ಲೈಫ್ ಸ್ಟೈಲ್
ಕಂತ್ರಿ ನಾಯಿಯಲ್ಲ, ಡೊಂಕು ಬಾಲದ “ಕಂಟ್ರಿ” ನಾಯಿ..!
- ಡಾ.ಎನ್.ಬಿ.ಶ್ರೀಧರ
ಹೋಗಯ್ಯ.. ನಿನ್ ಕಂತ್ರಿ ಬುದ್ಧಿ ತೋರಿಸ್ಬೇಡ..!! ಇದು ಒಂದು ಸಾಮಾನ್ಯ ಬೈಗುಳ. ಈ “ಕಂತ್ರಿ” ಶಬ್ದ ಎಲ್ಲಿಂದ ಬಂತು ಅಂದರೆ “ಶುದ್ಧ ದೇಶಿ” ಅಂತಲೋ ಅಥವಾ ಸ್ಥಳೀಯವಾಗಿ ತಯಾರಾಗಿರುವುದು ಅಂತ ಇರಬಹುದು. ನಮ್ಮ ಬೀದಿ ನಾಯಿಗಳಿಗೆ ಇದೊಂದು ವಿಶೇಷಣವಾಗಿ ಸೇರಿಕೊಂಡು ಬಿಟ್ಟಿದೆ!. ಪಕ್ಕಾ ನಮ್ಮ “ಸ್ವದೇಶಿ ಮೇಕ್” ಆದ ಇವು ಇನ್ನೂ ಸ್ವದೇಶಿ ಪ್ರೇಮಿಗಳ ಕಣ್ಮಣಿ ಆಗದೇ ಇರುವುದು ಅವುಗಳ ದುರಂತವೇ ಸರಿ.
ನಾಯಿಯು ತೋಳದ ಜಾತಿಗೆ ಸೇರಿದ ಒಂದು ಪ್ರಾಣಿ. ಆದರೆ ನಾಯಿಯು ತನ್ನ ಗೆಳೆಯ ಸಮಾನನಾದ ಮಾಲೀಕನ ಮಾತನ್ನು ಕೇಳುವ, ಆಜ್ಞೆಯನ್ನು ಪಾಲಿಸುವ ನಿಯತ್ತಿನ ಸಾಕು ಪ್ರಾಣಿ. ಮನೆ ನಾಯಿಗೂ, “ಬೀದಿ ನಾಯಿ” ಗೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಶಿಕಾರಿಗಾಗಿಯೂ, ಮನೆಯನ್ನು ರಕ್ಷಿಸಲು, ಹೊಲ-ಗದ್ದೆಗಳನ್ನು ಕಾಯಲು ನಾಯಿಯನ್ನು ಸಾಕಲಾಗುತ್ತದೆ. ನಾಯಿಯಲ್ಲೂ ಹಲವು ವಿಧಗಳಿವೆ. ಅವೆಂದರೆ “ಜಾತಿ” ನಾಯಿ ಮತ್ತು “ನಾಯಿ” ಜಾತಿ. ವಿದೇಶಿ ನಾಯಿಗಳಾದ ಡಾಬರ್ಮೆನ್, ಡಾಶ್ ಹಂಡ್, ಲಾಬ್ರಡಾರ್ ಇವೆಲ್ಲಾ “ಜಾತಿ”ನಾಯಿಗಳು.. ನಮ್ಮ ಕಥಾ”ನಾಯಕ”ರಾದ “ಕಂತ್ರಿ” ನಾಯಿಗಳು ಶ್ವಾನ ಪ್ರೇಮಿಗಳ ಪ್ರಕಾರ “ನಾಯಿ” ಜಾತಿ!
“ಡೊಂಕು ಬಾಲದ ನಾಯಕರೆ, ನೀವೇನೂಟವ ಮಾಡಿದಿರಿ?… ಕಣಕವ ಕುಟ್ಟುವ ಅಲ್ಲಿಗೆ ಹೋಗಿ;ಹಣಿಕೀ ಹಣಿಕೀ ನೋಡುವಿರಿ; ಕಣಕವ ಕುಟ್ಟುವ ಒನಕೆಲಿ ಹೊಡೆದರೆ ಕಂಯ್ ಕುಂಯ್ ರಾಗವ ಮಾಡುವಿರಿ! ಹುಗ್ಗಿಯ ಮಾಡುವ ಅಲ್ಲಿಗೆ ಹೋಗಿ ತಗ್ಗೀ ಬಗ್ಗೀ ನೋಡುವಿರಿ;ಹುಗ್ಗಿಯ ಮಾಡುವ ಸವಟಲಿ ಹೊಡೆದರೆ ಕಂಯ್ ಕುಂಯ್ ರಾಗವ ಮಾಡುವಿರಿ! ಹಿರಿ ಬೀದಿಯಲಿ ಓಡುವಿರಿ,ಕರಿ ಬೂದಿಯಲಿ ಹೊರಳುವಿರಿ; ಪುರಂದರ ವಿಠ್ಠಲರಾಯನು ಹೇಳಿದ ಪರಿಪರಿ ಆಟದಿ ಚರಿಸುವಿರಿ!” ಇದೊಂದು ಪುರಂಧರ ದಾಸರ ಜನಪ್ರಿಯ ಕೀರ್ತನೆ.
ಇದರಲ್ಲಿ ನಮ್ಮ “ಕಂತ್ರಿ” ನಾಯಿಗಳ ಸಂಪೂರ್ಣ ಗುಣಗಾನ ಮಾಡಲಾಗಿದೆ. ಪುರಂದರದಾಸರ ಮೊದಲ ಹೆಸರು ”ಶ್ರೀನಿವಾಸ ನಾಯ” ಎನ್ನುವದು ಎಲ್ಲರಿಗೂ ತಿಳಿದ ಸಂಗತಿ. ಈ ಹಾಡಿನ ಪಲ್ಲವಿಯಲ್ಲಿ ‘ಡೊಂಕು ಬಾಲದ ನಾಯಕರೆ’ ಎನ್ನುವ ಪದಪುಂಜವನ್ನು ಗಮನಿಸಿ. ಈ ಸಂಬೋಧನೆಯು ನಾಯಿಯನ್ನು ಉದ್ದೇಶಿಸಿರುವದು ಎನ್ನುವದು ಸಾಮಾನ್ಯ ಅರ್ಥ. ಅದರ ಜೊತೆಗೇ ದಾಸರು ‘ನಾಯಕರೆ’ ಎಂದು ಶ್ರೀನಿವಾಸ ನಾಯಕರನ್ನು ಅಂದರೆ ತಮ್ಮನ್ನೇ ಸಂಬೋಧಿಸಿಕೊಳ್ಳುತ್ತಿರುವದು ಇಲ್ಲಿಯ ವಿಶೇಷಾರ್ಥ. ಬಹುಶಃ ದಾಸರು ತಮಗೆ ತಾವೇ ಹೀಗೆ ಹೇಳಿಕೊಳ್ಳುತ್ತಿರಬಹುದು.
ಈ ನಾಯಿಗಳೂ ಅಷ್ಟೇ.. ಹಸಿವಿನಿಂದ ಬಳಲಿ ಎಲ್ಲೆಲ್ಲಿ ಅಹಾರ ಸಿಗುತ್ತದೆಯೋ ಆಲ್ಲಲ್ಲಿ ನುಗ್ಗಿ ಸಿಕ್ಕ ಸಿಕ್ಕವರಿಂದ ಹೊಡೆಸಿಕೊಂಡು “ಕಂಯ್.. ಕಂಯ್. ಎನ್ನುತ್ತಾ ಮತ್ತೆ ಮತ್ತೆ ಅದೇ ಸ್ಥಳಕ್ಕೆ ನುಗ್ಗಿ ದೀನ ದ್ರಷ್ಟಿಯಿಂದ ನೋಡುತ್ತಾ ದಯೆ ಬರುವ ಹಾಗೇ ಮಾಡಿ ಅಹಾರ ಗಿಟ್ಟಿಸುತ್ತವೆ. ಇದು ಅವುಗಳ ಚಾಕಚಕ್ಯತೆ.ಹಸಿವಾದಾಗ ಅಹಾರ ನೀಡದಿದ್ದರೆ ಎರಡೂ ತುಟಿಗಳನ್ನು ಹಿಸಿದು ದಂತಪಂಕ್ತಿಗಳನ್ನು ತೋರಿಸುತ್ತಾ ಹೆದರಿಸಿ ಅಹಾರ ಗಿಟ್ಟಿಸುವುದಿದೆ.
‘ನಾಯಿಯ ಬಾಲ ಲಳಿಗೆಯಲ್ಲಿ ಹಾಕಿದರೂ ಡೊಂಕೇ’ ಎನ್ನುವ ಗಾದೆ ಮಾತು ಇದೆಯಲ್ಲ! ಇದಕ್ಕೆ ತಕ್ಕ ಹಾಗೇ ನಮ್ಮ ಕಂತ್ರಿ ನಾಯಿಗಳು. ಸುರುಳಿ ಸುತ್ತಿಕೊಂಡು ಅವುಗಳ “ದ್ವಾರ”ವನ್ನೆಲ್ಲಾ ಜಗಕ್ಕೆಲ್ಲಾ ಹೆಮ್ಮೆಯಿಂದ ತೋರಿಸಿಕೊಂಡು ಓಡಾಡುವುದು ಪ್ರಾಣಿಸಹಜ ಧರ್ಮ ಎಂದು ಚರ್ಚೆಗೊಳಪಡಿಸದೇ ಸುಮ್ಮನಾಗುವುದು ಒಳಿತು. ನನ್ನ ಸ್ನೇಹಿತನೊಬ್ಬ ತಮಾಷೆಯಾಗಿ “ಈ ಕಂತ್ರಿ ನಾಯಿ ಮುಂಡೆವಕ್ಕೆ ಚಡ್ಡಿ ಹೊಲಿಸ್ತೀವಿ ಅಂತ ಯಾರೂ ಮುಂದೆ ಬಂದಿಲ್ವೇ?! ಅಸಹ್ಯ ಕಣಪ್ಪಾ.. ನವದ್ವಾರಗಳನ್ನೆಲ್ಲಾ ಜಗತ್ತಿಗೇ ತೋರಿಸ್ಕೊಂಡು ಓಡಾತ್ವಲ್ಲಾ” ಅಂತ ಅಲವತ್ತುಕೊಂಡಿದ್ದ..
“ರೀ ಅವೆಲ್ಲಾ ಕಂತ್ರಿ ನಾಯಿಗಳಲ್ಲ ಕಣ್ರೀ .. ಕಂಟ್ರಿ ನಾಯಿಗಳು..ಹೀಗೆಂದು ಹೇಳಿದ್ದು ನನ್ನ ಸ್ನೇಹಿತ.. ಸಂಜೆ ವಾಕಿಂಗ್ ಹೋಗುವಾಗ ಈ ಕಂತ್ರಿ ನಾಯಿಗಳ ವರ್ತನೆಯನ್ನೇ ಗಮನಿಸುವುದು ನನ್ನ ಕಾಯವಾಗಿತ್ತು. ಒಂದರ ಹಿಂದೆ ಒಂದರಂತೆ ಏನೋ “ಮಹತ್ಕಾರ್ಯ” ಸಾಧಿಸಲು ಕಿವಿ ಕತ್ತು ನೇರ ಮಾಡಿ ಗಂಬೀರವದನ ಮಾಡಿಕೊಂಡು ಆಗಾಗ ಅಲ್ಪ ಸ್ವರದಲ್ಲಿ ಗುರ್ರೆನ್ನುತ್ತಾ ಅವು ಹೋಗುವುದನ್ನು ನೋಡಿದರೆ ವಿಧಾನ ಸೌಧದಲ್ಲಿ ಮಾನ್ಯಮಂತ್ರಿಗಳು ಸಭೆ ಕರೆದಾಗ ತರತರದ ಕಡತಗಳನ್ನು ಬಗಲಲ್ಲಿಟ್ಟುಕೊಂಡು ಮೊಬೈಲಿನಲ್ಲಿ ಯಾರ ಜೊತೆಯೋ ಮಾತನಾಡುತ್ತಾ ಅನ್ಯಮನಸ್ಕರಾಗಿ ಹೋಗುತ್ತಿರುವ ಅಧಿಕಾರಿಗಳಂತೆ ಕಾಣುತ್ತಿದ್ದವು.
ದೀನ ವದನದಿಂದ ಮನೆ ಮುಂದೆ ನಿಂತು ಬಾಲ ಅಲ್ಲಾಡಿಸುತ್ತಾ ಪರಮ ಸ್ನೇಹಿತರಂತೆ ವರ್ತಿಸಿ ತಿಂಡಿಗಾಗಿ ಭಿಕ್ಷೆ ಕೋರುವ ನಾಯಿಗಳ ಸ್ವಭಾವವೇ ಬೇರೆ. ಮನೆಯೊಡತಿಗೆ ಕರುಣೆ ಉಕ್ಕಿ ತಿಂಡಿಯನ್ನು ನೀಡದಿದ್ದರೆ ಜಪ್ಪಯ್ಯ ಅಂದರೂ ಸಹ ಒಂದಿನಿತೂ ಮುಂದೆ ಹೋಗದ ನಾಯಿಗಳೆಷ್ಟೋ?. ಅಲ್ಪ ದಯೆ ಬಂದು ಅಹಾರ ಹಾಕಿದರೆ ಅಲ್ಲಿಯೇ ಜಾಂಡಾ ಊರಿಯೇ ಬಿಡುತ್ತವೆ. ಕ್ರಮೇಣ ಅವುಗಳ ಸ್ನೇಹಪರ ನಡುವಳಿಕೆಯಿಂದ ವಿಶ್ವಾಸ ಗಳಿಸಿ ಮನೆಗೆ ಎಂಟ್ರಿ ಹೊಡದು ಮನೆಯ ಕಾಯಂ ಸದಸ್ಯನಾದರೂ ಸಹ ಆಶ್ಚರ್ಯವಿಲ್ಲ!!
ನನ್ನ ಸ್ನೇಹಿತನ ಕಾಕರ್ ಸ್ಪಾನಿಯಲ್ ಜಾತಿಯ ಶ್ವಾನವೊಂದನ್ನು ಕರೆದು ಕೊಂಡು ವಾಕಿಂಗ್ ಹೋಗುತ್ತಿದ್ದೆವು. ಒಮ್ಮೆ ದಾರಿಯ ಪಕ್ಕ ಒಂದು ಕಂತ್ರಿ ನಾಯಿಯೊಂದು ತನ್ನ ಪಕ್ಕೆಲೆಬುಗಳನ್ನು ಬಿಟ್ಟುಕೊಂಡು ನೆಲಕ್ಕೆ ಮೆತ್ತಿಕೊಂಡಂತೆ ಚಪ್ಪಟೆಯಾಗಿ ಬಿದ್ದುಕೊಂಡಿತ್ತು. ನಮ್ಮ ಇರುವನ್ನು ಸಂಪೂರ್ಣವಾಗಿ ಅಲಕ್ಷಿಸಿ ತನ್ನ ಕಿವಿಗಳೆರಡನ್ನು ತಟಪಟ ಕೊಡಗಿ ಹಾಗೇ ಸತ್ತು ಹೋದಂತೆ ಬಿದ್ದುಕೊಂಡಿತು.
ನಮ್ಮ ನಾಯಿಯ ವಾಸನೆ ಸಿಕ್ಕೊಡನೆ ಶವದಂತೆ ಬಿದ್ದಿದ್ದ ಅದಕ್ಕೆ ತಟಕ್ಕನೆ ಪ್ರಾಣ ಸಂಚಾರವಾಗಿ ಪ್ರಾಣ ಸಂಚಾರವಾಗಿ ಸ್ಪ್ರಿಂಗಿನಂತೆ ನೆಗೆದು ಗುರ್ರೆನ್ನುತ್ತಾ ದಂತ ಪಂಕ್ತಿಗಳನ್ನು ತೋರಿಸುತ್ತಾ ಏರಿಹೋಯ್ತು. ಆದರೆ ನಮ್ಮ ನಾಯಿ ಒಳ್ಳೆ ಪಳಗಿದ ರಾಜಕಾರಣಿಯಂತೆ ತನ್ನ ಎರಡೂ ತುಟಿಗಳನ್ನು ಸಾಧ್ಯವಾದಷ್ಟು ಮೇಲೆತ್ತಿ ಒಳ್ಳೆ ಹೊಳಪು ಕೊಟ್ಟ ಗರಗಸದಂತಿದ್ದ ಎರಡೂ ದಂತ ಪಂಕ್ತಿಗಳ ಸಂಪೂರ್ಣ ಪ್ರದರ್ಶನ ಮಾಡಿತು.
ತನ್ನ ಆಯುದ ಖಜಾನೆಗಳಲ್ಲಿ ಇರುವ ವಿವಿಧ ತರಹೇವಾರಿ ಆಯುಧೋಪಕರಣಗಳ ವಿವರಗಳನ್ನು ಅವುಗಳ ಉಪಯೋಗದಿಂದ ಮುಂದೊದಗುವ ದುಷ್ಪರಿಣಾಮಗಳನ್ನೂ ಅದಕ್ಕೆ ಮನದಟ್ಟಾಗುವಂತೆ ಎಷ್ಟು ಸಾಧ್ಯವೋ ಅಷ್ಟು ಅಕರಾಳ ವಿಕರಾಳತೆಯಿಂದ ತೋರಿಸಿತು.
ನಮ್ಮ ಮಿತ್ರನ ಗಂಭೀರವಾದ “ಜಾತಿ” ನಾಯಿಯ ಬಳಿ ಇರಬಹುದಾದ ಯುದ್ದೋಪಕರಣಗಳನ್ನು ನೋಡಿದ ಕೂಡಲೇ ಕಾರ್ಗಿಲ್ ಯುದ್ಧದಲ್ಲಿ ಸೋತ ಪಾಕಿಸ್ತಾನದಂತೆ ಸೋಲು ಖಚಿತವಾಗಿ ಕಂತ್ರಿ ನಾಯಿಗೆ ಕೊಂಚ ದಿಗಿಲಾಯ್ತು. ತಕ್ಷಣ ತನ್ನ ರಕ್ಷಣಾ ನೀತಿಯನ್ನು ಬದಲಿಸಿ ಕೇವಲ ಮಾನ ಮರ್ಯಾದೆ ಉಳಿಸಿಕೊಳ್ಳಲು ದೂರದಿಂದಲೇ ವೊವ್.. ವೊವ್.. ಎಂದು “ನಾನೇನು ನಿನ್ನ ವೈರಿಯಲ್ಲ, ಸ್ನೇಹಾ ಮಾಡೋಣವೇ?” ಎಂಬಂತೆ ಬೊಗಳಿತು.
ನಮ್ಮ ನಾಯಿ ಜಾತಿ ನಾಯಿಯಾದ ಕಾರಣ ತುಸು ಮರ್ಯಾದೆಯನ್ನು ಬಿಂಕವನ್ನು ಜಾಸ್ತಿ ತೊರಿಸಿ ತನ್ನ ಗಂಬೀರತೆಯನ್ನು ಮೆರೆಯಿತು. ಪೊಗದಸ್ತಾದ ಕಾಯ, ಸುಂದರ ನುಣುಪಾದ ಕೇಶರಾಶಿಯ ಉದ್ದ ಕಿವಿಗಳ “ಜಾತಿ” ನಾಯಿಯನ್ನು ನೋಡಿ ಅದನ್ನು ನೋಡಿ ಬೊಗಳಿದ ಬಗ್ಗೆ ಆ ಕಂತ್ರಿ ನಾಯಿ ಅಪರಾಧಿ ಮನೋಭಾವ ಹೊಂದಿ ಅದಕ್ಕೆ ಅರಿವಿಲ್ಲದಂತೆ ಅದರ ಮೋಟು ಬಾಲ ಅದರ ಹಿಂಗಾಲುಗಳ ನಡುವೆ ತನ್ನಷ್ಟಕ್ಕೆ ತಾನೇ ಮಡಚಿಕೊಳ್ಳತೊಡಗಿತು.
ನಮ್ಮ ನಾಯಿ ಇದೇ ಸಂದರ್ಭವೆಂದು ಅದರ ಮನಸ್ಥೈರ್ಯವನ್ನು ಪೂರ್ತಿಯಾಗಿ ಕಲಕಲು “ಏನೆಂದು ಬಯ್ದೆ?.ಇನ್ನೊಂದು ಸಾರಿ ಬೊಗಳು ನೋಡೋಣ!!” ಎಂಬಂತೆ ಅದರ ಹತ್ತಿರ ಏರಿ ಹೋಯ್ತು. ಆ ಕಂತ್ರಿ ನಾಯಿ ಮಕಾಡೆ ಮಲಗಿ ನಾಲ್ಕೂ ಕಾಲುಗಳನ್ನು ಮೇಲೆತ್ತಿಕೊಂಡು ಅಂಗಾತ ಬಿದ್ದು ತನ್ನ ಪರಮ ಶರಣಾಗತಿಯನ್ನು ವ್ಯಕ್ತಬಿಟ್ಟಿತು !!.
ಇದೇ ಸಂದರ್ಭವೆಂದು ನಮ್ಮ ನಾಯಿ ಅದರ ಹತ್ತಿರ ಹೋಗಿ ಅದರ “ಮರ್ಮಸ್ಥಳ” ದ “ಸುವಾಸನೆ” ಯನ್ನು ಅಘ್ರಾಣಿಸಿ ಅದೂ ತನ್ನ ಜಾತಿಯ ಗಂಡು ನಾಯಿಯೇ ಎಂದು ತಿಳಿದು “ತತ್ತೆರೆಕಿ.. ಯೂಸ್ಲೆಸ್!” ಎಂಬಂತೆ ಬಯ್ದು ಪರಮ ನಿರಾಸಕ್ತಿಯಿಂದ ನಮ್ಮೆಡೆ ರಾಜಗಾಂಭೀರ್ಯದ ನಡೆಯಿಂದ ಬಂದಿತು. ಅದರ ಜಾಗದಲ್ಲಿ ಹೆಣ್ಣು ಕಂತ್ರಿ ನಾಯಿ ಇದ್ದರೆ ಮಜಾ ಬೇರೆ ಇತ್ತು ಎಂದು ನನ್ನ ಸ್ನೇಹಿತ ನಕ್ಕ !!.
ಈ ಕಂತ್ರಿ ನಾಯಿಗಳು ಹೀಟಿಗೆ ಬಂದರಂತೂ ಮುಗಿಯಿತು !! ಒಂದಿನಿತೂ ಮಾನ ಮರ್ಯಾದೆ ಇಲ್ಲದೆಯೇ “ನಾಯಿ” ಕಾದಾಡಿದಂತೆ ಕಾದಾಡುತ್ತವೆ. ಹತ್ತಾರು ಗಂಡು ನಾಯಿಗಳೆಲ್ಲಾ ಸೇರಿಕೊಂಡು ಒಂದಕ್ಕಿಂತ ಒಂದು ಮೇಲು ಎಂಬಂತೆ ತಮ್ಮ ತಮ್ಮೊಳಗೇ ಗುದ್ದಾಡುತ್ತವೆ. ಗೆದ್ದ ನಾಯಿಗೆ ಮಿಲನ ಮಹೋತ್ಸವದ ಸಂತಸವಾದರೆ ಸೋತ ಗಂಡು ನಾಯಿಗಳೆಲ್ಲಾ ಮೊಗ ಸೋತ ಸ್ವರವನ್ನು ಕುಂಯಿ .. ಕುಂಯಿ ಎಂದು ಹೊರಡಿಸುತ್ತಾ ಸೊಪ್ಪಗೇ ಮೊಗ ಮಾಡಿಕೊಂಡು ಬಂದ ದಾರಿಗೆ ಸುಂಕವಿಲ್ಲದಂತೆ ಮತ್ತೊಂದೆಡೆ ತೆರಳುತ್ತವೆ.
ಮುಂದುವರೆಯುತ್ತದೆ….
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಂಕಣ
Indian birthwort: ಪರಮಾತ್ಮನ ಹೆಸರಲ್ಲೇ ಇರುವ ದಿವ್ಯೌಷದ ಈಶ್ವರ ಬಳ್ಳಿ ಬಗ್ಗೆ ಗೊತ್ತೇ?
‘ಈಶ್ವರ’ ಎಂದ ಕೂಡಲೇ ಪರಮಾತ್ಮನನ್ನೆ ನೆನಪಿಸಿಕೊಳ್ಳೋ ನಮಗೆ ಅದೇ ಹೆಸರಿನಲ್ಲಿ ದಿವ್ಯೌಷಧಿ ಇದೆ ಎಂಬುದು ಎಷ್ಟು ಜನರಿಗೆ ತಿಳಿದೀತು? ಹೌದು! ಪರಮಾತ್ಮನ ಹೆಸರಿನಲ್ಲೇ ಒಂದು ಗಿಡಮೂಲಿಕೆ ಇದೆ (Indian birthwort). ಇದರ ವಿಶೇಷತೆ ಏನು? ಅದರಿಂದಾಗುವ ಪ್ರಯೋಜನಗಳೇನು? ಆರೋಗ್ಯದ ಮೇಲೆ ಬೀರುವ ಪ್ರಬಾವಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಈ ಬಳ್ಳಿಯನ್ನು ಹೆಚ್ಚಾಗಿ ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಬಹುದಾಗಿದೆ. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಸಾಮಾನ್ಯವಾಗಿ ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿಯಾಗಿದ್ದು, ಇದರ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇನ್ನೂ ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರುತ್ತದೆ.
ಈಶ್ವರ ಬಳ್ಳಿ (Indian birthwort)ಯ ಪೌರಾಣಿಕ ಹಿನ್ನೆಲೆ:
ನಮ್ಮೆಲ್ಲರಿಗೂ ತಿಳಿದಂತೆ ಶಿವ ಸಮುದ್ರ ಮಂಥನ ಮಾಡುವಾಗ ಹಾಲಾಹಲ (ವಿಷ) ಉತ್ಪತ್ತಿಯಾಯಿತು. ಆ ವಿಷ ಯಾರಿಗೂ ತೊಂದರೆಯಾಗಬಾರದೆಂದು ತಾನೇ ಅದನ್ನು ಕುಡಿದ. ಇದನ್ನು ನೋಡಿದ ಪಾರ್ವತಿ ದೇವಿ ಆ ವಿಷ ತನ್ನ ಪತಿಯ ಹೊಟ್ಟೆ ಸೇರಬಾರದೆಂದು ಆತನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಒಳ ಹೋಗಲಿಲ್ಲ. ವಿಷದ ಪ್ರಭಾವದಿಂದ ಕುತ್ತಿಗೆ ನೀಲ ವರ್ಣವಾಯಿತು. ಶಿವ ನೀಲಕಂಠನಾದ. ಶಿವ ವಿಷ ಕುಡಿದರೂ ಶಿವನಿಗೆ ಏನೂ ಆಗಲಿಲ್ಲ. ವಿಷವನ್ನು ನಿರ್ವಿಷ ಮಾಡುವ ಗುಣ ಶಿವನಿಗಿದ್ದಂತೆ ಈ ಗಿಡಕ್ಕೂ ಇರುವ ಕಾರಣ ‘ಈಶ್ವರ’ ಎಂಬ ಹೆಸರು ಈ ವನಸ್ಪತಿಗೆ ಇಟ್ಟಿದ್ದಾರೆ.
ಇದನ್ನೂ ಓದಿ: ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ
‘ಈಶ್ವರ’ ಬಳ್ಳಿ ಮತ್ತು ಅದರ ಫಲ ನೋಡಲು ಹೇಗಿರುತ್ತದೆ?
ಕೆಲ ‘ಈಶ್ವರ’ ಬಳ್ಳಿಯು ಮರದಂತೆ ಉದ್ದಕ್ಕೆ ಏರುತ್ತದೆ. ಮತ್ತಷ್ಟು ಬಳ್ಳಿಯು ಪೊದೆಯಾಗಿ ಆವರಿಸಿಕೊಳ್ಳುತ್ತದೆ. ಸ್ವಲ್ಪ ಉದ್ದ ಆಯತಾಕಾರದ ಎಲೆಗಳು. ಎಲೆಗಳು ಅಲ್ಲಾಡಿದರೆ ಪರಿಮಳ ಸೂಸುತ್ತದೆ. ಎಲೆಯನ್ನು ಕಿವಿಚಿದರೂ ಪರಿಮಳ ಬರುತ್ತದೆ. ಹೂಗಳು ಬಾಯಿ ತೆರೆದ ಹಕ್ಕಿಗಳಂತೆ ಕಂಡುಬರುತ್ತದೆ. ಫಲಗಳು ಉದ್ದ ಹಾಗೂ ಸ್ವಲ್ಪ ದುಂಡಾಗಿ ಇರುತ್ತದೆ. ಫಲ ಬೆಳೆದು ಒಡೆದಾಗ ತಲೆ ಕೆಳಗಾಗಿ ಬಿಡಿಸಿದ ಪ್ಯಾರಾಚೂಟ್ನಂತೆ ಕಾಣುತ್ತದೆ. ಅದರೊಳಗೆ ತೆಳುವಾದ ತ್ರಿಕೋಣಾಕಾರದ ಬೀಜಗಳು ಇರುತ್ತದೆ.
‘ಈಶ್ವರ’ ಬಳ್ಳಿ (Indian birthwort)ಯಿಂದ ಆಗುವ ಪ್ರಯೋಜನಗಳೇನು?
ಭಾರತದ ಎಲ್ಲಾ ಕಡೆ ಕಂಡು ಬರುವ ಈಶ್ವರ ಬಳ್ಳಿಯ ಬೇರು, ಎಲೆಗಳು ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಕ್ರಿಮಿ ಬಾಧೆ, ಕಫ ಬಾಧೆ, ಸ್ತ್ರೀಯರ ಕೆಲವು ತೊಂದರೆಗಳಲ್ಲಿ, ವಿಷ ಚಿಕಿತ್ಸೆಯಲ್ಲಿ ವಿಶೇಷವಾಗಿ ಇದನ್ನು ಉಪಯೋಗಿಸಲ್ಪಡುತ್ತದೆ.
ಜೇಡ, ಚೇಳು, ಇಲಿ ಕಚ್ಚಿದರೆ: ಇದರ 3ಗ್ರಾಂ ಬೇರನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಕುಡಿಸಬೇಕು ಹಾಗೂ ಅದರ ಎಲೆಯನ್ನು ನೀರಲ್ಲಿ ಅರೆದು ಕಚ್ಚಿದಲ್ಲಿಗೆ ಲೇಪಿಸಬೇಕು.
ತಲೆ ನೋವಿಗೆ ರಾಮಬಾಣ: ಈಶ್ವರ ಬಳ್ಳಿಯ ಎಲೆಯಲ್ಲಿ 10 ಗ್ರಾಂ ರಸ ತೆಗೆದು, 3ಗ್ರಾಂ ಅರಿಶಿನ ಪುಡಿ ಸೇರಿಸಿ ಕುಡಿಯುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಗಂಟುನೋವು, ಬಿಳಿ ಮಚ್ಚೆಗಳು: ಈ ಎಲೆಯನ್ನು ನೀರಲ್ಲಿ ಅರೆದು ಗಂಟುನೋವು ಅಥವಾ ಬಿಳಿ ಮಚ್ಚೆಗಳ ಮೇಲೆ ಹಚ್ಚುತ್ತ ಬಂದರೆ ಕ್ರಮೇಣ ವಾಸಿಯಾಗುತ್ತದೆ.
ಕೆಮ್ಮು ಕಫಕ್ಕೆ ಔಷಧಿ: ಇದರ ಎಲೆಯ ಜ್ಯೂಸ್ ತೆಗೆದು 15 ಎಂಎಲ್ ನಷ್ಟು ಕುಡಿಸುವುದರಿಂದ ಕಡಿಮೆಯಾಗುವುದು. ಕೆಲವೊಮ್ಮೆ ಈ ಎಲೆಯ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಕಫ ವಾಂತಿಯಾಗಿ ಕರಗಿ ಹೋಗುತ್ತದೆ. ಕಫ ಜಾಸ್ತಿ ಇರುವಾಗ ಸಾಮಾನ್ಯವಾಗಿ ಅಮೃತಾಂಜನ, ವಿಕ್ಸ್ ಎದೆಗೆ ಹಚ್ಚುತ್ತಾರೆ. ಅದೇ ರೀತಿ ಎಲೆಯನ್ನು ಅರೆದು ಎದೆಗೆ ಹಚ್ಚಬಹುದು.
ಮುಟ್ಟಿನ ದೋಷ ನಿವಾರಣೆ: ಹೆಣ್ಣುಮಕ್ಕಳ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ 10ಗ್ರಾಂ ಈಶ್ವರ ಬೇರಿನ ಕಷಾಯ ಮಾಡಿ (30 ರಿಂದ 40 ಎಂ.ಎಲ್) ಕುಡಿಸಬೇಕು.
ಹೊಟ್ಟೆ ಕ್ರಿಮಿ ಬಾಧೆ: 5-10 ಮಿಲಿ ಎಲೆರಸವನ್ನು 3 ದಿನ ಕುಡಿಯುವುದರಿಂದ ಕಡಿಮೆಯಾಗುವುದು.
ಜ್ವರಕ್ಕೆ ದಿವ್ಯೌಷಧಿ: 5 ಗ್ರಾಂ ಈಶ್ವರ ಬೇರನ್ನು ಕಷಾಯ ಮಾಡಿ ಅದಕ್ಕೆ 1/2 ಚಮಚ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಶರೀರ ಬಿಸಿ ಆಗಿ ಚಳಿಯಿಂದ ಕೂಡಿದ ಜ್ವರವಿದ್ದರೆ ಈಶ್ವರ ಬೇರಿನ ಕಷಾಯದೊಂದಿಗೆ ಈಶ್ವರ ಬೇರಿನ ಎಲೆ ರಸಕ್ಕೆ ಹಿಪ್ಪಿಯನ್ನು ಪುಡಿಮಾಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಸರ್ಪ ಸುತ್ತಿಗೆ ರಾಮಬಾಣ: ಇತ್ತೀಚೆಗೆ ಸರ್ಪ ಸುತ್ತಿಗೆ ಅನೇಕ ಔಷಧಿಗಳಿದ್ದರು ಈಶ್ವರ ಬೇರು ಮತ್ತು ನೀಲಿ ಸೊಪ್ಪನ್ನು ಸೇರಿಸಿ ಅರೆದು ಹಚ್ಚುವುದರಿಂದ ಉರಿ ನೋವು ಕಡಿಮೆಯಾಗುವುದು.
ದೃಷ್ಟಿ ದೋಷ ನಿವಾರಣೆ: ಇದರ ಬೇರನ್ನು ನಯವಾಗಿ ಚೂರ್ಣಮಾಡಿ ಅದಕ್ಕೆ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆ: ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ನಯವಾಗಿ ಚೂರ್ಣಿಸಬೇಕು. ನಂತರ 2 ರಿಂದ 2.5 ಗ್ರಾಂ ಚೂರ್ಣವನ್ನು ಸೇವಿಸಿ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆಯಾಗುತ್ತದೆ.
ಹೀಗೆ ಈಶ್ವರ ಬೇರು (Indian birthwort) ಮತ್ತು ಅದರ ಎಲೆಯಲ್ಲಿ ಅಡಗಿರುವ ದಿವ್ಯೌಷಧಿ ಅಪಾರ. ಅದರಲ್ಲಿ ತೀಕ್ಷ ಗುಣಗಳುಳ್ಳ ಮದ್ದಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಯಾವುದೇ ಔಷಧಿಯಾದರು ಉಪಯೋಗಿಸು ಮುನ್ನ ಒಮ್ಮೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ದಿನದ ಸುದ್ದಿ
ಗೃಹಬಳಕೆ ಎಲ್ಪಿಜಿ ಸಿಲೆಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ
ಸುದ್ದಿದಿನಡೆಸ್ಕ್:ಗೃಹಬಳಕೆಯ ಎಲ್ಪಿಜಿ ಸಿಲೆಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.
ಗೃಹ ಬಳಕೆ ಎಲ್ಪಿಜಿ ಸಿಲೆಂಡರ್ ಬೆಲೆಯನ್ನು 111 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿರುವ ಸಚಿವಾಲಯ, ವಾಣಿಜ್ಯ ಸಿಲೆಂಡರ್ ಬೆಲೆಯು ಅಂತಾರಾಷ್ಟ್ರೀಯ ಕಚ್ಚಾ ಅನಿಲ ಮತ್ತು ಸಂಬAಧಿತ ದರಗಳ ಮೇಲೆ ಅವಲಂಬಿತವಾಗಿದ್ದು, ಆಗಾಗ್ಗೆ ಮಾರುಕಟ್ಟೆಯ ದರಗಳು ಬದಲಾಗುತ್ತವೆ. ಆದರೆ, ಗೃಹ ಬಳಕೆಯ ಸಿಲೆಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದೆ.
ದೆಹಲಿಯಲ್ಲಿ 14.2 ಕೆಜಿ ಗೃಹ ಬಳಕೆ ಅಡುಗೆ ಅನಿಲ ಸಿಲೆಂಡರ್ ಬೆಲೆ 950 ರೂಪಾಯಿಯಾಗಿದ್ದು, ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇದು 553 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇದು ಆಗಸ್ಟ್ 2023 ರಿಂದ ನವೆಂಬರ್ 2025ರವರೆಗೆ ಹೋಲಿಸಿದರೆ, ಶೇಕಡಾ 39 ರಷ್ಟು ದರ ಕಡಿತವನ್ನು ಸೂಚಿಸುತ್ತದೆ. ಜನರಿಗೆ ಸುಸ್ಥಿರ ಇಂಧನ ಪೂರೈಕೆಗೆ ಒತ್ತು ನೀಡಲಾಗಿದ್ದು, ದರ ಬದಲಾವಣೆ ಇಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoಫೆ.14 ರಂದು ಸಂತ ಸೇವಾಲಾಲ್ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ4 days agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ6 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ4 days agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
-
ದಿನದ ಸುದ್ದಿ1 day agoಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ



