Connect with us

ರಾಜಕೀಯ

“ವಿಶ್ವಗುರು ಕ್ಯೂಬಾ”ದಂತಾಗಬೇಕೇ ನಮ್ಮ ಭಾರತ ? ಜಗತ್ತನ್ನೇ ಕೊರೋನಾದಿಂದ ರಕ್ಷಿಸುತ್ತಿರೋ ಪುಟ್ಟ ಕಮ್ಯೂನಿಷ್ಟ್ ರಾಷ್ಟ್ರ !

Published

on

  • ನವೀನ್ ಸೂರಿಂಜೆ

ಕೊರೋನಾ ನಿಯಂತ್ರಣದಲ್ಲಿ ಭಾರತವೇ ವಿಶ್ವಗುರು ಎಂದ ಪ್ರಧಾನಿ ಮೋದಿ ಅನುಯಾಯಿಗಳು ಹೇಳುತ್ತಿರುವ ಸಂದರ್ಭದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ವಿಶ್ವದಲ್ಲೇ ಹತ್ತನೇ ಸ್ಥಾನವನ್ನು ಭಾರತ ಪಡೆದುಕೊಂಡಿದೆ. ಭಾರತ ವಿಶ್ವಗುರು ಆಗಬೇಕು ಎಂಬುದು ಎಲ್ಲರ ಆಸೆ. ಹಾಗಾಗಬೇಕಾದರೆ ಭಾರತ ಸರ್ಕಾರವನ್ನು ಜನಪರವಾಗಿ ಕೆಲಸ ಮಾಡಿಸಬೇಕೇ ಹೊರತು ನಾವೇ ವಿಶ್ವಗುರು ಎಂಬ ಕಲ್ಪನೆಯಲ್ಲಿ ಇರಕೂಡದು. ಸಧ್ಯದ ಕೊರೋನಾ ಎಮರ್ಜೆನ್ಸಿ ಟೈಮಲ್ಲಿ ಇಡೀ ವಿಶ್ವಕ್ಕೆ ಗುರುವಾಗಿರೋದು ಜಗತ್ತಿನ ಸಣ್ಣ ದೇಶಗಳಲ್ಲಿ ಒಂದಾದ ಕಮ್ಯೂನಿಷ್ಟ್ ರಾಷ್ಟ್ರ ಕ್ಯೂಬಾ.

ಕ್ಯೂಬಾ ಹೇಗೆ ಅರೋಗ್ಯದ ವಿಷಯದಲ್ಲಿ ವಿಶ್ವಗುರು ಎಂಬುದನ್ನು ಡಬ್ಲ್ಯುಎಚ್ಒ ವರದಿ ಹೇಳುತ್ತದೆ. ಅದನ್ನು ಓದಿದ ಬಳಿಕ ನಮ್ಮ ಭಾರತವೂ ಹೀಗೇ ಆಗಬೇಕು ಎಂದು ಬಯಸಿದರೆ ಭಾರತ ವಿಶ್ವಗುರು ಆಗಬೇಕು ಎಂದು ಆಸೆಪಡುವ ನಿಜವಾದ ದೇಶಪ್ರೇಮಿ ಆಗುತ್ತೀರಿ.

ಕ್ಯೂಬನ್ ಸರ್ಕಾರ ಕಳೆದ 40 ವರ್ಷಗಳಿಂದ ಯಾವುದೇ ರೋಗಗಳನ್ನು ತಡೆಗಟ್ಟುವ, ಪ್ರಾಥಮಿಕ ಆರೈಕೆಗೆ ಒತ್ತು ನೀಡುವ ಆರೋಗ್ಯ ಸೂಚ್ಯಂಕಗಳಿಗೆ ಹೆಚ್ಚಿನ ಮನ್ನಣೆ ನೀಡುತ್ತಿದೆ. ಕ್ಯೂಬಾದ ಆರೋಗ್ಯ ಸೂಚಕದ ಪ್ರಕಾರ ಜಗತ್ತಿನಲ್ಲಿಯೇ ಅತೀ ಕಡಿಮೆ ಸಾವಿನ ಪ್ರಮಾಣವನ್ನು ಕ್ಯೂಬಾ ಹೊಂದಿದೆ. ಕ್ಯೂಬಾದ ನಾಗರಿಕರು ಸರಾಸರಿ 77 ವರ್ಷಗಳ ಜೀವಿತಾವಧಿಯನ್ನು ಹೊಂದಿದ್ದು ಇದು ವಿಶ್ವದ ಅತಿ ಹೆಚ್ಚು ಜೀವಿತಾವಧಿಯಾಗಿದೆ. ಕಡಿಮೆ ವಯಸ್ಸಿನವರ ಸಾವಿನ ಪ್ರಮಾಣ ಇಲ್ಲವೆನ್ನುವಷ್ಟು ಕಡಿಮೆ.‌

ಕ್ಯೂಬಾದ ಜನರ ಆರೋಗ್ಯಕ್ಕೆ ಕಾರಣ, ಸಮುದಾಯ ಆಧಾರಿತ ಪಾಲಿಕ್ಲಿನಿಕ್ ವ್ಯವಸ್ಥೆ. ಪಾಲಿಕ್ಲೀನಿಕ್ ವ್ಯವಸ್ಥೆ ಎಂದರೆ 20 ರಿಂದ 40 ಕುಟುಂಬವಿದ್ದರೆ ಅಲ್ಲೊಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮಾದರಿಯ ಪಾಲಿಕ್ಲೀನಿಕ್ ವ್ಯವಸ್ಥೆ ಇರುತ್ತದೆ. ಈ ಕ್ಲೀನಿಕ್ ನಲ್ಲಿ ವೈದ್ಯರು, ದಾದಿಯರ ತಂಡವಿರುತ್ತದೆ. ಈ ವ್ಯವಸ್ಥೆಯೇ ಕ್ಯೂಬಾದ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು. ಪ್ರತೀ ಪಾಲಿಕ್ಲೀನಿಕ್ ಗಳು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಾಲೇಜ್ ಆಗಿ ಕೂಡಾ ಕಾರ್ಯನಿರ್ವಹಿಸುತ್ತದೆ. ಅಂದರೆ ನಮ್ಮ ಓಣಿಗೊಂದರಂತೆ ಸರಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಇದ್ದಂತೆ ! ಈ ಕಾರಣದಿಂದಾಗಿ ಕಳೆದ 40 ವರ್ಷಗಳಿಂದ ಕ್ಯೂಬಾದ ಪ್ರತೀ ಮನೆ ಮನೆಗಳಲ್ಲಿ ವೈದ್ಯರು ಇರುತ್ತಾರೆ.

1950 ರ ದಶಕದ ಆರಂಭದ ಕ್ಯೂಬನ್ ಕ್ರಾಂತಿಯ ನಂತರ ವೈದ್ಯಕೀಯ ಮತ್ತು ಶಿಕ್ಷಣ ಸೇವೆಗಳಿಗೆ ಸರ್ಕಾರ ಹೆಚ್ಚು ಒತ್ತು ನೀಡಿತ್ತು. ವೈದ್ಯರು ಗ್ರಾಮೀಣಭಾಗದಲ್ಲಿ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿತ್ತು. ಕ್ರಮೇಣ ಪಾಲಿಕ್ಲೀನಿಕ್ ಗಳು ಮತ್ತು ವೈದ್ಯಕೀಯ ಶಿಕ್ಷಣ ಎಲ್ಲರಿಗೂ ಸುಲಭವಾಗಿ ಸಿಕ್ಕಾಗ ಈಗ ವೈದ್ಯರ ಕೊರತೆಯೇ ಇಲ್ಲ.

1978 ರ ಅಲ್ಮಾ-ಅಟಾ ಡಿಕ್ಲರೇಷನ್ ಗೆ ಮುಂಚಿತವಾಗಿ, 1970 ರ ದಶಕದಲ್ಲೇ ಕ್ಯೂಬಾದಾದ್ಯಂತ ಮಲ್ಟಿ-ಸ್ಪೆಷಾಲಿಟಿ ಪಾಲಿಕ್ಲಿನಿಕ್ಸ್ ಅನ್ನು ಸ್ಥಾಪಿಸಲಾಗಿತ್ತು. 1980 ರ ದಶಕದ ಮಧ್ಯಭಾಗದಲ್ಲಿ ಕುಟುಂಬಕ್ಕೊಬ್ಬರು ವೈದ್ಯರು ಮತ್ತು ದಾದಿಯರ ಯೋಜನೆಯ ಭಾಗವಾಗಿ ಪಾಲಿಕ್ಲಿನಿಕ್ ಗಳ ಹೆಸರಿನಲ್ಲಿ ಕಾರ್ಯಾಚರಣೆ ಶುರು ಮಾಡಿದವು.

ಇವತ್ತು ಇಡೀ ವಿಶ್ವವೇ ಪುಟ್ಟ ಕಮ್ಯೂನಿಷ್ಟ್ ರಾಷ್ಟ್ರ ಕ್ಯೂಬಾದತ್ತಾ ನೋಡುತ್ತಿದೆ. 22 ರಾಷ್ಟ್ರಗಳಿಗೆ ಕ್ಯೂಬಾ ತನ್ನ ವೈದ್ಯರ ತಂಡವನ್ನು ಕಳಿಸಿದೆ. ಇಡೀ ವಿಶ್ವವನ್ನೇ ಕೊರೋನಾದಿಂದ ರಕ್ಷಿಸುವ ತಾಕತ್ತೇನಾದರೂ ಇದ್ದರೆ ಅದು ಕ್ಯೂಬಾ ಎಂಬ ಪುಟ್ಟ ರಾಷ್ಟ್ರಕ್ಕೆ ಮಾತ್ರ ಎಂಬುದನ್ನು ಜಗತ್ತು ಒಪ್ಪಿಕೊಂಡಿದೆ. ಆ ಕಾರಣಕ್ಕಾಗಿಯೇ ಇಟಲಿ ಸರ್ಕಾರವು ನೋಬೆಲ್ ಶಾಂತಿ ಪ್ರಶಸ್ತಿ ಆಯ್ಕೆ ಸಮಿತಿಗೆ ಅಧಿಕೃತ ಪತ್ರ ಬರೆದು, ಕ್ಯೂಬಾ ವೈದ್ಯರ ತಂಡಕ್ಕೆ ನೋಬೆಲ್ ಶಾಂತಿ ಪ್ರಶಸ್ತಿ ನೀಡುವಂತೆ ಮನವಿ ಮಾಡಿದೆ‌. ಕ್ಯೂಬಾಗೆ ನೋಬೆಲ್ ಶಾಂತಿ ಪ್ರಶಸ್ತಿ ನೀಡಬೇಕು ಅನ್ನೋ ಇಟಲಿ ಮನವಿಗೆ ಹಲವು ಬಲಿಷ್ಟ ರಾಷ್ಟ್ರಗಳೂ ಧ್ವನಿಗೂಡಿಸಿದೆ. ಇಟಲಿ ಸರ್ಕಾರವು ಸಮಿತಿಗೆ ಬರೆದ ಪತ್ರ ಕ್ಯೂಬಾದ ಪರಿಣಾಮಕಾರಿ ಸೇವೆಯನ್ನು ಮತ್ತು ಶ್ರೇಷ್ಟತೆಯನ್ನು ಸಾರುತ್ತದೆ. ಅದರ ಯಥಾವತ್ತು ಇಲ್ಲಿದೆ.

ರಿಗೆ,
ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿಗೆ,

ಈ ದಿನಗಳ ಜಾಗತಿಕ ಸಾಂಕ್ರಾಮಿಕ ತುರ್ತು ಸಮಸ್ಯೆಗಳ ಮಧ್ಯೆ, ಒಂದು ಸಣ್ಣ ದೇಶದಿಂದ ಬಂದ ಒಂದು ಗುಂಪು ಜಗತ್ತಿನಾದ್ಯಂತ ಜನರಿಗೆ ಭರವಸೆ ಮತ್ತು ಸ್ಫೂರ್ತಿ ನೀಡಿದೆ. ಈಗ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಫಿಡಲ್ ಕ್ಯಾಸ್ಟ್ರೋ ಅಂತರರಾಷ್ಟ್ರೀಯ ವೈದ್ಯಕೀಯ ಬ್ರಿಗೇಡ್‌ನ ಭಾಗವಾಗಿರುವ ಕ್ಯೂಬನ್ ವೈದ್ಯರು ಮತ್ತು ದಾದಿಯರು ಕೋವಿಡ್ -19 ವಿರುದ್ಧ 22 ದೇಶಗಳಲ್ಲಿ ಹೋರಾಡುತ್ತಿದ್ದಾರೆ.

ಕ್ಯೂಬಾದ ವೈದ್ಯರ ತಂಡದ ಐಕಮತ ಮತ್ತು ನಿಸ್ವಾರ್ಥ ಸೇವೆ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲದವು. ತಮ್ಮ ಪ್ರಾಣವನ್ನು ಅಪಾಯಕ್ಕೆ ತಳ್ಳುವ ಮೂಲಕ ಸಾವಿರಾರು ಜೀವಗಳನ್ನು ಉಳಿಸಿರುವ ಕ್ಯೂಬಾ ವೈದ್ಯರ ತಂಡಕ್ಕೆ ಈ ವರ್ಷದ ಶಾಂತಿ ನೊಬೆಲ್ ಪ್ರಶಸ್ತಿಯನ್ನು ನೀಡುವಂತೆ ನಾವು ನಿಮ್ಮನ್ನು ಕೋರುತ್ತೇವೆ.

ಈ ಹಿಂದೆ ಕ್ಯೂಬಾದಲ್ಲಿ ಹೆನ್ರಿ ರೀವ್ ಅಂತರರಾಷ್ಟ್ರೀಯ ಮೆಡಿಕಲ್ ಬ್ರಿಗೇಡ್ ಇದ್ದರೆ, 2005 ರಲ್ಲಿ ಕ್ಯೂಬನ್ ನಾಯಕ ಫಿಡೆಲ್ ಕ್ಯಾಸ್ಟ್ರೊ ಅವರ ಹೆಸರಿನ ಬ್ರಿಗೇಡ್ ಅನ್ನು ರಚಿಸಲಾಯಿತು. ಫಿಡಲ್ ಕ್ಯಾಸ್ಟ್ರೋ ಮೆಡಿಕಲ್ ಬ್ರಿಗೇಡ್ ರಚನೆಯಾದಾಗಿನಿಂದ, ಈಗ 7,400 ಸ್ವಯಂಪ್ರೇರಿತ ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡ ಬ್ರಿಗೇಡ್‌ನ ವೈದ್ಯಕೀಯ ಸಿಬ್ಬಂದಿ ವಿಪತ್ತು ಪರಿಹಾರವನ್ನು ಒದಗಿಸುವ ಮುಂಚೂಣಿಯಲ್ಲಿದ್ದಾರೆ.

ಕೊರೋನಾಕ್ಕಿಂತ ಮೊದಲು, ಇದು ವಿಶ್ವದ ಅತ್ಯಂತ ಭೀಕರ ನೈಸರ್ಗಿಕ ವಿಪತ್ತುಗಳು ಮತ್ತು ಸಾಂಕ್ರಾಮಿಕ ರೋಗಗಳಿಂದ ಹಾನಿಗೊಳಗಾದ 21 ದೇಶಗಳಲ್ಲಿ 3.5 ದಶಲಕ್ಷಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಿತ್ತು. ಫಿಡಲ್ ಕ್ಯಾಸ್ಟ್ರೋ ಬ್ರಿಗೇಡ್‌ನ ಮುಂಚೂಣಿಯ ತುರ್ತು ವೈದ್ಯಕೀಯ ಚಿಕಿತ್ಸೆಗಳ ನೇರ ಪರಿಣಾಮವಾಗಿ ಅಂದಾಜು 80,000 ಜೀವಗಳನ್ನು ಉಳಿಸಲಾಗಿದೆ.

ಕ್ಯೂಬಾದ ಫಿಡಲ್ ಕ್ಯಾಸ್ಟ್ರೋ ಮೆಡಿಕಲ್ ಬ್ರಿಗೇಡ್ ನ ಇನ್ನೊಂದು ಸಾಹಸವೆಂದರೆ 2014-2015ರಲ್ಲಿ ಬ್ರಿಗೇಡ್ 400 ಕ್ಕೂ ಹೆಚ್ಚು ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರನ್ನು ಪಶ್ಚಿಮ ಆಫ್ರಿಕಾದ ಅಪಾಯಕಾರಿ ಎಬೋಲಾ ಸಾಂಕ್ರಾಮಿಕ ರೋಗವನ್ನು ಎದುರಿಸಲು ಕಳುಹಿಸಿತು. ಆರೋಗ್ಯ ಸೌಲಭ್ಯಗಳು ಮತ್ತು ರಸ್ತೆಗಳು ಮತ್ತು ಸಂವಹನಗಳಂತಹ ಮೂಲಸೌಕರ್ಯಗಳೇ ಇಲ್ಲದ ಪಶ್ವಿಮ ಆಫ್ರಿಕಾದ ದುರ್ಗಮ ಪ್ರದೇಶಗಳಲ್ಲಿ ಫಿಡಲ್ ಕ್ಯಾಸ್ಟ್ರೊ ಬ್ರಿಗೇಡ್ ಕೆಲಸ ಮಾಡುತ್ತದೆ.

ಈ ತಂಡವು ಸಿಯೆರಾ ಲಿಯೋನ್, ಗಿನಿಯಾ ಮತ್ತು ಲೈಬೀರಿಯಾದಲ್ಲಿ ಅತಿದೊಡ್ಡ ವೈದ್ಯಕೀಯ ಕಾರ್ಯಾಚರಣೆಯನ್ನು ರೂಪಿಸಿತು. ಫಿಡಲ್ ಕ್ಯಾಸ್ಟ್ರೋ ಮೆಡಿಕಲ್ ಬ್ರಿಗೇಡ್ ತಜ್ಞರ ಕಾರ್ಯವನ್ನು ಗುರುತಿಸಿದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅವರಿಗೆ 2017 ರಲ್ಲಿ ಸಾರ್ವಜನಿಕ ಆರೋಗ್ಯಕ್ಕಾಗಿ ನೀಡುವ ಪ್ರತಿಷ್ಠಿತ ಡಾ. ಲೀ ಜೊಂಗ್-ವೂಕ್ ಸ್ಮಾರಕ ಪ್ರಶಸ್ತಿಯನ್ನು ನೀಡಿತು.

ಫಿಡಲ್ ಕ್ಯಾಸ್ಟ್ರೋ ಮೆಡಿಕಲ್ ಬ್ರಿಗೇಡ್ ಮತ್ತು ಹೆನ್ರಿ ರೀವ್ ಬ್ರಿಗೇಡ್ ಕ್ಯೂಬಾದ ವೈದ್ಯಕೀಯ ವ್ಯವಸ್ಥೆಯ ಒಂದು ಭಾಗವಾಗಿದೆ. ಇದನ್ನು ಕ್ಯೂಬನ್ ಸಾರ್ವಜನಿಕ ಆರೋಗ್ಯ ಸಚಿವಾಲಯ ನಿರ್ವಹಿಸುತ್ತಿದೆ. ಆಶ್ಚರ್ಯವೆಂದರೆ ಇದು ವಿಶ್ವ ಆರೋಗ್ಯ ಸಂಸ್ಥೆಗಿಂತ ಹೆಚ್ಚಿನ ಆರೋಗ್ಯ ಕಾರ್ಯಕರ್ತರನ್ನು ವಿಶ್ವದಾದ್ಯಂತ ಕಳುಹಿಸಿದೆ.

ಈಗಾಗಲೇ ಜಗತ್ತು ವಿನಾಶಕಾರಿ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದೆ. ಕ್ಯೂಬಾದ ಹೆನ್ರಿ ರೀವ್ ಬ್ರಿಗೇಡ್ ಅಥವಾ ಫಿಡಲ್ ಕ್ಯಾಸ್ಟ್ರೋ ಬ್ರಿಗೇಡ್ ಸಾಂಕ್ರಾಮಿಕ ರೋಗ ಜಾಗತಿಕವಾಗಿ ಹರಡುವುದನ್ನು ತಡೆಯಲು ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರನ್ನು ನೋಡಿಕೊಳ್ಳುವ ಮಹತ್ತರ ಸೇವೆಯನ್ನು ನೀಡುತ್ತಿದೆ. ಜನರ ಜೀವ ಉಳಿಸಲು ಕ್ಯೂಬನ್ನರು ಇಟಲಿಯ ಅತ್ಯಂತ ಹೆಚ್ಚು ಕೊರೋನಾ ಸೋಂಕಿತ ಪ್ರದೇಶವಾದ ಲೊಂಬಾರ್ಡಿಗೆ ಹೋಗಿ ಕೆಲಸ ಮಾಡಿದ್ದನ್ನು ನೋಡಿ ಇಡೀ ವಿಶ್ವವೇ ನಿಬ್ಬೆರಗಾಗಿದೆ‌.

ಮೇ 1 ರ ವೇಳೆಗಾಗಲೇ, 22 ದೇಶಗಳಲ್ಲಿ ಸಾವಿರ ಸಾವಿರ ಸಂಖ್ಯೆಯ ಕ್ಯೂಬನ್ ವೈದ್ಯಕೀಯ ಸಿಬ್ಬಂದಿ COVID-19 ವಿರುದ್ಧ ಹೋರಾಡುತ್ತಿದ್ದಾರೆ. ಆಂಡೊರಾ, ಅಂಗೋಲಾ, ಆಂಟಿಗುವಾ ಮತ್ತು ಬಾರ್ಬುಡಾ, ಬಾರ್ಬಡೋಸ್, ಬೆಲೀಜ್, ಕೇಪ್ ವರ್ಡೆ, ಡೊಮಿನಿಕಾ, ಗ್ರೆನಡಾ, ಹೈಟಿ, ಹೊಂಡುರಾಸ್, ಇಟಲಿ, ಜಮೈಕಾ, ಮೆಕ್ಸಿಕೊ, ನಿಕರಾಗುವಾ, ಕತಾರ್, ಸೇಂಟ್ ಲೂಸಿಯಾ, ಸೇಂಟ್ ಕಿಟ್ಸ್ ಮತ್ತು ನೆವಿಸ್, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ದಕ್ಷಿಣ ಆಫ್ರಿಕಾ, ಸುರಿನಾಮ್, ಟೋಗೊ ಮತ್ತು ವೆನೆಜುವೆಲಾ ದೇಶಗಳಲ್ಲಿ ಕ್ಯೂಬಾದ ವೈದ್ಯರು ಪ್ರಾಣದ ಹಂಗು ತೊರೆದು ಉಚಿತ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ.

ನೋಬೆಲ್ ಶಾಂತಿ ಪ್ರಶಸ್ತಿಯ 2020 ರ ನಾಮನಿರ್ದೇಶನ ಅವಧಿ ಮುಗಿದಿದೆ ಎಂದು ನಮಗೆ ತಿಳಿದಿದ್ದರೂ, ಜಾಗತಿಕ ತುರ್ತು ಪರಿಸ್ಥಿತಿಗೆ ಫಿಡಲ್ ಕ್ಯಾಸ್ಟ್ರೋ ಬ್ರಿಗೇಡ್/ ಹೆನ್ರಿ ರೀವ್ ಅಂತರರಾಷ್ಟ್ರೀಯ ವೈದ್ಯಕೀಯ ಬ್ರಿಗೇಡ್ ನೀಡಿದ ಅಸಾಧಾರಣ ಸೇವೆಯನ್ನು ನೋಡಿ, ಅವಧಿಯ ವಿನಾಯಿತಿ ನೀಡುವಂತೆ ನಾವು ನೊಬೆಲ್ ಸಮಿತಿಯನ್ನು ಕೇಳುತ್ತೇವೆ. ಜಗತ್ತನ್ನೇ ಸಾವಿನಂಚಿಗೆ ತಳ್ಳಿದ ಕೊರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕ್ಯೂಬಾ ಸರ್ಕಾರದ ನಿಸ್ವಾರ್ಥತೆ, ಧೈರ್ಯ ಮತ್ತು ಐಕ್ಯಮತ ಯಾರಿಗೂ ಸಾಟಿಯಿಲ್ಲದ್ದು. ಆದ್ದರಿಂದಲೇ ವಿಶ್ವದ ಅತ್ಯಂತ ಪ್ರತಿಷ್ಠಿತ ನೋಬೆಲ್ ಶಾಂತಿ ಪುರಸ್ಕಾರಕ್ಕೆ ಕ್ಯೂಬಾ ಅರ್ಹವಾಗಿದೆ.

ತಮ್ಮ ನಂಬುಗೆಯ,

ಈ ಪತ್ರವನ್ನು ಅನುವಾದಿಸಿದ ಉದ್ದೇಶ ಕ್ಯೂಬಾಗೆ ನೋಬೆಲ್ ಶಾಂತಿ ಪುರಸ್ಕಾರ ನೀಡಬೇಕು ಎಂಬುದಕ್ಕೆ ಬೆಂಬಲ ನೀಡುವುದಕ್ಕಲ್ಲ. ಆ ಪುರಸ್ಕಾರವನ್ನೂ ಮೀರಿ ನಿಂತಿದೆ ಕ್ಯೂಬಾ. “ವಿಶ್ವಗುರು ಭಾರತ” ಎಂಬ ಪುಕ್ಕಟೆ ಶಬ್ದ ಚಾಲ್ತಿಯಲ್ಲಿರುವ ದಿನಗಳಲ್ಲಿ ವಿಶ್ವ ಗುರುವಾಗುವುದೆಂದರೆ ಹೀಗೆ ಎಂದು ತಿಳಿದುಕೊಳ್ಳಲು ಇಟಲಿ ಸರ್ಕಾರದ ಈ ಪತ್ರ ಉಪಯೋಗಕ್ಕೆ ಬರುತ್ತದೆ. ಇರಲಿ,

ಹೀಗೆ ವಿಶ್ವ ಆರೋಗ್ಯ ಸಂಸ್ಥೆಯನ್ನೇ ಮೀರಿಸುವ ರೀತಿಯಲ್ಲಿ ಕ್ಯೂಬಾ ಜಗತ್ತಿಗೆ ಆರೋಗ್ಯ ಸೇವೆ ನೀಡುತ್ತಿದೆ. ಬಡತನ ಮುಕ್ತ, ಹಸಿವು ಮುಕ್ತ, ರೋಗ ಮುಕ್ತ ಕ್ಯೂಬಾ ಎಂಬ ಪುಟ್ಟ ಕಮ್ಯೂನಿಷ್ಟ್ ರಾಷ್ಟ್ರ ಇಡೀ ಜಗತ್ತನ್ನೇ ತನ್ನಂತೆ ಸುಧಾರಿಸಲು ಪ್ರಯತ್ನ ಪಡುತ್ತಿದೆ‌. ಅದಕ್ಕೆ ಕಾರಣ ಅಲ್ಲಿನ ಶಿಕ್ಷಣ ಮತ್ತು ವೈದ್ಯಕೀಯ ವ್ಯವಸ್ಥೆ. ಈ ರೀತಿಯ ವ್ಯವಸ್ಥೆಯನ್ನು ಜಾರಿ ಮಾಡೋ ಸರಕಾರ ಭಾರತದಲ್ಲಿ ಬಾರದೇ ನಾವು ವಿಶ್ವಗುರುವಾಗಲು ಸಾಧ್ಯವಿಲ್ಲ. ಪುರಾಣದ ಕತೆಗಳನ್ನು ಮುಂದಿಟ್ಟುಕೊಂಡು ನಾವೇ ವಿಶ್ವಗುರು ಎಂದು ಸಮಾದಾನ ಪಟ್ಟುಕೊಳ್ಳದೇ ನಾವೂ ಕ್ಯೂಬಾವಾಗುವತ್ತಾ ಹೆಜ್ಜೆ ಇಡಬೇಕಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ

Published

on

ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ್ಪ, ಹಿರಿಯ ಶಾಸಕ ಈ. ತುಕಾರಾಮ್, ಮಾಜಿ ಸಚಿವ ಹೆಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯ ಸುದಾಮ ದಾಸ್, ಮಹಿಳಾ ಆಯೋಗದ ಅದ್ಯಕ್ಷೆ ಡಾ. ನಾಗಲಕ್ಷ್ಮಿ ಸೇರಿ ಹಲವರು ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರ ಜನ್ಮ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮಂಡ್ಯದ ಡಿಸಿ ಪಾರ್ಕ್ ಎದುರು ಇರುವ ಜಗಜೀವನ್‌ರಾಮ್ ಪ್ರತಿಮೆಗೆ ಜಿಲ್ಲಾಡಳಿತದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಸೇರಿದಂತೆ ಅಧಿಕಾರಿಗಳ ವರ್ಗ ಹಾಗೂ ಜಗಜೀವನ್‌ರಾಮ್ ಅನುಯಾಯಿಗಳು ಭಾಗವಹಿಸಿದ್ದರು.

ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಅವರ ಅವರ 117ನೇ ಜಯಂತಿಯನ್ನು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇಂದು ಚುನಾವಣಾ ಆಯೋಗ ಸಮಾವೇಶ

Published

on

ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ ಸಮಾವೇಶ ನಡೆಸಲಿದೆ.

ಈ ಸಮಾವೇಶದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಲಾಗುವುದು ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಮತದಾನದ ಸಮಸ್ಯೆಯನ್ನು ಪರಿಹರಿಸಲು ಉದ್ದೇಶಿತ ಮತ್ತು ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುವುದು.

ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಪುಣೆ, ಥಾಣೆ, ನಾಗ್ಪುರ, ಪಾಟ್ನಾ ಸಾಹಿಬ್, ಲಖನೌ ಮತ್ತು ಕಾನ್ಪುರ ನಗರ ಪಾಲಿಕೆಯ ಆಯುಕ್ತರು ಮತ್ತು ಬಿಹಾರ ಮತ್ತು ಉತ್ತರದ ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರುಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending