ದಿನದ ಸುದ್ದಿ
‘ಧರ್ಮಕ್ಕಾಗಿ ಕೊಲ್ಲು’ ಎಂಬ ದುಷ್ಟ ವ್ಯಾಖ್ಯಾನ ಮಾಡಿ ಶೂದ್ರ, ದಲಿತ ಮಕ್ಕಳನ್ನು ಹಾದಿ ತಪ್ಪಿಸಲಾಗುತ್ತಿದೆ : ಸಿದ್ದರಾಮಯ್ಯ ಆತಂಕ
ಸುದ್ದಿದಿನ ಡೆಸ್ಕ್ : ಪ್ರೀತಿಯ ಯುವ ಬಂಧುಗಳೆ, ರಾಜ್ಯದಲ್ಲಿ, ಮುಖ್ಯವಾಗಿ ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ನನ್ನನ್ನು ಆತಂಕಿತಗೊಳಿಸಿವೆ, ನೋವಿನಲ್ಲಿ ಮುಳುಗಿಸಿವೆ. ಬಾಳಿ ಬದುಕಬೇಕಾದ ಯುವಕರು ಕ್ಷುಲ್ಲಕ ಕಾರಣಗಳಿಗಾಗಿ, ಕೆಲವೊಮ್ಮೆ ಕಾರಣಗಳೆ ಇಲ್ಲದೆ (Murders) ಹತ್ಯೆಗೀಡಾಗುತ್ತಿರುವುದನ್ನು ಕನ್ನಡ ನಾಡಿನ ಆತ್ಮಸಾಕ್ಷಿ ಸಹಿಸಬಾರದು. ದುಡಿಯುವ ಜಾತಿ, ಪಂಗಡ, ಧರ್ಮಗಳಿಗೆ ಸೇರಿದ ಮಕ್ಕಳು ವಿನಾ ಕಾರಣ ಹತ್ಯೆಯಾಗುತ್ತಿರುವುದನ್ನು ಯಾವ ನಾಗರಿಕ ಸಮಾಜವೂ ಸಹಿಸಲಾಗದು. ಸಹಿಸಬಾರದು. ಶಾಂತಿ, ಸೌಹಾರ್ದತೆಗೆ ಹೆಸರಾದ ಕರ್ನಾಟಕವನ್ನು ವಿನಾ ಕಾರಣ ಅಶಾಂತಿಯ ಕಡಲಲ್ಲಿ ಮುಳುಗಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ( Siddaramaiah) ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ (Social media) ಅಭಿಪ್ರಾಯ ಹಂಚಿಕೊಂಡಿರುವ ಅವರು, ನಾಡಿನ ಆತ್ಮಸಾಕ್ಷಿಯಂತಿದ್ದ ಪೂರ್ಣಚಂದ್ರ ತೇಜಸ್ವಿಯವರು ಒಮ್ಮೆ ‘ಕೊಂದು ಉಳಿಸಿಕೊಳ್ಳುವ ಧರ್ಮವಿದ್ದರೆ ಅದನ್ನು ಧರ್ಮವೆನ್ನಲಾಗುತ್ತದೆಯೇ’ ಎಂದು ಪ್ರಶ್ನಿಸಿದ್ದರು. ಬಸವಣ್ಣನವರು ‘ಕೊಂದವರುಳಿದರೆ ಕೂಡಲ ಸಂಗಮದೇವಾ’ ಎಂದು ಆರ್ತವಾಗಿ ಕೇಳಿದ್ದರು. ಧರ್ಮಕ್ಕಾಗಿ ಕೊಲೆ ಮಾಡಿದ್ದೇವೆ ಎನ್ನುವವರನ್ನು ಯಾವ ದೇವರೂ ಕ್ಷಮಿಸುವುದಿಲ್ಲ ಎಂಬ ಮಾತುಗಳನ್ನು ಗುರು ಹಿರಿಯರು ಹೇಳುತ್ತಲೇ ಬಂದಿದ್ದಾರೆ.
ಧರ್ಮವನ್ನು ನೀನು ರಕ್ಷಿಸಿದರೆ ಅದೆ ಧರ್ಮವು ನಿನ್ನನ್ನು ರಕ್ಷಿಸುತ್ತದೆ ಎಂಬ ಮಹಾಭಾರತದ ಮಾತುಗಳನ್ನು ಕೆಲವು ಮತಾಂಧರು ಹಾಗೂ ನಿರ್ಧಿಷ್ಟ ಹಿತಾಸಕ್ತಿಯುಳ್ಳ ಜನರು ಅದರ ಅರ್ಥವನ್ನೆ ಕುಗ್ಗಿಸಿದ್ದಾರೆ. ದಯೆ, ಕರುಣೆ, ಅಸಹಾಯಕರ ರಕ್ಷಣೆ ಮುಂತಾದ ಉದಾತ್ತವಾದ ವಿಶ್ವ ಆದರ್ಶದ ಮಾತುಗಳನ್ನು ತಿರುಚಿ ಧರ್ಮಕ್ಕಾಗಿ ಕೊಲ್ಲು ಎಂಬ ದುಷ್ಟ ವ್ಯಾಖ್ಯಾನ ಮಾಡಿ ಶೂದ್ರ, ದಲಿತ ಮಕ್ಕಳನ್ನು ಹಾದಿ ತಪ್ಪಿಸಲಾಗುತ್ತಿದೆ.
ಇಸ್ಲಾಮಿನ ಉದಾತ್ತ ತತ್ವಗಳನ್ನು ಮತ್ತು ಶಾಂತಿ, ಸತ್ಯಗಳನ್ನು ಮುಂದು ಮಾಡುವ ಬದಲು ಅಪವ್ಯಾಖ್ಯಾನ ಮಾಡುವ ದುಷ್ಟರಿಂದಾಗಿ ಮುಸ್ಲಿಂ ಬಡ ಯುವಕರ ಮೆದುಳೂ ಹಾಳಾಗುತ್ತಿದೆ. ಹಿಂದುವಿನ ಕೊಲೆಗೆ ಪ್ರತೀಕಾರವಾಗಿ ಕೈಗೆ ಸಿಕ್ಕ ಯಾರಾದರೂ ಮುಸ್ಲಿಮನನ್ನು ಕೊಲ್ಲು, ಮುಸ್ಲಿಮನ ಕೊಲೆಗೆ ಪ್ರತೀಕಾರವಾಗಿ ಕೈಗೆ ಸಿಕ್ಕ ಯಾರಾದರೂ ಹಿಂದುವನ್ನು ಕೊಲ್ಲು ಎಂಬ ಕ್ರೌರ್ಯವನ್ನು ಈ ಮಕ್ಕಳ ತಲೆಗೆ ತುಂಬಿದವರು ಯಾರು? ಅಂಥ ಕ್ರೌರ್ಯವನ್ನು ವ್ಯವಸ್ಥಿತವಾಗಿ ತುಂಬಿದವರನ್ನು ಅಪರಾಧಿಗಳನ್ನಾಗಿ ಮಾಡುವ ಕಾನೂನಿನ ಅವಶ್ಯಕತೆ ಎಲ್ಲಕ್ಕಿಂತ ಹೆಚ್ಚಾಗಿದೆ.
ಇದನ್ನೂ ಓದಿ | ನಮ್ಮ ಸರ್ಕಾರದ ಕಾಲದಲ್ಲಿ ನಡೆದ ಕೋಮುಹಿಂಸಾಚಾರ ಮತ್ತು ಕೈಗೊಂಡ ಕ್ರಮಗಳ ಪುಸ್ತಕವನ್ನೇ ಪ್ರಕಟಿಸಿದ್ದೇವೆ, ಓದಿಕೊಳ್ಳಿ : ಸಿದ್ದರಾಮಯ್ಯ
ದುಷ್ಟರ ತಾಳಕ್ಕೆ ತಕ್ಕಂತೆ ಈ ಬೇಜವಾಬ್ಧಾರಿ ಸರ್ಕಾರವೂ ಕುಣಿಯುತ್ತಿದೆ ಅಥವಾ ಸರ್ಕಾರದ ಕ್ರೂರವಾದ, ಪಕ್ಷಪಾತಿಯಾದ ಕ್ರೂರ ದೊರೆ ಹಮ್ಮುರಾಬಿ ಕಾಲದ ನಿಲುವುಗಳೆ ಅಮಾಯಕ ಮಕ್ಕಳ ಕೊಲೆಗಳಿಗೆ ಕಾರಣವಾಗುತ್ತಿವೆ ಎಂಬ ಅನುಮಾನ ಕೂಡ ಬರುತ್ತಿದೆ. ಬ್ಯಾಬಿಲೋನಿಯಾದಲ್ಲಿ ಸುಮಾರು 3800 ವರ್ಷಗಳ ಹಿಂದೆ ಹಮ್ಮುರಾಬಿ ಎಂಬ ರಾಜನಿದ್ದ, ಆತ ಕಾನೂನೊಂದನ್ನು ಜಾರಿಗೆ ತಂದಿದ್ದ. ಯಾರಾದರೂ ಇನ್ನೊಬ್ಬರ ಕಣ್ಣಿಗೆ ಹಾನಿ ಮಾಡಿದರೆ ಹಾನಿ ಮಾಡಿದವನ ಕಣ್ಣುಗಳನ್ನು ಕಿತ್ತು ಹಾಕುವ, ಕೊಲೆ ಮಾಡಿದರೆ ಕೊಲೆ ಮಾಡುವ, ಕೈ ಕಾಲು ಊನವಾದರೆ, ಊನ ಮಾಡಿದವನ ಅಂಗಾಂಗಗಳನ್ನು ಊನ ಮಾಡುವ ಬರ್ಬರ ಕಾನೂನುಗಳನ್ನು ಜಾರಿಗೆ ತಂದಿದ್ದ.
ಹಮ್ಮುರಾಬಿಯನ್ನು ಜಗತ್ತಿನ ಕ್ರೂರ ದೊರೆ ಎನ್ನಲಾಗುತ್ತದೆ. ನಮ್ಮ ರಾಜ್ಯದ ಬೇಜವಾಬ್ಧಾರಿಯುತ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಕರಾವಳಿಯಲ್ಲಿ ಹೇಳಿದ “ಕ್ರಿಯೆಗೆ ಪ್ರತಿಕ್ರಿಯೆ” ಎಂಬ ಮಾತುಗಳು ಥೇಟ್ ಹಮ್ಮುರಾಬಿಯ ಬರ್ಬರವಾದ, ಅನಾಗರಿಕವಾದ ಕಾನೂನನ್ನೆ ನೆನಪಿಸುತ್ತದೆ. ಕರ್ನಾಟಕದ ಇತಿಹಾಸದಲ್ಲಿ ಬೊಮ್ಮಾಯಿಯವರು 21ನೆ ಶತಮಾನದ ಹಮ್ಮುರಾಬಿ ಎಂದು ಕುಖ್ಯಾತವಾಗುತ್ತಾರೆ.
ನಮ್ಮ ಮಹಾಕಾವ್ಯವಾದ ಮಹಾಭಾರತದಲ್ಲಿ ಕೊಲೆಯನ್ನು ಖಂಡಿಸುವ ಮಾತುಗಳು ಅನೇಕ ಕಡೆ ಬರುತ್ತವೆ. ಮಹಾ ಭಾರತದ ಮೂಲ ಆಶಯವು ಭಗವದ್ಗೀತೆ ಹೇಳುವುದಕ್ಕೆ ಸಂಪೂರ್ಣ ಭಿನ್ನವಾದ ಹಾಗೆ ಕಾಣುತ್ತದೆ. ಈ ಮಹಾಕಾವ್ಯದಲ್ಲಿ ಪಾಂಡವರಿಗೆ ಅಧಿಕಾರ ತಪ್ಪಿಸಿದ ಕೌರವರ ಬಗ್ಗೆ ಅಲ್ಲಿನ ಜನರು ಶಾಪ ಹಾಕುತ್ತಾರೆ. ಆದರೆ ಯುದ್ಧ ಮುಗಿಯುತ್ತದೆ. ಎರಡೂ ಕಡೆಯ ಅಸಂಖ್ಯಾತ ಜನ ಮರಣ ಹೊಂದುತ್ತಾರೆ. ನಾಡಿನ ತುಂಬೆಲ್ಲ ವಿಧವೆಯರು, ತಬ್ಬಲಿಗಳಾದ ಮಕ್ಕಳು, ತಬ್ಬಲಿಗಳಾದ ತಂದೆ ತಾಯಿಗಳ ಕಣ್ಣೀರು ಒರೆಸುವುದಕ್ಕೂ ಜನ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಧರ್ಮರಾಯನ ನೇತೃತ್ವದಲ್ಲಿ ಪಾಂಡವರು ಊರೊಳಗೆ ಪ್ರವೇಶಿಸುತ್ತಾರೆ. ಆಗ ಊರ ಜನ ಪಾಂಡವರನ್ನು ಅತ್ಯಂತ ಕಠಿಣ ಭಾಷೆಯಲ್ಲಿ ನಿಂದಿಸುತ್ತಾರೆ. ಅಧಿಕಾರಕ್ಕಾಗಿ ತಂದೆ ಸಮಾನರನ್ನು, ಗುರುಗಳನ್ನು, ಸೋದರರನ್ನು, ಬಂಧುಗಳನ್ನು, ಅಮಾಯಕರನ್ನು ಕೊಂದ ಕ್ರೂರ ಪಾಂಡವರೆ, ನಿಮ್ಮ ಅಧಿಕಾರ ಜನರ ಸಮಾಧಿಗಳ ಮೇಲಷ್ಟೆ ಎಂದು ಶಾಪ ಹಾಕುತ್ತಾರೆ. ಮಹಾಕವಿ ವ್ಯಾಸಮುನಿಗಳು ಕೊಲೆಗೆ ಕೊಲೆ ಎಂಬ, ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬ ಅನಾಗರಿಕವಾದ, ಬರ್ಬರವಾದ ತತ್ವವನ್ನು ಹೇಸಿಗೆಯೆಂಬಂತೆ ವ್ಯಾಖ್ಯಾನಿಸುತ್ತಾರೆ. ಹಾಗಾಗಿ ಮಹಾಭಾರತ ಕಾವ್ಯ ಜನರ ಕಾವ್ಯವಾಗಿದೆ.
ಕರಾವಳಿಯಲ್ಲಿ ಅಮಾಯಕ ಯುವಕರು ವಿನಾಕಾರಣ ದುರಂತ ಸಾವನ್ನಪ್ಪುತ್ತಿದ್ದಾರೆ. ಕರಾವಳಿ ಜಿಲ್ಲೆಗಳ ದುಡಿಯುವ ಸಮುದಾಯಗಳು ಅತಿ ಜರೂರಾಗಿ ಜಾಗೃತಗೊಳ್ಳಬೇಕು. ಕರಾವಳಿಯ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶೇ.99 ರಷ್ಟು ಅತ್ಯಂತ ಬಡ ಹುಡುಗರು ಹಾಗೂ ಎರಡೆ ಸಮುದಾಯಗಳವರು. ಕೊಲೆಯಾಗುತ್ತಿರುವ ಎರಡೂ ಕಡೆಯ ಹುಡುಗರು ದುಡಿದು, ಕೂಲಿ ಮಾಡಿ ಬದುಕುತ್ತಿರುವವರು. ಈ ಎರಡೂ ಕಡೆಯ ಹುಡುಗರ ಮೆದುಳಿಗೆ ವಿಷ ಹಾಕುತ್ತಿರುವವರು ಮಕ್ಕಳು ಮಾತ್ರ ಬೆಂಗಳೂರು, ಮುಂಬೈ ನಗರಗಳಲ್ಲಿ ಹಾಗೂ ಕೊಲ್ಲಿ ಯುರೋಪು, ಅಮೆರಿಕ ಮುಂತಾದ ದೇಶಗಳಲ್ಲಿ ಲಕ್ಷ, ಕೋಟಿಗಳ ಹೆಸರಲ್ಲಿ ಸಂಬಳ ದುಡಿಯುತ್ತಾ ವಾರದ ಕೊನೆಯಲ್ಲಿ ಲಕ್ಷಾಂತರ ಖರ್ಚು ಮಾಡಿ ಪಾರ್ಟಿ ಮಾಡುತ್ತಾ ಮೋಜು ಮಾಡುತ್ತಿದ್ದಾರೆ. ಜೊತೆಗೆ ಬಹುಪಾಲು ಜನ ಸೋಷಿಯಲ್ ಮೀಡಿಯಾಗಳಲ್ಲಿ ಉಚಿತವಾಗಿ ಧರ್ಮ ಉಳಿಸುವ ಕುರಿತು ಸಲಹೆಗಳನ್ನು ನೀಡುವ ಕ್ರೌರ್ಯವನ್ನು ಮೆರೆಯುತ್ತಿದ್ದಾರೆ. ಬಡವರ ಮಕ್ಕಳನ್ನು ಬೆಂಕಿಗೆ, ಜೈಲಿಗೆ ತಳ್ಳಿ ತಮ್ಮ ಮಕ್ಕಳ ಏಳಿಗೆಗೆ ಸ್ಪರ್ಧೆ ಬರದ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಈ ಕುತಂತ್ರವನ್ನು ದುಡಿದು ಬದುಕುವ ಎಲ್ಲ ಸಮುದಾಯಗಳ ಯುವಕರು ಅರ್ಥ ಮಾಡಿಕೊಳ್ಳಬೇಕು. ಒಳ್ಳೆಯ ಶಿಕ್ಷಣ, ಒಳ್ಳೆಯ ಉದ್ಯೋಗ, ಉದಾತ್ತವಾದ ಆಲೋಚನೆ, ಶಾಂತಿ, ಸಹಬಾಳ್ವೆಗಳು ಮಾತ್ರ ಯುವಜನರನ್ನು ಏಳಿಗೆಯತ್ತ ಕೊಂಡೊಯ್ಯಲು ಸಾಧ್ಯ. ಕರಾವಳಿಯ ಯುವಜನತೆಗೆ ಇದೆಲ್ಲವನ್ನೂ ವ್ಯವಸ್ಥಿತವಾಗಿ ತಪ್ಪಿಸಲಾಗುತ್ತಿದೆ.
ಕರಾವಳಿಯ ಯುವಜನತೆಯಲ್ಲಿ ಕೈ ಮುಗಿದು ವಿನಂತಿಸುತ್ತೇನೆ. ದಯಮಾಡಿ ಸಾಕು ಮಾಡಿ. ಧರ್ಮ, ಕೋಮು ದ್ವೇಷವನ್ನು ದೂರ ಮಾಡಿ. 30 ವರ್ಷಗಳ ಹಿಂದಿದ್ದ ಕರಾವಳಿಯನ್ನು ಮತ್ತೆ ನಿರ್ಮಾಣ ಮಾಡಿ. ವೃದ್ಧಾಪ್ಯದಲ್ಲಿ ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿಗಳನ್ನು, ಎಳೆ ವಯಸ್ಸಿನಲ್ಲಿ ಅಣ್ಣ ತಮ್ಮಂದಿರನ್ನು, ಗಂಡಂದಿರನ್ನು ಕಳೆದುಕೊಂಡವರ ಹೃದಯದ ಬೆಂಕಿಯನ್ನೊಮ್ಮೆ ಅರ್ಥ ಮಾಡಿಕೊಳ್ಳಿ. ಅನಾಥರಾದ ಎಳೆಯ ಮಕ್ಕಳಿಗೆ ಎಷ್ಟು ಹಣ ಕೊಟ್ಟರೆ ತಾನೆ ಅಪ್ಪಂದಿರನ್ನು ತಂದುಕೊಡಲು ಸಾಧ್ಯವೆ? ಬದುಕಿದ್ದು ಶಾಶ್ವತ ಜೈಲಿಗೆ ಹೋದವರ ಕುಟುಂಬಗಳ ಕಷ್ಟ ದುಃಖಗಳನ್ನು ಒಮ್ಮೆ ನೆನೆಯಿರಿ, ವಕೀಲರುಗಳಿಗೆ ಫೀಸು ಕೊಡಲು ಮನೆ ಮಠ ಮಾರಿ ಬೀದಿಗೆ ಬಿದ್ದವರ ಸಂಕಷ್ಟಗಳು ನಿಮ್ಮ ಕಣ್ಮುಂದೆ ಬರಲಿ. ನಿಮ್ಮದೆ ಸ್ಕೂಲಿನಲ್ಲಿ, ನಿಮ್ಮ ಜೊತೆಯೆ ಕಲಿತ ಗೆಳೆಯ ಗೆಳತಿಯರು ಉತ್ತಮ ಉದ್ಯೋಗ ಮಾಡಿ ನೆಮ್ಮದಿಯ ಬದುಕು ಕಟ್ಟಿಕೊಳ್ಳುತ್ತಿರುವಾಗ, ನಿಮ್ಮ ಬದುಕನ್ನು ಯಾರು ಕಿತ್ತುಕೊಂಡರು ಎಂದು ಯೋಚಿಸಿ. ದೇವರಂತೂ ಖಂಡಿತ ನಿಮ್ಮ ಬದುಕನ್ನು ಹಾಳು ಮಾಡುವುದಿಲ್ಲ. ನೀವೆ, ನೀವೆ ಕೈಯಾರೆ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದೀರಿ.
ಕರಾವಳಿಯಲ್ಲಿ ಮಾದಕದ್ರವ್ಯಗಳ ಮಾಫಿಯಾ ಅಟ್ಟ ಹಾಸ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮೋದಿ ಸರ್ಕಾರ ಅದಾನಿಗಳಿಗೆ ಎಲ್ಲ ಬಂದರುಗಳನ್ನು ಬಿಟ್ಟುಕೊಡುತ್ತಿದೆ. ಗುಜರಾತಿನ ಮುಂದ್ರಾ ಬಂದರಿನಲ್ಲಿ ಒಂದೆ ದಿನ 21000 ಕೋಟಿ ಮೌಲ್ಯದ ಡ್ರಗ್ಸ್ ಸೀಝ್ ಆಯಿತು. ಆದರೆ ದೇಶದ ಒಳಗೆ ಲಕ್ಷಾಂತರ ಕೋಟಿ ಮೌಲ್ಯದ ಮಾದಕ ಪದಾರ್ಥಗಳು ಬಂದಿವೆ ಎಂದು ಹೇಳಲಾಗುತ್ತಿದೆ. ಈ ಮಾದಕ ಪದಾರ್ಥಗಳು ನಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿವೆ. ಈ ಕೆಟ್ಟ ಸರ್ಕಾರದಿಂದ ಯವ ನ್ಯಾಯವನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಸರ್ಕಾರದ ವರ್ತನೆ ಇನ್ನಷ್ಟು ಹಿಂಸೆ ಸೃಷ್ಟಿಸುವಂತೆ ಇದೆಯೆ ಹೊರತು, ಶಾಂತಿ ಸ್ಥಾಪಿಸುವ ಕಡೆಗೆ ಇಲ್ಲ. ಇನ್ನಷ್ಟು ಅಮಾಯಕರ ಹೆಣ ಬಿದ್ದರೆ ಮಾತ್ರ ತಮ್ಮ ರಾಜಕೀಯ ನಡೆಯುತ್ತದೆ ಎಂದು ಈ ದುಷ್ಟರು ಭಾವಿಸಿದ್ದಾರೆ. 2018 ರ ಬಿಜೆಪಿಯ ಪ್ರಣಾಳಿಕೆಯಲ್ಲಿ ಎನ್ ಐ ಎ ಸ್ಥಾಪಿಸುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದರು. ಈಗ ಅದನ್ನು ಮರೆತವರಂತೆ ವರ್ತಿಸುತ್ತಿದ್ದಾರೆ. ಇಷ್ಟೊಂದು ದುರ್ಬಲವಾದ ಹಾಗೂ ಕ್ರೂರ ಮನಸ್ಥಿತಿಯ ಮುಖ್ಯಮಂತ್ರಿ, ಬೇಜವಾಬ್ಧಾರಿ ನಡವಳಿಕೆಯ ಗೃಹಮಂತ್ರಿಯನ್ನು ರಾಜ್ಯ ಕಂಡಿರಲಿಲ್ಲ.
ಆದ್ದರಿಂದ ಮತ್ತೊಮ್ಮೆ ತಮ್ಮನ್ನು ವಿನಂತಿಸುತ್ತೇನೆ. ಕೆಟ್ಟ ಕಾರಣಕ್ಕಾಗಿ ಕರಾವಳಿಯು ರಾಜ್ಯಕ್ಕೆ ಮಾದರಿಯಾಗುವುದು ಬೇಡ. 30 ವರ್ಷಗಳ ಹಿಂದೆ ಕರಾವಳಿಯನ್ನು ರಾಜ್ಯ- ದೇಶಗಳ ಜನರು ಪ್ರೀತಿ, ಗೌರವ ಮತ್ತು ಹೆಮ್ಮೆಯ ಭಾವನೆಗಳಿಂದ ನೋಡುತ್ತಿದ್ದರಲ್ಲ, ಅಂಥ ಕರಾವಳಿಯನ್ನು ದಯಮಾಡಿ ನಿರ್ಮಾಣ ಮಾಡಿ. ದ್ವೇಷ ಹುಟ್ಟಿಸುವ, ಕೊಲೆಗೆ, ಹಿಂಸೆಗೆ ಪ್ರೇರೇಪಿಸುವ ಎಲ್ಲ ರಾಕ್ಷಸರನ್ನು ದೂರ ಮಾಡಿ ಇದರ ವಿರುದ್ಧ ಧೈರ್ಯವಾಗಿ ನಿಲ್ಲಿ, ಸೌಹಾರ್ದ ಸಭೆಗಳನ್ನು ಪ್ರಾರಂಭಿಸಿ, ಮನೆಯ ಸದಸ್ಯರನ್ನು ಕಳೆದುಕೊಂಡ ಕುಟುಂಬದ ಸದಸ್ಯರುಗಳೆಲ್ಲರೂ ಧರ್ಮಾತೀತವಾಗಿ ಒಂದಾಗಿ ವೇದಿಕೆ ರಚಿಸಿಕೊಂಡು ಶಾಂತಿ ಸೌಹಾರ್ದದ ಕರಾವಳಿ ನಿರ್ಮಿಸಲು ಮುಂದಾಗಿ, ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಮುಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಈ ಸಭೆಗಳನ್ನು ಅಧಿಕೃತಗೊಳಿಸುತ್ತೇವೆ ಎಂದು ತಿಳಿಸಬಯಸುತ್ತೇನೆ. ಈಗ ನಾಡಿನಲ್ಲಿ ಅತ್ಯಂತ ತುರ್ತಾಗಿ ಶಾಂತಿಯುತವಾದ ವಾತಾವರಣ ನಿರ್ಮಾಣವಾಗಬೇಕಾಗಿದೆ ಅದನ್ನು ಸರ್ವರೂ ಸೇರಿ ಈಡೇರಿಸಬೇಕೆಂದು ತಮ್ಮನ್ನು ಕೈ ಮುಗಿದು ವಿನಂತಿಸುತ್ತೇನೆ ಎಂದಿದ್ದಾರೆ.
2013 ರಿಂದ 2017ರ ವರೆಗಿನ ಅವಧಿಯಲ್ಲಿ ನಡೆದ ಹನ್ನೊಂದು ಮುಸ್ಲಿಮರ ಹತ್ಯೆಗಳ ಎಂಟು ಪ್ರಕರಣಗಳಲ್ಲಿ ಬಜರಂಗದಳ, ತಲಾ ಒಂದು ಪ್ರಕರಣಗಳಲ್ಲಿ ಹಿಂದೂ ಜಾಗರಣಾ ವೇದಿಕೆ, ಶ್ರೀರಾಮಸೇನೆ ಮತ್ತು ವಿಶ್ವ ಹಿಂದೂ ಪರಿಷತ್ ನ ಕಾರ್ಯಕರ್ತರು ಆರೋಪಿಗಳಾಗಿದ್ದಾರೆ. 115 ಆರೋಪಿಗಳ ವಿರುದ್ಧ ಕಾನೂನುಕ್ರಮ ಕೈಗೊಳ್ಳಲಾಗಿದೆ. 4/6 pic.twitter.com/dUxRP6bYbg
— Siddaramaiah (@siddaramaiah) July 29, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್
ಸುದ್ದಿದಿನ,ದಾವಣಗೆರೆ: ದಾವಣಗೆರೆಯ ಹೆಮ್ಮೆಯ ಶಿಕ್ಷಣ ತಜ್ಞೆ, ಉದ್ಯಮಿ ಹಾಗೂ Parvatha Global Ventures LLP ಸಂಸ್ಥೆಯ ಸಂಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (Founder & CEO) ಡಾ. ಪ್ರೀತಿ ಅವರು ರಾಷ್ಟ್ರ ಮಟ್ಟದ ಪ್ರತಿಷ್ಠಿತ “Param Bhushan National Excellence Award – 2026” ಪ್ರಶಸ್ತಿಯನ್ನು ಪಡೆದಿದ್ದಾರೆ.
ಶಿಕ್ಷಣ, ಆಡಳಿತ, ಮಾನವ ಸಂಪನ್ಮೂಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಸಮಾಜಸೇವೆಯಲ್ಲಿ ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಪರಿಗಣಿಸಿ Jivran Foundation ವತಿಯಿಂದ ಈ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಡಾ. ಪ್ರೀತಿ ಅವರು ವಿದೇಶಿ ವೈದ್ಯಕೀಯ ಶಿಕ್ಷಣ (MBBS Abroad), ಉದ್ಯೋಗ ಮಾರ್ಗದರ್ಶನ, ಶಿಕ್ಷಣ ಸಲಹಾ ಸೇವೆಗಳು, ಕೌಶಲ್ಯಾಭಿವೃದ್ಧಿ ಹಾಗೂ ಯುವಜನರ ಸಬಲೀಕರಣ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಈ ಪ್ರಶಸ್ತಿ ಅವರ ಸಾಧನೆಗೆ ಮಾತ್ರವಲ್ಲದೆ, ಕರ್ನಾಟಕದ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರಕ್ಕೂ ರಾಷ್ಟ್ರೀಯ ಮಟ್ಟದಲ್ಲಿ ದೊರೆತ ಗೌರವವಾಗಿದೆ.
ಈ ಸಂದರ್ಭದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಮಾಜದ ಗಣ್ಯರು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಡಾ. ಪ್ರೀತಿ ಅವರಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲೆಂದು ಶುಭ ಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
ಸುದ್ದಿದಿನ ಡೆಸ್ಕ್:ಹಲವಾರು ವರ್ಷಗಳ ಕಾಲ ಬಂಗಾಳಿ ಟೆಲಿವಿಷನ್ನಲ್ಲಿ ಕೆಲಸ ಮಾಡಿದ ನಂತರ ಮತ್ತು ನಂತರ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿದ ನಂತರ, ಅಭಿನೇತಾ ಸುಶೋಭನ್ ಸೋನು ರಾಯ್ ಅವರು ‘ಟೇಕ್ ಕೇರ್ ಭಾಲೋಬಾಸ’ ಚಿತ್ರದ ಮೂಲಕ ಬಂಗಾಳಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ‘ಜಾಯ್’ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ಇದು ಸ್ನೇಹ, ಸಂಬಂಧಗಳು ಮತ್ತು ಕಾಲಾನುಕ್ರಮದಲ್ಲಿ ವಿಕಸನಗೊಳ್ಳುವ ಭಾವನೆಗಳ ಸುತ್ತ ಕೇಂದ್ರೀಕೃತವಾಗಿರುವ ಕಥೆಯಲ್ಲಿನ ಒಬ್ಬ ಸ್ನೇಹಿತ.
ನಿರ್ದೇಶಕ ಪಿಜೂಷ್ ಸಾಹಾ ಅವರ ಮಾರ್ಗದರ್ಶನದಲ್ಲಿ ಸುಶೋಭನ್ ಅವರ ಅಭಿನಯ ಪ್ರಯಾಣವು ಪ್ರಾರಂಭವಾಯಿತು, ಅಲ್ಲಿ ಅವರು ಸುಮಾರು ಎರಡು ವರ್ಷಗಳ ಕಾಲ ಅಭಿನಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದರು. ನಿಯಮಿತ ಆಡಿಷನ್ಗಳ ನಂತರ, 2019 ರಲ್ಲಿ ಅವರು ಆಕಾಶ್ ಆಠ್ ಚಾನೆಲ್ನ ‘ಆನಂದಮಯೀ ಮಾ’ ಧಾರಾವಾಹಿಯ ಮೂಲಕ ತಮ್ಮ ಟೆಲಿವಿಷನ್ ಚೊಚ್ಚಲ ಪ್ರವೇಶವನ್ನು ಮಾಡಿದರು, ಇದನ್ನು ಮರಣೋತ್ತರ ನಿರ್ದೇಶಕ ದೇವಿದಾಸ್ ಭಟ್ಟಾಚಾರ್ಯ ನಿರ್ದೇಶಿಸಿದ್ದರು, ಅದರಲ್ಲಿ ಅವರು ವೈಷ್ಣವ ಭಕ್ತನ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಸ್ಟಾರ್ ಜಲ್ಸಾದ ‘ಮೋಹರ್’, ‘ಕೋರಾಪಾಖಿ’, ‘ತಿತ್ಲಿ’ ಮತ್ತು ‘ಖೇಲಾಘರ್’, ಜೊತೆಗೆ ಜೀ ಬಂಗ್ಲಾದ ‘ಜಮುನಾ ಢಾಕಿ’ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು, ಹೀಗೆ ಬಂಗಾಳಿ ಟೆಲಿವಿಷನ್ನಲ್ಲಿ ತಮ್ಮ ಕೆಲಸವನ್ನು ಮುಂದುವರೆಸಿದರು.
COVID-19 ಸಾಂಕ್ರಾಮಿಕ ಸಮಯದಲ್ಲಿ, ಅಭಿನಯದ ಕೆಲಸಗಳು ಸೀಮಿತವಾದಾಗ, ಸುಶೋಭನ್ ಮಾಡೆಲಿಂಗ್ಗೆ ತಿರುಗಿದರು. 2023 ರಿಂದ ಪ್ರಾರಂಭಿಸಿ, ಅವರು ಹಾಲಿಡೇ ಇನ್ ಹೋಟೆಲ್, ಡಾಬರ್, ಟೈಟಾನ್ ಐ+, ವೆಲಾಸಿಟಿ ಐವೇರ್, ಅಮೆಜಾನ್, ಸ್ಪೆನ್ಸರ್ಸ್, ಕ್ಯಾಂಪಸ್ ಶೂಸ್, ಬಿಗ್ ಬಜಾರ್, ಬಯೋಟಿಕ್ ಮತ್ತು ಫಿಯಾಮಾ ಡಿ ವಿಲ್ಸ್ ಸೇರಿದಂತೆ ಹಲವಾರು ಬ್ರಾಂಡ್ಗಳೊಂದಿಗೆ ಕೆಲಸ ಮಾಡಿದರು. 2025 ರಲ್ಲಿ, ಕೋಲ್ಕತ್ತಾದಲ್ಲಿ ನಡೆದ ‘ಎತ್ನಿಕ್ ಎಲಿಗನ್ಸ್ 2025’ ಸೌಂದರ್ಯ ಸ್ಪರ್ಧೆಯಲ್ಲಿ ಅವರು ಪ್ರಥಮ ರನ್ನರ್-ಅಪ್ ಆಗಿ ಆಯ್ಕೆಯಾದರು.
ಹೌರಾದಲ್ಲಿ ಜನಿಸಿ ಕೋಲ್ಕತ್ತಾದಲ್ಲಿ ಬೆಳೆದ ಸುಶೋಭನ್, ಸುಮಾರು ಮೂರೂವರೆ ವರ್ಷದ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ನಂತರ ತಾಯಿಯಿಂದ ಬೆಳೆಸಲ್ಪಟ್ಟರು. ಅವರು ಕೋಲ್ಕತ್ತಾದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು 2016 ರಲ್ಲಿ ದಮ್ ದಮ್ ಮೋತಿಜೀಲ್ ರವೀಂದ್ರ ಮಹಾವಿದ್ಯಾಲಯದಿಂದ ವಾಣಿಜ್ಯದಲ್ಲಿ ಬಿ.ಕಾಮ್ ಪದವಿಯನ್ನು ಪಡೆದರು. ಅಭಿನಯವನ್ನು ಮುಂದುವರಿಸುವ ಮೊದಲು, ಅವರು ಸುಮಾರು ಎರಡು ವರ್ಷಗಳ ಕಾಲ ಪಾಶ್ಚಾತ್ಯ ನೃತ್ಯದಲ್ಲಿ ತರಬೇತಿ ಪಡೆದರು ಮತ್ತು ರಂಗ ಪ್ರದರ್ಶನಗಳಲ್ಲಿ ಭಾಗವಹಿಸಿದರು.
‘ಟೇಕ್ ಕೇರ್ ಭಾಲೋಬಾಸ’ ಸುಶೋಭನ್ ಅವರ ಮೊದಲ ಬಂಗಾಳಿ ಫೀಚರ್ ಫಿಲ್ಮ್ನಲ್ಲಿ ಕಾಣಿಸಿಕೊಳ್ಳುವುದನ್ನು ಸೂಚಿಸುತ್ತದೆ. ಈ ಚಿತ್ರದಲ್ಲಿ, ಜಾಯ್ ಅವರು ಕೆಲವೊಮ್ಮೆ ಸಂಯಮದಿಂದಿರುವ, ಆದರೆ ಉಷ್ಣತೆ, ಸ್ನೇಹಪರತೆ ಮತ್ತು ಸಹಜತೆಯನ್ನು ಪ್ರದರ್ಶಿಸುವ ಪಾತ್ರವಾಗಿ ಚಿತ್ರಿಸಲಾಗಿದೆ, ಇದು ಸಂಬಂಧಗಳು ಮತ್ತು ದೈನಂದಿನ ಭಾವನೆಗಳ ಅನ್ವೇಷಣೆಗೆ ಕೊಡುಗೆ ನೀಡುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
ಸುದ್ದಿದಿನ, ಚಿತ್ರದುರ್ಗ: ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಗಳಲ್ಲಿ 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆಗೆ ಬಿಡುಗಡೆಯಾಗಿರುವ ಅಂದಾಜು 7 ಕೋಟಿ ಅನುದಾನದಲ್ಲಿನ ಅವ್ಯವಹಾರವನ್ನು ತನಿಖೆಗೆ ಒಳಪಡಿಸುವಂತೆ ಲೋಕಾಯುಕ್ತಾಗೆ ದೂರು ನೀಡಲಾಗಿದೆ ಎಂದು ವಕೀಲ ಕೆ.ಎ.ಓಬಳಪ್ಪ ಅವರು ತಿಳಿಸಿದರು.
ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಒಟ್ಟು 4 ಹಂತದಲ್ಲಿ 7 ಕೋಟಿ ರೂಪಾಯಿಗಳನ್ನು ಚಿತ್ರದುರ್ಗ ಜಿಲ್ಲೆಯ 06 ತಾಲ್ಲೂಕುಗಳಿಗೆ ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ಮಾಹಿತಿ ತಿಳಿದಿದೆ ಎಂದರು.
ಚಿತ್ರದುರ್ಗ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 06 ತಾಲ್ಲೂಕುಗಳ ಉಪವಿಭಾಗಗಳಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ ಮಾಹಿತಿ ಕೋರಿದಾಗ, ಯಾವುದೇ ಉಪವಿಭಾಗಗಳ ಅಧಿಕಾರಿಗಳು ಸೂಕ್ತ ಮಾಹಿತಿ ನೀಡದ ಕಾರಣ ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರಿಗೆ ಅರ್ಜಿ ಸಲ್ಲಿಸಿ, ‘2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಚಳ್ಳಕೆರೆ, ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ಮೊಳಕಾಲ್ಮೂರು ತಾಲ್ಲೂಕುಗಳಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ’ ದೂರು ನೀಡಲಾಗಿತ್ತು ಎಂದರು.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರು ನಮ್ಮ ದೂರು ಅರ್ಜಿಯನ್ನು ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ವರ್ಗಾಹಿಸಿ, ಸೂಕ್ತ ಕ್ರಮವಹಿಸಿ ಕಛೇರಿಗೆ ವರದಿ ಸಲ್ಲಿಸಲು ಸೂಚಿಸಿರುತ್ತಾರೆ. ಅದರಂತೆ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರು ವಿಚಾರಣೆ ನಡೆಸಿ, ಅರ್ಜಿದಾರರಿಗೆ ಕಡತ ವೀಕ್ಷಣೆ ಮಾಡಲು ಅವಕಾಶ ನೀಡಿ, ದಾಖಲೆ ನೀಡುವಂತೆ ಆದೇಶ ಹೊರಡಿಸಿರುತ್ತಾರೆ ಎಂದು ತಿಳಿಸಿದರು.
ಕಾರ್ಯಪಾಲಕ ಅಭಿಯಂತರರ ಆದೇಶದಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ಇವರುಗಳು ವಿವಿಧ ದಿನಾಂಕಗಳAದು ಉಪವಿಭಾಗಗಳಿಗೆ ಆಹ್ವಾನಿಸಿ, ಕಡತ ಪರಿಶೀಲನೆ ಮಾಡಿಕೊಳ್ಳುವಂತೆ ತಿಳಿಸಿದ ಕಾರಣ ಉಪವಿಭಾಗಗಳ ಕಾರ್ಯಪಾಲಕ ಅಭಿಯಂತರರುಗಳು ನಿಗಧಿಪಡಿಸಿದ ದಿನಾಂಕದಂದು ಉಪವಿಭಾಗಗಳ ಕಛೇರಿಗೆ ಭೇಟಿ ನೀಡಿದಾಗ ಕಂಡುಬಂದ ಅಂಶಗಳೆಂದರೆ;
1. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಚಿತ್ರದುರ್ಗ ಇಲ್ಲಿ ಒಟ್ಟು 80 ಕಾಮಗಾರಿಗಳು ನಡೆದಿದ್ದು, ಇದರಲ್ಲಿ ಕೇವಲ 23 ಕಾಮಗಾರಿಗಳ (ಅಂದಾಜು ಮೊತ್ತ ರೂ. 37.88 ಲಕ್ಷ) ಕಡತಗಳನ್ನು ತೋರಿಸಿದ್ದು, ಉಳಿದ ಕಾಮಗಾರಿಯ ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬ ನಮ್ಮ ಕಡತ ಪರಿಶೀಲನೆ ಪತ್ರಕ್ಕೆ ದೃಢೀಕರಣ ನೀಡಿರುತ್ತಾರೆ.
2. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಚಳ್ಳಕೆರೆ ಇಲ್ಲಿ ಒಟ್ಟು 80 ಕಾಮಗಾರಿಗಳ ಕಡತಗಳಲ್ಲಿ 28 ಕಾಮಗಾರಿಗಳ ಕಡತಗಳನ್ನು ತೋರಿಸಿದ್ದು, ಉಳಿದ 52 ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬ ನಮ್ಮ ಪರಿಶೀಲನೆ ಪತ್ರಕ್ಕೆ ದೃಢೀಕರಣ ನೀಡಿರುತ್ತಾರೆ.
3. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಇಲ್ಲಿಗೆ ಭೇಟಿ ನೀಡಿದ ಸಮಯದಲ್ಲಿ ಈ ಕಛೇರಿಗಳಲ್ಲಿ ಯಾವುದೇ ಕಡತಗಳು ಲಭ್ಯವಿರುವುದಿಲ್ಲ. ಕಛೇರಿಯ ಸಿಬ್ಬಂದಿಗಳು ತುರ್ತು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬುದಾಗಿ ದೃಢೀಕರಣ ನೀಡಿರುತ್ತಾರೆ ಎಂದು ತಿಳಿಸಿದರು.
ಕಡತ ಪರಿಶೀಲನೆಯ ತರುವಾಯ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ದೂರು ನೀಡಿ, ನಾವು ಕೋರಿದ ಅಗತ್ಯ ದಾಖಲೆಗಳನ್ನು ಒದಗಿಸಿಕೊಡುವಂತೆ ಕೋರಲಾಗಿತ್ತು. ಆದರೆ ಕಾರ್ಯಪಾಲಕ ಅಭಿಯಂತರರು ಇವರು ಮಾಹಿತಿ ಕೊಡಿಸುವಲ್ಲಿ ಮತ್ತು ತನಿಖಾ ವರದಿ ನೀಡುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಹಾಲಿ ಕಾರ್ಯಪಾಲಕ ಅಭಿಯಂತರರಾದ ಅಮರ್‌ನಾಥ್ ಜೈನ್ ಅವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿರುತ್ತದೆ ಎಂದರು.
ಈ ಎಲ್ಲಾ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ 6 ಉಪವಿಭಾಗಗಳಲ್ಲಿ ಕಾರ್ಯನಿರ್ವಹಿಸಿರುವ 23 ಸಹಾಯಕ ಕಾರ್ಯಪಾಲಕ ಅಭಿಯಂತರರು, 13 ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಿರಿಯ ಅಭಿಯಂತರರು, ಅಂದಿನ ಕಾರ್ಯಪಾಲಕ ಅಭಿಯಂತರರಾದ ಬಸವನಗೌಡ ಪಾಟೀಲ್ ಹಾಗೂ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಹಿರಿಯ ವಕೀಲರಾದ ನಾಗರಾಜ ಪೂಜಾರ್, ಪತ್ರಕರ್ತ ಅಶೋಕ್, ಹನುಮಂತಪ್ಪ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days agoಅನುದಾನ ದುರುಪಯೋಗ | ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ್ ಡಿ.ಆರ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
-
ದಿನದ ಸುದ್ದಿ2 days agoಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
-
ದಿನದ ಸುದ್ದಿ5 minutes agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್

