ದಿನದ ಸುದ್ದಿ
ಬಿವಿಬಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಟೆಕ್‌ಪಾರ್ಕ್ ಉದ್ಘಾಟನೆ | ಆರ್ ಆ್ಯಂಡ್ ಡಿ ಹೊಸನೀತಿ ರೂಪಿಸಲು ಕಾರ್ಯಪಡೆ ರಚನೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಸುದ್ದಿದಿನ,ಹುಬ್ಬಳ್ಳಿ: ಕರ್ನಾಟಕದ ಸಮಗ್ರ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ದೊಡ್ಡದು.ಯುವಕರಲ್ಲಿ ವಿದ್ಯೆ,ವ್ಯಕ್ತಿತ್ವ ನಿರ್ಮಾಣ ಮಾಡುವುದು ಸಂಸ್ಥೆ ,ಸರ್ಕಾರಗಳ ಜವಾಬ್ದಾರಿ. ಕಾಲೇಜಿನ ಹಳೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ ಸಂಸ್ಥೆಗೆ,ಸಮಾಜಕ್ಕೆ ಉತ್ತಮ ಮಾನವ ಸಂಪನ್ಮೂಲವಾಗಿ ಕೊಡುಗೆಗಳನ್ನು ಮರಳಿ ನೀಡಬೇಕು.
ಕೆಎಲ್‌ಇ ಸಂಸ್ಥೆಯ ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜು ವಿವಿಧ ಬಹು ಅಧ್ಯಯನ ಶಿಸ್ತುಗಳಲ್ಲಿ ಮಾದರಿಯಾಗಿ ರೂಪುಗೊಂಡಿದೆ.ಕೃಷಿ,ತೈಲ,ಕೈಗಾರಿಕೆ ಮತ್ತಿತರ ಎಲ್ಲಾ ರಂಗಗಳಲ್ಲಿ ಇಂದು ಆರ್ ಆ್ಯಂಡ್ ಡಿ ಅಗತ್ಯವಾಗಿದೆ. ರಾಜ್ಯದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದ 180 ಆರ್ ಆ್ಯಂಡ್ ಡಿ ಕೇಂದ್ರಗಳಿವೆ.ಅದಕ್ಕೆ ಹೆಚ್ಚು ಮಹತ್ವ ನೀಡಿ,ಕೈಗಾರಿಕೆ,ಕೃಷಿ,ಆಹಾರ ರಂಗದಲ್ಲಿ ಆರ್ ಆ್ಯಂಡ್ ಡಿ ಬಳಕೆಗೆ ಹೆಚ್ಚು ಒತ್ತು ನೀಡಲು ಸರ್ಕಾರ ಉದ್ದೇಶಿಸಿದೆ.
ಹೊಸ ಆರ್ ಆ್ಯಂಡ್ ಡಿ ನೀತಿ ರಚನೆಗೆ ಕಾರ್ಯಪಡೆ ಅಧ್ಯಕ್ಷರನ್ನಾಗಿ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಉಪಕುಲಪತಿ ಡಾ.ಅಶೋಕ ಶೆಟ್ಟರ್ ಅವರನ್ನು ನೇಮಿಸಲು ಚಿಂತನೆ ನಡೆದಿದೆ.ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಕೆಎಲ್‌ಇ ಟೆಕ್‌ಪಾರ್ಕಿನ ಅಭಿವೃದ್ಧಿಗೆ ಅಗತ್ಯವಾಗಿರುವ ಇನ್ನೂ 2 ಕೋಟಿ ರೂ.ಗಳನ್ನು ಹಳೆಯ ವಿದ್ಯಾರ್ಥಿಗಳ ಸಂಘದ ಮೂಲಕ ಕ್ರೋಢೀಕರಿಸಿ ನೀಡಲಾಗುವುದು. ಸ್ಟಾರ್ಟ್ ಅಪ್‌ಗಳ ಉತ್ತೇಜನಕ್ಕಾಗಿ ಹುಬ್ಬಳ್ಳಿ ಮತ್ತು ಕಲಬುರ್ಗಿಯಲ್ಲಿ ಪ್ರಾದೇಶಿಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ 75 ನೇ ವರ್ಷಾಚರಣೆ ಹಾಗೂ ಕೆಎಲ್‌ಇ ಟೆಕ್ ಪಾರ್ಕ್ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ ಸಂಪೂರ್ಣ ಸ್ವರೂಪವೇ ಬದಲಾಗಿದ್ದು, ಮತ್ತೊಮ್ಮೆ ವಿದ್ಯಾರ್ಥಿಯಾಗಿ ಪ್ರವೇಶಪಡೆಯಲು ಮನಸ್ಸಾಗುತ್ತಿದೆ ಎಂದು ತಮಗೆ ವಿದ್ಯೆ ನೀಡಿದ ಸರಸ್ವತಿ ದೇಗುಲದ ಬಗ್ಗೆ ಮನದುಂಬಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು,ತಮಗೆ ಕಲಿಸಿದ ಪ್ರಾಧ್ಯಾಪಕರು,ಹಿರಿಯ-ಕಿರಿಯ ಸಹಪಾಠಿಗಳನ್ನು, ಹಾಜರಾಗದ ಪ್ರಯೋಗಾಲಯಗಳು,ಪುಸ್ತಕ ಪಡೆಯದಗ್ರಂಥಾಲಯಗಳು,ಹಾಸ್ಟೇಲು,ಕ್ಯಾಂಪಸ್,ಕ್ಯಾಂಟೀನ್ ಎಲ್ಲವನ್ನೂ ವಿನೋದವಾಗಿ ನೆನಪಿಸಿಕೊಂಡರು.
ಮುಖ್ಯಮಂತ್ರಿಯಾಗಿ ಕೈಗೊಳ್ಳುವ ಎಲ್ಲಾ ಜನಪರ ಕಾರ್ಯಗಳಲ್ಲಿ ಬಿವಿಬಿ ಕಾಲೇಜು ಕಲಿಸಿದ ಪಾಠಗಳ ಪಾತ್ರ ಇರುತ್ತದೆ. ಆಡಳಿತದಲ್ಲಿ ತಾಂತ್ರಿಕತೆ,ವೈಜ್ಞಾನಿಕತೆ ತರಲು ಉತ್ಸುಕನಾಗಿದ್ದೇನೆ.ಪ್ರತಿ ಹಂತದಲ್ಲಿಯೂ ನನ್ನ ಜ್ಞಾನವನ್ನು ಪ್ರಸ್ತುತ ಸಂಶೋಧನೆಗಳೊಂದಿಗೆ ತಾಳೆ ಮಾಡಿ ಪರೀಕ್ಷಿಸಿಕೊಳ್ಳುತ್ತಿರುತ್ತೇನೆ.
ಸಾರ್ವಜನಿಕ ಉಪಯೋಗ, ಸಂಕೇತಗಳ ರವಾನೆಗೆ ವೈರ್‌ಲೆಸ್ ತಂತ್ರಜ್ಞಾನ,ಇಲೆಕ್ಟ್ರಿಕಲ್,ಇಲೆಕ್ಟ್ರಾನಿಕ್ಸ್,ಸಾಫ್ಟವೇರ್ ಕ್ಷೇತ್ರಗಳ ಅತ್ಯಾಧುನಿಕ ವಿದ್ಯೆ ,ಸಂಶೋಧನೆಗಳಲ್ಲಿ ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜು ಮಹತ್ವದ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಹಿಂದೆ ನಾನು ವಿದ್ಯಾರ್ಥಿಯಾಗಿದ್ದಾಗ ಕರ್ನಾಟಕ ವಿವಿ ಕುಲಪತಿಗಳಾಗಿದ್ದ ಡಾ.ಡಿ.ಎಂ.ನಂಜುಂಡಪ್ಪ ಅವರ ಕಾಠಿಣ್ಯ,ಶಿಸ್ತು,ಬದ್ಧತೆಯಿಂದ ನಮ್ಮ ವ್ಯಾಸಂಗ ಪೂರ್ಣವಾಗಲು ಸಾಧ್ಯವಾಯಿತು.
ಉತ್ತಮ ಭೂತಕಾಲವಷ್ಟೇ ಅಲ್ಲ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದು ಅಷ್ಟೇ ಮುಖ್ಯ. ರಾಜಕೀಯವೂ ಒಂದು ವಿಜ್ಞಾನವೇ ಆಗಿದೆ ಅಲ್ಲಿಯೂ ವೈಜ್ಞಾನಿಕ ವಿಧಾನಗಳಿವೆ.ತಾಂತ್ರಿಕ ಹಾಗೂ ವೈಜ್ಞಾನಿಕ ಸಂಶೋಧನೆಗಳನ್ನು ರಾಜತಾಂತ್ರಿಕವಾಗಿ ಬಳಸುವುದು ರಾಜಕೀಯ ವಿಜ್ಞಾನವಾಗಿದೆ.
ಎಲ್ಲಾ ದೇಶಗಳು ಈ ನೀತಿ ಪಾಲಿಸಬೇಕು.ಕರ್ತವ್ಯವನ್ನು ನೈತಿಕತೆಯ ತಳಹದಿಯೊಂದಿಗರವಕಾಯಕದ ರೀತಿಯಲ್ಲಿ ನಿರ್ವಹಿಸಬೇಕು.ದೇಶದ ಬಡತನ,ಆರೋಗ್ಯ,ಶಿಕ್ಷಣ,ಆರ್ಥಿಕ ಸವಾಲುಗಳನ್ನು ಅರಿಯಲು ನಾವು ಸದಾ ಕಾಲ ಜನರ ನಡುವೆ ಇರಬೇಕು,ಅದೇ ಜನರ,ಜನಪರ ರಾಜಕೀಯವಾಗಿದೆ.
ಪ್ರಧಾನಮಂತ್ರಿಗಳು ಸಕ್ಕರೆ ಕಾರ್ಖಾನೆಗಳಲ್ಲಿ ಇಥೆನಾಲ್ ಉತ್ಪಾದನೆಗೆ ಶೇ.20 ರಷ್ಟು ಅವಕಾಶ ನೀಡಿದ್ದಾರೆ.ಮುರುಗೇಶ್ ನಿರಾಣಿ ಅವರ ಇದರ ಸದುಪಯೋಗ ಪಡೆದವರಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.
ಇದನ್ನೂ ಓದಿ |ಸರ್ಕಾರಿ ನೌಕರರ ವೇತನ ನಿಗದಿಗೆ ನೂತನ ಆಯೋಗ ರಚನೆಯಾಗಲಿದೆ
ಬೃಹತ್ ,ಮಧ್ಯಮ ಕೈಗಾರಿಕೆ ಸಚಿವರಾದ ಮುರುಗೇಶ್ ನಿರಾಣಿ ಮಾತನಾಡಿ,ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ ಇಂದು ಮುಖ್ಯಮಂತ್ರಿಯವರೊಂದಿಗೆ ಹಂಚಿಕೊಳ್ಳುತ್ತಿರುವುದು, ತವರಿಗೆ ಬಂದಿರುವ ಸಂತಸದ ಭಾವನೆ ಮೂಡಿಸಿದೆ.ಕೆಎಲ್‌ಇ ಸಪ್ತರ್ಷಿಗಳ ಪ್ರಯತ್ನದಿಂದ ಈ ಭಾಗದಲ್ಲಿ ಶಿಕ್ಷಣದ ಕ್ರಾಂತಿಯಾಗಲು,ವಿಶೇಷವಾಗಿ ಮಹಿಳೆಯರು ತಾಂತ್ರಿಕ ಶಿಕ್ಷಣ ಪಡೆಯಲು ಸಾಧ್ಯವಾಗಿದೆ.
3-4 ದಶಕಗಳ ಹಿಂದೆ ಕೇವಲ ಸುಮಾರು 500 ರಿಂದ 600 ವಿದ್ಯಾರ್ಥಿಗಳಿದ್ದ ಈ ಕಾಲೇಜು ಇಂದು ಸಾಕಷ್ಟು ಅಭಿವೃದ್ಧಿ ಹೊಂದಿದೆ.ಸುಮಾರು 6 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಕೇವಲ ಉದ್ಯೋಗಿಗಳಾಗದೇ ಮತ್ತೊಬ್ಬರಿಗೆ ಕೆಲಸ ನೀಡುವ ಉದ್ಯಮಪತಿಗಳಾಗಬೇಕು .ಸರ್ಕಾರ ಅನೇಕ ಪ್ರೋತ್ಸಾಹಕ ಯೋಜನೆಗಳ ಪ್ರಯೋಜನ ಪಡೆಯಬೇಕು .ಅಕ್ಟೋಬರ್ 15 ರಿಂದ ತಮ್ಮ ನಿರಾಣಿ ಸಮೂಹ ಸಂಸ್ಥೆಗಳ ಉದ್ಯಮ ಘಟಕಗಳು ಪುನರಾರಂಭ ಮಾಡಲಿವೆ.ಕಾಲೇಜಿನ ವಿದ್ಯಾರ್ಥಿಗಳು ಅಲ್ಲಿಗೆ ಭೇಟಿ ನೀಡಿ ಸ್ಫೂರ್ತಿ ಪಡೆಯಲಿ ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಕೆಎಲ್ಇ ಸಂಸ್ಥೆ ಹಾಗೂ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದಿಂದ , ಸಂಸ್ಥೆಯ ಹಳೆಯ ವಿದ್ಯಾರ್ಥಿಗಳೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರನ್ನು ಸನ್ಮಾನಿಸಲಾಯಿತು.
ಕೈಮಗ್ಗ,ಜವಳಿ ,ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಂಕರ್ ಪಾಟೀಲ ಮುನೇನಕೊಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆಎಲ್‌ಇ ತಾಂತ್ರಿಕ ವಿವಿ ಉಪಕುಲಪತಿ ಡಾ.ಅಶೋಕ ಶೆಟ್ಟರ್ ಸ್ವಾಗತಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.
ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು.”
- ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
- ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ
ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.
ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.
ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ5 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ5 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ5 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ1 day agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

