ಅಂತರಂಗ
ಭಾರತದ ಸಂವಿಧಾನ : ಪ್ರಜೆಗಳ ಓದು
- ಡಾ. ಬಿ.ಎಂ. ಪುಟ್ಟಯ್ಯ
ಭಾರತದ ಸಂವಿಧಾನವನ್ನು ಯಾಕೆ ಓದಬೇಕು ಮತ್ತು ಅದನ್ನು ಕುರಿತು ಯಾಕೆ ಚರ್ಚೆ ಮಾಡಬೇಕು ಎಂಬುದು ಮೊದಲನೆಯ ಮುಖ್ಯ ಪ್ರಶ್ನೆ. ಅನೇಕರು ಹೇಳುತ್ತಾರೆ: ಇದು ಜನರನ್ನು ಜಾಗೃತಗೊಳಿಸಲು, ಅವರಿಗೆ ಸಂವಿಧಾನದ ಬಗೆಗೆ ಹಾಗೂ ಕಾನೂನುಗಳ ಬಗೆಗೆ ಅರಿವು ಮೂಡಿಸಲು ಎಂದು. ನನಗೆ ಯಾಕೋ ಈ ಉತ್ತರ ತೃಪ್ತಿಕರ ಎನಿಸುತ್ತಿಲ್ಲ.
ಹಾಗಾಗಿ ಈ ಬಗೆಗೆ ನನಗೆ ಏನು ಅನಿಸುತ್ತದೆ ಅಂದರೆ ಸಂವಿಧಾನವನ್ನು ಓದುವುದು ಮತ್ತು ಅದರ ಬಗೆಗೆ ಚರ್ಚೆ ಸಂವಾದ ಮಾಡುವುದು ನಮ್ಮನ್ನು ನಾವೇ ಆತ್ಮ ವಿಮರ್ಶೆ ಮಾಡಿಕೊಳ್ಳಲು ಮತ್ತು ಸ್ವ ವಿಮರ್ಶೆ ಮಾಡಿಕೊಳ್ಳಲು ಓದಬೇಕು ಹಾಗೂ ಮಾತನಾಡಬೇಕು ಅಂತ ನನಗೆ ಅನಿಸಿದೆ.
ಭಾರತದ ಸಂವಿಧಾನದ ರಚನೆಯ ಕಾಲವನ್ನು ಸೂಕ್ಷ್ಮವಾಗಿ ಅವಲೋಕನ ಮಾಡಬೇಕು. ಈ ಅವಲೋಕನವು ಭಾರತದ ಪರಿಸ್ಥಿತಿ ಹಾಗೂ ಜಾಗತಿಕ ಪರಿಸ್ಥಿತಿಗಳನ್ನು ಆಧರಿಸಿರಬೇಕು. ನನ್ನ ಆಲೋಚನೆಯ ಪ್ರಕಾರ ಅದು ರಾಷ್ಟ್ರ ಮಟ್ಟದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಒಂದು ತೀವ್ರವಾದ ಆತಂಕದ ಕಾಲವಾಗಿತ್ತು. ಅದನ್ನು ಅರ್ಥಮಾಡಿಕೊಳ್ಳುತ್ತಲೇ ಅಂತಹ ಆತಂಕಗಳಿಂದ ಮುಕ್ತರಾಗುವುದು ಹೇಗೆ ಎಂಬ ದೊಡ್ಡ ಸವಾಲುಗಳು ಸಂವಿಧಾನದ ರಚನೆಯ ಮುಂದಿದ್ದವು.
ಆಗ ಎರಡನೇ ಪ್ರಪಂಚ ಯುದ್ಧ ಮುಗಿಯುತ್ತಿದ್ದ ಕಾಲ. ಜಾಗತಿಕ ಮಟ್ಟದಲ್ಲಿ ಸಾಮ್ರಾಜ್ಯಶಾಹಿ ತನ್ನ ಸುಲಿಗೆಯ ವಿಧಾನ ಮತ್ತು ತಂತ್ರಗಳನ್ನು ಬದಲಾಯಿಸಿಕೊಳ್ಳಲು ಕುತಂತ್ರ ಹುಡುಕುತ್ತಿದ್ದ ಕಾಲ. ಎರಡನೇ ಪ್ರಪಂಚ ಯುದ್ಧದಲ್ಲಿ ಅಮೇರಿಕ ನೇತೃತ್ವದ ರಾಷ್ಟçಗಳಿಗೆ ಬಂದೊದಗಿದ ಬಿಕ್ಕಟ್ಟುಗಳನ್ನು ಎದುರಿಸುವ ಸಲುವಾಗಿ ತನ್ನ ಸುಲಿಗೆಯ ನೀತಿಗಳನ್ನು ಬದಲಾಯಿಸಿಕೊಂಡಿತು.
ಇದರ ಪರಿಣಾಮದಿಂದಾಗಿ ಪ್ರಪಂಚದ ಬೇರೆ ಬೇರೆ ಭಾಗದಲ್ಲಿ ರಾಷ್ಟ್ರ ವೀಮೋಚನೆಗಾಗಿ ಹೋರಾಟ ಮಾಡುತ್ತಿದ್ದ ರಾಷ್ಟçಗಳಿಗೆ ಅಧಿಕಾರವನ್ನು ಹಸ್ತಾಂತರಿಸುವುದು ಅನಿವಾರ್ಯವಾಯಿತು. ಈ ಉದ್ದೇಶದಿಂದ ಚರ್ಚಿಲ್ ಒಪ್ಪಂದವನ್ನು ರೂಪಿಸಲಾಯಿತು. ಅಂತರರಾಷ್ಟಿçಯ ಮಟ್ಟದಲ್ಲಿ ಇದು ಅತ್ಯಂತ ಗುರುತರವಾದ ಆತಂಕದ ಪರಿಸ್ಥಿತಿಯನ್ನು ನಮಗೆ ಸೂಚಿಸುತ್ತದೆ. ಇನ್ನು ನಿರ್ದಿಷ್ಟವಾಗಿ ಭಾರತದಲ್ಲಿ ಏನಾಗುತ್ತಿತ್ತು ಎಂಬುದರತ್ತ ಗಮನ ಹರಿಸೋಣ.
ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆದಿತ್ತು.
ಆ ಹೋರಾಟ ಹಲವು ರೂಪಗಳಲ್ಲಿ ಕವಲೊಡೆದಿತ್ತು.
ಭಾರತದಲ್ಲಿ ಮುಸ್ಲಿಂ ಲೀಗ್ ಮುಸ್ಲಿಮರ ಬಗೆಗೆ ಕೆಲವು ಹಕ್ಕೊತ್ತಾಯವನ್ನು ಮಂಡಿಸಿತ್ತು. ಹಿಂದೂ ಮಹಾಸಭಾ ಹಿಂದೂ ಸಂಸ್ಕೃತಿಯ ಪುನರುತ್ಥಾನಕ್ಕೆ ಇಳಿದಿತ್ತು. ಕೆಲವು ಪಾಶ್ಚಾತ್ಯರು ಭಾರತದಲ್ಲಿ ಸಾಮಾಜಿಕ ಸುಧಾರಣಾ ಚಳುವಳಿಗಳನ್ನು ಮಾಡುತ್ತಿದ್ದರು. ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ವಾತಂತ್ರ್ಯ ಪಡೆಯಲು ಹೋರಾಟ ಮಾಡುತ್ತಿತ್ತು. ಇದರ ಅಡಿಯಲ್ಲಿ ಭಾರೀ ಭೂಮಾಲೀಕರ ಮತ್ತು ಭಾರೀ ಬಂಡವಾಳಶಾಹಿಗಳ ವರ್ಗಹಿತಾಸಕ್ತಿಗಳು ಮೇಲುಗೈ ಸಾಧಿಸಿದ್ದವು. ಡಾ. ಅಂಬೇಡ್ಕರ್ ನೇತೃತ್ವದಲ್ಲಿ ಕೆಳವರ್ಗ, ಕೆಳಜಾತಿ ಮತ್ತು ಮಹಿಳೆಯರ ಸಬಲೀಕರಣ ಮಾಡುವುದು ಹೇಗೆ ಎಂಬ ಆಲೋಚನೆ ಮತ್ತು ಹೋರಾಟಗಳು ನಡೆದಿದ್ದವು.
ಭಾರತದ ಮೂಲೆ ಮೂಲೆಯಲ್ಲಿ ಇದ್ದ ಆದಿವಾಸಿಗಳು, ಅಲೆಮಾರಿಗಳು, ಬುಡಕಟ್ಟು ಜನರು, ಅಸ್ಪೃಶ್ಯರು, ಮಹಿಳೆಯರು ಬಿಟ್ಟಿ ದುಡಿಮೆಗಾರರು ಮತ್ತು ಕಾರ್ಮಿಕರು ಅನ್ನ ವಸತಿಗಾಗಿ ಪರಿತಪಿಸುತ್ತಿದ್ದರು. ಅವರು ಒಂದು ಕಡೆ ಸ್ಥಳೀಯ ಭೂಮಾಲೀಕರ ವಿರುದ್ಧವೂ; ಮತ್ತೊಂದು ಕಡೆ ಬ್ರಿಟೀಶರ ವಿರುದ್ಧವೂ ರಾಜಿರಹಿತವಾದ ಸಮರ ಸಾರಿದ್ದರು. 540ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಇದ್ದ ಸಂಸ್ಥಾನಗಳು ಮತ್ತು ಮಹಾಸಂಸ್ಥಾನಗಳು ಬ್ರಿಟೀಷರ ಪರವಾಗಿ ಇದ್ದುಕೊಂಡು ಸ್ವಾತಂತ್ರö್ಯವನ್ನು ಘೋಷಣೆ ಮಾಡುವ ರೀತಿಯಲ್ಲಿ ಇರಲಿಲ್ಲ. ಅಂದರೆ, ಅತ್ಯಂತ ತೀವ್ರವಾದ ಆತಂಕವು ಇಡೀ ಭಾರತವನ್ನು ಆವರಿಸಿಕೊಂಡಿತ್ತು.
ಭಾರತದೊಳಗಿನ ವರ್ಗ, ಜಾತಿ, ಧರ್ಮ ಸಂಸ್ಕೃತಿ, ಭಾಷೆ, ಲಿಂಗ ಇವುಗಳ ಶ್ರೇಣೀಕೃತ ಅಸಮಾನತೆ ಕುದಿಯುವುದಕ್ಕೆ ಶುರುವಾಗಿತ್ತು. ಬಲಾಢ್ಯರು ಇವುಗಳ ಉಪಯೋಗ ಪಡೆಯಲು ಮುಂದಾಗಿದ್ದರು. ಅಸಹಾಯಕರನ್ನು ಅಂಚಿಗೆ ತಳ್ಳುವ ಸಂಚು ಮುಂದುವರೆದಿತ್ತು. ಹೀಗಾಗಿ ಭಾರತದೊಳಗಿನ ಹಲವು ಆತಂಕಗಳು ತೀವ್ರವಾಗಿದ್ದವು. ಅಂದರೆ ಭಾರತದಲ್ಲಿ ಸಂವಿಧಾನವನ್ನು ರಚನೆ ಮಾಡುವಾಗ ಭಾರತದ ಸಾಮಾಜಿಕ ಪರಿಸ್ಥಿತಿ ಮತ್ತು ಜಾಗತಿಕ ಮಟ್ಟದ ರಾಜಕೀಯ ಪರಿಸ್ಥಿತಿ ತಿಳಿಯಾಗಿ ಇರಲಿಲ್ಲ. ಅವು ಅತ್ಯಂತ ಏರಿಳಿತಗಳಿಂದ ಹಾಗೂ ಆತಂಕಗಳಿಂದ ಕೂಡಿದ್ದವು.
ಪರಿಸ್ಥಿತಿಯು ಸಮಾಧಾನವಾಗಿದ್ದಾಗ ಸಂವಿಧಾನ ರಚನೆ ಮಾಡುವುದಕ್ಕೂ ಮತ್ತು ಪರಿಸ್ಥಿತಿಯು ಆತಂಕದ ಸ್ಥಿತಿಯಲ್ಲಿ ಇದ್ದಾಗ ಸಂವಿಧಾನ ರಚನೆ ಮಾಡುವುದಕ್ಕೂ ಬಹಳ ವ್ಯತ್ಯಾಸ ಇರುತ್ತದೆ. ಇದನ್ನು ಬಹಳ ಸ್ಮೂಕ್ಷ್ಮವಾಗಿ ಮತ್ತು ಅಷ್ಟೇ ಗಂಭೀರವಾಗಿ ಪರಿಗಣಿಸಬೇಕು.
ಇಂತಹ ಚಾರಿತ್ರಿಕ ಸಂದರ್ಭದಲ್ಲಿ, ಭಾರತ ದೇಶವು ಆದಿ ಕಾಲದಿಂದ ವಿವಿಧ ರಾಜ್ಯಭಾರಗಳು, ವಿವಿಧ ಆಡಳಿತಗಳು, ವಿವಿಧ ಸಂಸ್ಕೃತಿಗಳು, ವಿವಿಧ ಧರ್ಮಗಳು, ವಿವಿಧ ಪರಂಪರೆಗಳಿಂದ ಸಾಗಿ ಬಂದಿದ್ದ ಅನುಭವ ಮತ್ತು ಅರಿವು ಸಂವಿಧಾನ ರಚನೆಕಾರರ ಮುಂದಿದ್ದವು. ಭಾರತ ರಾಷ್ಟçವನ್ನು ಬ್ರಿಟೀಶರ ಆಳ್ವಿಕೆಯಿಂದ ಮುಕ್ತಗೊಳಿಸಿದ ನಂತರದಲ್ಲಿ, ಮತ್ತೆ ಅಂತಹ ಪರಿಸ್ಥಿತಿಗಳಿಗೆ ಅವಕಾಶ ಕೊಡದಂತೆ ಹೊಸದಾಗಿ ಕಟ್ಟುವುದು ಹೇಗೆ, ತುಳಿಯುವ ಮತ್ತು ತುಳಿತವನ್ನು ಅನುಭವಿಸುತ್ತಿರುವ ಎಲ್ಲ ಪ್ರಜೆಗಳ ಭೌತಿಕ ಪರಿಸ್ಥಿತಿಯನ್ನು ಬದಲಾಯಿಸುವುದು ಹೇಗೆ, ಈ ಎರಡೂ ವರ್ಗಗಳ ಅಂತರಂಗವನ್ನು, ಗುಣಸ್ವಭಾವಗಳನ್ನು ಪರಿವರ್ತನೆ ಮಾಡುವುದು ಹೇಗೆ, ವಿವಿಧ ಸಂಸ್ಕೃತಿಗಳು, ಪರಂಪರೆಗಳು, ಧರ್ಮಗಳು, ಭಾಷೆಗಳು ಇವನ್ನು ಶೋಷಣಾಮುಕ್ತ ಮಾಡುವುದು ಹೇಗೆ ಎಂಬ ಬಹಳ ದೊಡ್ಡ ಸವಾಲುಗಳು ಸಂವಿಧಾನ ರಚನೆಕಾರರ ಮುಂದಿದ್ದವು.
ಆಧುನಿಕ ಕಾಲದಲ್ಲಿ ರಾಷ್ಟ್ರಗಳು ಹಾಗೂ ಅದರ ಪ್ರಜೆಗಳು ಎಂತಹ ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು, ಆಗ ರಾಷ್ಟç ಜೀವನವನ್ನೂ ಹಾಗೂ ಪ್ರಜೆಗಳ ಬದುಕನ್ನೂ ಹೇಗೆ ಸಮತೋಲನದಿಂದ ಪರಿವರ್ತನೆ ಮಾಡಬೇಕಾಗುತ್ತದೆ ಎಂಬಂತಹ ಅತ್ಯಂತ ದೂರಗಾಮಿ ಸವಾಲುಗಳು ಇವರ ಮುಂದೆ ಇದ್ದವು. ಆಸ್ತಿ, ಸಂಪತ್ತು, ಅಧಿಕಾರಗಳ ಖಾಸಗೀ ಒಡೆತನವನ್ನು ಬದಲಾಯಿಸುವುದು ಹೇಗೆ, ಇವುಗಳ ಅಸಮಾನತೆಯ ಹಂಚಿಕೆಯ ಕರಾಣದಿಂದ ಉಂಟಾಗಿರುವ ಆರ್ಥಿಕ-ಸಾಮಾಜಿಕ ಅಸಮಾನತೆಯನ್ನು ಸಮಾನತೆಯ ಸ್ಥಿತಿಗೆ ಪರಿವರ್ತಿಸುವುದು ಹೇಗೆ, ಭಾರತದ ಪರಂಪರೆಯಲ್ಲಿ ಮಹಿಳೆಯರನ್ನು, ಅಸ್ಪೃಶ್ಯರನ್ನು ಹೀನಾಯಾಗಿ ಕಾಣುತ್ತಿರುವ ಭೌತಿಕ ಮತ್ತು ಅಂತರಂಗದ ಪರಿಸ್ಥಿತಿಯನ್ನು ದಲಾಯಿಸುವುದು ಹೇಗೆ, ಎಂಬ ನೂರಾರು ಸವಾಲುಗಳು ಇವರ ಮುಂದೆ ಇದ್ದವು. ಸಂವಿಧಾನದ ರಚನೆಯ ಒಂದೊಂದು ಪದ ಸಂಯೋಜನೆಯಲ್ಲೂ ಇವು ಮತ್ತೆ ಮತ್ತೆ ಇವರನ್ನು ಕಾಡುತ್ತಿದ್ದವು.
1946ಜುಲೈ ತಿಂಗಳಲ್ಲಿ ಚುನಾವಣೆಯ ಮೂಲಕ ಸಂವಿಧಾನ ರಚನೆಯ ಸಮಿತಿಗೆ 296 ಸದಸ್ಯರನ್ನು ನೇಮಕ ಮಾಡಲಾಯಿತು. ಮುಸ್ಲಿಂ ಲೀಗ್‌ನ ಸದಸ್ಯರು ಸಂವಿಧಾನ ರಚನೆಯ ಸಭೆಗಳಲ್ಲಿ ಭಾಗವಹಿಸಲಿಲ್ಲ. ಉಳಿದ 272ಸದಸ್ಯರು 1946ರ ಡಿಸೆಂಬರ್ 9ರಂದು ಸಂವಿಧಾನ ರಚನೆಯ ಕೆಲಸವನ್ನು ಪ್ರಾರಂಭಿಸಿದರು. ಒಂದು ವರ್ಷ, 2 ತಿಂಗಳ ಅವಧಿಯಲ್ಲಿ ಸಂವಿಧಾನದ ಕರಡನ್ನು ಪೂರ್ಣಗೊಳಿಸಿದರು. 1948ರ ಫೆಬ್ರವರಿ 21ರಂದು ಇದನ್ನು ಪ್ರಜೆಗಳ ಮುಂದೆ ಪ್ರತಿಕ್ರಿಯೆಗೆ ಇಡಲಾಯಿತು. ಪ್ರಜೆಗಳು ಇದಕ್ಕೆ ಒಟ್ಟು 7,635 ತಿದ್ದುಪಡಿಗಳನ್ನು ಸೂಚಿಸಿದರು.
ಈ ತಿದ್ದುಪಡಿಗಳನ್ನು ಪರಿಶೀಲಿಸಿ ಸೂಕ್ತವಾದವುಗಳನ್ನು ಕರಡಿಗೆ ಸೇರಿಸಿ, 1949ನವೆಂಬರ್ 26ರಂದು ಅಂತಿಮ ಕರಡನ್ನು ಭಾರತದ ಪಾರ್ಲಿಮೆಂಟಿನಲ್ಲಿ ಮಂಡಿಸಲಾಯಿತು. ಭಾರತ ಸಂವಿಧಾನದ ಕರಡು ತಯಾರು ಮಾಡಲು ಒಟ್ಟು 2 ವರ್ಷ, 11 ತಿಂಗಳು, 17 ದಿನಗಳ ಕಾಲ ಎಡಬಿಡದೆ ಕೆಲಸ ಮಾಡಲಾಯಿತು.
ಸಂವಿಧಾನದ ಬಗೆಗೆ ಮಾತನಾಡುವುದು, ಚರ್ಚೆ ಮಾಡುವುದು ನನ್ನ ಪ್ರಕಾರ ಎರಡು ರೀತಿಯಲ್ಲಿ ನಡೆಯುತ್ತದೆ. ಒಂದು: ದೇಶವನ್ನು ಆಳ್ವಿಕೆ ಮಾಡಲು ಸಂವಿಧಾನವನ್ನು ಹೇಗೆ ಜಾರಿಗೊಳಿಸಬೇಕು ಎಂಬ ನೆಲೆ. ಎರಡು: ರಾಷ್ಟ್ರವನ್ನು ಕಟ್ಟಲು ಸಂವಿಧಾನದಿಂದ ಹೇಗೆ ಸ್ಫೂರ್ತಿ ಪಡೆಯಬೇಕು ಎಂಬ ನೆಲೆ ಅಥವಾ ಸಂವಿಧಾನದ ಆಶಯವನ್ನು ಅನುಸರಿಸಿ ದೇಶವನ್ನು ಹೇಗೆ ಕಟ್ಟಬೇಕು ಎಂಬ ನೆಲೆ.
ಸಂವಿಧಾನವು ಪ್ರಪಂಚದ ಯಾವ ಯಾವ ಸಂವಿಧಾನಗಳಿಂದ, ಯಾವ ಯಾವ ಅಂಶಗಳನ್ನು ಪಡೆದಿದೆ, ಅದರ ಅಗತ್ಯ ಎಷ್ಟು ಇತ್ತು, ಯಾಕೆ ಇತ್ತು ಎಂಬುದರ ಬಗೆಗೆ ಕೆಲವು ಮಾಹಿತಿಗಳನ್ನು ಆಧರಿಸಿ ಮಾತನಾಡುವ ಒಂದು ಕ್ರಮ ಇದೆ. ಇದರ ಮುಂದುವರೆದ ಭಾಗವಾಗಿ ಸಂವಿಧಾನದಲ್ಲಿ ಅಧ್ಯಾಯಗಳಿವೆ, ಎಷ್ಟು ಭಾಗಗಳಿವೆ, ಎಷ್ಟು ಅನುಚ್ಛೇದಗಳಿವೆ, ಒಂದೊಂದು ಅನುಚ್ಚೇದವು ಏನನ್ನು ಹೇಳುತ್ತದೆ ಎಂದು ಪರಿಚಯಾತ್ಮಕವಾಗಿ ಮಾತನಾಡುವ ಇನ್ನೊಂದು ಕ್ರಮ ಇದೆ.
ಇವತ್ತಿನ ನನ್ನ ಮಾತುಗಳ ಸ್ವರೂಪ ಈ ಎರಡೂ ಅಲ್ಲ. ಈ ಆಯಾಮ ನನಗೆ ಮುಖ್ಯವಲ್ಲ. ಇದಕ್ಕಿಂತ ಮುಖ್ಯವಾದ ಇನ್ನೊಂದು ಆಯಾಮ ನನಗೆ ಅತ್ಯಂತ ಮಹತ್ವದ್ದು. ಅದು ಯಾವುದು ಎಂದರೆ, ಅದನ್ನು ನಾನು ಕನ್ನಡದ ಸ್ಥಳೀಯ ನುಡಿಗಟ್ಟನ್ನು ಬಳಸಿ ಹೇಳುವುದಾದರೆ ಅದನ್ನು ನಾನು ಹದ ಎಂದು ಕರೆಯುತ್ತೇನೆ. ಹದ ಎಂದರೆ ಏನು? ಉದಾಹರಣೆಗೆ, ಟೀ ಮಾಡುವ ಕ್ರಮ ನಮಗೆಲ್ಲ ಪರಿಚಿತ. ಅದಕ್ಕೆ ಬೇಕಾಗುವ ವಸ್ತುಗಳು ಪರಿಚಿತ. ಆದರೆ ಒಬ್ಬರು ಮಾಡುವ ಟೀಯ ರುಚಿ ಮತ್ತೊಬ್ಬರು ಮಾಡಿದಂತೆ ಇರುವುದಿಲ್ಲ.
ಯಾಕೆಂದರೆ ಟೀಯನ್ನು ತಯಾರು ಮಾಡುವ ಕ್ರಮದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಹದವಿರುತ್ತದೆ. ಆ ಹದವನ್ನು ಅವಲಂಬಿಸಿ ಟೀ ರುಚಿ, ಸ್ವಾದ ಬದಲಾಗುತ್ತಾ ಹೋಗುತ್ತದೆ. ಇದು ಯಾಕೆ? ಇದು ನನಗೆ ಮುಖ್ಯವಾದ ಪ್ರಶ್ನೆ. ಇದು ಪಾಕಶಾಸ್ತçದ ಪ್ರಾವೀಣ್ಯತೆಯ ಪ್ರಶ್ನೆಯಲ್ಲ. ಈ ಮಾತನ್ನು ಮತ್ತೆ ನಾನು ವಿವರಿಸಲು ಹೋಗುವುದಿಲ್ಲ.
ಸಂವಿಧಾನವನ್ನು ಒಕ್ಕೊರಲಿನಿಂದ ಕಾನೂನುಗಳ ಗ್ರಂಥ ಎಂದು ಕರೆಯಲಾಗಿದೆ. ಈ ಕಾರಣದಿಂದ ಭಾರತದ ಸಂವಿಧಾನವನ್ನು ರಾಜ್ಯಶಾಸ್ತçದ ಪಂಡಿತರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಂಶೋಧಕರು ಓದಬೇಕು ಎಂಬ ಅಭಿಪ್ರಾಯವನ್ನು ರೂಪಿಸಲಾಗಿದೆ. ಜೊತೆಗೆ ಸಂವಿಧಾನವನ್ನು ವಕೀಲರು ಮತ್ತು ನ್ಯಾಯಾಧೀಶರು ಓದಬೇಕು ಹಾಗೂ ಅದನ್ನು ಕೋರ್ಟುಗಳ ವ್ಯಾಜ್ಯಗಳಿಗೆ ಆಧಾರವಾಗಿ ಬಳಸಬೇಕು ಎಂಬ ಬದಲಾಗದ ನಿಯಮವನ್ನು ಸೃಷ್ಟಿಸಲಾಗಿದೆ. ವಸ್ತುಸ್ಥಿತಿಯು ಕೂಡ ಅದೇ ರೀತಿಯಲ್ಲಿ ಮುಂದುವರಿದಿದೆ. ಈ ಕಾರಣದಿಂದ ರಾಜ್ಯಶಾಸ್ತ್ರ ಔಪಚಾರಿಕ ವಲಯದವರು ಹಾಗೂ ನ್ಯಾಯಾಂಗ ವ್ಯವಸ್ಥೆಯ ವೃತ್ತಿಪರ ಕೆಲಸಗಾರರು ಮಾತ್ರ ಸಂವಿಧಾನವನ್ನು ಪರಿಚಯಿಸಿಕೊಂಡಿದ್ದಾರೆ.
ಅಗತ್ಯವಿದ್ದಷ್ಟು ಅದರ ಅನುಚ್ಚೇದಗಳನ್ನು ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ಈ ಎರಡು ನಿರ್ದಿಷ್ಟ ವಲಯದವರನ್ನು ಬಿಟ್ಟರೆ ಉಳಿದ ವಲಯದವರು ಸಂವಿಧಾನ ಎಂಬ ಪುಸ್ತಕದ ಮುಖ ಪುಟವನ್ನು ಸಹ ನೋಡುವ ಗೋಜಿಗೆ ಹೋದಂತೆ ಕಾಣುವುದಿಲ್ಲ. ಯಾಕೆಂದರೆ ಅವರಿಗೆ ಅದರ ಅಗತ್ಯ ಇಲ್ಲ ಎಂಬ ಅಭಿಪ್ರಾಯವನ್ನು ರೂಪಿಸಲಾಗಿದೆ. ಈ ಮೂಲಕ ಸಂವಿಧಾನವನ್ನು ಓದಬಹುದಾಗಿದ್ದ ದಾರಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಹೀಗೆ ಬಂದ್ ಮಾಡಿರುವ ಬಾಗಿಲುಗಳನ್ನು ನಾವು ಇವತ್ತು ತೆರೆಯಬೇಕಾಗಿದೆ.
ಇತ್ತೀಚಿನ ದಿನಗಳಲ್ಲಿ ಎನ್.ಆರ್.ಸಿ. ಮತ್ತು ಸಿ.ಎ.ಎ.ಗಳ ಬಗ್ಗೆ ಒಂದು ಮಟ್ಟದ ಚರ್ಚೆಯಾಗುತ್ತಿದೆ.
ಭಾರತದ ಯಾವ ಸಮುದಾಯಗಳು ಇದುವರೆಗೆ ಸಂವಿಧಾನದ ಹೆಸರನ್ನು ಮತ್ತು ಡಾ. ಅಂಬೇಡ್ಕರರ ಹೆಸರನ್ನು ಹೇಳಿರಲಿಲ್ಲವೋ, ಆ ಸಮುದಾಯಗಳ ಕೆಲವು ನಾಯಕರು ಇವತ್ತು ಸಂವಿಧಾನ ಮತ್ತು ಅಂಬೇಡ್ಕರ್ ಎಂಬ ಎರಡು ಪದಗಳನ್ನಾದರೂ ಹೇಳುತ್ತಿದ್ದಾರೆ. ನನ್ನ ದೃಷ್ಟಿಯಲ್ಲಿ ಭಾರತದಲ್ಲಿ ಇದು ಬಹಳ ದೊಡ್ಡ ಬೆಳವಣಿಗೆ.
ಭಾರತದ ಸಂವಿಧಾನವನ್ನು ಕೇವಲ ಕಾನೂನುಗಳ ಗ್ರಂಥವೆಂದು ಪರಿಗಣಿಸಿದಾಗ, ಸಂವಿಧಾನದ ಪ್ರತಿಯೊಂದು ಅನುಚ್ಛೇದದಲ್ಲಿ ಏನು ಇದೆ ಎಂಬುದು ಮುಖ್ಯವಾಗುತ್ತದೆ. ಹಾಗಾಗಿ ಅದನ್ನುIn the Article, by the Aricle, through the Aricle, ಕ್ರಮದಲ್ಲಿ ಓದುವುದು ಮತ್ತು ಚರ್ಚಿಸುವುದು ಮುಖ್ಯವಾಗುತ್ತದೆ. ಈ ಏಕಮಾದರಿಯ ಓದು ನಮ್ಮನ್ನು ಸ್ವಲ್ಪವೂ ಆ ಕಡೆ ಈ ಕಡೆ ನೋಡಲು ಬಿಡುವುದಿಲ್ಲ; ಬಿಟ್ಟಿಲ್ಲ. ಹಾಗಾಗಿ ಕಾನೂನುಗಳಲ್ಲಿ ಏನಿದೆ ಎಂಬುದು ಮುಖ್ಯವಾಗಿ; ಕಾನೂನುಗಳ ಹಿಂದಿರುವ ಒಂದು ಹದ, ಒಂದು ಮಾನವೀಯತೆ ಏನಿದೆ ಅದನ್ನು ಗ್ರಹಿಸಲಾರದಂತೆ ಆಗಿದೆ. ಆದ್ದರಿಂದ ನಾವೀಗ Beyond the Aricle ಎಂಬ ನೆಲೆಯಲ್ಲಿ ಭಾರತದ ಸಂವಿಧಾನವನ್ನು ಗ್ರಹಿಸಬೇಕಾದ ಅಗತ್ಯವಿದೆ ಎಂದು ನಾನು ಭಾವಿಸಿದ್ದೇನೆ.
ಅಂದರೆ ಸಂವಿಧಾನವನ್ನು ಕಾನೂನುಗಳ ಒಂದು ಕಟ್ಟು ಎಂದು ಪರಿಭಾವಿಸಿ ಅದನ್ನು ಮಾಹಿತಿ ಪ್ರಧಾನವಾಗಿ ಓದಲಾಗಿದೆ. ಆದರೆ ಭಾರತದ ಸಂವಿಧಾನಕ್ಕೆ ಬಹಳ ದೊಡ್ಡ ಒಂದು ದರ್ಶನ ಇದೆ. ಅದಕ್ಕೆ ಪ್ರಜೆಗಳ ಅಂತರಂಗ ಮತ್ತು ಬಹಿರಂಗವನ್ನು ಶುದ್ಧೀಕರಿಸುವ, ಪವಿತ್ರೀಕರಿಸುವ, ಕಟ್ಟುವ, ಸೃಷ್ಟಿಸುವ, ನಿರ್ಮಿಸುವ ಆ ಮೂಲಕ ಇಡೀ ದೇಶವನ್ನು ಕಟ್ಟುವ, ಹೊಸ ರಾಷ್ಟçವನ್ನು ಸೃಷ್ಟಿಸುವ ಬಹಳ ದೊಡ್ಡ ದರ್ಶನ ಇದೆ. ಈ ದೃಷ್ಟಿಯಲ್ಲಿ ನಾವೀಗ ಭಾರತದ ಸಂವಿಧಾನವನ್ನು ಓದಬೇಕಾಗಿದೆ; ಗ್ರಹಿಸಬೇಕಾಗಿದೆ.
ಇದುವರೆಗೆ ಸಂವಿಧಾನವನ್ನು ಓದಿರುವ ಮತ್ತು ಅದನ್ನು ಬಳಸಿರುವ ಕ್ರಮದ ಬಗೆಗೆ ನನಗೆ ಬಹಳ ದೊಡ್ಡ ತಕರಾರು ಇದೆ. ನನ್ನ ಈ ಮಾತುಗಳಿಗೆ ಒಂದು ಖಚಿತವಾದ ವ್ಯಾಖ್ಯಾನವನ್ನು ಮಾಡುವುದಾದರೆ, ಆಳುವವರು ಸಂವಿಧಾನವನ್ನು ಓದುವ ಬಗೆ ಮತ್ತು ಪ್ರಜೆಗಳು ಸಂವಿಧಾನವನ್ನು ಓದುವ ಬಗೆ ಎಂದು ಎರಡು ನೆಲೆಗಳನ್ನಾಗಿ ನಾನು ವಿಂಗಡಿಸುತ್ತೇನೆ. ಇದನ್ನು ಬೇರೆ ಮಾತುಗಳಲ್ಲಿ ಹೇಳುವುದಾದರೆ ಆಳುವ ವರ್ಗದ ಸಂವಿಧಾನದ ಓದು ಮತ್ತು ಪ್ರಜೆಗಳ ಸಂವಿಧಾನದ ಓದು ಎಂದು ನಾನು ಹೇಳುತ್ತೇನೆ. ಆಳುವವರು ರಾಷ್ಟ್ರವನ್ನು ಆಳುವುದಕ್ಕಾಗಿ; ಪ್ರಜೆಗಳನ್ನು ಆಳುವುದಕ್ಕಾಗಿ ಸಂವಿಧಾನವನ್ನು ಓದುತ್ತಾರೆ; ಗ್ರಹಿಸುತ್ತಾರೆ ಮತ್ತು ಬಳಸುತ್ತಾರೆ.
ಆದರೆ ಆಳುವ ಜನ ಅಲ್ಲದ ನಾವು; ಭಾರತದ ಪ್ರಜೆಗಳಾದ ನಾವು ಹೊಸ ಪ್ರಜೆಗಳನ್ನು ರೂಪಿಸುವುದಕ್ಕಾಗಿ, ನಾವೇ ಹೊಸ ಪ್ರಜೆಗಳಾಗಿ ರೂಪುಗೊಳ್ಳುವುದಕ್ಕಾಗಿ, ಹೊಸ ರಾಷ್ಟçವನ್ನು ಕಟ್ಟುವುದಕ್ಕಾಗಿ ಸಂವಿಧಾನವನ್ನು ಓದಬೇಕು; ಗ್ರಹಿಸಬೇಕು; ಚರ್ಚೆ ಮಾಡಬೇಕು. “ಸಂವಿಧಾನದ ಓದು’’, “ಸಂವಿಧಾನ ಕುರಿತ ವಿಚಾರ ಸಂಕಿರಣ’’ ಈ ಮುಂತಾದ ಸಂದರ್ಭಗಳಲ್ಲಿ ನಾವು ಮೂಲಭೂತವಾಗಿ ಕೇಳಿಕೊಳ್ಳಬೇಕಾದ ಪ್ರಶ್ನೆ ಎಂದರೆ; ದೇಶವನ್ನು ಆಳುವುದಕ್ಕಾಗಿ ಸಂವಿಧಾನದ ಚರ್ಚೆಯೊ ಅಥವಾ ಹೊಸ ರಾಷ್ಟçವನ್ನು ಕಟ್ಟುವುದಕ್ಕಾಗಿ ಸಂವಿಧಾನದ ಚರ್ಚೆಯೊ ಎಂಬ ಮುಖ್ಯ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು.
ಸಂವಿಧಾನವನ್ನು ಇದುವರೆಗೆ ಎಲ್ಲಿ ಓದಲಾಗಿದೆ ಮತ್ತು ಹೇಗೆ ಓದಲಾಗಿದೆ ಎಂಬುದು ನಮಗೆಲ್ಲ ಚಿರಪರಿಚಿತ. ನಾನು ಆಗಲೆ ಹೇಳಿದಂತೆ ಕೋರ್ಟುಗಳು ಮತ್ತು ಸಾಂಪ್ರದಾಯಿಕ ರಾಜ್ಯಶಾಸ್ತçದ ಅಧ್ಯಾಪಕರು ಅದರ ಬಳಕೆದಾರರಾಗಿದ್ದಾರೆ. ಅವರೆಲ್ಲರೂ ಅದನ್ನು ಕಾನೂನುಗಳ ಗ್ರಂಥ ಮತ್ತು ಕೇವಲ ಕಾನೂನುಗಳ ಗ್ರಂಥ ಎಂದು ಓದಿದ್ದಾರೆ.
ಇದರ ಪರಿಣಾಮವಾಗಿ ಭಾರತದ ಸಂವಿಧಾನವನ್ನು ಹೀಗೆ ಆಳುವವರ ಕೈಪಿಡಿಯಾಗಿ ಮತ್ತು ಅವರ ಮಾರ್ಗದರ್ಶಿ ಸೂತ್ರವಾಗಿ ಸಂಕುಚಿತಗೊಳಿಸಲಾಗಿದೆ. ಇದು ಸರಿಯಲ್ಲ. ಭಾರತದ ಸಂವಿಧಾನವನ್ನು ಇಡೀ ಭಾರತದ ಅಧೋಲೋಕದ ಪರಿಸ್ಥಿತಿಯು ಬದಲಾಗಿರುವ ಮತ್ತು ಬದಲಾಗುತ್ತಿರುವ ಸಂಕೀರ್ಣವಾದ ಒಡಲಿನಲ್ಲಿ ಇಟ್ಟು ಓದಬೇಕು ಮತ್ತು ಅದರಿಂದ ನಾವು ಕಲಿಯಬೇಕು. ಭಾರತೀಯ ಸಮಾಜವನ್ನು ಪ್ರಭಾವಿಸುತ್ತಿರುವ ಮತ್ತು ನಿಯಂತ್ರಿಸುತ್ತಿರುವ ಧರ್ಮ ಗ್ರಂಥಗಳ ಜೊತೆಗೆ ಭಾರತದ ಸಂವಿಧಾನವನ್ನು ಇಟ್ಟು ಓದಬೇಕು. ಅಂಬೇಡ್ಕರ್ ಅವರು ಬುದ್ಧನನ್ನು ಕಾರ್ಲ್ಮಾರ್ಕ್ಸ್ನ ಜೊತೆಗೆ ಇಟ್ಟು ಓದಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


