ದಿನದ ಸುದ್ದಿ
ಇದೊಂದು ‘’ಅಡ್ಡಕಸುಬಿ’’ ಬಜೆಟ್ : ಸಿದ್ದರಾಮಯ್ಯ ಟೀಕೆ
ಸುದ್ದಿದಿನ,ಬೆಂಗಳೂರು : ಬಜೆಟ್ ತಯಾರಿಕೆ ಎನ್ನುವುದು ಗಂಭೀರವಾದ ಪವಿತ್ರ ಕಾರ್ಯ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಮಂಡಿಸಿದ ಬಜೆಟ್ ನೋಡಿದರೆ ಇದೊಂದು ‘’ಅಡ್ಡಕಸುಬಿ’’ ಬಜೆಟ್‌ನಂತೆ ಕಾಣುತ್ತಿದೆ. ಇದರಲ್ಲಿ ಅರ್ಥಶಾಸ್ತ್ರವೂ ಇಲ್ಲ, ಗಣಿತವೂ ಇಲ್ಲ, ವೃತ್ತಿಪರತೆಯೂ ಇಲ್ಲ. ಎಲ್ಲವೂ ಅಸ್ಪಷ್ಟ, ಗೊಂದಲಮಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗುರುವಾರ ಮುಖ್ಯ ಮಂತ್ರಿ ಯಡಿಯೂರಪ್ಪ ಮಂಡಿಸಿದ ಬಜೆಟ್ ಉದ್ದೇಶಿಸಿ ಪ್ರತಿಕ್ರಿಯೆ ನೀಡಿದ ಅವರು, 2013ರ ನನ್ನ ಮೊದಲ ಬಜೆಟ್ ಹಾಗೂ 2018ರ ಕೊನೆಯ ಬಜೆಟ್ ಗಾತ್ರದ ನಡುವಿನ ವ್ಯತ್ಯಾಸ ರೂ.1.16.000 ಕೋಟಿ. ಈ ಬಾರಿಯ ಬಜೆಟ್ ಗಾತ್ರ ಹಿಂದಿನ ಬಜೆಟ್‌ಗಿಂತ ಕೇವಲ ರೂ.4.000 ಕೋಟಿ ಹೆಚ್ಚಿದೆ ಅಂದರೆ 1.5% ಹೆಚ್ಚಾಗಿದೆ ಅಷ್ಟೆ. ಹೀಗಾದಾಗ ಎಲ್ಲಾ ವಲಯಗಳ ಅಭಿವೃದ್ಧಿಗೆ ಅಗತ್ಯ ಪ್ರಾಶಸ್ತ್ಯ ನೀಡಲು ಸಾಧ್ಯವಿಲ್ಲ. 14ನೇ ಹಣಕಾಸು ಆಯೋಗದ ಪ್ರಕಾರ ನಮ್ಮ ರಾಜ್ಯಕ್ಕೆ 4.71% ಅನುದಾನ ಹಂಚಿಕೆಯಾಗಿತ್ತು. ಇತ್ತೀಚೆಗೆ ಮಂಡಿಸಲಾದ 15ನೇ ಹಣಕಾಸು ಆಯೋಗದ ಪ್ರಕಾರ ನಮ್ಮ ಹಂಚಿಕೆ ಪಾಲು 3.64%ಗೆ ಇಳಿಕೆಯಾಗಿದೆ. ಇದರಿಂದ ರೂ.11,215 ಕೋಟಿ ನಷ್ಟವಾಗಿದೆ. ಯಡಿಯೂರಪ್ಪ ಅವರು ಎಲ್ಲದಕ್ಕೂ ಬಜೆಟ್ ಮೂಲಕ ಉತ್ತರಿಸುತ್ತೇನೆ ಅಂತಿದ್ರು, ಈಗೇನು ಹೇಳ್ತಾರೆ? ಎಂದು ಪ್ರಶ್ನಿಸಿದರು.
ಮಹದಾಯಿ ಯೋಜನೆಗೆ ರೂ.500 ಕೋಟಿ, ಎತ್ತಿನಹೊಳೆ ಯೋಜನೆಗೆ ರೂ.1,500 ಕೋಟಿ, ತುಂಗಭದ್ರಾ ಜಲಾಶಯದ ಹೂಳೆತ್ತಲು ರೂ.20 ಕೋಟಿ ಅನುದಾನ ನೀಡಲಾಗುವುದು ಎಂದು ಬಜೆಟ್‍ನಲ್ಲಿ ಹೇಳಲಾಗಿದೆ. ರಾಜ್ಯದ ಎರಡು ಜೀವನದಿಗಳಾದ ಕೃಷ್ಣ ಮೇಲ್ದಂಡೆ ಮತ್ತು ಕಾವೇರಿ ನದಿ ಯೋಜನೆಗಳ ಅನುದಾನದ ಬಗ್ಗೆ ಬಜೆಟ್‍ನಲ್ಲಿ ಯಾವ ಉಲ್ಲೇಖವು ಇಲ್ಲ. ಪ್ರಸಕ್ತ ಬಜೆಟ್‌ನಲ್ಲಿ ರೈತರ ಸಾಲಮನ್ನಾದ ಬಗ್ಗೆ ಒಂದಕ್ಷರವೂ ಮಾಹಿತಿ ಇಲ್ಲ. ಹಿಂದಿನ ಸಮ್ಮಿಶ್ರ ಸರ್ಕಾರ ಹಂತ ಹಂತವಾಗಿ ಸಾಲ ಮನ್ನಾ ಮಾಡುವ ಘೋಷಣೆ ಮಾಡಿತ್ತು, ಅದರ ಬಗ್ಗೆ ಕನಿಷ್ಠ ಮಾಹಿತಿಯನ್ನಾದರೂ ನೀಡಬೇಕಲ್ಲವೇ? 2018ರ ಬಜೆಟ್‌ನಲ್ಲಿ ನಾನು ಕೃಷಿ, ತೋಟಗಾರಿಕೆ, ನೀರಾವರಿ, ರೇಷ್ಮೆ, ಹೈನುಗಾರಿಕೆ ಸೇರಿದಂತೆ ಇದಕ್ಕೆ ಸಂಬಂಧಿತ ಚಟುವಟಿಕೆಗಳಿಗೆ ಒಟ್ಟು ರೂ.38,073 ಕೋಟಿ ಅನುದಾನ ಮೀಸಲಿಟ್ಟಿದ್ದೆ. ಪ್ರಸಕ್ತ ಬಜೆಟ್‌ನಲ್ಲಿ ಇದನ್ನು ರೂ.32,259 ಕೋಟಿಗೆ ಇಳಿಕೆ ಮಾಡಲಾಗಿದೆ. ಹಾಗಿದ್ದರೆ, ಇದು ಹೇಗೆ ರೈತಪರ ಬಜೆಟ್ ಆಗಲು ಸಾಧ್ಯ? ಎಂದರು.
ಶಿಕ್ಷಣ ಕ್ಷೇತ್ರಕ್ಕೆ 2018-19ರಲ್ಲಿ ರೂ.26,864 ಕೋಟಿ ಮೀಸಲಿರಿಸಿದ್ದೆ. ಅಂದರೆ ಒಟ್ಟಾರೆ ಬಜೆಟ್‍ನ ಶೇ.12 ಪಾಲು ಇತ್ತು. ಈ ಬಾರಿ ರೂ.29,768 ಕೋಟಿ ಮೀಸಲಿಡಲಾಗಿದೆ. ಅಂದರೆ ಶೇ.11 ಮಾತ್ರ. ಹಿಂದಿಗಿಂತ ಶೇ.1 ರಷ್ಟು ಕಡಿಮೆ ಮಾಡಲಾಗಿದೆ. ಈ ಅನುದಾನ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣಬೇಕೆ ಹೊರತು ಕಡಿಮೆಯಾಗಬಾರದು. ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಕಳೆದ ಬಾರಿ ರೂ.30,150 ಕೋಟಿ ಅನುದಾನ ನೀಡಲಾಗಿತ್ತು. ಈ ಬಾರಿ ರೂ.26,131 ಕೋಟಿ ನೀಡಲಾಗಿದೆ. ಸುಮಾರು ರೂ.4000 ಕೋಟಿ ಅನುದಾನ ಕಡಿಮೆಯಾಗಿದೆ. ಬಜೆಟ್ ಗಾತ್ರ ಹೆಚ್ಚಾದಂತೆ ಈ ಅನುದಾನದ ಗಾತ್ರ ಕೂಡ ಹೆಚ್ಚಾಗಬೇಕು. ಇದು ಬಿಜೆಪಿ ಸಾಮಾಜಿಕ ನ್ಯಾಯದ ವಿರೋಧಿ ಎಂಬುದನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
‘ಸಬ್ ಕ ಸಾಥ್, ಸಬ್ ಕ ವಿಕಾಸ್’ ಎನ್ನುವ ಬಿಜೆಪಿ ನಾಯಕರು ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. 5 ಅಲ್ಪಸಂಖ್ಯಾತ ವಸತಿ ಶಾಲೆಗಳ ಅಭಿವೃದ್ಧಿಪಡಿಸುವ ಯೋಜನೆ ಹೊರತುಪಡಿಸಿದರೆ ಈ ಸಮುದಾಯದ ಅಭಿವೃದ್ಧಿಗೆ ಬೇರೆಲ್ಲೂ ನಯಾಪೈಸೆ ಅನುದಾನ ನೀಡುವ ಕುರಿತು ಬಜೆಟ್‌ನಲ್ಲಿ ತಿಳಿಸಿಲ್ಲ. ಬಿಜೆಪಿ ಸರ್ಕಾರದ ‘ಕಲ್ಯಾಣ ಕರ್ನಾಟಕ’ ಎಂಬುದು ಬರೀ ಘೋಷಣೆಗಷ್ಟೇ ಸೀಮಿತವಾಗಿದೆ. ನಮ್ಮ ಸರ್ಕಾರದ ಕಡೆಯ ಎರಡು ಬಜೆಟ್‌ನಲ್ಲಿ ಈ ಭಾಗದ ಅಭಿವೃದ್ಧಿಗೆ ತಲಾ ರೂ.1,500 ಕೋಟಿ ಅನುದಾನ ನೀಡಿದ್ದೆ, ಈ ಬಾರಿಯೂ ಅಷ್ಟೇ ಅನುದಾನವನ್ನು ಮೀಸಲಿಡಲಾಗಿದೆ. ಹೆಸರು ಬದಲಾಯಿಸಿದ ಮಾತ್ರಕ್ಕೆ ಈ ಭಾಗದ ಕಲ್ಯಾಣವಾಗುತ್ತದೆಯೇ? ಎಂದು ಹೇಳಿದರು.
ರೂ.18,000 ಕೋಟಿ ವೆಚ್ಚದ ಉಪನಗರ ರೈಲು ಯೋಜನೆಗೆ ರಾಜ್ಯವು ಕೇವಲ ರೂ.500 ಕೋಟಿ ಅನುದಾನ ಮೀಸಲಿರಿಸಿದೆ. ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ರೂ.1 ಕೋಟಿ ಅನುದಾನ ಮೀಸಲಿಟ್ಟಿದೆ. ಇಷ್ಟು ಕಡಿಮೆ ಅನುದಾನದಲ್ಲಿ ಈ ಯೋಜನೆ ಆರಂಭವಾಗುವ ಸಾಧ್ಯತೆಗಳೇ ಇಲ್ಲ. ಹೀಗಾದರೆ ನಗರದ ಸಂಚಾರ ದಟ್ಟಣೆ ನಿವಾರಿಸುವುದು ಹೇಗೆ? 2018-19ರಲ್ಲೇ ನಾನು ನಗರೋತ್ಥಾನ ಯೋಜನೆಯಡಿ ರೂ.10,000 ಕೋಟಿಗಳನ್ನು ಬೆಂಗಳೂರು ನಗರವೊಂದಕ್ಕೆ ನೀಡಿದ್ದೆ. ಈ ಬಾರಿ ರೂ.8,772 ಕೋಟಿಗಳನ್ನು ಮೀಸಲಿರಿಸಲಾಗಿದೆ. ಯಡಿಯೂರಪ್ಪ ಅವರು 6 ತಿಂಗಳಲ್ಲಿ ಬೆಂಗಳೂರು ಚಿತ್ರಣ ಬದಲಿಸುತ್ತೀನಿ ಅಂದಿದ್ರು. ಅಧಿಕಾರಕ್ಕೆ ಬಂದು 7 ತಿಂಗಳಾಯ್ತು, ನಗರದ ಚಿತ್ರಣ ಬದಲಾಗಿದೆಯೇ? ಎಂದು ನುಡಿದರು.
ಮೊನ್ನೆತಾನೆ ಶೇ.10 ರಷ್ಟು ಬಸ್ ದರವನ್ನು ಹೆಚ್ಚಿಸಲಾಗಿತ್ತು. ಏಪ್ರಿಲ್-2020 ರಿಂದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.1.60, ಡಿಸೇಲ್ ಬೆಲೆ ರೂ.1.59 ರಷ್ಟು ಹೊಸ ತೆರಿಗೆ ಪ್ರಕಾರ ಏರಿಕೆಯಾಗಲಿದೆ. ಇದರ ಜೊತೆಗೆ ಸ್ಲೀಪರ್ ಕೋಚ್ ಬಸ್ ಹಾಗೂ ಮಿನಿ ಬಸ್‌ಗಳ ಮೇಲೆ ಹೊಸದಾಗಿ ಹೆಚ್ಚುವರಿ ತೆರಿಗೆ ವಿಧಿಸಲು ಹೊರಟಿದ್ದಾರೆ. ವಿತ್ತೀಯ ಜವಾಬ್ದಾರಿ ನೀತಿಯಲ್ಲೇ ಸಾಲ ಪಡೆಯಲು ಅವಕಾಶಗಳಿದ್ದರೂ ನಮ್ಮ ಸರ್ಕಾರವಿದ್ದಾಗ ಸಾಲ ಮಾಡಿ ಹೋಳಿಗೆ ತಿನ್ನುತ್ತೀರಿ ಎಂದು ಬಿಜೆಪಿಯವರು ಹಂಗಿಸುತ್ತಿದ್ದರು. ಈಗ ಅವರೇ ರೂ.52,000 ಕೋಟಿ ಸಾಲ ಮಾಡಲು ಹೊರಟಿದ್ದಾರೆ. ಇದೊಂದು ರೀತಿ ‘ಆಚಾರ ಹೇಳೋಕೆ, ಬದನೆಕಾಯಿ ತಿನ್ನೋಕೆ’ ಎಂಬಂತೆ ಆಯಿತಲ್ಲವೇ? ಎಂದು ಟೀಕಿಸಿದರು.
ರಾಜ್ಯದ 44 ಇಲಾಖೆಗಳನ್ನು ಆರು ವಲಯಗಳಲ್ಲಿ ವಿಂಗಡಿಸಿ ಇಲಾಖಾವಾರು ಯೋಜನೆ ಮತ್ತು ಅನುದಾನಗಳನ್ನು ಪ್ರತ್ಯೇಕವಾಗಿ ನಮೂದಿಸದೆ ತೆರಿಗೆದಾರರ ದಾರಿ ತಪ್ಪಿಸುವ ಹುನ್ನಾರವನ್ನು ಬಜೆಟ್‌ನಲ್ಲಿ ಕಾಣಬಹುದು. ತಮ್ಮ ಆಡಳಿತದ ವೈಫಲ್ಯವನ್ನು ಮುಚ್ಚಿಹಾಕಲು ಇಂತಹದ್ದೊಂದು ಕುತಂತ್ರವನ್ನು ಮಾಡಿದ ಹಾಗೆ ಕಾಣುತ್ತಿದೆ. ಮುಖ್ಯಮಂತ್ರಿಗಳು ಬಜೆಟ್ ತಯಾರಿಕೆಯನ್ನು ಗಂಭೀರವಾಗಿ ಸ್ವೀಕರಿಸದೆ ಕಾಟಾಚಾರಕ್ಕೆ ಮಾಡಿ ಮುಗಿಸಿದಂತಿದೆ. ಈ ಬಜೆಟ್‌ನ ಇನ್ನಷ್ಟು ಹುಳುಕುಗಳನ್ನು ಒಂದೊಂದಾಗಿ ಮುಂದಿನ ದಿನಗಳಲ್ಲಿ ಜನತೆಯ ಮುಂದೆ ಬಿಚ್ಚಿಡುತ್ತೇನೆ ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
AI ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ಪ್ರಕಟ
ಸುದ್ದಿದಿನಡೆಸ್ಕ್:ಕೃತಕ ಬುದ್ಧಿಮತ್ತೆ ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಟೈಮ್ ಪತ್ರಿಕೆ ಪ್ರಕಟಿಸಿದ್ದು, ಅದರಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಸ್ಥಾನ ಪಡೆದಿದ್ದಾರೆ.
ಅಶ್ವಿನಿ ವೈಷ್ಣವ್ ಅವರನ್ನು ಶಾರ್ಪರ್ ವರ್ಗದಲ್ಲಿ ಹೆಸರಿಸಲಾಗಿದ್ದು, ಅವರ ನಾಯಕತ್ವದಲ್ಲಿ ಮುಂದಿನ 5 ವರ್ಷಗಳಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಕ್ಷೇತ್ರದ ಮೊದಲ 5 ದೇಶಗಳಲ್ಲಿ ಭಾರತ ಸ್ಥಾನ ಪಡೆಯುವ ಆಶಯದಲ್ಲಿದೆ ಎಂದು ಟೈಮ್ ಮ್ಯಾಗ್‌ಜೀನ್ ಬರೆದಿದೆ.
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತವನ್ನು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿಸುವ ಪ್ರಯತ್ನದಲ್ಲಿ ಸಚಿವರು ನಿರ್ವಹಿಸಿದ ಮಹತ್ವದ ಪಾತ್ರದ ಹಿನ್ನೆಲೆಯಲ್ಲಿ ಪಟ್ಟಿಯಲ್ಲಿ ಅವರ ಹೆಸರು ನಮೂದಿತವಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.
ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಕೊಡುಗೆ ನೀಡಿದ ಇನ್ಫೋಸೀಸ್‌ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ, ಸಿಇಓಗಳಾದ ಗೂಗಲ್‌ನ ಸುಂದರ್ ಪಿಚಾಯಿ, ಮೈಕ್ರೋಸಾಫ್ಟ್‌ನ ಸತ್ಯ ನಾದೆಲ್ಲಾ, ಓಪನ್‌ಎಐ ನ ಸ್ಯಾಮ್ ಅಲ್ಟ್‌ಮನ್, ಮೆಟಾದ ಮಾರ್ಕ್ ಝುಕೇರ್‌ಬರ್ಗ್ ಟೈಮ್ ಪ್ರಕಟಿಸಿದ ಪಟ್ಟಿಯಲ್ಲಿ ಸೇರಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಾಜಧಾನಿಯಲ್ಲಿ ಅಪಾಯಕಾರಿ ಮರಗಳನ್ನು ಕತ್ತರಿಸುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ
ಸುದ್ದಿದಿನಡೆಸ್ಕ್:ರಾಜಧಾನಿ ಬೆಂಗಳೂರಿನಲ್ಲಿ 15 ದಿನದೊಳಗೆ ಗುಂಡಿ ಮುಚ್ಚುವಂತೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಸೂಚಿಸಿದ್ದಾರೆ.
ವಿದೇಶ ಪ್ರವಾಸಕ್ಕೂ ಮುನ್ನ ವೈಯಾಲಿಕಾವಲ್ ಬಿಬಿಎಂಪಿ ಕಚೇರಿಯಲ್ಲಿ ಅಧಿಕಾರಿಗಳ ಜತೆ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಇಂದು ಸಭೆ ನಡೆಸಿದ ಅವರು ಸರಿಯಾಗಿ ಕಾರ್ಯನಿವಹಿಸದ ಅಧಿಕಾರಿಗಳನ್ನು ಅಮಾನತುಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಸೆಪ್ಟಂಬರ್‌ನಲ್ಲಿ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ತಿಳಿಸಿದ ಅವರು, ಅಪಾಯಕಾರಿ ಮರಗಳಿದ್ದರೆ, ಕತ್ತರಿಸುವಂತೆ ಸೂಚಿಸಿದ್ದಾರೆ.
ಯಾವುದೇ ದೂರು ಬಂದರೆ ಅಧಿಕಾರಿಗಳೇ ನೇರ ಹೊಣೆ ಎಂದಿದ್ದಾರೆ. ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ಮೌನೀಶ್ ಮೌದ್ಗೀಲ್, ಬಿಎಂಆರ್ಡಿಎ ಆಯುಕ್ತ, ಉಪಮುಖ್ಯಮಂತ್ರಿಗಳ ಕಾರ್ಯದರ್ಶಿ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮಹದಾಯಿ ವಿಚಾರದಲ್ಲಿ ತಪ್ಪು ದಾರಿಗೆ ಎಳೆಯುವ ಪ್ರಯತ್ನ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪ
ಸುದ್ದಿದಿನಡೆಸ್ಕ್:ಮಹದಾಯಿ ವಿಚಾರದಲ್ಲಿ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಹದಾಯಿ ಯೋಜನೆಯ ಹಿನ್ನಡೆಗೆ ಕಾಂಗ್ರೆಸ್ ಕಾರಣ ಎಂದು ದೂರಿದ್ದಾರೆ. ಜುಲೈನಲ್ಲಿ ನಡೆದ ಸಭೆ ತಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ ಅವರು, ರಾಜ್ಯದ ಜನರ ಹಿತ ಕಾಪಾಡಲು ಬದ್ಧ ಎಂದು ಹೇಳಿದ್ದಾರೆ. ಮಹದಾಯಿ ಕೇವಲ ಗೋವಾ ಸಂಬಂಧಿ ಯೋಜನೆ ಅಲ್ಲ. ಅಲ್ಲಿ ಹುಲಿ ಸಂರಕ್ಷಿತ ಪ್ರದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ5 days ago
ಪರಿಶಿಷ್ಟ ಜಾತಿ ಯುವಕ , ಯುವತಿಯರಿಗೆ ಜಿಮ್ ಫಿಟ್ನೆಸ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ರಾಯಚೂರು | ಶಾಲಾ ಬಸ್ ಅಪಘಾತ ; ಇಬ್ಬರು ವಿದ್ಯಾರ್ಥಿಗಳು ಸಾವು
-
ದಿನದ ಸುದ್ದಿ4 days ago
ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ
-
ದಿನದ ಸುದ್ದಿ5 days ago
ಸರ್ಕಾರಿ ಐಟಿಐ ಪ್ರವೇಶಕ್ಕೆ ಆಹ್ವಾನ
-
ದಿನದ ಸುದ್ದಿ3 days ago
ಆತ್ಮಕತೆ | ಸರಳ ಹಾಗೂ ಒಲವಿನ ಮದುವೆಗಳ ಸಾಲುಸಾಲು
-
ದಿನದ ಸುದ್ದಿ4 days ago
ಭಾನುವಾರವೂ ಕ್ಯಾಶ್ ಕೌಟರ್ ಓಪನ್ ; ವಿದ್ಯುತ್ ಬಿಲ್ ಬಾಕಿ ಪಾವತಿಸಿ : ಬೆಸ್ಕಾಂ
-
ದಿನದ ಸುದ್ದಿ4 days ago
ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ
-
ದಿನದ ಸುದ್ದಿ3 days ago
ರಿವರ್ ಕ್ರಾಸಿಂಗ್ ತರಬೇತಿ ; ಬೋಟ್ ಮುಳುಗಿ ಇಬ್ಬರು ಕಮಾಂಡೋಗಳು ಸಾವು