ದಿನದ ಸುದ್ದಿ
ನುಡಿಯ ಒಡಲು – 15 | ಒಳನುಡಿ ಬಗೆಗಳು : ಎಷ್ಟು..? ಯಾವವು..?
- ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಒಳನುಡಿ ಓದಿಗೆ ಎರಡು ಶತಮಾನಗಳ ಚರಿತ್ರೆಯಿದೆ. ಅಂದರೆ ಹತ್ತೊಂಬತ್ತನೇ ಶತಮಾನದ ಶುರುವಿನಿಂದ ಈ ಓದು ನಡೆದುಕೊಂಡು ಬಂದಿದೆ. ಆದರೆ ನಮ್ಮ ಕವಿರಾಜಮಾರ್ಗಕಾರ ಒಳನುಡಿಗಳ ಬಗೆಗಳನ್ನು ಆವತ್ತೇ ಗುರುತಿಸಿದ್ದ ಎನ್ನುವುದನ್ನು ನಾವು ಇಲ್ಲಿ ಗಮನಿಸಬೇಕು. ಇರಲಿ, ಒಳನುಡಿ ಓದನ್ನು ನಡೆಸಿಕೊಂಡು ಬಂದವರು, ಅದರ ಸ್ವರೂಪವನ್ನು ಅರಿಯುವ ಉದ್ದೇಶಕ್ಕಾಗಿ ಮೂರು ನೆಲೆಯಲ್ಲಿ ತಮ್ಮ ಗುರಿಗಳನ್ನು ಇರಿಸಿಕೊಂಡಿದ್ದರು.
ಆಡುನುಡಿಯ ಬಗೆಗಳು, ಪ್ರಾದೇಶಿಕ ನುಡಿಬಗೆಗಳು ಮತ್ತು ನುಡಿ ಬೆಳವಣಿಗೆಯ ಸ್ವರೂಪ (ಚಾರಿತ್ರಿಕ) ಎಂಬುದಾಗಿ ಅವುಗಳನ್ನು ವಿಂಗಡಿಸಬಹುದು. ಈ ಮೂರು ಬಗೆಯ ಒಳನುಡಿಗಳ ಸ್ವರೂಪವನ್ನು ಅರಿಯಲು ಉಲಿ ಮತ್ತು ಪದಗಳನ್ನು ಮಾತ್ರ ನೆಚ್ಚಿಕೊಂಡಿದ್ದರು.
ಮುಖ್ಯವಾಗಿ ಹೊಸ ಸೊಲ್ಲರಿಮೆಗಾರರು (ನಿಯೋಗ್ರ್ಯಾಂಮೆರಿಯನ್ಸ್) ಉಲಿ ಬದಲಾವಣೆಯ ನಡುವಣ ಬಗೆಗಳನ್ನು ಬಿಡಿಸಿ ನೋಡುವಲ್ಲಿ ಇರುವ ಕುತೂಹಲವನ್ನು ನೋಡಿದರೆ, ಈ ಅಂಶ ನಿಚ್ಚಳವಾಗಿ ಕಾಣುತ್ತದೆ. ಇದಕ್ಕಾಗಿ ಇವರು ನುಡಿತಿಳಿಹ[ಲಿಂಗ್ವಿಸ್ಟಿಕ್ ಡಾಟಾ]ವನ್ನೇ ಆಧರಿಸಿಕೊಂಡಿದ್ದರು ಎಂಬುದು ಬೇರೆ ಮಾತು.
ಇಲ್ಲಿಯವರೆಗೂ ಒಳನುಡಿ ಓದಿನ ಆಸಕ್ತಿ ಕೇವಲ ಉಲಿ ಹಾಗೂ ಪದ (ಕೋಶಾತ್ಮಕ -ಲೆಕ್ಷಿಕಲ್) ರಚನೆಯ ಮಟ್ಟಕ್ಕೆ ಸೀಮಿತವಾಗಿತ್ತು. ಅಂದರೆ ಉಚ್ಚಾರಣೆ ಮತ್ತು ಪದಕ್ಕೆ ಸಂಬಂಧಿಸಿದ ವ್ಯತ್ಯಾಸಗಳನ್ನು ಗುರುತಿಸುವ ನೆಲೆಯಾಗಿತ್ತು. ಕನ್ನಡದ ಸನ್ನಿವೇಶದಲ್ಲಿ ಇಂದೂ ಕೂಡ ಒಳನುಡಿ ಕುರಿತು ಇದೇ ಬಗೆಯ ಓದನ್ನು ಕಾಣುತ್ತೇವೆ. ಅಪವಾದವೆಂಬಂತೆ ಕೆಲವೇ ಕೆಲವಷ್ಟನ್ನು ಓದಗಳನ್ನು ಹೊಸ ತಿಳಿನ ಮಾದರಿಯಲ್ಲಿ ನೋಡಬಹುದು. ಅದೇನೆ ಇರಲಿ ಇವತ್ತಿಗೂ ಒಳನುಡಿಗಳನ್ನು ವಿಂಡಿಸುವ ಬಗೆ ಮತ್ತು ತತ್ವದಲ್ಲಿ ಯಾವುದೇ ಹೊಸತನವನ್ನು ಕಾಣಲು ಸಾಧ್ಯವಾಗಿಲ್ಲ
ಒಳನುಡಿಗಳನ್ನು ಗುರುತಿಸುವುದು ಹೇಗೆ? ಹಾಗೂ ಅವುಗಳ ಸ್ವರೂಪ ಎಂತಹದು?
ಪ್ರತಿಯೊಂದು ಭಾಷೆಯು ತನ್ನ ನಿಗದಿತ ರಾಚನಿಕ ಚೌಕಟ್ಟಿನಲ್ಲಿಯೇ ಹಲವು ನುಡಿಬಗೆಗಳನ್ನು ಒಳಗೊಂಡಿರುತ್ತದೆ, ನುಡಿ ಬಹುಳತೆಯ ಸಂಕೇತವಾಗಿರುವುದೇ ಇದಕ್ಕೆ ಕಾರಣ. ಇಂತಹ ಪ್ರಭೇದಗಳು ಪ್ರಾದೇಶಿಕ, ಚಾರಿತ್ರಿಕ ಹಾಗೂ ಸಾಮಾಜಿಕ ಭಿನ್ನತೆಗಳನ್ನು ಪ್ರತಿನಿಧಿಸುತ್ತೆವೆ. ಸಾಂಪ್ರದಾಯಿಕವಾಗಿ ಈ ಭಿನ್ನತೆ ಅಥವಾ ಭಾಷಿಕ ವ್ಯತ್ಯಸ್ಥ ರೂಪಗಳನ್ನು “ಉಪಭಾಷೆ”ಎಂದೂ ಗುರುತಿಸುವ ರೂಢಿ ಇದೆ.
ಪ್ರತಿಯೊಂದು ನುಡಿ ಸನ್ನಿವೇಶದಲ್ಲಿ ಪ್ರಭೇದಗಳ ಬೆಳವಣಿಗೆ ಒಂದು ಸಹಜ ಭಾಷಿಕ ಪ್ರಕ್ರಿಯೆ. ಈ ಪ್ರಭೇದಗಳೇ ಒಳನುಡಿಗಳಾಗಿ ರೂಪಗೊಳ್ಳುತ್ತವೆ. ಪ್ರತಿ ಭಾಷೆಯ ಒಳನುಡಿಗಳ ನಡುವೆ ಪರಸ್ಪರ ಗ್ರಹಿಕೆ ಸಾಧ್ಯ, ಇಲ್ಲವಾದರೆ ಅವುಗಳನ್ನು ಬೇರೆ ಬೇರೆ ಭಾಷೆಗಳೆಂದು ಗುರುತಿಸಲಾಗುತ್ತೆ. ಆದ್ದರಿಂದ ಈ ತರಹದ ಭಿನ್ನತೆಯನ್ನೇ ಅನನ್ಯತೆ ಎಂದೂ ಹೇಳುತ್ತೆವೆ. ಹಾಗಾಗಿ ನಮ್ಮ ಗ್ರಹಿಕೆ ಮತ್ತು ಸಂವೇದನೆಯಲ್ಲಿಯೂ ಭಿನ್ನತೆ ಇರುತ್ತದೆ.
ಭಾಷೆಯಲ್ಲಿ ರಾಜಕೀಯ-ಸಾಮಾಜಿಕ ಕಾರಣಗಳಿಂದ ಭಾಷೆ-ಉಪಭಾಷೆಗಳೆಂಬ ಡೈಕಾಟಮಿ ಹುಟ್ಟಿಕೊಳ್ಳುತ್ತವೆ. ರಾಜಕೀಯ ಸ್ಥಿತ್ಯಂತರ, ಸಾಮಾಜಿಕ ಅಸಮಾನತೆಗಳ ವ್ಯವಸ್ಥೆಯ ಕಾರಣ, ವೈಚಾರಿಕ ನಿಲುವುಗಳ ಏರು-ಪೇರಿನಿಂದ ಭಾಷೆ-ಉಪಭಾಷೆಗಳು ವಿಭಿನ್ನ ನೆಲೆಯಲ್ಲಿ ರೂಪಗೊಳ್ಳುತ್ತಿವೆ. ಈ ಭಿನ್ನತೆಗಳು ಪ್ರಮಾಣಭಾಷೆ ಮತ್ತು ಉಪಭಾಷೆಗಳ ನಡುವೆ ಅಂತರ ಹುಟ್ಟಿಸುತ್ತವೆ.
ಇದು ಪ್ರಮಾಣಭಾಷೆಯನ್ನು ಸಾರ್ವತ್ರಿಕವೆಂದು ಉಪಭಾಷೆಯನ್ನು ವೈಯಕ್ತಿಕವೆಂದೂ ಬಿಂಬಿಸುತ್ತದೆ. ಉಪಭಾಷೆ ಅನ್ನುವುದು ಕೇವಲ ಪರಿಭಾಷೆ, ಭಾಷಾಶಾಸ್ತ್ರೀಯವಾಗಿ ಇದೊಂದು ನಿಷ್ಪಕ್ಷಪಾತ ಪದ. ಆದರೆ ಸಾಮಾಜಿಕವಾಗಿ ತಾರತಮ್ಯವನ್ನು ಹುಟ್ಟು ಹಾಕುತ್ತದೆ. ಈ ಭಿನ್ನ ಪ್ರಭೇದಗಳು ಅಥವಾ ಬಗೆಗಳು ಕೇವಲ ತಾರತಮ್ಯದ ನೆಲೆ ಮಾತ್ರವಲ್ಲ.
ಇವುಗಳು ನಮ್ಮ ಸಾಮಾಜಿಕ-ಧಾರ್ಮಿಕ-ಪ್ರಾದೇಶಿಕ ಅಸ್ಮಿತೆಯ ಕುರುಹುಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಇಂತಹ ಭಿನ್ನತೆಯನ್ನೇ ಅನನ್ಯತೆ ಎಂದೂ ಹೇಳುತ್ತೆವೆ. ಹಾಗಾಗಿ ನಮ್ಮ ಗ್ರಹಿಕೆ ಮತ್ತು ಸಂವೇದನೆಯಲ್ಲಿಯೂ ಈ ಭಿನ್ನತೆ ಎದ್ದು ಕಾಣುತ್ತ್ತದೆ. ಕರ್ನಾಟಕ ರಾಜಕೀಯವಾಗಿ ಒಂದು, ಆದರೆ ಭೌಗೋಳಿಕ, ಸಾಮಾಜಿಕ ಹಾಗೂ ಭಾಷಿಕವಾಗಿ ವೈವಿಧ್ಯತೆಯನ್ನು ಹೊಂದಿದೆ.
ಹಾಗಾಗಿ ಹಲವು “ಕನ್ನಡ” ಕನ್ನಡಗಳ ಮೊತ್ತ. ಇದನ್ನೇ ಮಾರ್ಗಕಾರ “ಕನ್ನಡಂಗಳ್” ಎಂದಿರಬೇಕು.
ಪ್ರತಿಯೊಂದು ಸಮುದಾಯವು ತನ್ನ ಮೂಲಭೂತ ವರ್ತನೆಯಲ್ಲಿಯೇ ಭಿನ್ನತೆಯನ್ನು ತೋರಿಸುತ್ತದೆ (ಎತ್ತುಗೆಗಾಗಿ. ಉಡಿಗೆ, ಊಟ, ಸಾಮಾಜಿಕ ಸಂಭಾಷಣೆ ಮುಂತಾದವು). ಇದಕ್ಕೆ ಪೂರಕವಾಗಿ ಇತಿಹಾಸ, ಅಂತಸ್ತು, ಆರ್ಥಿಕ ನಿಲುವುಗಳು, ಜಾತಿ, ಜನಾಂಗಗಳು ಮುಂತಾದ ಸಾಮಾಜಿಕ ಸಹಾಯದಿಂದ ಭಾಷಿಕ ಭಿನ್ನತೆಯನ್ನು ಗುರುತಿಸುತ್ತವೆ.
ಒಳನುಡಿ: ಪ್ರಕಾರಗಳು
- ಚಾರಿತ್ರಿಕ
- ಭೌಗೋಳಿಕ
- ಸಾಮಾಜಿಕ
- ಸಾಂದರ್ಭಿಕ
ನುಡಿ ವ್ಯತ್ಯಾಸಕ್ಕೆ ಕಾರಣವಾಗುವ ಅಂಶಗಳು
- ಪ್ರದೇಶ
- ಉದ್ಯೋಗ
- ಶಿಕ್ಷಣ
- ವಯಸ್ಸು
- ಲಿಂಗ
- ಸಾಮಾಜಿಕ ಅಂತಸ್ತು
- ಜನಾಂಗ
ಒಳನುಡಿಗಳನ್ನು ಗುರುತಿಸುವ ಗಡಿಗೆರೆಗಳು
(ಒಳನುಡಿಗಳನ್ನು ಗುರುತಿಸುವ ಈ ಗಡಿಗೆರೆಗಳು ಕಾಲ್ಪನಿಕವಾಗಿರುತ್ತವೆ).
- ಕಾಡು
- ಬೆಟ್ಟ
- ನದಿ
ಚಾರಿತ್ರಿಕ ಒಳನುಡಿ
ಚಾರಿತ್ರಿಕ ಬದಲಾವಣೆಗಳು ಒಳನುಡಿಗಳ ಮೇಲೆ ಯಾವ ಬಗೆಯ ಪ್ರಭಾವಗಳನ್ನು ಬೀರಿವೆ ಎಂಬ ಸಂಗತಿಗಳನ್ನು ಮಾತ್ರ ಬಿಡಿಸಿ ನೋಡುವ ಬಗೆ ಇದಲ್ಲ. ಇಂತಹ ಪ್ರಭಾವಗಳು ಒಳನುಡಿಗಳನ್ನು ರೂಪಿಸುವಲ್ಲಿ ಯಾವ ಬಗೆಯ ಪಾತ್ರ ವಹಿಸಿವೆ ಎಂಬುದು ಮುಖ್ಯ. ಹಾಗಾಗಿ ಈ ಬಗೆಯ ನುಡಿ ಕುರಿತ ವಿವರಗಳು ಒಳನುಡಿಗಳ ಬಗೆಗಿನ ಬಹು ಮುಖ್ಯ ಸಂಗತಿಗಳನ್ನು ತಿಳಿಸಲು ಒತ್ತಾಸೆಯಾಗಿರುತ್ತವೆ.
ಈ ಕಾರಣಕ್ಕಾಗಿಯೇ ಒಳನುಡಿಗಳ ವರ್ಗೀಕರಣಕ್ಕೆ ಅವುಗಳದೆಯಾದ ಮಹತ್ವ ಇರುತ್ತದೆ. ಇವು ನುಡಿ ಚರಿತ್ರೆಯನ್ನು ಕಟ್ಟುವಲ್ಲಿಯೂ ಪ್ರಮುಖ ಮಾನಂಡಗಳಾಗಿ ಕೆಲಸ ಮಾಡುತ್ತವೆ. ಆದರೆ ಹೀಗೆ ನುಡಿ ಚರಿತ್ರೆಯನ್ನು ಕಟ್ಟುವ ವಿಧಾನವೇ ಕಲ್ಪಿತವಾಗಿರುತ್ತದೆ. ನುಡಿಯ ಕಲ್ಪಿತ ಚರಿತ್ರೆಯನ್ನು ಬರೆಯಲು ಮುಖ್ಯವಾಗಿ ಎರಡು ರೀತಿಯ ಆಧಾರಗಳನ್ನು ಬಳಸಲು ಸಾಧ್ಯವಿದೆ; ಎತ್ತುಗೆಗಾಗಿ ಕನ್ನಡದ ಸನ್ನಿವೇಶವನ್ನು ಬಿಡಿಸಿ ನೋಡುವುದಾದರೆ, ಮೂಲದ್ರಾವಿಡವೆಂಬ ಕಲ್ಪಿತನುಡಿ – ಕನ್ನಡ ನುಡಿಯ ಸಂಬಂಧಿಗಳಾಗಿರುವ ತಮಿಳು, ತೆಲುಗು, ಕುಯಿ, ಕುಡುಖ್ ಮೊದಲಾದ ಇತರ ದ್ರಾವಿಡ ನುಡಿಗಳೊಂದಿಗೆ ಕನ್ನಡವನ್ನು ಹೋಲಿಸಿ ನೋಡಬೇಕು.
ಅವುಗಳ ಮೂಲವನ್ನು ಮೂಲದ್ರಾವಿಡವೆಂಬ ನುಡಿಯೊಂದನ್ನು ಕಲ್ಪಿಸಿಕೊಳ್ಳುವ ಮೂಲಕ ಗುರುತಿಸಬಹುದು. ಅನಂತರ ಆ ನುಡಿಯು ಕವಲೊಡೆದು ಬೇರೆಬೇರಾಗಿ ಅಂತಹ ಕವಲುಗಳಲ್ಲಿ ಒಂದರಿಂದ ಕನ್ನಡ ನುಡಿ ಹೇಗೆ ಇಳಿದು ಬಂದಿದೆಯೆಂಬುದನ್ನು ಕಲ್ಪಿಸಿ ಹೇಳಬೇಕಾಗುತ್ತದೆ.
ಕನ್ನಡದ ಒಳನುಡಿಗಳನ್ನು ಪ್ರಾದೇಶಿಕವಾಗಿ ವಿಂಗಡಸಿದರೆ; ಕರಾವಳಿ, ಧಾರವಾಡ, ಬೀದರ್, ಮೈಸೂರು ಇತ್ಯಾದಿಯಾಗಿ ಕನ್ನಡದ ಬೇರೆ ಬೇರೆ ಒಳನುಡಿಗಳನ್ನು ಗುರುತಿಸಬಹುದು. ಮತ್ತು ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳನ್ನು ಪಟ್ಟಿಮಾಡಿ, ಆ ವ್ಯತ್ಯಾಸಗಳೆಲ್ಲವೂ ಹೇಗೆ ಕನ್ನಡ ನುಡಿಯ ಚರಿತ್ರೆಯಲ್ಲಿ ನಡೆದ ಬೇರೆ ಬೇರೆ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತವೆ ಎಂಬುದನ್ನು ವಾದಿಸಲು ಸಾಧ್ಯವಿದೆ.
ಪರಿಣಾಮವಾಗಿ ಮೂಲಕನ್ನಡ ನುಡಿ ಬೇರೆ ಬೇರೆ ಕವಲುಗಳಾಗಿ ಒಡೆದುಕೊಂಡಿದೆಯೆಂದೂ ಮತ್ತು ಈ ಒಳನುಡಿಗಳು ಆ ನುಡಿಯ ಬೇರೆ ಬೇರೆ ಕವಲುಗಳೆಂದೂ ಕಲ್ಪಿಸಿಕೊಂಡು, ಅವುಗಳ ನಡುವಿರುವ ವ್ಯತ್ಯಾಸಗಳ ಆಧಾರದ ಮೇಲೆ ಮೂಲಕನ್ನಡಕ್ಕೂ ಮತ್ತು ಕನ್ನಡದ ಇವತ್ತಿನ ಪ್ರಭೇದಗಳಿಗೂ ನಡುವಿರುವ ಕಲ್ಪಿತ ಚರಿತ್ರೆಯನ್ನು ಬರೆಯಲು ಸಾಧ್ಯವಾಗುತ್ತದೆ.
ಈ ರೀತಿಯ ಮೂಲದ್ರಾವಿಡದಿಂದ ಮೂಲಕನ್ನಡಕ್ಕೂ ಮತ್ತು ಮೂಲಕನ್ನಡದಿಂದ ಅದರ ಬೇರೆ ಬೇರೆ ಆಧುನಿಕ ಪ್ರಭೇದಗಳಿಗೂ ನಡುವೆ ಬೇರೆ ಬೇರೆ ರೀತಿಯ ಬದಲಾವಣೆಗಳ ಮೂಲಕ ಸಂಬಂಧವನ್ನು ಸಾಧಿಸಿದಾಗ ಕನ್ನಡದ ಕಲ್ಪಿತ ಚರಿತ್ರೆ ಸಿದ್ಧವಾಗುತ್ತದೆ. ಮೂಲಕನ್ನಡದಿಂದ ಅದರ ಬೇರೆಬೇರೆ ಪ್ರಭೇದಗಳಿಗೆ ಸಂಬಂಧವನ್ನು ಸಾಧಿಸಿದಲ್ಲಿ ಕನ್ನಡ ಭಾಷೆಯ ಲಿಖಿತ ಚರಿತ್ರೆಯೂ ಕೂಡ ಬಹಳ ಮಟ್ಟಿಗೆ ಸಹಾಯಕವಾಗಬಲ್ಲುದು (ಡಿ.ಎನ್.ಎಸ್.ಭಟ್).
ಕನ್ನಡ ಭಾಷೆಯ ಲಿಖಿತ ಚರಿತ್ರೆ ಬರೆಯಬೇಕಿದ್ದಲ್ಲಿ, ನಾವು ಅದಕ್ಕಾಗಿ ಬೇರೆಬೇರೆ ರೀತಿಯ ಕನ್ನಡ ಬರಹಗಳ ಕಾಲಾನುಕ್ರಮವನ್ನು ಬಳಸಿಕೊಳ್ಳಬೇಕಾಗುತ್ತದೆ. ಇಂತಹ ಚರಿತ್ರೆಯನ್ನು ಬರೆಯಬೇಕಾದಾಗ ಬೇರೆಬೇರೆ ಕಾಲಗಳಲ್ಲಿ ಬೆಳೆದುಬಂದ ಶಾಸನಗಳನ್ನು ಹೋಲಿಕೆಮಾಡಿ ಅವುಗಳ ನಡುವಿನ ವ್ಯತ್ಯಾಸಗಳಿಗೆ ಕಾಲಾನುಕ್ರಮವೇ ಕಾರಣವೆನ್ನುವುದನ್ನು ಅರ್ಥೈಸಬೇಕು.
ಶಾಸನಗಳ ನಡುವಿನ ಕಾಲಾನುಕ್ರಮ ವ್ಯತ್ಯಾಸವೇ ನುಡಿಯ ನಡುವಿನ ವ್ಯತ್ಯಾಸವಾಗಬೇಕಿಲ್ಲ. ನುಡಿಯ ಕಾಲಾನುಕ್ರಮ ಶಾಸನ ಕಾಲಾನುಕ್ರಮಕ್ಕಿಂತ ಭಿನ್ನವಾಗಿರಲೂ ಸಾಧ್ಯವಿದೆ. ಇದಕ್ಕೆ ಕಾರಣ ನುಡಿ ಊರಿಂದ ಊರಿಗೆ, ಜಾತಿಯಿಂದ ಜಾತಿಗೆ ಬೇರೆ ಬೇರಾಗಿರುತ್ತದೆ.
ಕನ್ನಡದಲ್ಲಿ ಕಾಣಿಸುವ ಈ ವ್ಯತ್ಯಾಸಗಳು ಮತ್ತು ಬೇರೆಬೇರೆ ಶತಮಾನಗಳಲ್ಲಿ ರಚಿತವಾದ ಗ್ರಂಥಗಳ ಇಲ್ಲವೇ ಶಾಸನಗಳ ನಡುವಿರುವ ವ್ಯತ್ಯಾಸಗಳು – ಇವೆರಡೂ ಒಂದೇ ತರಹದವುಗಳು. ಎರಡು ಕಡೆಗಳಲ್ಲೂ ಒಂದೇ ರೀತಿಯ ಸ್ವರ ಮತ್ತು ವ್ಯಂಜನ ಭೇದಗಳು ಹಾಗೂ ವ್ಯಾಕರಣ ಭೇದಗಳು ಕಾಣಿಸಿಕೊಳ್ಳುತ್ತವೆ.
ಉದಾ.ಗೆ ಪ್>ಹ್, ತೋಂಟ>ತೋಟ, ಎ>ಇ, (ಮನೆ>ಮನಿ) ಇ>ಎ [ಇಲಿ>ಎಲಿ – ನಂಜನಗೂಡು-ಪುತ್ತೂರು] ಕತ್ತಿ>ಕತ್ತಿ [ಸ್ವರಭೇದ] ಹಾಗೂ ಕ್>ಚ್ (ಕನ್ನಡ – ತಮಿಳು ಉದಾ.ಗೆ ಕೆತ್ತು> ಚೆತ್ತು, ಕೇರಿ> ಚೇರಿ) (ಡಿ.ಎನ್.ಎಸ್.ಭಟ್).
ಲಿಖಿತ ನುಡಿಗೆ ಚಾರಿತ್ರಿಕವಾಗಿ ನಡೆದ ನುಡಿಯ ಬದಲಾಣೆಗಳನ್ನು ವಿವರಿಸುವಲ್ಲಿ ಕೆಲವು ಕೊರತೆಗಳಿವೆ. ಆಡುನುಡಿಯ ಬದಲಾವಣೆಗಳನ್ನು ಹೊರಗಿಟ್ಟು, ಯಾವುದೇ ಭಾಷೆಯ ಚರಿತ್ರೆಯನ್ನು ರಚಿಸುವುದು ಕಷ್ಟ. ಪೂರ್ವದ ಹಳಗನ್ನಡದಿಂದ ಹಳಗನ್ನಡದಲ್ಲಿ ನಡೆದ ಧ್ವನಿ ಬದಲಾವಣೆ ಎ>ಇ – ಕೆಸು>ಕಿಸು, ಪೆರಿಯ>ಪಿರಿಯ (ಹಿರಿಯ), ಎದಿರ್>ಇದಿರ್ (ಇದಿರು), -ಒ>ಉ ತೊೞು>ತುೞು (ದನ), ಪೊಗು>ಪುಗು (ಪ್ರವೇಶಮಾಡು) ಪೂ.ಹಳಗನ್ನಡದಲ್ಲಿದ್ದ ‘ಎ’ಕಾರ ಮತ್ತು ‘ಒ’ಕಾರ ಕರಾವಳಿ ಪ್ರಭೇದಗಳಲ್ಲಿ ಬದಲಾಗದೆ ಹಾಗೆಯೇ ಉಳದಿದೆ. ಎರಡು ವರ್ಣಗಳು ಸೇರಿ ಒಂದೇ ವರ್ಣವಾದಾಗ, ಹಲವಾರು ಪದಭೇದಗಳು ಇಲ್ಲವಾಗುತ್ತವೆ.
ಉದಾ.ಗೆ ‘¾-ರ’ ಈ ವರ್ಣಭೇದ ಈಗ ಇಲ್ಲ
ಹಳಗನ್ನಡ ಹೊಸಗನ್ನಡ
ಕರೆ [ಬರಹೇಳು] ಕರೆ
ಕರೆ¾ [ಹಾಲು ಕರೆ]
ಕಿರಿ [ಹಲ್ಲುಕಿರಿ]
ಕಿರಿ ಕಿಱಿ [ಚಿಕ್ಕದು]
ಈ ಬದಲಾವಣೆಗಳು ಏಕೆ ಉಂಟಾದವು ಎಂಬುದನ್ನು ವಿವರಿಸಲು ನಮ್ಮ ನುಡಿಚರಿತ್ರೆಗಳು ಮನಸ್ಸು ಮಾಡುವುದಿಲ್ಲ. ಪದಾದಿಯ ಪಕಾರ ಹಕಾರವಾಯಿತು ಎಂದು ಹೇಳುವುದು ಒಂದು ಪ್ರಕ್ರಿಯೆಯನ್ನು ವರ್ಣಿಸಿದಂತೆ. ಆದರೆ ಕಾರಣ ಮೀಮಾಂಸೆಯನ್ನು ಮಾಡಿದಂತಲ್ಲ. ಈ ಬದಲಾವಣೆಯು ನಮ್ಮಲ್ಲಿ ಕೆಲವು ಪ್ರಶ್ನೆಗಳಿಗೆ ಕಾರಣವಾಗುತ್ತದೆ (ಕೆ.ವಿ.ಎನ್).
1. ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಮತ್ತು ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಇಕಾರವಾಗುತ್ತದೆ (ಮನೆ>ಮನಿ, ಕತ್ತಿ>ಕತ್ತಿ, ಇಡು>ಇರು, ಹುಡಿ>ಮಡಿ) ಉಳಿದೆಡೆಯಲ್ಲಿ ಈ ಬದಲಾವಣೆ ಕಾಣಿಸಿಕೊಳ್ಳುವುದಿಲ್ಲ. ಬದಲಾದರೂ ಅದು ಬೇರೆ ಧ್ವನಿಯಾಗಿ ಕಾಣಿಸಿಕೊಳ್ಳುತ್ತದೆ. ಇವೇ ಪದಗಳು ಕನ್ನಡದ ಇನ್ನೊಂದು ಪ್ರಭೇದದಲ್ಲಿ ಅಕಾರಾಂತವಾಗುತ್ತವೆ. (ತಲೆ>ತಲ) ಏಕೆ ಹೀಗೆ?
2. ಪ್>ಹ್ ಬದಲಾವಣೆಯನ್ನೇ ನೋಡೋಣ. ಸ್ವರಗಳ ನಡುವೆ ಬರುವ ಪಕಾರ ಹಕಾರವಾಗುವ ಬದಲು ವಕಾರವಾಗುತ್ತದೆ. ಉದಾ.ಗೆ ಕಪ್ಪು ‘ಮುಚ್ಚು’ ಕವಿ, ಕವುದಿ, ಕೆಪ್ಪು ‘ಕಿವುಡು’
3. ಪ್>ಹ್ ವ್ಯತ್ಯಾಸ ಕನ್ನಡದ ಪದಗಳಿಗೆ ಮಾತ್ರ ಅನ್ವಯಿಸುತ್ತದೆ. ಸಂಸ್ಕೃತದಿಂದ ಬಂದು ಸೇರಿದ ಪಕಾರಾದಿಯುಳ್ಳ ಪದಗಳಿಗೆ ಈ ಬದಲಾವಣೆ ವ್ಯಾಪಿಸಿಲ್ಲ. ಇದು ಏಕೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡಿಲ್ಲ (ಕೆ.ವಿ.ಎನ್).
ಈ ತೊಡಕನ್ನು ಬೇರೆ ಬಗೆಯ ಓದಿನ ಮಾದರಿಗಳಿಂದ ರೂಪಿಸಿಕೊಳ್ಳುವ ಅಗತ್ಯವಿದೆ. ಇತ್ತೀಚಿಗೆ ಅಮೇರಿಕದ ನುಡಿಯರಿಗ ವಿಲಿಯಮ್ ಸೌತ್‌ವರ್ಥ್ನ ಸಂಶೋಧನೆಯ ಫಲಿತದಿಂದ ಹೊರಬಂದಿರುವ ‘ಲಿಂಗ್ವಿಸ್ಟಿಕ್ಸ್ ಆರ್ಕ್ಯಾಲಜಿ ಆಫ್ ಸೌಥ್ ಏಶಿಯಾ’ ಎಂಬ ಹೊತ್ತಿಗೆಯಲ್ಲಿ ಇಂತಹ ತೊಡಕುಗಳನ್ನು ನಿವಾರಿಸಿಕೊಳ್ಳಲು ಬೇಕಾದ ಕೆಲವು ಮಾದರಿಗಳು ಸಿಗುತ್ತವೆ.
ಬರಹದಲ್ಲಿ ನುಡಿಗಳ ದಿಟ ಚಹರೆಗಳು ಯಾವಾಗಲೂ ಸರಿಯಾಗಿಯೇ ಇರುತ್ತವೆಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಆಡುನುಡಿಯಲ್ಲಿ ಭಾಷಿಕ ಅವಶೇಷಗಳು/ಪಳೆಯುಳಿಕೆಗಳು ಉಳದಿರುತ್ತವೆ. ಇಂತಹ ಪಳೆಯುಳಿಕೆಗಳೇ, ನುಡಿ ಬದಲಾವಣೆಯಲ್ಲಿ ಯಾವ ಅಂಶಗಳು ಮೊದಲಾದವು ಮತ್ತು ಯಾವವು ಆನಂತರ ನಡೆದವು ಅನ್ನುವುದನ್ನು ವಿವರಿಸಲು ಒತ್ತಾಸೆಯಾಗಿರುತ್ತವೆ.
ಕನ್ನಡನುಡಿಯ ಆಡುಮಾತುಗಳನ್ನು ಹುಡುಕಿ ತೆಗೆದರೆ, ಆ ಮಾಹಿತಿಗಳಿಂದ ನುಡಿಯ ಚರಿತ್ರೆಗೆ ಅಗತ್ಯವಿರುವ ನುಡಿಯ ವಿವರಗಳು ಸಿಗಬಹುದು. ಆಡುನುಡಿಯೊಳಗಿನ ರಚನೆಗಳು ಏನು ಹೇಳುತ್ತವೆ ಹಾಗೂ ತಮ್ಮ ಮೂಲ ಸ್ವರೂಪವನ್ನು ಹೇಗೆ ಉಳಸಿಕೊಂಡಿವೆ ಎಂಬ ವಿವರಗಳು ತಿಳಿದು ಬರುತ್ತವೆ.
• ಇಂತಹ ಚಿಂತನೆಗಳನ್ನು ಡಿ.ಎನ್.ಎಸ್.ಭಟ್‌ರು ತಮ್ಮ ಅಧ್ಯಯನಗಳಲ್ಲಿ ಈಗಾಗಲೆ ಮಂಡಿಸಿದ್ದಾರೆ. ಈ ಅಧ್ಯಯನಗಳು ಬಹಳ ಕುತೂಹಲಕಾರಿ ವಿಚಾರಗಳನ್ನು ಮಂಡಿಸುತ್ತವೆ. ಎತ್ತುಗೆಗಾಗಿ ಕನ್ನಡದ ಪೂರ್ವ ಮತ್ತು ಪಶ್ಚಿಮ ಪ್ರಭೇದಗಳ ನಡುವಿನ ಅಂತರವು ಹೆಚ್ಚು ಹಳೆಯದು ಮತ್ತು ಮುಖ್ಯವಾದುದು. ಈ ಪ್ರಭೇದಗಳು ಪ್ರಾಚೀನ ಕನ್ನಡದ ಅನೇಕ ಪದಗಳು ಮತ್ತು ವ್ಯಾಕರಣ ರೂಪಗಳನ್ನು ಇಂದಿಗೂ ಉಳಸಿಕೊಂಡಿವೆಯೆಂದು ಅವರ ಅಭಿಪ್ರಾಯ. ಎತ್ತುಗೆಗಾಗಿ ಹಳಗನ್ನಡದಲ್ಲಿ ಕಾಣಿಸುವ ಪ್, ಬ್, ಮತ್ತು ವ್ ಎಂಬ ಮೂರು ರೂಪಗಳು ಹವ್ಯಕ ಕನ್ನಡದಲಿವೆ ಪೋಪೆನ್>ಹೋಪೆ, ರ‍್ಪೆನ್>ಬಪ್ಪೆ, ಕಾಣ್ಬೆನ್>ಕಾಂಬೆ, ಪಾಡುವೆನ್>ಹಾಡುವೆ.
• ಇಂತಹ ತೌಲನಿಕ ಅಧ್ಯಯನಗಳಿಂದ ಹೊಸ ಬಗೆಯ ತಿಳುವಳಿಕೆ ಸಾಧ್ಯವೆಂಬುದು ನಿಚ್ಚಳವಾಗುತ್ತದೆ. ಈ ತಿಳಿವನ್ನು ಇನ್ನಷ್ಟೂ ಹಿಗ್ಗಿಸುವುದಾದರೆ, ‘ಫಾಲ್ಗುಣ’ ಎಂಬ ಪದ ೧೨ನೇ ಶತಮಾನದ ಕೊಡಗಿನ ಉಪಭಾಷೆಯಲ್ಲಿ ‘ಪಲ್ಗುಣ’ ಎಂದಾಗುತ್ತದೆ. ‘ತಾಯಿ’ ಎಂಬ ಪದ ೧೪ನೇ ಶತಮಾನದ ಉತ್ತರ ಕನ್ನಡದ ಶಾಸನದಲ್ಲಿ ‘ತಯಿ’ ಎಂದಾಗುತ್ತದೆ. ‘ಬಾನ’ ಎಂಬ ಪದ 14ನೇ ಶತಮಾನದ ಉಡಪಿ ಶಾಸನದಲ್ಲಿ ‘ಮಾನ’ ಎಂದಾಗಿದೆ. ‘ಪಡುವಣ’ ಪದವು ಸಹ ‘ಹ್’ ಕಾರವಾಗಿ ‘ಹಡುವಣ’ ಎಂದು ಪ್ರಯೋಗವಾಗಿರುವುದು 11ನೇ ಶತಮಾನದ ಕೊಡಗಿನ ಶಾಸನದಲ್ಲಿ ಬಳಕೆಯಾಗಿದೆ (ಕುಶಾಲಪ್ಪಗೌಡ).
• ‘ಋ’ ಕಾರ ‘ರು, ರಿ, ರ’ ಕಾರವಾಗಿ, ‘ವ್’ ಕಾರ ‘ಬ್’ ಕಾರವಾಗಿ, ‘¾’ ಮತ್ತು ‘¿’ ಕುಳವಾಗಿ, ಶಕಟರೇಫ ರೇಫಯಾಗಿ ಬದಲಾಗಿರುವ ಧ್ವನಿತತ್ವಗಳ ನಿಯಮಗಳನ್ನು ಇನ್ನೂ ಖಚಿತವಾಗಿ ಶೋಧಿಸಲಕ್ಕೆ ಒಳನುಡಿಗಳ ಅಧ್ಯಯನ ಪೂರಕವಾಗಬಲ್ಲುದು ಎಂಬುದನ್ನು ಈ ಮೇಲಿನ ಸಂಗತಿಗಳಿAದ ತಿಳಿಯಬಹುದು.
3. ಪ್ರಾದೇಶಿಕ ಒಳನುಡಿ
ಒಂದು ಸೀಮಿತ ಪ್ರಾದೇಶಿಕ ಗಡಿಯೊಳಗೆ ನೆಲೆನಿಂತಿರುವ ಸಮುದಾಯಗಳು ನಿರ್ದಿಷ್ಟ ಕಾಲದಲ್ಲಿ ಮಾತನಾಡುವ ನುಡಿಬಗೆಗಳನ್ನು ಪ್ರಾದೇಶಿಕ ಒಳನುಡಿಯೆಂದು ಕರೆಯುತ್ತಾರೆ. ಎತ್ತುಗೆಗಾಗಿ ಕನ್ನಡದಲ್ಲಿ ಮೈಸೂರು ಕನ್ನಡ, ಗುಲ್ಬರ್ಗ ಕನ್ನಡ, ಧಾರವಾಡ ಕನ್ನಡ, ಮತ್ತು ಮಂಗಳೂರು ಕನ್ನಡ ಎಂಬಿತ್ಯಾದಿಯಾಗಿ ಗುರುತಿಸಿದ್ದಾರೆ.
ಮತ್ತೆ ಕೆಲವರು ಕರ್ನಾಟಕದಲ್ಲಿರುವ ಜಿಲ್ಲೆಗಳಿಗೊಂದರಂತೆ ಒಳನುಡಿಯನ್ನು ಗುರುತಿಸುತ್ತಾರೆ. ಅಂದರೆ ಮೂವತ್ತು ಜಿಲ್ಲೆಗಳಿರುವುದರಿಂದ ಮೂವತ್ತು ಒಳನುಡಿಗಳಿವೆ ಎಂದರ್ಥ. ಇಂತಹ ಸಾರರೂಪಿ ವ್ಯಾಖ್ಯಾನುಗಳು ಹೇಗೆ ಒಳನುಡಿಗಳ ಬಗೆಗೆ ತೊಡಕುಗಳನ್ನು ಹುಟ್ಟುಹಾಕುತ್ತವೆ ಎಂಬುದನ್ನು ಮುಂದೆ ಚರ್ಚಿಸೋಣ. ಇರಲಿ ನುಡಿಯೊಳಗಿನ ವ್ಯತ್ಯಾಸಗಳನ್ನು ದಿಟವಾಗಿಯೂ ಪ್ರಾದೇಶಿಕ, ಸಾಮಾಜಿಕ, ಚಾರಿತ್ರಿಕವಾಗಿ ಗುಂಪುಮಾಡುವ ನೆಲೆಗಳಲ್ಲಿ ಚಿಕ್ಕಪುಟ್ಟ ವ್ಯತ್ಯಾಸಗಳಿರುತ್ತವೆ ಎಂದು ಒಪ್ಪಲಾಗಿದೆ.
ಹಾಗಾಗಿ ಇಂದಿನ ಕನ್ನಡದಲ್ಲಿ ಪ್ರಾದೇಶಿಕ ಭಿನ್ನತೆಗಳು ನಮ್ಮ ಕಣ್ಣ ಮುಂದಿರುವಂತೆಯೇ, ಕನ್ನಡದಲ್ಲಿ ಚಾರಿತ್ರಿಕ ಭಿನ್ನತೆಗಳು ಇದ್ದವು ಎಂಬುದಕ್ಕೆ ಇವು ಸಾಕ್ಷಿಯಾಗಿವೆ. ಅದಕ್ಕಾಗಿಯೇ ಕವಿರಾಜಮಾರ್ಗಕಾರ ಕನ್ನಡದಲ್ಲಿ ಉತ್ತರ ಮಾರ್ಗ ಮತ್ತು ದಕ್ಷಿಣ ಮಾರ್ಗಗಳನ್ನು ಗುರುತಿಸಿ, ಅವು ಕನ್ನಡದ ಪ್ರಮುಖ ಪ್ರಾದೇಶಿಕ ಪ್ರಭೇದಗಳೆಂದು ಹೇಳುತ್ತಾನೆ. ಇವನು ಕೊಪಣ, ಪುಲಿಗೆರೆ, ಕಿಸುವೊಳಲು, ಒಕ್ಕುಂದ ಮುಂತಾದ ಕೆಲವು ಪಟ್ಟಣಗಳನ್ನು ಆಧರಿಸಿಕೊಂಡು, ಅವುಗಳ ಸುತ್ತುವರಿಯಲ್ಪಟ್ಟ ಪ್ರದೇಶದಲ್ಲಿ ಬಳಸುವ ಭಾಷೆಯೇ ಕನ್ನಡದ ತಿರುಳು ಎಂದು ಹೇಳುತ್ತಾನೆ.
ಇದು ಭಾಷಾ ಪ್ರಮಾಣೀಕರಣದ ಪ್ರಯತ್ನವೆಂದೇ ಹೇಳಬಹುದು. ಕನ್ನಡದ ದಕ್ಷಿಣ ಮತ್ತು ಉತ್ತರ ಮಾರ್ಗಗಳನ್ನು ಗುರುತಿಸುಲು ತುಂಗಭದ್ರೆಯನ್ನು ಗಡಿಗೆರೆಯನ್ನಾಗಿಸಿದ್ದಾನೆ. ಇದರಿಂದ ತಿಳಿವುದೇನೆಂದರೆ, ಪ್ರಮಾಣೀಕೃತ ಭಾಷೆ ಮತ್ತು ಆಡುಭಾಷೆಗಳು ಬೇರೆಬೇರೆ ಇದ್ದವು ಎಂಬುದು ಇದರಿಂದ ತಿಳಿದುಬರುತ್ತದೆ.
ಆದರೆ ಈ ವರ್ಗೀಕರಣಕ್ಕೆ ಎದುರಾಗಿ ಡಿ.ಎನ್.ಶಂಕರ ಭಟ್‌ರು ಕನ್ನಡದ ಪ್ರಾದೇಶಿಕ ಒಳನುಡಿಗಳನ್ನು ಪೂರ್ವ ಮತ್ತು ಪಶ್ಚಿಮ ಪ್ರಭೇದಗಳೆಂದು ಗುರುತಿಸುತ್ತಾರೆ. ಇವರ ಈ ವರ್ಗೀಕರಣದ ಹಿಂದಿನ ಗುರಿಗಳು ಅತ್ಯಂತ ಕುತೂಹಲಕಾರಿಯಾಗಿವೆ. ಅವುಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು;
• ಬರಹದ ಕನ್ನಡದಲ್ಲಿ ನಡೆಯದಿದ್ದರೂ ಇತರ ಪ್ರಭೇದಗಳಲ್ಲಿ ನಡೆದಿರುವ ಬೇರೆಯೂ ಕೆಲವು ಬದಲಾವಣೆಗಳು ಕರಾವಳಿಯ ಪ್ರಭೇದಗಳಲ್ಲಿ ನಡೆದಿಲ್ಲ, ಉದಾ.ಗೆ ಕ್ರಿಯಾಪ್ರಕೃತಿಗಳ ಕೊನೆಯಲ್ಲಿ ಬರುವ ‘ಎ’ ಕಾರ ‘ಇ’ ಕಾರವಾಗದೆ ‘ಎ’ ಕಾರವಾಗಿಯೇ ಇದೆ.
• ಈ ಪೂರ್ವ ಮತ್ತು ಪಶ್ಚಿಮ ಪ್ರಭೇದಗಳಲ್ಲಿ ಕನ್ನಡ ನುಡಿಯ ಚಾರಿತ್ರಿಕ ಬೆಳವಣಿಗೆಯನ್ನು ವಿವರಿಸಲು ಬೇಕಾಗುವ (ನುಡಿ) ಪಳೆಯುಳಿಕೆಗಳು ಸಿಗುತ್ತವೆ.
ಸಾಂಪ್ರದಾಯಿಕವಾಗಿ ನಾಲ್ಕು ಪ್ರಾದೇಶಿಕ ಒಳನುಡಿಗಳನ್ನು ಗುರಿತಿಸಿದ್ದಾರೆ. ಅವುಗಳೆಂದರೆ, ಮೈಸೂರು, ಮಂಗಳೂರು, ಧಾರವಾಡ ಮತ್ತು ಗುಲ್ಬರ್ಗ ಕನ್ನಡಗಳು. ಇವುಗಳಲ್ಲಿಯೂ ಸಾಕಷ್ಟು ಒಳನುಡಿಗಳನ್ನು ಗುರುತಿಸಬಹುದು. ಉದಾ.ಗೆ ಪುತ್ತೂರು ಕನ್ನಡ, ಕುಂದಾಪುರ ಕನ್ನಡ, ಚಾಮರಾಜನಗರ ಕನ್ನಡ, ನಂಜನಗೂಡಿನ ಕನ್ನಡ, ಬಾಗಲಕೋಟೆ ಕನ್ನಡ ಮುಂತಾದವು.
ಈ ಪ್ರಾದೇಶಿಕ ಒಳನುಡಿಗಳ ನಡುವಣ ಭಿನ್ನತೆಗಳನ್ನು ಸ್ಥೂಲವಾಗಿ ಮೂರು ನೆಲೆಗಳಲ್ಲಿ ಗುರುತಿಸಿದ್ದಾರೆ, ಅವುಗಳೆಂದರೆ, ಧ್ವನಿ, ಪದ ಮತ್ತು ವ್ಯಾಕರಣ. ಈ ಮೇಲಿನ ಚರ್ಚೆಗಳಿಂದ ಗೊತ್ತಾಗಿರುವ ಒಂದು ಸಂಗತಿಯೇನೆAದರೆ, ಎಲ್ಲ ಕಾಲಗಳಲ್ಲಿಯೂ ಪ್ರಾದೇಶಿಕ ಒಳನುಡಿಗಳಿದ್ದವು ಎಂಬುದಾಗಿದೆ. ಆದರೆ ಈ ಪ್ರಾದೇಶಿಕ ಒಳನುಡಿಗಳ ನಡುವಿನ ವ್ಯತ್ಯಸಗಳನ್ನು ಗುರುತಿಸಲು ‘ಗಡಿಗೆರೆ’ (ಐಸೋಗ್ಲಾಸ್) ಎಂಬ ಒಂದು ಮಾನದಂಡವನ್ನು ಬಳಸುತ್ತಾರೆ.
ಒಳನುಡಿ ಓದುಗರು ಎರಡು ಅರಿಮೆಪದಗಳನ್ನು ರೂಪಿಸಿದ್ದಾರೆ. ಅವುಗಳಂದರೆ, ನಡುಜಾಗ (ಫೋಕಲ್ ಏರಿಯಾ) ಮತ್ತು ಪಳೆಯುಳಿಕೆ ಜಾಗವೆಂದು (ರೆಲಿಕ್ ಏರಿಯಾ) ಭೌಗೊಳಿಕವಾಗಿ ಫೋಕಲ್ ಏರಿಯಾ ಅನ್ನುವುದು ಯಾವಾಗಲೂ ಕೇಂದ್ರಜಾಗವೇ ಆಗಿರುತ್ತದೆ ಹಾಗೂ ಇಂತಹ ಜಾಗಗಳು ಸಾಂಸ್ಕೃತಿಕ ಬಹುಳತೆ ಕೂಡಿರುವುದಷ್ಟೆಯಲ್ಲದೆ ಆರ್ಥಿಕ ಚಟುವಟಿಕೆಗಳಿಂದಲೂ ಕೂಡಿರುತ್ತವೆ. ಸಹಜವಾಗಿಯೇ ಈ ಜಾಗಗಳು ಭಾಷಿಕ ಹೊಸತನದ ನೆಲೆಬೀಡುಗಳಾಗಿರುತ್ತವೆ.
ಕವಿರಾಜಮಾರ್ಗಕಾರ ಹೇಳುವ ತಿರುಳುಗನ್ನಡ ನಾಡನ್ನು ಇಲ್ಲಿ ಎತ್ತುಗೆಗಾಗಿ ತೋರಿಸಬಹುದು. ಅಂದರೆ ಕೊಪಣ, ಪುಲಿಗೆರೆ, ಕಿಸುವೊಳಲು, ಒಕ್ಕುಂದ ಮುಂತಾದ ಕೆಲವು ಪಟ್ಟಣಗಳನ್ನು ಕೇಂದ್ರ ಪ್ರದೇಶಗಳನ್ನಾಗಿ ಗುರುತಿಸಿದ್ದಾನೆ. ಭಾಷಿಕ ಹೊಸತನಗಳು ಇಂತಹ ಪ್ರದೇಶಗಳಿಂದಲೇ ಆಯಾ ನಾಡಿನ ಬೇರೆ ಬೇರೆ ಪ್ರದೇಶಗಳಿಗೆ ಚದುರಿಕೊಳ್ಳುತ್ತವೆ. ಆದರೆ ಪಳೆಯುಳಿಕೆ ಪ್ರದೇಶಗಳು ಆಯಾ ನಾಡಿನ ಭೌಗೋಳಿಕ ಮೇರೆಗಳನ್ನು ದಾಟಿ ಇಲ್ಲವೇ ಅಂಚಿನಲ್ಲಿ ನೆಲೆಗೊಂಡಿರುತ್ತವೆ.
ಜನಸಾಮನ್ಯರ ಒಡನಾಟಕ್ಕೆ ಎಟುಕದ ಪ್ರದೇಶಗಳು ಇವಾಗಿರುತ್ತವೆ. ಅಂದರೆ ಮಲೈನಾಡುಗಳು ಇಲ್ಲವೇ ಘಟ್ಟದ ಕೆಳಗಿನ ಪ್ರದೇಶಗಳೂ ಆಗಿರುತ್ತವೆ. ಹಾಗಾಗಿ ಡಿ.ಎನ್.ಎಸ್ ಭಟ್ ಅವರು ಕನ್ನಡ ನುಡಿ ಬದಲಾವಣೆಯ ಸುಳಿವು ಇಲ್ಲವೇ ನುಡಿ ಪಳೆಯುಳಿಕೆಯ ಜಾಗಗಳನ್ನು ಪೂರ್ವ-ಪಶ್ಚಿಮ ದಿಕ್ಕುಗಳ ನೆಲೆಯಿಂದ ಗುರುತಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಮಾರ್ಗಕಾರ ಇದನ್ನು ದಕ್ಷಿಣ ಹಾಗೂ ಉತ್ತರ ದಿಕ್ಕುಗಳ ನೆಲೆಯಿಂದ ಗುರುತಿಸುವ ಬಗೆಯನ್ನು ಕವಿರಾಜಮಾರ್ಗದಲ್ಲಿ ಸೂಚಿಸಿದ್ದಾನೆ.
ಈ ಪಳೆಯುಳಿಕೆಗಳು ಯಾವುದೇ ಹೊರ ಪ್ರಭಾವಕ್ಕೆ ಈಡಾಗದೇ, ತಮ್ಮ ಮೂಲರೂಪದಲ್ಲಿರುತ್ತವೆ. ಇಂತಹ ಆಯಕಟ್ಟಿನ ಜಾಗಗಳಲ್ಲಿ ‘ದಾಂಟು’ ‘ಪಚ್ಚೆ’ ಮುಂತಾದ ಮೂಲರೂಪಗಳು ಆಯಾ ಪ್ರದೇಶದ ಜನರ ಆಡುನುಡಿಯಲ್ಲಿ ಈಗಲೂ ಬಳಕೆಯಲ್ಲಿವೆ. ಮಾಲೂರಿನ ಸುತ್ತಮುತ್ತಲಿನ ತಮಿಳುನಾಡಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ‘ನಮ್ಮ’ ಎಂಬ ಇನ್‌ಕ್ಲೂಸಿವ್ ಬಹುವಚನದ ಬಳಕೆಯನ್ನು ಕಾಣಬಹುದಾಗಿದೆ. ಈ ಬಗೆಯ ನುಡಿ ಪಳೆಯುಳಿಕೆಗಳನ್ನು ಡಿ.ಎನ್.ಎಸ್.ಭಟ್ ಅವರು ತಮ್ಮ ನುಡಿ ಕಲ್ಪಿತ ಚರಿತ್ರೆಯಲ್ಲಿ ಗುರುತಿಸಿರುತ್ತಾರೆ.
4. ಸಾಮಾಜಿಕ ಒಳನುಡಿಗಳು
• ಸಾಮಾಜಿಕ ಭಿನ್ನತೆಯ ಪರಿಣಾಮ, ಪ್ರತಿ ಭಾಷಾ ಸಮುದಾಯಗಳಲ್ಲಿ ಸಾಮಾಜಿಕ ಒಳನುಡಿಗಳು ಹುಟ್ಟಿಕೊಳ್ಳುತ್ತವೆ. ಏಕೆಂದರೆ, ಆಯಾ ಸಮುದಾಯವು ತನ್ನ ಮೂಲಭೂತ ವರ್ತನೆಯಲ್ಲಿಯೇ ಭಿನ್ನತೆಯನ್ನು ತೊರ್ಪಡಿಸುತ್ತದೆ ಉದಾ.ಗೆ ಉಡಿಗೆ, ಊಟ, ಸಾಮಾಜಿಕ ಸಂಭಾಷಣೆ ಮುಂತಾದವು. ಇದಕ್ಕೆ ಪೂರಕವಾಗಿ ಇತಿಹಾಸ, ಅಂತಸ್ತು, ಜನಾಂಗಗಳAತಹ ಇನ್ನಿತರ ಸಾಮಾಜಿಕ ಮಾನದಂಡಗಳು ಕಾರಣವಾಗುತ್ತಿವೆ.
• ಮತ್ತೊಂದು ನೆಲೆಯಲ್ಲಿ ಈ ಒಳನುಡಿಗಳನ್ನು ನಿರ್ಧರಿಸುವ ಮಾನದಂಡಗಳನ್ನು ಈ ಕೆಳಗಿನಂತೆ ಗುರುತಿಸಬಹುದು;
• ನೆಲಸುವಿಕೆಯ ಪ್ರಕಾರಗಳು (ಸೆಟಲ್‌ಮೆಂಟ್ ಟೈಪ್ಸ್)
• ವಲಸೆ (ಮೈಗ್ರೇಶನ್)
• ನುಡಿ ಒಡನಾಟ (ಲ್ಯಾಂಗ್ವೇಜ್ ಕಾಂಟ್ಯಾಕ್ಟ್)
• ಸಾಮಾಜಿಕ – ಆರ್ಥಿಕ ಸನ್ನಿವೇಶ (ಇಕಾಲಜಿ)
• ಕರ್ನಾಟಕದಲ್ಲಿ ಮುಖ್ಯವಾಗಿ
ಗುರುತಿಸಬಹುದಾದ ಸಾಮಾಜಿಕ ಒಳನುಡಿಗಳು; ಉದಾ.ಗೆ ಗೌಡ, ಹಾಲಕ್ಕಿ, ಹವ್ಯಕ, ಕೋಟ, ಕುಂಬಾರ, ಲಿಂಗಾಯತ, ಬ್ರಾಹ್ಮಣ, ಹರಿಜನ ಕನ್ನಡ ಮುಂತಾದವುಗಳನ್ನು ಗುರುತಿಸಬಹುದ
5. ಸಾಂದರ್ಭಿಕ (ಒಳ)ನುಡಿಗಳು
• ವಿಶೇಷ ತಿಳುವಳಿಕೆಯನ್ನು ಒಂದು ಮೊತ್ತವಾಗಿ ಸೂಚಿಸುವ ಪರಿಕಲ್ಪನೆಗಳನ್ನು ಸಾಂದರ್ಭಿಕ ನುಡಿಗಳೆಂದು ಹೇಳಬಹುದು.
• ಬಡಿಗಾರಿಕೆ, ಕಮ್ಮಾರಿಕೆ, ಮೀನುಗಾರಿಕೆ, ನೇಕಾರಿಕೆ, ವ್ಯವಸಾಯ, ಬೇಟೆಗಾರಿಕೆ, ಶಿಕ್ಷಣ, ಸಾಂಸ್ಕೃತಿಕ ಚಳಕಗಳು, ವಾಣಿಜ್ಯ, ವಿಜ್ಞಾನ ಮುಂತಾದವುಗಳನ್ನು ಸಾಂದರ್ಭಿಕ ಒಳನುಡಿಗೆ ಉದಾಹರಣೆಗಳನ್ನಾಗಿ ಉಲ್ಲೇಖಿಸಬಹುದು.
ಒಳನುಡಿಗಳ ಅಧ್ಯಯನದ ಪ್ರಯೋಜನವನ್ನು ಹಲವು ಬಗೆಯಲ್ಲಿ ವಿವರಿಸಬಹುದು. ಈ ಕುರಿತು ಮುಂದಿನ ಅಂಕಣದಲ್ಲಿ ವಿವರವಾಗಿ ಬರೆಯುತ್ತೇನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚಿಗಟೇರಿ ಆಸ್ಪತ್ರೆಯಲ್ಲಿ ಮಹಿಳೆ ಮತ್ತು ಮಕ್ಕಳ ನೂತನ ಕಟ್ಟಡದ ಲೋಕಾರ್ಪಣೆ ; ಗ್ರೂಪ್ ಡಿ ಹುದ್ದೆಗಳಿಗೆ ನೇರಪಾವತಿಯಡಿ ನೇಮಕಕ್ಕೆ ಕಾನೂನು ಇಲಾಖೆಗೆ ಪ್ರಸ್ತಾವನೆ : ಸಚಿವ ದಿನೇಶ್ ಗುಂಡೂರಾವ್
ಸುದ್ದಿದಿನ,ದಾವಣಗೆರೆ:ಸರ್ಕಾರಿ ಆಸ್ಪತ್ರೆಗಳಲ್ಲಿ ನಾನ್ ಕ್ಲಿನಿಕಲ್ ವಿಭಾಗದಲ್ಲಿ ಗ್ರೂಪ್ ಡಿ ಸೇವೆ ಮಾಡುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ನೇರ ಪಾವತಿಯಡಿ ನೇಮಕ ಮಾಡಿಕೊಳ್ಳಲು ಕಾನೂನು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು ಸಾಧಕ, ಬಾದಕಗಳ ಪರಿಶೀಲನೆ ನಂತರ ಹೊರಗುತ್ತಿಗೆಯ ಎಲ್ಲಾ ಗ್ರೂಪ್ ಡಿ ಸಿಬ್ಬಂದಿಗಳನ್ನು ನೇರಪಾವತಿಯಡಿ ಪಡೆದುಕೊಳ್ಳಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದರು.
ಅವರು ಬುಧವಾರ ಚಿಗಟೇರಿ ಆಸ್ಪತ್ರೆ ಆವರಣದಲ್ಲಿ ನಿರ್ಮಾಣ ಮಾಡಿರುವ 200 ಹಾಸಿಗೆಯ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್‍ನ್ನು ಲೋಕಾರ್ಪಣೆ ಮಾಡಿ ಸಮಾರಂಭದಲ್ಲಿ ಮಾತನಾಡಿದರು.
ದಾವಣಗೆರೆಯಲ್ಲಿನ ಚಿಗಟೇರಿ ಆಸ್ಪತ್ರೆ ವಿಶಾಲವಾದ ಸ್ಥಳದಲ್ಲಿದ್ದು 70 ವರ್ಷದ ಹಳೆಯದಾಗಿದೆ. ಇಲ್ಲಿ ಹೊಸ ಕಟ್ಟಡ, ದುರಸ್ಥಿಯಾಗಬೇಕಾಗಿದ್ದು ಮಧ್ಯ ಕರ್ನಾಟಕದಲ್ಲಿನ ಈ ಆಸ್ಪತ್ರೆಯನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡುವ ಮೂಲಕ ಈ ಭಾಗದಲ್ಲಿನ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿಯೇ ಇಲ್ಲಿನ ಮೂಲಭೂತ ಸೌಕರ್ಯಕ್ಕೆ ಮತ್ತು ಹೊಸ ಬ್ಲಾಕ್ ನಿರ್ಮಾಣಕ್ಕೆ ರೂ.17 ಕೋಟಿ ಬಿಡುಗಡೆ ಮಾಡಲಾಗಿದ್ದು ಭವಿಷ್ಯದ ದೃಷ್ಟಿಯಿಂದ ನೂತನ ಯೋಜನೆಯನ್ನು ಸಿದ್ದಪಡಿಸಿ ಅದರಂತೆ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದರು.
ರೂ. 30 ಕೋಟಿಯಲ್ಲಿ ನಿರ್ಮಿಸಲಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 200 ಹಾಸಿಗೆ ಸಾಮಥ್ರ್ಯವಿದ್ದು ಇಲ್ಲಿಗೆ ಅಗತ್ಯವಿರುವ ಸಿಬ್ಬಂದಿಗಳನ್ನು ಮಂಜೂರು ಮಾಡಲು ಸರ್ಕಾರದ ಮುಂದೆ ಪ್ರಸ್ತಾವನೆ ಇದ್ದು ಇಲ್ಲಿಗೆ ಬೇಕಾಗಿರುವ ವೈದ್ಯರು ಹಾಗೂ ಸಿಬ್ಬಂದಿಗಳ ಹುದ್ದೆಗಳಿಗೆ ಮಂಜೂರಾತಿಯನ್ನು ನೀಡಲಾಗುತ್ತದೆ. ಟ್ರಾಮಾ ಕೇರ್ ಸೆಂಟರ್‍ಗೂ ಸಿಬ್ಬಂದಿಗಳ ಅಗತ್ಯವಿದ್ದು ಪರಿಶೀಲಿಸಿ ಮಂಜೂರಾತಿ ನೀಡಲಾಗುತ್ತದೆ. ಆಸ್ಪತ್ರೆ ಕಟ್ಟಿದರೆ ಸಾಲದು, ಇಲ್ಲಿ ಅಗತ್ಯವಿರುವ ಪರಿಕರ, ಸಿಬ್ಬಂದಿಗಳು ಇದ್ದಾಗ ಮಾತ್ರ ಜನರಿಗೆ ಆರೋಗ್ಯ ಸೇವೆ ಸಿಗಲು ಸಾಧ್ಯವಿದೆ ಎಂದರು.
ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳು ಮಾನವ ಸಂಪನ್ಮೂಲ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸಲಿವೆ. ಆದರೆ ಇವುಗಳಿಗೆ ಸಿಗಬೇಕಾದ ಆದ್ಯತೆ ಸಾಕಾಗುತ್ತಿಲ್ಲ. ಜನರ ಆರೋಗ್ಯ ಸಂರಕ್ಷಣೆ ಮಾಡಿದಾಗ ಆರೋಗ್ಯವಂತ ನಾಗರಿಕನಾಗಲು ಸಾಧ್ಯ, ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗಾಗಿ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಆರೋಗ್ಯವು ಗ್ಯಾರಂಟಿ ಯೋಜನೆಯಾಗಬೇಕು, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕಾಗಿದೆ ಎಂದರು.
ಮಾಯಕೊಂಡ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿದ್ದರೂ ಸಮುದಾಯ ಆರೋಗ್ಯ ಕೇಂದ್ರವಿರುವುದಿಲ್ಲ. ಮುಂದಿನ ದಿನಗಳಲ್ಲಿ ಮಾಯಕೊಂಡಕ್ಕೆ ಸಮುದಾಯ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಲಾಗುತ್ತದೆ. ಮೂಲಭೂತ ಸೌಕರ್ಯ ಕೊಟ್ಟರೆ ಸಾಕಾಗುವುದಿಲ್ಲ, ವೈದ್ಯರು ಜನರ ಸೇವೆ ಮಾಡಬೇಕು. ವೈದ್ಯಕೀಯ ಸೇವಾ ಕ್ಷೇತ್ರವಾಗಿದ್ದು ಸಹಾನುಭೂತಿಯಿಂದ ಎಲ್ಲಾ ವೈದ್ಯರು ಕೆಲಸ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ವೈದ್ಯರು, ಸಿಬ್ಬಂದಿಗಳ ಸೇವೆ ಜನರಿಗೆ ಸಿಗುವಂತಾಗಬೇಕೆಂದರು.
ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಆಸ್ಪತ್ರೆ ಕಟ್ಟಡದ ಜೊತೆಗೆ ಸಲಕರಣೆಗಳು ಇರಬೇಕಾಗುತ್ತದೆ, ಜೊತೆಗೆ ಸಿಬ್ಬಂದಿಗಳು ಇರಬೇಕು, ಇಲ್ಲವಾದಲ್ಲಿ ವ್ಯರ್ಥವಾಗುತ್ತದೆ. ಚಿಗಟೇರಿ ಆಸ್ಪತ್ರೆಯಿಂದ ಸಾಕಷ್ಟು ಬಡ ಜನರಿಗೆ ಅನುಕೂಲವಾಗಿದೆ. ಇಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳು ಜನರಿಗೆ ಸಿಗುವಂತಾಗಬೇಕು. ಇಲ್ಲಿ ನರ್ಸ್, ಆಯಾಗಳ ಕೊರತೆ ಇದೆ ಎಂದು ತಿಳಿದುಬಂದಿದ್ದು ವ್ಯವಸ್ಥೆ ಸರಿಪಡಿಸಬೇಕು. ಹೊರಗುತ್ತಿಗೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರಪವಾತಿಯಡಿ ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿಗಳನ್ನು ಪಡೆಯುವಂತಾಗಬೇಕು. ಸಾರ್ವಜನಿಕ ಸೇವೆ ಮಾಡುವಾಗ ಬಹಳ ಪಾರದರ್ಶಕವಾಗಿ ಕೆಲಸ ಮಾಡಬೇಕಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಜನರ ಆರೋಗ್ಯ ರಕ್ಷಣೆಗಾಗಿ ಖಾಸಗಿಯಾಗಿ 8 ಕೋಟಿವರೆಗೆ ವೆಚ್ಚ ಮಾಡಲಾಗಿದೆ ಎಂದರು.
ದಾವಣಗೆರೆ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಯಾಗಿದ್ದ ಸಮಯದಿಂದಲೂ ಚಿಗಟೇರಿ ಆಸ್ಪತ್ರೆಯ ಸ್ಥಿತಿಗತಿ ಗೊತ್ತಿದೆ. ಇಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳ ಜೊತೆಗೆ ಸುಧಾರಣೆಯಾಗಬೇಕಿದೆ. ಮಾಸ್ಟರ್ ಪ್ಲಾನ್ ತಯಾರಿಸುವ ಮೂಲಕ ಹಂತ ಹಂತವಾಗಿ ಸುಧಾರಣಾ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಮಾನವ ಹಾಲು ಬ್ಯಾಂಕ್ ಸ್ಥಾಪನೆ ಮಾಡುವ ಮೂಲಕ ಇನ್ನಷ್ಟು ಅನುಕೂಲ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ ಮುಖ್ಯ ಅತಿಥಿಗಳಾಗಿ ಮಾತನಾಡಿ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆಯಾಗಿದೆ, ಇದಕ್ಕೆ ಮಾನವ ಸಂಪನ್ಮೂಲ ಕಲ್ಪಿಸಬೇಕು. ಸಿಬ್ಬಂದಿಗಳು ಸಹ ಉಪಕರಣಗಳನ್ನು ನಿಷ್ಕ್ರಿಯೆಗೊಳಿಸದೇ ಉಪಯುಕ್ತ ಮಾಡಿಕೊಳ್ಳಬೇಕು. ಐಸಿಯು ಬೆಡ್ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಬೇಕು. ಶವಗಾರಕ್ಕೆ ಕಾಯಕಲ್ಪ ಮಾಡಬೇಕಾಗಿದ್ದು ಅತ್ಯುತ್ತಮವಾಗಿ ಕೆಲಸ ಮಾಡುವ ಡಾ; ಮೋಹನ್ ರವರನ್ನು ಸನ್ಮಾನಿಸಿ ಗೌರವಿಸಬೇಕೆಂದರು.
ಕಾರ್ಯಕ್ರಮದಲ್ಲಿ ಮೇಯರ್ ಕೆ.ಚಮನ್‍ಸಾಬ್, ದೂಡಾ ಆಧ್ಯಕ್ಷ ಕೆ.ದಿನೇಶ್ ಶೆಟ್ಟಿ, ಉಪ ಮೇಯರ್ ಸೋಗಿ ಶಾಂತಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಶಿವಕುಮಾರ್ ಕೆ.ಬಿ, ಅಭಿಯಾನ ನಿರ್ದೇಶಕರಾದ ಡಾ; ನವೀನ್ ಭಟ್ ರೈ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಷಣ್ಮುಖಪ್ಪ ಹಾಗೂ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.ಜಿಲ್ಲಾ ಸರ್ಜನ್ ಡಾ; ನಾಗೇಂದ್ರಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ಬಿರ್ಸಾ ಮುಂಡಾ ಜನ್ಮ ದಿನಾಚರಣೆ ; ಬುಡಕಟ್ಟು ಜನರ ಆರ್ಥಿಕ ಸಬಲೀಕರಣಕ್ಕಾಗಿ ಯೋಜನೆಗಳ ಸಮರ್ಪಕ ಬಳಕೆಗೆ ಸೂಚನೆ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
ಸುದ್ದಿದಿನ,ದಾವಣಗೆರೆ:ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹಾಗೂ ಬುಡಕಟ್ಟು ಜನಾಂಗದವರ ಏಳಿಗೆಗಾಗಿ ಹೋರಾಡಿದ ಧೀಮಂತ ವ್ಯಕ್ತಿ ಬಿರ್ಸಾ ಮುಂಡಾ ಅವರಾಗಿದ್ದು ಕೇಂದ್ರ ಸರ್ಕಾರ ಬುಡಕಟ್ಟು ಜನರ ಅಭಿವೃದ್ದಿಗಾಗಿ ಅನುಷ್ಟಾನ ಮಾಡುತ್ತಿರುವ ಯೋಜನೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಜಿಲ್ಲೆಯ ಜನರ ಅಭಿವೃದ್ದಿ ಮಾಡಲು ಕ್ರಮವಹಿಸಲಾಗುತ್ತದೆ ಎಂದು ದಾವಣಗೆರೆ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನವಂಬರ್ 15 ರಂದು ನಡೆದ ಜನಜಾತಿಯ ಗೌರವ್ ದಿವಾಸ್ ಆಚರಣೆ ಸಮಾರಂಭದಲ್ಲಿ ಆದಿವಾಸಿ ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಆದಿವಾಸಿ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆ ಅಂಗವಾಗಿ ಜನಜಾತಿಯ ಗೌರವ್ ದಿವಸ್ ಎಂದು ಪ್ರತಿ ವರ್ಷ ನವಂಬರ್ 15 ರಂದು ಆಚರಿಸಲಾಗುತ್ತದೆ.
ಜನಜಾತಿಯ ಗೌರವ್ ದಿವಸದಂದು ದೇಶದ ಜನಜಾತಿಯ ಜನರ ಸಾಧನೆಗಳು, ಸಂಸ್ಕøತಿಗಳು, ಐತಿಹ್ಯಗಳು ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ ಎಂದು ಹೇಳಿದರು.
ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ಅಡಿಯಲ್ಲಿ ಕೇಂದ್ರ ಸರ್ಕಾರವು ಆದಿವಾಸಿಗಳ ಸಬಲೀಕರಣಕ್ಕಾಗಿ ಪ್ರಧಾನ ಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆ ಹಾಗೂ ಧರ್ತಿ ಆಬಾ ಜನಜಾತಿಯ ಉತ್ಕರ್ಷ ಅಭಿಯಾನ ಕಾರ್ಯಕ್ರಮಗಳ ಅಡಿಯಲ್ಲಿ ಆದಿವಾಸಿಗಳಿಗೆ ಹಾಗೂ ಎಸ್‍ಟಿ ಜನರ ಸ್ವಸಹಾಯ ಗುಂಪುಗಳಿಗೆ ಜಿಲ್ಲಾ ಪಂಚಾಯತ್‍ನಿಂದ ಎನ್‍ಆರ್‍ಎಲ್‍ಎಂ ರಡಿ ಪ್ರಧಾನ ಮಂತ್ರಿ ವನಧನ್ ಯೋಜನೆಯಡಿ ಜಿಲ್ಲೆಯಲ್ಲಿನ 5 ವನಧನ್ ವಿಕಾಸ ಕೇಂದ್ರಗಳ ಸ್ವಸಹಾಯ ಸಂಘದ ಮಹಿಳಾ ಗುಂಪುಗಳಿಗೆ 37 ಲಕ್ಷದ ವೆಚ್ಚದಲ್ಲಿ 22 ವಿವಿಧ ಪರಿಕರಗಳನ್ನು ವಿತರಣೆ ಮಾಡಲಾಗಿದೆ. ಇದರಲ್ಲಿ ಸ್ವ ಉದ್ಯೋಗ ನೀಡುವ ಅಗರಬತ್ತಿ ತಯಾರಿಸುವ ಯಂತ್ರ, ಅಡಿಕೆ ಕತ್ತರಿಸುವ ಯಂತ್ರ, ಎಣ್ಣೆ ಗಾಣ, ಹಿಟ್ಟಿನ ಗಿರಣಿ, ಅಡಿಕೆ ತಟ್ಟೆ ಯಂತ್ರ, ರೊಟ್ಟಿ ಮಾಡುವ ಯಂತ್ರಗಳನ್ನು ವಿತರಣೆ ಮಾಡಲಾಗಿದೆ.
ವನಧನ್ ಯೋಜನೆ ಐದು ವರ್ಷಗಳ ಕಾರ್ಯಕ್ರಮವಾಗಿದ್ದು ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನ ಮಾಡಿ ಅತ್ಯುತ್ತಮ ಜಿಲ್ಲೆ ಎಂದು ಹೆಸರು ಗಳಿಸುವ ಮೂಲಕ ಕೇಂದ್ರದ ಹೆಚ್ಚಿನ ಅನುದಾನ ದಾವಣಗೆರೆಗೆ ಪಡೆದು ಕ್ಷೇತ್ರದಲ್ಲಿನ ಬುಡಕಟ್ಟು ಹಾಗೂ ಪ.ಪಂಗಡದ ಜನರ ಆರ್ಥಿಕಾಭಿವೃದ್ದಿ ಮತ್ತು ಇವರು ವಾಸಿಸುವ ಕಡೆ ಮೂಲಭೂತ ಸೌಕರ್ಯ, ಆಶ್ರಮ ಶಾಲೆಯಲ್ಲಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ವಹಿಸಬೇಕೆಂದು ತಿಳಿಸಿ ಸ್ವ ಉದ್ಯೋಗ ಕೈಗೊಂಡ ಮಹಿಳೆಯರು ಮುಂದಿನ ದಿನಗಳಲ್ಲಿ ತಮ್ಮ ಆರ್ಥಿಕ ಅನುಕೂಲತೆಗಳ ಮತ್ತು ಅಭಿವೃದ್ದಿ ಕುರಿತು ಯಶೋಗಾಥೆಗಳನ್ನು ಇಲಾಖೆಯೊಂದಿಗೆ ಹಂಚಿಕೆ ಮಾಡಿಕೊಳ್ಳುವಂತಾಗಬೇಕೆಂದು ಆಶಿಸಿದರು.
ಬಿರ್ಸಾ ಮುಂಡಾ ಜನ್ಮ ದಿನಾಚರಣೆ ಹಾಗೂ ಧರ್ತಿ ಆಬಾ ಜನ್‍ಜಾತಿಯ ಗ್ರಾಮ ಉತ್ಕರ್ಷ ಅಭಿಯಾನದಡಿ ಬುಡಕಟ್ಟು ಗುಂಪುಗಳಿಗೆ ಸ್ವ ಉದ್ಯೋಗದ ವಿವಿಧ ಯಂತ್ರೋಪಕರಣಗಳನ್ನು ವಿತರಣೆ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ್, ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್, ಯೋಜನಾ ನಿರ್ದೇಶಕರಾದ ರೇಷ್ಮಕೌಸರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಒಳಮೀಸಲಾತಿ ಜಾರಿಗೆ ಚಾಲನೆ ; ಜಾತಿಗಣತಿ ವರದಿ ವಿರೋಧಕ್ಕೆ ಬೇಡ ಮನ್ನಣೆ : ಮಾಜಿ ಸಚಿವ ಎಚ್.ಆಂಜನೇಯ
ಸುದ್ದಿದಿನ,ದಾವಣಗೆರೆ:ಅಸ್ಪೃಶ್ಯತೆ ನೋವು, ಸೌಲಭ್ಯಗಳ ಮರಿಚೀಕೆ, ಕೈಗೆಟುಕದ ಮೀಸಲಾತಿ ಹೀಗೆ ಅನೇಕ ಸಮಸ್ಯೆಗಳ ಸುಳಿಗೆ ಸಿಲುಕಿದ್ದ ಮಾದಿಗ ಮತ್ತು ಸಹೋದರ ಜಾತಿಗಳಿಗೆ ಒಳಮೀಸಲಾತಿ ವರವಾಗಿ ಪರಿಣಮಿಸಲಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ನಗರದಲ್ಲಿ ಶುಕ್ರವಾರ ಜಿಲ್ಲಾ ವರದಿಗಾರರ ಕೂಟದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಶಕಗಳ ಹೋರಾಟದ ಫಲ ಹಾಗೂ ಎಲ್ಲ ಪಕ್ಷಗಳ ಸರ್ಕಾರಗಳ ಸಹಕಾರ-ಬದ್ಧತೆ ಕಾರಣಕ್ಕೆ ಪರಿಶಿಷ್ಟ ಜಾತಿ ಗುಂಪಿನಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಸಂದರ್ಭ ಎದುರಾಗಿದೆ. ಅದರಲ್ಲೂ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ಸುಪ್ರೀಂ ಕೋರ್ಟ್ ತೀರ್ಪು ಮಾದಿಗ ಸಮುದಾಯದ ಸಮಗ್ರ ಪ್ರಗತಿಗೆ ರಹದಾರಿ ಆಗಿದೆ ಎಂದರು.
ಈಗ ಕೋರ್ಟ್ ತೀರ್ಪು ಬಳಿಕ ರಾಜ್ಯ ಸರ್ಕಾರದ ಅಂಗಳಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸುವ ಅಧಿಕಾರದ ಚೆಂಡು ಬಂದಿದೆ.ಅದರಲ್ಲೂ ಅಹಿಂದ ನಾಯಕ, ಸಾಮಾಜಿಕ ನ್ಯಾಯದ ಹರಿಕಾರವೆಂಬ ಹೆಗ್ಗಳಿಕೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯದಲ್ಲಿ ದಿಟ್ಟ ನಿರ್ಧಾರ ಕೈಗೊಂಡು ಒಳಮೀಸಲಾತಿ ಜಾರಿಗೊಳಿಸಿ, ದಲಿತರ ಕಣ್ಮಣಿ ಆಗುವ ಅವಕಾಶ ನೀಡಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಈ ವಿಷಯದಲ್ಲಿ ಯಾರ ಒತ್ತಡಕ್ಕೂ ಮಣಿಯದೆ ಒಳಮೀಸಲಾತಿ ಜಾರಿಗೊಳಿಸುವ ನಿರ್ಣಯ ಕೈಗೊಂಡಿದ್ದು, ಅದರ ಮೊದಲ ಹೆಜ್ಜೆಯಾಗಿ ದತ್ತಾಂಶ (ಎಂಪಿರಿಕಲ್ ಡಾಟ) ಸಂಗ್ರಹಕ್ಕೆ ಆಯೋಗ ರಚಿಸಿ, ಅಧ್ಯಕ್ಷರನ್ನಾಗಿ ನ್ಯಾ.ನಾಗಮೋಹನ್ ದಾಸ್ ಅವರನ್ನು ನೇಮಕ ಮಾಡಿರುವುದು ಪರಿಶಿಷ್ಟ ಸಮುದಾಯದಲ್ಲಿ ಆಶಾಕಿರಣ ಮೂಡಿಸಿದೆ ಎಂದು ಹೇಳಿದರು.
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕೆಂಬ ಹೋರಾಟದ ಪರಿಣಾಮ ಈ ಹಿಂದೆ ರಚನೆಗೊಂಡಿದ್ದ ನಾಗಮೋಹನ್ ದಾಸ್ ನೇತೃತ್ವದ ಆಯೋಗ ಎಸ್ಸಿಗೆ 15ರಿಂದ 17, ಎಸ್ಟಿಗೆ 3ರಿಂದ ಶೇ.7 ಒಟ್ಟು 18ರಿಂದ ಶೇ.24ಕ್ಕೆ ಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣ ಏರಿಕೆಗೊಂಡಿತು. ಆದ್ದರಿಂದ ಸಾಮಾಜಿಕ, ಜಾತಿ ವ್ಯವಸ್ಥೆ, ಹಿಂದುಳಿದ ವರ್ಗದ ಜನರ ಕುರಿತು ಹೆಚ್ಚು ಕಾಳಜಿ ಹೊಂದಿರುವ ನಾಗಮೋಹನ್ ದಾಸ್ ನೇಮಕ ಅತ್ಯಂತ ಉತ್ತಮ ನಿರ್ಧಾರವಾಗಿದೆ ಎಂದರು.
ರಾಜ್ಯದ ಎಲ್ಲೆಡೆಯೂ ಮಾದಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೆಲವು ಜಿಲ್ಲೆಗಳಲ್ಲಿ ಮಾದಿಗ ಹಾಗೂ ಛಲವಾದಿ ಸಮುದಾಯದವರು ಆದಿಕರ್ನಾಟಕ ಎಂದು ಗುರುತಿಸಿಕೊಂಡಿದ್ದು, ಗೊಂದಲ ಉಂಟು ಮಾಡಿದೆ. ಆದ್ದರಿಂದ ನಾಗಮೋಹನ್‌ದಾಸ್ ಅವರು ಈ ವಿಷಯದಲ್ಲಿ ಆಳವಾದ ಅಧ್ಯಯನ ನಡೆಸಿ, ಮಾದಿಗ ಮತ್ತು ಅದರ ಉಪ ಜಾತಿಗಳನ್ನು ಗುರುತಿಸುವ ಕೆಲಸ ಮಾಡುವ ಮೂಲಕ ನೊಂದ ಜನರಿಗೆ ನ್ಯಾಯ ಒದಗಿಸುವ ವಿಶ್ವಾಸ ಇದೆ ಎಂದು ಹೇಳಿದರು.
2011ರಲ್ಲಿ ಕೇಂದ್ರ ಸರ್ಕಾರ ನಡೆಸಿದ ಜನಗಣತಿ ಅಂಕಿ ಅಂಶ ಹಾಗೂ ಎಲ್.ಜಿ.ಹಾವನೂರು, ನ್ಯಾ.ಸದಾಶಿವ, ಕಾಂತರಾಜ್ ಆಯೋಗದ ವರದಿಗಳನ್ನು ಅಧ್ಯಯನ ನಡೆಸಿದರೆ ದತ್ತಾಂಶ ಮಾಹಿತಿ ದೊರೆಯಲಿದೆ. ಜತೆಗೆ ಒಳಮೀಸಲಾತಿ ಜಾರಿಗೆ ಇರುವ ಸಣ್ಣಪುಟ್ಟ ಅಡ್ಡಿಗಳನ್ನು ತಕ್ಷಣ ನಿವಾರಿಸಬಹುದು ಎಂದರು.
ಬ್ರಿಟಿಷರ ಕಾಲದಲ್ಲಿ ಆಗಿದ್ದ ಹಾಗೂ 100 ವರ್ಷದ ನಂತರ ಸ್ವತಂತ್ರ ಭಾರತದಲ್ಲಿಯೇ ಮೊದಲ ಬಾರಿಗೆ ಸಿದ್ದರಾಮಯ್ಯ ಸರ್ಕಾರ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವ ನಿರ್ಧಾರ ಅಂದು ಸಮಾಜ ಕಲ್ಯಾಣ ಸಚಿವನಾಗಿದ್ದ ಸಂದರ್ಭ ನಾನು ಹೆಚ್ಚು ಕಾಳಜಿಯಿಂದ ವರದಿ ತಯಾರಿಸಲಾಗಿತ್ತು. ಇದು ದೇಶದಲ್ಲಿಯೇ ಐತಿಹಾಸಿಕ ನಿರ್ಧಾರವಾಗಿದೆ ಎಂದರು.
ಈ ನಿಟ್ಟಿನಲ್ಲಿ ಕಾಂತರಾಜ್ ಆಯೋಗ ನಡೆಸಿದ ಸಮೀಕ್ಷೆಯಲ್ಲಿ 1 ಲಕ್ಷದ 50 ಸಾವಿರ ಶಿಕ್ಷಕರು ಪಾಲ್ಗೊಂಡಿದ್ದು, ತಹಸೀಲ್ದಾರ್, ಜಿಲ್ಲಾಧಿಕಾರಿಗಳು, ಅನೇಕ ಐಎಎಸ್ ಅಧಿಕಾರಿಗಳು ಮೇಲುಸ್ತುವಾರಿ ವಹಿಸಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ಅಂದಾಜು 180 ಕೋಟಿ ರೂ. ವೆಚ್ಚ ಮಾಡಿ ಅತ್ಯಂತ ವೈಜ್ಞಾನಿಕವಾಗಿ ವರದಿ ಸಿದ್ದಪಡಿಸಿದೆ. ಪ್ರತಿ ಮನೆ ಮನೆಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದೆ.
ಈ ವರದಿ ಎಲ್ಲ ವರ್ಗದಲ್ಲಿನ ನೊಂದ ಜನರಿಗೆ ಸರ್ಕಾರದ ಸೌಲಭ್ಯವನ್ನು ತಲುಪಿಸಲು ಬುನಾದಿ ಆಗಲಿದೆ. ಅದರಲ್ಲೂ ಅನೇಕ ಯೋಜನೆಗಳನ್ನು ಸರ್ಕಾರ ರೂಪಿಸಲು ಸಹಕಾರಿ ಆಗಲಿದೆ. ಮೀಸಲಾತಿ, ಸೌಲಭ್ಯ ಹಂಚಿಕೆ ವೇಳೆ ಯಾವ ಆಧಾರದ ಮೇಲೆ ಇದನ್ನು ಜಾರಿಗೊಳಿಸಿದ್ದೀರಾ, ನಿಮ್ಮಲ್ಲಿ ಏನಾದ್ರೂ ಅಂಕಿ-ಅAಶಗಳು ಇವೆಯೇ ಎಂದು ಪದೇ ಪದೆ ಕೋರ್ಟ್ ಪ್ರಶ್ನೇಗೆ ಕಾಂತರಾಜ್ ಆಯೋಗದ ವರದಿ ಉತ್ತರವಾಗಲಿದೆ ಎಂದರು.
ಕಾಂತರಾಜ್ ಆಯೋಗ ಅತ್ಯಂತ ವೈಜ್ಞಾನಿಕವಾಗಿ ತಯಾರಿಸಿರುವ ವರದಿ ಕುರಿತು ಯಾವುದೇ ರೀತಿ ಟೀಕೆ, ಆರೋಪ, ಬೆದರಿಕೆ, ವಿರೋಧ ವ್ಯಕ್ತವಾದರೂ ಸಿದ್ದರಾಮಯ್ಯ ಜಗ್ಗಬಾರದು. ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿ, ಚರ್ಚಿಸಿ ವರದಿಯನ್ನು ಬಹಿರಂಗಪಡಿಮಂಡಿಸಬೇಕು. ಬಳಿಕ ಸಣ್ಣಪುಟ್ಟ ಲೋಪಗಳಿದ್ದರೆ ಸರಿಪಡಿಸಬಹುದು. ಈ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ನೂರಾರು ವರ್ಷಗಳಿಂದಲೂ ಸಾಮಾಜಿಕ ನ್ಯಾಯ ಕಲ್ಪಿಸುವ ಸಂದರ್ಭ ಆಡಳಿತದ ವಿರುದ್ಧ ಕೆಲವರು ತಿರುಗಿಬಿದ್ದಿದ್ದಾರೆ. ಸಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ವಿ.ಪಿ.ಸಿಂಗ್, ದೇವರಾಜ ಅರಸು ಸೇರಿ ಅನೇಕರ ಕಾಲದಲ್ಲಿ ನೊಂದ ಜನರಿಗೆ ಮೀಸಲಾತಿ ಕೊಡಲು ಅಡ್ಡಿಗಳು ಎದುರಾಗಿವೆ. ಆದರೂ ಅವರು ಯಾವುದೇ ಒತ್ತಡ, ಪ್ರತಿಭಟನೆಗಳಿಗೆ ಬೆದರದೆ ಹಕ್ಕು ಕಲ್ಪಿಸಿದ್ದಾರೆ ಎಂದರು.
ಅದೇ ಹಾದಿಯಲ್ಲಿ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಸಾಗುತ್ತಾರೆಂಬ ವಿಶ್ವಾಸ ಇದೆ. ಈಗಾಗಲೇ ಹಲವರು ಬಾರಿ ಅವರು ತಮ್ಮ ಮಾತು, ನಡೆ ಮೂಲಕ ದೃಢಪಡಿಸಿದ್ದು, ನಾನೇ ಒಳಮೀಸಲಾತಿ ಜಾರಿಗೊಳಿಸುವುದು ಹಾಗೂ ಯಾವುದೇ ಟೀಕೆ ಬಂದರೂ ಜಾತಿಗಣತಿ ವರದಿ ಜಾರಿ ಸಿದ್ಧವೆಂಬ ಹೇಳಿಕೆ ಎಲ್ಲ ವರ್ಗದ ಜನರಲ್ಲಿ ಅದಮ್ಯ ವಿಶ್ವಾಸ ಮೂಡಿಸಿದೆ. ಜತೆಗೆ ಒಳಮೀಸಲಾತಿ ಜಾರಿಗೆ ನ್ಯಾ.ನಾಗಮೋಹನ್ ದಾಸ್ ಅವರನ್ನು ನೇಮಕ ಮಾಡಿರುವುದು ಅತ್ಯಂತ ಗಟ್ಟಿ ನಿರ್ಧಾರವಾಗಿದೆ ಎಂದರು.
ವಿರೋಧ ಮಾಡುವವರು ಕಾರಣ ಕೊಡಬೇಕು
ಅನಗತ್ಯವಾಗಿ ಟೀಕೆ, ಆರೋಪ ಮಾಡುವುದು ಸರಿಯಲ್ಲ. ಸರ್ಕಾರದ ಅಡಿಯಲ್ಲಿ ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು, ಶಿಕ್ಷಕರು, ಜಿಲ್ಲಾಧಿಕಾರಿಗಳು, ತಹಸೀಲ್ದಾರ್‌ಗಳು ಸೇರಿ ಅನೇಕರು ಕಾರ್ಯನಿರ್ವಹಿಸಿದ್ದಾರೆ. ಅವರ ಶ್ರಮವನ್ನು ಗೌರವಿಸಬೇಕು ಎಂದು ಎಚ್.ಆಂಜನೇಯ ಒತ್ತಾಯಿಸಿದರು.
ವರದಿ ಬಹಿರಂಗಗೊಂಡ ಬಳಿಕ ವಿರೋಧ ಮಾಡುವವರು ತಪ್ಪುಗಳನ್ನು ಗುರುತಿಸಿ ಹೇಳಲಿ. ಇಂತಹ ಪ್ರದೇಶದಲ್ಲಿ ಸರ್ವೇ ಆಗಿಲ್ಲ ಎಂದು ಹೇಳಲಿ. ಆಗ ಅದು ಸತ್ಯವೇ ಅಗಿದ್ದರೇ ಆ ಪ್ರದೇಶದಲ್ಲಿ ಮರು ಸಮೀಕ್ಷೆ ನಡೆಸಲು ಸರ್ಕಾರಕ್ಕೆ ಒತ್ತಡ ಹಾಕೋಣಾ. ಈ ಸಂಬಂಧ ನಾವೆಲ್ಲರೂ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.
ವರದಿ ಬಹಿರಂಗಕ್ಕೆ ಮುನ್ನವೇ ಅನಗತ್ಯವಾಗಿ ವಿರೋಧ ಮಾಡಿದರೇ ನಾವು ಸಹಿಸುವುದಿಲ್ಲ. ಅತ್ಯಂತ ವೈಜ್ಞಾನಿಕವಾಗಿ ತಯಾರಿಸಿರುವ ವರದಿ ಸ್ವೀಕಾರ, ಮಂಡನೆ, ಬಹಿರಂಗೊಳಿಸುವುದು ತುರ್ತು ಅಗತ್ಯವಿದೆ. ಅದರಲ್ಲೂ ಈ ವಿಷಯದಲ್ಲಿ ಕೋರ್ಟ್ ಕೇಳುತ್ತಿದ್ದ ಅನೇಕ ಪ್ರಶ್ನೇಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಮಹಾನಗರಪಾಲಿಕೆ ಮಾಜಿ ಸದಸ್ಯ ಎಸ್.ಮಲ್ಲಿಕಾರ್ಜುನ್, ದಲಿತ ಮುಖಂಡ ಹೀರಣ್ಣಯ್ಯ, ಅಂಜಿನಪ್ಪ ಮತ್ತಿತರರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ರಸ್ತೆ ಸುರಕ್ಷತಾ ಸಮಿತಿ ಸಭೆ | ಅಪಘಾತ ಪ್ರಮಾಣ ತಗ್ಗಿಸಲು ಜಿಲ್ಲೆಯ ರಸ್ತೆಗಳ ದುರಸ್ತಿ ಹಾಗೂ ಸುಧಾರಣೆಗೆ ವಿಶೇಷ ಗಮನ ನೀಡಿ : ಡಿಸಿ ಗಂಗಾಧರಸ್ವಾಮಿ ಜಿ.ಎಂ.
-
ದಿನದ ಸುದ್ದಿ6 days ago
ಒಳಮೀಸಲಾತಿ ಜಾರಿಗೆ ಚಾಲನೆ ; ಜಾತಿಗಣತಿ ವರದಿ ವಿರೋಧಕ್ಕೆ ಬೇಡ ಮನ್ನಣೆ : ಮಾಜಿ ಸಚಿವ ಎಚ್.ಆಂಜನೇಯ
-
ದಿನದ ಸುದ್ದಿ1 day ago
ಚಿಗಟೇರಿ ಆಸ್ಪತ್ರೆಯಲ್ಲಿ ಮಹಿಳೆ ಮತ್ತು ಮಕ್ಕಳ ನೂತನ ಕಟ್ಟಡದ ಲೋಕಾರ್ಪಣೆ ; ಗ್ರೂಪ್ ಡಿ ಹುದ್ದೆಗಳಿಗೆ ನೇರಪಾವತಿಯಡಿ ನೇಮಕಕ್ಕೆ ಕಾನೂನು ಇಲಾಖೆಗೆ ಪ್ರಸ್ತಾವನೆ : ಸಚಿವ ದಿನೇಶ್ ಗುಂಡೂರಾವ್
-
ದಿನದ ಸುದ್ದಿ6 days ago
ದಾವಣಗೆರೆ | ಬಿರ್ಸಾ ಮುಂಡಾ ಜನ್ಮ ದಿನಾಚರಣೆ ; ಬುಡಕಟ್ಟು ಜನರ ಆರ್ಥಿಕ ಸಬಲೀಕರಣಕ್ಕಾಗಿ ಯೋಜನೆಗಳ ಸಮರ್ಪಕ ಬಳಕೆಗೆ ಸೂಚನೆ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್