ಸಿನಿ ಸುದ್ದಿ
ಕೆಜಿಎಫ್ ಒಂದು ಅನನ್ಯ ಅನುಭವ..!
ಕೆಜಿಎಫ್ ಬರಿಗಣ್ಣಿಗೆ ಮಾತ್ರ ಕಾಣುವ, ಕಿವಿಗಳಿಗೆ ಮಾತ್ರ ಕೇಳಿಸುವ ಸಿನಿಮಾ ಅಲ್ಲ. ಕೆಜಿಎಫ್ ಒಂದು ಅನನ್ಯ ಅನುಭವ. ಅದು ಬೇರೆ ಬೇರೆ ರೂಪಗಳಲ್ಲಿ ನಿಮ್ಮನ್ನು ಮುಟ್ಟುತ್ತಿರುತ್ತದೆ, ಒಳಗೊಳಗೆ ಪ್ರವಹಿಸುತ್ತಿರುತ್ತದೆ. ನಿಸ್ಸಂಶಯವಾಗಿ ಕೆಜಿಎಫ್ ಒಂದು ಮಹಾಕಾವ್ಯ. ಪ್ರಶಾಂತ್ ನೀಲ್ ಹೊಸದೇನನ್ನೋ ಮಾಡಿದ್ದಾರೆ, ಅದನ್ನು ನೀವು ನಿಮಗೆ ಸಮಾಧಾನವಾಗುವಂತೆ ವಿವರಿಸಲಾರಿರಿ. ಮೊದಲೇ ಹೇಳಿದಂತೆ ಇದೊಂದು ಅನುಭವ, ಅನುಭವಿಸಿಯೇ ತೀರಬೇಕು.
ಯಶ್ ಈ ಇಡಿ ಸಿನಿಮಾವನ್ನು ತಮ್ಮ ಭುಜದ ಮೇಲೆ ಹೊತ್ತು ಸಾಗಿದ್ದಾರೆ. ಅವರು ಪ್ರತಿಫ್ರೇಮ್ ನಲ್ಲೂ ಕಣ್ಣಿಗೆ ಹಬ್ಬ. ಆಗಾಗ ನಿಮ್ಮ ಕೈಗಳ ಮೇಲಿನ ರೋಮಗಳು ಎದ್ದುನಿಂತರೆ ಅದಕ್ಕೆ ಯಶ್ ಕಾರಣ. ಈ ಸಿನಿಮಾದಲ್ಲಿ ಯಶ್ ಹೊರತಾಗಿ ಇನ್ನೊಬ್ಬರನ್ನು ಆ ಪಾತ್ರದಲ್ಲಿ ಕಲ್ಪಿಸಿಕೊಳ್ಳಲಾಗದು. ಯಶ್ ಈ ಸಿನಿಮಾಗಾಗಿಯೇ ಕಡೆದಿಟ್ಟ ವಿಗ್ರಹ. ಅವರು ಇಲ್ಲಿ ಬರಿಯ ಹೀರೋ ಮಾತ್ರವಲ್ಲ ಸೂಪರ್ ಹೀರೋ, ಥೇಟ್ ನಮ್ಮ ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್ ಗಳ ಹಾಗೆ. ಸೂಪರ್ ಹೀರೋಗಳಿಗಾದರೂ ನಾಲ್ಕು ಏಟು ಬೀಳಬಹುದು, ಕೆಳಗೆ ಬೀಳಬಹುದು. ರಾಕಿ ಭಾಯ್ ನಮ್ಮ ಫ್ಯಾಂಟಸಿ ಜಗತ್ತಿನ ದೊರೆ, ಅವನಿಂದ ಅಸಾಧ್ಯವಾದದ್ದು ಏನೂ ಇಲ್ಲ, ಅವನನ್ನು ಯಾರಿಂದಲೂ ಮಣಿಸಲಾಗದು.
ಪ್ರಶಾಂತ್ ನೀಲ್ ಗೆ ಆಕ್ಷನ್ ಇಷ್ಟವಿರಬಹುದು. ಆದರೆ ತೆಲುಗು ಸಿನಿಮಾಗಳ ಹಾಗೆ ಭೀಬತ್ಸ ದೃಶ್ಯಗಳು ಇಲ್ಲಿಲ್ಲ. ಕ್ರೌರ್ಯ ಕಣ್ಣಿಗೆ ರಾಚಿಸಿದರೂ ಅದು ನಮ್ಮ ಎದೆಗೆ ಇಳಿಯುವುದನ್ನು ತಡೆದುಬಿಡುತ್ತಾರೆ ಪ್ರಶಾಂತ್. ಒಬ್ಬ ಸಣ್ಣ ಹುಡುಗನ ದಾರುಣ ಕೊಲೆಯೊಂದನ್ನು ಯಶ್ ಅವರ ಅದ್ಭುತ ರಿಯಾಕ್ಷನ್ ಮತ್ತು ಒಂದಿಡೀ ಸಮೂಹದ ದೊಡ್ಡ ನಿಟ್ಟುಸಿರಿನೊಂದಿಗೆಯೇ ತೋರಿಸಿಬಿಡುತ್ತಾರೆ ಅವರು. ನೋಡಿ ನಿಟ್ಟುಸಿರಾಗೋ ಸರದಿ ನಮ್ಮದಷ್ಟೆ. ನಿರ್ದೇಶಕರ ತಂಡ ಅಸಾಧ್ಯ ಕೆಲಸಗಳನ್ನು ಮಾಡಿದೆ. ಕಥೆಗೆ ಸಂಬಂಧಿಸಿದ ರಿಸರ್ಚ್ ಗಳಿಂದ ಹಿಡಿದು ಒಂದೇ ಒಂದು ದೃಶ್ಯವೂ ತರ್ಕಹೀನವಾಗದಂತೆ, ಬಾಲಿಷ ಎನಿಸದಂತೆ, ಕ್ಲೀಷೆಯಾಗದಂತೆ ಈ ತಂಡ ಪರಿಶ್ರಮ ವಹಿಸಿದೆ.
ಸಿನಿಮಾದ ಸ್ಕ್ರೀನ್ ಪ್ಲೇ ಈ ಹೊತ್ತಿನವರೆಗಿನ ಅದ್ಭುತ ಪ್ರಯೋಗಗಳಲ್ಲಿ ಒಂದು. ಪ್ರಶಾಂತ್ ನೀಲ್ ಕಸುಬುದಾರಿಕೆಗೆ ಜವಾಬೇ ಇಲ್ಲ. ಈ ಸ್ಕ್ರೀನ್ ಪ್ಲೇಗೆ ನಿಜವಾದ ಆತ್ಮವನ್ನು ತುಂಬಿರುವ ಸಂಕಲನಕಾರ ಶ್ರೀಕಾಂತ್ ತನ್ನ ಕತ್ತರಿಯನ್ನೂ ಒಂದು ಪಾತ್ರವಾಗಿಸಿದ್ದಾನೆ. ಎರಡನೇ ಚಾಪ್ಟರಿನ ಒಂದೆರಡು ಸೀನ್ ಗಳನ್ನು ಕ್ಲೈಮಾಕ್ಸ್ ಗೂ ಮುನ್ನ ಕಾಣಿಸುವ ಎದೆಗಾರಿಕೆ ಇಲ್ಲಿ ಪ್ರದರ್ಶನಗೊಂಡಿದೆ. ಒಂದೇ ಒಂದು ಕ್ಷಣ ನೀವು ಅತ್ತಿತ್ತ ತಿರುಗದಂತೆ ಮಾಡುವ ಕಲೆಗಾರಿಕೆ ಇಲ್ಲಿ ಸಿದ್ಧಿಸಿದೆ.
ಸಿನಿಮಾದ ಛಾಯಾಗ್ರಹಣ ಈ ದೇಶಕ್ಕೇ ಅಪರೂಪದ್ದು. ದೃಶ್ಯಗಳನ್ನು ನ ಭೂತೋ ಎನ್ನುವಂತೆ ಕಟ್ಟಿಕೊಡುವಲ್ಲಿ ಭುವನ್ ಗೌಡ ಅವರಿಗಿರುವ ರಾಕ್ಷಸ ಹಸಿವು ಎದ್ದುಕಾಣುತ್ತದೆ. ಪ್ರತಿಯೊಂದು ಫ್ರೇಮನ್ನೂ ಅವರು ತಾವೇ ಬರೆದ ಚಿತ್ರದಂತೆ ಸೆರೆಹಿಡಿದಿದ್ದಾರೆ. ಸೆಕೆಂಡ್ ಹಾಫ್ ನ ಪ್ರತಿಯೊಂದು ದೃಶ್ಯವೂ ದೃಶ್ಯಕಾವ್ಯಗಳೇ. ಪ್ರತಿ ಫ್ರೇಮ್ ನಿಮ್ಮ ಜತೆ ಮಾತಿಗೆ ಇಳಿಯುತ್ತದೆ.
ರವಿ ಬಸ್ರೂರು ಕೆಜಿಎಫ್ ನ ಮತ್ತೊಬ್ಬ ಹೀರೋ. ಅವರ ಹಿನ್ನೆಲೆ ಸಂಗೀತ ಸಿನಿಮಾದಿಂದ ಒಂದು ಮಿಲಿಮೀಟರ್ ಕೂಡ ಆಚೆ ಹೋಗಿ ನಿಲ್ಲುವುದಿಲ್ಲ. ಪ್ರತಿ ದೃಶ್ಯಗಳ ಜತೆ ಬ್ಲೆಂಡ್ ಆಗಿ ವಿಶೇಷ ಅನುಭೂತಿ ಉಕ್ಕಿಸುತ್ತದೆ. ಹಾಡುಗಳಿಗೂ ಇದೇ ಮಾತು ಹೇಳಬೇಕು.
ಶಿವು ಕುಮಾರ್ ಎಂಬ ಆರ್ಟ್ ಡೈರೆಕ್ಟರ್ ಬಗ್ಗೆ ಏನು ಹೇಳಿದರೂ ಕಡಿಮೆಯೇ. ಸೆಕೆಂಡ್ ಹಾಫ್ ನಲ್ಲಿ ಅವರು ಹಾಕಿರುವ ಸೆಟ್ ಗಳನ್ನು ನೋಡಿ ಬೇರೆ ಸಿನಿಮಾ ನಿರ್ಮಾಪಕದ ಎದೆ ನಡುಗಿ ಹೋಗಿರಬಹುದು. ಮಾರಿ ಪೂಜೆಯ ಸೆಟ್ ಅಂತೂ ಅಸಾಧಾರಣ. ಒಮ್ಮೆ ಎದ್ದು ನಿಂತು ಕ್ಲಾಪ್ ಮಾಡಬೇಕೆನಿಸುತ್ತದೆ. ಶಿವು ಮತ್ತು ಅವರ ಹುಡುಗರ ತಂಡ ಕೆಜಿಎಫ್ ಕನಸಿನ ಬಹುಮಖ್ಯ ಪಾತ್ರಧಾರಿಗಳು.
ಯಶ್ ಹೊರತಾಗಿ ಈ ಸಿನಿಮಾದಲ್ಲಿ ಸಾಕಷ್ಟು ಪಾತ್ರಗಳು ತೆರೆಯ ಮೇಲೆ ಅಪ್ಪಳಿಸುತ್ತವೆ. ಅವುಗಳಲ್ಲಿ ಕೆಲವು ಮುಂದಿನ ಚಾಪ್ಟರ್ ಗೆಂದೇ ಮೀಸಲಾಗಿಟ್ಟ ಟ್ರೇಲರ್ ಗಳು! ಎಲ್ಲರೂ ನಿರ್ದೇಶಕರ ನಟರುಗಳೇ! ನಿಮ್ಮ ಕಣ್ಣುಗಳಿಂದಲೇ ಹೆಚ್ಚು ಮಾತಾಡಿ ಎಂದು ಪ್ರಶಾಂತ್ ನೀಲ್ ಈ ಪಾತ್ರಗಳಿಗೆ ಹೇಳಿದಂತಿದೆ. ಆ ಪಾತ್ರಗಳು ಚಾಚೂ ತಪ್ಪದೆ ಹಾಗೇ ಮಾಡಿವೆ. ಹಿರಿಯ ನಟ ಅನಂತ್ ನಾಗ್ ಸಿನಿಮಾದ ಘನತೆಯನ್ನು ಹೆಚ್ಚಿಸಿದ್ದಾರೆ. ಪ್ರಶಾಂತ್ ಹೆಚ್ಚುಗಾರಿಕೆ ಏನೆಂದರೆ ಸಾವಿರಾರು ಜೂನಿಯರ್ ಆಕ್ಟರ್ ಗಳಿಂದಲೂ ಅವರು ಆಕ್ಟಿಂಗ್ ಮಾಡಿಸಿದ್ದಾರೆ. ಜೂನಿಯರ್ ಗಳೂ ಪಳಗಿದ ನಟರಂತೆಯೇ ನಟಿಸಿದ್ದಾರೆ.
ಅತ್ಯುತ್ತಮ ಸಿನಿಮಾ, ನಿರ್ದೇಶನ, ಹೀರೋ, ಸಂಗೀತ, ಕಲಾ ನಿರ್ದೇಶನ, ಸಂಕಲನ ಹೀಗೆ ಕನಿಷ್ಠ 6 ವಿಭಾಗಗಳಲ್ಲಾದರೂ ಕೆಜಿಎಫ್ ಗೆ ಆಸ್ಕರ್ ಪ್ರಶಸ್ತಿ ಬರಲೇಬೇಕು. ಯಾಕೆಂದರೆ ಈ ಸಿನಿಮಾ ಸ್ಪರ್ಧೆ ನೀಡುತ್ತಿರುವುದು ಭಾರತೀಯ ಸಿನಿಮಾಗಳ ಜತೆಯಲ್ಲ, ಹಾಲಿವುಡ್ ಸಿನಿಮಾಗಳ ಜತೆ. ಸಿನಿಮಾದ ಕ್ರಾಫ್ಟ್ ಹಾಗಿದೆ. ಇದು ಬಾಹುಬಲಿಯನ್ನು ಮೀರಿಸುವ ಸಿನಿಮಾವೇ ಎಂದು ಯಾರಾದರೂ ಕೇಳಿದರೆ ನನ್ನ ಉತ್ತರ ಹೌದು ಎಂಬುದೇ ಆಗಿರುತ್ತದೆ.
ಕೆಜಿಎಫ್ ಗಿಂತ ಅದ್ಭುತವಾದ ಕನ್ನಡ ಅಥವಾ ಭಾರತೀಯ ಸಿನಿಮಾ ಬಂದಿಲ್ಲವೆಂದಲ್ಲ, ಬಂದಿವೆ. ಆದರೆ ಕೆಜಿಎಫ್ ಸಿನಿಮಾದ ಕ್ರಾಫ್ಟ್ ಹಿಂದೆಂದೂ ಬಂದಿರಲು ಸಾಧ್ಯವಿಲ್ಲ. ಇಷ್ಟೊಂದು ಪರಿಶ್ರಮ ಮತ್ತು ಕನಸುಗಳನ್ನು ತೊಡಗಿಸಿ ಮಾಡಿದ ಸಿನಿಮಾ ಇನ್ನೊಂದಿರಲು ಸಾಧ್ಯವಿಲ್ಲ. ಇಡೀ ತಂಡ ಸಿನಿಮಾವನ್ನು ಜೀವಿಸಿಬಿಟ್ಟಿದೆ ಎಂದರೆ ಅದು ಅತಿಶಯೋಕ್ತಿ ಅಲ್ಲ. ಕನ್ನಡ ಚಿತ್ರರಂಗವನ್ನು ಹೊಸ ದಾರಿಗೆ ಎಳೆದೊಯ್ದಿದ್ದಾರೆ ಪ್ರಶಾಂತ್ ಮತ್ತು ಯಶ್ ಜೋಡಿ. ಅವರೇ ಹೇಳಿದಂತೆ ಇದು ಅವರ ಕನಸು ಮಾತ್ರವಲ್ಲ, ನಮ್ಮೆಲ್ಲರ ಕನಸು. ನಮ್ಮ ಕನಸನ್ನು ಅವರು ನಿಜವಾಗಿಸಿದ್ದಾರೆ.
ಚಿತ್ರನಿರ್ಮಾಪಕ ವಿಜಯ್ ಕಿರಗಂದೂರು ಎಂಬ ಮಹಾಸಾಹಸಿಗೆ ಕೋಟಿಗಳಂತೂ ಹರಿದುಬರಲಿವೆ. ಆದರೆ ನಮ್ಮ ಕೋಟಿ ಕೋಟಿ ಚಪ್ಪಾಳೆಗಳು ಸಲ್ಲಲೇಬೇಕು.
ಸಿನಿಮಾ ಕಥೆ, ಸಂಭಾಷಣೆ, ಹೂರಣದ ಬಗ್ಗೆ ಏನನ್ನೂ ಹೇಳಿಲ್ಲ. ಹೇಳಬಾರದು ಕೂಡ. ಯಾಕೆಂದರೆ ಇಂಥ ಸಿನಿಮಾಗಳನ್ನು ಯಾವ ರಿವ್ಯೂ ಕೂಡ ಕೇಳದೇ ಹೋಗಿನೋಡಬೇಕು.
– ದಿನೇಶ್ ಕುಮಾರ್ ಎಸ್.ಸಿ. (ದಿನೂ)
ದಿನದ ಸುದ್ದಿ
ಮತ್ತೆ ತಾಯಿಯಾಗಬೇಕು : ನಟಿ ಸಮಂತಾ
ಸುದ್ದಿದಿನಡೆಸ್ಕ್:ಇತ್ತೀಚೆಗೆ ನಟಿ ಸಮಂತಾ ಅವರ ಕಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆ ಹೇಳಿಕೆಗಳ ಮೇಲೆ ನಾನಾ ರೀತಿಯ ಅನುಮಾನಗಳೂ ವ್ಯಕ್ತವಾಗಿವೆ.
ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಸದ್ಯ ಸಮಂತಾ ಸತತ ಚಿತ್ರಗಳಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಇತ್ತೀಚಿಗೆ ಸಮಂತಾ ಅವರ ವೆಬ್ ಸಿರೀಸ್ ವಿಚಾರಕ್ಕೆ ಸುದ್ದಿಯಾಗಿದ್ದರು. ನಟಿಯ ಇತ್ತೀಚಿನ ವೆಬ್ ಸಿರೀಸ್ ಸಿಟಾಡೆಲ್ ಸಖತ್ ಸುದ್ದಿಯಾಗಿದೆ. ಸದ್ಯ ಈ ವೆಬ್ ಸೀರೀಸ್ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ ಎಂದು ತಿಳಿದುಬಂದಿದೆ. ಈ ವೆಬ್ ಸರಣಿಯ ಪ್ರಚಾರದ ವೇಳೆ ಮಾಡಿದ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದರ ಭಾಗವಾಗಿ ಸಮಂತಾ ರಾಜ್ ಮತ್ತು ಡಿಕೆ ಸಂದರ್ಶನವೊಂದರಲ್ಲಿ ಹೇಳಿದ್ದು ದಿ ಫ್ಯಾಮಿಲಿ ಮ್ಯಾನ್ 2 ಚಿತ್ರೀಕರಣದ ವೇಳೆ ನಾನು ಹಲವು ಭಾವನೆಗಳಿಗೆ ಒಳಗಾಗಿದ್ದೆ ಎಂದು ಸಮಂತಾ ಹೇಳಿದ್ದಾರೆ. ಅಲ್ಲದೇ ಅವರ ನಿರ್ದೇಶನದಲ್ಲಿ ನಟಿಸುವುದು ಕಷ್ಟ ಎಂದಿದ್ದಾರೆ. ನಂತರ ಅದೇ ಸಂದರ್ಶನದಲ್ಲಿ ನಟಿ ಬೇರೆ ವಿಚಾರವನ್ನೂ ಹೇಳಿದ್ದಾರೆ.
ಹನಿ ಬನ್ನಿ ವೆಬ್ ಸರಣಿಯಲ್ಲಿ ತಾಯಿ ಪಾತ್ರದ ಬಗ್ಗೆ ಮಾತನಾಡುತ್ತಾ, ಅವರು ಸಂವೇದನಾಶೀಲ ಕಾಮೆಂಟ್ಗಳನ್ನು ಮಾಡಿದ್ದಾರೆ. ನನಗೆ ತಾಯಿಯಾಗುವ ಕನಸು ಇದೆ. ನಾನು ತಾಯಿಯಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ಇದಕ್ಕಾಗಿ ತಡವಾಗಿದೆ ಎಂದು ಅವರು ಭಾವಿಸುವುದಿಲ್ಲ. ನಾನು ಜೀವನದಲ್ಲಿ ತುಂಬಾ ಖುಷಿಯಾಗಿದ್ದೇನೆ ಎಂದು ಸಮಂತಾ ಹೇಳಿದ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ಸಮಂತಾ ಈ ಕಾಮೆಂಟ್ ಮಾಡಿದ ನಂತರ ಮತ್ತೊಮ್ಮೆ ಅವರ ಎರಡನೇ ಮದುವೆಯ ಸುದ್ದಿಗೆ ವೇಗ ಸಿಕ್ಕಿದೆ. ಈ ಹಿಂದೆ ರಾಜ್ ಹಾಗೂ ಡಿಕೆಶಿಯಲ್ಲಿ ರಾಜ್ ನನ್ನು ಪ್ರೀತಿಸುತ್ತಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಇದೀಗ ಸಮಂತಾ ಎರಡನೇ ಮದುವೆಯ ಸುದ್ದಿ ಮುನ್ನೆಲೆಗೆ ಬಂದಿದ್ದು, ಮತ್ತೆ ತಾಯಿಯಾಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇದರೊಂದಿಗೆ ರಾಜ್ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗೆ ವೇಗ ಸಿಕ್ಕಿದೆ. ಈ ಸುದ್ದಿಯಲ್ಲಿನ ಸತ್ಯಗಳ ಹೊರತಾಗಿ, ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆಗಿದೆ. ಈ ಸುದ್ದಿಗೆ ಸಮಂತಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡೋಣ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಸಿಕ್ಕಾಬಟ್ಟೆ ಸಾಲ, ಸಾಲು ಸಾಲು ಚೆಕ್‌ಬೌನ್ಸ್ ಕೇಸ್ ; ನಿರ್ದೇಶಕ ಗುರುಪ್ರಸಾದ್ ಸಾವಿಗೆ ಕಾರಣವಾಯ್ತಾ..!?
ಸುದ್ದಿದಿನಡೆಸ್ಕ್:ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ʻಮಠʼ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.
ಗುರುಪ್ರಸಾದ್ ಮೇಲೆ ಸಾಲು ಸಾಲು ಚೆಕ್‌ಬೌನ್ಸ್ ಕೇಸ್‌ಗಳಿದ್ದವು. ಸಿಕ್ಕ ಸಿಕ್ಕವರ ಬಳಿ ಸಾಲ ಮಾಡಿಕೊಂಡಿದ್ದರು. ಶ್ರೀನಿವಾಸ್ ಗೌಡ ಎಂಬುವರ ಜೊತೆ ಹಣದ ವ್ಯವಹಾರಕ್ಕೆ ಕಿರಿಕ್ ಕೂಡ ಆಗಿತ್ತು. ಗುರುಪ್ರಸಾದ್‌ಗೆ ಅಭಿಮಾನಿಯಾಗಿದ್ದ ಶ್ರೀನಿವಾಸ್ ಗೌಡ 25 ಲಕ್ಷ ಹಣ ನೀಡಿದ್ದರು. ಗುರುಪ್ರಸಾದ್ ಬರವಣಿಗೆ ಮೆಚ್ಚಿ ಜೊತೆಯಲ್ಲೇ ಇದ್ದರು ಶ್ರೀನಿವಾಸ್ ಗೌಡ.
ಹಣ ವಾಪಸ್ ಕೊಡಲಾಗದೇ ಕಿರಿಕ್ ಮಾಡಿಕೊಂಡಿದ್ದರು ನಿರ್ದೇಶಕ ಗುರುಪ್ರಸಾದ್ ಅವರು. ಈ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದ, ಗುರುಪ್ರಸಾದ್ ವಿರುದ್ದ ಕಾನೂನು ಸಮರ ಸಾರಿದ್ದರು. ಅಕ್ಟೋಬರ್ 24ರಂದು ಇದ್ದ ಕೋರ್ಟ್‌ವಿಚಾರಣೆಗೂ ಹಾಜರಾಗಿರಲಿಲ್ಲ ಗುರುಪ್ರಸಾದ್. ಮೆಡಿಕಲ್ ರಿಪೋರ್ಟ್ ನೀಡಿ ವಿಚಾರಣೆ ಮುಂದೂಡಿಸಿಕೊಂಡಿದ್ದರು.
ನಿನ್ನೆ ಅಂದರೆ ನವೆಂಬರ್ 2ಕ್ಕೆ ಗುರುಪ್ರಸಾದ್ ಹುಟ್ಟುಹಬ್ಬ ಇತ್ತು. ಶುಭಾಶಯ ಕೋರಲು ಕರೆಮಾಡಿದವರಿಗೂ ನಾಟ್ ರೀಚಬಲ್ ಬಂದಿತ್ತು ಮೊಬೈಲ್.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
‘ಮಠ’ ಸಿನೆಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ..!
ಸುದ್ದಿದಿನಡೆಸ್ಕ್:ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ʻಮಠʼ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.
52 ವರ್ಷದ ಕನಕಪುರ ಮೂಲದ ಗುರುಪ್ರಸಾದ್ ಇನ್ನಿಲ್ಲಾ.. ತುಮಕೂರು ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲದ ಸುಳಿಗೆ ಸಿಲುಕಿದ್ದ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಠ ಸಿನಿಮಾ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದರು. ಮಠ, ಎದ್ದೇಳು ಮಂಜುನಾಥ್ ಚಿತ್ರದ ಮೂಲಕ ಮನೆಮಾತಾಗಿದ್ದರು.
ನಿರ್ದೇಶಕ ʻಮಠʼ ಗುರುಪ್ರಸಾದ್ ಅವರು ನವೆಂಬರ್ 02, 1972 ರಂದು ರಾಮನಗರದಲ್ಲಿ ಜನಿಸಿದ್ದರು, ಅಂದರೆ ನಿನ್ನೆ ನಿರ್ದೇಶಕ ಗುರುಪ್ರಸಾದ್ ಹುಟ್ಟುಹಬ್ಬ ಇತ್ತು, ನಿನ್ನೆ ಬರ್ತ್ ಡೇ ವಿಶ್ ಮಾಡಲು ಕರೆಮಾಡಿದವರಿಗೆ ನೋ ಆನ್ಸರ್ ಅಂತ ಬರುತ್ತಿತ್ತು, ನಿರ್ದೇಶಕ ಗುರುಪ್ರಸಾದ್ ಅವರ ಮೊಬೈಲ್ ನಾಟ್ ರೀಚಬಲ್ ಆಗಿತ್ತು, ಗುರುಪ್ರಸಾದ್ ತಮ್ಮ ಜನ್ಮದಿನಕ್ಕೆ ಮುನ್ನವೇ ಜೀವನಕ್ಕೆ ಅಂತ್ಯ ಹಾಡಿಕೊಂಡಿದ್ದಾರೆ. ಬರ್ತಡೇಗೂ ಮುನ್ನವೇ ಡೆತ್ ಡೇ ಮಾಡಿಕೊಂಡ ಗುರುಪ್ರಸಾದ್..!
ಸುದ್ದಿದಿನ.ಕಾಂ|ವಾಟ್ಸಾಪ್|9980346243