Connect with us

ಬಹಿರಂಗ

ದಿ ಗ್ರೇಟೆಸ್ಟ್‌ ಇಂಡಿಯನ್ ಡಾ.ಅಂಬೇಡ್ಕರ್..!

Published

on

  • ರಘೋತ್ತಮ ಹೊ‌.ಬ

2011-12 ರಲ್ಲಿ ಔಟ್ ಲುಕ್ ಪತ್ರಿಕೆ
ಸಿ ಎನ್ ಎನ್ -ಐಬಿಎನ್, ಹಿಸ್ಟರಿ -18 ಮತ್ತು ಬಿಬಿಸಿ ಚಾನಲ್ ಗಳ ಸಹಯೋಗದೊಂದಿಗೆ ಒಂದು ಬೃಹತ್ ಸಮೀಕ್ಷೆ ಹಮ್ಮಿಕೊಂಡಿತ್ತು. ಆ ಸಮೀಕ್ಷೆ “ದಿ ಗ್ರೇಟೆಸ್ಟ್ ಇಂಡಿಯನ್ ಆಫ್ಟರ್ ಮಹಾತ್ಮ ಗಾಂಧಿ” ಎಂಬುದಾಗಿತ್ತು.

ರಾಷ್ಟ್ರಪಿತ ಎಂದು ಮಹಾತ್ಮ ಗಾಂಧಿಯವರು ಅದಾಗಲೇ ಕರೆಯಲ್ಪಟ್ಟಿದ್ದರಿಂದ ಗಾಂಧೀಜಿಯವರ ಹೆಸರನ್ನು ಹೊರತುಪಡಿಸಿ ಇಂತಹ ಒಂದು ಸಮೀಕ್ಷೆ ಯನ್ನು ವಿಶ್ವಮಟ್ಟದಲ್ಲಿ ಕೈಗೊಳ್ಳಲಾಗಿತ್ತು. ಇದು ಹೊಸದೇನು ಆಗಿರಲಿಲ್ಲ. ಅದಾಗಲೇ ಸುಮಾರು 21 ದೇಶಗಳಲ್ಲಿ ಆಯಾ ದೇಶಗಳ ಗ್ರೇಟೆಸ್ಟ್ ವ್ಯಕ್ತಿಗಳು ಯಾರು ಎಂಬ ಸಮೀಕ್ಷೆ ನಡೆದಿತ್ತು. ಆ ನಿಟ್ಟಿನಲ್ಲಿ ಉದಾಹರಣೆಗೆ ಇಂಗ್ಲೆಂಡ್ ನಲ್ಲಿ ಅಲ್ಲಿಯ ಮಾಜಿ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಗ್ರೇಟೆಸ್ಟ್ ಆಗಿ ಹೊರಹಮ್ಮಿದ್ದರೆ ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾ ಗ್ರೇಟೆಸ್ಟ್ ಆಗಿ ಹೊರಹೊಮ್ಮಿದ್ದರು.

ಅಂದಹಾಗೆ ಇದು ನಿಜಕ್ಕೂ ಟಫ್ ಕಾಂಪಿಟಿಷನ್ ಆಗಿತ್ತು, ಆಯ್ಕೆ ಒಂದು ರೀತಿ ಚಾಲೆಂಜ್ ಕೂಡ ಆಗಿತ್ತು. ಯಾಕೆಂದರೆ ಔಟ್ ಲುಕ್ ಪತ್ರಿಕೆ ಇಟ್ಟಿದ್ದ ಮಾನದಂಡಗಳು “ಸ್ವಾತಂತ್ರ್ಯಾನಂತರ ಗರಿಷ್ಠ ಸಂಖ್ಯೆಯ ಭಾರತೀಯರನ್ನು ಮುನ್ನಡೆಸಿದ್ದು, ಅವರ ಬುದ್ಧಿವಂತಿಕೆ, ನಾಯಕತ್ವ, ಮಾನವ ಜನಾಂಗದೆಡೆಗಿನ ಪ್ರೀತಿ ಇವು ಗ್ರೇಟೆಸ್ಟ್ ಇಂಡಿಯನ್ ಸ್ಪರ್ಧೆಯ ಅಳತೆಗೋಲಾಗಿದ್ದವು. (ಔಟ್ ಲುಕ್ ವಿಶೇಷಾಂಕ, ಆಗಸ್ಟ್ 20, 2012). ಹಾಗೆ ಸ್ಪರ್ಧೆಯು ಮೂರು ಹಂತಗಳನ್ನು ಒಳಗೊಂಡಿತ್ತು.

1.100 ಜನರಲ್ಲಿ ಸ್ಪರ್ಧೆಗೆ 50 ಜನರನ್ನು ಇಳಿಸುವ ಅಥವಾ short list ಮಾಡುವ 28 ಜನ ಪ್ರಮುಖ ಭಾರತೀಯರ ಒಂದು ಆಯ್ಕೆ ಸಮಿತಿ.

2. ಜನಪ್ರಿಯ ಮತಗಳು (popular votes) ತಿಳಿಯಲು ಮೊದಲು ಆನ್ ಲೈನ್ ಮೂಲಕದ ಮತದಾನ, ನಂತರ ಮಿಸ್ಡ್ ಕಾಲ್ ಮೂಲಕ ಮತದಾನ.

3. ಎ.ಸಿ‌ ನೀಲ್ಸನ್ ಸಂಸ್ಥೆಯಿಂದ ದೇಶದ 15 ನಗರಗಳಲ್ಲಿ ನಡೆದ ಎರಡು ಹಂತಗಳ ಸ್ಯಾಂಪಲ್ ಸರ್ವೆ.

ಮೊದಲನೆಯ ಹಂತದ ಮತದಾನ ಆನ್ ಲೈನ್ ಮೂಲಕದ ಮತದಾನ “ಗ್ರೇಟೆಸ್ಟ್ ಇಂಡಿಯನ್. ಇನ್” ವೆಬ್ ಸೈಟ್ ನಲ್ಲಿ 2012 ಜೂನ್ 4 ರಿಂದ 25 ರವರೆಗೆ ನಡೆಯಿತು. ಈ ಹಂತ 71 ಲಕ್ಷ ಮತದಾರರು ಆನ್ ಲೈನ್ ನಲ್ಲಿ ಚಲಾಯಿಸಲ್ಪಟ್ಟಿದ್ದವು. ಈ ಹಂತದಲ್ಲಿ 50 ಜನ ಸ್ಪರ್ಧಿಗಳಲ್ಲಿ ಮೊದಲ ಹತ್ತು ಜನರ ಪಟ್ಟಿ ಅದೇ ತಿಂಗಳ 31ರಂದು ಬಿಡುಗಡೆಗೊಂಡಿತು.
ಆ ಪಟ್ಟಿಯಲ್ಲಿ ಡಾ.ಅಂಬೇಡ್ಕರರು ಇದ್ದರಾದರೂ ಟಾಪ್ ಆಗಿರಲಿಲ್ಲ.

ಆದರೆ ಎರಡನೇ ಹಂತದ ಮತದಾನ, ಈ ಹಂತದಲ್ಲಿ ಮಿಸ್ಡ್ ಕಾಲ್ ನೀಡುವ ಮೂಲಕ ಮತದಾನ ಮಾಡುವ ಅವಕಾಶವನ್ನು ಸಾರ್ವಜನಿಕರಿಗೆ ನೀಡಲಾಯಿತು. ಇದರಲ್ಲಿ ಸುಮಾರು 2 ಕೋಟಿ ಮತಗಳು ಚಲಾವಣೆಯಾದವು.

ಜುಲೈ 1 ರಿಂದ ಜುಲೈ 31 ರವರೆಗೆ ನಡೆದ ಈ ಮತದಾನದಲ್ಲಿ ಎಲ್ಲರ ಊಹೆ ಮೀರಿ ಬಾಬಾಸಾಹೇಬ್ ಅಂಬೇಡ್ಕರರು ಪ್ರಪ್ರಥಮರಾಗಿ ಹೊರಹೊಮ್ಮಿದರು. ಯಾವ ರೀತಿ ಎಂದರೆ ಸಿಂಧು(valid) ಎಂದು ಪರಿಗಣಿಸಲ್ಪಟ್ಟ 43 ಲಕ್ಷ ಮತಗಳಲ್ಲಿ ಡಾ.ಅಂಬೇಡ್ಕರರೊಬ್ಬರೇ ಬರೋಬ್ಬರಿ 20 ಲಕ್ಷ ಮತ ಪಡೆದಿದ್ದರು! ಆ ಮೂಲಕ ಡಾ.ಅಂಬೇಡ್ಕರರು “ಸ್ವತಂತ್ರ ಭಾರತದ ಗ್ರೇಟೆಸ್ಟ್ ಇಂಡಿಯನ್” ಆಗಿ ಹೊರಹೊಮ್ಮಿದ್ದರು!!

ವಾಸ್ತವ ಏನೆಂದರೆ ಈ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದ ಲೇಖಕ ಎಸ್.ಆನಂದ್ ರ ಪ್ರಕಾರ ಈ ಫಲಿತಾಂಶ ಮಧ್ಯಮ ವರ್ಗ ಮತ್ತು ಉಚ್ಛ ವರ್ಗ ಭಾರತೀಯರ ಹುಬ್ಬೇರಿಸಿತ್ತು. ಯಾಕೆಂದರೆ ಮತದಾನ ಆರಂಭವಾದ ಮೊದಲ ವಾರದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಮೊದಲ ಸ್ಥಾನದಲ್ಲಿದ್ದರು.

ಅಲ್ಲದೇ 50 ಜನ ಸ್ಪರ್ಧಿಗಳ ಆ ಪಟ್ಟಿಯಲ್ಲಿ ಮಾಜಿ ಪ್ರಧಾನಿಗಳಾದ ಪಂಡಿತ್ ಜವಹರಲಾಲ್ ನೆಹರು, ಇಂದಿರಾ ಗಾಂಧಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್, ಸಮಾಜವಾದಿ ನೇತಾರ ರಾಮ ಮನೋಹರ ಲೋಹಿಯಾ, ಡಾ.ಎ.ಪಿ.ಜೆ‌.ಅಬ್ದುಲ್ ಕಲಾಂ, ಮದರ್ ಥೆರೆಸಾ, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಅಮಿತಾಭ್ ಬಚ್ಚನ್… ಹೀಗೆ ಘಟಾನುಘಟಿಗಳಿದ್ದರು.

ಈ ಘಟಾನುಘಟಿಗಳನ್ನು ಮೀರಿಸಿ ಈ ದೇಶದ ಜನ ಅಂಬೇಡ್ಕರರನ್ನು ಆರಿಸುವರೇ ಎಂದು ಅಂತಹವರು ಕುಹಕವಾಡಿದ್ದರು ಮತ್ತು ಇಂತಹ ಕುಹಕಕ್ಕೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಪ್ರಜ್ಞಾವಂತ ಅನೇಕರು ಅಕ್ಷರಶಃ ಆತಂಕಗೊಂಡಿದ್ದರು‌.

ಹಾಗೆಯೇ ಈ ದೇಶದ ಪಠ್ಯಪುಸ್ತಕಗಳು, ಯೂನಿವರ್ಸಿಟಿಗಳು ಗಾಂಧಿ, ನೆಹರು, ಪಟೇಲ್… ಇತ್ಯಾದಿ ಮಹಾನ್ ವ್ಯಕ್ತಿಗಳ ಬಗ್ಗೆ ಉದ್ದುದ್ದ ಪಠ್ಯ ಇಟ್ಟಿವೆ ಬಾಬಾಸಾಹೇಬ್ ಅಂಬೇಡ್ಕರರ ಬಗ್ಗೆ ಎಲ್ಲೋ ಒಂದೆರಡು ಸಾಲು ಬರೆದಿವೆ! ಇಂತಹ ವ್ಯವಸ್ಥೆಯಲ್ಲಿ ಅಂಬೇಡ್ಕರರು ಗ್ರೇಟೆಸ್ಟ್ ಆಗಿ ಹೊಮ್ಮುವರೇ ಎಂದೂ ಅವರ ಅನುಯಾಯಿಗಳು ಆತಂಕಿತರಾಗಿದ್ದರು.

ಆದರೆ ಸಾಮಾಜಿಕ ಮಾಧ್ಯಮಗಳು ಮತ್ತು ಆನ್ ಲೈನ್ ವೆಬ್ ಸೈಟ್ ಗಳಲ್ಲಿ ಮಂಚೂಣಿ ಮಾಧ್ಯಮಗಳನ್ನು ಮೀರಿ ಚುರುಕಾಗಿರುವ ದಲಿತ ವಿದ್ಯಾವಂತ ಮಧ್ಯಮ ವರ್ಗ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡಿತು, ಚಾಲೆಂಜ್ ಆಗಿ ತೆಗೆದುಕೊಂಡಿತು. ದೇಶಾದ್ಯಂತ ಬಾಬಾಸಾಹೇಬ್ ಅಂಬೇಡ್ಕರರ ಹೆಸರಿಗೆ ಮಿಸ್ಡ್ ಕಾಲ್ ಕೊಡಿ ಎಂಬ ಅಭೂತಪೂರ್ವ ಅಭಿಯಾನವನ್ನೇ ಈ ಯುವ ಪಡೆ ಹಮ್ಮಿಕೊಂಡಿತು. ಪರಿಣಾಮ ಡಾ.ಅಂಬೇಡ್ಕರರು “ದ ಗ್ರೇಟೆಸ್ಟ್ ಇಂಡಿಯನ್” ಆಗಿ ಹೊಮ್ಮಿದ್ದರು.

ಆ ಸಂದರ್ಭ ಅನಿಲ್ ಗುಪ್ತ ಎಂಬುವವರು “ದಿ ರಾಯಿಟರ್ಸ್” ವೆಬ್ ಸೈಟ್ ಗೆ ಅಂಬೇಡ್ಕರರ ಈ ಗೆಲುವಿನ ಬಗ್ಗೆ ಒಂದು ಕಮೆಂಟ್ ಮಾಡುತ್ತಾರೆ. ಆ ಕಮೆಂಟ್ ಹೇಳುವುದೇನೆಂದರೆ “ಡಾ.ಅಂಬೇಡ್ಕರರು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ವಿಶ್ವದಲ್ಲೇ ಶ್ರೇಷ್ಠ ಬುದ್ಧಿವಂತಿಕೆಯ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾದವರು, ಶ್ರೇಷ್ಠ ಅರ್ಥಶಾಸ್ತ್ರಜ್ಞ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಗೆ ಕಾರಣರಾದವರು, ಭಾರತದ ಸಂವಿಧಾನ ಶಿಲ್ಪಿ ಎಂಬ ಖ್ಯಾತಿಗೆ ಪಾತ್ರರಾದವರು, ಅಮೆರಿಕ, ಇಂಗ್ಲೆಂಡ್, ಜರ್ಮನಿ ಹೀಗೆ ಮೂರು ದೇಶಗಳ ಡಾಕ್ಟರೇಟ್ ಪದವಿ ಪಡೆದವರು, ಸಾವಿರ ವರ್ಷಗಳು ಮಿಕ್ಕಿ ಕಾಡುತ್ತಿದ್ದ ಅಸ್ಪೃಶ್ಯತೆ ಕೊನೆಗಾಣಿಸಿದವರು, ಮುಚ್ಚಿ ಹೋಗಿದ್ದ ಹಳೆಯ ಧರ್ಮ ಬೌದ್ಧ ಧರ್ಮವನ್ನು ಪುನರುಜ್ಜೀವನಗೊಳಿಸಿದವರು, ಶ್ರೇಷ್ಠ ಇಂಗ್ಲಿಷ್ ಲೇಖಕ, ಕಾರ್ಮಿಕ ಹಕ್ಕುಗಳ ರಕ್ಷಕ, ಮಹಿಳಾ ಹಕ್ಕುಗಳ ನಿರ್ಮಾತೃ…

ಅನಿಲ್ ಗುಪ್ತರ ಈ ಕಮೆಂಟ್ ಎಲ್ಲವನ್ನೂ ಹೇಳುತ್ತದೆ ಗ್ರೇಟೆಸ್ಟ್ ಇಂಡಿಯನ್ ಆಗಿ ಡಾ.ಅಂಬೇಡ್ಕರರು ಏಕೆ ಆಯ್ಕೆಯಾದರು ಎಂಬುದನ್ನು. ಆ ನಿಟ್ಟಿನಲ್ಲಿ 2012 ರಲ್ಲಿ ನಡೆದ ಆ ಸಮೀಕ್ಷೆ ಬಾಬಾಸಾಹೇಬ್ ಅಂಬೇಡ್ಕರರ ಆ ಮಹಾನ್ ಸಾಧನೆಗೆ ಒಂದು ಅರ್ಥಪೂರ್ಣ ಮುದ್ರೆಯೊತ್ತಿತ್ತು. ಖಂಡಿತ, ಅಂಬೇಡ್ಕರರ ಆ ಅರ್ಥಪೂರ್ಣ ಗ್ರೇಟೆಸ್ಟ್ ಸಾಧನೆ ಸರಿಗಟ್ಟುವ ಮತ್ತೊಂದು ವ್ಯಕ್ತಿತ್ವ ಈ ಭಾರತದಲ್ಲಿ ಮತ್ತೆ ಹುಟ್ಟುವ ಸಾಧ್ಯತೆ ಇಲ್ಲ ಎಂಬುದನ್ನು ಕೂಡ ಆ ಸಮೀಕ್ಷೆ ಸಾರಿ ಹೇಳಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಪೂನಾ ಒಪ್ಪಂದಕ್ಕೆ 92 ವರ್ಷ

Published

on

  • ಮಲ್ಕುಂಡಿ ಮಹದೇವ ಸ್ವಾಮಿ

ಅಂಬೇಡ್ಕರ್ ಜೀ ನಮ್ಮ ತಂದೆ ‘ಮುಳುಗುತ್ತಿದ್ದಾರೆ’ ಅವರ ಪ್ರಾಣ ಉಳಿಸಿ” ದೇವದಾಸ್ ಗಾಂಧಿ.

“ನನ್ನನ್ನು ಗಲ್ಲಿಗೇರಿಸಿದರೂ ನಂಬಿದ ಜನರ ವಿಶ್ವಾಸಕ್ಕೆ ದ್ರೋಹ ಮಾಡುವುದಿಲ್ಲ” ಡಾ. ಅಂಬೇಡ್ಕರ್.

ಅಂದು ಅಕೋಲದಲ್ಲಿ ಗಾಂಧಿಜೀ ತಂಗಿದ್ದರು. ಅಲ್ಲಿಗೆ ಕೆಲವು ಅಂಬೇಡ್ಕರ್ ಅನುಯಾಯಿಗಳು ಬಂದು ಗಾಂಧಿಯವರನ್ನು ಭೇಟಿಯಾಗಿ, ಕೆಲವು ಪ್ರಶ್ನೆಗಳನ್ನು ಕೇಳಿದರು. “ಗಾಂಧೀಜಿಯವರೇ, ಕೆಲವರು ತಿಲಕರನ್ನು ದೇವರೆಂದು ಪೂಜಿಸುವಂತೆ, ಅಂಬೇಡ್ಕರರನ್ನು ದೇವರೆಂದು ಪೂಜಿಸಬಹುದೇ….? ಗಾಂಧೀಜಿಯವರು ಉತ್ತರಿಸುತ್ತಾ, ಪೂಜಿಸಬಹುದು. ಪೂಜಿಸುವವರಿಗೆ ಈ ಹಕ್ಕಿದೆ. ಅಂಬೇಡ್ಕರರನ್ನು ನಾನು ಮೆಚ್ಚುತ್ತೇನೆ. ನಾನು ಅವರ ದೃಷ್ಟಿಕೋನಗಳಿಂದ ಭಿನ್ನವಾಗಿದ್ದೇನೆ ಆದರೆ ಅವರು ಧೈರ್ಯಶಾಲಿ ಎಂದು ಒಪ್ಪಿಕೊಳ್ಳುತ್ತೇನೆ. ಧೈರ್ಯಶಾಲಿ ಪುರುಷ ಕೂಡ ತಪ್ಪು ಮಾಡುತ್ತಾನೆ. ನಾನು ನನ್ನನ್ನು ಧೈರ್ಯಶಾಲಿ ಎಂದು ಸ್ವತಹ ನಿರ್ಧರಿಸಿಕೊಳ್ಳುತ್ತೇನೆ ಮತ್ತು ನಾನು ಅನೇಕ ತಪ್ಪುಗಳನ್ನು ಮಾಡಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ” ಎಂದರು.

ತಿಲಕರನ್ನು ದೇವರೆಂದು ಭಾವಿಸಿದ್ದ ಗಾಂಧೀಜಿಗೆ ಪ್ರಶ್ನಿಸಿದ ಅಂಬೇಡ್ಕರ್ ಅನುಯಾಯಿಗಳು ಪೂನಾ ಒಪಂದದಿಂದಾದ ಅನ್ಯಾಯದ ಸಿಟ್ಟನ್ನು ತೋಡಿಕೊಂಡರು. ಮತ್ತು ಈ ಒಪ್ಪಂದ ಇನ್ನು ಮುಂದಿನ ಪೀಳಿಗೆಯೂ ಪ್ರಶ್ನಿಸುವ ಅಧಿಕಾರವನ್ನು ಶಾಶ್ವತವಾಗಿ ಕಿತ್ತುಕೊಂಡಿತು ಎಂಬ ಮತ್ತೊಂದು ಸಿಟ್ಟುಕೂಡ ಅಲ್ಲಡಗಿತ್ತು. ನೀವು ಪ್ರಶ್ನಿಸುವವರಾಗಿದ್ದರೇ ಈ ಪ್ರಸಂಗದ ವಿಶ್ಲೇಷಣೆಯನ್ನು ನಿಮಗೇ ಬಿಡುತ್ತೇನೆ.

ರಾಮ್ಸೆ ಮೆಕ್ ಡೊನಾಲ್ಡ್ ರವರಿಗೆ ಆಗಸ್ಟ್ 18 ಗಾಂಧಿಜೀ ಪತ್ರ ಬರೆದು ಬ್ರಿಟಿಷ್ ರ ಕೋಮುವಾರು ತೀರ್ಪನ್ನು ಕಟುವಾಗಿ ಟೀಕಿಸಿದ್ದರು. ಮತ್ತು ತಮ್ಮ ಅಸಮ್ಮತಿಯನ್ನು ತೋರಿದರು. ಸೆಪ್ಟೆಂಬರ್ 9 ಬ್ರಿಟಿಷರು ಗಾಂಧೀಜಿ ಯವರ ನಿರ್ಧಾರವನ್ನು ನಿರಾಕರಿಸಿದ ಕಾರಣ. ಆ ಸೋಮವಾರ ಎಲ್ಲಾ ನಾಯಕರು ಜಮಾಯಿಸಿ ಅಂಬೇಡ್ಕರರನ್ನು ಕೇಳಿದಾಗ: ” ಗಾಂಧೀಜಿ ಅವರಿಗಾಗಿ ಇಂತಹ ಮಹಾತ್ಯಾಗ ಮಾಡಲಾರೆ ” ಎಂದರು. ಮರುದಿನ ಮಹಾತ್ಮಗಾಂಧಿಜೀಯವರು ಆ ಮಾವಿನ ತೋಪಿನಲ್ಲಿ ಉಪವಾಸಕ್ಕೆ ಕುಳಿತರು.

ಉಪವಾಸದ 3 ದಿನಗಳ ನಂತರ ಅಂಬೇಡ್ಕರ್ ಅವರಿಗೆ ಎಲ್ಲಾ ಕಡೆಯಿಂದ ಬೆದರಿಕೆ ಕರೆಗಳು ಬರಲು ಆರಂಭಿಸಿದವು. ಕೆಲವು ಗೂಂಡಾಗಳು ನೇರವಾಗಿ ಅಂಬೇಡ್ಕರರನ್ನು ಪ್ರಶ್ನಿಸಿದ್ದರು. ಬಹುತೇಕ ಎಲ್ಲ ಪತ್ರಿಕೆಗಳು ಗಾಂಧಿಯವರನ್ನು ಬೆಂಬಲಿಸುತ್ತಿವೆ ಮತ್ತು ಅಂಬೇಡ್ಕರರನ್ನು ವಿರೋಧಿಸುತ್ತಿವೆ. ಅವರ ರಕ್ತದ ಒತ್ತಡ ಹೆಚ್ಚುತ್ತಿದೆ.

ಉದ್ರಿಕ್ತತೆ ಹೆಚ್ಚಾಯಿತು, ಅಂಬೇಡ್ಕರ್ ಖಳನಾಯಕ, ದೇಶದ್ರೋಹಿ, ಭಾರತವನ್ನು ಛಿದ್ರಗೊಳಿಸಲು ಬಯಸಿದ ವ್ಯಕ್ತಿ, ಗಾಂಧಿಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದ ವ್ಯಕ್ತಿ. ಟ್ಯಾಗೋರ್, ನೆಹರು ಮತ್ತು ಸಿ. ರಾಜಗೋಪಾಲಾಚಾರಿ ಸೇರಿದಂತೆ ಗರಂ ದಾಲ್ (ಉಗ್ರಗಾಮಿಗಳು) ಹಾಗೂ ನರಮ್ ದಾಲ್ (ಮಿತವಾದಿಗಳು) ರಾಜಕೀಯ ಭಾರೀ ತೂಕ ಗಾಂಧಿಯ ಕಡೆ ತೂಗಿತು. ಆದರೂ ಅಂಬೇಡ್ಕರ್ ರದು ಅದೇಮಾತು.

“ನಾನು ನನ್ನ ಆದ್ಯ ಕರ್ತವ್ಯಕ್ಕೆ ದ್ರೋಹ ಬಗೆಯಲಾರೆ ಮತ್ತು ನನ್ನನ್ನು ಗಲ್ಲಿಗೇರಿಸಿದರೂ ನಂಬಿದ ಜನರ ನ್ಯಾಯಯುತ ಮತ್ತು ನ್ಯಾಯ ಸಮ್ಮತವಾದ ವಿಶ್ವಾಸಕ್ಕೆ ದ್ರೋಹ ಮಾಡುವುದಿಲ್ಲ” ಎಂಬದು. ಅಂಬೇಡ್ಕರ್‌ ರವರ ಈ ಕಾಠಿಣ್ಯ, ಗಾಂಧಿಯವರ ಸ್ವಯಂ ಪ್ರೇರಿತ ಹಠ. ಭಾರತವನ್ನು ಅಂದು ನಿತ್ರಾಣಗೊಳಿಸಿತ್ತು.

ಮಹಾದೇವ ದೇಸಾಯಿ ಹೇಳುವಂತೆ ಸೆಪ್ಟಂಬರ್ 22 ಮಧ್ಯಾಹ್ನ ಅಂಬೇಡ್ಕರ್ ಗಾಂಧಿಯಜೀಯವರನ್ನು ಭೇಟಿಯಾಗಿ, “ನಾನು ನನ್ನ ಸಮುದಾಯಕ್ಕೆ ರಾಜಕೀಯ ಅಧಿಕಾರವನ್ನು ಬಯಸುತ್ತೇನೆ ಅದು ನಮ್ಮ ಉಳಿವಿಗೆ ಅನಿವಾರ್ಯವಾಗಿದೆ” ಉಪವಾಸವನ್ನು ಕೈ ಬಿಡಿ” ಎಂದರು. ಚರ್ಚೆ ಕಗ್ಗಂಟಾಗಿ ಸೆಪ್ಟೆಂಬರ್ 23 ಕ್ಕೆ ಮಾತುಕತೆ ಮುಂದುವರಿಯಿತು. ಮತ್ತೇ 24 ಕ್ಕೆ. ಅಂದು ಸಂಜೆ 5 ಗಂಟೆಗೆ 23 ಜನರು ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ವಿಶ್ವಾಸ ಅರ್ಹತೆಗಾಗಿ ರಾಜಾಜಿ ತಮ್ಮ ಒಂದು “ಫೌಂಟೆನ್ ಪೆನ್ನ” ನ್ನು ಅಂಬೇಡ್ಕರ್ ಅವರ ಜತೆ ವಿನಿಮಯ ಮಾಡಿಕೊಂಡಿದ್ದರು. ಇದು ಹೊರಗಿನ ಮರ್ಮಾಘಾತ. ಈ ಒಳಗಿನ ಮರ್ಮಾಘಾತದಬಗ್ಗೆ ಹೇಳಲೇ ಬೇಕು.

ಈ ದಕ್ಷಿಣ ಭಾರತದ ಅಸ್ಪೃಶ್ಯ ರಾಜಕಾರಣಿ
“ಎ ಸಿ ರಾಜನ್” ಅವರು ಅಂಬೇಡ್ಕರ್ ಅವರು ದುಂಡುಮೇಜಿನ ಸಭೆಯಲ್ಲಿ ಚರ್ಚಿಸಲು ಅಸ್ಪೃಶ್ಯರ ಪ್ರತಿನಿಧಿ ಎನ್ನುವುದನ್ನು ನಿರಾಕರಿಸಿದ್ದರು. ಮತ್ತು ಬಾಪೂ ರವರ ಕಡೆ ಕೈ ಎತ್ತಿದ್ದರು. ಪೂನಾ ಒಪ್ಪಂದದ ಬಿಕ್ಕಟ್ಟಿನ ಸಮಯದಲ್ಲಿ ಅಂಬೇಡ್ಕರವರನ್ನು ಪ್ರತ್ಯೇಕೀಕರಿಸಿ ಚರ್ಚೆಮಾಡಲು ಸಿದ್ಧಗೊಂಡಿದ್ದರು.

“ಪಲ್ ವಂಕರ್ ಬಾಲೂ” ದೇಶದ ಮೊದಲ ದಲಿತ ಕ್ರಿಕೆಟಿಗ ಕೂಡ ಅಂಬೇಡ್ಕರವರಿಗೆ 24ವರ್ಷ ದೊಡ್ಡವರಾಗಿದ್ದು ಅಂಬೇಡ್ಕರರ ಸ್ನೇಹ ಜೀವಿಯಾಗಿದ್ದರು. ಆದರೆ ಈ ಸಂದರ್ಭದಲ್ಲಿ ಗಾಂಧೀಜಿಯವರ ಪಾಳಯದಲ್ಲಿ ಪಳಗಿದರು. ಅವರು ಗಾಂಧಿಜೀಯವರ ಅನುಯಾಯಿಗಳಾಗಿ, ಅಂಬೇಡ್ಕರವರ ನಿಲುವುಗಳನ್ನು ಹೆಜ್ಜೆಹೆಜ್ಜೆಗೂ ನಿರಾಕರಿಸಿದರು. ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರ ವಾಗುವ ವಿಚಾರದಲ್ಲಿಯೂ ಕಠೋರ ವಿರೋಧವನ್ನು ವ್ಯಕ್ತಪಡಿಸಿದ್ದರು. ಮುಂದೆ ಅಂಬೇಡ್ಕರ್ ಅವರ ವಿರುದ್ಧ ಚುನಾವಣೆಗೆ ನಿಂತು ಸೋತದ್ದು ಬೇರೆ ವಿಚಾರ ಆದರೆ ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದದ್ದು ಒಂದು ಐತಿಹಾಸಿಕ ಹೋರಾಟದಲ್ಲಿ ಅಂಬೇಡ್ಕರ್ ಅವರ ನಿಲುವು ಮತ್ತು ಕಾಠಿಣ್ಯಗಳನ್ನು.

ಗಾಂಧೀಜಿಯವರ ಪ್ರಕಾರ ಪ್ರತ್ಯೇಕ ಮತದಾನ ಪದ್ಧತಿ ಸಮಸ್ಯೆಯನ್ನು ಉತ್ತಮಕ್ಕಿಂತ ಕೆಟ್ಟದ್ದಾಗಿಸುತ್ತದೆ. ಇದು ಪ್ರತಿ ಹಳ್ಳಿಯಲ್ಲಿ ವಿಭಜನೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸ್ಥಳಿಯ ಸಂಘರ್ಷಕ್ಕೆ ಕಾರಣವಾಗುತ್ತಿದೆ.ಎಂಬುದು.

1931 ಅ 14 ಅಂಬೇಡ್ಕರವರು ಗಾಂಧಿಯವರನ್ನು ಮೊಟ್ಟ ಮೊದಲನೆ ಬಾರಿಗೆ ಭೇಟಿಯಾಗಿ ಪ್ರತ್ಯೇಕ ಮತದಾನದ ಹಕ್ಕುಗಳ ಬಗ್ಗೆ ಚರ್ಚಿಸಿದ್ದರು. ನಂತರ ಗಾಂಧೀಜಿ ನವೆಂಬರ್ 13 ತಮ್ಮ ಭಾಷಣದಲ್ಲಿ ನಾನು ಪ್ರತ್ತೇಕ ಪ್ರಾತಿನಿಧ್ಯವನ್ನು ವಿರೋಧಿಸುವ ಏಕೈಕ ವ್ಯಕ್ತಿಯಾಗಿದ್ದೇನೆ ಎಂದು ಒಂದು ವರ್ಷದ ಹಿಂದೆಯೇ ಹೇಳಿದ್ದರು. ಈ ಉಪವಾಸ ಒಂದು ವರ್ಷ ಪೂರ್ವ ನಿಯೋಜಿತ ಕಾರ್ಯಕ್ರಮ ದಂತೆ ಕಾಣುತ್ತದೆ ಅಲ್ಲವೆ? ಇದು ಹಠಾತ್ತಾಗಿ ಆಗಿಂದಾಗೆ ಸೃಷ್ಟಿಯಾದ ಯೋಜನೆ ಅಲ್ಲ.

ಇಡೀ ಪೂನಾ ಒಪ್ಪಂದಕ್ಕೆ ಸಾಕ್ಷಿಯಾದ ಘಟನೆಗಳನ್ನಾಧರಿಸಿ ಮಹಾದೇವ ರಾನಡೆ ಹೇಳುವಂತೆ ” ಅವರಿಗೆ ಬೇಕಿರುವುದು ಯಾವುದೋ ಒಂದು ಇತ್ಯಾರ್ಥ; ಅವರು ಆದರ್ಶ ಪರಿಹಾರಕ್ಕಾಗಿ ಕಾಯಲು ಸಿದ್ಧರಿಲ್ಲ. ಗಾಂಧೀಜಿ ಯವರ ಜೀವ ಉಳಿಸುವ ಉತ್ಸಾಹದಲ್ಲಿ ಈ ಸಹಿ ಹಾಕಿದರು.

ಅಂಬೇಡ್ಕರ್ ಜೀ ನಮ್ಮ ತಂದೆ ‘ಮುಳುಗುತ್ತಿದ್ದಾರೆ’ ಅವರ ಪ್ರಾಣ ಉಳಿಸಿ” ಎಂದು ಅಂಬೇಡ್ಕರ್ ರವರ ಮುಂದೆ ಕಣ್ಣೀರುಡುತ್ತದ್ದ ದೇವದಾಸ್ ಗಾಂಧಿ ಅವರ ಮುಖದಲ್ಲಿ ಮಾತ್ರ ಮಂದಹಾಸವಿತ್ತು.

ಹೊ! ಗಾಂಧಿಯವರು ಒಪ್ಪಂದಕ್ಕೆ ಸಹಿ ಹಾಕಿದರಾ?, ಒಂದು ಅಂತಿಮ ಪದ; ಅದು ಗಾಂಧಿಯಲ್ಲ. ಅವರ ಮಗ ದೇವದಾಸ್ ಗಾಂಧಿ.

ಸುಪರ್ಣ ಗುಪ್ತಾ ‘ ಅಂಬೇಡ್ಕರ್ ರವರು ಶೋಷಿತರ ವಿಮೋಚನೆಗಾಗಿ ಹಕ್ಕು ಆಧಾರಿತ ವಿಧಾನಕ್ಕೆ ಆದ್ಯತೆ ನೀಡಿದರು. ಗಾಂಧಿಜೀಯವರು ಅಧ್ಯಾತ್ಮ ಮತ್ತು ನಂಬಿಕೆ ವಿಧಾನಕ್ಕೆ ಮಾನ್ಯತೆ ನೀಡಿದರು. ಅಂಬೇಡ್ಕರರಿಗಿಂತ ಭಿನ್ನವಾಗಿ ಶೋಷಕರ ಮನಸ್ಥಿತಿಯನ್ನು ಬದಲಾಯಿಸಿದಾಗ ಮಾತ್ರ, ಯಾವುದೇ ಶೋಷಣೆಯನ್ನು ಸರಿಪಡಿಸಬಹುದು ಎಂದು ಗಾಂಧಿಜೀ ಭಾವಿಸಿದ್ದರು’. ಎನ್ನುತ್ತಾರೆ. ಇದು ಈ ನೆಲದಲ್ಲಿ ಅಸಂಭವ. ಕಾರಣ ಇಲ್ಲಿನ ಜಾತಿ ವ್ಯವಸ್ಥೆ ಒಂದು ಮಾನಸಿಕ ಸ್ಥಿತಿಯಾಗಿದೆ. ಅದು ಸಾವಿರಾರು ವರ್ಷಗಳು ತನ್ನ ಬೇರನ್ನು ತಾನೇ, ತನ್ನ ಮೆದುಳಿಗೆ ಎಣೆದುಕೊಂಡಿದೆ. ಇದನ್ನು ನಂಬಿಕೆ ಮಾತ್ರದಿಂದಲೇ ಬಿಡಿಸುವುದು ಕಷ್ಟ.

ಈ ಸತ್ಯ ಗಾಂಧೀಜಿಯವರ ಅರಿವಿಗೆ ಬಂದಿದ್ದೆ ಅವರು
ಅಸ್ಪೃಶ್ಯತೆಯ ವಿರುದ್ದ 1933 ನವೆಂಬರ್ ನಿಂದ 1934 ರ ಆಗಸ್ಟ್ ವರೆಗೆ 12500 km ಭಾರತದಾದ್ಯಂತ ಪ್ರವಾಸ ಕೈಗೊಂಡಾಗ. 800000 ಗಳನ್ನು ಹರಿಜನ ನಿಧಿಗೆ ಸಂಗ್ರಹಿಸಲು ಮೇಲ್ವರ್ಗದ ಜನರ ಬಳಿ ತೆರಳಿದಾಗ. ಕೊನೆ ಕೊನೆಗೆ ಶ್ರೀರಂಗಂ ತಂಜಾವೂರಿನ ಇತರ ದೇವಾಲಯಗಳಲ್ಲಿ ಅಸ್ಪೃಶ್ಯತಾಚರಣೆಯನ್ನು ಮನಗಂಡು ತಾವೇ ದೇವಾಲಗಳಿಗೇ ಹೋಗುವುದನ್ನು ನಿಷೇಧಿಸಿಕೊಂಡಾಗ. ಹರಿಜನ ಸೇವಕ ಸಂಘ ಹರಿಜನ ಪತ್ರಿಕೆ ಇಲ್ಲಿ ಹುಟ್ಟಿಕೊಂಡವು. ಪ್ರತಿ ಹಳ್ಳಿಗಳಲ್ಲಿ ರಾಮಮಂದಿರ ಭಜನೆಗಳು ಆರಂಭವಾದವು. ಇದು
ಈಗ ಈ ಜನರ ಬದುಕಿನ ಭಾಗವಾಗಿ ಬಿಟ್ಟಿದೆ.

ಲೂಯಿ ಫಿಷರ್ “ಗಾಂಧೀಜಿಗೆ ದ್ವೇಷ, ಅಸೂಯೆ, ವಿಷ, ಅಸಮಧಾನವಿಲ್ಲ. ಅವರನ್ನು ಜೈಲಿಗೆ ಹಾಕಿದ ವೈಸ್ ರಾಯ್ ಗಳ ಜೊತೆ ಅವರು ಸ್ನೇಹಿತರಾಗಿದ್ದರು. ಅವರು ವ್ಯವಸ್ಥೆಯನ್ನು ವಿರೋಧಿಸಿದರು ಆದರೆ ವ್ಯಕ್ತಿಯನ್ನಲ್ಲಾ.
ಎಂದು ಯಾರು ಏನೇ ಹೇಳಿದರು,
ಅಂಬೇಡ್ಕರ್ ಅವರು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಗಾಂಧೀಜಿಯವರನ್ನು ನಾನು “ಮಹಾತ್ಮ” ಎಂದು ಒಪ್ಪಲಾರೆ ಎಂದರು.

ಅಂಬೇಡ್ಕರ್ ರ ಈ ನೋವಿಗೆ ಪಟೇಲರ ಈ ಮಾತನಲ್ಲಿ ಉತ್ತರ ಸಿಗಬಹುದೇನೊ ಪಟೇಲರು “ಈ ಗಾಂಧಿಜೀ ಏಕೆ ಉಪವಾಸ ಮಾಡುತ್ತಿದ್ದಾರೆ ?” ಎಂದು ಗೊಂದಲಕ್ಕೀಡಾದರು. ಎದುರಿನಲ್ಲಿದ್ದವರು “ಅಸ್ಪೃಶ್ಯರನ್ನು ಎದುರಿಸಲು ಇನ್ಯಾವುದೇ ಮಾರ್ಗಗಳಿಲ್ಲವಲ್ಲಾ ಆ ಕಾರಣಕ್ಕಿರಬಹುದೇನೊ…? ಎಂದರು.

ಕೊನೆಯದಾಗಿ ಈ ಮಾತು

ನನ್ನನ್ನು ಗಲ್ಲಿಗೇರಿಸಿದರೂ ನಂಬಿದ ಜನರ ವಿಶ್ವಾಸ ಕ್ಕೆ ದ್ರೋಹ ಮಾಡುವುದಿಲ್ಲ” ಎಂದರಲ್ಲಾ ಡಾ. ಅಂಬೇಡ್ಕರ್ ಈ ಎಳೆಯನ್ನು ಇಡಿದು ಈ ಪೀಳಿಗೆ ಯಾಕೆ ಬದುಕುವ ಪ್ರಯತ್ನ ಮಾಡುತ್ತಿಲ್ಲಾ….? (ಬರಹ-ಮಲ್ಕುಂಡಿ ಮಹದೇವ ಸ್ವಾಮಿ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮುಹಮ್ಮದ್ ಎಂಬ ಮಹೋನ್ನತ ಮಾದರಿ

Published

on

  • ಯೋಗೇಶ್ ಮಾಸ್ಟರ್

ನುಷ್ಯನ ಎಲ್ಲಾ ವ್ಯವಹಾರಗಳೂ ನಡೆಯುವುದು ಅವನ ಮನಸ್ಸಿನ ಮೂಲಕ. ಮಾಡುವಂತಹ ಆಲೋಚನೆಗಳು, ತೆಗೆದುಕೊಳ್ಳುವಂತಹ ನಿರ್ಧಾರಗಳು, ತೋರುವಂತಹ ವರ್ತನೆಗಳು, ವ್ಯಕ್ತಿಯ ಬಲ, ದೌರ್ಬಲ್ಯ, ಸನ್ನಡತೆ, ದುರ್ನಡತೆ; ಮನುಷ್ಯನದ್ದು ಏನೆಂದು ಹೇಳುತ್ತಾ ಬೆರಳು ತೋರಿಸುವಿರೋ ಅವೆಲ್ಲವೂ ಮನಸ್ಸಿನ ವಿಷಯಗಳಷ್ಟೇ ಆಗಿವೆ. ವ್ಯಕ್ತಿ ಎಂಬುವನು ಆ ಮನಸ್ಸಿನ ಕರಣ, ವರ್ತನೆ ಎನ್ನುವುದು ಆ ಮನಸ್ಸಿನ ಗುಣದ ಪ್ರದರ್ಶನ.

ಮನುಷ್ಯ ತನ್ನ ಮನಸ್ಸಿನ ವೈಪರಿತ್ಯದಿಂದಾಗಿ ತನ್ನ ನಡವಳಿಕೆಯಲ್ಲಿ ತೋರುವ ಎಲ್ಲಾ ವ್ಯವಹಾರಗಳನ್ನು ಮನಗಂಡ ಮುಹಮ್ಮದರು ಅದನ್ನು ತಹಬಂದಿಗೆ ತರಲೆಂದೇ ನೈತಿಕ ತರಬೇತಿಗೆ ತೀವ್ರ ಗಮನ ನೀಡಿದರು. ವ್ಯಕ್ತಿಯೊಬ್ಬನು ವ್ಯಕ್ತಿಗತವಾಗಿಯಾಗಲಿ, ಸಮೂಹದೊಡನೆಯಾದರೂ ಆಗಲಿ, ತನ್ನನ್ನು ತಾನು ಘಾಸಿಗೊಳಿಸಿಕೊಳ್ಳಕೂಡದು ಮತ್ತು ಮತ್ತೊಬ್ಬರನ್ನು ಘಾಸಿಗೊಳಿಸಕೂಡದು; ಇದು ನೈತಿಕ ಹೊಣೆಗಾರಿಕೆ.

ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಮೇಲಾಗಲಿ, ಸಮೂಹವು ಮತ್ತೊಂದು ಸಮೂಹದ ಮೇಲಾಗಲಿ ಆಕ್ರಮಿಸುವುದೆಂದರೆ ನೈತಿಕ ಪರಿಧಿಯೊಳಗೆ ಅತಿಕ್ರಮಿಸುವುದೆಂದೇ ಅರ್ಥ. ಈ ಆಕ್ರಮಣ ಮತ್ತು ಅತಿಕ್ರಮಣಗಳಿಗೆ ಕಾರಣವೇನು?

ಆಸೆಯಿಂದಾಗಿಯೇ ಅಹಂಕಾರ, ಭಯದಿಂದಾಗಿಯೇ ಆಕ್ರಮಣ. ಆಸೆ ಮತ್ತು ಭಯವೆಂಬ ಎರಡು ತೀವ್ರವಾದ ವಿಷಯಗಳು ಮನುಷ್ಯನಲ್ಲಿ ಸೈತಾನರನ್ನು ಆಮಂತ್ರಿಸುತ್ತವೆ. ಸೈತಾನನೆಂದರೆ ದೆವ್ವವೋ, ಭೂತವೋ, ಪ್ರೇತವೋ ಅಲ್ಲ. ನಮ್ಮ ಮನಸ್ಸನ್ನು ಪ್ರಭಾವಿಸಿ ಅಥವಾ ಪುಸಲಾಯಿಸಿ ನಮ್ಮಿಂದ ಕೆಲಸ ಮಾಡಿಸುವ ನಮ್ಮೊಳಗಿನ ಮತ್ತು ಹೊರಗಿನ ಪ್ರಲೋಭನಾ ಪ್ರಭಾವಗಳ ಪ್ರತಿಮಾ ರೂಪಕ.

ಇಂತಹ ಸೈತಾನನ ಪ್ರಭಾವಗಳು ಆಲೋಚಿಸುವ, ಭಾವಿಸುವ ಮನಸ್ಸಿನ ಮೂಲಕವೇ ಕೆಲಸ ಮಾಡುವುದರಿಂದ ಸೈತಾನನ ಚಟುವಟಿಕೆಗಳನ್ನು ನಮ್ಮವೇ ಎಂದು ವ್ಯಕ್ತಿ ಭಾವಿಸುತ್ತಾನೆ. ಹಾಗಾಗಿ ಸೈತಾನನ ಎಲ್ಲಾ ಪ್ರಭಾವ ಮತ್ತು ಚಟುವಟಿಕೆಗಳನ್ನು ಸಮರ್ಥಿಸುವ ಸಲುವಾಗಿ ತನ್ನ ಮನಸ್ಥಿತಿ ಮತ್ತು ಪರಿಸ್ಥಿತಿಯನ್ನು ಉಪಯೋಗಿಸಿಕೊಳ್ಳುವನು.

ಸರಿ, ಈ ವ್ಯಕ್ತಿಯ ಚೈತನ್ಯವನ್ನು ಜೀವ ಅಥವಾ ವ್ಯಕ್ತಿಗತವಾದ ಅಸ್ತಿತ್ವ ಎನ್ನುವುದಾದರೆ, ಮಹಾ ಅಸ್ತಿತ್ವವೊಂದಿದೆ. ಇದು ಆತ್ಮವಾದರೆ, ಅದು ಪರಮಾತ್ಮ. ಇಹದಲ್ಲಿ ಇರುವ ಇದರ ಆಲೋಚನೆಗಳು ಮತ್ತು ಕಾರ್ಯ ಸಾಮರ್ಥ್ಯ ಸೀಮಿತ ಮತ್ತು ಪ್ರಭಾವಿತ. ಆದರೆ ಪರವಾಗಿರುವ, ಇಹದ ಅಳತೆಗೆ ಎಟುಕದ ಅದರ ಸಾಮರ್ಥ್ಯ ಅಮಿತ ಮತ್ತು ಅನಂತ.
ಅಂತಹ ಮಹಾ ಅಸ್ತಿತ್ವವನ್ನೇ ಈಶ್ವರ ಎನ್ನುವರೋ, ಅಲ್ಲಾಹ್ ಎನ್ನುವರೋ, ಬ್ರಹ್ಮನ್ ಎನ್ನುವರೋ, ಲಿಂಗ ಎನ್ನುವರೋ, ಪರಮಪಿತ ಎನ್ನುವರೋ, ಪರಮಾತ್ಮ ಎನ್ನುವರೋ; ಒಟ್ಟಿನಲ್ಲಿ ಭಾಷೆ ಯಾವುದಾದರೂ ಸೃಷ್ಟಿಕರ್ತ ಎಂದು ಕರೆಯಲ್ಪಡುವ ಆ ಮಹೋನ್ನತ ಚೈತನ್ಯಕ್ಕೆ ಶರಣಾಗಿ ಆ ಮಹಾಕಾಶದ ಇಚ್ಛೆಯಂತೆ ನಡೆಯುವ, ಆತನ ಇಚ್ಛೆಗಳನ್ನು ತಮ್ಮ ಮೂಲಕ ನೆರವೇರಿಸುವ ಮಾನವನ ಕರ್ತವ್ಯಕ್ಕೆ ಬೇಕಾದ ನೈತಿಕತೆ, ಆಧ್ಯಾತ್ಮಕತೆ ಮತ್ತು ತಾತ್ವಿಕತೆಯ ಸಾಕ್ಷಾತ್ಕಾರಕ್ಕೆ ಪ್ರವಾದಿ ಮುಹಮ್ಮದರು ಮಹೋನ್ನತ ಮಾದರಿಯಾಗಿ ತಮ್ಮ ಜೀವನ ಮತ್ತು ಸಂದೇಶವನ್ನು ಮುಂದಿರಿಸುತ್ತಾರೆ.

ಮಹಾಸ್ತಿತ್ವಕ್ಕೆ ಶರಣಾಗಿ ತನ್ನ ಸೀಮಿತ ಇತಿ ಮಿತಿಯ ಮಾನಸಿಕ ಲೆಕ್ಕಾಚಾರಗಳಿಂದ ಹೊರಗಿನ ನೇಮವನ್ನು ಸ್ವೀಕರಿಸುವುದೇ ಮುಹಮ್ಮದರ ಪಾಲಿನ ಮಹೋನ್ನತ ನೈತಿಕತೆ. ಅದನ್ನು ತಮ್ಮ ಆಲೋಚನೆ, ನಡವಳಿಕೆ ಮತ್ತು ಬದುಕು ಹಾಗೂ ಬೋಧನೆಗಳ ಮೂಲಕ ತೋರುವ ಮುಹಮ್ಮದ್ ನಿಸ್ಸಂಶಯವಾಗಿ ಅಚ್ಚರಿಯ ಒಂದು ಮಹೋನ್ನತ ಮಾದರಿ. ಯಾರೊಬ್ಬರು ಮುಸಲ್ಮಾನರಾಗಿರಲಿ, ಅಲ್ಲದಿರಲಿ; ಯಾರೊಬ್ಬರ ಬದುಕಿನ ನೈತಿಕತೆಯ ಗುಣಮಟ್ಟವನ್ನು ಉತ್ತಮಗೊಳಿಸಿಕೊಳ್ಳಲು ಅವರ ಜೀವನದ ಸಂಗತಿಗಳ ಅಧ್ಯಯನ ಮತ್ತು ಅವರು ಹೇಳುವ ಮಾತುಗಳ ಸಾಂದರ್ಭಿಕ ಸ್ಮರಣೆಗಳು ತಾತ್ವಿಕ ಊರುಗೋಲಾಗುತ್ತವೆ. ಮುಹಮ್ಮದರನ್ನು ಮುಸಲ್ಮಾನರಿಗೆ ಮತ್ತು ಇಸ್ಲಾಮಿಗೆ ಮಾತ್ರ ಸೀಮಿತಗೊಳಿಸಿನೋಡುವುದು ಅವರ ವ್ಯಕ್ತಿತ್ವ ಅಧ್ಯಯನಕ್ಕೆ ಚ್ಯುತಿ.

ಪಾರದರ್ಶಕವಾದ ನಿಷ್ಕಳಂಕ ಮತ್ತು ಪರಿಪೂರ್ಣ ವ್ಯಕ್ತಿತ್ವದ ಮಾದರಿ ಅವರದು. ವಿನಯಶೀಲತೆ, ಸಮಚಿತ್ತತೆ, ಪೂರ್ಣಪ್ರಜ್ಞೆ, ಕ್ಷಮಾಗುಣ, ಸಹನೆ, ಔದಾರ್ಯ, ನ್ಯಾಯಸಮ್ಮತ, ಪ್ರಾಮಾಣಿಕತೆ ಮತ್ತು ಸಂಪೂರ್ಣ ಸ್ವಾರ್ಥರಹಿತ ಜೀವನದ ನಿದರ್ಶನಗಳೇ ಅವರ ಬದುಕು ಮತ್ತು ಬೋಧನೆಗಳಲ್ಲಿ ಅನಾವರಣಗೊಳ್ಳುವುದು.

ಅಧ್ಯಯನದ ಮೂಲಕ ಅವರನ್ನು ಅರಿತಿರುವಾಗ, ನಮ್ಮ ಬದುಕಿನ ಯಾವುದೇ ಹಂತದಲ್ಲಿ, ಹೆಜ್ಜೆಯಲ್ಲಿ, ಪ್ರಸಂಗಗಳಲ್ಲಿ “ಈ ಸಮಯದಲ್ಲಿ, ಈ ಸಂದರ್ಭಕ್ಕೆ ಪ್ರವಾದಿ ಮುಹಮ್ಮದರು ಮಾದರಿ ಅಥವಾ ಬೋಧನೆ ಹೇಗೆ ಅನ್ವಯಿಸಿಕೊಳ್ಳಬಹುದು” ಎಂಬ ಆಲೋಚನೆಯೇ ಸಾಕು, ನಮ್ಮ ಗುಣಮಟ್ಟದ ನಿರ್ವಹಣೆಯನ್ನು ಅಲ್ಲಿ ಎದುರು ನೋಡಲು ಸಾಧ್ಯ. ಅತಿಕ್ರಮಣವಲ್ಲದ ಮೃದು ಸಾಮಿಪ್ಯದ, ನಸುನಗೆಯ ಮುಹಮ್ಮದರು ಎದೆಯಲ್ಲಿ ಸದಾ ಜೀವಂತ.
ಪ್ರವಾದಿ ಮುಹಮ್ಮದ್ ಅವರ ಸಂಗಾತಿಗಳು ದಾಖಲಿಸಿರುವಂತೆ, ಅವರ ಜೊತೆಗಾರರ ಜೊತೆಯಲ್ಲಿರುವಾಗಲೂ ಕೂಡಾ ಕಾಲನ್ನು ಚಾಚಿ ಕುಳಿತುಕೊಳ್ಳುತ್ತಿರಲಿಲ್ಲ. ಯಾರಿಗೇ ಹಸ್ತಲಾಘವಕ್ಕೆ ಕೊಟ್ಟ ಕೈಯನ್ನು ತಾವೇ ಮೊದಲಾಗಿ ಎಳೆದುಕೊಳ್ಳುತ್ತಿರಲಿಲ್ಲ.

ಮಕ್ಕಾದ ಮೇಲಿನ ವಿಜಯದ ತರುವಾಯ ಮುಹಮ್ಮದರು ನಗರವನ್ನು ಪ್ರವೇಶಿಸುವಾಗ ಒಂಟೆಯ ಮೇಲೆ ಕುಳಿತಿದ್ದ ಅವರು ಅಲ್ಲಾಹನಿಗೆ ಕೃತಜ್ಞತಾ ಪೂರ್ವಕವಾಗಿ ತಲೆಯನ್ನು ತಗ್ಗಿಸಿದ್ದ ಅವರು ಅದೆಷ್ಟು ಬಾಗಿದ್ದರೆಂದರೆ, ಒಂಟೆಯ ಕುತ್ತಿಗೆಯ ಹಿಂಬದಿಯನ್ನು ತಗಲುವಷ್ಟು! ವ್ಯಕ್ತಿಗತವಾದ ಅಹಂಕಾರದ ಕಾರಣಕ್ಕಾಗಿ ಎಂದಿಗೂ, ಯಾರ ಮೇಲೂ ಅದೆಷ್ಟೇ ಸಮಸ್ಯೆಗಳನ್ನು ಕೊಟ್ಟಿದ್ದರೂ ಸೇಡು ತೀರಿಸಿಕೊಳ್ಳುವ ಕಿಂಚಿತ್ತೂ ಧೋರಣೆ ಹೊಂದಿರಲಿಲ್ಲ ಮತ್ತು ‘ನಾನು’ ಎಂದ ಅಹಂಭಾವಕ್ಕೆ ಎಲ್ಲಿಯೂ ಆಸ್ಪದವನ್ನೇ ಕೊಡಲಿಲ್ಲ. ತಮ್ಮೆಲ್ಲಾ ಕೆಲಸ, ವರ್ತನೆ ಮತ್ತು ವ್ಯವಹಾರಗಳಲ್ಲಿ ನ್ಯಾಯ ಮತ್ತು ಪ್ರಾಮಾಣಿಕತೆಯನ್ನು ಕಿಂಚಿತ್ತೂ ಬಿಟ್ಟುಕೊಡಲಿಲ್ಲ.

ಕುಲೀನ ಮನೆತನದ ಹೆಣ್ಣುಮಗಳೊಬ್ಬಳು ಕಳ್ಳತನದ ಅಪರಾಧದಲ್ಲಿ ಶಿಕ್ಷೆಅನುಭವಿಸಬೇಕಾಗಿ ಬಂದಾಗ, “ನಮ್ಮ ಮಗಳು ಫಾತೀಮಾ ಆಗಿದ್ದರೂ ಕೂಡಾ ಇದೇ ಕಾನೂನಿನ ಕ್ರಮವನ್ನು ಎದುರಿಸಬೇಕಿತ್ತು” ಎನ್ನುವರು ಪ್ರವಾದಿ ಮುಹಮ್ಮದರು. ಅದು ಸಮಾಜದ ನೈತಿಕ ವ್ಯವಸ್ಥೆಯ ವಿಷಯದಲ್ಲಿ. ಆದರೆ ಅದೇ ತಮ್ಮ ವಿಷಯಕ್ಕೆ ಬಂದಾಗ ಶತ್ರುಗಳನ್ನು ತಾವು ಕ್ಷಮಿಸಿಬಿಡುತ್ತಿದ್ದರು. ತಮ್ಮನ್ನು ಮತ್ತು ತಮ್ಮ ಅನುಯಾಯಿಗಳನ್ನು ಸತತವಾಗಿ ಕಿರುಕುಳಕೊಡುತ್ತಿದ್ದವರನ್ನೂ ಮೆಕ್ಕಾದ ವಿಜಯದ ನಂತರ ಕ್ಷಮಿಸಿದ್ದರು.

ಅವರ ಅನುಯಾಯಿಗಳು ತಮ್ಮನ್ನು ಆರಾಧಿಸುವಂತಹ ವಿಷಯಕ್ಕೆ ಎಂದಿಗೂ ಆಸ್ಪದವನ್ನು ಕೊಡಲಿಲ್ಲ. ಅಲ್ಲಾಹನಿಗೆ ಮಾತ್ರ ಆರಾಧನೆಯು ಮೀಸಲು ಎಂದ ಅವರು ಹೇಳುತ್ತಿದ್ದದ್ದು, “ನಾನು ಅಲ್ಲಾಹನ ಬರೀ ಸೇವಕನೊಬ್ಬ.” ತಮ್ಮನ್ನು ತಾವು ಗುರುತಿಸಿಕೊಂಡಿದ್ದು ದೇವತಾ ಮನುಷ್ಯನಾಗಿ ಅಲ್ಲ. ಬರಿಯ ಮಾರ್ಗದರ್ಶಕ, ಅಲ್ಲಾಹನ ಸಂದೇಶ ವಾಹಕ.
“ಮಾನವರೇ, ನಾನು ನಿಮ್ಮೆಲ್ಲರ ಪಾಲಿಗೆ ಅಲ್ಲಾಹನ ದೂತನಾಗಿರುವೆನು. ಆಕಾಶಗಳ ಮತ್ತು ಭೂಮಿಯ ಅಧಿಪತ್ಯವು ಅವನಿಗೆ ಸೇರಿದೆ. ಅವನ ಹೊರತು ಬೇರೆ ದೇವರಿಲ್ಲ. ಅವನೇ ಜೀವಂತಗೊಳಿಸುವವನು ಮತ್ತು ಮರಣ ನೀಡುವವನು. ನೀವೀಗ ಅಲ್ಲಾಹನಲ್ಲೂ ಆತನ ದೂತನಲ್ಲೂ ನಂಬಿಕೆ ಇಡಿರಿ. ಅವರು ನಿರಕ್ಷರಿ ಪ್ರವಾದಿಯಾಗಿದ್ದು, ಅಲ್ಲಾಹನಲ್ಲಿ ಹಾಗೂ ಅವನ ವಚನಗಳಲ್ಲಿ ನಂಬಿಕೆ ಉಳ್ಳವರಾಗಿದ್ದಾರೆ. ಮಾರ್ಗದರ್ಶನ ಪಡೆಯಲಿಕ್ಕಾಗಿ ನೀವು ಅವರನ್ನು ಅನುಸರಿಸಿ.” (ಕು: 7/158)

ಮನುಷ್ಯನ ಹೊರತು ನೈಸರ್ಗಿಕವಾಗಿರುವ ಉಳಿದೆಲ್ಲಾ ಜೀವಿಗಳು ಸಹಜವಾಗಿಯೇ ಇರುತ್ತವೆ. ಆದರೆ ಮನುಷ್ಯನೊಬ್ಬನಿಗೆ ಮಾತ್ರ ಮನಸ್ಸು ಎಂಬುವುದಿದ್ದು, ಅದು ಆಲೋಚನೆ ಎಂಬುದನ್ನು ಮಾಡಿ, ವಿಷಯಗಳನ್ನು ಮತ್ತು ಪ್ರಸಂಗಗಳನ್ನು ವಿಶ್ಲೇಷಿಸುವ ಮತ್ತು ವಿವೇಚಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಇದರಿಂದಾಗಿಯೇ ತನ್ನ ಇಷ್ಟಕ್ಕೆ ತಕ್ಕಂತೆ, ತನ್ನ ಅನುಕೂಲಕ್ಕೆ ತಕ್ಕಂತೆ, ತನ್ನ ಸ್ವಾರ್ಥ ಮತ್ತು ಅಹಂಕಾರಕ್ಕೆ ತಕ್ಕಂತೆ ವಿವೇಚಿಸುತ್ತಾ ಇಡೀ ವಿಶ್ವದ ವಿದ್ಯಮಾನಗಳನ್ನೇ ವಿವರಿಸುತ್ತಾನೆ. ಹೃದಯ ಮತ್ತು ದೇಹಗಳು ಪ್ರಕೃತಿ ಸಹಜವಾಗಿದ್ದರೆ, ಮನಸ್ಸು ಮಾತ್ರ ಕೃತಕತೆಯನ್ನು ಸೃಷ್ಟಿಸುತ್ತದೆ. ಕೃತಕತೆ ಎಂಬುದು ನೈಸರ್ಗಿಕವಲ್ಲದೇ ಇರುವ ಕಾರಣದಿಂದ ವ್ಯಕ್ತಿಯಿಂದ ವ್ಯಕ್ತಿಗೆ, ಸಮೂಹದಿಂದ ಸಮೂಹಕ್ಕೆ ಬದಲಾಗುತ್ತಾ ಹೋಗಿ ಸಂಘರ್ಷಕ್ಕೆ, ದೌರ್ಜನ್ಯಕ್ಕೆ ಮತ್ತು ಹುಸಿ ವಿದ್ಯಮಾನಗಳಿಗೆ ಕಾರಣವಾಗುತ್ತದೆ. ಯಾವ ವಿಷಯಗಳು ಮನಸ್ಸಿನ ಸೃಷ್ಟಿಯಾಗಿರುತ್ತವೆಯೋ ಅವುಗಳೆಲ್ಲವೂ ಕೂಡಾ ಕೃತಕತೆಯನ್ನು ಹೊಂದಿರುವ ಸಾಧ್ಯತೆಯೇ ಅತಿ ಹೆಚ್ಚು. ಹಾಗಿರುವಾಗ ಇಡೀ ವಿಶ್ವದ ಪ್ರಕೃತಿಯ ಸೃಷ್ಟಿಯ ಕಾರಣ ಅಂದರೆ ದೇವರು ಈ ವೈಪರಿತ್ಯವನ್ನು ಸಹಿಸಲಾಗದು. ತಾತ್ವಿಕ ಮತ್ತು ಆಧ್ಯಾತ್ಮಿಕ ವಿವರಣೆಯಂತೆ ಪ್ರವಾದಿಗಳ ಬಹು ದೊಡ್ಡ ಹೊಣೆಗಾರಿಕೆಯೆಂದರೇನೇ ದೇವರ ದೃಷ್ಟಿಯಂತೆ, ಅವನ ಇಚ್ಛೆಯಂತೆ ಮನುಷ್ಯನೂ ಕೂಡಾ ಬಾಳುವುದು. ಅದಕ್ಕಾಗಿ ಅವನನ್ನು ಕ್ರಮಕ್ಕೊಳಪಡಿಸಲು ನೈತಿಕ ಮತ್ತು ತಾತ್ವಿಕ ಕರಣಗಳಿವೆ.

ಅದರಂತೆಯೇ ಪ್ರವಾದಿ ಮುಹಮ್ಮದರೂ ಕೂಡಾ ಮನುಷ್ಯನ ನಡವಳಿಕೆ, ಬದುಕುವ ರೀತಿ ಮತ್ತು ತನ್ನನ್ನು ತಾನು ಹಾಗೂ ಇತರ ಜೀವಿಗಳನ್ನು ನೋಡುವ ರೀತಿ; ಎಲ್ಲವೂ ಅಲ್ಲಾಹನು ಬಯಸುವ ರೀತಿಯದ್ದಾಗಿರಲಿ ಎಂದು ತಾವೇ ಒಂದು ಸುಂದರ ಮಾದರಿಯಾಗಿ ತೋರಿದರು.

ಖಂಡಿತವಾಗಿಯೂ ಅಲ್ಲಾಹನ ದೂತರಲ್ಲಿ ನಿಮಗೆ ಅತ್ಯುತ್ತಮ ಆದರ್ಶವಿದೆ. ಅಲ್ಲಾಹನ ಕುರಿತು ಮತ್ತು ಆ ಅಂತಿಮದಿನದ ಕುರಿತು ಶುಭ ನಿರೀಕ್ಷೆ ಉಳ್ಳವರಿಗೆ ಮತ್ತು ಅಲ್ಲಾಹುವನ್ನು ಪದೇ ಪದೇ ಸ್ಮರಿಸುವವರಿಗೆ (ಇದು ಅನ್ವಯಿಸುತ್ತದೆ.) (ಕು: 33.21)

ಹಾಗಾಗಿಯೇ ಇಸ್ಲಾಮ್ ಒಂದು ಮಾರ್ಗ. ಅಲ್ಲಾಹನು ಇಚ್ಛಿಸುವ ಗುರಿಯನ್ನು ಮುಟ್ಟಲು ಒಂದು ಅನುಗ್ರಹಿತ ಮಾರ್ಗ. ಹಾಗಾಗಿಯೇ ಮತ್ತೆ ಮತ್ತೆ ನಾವು ನೆನಪಿಸಿಕೊಳ್ಳಬೇಕಾಗಿರುವುದು ಮುಹಮ್ಮದರು ಬರಿಯ ಮುಸ್ಲೀಮರಿಗಲ್ಲ, ಎಲ್ಲರಿಗೂ.
ಕುರಾನ್ ಒಂದು ಮಾರ್ಗದರ್ಶಿ ಕೈಪಿಡಿ. ಅನುಗ್ರಹಿತ ಮಾರ್ಗದಲ್ಲಿ ನಡೆಯಲು ಮಾಡಬೇಕಾದ ಕೆಲಸಗಳು, ತೆಗೆದುಕೊಳ್ಳಬೇಕಾದ ನಿರ್ಧಾರಗಳು, ರೂಢಿಸಿಕೊಳ್ಳಬೇಕಾದ ಅಭ್ಯಾಸಗಳು, ತಳೆಯ ಬೇಕಾದ ನಿಲುವುಗಳು, ಸತ್ಯ ಮತ್ತು ಮಿಥ್ಯಗಳನ್ನು ಬೇರ್ಪಡಿಸಿ ನೋಡುವ ವಿವೇಕಗಳು, ಹಿಂದೆ ಸಾಧಿಸಿದವರ ಉದಾಹರಣೆಗಳು, ಎಡವಿರುವವರ ವೈಫಲ್ಯಗಳು, ಸಾಧಿಸಿರುವವರ ದೃಷ್ಟಾಂತಗಳು, ಪ್ರಕೃತಿಯಿಂದ, ಕೀಟ ಮತ್ತು ಪ್ರಾಣಿಗಳ ಮಾದರಿಗಳು; ಎಲ್ಲವನ್ನೂ ಪ್ರವಾದಿ ಮುಹಮ್ಮದರು ಕ್ರೋಢೀಕರಿಸಿದ್ದಾರೆ. ಯಾವುದೇ ಒಬ್ಬ ಮನುಷ್ಯ ತನ್ನ ಮನೆಯಲ್ಲಿ, ಸಮಾಜದಲ್ಲಿ, ಆರ್ಥಿಕ ಮತ್ತು ರಾಜಕೀಯ ನಿಲುವುಗಳಲ್ಲಿ ಹೇಗಿರಬೇಕು, ಹೇಗಿರಬಾರದು ಎಂಬುದರ ಸ್ಪಷ್ಟ ನಿರ್ದೇಶನಗಳಿವೆ. ಯಾವವು ನಂಬಲರ್ಹ, ಯಾವುದನ್ನು ನಂಬಕೂಡದು ಇವುಗಳ ಬಗೆಯೂ ಸ್ಪಷ್ಟ ಧೋರಣೆ. ಒಟ್ಟಾರೆ ಮನುಷ್ಯ ಮತ್ತು ದೇವರ ನಡುವಿನ ಒಂದು ದಿವ್ಯವಾದ ಮಾರ್ಗವದಾಯಿತು. ಕುರಾನಿನಲ್ಲಿ ನೀಡಿದ ಬೋಧನೆಗಳನ್ನೆಲ್ಲಾ ತಾವೇ ಬಾಳಿ ಬದುಕಿ ಮಾದರಿಯಾಗಿದ್ದು ಪ್ರವಾದಿ ಮುಹಮ್ಮದರು.

ಪ್ರವಾದಿ ಮುಹಮ್ಮದರ ಜೀವಿತಾವಧಿಯಲ್ಲಿ ಮತ್ತು ಮೊದಲು ಕೂಡಾ ಅರಬ್ಬರಲ್ಲಿ ಪ್ರತಿಕಾರವೆನ್ನುವುದು ಬಹಳ ಸಹಜವಾದ ವಿಷಯ. ಸೇಡು ತೀರಿಸಿಕೊಳ್ಳದವರು ಮನುಷ್ಯರೇ ಅಲ್ಲ ಅಥವಾ ಹಾಗೆ ಸೇಡು ತೀರಿಸಿಕೊಳ್ಳದೇ ಇರುವುದು ಘನತೆಗೆ ತಕ್ಕುದ್ದಲ್ಲ ಎಂಬಂತೆ ಅವರ ಧೋರಣೆ. ಯಾವುದೇ ಎದುರಾಳಿಯ ಪಂಗಡದಿಂದ ಅಥವಾ ಸಮೂಹದಿಂದ ಅಥವಾ ವ್ಯಕ್ತಿಯಿಂದಾದರೂ ತಮ್ಮಲ್ಲಿ ಶತ್ರುತ್ವ ಹುಟ್ಟುವಂತಹ ಸಂಗತಿ ಜರುಗಿತೆಂದರೆ ಅವರು ರಕ್ತಪಾತದ ಮೂಲಕ ಸೇಡು ತೀರಿಸಿಕೊಳ್ಳುವುದು ಏನೇನೂ ವಿಶೇಷವೇ ಅಲ್ಲ. ಆದರೆ ಅವರ ನಡುವೆ ಹುಟ್ಟಿ, ಬೆಳೆದು, ಅವರೆಲ್ಲಾ ಚಟುವಟಿಕೆಗಳನ್ನು ನೇರವಾಗಿ ಸಾಕ್ಷೀಕರಿಸುತ್ತಾ ಇದ್ದ ಮುಹಮ್ಮದರು ಅವರ ಪ್ರಭಾವಕ್ಕೆ ಸಹಜವಾಗಿ ಒಳಗಾಗಬೇಕಾಗಿತ್ತು. ಆದರೆ ಅವರ ಮನಸ್ಸು ವಾಲಿದ್ದು ಸತ್ಯದ ಕಡೆಗೆ, ಪರಮ ಸತ್ಯದ ಕಡೆಗೆ, ಅಲ್ಲಾಹನ ಕಡೆಗೆ. ಅಲ್ಲಾಹನ ಗುಣವೇ ಶಾಂತಿ, ಕರುಣಾಳು. ಹಾಗಾಗಿಯೇ ದೇವರ ಗುಣಗಳನ್ನು ತಮ್ಮ ಚಟುವಟಿಕೆಗಳಲ್ಲಿ ಪ್ರತಿಫಲಿಸುತ್ತಿದ್ದರು.

ಮುಹಮ್ಮದ್ ಅವರು ವ್ಯಾಪಾರಿಯಾಗಿದ್ದು ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದ ದಿನಗಳಲ್ಲಿ ಅವರು ಸತ್ಯಸಂಧ ಮತ್ತು ಪ್ರಾಮಾಣಿಕರಾಗಿದ್ದರು ಎಂಬ ಹೆಸರು ಪಡೆದಿದ್ದರೂ ತಮ್ಮ ವ್ಯಾಪಾರ ಮತ್ತು ವ್ಯವಹಾರಗಳಿಂದ ಶ್ರೀಮಂತರಾಗುವ ದೃಷ್ಟಿಯನ್ನು ಹೊಂದಿಲ್ಲದ ಇವರನ್ನು ಅವರ ಸಂಬಂಧಿಗಳು ಮತ್ತು ಇತರ ವ್ಯಾಪಾರಿಗಳು ಆಡಿಕೊಳ್ಳುತ್ತಿದ್ದುದ್ದುಂಟು. ಏಕೆಂದರೆ ಇವರ ವ್ಯಕ್ತಿ ವಿಶೇಷಣಗಳಿಂದಾಗಿ, ವ್ಯಾಪಾರದ ಕೌಶಲ್ಯಗಳಿಂದಾಗಿ ಉತ್ತಮ ವ್ಯಾಪಾರವಾಗುತ್ತಿದ್ದರೂ ಗಳಿಸುತ್ತಿದ್ದ ಲಾಭವು ಇತರರಿಗೆ ಹೋಲಿಸಿದರೆ ಕಡಿಮೆಯೇ. ತಮಗೆ ಕಡಿಮೆ ಆದಾಯವಾಗಿದ್ದರೂ ಫುಜ್ಜಾರ್ ಯುದ್ಧದಲ್ಲಿ ಮಡಿದವರ ಚಿಕ್ಕ ಚಿಕ್ಕ ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ಕೃತಜ್ಞತೆಯನ್ನೂ ಬಯಸದೇ ಜೀವನೋಪಯೋಗಿ ವಸ್ತುಗಳನ್ನು ಕೊಟ್ಟು ಬಂದುಬಿಡುತ್ತಿದ್ದರು. ಅವರು ಹಾಗೆ ಬಂದು ಕೊಡುವುದು ನಿತ್ಯಕ್ರಮವೇ ಆಗಿತ್ತು. ಇತರರು ಅಂದುಕೊಳ್ಳುತ್ತಿದ್ದದ್ದು ಮಾತ್ರ ಮುಹಮ್ಮದ್ ಸಂಪತ್ತಿನ ಬೆಲೆಯನ್ನು ತಿಳಿಯದವನು. ವ್ಯರ್ಥವಾಗಿ ವಿಧವೆಯರಲ್ಲಿ ಮತ್ತು ಅನಾಥರಲ್ಲಿ ವ್ಯಯ ಮಾಡುತ್ತಿದ್ದಾನೆ. ಒಂದು ವೇಳೆ ಇಂತವನ್ನು ಬಿಟ್ಟಿದ್ದರೆ ಇಡೀ ಮಕ್ಕಾದಲ್ಲಿಯೇ ಅತಿ ದೊಡ್ಡ ಸಾಹುಕಾರನಾಗುತ್ತಿದ್ದ ಎಂಬುದು ಉಳಿದವರ ಲೆಕ್ಕಾಚಾರ.

ಆದರೆ ಗಳಿಸಿದ್ದನ್ನು ಉಳಿಸಿ ಜಿಪುಣತನದಿಂದ ಕಾಪಾಡುವುದು ಮುಹಮ್ಮದರ ಉದ್ದೇಶವಾಗಿರಲಿಲ್ಲ. ಬದಲಿಗೆ, ನಿರ್ಗತಿಕರಲ್ಲಿ, ಅನಾಥರಲ್ಲಿ ಮತ್ತು ಅಸಹಾಯಕ ಸ್ಥಿತಿಗಳಲ್ಲಿ ಇರುವ ವ್ಯಕ್ತಿಗಳಿಗೆ ಹಂಚಿಕೊಳ್ಳುವುದು ಅವರ ಗುಣವಾಗಿತ್ತು. ಇವರು ಬರುವುದನ್ನೇ ಕಾಯುತ್ತಿದ್ದು ಅವರಿಂದ ಜೀವನಾಧಾರ ವಸ್ತುಗಳನ್ನು ಪಡೆಯುವುದು ಅಲ್ಲಿ ಸಂತ್ರಸ್ತರ ವಾಡಿಕೆಯಾಗಿತ್ತು. ಮುಹಮ್ಮದರದ್ದು ಗುಪ್ತದಾನ, ಯಾರ ಮೆಚ್ಚುಗೆಗೂ ಅಲ್ಲ, ಯಾವ ದಾಕ್ಷಿಣ್ಯಕ್ಕೂ ಅಲ್ಲ. ಎರಡೇ ಕಾರಣ ಒಂದು ಹಾಗಿರುವುದೇ ಮುಹಮ್ಮುದರು ತಮ್ಮನ್ನು ರೂಪಿಸಿಕೊಂಡಿರುವ ರೀತಿಯಾಗಿತ್ತು. ಮತ್ತೊಂದು ಇದಾಗುತ್ತಿದ್ದದ್ದು ಪರಮ ದಯಾಳುವೂ ಕರುಣಾನಿಧಿಯೂ ಆದ ಅಲ್ಲಾಹನಿಗೊಸ್ಕರ.

ಮಾಡಿದೆನೆಂಬುದು ಮನದಲಿ ಹೊಳೆದಡೆ
ಏಡಿಸಿ ಕಾಡಿತ್ತು ಶಿವನ ಡಂಗುರ.
ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ
ಮಾಡಿದೆನೆಂಬುದು ಮನದಲಿಲ್ಲದಿದ್ದೆಡೆ
ಬೇಡಿತ್ತನೀವ ನಮ್ಮ ಕೂಡಲ ಸಂಗಮದೇವ.

ಝಕಾತ್, ಕೊಡುವುದರ ಮೂಲಕ, ನಾನು ಮಾಡುತ್ತಿದ್ದೇನೆ ಎಂಬ ಅಹಂಕಾರ ಇಲ್ಲದೇ, ಅಲ್ಲಾಹನ ಆದೇಶದ ಅನುಸಾರ ಅವನೇ ತಮಗೆ ಕೊಟ್ಟಿರುವ ತಮ್ಮ ದುಡಿಮೆ ಅಥವಾ ಐಶ್ವರ್ಯದಿಂದ ನಿಶ್ಚಿತ ಮೊತ್ತವನ್ನು ಕೊಡುವುದು. ಇದು ಯಾತ್ರಿಕರ, ಬಡವರ, ದುಃಖಿಗಳ ತಾಪತ್ರಯಗಳನ್ನು ಹೋಗಲಾಡಿಸಲು, ಅಥವಾ ಅವರ ಸಮಸ್ಯೆಯನ್ನು ನಿವಾರಿಸಲು, ಸಾಲದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿರುವವರ ಸಾಲ ತೀರಿಸುವ ಮೂಲಕ ಆ ಹೊರೆಯನ್ನು ಅವರಿಂದ ಇಳಿಸುವುದು ಸಾಧ್ಯವಾಗುತ್ತದೆ.

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ,
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ,
ಮಾಡುವ ನೀಡುವ ನಿಜಗುಣವುಳ್ಳಡೆ
ಕೂಡಿಕೊಂಡಿರ್ಪ ನಮ್ಮ ಕೂಡಲಸಂಗಮದೇವ.

ಕೊಡುವಿಕೆಯಲ್ಲಿಯೂ ಶುದ್ಧವಾದ ಮಾದರಿ ಮುಹಮ್ಮದರದು.
ಒಮ್ಮೆ ಹಜರತ್ ಅಬು ಹುರೈರಾ ಅವರಿಗೆ ವಿಪರೀತ ಹಸಿವಾಗುತ್ತಿತ್ತಂತೆ. ನಬಾವಿ ಮಸೀದಿಯಿಂದ ಹೊರಗೆ ಹೊರಟರು. ಯಾರಾದರೂ ಸಹಾಬಿಗಳು ತಿನ್ನಲೋ ಅಥವಾ ಕುಡಿಯಲೋ ಏನಾದರೂ ಕೊಡಬಹುದೆಂಬ ವಿಶ್ವಾಸ ಅವರಿಗೆ. ಮೊದಲು ಅಬೂಬಕರ್ ಎದುರಾದರು, ಸಲಾಂ ಹೇಳಿದರು, ಮುಂದೆ ನಡೆದರು. ನಂತರ ಉಮರ್ ಎದುರಾದರು. ಅವರೂ ಸಲಾಂ ಹೇಳಿ ಮುಂದೆ ನಡೆದರು. ನಂತರ ಪ್ರವಾದಿ ಮುಹಮ್ಮದರು ಕಂಡರು. ಅವರು ಸಲಾಂ ಹೇಳಿ ಅಬು ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ಮನೆಯಲ್ಲಿ ಒಂದು ಸಣ್ಣ ಬಟ್ಟಲಿನಲ್ಲಿ ಹಾಲಿತ್ತು. ಮುಹಮ್ಮದರು ಅಬು ಅವರಿಗೆ ಎಪ್ಪತ್ತು ಜನ ವಿದ್ಯಾರ್ಥಿಗಳ ಜೊತೆಗೆ ಹಸಿವನ್ನು ನೀಗಿಸಿದ ಪ್ರತೀತಿ. ಮುಹಮ್ಮದರು ಮೂರನೆಯ ಬಾರಿ ಮತ್ತಷ್ಟು ತೆಗೆದುಕೊಳ್ಳಿರೆಂದಾಗ, “ಆಯಿತು ರಸುಲ್ಲುಲ್ಲಾಹ್, ನನ್ನ ಹೊಟ್ಟೆಯಲ್ಲಿ ಇನ್ನು ಜಾಗವಿಲ್ಲ” ಎಂದರು ಅಬು ಹುರೈರಾ.

ಕೊಡುವಿಕೆ ಎನ್ನುವುದು ಅಲ್ಲಾಹನ ಇಚ್ಛೆಯೇ ಆಗಿದ್ದು ಹೀಗೆ ಝಕಾತ್ ಕೊಡುವುದರಲ್ಲಿ ನಮ್ರತೆ ಇದೆ. ತನ್ನ ಮನಸ್ಸು, ಹೃದಯವನ್ನು ಶುದ್ಧಿಗೊಳಿಸಿಕೊಳ್ಳುವ ಪ್ರಕ್ರಿಯೆ ಭಾಗವಾಗಿದ್ದು, ತನ್ನದು, ತಾನು ಯಾರಿಗೂ ಕೊಡುವುದಿಲ್ಲ, ಅಥವಾ ನಾನು ಗಳಿಸಿದ್ದೆಲ್ಲಾ, ಕೂಡಿಡುವುದೆಲ್ಲಾ ತನ್ನದೇ ಎನ್ನುವುದಿಲ್ಲ. ಇಂತಹ ಅದ್ವಿತೀಯವಾದ ಕೊಡುವಿಕೆಯ ಸಾಧನೆ ಎಂದರೆ ಇಂದು ಇಡೀ ಜಗತ್ತಿನಲ್ಲಿ ದಾರ್ಮಿಕವಾಗಿ ಕೊಡಲ್ಪಡುವ ಅತ್ಯಂತ ದೊಡ್ಡ ಮೊತ್ತದ ದಾನ ಎಂದರೆ ಅದು ಝಕಾತ್.

ಈ ಕೊಡುವಿಕೆ ನಾನಿಷ್ಟುಕೊಟ್ಟೆ, ಅಷ್ಟು ಮಾಡಿದೆ ಎಂದು ಜಂಭಪಡಲು ಅಲ್ಲ ಎನ್ನುವ ಮೇಲ್ಪಂಕ್ತಿ ಮುಹಮ್ಮದರು ಹಾಕಿಕೊಟ್ಟಿದ್ದಾರೆ. ಅಲ್ಲಾಹನಿಂದ ದೊರಕಿರುವ ಐಶ್ವರ್ಯದ ಒಂದು ಭಾಗವನ್ನು ಅಲ್ಲಾಹನ ದಾಸರಿಗೆ ತೆಗೆದಿಡದೇ ಹೋದರೆ ಆ ಸಂಪತ್ತು ಮಲಿನಗೊಳ್ಳುವುದು. ಅಷ್ಟರಮಟ್ಟಿಗೆ ಸಾಮಾಜಿಕ ಮತ್ತು ನೈತಿಕ ಸೂಕ್ಷ್ಮತೆಯನ್ನು ಝಕಾತ್ ಹೊಂದಿರುವುದು.

ಕೊಟ್ಟು ಕುದಿಯಲು ಬೇಡ, ಕೊಟ್ಟಾಡಿಕೊಳಬೇಡ
ಕೊಟ್ಟು ನಾ ಕೆಟ್ಟೆನೆನಬೇಡ, ಶಿವನಲ್ಲಿ
ಕಟ್ಟಿಹುದು ಬುತ್ತಿ ಸರ್ವಜ್ಞ

ಪ್ರವಾದಿ ಮುಹಮ್ಮದರ ಇಸ್ಲಾಂ ಅನುಸರಣೆ ಮತ್ತು ಪ್ರಚಾರಕ್ಕಾಗಿ ತೊಡಗಲು ಹೋದಾಗ ನಾನಾ ರೀತಿಗಳಲ್ಲಿ ಕಿರುಕುಳ, ಅಪಮಾನ, ಹಿಂಸೆ, ಅಪಹಾಸ್ಯಗಳನ್ನೆಲ್ಲಾ ಮಾಡಿದ್ದ ಜನರಿಂದ ತಮ್ಮನ್ನು ಮತ್ತು ಸತ್ಯವನ್ನು ರಕ್ಷಿಸಲು ಯುದ್ಧವನ್ನೇ ಮಾಡಬೇಕಾಗಿ ಬಂದರೂ, ಪ್ರವಾದಿಗಳು ತಮ್ಮ ವೈಯಕ್ತಿಕ ಅಹಮಿನ ಗೆಲುವನ್ನು ಸಂಭ್ರಮಿಸಲು ಯುದ್ಧ ಮಾಡಲೇ ಇಲ್ಲ. ಅದೂ ಕೂಡಾ ಅಲ್ಲಾಹನಿಗೆ ಮತ್ತು ಅವನ ಇಚ್ಛೆಗೆ ಶರಣಾಗಿರುವಂತಹ ಧಾರ್ಮಿಕ ಯುದ್ಧವೇ ಆಗಿತ್ತು. ಅದರಲ್ಲಿ ಮುಖ್ಯವಾದದ್ದು ಬದ್ರ್ ಯುದ್ಧ. ಇಸ್ಲಾಮನ್ನೇ ಇಲ್ಲವಾಗಿಸಲು ಬಂದಂತಹ ಕರಾಳ ಶಕ್ತಿಗಳನ್ನು ತಮ್ಮ ನೈತಿಕ ಮತ್ತು ಆಧ್ಯಾತ್ಮಿಕ ಬಲದಿಂದಲೇ ಸಶಕ್ತವಾಗಿ ಎದುರಿಸಿದ್ದ ಮುಹಮ್ಮದ್ ಮತ್ತು ಅವರ ಅನುಯಾಯಿಗಳು ಗೆದ್ದಾಗ ಆ ಗೆಲುವು ತಮ್ಮದೆಂದು ಬೀಗಲಿಲ್ಲ. ಅಲ್ಲಾಹನಲ್ಲಿ ಅದೇ ವಿನಮ್ರತೆ, ಅದೇ ಶರಣಾಗತಿ.

ಯುದ್ಧ ಕೈದಿಗಳಾದವರನ್ನು ಪರಿಹಾರ ಧನವನ್ನು ಸ್ವೀಕರಿಸಿ ಬಿಟ್ಟುಬಿಡುವ ನಿರ್ಧಾರ ತೆಗೆದುಕೊಂಡಮುಹಮ್ಮದರು ತಮ್ಮ ಅನುಯಾಯಿಗಳೊಂದಿಗೆ ಪೂರ್ವಭಾವಿಯಾಗಿ ಚರ್ಚಿಸಿದ್ದರು. ಪರಿಹಾರ ಧನ ಕೊಡಲಾಗದವರು ಓದು ಬರಹ ಬಲ್ಲವರಾಗಿದ್ದರೆ ಮುಸ್ಲಿಮ್ ಮಕ್ಕಳಿಗೆ ಓದು ಬರಹ ಕಲಿಸಿ ಬಂಧಮುಕ್ತರಾಗಿ ಹೋಗಬಹುದಿತ್ತು. ಕೊನೆಗೆ ಹಣವನ್ನೂ ಕೊಡಲಾಗುತ್ತಿಲ್ಲ, ಅಥವಾ ಕಲಿಸುವಂತಹ ಸೇವೆಯನ್ನೂ ನೀಡಲು ಶಕ್ತರಲ್ಲ ಎಂದಾದರೆ ಬರಿಯ ಔದಾರ್ಯದಿಂದಲೇ ಅವರನ್ನು ಮುಕ್ತರನ್ನಾಗಿಸಿ ಮನೆಗೆ ಕಳುಹಿಸಲಾಗಿತ್ತು.
ಇದು ಯುದ್ಧದಲ್ಲಿ ಬಂಧಿತರಾದವರನ್ನು ಔದಾರ್ಯದ ಮುಹಮ್ಮದರು ನಡೆಸಿಕೊಂಡ ರೀತಿ.

ಮುಂದೆ ಉಹುದ್ ಯುದ್ಧದ ವೇಳೆ ಪ್ರವಾದಿ ಮುಹಮ್ಮದರ ಮುಖಕ್ಕೇ ಏಟು ಬಿದ್ದು ರಕ್ತ ಹರಿಯುತ್ತಿದ್ದಾಗಲೂ ಅವರು ವ್ಯಕ್ತಿಗತವಾದಂತಹ ಕೋಪದಲ್ಲಿ ಕೆರಳಲಿಲ್ಲ. ಬದಲಾಗಿ ಪ್ರಾರ್ಥನೆ ಮತ್ತು ಅಲ್ಲಾಹನಿಗೆ ಕಿವಿಗೊಡುವುದೇ ಅವರ ಒಲವು ನಿಲುವಿನ ಪ್ರಕ್ರಿಯೆಯಾಗಿತ್ತು.

“ಓ ಅಲ್ಲಾಹ್, ನನ್ನ ಜನಾಂಗಕ್ಕೆ ಸನ್ಮಾರ್ಗವನ್ನು ತೋರು. ತಾವೇನು ಮಾಡುತ್ತಿದ್ದೇವೆಂದು ಅವರಿಗೆ ತಿಳಿದಿಲ್ಲ ಅಥವಾ ಅವರನ್ನು ಕ್ಷಮಿಸಿಬಿಡು.”
ಪ್ರವಾದಿಯವರ ಅನುಯಾಯಿಗಳಾಗಿದ್ದ ಸಹಾಬಿಗಳು ಆ ಶತ್ರುಗಳಿಗೆ ಶಾಪ ಕೊಡಲು ಹೇಳಿದಾಗ,
“ನಾನು ಯಾರನ್ನೂ ಶಪಿಸಲಿಕ್ಕಾಗಿ ನೇಮಿಸಲ್ಪಟ್ಟವನಲ್ಲ. ನನ್ನನ್ನು ಒಳಿತು ಕರುಣೆಯ ಸಂದೇಶವಾಹಕರಾಗಿ ನಿಯೋಗಿಸಲಾಗಿದೆ” ಎಂದು ತಮ್ಮ ಈ ಜನ ಅರಿವಿಲ್ಲದೇ ಮಾಡುತ್ತಿರುವ ವಿಷಯಗಳನ್ನು ಕ್ಷಮಿಸುವುದಕ್ಕಾಗಿ ಪ್ರಾರ್ಥಿಸುವರೇ ಹೊರತು ಅಲ್ಲಿ ಪ್ರತಿಕಾರವೆಂಬುದೇ ಇಲ್ಲ.
ತಮ್ಮನ್ನು ಜರಿದರೂ ಕೂಡಾ ಅವರನ್ನು ನಕಾರಾತ್ಮಕವಾಗಿ ನೋಡದೇ ಸೌಜನ್ಯ ಮತ್ತು ಕ್ಷಮಾಶೀಲತೆಯಿಂದಲೇ ನೋಡುವ ಮುಹಮ್ಮದರ ಗುಣವನ್ನು ನಿರೂಪಿಸುವ ಒಂದು ಸಂಗತಿ.
ಮುಹಮ್ಮದರಿಗೆ ಸಾಲ ಕೊಟ್ಟಿದ್ದ ಯಹೂದಿಯೊಬ್ಬನು ಅವರ ಬಳಿ ವಸೂಲಿಗೆಂದು ಬಂದಿದ್ದನು. ಐಷಾರಾಮಿ ಜೀವನ ನಡೆಸದ, ಸರಳಾತಿ ಸರಳ ಬದುಕು ನಡೆಸುತ್ತಿದ್ದ ಮುಹಮ್ಮದರು ಸಾಲ ಎಂದು ಮಾಡುತ್ತಿದ್ದದ್ದು ತಮ್ಮ ವೈಭವಕ್ಕಂತೂ ಅಲ್ಲ. ಯಾರೋ ದೀನರ, ನೊಂದರವರ ಕಷ್ಟಗಾಲದಲ್ಲಾಗಲು.
ಈ ಯಹೂದಿಯು ಇನ್ನೂ ಸಾಲ ತೀರಿಸಲು ನೀಡಿದ್ದ ಗಡುವು ಮೂರು ದಿನವಿದ್ದಂತೆಯೇ ಬಂದು ಹಣಕ್ಕಾಗಿ ಒತ್ತಾಯಿಸುವುದಲ್ಲದೇ ಒರಟಾಗಿ ನಡೆದುಕೊಳ್ಳುತ್ತಾ ಜೋರು ಮಾಡುತ್ತಿದ್ದ. ಆದರೆ ಮುಹಮ್ಮದರು ತಮ್ಮ ಗುಣ ಸ್ವಭಾವದ ಸಹಜತೆಯಿಂದಾಗಿ ಸೌಜನ್ಯ ಮತ್ತು ವಿನಯದಿಂದಲೇ ಉತ್ತರಿಸುತ್ತಿದ್ದರು.

ಸಾಲ ಕೊಟ್ಟಿರುವ ಮದದಿಂದ ಉನ್ಮತ್ತನಾಗಿದ್ದ ಆ ಯಹೂದಿಯು ‘ಅಬ್ದುಲ್ ಮುತ್ತಲಿಬ್’ ಅವರ ಸಂತತಿಯನ್ನೇ ಅನುಮಾನಿಸುತ್ತಾ ಅಪಮಾನಿಸುವಂತೆ ಮಾತಾಡಿದ. ಮುಹಮ್ಮದರ ಜೊತೆಯಲ್ಲಿಯೇ ಇದ್ದ ಉಮರ್ ಕೋಪಗೊಂಡು ಆ ಯೆಹೂದಿಯನ್ನು ಗದರಿಸಿದರು. ಇನ್ನೊಮ್ಮೆ ಅಂತಹ ಮಾತುಗಳನ್ನಾಡದಿರುವಂತೆ ಎಚ್ಚರಿಸಿದರು.
ಆಗ ಮುಹಮ್ಮದರು, “ಉಮರ್, ನೀವು ಅವರೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬಹುದಿತ್ತು. ಮರು ಪಾವತಿ ಮಾಡಲು ಇನ್ನಷ್ಟು ಸಮಯ ಕೇಳಬಹುದಿತ್ತು. ಈಗ ಮೂರು ದಿನಗಳ ಗಡುವು ಇದ್ದರೂ ಈಗಲೇ ತೀರಿಸಿಬಿಡಿ ಮತ್ತು ಅವರನ್ನು ಜರಿದುದಕ್ಕಾಗಿ ಅವರಿಗೆ ಇನ್ನಷ್ಟು ಹೆಚ್ಚಿನ ಮೊತ್ತವನ್ನು ಪರಿಹಾರವಾಗಿ ನೀಡಿ” ಎಂದರು.

ಮುಹಮ್ಮದರ ಇಂತಹ ಸೌಜನ್ಯ ಮತ್ತು ಕ್ಷಮಾಶೀಲತೆಯೇ ಆ ಯಹೂದಿಯನ್ನೂ ಇಸ್ಲಾಂ ಸ್ವೀಕರಿಸುವಷ್ಟು ಮನಪರಿವರ್ತನೆಯಾಗಿತ್ತು. ಓರ್ವ ಆಡಳಿತಗಾರರಾಗಿ ಕಿರುಕುಳವನ್ನು ತಡೆಯಲು ಯುದ್ಧವನ್ನೇ ಮಾಡಬೇಕಾದ ಅನಿವಾರ್ಯತೆ ಒದಗಿ ಅದಕ್ಕೆಂದು ಸಿದ್ಧವಾದಾಗಲೂ ಮುಹಮ್ಮದರು ಅಲ್ಲಾಹನ ಹೆಸರಿಂದ, ಅಲ್ಲಾಹನ ಮಾರ್ಗದಲ್ಲಿ ಸತ್ಯನಿಷೇಧಿಗಳೊಂದಿಗೆ ಹೋರಾಡುವಂತಹ ಅವರಿಗೆ ಉಪದೇಶಿಸಿದ್ದು ಹೀಗೆ, “ವಚನ ಭಂಗ ಮಾಡಕೂಡದು. ಯಾವುದೇ ರೀತಿಯಲ್ಲಿ ಅತಿಕ್ರಮ ಎಸಬಾರದು, ಯಾವುದೇ ಮಗು, ಮಹಿಳೆ ಮತ್ತು ವಯಸ್ಸಾದವರ ಹಾಗೂ ಪ್ರಾರ್ಥನೆ ಅಥವಾ ಆರಾಧನೆ ಮಾಡುತ್ತಿರುವವರ ಮೇಲೆ ದಾಳಿ ಮಾಡಕೂಡದು, ಅವರನ್ನು ಕೊಲ್ಲಕೂಡದು. ಖರ್ಜೂರದ ತೋಟಗಳ ಕಡೆ ಸುಳಿಯಬಾರದು. ಯಾವುದೇ ಮರವನ್ನೂ ಕಡಿಯಬಾರದು. ಯಾರದೇ ಮನೆಯನ್ನು ಕೆಡವಬಾರದು.”

ತಾವು ಇತರ ವ್ಯಾಪಾರಿಗಳಂತೆ ಮನಸ್ಸು ಮಾಡಿದ್ದರೆ ಸುಖವಾಗಿ ಅತಿ ಶ್ರೀಮಂತರಾಗಿದ್ದಿರಬಹುದಾದ ಯೌವನದ ಕಾಲದಲ್ಲಿಯೇ ಅಂತಹವನ್ನಲ್ಲ ತ್ಯಾಗ ಮಾಡಿದ್ದವರು ಈ ಯುದ್ಧವನ್ನು ಮಾಡಬೇಕಾದ ಕಾರಣವೂ ವ್ಯಕ್ತಿಗತವಾದ ಅಹಂಕಾರದ ಪುಷ್ಟಿ, ಬಯಕೆಯ ತೃಪ್ತಿ ಮತ್ತು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಲಲ್ಲವಲ್ಲ!

ಹಾಗಾಗಿಯೇ ಅಲ್ಲಾಹನ ಆಶಯಕ್ಕೆ ತಕ್ಕುದಾದಂತಹ ವಿನಯ, ಶಿಸ್ತು, ಕ್ರಮ ಮತ್ತು ಸನ್ನಡತೆ ಎಲ್ಲವೂ.
ಇದು ಜನರ ಮಧ್ಯೆ ಮಾಡಿಕೊಂಡಿರುವಂತಹ ರಾಜಿ, ಸಂಧಾನವಲ್ಲ! ಅಲ್ಲಾಹನೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ.

ಖಂಡಿತವಾಗಿಯೂ ಅಲ್ಲಾಹನು ನಿಮಗೆ ನ್ಯಾಯ ಪಾಲಿಸಬೇಕೆಂದೂ ಸೌಜನ್ಯ ತೋರಬೇಕೆಂದೂ, ಬಂಧುಗಳಿಗೆ ಅವರ ಹಕ್ಕನ್ನು ನೀಡಬೇಕೆಂದೂ ಆದೇಶಿಸುತ್ತಾನೆ ಮತ್ತು ಅವನು ನಿಮ್ಮನ್ನು ಅಶ್ಲೀಲ ಕೃತ್ಯಗಳಿಂದಲೂ, ಅನ್ಯಾಯದಿಂದಲೂ, ವಿದ್ರೋಹದಿಂದಲೂ ತಡೆಯುತ್ತಾನೆ. ನೀವು ಪಾಠ ಕಲಿಯಬೇಕೆಂದು ಅವನು ನಿಮಗೆ ಉಪದೇಶಿಸುತ್ತಾನೆ.
ನೀವು ಅಲ್ಲಾಹನ ಜೊತೆ ಕರಾರು ಮಾಡಿರುವಾಗ ಆ ಕರಾರನ್ನು ತಪ್ಪದೆ ಪಾಲಿಸಿರಿ. ಮತ್ತು ಪ್ರತಿಜ್ಞೆ ಮಾಡಿ ಅದನ್ನು ದೃಢಪಡಿಸಿದ ಬಳಿಕ ಹಾಗೂ ನೀವು ಖಚಿತವಾಗಿ ಅಲ್ಲಾಹನನ್ನು ನಿಮ್ಮ ಮೇಲೆ ಸಾಕ್ಷಿಯಾಗಿಸಿಕೊಂಡ ಬಳಿಕ ಆ ಪ್ರತಿಜ್ಞೆಯನ್ನು ಮುರಿಯಬೇಡಿ. ನೀವು ಮಾಡುವುದೆಲ್ಲವನ್ನೂ ಅಲ್ಲಾಹನು ಖಂಡಿತ ಬಲ್ಲನು. (ಕು: 16. 90-91) ವ್ಯಕ್ತಿಗಳು ಸನ್ನಡತೆಗಳಿಂದಲೇ ಅವರ ಆಲೋಚನೆ, ಹೊಂದಿರುವ ಮನೋಭಾವ, ಉದ್ದೇಶ, ಗಮ್ಯ ಮತ್ತು ಗಮನ; ಎಲ್ಲವನ್ನೂ ಪ್ರದರ್ಶಿಸುವುದು.

ಅಲ್ಲಾಹನನ್ನೇ ಪೂಜಿಸಿರಿ ಮತ್ತು ಅವನ ಜೊತೆ ಏನನ್ನೂ ಸೇರಿಸಬೇಡಿ. ಹೆತ್ತವರ ವಿಷಯದಲ್ಲಿ ಹಾಗೂ ಆಪ್ತ ಬಂಧುಗಳು, ನೆರೆಯಲ್ಲಿರುವ ಅಪರಿಚಿತರು, ಜೊತೆಗಾರರು, ಪ್ರಯಾಣಿಕರು ಮತ್ತು ನಿಮ್ಮ ಮಾಲಕತ್ವದಲ್ಲಿ ಇರುವವರ ವಿಷಯದಲ್ಲಿ ಸೌಜನ್ಯ ತೋರಿರಿ. ಖಂಡಿತವಾಗಿಯೂ ಅಲ್ಲಾಹನು ಅಹಂಕಾರಿಗಳನ್ನು ಮತ್ತು ಸ್ವತಃ ತಮ್ಮನ್ನೇ ಹೊಗಳಿಕೊಳ್ಳುವವರನ್ನು ಪ್ರೀತಿಸುವುದಿಲ್ಲ. (4:36)
ಕೊಡುವುದರಲ್ಲಾಗಲಿ, ಸನ್ನಡತೆಯಿಂದ ವರ್ತಿಸುವುದರಲ್ಲಾಗಲಿ, ಮಾಡುವ ಕೆಲಸದಲ್ಲಾಗಲಿ, ನೀಡುವ ಸೇವೆಯಲ್ಲಾಗಲಿ ಜಿಪುಣತನವೆಂಬುದು ಅವರಲ್ಲಿರಲಿಲ್ಲ. ಕರುಣೆ, ಸೌಜನ್ಯವೇ ಮೊದಲಾದ ಸದ್ಗುಣಗಳಲ್ಲಿ ಮಾತ್ರವಲ್ಲ, ವಸ್ತುಗಳನ್ನು ಕೊಡುವುದರಲ್ಲಿಯೂ ಧಾರಾಳ.

ಜಿಪುಣತೆ ತೋರುವವರನ್ನು, ಜನರಿಗೆ ಜಿಪುಣತೆ ಬೋಧಿಸುವವರನ್ನು ಮತ್ತು ಅಲ್ಲಾಹನು ತನ್ನ ಅನುಗ್ರಹದಿಂದ ನೀಡಿರುವುದನ್ನು ಬಚ್ಚಿಡುವವರನ್ನು (ಅಲ್ಲಾಹನು ಪ್ರೀತಿಸುವುದಿಲ್ಲ). ಧಿಕ್ಕಾರಿಗಳಿಗೆ ನಾವು ಅಪಮಾನಕಾರಿ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿದ್ದೀವೆ. (4: 37)

ತಮಗೆ ಕೆಡುಕ ಮಾಡುವವರಿಗೂ ಸೌಜನ್ಯ ತೋರಿ ಅವರಲ್ಲಿ ಪರಿವರ್ತನೆಗಾಗಿ ಪ್ರಾರ್ಥಿಸುವ ಮುಹಮ್ಮದರ ಜೀವನವೇ ಅನುಕರಣೀಯ ಸನ್ನಡತೆಯ ಮತ್ತು ಸದ್ಗುಣದ ಮಾದರಿ.
ನೀನೀಗ ನನ್ನನ್ನು ಕೊಲ್ಲಲಿಕ್ಕೆಂದು ನನ್ನ ಮೇಲೆ ಕೈ ಎತ್ತಿದರೂ, ನಾನಂತೂ ನಿನ್ನನ್ನು ಕೊಲ್ಲಲು ನಿನ್ನ ಮೇಲೆ ಕೈ ಎತ್ತುವವನಲ್ಲ. ಖಂಡಿತವಾಗಿಯೂ ನನಗೆ ಸರ್ವಲೋಕಗಳ ಪಾಲಕನಾದ ಅಲ್ಲಾಹನ ಭಯವಿದೆ. (5:28)

ಪ್ರವಾದಿ ಮುಹಮ್ಮದರಿಗೆ ಯಾರದ್ದೂ ಭಯವಿರಲಿಲ್ಲ. ಇದ್ದ ಭಯವೆಂದರೆ ಅದು ಅಲ್ಲಾಹನದು ಮಾತ್ರ. ಅಲ್ಲಾಹನೊಬ್ಬನಲ್ಲಿಯೇ ಇದ್ದಂತಹ ಭಯ ಮತ್ತು ಭಕ್ತಿ ತಮ್ಮ ಸಹ ಜೀವಿಗಳೆಲ್ಲ ಜೊತೆ ವರ್ತಿಸುವ ಬಗೆಗಳಲ್ಲಿ ಪ್ರತಿಫಲಿತವಾಗುತ್ತಿತ್ತು.

ಪಾಶ್ಚಾತ್ಯ ಇತಿಹಾಸ ವಿದ್ವಾಂಸರಾದ ಸರ್ ವಿಲಿಯಮ್ ಮ್ಯೂರ್ ಹೇಳುವಂತೆ, ಮುಹಮ್ಮದರ ಮಾರ್ಗದರ್ಶನದಿಂದಾಗಿ ಮದೀನಾದ ಪ್ರಜೆಗಳು ಕೈದಿಗಳನ್ನೂ ಸನ್ನಡತೆಯಿಂದ ಉಪಚರಿಸುವಷ್ಟು ಪರಿಗಣಿಸಿದರು. ಮುಂದಿನ ದಿನಗಳಲ್ಲಿ ಮದೀನಾದಲ್ಲಿ ಕೈದಿಯಾಗಿದ್ದವನೊಬ್ಬ ಹೇಳುತ್ತಿದ್ದನಂತೆ, ‘ಮದೀನಾದ ಜನರು ಅನುಗ್ರಹಿತರು. ಅವರು ತಾವು ಬರಿಗಾಲಿನಲ್ಲಿ ನಡೆಯುತ್ತಾ ಕೈದಿಗಳನ್ನು ಸವಾರಿಯಲ್ಲಿ ಕೊಂಡೊಯ್ದರು. ತಾವು ತಿನ್ನುವುದು ಅಲ್ಪವೇ ಆಗಿದ್ದರೂ, ಖರ್ಜೂರದಲ್ಲಿಯೇ ಹೊತ್ತಿನ ಆಹಾರ ಮುಗಿಸಿಕೊಳ್ಳುತ್ತಿದ್ದರೂ ನಮಗೆ ಗೋಧಿಯ ರೊಟ್ಟಿ ಕೊಟ್ಟಿದ್ದರು.”

ಇದು ಮುಹಮ್ಮದರ ಗುಣ ನಡವಳಿಕೆಗಳು ಜನರನ್ನೇ ರೂಪಾಂತರಿಸಿದ್ದ ರೀತಿ.
ಮನುಷ್ಯ ನೈಸರ್ಗಿಕವಾಗಿಯೇ ಕೇಡಿಯಾಗಿದ್ದಾನೆ.
ಮನುಷ್ಯ ನಿಜಕ್ಕೂ ಅಕ್ರಮಿ ಮತ್ತು ಅಜ್ಞಾನಿಯಾಗಿದ್ದಾನೆ. (ಕುರಾನ್: 33.72)

ಅವನು ತನಗೆ ಸಹಜವಾಗಿರುವ ಪಶುಪ್ರವೃತ್ತಿಗಳನ್ನು ತೃಪ್ತಿಪಡಿಸಿಕೊಳ್ಳಲು ತನ್ನ ಮನಸ್ಸನ್ನೂ ಉಪಯೋಗಿಸಿಕೊಳ್ಳುತ್ತಾನೆ. ಇದರಿಂದ ಲೋಕದಲ್ಲಿ ಕ್ಷೋಭೆ ಉಂಟಾಗುವುದಲ್ಲದೇ ತನ್ನ ಬದುಕನ್ನೂ ಮತ್ತು ಇತರರ ಬದುಕನ್ನೂ ನಾಶ ಮಾಡುತ್ತಾನೆ.ನಷ್ಟವಾದಾಗ ಕುಗ್ಗುತ್ತಾನೆ, ಲಾಭವಾದಾಗ ಹಿಗ್ಗುತ್ತಾನೆ. ತನಗಿಂತ ಇನ್ನಾರೂ ಇಲ್ಲ ಎಂದು ವರ್ತಿಸುತ್ತಾನೆ.ಹಾಗಾಗಿಯೇ ಅವನಿಗೆ ಅಗತ್ಯವಿರುವಂತ ನೈತಿಕತೆಯನ್ನು ಮತ್ತು ಬದುಕುವ ಮಾರ್ಗವನ್ನು ಇಸ್ಲಾಮಿನಲ್ಲಿ ತೋರುವ ಪ್ರವಾದಿ ಮಾಡುತ್ತಾರೆ.

ಮಾನವನು ಚಂಚಲನಾಗಿಯೇ ಸೃಷ್ಟಿಸಲ್ಪಟ್ಟಿದ್ದಾನೆ. ಅವನಿಗೆ ಸಂಕಷ್ಟ ಬಂದಾಗ ಗಾಬರಿಗೊಳ್ಳುತ್ತಾನೆ ಮತ್ತು ಸೌಭಾಗ್ಯಾ ಪ್ರಾಪ್ತವಾದಾಗ ಲೋಭ ತೋರುತ್ತಾನೆ. ಆದರೆ ನಮಾಝ್ ಮಾಡುವವರು ಈ ದೋಷಗಳಿಂದ ಮುಕ್ತರಾಗಿದ್ದಾರೆ. (70:19-22)

ಸ್ಪರ್ಧೆ, ಅಸೂಯೆ, ದುರಾಸೆ, ಕಪಟತನ, ಸ್ವಾರ್ಥವೇ ಮೊದಲಾದ ಆತ್ಮಘಾತಕ ಗುಣಗಳಿಂದ ಕಳಚಿಕೊಳ್ಳಲು, ಆ ಕಳಂಕಗಳಿಂದ ಮುಕ್ತವಾಗಲು, ನಿಜವಾಗಿಯೂ ಮಾನವನ ಇಹ ಮತ್ತು ಪರದ ಅಗತ್ಯತೆಗಳನ್ನು ಪೂರಿಸಿಕೊಳ್ಳಲು ಮನುಷ್ಯನು ಪರಿಶುದ್ಧನಾಗಬೇಕಿದೆ.

ಮನಸ್ಸು (ಹೃದಯ)ಗಳು ದುರ್ಬಲವೂ ಮತ್ತು ಅನುಮಾನಗಳು ಆಕ್ರಮಣಕಾರಿಯಾಗಿ ಕಿತ್ತುಕೊಳ್ಳುವಂತವೇ ಆಗಿವೆ. (ಸಿಯಾರ್ ಅಲಂ ಅಲ್ ನುಬಾಲ 7/261)

ಮನಸ್ಸನ್ನು, ಹೃದಯವನ್ನು ಪರಿಶುದ್ಧವಾಗಿರಿಸಿಕೊಳ್ಳುವುದರ ಮೂಲಕ ಇಡೀ ಬದುಕನ್ನೇ ಪರಿಶುದ್ಧವಾಗಿಸಿಕೊಳ್ಳುವ ಮಾದರಿ ಅವರದು.

ಸಂದೇಶವಾಹಕರು ಹೇಳುತ್ತಾರೆ: ಓ ಅಬು ಢಾರ್ರ್, ಸಮೃದ್ಧವಾದ ಧನಕನಕಗಳನ್ನು ಶ್ರೀಮಂತಿಕೆ ಎಂದು ಊಹಿಸುತ್ತೀಯಾ? ಹೃದಯ ಶ್ರೀಮಂತಿಕೆಯೇ ಶ್ರೀಮಂತಿಕೆ, ಹೃದಯದ ದಾರಿದ್ರ್ಯವೇ ದಾರಿದ್ರ್ಯ. ಹೃದಯದಲ್ಲಿ ಶ್ರೀಮಂತವಾಗಿರುವವರು ಈ ಪ್ರಪಂಚದಲ್ಲಿ ಏನನ್ನೇ ಎದುರಿಸಿದರೂ ಕುಂದಲಾರರು. ಹೃದಯದಲ್ಲಿ ದಾರಿದ್ರ್ಯವಿರುವವರು ಈ ಲೋಕದಲ್ಲಿ ಎಷ್ಟೇ ಗಳಿಸಿದರೂ ಶ್ರೀಮಂತರಾಗಲಾರರು. ಅವರ ತಮ್ಮತನವನ್ನು ಧಕ್ಕೆ ಗೊಳಿಸುವುದು ಆ ದೌರ್ಬಲ್ಯವೇ. (ಸಹಿಹ್ ಅಲ್ ಜಮಿ / 7816)

ಮನೋದೌರ್ಬಲ್ಯಗಳಿಂದಾಗಿಯೇ ಮನುಷ್ಯನು ತನಗೆ ಲಭ್ಯವಾಗುವ ಅರಿವನ್ನು ಅನುಭವವನ್ನಾಗಿಸಿಕೊಳ್ಳಲು ಎಡವುತ್ತಾನೆ. ಒಮ್ಮೆ ಸನ್ಮಾರ್ಗದಲ್ಲಿ ನಡೆಯುವವನು, ಮತ್ತೊಮ್ಮೆ ದುರ್ಮಾರ್ಗಕ್ಕೆ ಎಳೆಯಲ್ಪಡುತ್ತಾನೆ. ಲೋಕದ ಇತರ ಪ್ರಭಾವಗಳು, ಪ್ರಲೋಭನೆಗಳು ಆತನನ್ನು ಎಳೆಯುತ್ತವೆ. ತನ್ನ ಗಮ್ಯವನ್ನು ಸದಾ ಧ್ಯಾನಿಸುತ್ತಾ ಗಮನವಿಟ್ಟು ತನ್ನ ಕೆಲಸ ಕಾರ್ಯಗಳ ಮೂಲಕ, ವರ್ತನೆಗಳ ಮೂಲಕ ಮಾರ್ಗ ತಪ್ಪದಂತೆ ತನ್ನನ್ನು ತಾನೇ ತರಬೇತುಗೊಳಿಸಿಕೊಳ್ಳಬೇಕು.
ನಿಮ್ಮ ಚಟುವಟಿಕೆಗಳನ್ನು ತ್ವರೆಗೊಳಿಸಿ ಅರಿವು ಕತ್ತಲರಾತ್ರಿಯ ತುಂಡುಗಳಂತೆ ಬರುವಷ್ಟರಲ್ಲಿ. ತನ್ನ ಸತ್ಯವಿಶ್ವಾಸವನ್ನು ಲೌಕಿಕ ಲಾಭಕ್ಕಾಗಿ ಮಾರಾಟ ಮಾಡಿಕೊಳ್ಳುತ್ತಾ ಒಬ್ಬ ಬೆಳಗ್ಗೆ ವಿಶ್ವಾಸಿಯಾಗಿರುವನು, ರಾತ್ರಿ ಅವಿಶ್ವಾಸಿಯಾಗಿರುವನು. ಅಥವಾ ರಾತ್ರಿ ವಿಶ್ವಾಸಿಯಾಗಿರುವನು ಮತ್ತೆ ಬೆಳಗ್ಗೆ ಅವಿಶ್ವಾಸಿಯಾಗಿರುವನು. (ಮುಸ್ಲೀಂ – 118)

ಏನೆಲ್ಲಾ ಮಾಡಿದರೂ ತಪ್ಪಾದರೇನು ಮಾಡುವುದು? ಅಹುದು, ಮರಳಿ ಪ್ರಯತ್ನವ ಮಾಡಲೇ ಬೇಕು.
ಹೇಳಿರಿ, ಸ್ವತಃ ತಮ್ಮ ಮೇಲೆ ಅಕ್ರಮವೆಸಗಿಕೊಂಡಿರುವ ನನ್ನ ಅಲ್ಲಾಹನ ದಾಸರೇ, ಅಲ್ಲಾಹನ ಅನುಗ್ರಹದ ಕುರಿತಂತೆ ನಿರಾಶರಾಗಬೇಡಿ. ಅಲ್ಲಾಹನು ಖಂಡಿತ ಎಲ್ಲಾ ಪಾಪಗಳನ್ನೂ ಕ್ಷಮಿಸುತ್ತಾನೆ. ಅವನು ಖಂಡಿತ ತುಂಬಾ ಕ್ಷಮಿಸುವವನು ಮತ್ತು ಕರುಣೆ ತೋರುವವನೂ ಆಗಿದ್ದಾನೆ. (39: 53)

ವ್ಯಕ್ತಿಯೊಬ್ಬನು ತನ್ನ ಕಪಟತನವನ್ನು ತಾನೇ ಅರಿತುಬಿಟ್ಟರೆ, ತನ್ನ ರೋಗಕ್ಕೆ ತಾನೇ ಚಿಕಿತ್ಸೆ ತೆಗೆದುಕೊಳ್ಳಲು ಸಾಧ್ಯವಾಗುವಂತಾಗುತ್ತದೆ.
ಹೃದಯ (ಮನೋಭಾವ)ಗಳಲ್ಲಿ ನಾಲ್ಕು ವಿಧ: ಎರಡು ಮುಖಗಳುಳ್ಳ ಮನಸ್ಸು. ಇದು ಕಪಟತನದ ವೇಷಧಾರಿ ಮನಸ್ಸು; ಇದು ಅವಿಶ್ವಾಸಿಯ ಮನಸ್ಸು. ಒಂದು ಪರಿಶುದ್ಧ ಮನಸ್ಸು, ಪ್ರಕಾಶಮಾನವಾಗಿರುವ ದೀಪವೊಂದು ಒಳಗಿರುವಂತೆ. ಈ ಹೃದಯ ವಿಶ್ವಾಸದಿಂದ ಕೂಡಿದ್ದು. ಇನ್ನೊಂದು ಮನಸ್ಸು ಕಪಟತನ ಮತ್ತು ವಿಶ್ವಾಸ ಎರಡನ್ನೂ ಹೊಂದಿರುವಂತದ್ದು, ರಕ್ತ ಮತ್ತು ಕೀವುಗಳಿಂದ ಕೂಡಿರುವ ಹುಣ್ಣಿದ್ದಂತೆ, ಕೊಳಕು ಮತ್ತು ಶುದ್ಧ; ಎರಡೂ ಬಗೆಯ ನೀರನ್ನು ಹನಿಸಿಕೊಂಡು ಬೆಳೆದಿರುವ ಮರದಂತೆ. ಆ ಎರಡರಲ್ಲಿ ಯಾವುದೇ ಒಂದು ಹಿರಿದಾದರೂ ಹೃದಯ (ಮನಸ್ಸು) ಗೆಲ್ಲುವುದು. (ಇಬ್ನ್ ಅಬಿ ಶಯ್ಬಾಹ್ ಇನ್ ಕಿತಾಬ್ ಅಲ್ ಇಮಾನ್ – 54)
ನಾನೊಬ್ಬ ಉದ್ದಾರವಾದರೆ ಸಾಕು ಎನ್ನುವ ಮಾತಲ್ಲ ಇದು. ಮನುಷ್ಯ ಸಂಘಜೀವಿ. ನನ್ನ ಒಡಹುಟ್ಟುಗಳೂ, ಸಹಜೀವಿಗಳೂ ಒಟ್ಟಾಗಿಯೇ ಮನುಷ್ಯನ ಲೋಕವನ್ನು ನಿರ್ಮಿಸಿ ನಿರ್ವಹಿಸುತ್ತಿರುವುದು. ನಮ್ಮ ಸಹಜೀವಿಗಳನ್ನೂ ಜೊತೆಗೊಯ್ಯುವ ಬಾಧ್ಯತೆಯೂ ನಮಗಿದೆ. ಆದರೆ ಅವರು ನಮ್ಮ ವಿಷಯವನ್ನು ಅರಿಯಲು ವಿಮುಖರಾದರೆ?

“ಅವರು ನಿಮ್ಮ ಮಾತನ್ನು ಸ್ವೀಕರಿಸದಿದ್ದರೆ, ನಿಮಗೆ ತಿಳಿದಿರಲಿ; ಅವರು ಕೇವಲ ತಮ್ಮ ಸ್ವೇಚ್ಛೆಯನ್ನಷ್ಟೇ ಅನುಸರಿಸುತ್ತಿದ್ದಾರೆ. ಅಲ್ಲಾಹನ ಕಡೆಯಿಂದ ಯಾವುದೇ ಮಾರ್ಗದರ್ಶನವಿಲ್ಲದೆ, ತನ್ನ ಸ್ವೇಚ್ಛೆಯನ್ನು ಅನುಸರಿಸುವಾತನಿಗಿಂತ ಹೆಚ್ಚು ದಾರಿಗೆಟ್ಟವನು ಯಾರಿರಬಹುದು? ಅಲ್ಲಾಹನು ಅಕ್ರಮಿಗಳಿಗೆ ಖಂಡಿತ ದಾರಿ ತೋರುವುದಿಲ್ಲ.” (ಕು. 28-50)

ನಮ್ಮನ್ನು ನೇರವಾದ ಮಾರ್ಗದಲ್ಲಿ ನಡೆಸು ಎನ್ನುವುದೇ ಪ್ರಾರ್ಥನೆ. ದಾರಿತಪ್ಪಿರುವವರ ದಾರಿಯಲ್ಲ. ಅಲ್ಲಾಹನಿಂದ ಅನುಗ್ರಹಿತವಾಗಿರುವ ದಾರಿಯದು.
ಶ್ರೇಷ್ಟತೆಯು ನೀವು ಮನೆಗಳಿಗೆ ಹಿಂಬಾಗಿಲಿನಿಂದ ಪ್ರವೇಶಿಸುವುದನ್ನು ಅವಲಂಬಿಸಿಲ್ಲ. ನಿಜವಾಗಿ ಭಯ ಭಕ್ತಿ ಉಳ್ಳವನೇ ಶ್ರೇಷ್ಟನು. ನೀವಿನ್ನು ಮನೆಗಳಿಗೆ ಮುಂಬಾಗಿಲಿನಿಂದಲೇ ಪ್ರವೇಶಿಸಿರಿ ಮತ್ತು ಅಲ್ಲಾಹನಿಗೆ ಅಂಜುತ್ತಲಿರಿ – ನೀವು ವಿಜಯಿಗಳಾಗಲಿಕ್ಕಾಗಿ. (ಕು. 2:189)

ಏಕೆಂದರೆ ಹೃದಯದ ಮೇಲೆ ಗಾಯದ ಕಲೆಗಳನ್ನು ಉಳಿಸುವುದೇ ಪಾಪಗಳು.
ತಮ್ಮಿಷ್ಟಕ್ಕೆ ತಾವೇ ತಮ್ಮ ಅಹಂಕಾರದಿಂದ ಪ್ರೇರೇಪಿತರಾಗಿ ನಡೆದುಕೊಳ್ಳುವವರಿಗೆ ಪ್ರವಾದಿ ಮುಹಮ್ಮದರು ಅರ್ಥವಾಗರು.
ಪ್ರವಾದಿ ಮುಹಮ್ಮದರು ಅರಬ್ಬರನ್ನು ಅಹಂಕಾರದಿಂದ ವಿನಯಕ್ಕೆ, ಕ್ರೌರ್ಯದಿಂದ ಕರುಣೆಗೆ, ಒಡಕುತನದಿಂದ ಒಗ್ಗಟ್ಟಿಗೆ, ಚಂಚಲತೆಯಿಂದ ದೃಢವಾದ ಶ್ರದ್ಧೆಗೆ, ಅನೇಕ ದೇವತಾರಾಧನೆಗಳಿಂದ ಏಕ ದೇವನಿಗೆ, ಅನೈತಿಕತೆಯಿಂದ ಪಾವಿತ್ರ್ಯತೆಗೆ, ಸೇಡಿನಿಂದ ಕ್ಷಮೆಗೆ, ಸೋಮಾರಿತನದಿಂದ ಕಾಯಕ ನಿಷ್ಟೆಗೆ, ಸ್ವಾರ್ಥದಿಂದ ನಿಸ್ವಾರ್ಥಕ್ಕೆ, ಒರಟುತನದಿಂದ ನಾಜೂಕುತನಕ್ಕೆ, ಸ್ವಂತದರ ವ್ಯಾಮೋಹದಿಂದ ಸರ್ವೋದಯದ ಧೋರಣೆಗೆ, ಮೂರ್ಖತನದಿಂದ ಜಾಣತನಕ್ಕೆ ತಂದಂತೆ ನನ್ನ ಅರಿವಿನ ಪ್ರವಾದಿಯ ಸಾಕ್ಷಾತ್ಕಾರದಿಂದ ಜೀವಿತದ ಮಹೋನ್ನತ ಮೌಲ್ಯದ ಅರಿವು ಸಾಕ್ಷಾತ್ಕಾರವಾಗುವುದು. ನನ್ನ ಪ್ರೀತಿಯ ಪ್ರವಾದಿಯ ಅರಿವು ನನ್ನ ಹೃದಯದಲ್ಲಿ, ನಡೆಯಲ್ಲಿ, ಆಲೋಚನೆ ಮತ್ತು ವರ್ತನೆಗಳಲ್ಲಿ ಪ್ರತಿಫಲಿಸುತ್ತಲೇ ಇರಲೆಂಬ ಪ್ರಾರ್ಥನೆ ನನ್ನದು.(ಬರಹ-ಯೋಗೇಶ್ ಮಾಸ್ಟರ್)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭ್ರಷ್ಟಾಚಾರದ ವಿರುದ್ಧ ಶಂಕರ್ ಇನ್ನೊಂದು ಹೋರಾಟ!

Published

on

  • ಚೇತನ್ ನಾಡಿಗೇರ್

ಣಿರತ್ನಂ ಏನೇ ಮಾಡಲಿ, ಯಾವುದೇ ಚಿತ್ರ ತೆಗೆಯಲಿ, ಅದರ ಮೂಲ ಸೆಲೆ ಪ್ರೀತಿಯಾಗಿರುತ್ತದೆ. ಪ್ರೀತಿಯ ಬೇರೆಬೇರೆ ವ್ಯಾಖ್ಯಾನಗಳನ್ನು, ಬೇರೆಬೇರೆ ಹಿನ್ನೆಲೆಯಲ್ಲಿ ಮಣಿರತ್ನಂ ಪ್ರತಿಚಿತ್ರದಲ್ಲೂ ಹೇಳುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಅದೇ ರೀತಿ, ರಾಮ್‍ಗೋಪಾಲ್‍ ವರ್ಮ ಏನೇ ಚಿತ್ರ ಮಾಡಿದರೂ, ಕ್ರೈಮ್‍ ಹಿನ್ನೆಲೆಯಲ್ಲೇ ಮಾಡುತ್ತಾರೆ. ಹೀಗೆ ಬೇರೆಬೇರೆ ನಿರ್ದೇಶಕರು ಒಂದೇ ವಿಷಯವನ್ನಿಟ್ಟುಕೊಂಡು ಬೇರೆಬೇರೆ ರೀತಿ ವ್ಯಾಖ್ಯಾನಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ.

ಈಗ್ಯಾಕಪ್ಪಾ ಈ ಮಾತು ಎಂದರೆ, ಶಂಕರ್ ನಿರ್ದೇಶನದ ‘ಇಂಡಿಯನ್‍ 2’ ನಾಳೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ತಮ್ಮದೇ ಯಶಸ್ವಿ ಚಿತ್ರ ‘ಇಂಡಿಯನ್‍’ನ ಮುಂದುವರೆದ ಭಾಗ ಇದು. ಆ ಚಿತ್ರ ಬಿಡುಗಡೆಯಾಗಿ 26 ವರ್ಷಗಳ ನಂತರ ‘ಇಂಡಿಯನ್‍ 2’ ಬಿಡುಗಡೆಯಾಗುತ್ತಿದೆ. ಅಷ್ಟೇ ಅಲ್ಲ, ಭ್ರಷ್ಟಾಚಾರದ ವಿಷಯವನ್ನಿಟ್ಟುಕೊಂಡು ಶಂಕರ್‍ ನಿರ್ದೇಶಿಸುತ್ತಿರುವ ಏಳನೇ ಚಿತ್ರ ಇದು.

ಶಂಕರ್‍ ಚಿತ್ರಗಳೆಂದರೆ ಅದ್ಧೂರಿತನ, ಹಿಟ್‍ ಹಾಡುಗಳು, ದೊಡ್ಡ ಕ್ಯಾನ್ವಾಸ್‍, ಮಾಸ್ ಅಂಶಗಳು ಇವೆಲ್ಲವೂ ಕಾಣುತ್ತದೆ. ಅದೇ ರೀತಿ ಗಮನಸೆಳೆಯುವ ಒಂದು ವಿಷಯವೆಂದರೆ, ಅದು ಭ್ರಷ್ಟಾಚಾರದ ವಿರುದ್ಧ ಶಂಕರ್‍ ನಿರಂತರ ಹೋರಾಟ. ತಮ್ಮ ನಿರ್ದೇಶನದ ಮೊದಲ ಚಿತ್ರದಿಂದಲೂ ಶಂಕರ್‍ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಲೇ ಇದ್ದಾರೆ. ಶಂಕರ್‍ ಈ 31 ವರ್ಷಗಳಲ್ಲಿ ನಿರ್ದೇಶಿಸಿರುವುದು ಕೇವಲ 14 ಚಿತ್ರಗಳನ್ನು. ಆ ಪೈಕಿ ಏಳು ಚಿತ್ರಗಳು ಭ್ರಷ್ಟಾಚಾರ ಎಂಬ ವಿಷಯವನ್ನಿಟ್ಟುಕೊಂಡು ಮೂಲವಾಗಿಟ್ಟುಕೊಂಡು ಮಾಡಲಾಗಿದೆ.

ಈ ಪ್ರಯಾಣ ಶುರುವಾಗಿದ್ದು 1993ರಲ್ಲಿ ಬಿಡುಗಡೆಯಾದ ‘ಜಂಟಲ್‍ಮ್ಯಾನ್’ ಚಿತ್ರದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಕುರಿತು ಕಥೆ ಮಾಡಿದ್ದರು. ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಮತ್ತು ಲಂಚಾವತಾರದಿಂದ ಹೇಗೆ ಪ್ರತಿಭಾವಂತ ಯುವಕರು ಅವಕಾಶವಂಚಿತರಾಗುತ್ತಿದ್ದಾರೆ ಎಂದು ಹೇಳಿದರು. ಒಬ್ಬ ಸಾಮಾನ್ಯ ಮನುಷ್ಯ ಹೇಗೆ ಈ ವ್ಯವಸ್ಥೆಯ ವಿರುದ್ಧ ಹೋರಾಡುತ್ತಾನೆ ಎಂದು ತೋರಿಸಿದ್ದರು. ಆ ನಂತರ ‘ಇಂಡಿಯನ್‍’, ‘ಮುದಲ್ವನ್‍’, ‘ಅನ್ನಿಯನ್‍’, ‘ಶಿವಾಜಿ: ದಿ ಬಾಸ್‍’ ಮತ್ತು ‘ಇಂಡಿಯನ್‍ 2’ ಚಿತ್ರಗಳ ಮೂಲಕ ಅವರು ಇದೇ ವಿಷಯವನ್ನು ಹೇಳುವ ಪ್ರಯತ್ನವನ್ನು ಮಾಡಿದ್ದಾರೆ.

ವಿಷಯ ಅದೇ ಭ್ರಷ್ಟಾಚಾರ ಅಥವಾ ಲಂಚಾವತಾರವಿರಬಹುದು. ಅದೇ ವಿಷಯವನ್ನಿಟ್ಟುಕೊಂಡು ಶಂಕರ್‍ ಬೇರೆಬೇರೆ ರೀತಿಯಲ್ಲಿ ಕಮರ್ಷಿಯಲ್‍ ಆಗಿ ಚಿತ್ರಗಳನ್ನು ರೂಪಿಸಿರುವುದಿದೆಯಲ್ಲಾ ಅದು ವಿಶೇಷ ಎನಿಸುತ್ತದೆ. ‘ಇಂಡಿಯನ್‍’ನಲ್ಲಿ ಸ್ವಾತಂತ್ರ್ಯ ಹೋರಾಟಗಾರನೊಬ್ಬ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾನೆ. ತನ್ನ ಮಗನೇ ದೊಡ್ಡ ಭ್ರಷ್ಟ ಎಂದು ಗೊತ್ತಾದಾಗ ಅವನನ್ನೇ ಸಾಯಿಸುತ್ತಾನೆ. ‘ಮುದಲ್ವನ್’ ಎಂಬ ಚಿತ್ರದಲ್ಲಿ ಒಬ್ಬ ಸಾಮಾನ್ಯ ಮನುಷ್ಯ ಒಂದು ದಿನದ ಮುಖ್ಯಮಂತ್ರಿಯಾಗಿ ಭ್ರಷ್ಟಾಚಾರ ತಡೆಯುವ ಪ್ರಯತ್ನವನ್ನು ತನ್ನದೇ ಶೈಲಿಯಲ್ಲಿ ಮಾಡುತ್ತಾನೆ. ‘ಅನ್ನಿಯನ್‍’ನಲ್ಲಿ ಭ್ರಷ್ಟಾಚಾರ, Multiple Personality Disorder ಮತ್ತು ಗರುಡ ಪುರಾಣವನ್ನು ಶಂಕರ್‍ ಸೇರಿಸಿ ಕಥೆ ಮಾಡಿರುವ ರೀತಿಯೇ ವಿಶಿಷ್ಟ. ‘ಶಿವಾಜಿ’ಯಲ್ಲಿ ನೂರಾರು ಕೋಟಿ ಆಸ್ತಿ ಇರುವ ಶ್ರೀಮಂತನೊಬ್ಬ ಈ ವ್ಯವಸ್ಥೆಯಿಂದ ಬೇಸತ್ತು ಹೋರಾಟಕ್ಕೆ ಇಳಿಯುತ್ತಾನೆ. ಈಗ ‘ಇಂಡಿಯನ್‍ 2’ ಚಿತ್ರದಲ್ಲಂತೂ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಎಂದು Second War of Independence ಬಣ್ಣಿಸಿದ್ದಾರೆ. ಅಲ್ಲಿಗೆ ಭ್ರಷ್ಟಾಚಾರದ ವಿರುದ್ಧ ಶಂಕರ್‍ ಮತ್ತೊಂದು ಹೋರಾಟ ಶುರು ಮಾಡಿದ್ದಾರೆ.

ಇಷ್ಟಕ್ಕೂ ಶಂಕರ್‍ ಯಾಕೆ ಈ ವಿಷಯದ ಮೇಲೆ ಮೇಲಿಂದ ಮೇಲೆ ಸಿನಿಮಾ ಮಾಡುತ್ತಾರೆ? ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಯಾವುದೇ ವಿಷಯ ನನ್ನನ್ನು ಕಾಡಿದರೂ, ಆ ಕುರಿತು ಕಥೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತೇನೆ. ಈ ಭ್ರಷ್ಟಾಚಾರ ನನ್ನನ್ನು ಪದೇಪದೇ ಕಾಡಿದೆ. ಅದನ್ನು ಕಮರ್ಷಿಯಲ್‍ ರೂಪದಲ್ಲಿ, ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನ ಮಾಡುತ್ತಾ ಬಂದಿದ್ದೇನೆ. ಒಂದು ವಿಷಯ ಸ್ಪಷ್ಟವಾದ ಮೇಲೆ, ಅದನ್ನು ಹೇಗೆ ತರಬೇಕು ಎಂದು ಯೋಚಿಸುತ್ತೇನೆ. ಪ್ರೇಕ್ಷಕರ ದೃಷ್ಟಿಕೋನದಿಂದ ಯೋಚಿಸುವುದಕ್ಕೆ ಪ್ರಯತ್ನಿಸುತ್ತೇನೆ. ಅವರಿಗೆ ಬೋರ್‍ ಆಗಬಾರದು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಚಿತ್ರಕಥೆ ಮಾಡುತ್ತಾ ಹೋಗುತ್ತೇನೆ’ ಎಂದು ಹೇಳಿಕೊಂಡಿದ್ದಾರೆ ಶಂಕರ್.

ಬಹುಶಃ ಅದೇ ಅವರ ಯಶಸ್ಸು ಎನ್ನಬಹುದೇನೋ? ಶಂಕರ್‍ ಒಂದು ಚಿತ್ರದ ಕಥೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ, ಮನರಂಜನಾತ್ಮಕ ಅಂಶಗಳಿಗೂ ಅಷ್ಟೇ ಪ್ರಾಮುಖ್ಯತೆ ಕೊಡುತ್ತಾರೆ. ಕೆಲವೊಮ್ಮೆ ಶಂಕರ್‍ ಪಾತ್ರಗಳು Larger than life ಎಂದನಿಸಬಹುದು. ಕೆಲವೊಮ್ಮೆ ತುಂಬಾ exaggeration ಅಂತನಿಸಬಹುದು. ಒಂದು ದಿನಕ್ಕೆ ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯವಾ? ಪಾರ್ಥಸಾರಥಿ ರಾಮಾನುಜ ಅಯ್ಯಂಗಾರ್‍ಗೆ ಅನ್ನಿಯನ್‍ ಆಗುವುದಕ್ಕೆ ಸಾಧ್ಯವಾ? 78ರ ವೃದ್ಧನೊಬ್ಬ ಸೇನಾಪತಿಯಾಗಿ ಹಾಗೆ ಹೊಡೆದಾಡುವುದಕ್ಕೆ ಸಾಧ್ಯವೇ? ಈ ಪ್ರಶ್ನೆಗಳು ಬರಬಹುದು. ತಾರ್ಕಿಕವಾಗಿ ನೋಡಿದರೆ ಇದು ಕಷ್ಟ. ಆದರೆ, ಶಂಕರ್ ಲಾಜಿಕ್‍ಗಿಂತ ಮ್ಯಾಜಿಕ್‍ನಲ್ಲಿ ನಂಬಿಕೆ ಇಟ್ಟವರು. ಏನೇನೋ ಮ್ಯಾಜಿಕ್‍ ಮಾಡಿ ಪ್ರೇಕ್ಷಕರನ್ನು ನಂಬಿಸುತ್ತಾರೆ. ತಮ್ಮ ಪ್ರಪಂಚದಲ್ಲಿ ಎಳೆದುಕೊಳ್ಳುತ್ತಾರೆ.

ಈಗೆಲ್ಲಾ Cinematic Universeಗಳ ಕಾಲ. ಯಶ್‍ರಾಜ್‍ ಸ್ಪೈ ಯೂನಿವರ್ಸ್‍, ಲೋಕೇಶ್‍ ಕನಕರಾಜ್‍ ಯೂನಿವರ್ಸ್, ರೋಹಿತ್‍ ಶೆಟ್ಟಿ ಪೊಲೀಸ್‍ ಯೂನಿವರ್ಸ್‍ಗಳು ಹೆಚ್ಚು ಸದ್ದು ಮಾಡುತ್ತಿವೆ. ಆದರೆ, ಕೆಲವು ವರ್ಷಗಳ ಹಿಂದೆಯೇ ‘ಇಂಡಿಯನ್‍’ನ ಸೇತುಪತಿ, ‘ಶಿವಾಜಿ: ದಿ ಬಾಸ್‍’ನ ಶಿವಾಜಿ ಮತ್ತು ‘ಮುದಲ್ವನ್‍’ನ ಪುಗಳೇಂದಿಯನ್ನಿಟ್ಟುಕೊಂಡು ಏಕೆ ಒಂದು ಚಿತ್ರ ಮಾಡಬಾರದು ಎಂದು ಅವರು ಕೆಲವು ವರ್ಷಗಳ ಹಿಂದೆಯೇ ಯೋಚಿಸಿದ್ದರಂತೆ. ಆದರೆ, ಸೂಕ್ತ ಪ್ರೋತ್ಸಾಹ ಸಿಗದ ಕಾರಣ ಸುಮ್ಮನಾದರಂತೆ.

ಈ ಕುರಿತು ಮಾತನಾಡಿರುವ ಅವರು, ‘2008ರಲ್ಲಿ ‘ಎಂದಿರನ್‍’ ಚಿತ್ರ ಮಾಡುವಾಗ, ಯಾಕೆ ನಾನೇ ಸೃಷ್ಟಿಸಿದ ಮೂರು ಪಾತ್ರಗಳನ್ನು ಒಂದೇ ಚಿತ್ರದಲ್ಲಿ ಯಾಕೆ ತರಬಾರದು ಎಂದನಿಸಿತು. ಒಂದು ಕ್ಷಣ ರೋಮಾಂಚನವಾಯ್ತು. ಖುಷಿಯಿಂದ ನನ್ನ ಸಹಾಯಕ ನಿರ್ದೇಕರನ್ನು ಕರೆದು ಐಡಿಯಾ ಹೇಳಿದೆ. ಅವರೆಲ್ಲರೂ ಇದು ಸಾಧ್ಯವಾ? ಎಂದು ಅನುಮಾನದಿಂದ ನೋಡಿದರು. ನಂತರ ಕೆಲವು ಹಿರಿಯ ತಂತ್ರಜ್ಞರಿಗೆ ಮತ್ತು ನನ್ನ ಸ್ನೇಹಿತರಿಗೆ ಹೇಳಿದೆ. ನನ್ನ ಮನಸ್ಸಿಗೆ ನೋವಾಗಬಹುದು ಎಂದು ಚೆನ್ನಾಗಿದೆ ಎಂದಷ್ಟೇ ಹೇಳಿ ಹೊರಟು ಹೋದರು. ಬಹುಶಃ ನನಗೆ ಆಗ ಪ್ರೋತ್ಸಾಹ ಸಿಕ್ಕಿದ್ದರೆ ಚಿತ್ರ ಮಾಡಿಬಿಟ್ಟಿರುತ್ತಿದ್ದೆನೇನೋ? ಕೆಲವು ವರ್ಷಗಳ ನಂತರ ‘ಅವೆಂಜರ್ಸ್’ ಚಿತ್ರ ನೋಡಿದಾಗ, ಅದು ಸಹ Marvel Cinematic Universeನ ಒಂದು ಭಾಗ ಆಗಿತ್ತು. ಒಂದು ಒಳ್ಳೆಯ ಐಡಿಯಾ ಇದ್ದರೆ, ತಕ್ಷಣವೇ ಅದನ್ನು ಕಾರ್ಯರೂಪಕ್ಕೆ ಇಳಿಸಬೇಕು ಎಂದು ನನಗೆ ಆಗ ಅರ್ಥವಾಯ್ತು. ಏಕೆಂದರೆ, ನಮ್ಮ ತರಹವೇ ಜಗತ್ತಿನಾದ್ಯಂತ ಹಲವರು ಹೊಸ ವಿಷಯಗಳ ಬಗ್ಗೆ ಯೋಚಿಸುತ್ತಿರುತ್ತಾರೆ. ಅವರು ಅದನ್ನು ಕಾರ್ಯರೂಪಕ್ಕೆ ತರುವ ಮುನ್ನ, ಮೊದಲು ನಾವು ಆ ಕೆಲಸ ಮಾಡಬೇಕು’ ಎಂದು ಹೇಳಿಕೊಂಡಿದ್ದಾರೆ ಶಂಕರ್‍.

Shankar Cinematic Universe ಯಾವತ್ತು ಕಾರ್ಯರೂಪಕ್ಕೆ ಬರುತ್ತದೋ ಗೊತ್ತಿಲ್ಲ. ಸೇತುಪತಿ, ಶಿವಾಜಿ ಮತ್ತು ಪುಗಳೇಂದಿಯನ್ನು ಒಟ್ಟಿಗೆ ಮುಂದಿಟ್ಟುಕೊಂಡು ಯಾವಾಗ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾರೋ ಗೊತ್ತಿಲ್ಲ. ಆದರೆ, ಸದ್ಯಕ್ಕಂತೂ ಭ್ರಷ್ಟಾಚಾರದ ವಿರುದ್ಧ ಶಂಕರ್ ತಮ್ಮ ಹೋರಾಟ ಮುಂದುವರೆಸಿದ್ದಾರೆ. ‘ಇಂಡಿಯನ್‍ 2’ ಬಿಡುಗಡೆಯಾಗಿ ಆರು ತಿಂಗಳಲ್ಲೇ ಅದೇ ಸೇತುಪತಿ, ‘ಇಂಡಿಯನ್‍ 3’ ಆಗಿ ಮತ್ತೆ ಬರಲಿದ್ದಾರೆ. ಅದಾಗಿ ಸ್ವಲ್ಪ ದಿನಗಳಿಗೆ ‘ಗೇಮ್‍ ಚೇಂಜರ್‍’ ಎಂಬ ರಾಮ್‍ಚರಣ್‍ ತೇಜ ಅಭಿನಯದ ಇನ್ನೊಂದು ಚಿತ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರೆಸಲಿದ್ದಾರೆ. ಪಾತ್ರಗಳು ಬದಲಾಗಬಹುದು, ಶಂಕರ್‍ ಹೋರಾಟ ಮಾತ್ರ ನಿರಂತರವಾಗಿ ಮುಂದುವರೆಯುತ್ತಿರುವುದು ವಿಶೇಷ. (ಬರಹ : ಚೇತನ್ ನಾಡಿಗೇರ್, ಫೇಸ್‌ಬುಕ್‌ ಬರಹ)ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending