ರಾಜಕೀಯ
99% ಭಾರತೀಯರು V/S 1% ಕೋಮುವಾದಿಗಳು
- 8.1.2020ರಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟವು ಬೆಂಗಳೂರಿನಲ್ಲಿ ಕೇಂದ್ರದ ಜನವಿರೋಧಿ ಪೌರತ್ವ ಕಾಯ್ದೆ[CAA, NRC, NPR] ಕುರಿತು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರಸಂಕಿರಣದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ ಇಲ್ಲಿದೆ.
–ದೇವನೂರ ಮಹಾದೇವ
ಭಾರತ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ, ಸಂವಿಧಾನದ ಮೌಲ್ಯಗಳಿಗೆ ಧಕ್ಕೆ ಬಂದಾಗಲೆಲ್ಲ, ಭಾರತ ತನ್ನ ಅಂತಃಸತ್ವದ ಭವ್ಯತೆಯನ್ನು ಬೆಳಗುತ್ತದೆ ಎಂದು ಕಾಣುತ್ತದೆ. ಆ ಬೆಳಗುವಿಕೆ ಇಂದು ನಿಚ್ಚಳವಾಗಿ ಕಾಣುತ್ತಿದೆ. ಹೃದಯ, ಮಿದುಳು, ಹೊಟ್ಟೆ ತುಂಬ ಗಣಿ ಲೂಟಿ ದುಡ್ಡನ್ನೆ ತುಂಬಿಕೊಂಡ ಮದದ ಸೋಮಶೇಖರರೆಡ್ಡಿ ಎಂಬ ಬಿಜೆಪಿ ಶಾಸಕ ಸಿಎಎ ಮತ್ತು ಎನ್ಆರ್ಸಿ ವಿರೋಧಿಸುವವರಿಗೆ ‘ನೀವು 20% ಇದ್ದೀರಿ, ನಾವು 80% ಇದ್ದೇವೆ.
ಜೋಕೆ’ ಎಂದು ಹೇಳಿದ್ದಕ್ಕೆ ಭವ್ಯ ಎಂಬ ತರುಣಿ ಹೇಳುವುದು ಹೀಗೆ- “ರೆಡ್ಡಿ, ನೆನಪಿರಲಿ, ಸಿಎಎ ಮತ್ತು ಎನ್ಆರ್ಸಿ ವಿರೋಧಿಸುವ ನಾವು ಭಾರತೀಯರು 99% ಇದ್ದೇವೆ. ನೀವು ಕೋಮುವಾದಿಗಳು 1% ಇದ್ದಿರಿ” ಈ ಮಾತಲ್ಲಿ ಭಾರತದ ಭವ್ಯತೆ ಪ್ರಕಾಶಗೊಳ್ಳುತ್ತದೆ. ಇಂದು ಸಂಘರ್ಷ ನಡೆಯುತ್ತಿರುವುದು 99% We the people of India V/s 1% ಕೋಮುವಾದಿ ಗ್ಯಾಂಗ್ ನಡುವೆ.
ಹೀಗೆ ಭವ್ಯ ಥರಾನೇ ಉನ್ನತ ಅಧಿಕಾರಿಗಳಾಗಿದ್ದ ಸಸಿಕಾಂತ್ ಸೆಂಥಿಲ್ ಹಾಗೂ ಕಣ್ಣನ್ ಗೋಪಿನಾಥ್ ನಡೆನುಡಿ ನೋಡಿದಾಗಲೂ ಭಾರತಕ್ಕೆ ಭವಿಷ್ಯವಿದೆ ಅನ್ನಿಸುತ್ತದೆ. ಎಲ್ಲಕ್ಕಿಂತ ಸಂವಿಧಾನದ ಮೌಲ್ಯಕ್ಕೆ ಬಿಲ ತೋಡಿ ತಿಂದು ಹಾಕುತ್ತಿದ್ದ ಇಲಿ ಹೆಗ್ಗಣಗಳ ವಿರುದ್ಧವಾಗಿ ವಿದ್ಯಾರ್ಥಿ ಯುವಜನರ ಸ್ಫೋಟ ಕಂಡಾಗ ಈ ವಿದ್ಯಾರ್ಥಿ ಯುವಜನರ ನಾಯಕತ್ವಕ್ಕೆ ಭಾರತವನ್ನು ಕಾಪಾಡುವ ಶಕ್ತಿ ಇದೆ ಎಂದು ಅನ್ನಿಸುತ್ತದೆ.
ಇಂದು ದೇಶದ ತುಂಬಾ ಸಿಎಎ, ಎನ್ಆರ್ಸಿ ಎನ್ಪಿಆರ್ ಬಗ್ಗೆ ಭೀತಿ ತುಂಬಿದೆ. ಎಷ್ಟೆಂದರೆ ಇತ್ತೀಚೆಗೆ ಚಾಮರಾಜನಗರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಆರೋಗ್ಯ ಮಾಹಿತಿಗಳನ್ನು ಸಂಗ್ರಹಿಸಲು ಬಂದಾಗ ಅಲ್ಲಿನ ಜನರು ಆ ಗಣತಿಯು ಸಿಎಎ, ಎನ್ಆರ್ಸಿ, ಎನ್ಪಿಆರ್ ಬಲೆ ಇರಬೇಕೆಂದು ಭಾವಿಸಿ ಆ ಗಣತಿ ಫಾರಂಗಳನ್ನು ಹರಿದೆಸೆದು ಹಿಂದಕ್ಕೆ ಕಳಿಸಿದ್ದಾರೆ. ಅಷ್ಟೊಂದು ಭೀತಿ ಹರಡಿದೆ.
ಈಗ, ನನ್ನ ಹುಟ್ಟಿದ ದಿನಾಂಕ ಕೇಳಿದರೆ ನನ್ನ ಅವ್ವ ಹೇಳಿದಂತೆ-ಅದು ಸೋಮವಾರ ಸಂಜೆ ರೈಲು ಕವಲಂದೆ ಸ್ಟೇಷನ್ನಲ್ಲಿ ನಿಂತು ಹೊರಡುವ ಸಮಯವಂತೆ. ಹೀಗಿರುವಾಗ ದಿನಾಂಕ ಹೇಗೆ ಹೇಳಲಿ? ನನ್ನ ಮೊಮ್ಮಗಳಿಗೆ ನನಗೆ ಬರ್ತ್ಡೇ ಇಲ್ಲ ಎಂದು ತಿಳಿದು ಅವಳು ಬೇಜಾರು ಮಾಡಿಕೊಂಡು ‘ನನ್ನ ಹುಟ್ಟಿದ ದಿನವೇ ನಿನ್ನ ಹುಟ್ಟಿದ ದಿನ’ ಎಂದು ನನಗೆ ಸಮಾಧಾನ ಮಾಡಿದ್ದಾಳೆ! ನನಗೇ ಹೀಗಿರುವಾಗ, ಇನ್ನು ನಮ್ಮ ಅಪ್ಪನ ಹುಟ್ಟಿದ ದಿನಾಂಕ ಕೇಳಿದರೆ ಏನು ಹೇಳಲಿ? ಇರುವುದನ್ನು ಹೇಳಿದರೆ ನಾನು ಅನುಮಾನಾಸ್ಪದ [Doughtful] ವ್ಯಕ್ತಿಯಾಗುತ್ತೇನೆ.
ಏನು ಹೇಳಲಿ? ಮೋದಿಯವರ ಅಪ್ಪ ಹುಟ್ಟುವ ಐದು ವರ್ಷಕ್ಕೆ ಮೊದಲು ಎನ್ನಲೆ? ಅಥವಾ ಅಮಿತ್ಷಾರ ಅಪ್ಪ ಹುಟ್ಟುವ 20 ವರ್ಷಕ್ಕೆ ಮೊದಲು ಎನ್ನಲೆ? ಬಹುಶಃ ನನ್ನ ಮೂಲ ಇರುವುದು ಹರಪ್ಪ-ಮಹೆಂಜೋದಾರೋದಲ್ಲಿ. ಅದು ಇಂದು ಪಾಕಿಸ್ತಾನದಲ್ಲಿದೆ ಏನು ಮಾಡಲಿ? ಈಗ ಮೊದಲು ಎನ್ಪಿಆರ್ ಬಲೆ ಹಾಕುತ್ತಾರೆ. ಇದರ ಆಧಾರದ ಮೇಲೆ ಎನ್ಆರ್ಸಿ ಆವರಿಸಿ ಅನುಮಾನಾಸ್ಪದ [Doughtful] ಮಾಡುತ್ತಾರೆ. ಆಮೇಲೆ ಈ ಅನುಮಾನಾಸ್ಪದ ‘ಡಿ’ ಗೆ ಸಿಎಎ[ಕಾ] ಯಮಪಾಶ ಹಾಕುತ್ತಾರೆ. ಇದನ್ನೇ ಐತಿಹಾಸಿಕ ಎನ್ನುತ್ತಿದ್ದಾರೆ.
ಇಂತಹವುಗಳನ್ನೆಲ್ಲಾ ಮಾಡಲು ಹೊರಟವರು ಹೇಗೆ ಮಣ್ಣು ಮುಕ್ಕಿದರು ಎಂದು ನಾವು ಅಕ್ಕಪಕ್ಕ ನೋಡಿಯಾದರೂ ಕಲಿಯಬೇಕಾಗಿದೆ. ಪತ್ರಕರ್ತ ಕೆ.ಎಸ್.ದಕ್ಷಿಣಾಮೂರ್ತಿಯವರು ತಮ್ಮ ಲೇಖನವೊಂದರಲ್ಲಿ ಹೇಗೆ ಕೆಲವು ದೇಶಗಳು ತಂತಮ್ಮ ದೇಶದ ರಾಜಧರ್ಮ ಹಾಗೂ ಸಂವಿಧಾನದಲ್ಲಿ ಹಸ್ತಕ್ಷೇಪ ಮಾಡಲು ಹೋಗಿ ಏನೆಲ್ಲಾ ದುರಂತಕ್ಕೆ ತುತ್ತಾದವು ಎಂಬುದನ್ನು ವಿವರಿಸುತ್ತಾರೆ.
1956ರಲ್ಲಿ ಶ್ರೀಲಂಕಾ ‘ಸಿಂಹಳದವರಿಗೆ ಮಾತ್ರ’ ಎಂದು ಮಾಡಲು ಹೋಗಿ ಎಲ್ಟಿಟಿಇ ಹುಟ್ಟಿಗೆ ಕಾರಣವಾಯ್ತು. ಧ್ವಂಸ, ಹಿಂಸೆ, ಸಾವು, ನೋವು ರಾಜೀವ್ಗಾಂಧಿಯವರನ್ನು ಬಲಿ ತೆಗೆದುಕೊಂಡಿತು. ರುವಾಂಡಾದಲ್ಲಿ ಅಲ್ಪಸಂಖ್ಯಾತ ಟುಟ್ಸಿ ಮತ್ತು ಬಹುಸಂಖ್ಯಾತ ಹುಟುಗಳ ಮಧ್ಯೆ ಸರ್ಕಾರವೇ ಬತ್ತಿ ಇಟ್ಟಿತು. ಐ.ಡಿ ಕಾರ್ಡ್ ಕಡ್ಡಾಯ ಮಾಡುತ್ತದೆ. ಕೇವಲ ನೂರು ದಿನಗಳಲ್ಲಿ 8 ಲಕ್ಷ ಜನ ಹತರಾಗುತ್ತಾರೆ.
ಸಾಯುವಾಗ ಒಂದೇ ಗುಂಪಿನವರು ಸಾಯುವುದಿಲ್ಲ. ಅಮಾಯಕರು ಹೆಚ್ಚು ಸಾಯುತ್ತಾರೆ. ಇದನ್ನೀಗ ಭಾರತ ಸರ್ಕಾರ ಮಾಡಲು ಹೊರಟಿದೆ. ಪಾಕಿಸ್ಥಾನದಲ್ಲಿ ಕೂಡ ಉರ್ದು ಭಾಷೆ ಮತ್ತು ಲಿಪಿಯನ್ನು ಬೆಂಗಾಲಿ ಮುಸ್ಲಿಮರ ಮೇಲೆ ಹೇರಲು ಹೋಗಿ ಇಡೀ ರಾಷ್ಟ್ರವೇ ಹೋಳಾಯ್ತು.
ಯುಗೊಸ್ಲಾವಿಯದಲ್ಲಿ ಎಂದೋ ಮುಚ್ಚಿಹೋಗಿದ್ದ ಜನಾಂಗೀಯ/ ಧಾರ್ಮಿಕ ಬಿರುಕನ್ನು ಮತ್ತೆ ಕೆದಕಲು ಹೋಗಿ ಕ್ರಿಶ್ಚಿಯನ್ರ ವಿರುದ್ಧ ಮುಸ್ಲಿಮರು, ಸರ್ಬರ ವಿರುದ್ಧ ಬೊಸ್ನಿಯನ್ನರು, ಕ್ರೊವೇಷಿಯನ್ನರ ವಿರುದ್ಧ ಸರ್ಬರು ಪರಸ್ಪರ ಶತ್ರುಗಳಾಗಿ ಈಗಲೂ ಅಲ್ಲಿ ಹಿಂಸೆ ತಾಂಡವವಾಡುತ್ತಿದೆ.
ಈ ರೀತಿಯಾಗುವುದು ಭಾರತಕ್ಕೆ ಬೇಕಾಗಿದೆಯೆ? ಸರ್ಕಾರಕ್ಕೇ ತನ್ನ ವಿಫಲತೆ ಮುಚ್ಚಿಕೊಳ್ಳಲು ಬೇಕಾಗಿರಬಹುದು. ಜನರು ಪೌರತ್ವ ರುಜುವಾತು ಪಡಿಸಲು ಅಲೆಯುತ್ತಿರಲಿ. ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಕುಸಿತಕ್ಕೆ ತಲೆ ಕೆಡಿಸಿಕೊಳ್ಳದಿರಲಿ ಎಂದು ಸರ್ಕಾರವೇ ಪೌರತ್ವದ ಬೆಂಕಿ ಹಚ್ಚಿದೆ ಎಂದು ಕಾಣುತ್ತದೆ.
ನನ್ನ ಪೌರತ್ವದ ಬಗ್ಗೆ ಅನುಮಾನವಿರಬಹುದು ಆದರೆ ಸರ್ಕಾರವೇ ಪೌರತ್ವದ ಬೆಂಕಿ ಹಚ್ಚಿರುವುದರಲ್ಲಿ ಅನುಮಾನವೇ ಇಲ್ಲ. ಇದೆಲ್ಲಾ ಜನಸಮುದಾಯಕ್ಕೆ ಬೇಕಾಗಿದೆಯೆ? ಇದನ್ನೆಲ್ಲಾ ಪ್ರಶ್ನಿಸಬೇಕಾದ ಸಂಸತ್ನಲ್ಲಿ ಅಪರಾಧಿಗಳು, ಕೋಟ್ಯಾಧಿಪತಿಗಳು ಹೆಚ್ಚಾಗಿದ್ದು ಸಂಸತ್ನಿಂದ ಏನನ್ನೂ ನಿರೀಕ್ಷಿಸಲಾಗದು ಎನ್ನುವಂತಾಗಿದೆ. ಹಾಗೂ ರಾಜಕೀಯ ಪಕ್ಷಗಳ ಸ್ಥಿತಿಗತಿಯೂ ದಯನೀಯವಾಗಿದೆ.
ಕಮ್ಯುನಿಸ್ಟರು ಸ್ಥಗಿತವಾಗಿದ್ದಾರೆ. ಆಮ್ಆದ್ಮಿ, ಸ್ವರಾಜ್ಇಂಡಿಯಾದಂತಹ ಪ್ರಯೋಗಶೀಲ ಪಕ್ಷಗಳು ವ್ಯಾಪಕವಾಗುತ್ತಿಲ್ಲ. ಮೋದಿಶಾ ಆಡಳಿತವು ಕಾಂಗ್ರೆಸ್ ಮತ್ತು ಇನ್ನಿತರ ಪಕ್ಷಗಳನ್ನು ತೆವಳುವಂತೆ ಮಾಡಿಬಿಟ್ಟಿದೆ. ವಿಪರ್ಯಾಸವೆಂದರೆ ಈ ಮೋದಿಶಾ ಆಡಳಿತವು ಕಾಂಗ್ರೆಸ್ ಮತ್ತು ಇನ್ನಿತರ ಪಕ್ಷಗಳನ್ನು ತೆವಳುವಂತೆ ಮಾಡಿಬಿಟ್ಟಿವೆ.
ವಿಪರ್ಯಾಸವೆಂದರೆ ಈ ಮೊದಿಶಾ ಆಡಳಿತವು ಸ್ವತಃ ತನ್ನ ಪಕ್ಷ ಬಿಜೆಪಿಯನ್ನೇ ಧ್ವಂಸ ಮಾಡಿಬಿಟ್ಟಿದೆ. ಅತಿ ದೊಡ್ಡ ಪಕ್ಷ ಎನಿಸಿಕೊಂಡಿರುವ ಬಿಜೆಪಿಗೆ ಒಂದು ರಾಜಕೀಯ ಪಕ್ಷಕ್ಕೆ ಇರಬೇಕಾದ ಯಾವ ಚಹರೆಯೂ ಇಂದು ಉಳಿದಿಲ್ಲ. ಜೀವ ಇಲ್ಲದ ಸತ್ತ ದೇಹದಂತೆ ಇದೆ. ಬಿಜೆಪಿ ಪಕ್ಷದ ಹೆಸರಿನಲ್ಲಿ ಮೋದಿ-ಶಾ ಗ್ಯಾಂಗ್ ಆಡಳಿತ ನಡೆಸುತ್ತಿದೆ.
ಈ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಅವರು ಸಂವಿಧಾನದ ಸಭೆಯಲ್ಲಿ, ಜಾತಿ ಮತ ಭೇದದ ಕಾರಣವಾಗಿ ಭಾರತವು ಹೇಗೆ ಗುಲಾಮಗಿರಿಗೆ ತುತ್ತಾಯಿತು ಎಂಬ ಸಂಗತಿಗಳನ್ನು ವಿವರಿಸಿ ಹೇಳುತ್ತ ನೀಡುವ ಎಚ್ಚರಿಕೆಯನ್ನು ನಾವಿಂದು ಕೇಳಿಸಿಕೊಳ್ಳಬೇಕಾಗಿದೆ- “ಚರಿತ್ರೆ ಮತ್ತೆ ಮರುಕಳಿಸುತ್ತದೆಯೇ? ಈ ಯೋಚನೆ ನನ್ನಲ್ಲಿ ಆತಂಕ ಮೂಡಿಸುತ್ತದೆ.
ನಮಗೆ ಈಗಾಗಲೇ ಇದ್ದ ಹಳೆಯ ಶತ್ರುಗಳಾದ ಜಾತಿ, ಧರ್ಮಗಳ ಜೊತೆಗೆ ವಿಭಿನ್ನ ಮತ್ತು ವಿರೋಧೀ ರಾಜಕೀಯ ಸಿದ್ಧಾಂತಗಳ ಹಲವು ರಾಜಕೀಯ ಪಕ್ಷಗಳೂ ಸೇರಿಕೊಳ್ಳುತ್ತವೆ. ಈ ವಾಸ್ತವ ಅರಿವಾದ ಕೂಡಲೆ ನನ್ನ ಆತಂಕ ಇನ್ನೂ ತೀವ್ರವಾಗುತ್ತದೆ. ಭಾರತೀಯರು ದೇಶವನ್ನು ತಮ್ಮ ಮತಧರ್ಮಗಳಿಗಿಂತ ಮುಖ್ಯವೆಂದು ಭಾವಿಸುತ್ತಾರೆಯೋ ಅಥವಾ ಅವರಿಗೆ ತಮ್ಮ ದೇಶಕ್ಕಿಂತ ತಮ್ಮ ಮತಧರ್ಮಗಳೇ ಹೆಚ್ಚು ಮುಖ್ಯವಾಗುತ್ತದೋ? ನನಗೆ ಗೊತ್ತಾಗುತ್ತಿಲ್ಲ. ಆದರೆ ಇಷ್ಟಂತೂ ಖಚಿತ.
ರಾಜಕೀಯ ಪಕ್ಷಗಳು ಜಾತಿಧರ್ಮವನ್ನೇ ದೇಶಕ್ಕಿಂತ ಮುಖ್ಯ ಎಂದು ಭಾವಿಸಿದರೆ ನಮ್ಮ ಸ್ವಾತಂತ್ರ್ಯಕ್ಕೆ ಎರಡನೇ ಬಾರಿ ಗಂಡಾಂತರ ಬಂದಂತೆ. ಹಾಗೇನಾದರೂ ಆದರೆ ಬಹುಶಃ ಸ್ವಾತಂತ್ರ್ಯ ಅನ್ನುವುದು ನಮಗೆ ಮತ್ತೆ ಸಿಗುವುದಿಲ್ಲ. ಅದನ್ನು ಶಾಶ್ವತವಾಗಿ ಕಳೆದುಕೊಂಡುಬಿಡುತ್ತೇವೆ. ಇದರ ವಿರುದ್ಧ ನಾವೆಲ್ಲರೂ ಅಚಲವಾಗಿ ನಿಲ್ಲಬೇಕು. ನಮ್ಮಲ್ಲಿ ಕೊನೆಯ ಹನಿ ರಕ್ತ ಇರುವವರೆಗೆ ನಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ದೃಢಸಂಕಲ್ಪ ಮಾಡಬೇಕು.”
ಈ ಕಾಲ ಈಗ ಬಂದಿದೆ. ಭಾರತದ ಪೌರತ್ವ ನಿರ್ಧಾರಕ್ಕೆ ಮತಧರ್ಮಗಳನ್ನೂ ಪರಿಗಣಿಸಿ ಸಂವಿಧಾನದ ಮೌಲ್ಯಕ್ಕೆ ಬಿಲ ತೋಡಿ ತಂತಾನೇ ಸಂವಿಧಾನದ ಆಸೆಗಳು ಕುಸಿಯುವಂತೆ ಮಾಡಲಾಗುತ್ತಿದೆ. ಹೌದು, ಇಂದು ಭಾರತ ಎರಡನೆ ಸ್ವಾತಂತ್ರ್ಯ ಹೋರಾಟಕ್ಕಾಗಿ ಯಾಚಿಸುತ್ತಿದೆ.
ಕೊನೆಯದಾಗಿ, ಇಷ್ಟಿದ್ದೂ ಹೀಗಿದ್ದೂ ಆದರೂ ಮೋದಿಯವರಿಗೆ ಒಂದು ಪ್ರಾರ್ಥನೆ ಮಾಡುವೆ. ನಿಮ್ಮ ಕಣ್ಗಳ ಕೆಳಗೆ ನಡೆದ ಜೆಎನ್ಯು ಘಟನೆಯನ್ನು ನೋಡಿ ತತ್ತರಿಸಿ ಹೋದೆ. ಗುಂಪು ಥಳಿತ ನೋಡಿದಾಗಲು ಈ ದೇಶದಲ್ಲಿ ರಾಜನಿಲ್ಲ (ರೂಲರ್ ಇಲ್ಲ), ಅರಾಜಕತೆ ಇದೆ ಅನ್ನಿಸುತ್ತದೆ. ಪೊಲೀಸ್ ವ್ಯವಸ್ಥೆ ಕಳಂಕಿತವಾಗಿ ಬಿಟ್ಟಿತು.
ಇನ್ನು ಮಿಲ್ಟ್ರಿಕತೆ ಏನೋ ಗೊತ್ತಿಲ್ಲ. ಇದು ಪ್ರಧಾನಿಯ ಬುಡವನ್ನೆ ಬುಡಮೇಲು ಮಾಡುತ್ತದೆ. ಮಾಂತ್ರಿಕರು ಭೂತ ಪಿಶಾಚಿಗಳನ್ನು ವಶಪಡಿಸಿಕೊಂಡು ಒಂದು ಬಾಟಲ್ನಲ್ಲಿ ಕೂಡಿ ಭದ್ರವಾಗಿ ಮುಚ್ಚಳ ಹಾಕಿ ಇಟ್ಟುಕೊಂಡಿರುತ್ತಾರಂತೆ. ಅವರೇನಾರು ರಾಗದ್ವೇಷಕ್ಕೆ ಒಳಗಾಗಿ ಮುಚ್ಚಳ ತೆಗೆದು ಪಿಶಾಚಿಗಳನ್ನು ತನ್ನ ಹಗೆ ಮೇಲೆ ಛೂ ಬಿಟ್ಟರೆ ಅವು ಎಲ್ಲವನ್ನೂ ತಿಂದು ಹಾಕಿ ಕೊನೆಗೆ ವಶಪಡಿಸಿಕೊಂಡಿರುವ ಮಾಂತ್ರಿಕನ ಬಳಿಗೆ ಬಂದು ಮಾಂತ್ರಿಕನನ್ನೇ ತಿಂದು ಹಾಕುತ್ತವಂತೆ.
ಒಬ್ಬ ರೂಲರ್ Negative ಆದಾಗ ಇದು ಆಗುತ್ತಾ ಬಂದಿದೆ. ಇಂಥವರಿಗೆ ಅವರ ಪಕ್ಕದಲ್ಲಿ ಇರುವವರೇ ಮೃತ್ಯು ಆಗುತ್ತಾರೆ. ತಾವು ಗುಹೆಯಲ್ಲಿ ಧ್ಯಾನ ಮಾಡುತ್ತಿರುವುದನ್ನು ಟಿವಿಯಲ್ಲಿ ನೋಡಿದ್ದರಿಂದ ಇದನ್ನು ಹೇಳಬೇಕಾಯ್ತು, ಕ್ಷಮೆ ಇರಲಿ. ತಮ್ಮ ಧ್ಯಾನವು ರಾಗದ್ವೇಷ ಇಲ್ಲದ ಮನಸ್ಸನ್ನು ಪಡೆಯುವಂತಾಗುವುದಕ್ಕೆ ಕಾರಣವಾಗಿ ಅದರಿಂದ ಆರ್ಥಿಕ ಚೇತರಿಕೆ, ಬೆಲೆ ಏರಿಕೆಯ ನಿಯಂತ್ರಣ, ಉದ್ಯೋಗ ಹೆಚ್ಚಳಕ್ಕೆ ಕಾರಣವಾದರೆ ದೇಶಕ್ಕೆ ಒಳ್ಳೆಯದು, ತಮಗೂ ಕೂಡ. ನಮಸ್ಕಾರ.
ಕೃಪೆ : ನಮ್ಮ ಬನವಾಸಿ.ಕಾಂ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನೀತಿ ಸಂಹಿತೆ ಉಲ್ಲಘನೆ, ಬೋಧನೆ ಶೂನ್ಯ ; ಚಳ್ಳಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಲೇಪಾಕ್ಷ ವಿರುದ್ಧ ದೂರು
ದಾವಣಗೆರೆ,ಸುದ್ದಿದಿನ: ಪ್ರಥಮ ದರ್ಜೆ ಕಾಲೇಜು, ಚಳ್ಳಕೆರೆ ಇಲ್ಲಿನ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಲೇಪಾಕ್ಷ ಎಸ್.ಆರ್ ಇವರು ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹಾಜರಾಗದೆ ಇರುವುದು ಮಾತ್ರವಲ್ಲದೆ ವೇಳಾಪಟ್ಟಿಯಂತೆ ಇವರಿಗೆ ನಿಗಧಿಪಡಿಸಿದ ಯಾವುದೇ ತರಗತಿಗಳನ್ನು ತೆಗೆದುಕೊಳ್ಳದೆ ರಾಜಕೀಯ ಪಕ್ಷವೊಂದರ ಪ್ರಚಾರ ಹಾಗೂ ಸ್ಥಳೀಯ ರಾಜಕಾರಣದಲ್ಲಿ ಸಕ್ರಿಯವಾಗಿ ವಿದ್ಯಾರ್ಥಿಗಳಿಗೆ ವಂಚಿಸುತ್ತಿರುವ ನಡೆಯನ್ನು ಸೂಕ್ತ ತನಿಖೆಗೆ ಒಳಪಡಿಸಿ, ಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಜಂಟಿ ನಿರ್ದೇಶಕರಿಗೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ಮಾಹಿತಿ ನೀಡಿದ್ದಾರೆ.
ಡಾ. ಲೇಪಾಕ್ಷ ಎಸ್.ಆರ್ ಇವರನ್ನು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ತರಗತಿಗಳನ್ನು ಹಂಚಿಕೆ ಮಾಡಿದ್ದು, ಯಾವುದೇ ತರಗತಿಗಳನ್ನು ತೆಗೆದುಕೊಳ್ಳದ ಮಾಹಿತಿಯ ಮೇರೆಗೆ ಕಾಲೇಜಿನಲ್ಲಿ ಅಳವಡಿಸಿದ ಸಿ.ಸಿ.ಟಿ.ವಿ ಹಾಗೂ ಬಯೋಮೆಟ್ರಿಕ್ ಹಾಜರಾತಿಯನ್ನು ನೀಡುವಂತೆ ಮಾಹಿತಿ ಕೋರಿದ್ದು, ಕಾಲೇಜಿನ ಪ್ರಾಂಶುಪಾಲರು ಕಾಲೇಜಿಗೆ ಸರಿಯಾಗಿ ಹಾಜರಾಗದ ಮತ್ತು ಬೋದನೆ ಮಾಡದ ಅಧ್ಯಾಪಕರನ್ನು ರಕ್ಷಿಸುವ ಸಲುವಾಗಿ ನಿಯಮಬಾಹಿರವಾಗಿ ಹಿಂಬರಹ ನೀಡಿರುತ್ತಾರೆ. ಈ ಎಲ್ಲಾ ಅಂಶಗಳನ್ನು ಉಲ್ಲೇಖಿಸಿ, ಲೇಪಾಕ್ಷ ಇವರು ರಾಜಕೀಯ ಪಕ್ಷದ ಪ್ರಚಾರ ಮತ್ತು ಸಂಭ್ರಮದಲ್ಲಿ ಭಾಗಿಯಾಗಿರುವ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ದಾಖಲೆಗಳನ್ನು ಲಗತ್ತಿಸಿ ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಚಿವರಿಗೆ ದೂರು ನೀಡಿರುತ್ತಾರೆ.

ದಿನದ ಸುದ್ದಿ
ಮಂಗಳೂರು | ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಕೆ.ಆರ್ ಕವಿತಾ ವಿರುದ್ಧ ಲೋಕಾಗೆ ದೂರು
ದಾವಣಗೆರೆ, ಸುದ್ದಿದಿನ; ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಜಂಟಿ ನಿರ್ದೇಶಕರ ಕಛೇರಿ, ಮಂಗಳೂರು ಇಲ್ಲಿನ ಕಛೇರಿ ನಿರ್ವಹಣೆಗೆ 2024-25 ರಿಂದ 2025-26ನೇ ಸಾಲಿನ ಅವಧಿಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜಂಟಿ ನಿರ್ದೇಶಕರಾದ ಶ್ರೀಮತಿ ಕೆ.ಆರ್.ಕವಿತಾ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಜಂಟಿ ನಿರ್ದೇಶಕರ ಕಛೇರಿ, ಮಂಗಳೂರು ಇಲ್ಲಿಗೆ 2024-25 ರಿಂದ 2025-26ನೇ ಸಾಲಿನ ಅವಧಿಯಲ್ಲಿ ಬಿಡುಗಡೆಯಾಗಿರುವ ಕಛೇರಿಯ ನಿರ್ವಹಣೆಯ ಅನುದಾನದಲ್ಲಿ ಸಾಕಷ್ಟು ಅವ್ಯವಹಾರ ಹಾಗೂ ಕೆ.ಟಿ.ಪಿ.ಪಿ ನಿಯಮವನ್ನು ಉಲ್ಲಂಘಿಸಿ ನಡೆದಿರುವ ಕಾನೂನುಬಾಹಿರ ಚಟುವಟಿಕೆಗಳ ಅಧಿಕೃತ ಮಾಹಿತಿಯ ಮೇರೆಗೆ 2024-25 ರಿಂದ 2025-26ನೇ ಸಾಲಿನ ಅವಧಿಯಲ್ಲಿ ಕಛೇರಿ ನಿರ್ವಹಣೆಗಾಗಿ ಸರ್ಕಾರದಿಂದ ಮಂಜೂರಾದ ಅನುದಾನದ ಖರ್ಚು ವೆಚ್ಚದ ದಾಖಲೆಗಳನ್ನು ಮಾಹಿತಿಹಕ್ಕು ಅಡಿ ಪಡೆದು ಪರಿಶೀಲನೆ ಮಾಡಿದಾಗ ಸಾಕಷ್ಟು ಲೋಪಗಳು ಕಂಡುಬಂದಿರುತ್ತವೆ. ಆದ ಕಾರಣ ಲೋಕಾಯುಕ್ತದಲ್ಲಿ ಜಂಟಿ ನಿರ್ದೇಶಕರಾದ ಕೆ.ಆರ್.ಕವಿತಾ ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸುವಂತೆ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ಮಾಹಿತಿ ನೀಡಿದ್ದಾರೆ.

ದಿನದ ಸುದ್ದಿ
ಹೊಳಲ್ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಕಲಿ ಬಿಲ್ಲುಗಳ ಹಾವಳಿ | ಕೆ.ಟಿ.ಪಿ.ಪಿ ನಿಯಮ ಉಲ್ಲಂಘನೆ ; ಜಂಟಿ ನಿರ್ದೇಶಕ ಸೇರಿ 4 ಜನ ಪ್ರಾಂಶುಪಾಲರ ವಿರುದ್ಧ ಲೋಕಾಗೆ ದೂರು
ದಾವಣಗೆರೆ, ಸುದ್ದಿದಿನ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಳಲ್ಕೆರೆ ಇಲ್ಲಿ 2021-22 ರಿಂದ 2025-26ನೇ ಸಾಲಿನ ಅವಧಿಯಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕಕ್ಕೆ ಸಂಬಂಧಸಿದ ಅರೇ ಸರ್ಕಾರಿ ಖಾತೆಗಳ ಅನುದಾನ ಹಾಗೂ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ನಕಲಿ ಬಿಲ್ಲುಗಳನ್ನು ಸೃಷ್ಟಿ ಮತ್ತು ಕೆ.ಟಿ.ಪಿ.ಪಿ ನಿಯಮವನ್ನು ಉಲ್ಲಂಘಿಸಿ ನಡೆದಿರುವ ಅವ್ಯವಹಾರ ಹಾಗೂ ಭ್ರಷ್ಟಚಾರಗಳಲ್ಲಿ ಭಾಗಿಯಾಗಿರುವ ಪ್ರಾಂಶುಪಾಲರುಗಳಾದ ಸುರೇಶ್ ಎಸ್., ರಮೇಶ್ ಎಲ್., ಡಿ.ಆರ್.ಹನುಮಂತರಾಯ, ಶಿವಮೂರ್ತಿನಾಯ್ಕ್ ಹಾಗೂ ಜಂಟಿ ನಿರ್ದೇಶಕ ಹೆಚ್. ಕೇಶವ ಇವರುಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಳಲ್ಕೆರೆ ಇಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಅರೇ ಸರ್ಕಾರಿ ಅನುದಾನ ಹಾಗೂ ಸರ್ಕಾರದಿಂದ ಬಿಡುಗಡೆಯಾದ ಅನುದಾನಗಳ ಖರ್ಚು ವೆಚ್ಚದಲ್ಲಿ ಸಾಕಷ್ಟು ಅಕ್ರಮಗಳು ನಡೆದಿರುವ ಅಧಿಕೃತ ಮಾಹಿತಿಯ ಮೇರೆಗೆ ಮಾಹಿತಿಹಕ್ಕು ಅಡಿಯಲ್ಲಿ ದಾಖಲೆಗಳನ್ನು ಪಡೆದು ಪರಶೀಲನೆ ಮಾಡಿದಾಗ ಸಾಕಷ್ಟು ಲೋಪದೋಷಗಳು ಕಂಡುಬಂದ ಕಾರಣ ದಿನಾಂಕ: 17-02-2026 ರಂದು ಜಂಟಿ ನಿರ್ದೇಶಕರು, ಪ್ರಾದೇಶಿಕ ಕಛೇರಿ, ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರಿಗೆ ದೂರು ನೀಡಲಾಗಿತ್ತು.
ದೂರು ನೀಡಿ 8 ತಿಂಗಳು ಕಳೆದರೂ ಜಂಟಿ ನಿರ್ದೆಶಕರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಹೊಳಲ್ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರುಗಳಾಗಿ ಕಾರ್ಯನಿರ್ವಹಿಸಿದ ಸುರೇಶ್ ಎಸ್., ಡಾ.ರಮೇಶ್ ಎಲ್., ಡಿ.ಆರ್.ಹನುಮಂತರಾಯ, ಶಿವಮೂರ್ತಿನಾಯ್ಕ್ ಎನ್ ಹಾಗೂ ಜಂಟಿ ನಿರ್ದೇಶಕರಾದ ಶ್ರೀ ಕೇಶವ ಹೆಚ್ ಇವರುಗಳ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ಮಾಹಿತಿ ನೀಡಿದ್ದಾರೆ.

-
ದಿನದ ಸುದ್ದಿ5 days agoದಾವಣಗೆರೆ ವಿಶ್ವವಿದ್ಯಾಲಯ ಕುಲಸಚಿವ ಎಸ್.ಬಿ ಘಂಟಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoಹರಿಹರ | ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೇವರಬೆಳಕೆರೆ ಇಲ್ಲಿ ಅವ್ಯವಹಾರ | ಪ್ರಾಂಶುಪಾಲ ನೀಲಪ್ಪ ಪಿಡ್ಡಣ್ಣನವರ್ ವಾರ್ಡನ್ ಹೆಚ್.ವಿ.ನಾಗರಾಜ್ ವಿರುದ್ಧ ಲೋಕಾಗೆ ದೂರು|
-
ದಿನದ ಸುದ್ದಿ13 hours agoನೀತಿ ಸಂಹಿತೆ ಉಲ್ಲಘನೆ, ಬೋಧನೆ ಶೂನ್ಯ ; ಚಳ್ಳಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಲೇಪಾಕ್ಷ ವಿರುದ್ಧ ದೂರು
-
ದಿನದ ಸುದ್ದಿ1 day agoಹೊಳಲ್ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಕಲಿ ಬಿಲ್ಲುಗಳ ಹಾವಳಿ | ಕೆ.ಟಿ.ಪಿ.ಪಿ ನಿಯಮ ಉಲ್ಲಂಘನೆ ; ಜಂಟಿ ನಿರ್ದೇಶಕ ಸೇರಿ 4 ಜನ ಪ್ರಾಂಶುಪಾಲರ ವಿರುದ್ಧ ಲೋಕಾಗೆ ದೂರು
-
ಅಂತರಂಗ4 days agoಕವಿತೆ | ಒಂಟಿಯಾನದ ಸರಕು
-
ದಿನದ ಸುದ್ದಿ19 hours agoಮಂಗಳೂರು | ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಕೆ.ಆರ್ ಕವಿತಾ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಕಾರಾಗೃಹಗಳ ಇಲಾಖೆ ನೇಮಕಾತಿ ಪರೀಕ್ಷೆ : 4,697 ಅಭ್ಯರ್ಥಿಗಳು ಹಾಜರು
-
ದಿನದ ಸುದ್ದಿ7 hours agoರಕ್ತದಾನದಿಂದ ಜೀವ ಉಳಿಸಿ, ಶ್ರವಣ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ : ಯೋಗೀಶ್ ಸಹ್ಯಾದ್ರಿ

