Connect with us

ರಾಜಕೀಯ

ಕೇಜ್ರಿವಾಲ್ ಮತ್ತು ದೆಹಲಿ ಗಲಭೆ

Published

on

  • ವಿ.ನಟರಾಜ್

ದೆಹಲಿಯ ಮತೀಯ ಗಲಭೆಗಳ ನಿರ್ವಹಣೆಯ ವಿಚಾರದಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಅಸಹಾಯಕತೆಯನ್ನು ಪ್ರದರ್ಶಿಸಿರುವ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರ ಬಗ್ಗೆ‌ ಬಹುತೇಕ ಗೆಳೆಯರು ಧಿಡೀರನೆ ಭ್ರಮನಿರಸನಗೊಂಡಿದ್ದಾರೆ.

ಮತೀಯ ಗಲಭೆ ವಿಚಾರದಲ್ಲಿ ಮೋದಿ-ಶಾ ಜೋಡಿಯ ‘ಎಂದಿನ ಸಂವೇದನಾಶೂನ್ಯತೆ’ಯನ್ನು, ಅದರಲ್ಲಿಯೂ ವಿಶೇಷವಾಗಿ ಕಾಶ್ಮೀರದ ವಿಚಾರದಲ್ಲಿ ತಾನು ಭಲೇ ಭಲೇ ಉಕ್ಕಿನ ಮನುಷ್ಯ ಎಂದು ಸಾಬೀತು ಪಡಿಸಿರುವುದಾಗಿ ತೊಡೆ ತಟ್ಟುತ್ತಿದ್ದ ಗೃಹ ಸಚಿವ ಅಮಿತ್‌ ಶಾ, ದೆಹಲಿ ಗಲಭೆಯ ವಿಚಾರದಲ್ಲಿ ಬೇಕೆಂದೇ ಬೆನ್ನುಮೂಳೆ ಕಳೆದುಕೊಂಡ ಬಗ್ಗೆ ಹೆಚ್ಚಿನ ತಕರಾರು ಪ್ರಗತಿಪರರಿಗೂ ಇದ್ದಂತಿಲ್ಲ.

ಯಾಕೆಂದರೆ, ಇಂಥದ್ದನ್ನೆಲ್ಲಾ ಈ ಜೋಡಿಯ ಆಡಳಿತ ಕಾಲದಲ್ಲಿ ನೋಡಲು ಬಹುಶಃ ಎಲ್ಲ ಪ್ರಗತಿಪರರೂ ಮಾನಸಿಕವಾಗಿ ಸಿದ್ಧರಾಗಿದ್ದಂತಿದೆ. ಆದರೆ, ಕೇಜ್ರಿವಾಲ್‌ ಕೂಡಾ ಇಷ್ಟು ಬೇಗನೇ ಮತೀಯಗಲಭೆಗಳಂತಹ ಗಂಭೀರ ವಿಷಯದಲ್ಲಿ ಶುದ್ಧಾತಿಶುದ್ಧ ರಾಜಕಾರಣಿಯಾಗಿ ಹೊರಹೊಮ್ಮುತ್ತಾರೆ, ಆಪ್ ನ ದೆಹಲಿ ರಾಜಕಾರಣಿಗಳು ರಂಗೋಲಿ ಕೆಳಗೆ ತೂರುವಂತಹ ಮಾತುಗಳನ್ನು ಆಡತೊಡಗುತ್ತಾರೆ ಎನ್ನುವುದನ್ನು ಬಹುತೇಕ ಗೆಳೆಯರು ನಿರೀಕ್ಷಿಸಿರಲಿಲ್ಲ.

ಇದೀಗ ದೇಶದ್ರೋಹ ಪ್ರಕರಣದಲ್ಲಿ ಜೆಎನ್‌ಯು ಮಾಜಿ ಮುಖಂಡ ಕನ್ಹಯ್ಯ ಕುಮಾರ್ ಹಾಗೂ ಸಂಗಡಿಗರ ವಿರುದ್ಧ ದೇಶದ್ರೋಹದ ಪ್ರಕರಣದ ವಿಚಾರಣೆಗೆ ದೆಹಲಿ ಸರ್ಕಾರ ಅನುಮತಿ ನೀಡಿರುವುದು ಸಹ ಅನೇಕರಿಗೆ ಅಚ್ಚರಿ ಉಂಟುಮಾಡಿದೆ. ದೆಹಲಿ ಗಲಭೆಯ ವಿಚಾರದಲ್ಲಿ ಆಪ್‌ ನ ಧೋರಣೆಯನ್ನು ಖಂಡಿಸಿದ್ದ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಪರೋಕ್ಷವಾಗಿ ಕೇಜ್ರಿ ಸರ್ಕಾರ ಚಾಟಿ ಬೀಸಿದೆಯೇ ಎನ್ನುವ ಅನುಮಾನ ಮೇಲುನೋಟಕ್ಕೇ ಗೋಚರಿಸುತ್ತಿದೆ.

ದೆಹಲಿ ಮತೀಯ ಗಲಭೆಗಳ ಮೊದಲ ಮೂರು ದಿನ ಆಪ್ ವರ್ತಿಸಿದ ರೀತಿ ಹೇಗಿತ್ತೆಂದರೆ, ಇಂತಹದ್ದೊಂದು ಗಲಭೆ ಸಂಭವಿಸಿದರೆ ಮಾತ್ರ ದೆಹಲಿ ಸರ್ಕಾರದ ಕೆಳಗೆ ಪೊಲೀಸ್‌ ಇಲಾಖೆ ಹಾಗೂ ಆ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹೊಣೆ ಬರಬೇಕು ಎನ್ನುವ ತನ್ನ ವಾದಕ್ಕೆ ಬಲ ಬರುತ್ತದೆ ಎನ್ನುವಂತಿತ್ತು. ಕೇಜ್ರಿವಾಲ್‌ ಅವರಂತೂ ‘ಹೆಚ್ಚುವರಿ’ ಅಸಹಾಯಕತೆಯನ್ನೇ ತಮ್ಮ ಮೇಲೆ ಆವಾಹಿಸಿಕೊಂಡವರಂತೆ ‘ಪೊಲೀಸ್‌ ಇಲಾಖೆ ನಮ್ಮ ಬಳಿ ಇಲ್ಲ’, ಎನ್ನುವುದನ್ನು ಸಾರಿ ಸಾರಿ ಹೇಳುವಂತೆ ಪ್ರತಿಕ್ರಿಯಿಸಿದರು.

ಇಂತಹದ್ದೊಂದು ‘ಚಾಲಾಕಿತನದ ರಾಜಕಾರಣ’ವನ್ನು ಕೇಜ್ರಿವಾಲ್ ಯಾವತ್ತಿದ್ದರೂ‌ ಪ್ರದರ್ಶಿಸುತ್ತಾರೆ ಎನ್ನುವುದು ಅವರ ಹೋರಾಟಗಳನ್ನು ಹತ್ತಿರದಿಂದ ಗಮನಿಸಿದವರಿಗೆ ತಿಳಿಯದ ವಿಷಯವೇನಲ್ಲ. ಎಷ್ಟಾದರೂ ಕೇಜ್ರಿವಾಲ್ ಇಂದಿನ ಪೀಳಿಗೆ ಬಯಸುವ ಫಟಾಫಟ್ ಕಾರ್ಪೊರೆಟ್‌ ಮಾದರಿ ರಾಜಕಾರಣವನ್ನು ಅನುಸರಿಸುತ್ತಾ‌ ಅಡಳಿತಾತ್ಮಕ ವಿಷಯಗಳ ಮೂಲಕ ಅಂಕಗಳಿಸುವ ರಾಜಕಾರಣಿಯೇ ಹೊರತು ಸೈದ್ಧಾಂತಿಕವಾಗಿ ಗಟ್ಟಿಯಾದ, ದಿಟ್ಟ ಹೆಜ್ಜೆಯನ್ನು ಇಡಬಹುದಾದ ರಾಜಕಾರಣಿ ಅಲ್ಲ.

ಈ ಬಗ್ಗೆ ತಕರಾರು ತೆಗೆಯ ಬಯಸುವವರ ವಾದಗಳಿಗೆ ಕೇಜ್ರಿವಾಲ್ ರ ಈವರೆಗಿನ ನಡೆಗಳಲ್ಲಿ ಹೆಚ್ಚಿನ ಸಾಕ್ಷ್ಯಗಳೂ ಸಿಗುವುದಿಲ್ಲ. ಕೇಜ್ರಿ ಹೀಗೇಕೆ ಎಂದು ಕಾರಣ ಹುಡುಕುತ್ತಾ ಹೊರಟವರಿಗೆ, ಇದೆಲ್ಲದರ ಬೀಜಗಳು ಇರುವುದು ಅವರನ್ನು ಅಧಿಕಾರ ರಾಜಕಾರಣದ ಕೇಂದ್ರಕ್ಕೆ ತಂದ “ಭ್ರಷ್ಟಾಚಾರದ ವಿರುದ್ಧ”ದ ಹೋರಾಟದಲ್ಲಿ ಎನ್ನುವುದನ್ನು ಇಲ್ಲಿ ಮತ್ತೊಮ್ಮೆ ನೆನಪಿಸಬೇಕಾಗುತ್ತದೆ.

ಭ್ರಷ್ಟಾಚಾರದ ವಿರುದ್ಧದ ಹೋರಾಟ ಎನ್ನುವ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ನಡೆದ ‘ದೆಹಲಿ ಕೇಂದ್ರಿತ’ ಹೋರಾಟವನ್ನು ಬಿಜೆಪಿ ಹೈಜಾಕ್‌ ಮಾಡದಂತೆ ಕೇಜ್ರಿವಾಲ್‌ ತಡೆದರು ಎನ್ನುವುದನ್ನು ಹೊರತುಪಡಿಸಿದರೆ, ಅವರು ಭ್ರಷ್ಟಾಚಾರದ ಹೋರಾಟವನ್ನು ಮತೀಯವಾದಿ ಮನಸ್ಸುಗಳನ್ನು ದೂರವಿಟ್ಟು ಕಟ್ಟಿದರು ಎಂದು ಯಾರೂ ಎದೆತಟ್ಟಿ ಹೇಳಲಾರರು.

ಒಂದೆಡೆ ಕಾಂಗ್ರೆಸ್‌ನ ಅಹಿಂದ ವೋಟ್‌ ಬ್ಯಾಂಕ್‌, ಮತ್ತೊಂದೆಡೆ ಬಿಜೆಪಿಯ ಮತೀಯವಾದಿ ರಾಜಕಾರಣ ಈ ಎರಡರಿಂದ ಸೈದ್ಧಾಂತಿಕವಾಗಿ ಸಮಾನಾಂತರವಾಗಿ ಇದ್ದುಕೊಂಡು ತಮ್ಮದೇ ಆದ ವೋಟ್‌ ಬ್ಯಾಂಕ್‌ ರೂಪಿಸಿಕೊಳ್ಳುವುದು ಸುದೀರ್ಘ ಅವಧಿಯನ್ನು, ಶ್ರಮವನ್ನು ಬೇಡುವಂತಹ ರಾಜಕಾರಣ ಎನ್ನುವುದನ್ನು ಅರಿತಿದ್ದ ಕೇಜ್ರಿವಾಲ್, ಫಟಾಫಟ್‌ ರಾಜಕಾರಣಕ್ಕೆ ಮೊರೆ ಹೋದರು.

ಈ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಸುಲಭಕ್ಕೆ‌ ‘ವೋಟು ಕೀಳುವ’ ರಾಜಕಾರಣಕ್ಕೆ ತಮ್ಮನ್ನು ಮುಡಿಪಾಗಿಟ್ಟುಕೊಂಡರು. ಕೇಜ್ರಿವಾಲ್‌ ಭ್ರಷ್ಟಾಚಾರದ ವಿರುದ್ಧ ಮಾತನಾಡಿದಷ್ಟೇ ಉತ್ಸಾಹದಿಂದ ಸಾಮಾಜಿಕ ನ್ಯಾಯ, ಮತೀಯ ಸಾಮರಸ್ಯದಂತಹ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ. ಈ ವಿಚಾರಗಳು ಬಂದಾಗ ಪ್ರಗತಿಪರರ ಮನಸ್ಸಿಗೆ ನೋವಾಗದಂತೆ ಎಚ್ಚರಿಕೆ ವಹಿಸುತ್ತಾರಾದರೂ, ಸ್ಥಳೀಯ ರಾಜಕಾರಣದಲ್ಲಿ ತಮ್ಮನ್ನು ಬೆಂಬಲಿಸುವ ಮೂಲತಃ ಬಿಜೆಪಿಯ ಮತದಾರರ ಆಕ್ರೋಶವನ್ನು ಕಟ್ಟಿಕೊಳ್ಳುವಷ್ಟು ದೂರಕ್ಕೆ ಅವರೆಂದೂ ಹೋಗುವುದಿಲ್ಲ. ಒಂದು ವೇಳೆ ಹೋದರೂ, ಅವಕಾಶ ನೋಡಿ ಚಕ್ಕನೆ ಹಿಂದಕ್ಕೆ ಪಲ್ಟಿ ಹೊಡೆದು ಬಿಡುತ್ತಾರೆ!

ಈ ವಿಷಯದಲ್ಲಿ ಅವರೊಬ್ಬ ಉತ್ತಮ ‘ಅಕ್ರೋಬ್ಯಾಟ್’. ಕೇಜ್ರಿವಾಲ್‌ ಅವರನ್ನು ಮುಂದೆ ಬಿಟ್ಟುಕೊಂಡ ಹಿಂದೆ ಓಡುವುದೆಂದರೆ ಅದೊಂದು ದುಸ್ಸಾಹಸವೇ ಸರಿ. ಕೇಜ್ರಿ, ಯಾವಾಗ ಛಕ್ಕನೆ ಲೇನ್‌ ಬದಲಿಸಿ ಹಿಂದಕ್ಕೆ ತಿರುಗಿ ಓಡಿಬಿಡುತ್ತಾರೋ ಹೇಳಲುಬಾರದು! ಹಾಗಾಗಿಯೇ, ಅವರ ಈ ವರಸೆಗಳನ್ನು ಕಂಡಾಗ, ಸದಾಕಾಲ ಅಧಿಕಾರದ ಕೇಂದ್ರದಲ್ಲಿರಲು ಅತ್ತಿಂದಿತ್ತ ಲಾಗ ಹಾಕುವ ಜೆಡಿಯು ಮುಖಂಡ ನಿತೀಶ್‌ ಕುಮಾರ್ ಅವರ ಸುಧಾರಿತ ಆವೃತ್ತಿಯಂತೆ ಕೇಜ್ರಿ ಭಾಸವಾಗುತ್ತಾರೆ!

ಬಿಜೆಪಿಯನ್ನು ವಿರೋಧಿಸುವ ಕಟ್ಟರ್‌ ಕಾಂಗ್ರೆಸ್ಸಿಗರು ಹಾಗೂ ಸಮಾಜವಾದಿಗಳಿಗೆ, ಅದೇ ರೀತಿ, ಕಾಂಗ್ರೆಸ್‌ ಹಾಗೂ ಸಮಾಜವಾದಿಗಳನ್ನು ಕಂಡರೆ ಉರಿದುಬೀಳುವ ಉಗ್ರ ಹಿಂದುತ್ವವಾದಿಗಳಿಗೆ ಕೇಜ್ರಿವಾಲ್‌ ಒಂದು ತಂಗುದಾಣದಂತೆ. ಹೇಗಾದರೂ ಸರಿ ತಮ್ಮ ವೋಟು ಕಾಂಗ್ರೆಸ್ಸಿಗೆ ಹೋಗಬಾರದು ಎಂದು ಬಯಸುವವರು, ಎಷ್ಟಾದರೂ ಸರಿ, ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಇಚ್ಛಿಸುವವರು ಕೇಜ್ರಿವಾಲ್‌ ರ ಪರಿಣಾಮಕಾರಿ ಆಡಳಿತ ಶೈಲಿಗೆ ಜೈಕಾರ ಹಾಕಿ ಅವರಿಗೆ ಮತ ನೀಡುತ್ತಾರೆ. ಹೀಗೆ ತಮಗೆ ಯಾವುದೇ ಸೈದ್ಧಾಂತಿಕ ಬಲದ ಸಹಾಯವಿಲ್ಲದೆ ಹರಿದುಬರುವ ಮತಗಳಿಂದಾಗಿ, ಕೇಜ್ರಿಯವರು ಯಾವತ್ತೂ ಹ್ಯಾಪಿಯೇ!

ಸೈದ್ಧಾಂತಿಕವಾಗಿ ಪೊಳ್ಳಾದರೂ ಸಹ ಇದು ಅಧಿಕಾರದ ಪಡಸಾಲೆಯಲ್ಲಿ ಬಹುಕಾಲ ಉಳಿಯುವ ವಾಸ್ತವ ರಾಜಕಾರಣದ ತಂತ್ರ ಎನ್ನುವುದನ್ನು ಅವರ ಅರ್ಥ ಮಾಡಿಕೊಂಡು, ಜೀರ್ಣಿಸಿಕೊಂಡಿದ್ದಾರೆ. ಪಾಪ, ಇದಾವುದರ ಅರಿವಿಲ್ಲದೆ, ಕೇಜ್ರಿ ಅವರಲ್ಲಿ ನೆಹರು ಪ್ರಣೀತ ಅಭಿವೃದ್ಧಿ ಮಾದರಿಯನ್ನು, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ನಿರೀಕ್ಷಿಸಲು ಹೊರಟವರು ಭ್ರಮನಿರಸನಕ್ಕೆ ಒಳಗಾಗುತ್ತಾರೆ…

ಇನ್ನು, ಈ ಭ್ರಷ್ಟಾಚಾರದ ವಿರುದ್ಧದ ಹೋರಾಟ ಎನ್ನುವ ಪರಿಕಲ್ಪನೆ ಇಂದು ಬಹುತೇಕವಾಗಿ ಅವಕಾಶವಾದಿ ರಾಜಕಾರಣದ ಸರಕಾಗಿಬಿಟ್ಟಿದೆ. ಇದು ಎಲ್ಲರನ್ನೂ ಒಳಗೊಳ್ಳುವ, ‘ರಾಜಕೀಯ ಚಲಾವಣೆ’ಯ ಹೋರಾಟ ಎನ್ನುವ ಕಾರಣಕ್ಕೆ ಸುಲಭಕ್ಕೆ ನಮ್ಮ ಅನೇಕ ಭರವಸೆಯ ನಾಯಕರು ಗೊತ್ತಿದ್ದೋ, ಗೊತ್ತಿಲ್ಲದೆಯೋ, ಉದ್ದೇಶಪೂರ್ವಕವಾಗಿಯೋ, ದುರುದ್ದೇಶಪೂರ್ವಕವಾಗಿಯೋ ಇದಕ್ಕೆ ಜೋತು ಬೀಳುತ್ತಾರೆ. ವಿಪರ್ಯಾಸವೆಂದರೆ, ಭ್ರಷ್ಟಾಚಾರವನ್ನು ಅಸಾಮರ್ಥ್ಯದೊಂದಿಗೂ, ಅಸಾಮರ್ಥ್ಯವನ್ನು ಮೀಸಲಾತಿಯೊಂದಿಗೂ, ಮೀಸಲಾತಿಯನ್ನು ಮೇಲ್ಜಾತಿ ವಿರೋಧಿ ರಾಜಕಾರಣದೊಂದಿಗೂ ಚಕಚಕನೆ ಜೋಡಿಸಿ ಬಿಡುವ ದುರಾಲೋಚನಾ ಪ್ರವಾಹವೊಂದನ್ನು ಈ ದೇಶದಲ್ಲಿ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ.

ಈ ಪ್ರವಾಹದ ಚಾಲಕಶಕ್ತಿಯಾಗಿರುವ ವರ್ಗವು ಯಾವುದೇ ಬಗೆಯ ಸಾಮಾಜಿಕ ಅಸಮಾನತೆಯ ಬಗ್ಗೆ ಅಪ್ಪಿತಪ್ಪಿಯೂ ಬಾಯಿಬಿಡುವುದಿಲ್ಲ, ಬದಲಿಗೆ, ಭ್ರಷ್ಟಾಚಾರದ ಬಗ್ಗೆ ಮಾತ್ರ ಉದ್ದುದ್ದ ಭಾಷಣ ಬಿಡುತ್ತದೆ. ನಿರುದ್ಯೋಗ, ಕುಸಿದಿರುವ ಆರ್ಥಿಕತೆ, ಹೆಚ್ಚುತ್ತಿರುವ ಸಾಮಾಜಿಕ ಉದ್ವಿಗ್ನತೆ, ಕಂದಾಚಾರ, ಮೌಢ್ಯಗಳ ವಿರುದ್ಧ ಇದಕ್ಕೆ ಪ್ರತಿಭಟಿಸುವ ಇರಾದೆ ಇರುವುದಿಲ್ಲ. ಮತೀಯವಾದದ ಬಗ್ಗೆಯಂತೂ ತುಟಿ ಬಿಚ್ಚುವುದೇ ಇಲ್ಲ. ಹೀಗಾಗಿಯೇ ಈ ಬಗೆಯ ಹೋರಾಟಗಳು ಬಹುತೇಕ ಬಾರಿ ಸಂವಿಧಾನ ವಿರೋಧಿಗಳಿಗೆ ಶಕ್ತಿಯನ್ನು ತುಂಬಿವೆ!

ಅಂದಹಾಗೆ, ಕೊನೆಯದಾಗಿ, ಕಾಶ್ಮೀರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ತಿಂಗಳುಗಟ್ಟಲೆ ಮೊಬೈಲ್ ಹಾಗೂ ಇಂಟರ್ನೆಟ್‌ ಸೇವೆಗಳನ್ನು ಬಂದ್‌ ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ ದೆಹಲಿಯಲ್ಲಿ ಸಾಲು ಸಾಲು ಹೆಣಗಳು ಉರುಳಿದರೂ ಇಂತಹ ನಿರ್ಧಾರ ಕೈಗೊಳ್ಳಲಿಲ್ಲ! ಕೇವಲ ಒಂದು ವಾರ ಕಾಲವಾದರೂ ದೆಹಲಿಯಲ್ಲಿ ಮೊಬೈಲ್‌ ಹಾಗೂ ಇಂಟರ್‌ನೆಟ್‌ ಸೇವೆಗಳನ್ನು ಕೇಂದ್ರ ಸರ್ಕಾರ ಬಂದ್‌ ಮಾಡಲಿಲ್ಲವೇಕೆ? ಮೊದಲೇ ಕುಸಿದು ಕೂತಿರುವ ಅರ್ಥಿಕತೆಯ ಈ ಸಂದರ್ಭದಲ್ಲಿ ದೇಶದ ಯಾವುದೇ ಮೊಟ್ರೋ ನಗರಿಯಲ್ಲಿ ಇಂಟರ್ನೆಟ್‌ ಸೇವೆಯನ್ನು ಬ್ಯಾನ್‌ ಮಾಡುವುದು ಕೇಂದ್ರ ಸರ್ಕಾರಕ್ಕೆ ಸಾಧ್ಯವೇ? ಇಲ್ಲ. ಕಾಶ್ಮೀರದ ಪ್ರಯೋಗವನ್ನೇನಾದರೂ ದೇಶದ ಇತರೆಡೆ ಮಾಡಿದರೆ ಅದರಿಂದ ದೇಶದ ಆರ್ಥಿಕತೆಗೆ ಎಂತಹ ಹೊಡೆತ ಬೀಳಬಹುದು ಎನ್ನುವುದು ಅದಕ್ಕೆ ಗೊತ್ತು. ಹಾಗಾಗಿಯೇ ಅಂತಹ ದುಸ್ಸಾಹಸಕ್ಕೆ ಕೈ ಹಾಕಲು ಹೋಗುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

AI ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ಪ್ರಕಟ

Published

on

ಸುದ್ದಿದಿನಡೆಸ್ಕ್:ಕೃತಕ ಬುದ್ಧಿಮತ್ತೆ ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಟೈಮ್ ಪತ್ರಿಕೆ ಪ್ರಕಟಿಸಿದ್ದು, ಅದರಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಸ್ಥಾನ ಪಡೆದಿದ್ದಾರೆ.

ಅಶ್ವಿನಿ ವೈಷ್ಣವ್ ಅವರನ್ನು ಶಾರ್ಪರ್ ವರ್ಗದಲ್ಲಿ ಹೆಸರಿಸಲಾಗಿದ್ದು, ಅವರ ನಾಯಕತ್ವದಲ್ಲಿ ಮುಂದಿನ 5 ವರ್ಷಗಳಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಕ್ಷೇತ್ರದ ಮೊದಲ 5 ದೇಶಗಳಲ್ಲಿ ಭಾರತ ಸ್ಥಾನ ಪಡೆಯುವ ಆಶಯದಲ್ಲಿದೆ ಎಂದು ಟೈಮ್ ಮ್ಯಾಗ್‌ಜೀನ್ ಬರೆದಿದೆ.

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತವನ್ನು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿಸುವ ಪ್ರಯತ್ನದಲ್ಲಿ ಸಚಿವರು ನಿರ್ವಹಿಸಿದ ಮಹತ್ವದ ಪಾತ್ರದ ಹಿನ್ನೆಲೆಯಲ್ಲಿ ಪಟ್ಟಿಯಲ್ಲಿ ಅವರ ಹೆಸರು ನಮೂದಿತವಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.

ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಕೊಡುಗೆ ನೀಡಿದ ಇನ್ಫೋಸೀಸ್‌ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ, ಸಿಇಓಗಳಾದ ಗೂಗಲ್‌ನ ಸುಂದರ್ ಪಿಚಾಯಿ, ಮೈಕ್ರೋಸಾಫ್ಟ್‌ನ ಸತ್ಯ ನಾದೆಲ್ಲಾ, ಓಪನ್‌ಎಐ ನ ಸ್ಯಾಮ್ ಅಲ್ಟ್‌ಮನ್, ಮೆಟಾದ ಮಾರ್ಕ್ ಝುಕೇರ್‌ಬರ್ಗ್ ಟೈಮ್ ಪ್ರಕಟಿಸಿದ ಪಟ್ಟಿಯಲ್ಲಿ ಸೇರಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರಾಜಧಾನಿಯಲ್ಲಿ ಅಪಾಯಕಾರಿ ಮರಗಳನ್ನು ಕತ್ತರಿಸುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನಡೆಸ್ಕ್:ರಾಜಧಾನಿ ಬೆಂಗಳೂರಿನಲ್ಲಿ 15 ದಿನದೊಳಗೆ ಗುಂಡಿ ಮುಚ್ಚುವಂತೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಸೂಚಿಸಿದ್ದಾರೆ.

ವಿದೇಶ ಪ್ರವಾಸಕ್ಕೂ ಮುನ್ನ ವೈಯಾಲಿಕಾವಲ್ ಬಿಬಿಎಂಪಿ ಕಚೇರಿಯಲ್ಲಿ ಅಧಿಕಾರಿಗಳ ಜತೆ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಇಂದು ಸಭೆ ನಡೆಸಿದ ಅವರು ಸರಿಯಾಗಿ ಕಾರ್ಯನಿವಹಿಸದ ಅಧಿಕಾರಿಗಳನ್ನು ಅಮಾನತುಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

ಸೆಪ್ಟಂಬರ್‌ನಲ್ಲಿ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ತಿಳಿಸಿದ ಅವರು, ಅಪಾಯಕಾರಿ ಮರಗಳಿದ್ದರೆ, ಕತ್ತರಿಸುವಂತೆ ಸೂಚಿಸಿದ್ದಾರೆ.

ಯಾವುದೇ ದೂರು ಬಂದರೆ ಅಧಿಕಾರಿಗಳೇ ನೇರ ಹೊಣೆ ಎಂದಿದ್ದಾರೆ. ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ಮೌನೀಶ್ ಮೌದ್ಗೀಲ್, ಬಿಎಂಆರ್ಡಿಎ ಆಯುಕ್ತ, ಉಪಮುಖ್ಯಮಂತ್ರಿಗಳ ಕಾರ್ಯದರ್ಶಿ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಹದಾಯಿ ವಿಚಾರದಲ್ಲಿ ತಪ್ಪು ದಾರಿಗೆ ಎಳೆಯುವ ಪ್ರಯತ್ನ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನಡೆಸ್ಕ್:ಮಹದಾಯಿ ವಿಚಾರದಲ್ಲಿ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಹದಾಯಿ ಯೋಜನೆಯ ಹಿನ್ನಡೆಗೆ ಕಾಂಗ್ರೆಸ್ ಕಾರಣ ಎಂದು ದೂರಿದ್ದಾರೆ. ಜುಲೈನಲ್ಲಿ ನಡೆದ ಸಭೆ ತಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ ಅವರು, ರಾಜ್ಯದ ಜನರ ಹಿತ ಕಾಪಾಡಲು ಬದ್ಧ ಎಂದು ಹೇಳಿದ್ದಾರೆ. ಮಹದಾಯಿ ಕೇವಲ ಗೋವಾ ಸಂಬಂಧಿ ಯೋಜನೆ ಅಲ್ಲ. ಅಲ್ಲಿ ಹುಲಿ ಸಂರಕ್ಷಿತ ಪ್ರದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending