ದಿನದ ಸುದ್ದಿ
ನಿರ್ಲಜ್ಜ ದೇಶ ಮತ್ತು ಲಜ್ಜೆಗೆಟ್ಟ ರಾಜಕಾರಣ
- ನಾ ದಿವಾಕರ
ಉತ್ತರಪ್ರದೇಶದ ಹಥ್ರಾಸ್ ಎಂಬ ಕುಗ್ರಾಮ ದೇಶದ ರಾಜಧಾನಿಯಿಂದ 200 ಕಿಲೋಮೀಟರ್ ದೂರದಲ್ಲಿದೆ. ಅಲ್ಲಿ 19 ವರ್ಷದ ಯುವತಿ ಮನೀಷಾ ವಾಲ್ಮೀಕಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗುತ್ತಾಳೆ. ಪೊಲೀಸರ ಅಸಡ್ಡೆ ಮತ್ತು ವೈದ್ಯಲೋಕದ ನಿರ್ಲಕ್ಷ್ಯ ಆಕೆಯನ್ನು ಸಾವಿನಂಚಿಗೆ ತಂದು ನಿಲ್ಲಿಸುತ್ತದೆ.
ಮುರಿದ ಕಾಲು, ಗಾಯಗೊಂಡ ನಾಲಿಗೆ ಮತ್ತು ಭಗ್ನವಾದ ಕನಸುಗಳ ನಡುವೆಯೇ ಬದುಕಲು ತವಕಿಸುವ ಯುವತಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿ ಸಾಯುತ್ತಾಳೆ. ಅವಳ ಸಾವಿಗೆ ನಾಲ್ವರು ಕಾರಣರಾಗಿರುತ್ತಾರೆ. ಈ ಘಟನೆಯ ನಂತರ ಒಂದೆರಡು ದಿನಗಳಲ್ಲಿ ಇದೇ ರಾಜ್ಯದಲ್ಲಿ, ಮಧ್ಯಪ್ರದೇಶದಲ್ಲಿ, ರಾಜಸ್ಥಾನದಲ್ಲಿ ಅತ್ಯಾಚಾರ ಮತ್ತು ಕೊಲೆ ನಡೆಯುತ್ತದೆ. ಇದು ಸಾರ್ವಜನಿಕ ಚರ್ಚೆಗೊಳಪಟ್ಟಿರುವ ವಿಚಾರ.
ನಾವು, ಅಂದರೆ ಭವ್ಯ ಪರಂಪರೆಯನ್ನು ತಲೆಯ ಮೇಲೆ ಹೊತ್ತುಕೊಂಡು, ಚಾರಿತ್ರಿಕ ಶ್ರೇಷ್ಠತೆಯನ್ನು ಹೃದಯದಲ್ಲಿ ಹುದುಗಿಸಿಕೊಂಡು, ಪಾವಿತ್ರ್ಯತೆಯ ಕಣಜವನ್ನು ಮನದಾಳದಲ್ಲಿ ಅವಿಸಿಟ್ಟುಕೊಂಡು ವಿಶ್ವಗುರುವಾಗುವತ್ತ ದಾಪುಗಾಲು ಹಾಕುತ್ತಿರುವ ಭಾರತ ಎಂಬ ದೇಶದ ಪ್ರಜೆಗಳು ಈ ಘಟನೆಗಳಲ್ಲಿ ಏನೇನು ಕಾಣಬಹುದು.
- ದುರ್ಬಲ-ಶೋಷಿತ ಸಮುದಾಯಕ್ಕೆ ಸೇರಿದ ಯುವತಿಯ ಮೇಲೆ ಮೇಲ್ಜಾತಿಯ ಬಲಾಢ್ಯರಿಂದ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಸಾವು.
- ಜಾತಿ ಸಮೀಕರಣಗಳನ್ನು ಬದಿಗಿಟ್ಟು ನೋಡಲೇಬೇಕೆಂದರೆ ಓರ್ವ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಆಕೆಯ ಸಾವು.
- ಅತ್ಯಾಚಾರ ಮಾಡಿದವರ ಸಾಮಾಜಿಕ-ರಾಜಕೀಯ ಪ್ರಾಬಲ್ಯ ಮತ್ತು ಜಾತಿ ಶ್ರೇಷ್ಠತೆ.
- ಅತ್ಯಾಚಾರಿಗಳನ್ನು ರಕ್ಷಿಸಲು ಪ್ರಭುತ್ವದ ಹರಸಾಹಸ – ಪೊಲೀಸ್, ಆಸ್ಪತ್ರೆ, ತನಿಖಾ ಏಜೆನ್ಸಿ, ಅಧಿಕಾರಶಾಹಿ ಮತ್ತು ರಾಜಕೀಯ ನಾಯಕತ್ವ ಇವಿಷ್ಟೂ ಸೇರಿದರೆ ಪ್ರಭುತ್ವ ಅಲ್ಲವೇ ?
- ಅತ್ಯಾಚಾರಕ್ಕೀಡಾಗಿ ಮೃತಪಟ್ಟ ಮಹಿಳೆಯ ಶವವನ್ನು ಕುಟುಂಬದವರಿಗೂ ನೀಡದೆ ಮಧ್ಯರಾತ್ರಿಯಲ್ಲಿ ಪೊಲೀಸರಿಂದಲೇ ಅಂತ್ಯಸಂಸ್ಕಾರ.
- ಸಂತ್ರಸ್ತೆಯ ಕುಟುಂಬದವರಿಗೆ ಸಾಂತ್ವನ ಹೇಳಲು ಹೊರಟವರ ಬಂಧನ ಮತ್ತು ಅವರ ಮೇಲೆ ಪೊಲೀಸರ ಲಾಠಿ ಪ್ರಹಾರ. ಎಫ್ಐಆರ್ ದಾಖಲು.
- ಅತ್ಯಾಚಾರಿಗಳನ್ನು ಖುಲ್ಲಂಖುಲ್ಲಾ ಸಮರ್ಥಿಸುವ ಮೇಲ್ಜಾತಿ ಸಮುದಾಯದ ಸಂಘಟನೆಗಳು.
- ಈಗ ಸಂತ್ರಸ್ತೆಗೆ ಮತ್ತು ಅವರ ಕುಟುಂಬದವರಿಗೆ ನ್ಯಾಯ ದೊರಕಿಸಲು ಹೋರಾಡುತ್ತಿರುವವರ ವಿರುದ್ಧ “ ಅಂತರರಾಷ್ಟ್ರೀಯ ಪಿತೂರಿ”ಯ ಆರೋಪ. (ನಗರ ನಕ್ಸಲರ ಪ್ರವೇಶಕ್ಕೆ ಇನ್ನೂ ಸಮಯ ಇದೆ ಎಂದು ಭಾವಿಸೋಣ).
- ಕೊನೆಯದಾಗಿ ಬಿಸಿರಕ್ತದ ಠಾಕೂರರ ಅಟ್ಟಹಾಸ ಮತ್ತು ಸಂಸ್ಕಾರವಿಲ್ಲದ(?) ಹೆಣ್ಣುಮಕ್ಕಳ ಬವಣೆಯ ಬಗ್ಗೆ ಅಧಿಕಾರಸ್ಥರ ವ್ಯಾಖ್ಯಾನ.
- ಬಹಳ ಮುಖ್ಯ ಅಂಶವೆಂದರೆ ಇಂತಹ ಅಮಾನುಷ ಘಟನೆಗಳನ್ನು ಕುರಿತ ಪ್ರತಿಕ್ರಿಯೆಯಲ್ಲೂ ಕಾಣಬಹುದಾದ ರಾಜಕಾರಣದ ಛಾಯೆ ಮತ್ತು ಪಕ್ಷನಿಷ್ಟೆಗೆ ಬಲಿಯಾದ ಸಂವೇದನೆ.
ಇವಿಷ್ಟನ್ನೂ ಗಮನಿಸಿದಾಗ ನಾವು ಲಜ್ಜೆಗೆಟ್ಟ ರಾಜಕಾರಣದ ನಡುವೆ ಬದುಕುತ್ತಿದ್ದೇವೆ ಎನಿಸುವುದು ಸಹಜವಲ್ಲವೇ ? ಓರ್ವ ಸಾಧಾರಣ ಸಿನಿಮಾ ನಟನ ಆತ್ಮಹತ್ಯೆ ನಮ್ಮ ದೇಶದ ಬೌದ್ಧಿಕ ವಲಯದಲ್ಲಿ, ಮಾಧ್ಯಮ ಲೋಕದಲ್ಲಿ, ರಾಜಕೀಯ ಅಂಗಳದಲ್ಲಿ ಸಂಚಲನ ಮೂಡಿಸುತ್ತದೆ. ಓರ್ವ ಮಹಿಳೆಯ ಕಗ್ಗೊಲೆ ಮತ್ತು ಆಕೆಯ ಮೇಲಿನ ಅತ್ಯಾಚಾರ ಅಸ್ಮಿತೆಗಳ ಅಂಗಳದಲ್ಲಿ ಕಳೆದುಹೋಗುತ್ತದೆ.
ಅತ್ಯಾಚಾರಿಗಳು ಕೊಲೆಗಾರರು ರಾಜಕೀಯ ಪ್ರಾಬಲ್ಯ ಹೊಂದಿದ್ದರೆ ಸಂತ್ರಸ್ತೆಯನ್ನೇ ಸುಟ್ಟುಹಾಕಲಾಗುತ್ತದೆ, ಮನೀಷಾ ಘಟನೆಯಲ್ಲಾದಂತೆ. ಒಂದು ವೇಳೆ ಅತ್ಯಾಚಾರಿಗಳು ರಾಜಕೀಯ ಪ್ರಭಾವವಿಲ್ಲದೆ ಕೊಟ್ಟ ಕಾಸಿಗೆ ನ್ಯಾಯ ಒದಗಿಸುವವರಾಗಿದ್ದರೆ ಎನ್ಕೌಂಟರ್ ನಲ್ಲಿ ಕೊಲ್ಲಲ್ಪಡುತ್ತಾರೆ, ಪ್ರಿಯಾಂಕ ರೆಡ್ಡಿ ಘಟನೆಯಲ್ಲಾದಂತೆ. ಎರಡೂ ಸಂದರ್ಭಗಳಲ್ಲಿ ಸಾಕ್ಷಿಗಳು ನಾಶವಾಗುತ್ತವೆ.
ಜೀವಕ್ಕೆ ಬೆಲೆಯಿಲ್ಲದ ದೇಶದಲ್ಲಿ ಪ್ರಿಯಾಂಕ, ಮನೀಷಾ, ನಿರ್ಭಯ, ಧಾನಮ್ಮ, ಸೌಜನ್ಯ ಇವರೆಲ್ಲರೂ ಅಸ್ತಿತ್ವವೇ ಇಲ್ಲದಂತಾಗಿಬಿಡುತ್ತಾರೆ. ಮೂಲತಃ ಮಹಿಳೆಯರಲ್ಲವೇ ,
“ ಹೇಗಿರಬೇಕೋ ಹಾಗಿದ್ದರೆ ಸರಿ ಇಲ್ಲವಾದರೆ ,,,,,,,,,,????” ಈ ಧೋರಣೆ. ದಲಿತ ಮಹಿಳೆಯಾದರೆ ಈ ಧೋರಣೆಯ ಜೊತೆಗೆ “ ತಮ್ಮ ಸ್ಥಾನಮಾನವನ್ನು ಅರಿತು ನಡೆಯಬೇಕಲ್ಲವೇ,,,,,,????” ಎನ್ನುವ ದಾರ್ಷ್ಟ್ಯ. ಅತ್ಯಾಚಾರಕ್ಕೆ ಮರಣದಂಡನೆ ವಿಧಿಸುವ ಶಾಸನ ಜಾರಿಯಾಗಿದೆ.
ಆದರೆ ನೇಣು ಕುಣಿಕೆಯೂ ಅಸ್ಮಿತೆಯನ್ನಾಧರಿಸಿ ಬಿಗಿದುಕೊಳ್ಳುವ ದೇಶ ನಮ್ಮದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿ ಅತ್ಯಾಚಾರಕ್ಕೊಳಗಾದ ಹೆಣ್ಣು ಮಗುವಿಗೆ ಸಾಂತ್ವನವನ್ನೂ ಹೇಳದೆ, ತನ್ನ ಸಮುದಾಯದ ನರನಾಡಿಗಳಲ್ಲಿ ಹರಿಯುವ ಬಿಸಿರಕ್ತದ ಬಗ್ಗೆ ಹೆಮ್ಮೆ ಪಡುವುದನ್ನು , ಮತ್ತೋರ್ವ ಬಿಜೆಪಿ ಸಂಸದ ಹೆಣ್ಣುಮಕ್ಕಳಿಗೆ ಸಂಸ್ಕಾರವೇ ಮುಖ್ಯ ಎಂದು ಹೇಳುವುದನ್ನು ಹೇಗೆ ಬಣ್ಣಿಸುವುದು ?
ದೇಶದ ಪ್ರಮುಖ ರಾಜಕೀಯ ಪಕ್ಷದ ನಾಯಕರೊಬ್ಬರು ಮನೀಷಾ ಕುಟುಂಬದ ಸದಸ್ಯರನ್ನು ಅಪ್ಪಿಕೊಂಡು ಸಾಂತ್ವನ ಹೇಳುವುದು ನಾಟಕೀಯ ಪ್ರಹಸನ ಎಂದು ಹೀಗಳೆಯುವವರಿಗೆ, ಕುಟುಂಬದವರಿಗೆ ಆ ಯುವತಿಯ ಶವವನ್ನು ನೋಡಲೂ ಅವಕಾಶ ನೀಡದೆ ಸುಟ್ಟುಹಾಕಿದ ಪೊಲೀಸರ ಧೋರಣೆ ಹೇಗೆ ಕಾಣಬೇಕು. ಅದು ಮೃದು ನಾಟಕ ಇದು ಕ್ರೂರ ನಾಟಕ ಎನ್ನಬಹುದೇ ?
ಶವದಿಂದ ಸಾಕ್ಷಿ ನುಡಿಸಲು ಸಾಧ್ಯವಿಲ್ಲ ಆದರೆ ಶವವನ್ನು ಕೊಯ್ದರೆ ಸಾಕಷ್ಟು ಸತ್ಯ ಹೊರಬರುತ್ತವೆ ಅಲ್ಲವೇ ? ಇತ್ತ ಅನಾಥಳಂತೆ ಸುಟ್ಟುಹೋದ ಮನೀಷಾ ಅತ್ತ ಅಪರಾಧಿಗಳಂತೆ ಬಂಧಿತರಾದ ಆಕೆಯ ಕುಟುಂಬದ ಸದಸ್ಯರು, ಈ ಅಮಾಯಕರಿಗೆ ಬೆದರಿಕೆ ಹಾಕುವ ಠಾಕೂರರು. ಠಾಕೂರರ ವಿರುದ್ಧ ಎಫ್‍ಐಆರ್ ಸಹ ಸಲ್ಲಿಸದೆ, ನೊಂದ ಜೀವಗಳ ಮೇಲೆ ಎಫ್‍ಐಆರ್ ದಾಖಲಿಸುವ ಸರಕಾರ. ಇಲ್ಲಿ ಯಾರನ್ನು ಕ್ರೂರಿ ಎನ್ನಬೇಕು ?
ವಿವೇಕ, ವಿವೇಚನೆ ಮತ್ತು ಸೌಜನ್ಯ ಇರುವವರಿಗೆ ಹೇಳಬೇಕಿಲ್ಲ. ಇವೆಲ್ಲವನ್ನೂ ಕಳೆದುಕೊಂಡಿರುವ ಅಸ್ಮಿತೆಯ ರಾಜಕಾರಣದ ರೂವಾರಿಗಳಿಗೆ ಹೇಳಲೇಬೇಕಲ್ಲವೇ ? ಕ್ರೂರ ವ್ಯವಸ್ಥೆಯಲ್ಲಿ ನಡೆಯುವ ಎಲ್ಲ ಅಮಾನುಷ ಘಟನೆಗಳ ಹಿಂದೆಯೂ ಆ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ತಾರತಮ್ಯಗಳು, ಶೋಷಣೆಯ ಆಯಾಮಗಳು ಇದ್ದೇ ಇರುತ್ತವೆ.
ನಮ್ಮ ಸುತ್ತಲಿನ ಜಾತಿ, ಮತಧರ್ಮಗಳ ರಾಜಕಾರಣದಲ್ಲಿ ಇದನ್ನು ಕಾಣುತ್ತಲೇ ಇದ್ದೇವೆ. ಒಂದು ಸಮಾಜದಲ್ಲಿ ಸಂವೇದನೆ ಮತ್ತು ಮಾನವ ಸಂಬಂಧಗಳ ಸೂಕ್ಷ್ಮತೆ ಇದ್ದರೆ ಪ್ರತಿಯೊಂದು ಅತ್ಯಾಚಾರ, ದೌರ್ಜನ್ಯ ಪ್ರಕರಣವೂ ಮಾನಸಿಕ ಕ್ಷೋಭೆ ಉಂಟುಮಾಡುತ್ತದೆ. ಬಹುಶಃ ನವ ಭಾರತ ಈ ಸೂಕ್ಷ್ಮತೆಯನ್ನು ಕಳೆದುಕೊಂಡಿದೆ. ಆಸೀಫಾ ಮತ್ತು ಮನೀಷಾ ಪ್ರಕರಣದಲ್ಲಿ ಇದು ಸ್ಪಷ್ಟವಾಗಿದೆ.
ಈ ಎರಡೂ ಪ್ರಕರಣಗಳಲ್ಲಿ ಭವ್ಯ ಭಾರತದ ಕನಸನ್ನು ಹೊತ್ತು ಸಂಸ್ಕೃತಿಯನ್ನು ಆರಾಧಿಸುವವರ ಧೋರಣೆಯನ್ನು ಗಮನಿಸಿದಾಗ ಭಾರತದ ಮಣ್ಣಲ್ಲೇ ತಾರತಮ್ಯದ ಕಣಗಳು ಬೆರೆತುಹೋಗಿವೆಯೇನೋ ಎನಿಸುತ್ತದೆ. “ ಆಕೆ ಅವಳಲ್ಲವೇ ನಾವೇಕೆ ಪ್ರತಿಭಟಿಸಬೇಕು,,,, ” ಎನ್ನುವ ಧೋರಣೆ ಜಾತಿ ಅಸ್ಮಿತೆಯ ನೆಲೆಯಲ್ಲಿ ಕಂಡುಬಂದರೆ, “ ಹೆಣ್ಣು ಹೆಣ್ಣಾಗಿರಬೇಕಲ್ಲವೇ,,,,” ಎನ್ನುವ ಧೋರಣೆ ಪುರುಷಾಧಿಪತ್ಯದ ನೆಲೆಯಲ್ಲಿ ಕಂಡುಬರುತ್ತದೆ.
ಎರಡೂ ಸಂದರ್ಭಗಳಲ್ಲಿ ಮೇಲ್ಜಾತಿಯ ಮನಸುಗಳು ಬಹುಮಟ್ಟಿಗೆ ಒಂದೇ ಆಗಿರುವುದನ್ನು ಗಮನಿಸಬೇಕು. ಅತ್ಯಾಚಾರಕ್ಕೊಳಗಾದ ಮಹಿಳೆಗೆ ನ್ಯಾಯ ಒದಗಿಸಲು ಹೋರಾಡುವ ಮನಸುಗಳು ಅಂತರರಾಷ್ಟ್ರೀಯ ಪಿತೂರಿಯ ಛಾಯೆಯಲ್ಲಿ ಕಾಣುತ್ತದೆ ಎಂದರೆ ನಮ್ಮ ಪ್ರಭುತ್ವದ ದೃಷ್ಟಿ ಎಷ್ಟು ಮಸುಕಾಗಿರಬೇಕು. ಆ ಕಣ್ಣುಗಳಲ್ಲಿ ಎಷ್ಟೊಂದು ಕೊಳಕು ತುಂಬಿರಬೇಕು. ಆ ಹೃದಯದಲ್ಲಿ ಅದೆಷ್ಟು ಕಲ್ಮಷ ಸಂಗ್ರಹವಾಗಿರಬೇಕು.
ಭಾರತ ಹೀಗಿರಲಿಲ್ಲ ಎಂದು ಹೇಳುವಷ್ಟು ಆತ್ಮಸ್ಥೈರ್ಯ ಬಹುಶಃ ಯಾರಲ್ಲೂ ಇರಲಾರದು. ಏಕೆಂದರೆ ಭಾರತ ಹೀಗೆಯೇ ನಡೆದುಬಂದಿದೆ. ಮಹಾಭಾರತದಿಂದ ನವ ಭಾರತದವರೆಗೆ, ಮಥುರಾದಿಂದ ಹಥ್ರಾಸಿನವರೆಗೆ ಒಂದೆಡೆ ಪುರುಷ ಸಮಾಜದ ಅಟ್ಟಹಾಸ ಮತ್ತೊಂದೆಡೆ ಜಾತಿ ವ್ಯವಸ್ಥೆಯ ಕ್ರೌರ್ಯ ಎರಡು ಅಲಗಿನ ಕತ್ತಿಯ ಮೇಲೆ ನಡೆಯುತ್ತಲೇ ಈ ದೇಶದ ಮಹಿಳೆಯರು, ಅದರಲ್ಲೂ ಶೋಷಿತ ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯ, ಅತ್ಯಾಚಾರ, ಅಟ್ಟಹಾಸ ಮತ್ತು ಅಧಿಪತ್ಯವನ್ನು ಎದುರಿಸುತ್ತಾ ಬಂದಿದ್ದಾರೆ.
ಆದರೆ ಅಸ್ಮಿತೆಯ ರಾಜಕಾರಣ, ಜಾತಿ ವ್ಯವಸ್ಥೆಯ ಚೌಕಟ್ಟುಗಳು, ಸಾಮಾಜಿಕ ಧೋರಣೆ ಮತ್ತು ಶ್ರೇಷ್ಠತೆಯ ವ್ಯಸನ ಇವೆಲ್ಲವೂ ನಮ್ಮೊಳಗಿನ ಸಂವೇದನೆ ಹಾಗೂ ಸೂಕ್ಷ್ಮತೆಯನ್ನೂ ಅಡ್ಡಡ್ಡಲಾಗಿ ಸೀಳುತ್ತಲೇ ಬಂದಿದೆ. ಹಾಗಾಗಿಯೇ ಮನೀಷಾ ನೂರರಲ್ಲಿ ಒಬ್ಬಳಾಗುತ್ತಾಳೆ, ಆಸಿಫಾ ನಿರ್ಲಕ್ಷಿತಳಾಗುತ್ತಾಳೆ.
ಓರ್ವ ಅಸಹಾಯಕ ಯುವತಿಯನ್ನು ನಾಲ್ಕು ಜನ ಏಕಾಂತ ಸ್ಥಳಕ್ಕೆ ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿ ಸಾವಿನಂಚಿಗೆ ತಂದು ಬಿಸಾಡಿದಾಗ, ಈ ಘಟನೆಯ ಸಾಕ್ಷಿ ಅತ್ಯಾಚಾರಕ್ಕೊಳಗಾದ ಮಹಿಳೆಯಲ್ಲದೆ ಮತ್ತಾರಿರಲು ಸಾಧ್ಯ ? ಮನೀಷಾ ವಾಲ್ಮೀಕಿ ತನ್ನ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಸ್ಪಷ್ಟವಾಗಿ ಹೇಳಿದ ಮೇಲೂ ಸಂಭೋಗವೇ ನಡೆದಿಲ್ಲ, ವೀರ್ಯಾಣು ಪತ್ತೆಯಾಗಿಲ್ಲ ಎಂದು ಹೇಳುವುದು ಬೌದ್ಧಿಕ ಕ್ರೌರ್ಯ ಎನಿಸುವುದಿಲ್ಲವೇ ?
ಸಂಭೋಗ ನಡೆದಿಲ್ಲ ಎಂದ ಮಾತ್ರಕ್ಕೆ ಅತ್ಯಾಚಾರವೇ ನಡೆದಿಲ್ಲ ಎಂದು ಹೇಳುವುದು ಕಾನೂನುಬದ್ಧವೇ ? ಮನೀಷಾ ಪ್ರಕರಣದಲ್ಲಿ ಒಂದು ಅಸಹಜ ಸಾವು ಸಂಭವಿಸಿದೆ ಈ ಸಾವಿಗೆ ಕಾರಣರಾದವರು ಅತ್ಯಾಚಾರ ನಡೆಸದಿದ್ದರೂ ಶಿಕ್ಷಾರ್ಹರೇ ಅಲ್ಲವೇ ? ಇಂತಹ ಕ್ರೂರಿಗಳನ್ನು ಜಾತಿ ಶ್ರೇಷ್ಠತೆಯ ನೆಲೆಯಲ್ಲಿ ಸಮರ್ಥಿಸಿಕೊಳ್ಳುವ ಒಂದು ಸಮುದಾಯ ನಮ್ಮ ನಡುವೆ ಇದೆ ಎಂದರೆ ನಾವು ತಲೆ ಎತ್ತಿ ತಿರುಗುವುದರಲ್ಲಿ ಅರ್ಥವಿಲ್ಲ.
ದುರಂತ ಎಂದರೆ ಪ್ರಭುತ್ವದ ದೃಷ್ಟಿಯಲ್ಲಿ ಬಿಸಿರಕ್ತದ ಠಾಕೂರರು ಅಮಾಯಕರಾಗಿ ಕಾಣುತ್ತಾರೆ. ರಕ್ತ ಚೆಲ್ಲಿದ ಮನೀಷಾಳ ಪರ ನಿಲ್ಲುವವರು ಅಂತರ ರಾಷ್ಟ್ರೀಯ ಪಿತೂರಿ ನಡೆಸುವ ದುಷ್ಟರಂತೆ ಕಾಣುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಇಲ್ಲಿ ನಗರ ನಕ್ಸಲರು ನುಸುಳುತ್ತಾರೆ, ಪಾಕಿಸ್ತಾನದ ಏಜೆಂಟರೂ ಕಾಣುತ್ತಾರೆ, ಭಯೋತ್ಪಾದನೆಯ ಸುಳಿವೂ ದೊರಕಿಬಿಡುತ್ತದೆ. ಬಿಸಿರಕ್ತದ ಠಾಕೂರ ಕುಡಿಗಳು ಶುದ್ಧಹಸ್ತರಾಗಿಬಿಡುತ್ತಾರೆ.
ಕಾರಣ ಸ್ಪಷ್ಟ, ಇವರು ರಾಜಕೀಯ ಅಧಿಕಾರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ, ಅಧಿಪತ್ಯ ರಾಜಕಾರಣಕ್ಕೆ ನವಿರಾದ ನೆಲಹಾಸುಗಳನ್ನು ಒದಗಿಸುತ್ತಾರೆ. ರಕ್ತ ಹೀನತೆಯಿಂದ ಬಳಲುವ ಶೋಷಿತ ಸಮುದಾಯಗಳಲ್ಲೂ ನೆತ್ತರು ಬಿಸಿಯಾಗಿಯೇ ಇರುತ್ತದೆ. ಈ ಸಮುದಾಯಗಳೂ ರಾಜಕೀಯವಾಗಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಆದರೆ ಈ ಸಮುದಾಯವನ್ನು ಪ್ರತಿನಿಧಿಸುವ ನಾಯಕರು ಹರಿದು ಹಂಚಿಹೋಗಿದ್ದಾರೆ, ಕೆಲವರು ತಮ್ಮ ಸ್ವಾಭಿಮಾನವನ್ನೂ , ಅಸ್ಮಿತೆಯನ್ನೂ ಮಾರಿಕೊಂಡವರಾಗಿದ್ದಾರೆ.
ಪಕ್ಷ ರಾಜಕಾರಣ ಅಸ್ಮಿತೆಗಳನ್ನು ನುಂಗಿಹಾಕುತ್ತಿರುವಂತೆ ಕಂಡುಬಂದರೂ, ಸೂಕ್ಷ್ಮವಾಗಿ ಗಮನಿಸಿದಾಗ ಅಸ್ಮಿತೆಯ ರಾಜಕಾರಣ ಅಧಿಕಾರ ರಾಜಕಾರಣಕ್ಕೆ ಬಲಿಯಾಗುತ್ತಿರುವುದೂ ಗೋಚರಿಸುತ್ತದೆ. ಅಸ್ಮಿತೆಯ ರಾಜಕಾರಣದ ಫಲಾನುಭವಿಗಳು ತಮ್ಮ ಮೂಲ ನೆಲೆಯನ್ನೇ ಮರೆತು ಅಧಿಕಾರ ರಾಜಕಾರಣಕ್ಕೆ ಜೋತುಬಿದ್ದಾಗ ಶೋಷಿತ ಸಮುದಾಯಗಳು ಆಳವಾದ ಕಮರಿಗೆ ಬಿದ್ದುಹೋಗುತ್ತವೆ. ಉತ್ತರ ಪ್ರದೇಶದಲ್ಲಿ ಮತ್ತು ಭಾರತದಾದ್ಯಂತ ಈ ವಿದ್ಯಮಾನವನ್ನು ಗಮನಿಸುತ್ತಲೇ ಇದ್ದೇವೆ.
ಹಾಗಾಗಿ ಪುರುಷ ಸಮಾಜಕ್ಕೆ ಮನೀಷಾ ಅಥವಾ ಆಸಿಫಾ ಅಥವಾ ಧಾನಮ್ಮ ಕೇವಲ ಮಹಿಳೆಯಾಗಿ ಕಂಡುಬರುತ್ತಾಳೆ. ಮೇಲ್ಜಾತಿಗಳಿಗೆ ಈ ಜೀವಗಳು ‘ ಅನ್ಯರ ’ ಗುಂಪಿಗೆ ಸೇರಿಬಿಡುತ್ತವೆ. ರಾಜಕಾರಣಿಗಳಿಗೆ ಲಾಭನಷ್ಟದ ಪಗಡೆಕಾಯಿಗಳಂತೆ ಕಂಡುಬರುತ್ತಾರೆ. ಊನ ಗ್ರಾಮದಲ್ಲಿ ಚರ್ಮ ಸುಲಿಸಿಕೊಂಡವರಿಗೂ, ಪೊಲೀಸರಿಂದ ಮಧ್ಯರಾತ್ರಿ ಸುಡಲ್ಪಟ್ಟ ಮನೀಷಾಳಿಗೂ ವ್ಯತ್ಯಾಸವೇನಾದರೂ ಇದ್ದರೆ ಅದು ಸ್ತ್ರೀ-ಪುರುಷದ ಚೌಕಟ್ಟಿಗೆ ಸೀಮಿತವಾಗುತ್ತದೆ.
ಮಾಯಾವತಿ ಏಕೆ ಸ್ಪಂದಿಸಲಿಲ್ಲ ಎಂದು ಕೇಳುವ ಮುನ್ನ, ರಾಹುಲ್ ಏಕೆ ಸ್ಪಂದಿಸುತ್ತಿದ್ದಾರೆ ಎಂದು ಯೋಚಿಸುವ ಮುನ್ನ ನಾಗರಿಕ ಸಮಾಜದ ಒಂದು ಭಾಗವಾಗಿ ನಾವು ಎಷ್ಟರ ಮಟ್ಟಿಗೆ ಸ್ಪಂದಿಸಿದ್ದೇವೆ ಎಂದು ಯೋಚಿಸುವ ಮನಸುಗಳು ಕಡಿಮೆಯಾಗುತ್ತಿವೆ. ಏಕೆಂದರೆ ದೇಶದ ಅಭಿವೃದ್ಧಿಯ ಮುಂದೆ ಇವೆಲ್ಲವೂ ಗೌಣ ಎನಿಸುವಂತಹ ಸಮೂಹ ಸನ್ನಿಗೆ ನಾಗರಿಕ ಸಮಾಜದ ಬಹುದೊಡ್ಡ ಸಮೂಹ ಬಲಿಯಾಗಿದೆ.
ಈ ಸಮೂಹದಲ್ಲಿ ಶೋಷಿತರೂ ಇದ್ದಾರೆ ಎನ್ನುವುದು ದುರಂತವಾದರೂ ಸತ್ಯ. ಅತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾದ ಮಹಿಳೆಯನ್ನೇ ದೋಷಿಯಂತೆ ಕಾಣುವ, ದೂಷಿತಳನ್ನಾಗಿ ಮಾಡುವ ಶತಮಾನಗಳ ಪರಂಪರೆಗೆ ನಮ್ಮ ಸಮಾಜ ಒಗ್ಗಿಹೋಗಿದೆ. ಶಿಕ್ಷಣ ಮತ್ತು ಪ್ರಗತಿ ಈ ಮನಸ್ಥಿತಿಯನ್ನು ಬದಲಿಸಲು ಸಾಧ್ಯವಾಗಿಲ್ಲ.
ಈ ನಿಟ್ಟಿನಲ್ಲಿ ಒಂದು ನಿರ್ದಿಷ್ಟ ನೆಲೆಯಲ್ಲಿ “ ಭಾರತ ಹೀಗಿರಲಿಲ್ಲ ” ಎಂದು ಹೇಳಬಹುದು. ಮೂರು ನಾಲ್ಕು ದಶಕಗಳ ಹಿಂದೆ ಭಾರತ ಈ ರೀತಿಯ ನಿಷ್ಕ್ರಿಯತೆಗೆ ಬಲಿಯಾಗಿರಲಿಲ್ಲ. ಈ ಮಟ್ಟಿಗೆ ನಿರ್ಲಜ್ಜವಾಗಿರಲಿಲ್ಲ. ಒಂದು ಬೆಲ್ಚಿ, ಒಂದು ಕರಂಚೇಡು, ಒಂದು ಬತಾನಿತೊಲ, ಒಂದು ಲಕ್ಷ್ಮಣಪುರಬಾಥೆ, ಒಂದು ತ್ಸೆಂಡೂರು ನೂರಾರು ಬೀದಿ ನಾಟಕಗಳಿಗೆ, ಹಾಡುಗಳಿಗೆ, ಹೋರಾಟಗಳಿಗೆ ಪ್ರೇರಣೆ ನೀಡಿದ್ದವು.
ಆ ಒಂದು ಭಾರತ ಇಂದು ಇಲ್ಲವಾಗಿದೆ. ಏಕೆ ಹೀಗಾಯಿತು ಎಂದು ಕೆದಕುತ್ತಾ ಹೋದರೆ ಮತ್ತೊಮ್ಮೆ 1980-90ರ ದಶಕದ ಸಾಂಸ್ಕೃತಿಕ ರಾಜಕಾರಣ ಮತ್ತು ಮಂಡಲ-ಕಮಂಡಲದ ವಿಷವರ್ತುಲದಲ್ಲಿ ಬಂದು ನಿಲ್ಲುತ್ತೇವೆ. ಶೋಷಿತರ ದನಿಗೆ ದನಿಯಾಗಬೇಕಾದವರು ಶೋಷಿತ ಸಮುದಾಯದವರೇ ಆಗಬೇಕಿಲ್ಲ ಹಾಗೆಯೇ ಶೋಷಿತ ಸಮುದಾಯದ ಜನಪ್ರತಿನಿಧಿಗಳು ಈ ಆಕ್ರಂದನದ ದನಿಗೆ ದನಿಯಾಗದೆ ಅನ್ಯ ಮಾರ್ಗವೂ ಇಲ್ಲ.ಈ ಎರಡು ವಾಸ್ತವಗಳ ನಡುವೆ ನಾವು ಇಂದು ನಿರ್ಲಜ್ಜ ಭಾರತದಲ್ಲಿ ಬದುಕುತ್ತಿದ್ದೇವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ
ಸುದ್ದಿದಿನ,ಚನ್ನಗಿರಿ: ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯು ಸೋಮೌಅರ ನವಿಲೇಹಾಳು ಗ್ರಾಮ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರನ್ನು ಭೇಟಿಯಾಗಿ ಗ್ರಾಮಸಭೆಯನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸುವಂತೆ ಮನವಿ ಪತ್ರ ಸಲ್ಲಿಸಲಾಯಿತು.
ಗ್ರಾಮಸಭೆ ಎಂಬುದು ಗ್ರಾಮಸ್ಥರ ಸಮಸ್ಯೆಗಳನ್ನು ನೇರವಾಗಿ ಚರ್ಚಿಸಿ, ಗ್ರಾಮದ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸುವ ಪ್ರಮುಖ ವೇದಿಕೆಯಾಗಿರುವುದರಿಂದ, ಗ್ರಾಮಸಭೆಯ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು PDO ಅವರಿಗೆ ಮನವಿ ಮಾಡಲಾಯಿತು.
ಅದರಂತೆ ಗ್ರಾಮಸಭೆಯ ದಿನಾಂಕ, ಸಮಯ ಹಾಗೂ ಸ್ಥಳದ ಮಾಹಿತಿಯನ್ನು ಟಾಂಟಾಂ/ಧ್ವನಿವರ್ಧಕದ ಮೂಲಕ ಗ್ರಾಮದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುವುದರ ಜೊತೆಗೆ, ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಅರ್ಹ ಫಲಾನುಭವಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸಭೆಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸುವಂತೆ ತಿಳಿಸಲಾಯಿತು.
ಗ್ರಾಮದಲ್ಲಿಯೇ ಉದ್ಯೋಗ ಸೃಷ್ಟಿಗೆ ಒತ್ತು
ಇದೇ ಸಂದರ್ಭದಲ್ಲಿ ಮನರೇಗಾ (MGNREGA) ಯೋಜನೆಯಡಿ ಗ್ರಾಮದ ಅರ್ಹ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವಂತೆ ಮನವಿ ಮಾಡಲಾಯಿತು.
ಗ್ರಾಮಸ್ಥರು ಉದ್ಯೋಗಕ್ಕಾಗಿ ಅನಿವಾರ್ಯವಾಗಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗದಂತೆ, ಸರ್ಕಾರದ ಉದ್ಯೋಗ ಖಾತರಿ ಯೋಜನೆಯಡಿ ಲಭ್ಯವಿರುವ ಕೆಲಸಗಳನ್ನು ಸಮರ್ಪಕವಾಗಿ ಗುರುತಿಸಿ, ಅರ್ಹರಿಗೆ ನಿಯಮಾನುಸಾರ ಉದ್ಯೋಗ ಒದಗಿಸಬೇಕು ಎಂದು ತಿಳಿಸಲಾಯಿತು.
ಪ್ರಸ್ತುತ ಬತ್ತದ ನಾಟಿ ಕಾರ್ಯಕ್ಕೆ ಅಗತ್ಯವಿರುವ ನೀರಿನ ಸಮಸ್ಯೆಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೃಷಿ ಕೆಲಸಗಳು ಲಭ್ಯವಿಲ್ಲದ ಅವಧಿಯಲ್ಲಿ ಗ್ರಾಮಸ್ಥರಿಗೆ ಮನರೇಗಾ ಸೇರಿದಂತೆ ಇತರೆ ಸರ್ಕಾರಿ ಯೋಜನೆಗಳ ಮೂಲಕ ಉದ್ಯೋಗ ಒದಗಿಸಿ, ಗ್ರಾಮದಲ್ಲಿಯೇ ಆದಾಯದ ಅವಕಾಶಗಳನ್ನು ಸೃಷ್ಟಿಸುವುದು ಅಗತ್ಯವಾಗಿದೆ ಎಂದು ಮನವಿ ಮಾಡಲಾಯಿತು.
ಗ್ರಾಮದಲ್ಲಿಯೇ ಉದ್ಯೋಗ ದೊರೆತರೆ ಗ್ರಾಮಸ್ಥರ ಆರ್ಥಿಕ ಸ್ಥಿತಿ ಸುಧಾರಿಸುವುದರ ಜೊತೆಗೆ, ಗುಳೆ ಹೋಗುವುದನ್ನು ತಡೆಯಲು ಹಾಗೂ ಗ್ರಾಮದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು PDO ಅವರ ಗಮನಕ್ಕೆ ತರಲಾಯಿತು.
ಇತರೆ ಗ್ರಾಮಾಭಿವೃದ್ಧಿ ವಿಚಾರಗಳ ಚರ್ಚೆ
ಇದರ ಜೊತೆಗೆ ನವಿಲೇಹಾಳ ಗ್ರಾಮದ ವಿವಿಧ ಅಭಿವೃದ್ಧಿ ಸಮಸ್ಯೆಗಳು, ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು, ಉದ್ಯೋಗಾವಕಾಶಗಳು, ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು PDO ಅವರೊಂದಿಗೆ ಚರ್ಚಿಸಲಾಯಿತು.
ಗ್ರಾಮಸ್ಥರಿಗೆ ಸರ್ಕಾರದ ಯೋಜನೆಗಳ ಪ್ರಯೋಜನಗಳು ಸಮರ್ಪಕವಾಗಿ ತಲುಪುವಂತೆ ಪಾರದರ್ಶಕವಾಗಿ ಹಾಗೂ ನಿಯಮಾನುಸಾರ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಲಾಯಿತು.
ಗ್ರಾಮಸಭೆಯಲ್ಲಿ ಸಾರ್ವಜನಿಕರ ಹೆಚ್ಚಿನ ಭಾಗವಹಿಸುವಿಕೆ, ಸ್ಥಳೀಯ ಉದ್ಯೋಗ ಸೃಷ್ಟಿ ಹಾಗೂ ಗ್ರಾಮಾಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ನವಿಲೇಹಾಳ ಗ್ರಾಮವನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.
“ಗ್ರಾಮದ ಅಭಿವೃದ್ಧಿ ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಗ್ರ ಗ್ರಾಮಾಭಿವೃದ್ಧಿ ಸಾಧ್ಯ.”
ಗ್ರಾಮದ ಜನರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ನವಿಲೇಹಾಳ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ (ರಿ.) ನಿರಂತರವಾಗಿ ಜನಪರವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ದಾವಣಗೆರೆ ಜಿಲ್ಲಾಧ್ಯಕ್ಷರಾದ ಜಾಫರ್ ರವರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

ದಿನದ ಸುದ್ದಿ
ನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
ಸುದ್ದಿದಿನ,ದಾವಣಗೆರೆ: “ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.
ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು, ನಾನು ಡಿ.ಕೆ ಶಿವಕುಮಾರ್ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದಿದ್ದಾರೆ.
ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
“ನಾನು ಮುಖ್ಯಮಂತ್ರಿ ಅಲ್ಲ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿಯಂತೆ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ನನ್ನ ಮೊದಲ ಕರ್ತವ್ಯವಾಗಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ,” ಎಂದು ಅವರು ಹೇಳಿದರು.
ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಅನೇಕ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ ಎಂದರು.
“ಜನಪ್ರತಿನಿಧಿಯಾಗಿ ಚುನಾಯಿತರಾದ ಬಳಿಕ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ತರುವ ಪ್ರಯತ್ನ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆಗಳು, ರಸ್ತೆ ಅಭಿವೃದ್ಧಿ, ಶಾಲೆಗಳ ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಕಾಮಗಾರಿಗಳಿಗೆ ವೇಗ ನೀಡಲಾಗಿದೆ,” ಎಂದು ಹೇಳಿದರು.
ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ನೀರಾವರಿ ಹಾಗೂ ರೈತರಿಗೆ ಅನುಕೂಲಕರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಸರ್ಕಾರದ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.
ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಟೀಕೆಗಳು ಪ್ರಜಾಪ್ರಭುತ್ವದ ಭಾಗ. ಆದರೆ ಅಭಿವೃದ್ಧಿಯೇ ನಮ್ಮ ಉತ್ತರ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದೇ ನಮ್ಮ ಗುರಿಯಾಗಿದೆ,” ಎಂದರು.
ಕ್ಷೇತ್ರದ ಜನರು ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಸಂಪರ್ಕಿಸಬಹುದು. ಜನಸೇವೆಗಾಗಿ ತಮ್ಮ ಕಚೇರಿ ಸದಾ ತೆರೆದಿರುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


