ದಿನದ ಸುದ್ದಿ
ಪ್ರಾರ್ಥನಾ ಮಂದಿರಗಳಲ್ಲಿ ಅನುಮತಿಗಿಂತ ಹೆಚ್ಚು ಡೆಸಿಬಲ್ ಮೀರಿ ಧ್ವನಿವರ್ಧಕ ಬಳಸಿದವರ ಮೇಲೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ : ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ
ಸುದ್ದಿದಿನ,ದಾವಣಗೆರೆ : ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಬಗೆಗೆ ಗೌರವ ಇದ್ದು, ಅದನ್ನು ಕಾಪಾಡಿಕೊಳ್ಳುವಂತಹ ಕೆಲಸವನ್ನು ಪೊಲೀಸರು ಮಾಡಬೇಕು, ಜನಗಳು ನಿಮ್ಮನ್ನ ನಂಬಿ ರಾತ್ರಿ ನಿದ್ರೆ ಮಾಡುತ್ತಾರೆ, ಹಾಗಾಗಿ ಸಾರ್ವಜನಿಕರ ಹಿತರಕ್ಷಣೆ ನಿಮ್ಮ ಕರ್ತವ್ಯವೆಂದು ತಿಳಿದು ಕಾರ್ಯನಿರ್ವಹಿಸಿ ಎಂದು ಗೃಹ ಸಚಿವರಾದ ಅರಗ ಜ್ಞಾನೇಂದ್ರ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಪೊಲೀಸ್ ಘಟಕದ ಪರಿವೀಕ್ಷಣಾ ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಯಾರು ಅಸಹಾಯಕರು ಗೌರವಸ್ಥರು ಇರುತ್ತಾರೋ ಅವರ ಪರವಾಗಿ ಪೊಲೀಸ್ ಇಲಾಖೆ ಕೆಲಸ ಮಾಡಬೇಕು, ಪೊಲೀಸರೆಂದರೆ ಸಾರ್ವಜನಿಕರ ಹಿತೈಶಿಗಳೆಂಬ ಭಾವನೆ ಬರಬೇಕು, ಕಾನೂನು ಸುವ್ಯವಸ್ಥೆಯ ಬಗೆಗೆ ಕಾಳಜಿವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಬೀಟ್ ವ್ಯವಸ್ಥೆಯನ್ನು ಬಲಪಡಿಸಿ, ಬೀಟ್ ಪೊಲೀಸರಿಗೆ ಅವರ ಏರಿಯಾದ ಎಲ್ಲಾ ಮಾಹಿತಿ ಇರಬೇಕು ಕೇವಲ ಬೀಟ್ ಇದೆ ಎಂದು ಆಪ್ರದೇಶಗಳಿಗೆ ಹೋಗಿ ಬರುವುದಲ್ಲ, ಅಲ್ಲಿ ನಡೆಯುವ ಪ್ರತಿ ಚಟುವಟಿಕೆ ನಿಮ್ಮ ಅರಿವಿಗಿರಬೇಕು ಹಾಗೂ ಏನಾದರು ವಿಷಯಗಳಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತರಬೇಕು.
ರಾಜ್ಯದ ನಗರಗಳ ಕೆಲ ಭಾಗಗಳಲ್ಲಿ ವೀದೇಶಿ ಸಂಪರ್ಕದ ವ್ಯಕ್ತಿಗಳು ಈ ದೇಶದ ಏಕತೆ ಹಾಳು ಮಾಡಲು ಸಂಚು ರೂಪಿಸುತ್ತಿರುವ ಘಟನೆಗಳು ಜರುಗುತ್ತಿವೆ, ಆದ್ದರಿಂದ ನಿಮ್ಮ ಠಾಣಾ ವ್ಯಾಪ್ತಿಯ ಸಮಗ್ರ ಚಿತ್ರಣ ನಿಮಗಿರಬೇಕು, ನಿಮ್ಮ ಏರಿಯಾಗೆ ಬಂದಿರುವ ಹೊಸ ವ್ಯಕ್ತಿಗಳು ಅವರ ಚಲನವಲನ, ಅವರ ಪೂರ್ವಾಪರಗಳ ಮಾಹಿತಿ ನಿಮ್ಮಲ್ಲಿದ್ದರೆ ಅಹಿತಕರ ಘಟನೆಗಳನ್ನು ತಪ್ಪಿಸಬಹುದು. ಕೆಲ ಏರಿಯಾಗಳಿಗೆ ಪೊಲೀಸರೇ ಹೋಗಲು ಹಿಂದು ಮುಂದು ನೋಡುತ್ತಾರೆ, ಸೂಕ್ಷ್ಮ ಪ್ರದೇಶಗಳೆಂಬ ಸಬೂಬು ಹೇಳುತ್ತಾರೆ.
ಸೂಕ್ಷ್ಮ ಪ್ರದೇಶಗಳಿಗೆ ಹೋಗಬಾರದು ಅನ್ನುವುದಕ್ಕಿಂತ ನಾವಿದ್ದೇವೆ ಅಲ್ಲಿಗೆ ಹೋಗಿ ಎಂದು ಧೈರ್ಯ ತುಂಬಬೇಕು, ಪೊಲೀಸರೇ ಹೀಗಾದರೆ ದೇಶದ ಶಾಂತಿ ಸುವ್ಯವಸ್ಥೆ ಕಾಪಾಡುವವರು ಯಾರು? ವಿಘಟನಕಾರಿ ಶಕ್ತಿಗಳ ಎಡೆಮುರಿ ಕಟ್ಟುವುದು ಪೊಲೀಸರ ಧ್ಯೇಯವಾಗಬೇಕೆಂದರು.
ಜಿಲ್ಲೆಯ ಹಲವು ಕಡೆಗಳಲ್ಲಿ ಜೂಜು, ಮಟ್ಕಾ, ಎಗ್ಗಿಲ್ಲದೆ ನಡೆಯುತ್ತಿವೆ ಎಂದು ಸಾರ್ವಜನಿಕರು ದೂರು ನೀಡಿದ್ದು ತಕ್ಷಣವೇ ಇಂತಹ ಚಟುವಟಿಕೆಗಳು ನಿಲ್ಲಬೇಕು, ಇಂತಹ ಚಟುವಟಿಕೆಗಳು ಮುಂದುವರಿದರೆ ಆ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.
ಪ್ರಾರ್ಥನಾ ಮಂದಿರಗಳಲ್ಲಿ ಅನುಮತಿಗಿಂತ ಹೆಚ್ಚು ಡೆಸಿಬಲ್ ಹಾಗೂ ನಿಗದಿತ ಸಮಯ ಮೀರಿ ಧ್ವನಿವರ್ಧಕ ಬಳಸಿದವರ ಮೇಲೇ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ, ಉಚ್ಚನ್ಯಾಯಾಲಯದ ಆದೇಶವನ್ನು ಪಾಲಿಸುವುದು ಎಲ್ಲರ ಕರ್ತವ್ಯ, ಪೋಲೀಸ್ ಇಲಾಖೆ ನ್ಯಾಯಾಲಯದ ಆಜ್ಞೆಯನ್ನು ಕಟ್ಟುನಿಟ್ಟು ಜಾರಿಗೆ ಕಾರ್ಯನಿರ್ವಹಿಸಬೇಕೆಂದರು.
ಅನಧಿಕೃತ ಕಸಾಯಿ ಖಾನೆಗಳು ಹಾಗೂ ಅಕ್ರಮ ಗೋ ಸಾಗಾಣಿಕೆಯನ್ನು ಸರ್ಕಾರ ಸಹಿಸುವುದಿಲ್ಲ, ಎಲ್ಲೇ ಅಕ್ರಮ ಗೋ ಸಾಗಾಣಿಕೆ ಕಂಡುಬಂದರೆ ತಕ್ಷಣ ಸ್ಪಂದಿಸಿ ಗೋವುಗಳು ಕಟುಕರ ಪಾಲಾಗುವುದನ್ನು ತಪ್ಪಿಸಿ, ಅಕ್ರಮ ಗೋವು ಸಾಗಾಣಿಕೆದಾರರನ್ನ ಸಂಘಟನೆಗಳು ಹಿಡಿದು ಕೊಡುವುದಾದರೆ ನಿಮ್ಮ ಕೆಲಸವೇನು? ಸಬೂಬುಗಳನ್ನು ಹೇಳದೆ ಕೆಲಸ ಮಾಡಿ ತೋರಿಸಿ ಸರ್ಕಾರ ಈ ಕುರಿತು ಕಠಿಣ ಕಾನೂನುಗಳನ್ನು ಮಾಡಿದ್ದು, ಸರ್ಕಾರದ ಆಶಯ ಗೋವುಗಳು ಉಳಿಯಬೇಕು. ಸರ್ಕಾರದ ಆಶಯದಂತೆ ಕೆಲಸ ಮಾಡಿ ಎಂದರು.
ಅಕ್ರಮ ಮದ್ಯ ಮಾರಾಟ ನಿಲ್ಲಬೇಕು
ಗ್ರಾಮಾಂತರ ಪ್ರದೇಶಗಳಲ್ಲಿ ಮನೆ ಮನೆಯಲ್ಲಿಯೂ ಮದ್ಯ ಮಾರಾಟ ಮಾಡಲಾಗುತ್ತಿದೆಯೆಂಬ ದೂರುಗಳನ್ನು ಹಲವರು ನೀಡಿದ್ದು ಎಷ್ಟು ಕೇಸ್ ದಾಖಲಿಸಲಾಗಿದೆ? ಕಾಟಾಚಾರಕ್ಕೆ ಒಂದೆರಡು ಕೇಸ್ ದಾಖಲಿಸಿದರೆ ಸಾಲದು, ಸಂಪೂರ್ಣ ಅಕ್ರಮ ಮದ್ಯ ಮಾರಾಟ ನಿಲ್ಲಬೇಕು, ಯಾರೋ ಒಬ್ಬ ವ್ಯಕ್ತಿ ಅಕ್ರಮ ಮದ್ಯ ಮಾರಿ ಹತ್ತು ರೂಪಾಯಿ ತೆಗೆದುಕೊಂಡವನನ್ನು ಹಿಡಿಯುವುದಲ್ಲ, ಅವನಿಗೆ ಅಕ್ರಮ ಮದ್ಯ ಪೂರೈಸಿದ ಅಂಗಡಿಯವನನ್ನು ಹಿಡಿದು ಕೇಸ್ ಹಾಕಬೇಕು.
ಇಲ್ಲದಿದ್ದರೆ ಕುಡಿದು ಕುಡಿದು ಬಡವರು, ದಲಿತರು ಕೂಲಿಕಾರರು ಸಾಯ್ತಾರೆ, ಹಾಗಾಗಿ ಬಡವರ ಜೀವಕ್ಕೂ ಬೆಲೆಯಿದೆ ಎಂಬ ಅರಿವು ಇರಲಿ ಒಟ್ಟಾರೆ ಪೊಲೀಸರಂದ್ರೆ ಜನರಿಗೆ ಗೌರವ ಮರ್ಯಾದೆ ಭಯ ಇರುವಂತೆ ಕಾರ್ಯನಿರ್ವಹಿಸಿ ಎಂದರು.
ನಿಮ್ಮ ವರದಿಯಲ್ಲಿ 1602 ರೌಡಿ ಶೀಟರ್ಗಳು ಇದ್ದಾರೆಂದು ತೋರಿಸಿದ್ದೀರಿ ಒಂದು ಜಿಲ್ಲೆಯಲ್ಲಿ ಇಷ್ಟೊಂದು ರೌಡಿಗಳು ಇರಲು ಸಾಧ್ಯವೇ, ಯಾರದೇ ವಿರುದ್ದ ದುರುದ್ದೇಶಪೂರ್ವಕ ರೌಡಿ ಶೀಟರ್ ಹಾಕುವುದು ಬೇಡ ಎಂದರು.
ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾಹಿತಿ ನೀಡಿ ಧ್ವನಿವರ್ಧಕ ಬಳಕೆ ಸಂಭಂಧ 331 ಅರ್ಜಿಗಳು ಬಂದಿದ್ದು 167 ಪರವಾನಗಿ ನೀಡಲಾಗಿದೆ, ಧ್ವನಿವರ್ಧಕಗಳ ಡೆಸಿಬಲ್ ಪರೀಕ್ಷಿಸಲು ಪ್ರತಿ ಠಾಣೆಯಲ್ಲಿ ಒಬ್ಬ ಸಿಬ್ಬಂದಿ ಇರುತ್ತಾರೆ, ಹಾಗೂ ನಿಗದಿತ ಅವಧಿಯೊಳಗೆ ಧ್ವನಿವರ್ಧಕಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.
ಕೆಲವರು ಒಂದು ವರ್ಷ ಹಾಗೂ ಎರಡು ವರ್ಷಗಳಿಗೆ ಅನುಮತಿ ಪಡೆದಿದ್ದಾರೆ ಎಂದರು ಹಾಗೂ ಇಲಾಖೆಯ ಪ್ರಗತಿ ಮಾಹಿತಿ ನೀಡಿದರು. ಸಭೆಯಲ್ಲಿ ಐಜಿಪಿ ತ್ಯಾಗರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ.
23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.
ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್‌ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್ ಸಂಜೀವ್ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.
ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.
ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್, ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ಒಂದು ಮೊಬೈಲ್ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು
ಸುದ್ದಿದಿನ,ರಾಯಚೂರು: ಕಟ್ಟಡದ ಮೇಲ್ಛಾವಣಿಯ ಸಜ್ಜಾ ಏಕಾಏಕಿ ಕುಸಿದು ಬಿದ್ದು ಮೂವರು ಯುವಕರು ಮೃತಪಟ್ಟ ದುರ್ಘಟನೆ ಭಾನುವಾರ ಜಿಲ್ಲೆಯ ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಸಂಭವಿಸಿದೆ.
ಮೃತರನ್ನು ದೇವದುರ್ಗ ತಾಲೂಕಿನ ಸಮುದ್ರ ಗ್ರಾಮದ ರವಿಚಂದ್ರ (35), ಕ್ಯಾದಿಗೆರಾ ಗ್ರಾಮದ ನಾಗರಾಜ್ (30) ಹಾಗೂ ಕೊತ್ತಿಗುಡ್ಡದ ಅರ್ಜುನ್ (21) ಎಂದು ಗುರುತಿಸಲಾಗಿದೆ.
ಕಟ್ಟಡದ ಅವಶೇಷಗಳಡಿ ಸಿಲುಕಿ ರವಿಚಂದ್ರ ಹಾಗೂ ನಾಗರಾಜ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅರ್ಜುನ್ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಯುವಕರು ತಾವೇ ನಿರ್ಮಿಸಿದ್ದ ‘ಅಂತ್ಯವಾಯ್ತು’ ಎಂಬ ಕಿರುಚಿತ್ರದ ಪೋಸ್ಟರ್ ಅಂಟಿಸಲು ಕಟ್ಟಡದ ಬಳಿ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.
ಕಟ್ಟಡದ ಮೇಲ್ಛಾವಣಿಯ ಒಂದು ಭಾಗವು, ಅದಕ್ಕೆ ಜೋಡಣೆಯಾಗಿದ್ದ ಕಬ್ಬಿಣದ ಮೆಟ್ಟಿಲುಗಳ ಸಹಿತ ಕುಸಿದು ಬಿದ್ದಿದೆ. ಘಟನೆಯಲ್ಲಿ ಉಮೇಶ್, ಪ್ರಭು ಹಾಗೂ ಅಭಿಷೇಕ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಘಟನಾ ಸ್ಥಳಕ್ಕೆ ದೇವದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯ ನಂತರ ನಿಖರ ಕಾರಣ ತಿಳಿಯಲಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ19 hours agoನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
-
ದಿನದ ಸುದ್ದಿ1 day agoಪಲ್ಸ್ ಪೋಲಿಯೋದಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮವಹಿಸಿ: ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್
-
ದಿನದ ಸುದ್ದಿ15 hours agoಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
ದಿನದ ಸುದ್ದಿ1 day agoದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು

