ದಿನದ ಸುದ್ದಿ
ಇವಳು ತಿಪ್ಪೇಲಕ್ಷ್ಮೀ..!
- ಡಾ.ವಡ್ಡಗೆರೆ ನಾಗರಾಜಯ್ಯ
ಈ ತಿಪ್ಪೆಲಕ್ಷ್ಮಿಯು ರೈತಾಪಿಗಳ ಮತ್ತು ದುಡಿಯುವ ರೈತಕೂಲಿಗಳ ಲಕುಮಿ; ಲಕ್ಷಮಿ. ಲಕ್ಷಮಿ- ಲಚ್ಚಮಿ- ಲಚ್ಮಿಯಾದ ಈ ಲಕ್ಷ್ಮಿಯನ್ನು ತಿಪ್ಪೇಲಕ್ಷ್ಮಮ್ಮ, ತಿಪ್ಪೇಲಕ್ಕವ್ವ, ತಿಪ್ಪಮ್ಮ, ತಿಪ್ಪೇರಂಗಪ್ಪ, ತಿಪ್ಪೇಸ್ವಾಮಿ, ತಿಪ್ಪೇಶ, ತಿಪ್ಪೇನಾಗ, ತಿಪ್ಪಯ್ಯ ಮುಂತಾದ ಹೆಸರುಗಳಿಂದ ಪುರುಷ-ಸ್ತ್ರೀ ಎಂಬ ಭೇದಗಳಿಲ್ಲದೆ ಕರೆಯಲಾಗುತ್ತದೆ.
ಬುಡಕಟ್ಟು ಕಾಡುಗೊಲ್ಲರ ಜಾನಪದ ಕಥೆಯೊಂದರ ಪ್ರಕಾರ ಗೊಲ್ಲರಿಗೆ ಲಕ್ಷ್ಮಿ ಮತ್ತು ರುದ್ರ ಇಬ್ಬರೂ ಕುರಿಪಿಚ್ಚಿಗೆಯ ರೂಪದಲ್ಲಿ ಸಿಕ್ಕಿದರು. ಅವರೇ ತಿಪ್ಪೇಲಕ್ಷ್ಮಿ ಮತ್ತು ತಿಪ್ಪೇರುದ್ರ!
ಕಾಪಾಲಿಕ ನಾಥಪಂಥದ ನಾಥಸಿದ್ಧರು ನಂಬುವಂತೆ ಗೋರಖನಾಥ ತಿಪ್ಪೆಯಲ್ಲಿ ಹುಟ್ಟಿದವನು. ದಕ್ಕಲ ಜನಾಂಗದ ಆದಿಪುರುಷನಾದ ದಕ್ಕದ ಮಹಾಮುನಿಯು ತಿಪ್ಪೆಯಲ್ಲಿ ಹುಟ್ಟಿದನೆಂದು ಆದಿಜಾಂಬವ ಪುರಾಣ ಹೇಳುತ್ತದೆ.
ಚಮ್ಮಾರ ಸಂತ ರವಿದಾಸ ಹೇಳುವಂತೆ ಲಕ್ಷ್ಮೀ ಮತ್ತು ಗಂಗಮ್ಮ ಇದೇ ಚಮ್ಮಾರನ ಮಕ್ಕಳು. ಸಿಂದೋಳ್ಳು-ಗೋಸಂಗಿ-ದಕ್ಕಲರು- ಮಾಷ್ಟೀಕರು ಮುಂತಾದ ಅಲೆಮಾರಿಗಳು ಹೇಳುವಂತೆ ಮೊದಲಿಗೆ ಲಕ್ಷ್ಮಿಯು ಮಾದಿಗರ ಮನೆಮಗಳಾಗಿ ಗಲ್ಲೆಬಾನಿಯ ಕರಿಜಲದಲ್ಲಿ ಹುಟ್ಟಿದವಳು. ಆ ನಂತರದಲ್ಲಿ ಕೋಮಟಿಶೆಟ್ಟರ ಮನೆಯಲ್ಲಿ ವಸ್ತಿ ಮಾಡಿದಳು.
ಮಲೆಮಹದೇಶ್ವರನ ಕಾವ್ಯದಲ್ಲಿರುವಂತೆ ಮಲೆಯ ಮಹದೇವ ಹುಟ್ಟಿಬರುವುದೇ ತಿಪ್ಪೆಯಿಂದ. ತಿಪ್ಪೆಗುಂಡಿಯಿಂದ ಎದ್ದುಬಂದ ಮಹದೇವ ತನ್ನ ಮೈತುಂಬಾ ಕೀವು-ರಕ್ತ-ರಸಕು ತುಂಬಿಕೊಂಡು, ಮೈಮೇಲೆ ಸತ್ತೆಮ್ಮೆ ಕರುವಿನ ಚರ್ಮ ಹೊದ್ದುಕೊಂಡು, ಕೊರಳಿಗೆ ಸೇಂದಿ ಗಡಿಗೆ ಕಟ್ಟಿಕೊಂಡು ಕಲ್ಯಾಣಪಟ್ಟಣ ಪ್ರವೇಶಿಸುತ್ತಾನೆ.
ಮಂಟೇಸ್ವಾಮಿ ಕಾವ್ಯದಲ್ಲಿ ವ್ಯಕ್ತವಾಗಿರುವಂತೆ ಕಲ್ಯಾಣದಲ್ಲಿ ತನಗೆ ಶರಣರು ಪ್ರವೇಶ ನಿರಾಕರಿಸಿದ ಬಳಿಕ, ಮಂಟೇಸ್ವಾಮಿಯು ತನ್ನ ಮೈಮೇಲೆ ಸತ್ತೆಮ್ಮೆ ಕರುವಿನ ಚರ್ಮ ಹೊದ್ದುಕೊಂಡು ಮಾದಿಗರ ಘನಶರಣನಾದ ಹರಳಯ್ಯನ ತಿಪ್ಪೇಗುಂಡಿ ಸೇರಿಕೊಳ್ಳುತ್ತಾನೆ. ಹರಳಯ್ಯನ ತಿಪ್ಪೇಗುಂಡಿಯಲ್ಲಿದ್ದ ಮಂಟೇಸ್ವಾಮಿಯನ್ನು ಬಸವಣ್ಣ ಮತ್ತು ನೀಲಮ್ಮನವರು ಪ್ರಾರ್ಥಿಸಿ ಮರಳಿ ಕಲ್ಯಾಣ ಪಟ್ಟಣಕ್ಕೆ ಕರೆದುಕೊಂಡು ಹೋಗುತ್ತಾರೆ.
ದೇಶಿ ಯೋಗಿ ನಾಯಕನಹಟ್ಟಿ ತಿಪ್ಪೇಸ್ವಾಮಿಯು ಸತ್ತೆಮ್ಮೆಯನ್ನು ಬದುಕಿಸುವ ಪವಾಡ ಮಾಡಿ, ತಿಪ್ಪೆಗೆ ಸೆಗಣಿ ಮತ್ತು ಮನೆಮಕ್ಕಳಿಗೆ ಹಾಲುಕೊಡುವ ಎಮ್ಮೆಗಳನ್ನು ಬದುಕಿಸಿ ಅನ್ನ ಬೆಳೆಯುವ ರೈತರಿಗೆ ನೆರವಾಗುತ್ತಾನೆ. ಈ ದಿನ ಪುರೋಹಿತಶಾಹಿ ವ್ಯವಸ್ಥೆಯು ಸೃಷ್ಟಿಸಿರುವ “ವರಮಹಾಲಕ್ಷ್ಮಿ”ಗಿಂತಲೂ ನಮ್ಮ ದುಡಿಯುವ ಜನರ ತಿಪ್ಪೇಲಕ್ಷ್ಮಿ ದೊಡ್ಡವಳು!
ಇಂತಹ ತಿಪ್ಪೇಲಕ್ಷ್ಮಿಯನ್ನು ಮರೆಯಬೇಡಿರಿ- ಮರೆತರೆ ನಿಮಗೆ ಅನ್ನ ಸಿಕ್ಕುವುದಿಲ್ಲ.
(ಡಾ.ವಡ್ಡಗೆರೆ ನಾಗರಾಜಯ್ಯ
8722724174)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಹೆಚ್. ಕೇಶವ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಶಿವಮೊಗ್ಗ:ಎಸ್.ಜೆ.ಎಂ ವಿದ್ಯಾಪೀಠ (ರಿ), ಚಿತ್ರದುರ್ಗ ಇಲ್ಲಿ ಬ್ಯಾಕ್‌ಲಾಗ್ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾದ ಹುದ್ದೆಗಳನ್ನು ಇಲಾಖಾ ತನಿಖೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿ 2 ತಿಂಗಳು ಕಳೆದರೂ ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ನಿರ್ಲಕ್ಷ್ಯ ತೋರಿದ ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇಲ್ಲಿಯ ಜಂಟಿ ನಿರ್ದೇಶಕರಾದ ಶ್ರೀ ಕೇಶವ ಹೆಚ್. ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಎಸ್.ಜೆ.ಎಂ ವಿದ್ಯಾಪೀಠ (ರಿ), ಚಿತ್ರದುರ್ಗ ಇಲ್ಲಿ 2022ನೇ ಸಾಲಿನಲ್ಲಿ ಬ್ಯಾಕ್‌ಲಾಗ್ ಅಡಿಯಲ್ಲಿ ಅರ್ಥಶಾಸ್ತç (ಎಸ್.ಟಿ), ರಾಜ್ಯಶಾಸ್ತç (ಎಸ್.ಸಿ), ಗ್ರಂಥಪಾಲಕರು (ಎಸ್.ಟಿ) ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇಲ್ಲಿ ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾದ ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರಿಗೆ ದಿನಾಂಕ: 24-11-2025 ರಂದು ಅರ್ಜಿ ಸಲ್ಲಿಸಿ, ಬ್ಯಾಕ್ ಲಾಗ್ ನೇಮಕಾತಿಯ ಬಗ್ಗೆ ತನಿಖೆ ನಡೆಸಿ, ತನಿಖಾ ವರದಿಯನ್ನು ನೀಡುವಂತೆ ಕೋರಲಾಗಿತ್ತು.
ಅರ್ಜಿ ಸಲ್ಲಿಸಿ ಒಂದು ತಿಂಗಳಾದರೂ ಯಾವುದೇ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ಜ್ಞಾಪನ ನೀಡಿ 7 ದಿನಗಳ ಒಳಗಾಗಿ ತನಿಖಾ ವರದಿಯನ್ನು ನೀಡುವಂತೆ ವಿನಂತಿಸಲಾಗಿತ್ತು. ಆದರೆ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರು ಅರ್ಜಿ ಸಲ್ಲಿಸಿ 2 ತಿಂಗಳಾದರೂ ಕನಿಷ್ಠ ಹಿಂಬರಹವನ್ನಾದರೂ ನೀಡದೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಕರ್ತವ್ಯ ಲೋಪ ಎಸಗಿದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವದಾಸಿ ಪುನರ್‍ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್‍ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್‍ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್‍ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್‍ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ
ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.


