ್ತವೆ ಎಂಬು ದಿಟ ಸಂಗತಿಗಳನ್ನು ಅರಿಯುಲೂ ಈ ಆಚರಣೆಯ ಮಾದರಿ ನೆರವಾಗುತ್ತದೆ.

ಸಂವಹನ ಆಶಯ    (ಕಮ್ಯುನಿಕೇಟಿವ್ ಇನ್‍ಟೆನ್ಶನ್)

ಉಲಿಗಳು        (ಸೌಂಡ್ಸ್)

ಚಿತ್ರ 1.ಆ ಆಚರಣೆಯ ಮಾದರಿ

ನುಡಿಯನ್ನು ಗಳಿಸುವ, ಆ ಮೂಲಕ ನುಡಿ ಬಗೆಗಿನ ತಿಳಿವು ಸಂಚಯಗೊಳ್ಳುವ, ಹೀಗೆ ಸಂಚಯಗೊಂಡ ತಿಳಿವು ಒಂದು ಅನುಭವವಾಗಿ ರೂಪುಗೊಳ್ಳುವ ನೆಲೆಗಳು ಈ ಗ್ರಹಿಕೆಯ ಮಾದರಿಯಿಂದ ತಿಳಿದುಬರುತ್ತವೆ.

ಹಿಂದೆಂದೂ ಕೇಳಿರದ, ಓದಿರದ ಸೊಲ್ಲುಗಳನ್ನು (ವಾಕ್ಯ) ಕಟ್ಟುವುದಕ್ಕೆ ಹೇಗೆ ಸಾಧ್ಯ? ಯಾವುದೇ ಔಪಚಾರಿಕ ತರಬೇತಿಯಿಲ್ಲದೇನೆ ಮಗುವೊಂದು ಸರಳವಾಗಿ ನುಡಿಯ ಎಲ್ಲ ರಾಚನಿಕ ನೆಲೆಗಳನ್ನು ಹೇಗೆ ಪಡೆದುಕೊಳ್ಳುತ್ತೆ? ಸೊಲ್ಲರಿಮೆಗೆ ಒಪ್ಪಿತವಾಗದ (ಉದಾ.ಗೆಗಾಗಿ. ಕಮಲ ಇವತ್ತು ಕ್ಲಾಸಿಗೆ ಬಂದಿದ್ದಾನೆಯೇ?) ಸೊಲ್ಲುಗಳಿಗೂ ಹಾಗೂ ಸೊಲ್ಲರಿಮೆಗೆ ಒಪ್ಪಿತವಾಗುವ (ಉದಾ.ಗೆಗಾಗಿ. ಕಮಲ ಇವತ್ತು ಕ್ಲಾಸಿಗೆ ಬಂದಿದ್ದಾಳೆಯೇ) ಸೊಲ್ಲುಗಳಿಗೂ ಇರುವ ಅಂತರವನ್ನು ಹೇಗೆ ಗುರುತಿಸಲಾಗುತ್ತೆ?

ಅತ್ಯಂತ ಕಡಿಮೆ ಹೂಡುವಳಿಗಳ (ಇನ್‍ಪುಟ್ಸ್) ಮೂಲಕ ಅತ್ಯಂತ ಗರಿಷ್ಠಮಟ್ಟದ ತಿಳಿವನ್ನು ನುಡಿಯಿಗರು (ಭಾಷಿಕರು) ಹೇಗೆ ಪಡೆಯುತ್ತಾರೆ? ಈ ಬಗೆಯ ಗ್ರಹಿಕೆಯ ನೆಲೆಯನ್ನು ಚಾಮ್‍ಸ್ಕಿ ಪ್ಲೇಟೋನ ಸಮಸ್ಯೆ ಎಂದು ಹೆಸರಿಸುತ್ತಾನೆ. ಮತ್ತು ಹೆಚ್ಚು ಹೂಡುವಳಿಗಳಿದ್ದು (ಇನ್‍ಪುಟ್ಸ್) ಅತ್ಯಂತ ಕಡಿಮೆ ತಿಳಿವನ್ನು ನುಡಿಯಿಗರು ಪಡೆಯುತ್ತಾರೆ. ಇದನನ್ನು ಚಾಮ್‍ಸ್ಕಿ ಆರ್ವೆಲ್ ಸಮಸ್ಯೆ ಎಂದು ಕರೆಯುತ್ತಾನೆ. ವರ್ತನಾವಾದಿಗಳು ವಾದಿಸುವಂತೆ ನುಡಿ ಕೇವಲ ಕಲಿಕೆಯಿಂದ ಪಡೆಯುವ ಸಾಮರ್ಥ್ಯವಲ್ಲ, ಬದಲಾಗಿ ಅದು ಮನುಷ್ಯರ ಮನಸ್ಸಿಗೆ ಸಂಬಂಧಿಸಿದ ಸಂಗತಿ ಎಂಬ ದಟ ಸಂಗತಿ ಈ ಗ್ರಹಿಕೆಯ ಮಾದರಿಂದ ತಿಳಿಯುತ್ತದೆ.

ನುಡಿ ಅನುಭವ (ಲಾಂಗ್ವೇಜ್ ಎಕ್ಸಪೀರಿಯನ್ಸ್)

ಚಿತ್ರ 1.ಇ. ನುಡಿ ಗಳಿಕೆಯ ಮಾದರಿ

ಚಾಮ್‍ಸ್ಕಿಯ ಎರಡು ಮುಖ್ಯ ಅರಿಮೆಯ ನೆಲೆಗಳನ್ನು ಚರ್ಚಿಸುವುದರ ಮೂಲಕ ಅವರ ನುಡಿ ಬಗೆಗಿನ ತಿಳುವಳಿಕೆಗಳನ್ನು ಇನ್ನಷ್ಟು ಆಳವಾಗಿ ತಿಳಿಯಲು ಸಾಧ್ಯವಿದೆ. ನುಡಿಯೆಂಬುದು ಮನುಷ್ಯರಿಗೆ ಒದಗುವಂತಹದೇ (ಲಾಂಗ್ವೇಜ್, ಇಟ್ ಹ್ಯಾಪನ್ಸ್ ಟು ಹ್ಯೂಮನ್ ಬೀಯಿಂಗ್ಸ್) ಹೊರತು ಕಲಿಯುವಂತಹದಲ್ಲ.

ಕಾರಣ ಮನುಷ್ಯರ ಮೆದುಳಿನಲ್ಲಿ ಜನ್ಮಜಾತವಾಗಿ ನುಡಿ ಸಾಮರ್ಥ್ಯವೊಂದು ನೆಲೆಗೊಂಡಿರುತ್ತದೆ. ಇದನ್ನು ವೈಶ್ವಿಕ ವ್ಯಾಕರಣ (ಯೂನಿವರ್ಸಲ್ ಗ್ರಾಮರ್) ಅಥವಾ (ಯುಜಿ) ಎಂದು ಕರೆಯುತ್ತಾರೆ. ಅಂದರೆ ಲೋಕದಲ್ಲಿರುವ ಯಾವುದೇ ನುಡಿಯನ್ನಾದರೂ ಮನುಷ್ಯರು ಗಳಿಸಿಕೊಳ್ಳಲು ಬೇಕಾಗುವ ಕೆಲವು ನಿಯಮಗಳ ಗುಚ್ಚವೇ ಈ ಯುಜಿಯಲ್ಲಿ ಅಂತಸ್ಥವಾಗಿರುತ್ತವೆ.

ಇದು ಇಂತಹದೇ ನುಡಿಗೆ ಮಾತ್ರ ಅನ್ವಯವಾಗುವಂತಹದು ಎಂದು ಹೇಳುವಂತಿಲ್ಲ. ಲೋಕದಲ್ಲಿರುವ ಎಲ್ಲ ನುಡಿಗಳಿಗೂ ಆನ್ವಯಿಸುವ ಸಾಮನ್ಯ ತತ್ವಗಳು ಈ ಯುಜಿಯಲ್ಲಿ ಅಂತರ್ಗತವಾಗಿರುತ್ತವೆ. ಹಾಗಾಗಿ ನುಡಿ ಅನ್ನುವಂತಹದು ಕಲಿಯುವಂತಹದಲ್ಲ, ಬದಲಾಗಿ ಅದನ್ನು ಪಡೆಯುವುದಕ್ಕೆ ಬೇಕಾದ ಸಾಮರ್ಥ್ಯ ಮನುಷ್ಯರ ಮೆದುಳಿನಲ್ಲಿ ಅಡಕವಾಗಿರುತ್ತದೆ.

ನಿಯಮಗಳು ಮತ್ತು ವಿಕಲ್ಪಗಳು (ಪ್ರಿನ್ಸಿಪಲ್ಸ್ ಆಂಡ್ ಪ್ಯಾರಮಿಟರ್ಸ್) ಎಂಬ ತನ್ನ ಮತ್ತೊಂದು ಪ್ರಭಾವಿ ತಾತ್ವಿಕ ಚೌಕಟ್ಟಿನಿಂದ ಚಾಮ್‍ಸ್ಕಿ ಯುಜಿ ಕುರಿತ ತಿಳಿವಳಿಕೆಗಳನ್ನು ಮತ್ತಷ್ಟು ನಿಚ್ಚಳಗೊಳಿಸುತ್ತಾನೆ. ಈ ಥಿಯರಿಯನ್ನು ಇವನು ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ರೂಪಿಸಿದ್ದಾನೆ.

ಹಾಗಾದರೆ, ನಿಯಮಗಳು ಮತ್ತು ವಿಕಲ್ಪಗಳು ಎಂಬ ಈ ತಾತ್ವಿಕ ಚೌಕಟ್ಟು ಏನನ್ನು ಹೇಳುತ್ತದೆಂದರೆ, ಲೋಕದಲ್ಲಿರುವ ಎಲ್ಲ ನುಡಿಗಳು ಕೆಲವು ಸಮಾನ ತತ್ವಗಳನ್ನು ಹಂಚಿಕೊಂಡಿರುತ್ತವೆ. ಇದನ್ನು ಚಾಮ್‍ಸ್ಕಿ ಪ್ರಿನ್ಸಿಪಲ್ಸ್‍ಯೆಂದು ಕರೆದನು. ಅಂದರೆ ಕ್ರಿಯಾಪದ, ನಾಮಪದ, ಕಾಲ, ವಿಭಕ್ತಿ, ಪುರುಷ ಹಾಗೂ ವಚನಗಳು ಲೋಕದ ಎಲ್ಲ ನುಡಿಗಳಲ್ಲಿ ಇರುತ್ತವೆ.

ಇವುಗಳನ್ನು ರೂಪಿಸುವ ರಾಚನಿಕ ಮೂಲ ತತ್ವಗಳು ಕೂಡ ಆಯಾ ನುಡಿಗಳಲ್ಲಿ ಇರುತ್ತವೆ. ಇವಗಳು ರಾಚನಿಕವಾಗಿ ಕೆಲವು ಸಮಾನ ತತ್ವಗಳನ್ನೂ ಅನುಸರಿಸುತ್ತವೆ. ಆದರೆ ಲೋಕದಲ್ಲಿರುವ ಈ ನುಡಿಗಳ ರಾಚನಿಕ ನೆಲೆಗಳು ವ್ಯವರಿಸುವ ಕ್ರಮಗಳಲ್ಲಿ ಮಾತ್ರ ಸಮಾನತೆ ಇರುವುದಿಲ್ಲ. ಅವುಗಳ ನಡುವೆ ಕೆಲವು ವ್ಯತ್ಯಾಸಗಳೂ ಇರುತ್ತವೆ. ಈ ವ್ಯತ್ಯಾಸಗಳನ್ನು ಚಾಮ್‍ಸ್ಕಿ ವಿಕಲ್ಪ ಇಲ್ಲವೇ ಪ್ಯಾರಮಿಟರ್ಸ್‍ಯೆಂದು ಕರೆಯುತ್ತಾನೆ.

ವಿಕಲ್ಪಗಳೇ ಬೇರೆ ಬೇರೆ ನುಡಿಗಳ ಸ್ವಾಯತ್ತತೆಗೆ ಕಾರಣವಾಗುತ್ತವೆ ಎಂಬುದು ಗಮನಾರ್ಹ. ಎತ್ತುಗೆಗಾಗಿ, ಇಂಗ್ಲಿಶಿನಲ್ಲಿರುವ ಪ್ರಿಪಸಿಶನ್ ಎಂಬ ರಾಚನಿಕ ವ್ಯವಸ್ಥೆ ಕನ್ನಡದಲ್ಲಿಲ್ಲ. ಹಾಗೂ ಕನ್ನಡದಲ್ಲಿರುವ ಪೋಸ್ಟ್‍ಪೊಸಿಶನ್ (ವಿಭಕ್ತಿ ಪ್ರತ್ಯಯಗಳು) ಎಂಬ ರಾಚನಿಕ ವ್ಯವಸ್ಥೆ ಇಂಗ್ಲಿಶಿನಲ್ಲಿಲ್ಲ. ಇವುಗಳು ವಿಭಕ್ತಿಯನ್ನು ಸೂಚಿಸುವ ಕೆಲಸದಲ್ಲಿ ಪಾಲ್ಗೊಳ್ಳುತ್ತವೆ.

ಅಂದರೆ ಇಂಗ್ಲಿಶಿನಲ್ಲಿ ವಿಭಕ್ತಿ ಸೂಚಿಸುವ ರೂಪಗಳು ನಾಮಪದದ ಮೊದಲು ಬರುತ್ತವೆ, ಆದರೆ ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳು ನಾಮಪದದ ನಂತರ ಬರುತ್ತವೆ. ಹಾಗೂ ಸಂಸ್ಕೃತದ ಸಂಧಿ, ಸಮಾಸ ಹಾಗೂ ವಿಭಕ್ತಿ ರಚನೆಗೂ ಕನ್ನಡದ ಸಂಧಿ, ಸಮಾಸ ಹಾಗೂ ವಿಭಕ್ತಿ ರಚನೆಗೂ ಸಾಕಷ್ಟು ಅಂತರಗಳಿವೆ. ಇಂತಹ ಅಂತರಗಳಿಂದಲೇ ಅವುಗಳು ಬೇರೆ ಬೇರೆ ನುಡಿಗಳಾಗಿ ಅಸ್ತಿತ್ವದಲ್ಲಿವೆ.

ಸೊಲ್ಲುಗಳ/ವಾಕ್ಯಗಳ ಕಟ್ಟಿನ ಮಾದರಿಯನ್ನು ಬಿಡಿಸಿ ನೋಡುವುದರ ಮೂಲಕ ಈ ತಿಳಿವನ್ನು ಇನ್ನಷ್ಟೂ ನಿಚ್ಚಳಗೊಳಿಸಬಹುದು. ಲೋಕದ ನುಡಿಗಳ ಸೊಲ್ಲುಗಳನ್ನು ರೂಪಿಸುವ ಕಟ್ಟುಗಳ ನಡುವೆ ಮೂಲತತ್ವಗಳ ಒಂದು ಕ್ರಮವಿರುತ್ತದೆ. ಇದನ್ನು ವಿಷಯ (ಸಬ್ಜೆಕ್ಟ್), ಅನುಭೋಗಿ (ಆಬ್ಜೆಕ್ಟ್) ಹಾಗೂ ಕೆಲಸಪದ (ವರ್ಬ್) ಎಂಬ ನೆಲೆಗಳನ್ನಾಗಿ ಗುರುತಿಸುತ್ತಾರೆ.

ಆದರೆ ಇವುಗಳನ್ನು ಜೋಡಿಸುವ ಕ್ರಮಗಳು ಮಾತ್ರ ಎಲ್ಲ ನುಡಿಗಳಲ್ಲಿ ಒಂದೇ ಬಗೆಯಲ್ಲಿ ಇರುವುದಿಲ್ಲ. ಎತ್ತುಗೆಗಾಗಿ ಇಂಗ್ಲಿಶಿನಲ್ಲಿ ಕೆಲಸಪದಗಳು ಸೊಲ್ಲಿನ ನಡುವೆ ಬರುತ್ತವೆ, ಆದರೆ ಕನ್ನಡದಲ್ಲಿ ಅವು ಕೊನೆಗೆ ಬರುತ್ತವೆ. ಸೊಲ್ಲುಗಳನ್ನು ಕಟ್ಟಲು ವಿಷಯ, ಅನುಭೋಗಿ ಹಾಗೂ ಕೆಲಸಪದಗಳು ಎಲ್ಲ ನುಡಿಗಳಲ್ಲೂ ಇರುತ್ತವೆಯಾದರೂ, ಅವುಗಳನ್ನು ಹೊಂದಿಸುವ ರಾಚನಿಕ ಮೂಲತತ್ವಗಳಲ್ಲಿ ವಿಕಲ್ಪಗಳು ಏರ್ಪಡುತ್ತವೆ. ಒಂದು ನುಡಿ ಇನ್ನೊಂದು ನುಡಿಯಿಂದ ಹೇಗೆ ಬೇರೆಯಾಗಿರುತ್ತದೆ ಎಂಬುದನ್ನು ಇಂತಹ ವಿಕಲ್ಪಗಳೇ ತಿಳಿಸುತ್ತವೆ. ಇವುಗಳನ್ನು ಈ ಕೆಳಗಿನಂತೆ ವಿಂಗಡಿಸಿರುತ್ತಾರೆ;

  1. ವಿಷಯ, ಅನುಭೋಗಿ ಹಾಗೂ ಕೆಲಸಪದ
  2. ವಿಷಯ, ಕೆಲಸಪದ ಹಾಗೂ ಅನುಭೋಗಿ
  3. ಅನುಭೋಗಿ, ಕೆಲಸಪದ ಹಾಗೂ ವಿಷಯ
  4. ಅನುಭೋಗಿ, ವಿಷಯ ಹಾಗೂ ಕೆಲಸಪದ
  5. ಕೆಲಸಪದ, ವಿಷಯ ಹಾಗೂ ಅನುಭೋಗಿ
  6. ಕೆಲಸಪದ, ಅನುಭೋಗಿ ಹಾಗೂ ವಿಷಯ

ಈ ಆರು ಬಗೆಯಲ್ಲಿ ಲೋಕದ ನುಡಿಗಳ ಸೊಲ್ಲುಗಳು ರೂಪುಗೊಳ್ಳತ್ತವೆ. ನುಡಿಗಳ ನಡುವಣ ಮೂಲತತ್ವಗಳಲ್ಲಿ ಉಂಟಾಗುವ ಈ ವಿಕಲ್ಪಗಳು ಅತ್ಯಂತ ಮಹತ್ವದ ಸಂಗತಿಗಳು. ಏಕೆಂದರೆ ಇಂತಹ ವಿಕಲ್ಪಗಳೇ ಆಯಾ ನುಡಿಗಳ ಸ್ವಾಯತ್ತತೆಯನ್ನು ಸಾಬೀತುಪಡಿಸುತ್ತವೆ.

ಚಾಮ್‍ಸ್ಕಿಗೆ ನುಡಿ ಒಂದು ಸಾಮಾಜಿಕ ನಿಯತಿಯಾಗಿರಲ್ಲ (ಫಿನಾಮಿನಾ). ಹೊರತಾಗಿ ಅದು ಯಾವಾಗಲೂ ಮಾನಸಿಕ ನಿಯತಿಯಾಗಿತ್ತು (ಮೆಂಟಲ್ ಫಿನಾಮಿನಾ). ಹಾಗಾಗಿ ನುಡಿ ಬಗೆಗಿನ ತನ್ನ ಚಿಂತನೆಗಳನ್ನು ಮನಸ್ಸು ಮತ್ತು ಆಲೋಚನೆಯ ರಚನೆಗಳನ್ನು ಅರಿಯುವ ಮಾನದಂಡವನ್ನಾಗಿ ಬಳಸಿಕೊಂಡಿದ್ದಾನೆ. ಚಾಮ್‍ಸ್ಕಿಯ ಪ್ರಕಾರ ನುಡಿ ಕೇವಲ ಒಂದು ಸಂವಹನ ಮಾಧ್ಯಮವಲ್ಲ.

ಅದೊಂದು ಸೃಜನಶೀಲ ಹಾಗೂ ವೈಚಾರಿಕ ಕ್ರಿಯೆ. ಅದಕ್ಕಾಗಿ ಬಿ.ಎಫ್.ಸ್ಕಿನ್ನರ್, ಪಿಯಾಜೆ, ವ್ಯಾಗ್‍ಟಸ್ಕಿ, ವ್ಯಾಟ್ಸನ್ ಹಾಗೂ ಕ್ವೈನ್ ಅವರು ಮಂಡಿಸುವ ನುಡಿ ಬಗೆಗಿನ ಚಿಂತನೆಗಳನ್ನು ಚಾಮ್‍ಸ್ಕಿ ಒಪ್ಪುವುದಿಲ್ಲ. ಕಾರಣ ವರ್ತನಾವಾದಿಗಳಿಗೆ ಪ್ರಾಣಿ ಹಾಗೂ ಮನುಷ್ಯರು ತಮ್ಮ ಚಳಕಗಳನ್ನು (ಸ್ಕಿಲ್ಸ್) ಸಾಮನ್ಯ ನಿಯಮ ವಿಧಾನದ ನೆಲೆಯಿಂದಲೇ ಪಡೆಯುತ್ತವೆ ಎಂಬ ನಂಬಿಕೆಯೇ ಚಾಮ್‍ಸ್ಕಿಯ ಈ ನಿರಾಕರಣೆಗೆ ಕಾರಣ.

ಚಾಮ್‍ಸ್ಕಿಗೆ ನುಡಿಯರಿಮೆ ಎನ್ನುವುದೇ ನುಡಿ ಆಚರಣೆ ಹಾಗೂ ನುಡಿ ಸಾಮರ್ಥ್ಯಗಳ ನಡುವಣ ವೈಶಿಷ್ಟ್ಯವನ್ನು ಗುರುತಿಸುವುದಾಗಿದೆ. ನುಡಿಯರಿಮೆಯ ದಿಟವಾದ ಗುರಿಯೇ ನುಡಿ ಸಾಮರ್ಥ್ಯವನ್ನು ಬಗೆದು/ಬಿಡಿಸಿ ನೋಡುವ ನೆಲೆಯೇ ಹೊರತು ನುಡಿ ಆಚರಣೆಯ ಬಗೆಗಳನ್ನು ವಿವರಿಸುವುದು ಮಾತ್ರವಲ್ಲ. ನುಡಿಯರಿಮೆ ಕಾಗ್ನಿಟಿವ್ ಸೈಕಾಲಜಿಯ ಒಂದು ಟಿಸಿಲುಯೆಂಬುದೇ ಚಾಮ್‍ಸ್ಕಿಯ ನಿಲುವು.

ಮಾನಸಿಕವಾಗಿ ಪ್ರತಿನಿಧಿತ ತಿಳಿವಿನ ಮಾದರಿಗಳನ್ನು ರೂಪಿಸುವ ಕ್ರಮವೇ ಈ ತಿಳಿವಿನ ವಲಯದ ಗುರಿಯಾಗಿದೆ. ಹೌದು, ನುಡಿ ಆಚರಣೆಯ ನೆಲೆಗಳನ್ನೂ ಇದು ಗಮನಿಸುತ್ತದೆ. ಗಮನಿಸಿದರೂ, ಇದೊಂದು ಬೇರೆ ಬಗೆಯ ಅಧ್ಯಯನಾಗಿರುತ್ತದೆ. ಏಕೆಂದರೆ, ಇಂತಹ ಆಚರಣೆಯು ನುಡಿ ಸಾಮರ್ಥ್ಯದ ಹಲವು ಬಗೆಯ ಕ್ರಿಯೆಗಳನ್ನು ಒಳಗೊಂಡಿರುತ್ತದೆ.

ಈ ಕ್ರಿಯೆಗಳು ಆಚರಣೆಯ ರೂಪದಲ್ಲಿದ್ದರೂ, ಅವು ಹೇಗೆ ನುಡಿಯ ಅಂತಸ್ಥ ತಿಳಿವನ್ನು ಅರಿಯಲು ಅನಕೂಲಕಾರಿ ಆಗುತ್ತವೆ ಎಂಬುದನ್ನು ಬಿಡಿಸಿ ನೋಡಬೇಕು. ಇಂತಹ ನಿಲುವುಗಳನ್ನು ಕುರಿತ ವಿಶ್ಲೇಷಣೆ ಮಾನಸಿಕ ಹಾಗೂ ಸಾಮಾಜಿಕ ಪರಿಣಾಮಗಳನ್ನು ಕಂಡುಕೊಳ್ಳುವ ನೆಲೆಯಾಗುತ್ತದೆ ಅನ್ನುವುದು ಚಾಮ್‍ಸ್ಕಿಯ ಚಿಂತನೆಯ ಮಹತ್ವವನ್ನು ತಿಳಿಸುತ್ತದೆ.

ಸಾಮಾನ್ಯ ಸೂತ್ರಗಳ ವಿಧಾನದ ಮೂಲಕ ರಾಚನಿಕ ನುಡಿಯರಿಮೆ ಕೆಲವು ಆಯ್ದ ಮಾತಿನ ಮೂಲಕ ಸಿಗುವ ದತ್ತವನ್ನು ಅನುಸರಿಸಿ, ಆಯಾ ನುಡಿಗಳ ರಾಚನಿಕ ಸ್ವರೂಪವನ್ನು ತೀರ್ಮಾನಿಸುತ್ತಿತ್ತು. ಇದು ಕೆವಲ ಆಚರಣೆಯ ನೆಲೆಯನ್ನು ಅರಿಯುವ ಬಗೆಯಾಗಿತ್ತು. ಅಂದರೆ ಹೊರಸ್ತರದ ರಚನೆಯನ್ನು ಮಾತ್ರ ಸೂತ್ರೀಕರಿಸಿ ಆ ಮೂಲಕ ಆಯಾ ನುಡಿಗಳ ಲಕ್ಷಣಗಳನ್ನು ಗುರುತಿಸುತ್ತಿದ್ದರು.

ನುಡಿಯ ರಚನೆಯನ್ನು ವರ್ಗೀಕರಿಸಿ ಅದುವೇ ಆ ನುಡಿಯ ಇಡೀ ಸ್ವರೂಪವೆಂದು ನಂಬಿಸಲಾಗುತ್ತಿತ್ತು. ಈ ವಿಶ್ಲೇಷಣೆಯ ಮೂಲಕ ಒಳಸ್ತರದ ಯಾವ ರಾಚನಿಕ ಸ್ವರೂಪವನ್ನು ಅರಿಯಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಚಾಮ್‍ಸ್ಕಿ ಇಂತಹ ವಿಶ್ಲೇಷಣಾ ಮಾದರಿಗಳಿಗೆ ಪ್ರತಿಯಾಗಿ ನುಡಿಯ ಸಾಮರ್ಥ್ಯವನ್ನು ಅರಿಯುವ ನೆಲೆಯ ನುಡಿಯರಿಮೆಯನ್ನು ಹುಟ್ಟು ಹಾಕಿದನು.

ಏಕೆಂದರೆ ಚಾಮ್‍ಸ್ಕಿಗೆ ನುಡಿಯ ಬಗೆಗೆ ತೀವ್ರ ಕುತೂಹಲ ಉಂಟಾಗುವುದಕ್ಕೆ ಮುಖ್ಯ ಕಾರಣವೇ ನುಡಿಯೆಂಬುದು ಮನಸ್ಸಿನ ಕನ್ನಡಿಯಾಗಿರುವುದು. ಮನಸ್ಸು ಹೇಗೆ ನುಡಿಯನ್ನು ಉತ್ಪಾದಿಸುತ್ತದೆ ಹಾಗೂ ಅದನ್ನು ಸಂಯೋಜಿಸುತ್ತದೆ ಎನ್ನುವ ಚಿಂತನೆಯೇ ಅವನ ಕುತೂಹಲಕ್ಕೆ ಕಾರಣವಾಗಿತ್ತು. ನುಡಿ ಕುರಿತ ಈ ಬಗೆಯ ಅಧ್ಯಯನಗಳು ಕೇವಲ ನುಡಿ ಸ್ವರೂಪವನ್ನು ಮಾತ್ರ ವಿವರಿಸುತ್ತಿಲ್ಲ.

ಬದಲಾಗಿ ಮನುಷ್ಯರ ಮನಸ್ಸಿನಲ್ಲಿ ಜನ್ಮಜಾತವಾಗಿ ನೆಲೆನಿಂತಿರುವ ನುಡಿಯ ಗುಣಲಕ್ಷಣಗಳೆಂತಹವು ಎಂಬುದನ್ನೂ ಅರಿಯುವುದಾಗಿತ್ತು. ಅಂದರೆ, ಸೊಲ್ಲರಿಮೆ/ವ್ಯಾಕರಣ ಕೇವಲ ನುಡಿ ಆಚರಣೆಯ ದತ್ತವನ್ನು ರುಜುಪಡಿಸುವ ನೆಲೆಮಾತ್ರವಾಗದೇ, ಅಪರಿಮಿತ ಸೊಲ್ಲುಗಳ/ವಾಕ್ಯಗಳ ಉತ್ಪಾದಕತೆಗೆ ಕಾರಣವಾಗಿರುವ ಪರಿಮಿತ ನಿಯಮಗಳ ಉತ್ಪಾದಕ ಸಾಮರ್ಥ್ಯ ನುಡಿಯಿಗರ ಮನಸ್ಸಿನಲ್ಲಿ ಹೇಗೆ ಅಂತಸ್ಥವಾಗಿರುತ್ತವೆ ಎಂಬುದನ್ನು ಅರಿಯುವ ಬಗೆಯಾಗಬೇಕು ಅನ್ನುವುದೇ ಚಾಮ್‍ಸ್ಕಿಯ ನಿಲುವು. ಇವನ ನುಡಿಯರಿಮೆಯ ಗುರಿಗಳನ್ನು ಮೂರು ಬೇರೆ ಬೇರೆ ನೆಲೆಗಳನ್ನಾಗಿ ವಿಂಗಡಿಸಬಹುದು;

  1. ನುಡಿ ರಚನೆಯ ತತ್ವ
  2. ನುಡಿ ಗಳಿಕೆಯ ತತ್ವ
  3. ನುಡಿ ಬಳಕೆಯ ತತ್ವ

ಸೊಲ್ಲರಿಮೆಯೆಂಬುದು ಚಾಮ್‍ಸ್ಕಿಗೆ ನುಡಿಯಿಗರ ಮಾತಿನ ಕಸುವು ಹಾಗೂ ಚಳಕಗಳನ್ನು (ಸ್ಕಿಲ್ಸ್) ಬಿಡಿಸಿ ನೋಡುವ ಮಾದರಿಯಾಗಿದೆ. ಅಂದರೆ ನುಡಿಯಿಗರ ಮನಸ್ಸಿನಲ್ಲಿ ಅಂತಸ್ಥವಾಗಿರುವ ಸಾಮರ್ಥ್ಯವನ್ನು ಅರಿಯುವ ಬಗೆಯೆಂದೇ ಹೇಳಬಹುದು. ನುಡಿಯಿಗರಿಗೆ ನುಡಿಯನ್ನು ಬಳಸಲು, ಮಾತುನಾಡಲು, ನಿರ್ವಚಿಸಲು ಈ ನುಡಿ ಸಾಮರ್ಥ್ಯ ಹೇಗೆ ಒತ್ತಾಸೆಯಾಗಿರುತ್ತದೆ ಎಂಬ ತಿಳಿವು ಇಲ್ಲಿ ಹೊರ ಬೀಳುತ್ತದೆ.

ಒಟ್ಟಾರೆಯಾಗಿ ಚಾಮ್‍ಸ್ಕಿ ಪ್ರಕಾರ ಆಡುಗ –ಕೇಳುಗ ತನ್ನ ನುಡಿ ಬಗೆಗೆ ಹೊಂದಿರುವ ತಿಳಿವನ್ನೇ ನುಡಿ ಸಾಮರ್ಥ್ಯವೆಂದು ಹೇಳಲಾಗುತ್ತದೆ. ನುಡಿ ಬಳಕೆಯ ವಾಸ್ತವ ರೂಪಗಳನ್ನು ಹೊರಡಿಸುವ ಸನ್ನಿವೇಶವನ್ನು ಆಚರಣೆಯೆಂದು ಹೇಳಲಾಗಿದೆ. ಆಚರಣೆ ಯಾವತ್ತೂ ಕೂಡ ಸಾಮರ್ಥ್ಯದ ತದ್ರೂಪಿಯಾಗಿರಲಾದು. ಇದೊಂದು ಅಪೂರ್ಣತೆಯ ಕ್ರಿಯೆಯಾಗಿರುತ್ತದೆ.

ಕೆಲವಾರು ಕುಂದುಗಳಾದರೂ ನುಡಿ ಆಚರಣೆಯ ಸನ್ನಿವೇಶದಲ್ಲಿ ಉಂಟಾಗುತ್ತವೆ. ಉದಾ.ಗೆಗಾಗಿ, ಬಾಯ್ತಪ್ಪಿನ ಮಾತುಗಳು, ಉಲಿಗಳ ಉಚ್ಚಾರಣೆಯಲ್ಲಿ ಉಂಟಾಗುವ ಏರುಪೇರುಗಳು, ಕುಡಿತದ ಪರಿಣಾಮದಿಂದ ಆಗುವ ಏರುಪೇರು, ಆಲಸ್ಯ, ತ್ರಾಸು ಮುಂತಾದವುಗಳನ್ನು ಇಲ್ಲಿ ಹೇಳಬಹುದು. ಚಾಮ್‍ಸ್ಕಿ ಇವುಗಳನ್ನು ‘ಆಚರಣೆಯ ತಪ್ಪು’ [ಪರ್ಫಾರಮೆನ್ಸ್ ಎರರ್ಸ್]ಗಳೆಂದು ಬಣ್ಣಿಸಿದ್ದಾನೆ.

ಸೊಲ್ಲರಿಮೆಯ ಸಾಮರ್ಥ್ಯ (ಗ್ರಾಮ್ಯಾಟಿಕಲ್ ಕಾಂಪಿಟೆನ್ಸ್) ಹಾಗೂ ಬಳಕೆಯ ಸಾಮರ್ಥ್ಯ (ಪ್ರ್ಯಾಗ್‍ಮ್ಯಾಟಿಕ್ ಕಾಂಪಿಟನ್ಸ್) ಎಂದು ಮತ್ತೆರಡು ಬಗೆಯಾಗಿ ಚಾಮ್‍ಸ್ಕಿ ನುಡಿ ಸಾಮರ್ಥ್ಯವನ್ನು ವಿಂಗಡಿಸುತ್ತಾನೆ. ಮೊದಲನೆಯದು ನುಡಿ ರಚನೆಯ ಅಂತರ್ನಿಹಿತ ನಿಯಮಗಳನ್ನು ಕುರಿತು ವ್ಯವಹರಿಸಿದರೆ, ಎರಡನೆಯದು ನುಡಿ ಬಳಕೆಯ ಹೊರಮೈ ರಚನೆಯನ್ನು ಕುರಿತು ವ್ಯವಹರಿಸುತ್ತದೆ.

ನುಡಿ ಬಳಕೆಯ ನೆಲೆಗಳು ಕೇವಲ ನುಡಿಯರಿಮೆಯ ನಿಯಮಗಳಿಗೆ ಮಾತ್ರ ಬದ್ಧವಾಗಿರದೇ, ಅವುಗಳೊಟ್ಟಿಗೆ ನುಡಿಯರಿಮೆಗೆ ಹೊರತಾದ ಸಂಗತಿಗಳು ಸೇರಿರುತ್ತವೆ ಎಂಬುದು ವಿಶೇಷ ಸಂಗತಿ. ಅಂದರೆ, ಸೊಲ್ಲುಗಳನ್ನು ನಿರ್ವಚಿಸುವ ಬಗೆಗಳು ಕೇವಲ ನುಡಿಯರಿಮೆಯ ಸಂಗತಿಗಳು ಮಾತ್ರವಾಗಿರದೇ, ಅವು ಸಾಮಾಜಿಕ ಸಂಗತಿಗಳೊಂದಿಗೂ ತಳಕು ಹಾಕಿಕೊಂಡಿರುತ್ತವೆ.

ಯಾವುದೇ ಬಗೆಯ ಹೊಂದಾಣಿಕೆ ಇಲ್ಲದ, ಕೇವಲ ಆಚರಣೆ ಇಲ್ಲವೇ ಹೊರಗಿನ ವರ್ತನೆಗಳನ್ನೇ ನಂಬಿಕೊಂಡು ನುಡಿ ಕುರಿತ ಚಿಂತನೆಗಳೇ ಮನಶಾಸ್ತ್ರದ ಮುಖ್ಯ ವಾಹಿನಿಯಲ್ಲಿ ನಡೆಯುತ್ತಿದ್ದವು. ಈ ಬಗೆಯ ತಿಳಿವಿನ ಅಧ್ಯಯನಗಳು ಮಾನಸಿಕ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಿರಾಕರಿಸದೆಯೂ, ಅದನ್ನೇ ಆಳವಾಗಿ ಒಪ್ಪಿಕೊಳ್ಳದೆಯೂ ಒಂದು ವಿಸಂಗತ ನೆಲೆಯಿಂದ ನುಡಿ ಬಗೆಗಿನ ಸಂಶೋಧನೆಗಳು ನಡೆಯುತಿದ್ದವು.

ಮಾನಸಿಕ ಸಾಮರ್ಥ್ಯವನ್ನರಿಯುವ ಇರಾದೆಯಿಂದ ಇರುವ/ಇದ್ದಂತಹ ನುಡಿಯರಿಮೆಗೆ ಕೇವಲ ವರ್ತನೆಗಳನ್ನೇ ಅನುಸರಿಸುತ್ತಿದ್ದ ತಿಳಿವಿನ ವಲಯಗಳೊಂದಿಗೆ ಹೊಂದಿಕೊಳ್ಳುವುದು ಹೇಗೆ ಸಾಧ್ಯ. ಅದಕ್ಕಾಗಿಯೇ ಚಾಮ್‍ಸ್ಕಿ ಅರಿವಿನ ಮನಶಾಸ್ತ್ರದ ನೆರವಿನಿಂದ ನುಡಿ ಬಗೆಗಿನ ತಿಳುವಳಿಕೆಯನ್ನು ಕಂಡುಕೊಂಡನು ಎಂದು ಹೇಳಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು

Published

on

~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ

ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.

ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.

 

ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.

ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

Continue Reading

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending