ದಿನದ ಸುದ್ದಿ
ಪೊಳ್ಳು ಭರವಸೆ ; ರಾಜ್ಯದ ಜನರ ಕಿವಿಗೆ ಹೂ ಇಟ್ಟಿದೆ ಬಿಜೆಪಿ : ಮಾಜಿ ಸಿಎಂ ಸಿದ್ದರಾಮಯ್ಯ
ಸುದ್ದಿದಿನ, ತುಮಕೂರು: ಭಾರತೀಯ ಜನತಾ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಗೆ “ಜನತಾ ಪ್ರಣಾಳಿಕೆ’’ ಎಂದು ಕರೆದಿರುವುದು ಅರ್ಥಪೂರ್ಣವಾಗಿದೆ. ಈ ಪ್ರಣಾಳಿಕೆಯನ್ನು ಜನತೆಯೇ ಅನುಷ್ಠಾನಕ್ಕೆ ತರಬೇಕೇ ಹೊರತು ಸರ್ಕಾರ ಅಲ್ಲ ಎನ್ನುವುದೇ ಇದರ ಅರ್ಥವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಇಂದು ಬಿಡುಗಡೆಗೊಳಿಸಿರುವ ಬಿಜೆಪಿ ಪ್ರಣಾಳಿಕೆಯ ಭರವಸೆಗಳ ಕುರಿತು ಮಾತಾನಾಡಿರುವ ಅವರು, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಅನ್ನ, ಅಭಯ, ಅಕ್ಷರ, ಅಭಿವೃದ್ದಿ ಮತ್ತು ಆದಾಯಗಳ ಭರವಸೆಗಳನ್ನು ನೀಡಿದೆ. ಕಳೆದ ಮೂರುವರೆ ವರ್ಷಗಳ ಅವಧಿಯ ರಾಜ್ಯದ ಬಿಜೆಪಿ ಸರ್ಕಾರ ಈ ಐದು ಭರವಸೆಗಳನ್ನು ಜನರಿಂದ ಕಸಿದುಕೊಂಡಿದೆ. ಪಡಿತರ ಚೀಟಿ ಮೂಲಕ ನೀಡಲಾಗುತ್ತಿದ್ದ 7 ಕಿಲೋ ಅಕ್ಕಿಯನ್ನು ಐದು ಕಿಲೋಗಳಿಗೆ ಇಳಿಸಿ ಅನ್ನವನ್ನು ಕಸಿದುಕೊಂಡಿದೆ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ 10.12 ಲಕ್ಷ ಮಕ್ಕಳು ಶಾಲೆಯನ್ನು ತೊರೆಯುವಂತೆ ಮಾಡುವ ಮೂಲಕ ಅಕ್ಷರವನ್ನು ಕಸಿದುಕೊಂಡಿದೆ.
ಕೊರೊನಾ ರೋಗ ನಿರ್ವಹಣೆಯಲ್ಲಿನ ನಿರ್ಲಕ್ಷ ಮತ್ತು ಭ್ರಷ್ಟಾಚಾರದಿಂದಾಗಿ ಜನತೆಯ ಆರೋಗ್ಯವನ್ನು ಕಸಿದುಕೊಂಡಿದೆ. ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿಯೂ 40% ಕಮಿಷನ್ ಹಾವಳಿಯ ಮೂಲಕ ಅಭಿವೃದ್ದಿಯನ್ನು ಕಸಿದುಕೊಂಡಿದೆ.
ರಾಜ್ಯದ ಗೃಹಸಚಿವರ ಅದಕ್ಷತೆ ಮತ್ತು ಭ್ರಷ್ಟತೆಯಿಂದಾಗಿ ಅಪರಾಧ ಪ್ರಕರಣಗಳು ಹೆಚ್ಚಾಗಿರುವುದು ಮಾತ್ರವಲ್ಲ ರೌಡಿ-ಗೂಂಡಾಗಳೆಲ್ಲ ಮುಕ್ತವಾಗಿ ಓಡಾಡಲು ಸ್ವಾತಂತ್ರ್ಯ ಪಡೆದಿರುವ ಕಾರಣ ಜನತೆಯ ಭದ್ರತೆಯ ಅಭಯವನ್ನೂ ಕಸಿದುಕೊಂಡಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ರೂ.410 ರಿಂದ ರೂ.1105ಕ್ಕೆ ಏರಿಸಿರುವ ಮತ್ತು ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ರದ್ದುಪಡಿಸಿರುವ ಬಿಜೆಪಿ ಈಗ ಅಡುಗೆ ಅನಿಲದ ಮೂರು ಸಿಲಿಂಡರ್ ಗಳನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡುವ ಮೂಲಕ ರಾಜ್ಯದ ಜನರ ಕಿವಿಗೆ ಹೂ ಇಟ್ಟಿದೆ.
ಕಾಂಗ್ರೆಸ್ ಪಕ್ಷ ತನ್ನ ಅಧಿಕಾರವಧಿಯಲ್ಲಿ ರಾಜ್ಯದಾದ್ಯಂತ ಪ್ರಾರಂಭಿಸಿದ್ದ 600 ಇಂದಿರಾ ಕ್ಯಾಂಟೀನ್ ಗಳನ್ನು ರಾಜಕೀಯ ದ್ವೇಷಾಸೂಯೆಯಿಂದ ಮುಚ್ಚಿರುವ ಬಿಜೆಪಿ ಈಗ ಅಟಲ್ ಆಹಾರ ಕೇಂದ್ರಗಳನ್ನು ಪ್ರಾರಂಭಿಸುತ್ತೇವೆ ಎಂದು ಹೇಳಿರುವುದೇ ಹಾಸ್ಯಾಸ್ಪದ. ಪಡಿತರ ಚೀಟಿಗಳ ಮೂಲಕ ನೀಡಲಾಗುತ್ತಿದ್ದ ಏಳು ಕಿಲೋ ಉಚಿತ ಅಕ್ಕಿಯನ್ನು ಐದು ಕಿಲೋಗಳಿಗೆ ಇಳಿಸಿದ್ದ ಬಿಜೆಪಿ ಐದು ಕಿಲೋ ಸಿರಿಧಾನ್ಯ ಕೊಡುತ್ತೇವೆ ಎಂದು ಹೇಳಿರುವುದು ಇನ್ನೊಂದು ವಿಪರ್ಯಾಸ.
ಹತ್ತು ಲಕ್ಷ ನಿವೇಶನಗಳನ್ನು ವಿತರಿಸುವ ಭರವಸೆ ನೀಡಿರುವ ಇದೇ ಬಿಜೆಪಿ ಕಳೆದ ಮೂರುವರೆ ವರ್ಷಗಳ ಅವಧಿಯಲ್ಲಿ ಒಂದೇ ಒಂದು ಹೊಸಮನೆಯನ್ನು ನಿರ್ಮಾಣ ಮಾಡಿಲ್ಲ.
ಕಾಂಗ್ರೆಸ್ ಪಕ್ಷ ತನ್ನ ಅಧಿಕಾರವಧಿಯ ಐದು ವರ್ಷಗಳಲ್ಲಿ ಹದಿನೈದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಿತ್ತು. ಬಿಜೆಪಿ ಸರ್ಕಾರ ನಿರ್ಮಾಣ ಹಂತದಲ್ಲಿದ್ದ ನಮ್ಮ ಕಾಲದ ಮನೆಗಳನ್ನುಪೂರ್ಣಗೊಳಿಸಿ ಅದನ್ನೇ ಸಾಧನೆ ಎಂದು ಹೇಳಿಕೊಳ್ಳುತ್ತಿದೆ. ಸಣ್ಣ ಕೈಗಾರಿಕೆಗಳು ಮತ್ತು ಐಟಿಐಗಳ ನಡುವೆ ಒಪ್ಪಂದ ಮಾಡಿಕೊಂಡು ಯುವ ಪ್ರತಿಭೆಗಳಿಗೆ ಶಿಕ್ಷಣ ಮತ್ತು ಉದ್ಯೋಗದ ಅವಕಾಶ ಕಲ್ಪಿಸುವ ‘ಸಮನ್ವಯ’ ಯೋಜನೆಯ ಭರವಸೆಯನ್ನು ಬಿಜೆಪಿ ನೀಡಿದೆ.
2019-2022ರ ನಡುವಿನ ಅವಧಿಯಲ್ಲಿ ನಿರುದ್ಯೋಗದ ಪ್ರಮಾಣ ಶೇಕಡಾ 22.9ರಷ್ಟು ಹೆಚ್ಚಾಗಿದೆ. 2021ರ ಅವಧಿಯಲ್ಲಿ ರಾಜ್ಯದಲ್ಲಿ ನಿರುದ್ಯೋಗದ ಕಾರಣದಿಂದಾಗಿ 1,129 ಯುವಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ 1,258 ಕಂಪೆನಿಗಳು ರಾಜ್ಯದಲ್ಲಿ ಮುಚ್ಚಿ 60,000 ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಸಾರ್ವಜನಿಕ ಕ್ಷೇತ್ರದ 13 ಉದ್ಯಮಗಳು ಮುಚ್ಚಿವೆ.
ಈ ಅನಾಹುತಗಳಿಗೆಲ್ಲ ಕಾರಣವಾದ ಬಿಜೆಪಿ ಈಗ ಸಮನ್ವಯ ಎಂಬ ಹೊಸ ಯೋಜನೆಯ ಭರವಸೆಯನ್ನು ನೀಡಿದರೆ ನಂಬುವವರು ಯಾರು?
ಐಎಎಸ್/ಕೆಎಎಸ್/ ಬ್ಯಾಂಕಿಂಗ್/ ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಪರೀಕ್ಷಾ ತಯಾರಿಯ ಕೋಚಿಂಗ್ ಪಡೆಯಲು ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದೆ.
ಕಳೆದ ಮೂರುವರೆ ವರ್ಷಗಳಲ್ಲಿ ಪಿಎಸ್‌ಐ, ಕೆಪಿಟಿಸಿಎಲ್ ನೇಮಕಾತಿ ಸೇರಿದಂತೆ ಉದ್ಯೋಗ ನೇಮಕಾತಿಯ ಎಲ್ಲ ನಿರ್ಧಾರಗಳು ಅಂತಿಮವಾಗಿ ಲಂಚ/ಕಮಿಷನ್ ಪಡೆದಿರುವ ಹಗರಣಗಳಾಗಿವೆ.
ಮುನ್ಸಿಪಲ್ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ 400 ‘’ನಮ್ಮ ಕ್ಲಿನಿಕ್’’ ಗಳನ್ನು ತೆರೆಯಲಾಗುವುದು ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಈ ಯೋಜನೆಯನ್ನು 2022-23ರ ಬಜೆಟ್ ನಲ್ಲಿ ಬಿಜೆಪಿ ಸರ್ಕಾರ ಘೋಷಿಸಲಾಗಿದ್ದರೂ ಇಲ್ಲಿಯ ವರೆಗೆ ನೂರು “ನಮ್ಮ ಕ್ಲಿನಿಕ್” ಗಳನ್ನು ತೆರೆದಿಲ್ಲ.
ರಾಜ್ಯ ಬಿಜೆಪಿ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಮೊದಲು 2018ರ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಎಷ್ಟು ಭರವಸೆಗಳನ್ನು ಈಡೇರಿಸಿದೆ ಎಂಬ ವರದಿಯನ್ನು ಬಿಡುಗಡೆ ಮಾಡಬೇಕಾಗಿತ್ತು.
ಕಳೆದ ಚುನಾವಣೆಯ ಪೂರ್ವದಲ್ಲಿ ರಾಜ್ಯ ಬಿಜೆಪಿ ಬಿಡುಗಡೆಗೊಳಿಸಿದ್ದ ಪ್ರಣಾಳಿಕೆಯಲ್ಲಿನ 600ಕ್ಕೂ ಹೆಚ್ಚು ಭರವಸೆಗಳಲ್ಲಿ ಶೇಕಡಾ ಹತ್ತರಷ್ಟು ಭರವಸೆಗಳನ್ನೂ ಈಡೇರಿಸಿಲ್ಲ. ಇದು ಬಿಜೆಪಿಯ ನಿಜವಾದ ಸಾಧನೆ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | 18 ನೇ ವಾರ್ಡ್ ನಲ್ಲಿ ಕೈ ಅಭ್ಯರ್ಥಿ ಸಮರ್ಥ ಶಾಮನೂರು ಪ್ರಚಾರ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರು ಮಂಗಳವಾರ 18 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದರು.
ನಗರದ ಬಾರ್ ಲೈನ್ ದರ್ಗಕ್ಕೆ ತೆರಳಿ ಚಾದರ ಅರ್ಪಿಸಿದ ಸಮರ್ಥ ಶಾಮನೂರು ಅವರಿಗೆ ಮುಸ್ಲಿಂ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ಪ್ರಚಾರವನ್ನು ಆರಂಭಿಸಿದ ಅವರು ಎಂ.ಬಿ ಕೇರಿ, ಮಟನ್ ಮಾರ್ಕೇಟ್, ಗಡಿಯಾರ ಕಂಬ, ಸ್ವಾಗೇರ್ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಯ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಪ್ಪ, ರವಿಕುಮಾರ್, ಕಾಶಿನಾಥ್ ಅವರ ಮನೆಗೆ ಅಭ್ಯರ್ಥಿ ಸಮರ್ಥ ಶಾಮನುರು ಅವರು ಭೇಟಿ ನೀಡಿದಾಕ್ಷಣ ಕುಟುಂಬಸ್ಥರು ದಿವಂಗತರಾದ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಭಾವುಕರಾದರು. ಶಾಮನೂರು ಸಮರ್ಥ ಅವರಿಗೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಂಡ ಬಹುಮತವನ್ನು ನೀಡಿ ಗೆಲ್ಲಿಸುತ್ತೇವೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರಾದ ಚಂದ್ರ ಶೇಖರ್, ಸೋಗಿ ಶಾಂತಕುಮಾರ್, ಪ್ರವೀಣ್ ರಾವ್, ಬಕ್ಕೇಶ್, ಪರಮೇಶ್, ಜಯರಾಜ್, ಹನುಮಂತ್, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ
ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.
ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


