ದಿನದ ಸುದ್ದಿ
ದಾವಣಗೆರೆ | ಟೊಮೆಟೊ ಬೆಳೆಗೆ ಬೆಂಕಿರೋಗ : ಕೈಗೆ ಬಂದ ಬೆಳೆ, ಮಾರ್ಕೇಟ್ ಗೆ ಬರಲಿಲ್ಲ…!? ಯುವ ರೈತನ ಅಳಲು
- ವಿಶೇಷ ವರದಿ: ಪ್ರೀತಿ. ಟಿ.ಎಸ್
ಸುದ್ದಿದಿನ,ದಾವಣಗೆರೆ : ಸ್ನಾತಕೋತ್ತರ ಪದವಿ ಮುಗಿಯಿತು. ಕೆಲಸ ಅರಸಿ ಅಲೆದಾಡಿ ಸೋತು ಟೊಮೋಟೊ ಬೆಳೆಯಲು ಮುಂದಾದ ಯುವಕನಿಗೆ ಇನ್ನೇನೂ ಫಸಲು ಕೈಗೆ ಬರುವ ವೇಳೆಗೆ ಬೆಂಕಿ ರೋಗ ಅಂಟಿಕೊಂಡು ನಷ್ಟವಾಗಿರುವ ಘಟನೆ ಸೀಗೆಹಳ್ಳಿ ಗ್ರಾಮದ ಪ್ರದೀಪ್ ಎಂಬುವವರ ಜಮೀನಿನಲ್ಲಿ ನಡೆದಿದೆ.
ವಿದ್ಯಾಭ್ಯಾಸ ಮುಗಿಸಿ ಮುಂದೇನು ಎಂದು ಯೋಚಿಸುವಾಗ, ತನಗಿದ್ದ ಒಂದು ಎಕರೆ ಭೂಮಿಯಲ್ಲಿ ಟಮೋಟೊ ಬೆಳೆಯೋಣ ಎಂಬ ಆಲೋಚನೆ ಮಾಡಿದ ಪ್ರದೀಪನಿಗೆ, ಪರಿಚಿತರೆಲ್ಲಾ ಸೇರಿ ಒಂದು ಎಕರೆ ಜಮೀನಿನಲ್ಲಿ ಟಮೋಟೊ ಬೆಳೆ ಬೆಳೆಯಲು 70 ರಿಂದ 80 ಸಾವಿರ ರೂ. ವೆಚ್ಚ ತಗುಲುತ್ತದೆ. ಭೂಮಿ ಉಳುಮೆ, ಕೊಟ್ಟಿಗೆ, ರಸಗೊಬ್ಬರ, ಹಸಿ ನಾಟಿ ಸೇರಿದಂತೆ ಔಷಧ ಸಿಂಪಡಣೆಯೊಂದಿಗೆ ಫಸಲು ಪ್ರಾರಂಭದವರೆಗೆ ಹಣ ಖರ್ಚು ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಮಾಡಲು ಬೇರೆ ಕೆಲಸ ಇಲ್ಲ. ಕೈಯಲ್ಲಿ ದುಡ್ಡಿಲ್ಲ. ಸುಮ್ಮನೆ ಕೂತ್ತರೆ ಜೀವನ ಸಾಗುವುದಿಲ್ಲ. ಅಲ್ಲಿ ಇಲ್ಲಿ ಪೇಚಾಡಿ ಸಾಲ ಸೂಲ ಮಾಡಿ ಒಂದು ಎಕರೆ ಜಮೀನಿನಲ್ಲಿ ಟಮೋಟೊ ಬೆಳೆ ಬೆಳೆಯಲು ಮುಂದಾದ ಪ್ರದೀಪ್ ಗೆ ಮೊದಮೊದಲು ಕಷ್ಟವಾದರೂ ತುಂಬಾ ಇಷ್ಟ ಪಟ್ಟು ಬೆಳೆಯಲಾರಂಭಿಸಿದರು. ಇನ್ನೆನ್ನು ಫಸಲು ಕೈಗೆ ಬರುವುದರೊಳಗೆ ಟಮೋಟೊಗೆ ಬೆಂಕಿ ರೋಗ ಅಂಟಿಕೊಂಡು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿರುವ ಸ್ಥಿತಿ ಬಂದೆರಗಿದೆ.
ಈ ಕುರಿತು ತಮ್ಮ ಬೇಸರವನ್ನು ಹಂಚಿಕೊಂಡ ಪ್ರದೀಪ್, ಕಳೆದ ವರ್ಷ ಮಳೆ ಚೆನ್ನಾಗಿಯಾದ್ದರಿಂದ ನೀರಿನ ಸಮಸ್ಯೆ ಇಲ್ಲ. ಫಸಲು ಬಂದಾಗ ಮಾರುಕಟ್ಟೆಯಲ್ಲಿ ನಿಗದಿತ ಬೆಲೆ ಸಿಗುವುದಿಲ್ಲ. ಹಲವು ಬಾರಿ ಮಾರುಕಟ್ಟೆಯಲ್ಲಿ ಬೆಲೆ ಇದ್ದರೆ ಫಸಲು ಇರುವುದಿಲ್ಲ. ಇದೀಗ ಮಾರುಕಟ್ಟೆಯಲ್ಲಿ ಉತ್ತಮ ತಳಿಯ ಒಂದು ಬಾಕ್ಸ್ ಟಮೋಟೊ ಗೆ 150 ರಿಂದ 200 ರೂಪಾಯಿಯಿದೆ. ಇದರ ಮಧ್ಯೆ ಪರಿಸರ ವೈಪರಿತ್ಯ ಹಾಗೂ ಬೆಂಕಿ ರೋಗದಿಂದ ಬೆಳೆ ನಾಶವಾಗುತ್ತಿದೆ.
ಕಾಯಿ ಕಚ್ಚಿ ಹಣ್ಣಾಗುವ ಸಮಯ ತಲುಪಿರುವ ವೇಳೆ ಗಿಡಗಳಿಗೆ ರೋಗ ಬಂದಿದ್ದು ಸಾಕಷ್ಟು ಸಸಿಗಳು ಸತ್ತು ಹೋಗಿವೆ. ಈ ವರೆಗೂ ಹಾಕಿರುವ ಬಂಡವಾಳದೊಂದಿಗೆ ಅಂಟಿಕೊಂಡಿರುವ ರೋಗ ನಾಶ ಪಡಿಸಲು ಸುಮಾರು 10 ರಿಂದ 15 ಸಾವಿರದಷ್ಟು ಔಷಧಿ ಸಿಂಪಡಿಸಿದ್ದೇನೆ. ಸಸ್ಯ ವೈದ್ಯರ ಸಲಹೆಗಳನ್ನು ತೆಗೆದುಕೊಂಡು, ಸಸಿ ಪೋಷಣೆ ಮಾಡುತ್ತಿದ್ದೇನೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಹತೋಟಿಗೆ ಬರುತ್ತಿಲ್ಲ
ಟೊಮೋಟೊ ಬೆಳೆಗೆ ವಿವಿಧ ಕೀಟನಾಶಕ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಕೀಟನಾಶಕ ಸಿಂಪಡಿಸಿ ಮುರ್ನಾಲ್ಕು ದಿನ ಕಳೆಯುವಷ್ಟರಲ್ಲಿ ಬೆಳೆಯಲ್ಲಿ ಪುನಃ ರೋಗ ಕಾಣಿಸಿಕೊಳ್ಳುತ್ತದೆ. ಅಕ್ಕಪಕ್ಕದ ಜಮೀನುಗಳ ಟೊಮೋಟೊ ಬೆಳೆಗೂ ರೋಗ ಹಬ್ಬುತ್ತದೆ. ಇದರೊಂದಿಗೆ ಮೋಡ ಮುಸುಕಿದ ವಾತಾವರಣ ಹಾಗೂ ಬೀಳುವ ಇಬ್ಬನಿಯಿಂದ ಈ ಅಂಗಮಾರಿ ರೋಗ ಮತ್ತಷ್ಟು ಉಲ್ಭಣಗೊಳ್ಳುತ್ತಿದೆ.
ಹಾಗಾದರೆ ಪರಿಹಾರ ಏನು?
ಇದು ಒಬ್ಬ ರೈತನ ಸಮಸ್ಯೆಯಲ್ಲ. ನೂರಾರು ರೈತರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಫಸಲು ಬರುವ ವೇಳೆ ಯಾವುದೇ ರೀತಿಯ ರೋಗಗಳು ಬೆಳೆಗೆ ಬಾರದಂತಹ ಔಷಧಗಳನ್ನು ರೈತರಿಗೆ ತಲುಪಿಸಲು, ವಾಣಿಜ್ಯ ಬೆಳೆಗಳ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳು ಪ್ರತಿ ಗ್ರಾಮಗಳಲ್ಲೂ ಹೆಚ್ಚಾಗಿ ನಡೆಯಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಆಯುರ್ವೇದ ಆರೋಗ್ಯಕರ ಜೀವನ ಶೈಲಿ
ಸುದ್ದಿದಿನ,ದಾವಣಗೆರೆ:ಭಾರತದ ವೈದ್ಯಕೀಯ ಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಸಮೃದ್ಧವಾದುದಾಗಿದೆ. ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ವಿಜ್ಞಾನವಲ್ಲ, ಅದೊಂದು ಆರೋಗ್ಯಕರ ಜೀವನ ಶೈಲಿಯಾಗಿದೆ ಎಂದು ಘನವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
ಅವರು ಶನಿವಾರ ತಪೋವನ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಸಂಸ್ಥೆಯು ಏರ್ಪಡಿಸಿದ್ದ ದ್ವಿತೀಯ ಘಟಿಕೋತ್ಸವ ಸಮಾರಂಭವನ್ನು ಉದ್ಪಾಟಿಸಿ ಮಾತನಾಡಿದರು.
ಈಗಿನ ದಿನಮಾನಗಳಲ್ಲಿ ಇಡೀ ಜಗತ್ತು ಮಾನಸಿಕ ಒತ್ತಡ ಹಾಗೂ ಪರಿಸರ ಸವಾಲುಗಳನ್ನು ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಗಳ ಪ್ರಸ್ತುತತೆ ಹಾಗೂ ಮಹತ್ವ ಮತ್ತಷ್ಟು ಹೆಚ್ಚಾಗಿದೆ, ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.
ಭಾರತದ ವೈದ್ಯಕೀಯ ಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಸಮೃದ್ಧವಾದುದಾಗಿದೆ. ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ವಿಜ್ಞಾನವಲ್ಲ, ಅದೊಂದು ಆರೋಗ್ಯಕರ ಜೀವನ ಶೈಲಿಯಾಗಿದೆ. ಜಗತ್ತು ಮಾನಸಿಕ ಒತ್ತಡ ಹಾಗೂ ಪರಿಸರ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಗಳ ಪ್ರಸ್ತುತತೆ ಹಾಗೂ ಮಹತ್ವ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ಆರೋಗ್ಯ ಸೇವೆಗಳು ಇಂದಿನ ವೈದ್ಯಕೀಯ ಕ್ಷೇತ್ರದ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸುತ್ತಿವೆ. ಇಂತಹ ತಾಂತ್ರಿಕ ಕ್ರಾಂತಿಯ ಯುಗದಲ್ಲಿ ಪದವಿ ಪಡೆದು ಹೊರಬರುತ್ತಿರುವ ನೂತನ ವೈದ್ಯರು ಕೇವಲ ಸಾಂಪ್ರದಾಯಿಕ ವೈದ್ಯಕೀಯ ಜ್ಞಾನಕ್ಕೆ ಸೀಮಿತವಾಗದೆ, ಆಧುನಿಕ ವಿಜ್ಞಾನದ ನೂತನ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಉಭಯ ಕ್ಷೇತ್ರಗಳ ನಡುವೆ ಬಲವಾದ ಸೇತುವೆಯಾಗಿ ಕೆಲಸ ಮಾಡಬೇಕಾದ ತುರ್ತು ಅಗತ್ಯವಿದೆ ಎಂದರು.
ಕೃತಕ ಬುದ್ಧಿಮತ್ತೆಯು ರೋಗನಿರ್ಣಯವನ್ನು ಹೆಚ್ಚು ನಿಖರ ಹಾಗೂ ವೇಗವಾಗಿಸಲು ನೆರವಾದರೆ, ಡಿಜಿಟಲ್ ಆರೋಗ್ಯ ಸೇವೆಗಳು ದೂರದ ಊರುಗಳಿಗೂ ಚಿಕಿತ್ಸೆಯನ್ನು ತಲುಪಿಸಲು ಸಹಕಾರಿಯಾಗಿವೆ. ಆದ್ದರಿಂದ, ಹೊಸ ತಲೆಮಾರಿನ ವೈದ್ಯರು ಕೇವಲ ದಿನನಿತ್ಯದ ಕ್ಲಿನಿಕ್ ಅಥವಾ ಆಸ್ಪತ್ರೆಯ ಚಿಕಿತ್ಸೆಗೆ ಸೀಮಿತವಾಗದೆ, ತಂತ್ರಜ್ಞಾನದ ದತ್ತಾಂಶಗಳನ್ನು ಬಳಸಿಕೊಂಡು ಹೊಸ ರೋಗಗಳಿಗೆ ಪರಿಹಾರ ಕಂಡುಕೊಳ್ಳುವ ಉತ್ತಮ ಸಂಶೋಧಕರಾಗಬೇಕು. ಇದರೊಂದಿಗೆ, ಸಮಾಜದಲ್ಲಿ ತಂತ್ರಜ್ಞಾನ ಮತ್ತು ಆರೋಗ್ಯದ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರಾಗಿಸಿ, ಮಾನವೀಯ ಕಾಳಜಿಯೊಂದಿಗೆ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ನೈಜ ಮಾರ್ಗದರ್ಶಕರಾಗಿ ಹೊರಹೊಮ್ಮಬೇಕಿದೆ ಎಂದು ತಿಳಿಸಿದರು.
ವೈದ್ಯಕೀಯ ಸೇವೆಯು ಅತ್ಯಂತ ಪವಿತ್ರವಾದ ಮಾನವೀಯ ಸೇವೆಯಾಗಿದೆ. ರೋಗಿಗಳಿಗೆ ಔಷಧಿಗಿಂತ ಮುಂಚಿತವಾಗಿ ವೈದ್ಯರ ಪ್ರೀತಿಯ ನುಡಿಗಳು ಹಾಗೂ ಸಕಾರಾತ್ಮಕ ನಡವಳಿಕೆಯ ಅಗತ್ಯವಿರುತ್ತದೆ. ಆದ್ದರಿಂದ ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕು. ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯವು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಗುಜರಾತ್‌ನ ಜಾಮ್‌ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಗ್ಲೋಬಲ್ ಟ್ರೆಡಿಷನಲ್ ಮೆಡಿಸಿನ್ ಸೆಂಟರ್’ ಸ್ಥಾಪಿಸುತ್ತಿದೆ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯರಾದ ಶ್ರೀ ನಾರಾಯಣಸಾ ಭಾಂಡಗೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಡೀನ್ ಡಾ: ಶ್ರೀನಿವಾಸ್ ಬನ್ನಿಗೊಳ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಎಸ್.ವಿ.ಹಲಸೆ, ತಪೋವನ ಸಂಸ್ಥೆಯ ಅಧ್ಯಕ್ಷ ಡಾ. ಶಶಿಕುಮಾರ್ ವಿ.ಎಂ, ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಅಶ್ವಿನಿ ಕೆ.ಆರ್., ಡಾ.ಸುಮನ ಭಟ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಸತಿ ಯೋಜನೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ.
ಈ ಯೋಜನೆಯಡಿ ಸೌಲಭ್ಯ ಒದಗಿಸಲು ನಿಗಧಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಗ್ರೇಡ್-1ರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಚನ್ನಗಿರಿ ಕಚೇರಿಯನ್ನು ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243



