ದಿನದ ಸುದ್ದಿ
ಸಾವಿರ ಹೂವ್ವ ಎದೆಹನಿ ಬೇಕು..!
- ಹಿರಿಯೂರು ಪ್ರಕಾಶ್
ಕನ್ನಡ ಚಿತ್ರರಂಗವನ್ನು ಡ್ರಗ್ ರಂಗಕ್ಕೆ ಸಮೀಕರಿಸಿ ನಿತ್ಯವೂ ಬಿತ್ತರಿಸುತ್ತಿರುವ ಕೆಟ್ಟ ಸಾಂಬ್ರಾಣಿ ಹೊಗೆಯಂತಿರುವ ಹಸಿ ,ಬಿಸಿ, ಕಸಿ ಸುದ್ದಿ ವೀರರ ಅಬ್ಬರದ ಗಬ್ಬುನಾತದ ನಡುವೆ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ರೀತಿಯಲ್ಲಿ ಪ್ರಬುದ್ಧವಾದ ಸೇವೆಸಲ್ಲಿಸಿ ಕನ್ನಡಿಗರೆಲ್ಲರ ಮನೆಮಾತಾಗಿ ಹೋಗಿದ್ದ ಮಾಗಿದ ಸ್ಫುರದ್ರೂಫಿ ನಟನೊಬ್ಬನ ಜನ್ಮದಿನವನ್ನು ನೆನಪು ಮಾಡಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ.
ಇಂದಿನ ಜನಾಂಗಕ್ಕೆ ಸ್ಯಾಂಡಲ್ ವುಡ್ ಎಂದರೆ ಡ್ರಗ್‌ಮಾಫ಼ಿಯಾ ಎಂದು ಪರಿಚಯಿಸುತ್ತಾ ತನ್ಮೂಲಕ ಸಾಮಾನ್ಯ ಜ್ಞಾನ ಕ್ಷೇತ್ರಕ್ಕೆ ಅದಮ್ಯ ಸೇವೆ ಸಲ್ಲಿಸುತ್ತಿರುವ ಅಪೂರ್ವ ದೃಶ್ಯ ಮಾಧ್ಯಮಗಳ ಘನಕಾರ್ಯದ ಈ ಹೊತ್ತಿನಲ್ಲಿ ಕನ್ನಡ ಚಿತ್ರರಂಗವೆಂದರೆ ಅನೇಕ ಪ್ರತಿಭೆಗಳ ಗಣಿಯೂ ಹೌದೆಂಬ ವಾಸ್ತವವನ್ನು ಕನ್ನಡದ ಪ್ರತಿಭಾನ್ವಿತ ನಟ ಡಾ. ವಿಷ್ಣುವರ್ಧನ್ ರವರ ಎಪ್ಪತ್ತನೇ ಜನ್ಮದಿನವನ್ನು ಆಚರಿಸುವ ಮೂಲಕ ಸಾದರ ಪಡಿಸುವ ಅಗತ್ಯವಿದೆ.
ಬಹುಶಃ ಕನ್ನಡ ಚಿತ್ರರಂಗದಲ್ಲಿ ವರನಟ, ಮೇರುನಟ ಡಾ. ರಾಜ್ ಕುಮಾರ್ ರವರ ನಂತರ ತಮ್ಮ ವೈವಿಧ್ಯಮಯ ಪಾತ್ರಗಳ ಮೂಲಕ, ಸಧಭಿರುಚಿಯ ಚಿತ್ರಗಳ ಮೂಲಕ ಜನಮಾನಸದಲ್ಲಿ ಆಳವಾಗಿ ಬೇರೂರಿರುವ ನಾಯಕ ನಟನೆಂದರೆ ಅದು ನಿಸ್ಸಂದೇಹವಾಗಿ ಡಾ. ವಿಷ್ಣುವರ್ಧನ್. ಅವರು ನಮ್ಮೊಂದಿಗಿದ್ದಿದ್ದರೆ ಇಂದು ತಮ್ಮ ಎಪ್ಪತ್ತನೇ ವಸಂತದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ಕಲಾವಿದರ ಅದೃಷ್ಟವೆಂದರೆ ಅವರು ನಮ್ಮೊಂದಿಗಿಲ್ಲ ಎನ್ನುವುದು ಕೇವಲ ಭೌತಿಕವಾಗಿ ನಮ್ಮೊಡನಿಲ್ಲವೆಂದು ಅರ್ಥವೇ ಹೊರತು ಅವರ ಕಲಾಸೇವೆಯ ಮೂಲಕ ಅವರು ಜನರ ಹೃನ್ಮನಗಳಲ್ಲಿ ಶಾಶ್ವತವಾಗಿ ಬೇರೂರಿರುತ್ತಾರೆ. ಈ ಮಾತಿಗೆ ಡಾ. ವಿಷ್ಣುವರ್ಧನ್ ಒಂದು ಸ್ಪಷ್ಟ ಉದಾಹರಣೆ.
ಒಮ್ಮೆ ವಿಷ್ಣುವರ್ಧನ್ ರವರ ಭಾವಚಿತ್ರವನ್ನು ದಿಟ್ಟಿಸಿ ನೋಡಿ ! ನಿಷ್ಕಳಂಕತೆ ನಿಚ್ಚಳವಾಗಿ ತುಂಬಿರುವ ಅವರ ಕಂಗಳಲ್ಲಿ ಏನೋ ಒಂಥರಾ ಕಾಂತಿಯಿದೆ, ಅವರ ಮುಖದಲ್ಲಿ ತೇಜಸ್ಸಿದೆ, ಆ ಮುಗುಳುನಗೆಯಲ್ಲಿ ಮುಗ್ಧತೆ ತುಂಬಿದೆ, ಆ ನೋಟದಲ್ಲಿ ಮುಗ್ಧ ಬಾಲಕನ ಅಮಾಯಕತನವಿದೆ. ಅವರ ವ್ಯಕ್ತಿತ್ವದಲ್ಲಿ ಆಕರ್ಷಣೆಯಿದೆ, ನುಡಿಯಲ್ಲಿ ಧೃಡತೆಯಿದೆ, ಸವಿ ಜೇನಿದೆ, ನಡೆಯಲ್ಲಿ ಆತ್ಮವಿಶ್ವಾಸವಿದೆ, ನಕ್ಕರೆ ಹಾಲು ಸಕ್ಕರೆಯಿದೆ, ಕರದಲ್ಲಿ ಕಡಗವಿದೆ, ಅವರ ಬಗ್ಗೆ ಬರೆಯಲು ಹೊರಟರೆ ಕಾದಂಬರಿಯೇ ಆಗುವಂತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ಮಾನವ ಕುಲವನ್ನು ಅದರಲ್ಲೂ ವಿಶೇಷವಾಗಿ ಹೆಣ್ಣು ಕುಲವನ್ನು ಗೌರವದಿಂದ ಕಾಣುವ ಸಹೃದತೆಯ ಗುಣವಿದೆ… ಇಷ್ಟೆಲ್ಲಾ ಅಪರೂಪದ ಅಂಶಗಳಿರುವ “ಗುಣವಂತ”ನಾದ “ಹೃದಯವಂತ” ನಿಗೆ ಇಂದು ಎಪ್ಪತ್ತರ ಜನ್ಮದಿನದ ಸಂಭ್ರಮ.
ಬರೋಬ್ಬರಿ 48 ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ‘ನಾಗರ ಹಾವು’ ಎಂಬ ಎವರ್ ಗ್ರೀನ್ ಚಿತ್ರವೊಂದು ಕನ್ನಡಕ್ಕೊಬ್ಬ ಸ್ಫುರಧ್ರೂಪಿ, ಹಾಗೂ ಪ್ರತಿಭಾವಂತ ನಟನನ್ನು ಪರಿಚಯಿಸಿತು. “ವಂಶವೃಕ್ಷ ” ವೆಂಬ ಕಪ್ಪುಬಿಳುಪು ಚಿತ್ರದಲ್ಲಿ ಅಲ್ಲೆಲ್ಲೋ ಹಾಗೆ ಬಂದು ಹೀಗೆ ಹೋಗಿದ್ದ ಸಂಪತ್ ಕುಮಾರ್ ಎಂಬ ಹುಡುಗನನ್ನು ‘ ವಿಷ್ಣುವರ್ಧನ’ ಎಂಬ ಐತಿಹಾಸಿಕ ಹೆಸರಿನಿಂದ ನಾಮಕರಣ ಮಾಡಿ ತನ್ಮೂಲಕ ಒಂದು ಅಪರೂಪದ ಕೊಡುಗೆಯನ್ನು ಚಿತ್ರರಂಗಕ್ಕೆ ಕೊಡುತ್ತಿದ್ದೇನೆಂದು ಅಂದು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಕೂಡಾ ಊಹಿಸಿರಲಿಲ್ಲವೇನೋ ?
ರೋಷ- ಆವೇಶದ, ಬೆಂಕಿಯುಗುಳುವ ಕಂಗಳ, ಕೆದರಿದ ಉದ್ದ ಕೂದಲಿನ, ಸಿಡಿಲಿನಂತಹಾ ಮಾತುಗಳ, ಯಾರಿಗೂ ಕೇರ್ ಮಾಡದ ಚಿತ್ರದುರ್ಗದ ರಾಮಾಚಾರಿಯ ಕ್ಯಾರೆಕ್ಟರ್ ಅಂದು ಚಿತ್ರ ಬಿಡುಗಡೆಯಾದ ರಾತ್ರೋರಾತ್ರಿ ಸಮಸ್ತ ಯುವ ಪಡೆಯ , ಪಡ್ಡೆ ಹೈದರ ಪಾಲಿನ ಆಂಗ್ರೀ ಯಂಗ್ ಮ್ಯಾನ್ ಆಗಿ, ಅನ್ಯಾಯದ ವಿರುದ್ಧದ ಪ್ರತಿಭಟನೆಯ ಐಕಾನ್ ಆಗಿ ಉದ್ಭವಿಸಿ , ಆನಂತರ ಸಾಹಸಸಿಂಹ ವಿಷ್ಣುವರ್ಧನ್ ಎಂದು ರೂಪಾಂತರಗೊಂಡು ಕನ್ನಡ ಚಿತ್ರರಂಗದಲ್ಲಿ ಅನೇಕ ಸಧಭಿರುಚಿಯ ಚಿತ್ರಗಳಲ್ಲಿ ತನ್ನ ಹೃದಯಂಗಮ ಹಾಗೂ ಆಕರ್ಷಕ ಶೈಲಿಯ ನಟನೆಯಿಂದ ಒಬ್ಬ ಮಾಗಿದ, ಮನಮುಟ್ಟುವ ಅಭಿನಯದ ಪರಿಪಕ್ವ ಕಲಾವಿದ ವಿಷ್ಣುವರ್ಧನ್ ಆಗಿ ಮನೆಮಾತಾಗಿದ್ದು ಗಂಧದಗುಡಿಯ ಮನೆಮನೆ ಕಥೆ .
ನಾಗರಹಾವಿನಿಂದ ಆಪ್ತರಕ್ಷಕನ ವರೆಗೆ ಭರ್ತಿ ಇನ್ನೂರು ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿ ತನ್ನ ಅರವತ್ತರ ಪ್ರಾಯದಲ್ಲೇ ಅಕಾಲ ಮರಣಕ್ಕೆ ತುತ್ತಾದ ವಿಷ್ಣು ಚಿತ್ರರಂಗದ ದಾದಾ ನೇ ಆಗಿದ್ದರು . ಅವರು ನಟಿಸಿದ ಬಹುತೇಕ ಚಿತ್ರಗಳಲ್ಲಿ ಉತ್ತಮ ಕಥೆ, ಸಂಗೀತ, ಸಂದೇಶ, ಅಭಿನಯ, ಭಾವೈಕ್ಯತೆ …ಎಲ್ಲವೂ ಇರುತ್ತಿತ್ತು. ಅದು ಶ್ರೀಸಾಮಾನ್ಯನಿಗೂ ಥಟ್ಟನೇ ಮನಮುಟ್ಟುವಂತೆ ಇದ್ದಿದರಿಂದಾಗಿಯೇ ಅವರಿಗೆ ಅಣ್ಣಾವ್ರಂತೆ ಜನಪ್ರಿಯತೆ ದೊರೆಯಲು ಸಾಧ್ಯವಾಯಿತು.
ಮೂಲತಃ ಸಂಸ್ಕಾರವಂತರಾಗಿದ್ದ ಅವರನ್ನು ಆಗಾಗ್ಗೆ ಒಬ್ಬ ವಿವಾದಾಸ್ಪದ ನಟನನ್ನಾಗಿಸಿದ ಕೀರ್ತಿ ನಮ್ಮ ಅಂದಿನ ಕೆಲವು ಮಾಧ್ಯಮಗಳಿಗೆ ಸಲ್ಲಬೇಕು. ಉಗುರಲ್ಲಿ ಹೋಗುವಂತಹ ಸುದ್ದಿಗಳನ್ನು ವರ್ಣರಂಜಿತ ಕೊಡಲಿಯಿಂದ ಕೆತ್ತಿ ಕೆತ್ತಿ ವಿಷ್ಣುವನ್ನು ತಾನೊಲ್ಲದ ವಿವಾದಗಳ ಕೂಪಕ್ಕೆ ತಳ್ಳಿ ಅದರ ಮಸಿಯನ್ನು ಯಾರ್ಯಾರಿಗೋ ಬಳಿಯಲು ನೋಡಿ ಕೈ ಸುಟ್ಟುಕೊಂಡಿದ್ದು ಈಗ ಇತಿಹಾಸ. ತೆರೆಯ ಮೇಲೆ ನಾಯಕನಾಗಿ ಮಿಂಚಿದ್ದ ವಿಷ್ಣು ಅದೇಕೋ ನಿಜ ಬದುಕಿನ ಹೋರಾಟದಲ್ಲಿ ವಿಮುಖರಾಗಿ ಸದಾ ಅಂತರ್ಮುಖಿಯಾಗಿಯೇ ಇರಲು ಬಯಸುತ್ತಿದ್ದರು.
ಹೀಗಾಗಿಯೇ ಅವರು ಯಾವುದೇ ಹೋರಾಟದ ನಾಯಕತ್ವದಿಂದ, ಮುಜುಗರದ ಹೇಳಿಕೆಗಳಿಂದ ಅಂತರವನ್ನು ಕಾಯ್ದುಕೊಂಡಿರುತ್ತಿದ್ದರು. ಅದರಲ್ಲೂ ತಮ್ಮ ಜೀವನದ ಕೊನೆಯ ದಿನಗಳಲ್ಲಿ ಒಮ್ಮೊಮ್ಮೆ ಸಂತನಂತೆಯೇ ಮಾತನಾಡುತ್ತಾ, ಕೆಲವೊಮ್ಮೆ ಕಳೆದುಕೊಂಡ ಏನನ್ನೋ ಅರಸುವಂತಹ ಬಾಲಕನಂತೆ , ದೈವೀಕ ಪ್ರತಿನಿಧಿಯಂತೆ ಭಾಸವಾಗುತ್ತಿದ್ದರು.
ಅದೇನೇ ಇರಲಿ, ಇಂದಿನ ಸಂತಸದ ಸಂಗತಿಯೆಂದರೆ ವಿಷ್ಣು ಗತಿಸಿ ಹತ್ತು ವರ್ಷಗಳ ನಂತರವಾದರೂ ಅವರ ಅಭಿಮಾನಿಗಳ ಕುಟುಂಬದ ಬಹು ಬೇಡಿಕೆಯ ಸ್ಮಾರಕ ನಿರ್ಮಾಣಕ್ಕೆ ಮೊನ್ನೆ ಚಾಲನೆ ಸಿಕ್ಕಿರುವುದು !. ಕನ್ನಡ ಚಿತ್ರರಂಗಕ್ಕೆ ವಿಷ್ಣುವರ್ಧನ್ ರವರ ಕೊಡುಗೆಯನ್ನು, ಕಲಾಸೇವೆಯನ್ನು ಪರಿಗಣಿಸಿ ಅವರ ಸ್ಮಾರಕ ನಿರ್ಮಾಣಕ್ಕಾಗಿ ಅವರ ನೆಚ್ಚಿನ ಮೈಸೂರು ಬಳಿಯಲ್ಲಿಯೇ ಅದರ ಶಂಕುಸ್ಥಾಪನೆಯಾಗಿರುವುದು ಹಾಗೂ ಇದಕ್ಕಾಗಿ ಸರ್ಕಾರ ಹನ್ನೊಂದು ಕೋಟಿ ಹಣ ತೆಗೆದಿಟ್ಟಿರುವುದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಈ ಕಾರ್ಯ ಆದಷ್ಟು ಬೇಗನೇ ಪೂರ್ಣವಾಗಲಿ.
” ಸಾವಿರ ಹೂವ್ವಿನ ಎದೆಹನಿ ಬೇಕು ಜೇನಿನ ಗೂಡಾಗಲು, ಸಾವಿರ ಭಾವ ಸ್ಪಂದಿಸಬೇಕು ಕನ್ನಡ ನಾಡಾಗಲು” ಎಂಬ ಸುಂದರ ಸಾಲುಗಳಂತೆ ಸಾವಿರ ಹೃದಯಗಳು ಮನದುಂಬಿ ಹಾರೈಸಬೇಕಿಂದು ವಿಷ್ಣುವರ್ಧನ್ ರವರ ಜನ್ಮದಿನವಾಗಲು..!
ಚಾಮುಂಡಿ ತಾಯಾಣೆ ಮುಂದಿನ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ ” ಎಂದು ತಮ್ಮ ಕೊನೆ ಚಿತ್ರದಲ್ಲಿ ವಿಷ್ಣು ಅಂದುಕೊಂಡಂತೆ ತಾಯಿ ಚಾಮುಂಡಿ ಅವರನ್ನು ಮತ್ತೇ ಕರುನಾಡಿನ ಮಣ್ಣಲ್ಲೇ ಜನ್ಮ ನೀಡಲಿ ಎಂಬ ಅಭಿಮಾನಪೂರ್ವಕ ಪ್ರಾರ್ಥನೆಯೊಂದಿಗೆ
ಕಲೆಯನ್ನು, ಕಲಾವಿದರನ್ನು, ಮತ್ತು ಕನ್ನಡವನ್ನು ಮನದಾಳದಿಂದ ಪ್ರೀತಿಸುವ ಎಲ್ಲ ಸಹೃದಯರ ಪರವಾಗಿ ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ರವರಿಗೆ 70 ನೇ ‘ವರ್ಷ’ ದ ಹುಟ್ಟುಹಬ್ಬದ ಶುಭಾಶಯಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವನಗರಿ ಸುದ್ದಿದಿನ ಪತ್ರಿಕೆಯ ದೀಪಾವಳಿ ವಿಶೇಷಾಂಕ- 2026 ರ ಕತೆ – ಕವಿತೆ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ ಹಾಗೂ ಶ್ಯಾಮ್ ಪ್ರಕಾಶನ, ನವಿಲೇಹಾಳು ವತಿಯಿಂದ ದೀಪಾವಳಿ ವಿಶೇಷಾಂಕ-2026 ರ ಕತೆ ಮತ್ತು ಕವಿತೆ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕತಾ ಸ್ಪರ್ಧೆಯಲ್ಲಿ ಅನಂತ್ ಕುಣಿಗಲ್ ಅವರ ́ಸಂಸʼ ಕತೆಗೆ ಪ್ರಥಮ ಬಹುಮಾನ,. ರವಿ ಮಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ದ್ವಿತೀಯ ಬಹುಮಾನ ಹಾಗೂ ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕರಾದ ಗೋವರ್ಧನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಜೇಯ ಸಿಂಹ ಕೆ.ವಿ. ಅವರ ʼಮಾರ್ಜಕದ ಶ್ರೀಮುಡಿʼ, ಟಿ.ಆರ್. ಪ್ರಕಾಶ ಭಾಗವತ ಅವರ ʼಸಮಾಧಿʼ , ರಘುನಂದನ್ ಅವರ ʼಹೀಗೊಂದು ಕಛೇರಿʼ , ಡಾ||. ಮಿರ್ಜಾ ಬಷೀರ್ ಅವರ ʼ ಒಂದು ಸದ್ದಿಲ್ಲದ ಕ್ರಾಂತಿʼ, ಸುಜಾತ ಎಸ್. ಎನ್ ರೆಡ್ಡಿ ಅವರ ʼ ಸತ್ಯ ದರ್ಶನʼ, ಚಂದ್ರಿಕಾ ನಾಗರಾಜ್ ಹಿರಿಯಡಕ ಅವರ ʼ ವೆಂಕಟನ ಸ್ವೆಟರ್, ರೈಹಾನ ಅವರ ʼಬಾವಿಗೆ ಬಿದ್ದರೂʼ, ಒಟ್ಟು ಈ ಏಳುಕತೆಗಳು ತೀರ್ಪುಗಾರ ಮೆಚ್ಚುಗೆ ಪಡೆದಿವೆ.
ಕತಾ ಸ್ಪರ್ಧೆಯ ತೀರ್ಪುಗಾರರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕತೆಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ, ಹೊಸಪೇಟೆ, ಕವಿ ಕತೆಗಾರ , ಜಿ. ಮುದ್ದುವೀರಸ್ವಾಮಿ, ದಾವಣಗೆರೆ, ಕತೆಗಾರ್ತಿ ಹಾಗೂ ಕನ್ನಡ ಪ್ರಾಧ್ಯಾಪಕಿ, ಸುಜಾತ ಚಲಾವಾದಿ, ತಾಳಿಕೋಟೆ, ಕತೆಗಾರ ಹಾಗೂ ಅಕ್ಷರ ಸಂಗಾತ ಮಾಸ ಪತ್ರಿಕೆಯ ಸಂಪಾದಕ ಡಾ. ಟಿ ಎಸ್. ಗೊರವರ, ಗಜೇಂದ್ರಘಡ ಇವರು ಕಾರ್ಯನಿವಹಿದ್ದರು ಎಂದು ಮಾಹಿತಿ ನೀಡಿದ್ಧಾರೆ.
ಪ್ರಥಮ ಬಹುಮಾನ ಹತ್ತು ಸಾವಿರ ರೂ (10000 ರೂ ) ನಗದು, ದ್ವೀತೀಯ ಬಹುಮಾನ ಐದು ಸಾವಿರ ನಗದು, (5000 ರೂ), ತೃತೀಯ ಬಹುಮಾನ ಮೂರು ಸಾವಿರ (3000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ನೀಡಲಾಗುವುದು.
ಕವಿತೆ ಸ್ಪರ್ಧೆ ಫಲಿತಾಂಶ
ಕವಿತೆ ಸ್ಪರ್ಧೆಯಲ್ಲಿ ಆನಂದ ಕುಂಚನೂರ ಅವರ ʼ ಬೆತ್ತಲೆ ಶಿಖರʼ ಕವಿತೆಗೆ ಪ್ರಥಮ ಬಹುಮಾನ, ಅಜಯ್ ಅಂಗಡಿ ಅವರ ʼಒಂದು ಶ್ರಾವಣ ಸಂಜೆಗೆʼ ದ್ವಿತೀಯ ಬಹುಮಾನ, ಭಾಗ್ಯ ಜ್ಯೋತಿ ಹಿರೇಮಠ ಅವರ ʼ ಗೋಡೆ ಕವಿತೆಗೆ ತೃತೀಯ ಬಹುಮಾನ ದೊರೆತಿದೆ.
ಫೈಜ್ನಟ್ರಾಜ್ ಅವರ ʼಅವ್ವ ತಟ್ಟಿದ ರೊಟ್ಟಿಯಲ್ಲಿ ಬೆರಳಿನ ಗುರುತುʼ, ಹೊನ್ನಪ್ಪ. ನೀ. ಕರೆಕನ್ನಮ್ಮನವರ ಅವರ ʼಒಂಟಿಯಾನದ ಸರಕುʼ, ಕವಿತ ಎ.ವಿ ಅವರ ʼಬಂದಿದ್ದಾರೆ ಸಿಕ್ಕಿಲ್ಲʼ, ರಮ್ಯ ಕೆ.ಜಿ. ಅವರ ʼಬಿಡಿಸಿಕೊಳ್ಳುತ್ತದೊಂದು ಚಿತ್ರ,ʼ, ಮುರ್ತುಜಾ ಬೇಗಂ ಕೊಡಗಲಿ ಅವರ ʼಒಂದು ಕನ್ನಡಿ ಮೂರು ಬಿಂಬಗಳುʼ, ಮನಸ್ವಿ ಎಂ ಸ್ವಾಮಿ ಅವರ ʼ ರಾಜಧಾನಿಯಲ್ಲಿ ರಾಜʼ, ವೀಣಾ ರಾವ್ ಅವರ ʼಬಣ್ಣಗಳ ಆಚೆಗೆʼ ಒಟ್ಟು ಏಳು ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕವಿತೆ ಸ್ಪರ್ಧೆಯ ತೀರ್ಪುಗಾರರಾಗಿ ಕವಿ ಚಂದ್ರಶೇಖರ ತಾಳ್ಯ, ಹೊಳಲ್ಕೆರೆ, ಕವಯಿತ್ರಿ ಸವಿತಾ ನಾಗಭೂಷಣ, ಶಿವಮೊಗ್ಗ, ಕವಿ ವಿಲ್ಸನ್ ಕಟೀಲು ಅವರು ಕಾರ್ಯನಿರ್ವಹಿಸಿದ್ದರು.
ಪ್ರಥಮ ಬಹುಮಾನ ಐದು ಸಾವಿರ ರೂ (5000 ರೂ ) ನಗದು, ದ್ವೀತೀಯ ಬಹುಮಾನ ಮೂರು ಸಾವಿರ ನಗದು, (3000 ರೂ), ತೃತೀಯ ಬಹುಮಾನ ಎರಡು ಸಾವಿರ (2000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ಇದೇ ಅಕ್ಟೋಬರ್ 24 ರಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ʼ ನಡೆಯುವ ದೀಪಾವಳಿ ವಿಶೇಷಾಂಕ-2026 ರ ಬಿಡುಗಡೆ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: 9980346243 ಸಂಪರ್ಕಿಸಲು ಈ ಮೂಲಕ ತಿಳಿಸಲಾಗಿದೆ.

ದಿನದ ಸುದ್ದಿ
ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ
ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.
ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್. ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


