Connect with us

ದಿನದ ಸುದ್ದಿ

ಹುಟ್ಟು ಹಬ್ಬ | “ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ದೌರ್ಜನ್ಯದ ವಿರುದ್ಧ ಸಿಡಿದೆದ್ದರೆ ನೀನು ನನ್ನ ಸಂಗಾತಿ”..! : ಚೆ ಗುವೆರಾ

Published

on

  • ಶಿವಸ್ವಾಮಿ, ಯುವಚಿಂತಕರು

ನಾನು ಎಂದಿಗೂ ಸೋತು ಮನೆಗೆ ಹಿಂತಿರುಗುವುದಿಲ್ಲ, ಸೋಲಿಗಿಂತ ಸಾವನ್ನೆ ಹೆಚ್ಚು ಇಷ್ಟಪಡುತ್ತೇನೆ”. ಎಂದು ನಿರಂತರವಾಗಿ ಹೋರಾಡುತ್ತಲೇ ತನ್ನ ವಿರೋಧಿಗಳಿಗೆ ಸಿಂಹಸ್ವಪ್ನವಾಗಿ ಎಂದಿಗೂ ಸೋಲನ್ನು ಒಪ್ಪಿಕೊಳ್ಳದೆ ತನ್ನನ್ನು ತಾನೇ ಸಾವಿಗೆ ಅರ್ಪಿಸಿಕೊಂಡ ಮಹಾನ್ ಕ್ರಾಂತಿಕಾರಿ, ಮಾನವತಾವಾದಿ, ಗೆರಿಲ್ಲಾ ಯುದ್ಧ ತಂತ್ರದ ನಿಪುಣ, ವೈದ್ಯ, ಬರಹಗಾರ, ಬುದ್ಧಿಜೀವಿ ಹಾಗೂ ಕ್ಯೂಬಾ ಕ್ರಾಂತಿಯ ಪ್ರಮುಖ ನೇತಾರ ಅರ್ನೆಸ್ಟೋ ಚೆಗುವಾರ.

ಚೆಗುವಾರ ಹುಟ್ಟಿದ್ದು ಜೂನ್ 14, 1928ರಂದು ಲಿಂಚ್ ಮತ್ತು ಸೀಲಿಯಾ ಡ ಲಾ ಸೆರ್ನ್ ಎಂಬ ಸ್ಪ್ಯಾನಿಷ್ ಮತ್ತು ಐರಿಷ್ ದಂಪತಿಗಳ ಮಗನಾಗಿ ಅರ್ಜೆಂಟೀನಾದ ರೊಸಾರಿಯೋ ಪಟ್ಟಣದಲ್ಲಿ ಜನಿಸಿದನು.ಚೆಗುವರ ಚಿಕ್ಕಂದಿನಿಂದಲೇ ಶೋಷಿತ ಬಡವರ, ಶ್ರಮಿಕರ ಬಗ್ಗೆ ಅಪಾರವಾದ ಕಾಳಜಿ ಮತ್ತು ಪ್ರೀತಿಯನ್ನು ಬೆಳೆಸಿಕೊಂಡು ಎಡಪಂಥೀಯವಾದದ ಬಗ್ಗೆ ಒಲವು ಹೊಂದಿದ್ದ ಕುಟುಂಬದಲ್ಲಿ ಹುಟ್ಟಿಬೆಳೆದ ಅವನಿಗೆ ಚಿಕ್ಕಂದಿನಿಂದಲೇ ರಾಜಕೀಯ ದೃಷ್ಟಿಕೋನಗಳ ಬಗೆಗೆ ಪರಿಚಯವಾಗಿ ಗಣತಂತ್ರವಾದಿಗಳ ಪ್ರಬಲ ಸಮರ್ಥಕರಾಗಿದ್ದ ತಂದೆಯ ಪ್ರಭಾವ ಚೆಗುವಾರನ ಮೇಲೆ ಸಹಜವಾಗಿಯೇ ಬೀರಿತು.

19 ನೇಯ ವಯಸ್ಸಿನಲ್ಲಿಯೇ ವೈದ್ಯಕೀಯ ವೃತ್ತಿ ಕಲಿಕೆಗಾಗಿ ವಿಶ್ವವಿದ್ಯಾನಿಲಯಕ್ಕೆ ಪ್ರವೇಶಾತಿ ಪಡೆದು ಮತ್ತೆ ಒಂದು ವರ್ಷ ರಜೆ ಪಡೆದು ತನ್ನ ಮಿತ್ರ ಅಲ್ಬಟ್ರೋ ಗ್ರೆನಾಡೇ ಜೊತೆ ಸೇರಿ ಮೋಟಾರ್ ಸೈಕಲ್ ಮೂಲಕ ದಕ್ಷಿಣ ಅಮೇರಿಕಾ ಪ್ರವಾಸ ಮಾಡುತ್ತಾನೆ ತಾನೊಬ್ಬ ಕ್ರಾಂತಿಕಾರಿಯಾಗಲು ಈ ಪ್ರವಾಸದ ಅನುಭವಗಳೇ ಕಾರಣವೆಂದು ಅವನೇ ಬರೆದುಕೊಂಡಿದ್ದಾನೆ.

ದಕ್ಷಿಣ ಅಮೆರಿಕಾದ ಆಂಡೀಸ್ ಪರ್ವತದ ಮಾಚು ಪಿಚುವಿಗೆ ಹೋಗುವ ದಾರಿಯಲ್ಲಿ ಶ್ರೀಮಂತ ಭೂ ಮಾಲೀಕರಿಂದ ತುಂಡು ತುಂಡು ಭೂಮಿಗಳನ್ನು ಪಡೆದು ಕೃಷಿ ಮಾಡುತಿದ್ದ ರೈತಾಪಿ ಜನರ ಕಡುಬಡತನದ ಹೀನಾಯ ಬದುಕಿನ ಸ್ಥಿತಿಯನ್ನು ಹತ್ತಿರದಿಂದ ಕಂಡು ನಾನು ಈ ಜನರಿಗೆ ಏನಾದರೂ ಸಹಾಯ ಮಾಡಬೇಕೆಂದರೆ ನನ್ನ ವೈದ್ಯಕೀಯ ಅಭ್ಯಾಸವನ್ನು ಬಿಟ್ಟು ಸಶಸ್ತ್ರ ಹೋರಾಟದ ಮೂಲಕ ರಾಜಕೀಯ ರಂಗವನ್ನು ಪ್ರವೇಶಿಸಬೇಕೆಂದು ಮನವರಿಕೆಯಾಯಿತು ಎಂದು ತನ್ನ ಮೋಟಾರ್ ಸೈಕಲ್ ಡೈರಿಯಲ್ಲಿ ಬರೆದುಕೊಳ್ಳುತ್ತಾನೆ.

ಮೋಟಾರ್ ಸೈಕಲ್ ಪ್ರವಾಸ ಚೆಗುವಾರನ ಕ್ರಾಂತಿಕಾರಿ ಬದುಕಿನ ಒಂದು ದೊಡ್ಡ ತಿರುವು ಪ್ರವಾಸದ ಜೊತೆಗಾರ ಅಲ್ಬಟ್ರೋ ಗ್ರಾನಡಾಸ್ ಚೆಗುವಾರನ ಕುರಿತು ಹೇಳುತ್ತಾ…ಟೆಟೆ (ಚೇ ನನ್ನನ್ನು ಪ್ರೀತಿಯಿಂದ ಕರೆಯುತಿದ್ದ ಹೆಸರು )ನನ್ನು ನಾನು ಮೊದಲು ಭೇಟಿಯಾಗಿದ್ದು 1941 ರಲ್ಲಿ ನನ್ನ ಸಹೋದರ ಥಾಮಸ್ ಮೂಲಕ ನನಗಾಗ 13 ವರ್ಷ ನಮ್ಮಿಬ್ಬರನ್ನು ಒಟ್ಟಿಗೆ ಕೂಡಿಸಿದ ವಿಷಯವೆಂದರೆ ‘ಓದುವ ಅಭಿರುಚಿ ಮತ್ತು ನಿಸರ್ಗ ಪ್ರೇಮ’ ಚೇ…ಮನೆಗೆ ಪ್ರತಿದಿನ ಭೇಟಿ ನೀಡಿದಾಗಲೂ ನನ್ನನ್ನು ಆಕರ್ಷಿಸಿದ್ದ ಅಲ್ಲಿನ ಅಪಾರವಾದ ಗ್ರಂಥಭಂಡಾರವನ್ನು ನನ್ನದೆಂಬಂತೆ ಬಳಸುಕೊಳ್ಳುತಿದ್ದೆ.

ನಾವು ಎಷ್ಟೋ ರಾತ್ರಿಗಳನ್ನ ಚೆರ್ಚೆಗಳಲ್ಲಿ ಕಳೆದಿದ್ದೇವೆ, ಒಮ್ಮೆ ವಿದ್ಯಾರ್ಥಿ ಚಳುವಳಿಯಲ್ಲಿ ನನ್ನ ಬಂಧನವಾಯಿತು ಆಗ ನನ್ನ ಸಹೋದರ ಥಾಮಸ್ ಜೊತೆ ಚೆಗುವಾರ ನನ್ನ ನೋಡಲು ಪೊಲೀಸ್ ಠಾಣೆಗೆ ಬಂದಿದ್ದ ನಾನು ಅವನ ಜೊತೆ ಮಾತನಾಡುತ್ತಾ ಬಂಧಿತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಕರೆತರುವಂತೆ ನಾನು ಅವನಿಗೆ ಹೇಳಿದೆ, ಅದಕ್ಕೆ ಅವನು ಹೇಳಿದ ಮಾತು ಬೀದಿಗಿಳಿಯಿರಿ ಎಂದು ಹೇಳುತಿದ್ದೀರಲ್ಲ!ಪೊಲೀಸರೆಲ್ಲ ನಮ್ಮ ಮೇಲೆ ದೊಣ್ಣೆಗಳಿಂದ ಸರಿಯಾಗಿ ಬಾರಿಸಲಿ ಅಂತಲೋ! ಅದೆಲ್ಲ ಆಗುವುದಿಲ್ಲ,ನನಗೆ ಪಿಸ್ತೂಲು ಕೊಟ್ಟರೆ ಮಾತ್ರ ನಾನು ಬೀದಿಗಿಳಿಯುತ್ತೇನೆ ಎಂದಿದ್ದ ಅದೆಷ್ಟೋ ! ನೆನಪುಗಳು ನನ್ನೊಂದಿಗಿವೆ.

ಚೆಗುವಾರ 1953 ರಲ್ಲಿ ವೈದ್ಯಕೀಯ ಶಿಕ್ಷಣವನ್ನು ಮುಗಿಸಿ ಮತ್ತೆ ಪ್ರವಾಸ ಹೊರಟು ಗ್ವಾಟಮಾಲಕ್ಕೆ ಬರುತ್ತಾನೆ ಅಲ್ಲಿ ಯುದ್ಧದಲ್ಲಿ ಮುಳುಗಿದ ದೇಶವೊಂದರ ಅನುಭವ ದೊರೆಯುತ್ತದೆ, ನಂತರ 1954 ರಲ್ಲಿ ಅರ್ಬೆನ್ಜ್ ರ ಸಮಾಜವಾದಿ ಸರ್ಕಾರದ ವಿರುದ್ಧ CIA ಪ್ರೇರಿತ ಕ್ಷಿಪ್ರ ಕ್ರಾಂತಿಯನ್ನು ಕಣ್ಣಾರೆ ಕಂಡು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಳನ್ನು ರೂಪಿಸಲು ಲ್ಯಾಟಿನ್ ಅಮೆರಿಕಾದಂತಹ ಯಾವುದೇ ಸರ್ಕಾರವನ್ನು ಅಮೆರಿಕಾದಂತ ಸಾಮ್ರಾಜ್ಯ ಷಾಹಿ ದೇಶ ವಿರೋಧಿಸುತ್ತದೆ ಮತ್ತು ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಯಥಾಸ್ಥಿಯಾಗಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಚೆಗುವಾರ ಸೂಕ್ಷ್ಮವಾಗಿ ಗ್ರಹಿಸಿದರು.

ಇಂತಹ ಸ್ಥಿತಿಯನ್ನು ಸರಿಪಡಿಸಲು ‘ಸಶಸ್ತ್ರ ಹೋರಾಟದ ಬುಲೆಟ್ ಕ್ರಾಂತಿಯೊಂದೇ ಮದ್ದು‘ಚೆಗುವಾರ ಯೋಚಿಸುತ್ತಾನೆ ನಂತರ ಗ್ವಾಟೆಮಾಲಾದಿಂದ ಹೊರಬಂದು ಚೆಗುವಾರ ಫಿಡೆಲ್ ಕ್ಯಾಸ್ಟ್ರೋರೊಂದಿಗೆ ಜೊತೆಯಾಗಿ ಕ್ಯೂಬಾದ ಸರ್ವಾಧಿಕಾರಿ ಜನರಲ್ ಪುಲ್ಗೆನ್ಸಿಯೋ ಬಟಿಸ್ಟಾ ರ ವಿರುದ್ಧ ಸೇನಾ ದಂಡಾಯಾತ್ರೆ ಕೈಗೊಳ್ಳುವ ಯೋಜನೆ ರೂಪಿಸಿ, 1956 ರಲ್ಲಿ ಚೆಗುವಾರ ಮತ್ತು ಕ್ಯಾಸ್ಟ್ರೊ ಒಂದಾಗಿ ಹಲವು ಹೋರಾಟಗಾರರೊಂದಿಗೆ ಜನರಲ್ ಬಟಿಸ್ಟಾ ನ ಸರ್ಕಾರವನ್ನು ಕಿತ್ತೊಗೆಯಲು ಕ್ಯೂಬಾಕ್ಕೆ ಬಂದು ಸಿಯೆರಾ ಮತ್ತು ಮೈ ಸ್ಟ್ರಾ ಪರ್ವತಗಳಲ್ಲಿ ಅಡಗಿಕೊಳ್ಳುತ್ತಾರೆ.

ಇದರ ಅರಿವಾಗಿ ಎಚ್ಚೆತ್ತ ಬಟಿಸ್ಟಾ ಸರ್ಕಾರ ಹೆಚೆಚ್ಚು ಸೈನಿಕ ಪಡೆಗಳನ್ನು ಸಜ್ಜುಗೊಳಿಸಿ ಚೆಗುವಾರ ಮತ್ತು ಕ್ಯಾಸ್ಟ್ರೋ ನೇತೃತ್ವದ ಕ್ರಾಂತಿಕಾರಿಗಳನ್ನು ಸದೆಬಡಿಯಲು 10 ಸಾವಿರ ಸೈನಿಕ ಪಡೆಗಳನ್ನು ನಿಯೋಜಿಸುತ್ತಾನೆ ಕ್ರಾಂತಿಕಾರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲೇಂದೆ ಸರ್ಕಾರಿ ಸೈನಿಕರು ಸಾಮಾನ್ಯ ಜನರನ್ನು ವಿಚಾರಣೆಗೆಂದೇ ಎಳೆದೊಯ್ಯುತ್ತಿದ್ದರು. ಜೊತೆಗೆ ಅಮಾಯಕರಿಗೆ ಚಿತ್ರಹಿಂಸೆ ನೀಡುತ್ತಿದ್ದರು. ಮಕ್ಕಳನ್ನೂ ಒಳಗೊಂಡಂತೆ ಶಂಕಿತರನ್ನು ಸಾರ್ವಜನಿಕವಾಗಿ ಕೊಲೆಗೈದು ಅವರ ಶವಗಳನ್ನು ಬೀದಿಗಳಲ್ಲಿ ಸಾರ್ವಜನಿಕವಾಗಿ ನೇತು ಹಾಕುತ್ತಿದ್ದರು.

ಅಂದರೆ ಸಾಮಾನ್ಯ ಜನರು ಕ್ರಾಂತಿಕಾರಿಗಳ ಜೊತೆ ಸೇರದಂತೆ ಎಚ್ಚರಿಕೆ ನೀಡುವುದು ಮತ್ತು ಭಯ ಹುಟ್ಟಿಸುವುದು ಇದರ ಉದ್ದೇಶವಾಗಿತ್ತು. ಸರ್ವಾಧಿಕಾರಿ ಬಟಿಸ್ಟಾನ ಈ ವರ್ತನೆಗಳಿಂದ ಗೆರಿಲ್ಲಾ ಹೋರಾಟಗಾರರಿಗೆ ಬೆಂಬಲ ಇನ್ನಷ್ಟು ಹೆಚ್ಚಾಗುತ್ತಲೇ ಹೋಯಿತು. ಉದಾಹರಣೆ ವಕೀಲರು, ವಾಸ್ತುಶಿಲ್ಪಿಗಳು, ವೈದ್ಯರು, ಆಕೌಟೆಂಟ್‍ಗಳು ಸಾಮಾಜಿಕಕರ್ತರು ಮುಂತಾದ ಸುಮಾರು 45 ಸಂಘಟನೆಗಳು ಜುಲೈ 26ರ ಚಳುವಳಿಗೆ ಬೆಂಬಲ ಘೋಷಿಸಿದವು. ಅಮೇರಿಕಾ ಸರ್ವಾಧಿಕಾರಿ ಬಟಿಸ್ಟಾಗೆ, ವಿಮಾನ, ಹಡಗು, ಟ್ಯಾಂಕ್ ಮತ್ತಿತರ ಶಸ್ತ್ರಾಸ್ತ್ರಗಳನ್ನು ಒದಗಿಸಿತು.

‘ನಾಪಾಂಬಾಂಬಿ’ನಂತಹ ವಿನಾಶಕಾರಿ ಅಸ್ತ್ರಗಳು ಇದ್ದಾಗಲೂ ಬಟಿಸ್ಟಾನಿಂದ ಗೆರಿಲ್ಲಾ ಹೋರಾಟಗಾರರನ್ನು ಸೋಲಿಸಲು ಸಾಧ್ಯವಾಗಲಿಲ್ಲ. 1958 ಮಾರ್ಚ್ ಚುನಾವಣೆಗಳನ್ನು ಸರ್ವಾಧಿಕಾರಿ ಬಟಿಸ್ಟಾ ವಿರುದ್ಧ ಕ್ಯೂಬಾ ಜನತೆ ಬಹಿಷ್ಕರಿಸಿತು. ರಾಜಧಾನಿ ಹವಾನದಲ್ಲಿ 75% ಚುನಾವಣಾ ಬಹಿಷ್ಕಾರ ಇದ್ದರೆ ಸ್ಯಾಂಟಿಯಾಗೋ ನಗರದಲ್ಲಿ ಶೇ 98% ರಷ್ಟು ಬಹಿಷ್ಕಾರಗಳು ನಡೆದವು. ಇದೇ ಸಂದರ್ಭದಲ್ಲಿ ಕ್ರಾಂತಿಕಾರಿಗಳು ಬಟಿಷ್ಟಾನನನ್ನು ನೇರವಾಗಿ ಸೋಲಿಸಲು ಮುಖ್ಯ ನಗರಗಳಿಗೆ ಬಂದರು.

ಆದರೆ ಸರ್ವಾಧಿಕಾರಿ ಬಟಿಷ್ಟಾ ಅಮೆರಿಕಾದೊಂದಿಗೆ ಸಮಾಲೋಚಿಸಿ ದೇಶಬಿಟ್ಟು ಪಲಾಯನ ಮಾಡಿದ. 1958 ಡಿಸೆಂಬರ್ 31ರಂದು ಬಟಿಸ್ಟಾ ದುರಾಡಳಿತವನ್ನು ಪತನ ಮಾಡಲಾಯಿತು. 1959ರ ಜನವರಿಯಲ್ಲಿ ರಾಜಧಾನಿ ಹವಾನ ನಗರವನ್ನು ಪ್ರವೇಶಿಸಿ ಅಧಿಕಾರವನ್ನು ವಶಕ್ಕೆ ತೆಗೆದುಕೊಂಡ ಮೊಟ್ಟ ಮೊದಲ ಬಂಡಾಯಗಾರ ಪಿಡಲ್ ಕ್ಯಾಸ್ಟ್ರೋ ಜೊತೆ ಚೆಗುವಾರ ಕೂಡ ಇದ್ದರು. ಚೆಗುವಾರ ಮತ್ತು ಕ್ಯಾಸ್ಟ್ರೋ ಕ್ಯೂಬಾದ ಹೊಸ ನಾಯಕರಾದರು.

ಸರ್ಕಾರದ ನೇತೃತ್ವವನ್ನು ಕ್ಯಾಸ್ಟ್ರೋ ವಹಿಸಿಕೊಂಡರು. ಮುಂದೆ ಪಿಡಲ್ ಕ್ಯಾಸ್ಟ್ರೊ ಸರ್ಕಾರದಲ್ಲಿ ಚೆಗುವಾರ ಕೃಷಿ ಮಂತ್ರಿಯಾಗಿ ಕ್ರಾಂತಿಕಾರಿ ಸುಧಾರಣೆಗಳನ್ನು ತಂದರು. ಭೂಸುಧಾರಣೆಯೊಂದಿಗೆ ಚೆಗುವಾರ ಕೇಂದ್ರೀಕರಿಸಿದ ಮತ್ತೊಂದು ಪ್ರಧಾನ ಕ್ಷೇತ್ರವೆಂದರೆ ‘ಶಿಕ್ಷಣಕ್ಷೇತ್ರ’ ಅವರು ರಾಷ್ಟ್ರೀಯ ಸಾಕ್ಷರತೆಗಾಗಿ ಹೆಚ್ಚು ಹೊತ್ತುಕೊಟ್ಟರು. ಅವರ ಒತ್ತಾಸೆಯಂತೆ ಕ್ಯೂಬಾ ಸಕಾರವೂ 1961ನೇ ವರ್ಷವನ್ನು ಶಿಕ್ಷಣ ವರ್ಷವೆಂದು ಘೋಷಿಸಿತು.

ಇದರ ಸಲುವಾಗಿ ಹಳ್ಳಿಗಾಡುಗಳಲ್ಲಿ ಬಹುತೇಕ ಅಕ್ಷರಸ್ಥರಿಗೆ ಓದುಬರಹ ಕಲಿಸಲು ಸಾಕ್ಷರತ ಆಂದೋಲವನ್ನು ಕೈಗೊಳ್ಳಲಾಯಿತು. ಈ ಆಂದೋಲನ ಮುಗಿಯುವ ವೇಳೆಗೆ 7 ಲಕ್ಷಕ್ಕೂ ಹೆಚ್ಚು ಮಂದಿಗೆ ಓದು ಬರಹ ಕಲಿಸಲಾಯಿತು. ಇಂತಹ ಕ್ರಾಂತಿಕಾರ ಕೆಲಸದಿಂದ ದೇಶದ ಸಾಕ್ಷರತೆ ಶೇ 96 ಕ್ಕೆ ಏರಿಕೆಯಾಯಿತು. ಆನಂತರ ಅವರು 1965ರಲ್ಲಿ ಕ್ಯೂಬಾವನ್ನು ಬಿಟ್ಟು ಹೊರಟು ತೃತೀಯ ಜಗತ್ತಿನ ಕ್ರಾಂತಿಗಳಿಗೆ ಬೆಂಬಲವಾಗಿ ಅವರು ತನ್ನ ಸುತ್ತಾಟವನ್ನು ಮುಂದುವರಿಸಿದರು. ಅದರ ಭಾಗವಾಗಿಯೇ ಅವರು ಬೊಲಿವಿಯದಲ್ಲಿ ಗೆರಿಲ್ಲಾ ಯೋಧರನ್ನು ಸಂಘಟಿಸಲು ಯತ್ನಿಸಿದರು.

ಆದರೆ ಬೊವಿಲಿಯಾದಲ್ಲಿ ಚೆಗುವಾರಗೆ ಸಾಮಾನ್ಯ ಜನರ ನೆರವು ಸಿಗಲಿಲ್ಲಾ ಕ್ರಾಂತಿಕಾರಿಗಳ ಜೊತೆ ಸೇರಲು ಸಾಮಾನ್ಯಜನ ಎದುರುತ್ತಿದ್ದರು. ಆದರೂ ಎದೆಗುಂದದೆ ಚೆಗುವಾರ ತನ್ನ ಹೋರಾಟವನ್ನು ಮುಂದುವರಿಸಿದರು. ಆದರೆ ಅಮೆರಿಕಾದ CIA ನೆರವಿನಿಂದ ಬೊಲಿವಿಯಾ ಪಡೆಗಳು ಗೆರಿಲ್ಲಾ ಹೋರಾಟಗಾರರನ್ನು ಪತ್ತೆಹಚ್ಚಿ ಹಲವು ಗೆರಿಲ್ಲಾ ಯೋಧರನ್ನು ಕೊಂದು ಚೆಗುವಾರನನ್ನು 1967 ಅಕ್ಟೋಬರ್ 8ರಂದು ಸೆರೆಹಿಡಿದರು.

ನಂತರ ಹಿಗುಎರಾ ಎಂಬ ಗ್ರಾಮದ ಶಾಲೆಯಲ್ಲಿ ಕೂಡಿಹಾಕಿ ಮಾರನೆ ದಿನ ಅಕ್ಟೋಬರ್ 9 ರಂದು ಮಧ್ಯಾಹ್ನ 1.30ರ ಸುಮಾರಿಗೆ ಅಮೆರಿಕಾದ CIA ಅಧಿಕಾರಿಗಳ ಸಮ್ಮುಖದಲ್ಲಿ ಸಿಐಎ ರೇಂಜರ್ಗಳು ತೀರ ಸಮೀಪದಿಂದ ಗುಂಡಿಟ್ಟು ಚೆಗುವಾರನನ್ನು ಹತ್ಯೆಗೈಯುತ್ತಾರೆ. ನಂತರ ಅವನ ಮುಖವನ್ನು ಪಡಿಯಚ್ಚು ತೆಗೆದು ಅವನ ದೇಹವನ್ನು ಹತ್ತಿರದಿಂದ ಫೊಟೋ ತೆಗೆಯಲಾಯಿತು. ಮತ್ತು ಅವನ ಕೈಗಳನ್ನು ಮುಂಗೈಬಳಿ ಕತ್ತರಿಸಿ ಅವನ್ನು ಆಲ್ಕೊಹಾಲಿನಲ್ಲಿ ರಕ್ಷಿಸಿಟ್ಟರು. ಕಾರಣ ನಾವು ಕೊಂದ ವ್ಯಕ್ತಿ ಚೆಗೆವಾರ ಎಂಬುದರ ಋಜುವಾತುವಿಗಾಗಿ ಅವರ ಹಾಗೆ ಮಾಡಿದರು.

ಚೆ ಗುವೆರಾ ಸತ್ತ ಸುದ್ದಿ ತಿಳಿದು ಜಗತ್ತಿನಾದ್ಯಂತ ಅವನ ಸಂಗಾತಿಗಳು ಶೋಕತಪ್ತರಾದರು. ಈಗ ಚೆ ಕೈಗಳನ್ನು ಕ್ಯೂಬಾ ರಕ್ಷಿಸಿಟ್ಟಿದೆ. ಮತ್ತು ಇವು ವಿಮೋಚನೆಗಾಗಿ ಹೋರಾಟದಲ್ಲಿ ಅಸ್ತ್ರಗಳನ್ನು ಹಿಡಿದ ಕೈಗಳೂ, ತಮ್ಮ ಗಮನಾರ್ಹ ಚಿಂತನೆಗಳನ್ನು ಬರೆದು ಹಂಚಿದ ಕೈಗಳು, ಕಬ್ಬಿನ ಪ್ಲಾಂಟೇಷನ್‍ಗಳಲ್ಲಿ, ಬಂದರುಕಟ್ಟೆಗಳ ಮುಂತಾದ ನಿರ್ಮಾಣದ ಸ್ಥಳಗಳಲ್ಲಿ ಕೆಲಸ ಮಾಡಲು ಬಳಸಿದ ಕೈಗಳು ಎಂದು ಕ್ಯಾಸ್ಟ್ರೊ ಉದ್ಘರಿಸುತ್ತಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಅಮೇರಿಕಾದಂತ ದುಷ್ಟಶಕ್ತಿಗಳು ಚೆ ನ ದೇಹವನ್ನು ಮಾತ್ರ ಹತ್ಯೆ ಮಾಡಿರಬಹುದು.

ಆದರೆ ಚೆಗುವಾರ ಹಂಚಿದ ಕ್ರಾಂತಿಕಾರಿ ಆಲೋಚನೆಗಳನ್ನು ನಿಯಂತ್ರಿಸಲು ಅಥವಾ ಹತ್ಯೆ ಮಾಡಲು ಸಾಧ್ಯವಿಲ್ಲಾ ! ಚೆಗೆವಾರ ಶೋಷಿತ ಜನತೆಗೆ ತಮ್ಮ ಬದುಕನ್ನು ಅರ್ಪಿಸಿಕೊಂಡವರು. ಆಗಾಗಿ ಅವಕಾಶವಂಚಿತ ಸಮುದಾಯಗಳಿಗೆ ಚೆಗುವಾರ ಎಂದೆಂದಿಗೂ ಸ್ಫೂರ್ತಿಯಾಗಿರುತ್ತಾರೆ ಅನ್ನುವುದರಲ್ಲಿ ಯಾವ ಅನುಮಾವೂ ಇಲ್ಲ.

ಐರಿಶ್ ಬಂಡಾಯಗಾರರ ರಕ್ತ ನನ್ನ ಮಗನ ಧಮನಿಗಳಲ್ಲಿ ಹರಿಯುತ್ತಿತ್ತು ಎಂಬುದನ್ನು ನಾವು ಮೊಟ್ಟ ಮೊದಲು ಗಮನಿಸೇಕಾದ ವಿಚಾರ’ ಎಂದು ಚೆಗುವಾರನ ಮರಣದ ನಂತರ ಅವರ ತಂದೆ ಪ್ರತಿಕ್ರಿಯಿಸಿದ ಹಾಗೆ, ಚೆ… ಇಲ್ಲವಾಗಿ ಹಲವು ವರ್ಷಗಳು ಕಳೆದಿದ್ದರೂ ಅವನು ತನ್ನ ವಿಚಾರ, ಆಲೋಚನೆಗಳ, ಮಾನವೀಯವಾದ ವ್ಯಕ್ತಿತ್ವಗಳ ಮೂಲಕ ದಬ್ಬಾಳಿಕೆ, ಶೋಷಣೆ ಅನ್ಯಾಯಗಳ ವಿರುದ್ಧಾ ಇಂದಿಗೂ ಸಿಡಿದೇಳುವ ಕ್ರಾಂತಿಯ ಕಿಡಿಯಾಗಿ ತನ್ನ ನಂತರದ ತಲೆಮಾರಿಗೆ ಸ್ಫೂರ್ತಿಯ ಚಿಲುಮೆಯಾಗಿ ಸದಾ ಜೊತೆಯಾಗುತ್ತಲೇ ಇರುತ್ತಾನೆ.

ನಮ್ಮ ನಡುವೆ ಇರುವ ವಿದ್ಯಾವಂತ ಬುದ್ಧಿವಂತ ರೆನಿಸಿಕೊಂಡವರು, ನಾವು ಶ್ರೇಷ್ಠ ಉಳಿದವರು ಕನಿಷ್ಠವೆಂದು ಜಾತಿ ಧರ್ಮ ದೇವರುಗಳ ಹೆಸರಿನಲ್ಲಿ ಭಯ ಹುಟ್ಟಿಸಿ ಶೋಷಿತ ಸಮುದಾಯಗಳ ಮೇಲೆ ದೌರ್ಜನ್ಯವೆಸಗುತಿದ್ದರು ಇಲ್ಲಿನ ಸರ್ಕಾರಗಳು ಮತ್ತು ಜನಸಾಮಾನ್ಯರು ಅದರ ವಿರುದ್ಧ ಸಿಡಿದೇಳುವುದಿರಲಿ, ಕೊನೆ ಪಕ್ಷ ವಿರೋಧ ವ್ಯಕ್ತ ಪಡಿಸದೆ ಜಾಣ ಕುರುಡರಂತೆ ಮೌನವಹಿಸುತ್ತಿರುವುದು ದುರಂತವೇ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮೇಘನಾ.ಕೆ ಅವರಿಗೆ ಪಿಎಚ್.ಡಿ ಪದವಿ

Published

on

ಸುದ್ದಿದಿನ, ಶಿವಮೊಗ್ಗ : ಸಂಶೋಧನಾ ವಿದ್ಯಾರ್ಥಿನಿ ಮೇಘನಾ. ಕೆ ಅವರು‌ ಕುವೆಂಪು ವಿಶ್ವವಿದ್ಯಾಲಯದ,ಕನ್ನಡ ಭಾರತಿ ವಿಭಾಗಕ್ಕೆ ಸಲ್ಲಿಸಿದ “ಯಶವಂತ ಚಿತ್ತಾಲರ ಕಥನಗಳಲ್ಲಿ ಮಾನವೀಯ ಸಂಬಂಧಗಳು” ಎಂಬ ಮಹಾ ಪ್ರಬಂಧಕ್ಕೆ ಪಿಎಚ್.ಡಿ ಪದವಿ ದೊರೆತಿದೆ. ಇವರು ಪ್ರೊ. ಶಿವಾನಂದ ಕೆಳಗಿನಮನಿ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದರು.

ಮೇಘನ.ಕೆ ಅವರು ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೂಕಿನ ಉಪ್ಪಾರಹಳ್ಳಿಯವರಾಗಿದ್ದು, ತಂದೆ, ಕೃಷ್ಣಪ್ಪ, ತಾಯಿ ಶಿವಲಿಂಗಮ್ಮ ಅವರ ಪುತ್ರಿಯಾಗಿರುತ್ತಾರೆ.

ಪ್ರಸ್ತುತ ಚಿಕ್ಕಬಳ್ಳಾಪುರದ ಶ್ರೀ ಸತ್ಯ ಸಾಯಿ ಯೂನಿವರ್ಸಿಟಿ ಫಾರ್ ಹೂಮನ್ ಎಕ್ಸಲೆನ್ಸ್, (ಪದವಿ ಮತ್ತು ಸ್ನಾತಕೋತ್ತರ ಪದವಿ) ನಲ್ಲಿ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಮೇಘನ.ಕೆ ಕಾರ್ಯನಿರ್ವಹಿಸುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮ್ಯಾಸ ನಾಯಕರ ಹಕ್ಕುಗಳ ಹರಣ : ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ನಡೆಗೆ ಮ್ಯಾಸ ಬೇಡ ಸಮಿತಿ ಖಂಡನೆ

Published

on

ಸುದ್ದಿದಿನ, ಚಿತ್ರದುರ್ಗ : ಚಳ್ಳಕೆರೆ ಶಾಸಕ ಟಿ ರಘುಮೂರ್ತಿಯವರು ತಮ್ಮ ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಮ್ಯಾಸ ನಾಯಕ/ಮ್ಯಾಸ ಬೇಡ ಬುಡಕಟ್ಟು ಜನರ ಹಕ್ಕುಗಳನ್ನು ಹರಣ ಮಾಡಿ ಶೋಷಣೆ ಮಾಡುವ ಕ್ರಮವನ್ನು ವಿರೋಧಿಸಿ ಹಾಗೂ ಪರಿಶಿಷ್ಟ ಪಂಗಡದ ಕ್ಷೇತ್ರದಿಂದ ಆಯ್ಕೆಯಾಗಿ ಬುಡಕಟ್ಟು ಜನರ ಹಿತಾಸಕ್ತಿಯನ್ನು ರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು ಈ ಕೂಡಲೇ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು ಎಂದು ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯ ಡಾ.ಕೆ.ಎ.ಓಬಳೇಶ್ ಆಗ್ರಹಿಸಿದರು.

ಶುಕ್ರವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜನಹಳ್ಳಿ ಪ್ರಸನ್ನಾನಂದ ಸ್ವಾಮಿ ಮತ್ತು ಬಿ.ಶ್ರೀರಾಮುಲು ಗುಂಪು ಹೇಗಾದರೂ ಮಾಡಿ ತಳವಾರ ಪರಿವಾರ ಎಸ್‌ ಟಿ ಸೇರ್ಪಡೆ ಮಾಡಿಸಲು ಪ್ರಯತ್ನಪಟ್ಟು 7.5 ಮೀಸಲಾತಿಯ ನಾಟಕವನ್ನು ಪ್ರಾರಂಭ ಮಾಡಿದರು ಈ ಪಾದಯಾತ್ರೆಯಲ್ಲಿ ರಘುಮೂರ್ತಿಯವರು ಸಹ ಹೆಜ್ಜೆಯನ್ನು ಹಾಕಿದರು.

ಈ ಪಾದಯಾತ್ರೆಯ ಜನರ ಗುಂಪುನ್ನು ತೋರಿಸಿ ಕೇಂದ್ರ ಸರ್ಕಾರಕ್ಕೆ ಬ್ಲಾಕ್‌ ಮೇಲ್‌ ಮಾಡಿ ಎಸ್‌ ಟಿ ಸೇರ್ಪಡೆ ಮಾಡಿದರು . ಆದರೆ 7.5 ಮೀಸಲಾತಿ ಹೋರಾಟ ಎಂದು ಹೇಳಿ ಜನರನ್ನು ದಾರಿತಪ್ಪಿಸಿ ರಘುಮೂರ್ತಿಯವರು ಪರಿವಾರ ತಳವಾರ ಜಾತಿಯನ್ನು ಎಸ್‌ ಟಿ ಸೇರ್ಪಡೆ ಮಾಡಿಸಲು ದೆಹಲಿಗೆ ಹೋಗಿ ದ್ವನಿ ಎತ್ತಿದರು ಆದರೆ ಮ್ಯಾಸ ನಾಯಕ ಎಂದು ಜಾತಿ ಪ್ರಮಾಣ ಪತ್ರವನ್ನು ಯಾರು ಪಡೆಯದಿದ್ದರು ಸಹ ಅದು ಒಬಿಸಿ ಪಟ್ಟಿಯಲ್ಲಿ ಇದೆ ಅದನ್ನು ತೆಗದು ಎಸ್ ಟಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿಯತನ ವಿಧಾನ ಸಭೆಯಲ್ಲಿ ದ್ವನಿಯನ್ನು ಎತ್ತಿಲ್ಲ.

ಮಾನ್ಯ ರಘುಮೂರ್ತಿಯವರು ತಳವಾರ ಪರಿವಾರದವರ ಹಕ್ಕುಗಳ ಪರ ಹೋರಾಟ ಮಾಡುತ್ತಿದ್ದಾರೆ ಮ್ಯಾಸ ನಾಯಕ ಬುಡಕಟ್ಟು ಜನಾಂಗದ ಹಕ್ಕುಗಳ ಪರ ಹೋರಾಟ ಮಾಡುತ್ತಿಲ್ಲ ಎಂದು ಆರೋಪಿಸಿದರು.

ನಾಯಕ ವಾಲ್ಮೀಕಿ ಸಮಾಜದ ಮುಖಂಡರು ಎಂದು ಹೇಳಿಕೊಂಡ ಮುಖಂಡರು ಹಾಗೂ ಜನ ಪ್ರತಿನಿಧಿಗಳು ತಮ್ಮ ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಜಾತ್ರೆಗಳನ್ನು ಸೃಷ್ಟಿಸಿಕೊಂಡು ಮೂಲ ಬುಡಕಟ್ಟು ಸಮುದಾಯಗಳ ಸಂಸ್ಕೃತಿಯನ್ನು ನಾಶ ಮಾಡುವ ಹುನ್ನಾರವನ್ನು ಹೊಂದಿದ್ದಾರೆ.

ಪರಿಶಿಷ್ಟ ಪಂಗಡದವರ ಅನುದಾನವನ್ನು ದುರ್ಭಳಕೆ ಮಾಡಿಕೊಂಡಿರುವ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ವಿರುದ್ದ ಸಾರ್ವಜನಿಕರು ದಾಖಲೆಗಳ ಸಮೇತ ಸರ್ಕಾರಕ್ಕೆ ದೂರನ್ನು ಸಹ ನೀಡಿರುತ್ತಾರೆ. ಸರ್ಕಾರವು ಬುಡಕಟ್ಟು ಜನರ ಅಭಿವೃದ್ದಿಗೆ ಮೀಸಲಿಟ್ಟ ಹಣವನ್ನು ವಾಲ್ಮೀಕಿ ಜಾತ್ರೆಗೆ ಬಿಡುಗಡೆ ಮಾಡಿರುವುದು ಸಂವಿಧಾನ ವಿರೋಧಿಯಾಗಿದೆ.

ಈ ವರ್ಷದ ಜಾತ್ರೆಗೆ ಟಿ ರಘುಮೂರ್ತಿಯವರು ಜಾತ್ರೆ ಸಮಿತಿ ಅಧ್ಯಕ್ಷರಾಗಿದ್ದಾರೆ. ಜಾತ್ರೆಯಿಂದ ಬುಡಕಟ್ಟು ಜನರ ಅಭಿವೃದ್ದಿಗೆ ಮೀಸಲಿಟ್ಟ ಹಣ ದುರ್ಭಳಕೆಯಾಗುತ್ತದೆ. ಜಾತ್ರೆ ಮಾಡುವವರಿಗೆ ಜನರ ಸಮಸ್ಯೆಗಳು ಹೇಗೆ ಅರ್ಥವಾಗುತ್ತವೆ ಜಾತ್ರೆ ಮಾಡುವ ಜನ ಪ್ರತಿನಿಧಿಗಳು ಜನರ ಸಮಸ್ಯೆಗಳನ್ನು ಅರಿತು ಕೆಲಸ ಮಾಡಲು ಸಾಧ್ಯವಿಲ್ಲ. ಈ ಕೂಡಲೇ ಶಾಸಕರಾದ ಟಿ ರಘುಮೂರ್ತಿಯವರು ಕರ್ನಾಟಕದ ಬುಡಕಟ್ಟು ಜನರ ಕ್ಷೇಮೆ ಕೇಳಿ ಶಾಸಕ ಸ್ಥಾನಕ್ಕೆ ರಾಜಿನಾಮೆಯನ್ನು ಕೊಟ್ಟು ಮನೆಗೆ ಹೋಗಬೇಕೆಂದು ಆಗ್ರಹಿಸುತ್ತೇವೆ ಎಂದರು.

ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿಯವರು ಮಠದ ಆಸ್ತಿಯನ್ನು ಹಾಗೂ ಸರ್ಕಾರದ ಅನುದಾನವನ್ನು ಬಳಸಿಕೊಂಡು ವೈಯಕ್ತಿವಾಗಿ ತನ್ನ ಹೆಸರಿನಲ್ಲಿ ಆಸ್ತಿ ಖರೀದಿ ಮಾಡಿ ಮಠದ ಭಕ್ತರಿಗೆ ಮೋಸ ಎಸಗಿರುತ್ತಾರೆ. ಈ ಸ್ವಾಮಿಯು ನೆಡೆಸುವ ಅವ್ಯಾವಹಾರದಲ್ಲಿ ಶಾಸಕ ಟಿ ರಘುಮೂರ್ತಿಯವರು ಭಾಗಿಯಾಗಿ ತನ್ನ ಕ್ಷೇತ್ರದ ಜನತೆಯ ಮತ್ತು ಕರ್ನಾಟಕದ ಮುಗ್ದ ಬುಡಕಟ್ಟು ಜನರ ನಂಬಿಕೆಗೆ ಮೋಸ ಮಾಡಲು ಮುಂದಾಗಿದ್ದಾರೆ.

ವಾಲ್ಮೀಕಿ ಸ್ವಾಮಿಜಿ ಹಾಗೂ ಸ್ವಾಮಿಜಿಯ ಕಾರ್ಯಗಳಿಗೆ ಬೆಂಬಲವಾಗಿ ನಿಂತಿರುವ ಶಾಸಕರಾದ ಟಿ ರಘುಮೂರ್ತಿಯವರ ಕುತಂತ್ರವನ್ನು ಕ್ಷೇತ್ರ ಜನತೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯು ಜಾಗೃತಿ ಅಭಿಯಾನವನ್ನು ಆಯೋಜಿಸುವ ಉದ್ದೇಶವನ್ನು ಹೊಂದಿದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಮಿತಿಯ ಅದ್ಯಕ್ಷ ಡಾ.ಗೆರೆಗಲ್‌ ಪಾಪಯ್, ದೊಡ್ಡಮನಿ‌ ಪ್ರಸಾದ್, ಓಬಣ್ಣ,ಬೋರಾ ನಾಯಕ, ಬೋಸಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಸವಕಂಪು ಪಸರಿಸಿದ ವಿ.ಸಿದ್ಧರಾಮಣ್ಣ ಶರಣರು

Published

on

ಫೋಟೋ : ವಿ. ಸಿದ್ದರಾಮಣ್ಣ

 

  • ಡಾ.ಗೀತಾ ಬಸವರಾಜು, ಉಪನ್ಯಾಸಕರು,
    ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ರ್ನಾಟಕದ ಇತಿಹಾಸದ ಪುಟಗಳಲ್ಲಿ 12ನೇ ಶತಮಾನ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿರುವಂತಹದ್ದು, ಸಮಾಜದಲ್ಲಿನ ಅಂಧಕಾರವನ್ನು ಕಿತ್ತೆಸೆಯಲು ಜನ್ಮತಾಳಿದ ಶರಣರು ಬಹು ದೊಡ್ಡದೊಂದು ಕ್ರಾಂತಿಯನ್ನು ಮಾಡಿದರು.

ಈ ಕ್ರಾಂತಿ ಕೇವಲ ಕರ್ನಾಟಕಕ್ಕೆ ಅಷ್ಟೆ ಮೀಸಲಾಗದೆ ಇಡೀ ವಿಶ್ವಕ್ಕೆ ಕಣ್ಣುಕೊಟ್ಟಿತು ಎಂದರೆ, ಅತಿಶಯೋಕ್ತಿಯಾಗಲಾರದು. ವಿಶ್ವಗುರು ಬಸವಣ್ಣನವರು ವಿಶ್ವಕಲ್ಯಾಣದ ಮಹಾಸಾಧನೆಯನ್ನು ನಿರ್ಮಿಸಿ ಇವನಾರವ ಇವನಾರವ ಎಂದೆನಿಸದೆ ಸಕಲರನ್ನು ಒಗ್ಗೂಡಿಸಿದ ವಿಭೂತಿ ಪುರುಷರು. ಸಕಲ ಜೀವರಾಶಿಗೆ ಒಳಿತಾಗುವ ಅನುಭವ ಮಂಟಪವನ್ನು ಕಟ್ಟಿ ಸಮಾಜದಲ್ಲಿದ್ದ ಜಾಡ್ಯವನ್ನು ದೂರಮಾಡಿ ಸಮಸಮಾಜವನ್ನು ನಿರ್ಮಿಸಿದರು.

900 ವರ್ಷಗಳ ಹಿಂದೆ ನಡೆದ ಈ ಕ್ರಾಂತಿಯ ಪರಿಣಾಮ 21ನೇ ಶತಮಾನದಲ್ಲಿಯೂ ಅಚ್ಚ ಹಸಿರಾಗಿ ಉಳಿದಿರುವುದು ವಿಶೇಷ. ಬಸವತತ್ವವನ್ನೇ ಹಾಸಿ ಬಸವತತ್ವವನ್ನೇ ಹೊದ್ದು ಬಸವತತ್ವವನ್ನೇ ಉಸಿರಾಗಿಸಿಕೊಂಡು, ಬಸವತತ್ವವನ್ನು ಮಂತ್ರವಾಗಿಸಿಕೊಂಡು ನಡೆದಾಡುವ ವಚನ ಭಂಡಾರವಾಗಿ ಕಂಗೊಳಿಸುತ್ತಿರುವವರು ಪೂಜ್ಯರಾದ ವಿ.ಸಿದ್ದರಾಮಣ್ಣ ಶರಣರು.

ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ 1922ಜನವರಿ 14 ರಂದು ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿಯಂದು ಜನಿಸಿದ ಶಿವರಾಮಣ್ಣನವರು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ತಂದೆಯವರಿಂದ ಕರ್ನಾಟಕ ಸಂಗೀತದ ಆಸಕ್ತಿ ಮೂಡಿಸಿಕೊಂಡರು. ಬಾಲ್ಯದಿಂದಲೇ ಉತ್ತಮ ವಿಚಾರಗಳನ್ನು ಒಳಗೊಂಡು ಒಳ್ಳೆಯ ನಡೆ-ನುಡಿಗಳನ್ನು ಅಳವಡಿಸಿಕೊಂಡು ಉತ್ತಮರ ಸಂಗದಲ್ಲಿಯೇ ಬೆಳೆದು ಮೆಟ್ಟಿಲು ಮೆಟ್ಟಿಲಾಗಿ ಮೇಲೇರಿ ಬಂದವರು.

ತಂದೆಯವರಿಂದ ಸಂಗೀತ, ನಾಟಕ ಕಲೆಯನ್ನು ಕಲಿತು ತಮ್ಮ ಪ್ರತಿಭೆಯಿಂದ ನಟರಾಗಿ, ನಾಟಕ ನಿರ್ದೇಶಕರಾಗಿ, ರಚನೆಕಾರರಾಗಿ, ಸಂಗೀತಗಾರರಾಗಿ ಬೆಳೆದು ಬಂದ ಇವರು ಪ್ರವಚನ ಪಿತಾಮಹರೆಂದೇ ಹೆಸರಾದ ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಪ್ರವಚನ ಧಾರೆಗೆ ಆಕರ್ಷಿತರಾಗಿ ಅವರಿಂದ ಇಷ್ಟಲಿಂಗ ದೀಕ್ಷೆ ಪಡೆದು ಬಸವತತ್ವ ಪ್ರಸಾರಕ್ಕೆ ಅಣಿಯಾಗಿ ವಿಶ್ವಕಲ್ಯಾಣದ ಸಿದ್ಧರಾಮಣ್ಣ ಶರಣ ಎಂಬ ನೂತನ ಅಭಿದಾನವನ್ನು ಪಡೆದರು.

ಕೇವಲ ಐದನೇ ತರಗತಿ ಕಲಿತಿರುವ ವಿ.ಸಿದ್ಧರಾಮಣ್ಣನವರು ಬಸವ ಗ್ರಂಥಭಂಡಾರವೇ ಆಗಿದ್ದಾರೆ. ಪದವೀಧರರಾಗಬಹುದು ಆದರೆ ಪ್ರತಿಭಾವಂತರಾಗುವುದು ತುಂಬಾ ಕಷ್ಟ. ಕುರಿತೋದದೆಯಂ ಕಾವ್ಯಪ್ರಯೋಗ ಪರಿಣಿತರ ಸಾಲಿಗೆ ಪೂಜ್ಯ ಶರಣರು ಸೇರುತ್ತಾರೆ. ಸಾವಿರಾರು ವಚನಗಳು ಇವರಿಗೆ ಕಂಠಪಾಠವಾಗಿವೆ.

ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ,
ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ
ವಿಷಯಂಗಳಲ್ಲಿ ಉದಾಸೀನ, ಭಾವದಲ್ಲಿ ದಿಗಂಬರ,
ಜ್ಞಾನದಲ್ಲಿ ಪರಮಾನಂದ ನೆಲೆಗೊಂಡ ಬಳಿಕ
ಸೌರಾಷ್ಟ್ರ ಸೋಮೇಶ್ವರ ಲಿಂಗವು ಬೇರಿಲ್ಲ ಕಾಣಿರೋ

ಎಂಬ ಶರಣ ಆದಯ್ಯನವರ ವಚನದಂತೆ ಪರಿಶುದ್ಧ ಜೀವನವನ್ನು ನಡೆಸುತ್ತಿದ್ದಾರೆ. ಶುಭ್ರ ಶ್ವೇತಧಾರಿಯಾದ ಇವರ ಮುಖದಲ್ಲಿ ಬಸವ ಕಳೆಯಿದೆ. ಬಾಗಿದ ತಲೆ ಮುಗಿದ ಕೈಯ ಗುಣ ಪೂಜ್ಯರದ್ದು, 100ರ ತುಂಬು ಜೀವನದಲ್ಲಿ ಯುವಕರೇ ನಾಚುವಂತೆ ಕಂಚಿನ ಕಂಠದಲ್ಲಿ ವಚನ ಗಾಯನ ಮತ್ತು ವಚನ ವಿಶ್ಲೇಷಣೆಯನ್ನು ಪುಂಖಾನುಪುಂಖವಾಗಿ ಹೇಳುವ ಶೈಲಿ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ವಿಭೂತಿ ಪುರುಷರ ಮಧ್ಯೆ ದಿವ್ಯಜ್ಯೋತಿಯಂತೆ ಕಂಗೊಳಿಸುತ್ತಿರುವ ಪೂಜ್ಯರು ಬಸವ ಪ್ರಸಾದ ನಿಲಯದ ವಿದ್ಯಾರ್ಥಿನಿಯರ ಅಚ್ಚುಮೆಚ್ಚಿನ ತಾತನಾಗಿದ್ದಾರೆ. ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವ ಹೊಂದಿರುವ ಇವರು ದೈನಂದಿನ ಕಾರ್ಯಕ್ರಮಗಳನ್ನು ಚಾಚೂ ತಪ್ಪದೇ ನಡೆಸಿಕೊಂಡು ಬಂದಿದ್ದಾರೆ. ಸಮಯಕ್ಕೆ ಸರಿಯಾಗಿ ವಚನ ಪ್ರಾರ್ಥನೆ, ಶಿವಾನುಭವ ಚಿಂತನೆ, ಬಂದ ಭಕ್ತರಿಗೆ ಬಸವತತ್ವದ ಪರಿಕಲ್ಪನೆಯನ್ನು ವಿವರಿಸಿ ಮನ ಮುಟ್ಟುವಂತೆ ಹೇಳಿ ಅವರ ಹೃದಯವನ್ನು ಪರಿವರ್ತಿಸುವ ಹರಿಕಾರರಿವರು.

ಇವರು ಕೈ ಎತ್ತಿದರೆ ಕಾಯಕ, ಕಾಲಿಟ್ಟರೆ ಪಾವಿತ್ರ್ಯಂ ಸರಳ ಸಜ್ಜನಿಕೆಯ ಜೀವನಕ್ರಮವನ್ನು ಒಳಗೊಂಡು ಶಿವಶರಣರ ಜೀವನವನ್ನು ಆದರ್ಶವಾಗಿರಿಸಿಕೊಂಡು ನಿಂತ ನೀರಾಗಿ ನಿಲ್ಲದೆ ಚರಜಂಗಮರಾಗಿ ಸತ್ಯ ಶರಣರ ಪಥದಲ್ಲಿ ನಡೆ ನುಡಿಗಳನ್ನು ಒಗ್ಗೂಡಿಸಿಕೊಂಡು ಕರ್ನಾಟಕದಲ್ಲಷ್ಟೇ ಅಲ್ಲದೆ ಮಹಾರಾಷ್ಟç, ಆಂಧ್ರಪ್ರದೇಶ, ದೆಹಲಿ ಇಲ್ಲೆಲ್ಲ ಬಸವತತ್ವದ ಜ್ಞಾನಜ್ಯೋತಿಯ ಪ್ರಕಾಶದ ಬೆಳಗನ್ನು ಬಿಂಬಿಸಿದ್ದಾರೆ.

ಶರಣರ ಸಾಹಿತ್ಯ ಸೇವೆ

ಬಾಲ್ಯದಿಂದಲೆ ನಾಟಕ, ಕತೆ, ಕಾದಂಬರಿ, ಚರಿತ್ರೆ, ಕವಿತೆ, ಜಾನಪದ ಪದ್ಯಗಳನ್ನು ಓದುತ್ತಿದ್ದುದರಿಂದ ಅವರಲ್ಲಿ ಒಬ್ಬ ನಟ, ಸಂಗೀತ ಕಲಾವಿದ, ಸಾಹಿತಿ, ಕವಿ ಬೆಳೆದಿದ್ದನು. ಈ ಶರಣರು ಸುಮಾರು 20ಕ್ಕೂ ಹೆಚ್ಚು ನಾಟಕಗಳು, 11 ತಾತ್ವಿಕ ಗ್ರಂಥಗಳು, 2 ಕಾವ್ಯಗಳು, ಹಲವಾರು ಕವನಗಳು, ಹಾಗೂ ಆಧುನಿಕ ವಚನಗಳನ್ನು ಕನ್ನಡ ಸಾಹಿತ್ಯದ ಮಡಿಲಿಗೆ ನೀಡಿದ್ದಾರೆ.

ಅನುಭಾವ ದಾಸೋಹಕ್ಕಾಗಿ
ಅನ್ನದಾಸೋಹ ನಡೆಯಲಿ
ಅನ್ನ ದಾಸೋಹ ಹೊಟ್ಟೆಗಾದರೆ
ಅನುಭಾವ ದಾಸೋಹ ಆತ್ಮಕ್ಕೆ
ಕೇವಲ ಅನ್ನಕ್ಕಾಗಿ ಹಾತೊರೆಯುವುದು ಭವಿಯ ಲಕ್ಷಣ.
ಆತ್ಮದ ಹಸಿವಿಗಾಗಿ ಹಾತೊರೆಯುವುದು ಭಕ್ತನ ಲಕ್ಷಣ ನೋಡಾ ಲೋಕಗುರು ಬಸವ ಪ್ರಭುವೆ.

ಇಂತಹ ಸಾಕಷ್ಟು ಆಧುನಿಕ ವಚನಗಳನ್ನು ರಚಿಸಿದ್ದಾರೆ.

ಪೂಜ್ಯರಿಗೆ ಸಂದ ಪ್ರಶಸ್ತಿಗಳು

‘ಬಯಸಿ ಬಂದುದು ಅಂಗಭೋಗ, ಬಯಸದೆ ಬಂದುದು ಲಿಂಗ ಪ್ರಸಾದ’ ಎಂಬ ಗುರುಬಸವಣ್ಣನವರ ವಚನದಂತೆ ಪೂಜ್ಯರಿಗೆ ಶರಣ ಕಕ್ಕಯ್ಯ ಪ್ರಶಸ್ತಿ, ಬಸವಗುರು ಕಾರುಣ್ಯ ಪ್ರಶಸ್ತಿ, ಚೆನ್ನಬಸವ ಪ್ರಶಸ್ತಿ, ಬಸವತತ್ವ ಶ್ರೀ ಪ್ರಶಸ್ತಿ, ಬಸವಾನುಭಾವಿ ಗೌರವ ಪ್ರಶಸ್ತಿ, ಅನುಭವ ಮಂಟಪ ಪ್ರಶಸ್ತಿ ಗಣಾಚಾರ ಪ್ರಶಸ್ತಿಗಳು ದೊರಕಿವೆ.

ಅಲ್ಲದೆ ಇವರ ಜೀವನ ಸಾಧನೆ ಕುರಿತು ಸುಮಾರು 9 ಪುಸಕ್ತಗಳು, 70ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿರುವುದು. ಇವರ ವ್ಯಕ್ತಿತ್ವಕ್ಕಿಡಿದ ಕೈಗನ್ನಡಿಯಾಗಿದೆ.

ಕಲ್ಯಾಣ ನಾಡಿನ ಶರಣ ಸಮ್ಮೇಳನಗಳಲ್ಲೆಲ್ಲ ಪೂಜ್ಯ ವಿ ಸಿದ್ಧರಾಮಣ್ಣನವರ ರಚಿಸಿರುವ ಷಟ್‌ಸ್ಥಲ ಧ್ವಜಗೀತೆ, ಬಸವಗುರು ಮಂಗಲ ಪದಗಳು ಕೇಳಿ ಬರುತ್ತಿರುವುದು ವಿಶೇಷ. ಶರಣರದ್ದು ವೈಚಾರಿಕ ನಿಲುವು ಪ್ರಾಸಾದಿಕ ಗುಣ. ಅಷ್ಟಾವರಣ, ಪಂಚಾಚಾರಗಳ ತತ್ವ ನಿಷ್ಟರಾದ ಇವರು ಭಕ್ತರಿಗೆ ಶರಣಧರ್ಮದ ನಡವಳಿಕೆಗಳನ್ನು ಆಚಾರ ಸಹಿತ ತಿಳಿಸುತ್ತಾರೆ.

12ನೇ ಶತಮಾನದ ಬಸವೇಶ್ವರರ ತಾತ್ವಿಕಬದ್ಧತೆ ೨೧ನೇ ಶತಮಾನದ ಪೂಜ್ಯ ವಿ. ಸಿದ್ಧರಾಮಣ್ಣನವರ ಮುಖದಲ್ಲಿ ಕಂಗೊಳಿಸುತ್ತಿದೆ. ಅವರ ಮುಗ್ಧ ಮಗುವಿನ ಮಾತು ಮಾತೃಹೃದಯದ ಮಮತೆ ಶತೃಗಳನ್ನು ಮಿತ್ರರನ್ನಾಗಿಸುವ ಶಕ್ತಿಯುಳ್ಳದ್ದು.

ಅರಿವಿನ ವಚನಗಳ ಬೀಜವ ಬಿತ್ತಿ
ಆಚಾರದ ಭಕ್ತಿಜಲವನೆರೆದು
ಸಂಗೀತದ ಸುಳಿಗಾಳಿ ಬೀಸಿ
ಸಮತೆಯ ದವಸಧಾನ್ಯಂಗಳ ಬೆಳೆದು
ಬಸವತತ್ವದ ರಾಶಿಯ ಮಾಡಿ
ಲೋಕಕ್ಕೆ ಪ್ರಸಾದವನೆಡೆ ಮಾಡುತಿಹ
ವಿ.ಸಿದ್ಧರಾಮಣ್ಣಪ್ಪಗಳು ನಿಜರೈತರು ನೋಡಾ
ಎನ್ನಯ್ಯ ಬಚ್ಚಬರಿಯ ಬಸವನಲ್ಲಿ-
ಎಂಬ ಡಾ: ಕಲ್ಯಾಣಮ್ಮ ಲಂಗೋಟಿಯವರ ವಚನವು ಸಿದ್ಧರಾಮಣ್ಣ ಶರಣರ ಜೀವನಾದರ್ಶಗಳನ್ನು ತಿಳಿಸುತ್ತದೆ.

ಇಂತಹ ಪೂಜ್ಯರಿಗೆ ಇಂದು ನೂರು ವರ್ಷದ ಸಂಭ್ರಮ. ದಾವಣಗೆರೆ ಸರಸ್ವತಿ ನಗರದ ಬಸವಬಳಗದ ವತಿಯಿಂದ ಅವರಿಗೆ ಇಂದು ಗೌರವ ಸಮರ್ಪಣೆ ಸಲ್ಲಿಸಲಾಗುತ್ತದೆ.

ಹಣ್ಣು ಮಾಗಿ ಪಕ್ವವಾಗುವಂತೆ ಪೂಜ್ಯಶರಣರು ಜ್ಞಾನದಲ್ಲಿ ಮಾಗಿ ಸಮಾಜಕ್ಕೆ ವಚನದ ಸಿಹಿಯನ್ನು ಹಂಚುವ ಜ್ಞಾನವೃದ್ಧರಾಗಿ, ವಯೋವೃದ್ಧರಾಗಿ ಸಂತೃಪ್ತಿ, ಸತ್ಯನಿಷ್ಠೆ, ಸಮಾನತೆ ,ಸಮಚಿತ್ತತೆ ಕಾಯಕ-ದಾಸೋಹ ಮುಂತಾದವುಗಳನ್ನು ರೂಢಿಸಿಕೊಂಡಿರುವ ಪೂಜ್ಯರ ಬದುಕು ಇಂದಿನ ಯುವ ಸಮೂಹಕ್ಕೆ ದಾರಿದೀಪವಾಗಲಿ.

(ಲೇಖಕರು : ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending