ಲೈಫ್ ಸ್ಟೈಲ್
ಟಚ್ ಮಿ ನಾಟ್ !
ಇದು ಕಳೆಗಿಡವಾದರೂ ಸಹ ವೈದ್ಯಕೀಯ ವಿಷಯದಲ್ಲಿ ಹೆಚ್ಚು ಬಳಕೆ ಆಗುತ್ತದೆ. ‘ಮುಟ್ಟಿದರೆ’ ಎಂದೇ ಪರಚಯವಾಗಿರುವ, ಮೈತುಂಬಾ ಮುಳ್ಳಿರುವ ಗಿಡವದು. ಎಲೆಗಳನ್ನು ಮುಟ್ಟಿದರೆ ಮುದುರಿಕೊಳ್ಳುತ್ತವೆ. ಇದು ಕಳೆಗಿಡವಾಗಿ ಗದ್ದೆ-ಜಮೀನಿನಲ್ಲಿ ಬೆಳೆದರೆ ಕಿತ್ತು ಎಸೆಯುತ್ತಾರೆ.
ಇದನ್ನು ಇಂಗ್ಲಿಶ್ ಭಾಷೆಯಲ್ಲಿ ‘ಟಚ್ ಮಿ ನಾಟ್’ ‘ಸೆನ್ಸಿಟಿವ್ ಪ್ಲಾಂಟ್’ ಎಂದು ಕರೆಯುತ್ತಾರೆ. ಇರ ವೈಜ್ಞಾನಿಕ ಹೆಸರು ‘ ಮೈಮೋಸಾ ಪುಡಿಕಾ’. ಇದು ವರ್ಷದ ಎಲ್ಲಾ ಋತುಗಳಲ್ಲೂ ಬೆಳೆಯುತ್ತದೆ. ಇದರಲ್ಲಿ ಗೋಳಾಕಾರದಲ್ಲಿ ಸುಂದರವಾದ ಗುಲಾಬಿ ಬಣ್ಣದ ಹೂ ಬಿಡುತ್ತದೆ.
ಔಷಧೀಯ ಗುಣಗಳು
- ನಾಚಿಕೆ ಮುಳ್ಳಿನ ಗಿಡದ ಹೂವನ್ನು ಕಿತು ಬಿಸಾಡಿ, ಉಳಿದ ಎಲೆ, ದಂಟು, ಬೇರುಗಳನ್ನು ಕತ್ತರಿಸಿ ನೀರಿನಲ್ಲಿ ಬೇಯಿಸಿ; ಕಷಾಯ ಮಾಡಿ ಕುಡಿದರೆ ಮೂಲವ್ಯಾಧಿ ಉಪಶಮನವಾಗುತ್ತದೆ.
- ಮುಟ್ಟಿನ ಸಮಯದಲ್ಲಿ ಹೆಚ್ಚು ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ. ಅಲ್ಲದ, ಇದರ ಎಲೆಗಳ ರಸ ಕುಡಿದರೆ ರಕ್ತಸ್ರಾವ ಕಡಿಮೆ ಆಗುತ್ತದೆ.
- ಹಲ್ಲಿನ ನೀವು ಆದಾಗ ಇದರ ಬೇರನ್ನು ತೆಗೆದು ಚೆನ್ನಾಗಿ ತೊಳೆದು ಜಜ್ಜಿ ಹಲ್ಲಿನ ಹುಳುಕು ಇದ್ದಲ್ಲಿ ಇಟ್ಟಾಗ ಹಲ್ಲು ನೋವು ಕಡಿಮೆಯಾಗುತ್ತದೆ.
- ಇದರ ಬೇರಿನ ಕಷಾಯ ಕುಡಿದರೆ ಬೇಧಿ ನಿಲ್ಲುತ್ತದೆ.
- ಕೆಮ್ಮು ಇದ್ದವರು ಅದರ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಸೇವಿಸಿ ಗಾಯದಿಂದ ಆದ ರಕ್ತಸ್ರಾವವನ್ನು ನಿಲ್ಲಿಸುವ ಅಪಾರ ಶಕ್ತಿಯು ಈ ಗಿಡಕ್ಕಿದೆ.
- ಬಿದ್ದು ರಕ್ತಸ್ರಾವವಾದಾಗ ಇದರ ಎಲೆಯನ್ನು ಚೆನ್ನಾಗಿ ಜಜ್ಜಿ ಅದರ ರಸವನ್ನು ಗಾಯದ ಮೇಲೆ ಹಚ್ಚಿ.
- ಈ ಗಿಡದ ಬೇರು ಅಥವಾ ಎಲೆಯನ್ನು ನೀರಿನಲ್ಲಿ ಕುದಿಸಿ, ಆರಿಸಿದ ನೀರನನು ಕುಡಿಯುವುದರಿಂದ ರಕ್ತ ಶುದ್ದಿಯಗುತ್ತದೆ.
- ಚರ್ಮರೋಗ ನಿವಾರಣೆ ಮಾಡುವ ಶಕ್ತಿ ಈ ಲಜ್ಜಾವತಿಗಿದೆ.
- ನಿದ್ರಾಹೀನತೆಗೆ ಇರುವವರು ಈ ಗಿಡವನ್ನು ಹಾಕಿ ಕುದಿಸಿ ನೀರನನು ಆರಿಸಿ, ಕುಡಿದರೆ ಒಳ್ಳೇಯ ನಿದ್ದೆ ಬರುತ್ತದೆ.
- ಇದರ ಎಲೆಯನ್ನು ಜಜ್ಜಿ ಕಷಾಯ ಮಾಡಿ ಕುಡಿದರೆ ಮೂತ್ರಕೋಶದಲ್ಲಿರುವ ಕಲ್ಲು, ಲವಣಗಳು ಕರಗುತ್ತದೆ.
- ಇದರ ಕಷಾಯ, ರಸ ಪ್ರಧಾನವಾಗಿದ್ದು ಪಿತ್ತಹರವಾಗಿದೆ. ರಕ್ತಪಿತ್ತ, ರಕ್ತಸ್ರಾವ. ಅತಿಸಾರ ಮತ್ತು ಯೋನಿ ರೋಗಗಳನ್ನು ನಾಶಮಾಡುತ್ತದೆ.
- ಗರ್ಭಕೋಶದ ಸ್ನಾಯುಗಳನ್ನು ವಿಶೇಷವಾಗಿ ಸಂಕುಚಿತಗೊಳಿಸುತ್ತದೆ.
ಆಯುರ್ವೇದದಲ್ಲಿ ಇದರ ಪರಿಣಾಮಕಾರಿ ಚಿಕಿತ್ಸೆ’ಹಿಸ್ಟಿರೆಕ್ಟಿಮಿ’ ಇದೆ. ಈ ಶಸ್ತ್ರಚಿಕಿತ್ಸೆ ನಂತರದಲ್ಲಿ ಆಗುವ ತೊಂದರೆಗಳಾದ ರಕ್ತಸ್ರಾವ, ಆಕಸ್ಮಿಕ ಮೂತ್ರಕೋಶ ಘಾಸಿಗೊಳಗಾಗುವಿಕೆ, ಹೃದಯ ಸಂಬಂಧಿ ತೊಂದರೆಗಳಿಗೆ ಇದರ ಉಪಯೋಗ ಪಡೆಯುತ್ತಾರೆ. - ರಕ್ತನಾಳ ಹೆಪ್ಪುಗಟ್ಟುವಿಕೆ, ಮನೋವಿಕಾರ ಮುಂತಾದ ತೊಂದರೆಗಳನ್ನು ತಡೆಗಟ್ಟುವಲ್ಲಿ ಹೆಚ್ಚು ಪರಿಣಾಮಕಾರಿ. ಗರ್ಭಾಶಯ ಜಾರುವಿಕೆ, ಗರ್ಭಾಶಯ ಕೆಟ್ಟಾಗ ಅದನ್ನು ತೆಗೆಯದೆ ಆಯುರ್ವೇದ ಚಿಕಿತ್ಸೆಯಿಂದ ಗುಣಪಡಿಸಬಹುದು.
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

ದಿನದ ಸುದ್ದಿ
ಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ
~ಅನಿರೀಕ್ಷಿತ್ ನಾರಾಯಣ
ಕೆಲ ಮುನ್ನೆಚ್ಚರಿಕೆಯ ಅಂಶಗಳನ್ನು ಪಾಲಿಸುವುದರಿಂದ ಗ್ಯಾಸ್ ಗೀಸರ್ ನಿಂದ ಆಗುವ ಅಪಾಯವನ್ನು ತಡೆಗಟ್ಟಬಹುದು.
1. ಮೊದಲಿಗೆ ಇದು ಎಲ್ಲರಿಗೂ ಗೊತ್ತಿರುವ ವಿಷಯ. ಗ್ಯಾಸ್ ಗೀಸರ್ ಅನ್ನು ಬಳಸದಿದ್ದಾಗ ರೆಗ್ಯುಲೇಟರಿನಲ್ಲೇ ಆಫ್ ಮಾಡಿ ಗ್ಯಾಸ್ ಸರಬರಾಜನ್ನು ನಿಲ್ಲಿಸಬೇಕು. ಬೇಕೆಂದಾಗ ಮಾತ್ರ ಆನ್ ಮಾಡಿಕೊಳ್ಳಬೇಕು.
2. ನಿಮ್ಮ ಸ್ನಾನದ ಮನೆಯಲ್ಲಿ ಗ್ಯಾಸ್ ಗೀಸರ್ ಅನ್ನು ಅಳವಡಿಸಬೇಕೆಂದಿದ್ದರೆ ಅಲ್ಲಿ ಚೆನ್ನಾಗಿ ಗಾಳಿಯಾಡಲು ಅಗತ್ಯವಿದ್ದಷ್ಟು ಕಿಟಕಿ ಇರಲೇಬೇಕು. ಕೆಲ ಸ್ನಾನದ ಮನೆಗಳಲ್ಲಿ ಬರೀ ಬೆಳಕು ಬರಲಷ್ಟೇ ಗಾಜಿರುವ ಕಿಟಕಿ ಮಾಡಿರುತ್ತಾರೆ. ಅಂತಹ ಕಡೆಗಳಲ್ಲಿ ಗ್ಯಾಸ್ ಗೀಸರ್ ಅನ್ನು ಅಳವಡಿಸದಿರುವುದೇ ಉತ್ತಮ. ಸ್ನಾನದ ಮನೆ ಬಿಟ್ಟು ಹೊರಗೆ ಎಲ್ಲಾದರೂ ಗಾಳಿಯಾಡುವ ಕಡೆ ಗ್ಯಾಸ್ ಗೀಸರ್ ಅನ್ನು ಅಳವಡಿಸಿ ಅಲ್ಲಿಂದ ಬಿಸಿ ನೀರನ್ನು ಒಳಗೆ ತೆಗೆದುಕೊಳ್ಳುತ್ತೇನೆ ಎಂದರೆ ಕೊಂಚ inconvenience ಅನ್ನಿಸಿದರೂ ಹೆಚ್ಚು ಸುರಕ್ಷಿತ.
3. ಗ್ಯಾಸ್ ಗೀಜರ್ ಅನ್ನು ಸ್ನಾನದ ಮನೆಯೊಳಗೆ ಅಳವಡಿಸಿದರೆ, ಮೊದಲು ಬಾಗಿಲು ತೆರೆದಿಟ್ಟುಕೊಂಡೇ, ಬಿಸಿ ನೀರನ್ನು ಬಕೆಟ್ಟಿಗೆ ಬಿಟ್ಟುಕೊಂಡು ನಂತರ ಸ್ಥಾನಕ್ಕೆ ಹೋಗುವುದು ಒಳ್ಳೆಯದು. ಆಗ ಈ ಆತಂಕ ಇರುವುದಿಲ್ಲ.
4. ಈಗ ಮನೆ ಬಳಕೆಯ ಉಪಕರಣಗಳನ್ನು ಮಾರುವ ಅಂಗಡಿಗಳಲ್ಲಿ exhaust fan (ಗಾಳಿಯನ್ನು ಹೊರಹಾಕುವ fan) ದೊರಕುತ್ತದೆ. ಅದರ ಬೆಲೆ ಹೆಚ್ಚೆಂದರೆ ಒಂದು ಸಾವಿರ ರೂಪಾಯಿ ಅಷ್ಟೇ. ಬರೀ ಎರಡು ರೂಪಾಯಿಯ ಟ್ಯಾಗ್ ಬಳಸಿ ಅದನ್ನು ಎಲ್ಲಿ ಬೇಕೆಂದರಲ್ಲಿ (ಕಿಟಕಿಯ ಸರಳುಗಳಿಗೇ) ಎರಡೇ ನಿಮಿಷದಲ್ಲಿ ನಾವೇ install ಮಾಡಿಕೊಳ್ಳಬಹುದು. ಗ್ಯಾಸ್ ಗೀಸರ್ ON ಮಾಡಿದಾಗೆಲ್ಲ, Exhaust Fanಅನ್ನೂ ಆನ್ ಮಾಡಿಕೊಂಡರೆ ಗ್ಯಾಸ್ ಗೀಸರ್ ಹೊರ ಸೂಸಬಹುದಾದ ಕಾರ್ಬನ್ ಮಾನಾಕ್ಸೈಡ್ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ. ಏಕೆಂದರೆ exhaust fan ಸ್ನಾನದ ಕೊಠಡಿ ಒಳಗಿನ ಗಾಳಿಯನ್ನೆಲ್ಲ ಹೊರಹಾಕುತ್ತಲೇ ಇರುತ್ತದೆ. ಅದರ ಮೂಲಕ ಕಾರ್ಬನ್ ಮಾನಾಕ್ಸೈಡ್ ಕೂಡ ಹೊರಹೋಗುತ್ತದೆ. ಜೊತೆಗೆ ಕೊಠಡಿಯ ವಾಯುಭಾರ ಕುಸಿತವಾದಂತೆಲ್ಲ ಸ್ವಚ್ಛ ಗಾಳಿ ತನ್ನಂತಾನೇ ಒಳಬರುತ್ತದೆ.
5. Carbon monoxide detector: ಮೇಲೆ ಹೇಳಿದಂತೆ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗುತ್ತಿದೆ ಅಂತ ಮನುಷ್ಯನ ಇಂದ್ರಿಯಗಳಿಗೆ ಗ್ರಹಿಸಲು ಸಾಧ್ಯವಿಲ್ಲ. ಆದರೆ ಇವುಗಳನ್ನು ಪತ್ತೆಹಚ್ಚಲೆಂದೆ ಕಾರ್ಬನ್ ಮಾನಾಕ್ಸೈಡ್ ಡಿಟೆಕ್ಟರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಸಾಧ್ಯವಾದಲ್ಲಿ ಇವುಗಳನ್ನು ಅಳವಡಿಸಿಕೊಂಡರೆ ಗಾಳಿಯಲ್ಲಿ ಕಾರ್ಬನ್ ಮಾನಾಕ್ಸೈಡ್ ಪತ್ತೆಯಾದ ತಕ್ಷಣ ಇವುಗಳು alarm ಕೂಗಿ ಎಚ್ಚರಿಸುತ್ತವೆ. ಆಗ ತಕ್ಷಣ ನಾವು ಕ್ರಮ ಕೈಗೊಳ್ಳಬಹುದು.
6. ಈ ವಿಷಯಗಳನ್ನು ಮುಖ್ಯವಾಗಿ ಮನೆಯ ದೊಡ್ಡವರು ತಿಳಿದುಕೊಂಡಿರಬೇಕು. ಚಿಕ್ಕ ಮಕ್ಕಳು ಸ್ನಾನಕ್ಕೆ ಹೋಗುವಾಗ ಅವರ ಪಾಡಿಗೆ ಅವರನ್ನು ಬಿಡುವ ಬದಲಿಗೆ, ತಾವೇ ನೀರು ಬಿಟ್ಟುಕೊಟ್ಟು ನಂತರ ಅವರನ್ನು ಸ್ನಾನಕ್ಕೆ ಕಳಿಸಬೇಕು.
7. ಒಂದು ಮನೆಯಿಂದ ಇನ್ನೊಂದು ಮನೆಗೆ ಶಿಫ್ಟ್ ಆಗುವಾಗ ನೀವಾಗಿಯೇ ಗ್ಯಾಸ್ ಗೀಜರ್ ಅನ್ನು ಅಳವಡಿಸುವುದರ ಬದಲಾಗಿ ಯಾರಾದರೂ professional ವ್ಯಕ್ತಿಗಳನ್ನೇ ನೆಚ್ಚಿಕೊಂಡರೆ ಒಳ್ಳೆಯದು. ಆಗ ಅವರು ಗೀಸರನ್ನು ಅಳವಡಿಸಬಹುದಾದ ಜಾಗದ ವೆಂಟಿಲೇಶನ್ ಅನ್ನು ಗಮನಿಸಿ ಅವರೇ ಸೂಕ್ತ ಸಲಹೆ ನೀಡುತ್ತಾರೆ.
8. Regular maintenance: ಗ್ಯಾಸ್ ಸಿಲೆಂಡರ್, ರೆಗ್ಯುಲೇಟರ್, ಗ್ಯಾಸ್ ಪೈಪ್ ಮತ್ತು ಗೀಸರನ್ನು ಆಗಾಗ ಗಮನಿಸುತ್ತ ಅಗತ್ಯ ಬಂದಲ್ಲಿ ಅವುಗಳನ್ನು ಬದಲಾಯಿಸಬೇಕು.
9. ಗ್ಯಾಸ್ ಗೀಸರ್ ಬಳಸುವಾಗ ಯಾವುದೇ ಅನುಮಾನ ಬಂದರೂ ಕೂಡಲೆ ಅದನ್ನು ಸರಿಪಡಿಸಿಕೊಳ್ಳುವುದು ಅಗತ್ಯ. ಆಗಲು ನಾವೇ ಏನಾದರೂ ಒಂದು ಮಾಡುವ ಬದಲು, ಅದನ್ನು ರಿಪೇರಿ ಮಾಡುವರಿಂದಲೇ ಸರಿಮಾಡಿಸುವುದು ಒಳ್ಳೆಯದು.
ಬರಹ ಕೃಪೆ : ಫೇಸ್ ಬುಕ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
ಸುದ್ದಿದಿನ,ದಾವಣಗೆರೆ:ನಗರದ ಜಿಎಂ ವಿಶ್ವವಿದ್ಯಾನಿಲಯದ ಜಿಎಂ ಹಾಲಮ್ಮ ಸಭಾಂಗಣದಲ್ಲಿ 1.12 2025 ರಂದು ರಂಗೋತ್ಸವ -2025 ರ ಅಂತಿಮ ಸುತ್ತು ಗ್ರ್ಯಾಂಡ್ ಫಿನಾಲೆಯನ್ನು ಏರ್ಪಡಿಸಲಾಗಿತ್ತು.
ಜಿಎಂ ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳಲ್ಲೂ ಇರುವ ರಂಗಾಸಕ್ತ,ಅಭಿನಯ ಪ್ರಿಯ ವಿದ್ಯಾರ್ಥಿಗಳ ಅಭಿನಯ ಕಲೆಯನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸುವ ಮಹತ್ತರ ಉದ್ದೇಶ ರಂಗೋತ್ಸವದಾಗಿದ್ದು, ಮೂರು ಹಂತಗಳಲ್ಲಿ ಈ ಸ್ಪರ್ಧೆಯನ್ನು ನಡೆಸಲಾಯಿತು.
ಪ್ರಥಮ ಹಂತ ಆಡಿಷನ್ (ಆಯ್ಕೆ) ಗುಂಪುಗಳ ರಚನೆ ,ಎರಡನೇ ಹಂತ ಪೌರಾಣಿಕ ಸುತ್ತು ಈ ಹಂತದಲ್ಲಿ ಎಲಿಮಿನೇಷನ್ ಪ್ರಕ್ರಿಯೆ ಇದ್ದು ಕಡಿಮೆ ಅಂಕಗಳಿಸಿದವರನ್ನು ಗುಂಪಿನಿಂದ ಹೊರಗುಳಿಸಲಾಯಿತು. ಮೂರನೇ ಹಂತ ಅಂತಿಮ ಸುತ್ತು ಗ್ರ್ಯಾಂಡ್ ಫಿನಾಲೆ ಆಗಿದ್ದು ಈ ಸುತ್ತಿಗೆ ಬಂದ ನಾಲ್ಕು ತಂಡಗಳಿಗೆ ‘ಸಾಮಾಜಿಕ ಜಾಗೃತಿ ‘ಎಂಬ ವಿಷಯ ನೀಡಲಾಗಿದ್ದು, ಲೈಂಗಿಕ ದೌರ್ಜನ್ಯ ರೈತರ ಬವಣೆ, ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು, ಡ್ರಗ್ಸ್ ಹಾವಳಿ ಈ ವಿಷಯಗಳನ್ನು ಕೇಂದ್ರೀಕರಿಸಿ ನಾಲ್ಕು ತಂಡಗಳು ಮನೋಜ್ಞವಾಗಿ ಅಭಿನಯಿಸಿದವು.
ತೀರ್ಪುಗಾರರಾಗಿ ಪ್ರೊ. ಗಣೇಶ್ ಜಿ ತಿಲ್ವೆ, ಪ್ರೊ. ದೀಪಿಕಾ ವಿ.ಬಿ, ಪ್ರೊ. ರಾಜೇಶ್ವರಿ ವೈ.ಎಂ ಮೂರು ಹಂತಗಳಲ್ಲೂ ತೀರ್ಪನ್ನು ನೀಡಿದರು. ಶೇಕಡ 70 ತೀರ್ಪುಗಾರರ ತೀರ್ಪು, ಶೇಕಡ 30 ಪ್ರೇಕ್ಷಕರ ಆನ್ಲೈನ್ ವೋಟಿಂಗ್ ಮೂಲಕ ಅಂತಿಮ ತೀರ್ಪನ್ನು ಪ್ರಕಟಿಸಲಾಯಿತು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಜಿಎಂ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಸುನಿಲ್ ಕುಮಾರ್ ಬಿ.ಎಸ್, ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ಉಪನಿರ್ದೇಶಕರಾದ ಡಾ. ಸಂತೋಷ್ ಕುಮಾರ್ ಎಂ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ದೀಪಾ ಬಿ.ಎಸ್ ಉಪಸ್ಥಿತರಿದ್ದು, ರಂಗೋತ್ಸವ-2025ರ ವಿನ್ನರ್ಸ್ ಟ್ರೋಫಿಯನ್ನು ಹಾಗೂ 10000 ನಗದು ಬಹುಮಾನವನ್ನು ಲಿಖಿತ ಮತ್ತು ತಂಡದವರಿಗೆ ಹಾಗೂ ಗೌತಮ್ ಮತ್ತು ತಂಡದವರಿಗೆ ರನ್ನರ್ಸ್ ಟ್ರೋಫಿ ಮತ್ತು 7500 ನಗದು ಬಹುಮಾನವನ್ನು ನೀಡಿದರು.
ಸಾಹಿತ್ಯ, ನಿರ್ದೇಶನ, ರಂಗಸಜ್ಜಿಕೆ ಎಲ್ಲವನ್ನು ಆಯಾ ತಂಡದ ವಿದ್ಯಾರ್ಥಿಗಳೇ ನಿರ್ವಹಿಸಿಕೊಂಡದ್ದು ವಿಶೇಷವಾಗಿತ್ತು. ಪ್ರಸ್ತುತ ಧಾವಂತದ ದಿನಮಾನಗಳಲ್ಲೂ ವಿದ್ಯಾರ್ಥಿಗಳಲ್ಲಿ ಹುದುಗಿರುವ ಈ ರಂಗ ಪ್ರೇಮ, ನಟನಾ ಚತುರತೆ ಪ್ರೇಕ್ಷಕರನ್ನು ಬೆರಗುಗೊಳಿಸಿತು.
ಕಾರ್ಯಕ್ರಮದ ಮೂರು ಹಂತಗಳಲ್ಲೂ ನಿಶಾ ನಿತ್ಯಾ ಕೆ, ಸಾಕಿದ್ ಬಿ.ಆರ್ ರವರು ಮನೋಜ್ಞವಾಗಿ ನಿರೂಪಿಸಿದರು ಹಾಗೂ ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ವಿದ್ಯಾರ್ಥಿ ಕಾರ್ಯದರ್ಶಿಯಾದ ಸಚಿನ್ ರವರು ಹಾಗೂ ಎಲ್ಲಾ ವಿಭಾಗಗಳ ಸಾಂಸ್ಕೃತಿಕ ವಿದ್ಯಾರ್ಥಿ ಪ್ರತಿನಿಧಿಗಳು ಕಾರ್ಯಕ್ರಮದ ಎಲ್ಲಾ ಹಂತಗಳು ಸುಸೂತ್ರವಾಗಿ ನೆರವೇರಲು ಸಹಕರಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕತೆ | ಮಾಯಮ್ಮ
~ತೆಲುಗು ಮೂಲ: ಡಾ.ವೇಂಪಲ್ಲಿ ಗಂಗಾಧರ್,ಕನ್ನಡಕ್ಕೆ: ಡಾ.ಶಿವಕುಮಾರ್ ಕಂಪ್ಲಿ
ʼಆಗಸದ ತುಂಬಾ ಕಪ್ಪನೆಯ ದಟ್ಟ ಮೋಡಗಳು ಕವಿದುಕೊಂಡಿವೆ. ಮೋಡ ಮೋಡಗಳು ಬಸೆದುಕೊಂಡು ಗುಡುಗು ರ‍್ಜಿಸುತ್ತಿದೆ. ಗುಡುಗು ಗುಡುಗುಗಳನ್ನು ಹೊತ್ತಿಕೊಂಡು ಮಿಂಚುಗಳು ಮಿನುಗುತ್ತಿವೆ. ಮಿಂಚು ಮಿಂಚುಗಳು ಹೊಸೆದುಕೊಂಡು ಬೆಂಕಿಸುರಿಸುತ್ತಿವೆ.ಆ ಸೆಕೆಗೆ ಕಪ್ಪುಮೋಡ ಕದಲಿಹೋಗುತ್ತಿದೆ. ಹೊಡೆದುಕೊಂಡು ಹೋಗುತ್ತಿದೆ. ಹೊಗೆಯನ್ನು ತಗಲಿಸಿಕೊಂಡು ಬೋಂಕನೆ ಸರಿಯುತ್ತಿದೆ. ನಕ್ಕನ್ ಕರೇಮೋಡ. ಈ ಗಡ್ಡೆಮ್ಯಾಕೆ ಸುರಿಬೇಕಂದರೆ ಈ ಮಾಡಗಳಿಗೆ ಏನು ಮಾಡಬೇಕೋ. ನಮ್ಮ ನೆತ್ತಿಯ ಮೇಲೆ ಬರವನ್ನು ಹಾಕಿ ಎಲ್ಲಿಗೋ ಮಳೆಗಳನ್ನ ಓಡಿಸಿಬಿಡುತ್ತವೆ. ಈ ಮಾಡಗಳಿಗೆ ಅದೇಟು ತೀಟಿ…” ವೀರಶಿವ ಬೈದುಕೊಳ್ಳುತಿದ್ದಾನೆ ಮಾಯಮ್ಮನ ಗುಡಿಯ ಪಡಸಾಲೆಯೊಳಗೆ ಉದ್ದಕೆ ಮಲಗಿಕೊಂಡು.
ಕಪ್ಪನೆಯ ಶರೀರ. ಮಾಸಿದ ಗಡ್ಡ. ಹರಿದುಹೋಗಿರುವ ಬಟ್ಟೆಗಳು. ಕೈಯೊಳಗೊಂದು ಬಿದುರು ಕೋಲು. ಹೆಗಲ ಮೇಲೊಂದು ಜೋಳಿಗೆ. ಧೂಳ ಕಾಲಿನ ಮೇಲೊಂದು ಕುರ ಅದಕ್ಕೆ ಮುತ್ತಿಕೊಳ್ಳುತ್ತಿರುವ ನೊಣದ ಹಿಂಡು, ಇವು ತಿಕ್ಕ ಶಿವನ ಆಕಾರ. ಯಾವಾಗಲೂ ಮಾಯವ್ವನ ಗುಡಿಯ ಹತ್ತಿರವೇ ಇರುತಾನೆ. ಹೊಟ್ಟೆ ಹಸಿದಾಗ ಮಾತ್ರವೇ ಎದ್ದು ಹಳ್ಳಿಗಳ ಒಳಗೆ ಬಂದು ಯಾರೋ ಒಬ್ಬರ ಮನಿಯೊಳಗೆ ಕುಂತು ಅಷ್ಟು ಜೋಳಿಗಿಯೊಳಗೆ ಹಾಕಿಸಿಕೊಂಡು ಹೋಗಿ ಆ ಗುಡಿಯ ಒಳಗೇ ಕುಂತು ತಿನ್ನುತ್ತಾನೆ. ಕಾಲುವೆಯೊಳಗೆ ಹರಿವ ನೀರನ್ನು ಬಾಯಿಗಚ್ಚಿಕೊಂಡೇ ಕುಡಿತಾನೆ. ಹಂಗೇ ಆತನ ಬದುಕೆಲ್ಲಾ ಕಳೆದು ಹೋಗುತ್ತಿದೆ.
ಆಕಾಶವೆಂದರೆ ಕೋಪ. ಮೋಡಗಳೆಂದರೆ ಕೋಪ. ಬೆಳೆಗಳೆಂದರೆ ಕೋಪ. ವ್ಯವಸಾಯವೆಂದರೆ ಕೋಪ. ನಂಬಿಕೊಂಡ ದೇವರೆಂದರೆ ಕೋಪ. ಅದುಕ್ಕೇ ಮಾಯವ್ವ ತಾಯಿಗೆ ಅರಿಷಿಣ ಕುಂಕುಮದ ಬದಲು ಮಸಿಬಳಿಯುತ್ತಾನೆ. ಆ ಗುಡಿ ಹತ್ರ ಆ ತಾಯಿಗೆ ಪೂಜೆಗಳಿಲ್ಲ ಪುನಸ್ಕಾರಗಳಿಲ್ಲ. ದೇವರ ವಿಗ್ರಹವೂ ಕೊಂಚ ಮುಕ್ಕಾಗಿದೆ. ಬಾವಲಿಗಳು ಸೇರಿಕೊಂಡಿವೆ. ಹೊಲಸು ನಾತ ಹೊಡೆಯುತ್ತದೆ. ಅಂತಹ ಗುಡಿಯಲ್ಲೇ ತಿಕ್ಕ ಶಿವಪ್ಪ. ಆ ತಾಯಿಗೆ ಬಾಯಿಗೆ ಬಂದಂಗೆ ಬೈಯುತ್ತಾ ಇರುತ್ತಾನೆ.
ತಿಕ್ಕ ಶಿವಪ್ಪನೆಂದರೆ ನಮ್ಮ ಹಳ್ಳಿಯೊಳಗೆ ಎಲ್ಲರಿಗೂ ಅಭಿಮಾನ. ದೊಡ್ಡ ದೊಡ್ಡವರೆಲ್ಲಾ ಕೈಯೆತ್ತಿ ಮುಗಿಯುತ್ತಾರೆ.
ಆತ್ಮೀಯತೆಯಿಂದ ಆದರಿಸುತ್ತಾರೆ. ಅತ ಬಂದು ಕೇಳಬೇಕೇ ವಿನಃ ಆಸ್ತಿಗಳನ್ನಾದರೂ ಕೊಟ್ಟುಬಿಡುತ್ತಾರೆ. ಆತನಿಗಿರುವ ಹೆಸರು ಅಂತಾದ್ದು. ತಿಕ್ಕ ಶಿವನೆನ್ನೋ ಹೆಸರು ಕೂಡಾ ಅಮಾಯಕವಾಗಿ ಮಕ್ಕಳು ಮಾತಾಡಿಕೊಳ್ಳೋದು. ʼವೀರ ಶಿವʼ ಅಂತಾ ಬಾಯತುಂಬಾ ಕರೆಯಬೇಕೆಂದರೆ ಎಲ್ಲರಿಗೂ ಪರಮಾನ್ನ ತಿನ್ನುವಷ್ಟು ಇಷ್ಟ. ಆಗ… ಆಗ್ಯಾವಾಗಲೋ.. ನಾನು ಸಣ್ಣವನಿದ್ದಾಗಿನ ದಿನದೊಳಗೆ ವೀರ ಶಿವನ ಸಾಹಸಗಳ ಕುರಿತು ಕತೆ ಕತೆಗಳಾಗಿ ಹೇಳುತಿದ್ದರು. ಆ ಕಥೆಗಳೆಲ್ಲವೂ ಜ್ಞಾಪಕಕ್ಕೆಬರುತ್ತಿವೆ…
***
ದಿನಾ ರಾತ್ರಿ ಹೊತ್ತಿಗೆ ದೊಡ್ಡ ಹುಲಿ ಬರುತಾತೆಂದು ಹಳ್ಳಿಯ ಜನ ಭಯಬೀಳುತಿದ್ದರೆ ಆ ವಿಷಯವು ಚಿಕ್ಕ ವೀರಶಿವನಿಗೆ ಒಂದು ದಿನ ತನ್ನ ಜೊತೆಗಾರರನ್ನು ಹಿಂದಾಕಿಕೊಂಡು ಬೆಟ್ಟದ ಮಲ್ಲಪ್ಪನ ಗುಡ್ಡದ ಬಯಲಿಗೆ ಹೊಂಟನು. ಕಣವಿಹಳ್ಳಿ ಅಡವಿಯೊಳಗಿಂದ ದಾಟಿಕೊಂಡು ಕುಮಾರನ ಹಳ್ಳಿ ದಿಕ್ಕಿಗೆ ತಿರುಗಿದನು.ಏಳು ಮೆಟ್ಟಿನ ಹುಲಿಬೇಟೆಗೆಂದು ತಿಳಿದರೆ ಯಾರೂ ಹಿಂದೆ ಬರಲಾರರೆಂದು ಮೊಲದ ಬೇಟಿಗೆ ಹೋಗಾನ ರ‍್ರಿ ಅಂತ ನಂಬಿಸಿದ್ದನು. ನಡು ರಾತ್ರಿತಂಕಾ ಮಲ್ಲಪ್ಪನ ಗುಡ್ಡಕ್ಕೆ ಸೇರಿಕೊಂಡು ಅಲ್ಲಿಂದ ಅಡ್ಡದಾರಿಗುಂಟಾ ಮಲ್ಲಪ್ಪನ ಗುಡ್ಡದ ಬಯಲ ಕಡೆಗೆ ಸೇರಿದರು.
ಕೈಯೊಳಗಿನ ನಾಡ ಬಂದೂಕು ಹಸಿದ ಕಣ್ಣು ಬಿಡುತ್ತಿದೆ. ಬಂಡೆಗಲ್ಲಿನ ಮೇಲೇರಿ ಕೆಳಗೆ ನೋಡುತಿದ್ದಾನೆ ವೀರಶಿವ. ಸಣ್ಣಗೆ ಪೊದೆಯೊಳಗಿನ ಎಲೆಗಳು ಅಲುಗಿದಂಗಾಯಿತು. ಜೊತೆಗಾರರು ಬೆದರಿ ಗುಡ್ಡದ ಮೇಲಕ್ಕೆ ಏರತೊಡಗಿದರು. ವೀರ ಶಿವ ತುಪಾಕಿಯನ್ನು ಸರಿಮಾಡಿಕೊಂಡನು. ಗುರಿ ಕುದುರಿತು. ನೋಟದೊಳಗೆ ಏನೋ ಅನುಮಾನ ಕಾಣಿಸಿತು. ತಡೆದನು. ಲಾಟೀನಿನ ಬುಡ್ಡಿ ದೀಪವನ್ನ ಸ್ವಲ್ಪ ಮೇಲೆತ್ತಿರೆಂದು ಹಿಡಿದುಕೊಳ್ಳಿರೆಂದು ಹೇಳಿದನು. ಪರೀಕ್ಷೆಯಿಂದ ಮರದ ಕಡೆಗೆ ನೋಡಿದನು. ಬಂಡೆ ಇಳಿಯಲು ಪ್ರಾರಂಭಿಸಿದನು. ಎಲ್ಲರೂ ಬ್ಯಾಡಾ ಅಂದರು. ಆದರೂ ಕೇಳದಂತೆ ಹೆಜ್ಜೆಯ ಸಪ್ಪಳ ಕೇಳದಂತೆ ಮರಗಳ ಕೆಳಗೆ ಹೋಗಿ ಸ್ವಲ್ಪ ಬಗ್ಗಿಕೊಂಡು ಎರಡು ಕೈಗಳಿಂದ ಅವಚಿಕೊಂಡನು. ದಾರಿ ಬಳಿ ಜಿಂಕೆ ಮರಿ ಕೊಸರಾಡುತ್ತಿದೆ. ಆಕಡಿಗೆ ಈ ಕಡಿಗೆ ಅದು ತಪ್ಪಿಸಿಕೊಳ್ಳಬೇಕೆಂದು ಕೊಸರಾಡುವುದನ್ನು ನೋಡಿ ಕೈಯೊಳಗಿದ್ದ ಹಗ್ಗದಿಂದ ಅದರ ಎರಡು ಕಾಲು ಕಟ್ಟಿ ಅಲ್ಲೇ ವಗೆದನು. ಅದು ಅರಚುತ್ತಲೇ ಇದೆ. ಅಲ್ಲಿಂದ ಚಕ ಚಕನೇ ಗುಡ್ಡದ ಬಂಡೆಯನ್ನೇರಿದನು. ನಾಡ ಬಂದೂಕನ್ನು ಕೈಯೊಳಗೆ ತೆಗೆದುಕೊಂಡನು. ಜಿಂಕೆ ಮರಿಯ ಕಡೆಗೆ ಗುರಿ ಇಟ್ಟುಕೊಂಡು ಹೊಂಚಿಕೊಂಡು ಕುಳಿತನು. ಆ ಜಿಂಕೆ ಮರಿ ಅಡವಿಯೆಲ್ಲಾ ಅದುರುವಂತೆ ಮೊರೆಯುತ್ತಲೇ ಇದೆ.
ಲಾಟೀನು ಬುಡ್ಡಿಯ ಬೆಳಕನ್ನು ಇಳಿಸಿದನು. ಜೊತೆಗೆ ಬಂದವರೆಲ್ಲಾ ಬೆದರಿ ಮುದುರಿಕೊಂಡು ಏನು ನಡೆಯುತ್ತಿದಿಯೋ ಏನೋ ಎಂದು ನೋಡುತಿದ್ದಾರೆ. ಬಂದೂಕು ಜಿಂಕೆ ಮರಿಯ ಕಡೆಗೇ ಇದೆ. ಜಿಂಕೆಯ ಕೂಗು ಹೆಚ್ಚಾಯಿತು. ಒಂದೇ ಸಾರಿಗೆ ಸಾವಿನ ಕೂಗು ಕೂಗಿತು. ವೀರಶಿವನ ಕೈಯೊಳಗಿನ ಬಂದೂಕು ರ‍್ಜಿಸಿತು. ತೋಟ ತೂರಿ ನುಗ್ಗಿಹೊರಟಿತು. ಹುಲಿ ಎಗರಿಬಿತ್ತು. ಹುಲಿ…ಹುಲಿ… ಜಿಂಕೆಗಾಗಿ ಬಂದಿತ್ತು. ವೀರಶಿವನ ಗುರಿ ಗೆದ್ದಿತು. ಆ ಕ್ಷಣದಲ್ಲೇ ಹಗ್ಗದ ಮೊಲಕು ಬಿಡಿಸಿಕೊಂಡ ಜಿಂಕೆ ಅಷ್ಟೇ ಹೆದರಿಕೆಯಲ್ಲಿ ಜಿಗಿದು ಹಾರಿ ಪೊದೆಯೊಳಗೆ ತೂರಿಹೋಯಿತು. ಗುಡ್ಡ ನಾಲ್ಕು ಹೆಜ್ಜೆ ಇಳಿದು ಮತ್ತೆ ಬಂದೂಕನ್ನು ಸರಿಪಡಿಸಿಕೊಂಡು ಕೆಳಗೆ ಬಿದ್ದು ವಿಲವಿಲನೇ ವದ್ದಾಡುತಿದ್ದ ಹುಲಿಯನ್ನು ಗುರಿಯಿಟ್ಟು ಮತ್ತೆ ಹೊಡೆದನು. ಅದು ರ‍್ಜಿಸುತ್ತಾ ವದ್ದಾಡಿ ಸತ್ತಿತು. ಇದನ್ನೆಲ್ಲಾ ಗದಗದನೇ ನಡುಗುತ್ತಾ ನೋಡುತಿದ್ದ ಜೊತೆಗಾರರೆಲ್ಲಾ ಅಂಗೇ ಕೇಕೆ ಹಾಕಿದರು. ಇದು ಪರಶಿವನ ಬೇಟೆಯ ಕಥೆ.
ಹುಲಿಯನ್ನು ಹೊಡೆದನೆಂದು ಊರೆಲ್ಲಾ ತಿಳಿದಮೇಲೆ ಎತ್ತನ ಬಂಡಿಯಮೇಲೆ ಸತ್ತ ಹುಲಿಯನ್ನೂ, ವೀರ ಶಿವನನ್ನೂ ಕೂರಿಸಿ ಮೆರವಣಿಗೆ ಮಾಡಿದರು ಊರಜನ. ಸುತ್ತು ಮುತ್ತಲ ಅರವತ್ತು ಹಳ್ಳಿಗಳವರೂ ಬಂದು ಹಬ್ಬ ಮಾಡಿದರು.ಆ ಹುಲಿ ರ‍್ಮ ತೆಗೆದು ರ‍್ಪದಿಂದ ಪರಶಿವನ ಮನೆಗೆ ನೇತು ಹಾಕಿದರು.ಹುಲಿಯುಗುರು ತೆಗೆದು ಬಂಗಾರದ ಸರಕ್ಕೆ ಹಾಕಿಕೊಂಡರು.
***
ಪರಶಿವನ ವಿವಾಹ ನಿಶ್ಚಯವಾಯಿತು. ಕರವಾಗಿ ಮಾವನಿಗೆ ಕೊಮಾರನ ಹಳ್ಳಿ ತಾಂಡಾದ ಬಳಿಯ ಬೆದ್ದಲು ಭೂಮಿಯನ್ನು ನೀಡಿದನು. ವಿವಾಹದ ದಿನ ವಧು ಪರ‍್ವತಿಗೆ ಏಳು ಗಜದ ರೇಷಿಮೆ ಸೀರಿ,ಝರಿ ರವಿಕೆ, ಬಂಗಾರದ ಬಳೆಗಳು,ಮೂಗು ನತ್ತು,ಬುಗುಡಿ,ಬೆಂಡೋಲಿ,ತೀಕಿ,ನಾಗರ,ಬೆಳ್ಳಿ ಡಾಬು, ಏಳುವರಹದ ವಡವೆಗಳು ಎಲ್ಲಾ ಪರಶಿವನೇ ಕನ್ನೆಗೆ ಇತ್ತನು.
“ ಬರಗಾಲವು ಕಿತ್ತು ತಿನ್ನುವಾಗ ಇದೇನಪೋ ಮದುವಿ” ಎಂದರು ಸರೀಕರು.
“ ನಮ್ಮೂರ ಗೌಡಪ್ಪನ ಮದುವಿ ನಾವು ಘನವಾಗೇ ಮಾಡಿಕೊಳ್ಳತೀವಿ” ಅಂದು ಆಕಾಸದಂಗ ಹಂದರ ಹಾಕಿ,ಊರೆಲ್ಲಾ ರಂಗೋಲಿ ಬಿಟ್ಟು,ದೊಡ್ಡ ಊರ ಹಬ್ಬದಂತೆ ಹನ್ನೆರಡು ದಿನಗಳ ಮದುವಿ ಮಾಡಿದರು. ಸುತ್ತು ಹಳ್ಳಿಗಳೂ ಸಂಭ್ರಮದಿಂದ ಕುಣಿದವು.
ಮದುವಿ ಹೆಣ್ಣು ಪರ‍್ವತಿ ಅದೆಷ್ಟು ಅದೃಷ್ಟವಂತಳೋ..!? ಎಂದು ಊರೆಲ್ಲಾ ಗಲಗಲನೇ ಅಂದುಕೊಂಡರು. ಅದೇನು ಗಾಚಾರನೋ…ಆಯಮ್ಮನು ಊರೊಳಗೆ ಕಾಲಿಟ್ಟೊಡನೆಯೇ ಬರವು ಬೆನ್ನುಬಿದ್ದಿತು. ಮನಿ ಮನಿಗೆ ಅರಿಷ್ಟವು ಬಡಿಯಿತು. ಬಾವಿಗಳೆಲ್ಲಾ ಒಣಗಿ ಹೋಗಿ, ಹಳ್ಳಗಳೆಲ್ಲಾ ಇಂಗಿ ಹೋಗಿ, ಊರು ನಂಬಿದ ಚಿನ್ನದ ಹಗರಿ ಎಂಬ ಕಿರು ನದಿಯು ಒಣಗಲು ಶುರುವಾಗಿದೆ. ಅವ್ವನ ಜಾತ್ರೆಯ ದಿನ ಮಾಯವ್ವನಿಗೆ ಬೋನಗಳ ಎಡೆ ಇಟ್ಟರು,ಅಂಗಳದಲ್ಲಿ ಕುರಿಕೋಣ,ಆಡು ಕೋಳಿಗಳೆಂಬೋ ನೂರಾರು ಜೀವಿಗಳ ರಕ್ತದ ಮುಖಗಳನ್ನ ಚಲ್ಲಿ, ಬಂಡಿಗಳ ಕಟ್ಟಿ, ಸಿಡಿಗೆ ತೋರಣಗಳನ್ನು ಕಟ್ಟಿಸಿದ್ದಾರೆ. ಗುಡಿಯಲ್ಲಿ ತಾಯಿಮರ‍್ತಿಗೆ ಬೆಳ್ಳಿಯ ಮುಖ,ಕಣ್ಣು,ಕೋರೆಗಳ ಮಾಡಿ ಇಟ್ಟಿದ್ದಾರೆ. ಜಾತ್ರಿಯ ಪೂಜಿ ಜೋರಾಗಿ ನಡೆಯುತ್ತಿದ್ದಾಗಲೇ ತಳವಾರ ಲಕ್ಷ್ಮಿಯ ಮೈಮ್ಯಾಲೆ ಆ ಮಾಯವ್ವ ತಾಯಿ ಮೈದುಂಬಿ ಬಂದಳು…
“ಅಲಲಲಲ ಮಕ್ಕಳೇ…ನಾನು ಯಾರು!?
ಈ ಭೂಮಿ ಆಕಾಶ ಹುಟ್ಟಿದಾಗಿಂದಲೂ…
ಮಹಾಶಕ್ತಿ; ಲೋಕ ಮಾತೆ
ಆದಿಶಕ್ತಿ ; ಲೋಕ ಮಾತೆ
ಕಾಲ ಮೀರಿದವಳು ಗುಡುಗು,ಸಿಡಿಲು,ಗಾಳಿ,ಮಳೆ,ಮುಗಿಲು..
ಈಗ ಒಂದು ಪಕ್ಷಿಯಾಗಿ ಹುಟ್ಟಿ…
ಕೂರಬೇಕೆಂಬ ತಾವು ಸಿಗದಾಗಿ…..
ಕಲ ಕಲನೆ ಗಾಳಿ ಗಾಳಿಯಾಗಿ ಅಂತರ ಅಂತರವಾಗಿ ಆಡುತ್ತಾ…
ಮಹಾ ಬಲಿದಾನವನ್ನ ಕೋರುತ್ತಿದೆ….” ಎಂದು ಹೇಳಿ ದೇವಾಲಯದ ಸುತ್ತಾ ಕಾರ ಮತ್ತು ಮಣ್ಣು ಚಲ್ಲುತ್ತಾ ತಿರುಗಿದಳು. ಜಾತರೆಯು ಪರ‍್ತಿಯಾಯಿತು. ಆದರೆ ಆ ತಾಯಿ ಶಾಂತಿಯಾಗಲಿಲ್ಲವೆಂದು ತಿಳಿದುಹೋಯಿತು.
ಹಸಿರು ಮರಗಿಡಗಳು ಒಣಗಿ ಹೋಗಿವೆ. ಎಲ್ಲಿಯೂ ಕೂಡಾ ಹನಿ ನೀರಿರದ ಪರಿಸ್ಥಿತಿ. ಬರಗಾಲ …ಬರಗಾಲಕ್ಕೆ ಕಾರಣ ಆಯಮ್ಮ ಪರ‍್ವತಿಯೇ…
“ಎಲ್ಲಿಂದಲೋ ಇಲ್ಲಿಗೆ ಸೊಸೆಯಾಗಿ ಬಂದಳು.ಇದೆಲ್ಲವೂ ಆಯಮ್ಮನ ಕಾಲ್ಗುಣವೇ ಎಂದು ಕೆಲವರು ಹೇಳಿದರೆ, ಅದೇನಿಲ್ಲ ಬರಕ್ಕೆ ಕಾರಣ ಆಯಮ್ಮನದೇಗಾಗುತ್ತದೆ ಎಂದು ಕೆಲವರು ಹೇಳಿದರು. ಅದೇನಲ್ಲ ಆಕೆ ಅರಿಷ್ಟ ಊರಿಗೆ ಶಾಪವಾಗಿದ್ದಾಳೆ ಎನ್ನಲು ಪ್ರಾರಂಭಿಸಿದರು. ಆಕೆಯ ಇಂತಹ ಮುಳ್ಳು ಮೊನೆಯ ಮಾತುಗಳನ್ನು ಭರಿಸದಾದಳು.ತನ್ನೊಳಗೆ ತಾನು ಕುಗ್ಗಿ ಕುಗ್ಗಿ ಅಳತೊಡಗಿದಳು. ತನ್ನ ಅರಿಷ್ಟದ ಕಾರಣದಿಂದಾಗಿಯೇ ಊರು ಬಂಜರು ನೆಲವಾಗುತ್ತಿದೆ ಎಂದು ಅಂದುಕೊಂಡಳು.
ಪರಶಿವನು ಸಮಾಧಾನಿಸಿದರೂ ಕೇಳಲಿಲ್ಲ.
ಗಂಡ ಹೊಲದ ಕಡೆಗೆ ಹೋದಾಗ ಆ ನಡು ಮದ್ಯಾನ್ಹದಲ್ಲಿ ಕಣಗಿಲೆಯ ಹೂಗಳನ್ನು ಬಟ್ಟಲತುಂಬಾ ಬಿಡಿಸಿಕೊಂಡು ಬಂದು ಅರೆದು ಮನಸಿನೊಳಗೆ ಆ ಮಾಯಮ್ಮ ತಾಯಿಗೆ ಅಡ್ಡ ಬಿದ್ದು ಹರಕೆ ಮಾಡಿಕೊಂಡಳು. “ ಊರು ಜನರ ಕಷ್ಟಗಳು ಕೊನಿಯಾಗಲಿ,ಕಣ್ಣೀರು ಬತ್ತಿ ಹೋಗಲಿ, ನೀರು ನೀರ ಸೆಲೆ ಹರಿದುಬರಲಿ…ಮಳೆ ಸುರಿದು ಸುರಿದೂ ನೆಲವೆಲ್ಲಾ ತೊಯ್ದು ಹಸಿರಾಗಲಿ. ಕರೆಗಳೆಲ್ಲಾ ತುಂಬಿಕೊಳ್ಳಲಿ…ಬೆಳೆ ಬೆಳೆದು ಸುಗ್ಗಿಯಾಗಲಿ… ಬರಗಾಲ ಹೋಗಲಿ… ಚಿನ್ನದ ಹಗರಿ ನದಿ ಮತ್ತೆ ಹರಿದಾಡಲಿ…. ತಾಯಿ ನನ್ನ ಆತ್ಮ ಬಲಿದಾನವನ್ನು ತೆಗೆದುಕೋ. ತಗೆದು ಕೋ ತಾಯಿ. ಎಂದು ಬಟ್ಟಲನ್ನು ಎತ್ತಿಕೊಂಡು ಗಟ ಗಟನೆ ಗಂಟಲಿಗೆ ಹಾಕಿಕೊಂಡಳು. ಕುಡಿದ ಕೆಲವೇ ಕ್ಷಣಗಳಲ್ಲಿ ಉಸಿರು ನಿಂತಿತು. ಕಾಲು ಕೈಗಳು ತಣ್ಣಗಾದವು.
ಚೆಂಜೆಗೆ ವೀರಶಿವನು ಬಂದು ನೋಡೋ ವೇಳೆಗೆ ಆಯಮ್ಮನ ಶರೀರವು ಕಪ್ಪಾಗಿ ಹೋಗಿತ್ತು.ಇನ್ನ ಯಾರೇನು ಮಾಡುತ್ತಾರೆ? ಪರಶಿವನ ದುಃಖವನ್ನು ಪದಗಳು ಹಿಡಿಯಲಾಗಲಿಲ್ಲ. ಬಿದ್ದು ಬಿದ್ದು ಅತ್ತನು. ಬಂಗಾರದಂತಹ ಹುಡುಗಿ ಮದುವಿ ಆಗಿ ಆರು ತಿಂಗಳು ಕಳೆಯಲಿಲ್ಲವಲ್ಲೋ…ಊರಿಗಾಗಿ ಪ್ರಾಣವನ್ನೇ ಕಳಕೊಂಡಳು ಎಂದು ಜನರೆಲ್ಲರೂ ಅಂದುಕೊಂಡರು. ಆಕೆಯನ್ನು ಚಿನ್ನದ ಹಗರಿ ನದಿ ದಡದಲ್ಲೇ ಹೂತರು. ಇನ್ನ ಆ ದಿನದಿಂದಲೇ ವೀರ ಶಿವನು ಆ ಮನೆಗೆ ಹೋಗದೆ ತೋಟದ ಬಳಿಯೇ ಇರತೊಡಗಿದನು. ಮನೆ ಬಳಿಗೆ ಹೋದರೆ ತನ್ನ ಪರ‍್ವತಿಯೇ ಗರ‍್ತಿಗೆ ಬರುತ್ತಾಳೆಂದು ಹೋಗುವುದನ್ನು ಬಿಟ್ಟು ಬಿಟ್ಟನು. ಮತ್ತೆ ಮದುವೆ ಮಾಡಿಕೊ ಎಂದು ಯಾರೇಳಿದರೂ ಕೇಳದಾದನು.
ನೀರಿನ ಪರಿಸ್ಥಿತಿ ಇನ್ನಾ ಅದ್ವಾನವಾಯಿತು. ಎಲ್ಲೆಲ್ಲಿಂದಲೋ ಗುಂಡೆಯೊಳಗಿನ ಗಬ್ಬು ನೀರನ್ನು ಕೂಡಾ ದೇವಿಕೊಂಡು ತರುತಿದ್ದಾರೆ.
***
ದಿನಗಳು ಕಳೆದು ಹೋಗುತ್ತಿದ್ದಂತೆ ಊರಿಗೆ ಪರ‍್ಲಬ್ಬವು ಬಂದಿತು.ಊರಿನೊಳಗೆ ಯಾವ ಸಂಭ್ರಮವೂ ಇಲ್ಲ. ಆಗ ಪರಶಿವನೇ ಮುಂದೆ ಬಂದು ಚಾವಡಿಯ ಬಳಿ ಸಮಾವೇಶ ನಡೆಸಿದನು. ನಾವಿರುವ ಊರೊಳಗೆ ಬರಗಾಲ ಹೋಗಬೇಕೆಂದರೆ ಅಲಾಯಿ ಹಬ್ಬವನ್ನು ಮಾಡಬೇಕು. ಬರಗಾಲ ಹೋಗಲು, ಮಳೆಹನಿ ಸುರಿಯಲು,ನಾವು ಊರಲ್ಲಿ ಪೀರ ದೇವರ ಅಲೆಗುಣಿ ತೋಡಬೇಕು.ಪೀರಲು ದೇವರನ್ನು ಕೂಡಿಸಿ, ಕತ್ತಲ ರಾತ್ರಿಯ ಅಲೆ ಕುಣಿಯ ಕೆಂಡದ ಕರ‍್ಯವು ಜರುಗಿಸಬೇಕು ಎಂದನು. ರ‍್ಮಕ್ಕಾಗಿ ಬಲಿದಾನವಾದ ಹಸನ ಹುಸೇನರಂತೆ ನಮ್ಮೂರಿನ ಒಳ್ಳೇದಕ್ಕಾಗಿಯೇ ಬಲಿದಾನವಾದ ಊರ ಪರ‍್ವತವ್ವನನ್ನು ನೆನೆದು ಯಾರಿಂದಲಾದರೂ ಊರಿಗೆ ಒಳ್ಳೆಯದಾದರೆ ಸಾಕು ಎಂದು ಊರಿನ ಹಿರಿಯರು ಹಾಗೇ ಆಗಲಿ ಎಂದು ಒಪ್ಪಿಕೊಂಡರು.
ಅಮಾಸಿ ಆದ ಮರುದಿನ ಅಲೆ ಕುಣಿ ತೋಡಿದರು. ಸುತ್ತಿಟ್ಟ ಪಂಜಾ ದೇವರುಗಳನ್ನು ಪೂಜೆಗಿಟ್ಟರು. ಹುಲಿಗಳು ಊರತುಂಬಾ ಕುಣಿಯತೊಡಗಿದವು. ಅಳ್ಳಳ್ಳಿ ಬುವ್ವಗಳು ಸೊಂಟಕ್ಕೆ ಗಂಟೆಯ ಪಟಗಾಣಿ ಕಟ್ಟಿಕೊಂಡು ಚಡ್ಡು ಹಿಡಿದು ಹೊರಟರು. ಮಸೂತಿಗೆ ಜನ ಬಂದು ಬಂದು ಸಕ್ಕರಿ ಓದಕಿ ಓದಿಸಿ ಸಿಹಿ ಪಡೆದು ಲಾಡಿ ಕಟ್ಟಿಕೊಂಡು ಹೊರಟರು.ಮಸೂತಿ ದೇವರುಗಳು ಊರೊಳಗೆ ಹೊರಟು ಎಲ್ಲಾ ದೇವರುಗಳನ್ನು ಬೇಟಿ ಮಾಡತೊಡಗಿದವು. ತಂಗಿ ಮಯಮ್ಮನ ಗುಡಿ ಹತ್ತಿರ ಬಂದು ಎರಡೂ ದೈವಗಳು ಅಪ್ಪಿಕೊಂಡು ಅತ್ತವು. ಬಿಡಿಸಿಕೊಂಡು ಬಿಡು ಊರಿಗೆ ಒಳಿತಾಗಲಿ ಎಂದು ಬಿಡಿಸಿಕೊಂಡು ಎರಡು ದಿಕ್ಕಿಗೆ ತಿರುಗಿದವು. ಕತ್ತಲ ರಾತ್ರಿಯ ದಿನ ಕಡಿದು ತಂದ ಮರದ ಬಡ್ಡೆಗಳು ಹೊತ್ತಿಕೊಂಡವು. ಕೆಂಪನೆಯ ಕೆಂಡದ ಕೆನ್ನಾಲಿಗೆಗಳು ಎದ್ದವು. ಜನ ಉಪ್ಪು ಹಿಡಿದು ಕಟ್ಟಿಗೆಗಳನ್ನು ಹೊತ್ತು ತಂದು ಕ್ವಾವ್ ಸೇನ್ ಬಾವ್ ಸೇನ್ ಎಂದು ಕುಣಿಗೆ ಹಾಕಿ ಉರಿ ಹೆಚ್ಚು ಮಾಡಿ ಸುತ್ತಿ ಸುತ್ತಿ ಹೊರಟರು.ಅಲೆ ಕುಣಿಯ ಕೆಂಡದ ಹಾಸಿಗೆಯೇನೋ ತಯಾರಾಯಿತು ಆದರೆ ಅದರಲ್ಲಿ ನಡೆಯುವವರು ಯಾರು? ಯಾವಾಗಲೂ ನಡೆಯೋ ಪೀರಣ್ಣ ಮಾವ ಮಂಚ ಹಿಡಿದಿದ್ದಾನೆ. ಮಗ ಜಮಾಲ ಕಮ್ಮಾರ ಹುಡುಗಿ ಕಾಂತಮ್ಮನನ್ನು ಎಬಿಸಿಗೊಂಡು ಊರು ಬಿಟ್ಟು ಓಡಿದ್ದಾನೆ.
ಕುಣಿ ಉರಿಯುತ್ತಲೇ ಇದೆ. ಆಗ ಪರಶಿವನೇ ಮುಂದಕ್ಕೆ ಬಂದನು. ಕೈಯೊಳಗೆ ದೊಡ್ಡ ಪೀರದೇವರ ಪಂಜಾವನ್ನು ಹಿಡಿದುಕೊಂಡು ಕುಣಿಯೊಳಗೆ ಹೆಜ್ಜೆ ಇಟ್ಟನು. ಹೆಜ್ಜೆ ಕದಲಲು ಕೆಂಡಗಳು ಹೂತು ಬಿಡುವಂತೆ ಎಗರಿ ಎಗರಿ ಬೀಳುತ್ತಿವೆ.ಅಲೆ ಕುಣಿಯ ತುಂಬಾ ಜನ…ತಾಗಿ ಕೊಳ್ಳುತ್ತಾ…ದಬ್ಬಿಕೊಳ್ಳುತ್ತಾ ನೋಡಲಿಕ್ಕೆ ಮೇಲೆ ಮೇಲೆ ಬೀಳುತಿದ್ದಾರೆ.
ಆ ಕಡೆಯಿಂದ ಈ ಕಡೆಗೆ , ಈ ಕಡೆಯಿಂದ ಆ ಕಡೆಗೆ ಮೂರು ಸಲ ಕೆಂಡದೊಳಗೆ ನಡೆದು ಪೀರದೇವರನ್ನು ಗದ್ದುಗೆ ಮೇಲಿಟ್ಟು ಕಣ್ಣು ತಿರುಗಿ ಕುಸಿದು ಬಿದ್ದನು ಪರಶಿವ.
“ ಅಭ್ಯಾಸವಿಲ್ಲದ ಕೆಲಸವನ್ನು ಯಾಕೆ ಮಾಡಬೇಕಪ್ಪಾ ಸ್ವಾಮಿ” ಎಂದನು ಪಕ್ಕದಲ್ಲಿದ್ದ ಹಿರಿಯ ಕತ್ಲಪ್ಪ.
“ ಈ ಬರಗಾಲ ನೋಡಲಾಗದೇ ಬಂದೆ ಕಣಜ್ಜೋ..” ಎಂದನು ವೀರ ಶಿವ ಬಿಗಿದ ಪಾದಗಳನ್ನು ನೋಡಿಕೊಳ್ಳುತ್ತಾ.
ಆದರೂ ಮಳೆರಾಯ ತಿರುಗಿ ನೋಡುತ್ತಿಲ್ಲ. ಹನಿ ಬೀಳುತ್ತಿಲ್ಲ. ಮಾಡಗಳೆಲ್ಲಾ ಮೊಂಡು ಬಿದ್ದುಬಿಟ್ಟಂಗದೆ.
ಅಲೆ ಕುಣಿಯ ಕೆಂಡ ಚೆಲ್ಲಾಡಿ ದೇವರು ಹೊರಟ ಬಳಿಕ ಆ ಬೂದಿಯನ್ನು ವಿಭೂತಿಯಾಗಿ ಬಳಸಲಿಕ್ಕೆ ,ಆಧಾರವಾಗಿ ಇಟ್ಟುಕೊಳ್ಳಲಿಕ್ಕೆ ಜನರು ಪೈಪೋಟಿಗೆ ಬಿದ್ದಿದ್ದಾರೆ. ಆ ಬೂದಿ ಇದ್ದರೆ ಮನೆಯೊಳಗೆ ದೆವ್ವಗಳ ಕಾಟ ಬರೋದಿಲ್ಲ. ಹತ್ತಿರ ಸುಳಿಯಲಾರವು ಎಂಬುದು ಅವರ ನಂಬಿಕೆ. ಉಳಿದ ಬೂದಿಯನ್ನ ಜನರು ಆಕಾಶಕ್ಕೆ ತೂರಿದರು. ಮಳೆರಾಯನಿಗೆ ಬಾರಪ್ಪೋ ಸ್ವಾಮಿ ಎಂದು ಕೈ ಮುಗಿದರು. ಆದರೂ ಆಕಾಶರಾಯ ಕರಗಲಿಲ್ಲ.
ಜನ ಗುಳೇ ಹೋಗಲು ಶುರು ಮಾಡಿದರು. ನೀರಿಲ್ಲದ ಊರಲ್ಲಿ ಬಿದ್ದು ಸಾಯುವುದಕ್ಕಿಂತಾ ಎಲ್ಯಾನ ಕಾಡಲ್ಲಾದರೂ ಗಡ್ಡೆ ಗೆಣಸು ತಿಂದು ಇರೋದೇ ಪಾಡೆಂದು ಊರ ಜನರು ಮನೆಗಳ ತೊರೆದು ಹೋಗುತಿದ್ದಾರೆ. ಇಷ್ಟು ಕಾಲ ನಂಬಿಕೊಂಡಿದ್ದ ನೆಲವನ್ನು ಬಿಟ್ಟು ಕೊಟ್ಟು ದೇಸಾಂತರ ಹೋಗುತ್ತಿರುವವರ ನೋಡಿದಾಗ ಪರಶಿವನಿಗೆ ನೋವಾಗುತ್ತಿದೆ.
ಆದರೂ ಪಾಪ ಆತನೇನು ಮಾಡುತ್ತಾನೆ. ಕರುಣ ರಸವನ್ನು ಹೊಮ್ಮಿಸುವ ಭಕ್ತ ಕುಮಾರವ್ಯಾಸನ ಕಥೆ ಹೇಳಿಸಿದರೆ ಆ ಮಾಡಗಳು ಕರಗಿ ಕರುಣಿಸುತ್ತವೆಂದು ಯಾರೋ ಹಿರಿಯ ಹೇಳಿದರೆ ಆಗಲಿ ಬಿಡೆಂದು ಶಿವಮೊಗ್ಗದ ಕಡೆಯಿಂದ ಕಲಾ ಕಾರರನ್ನು ಕರೆಕಳಿಸಿದನು. ರಾತ್ರಿಯೆಲ್ಲಾ ಮಾಯವ್ವ ತಾಯಿಗೆ ಕಾವ್ಯದ ರಸವನ್ನು ಉಣಿಸತೊಡಗಿದನು.
ಅಳಿದುಳಿದವರು ಕೂಡಿ ಮಳೆಯ ಹಾಡುಗಳ ಹಾಡುತಿದ್ದಾರೆ.
“ ಯಾತಕ್ಕೆ ಮಳೆ ಹೋದವೋ ಶಿವ ಶಿವಾ
ಲೋಕ ತಲ್ಲಣಿಸುತಾವೋ ಶಿವ ಶಿವಾ…
ಬೇಕಿಲ್ಲಾದಿದ್ದರೆ ಬೆಂಕಿಯ ಮಳೆ ಸುರಿದು
ಉರಿಸಿ ಕೊಲ್ಲಲು ಬಾರದೇ.
ಹೊಟ್ಟೆಗೆ ಅನ್ನ ಇಲ್ಲದಲೆ
ನಡೆದರೆ ಜೋಲಿ ಹೊಡೆಯುತಲೆ
ಪಟ್ಟದಾನೆಯಂತ ಸ್ತ್ರೀಯಾರು ಸೊರಗಿ
ಸೀರೆ ನಿಲ್ಲೋದಿಲ್ಲ ಸೊಂಟಾದ ಮೇಲೆ.
ಹಸುಗೂಸು ಹಸುವಿಗೆ ತಾಲದೆಲೆ
ಅಳುತಾವೆ ರೊಟ್ಟಿ ಕೇಳುತಲೇ
ಹಡೆದ ಬಾಣಂತಿಗೆ ಅನ್ನವು ಇಲ್ಲದಲೆ
ಏರುತಾವೆ ಮೊಳಕೈಗೆ ಬಳೆ.
ಒಕ್ಕಾಲು ಮಕ್ಕಳಂತೆ
ಅವರಿನ್ನು ಮಕ್ಕಳನು ಮಾರುಂಡರು
ಮಕ್ಕಳನು ಮಾರುಂಡು ರೊಕ್ಕವನು ಮಾಡುತಾರೆ
ಮುಕ್ಕಣ್ಣ ಮಳೆ ಕರುಣಿಸೋ..
ಸ್ತ್ರೀಯರು ಅಳುತ್ತಿದ್ದಾರೆ. ಹಳ್ಳಿ ಜನರು ಮುತ್ತಿಕೊಳ್ಳುತಿದ್ದಾರೆ. ಬಂಗಾರದಂತ ಮಕ್ಕಳನ್ನು ಮಾರುವುದೇಗೆ ಎಂದು , ಅಂತ ಘಳಿಗೆ ತಂದ ಮಳೆರಾಯನಿಗೆ ತಾಯಂದಿರು ಬರಕ್ಕೆ ಶಪಿಸುತಿದ್ದಾರೆ. ಇದನ್ನು ಕಂಡ ಪರಶಿವನಿಗೆ ಬಾಯಿ ಕಟ್ಟಿತು. ಕಾಲು, ಕೈಗಳು ಬಿಗಿಯಲಾರಂಭಿಸಿದವು. ನಾಟಿ ವೈದ್ಯರು ಬಂದು ಹಸಿರು ಸೊಪ್ಪಿನ ರಸ ಹಿಂಡಿ ಕೂಡಿಸಿದರು. ಹಾಡು ಕಾವ್ಯಗಳು ಮಧ್ಯದಲ್ಲೇ ನಿಂತು ಹೋದವು.
ಆ ದಿನ ಮೊದ ಮೊದಲು ಪರಶಿವನಿಗೆ ಸ್ವಲ್ಪ ಸ್ವಲ್ಪ ಮತಿ ತಪ್ಪುವುದು ಶುರುವಾಯಿತು. ಹುಚ್ಚು ಹುಚ್ಚಾಗಿ ಮಾತಾಡುವುದು…. ವಿಚಿತ್ರವಾಗಿ ನಗುವುದು..ಅಳುವುದು….ಆಕಾಶಕ್ಕೆ ತಿರುಗಿ ಉಗಿವುದು… ಈ ರ‍್ತನೆಯನ್ನು ನೋಡಿದವರಿಗೆ ಮನವೆಲ್ಲಾ ನೊಂದಿತು.
ಬಂಗಾರದಂತಹ ಮನೆಯ ನಡುಗಂಬ ಕುಸಿದು ಬಿದ್ದಾಗ, ಭೂಮಿಗಳೆಲ್ಲಾ ಪಾಳು ಬಿದ್ದಾಗ ವೀರಶಿವನನ್ನು ನೋಡಿಕೊಳ್ಳರ‍್ಯಾರೂ ಇಲ್ಲದಾದರು. ಕಾಲದೊಂದಿಗೆ ಆತನ ವಯಸ್ಸೂ ಕರಗಿ ಹೋಗುತ್ತಿದೆ. ಪ್ರಾಯ ಹಾರಿ ಹೋಗಿದೆ.
ಮನುಷ್ಯನೇನೂ ಕುಗ್ಗಲಿಲ್ಲ ಆದರೂ ಆಗಾಗ ಬಿದಿರುಕೋಲು ಹಿಡಕೊಂಡು ಊರೊಳಗೆ ಕಾಣಿಸುತಿರುತ್ತಲೇ ಇರುತ್ತಾನೆ. ಆದರೂ ಆ ಮನುಷ್ಯ ಸುಮ್ಮನಿರುತಾನಾ…
***
ಬೆಳಗಾದಗಿಂದಲೂ ಬೆಳ್ಳನೆಯ ಮೋಡಗಳನ್ನು ಬೈಯುತ್ತಲೇ ಇದ್ದವನು ಈಗ ಹೊರಟಿದ್ದಾನೆ.ವೀರಾಪುರದ ಬಳಿಯ ಕಾಕಿ ಚಣ್ಣದ ಎಲ್ಲಜ್ಜನನ್ನು ಕಲೆತು ಅಂಜನ ಹಾಕಿ ನೋಡು ಎಂದನು. ಚಿನ್ನದ ಹಗರಿ ನದಿ ಕತೆಯೇನೋ. ಆತ ನೋಡಿ ಹೇಳಿದನು.” ನೆಲದ ಕೆಳಗಿನಿಂದ ಆಕಾಶದ ಮೋಡದ ತನಕ ಅರಿಷ್ಟವು ಸುತ್ತಿಕೊಂಡಿದೆ. ದೊಡ್ಡ ಬಲಿದಾನ ನಡೆಯದ ಹೊರತು ಇದು ಹೋಗದು. “ ಹೌದೌದು. ಹುಣ್ಣಿಮೆ ದಿನವೂ ಮಾಯವ್ವ ತಾಯಿ ಮೈದುಂಬಿ ಇದೇ ಮಾತೇಳಿದಳು.” ಎನ್ನುತ್ತಾ ಜೋರು ಜೋರಾಗಿ ನಡೆದು ಮಾಯಮ್ಮ ದೇವಿ ಗುಡಿಯ ಬಳಿಗೆ ಬಂದನು. ವಿಗ್ರಹಕ್ಕೆ ಹತ್ತಿದ ಮಸಿಗುಡ್ಡೆಯನ್ನು ತೆಗೆದು ಹಾಕಿದನು. ಹರಿಷಿಣ ಕುಂಕುಮಗಳನ್ನು ಹಚ್ಚಿ ಹೂಗಳನ್ನು ಏರಿಸಿ ಪೂಜೆಗಳನ್ನು ಮಾಡಿದನು. ಗುಡಿಯೊಳಗೆ ಸೇರಿಕೊಂಡ ಬಾವಲಿಗಳನ್ನು ಓಡಿಸಿದನು. ಕಸಕಡ್ಡಿ ,ಮಲಿನಗಳನ್ನೆಲ್ಲಾ ತೆಗೆದು ದಿಬ್ಬದ ಮೇಲೆ ಒಗೆದನು. ಬಾಯಿಗೆ ಬಂದ ಮಂತ್ರಗಳೇನೋ ಆ ತಾಯಿಯ ಮುಂದೆ ಕೂತು ಹೇಳಿದನು. ಹಾಡಿದನು. ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿದನು. ಅತ್ತನು. ರಾತ್ರಿಯೆಲ್ಲಾ ಆ ತಾಯಿಯ ವಿಗ್ರಹದ ಬಳಿಯೇ ಕೂತು ಪ್ರರ‍್ಥಿಸಿದನು. ಬೆಳ್ಳಿ ಮೂಡುವ ವೇಳೆಗೆ ಯಾವುದೋ ರಹಸ್ಯವನ್ನು ಕಂಡು ಹಿಡಿದವನಂತೆ ಪರಶಿವನ ಸಂಭ್ರಮದಿಂದ ಊರಿನೊಳಗೆ ಬಂದನು.
“ ಇನ್ನ ಇರಲ್ಲ ಬಿಡು… ಈ ಬರಗಾಲವನ್ನ ಅವ್ನವೌನ್ ಅದರ ಹೆಣ ನೋಡ್ತಾನಿ” ಎಂದು ಊರೆಲ್ಲಾ ತಿರುಗುತ್ತಾ ಹೇಳಿದನು. ಜನರೆಲ್ಲಾ ಈ ಹುಚ್ಚು ಮಾತುಗಳನ್ನ ಆಶ್ರ‍್ಯದಿಂದ ಕೇಳಿದರು.
ಬಿದಿರು ಕೋಲನ್ನು ಪಕ್ಕಕ್ಕೆ ಬಿಸಾಕಿ ಮಾಯಮ್ಮ ತಾಯಿ ದೇವರ ಗುಡಿ ಮುಂದೆ ಆ ದೇವಿಗೆ ಧಿಡನಮಸ್ಕಾರ ಮಾಡಿದನು. ಅಂಗೇ ಹೊರ ಹೊಂಟನು… ಎಲ್ಲಿಗೆ ಸಿದ್ದಯ್ಯನ ಗುಡ್ಡದ ಮೇಲಕ್ಕೆ. ರ‍್ಮಾನುಷವಾಗಿ ಒಣಗಿ ಬೀಳು ಬಿದ್ದಿರುವ ಭೂಮಿಗಳು. ಕೆಂಪು ಧೂಳಿನಿಂದ ಸುತ್ತೂ ತಿರುಗಿ ಬರುತ್ತಲಿದೆ. ಏನು ಧೂಳಿನ ದೆವ್ವ ಗಾಳಿ. ಹಾಗೇ ಮುಂದಕ್ಕೆ ಸಾಗಿದನು. ಒಣಗಿದ ಕೆರೆಯ ಬಳಿ ನಿಂತು ಸುತ್ತೂ ಮಾಯಮ್ಮ ತಾಯಿಯನ್ನ ಬಿಡದಂತೆ ಕಂಡನು. ದುಃಖಿಸಿದನು. ದೂರದಲ್ಲಿ ಊರ ಜನರು ಓಡುತ್ತಾ ಇತ್ತ ಕಡೆಗೇ ಬರುತಿದ್ದಾರೆ.
ರಾತ್ರಿಯೆಲ್ಲಾ ಕುಳಿತು ಮಸೆದು ಇಟ್ಟ ರ‍್ಧಚಂದ್ರಾಕಾರದ ಗಂಡು ಗೊಡಲಿಗೆ ಮುತ್ತಿಟ್ಟನು. ನೆಲದ ಮಣ್ಣನ್ನು ತೆಗೆದುಕೊಂಡು ಕಣ್ಣಿಗೆ ತೀಡಿಕೊಂಡನು. “ ನಮಗೇಕೆ ತಾಯಿ ಈ ನರಕ. ಆ ಕಡಿಗೆ ಎಲ್ಲರನ್ನ ಸಾಯಿಸಾದರೂ ಸಾಯಿಸು. ಇಲ್ಲದಿದ್ದರೆ ಎಲ್ಲರಿಗನ್ನಾ ಹೊಟ್ಟೆತುಂಬಿಸು. ನಡುವಿನ ಈ ಬರಗಾಲವೇಕೆ” ಕೈಯೊಳಗೆ ಉಳಿದ ಮಣ್ಣನ್ನು ನೆಲಕ್ಕೆ ಹಾಕಿದನು.
“ ನನ್ನ ಪ್ರಾಣ ತಗಂಡನ್ನಾ ಶಾಂತವಾಗಿ ನಾಲ್ಕು ಚುಕ್ಕೆಗಳ ಕಣ್ಣೀರ ಹನಿಸು… ಎನ್ನುತ್ತಾ ಕೈಯೊಳಗಿನ ಗಂಡಗೊಡಲಿಯನ್ನ ಬಲವಾಗಿ ಗಿರ ಗಿರನೇ ತಿರುಗಿಸಿ ಮುಗಿಲ ಕಡೆಗೆ ಎಸೆದನು ಅದು ತಿರುಗುತ್ತಾ ತಿರುಗುತ್ತಾ ಕೆಳಕ್ಕೆ ಬರುತ್ತಿದೆ…ಬರುತ್ತಿದೆ..ಬರೋ ಕಡೆಗೇ ಶಿರ ಬಾಗಿಸಿದನು ವೀರ ಶಿವ. ತಲೆ ಬಾಗಿಸಿದವನನ್ನ ಪಕ್ಕಕ್ಕೆ ಎಳೆದುಕೊಂಡರು ಊರ ಜನರು.
“ ಬಿಡ್ರೋ… ಬಿಡ್ರೋ…” ಅಂತ ಬಿಡಿಸಿಕೊಂಡನು ವೀರಶಿವ.
ಮೇಲಿಂದ ಬೀಳುತಿದ್ದ ಗಂಡು ಗೊಡಲಿ ನೆಲದ ಮಣ್ಣಲ್ಲಿ ನಾಟಿಕೊಂಡಿತು.
“ ಏನು ಸ್ವಾಮಿ ಹಿಂಗ ಮಾಡಿದಿರಿ” ಜನರೊಳಗಿನ ಯಾರೋ ಕೇಳಿದರು.
“ ಸಾಯಲು ಬಿಡ್ರಿ ನನ್ನನ್ನು ಸಾಯಲು ಬಿಡ್ರಿ” ನಿಮಗೆ ಮಳೆ ರ‍್ತಾವು. ನೀವು ಸುಖವಾಗಿರುತ್ತೀರಿ..” ದುಃಖದಿಂದಲೇ ಹೇಳುತಿದ್ದಾನೆ.
“ ಸತ್ತರೇ ಮಳೆ ಬರುತಾದ ಅಂದ್ರ ದಿನಕ್ಕೊಬ್ಬರು ಸಾಯುತಿಲ್ಲವೇ ಸ್ವಾಮಿ. ಸಾವೇ ಸಮಾಧಾನವಾ…” ಎಂದು ಹೇಳಿದ ಜನರೊಳಗಿನ ಹಿರೀಕ.
“ ಮಾಯಮ್ಮ ತಾಯಿಗೆ ಕರುಣೆ ಹುಟ್ಟಿದರೆ ಈಗಲೇ ಮಳೆ ಬರುತ್ತದೆ. ನಾವ್ಯಾಕೆ ಪ್ರಾಣ ಕಳಕೋ ಬೇಕು. ಯಾರದೋ ಹೆಣ್ಣು ಧ್ವನಿ ಕೇಳುತ್ತಿದೆ.
ಓ… ತನೇನು ಮಾಡುತಿದ್ದೇನೆ. ಯಾಕೆ ಹೀಗೆ ರ‍್ತಿಸುತಿದ್ದೇನೆ. ಇಲ್ಲ. ನಾನು ಜನರಿಗಾಗಿ ವೀರಶಿವನಾಗಿಯೇ ಬದುಕಬೇಕು. ಜನರಿಗಾಗಿ ಬದುಕಬೇಕು. ಊರಿಗಾಗಿ ಬದುಕಬೇಕು. ಕಾಲ ಕೆಳಗೆ ತಣ್ಣನೆಯ ತಂಪು…ತಣ್ಣಗೆ ತಂಪಾದ ಸಣ್ಣನೆಯ ಅನುಭವ… ನೀರ ತೇವ…ಭೂಮಿ ಬಿರಿಯಿತು. ಭೂಮಿ ಉರಿಯಿತು. ಮುಗಿಲು ಬೆದರಿತು.
ಕವಿದುಕೊಂಡ ಕಪ್ಪು ಮೋಡಗಳು ಒಂದಕ್ಕೊಂದು ತಿವಿದುಕೊಂಡು ಅಪ್ಪಳಿಸಿದವು. ಮಿಂಚು ಮಿಂಚು ಹೆಣೆದುಕೊಂಡು ಬೆಂಕಿ ಬೆಳಗಿದವು. ಗುಡುಗು ಸಿಡಿಲು ಸಿಡಿದುಕೊಂಡು ಬೆಂಕಿ ಉಗಿದವು. ಆ ಬಿಸಿಗೆ ಕಪ್ಪು ಮೋಡಗಳು ಕದಲಿ ಕೆಳಗಿಳಿದವು. ಎಲ್ಲಿದ್ದವೋ ಅಲ್ಲೇ. ಎಲ್ಲಿ ನಿಂತ ಮೋಡ ಅಲ್ಲೇ ಹೃದಯವನ್ನು ತೆರೆದು ಕಣ್ಣೀರು ಸುರಿಸಿದಂತಹ ಹನಿಗಳು.
ಒಂದರ ನಂತರ ಒಂದು ನೆಲಕ್ಕೆ ಹಾರಿ ಹಾರಿ ಬರುತ್ತಲಿವೆ ಮಳೆ…ಮಳೆ..ಸುರಿಯುತ್ತಲೇ ಹೋಯಿತು. ಹಗಲೂ ಇರುಳು. ಹೊಳೆಗಳು ತುಂಬಿ ಹೊರಳತೊಡಗಿದವು.
ತಗ್ಗು ಹಳ್ಳ ದಿನ್ನೆಗಳೆಲ್ಲಾ ನೀರು…ನೀರು …ನೀರು.
ಎತ್ತ ನೋಡಿದರೂ ನೀರು… ಕರೆ ಕೋಡಿ ಬೀಳುತ್ತಿದೆ.
ತಾಯಿ ಮಹಾತಾಯಿ.ಮಾಯಮ್ಮ ತಾಯಿ ಹರಿಯುತ್ತಿದ್ದಾಳೆ.
ಚಿನ್ನದ ಹಗರಿಯಾಗಿ ಹರಿಯುತಿದ್ದಾಳೆ. ಪ್ರವಾಹವಾಗಿ ಉಕ್ಕುತಿದ್ದಾಳೆ.
ಹಸಿರಾಗಿ ನಗುತ್ತಾ ಹಾಡುತಿದ್ದಾಳೆ.
ಒಣಗಿದ ಬೇರುಗಳಿಗೆ ಉಸಿರು ಬಂದಿತು.
ಬಾಡಿದ ಎಲೆಗಳಿಗೆ ಪ್ರಾಣ ಬಂದಿದೆ… ಬಂದಿದೆ …ಬಂದಿದೆ.
ಊರಿಗೆ ಉಸಿರು ಬಂದಿದೆ. ಊರು ಹಸಿರ ಮರವಾಗಿದೆ.
ಪಕ್ಷಿಗಳ ಗೂಡಾಗಿದೆ…ಸುಗ್ಗಿಯ ನೆಲವಾಗಿದೆ… ಹಾಡುಗಳ ಕಣವಾಗಿದೆ…ಜಾತ್ರೆಯ ನದಿಯಾಗಿದೆ….ಮಾಯಮ್ಮ ತಾಯಿಯ ಬೆಳ್ಳಿ ಮುಖವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ
-
ದಿನದ ಸುದ್ದಿ4 days agoಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
-
ದಿನದ ಸುದ್ದಿ4 days agoಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ
-
ದಿನದ ಸುದ್ದಿ2 days agoಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
-
ದಿನದ ಸುದ್ದಿ2 days agoಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
-
ದಿನದ ಸುದ್ದಿ1 day ago2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

