Connect with us

ದಿನದ ಸುದ್ದಿ

26ರ ಕಾರ್ಮಿಕರ ಮುಷ್ಕರ ಏಕೆ ನಿರ್ಣಾಯಕ..?

Published

on

  • ನಾ ದಿವಾಕರ

ಕೋವಿದ್ 19ರ ಬಿಕ್ಕಟ್ಟಿನಿಂದ ಭಾರತ ಪಾರಾಗುವುದೆಂದು ? ಈ ಪ್ರಶ್ನೆ ಪ್ರತಿಯೊಬ್ಬರ ಮನಸಿನಲ್ಲೂ ಕಾಡುತ್ತಿದೆ. ಕೋವಿದ್ 19 ಭಾರತದ ದುಡಿಯುವ ವರ್ಗಗಳಿಗೆ ಶಾಪವಾಗಿ ಪರಿಣಮಿಸಿದ್ದರೆ ಆಳುವ ವರ್ಗಗಳಿಗೆ ವರದಾನ ಆದಂತಿದೆ. ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಮನೆಗಳಿಗೆ ಹಿಂದಿರುಗಲು, ಸಾವಿರಾರು ಕಿಲೋಮೀಟರ್ ನಡೆದು, ಬಿರುಬಿಸಿಲಿನಲ್ಲಿ ನಿತ್ರಾಣರಾಗಿ, ಅಸುನೀಗಿದ ನೂರಾರು ವಲಸೆ ಕಾರ್ಮಿಕರು ಸರ್ಕಾರದ ಗಣನೆಗೇ ಬರಲಿಲ್ಲ ಎನ್ನುವುದನ್ನು ಗಮನಿಸಿದರೆ ನಾವು ಎಂತಹ ಅಮಾನುಷ ಆಡಳಿತ ವ್ಯವಸ್ಥೆಯಲ್ಲಿದ್ದೇವೆ ಎಂದು ತಿಳಿಯುತ್ತದೆ.

ಹೊರದೇಶಗಳಿಂದ ಬಂದಿರುವ ಲಕ್ಷಾಂತರ ಅಕ್ರಮ(?) ವಲಸೆ ಕಾರ್ಮಿಕರ ಬಗ್ಗೆ ಕರಾರುವಾಕ್ಕಾಗಿ ಮಾಹಿತಿ ಲಭ್ಯವಿದೆ ಎಂದು ಎಲ್ಲರನ್ನೂ ಹೊರಹಾಕಲು ಸಿದ್ಧತೆ ನಡೆಸಿದ್ದ ಸರ್ಕಾರವೊಂದಕ್ಕೆ, ತನ್ನ ನೆಲದಲ್ಲೇ ವಲಸೆ ಕಾರ್ಮಿಕರು ಎಷ್ಟಿದ್ದಾರೆ ಎನ್ನುವ ಸ್ಪಷ್ಟ ಮಾಹಿತಿ ಇಲ್ಲ ಎಂದರೆ ನಾವು ಇನ್ನೆಂತಹ ನಿಷ್ಕ್ರಿಯ ಆಡಳಿತ ವ್ಯವಸ್ಥೆಯಲ್ಲಿದ್ದೇವೆ ಎಂದು ಅರಿವಾಗುತ್ತದೆ.

ದೇಶದ ಸಂಪತ್ತಿನ ಉತ್ಪಾದನೆಗೆ ಅನಿವಾರ್ಯವಾಗಿ ಬೇಕಾಗುವ ಜೀವಗಳು ಬದುಕಿದ್ದಾಗ ಶೋಷಣೆಗೊಳಗಾದರೆ ಅಳಿದ ಮೇಲೆ ಅನಾಥವಾಗುವ ಒಂದು ವಿಕೃತ ಪರಿಸ್ಥಿತಿಯಲ್ಲಿ ಈ ದೇಶದ ಶ್ರಮಜೀವಿಗಳು ತಮ್ಮ ಬೆವರು ಹರಿಸಿ ದುಡಿಯುತ್ತಿದ್ದಾರೆ. ಉತ್ಪಾದನಾ ಪ್ರಕ್ರಿಯೆಯಲ್ಲಿ ಬಳಕೆಯಾಗುವ ಶ್ರಮ ಶಕ್ತಿ ಮತ್ತು ಈ ಶ್ರಮ ಶಕ್ತಿಯ ವಾರಸುದಾರರಾದ ಶ್ರಮಿಕರು ಯಾವುದೇ ಒಂದು ದೇಶದ ತಳಪಾಯ.

ಅರ್ಥಶಾಸ್ತ್ರಜ್ಞರು, ಮಾರುಕಟ್ಟೆ ತಜ್ಞರು ಮತ್ತು ತಮ್ಮ ಹವಾನಿಯಂತ್ರಿತ ಕೋಣೆಗಳಲ್ಲಿ ಕುಳಿತು ಅಭಿವೃದ್ಧಿಯ ನೀಲನಕ್ಷೆಯನ್ನು ಸಿದ್ಧಪಡಿಸುವ ಹಿತವಲಯದ ಅಧಿಕಾರಶಾಹಿ ವರ್ಗ ದೇಶದ ಜಿಡಿಪಿ , ಅಂದರೆ ನಿವ್ವಳ ದೇಶೀಯ ಉತ್ಪನ್ನದ ಏರಿಳಿತಗಳನ್ನು ಗಮನಿಸುತ್ತಲೇ ಇರುತ್ತಾರೆ.

ಆದರೆ ಈ ಸೂಚ್ಯಂಕದ ಏರಿಳಿತದ ಹಿಂದೆ ಇರುವ ಉತ್ಪನ್ನಗಳ ಉತ್ಪಾದನಾ ಪ್ರಕ್ರಿಯೆಗೆ ಲಕ್ಷಾಂತರ ಕೈಗಳು ದುಡಿದಿರುತ್ತವೆ, ಲಕ್ಷಾಂತರ ಕುಟುಂಬಗಳು ಹಸಿವನ್ನೂ ಲೆಕ್ಕಿಸದೆ ಶ್ರಮ ವಹಿಸಿರುತ್ತವೆ. ಗ್ರಾಮೀಣ ಕೃಷಿ ಮತ್ತು ಕೂಲಿ ಕಾರ್ಮಿಕರಿಂದ ಹಿಡಿದು ದೇಶದ ಬೃಹತ್ ಕೈಗಾರಿಕೆಗಳ ಕಾರ್ಮಿಕರವರೆಗೂ ಶ್ರಮಶಕ್ತಿ ಬಳಕೆಯಾಗಿರುತ್ತದೆ.

ಈ ಶ್ರಮಶಕ್ತಿಯನ್ನು ತನ್ನಿಚ್ಚೆಯಂತೆ, ಅಗ್ಗದ ಕೂಲಿ ನೀಡಿ, ಬಳಸಿಕೊಳ್ಳಲು ಬಂಡವಾಳಿಗರು ಮತ್ತು ಬಂಡವಾಳ ವ್ಯವಸ್ಥೆ ಸದಾ ಸಿದ್ಧವಾಗಿರುತ್ತದೆ. ಇಂದು ಈ ಬೃಹತ್ ಸಮುದಾಯ ಅಪಾಯದ ಅಂಚಿನಲ್ಲಿದೆ. ಭಾರತದ ಬಂಡವಾಳ ವ್ಯವಸ್ಥೆ ತನ್ನ ಕ್ರೌರ್ಯದ ಪರಾಕಾಷ್ಠೆ ತಲುಪಿರುವುದನ್ನು ವಲಸೆ ಕಾರ್ಮಿಕರ ಬವಣೆಯಲ್ಲಿ ಕಾಣದೆ ಹೋದರೆ ಬಹುಶಃ ನಾವು ದೃಷ್ಟಿಹೀನರು ಎಂದೇ ಭಾವಿಸಬೇಕಾಗುತ್ತದೆ. ಭಾರತದ ಶ್ರಮಜೀವಿಗಳು ಕಳೆದ ಮೂರು ದಶಕಗಳಿಂದಲೂ ಕವಲು ಹಾದಿಯಲ್ಲೇ ನಡೆದುಬಂದಿದ್ದಾರೆ. ಇದೀಗ ತಮ್ಮ ಭವಿಷ್ಯದ ಹಾದಿಯನ್ನೇ ಕಳೆದುಕೊಳ್ಳುವ ಸ್ಥಿತಿ ತಲುಪಿದ್ದಾರೆ.

ಕೃಷಿ, ಗುಡಿ ಕೈಗಾರಿಕೆಗಳಿಂದ ಹಿಡಿದು ಬ್ಯಾಂಕ್ ಮತ್ತು ವಿಮಾ ಕ್ಷೇತ್ರದವರೆಗಿನ ಸಮಸ್ತ ಕಾರ್ಮಿಕ ವರ್ಗ ಇಂದು-ನಾಳಿನ ಚಿಂತೆಯಲ್ಲಿದ್ದರೆ ಅದಕ್ಕೆ ಮೂಲ ಕಾರಣ ಈ ದೇಶದ ಆಳುವ ವರ್ಗಗಳು ಅನುಸರಿಸುತ್ತಿರುವ ನವ ಉದಾರವಾದಿ ಆರ್ಥಿಕ ನೀತಿ ಎನ್ನುವುದು ವಾಸ್ತವ.

ಆದರೆ ಈ ಅಮಾನುಷ ನೀತಿಗಳ ವಿರುದ್ಧ ಒಂದು ಸಮಗ್ರ ಹೋರಾಟ ರೂಪಿಸುವಲ್ಲಿ ನಾವು ಎಡವಿದ್ದೆಲ್ಲಿ ಎಂಬ ಪ್ರಶ್ನೆ ಎದುರಾದಾಗ ಕಾರ್ಮಿಕ ಚಳುವಳಿಯ ಮುಂಚೂಣಿಯಲ್ಲಿರುವ ಎಲ್ಲ ಸುಶಿಕ್ಷಿತರೂ ಮತ್ತೊಂದು ಮಾಸ್ಕ್ ಧರಿಸಬೇಕಾಗುತ್ತದೆ. ಇದು ಕಟು ವಾಸ್ತವ. ಈ ಲೋಪವನ್ನು ಒಪ್ಪಿಕೊಳ್ಳದೆ, ಆತ್ಮರತಿಯಲ್ಲೇ ಬದುಕುವುದಾದರೆ ನಮಗೆ, ಅಂದರೆ ಶ್ರಮಜೀವಿ ವರ್ಗಕ್ಕೆ, ನಾಳಿನ ನಕ್ಷತ್ರಗಳನ್ನೂ ಎಣಿಸಲಾಗುವುದಿಲ್ಲ.

ಏಕೆಂದರೆ ಇಂದು ಕಾರ್ಮಿಕ ವರ್ಗ ಎರಡು ನೆಲೆಯಲ್ಲಿ ಸಂಘರ್ಷ ನಡೆಸಬೇಕಿದೆ. ಮೊದಲನೆಯದು ನೂರಾರು ವರ್ಷಗಳ ಹೋರಾಟ, ತ್ಯಾಗ, ಬಲಿದಾನಗಳ ಮೂಲಕ ಪಡೆದಿರುವ ದುಡಿಮೆಯ ಹಕ್ಕುಗಳನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಆತಂಕ. ದುಡಿಮೆಯ ಅವಧಿ ವಿಸ್ತರಣೆ, ಮುಷ್ಕರದ ಹಕ್ಕು ನಿರಾಕರಣೆ, ಸಂಘಟನೆಯ ಹಕ್ಕುಗಳ ಮೇಲಿನ ನಿರ್ಬಂಧ, ಕಾರ್ಮಿಕರನ್ನು ತಮ್ಮ ಇಚ್ಚೆಗನುಸಾರ ನೇಮಿಸಿ ವಜಾ ಮಾಡಲು ಮಾಲಿಕರಿಗೆ ನೀಡಿರುವ ಹಕ್ಕುಗಳು ಮತ್ತು ಶಾಸನಗಳ ಮೂಲಕ ಸುಶಿಕ್ಷಿತ ಕಾರ್ಮಿಕ ವರ್ಗದ ಅಭಿವ್ಯಕ್ತಿ ಸ್ವಾತಂತ್ರ್ಯದ ನಿಯಂತ್ರಣ ಹೀಗೆ ದುಡಿಮೆಗಾರರು ಒಂದು ಶತಮಾನದ ಹಿಂದಿನ ವ್ಯವಸ್ಥೆಗೆ ಜಾರು ಅಪಾಯವನ್ನು ಎದುರಿಸುತ್ತಿದ್ದಾರೆ.

ಎರಡನೆಯದು, ದುಡಿಮೆಯ ಕ್ಷೇತ್ರದ ಹೊರಗೆ ಇನ್ನೂ ಹೆಚ್ಚಿನ ಅಪಾಯಗಳನ್ನು ಎದುರಿಸಬೇಕಿದೆ. 70 ವರ್ಷಗಳ ಅವಧಿಯಲ್ಲಿ ಸಂವಿಧಾನದ ಕರ್ತೃಗಳು ಮತ್ತು ಸ್ವತಂತ್ರ ಭಾರತದ ನಿರ್ಮಾತೃಗಳು ರೂಪಿಸಿ ಪೋಷಿಸಿಕೊಂಡು ಬಂದಿದ್ದ “ ಸ್ವಾವಲಂಬಿ ” ಭಾರತದ ಕನಸನ್ನು ನುಚ್ಚು ನೂರು ಮಾಡಲು ನಾವು “ ಆತ್ಮನಿರ್ಭರ ” ಭಾರತವನ್ನು ನಿರ್ಮಿಸಬೇಕಿದೆ. ನೆಹರೂ ಯುಗದ ಸ್ವಾವಲಂಬನೆಗೂ ಮೋದಿ ಯುಗದ ಆತ್ಮನಿರ್ಭರತೆಗೂ ನಿಘಂಟಿನಲ್ಲಿ ಒಂದೇ ಅರ್ಥ ಕಂಡುಬರುತ್ತದೆ. ಆದರೆ ವಾಸ್ತವ ಭಿನ್ನ. ಸ್ವಾತಂತ್ರ್ಯ ಪೂರ್ವ ದಾರ್ಶನಿಕರು ಕಂಡ ಸ್ವಾವಲಂಬಿ ಭಾರತದಲ್ಲಿ ಈ ದೇಶದ ಸಂಪತ್ತು ಸಮಸ್ತ ಭಾರತೀಯರಿಗೆ ಸೇರಬೇಕು ಎನ್ನುವ ಉದಾತ್ತ ಚಿಂತನೆ ಇತ್ತು. ಇಂದಿನ ಆತ್ಮನಿರ್ಭರತೆ ಈ ಸಂಪತ್ತು ಮತ್ತು ಸಂಪನ್ಮೂಲಗಳನ್ನು ವಸಾಹತುಶಾಹಿಯ ಆಧುನಿಕ ಅವತಾರ ಎನ್ನಬಹುದಾದ ಕಾರ್ಪೋರೇಟ್ ಔದ್ಯಮಿಕ ವಲಯಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ.

ಬ್ರಿಟೀಷ್ ಸಾಮ್ರಾಜ್ಯ ಭಾರತವನ್ನು ಎರಡು ಶತಮಾನಗಳ ದಾಸ್ಯಕ್ಕೆ ಒಳಪಡಿಸಲು ಕಾರಣ ಇಲ್ಲಿನ ರಾಜ ಮಹಾರಾಜರು, ಮೇಲ್ವರ್ಗದ ಶ್ರೀಮಂತ ವ್ಯಾಪಾರಿಗಳು ಈಸ್ಟ್ ಇಂಡಿಯಾ ಕಂಪನಿಗೆ ರತ್ನಗಂಬಳಿ ಹಾಕಿ ಸ್ವಾಗತಿಸಿದ್ದು ಎನ್ನುವುದು ಅಳಿಸಲಾಗದ ಇತಿಹಾಸ. ಈ ದಾಸ್ಯದಿಂದ ವಿಮೋಚನೆ ಹೊಂದಿದ ಭಾರತ ತಾನು ಕಳೆದುಕೊಂಡ ಸಂಪನ್ಮೂಲಗಳನ್ನು ಮತ್ತು ನೈಸರ್ಗಿಕ ಆಸ್ತಿಯನ್ನು ಮರಳಿ ಗಳಿಸಲು ಐದಾರು ದಶಕಗಳೇ ಬೇಕಾದವು ಎನ್ನುವುದು ವಾಸ್ತವ.

ಈ ಮರಳಿ ಪಡೆಯುವ ಪ್ರಕ್ರಿಯೆಯಲ್ಲೇ ದೇಶದ ಕೋಟ್ಯಂತರ ಜನತೆಗೆ ಬದುಕು ಕಟ್ಟಿಕೊಳ್ಳಲು ಸೂರು ಒದಗಿಸಿದ ಸಾರ್ವಜನಿಕ ಉದ್ದಿಮೆಗಳು ಸ್ಥಾಪನೆಯಾಗಿದ್ದು ಸಮಕಾಲೀನ ಇತಿಹಾಸ. ಈಗ ಈ ಸಾರ್ವಜನಿಕ ಉದ್ದಿಮೆಗಳು ಒಂದೊಂದಾಗಿ ಕೈಜಾರುತ್ತಿವೆ. ಕರ್ನಾಟಕದ ಪ್ರತಿಷ್ಠಿತ ಸಾರ್ವಜನಿಕ ಉದ್ದಿಮೆಗಳು ಮತ್ತು ಬ್ಯಾಂಕುಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವುದನ್ನು ಗಮನಿಸುತ್ತಲೇ ಇದ್ದೇವೆ.

ಸಾರಿಗೆ, ಸಂಪರ್ಕ, ಇಂಧನ, ಹಣಕಾಸು, ಸರಕು ಉತ್ಪಾದನೆ, ಕೃಷಿ ಉತ್ಪಾದನೆ, ಹೈನುಗಾರಿಕೆ ಈ ಎಲ್ಲ ಕ್ಷೇತ್ರಗಳಲ್ಲಿ ದುಡಿದ ಕೋಟ್ಯಂತರ ಜೀವಗಳ ಬೆವರಿನ ಹನಿಗಳನ್ನು ನಾವು ಚಲಿಸುವ ರೈಲುಗಳಲ್ಲಿ, ಸಾರ್ವಜನಿಕ ಉದ್ದಿಮೆಗಳ ಬೃಹತ್ ಕಟ್ಟಡಗಳಲ್ಲಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ, ಬ್ಯಾಂಕು ಮತ್ತು ವಿಮಾ ವಲಯದ ಫಲಕಗಳಲ್ಲಿ, ದೂರ ಸಂಪರ್ಕದ ತಂತುಗಳಲ್ಲಿ ಕಾಣದೆ ಹೋದರೆ ನಮ್ಮಷ್ಟು ಕೃತಘ್ಞರು ಮತ್ತಾರೂ ಇರಲಾರರು. ಹೌದು ನಾವು ಇದನ್ನು ಮಾನ್ಯ ಮಾಡುತ್ತಿದ್ದೇವೆ.

ಆದರೆ ಈ ಪ್ರತಿಯೊಂದು ಕ್ಷೇತ್ರದ, ವಲಯದ ಉದ್ದಿಮೆಗಳು ಒಂದೊಂದಾಗಿ ನಮ್ಮ ಕೈಜಾರಿ ಮತ್ತದೇ ಉದ್ಯಮಿಗಳ ಪಾಲಾಗುತ್ತಿರುವುದನ್ನು ಕಂಡೂ ಕಾಣದಂತೆ ನಮ್ಮ ಹಿತವಲಯಗಳಲ್ಲಿ ವಿರಮಿಸುತ್ತಿದ್ದೇವೆ. ಇಂದಿನ ಭಾರತದ ಯುವ ಪೀಳಿಗೆಯಲ್ಲಿ ಹರಿಯುತ್ತಿರುವುದೇ ಈ ಸಾರ್ವಜನಿಕ ಉದ್ದಿಮೆಗಳ ಮತ್ತು ಈ ಉದ್ದಿಮೆಗಳನ್ನು ಕಟ್ಟಿ ಬೆಳೆಸಿದ ಕೋಟ್ಯಂತರ ಕಾರ್ಮಿಕರ ನೆತ್ತರು ಮತ್ತು ಬೆವರು ಎನ್ನುವುದನ್ನು ಡಿಜಿಟಲ್ ಯುಗದ “ ಶತಮಾನದ ಮಕ್ಕಳು ” ಅರ್ಥಮಾಡಿಕೊಳ್ಳಬೇಕಿದೆ. ಅವರಿಗೆ ಅರ್ಥಮಾಡಿಸುವ ಜವಾಬ್ದಾರಿ ಇದರ ಮೂಲ ಫಲಾನುಭವಿಗಳ ಮೇಲಿದೆ.

ದುರಂತ ಎಂದರೆ ಈ ಫಲಾನುಭವಿಗಳು ತಮಗೆ ಅನ್ನ ನೀಡಿದ ನೆಲೆಯನ್ನೇ ಮರೆತು ನವ ಉದಾರವಾದದ ಕರಾಳ ಬಾಹುಗಳಲ್ಲಿ ವಿರಮಿಸುತ್ತಿದ್ದಾರೆ. ಕೋವಿದ್ 19 ಸಂದರ್ಭದ ವಲಸೆ ಕಾರ್ಮಿಕರ ಬವಣೆಯೂ ಹಿತವಲಯದ ಮಧ್ಯಮ ವರ್ಗಗಳ ಕಣ್ತೆರೆಸಿಲ್ಲ ಎನ್ನುವುದು ದುರಂತ.

ಇದು ಒಂದು ಸಹಜ ಪ್ರಕ್ರಿಯೆ ಎನ್ನುವಂತೆ ಆಳುವ ವರ್ಗಗಳ ಎಲ್ಲ ನೀತಿಗಳನ್ನೂ ಅಪ್ಪಿಕೊಳ್ಳಲು ಸಿದ್ದರಾಗುತ್ತಿದ್ದಾರೆ. ಈ ನಡುವೆ ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು, ಕೂಲಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಮತ್ತು “ ಪ್ರಜ್ಞಾವಂತ ” ನಾಗರಿಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ಕಾರ್ಮಿಕ ನೀತಿಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಇದರ ಒಂದು ಹೆಜ್ಜೆ ನವಂಬರ್ 26ರ ಸಾರ್ವತ್ರಿಕ ಮುಷ್ಕರ.

ಕಾಕತಾಳಿಯವೇನೋ ಎನ್ನುವಂತೆ ಈ ದಿನ ಎರಡು ಕಾರಣಗಳಿಗಾಗಿ ಮಹತ್ವ ಪಡೆಯುತ್ತದೆ. ಮೊದಲನೆಯದು ಇದು ಸಂವಿಧಾನ ದಿನ. ಅಂದರೆ ರಾಜಕೀಯ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವ ಮೂಲಕ ಸಮಾನತೆ, ಭ್ರಾತೃತ್ವ ಮತ್ತು ಸೌಹಾರ್ದತೆಯ ಮೂಲಕ ಸಮ ಸಮಾಜವನ್ನು ಕಟ್ಟುವ ಕನಸು ಸಾಕಾರಗೊಳಿಸಲು ಭಾರತದ ಸಂವಿಧಾನವನ್ನು ಅಂಗೀಕರಿಸಲಾದ ದಿನ.

ಈ ಮೂರು ಸ್ವಾತಂತ್ರ್ಯಗಳಲ್ಲಿ ಒಂದು ಇಲ್ಲದೆ ಹೋದರೂ ನಮ್ಮ ಕನಸು ನನಸಾಗುವುದಿಲ್ಲ ಎಂಬ ಅಂಬೇಡ್ಕರ್ ಅವರ ಮಾತುಗಳು ಈಗ ನಮಗೆ ಇನ್ನೂ ಹೆಚ್ಚು ಪ್ರಸ್ತುತ ಎನಿಸಬೇಕಲ್ಲವೇ ? ಏಕೆಂದರೆ ಈ ಮೂರೂ ಸ್ವಾತಂತ್ರ್ಯಗಳ ಪರಿಕಲ್ಪನೆಯನ್ನೇ ಅಳಿಸಹಾಕುವಂತಹ ಕರಾಳ ಶಾಸನಗಳ ಪರ್ವ ನಮ್ಮೆದುರು ಬೃಹತ್ ಬಂಡೆಯಂತೆ ನಿಂತಿದೆ.

ಎರಡನೆಯ ಕಾರಣ ಭಾರತದ ಅಖಂಡತೆ ಮತ್ತು ಏಕತೆಗೆ ಧಕ್ಕೆ ಉಂಟುಮಾಡುವಂತಹ ಮುಂಬೈ ಭಯೋತ್ಪಾದಕ ದಾಳಿ ನಡೆದದ್ದು ಇದೇ ದಿನ, 2008ರಲ್ಲಿ. ನಮಗೆ ನಾವೇ ಅರ್ಪಿಸಿಕೊಂಡ ಸಂವಿಧಾನವನ್ನು ಸ್ವತಃ ನಾವೇ ಅಲಕ್ಷಿಸಿದ್ದರಿಂದಲೇ 26/11 ನಡೆಯಲು ಸಾಧ್ಯವಾಯಿತು ಎನ್ನುವ ಪ್ರಜ್ಞೆ ನಮ್ಮಲ್ಲಿರಬೇಕು.

ಕಳೆದ ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣ, ಮತಾಂಧತೆ ಮತ್ತು ಮತೀಯ ಉಗ್ರವಾದದ ಬೆಳವಣಿಗೆಯನ್ನು ನೋಡಿದರೆ ಸಂವಿಧಾನ ಕರ್ತೃಗಳ ಮೂಲ ಆಶಯಗಳನ್ನು ನಾವು ಎಷ್ಟು ವ್ಯವಸ್ಥಿತವಾಗಿ ಮಣ್ಣುಪಾಲು ಮಾಡಿದ್ದೇವೆ ಎನ್ನುವುದನ್ನೂ ಗ್ರಹಿಸಬಹುದು. ನಮ್ಮ “ ಆತ್ಮ ನಿರ್ಭರತೆ ” ವ್ಯಕ್ತವಾಗಬೇಕಿರುವುದು ಇಲ್ಲಿ. ಭಾರತದ ಬಹುಸಂಸ್ಕೃತಿಯ ಚೌಕಟ್ಟಿನಲ್ಲಿ ಶತಮಾನಗಳಿಂದ ಇದ್ದ ಸೌಹಾರ್ದತೆಯನ್ನು ಅಡ್ಡಡ್ಡಲಾಗಿ ಸೀಳುವುದರಲ್ಲಿ ಈ ಸಮಾಜೋ ಸಾಂಸ್ಕೃತಿಕ ರಾಜಕೀಯ ಬೆಳವಣಿಗೆಗಳು ಯಶಸ್ವಿಯಾಗಿವೆ.

ಹಾಗೆಯೇ ಮೇಲ್ನೋಟಕ್ಕೆ ಕಾಣಬಹುದಾಗಿದ್ದ ಸೌಹಾರ್ದತೆಯ ನಡುವೆಯೇ ನಮ್ಮ ನಡುವೆ ಇದ್ದ ಜಾತಿ ಶ್ರೇಷ್ಠತೆಯ ವ್ಯಸನ ಮತ್ತು ಜಾತಿ ತಾರತಮ್ಯ, ದೌರ್ಜನ್ಯ ಮತ್ತು ಮೇಲ್ಜಾತಿಯ ಕ್ರೌರ್ಯವನ್ನು ಅಳಿಸಿ ಹಾಕುವ ಬದಲು ಮತ್ತಷ್ಟು ಗಟ್ಟಿಗೊಳಿಸುತ್ತಿರುವುದನ್ನೂ ಗಮನಿಸಬೇಕಿದೆ. 21ನೆಯ ಶತಮಾನದ ಮೂರನೆಯ ದಶಕವನ್ನು ಪ್ರವೇಶಿಸುತ್ತಿರುವ ಸಂದರ್ಭದಲ್ಲೂ ನಾವು ಅತ್ಯಾಚಾರಕ್ಕೊಳಗಾದ ಹೆಣ್ಣುಮಗುವಿನ ಶವದ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ನೋಡಿದರೆ ನಮ್ಮೊಳಗಿನ ಕ್ರೌರ್ಯದ ಫಸಲು ಇನ್ನೂ ಹಸನಾಗಿದೆ ಎನಿಸುವುದಿಲ್ಲವೇ ?

ಅನ್ನ ಬೆಳೆಯುವ ರೈತನ ಆಕ್ರಂದನವನ್ನು ಗ್ರಾಂಥಿಕ ಕ್ರೌರ್ಯದ ಮೂಲಕ (ಕರಾಳಶಾಸನಗಳನ್ನು ಹೀಗೆ ಕರೆಯಬಹುದು) ಎದುರಿಸುವ ಒಂದು ವಿಕೃತ ವ್ಯವಸ್ಥೆಯಲ್ಲಿ ನಾವು ನಾಳಿನ ಯೋಚನೆ ಮಾಡುತ್ತಿದ್ದೇವೆ. ಇಲ್ಲಿಯೇ ನಾವು ಮನುಸ್ಮೃತಿಯ ಮರುಹುಟ್ಟನ್ನು ಗುರುತಿಸಬೇಕಿದೆ. ಮನು ಎಂಬ ಹೆಸರಿನ ಋಷಿ ತನ್ನ ಕಾಲಘಟ್ಟದಲ್ಲಿದ್ದ ಉತ್ಪಾದನಾ ಸಂಬಂಧಗಳಿಗೆ ಅನುಗುಣವಾಗಿ ಸಮಾಜದ ನಿರ್ವಹಣೆಗೆ ಸಂಹಿತೆಗಳನ್ನು ರಚಿಸಿದ್ದ. ಆಧುನಿಕ ಭಾರತಕ್ಕೆ ಇದರ ಅವಶ್ಯಕತೆ ಇಲ್ಲ ಎನ್ನುವ ಕಾರಣಕ್ಕಾಗಿಯೇ ಅಂಬೇಡ್ಕರ್ ಅದನ್ನು ಸಾಂಕೇತಿಕವಾಗಿ ಸುಟ್ಟುಹಾಕಿದ್ದರು.

ಇಂದು ಮನುಸ್ಮೃತಿಯ ಅತ್ಯಾಧುನಿಕ ಅವತಾರವನ್ನು ಹಥ್ರಾಸ್ ಘಟನೆಯಲ್ಲಿ, ವಿದ್ಯುನ್ಮಾನ ಸುದ್ದಿಮನೆಗಳಲ್ಲಿ, ಶಾಸಕಾಂಗ ಸಭೆಗಳಲ್ಲಿ, ಸಂಸತ್ ಭವನದಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಮತ್ತು ಕೆಲವು ಸಂದರ್ಭಗಳಲ್ಲಿ ನ್ಯಾಯ ವ್ಯವಸ್ಥೆಯ ಅಂಗಳದಲ್ಲೂ ಕಾಣುತ್ತಿದ್ದೇವೆ. ಶೋಷಿತ ಸಮುದಾಯಗಳು ಮತ್ತು ಶ್ರಮಜೀವಿ ವರ್ಗಗಳು, ಈ ಎರಡರ ನಡುವೆ ಇರುವ ರೇಖೆ ಬರಿಗಣ್ಣಿಗೆ ಕಾಣಿಸದಷ್ಟು ತೆಳುವಾಗಿದೆ.

26/11ರಂದು ನಡೆದ ದಾಳಿ ದೇಶದ ಜನತೆಯನ್ನು ಕೆಲವು ವರ್ಷಗಳ ಕಾಲ ತಲ್ಲಣಗೊಳಿಸಿತ್ತು. ಆದರೆ ಇಂದು ನವ ಉದಾರವಾದದ ದಾಳಿ ದೇಶದ ಬಹುಸಂಖ್ಯೆಯ ಜನತೆಯನ್ನು ತಲ್ಲಣಗೊಳಿಸುತ್ತಿದೆ. ಈ ಗ್ರಾಂಥಿಕ ದಾಳಿಗೆ ಕೋಟ್ಯಂತರ ಶ್ರಮಜೀವಿಗಳು ತತ್ತರಿಸಿಹೋಗಲಿದ್ದಾರೆ, ಬೀದಿ ಪಾಲಾಗಲಿದ್ದಾರೆ. ನವ ಭಾರತದ ನಿರ್ಮಾಣಕ್ಕೆ ಇದು ಅತ್ಯವಶ್ಯ ಎನ್ನುವುದಾರೆ ಆ ನವಭಾರತದ ನವ ಸ್ವರೂಪವನ್ನು ನಾವು ತಿರಸ್ಕರಿಸಬೇಕಾಗುತ್ತದೆ.

ಕಾರ್ಮಿಕ ಕಾನೂನುಗಳನ್ನು ಸಂಕುಚಿತಗೊಳಿಸುವ ಮೂಲಕ ದುಡಿಮೆಯ ಕೈಗಳನ್ನು ಮತ್ತೊಮ್ಮೆ ಔದ್ಯಮಿಕ ಸಂಕೋಲೆಗಳಲ್ಲಿ ಬಂಧಿಸಲು ಹೊರಟಿರುವ ಭಾರತದ ಆಳುವ ವರ್ಗಗಳು, ಭಾರತದ ಬೆನ್ನೆಲುಬು ಎಂದೇ ಹೇಳಲಾಗುವ ಕೃಷಿ ಕ್ಷೇತ್ರವನ್ನೂ ಉದ್ಯಮಪತಿಗಳಿಗೆ ಪರಭಾರೆ ಮಾಡುವ ಮೂಲಕ ಶೇ 60ರಷ್ಟು ಜನಸಂಖ್ಯೆಯ ಮೇಲೆ ದಾಳಿ ನಡೆಸುತ್ತಿದೆ.

ದೇಶದ ಶೈಕ್ಷಣಿಕ ಸಂಪತ್ತನ್ನೂ ಸಹ ಬಹುತ್ವದ ನೆಲೆಗಳಿಂದ ದೂರ ಮಾಡಿ, ವರ್ಣಾಶ್ರಮ ಧರ್ಮವನ್ನು ಪುನರ್ ಸ್ಥಾಪಿಸಿ, ಇಡೀ ಶಿಕ್ಷಣ ವ್ಯವಸ್ಥೆಯನ್ನು ಕಾರ್ಪೋರೇಟ್ ಉದ್ಯಮಿಗಳಿಗೆ ವಹಿಸುವ ಸೂಚನೆಯನ್ನು ಹೊಸ ಶಿಕ್ಷಣ ನೀತಿಯಲ್ಲಿ ಕಾಣಬಹುದಾಗಿದೆ. ಸಂಸತ್ತಿನಲ್ಲಿ ಚರ್ಚೆಯಿಲ್ಲದೆ ಅನುಮೋದನೆಯಾಗಿರುವ ಈ ಕರಾಳ (!) ಶಾಸನಗಳಿಗೂ, ಎಲ್ಲ ರಾಜಕೀಯ ಪಕ್ಷಗಳೂ ಅನುಮೋದಿಸುವ ಯುಎಪಿಎ ಮುಂತಾದ ಕರಾಳ ಶಾಸನಗಳಿಗೆ ವ್ಯತ್ಯಾಸವೇನಾದರೂ ಇದ್ದರೆ ಅದು ಗ್ರಾಂಥಿಕ ಮಾತ್ರ. ಎರಡೂ ಸಹ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಅಸ್ತ್ರಗಳೇ ಆಗಿವೆ.

ಈ ಎರಡು ಅಸ್ತ್ರಗಳ ವಿರುದ್ಧ ಸ್ವಾವಲಂಬಿ ಭಾರತಕ್ಕೆ ಬದ್ಧರಾಗಿರುವ ಪ್ರತಿಯೊಬ್ಬ ನಾಗರಿಕನೂ ದನಿ ಎತ್ತಬೇಕಿದೆ. ದೇಶದ ಬಹುಸಂಖ್ಯೆಯ ಜನರ ಬದುಕಿಗೆ ಅವಶ್ಯವಾದ ಸ್ವಾವಲಂಬನೆಯನ್ನು ಬಲಿಕೊಟ್ಟು, ಬೆರಳೆಣಿಕೆಯಷ್ಟು ಶ್ರೀಮಂತರ ಸ್ವಾವಲಂಬನೆಗೆ ಅವಕಾಶ ಮಾಡಿಕೊಡುವ “ ಆತ್ಮನಿರ್ಭರ ” ಭಾರತ ಭಾರತವನ್ನು ಮತ್ತೊಂದು ರೀತಿಯ ದಾಸ್ಯಕ್ಕೆ ದೂಡುತ್ತದೆ.

ಭೌಗೋಳಿಕವಾಗಿ ಭಾರತ ಸಂಕೋಲೆಗಳಿಂದ ಮುಕ್ತವಾಗಿಯೇ ಇದ್ದರೂ, ಬೌದ್ಧಿಕವಾಗಿ ಈ ದೇಶದ ಕೋಟ್ಯಂತರ ಶೋಷಿತರು, ಅವಕಾಶವಂಚಿತರು, ಅಂಚಿಗೆ ತಳ್ಳಲ್ಪಟ್ಟಿರುವವರು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಇಂದಿಗೂ ಹೋರಾಡುತ್ತಿರುವ ದಮನಿತರು ಕಾರ್ಪೋರೇಟ್ ದಾಸ್ಯಕ್ಕೆ ಒಳಗಾಗಲಿದ್ದಾರೆ. ಇದು ನಮ್ಮ ಮುಂದಿರುವ ಅಪಾಯ.

ಒಂದು ಸುಂದರ ಸೌಧ ನಿರ್ಮಾಣವಾಗುತ್ತಿದೆ ಒಂದು ಅಂಗುಲ ಭೂಮಿ ಕೊಟ್ಟರೆ ತಪ್ಪೇನಿಲ್ಲ ಎಂದು ಹೇಳುವ ಕಾಲ ಇದಲ್ಲ. ಈ ಸೌಧದ ಅಡಿಪಾಯಕ್ಕೆ ಭೂಮಿ ಕೊಟ್ಟವರ ಎಲುಬುಗಳನ್ನೇ ಅಸ್ತಿಭಾರದಂತೆ ಬಳಸಲಾಗುತ್ತದೆ. ಇದು ನವ ಉದಾರವಾದದ ನೀತಿ. ಮೂರು ದಶಕಗಳ ನವ ಉದಾರವಾದಿ ನೀತಿಯ ಪರಿಣಾಮ ಈಗಾಗಲೇ ನಾವು ನೆಲೆ ಕಳೆದುಕೊಂಡಿದ್ದೇವೆ.

ಈಗ ಸಮಾಜೋ ಸಾಂಸ್ಕೃತಿಕ ನೆಲೆಗಳೂ ಧ್ವಂಸವಾಗುತ್ತಿವೆ. ಮತಾಂಧತೆ, ಜಾತಿ ಪ್ರಜ್ಞೆ ಮತ್ತು ಬಂಡವಾಳದ ಮೈತ್ರಿಯ ಎದುರು ಈ ದೇಶದ ದುಡಿಯುವ ವರ್ಗಗಳು ಹೋರಾಡಬೇಕಿದೆ. ಹಾಗಾಗಿಯೇ ನವಂಬರ್ 26ರ ಸಾರ್ವತ್ರಿಕ ಮುಷ್ಕರ ನಿರ್ಣಾಯಕವಾಗಲಿದೆ.

ಕೊನೆಯ ಹನಿ : ಬ್ರಿಟೀಷರು, ಫ್ರೆಂಚರು, ಡಚ್ಚರು ಮತ್ತು ಪೋರ್ಚುಗೀಸರು ಭಾರತದ ಸಂಪತ್ತನ್ನು ಕೊಳ್ಳೆಹೊಡೆಯಲು ಪ್ರವೇಶಿಸಿದಾಗ ಪ್ರತಿಯೊಂದು ಸಂಸ್ಥಾನದ ರಾಜ/ಸಾಮಂತರೂ ಯೋಚಿಸಿದ್ದು “ ಪಕ್ಕದ ಸಂಸ್ಥಾನ ಅವರ ಪಾಲಾಗಿದೆ ನಾನು ಸುರಕ್ಷಿತ ” ಎಂದು. ನಂತರ ನಡೆದದ್ದು ಇತಿಹಾಸ. ಈಗ ಭಾರತದ ದುಡಿಯುವ ವರ್ಗಗಳಲ್ಲೂ ಇದೇ ರೀತಿಯ “ ನಮ್ಮ ದುಡಿಮೆಯ ವಲಯ/ಕ್ಷೇತ್ರ/ಸಂಸ್ಥೆ ಸುರಕ್ಷಿತವಾಗಿದೆ ” ಎನ್ನುವ ಮನೋಭಾವ ಇದೆ. ಮತ್ತೊಮ್ಮೆ ದಾಸ್ಯಕ್ಕೊಳಗಾಗುವ ಮುನ್ನ,,,,,,,,,ಎಚ್ಚೆತ್ತುಕೊಳ್ಳಲು ನವಂಬರ್ 26ರ ದನಿಗೆ ದನಿಗೂಡಿಸೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending