Connect with us

ಲೈಫ್ ಸ್ಟೈಲ್

ಮದುವೆ ಎಂದರೆ ಹೆಣ್ಣು-ಗಂಡಿನ ದೈಹಿಕ ಸುಖವಲ್ಲ ಅದು ಕುಟುಂಬ ಕುಟುಂಬಗಳ ಮನಸ್ಸಿನ ಸಂಬಂಧ

Published

on

  • ಶಿವಾನಂದ ಕಲಬುರಗಿ

ರಸ ಜನನ ವಿರಸ ಮರಣ ಸಮರಸವೇ ಜೀವನ ಬೇಂದ್ರೆಯವರ ದಿವ್ಯ ವಾಣಿಯಂತೆ ಬದುಕಬೇಕೆಂದರೆ ಮನೆಯೇ ಮೊದಲ ಪಾಠಶಾಲೆ ಆಗಬೇಕು. ತಾಯಿಯೇ ಮೊದಲ ಗುರು ಆಗಬೇಕಾಗಿದೆ. ನೂಲಿನಂತೆ ಸೀರೆ ತಾಯಿಯಂತೆ ಮಗಳು ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಸುಳ್ಳಿಗೆ ಸುಖವಿಲ್ಲ ಸತ್ಯಕ್ಕೆ ಸಾವಿಲ್ಲ.

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿಸು. ಎಂಬ ಗಾದೆ ಮಾತಿನಂತೆ ಮದುವೆ ಎಂಬುದು ಗಂಡು ಹೆಣ್ಣಿನ ದೈಹಿಕ ಸುಖವಲ್ಲ ಕುಟುಂಬ ಕುಟುಂಬಗಳ ನಡುವಿನ ಮನಸ್ಸಿನ ಸಂಬಂಧ. ಮದುವೆ ಏಳೇಳು ಜನ್ಮದ ಅನುಬಂಧ ಹೆಣ್ಣಿಗೊಂದು ಗಂಡು ಗಂಡಿಗೊಂದು ಹೆಣ್ಣು ಪ್ರಪಂಚದ ಸೃಷ್ಟಿಯಲ್ಲಿ ಇದ್ದೇ ಇರುತ್ತದೆ. ಬಡವರ ಮನೆಯ ಹೆಣ್ಣು ತಂದುಕೊಳ್ಳಬೇಕು ಶ್ರೀಮಂತರ ಮನೆಗೆ ಹೆಣ್ಣು ಕೊಡಬೇಕು. ಇದು ಲೋಕ ರೂಢಿಯ ಸಿದ್ಧಾಂತ.

ಋಣಾನುಬಂಧದ ಸಂಬಂಧ ಕೂಡಿಬಂದಾಗ ಮದುವೆಯೆಂಬ ಶುಭಕಾರ್ಯ ನೆರವೇರುತ್ತದೆ. ಮದುವೆಯಾದ ನವದಂಪತಿಗಳು ಪರಸ್ಪರ ಸ್ನೇಹಭಾವದಿಂದ ಅರಿತು ಬಾಳಬೇಕು. ಯಾರು ಹೆಚ್ಚಲ್ಲ ಯಾರು ಕಡಿಮೆಯೂ ಅಲ್ಲ ಗಂಡನಾದವನು ತನ್ನ ಹೆಂಡತಿಯಲ್ಲಿ ತನ್ನ ಸೋದರಿಯರ ಪ್ರೀತಿ ಕಾಣಬೇಕು. ಹೆಂಡತಿಯಾದವಳು ತನ್ನ ಗಂಡನಲ್ಲಿ ಸಹೋದರನ ಪ್ರೀತಿ ಕಾಣಬೇಕು. ಸೊಸೆಯಾದವಳು ತನ್ನ ಅತ್ತೆಯಲ್ಲಿ ತನ್ನ ತಾಯಿಯ ಪ್ರೀತಿ ಕಾಣಬೇಕು. ಅತ್ತೆಯಾದವಳು ತನ್ನ ಸೊಸೆಯಲ್ಲಿ ತನ್ನ ಮಗಳ ಪ್ರೀತಿ ಕಾಣಬೇಕು. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ. ಕಾಲಾಯ ತಸ್ಮೈ ನಮಃ ಎಂಬ ಮಾತಿನೊಂದಿಗೆ ಅರ್ಥಪೂರ್ಣವಾಗಿ ಬಾಳಬೇಕು.

ಗಂಡ-ಹೆಂಡತಿ ಇಬ್ಬರೂ ಒಂದು ನಾಣ್ಯದ ಎರಡು ಮುಖಗಳಂತೆ. ಎರಡರಲ್ಲಿ ಒಂದು ಇಲ್ಲದಿದ್ದರೂ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಹೆಣ್ಣು ಜಗದ ಕಣ್ಣು ಎಂದು ಬಿಂಬಿಸಲಾಗುತ್ತದೆ. ನಿಸರ್ಗದ ಶಕ್ತಿಯ ಜೊತೆಗೆ ಹೆಣ್ಣನ್ನು ಹೋಲಿಸುತ್ತೇವೆ. ಜನನ ಮತ್ತು ಮರಣಕ್ಕೂ ನಿಸರ್ಗವೇ ಹೇಗೆ ಕಾರಣವೋ ಹಾಗೆಯೇ ಹೆಣ್ಣು ಕೂಡ ಜನನ ಮರಣದ ನಡುವಿನ ವಿಸ್ಮಯ ಶಕ್ತಿ.

ಹೆಣ್ಣು ವಂಶವನ್ನು ಉದ್ಧಾರ ಮಾಡುವವಳು ಮನೆ ಬೆಳಗುವವಳು ಮನೆಯ ಮಹಾಲಕ್ಷ್ಮಿ ಸೌಭಾಗ್ಯವತಿ ಸುಕಾಂತೆ ಸಕಲ ಸಂಪನ್ನದಾತೆ ಮನೆ ಬೆಳಗುವ ನಂದದೀಪ ಎಂದು ಹೀಗೆ ನಾನಾ ರೀತಿಯಲ್ಲಿ ಅವಳನ್ನು ನಾಮಪದಿಂದ ಗುಣವಾಚಕವಾಗಿ ಪರಿವರ್ತಿಸಿ ಗೌರವಿಸಲಾಗಿದೆ. ಆದರೆ ಈ ಮೇಲಿನ ಎಲ್ಲಾ ಗುಣಗಾನವು ಎಲ್ಲಾ ಹೆಣ್ಣಿನಲ್ಲಿ ಸಾಧಾರಣವಾಗಿ ಕಂಡುಕೊಳ್ಳಲು ಕಷ್ಟಸಾಧ್ಯ. ಸಮಾಜದಲ್ಲಿನ ಬಹುತೇಕ ಸಂಸಾರಗಳಲ್ಲಿ ಗಂಡು-ಹೆಣ್ಣಿನ ಮಧ್ಯೆ ಹೊಂದಾಣಿಕೆ ಇಲ್ಲದೆ ಪವಿತ್ರವಾದ ಮದುವೆಯೆಂಬ ಸಂಬಂಧ ಕ್ಷಣಾರ್ಧದಲ್ಲಿ
ಕಡ್ಡಿ ಮುರಿದಂತೆ ಮುರಿದು ಬೀಳುತ್ತವೆ.

ಇದಕ್ಕೆಲ್ಲ ಕಾರಣ ಗಂಡ-ಹೆಂಡತಿಯರ ಮಧ್ಯ ಹೊಂದಾಣಿಕೆಯ ಎಂಬ ಆತ್ಮವಿಶ್ವಾಸ ಕೊರತೆಯಿಂದ. ನಾವು ಬಳಸುವ ಭಾಷೆ ಇತರರ ಹೃದಯವನ್ನು ಕಲಕಬೇಕು. ಮಾತು ಮೃತ್ಯುವಾಗದೆ ಮೃದುವಾಗಿ ಮನಸ್ಸಿಗೆ ನೆಮ್ಮದಿಯನ್ನು ನೀಡುವಂತಿರಬೇಕು. ಕಪಟತನ ಮೋಸ ವಂಚನೆ ಸುಳ್ಳು ತಮ್ಮ ಆಭರಣವನ್ನಾಗಿ ಮಾಡಿಕೊಂಡು ಮಾತನಾಡುವ ಅಹಂಕಾರಿಗಳು ಸಮಾಜದಲ್ಲಿ ಬೇಕಾದಷ್ಟು ಸಂಖ್ಯೆಯಲ್ಲಿದ್ದಾರೆ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು. ಆದ್ದರಿಂದ ಅರಿತು ನಡೆಯಬೇಕು ಮರೆತು ನಡೆಯಬಾರದು. ಅರಿವೇ ಗುರು ವಾಗುತ್ತದೆ ಮರುವು ಶಿಕ್ಷೆಯಾಗುತ್ತದೆ.

ನಾವು ನಡೆದು ಬಂದ ಹಾದಿ ಎಂದೆಂದಿಗೂ ಮರೆಯಬಾರದು. ಜೀವನದಲ್ಲಿ ಕಷ್ಟ ಸುಖಗಳನ್ನು ಸಮಾನವಾಗಿ ಸವಿಯಬೇಕು. ನಾನು ನನ್ನದು ನನ್ನಿಂದಲೇ ಎಂಬ ಅಹಂಕಾರ ನಮ್ಮ ವ್ಯಕ್ತಿತ್ವವನ್ನೇ ನಾಶಮಾಡುತ್ತದೆ. ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಬಹಳ ಮುಖ್ಯವಾಗುತ್ತದೆ. ಸಮಾಜದಲ್ಲಿ ಅಲ್ಪಸುಖಿಗಳು ಸಾಮಾನ್ಯವಾಗಿ ಕಾಣುತ್ತೇವೆ. ಒಂದು ದಿನದ ಗಂಜಿ ಕಾಣದ ಅದೆಷ್ಟೋ ಕುಟುಂಬಗಳಿಗೆ ತದನಂತರ ಬಂದ ಶ್ರೀಮಂತಿಕೆಯಿಂದ ತಮ್ಮ ಇಂದಿನ ಆದಿಯನ್ನು ಮರೆತುಬಿಡುತ್ತಾರೆ. ಹೇಳೋದು ಅದಕ್ಕಾಗಿಯೇ ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದನಂತೆ. ಶ್ರೀಮಂತಿಕೆ ನೆತ್ತಿಗೇರಿದಾಗ ಬಸವನ ಹಾಲಿನಿಂದ ಕುಂಡಿ ತೊಳೆದನಂತೆ. ಬಡತನ ಸಿರಿತನ ಗೋಡೆ ಮೇಲಿನ ನೆರಳಿನಂತೆ.

ಒಂದು ತುತ್ತು ಅನ್ನ ಸಿಕ್ಕರೆ ತೊಡೆಯ ಮರೆಮಾಡಿ ಉಣ್ಣಬೇಕು ಎಂಬ ಅನುಭವದ ಮಾತು ನಮ್ಮ ಹಿರಿಯರು ನಮಗೆ ನಿರ್ದೇಶನ ಮಾಡಿದ್ದಾರೆ. ನಮ್ಮ ದೇಹವೆಂಬುದು ತುಂಬಿದ ಬಂಡಿಯಂತೆ ನಮ್ಮ ಕಾಲುಗಳು ಚಕ್ರದಂತೆ ನಡೆಯುವಾಗ ಜಾಗೃತಿಯಿಂದ ಹೆಜ್ಜೆ ಇಡಬೇಕು . ನಮ್ಮ ಪಂಚೇಂದ್ರಿಯಗಳು ಚಂಚಲಕ್ಕೆ ಸಿಕ್ಕಿಕೊಳ್ಳದಂತೆ ಹತೋಟಿಯಲ್ಲಿ ಹಿಡಿದುಕೊಳ್ಳುವುದೇ ಸಾಧನೆ. ಪ್ರತಿಯೊಬ್ಬ ಮನುಷ್ಯನು ತಮ್ಮ ಆತ್ಮ ಅವಲೋಕನದಿಂದ ಬದುಕಬೇಕು. ವಿಚಾರಾತ್ಮಕವು ಮತ್ತು ವಿಮರ್ಶಾತ್ಮಕವೂ ನಮ್ಮ ಸತ್ಯಾ ಅನ್ವೇಷಣೆಯ ಪಥದಲ್ಲಿ ಸಾಗುವಂತೆ ನೋಡಿಕೊಳ್ಳಬೇಕು.

ಮನುಷ್ಯ ಧರ್ಮ ದಲ್ಲಿ ಪಾಲಿಸಬೇಕಾದ ಬಹುದೊಡ್ಡ ಧರ್ಮ ಎಂದರೆ ಹಸಿದವನಿಗೆ ಅನ್ನ ನೀಡುವುದು, ಸೋತವನಿಗೆ ಸ್ಫೂರ್ತಿ ನೀಡಿ ಗೆಲುವಿನ ಕನಸುಗಳನ್ನು ಬಿತ್ತುವುದು, ಕಷ್ಟದಲ್ಲಿದ್ದವರಿಗೆ ಕೈಲಾದ ಸಹಾಯ ಮಾಡುವುದು. ಪರೋಪಕಾರಿಯಾಗಿ ಬದುಕುವುದು , ಮನುಷ್ಯರನ್ನು ಮನುಷ್ಯರೇ ಪ್ರೀತಿಸುವದೇ ಮನುಷ್ಯನ ಒಳಮರ್ಮ. ಪ್ರತಿಯೊಬ್ಬರೂ ತಮ್ಮ ಕಾಯಕದಲ್ಲಿ ಪ್ರಾಮಾಣಿಕತೆ ಸದಾಚಾರ ಹೊಂದಿರುವುದೇ ಧರ್ಮ. ನೀ ದೇವನಾದರೆ ಎನ್ನನೇಕೆ ಸಲಹೇ ಎಂದು ಅಲ್ಲಮ ದೇವರನ್ನು ಪ್ರಶ್ನಿಸುತ್ತಾನೆ. ನಮ್ಮ ಆತ್ಮವೇ ಪರಮಾತ್ಮ ನಮ್ಮ ಸದಾಚಾರವೇ ಸಕಲ ಸೌಭಾಗ್ಯ ನಮ್ಮ ಮಾತುಗಳಿಗೆ ಸತ್ಯವೇ ಸದಾ ಭೂಷಣ ಸತ್ಯವನ್ನು ನುಡಿಯುವುದು. ಸತ್ಯ ಮತ್ತು ಸುಳ್ಳು ಮನುಷ್ಯನ ವ್ಯಕ್ತಿತ್ವವನ್ನು ಅನಾವರಣಮಾಡುತ್ತವೆ. ಮದುವೆಯೆಂಬುದು ಗಂಡು-ಹೆಣ್ಣುಗಳ ಭಾವ ಸಂಬಂಧದಲ್ಲಿ ಲೀನವಾಗುವುದು.

ಸಾಮಾನ್ಯವಾಗಿ ಪ್ರತಿಯೊಂದು ಹೆಣ್ಣು ತಾನು ಮದುವೆಯಾದ ಗಂಡನೊಂದಿಗೆ ಸಂತೋಷದಿಂದ ಇರಬೇಕೆಂದರೆ ಇಬ್ಬರು ಕುಳಿತು ಆಲೋಚಿಸಿ ಪರಸ್ಪರ ಒಬ್ಬರನ್ನೊಬ್ಬರು ಆತ್ಮಸಾಕ್ಷಿಯಾಗಿ ಅರ್ಥಮಾಡಿಕೊಳ್ಳುವುದರಲ್ಲಿ ಸಂತೋಷವನ್ನು ಕಾಣಬೇಕು . ಹೆಣ್ಣಿಗೆ ಗಂಡನ ಶಾಶ್ವತ ಡಾಕ್ಟರ್ ರಾಜ್ ಅವರ ಒಂದು ಹಾಡು ನೆನಪಿಸುತ್ತಾ
ಬಂದು ಕೊಡಿಸೋ ಸೀರೆ ಬಣ್ಣ ಹೋಗುವವರಿಗೆ ತಂದೆ ಕೊಡಿಸೋ ಸೀರೆ ಮದುವೆಯಾಗುವವರೆಗೆ ತಾಯಿ ಕೊಡಿಸುವ ಸೀರೆ ತಾಯಿ ಆಗುವವರೆಗೆ ಗಂಡ ಕೊಡಿಸುವ ಸೀರೆ ಹೆಣ್ಣಿನ ಕುಂಕುಮ ಇರುವವರೆಗೆ ಮಣ್ಣಿನ ಮಮತೆ ಇರುವವರೆಗೂ. ಕೊಟ್ಟ ಹೆಣ್ಣು ಕುಲದ ಹೊರಗು.

ಎಷ್ಟೇ ಪ್ರೀತಿ ಪ್ರೇಮ ವಿಶ್ವಾಸ ಅನನ್ಯತೆಯಿಂದ ಇದ್ದರೂ ಗಂಡ-ಹೆಂಡತಿಯರ ಮಧ್ಯೆ ಒಂದಿಲ್ಲ ಒಂದು ಕಾರಣಕ್ಕೆ ಆಗಾಗ ಸಂಸಾರದಲ್ಲಿ ಜಂಜಾಟಗಳು ಗಲಾಟೆ ಗದ್ದಲಗಳು ಜಗಳಗಳು ಸರ್ವೇ ಸಾಮಾನ್ಯ. ತಮ್ಮಿಬ್ಬರ ಮಧ್ಯೆ ಆದ ಕ್ಷಣಿಕದ ಕಲಹ ತನ್ನ ತವರುಮನೆಗೆ ಎಂದು ದೂರು ನೀಡಬಾರದು. ಗಂಡ ಹೆಂಡರ ಜಗಳ ಗಂಧ ತೀಡಿದಂಗ.

ಗಂಡ ಹೆಂಡರ ಜಗಳ ಉಂಡು ಮಲಗುವತನಕ ಗಂಡ ಹೆಂಡರ ಜಗಳ ಕುಂಡಿ ತಿರುಗುವತನಕ ಅಂತಹ ಪವಿತ್ರವಾದ ತಮ್ಮ ಸಂಬಂಧವನ್ನು ತಾವೇ ಹಾಳು ಮಾಡಿಕೊಳ್ಳುತ್ತಾರೆ. ಚಾಡಿ ಹೇಳಿ ಸಂಸಾರ ಕೆಡಿಸಿಕೊಳ್ಳಬಾರದು. ಕನಕದಾಸರು ಹೇಳುತ್ತಾರೆ. ತಾಯಿ-ತಂದೆ ಇರುವವರೆಗೂ ತವರುಮನೆ. ತಂದೆ ತಾಯಿ ಇಲ್ಲದ ತವರು ಮನೆ ನೀರಿಲ್ಲದ ಕೆರೆಗೆ ಕರು ನೀರಿಗಾಗಿ ಧಾವಿಸಿ ಬಂದಂತೆ. ತಾಯಿ ಇದ್ದರೆ ತವರೆಚ್ಚು ತಂದೆ ಇದ್ದರೆ ಬಳಗ ಹೆಚ್ಚು ಸಾವಿರದಾಗೆಚ್ಚು ಪತಿ ಪುರುಷ. ಗಂಜಿಯ ಕುಡಿದರೂ ಗಂಡನ ಮನೆ ಲೇಸು ಅಂಗಿನ ಬಾನ ತವರೂರು.

ಆಸರಿಕೆ ಬ್ಯಾಸರಿಕೆ ಕಳಿಲ್ಯಾಕಂತ ತವರು ಮನೆಗೆ ಹೋದರೆ ಒಮ್ಮನದ ಜೋಳ ಒಳ್ಮುಂದೆ ಇಟ್ಟರಾ ಅಣ್ಣನ ಮಡದಿಯರು. ಹೆಣ್ಣಿಗೆ ತವರು ಸ್ಥಿರವಲ್ಲ ಕಟ್ಟಿದ ಬುತ್ತಿ ಹೊಟ್ಟಿದ ಬಣವೆ ಶಾಶ್ವತವಲ್ಲ. ಸತಿ-ಪತಿಗಳ ಇಬ್ಬರು ಸಂಸಾರದಲ್ಲಿ ಹಾಲು ಸಕ್ಕರೆಯಂತೆ ಕೂಡಿಬಾಳಿದರೆ ಬದುಕೆ ಒಂದು ನಂದನವನ. ಸತಿಪತಿಗಳಲ್ಲಿ ಒಂದಾಗದ ಭಕ್ತಿ ಹಿತವಪ್ಪುದು ಶಿವಂಗೆ . ಆ ಶಿವನೇ ಅರ್ಧನಾರೇಶ್ವರ ಸತಿ-ಪತಿಯರ ಧರ್ಮ ಎಲ್ಲಾ ಧರ್ಮಗಳಿಗಿಂತಲೂ ಅತ್ಯಂತ ಶ್ರೇಷ್ಠ ಧರ್ಮ. ಹೆಣ್ಣಿಗೆ ಪತಿಯೇ ಪರದೈವ ಗಂಡ ಎಂಬ ದೈವಶಕ್ತಿ ಪತಿವ್ರತೆ ಅನುಸೂಯೆ ತನ್ನ ಪತಿಯ ಪಾದ ಪೂಜದ ನೀರಿನಿಂದ ಪವಾಡ ಮೆರೆದಿದ್ದಾಳೆ. ಪಾರ್ವತಿ ಲಕ್ಷ್ಮಿ ಸರಸ್ವತಿ ಲೋಕಕ್ಕೆ ಮೂರು ಜನ ಪತಿವ್ರತೆಯರು ಎಂದು ತಮಗೆ ತಾವೇ ಬಿರುದು ತಂದುಕೊಂಡಿದ್ದರು.

ತಮಗಿಂತಲೂ ಅನುಸೂಯೆ ಪತಿವ್ರತೆ ಎಂದು ವರ್ತಮಾನ ತಿಳಿದು. ಮೂವರು ತಲೆಗೆ ಬಟ್ಟೆ ಕಟ್ಟಿಕೊಂಡು ತಮ್ಮ ಗಂಡಂದಿರು ಬರುವುದರಲ್ಲಿ ಮಂಚದ ಮೇಲೆ ಬಿಮ್ಮನೆ ಮಲಗಿದ್ದರು. ಸತಿಯರ ಮಲಗಿದ್ದ ಕಾರಣ ಕೇಳಿದ ಬ್ರಹ್ಮ ವಿಷ್ಣು ಮಹೇಶ್ವರರು ದಿಗ್ಭ್ರಾಂತರಾಗುತ್ತಾರೆ. ಮೂರು ಜನ ತಮ್ಮ ಗಂಡಂದಿರಿಗೆ ಚಾಡಿ ಹೇಳುತ್ತಾರೆ. ಲೋಕಕ್ಕೆ ದೊಡ್ಡವರಾದ ನೀವು ನಮಗಾದ ಅಪಮಾನವನ್ನು ಸರಿಪಡಿಸಬೇಕು. ಕೂಡಲೇ ಅನುಸೂಯೆಯ ಅರಮನೆಗೆ ಹೋಗಿ ಅವಳ ಪತಿವ್ರತೆಯನ್ನು ಪರೀಕ್ಷಿಸಬೇಕು ಎಂದು ಸವಾಲು ಹಾಕುತ್ತಾರೆ. ಹೆಂಡತಿಯರ ಮಾತು ಕೇಳಿದ ಬ್ರಹ್ಮ ವಿಷ್ಣು ಮಹೇಶ್ವರರು ಮಾರುವೇಷ ತೊಟ್ಟು ಋಷಿಮುನಿಗಳಾಗಿ ಅನುಸೂಯೆ ಅರಮನೆಯ ಬಾಗಿಲ ಮುಂದೆ ನಿಂತು ಭವತಿ ಭಿಕ್ಷಾಂದೇಹಿ ಎಂದು ಕೂಗುತ್ತಾರೆ. ಅರಮನೆಯ ಒಳಗೆ ಪತಿಯ ಸೇವೆ ಮಾಡುತ್ತಿದ್ದ ಅನುಸೂಯೆ ಹೊರಬಂದು ಸ್ವಾಮಿ ವೇಷಧರಿಸಿದ ಪೂಜ್ಯರನ್ನು ನೋಡಿ ಸಂತೋಷ ಪಡುತ್ತಾಳೆ. ಕೈ ಕಾಲು ತೊಳೆದುಕೊಳ್ಳಲು ಮೀಸಲು ನೀರು ತಂದು ನೀಡಿದಳು. ಒಳಗೆ ರತ್ನಗಂಬಳಿಯ ಗದ್ದಿಗೆ ಹಾಸಿ ಒಳಗೆ ಬನ್ನಿ ಎಂದು ವಿನಂತಿಸಿದಳು.

ಅವಳಲ್ಲಿನ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಎಲ್ಲ ವರ್ತಮಾನ ತನ್ನ ಪತಿರಾಯನಿಗೆ ಹೇಳಿದಳು. ಬಂದಂತಹ ಸ್ವಾಮಿಗಳಲ್ಲಿ ಒಬ್ಬರು ನಮಗೆ ಹಸಿವಾಗಿದೆ ಊಟ ಬಡಿಸು ಎಂದು ಬೇಡಿಕೊಳ್ಳುತ್ತಾರೆ. ಗುರುಗಳ ಆಸೆಯನ್ನು ಪೂರೈಸುವ ಹುಮ್ಮಸ್ಸಿನಲ್ಲಿ ತಮಗೇನು ಊಟಬೇಕು ಹೇಳಿದರೆ ಭಕ್ತಿಯಿಂದ ಮಾಡುತ್ತೇನೆ . ತಾವು ಸಂತೃಪ್ತಿಯಿಂದ ಹಾರೈಸಬೇಕು . ನಮಗೆ ಬೇಕಾದ ಆಹಾರವನ್ನು ಸಿದ್ದ ಪಡಿಸಬಲ್ಲೆಯಾ ಎಂದು ಅಪಹಾಸ್ಯ ಮಾಡುತ್ತಾರೆ. ತಮಗೇನು ಬೇಕು ಮಹಾಪ್ರಭು ತಾವು ಆಸೆಪಟ್ಟದನ್ನೆ ಮಾಡಿ ಬಡಿಸುತ್ತೇನೆ ಎಂದು ಒಪ್ಪಿಕೊಳ್ಳುತ್ತಾಳೆ.

ಹಾಗಾದರೆ ಉಸುಕಿನ ಉಸುಳಿ ಬಸಿಯಬೇಕು ಎಂದು ಹೇಳುತ್ತಾರೆ. ಆಗಲಿ ಎಂದು ಅಡುಗೆ ಮನೆಯವ ಒಳಗೆ ಬಂದು ನೀರು ಕಾಯಿಸಲು ಹಿಟ್ಟು ಬೊಗಸೆ ಮರಳನ್ನು ತಂದು ಪಾತ್ರೆಯಲ್ಲಿ ಹಾಕುತ್ತಾಳೆ. ಆಮೇಲೆ ಗಂಡನ ಪಾದ ಪೂಜೆಯ ಧೂಳಿನ ನೀರು ಅಡುಗೆ ಮಾಡಿದ ಪಾತ್ರೆಯ ಮೇಲೆ ಸಿಂಪಡಿಸಿದಾಗ ಪಾಯಸವಾಗುತ್ತದೆ. ಹೊಟ್ಟೆ ತುಂಬ ಊಟ ಮಾಡಿದ ಋಷಿಮುನಿಗಳು ಹಲಗೆ ತೊಟ್ಟಿಲಲ್ಲಿ ಮಲಗುವ ಇಂಗಿತವನ್ನು ವ್ಯಕ್ತಪಡಿಸುತ್ತಾರೆ. ಅವರ ಆಸೆಯಂತೆ ಹಲಗೆ ತೊಟ್ಟಿಲಿನಲ್ಲಿ ಹಾಸಿಗೆ ಹಾಸಿ ಮಲಗಲು ವಿನಂತಿಸಿದಾಗ ಅಪಹಾಸ್ಯ ಮಾಡುತ್ತಾರೆ.

ಗಂಡನ ಪಾದ ಪೂಜೆದ ಧೂಳಿನ ನೀರು ಮೂವರು ಋಷಿಗಳ ಮೇಲೆ ಸಿಂಪಡಿಸಿದಾಗ ವರ್ಷದ ಕೂಸುಗಳಾಗಿ ಬದಲಾಗುತ್ತಾರೆ. ಅಂತ ಅಗಾಧವಾದ ಶಕ್ತಿ ಗಂಡ-ಹೆಂಡತಿಯರಲ್ಲಿ ಅಡಗಿದೆ.
ದಿನಪೂರ್ತಿ ತಮ್ಮ ಗಂಡಂದಿರು ಬರುವ ಹಾದಿಯನ್ನೇ ಕಾಯುತ್ತಾರೆ. ಭಯಗೊಂಡು ಸರಸ್ವತಿ ಪಾರ್ವತಿ ಲಕ್ಷ್ಮಿಯವರು ಮಾರುವೇಷ ಧರಿಸಿ ಭವತಿ ಭಿಕ್ಷಾಂದೇಹಿ ಎಂದು ಅನುಸೂಯೆ ಅವರ ಮನೆಗೆ ಬರುತ್ತಾರೆ. ಅವರನ್ನು ಪ್ರೀತಿಯಿಂದ ಸ್ವಾಗತಿಸಿದ ಅನುಷಾದೇವಿಗೆ ಅಪಹಾಸ್ಯದ ಮಾತುಗಳಿಂದ ನಾವು ಕುಂದ್ರಲೂ ನಿಂದ್ರಲೂ ಬಂದಿಲ್ಲ ನಮ್ಮ ಗಂಡಂದಿರನ್ನು ಹುಡುಕಿಕೊಂಡು ಬಂದಿದ್ದೇವೆ. ಅವರನ್ನು ನಮಗೆ ಒಪ್ಪಿಸು ಎಂದು ವಿನಂತಿಸುತ್ತಾರೆ.

ಅದಕ್ಕೆ ಪತಿವ್ರತೆಯರಾದ ನೀವು ನಿಮ್ಮ ನಿಮ್ಮ ಗಂಡಂದಿರನ್ನು ನೀವೇ ಕರೆದುಕೊಂಡು ಹೋಗಿ ಎಂದು ಅಲಗಿ ತೊಟ್ಟಿಲಲ್ಲಿ ಮಲಗಿದ್ದ ಕೂಸುಗಳನ್ನು ತೋರಿಸುತ್ತಾಳೆ. ಬ್ರಹ್ಮ ವಿಷ್ಣು ಮಹೇಶ್ವರರು ಒಂದು ವರ್ಷದ ಮಕ್ಕಳಾಗಿ ಒಂದೇ ಮುಖದ ಒಂದೇ ಉಡುಗೆ ತೊಟ್ಟು ಮಲಗಿರುವುದನ್ನು ನೋಡಿ ಸರಸ್ವತಿ ಪಾರ್ವತಿ ಲಕ್ಷ್ಮಿಯವರು ಲೋಕಕ್ಕೆ ನೀನೇ ಮಹಾಪತಿವ್ರತೆ ಎಂದು ಅನುಷಾದೇವಿಯವರ ಕಾಲಿಗೆ ಎರಗುತ್ತಾರೆ. ತಮ್ಮಲ್ಲಿರುವ ಅಹಂಕಾರದ ಬುದ್ಧಿ ಅರಿವಾಗಿ ಅನುಷಾದೇವಿಯವರಿಗೆ ಶರಣಾಗುತ್ತಾರೆ. ಮತ್ತೊಂದು ಉದಾಹರಣೆ ಎಂದರೆ ಜಮದಗ್ನಿಯ ರೂಪ ಸೌಂದರ್ಯಕ್ಕೆ ಮರುಳಾದ ರೇಣುಕಾದೇವಿ ಜಮದಗ್ನಿ ಋಷಿಯನ್ನು ಮದುವೆಯಾಗಲು ಅಪೇಕ್ಷೆ ಪಡುತ್ತಾರೆ.

ಜಮದಗ್ನಿ ಮಹಾಋಷಿಗಳು ಬೇಡ ಎಂದು ಹೇಳಿದರು ಕೇಳದ ರೇಣುಕಾ ಮದುವೆಯಾಗುತ್ತಾರೆ. ಗಂಡನ ಪೂಜೆಗೆ ಮೀಸಲು ನೀರು ತರಲು ಉಸುಕಿನ ಕೊಡವ ಮಾಡಿ ಹಾವಿನ ಸಿಂಬಿ ಮಾಡಿ ನದಿಯ ನೀರಿಗೆ ಹೋಗಿ ಬಿಂದಿಗೆಯಲ್ಲಿ ನೀರು ತುಂಬಿಕೊಂಡು ಬರುವಾಗ ಒಬ್ಬ ಪುರುಷನನ್ನು ನೋಡಿ ಕಾಮೋದ್ರೇಕದ ಭಾವನೆಯ ಮೂಡಿದಾಗ ಪರ ಪುರುಷರನ್ನು ನೋಡಿದ ಶಾಪಕ್ಕೆ ಬಲಿಯಾಗುತ್ತಾಳೆ. ಹಾವಿನ ಸಿಂಬೆ ಹರಿದುಹೋಗುತ್ತದೆ ಮರಳಿನ ಬಿಂದಿಗೆ ಹೊಡೆದು ಹೋಗುತ್ತದೆ.

ಜಮದಗ್ನಿಯ ಕೋಪಕ್ಕೆ ಗುರಿಯಾಗುತ್ತಾಳೆ. ರೇಣುಕಾ ದೇವಿಗೆ ಜಮದಗ್ನಿ ಶಾಪ ಕೊಡುತ್ತಾರೆ. ಶಾಪ ವಿಮೋಚನೆಗಾಗಿ ರೇಣುಕರಾಜ ಜಮದಗ್ನಿಯ ಋಷಿಯ ಪಾದದ ಪೂಜೆಯ ನೀರು ತಂದು ಕುಷ್ಟರೋಗದಿಂದ ಬಳಲುತ್ತಿರುವ ರೇಣುಕಾದೇವಿಯ ಮೈಮೇಲೆ ಸಿಂಪಡಿಸಿದಾಗ ರೋಗದಿಂದ ಗುಣಮುಖಳಾದ ಘಟನೆಗಳು ಪುರಾಣಗಳಲ್ಲಿ ನೋಡುತ್ತೇವೆ.
ಇಂತಹ ಪವಿತ್ರವಾದ ಪತಿಯ ಮತ್ತು ಸತಿಯ ಶಕ್ತಿಯನ್ನು ಅರ್ಥಮಾಡಿಕೊಂಡು ಬಾಳಿದರೆ ಬದುಕು ಬಂಗಾರವಾಗಿ ಸಮಾಜದಲ್ಲಿ ಇತರರಿಗೆ ಮಾದರಿಯಾಗಿ ಬದುಕಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್

Published

on

ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.

ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.

ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.

ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ದಾವಣಗೆರೆಯ ಪಾಪು ಗುರು ಆಯ್ಕೆ

Published

on

ಸುದ್ದಿದಿನ,ದಾವಣಗೆರೆ: ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಹಾಗೂ ಗವಿಸಿದ್ಧ ಎನ್. ಬಳ್ಳಾರಿ ಸಾಂಸ್ಕೃತಿಕ, ಕಲಾ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕೊಪ್ಪಳ ವತಿಯಿಂದ ನೀಡಲಾಗುವ **”ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – 2026″**ಕ್ಕೆ ದಾವಣಗೆರೆಯ ಕವಿ ಹಾಗೂ ಪತ್ರಕರ್ತ ಪಾಪು ಗುರು ಅವರ “ಈ ಹೊತ್ತಿಗೆ ಇಷ್ಟು ಸಾಕು” ಕವನ ಹಸ್ತ ಪ್ರತಿ ಆಯ್ಕೆಯಾಗಿದೆ.

ಪ್ರಶಸ್ತಿಗೆ ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 53 ಕವನ ಹಸ್ತಪ್ರತಿಗಳು ಬಂದಿದ್ದು, ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಪಾಪು ಗುರು ಅವರ ಕೃತಿ ಪ್ರಶಸ್ತಿಗೆ ಪಾತ್ರವಾಗಿದೆ.

ಪ್ರಶಸ್ತಿಯು ₹5,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನವೆಂಬರ್ ತಿಂಗಳಲ್ಲಿ ಕೊಪ್ಪಳದಲ್ಲಿ ನಡೆಯಲಿರುವ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಸಾಹಿತ್ಯೋತ್ಸವದ ಸಂಚಾಲಕ ಮಹೇಶ್ ಬಳ್ಳಾರಿ ತಿಳಿಸಿದ್ದಾರೆ.

ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪಾಪು ಗುರು ಅವರ ‘ಮುಳ್ಳೆಲೆಯ ಮದ್ದು’, ‘ಮಣ್ಣೇ ಮೊದಲು’ ಕವನ ಸಂಕಲನಗಳು ಹಾಗೂ ‘ಸೂಜಿ’ ಕಾದಂಬರಿ ಪ್ರಕಟವಾಗಿವೆ. ಅಲ್ಲದೆ ‘ಕೆಂಪು ಕಾಂಡದ ಹೂ’ ಮತ್ತು ‘ಹಸಿರು ಹಾದಿಯ ಹೆಜ್ಜೆಗಳು’ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಅವರ ಸೂಳೆಕೆರೆಯ ಇತಿಹಾಸದ ಹಿನ್ನೆಲೆ ಇರುವ ‘ಶಾಂತದೇವಿ’ ಕಾದಂಬರಿ ಮುದ್ರಣ ಹಂತದಲ್ಲಿದೆ.

ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಪಾಪು ಗುರು ಅವರಿಗೆ ದೊರೆತಿರುವ ಈ ಪ್ರಶಸ್ತಿ ಸಾಹಿತ್ಯ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಇವರಿಗೆ ಜಿಲ್ಲೆಯ ಅಭಿಮಾನಿಗಳು, ಪತ್ರಕರ್ತರು ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಹಾಗೂ ಹೆಚ್ ಬಿ. ಇಂದ್ರಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.

ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending