ದಿನದ ಸುದ್ದಿ
ಮಾನವೀಯತೆ ಇಲ್ಲದ ಪ್ರಜಾತಂತ್ರದಲ್ಲಿ ನಾವು..?
- ನಾ ದಿವಾಕರ
73 ವರ್ಷದ ಸ್ವತಂತ್ರ ಆಡಳಿತದಲ್ಲಿ ಭಾರತ ಬಹುತೇಕ ಎರಡು ವರ್ಷಗಳ ಸರ್ವಾಧಿಕಾರವನ್ನು ಕಂಡಿದೆ, 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ. ತುರ್ತುಪರಿಸ್ಥಿತಿಯ ನಂತರದ 45 ವರ್ಷಗಳಲ್ಲಿ ಭಾರತ ಮತ್ತೊಮ್ಮೆ ಸರ್ವಾಧಿಕಾರವನ್ನು ಕಂಡಿಲ್ಲವಾದರೂ, ಪ್ರಜಾತಂತ್ರದ ಮೂಲ ಮೌಲ್ಯಗಳನ್ನು ಕಳೆದುಕೊಳ್ಳುತ್ತಲೇ ಬರುತ್ತಿದೆ.
ಭಾರತದ ಸಂವಿಧಾನ ಪ್ರಜೆಗಳಿಗೆ ನೀಡುವ ಹಕ್ಕುಗಳನ್ನು ಪ್ರಜಾತಂತ್ರದ ಚೌಕಟ್ಟಿನಲ್ಲಿಯೇ ದಮನಿಸುವ, ಹತ್ತಿಕ್ಕುವ ಮತ್ತು ನಿರಾಕರಿಸುವ ಪ್ರವೃತ್ತಿಯನ್ನು ಈ 45 ವರ್ಷಗಳಲ್ಲಿ ಗಮನಿಸುತ್ತಲೇ ಬಂದಿದ್ದೇವೆ. ಕಳೆದ ಐದು ವರ್ಷಗಳಲ್ಲಿ ಇದು ಸಾಂವಿಧಾನಿಕವಾಗಿ ಸ್ವೀಕೃತ ಎನಿಸುವಷ್ಟು ಮಟ್ಟಿಗೆ ಹೆಚ್ಚಾಗುತ್ತಿದೆ.
1980ರ ದಶಕದಲ್ಲಿ ಮಾನವ ಹಕ್ಕು ಚಳುವಳಿಗಳು ಪ್ರವರ್ಧಮಾನಕ್ಕೆ ಬಂದ ನಂತರ ಭಾರತದ ಆಳುವ ವರ್ಗಗಳಲ್ಲಿ ಸಂಚಲನ ಉಂಟಾಗಿತ್ತು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಭಾರತದಲ್ಲಿ ಮಾನವ ಹಕ್ಕುಗಳ ರಕ್ಷಣೆಯ ಬಗ್ಗೆ ಹೆಚ್ಚಿನ ಪ್ರಜ್ಞೆ ಮೂಡಿತ್ತು. ನಂತರದ ದಿನಗಳಲ್ಲಿ ಪ್ರಜಾತಂತ್ರದ ರಕ್ಷಣೆಗೆ ಮೂಲ ಮಂತ್ರ ಇರುವುದೇ ಮಾನವ ಹಕ್ಕುಗಳ ರಕ್ಷಣೆಯಲ್ಲಿ ಎನ್ನುವ ಜಾಗೃತಿ ಮೂಡಿತ್ತು. ಈ ಸಂದರ್ಭದಲ್ಲಿ ಅಧಿಕಾರ ಕೇಂದ್ರಗಳು ಮತ್ತು ಆಡಳಿತ ವ್ಯವಸ್ಥೆ ಮಾನವ ಹಕ್ಕುಗಳ ಕಾರ್ಯಕರ್ತರನ್ನು, ಸಂಘಟನೆಗಳನ್ನು ಅಮೆರಿಕದ ಏಜೆಂಟರು ಎಂದೇ ಪರಿಗಣಿಸುತ್ತಿದ್ದವು.
ಪ್ರಜಾತಂತ್ರ ಮೌಲ್ಯಗಳನ್ನು ಎತ್ತಿಹಿಡಿಯುವ ದನಿಗಳೂ ಇದೇ ಸಂದರ್ಭದಲ್ಲೇ ಜಾಗೃತವಾಗಿದ್ದವು. ದೇಶಾದ್ಯಂತ ರಾಜಕೀಯ ಆಂದೋಲನಗಳಷ್ಟೇ ಅಲ್ಲದೆ, ಸಾಂಸ್ಕೃತಿಕ ಲೋಕದಲ್ಲಿ, ಸಾಹಿತ್ಯ , ನಾಟಕ, ಸಿನಿಮಾ, ಕಾವ್ಯ ಹೀಗೆ ಎಲ್ಲ ವಲಯಗಳಲ್ಲೂ ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಬೃಹತ್ ಜನಾಂದೋಲನಕ್ಕೆ ಭಾರತ ಸಾಕ್ಷಿಯಾಗಿತ್ತು. 1970 ಮತ್ತು 80ರ ದಶಕದಲ್ಲಿ , ತುರ್ತುಪರಿಸ್ಥಿತಿಯ ನಂತರದ ಬದಲಾದ ಆಡಳಿತ ಧೋರಣೆಯ ಹಿನ್ನೆಲೆಯಲ್ಲೇ, ಮಾನವ ಹಕ್ಕುಗಳ ಹೋರಾಟವೂ ಹೊಸ ಆಯಾಮ ಪಡೆದುಕೊಂಡಿದ್ದನ್ನು ಸೂಕ್ಷ್ಮವಾಗಿ ಗಮನಿಸಬೇಕು.
ಏಕೆಂದರೆ ಮಾನವ ಹಕ್ಕುಗಳ ರಕ್ಷಣೆ ಒಂದು ಬೃಹತ್ ಜನಾಂದೋಲನವಾಗಿ ರೂಪುಗೊಳ್ಳಲಿಲ್ಲ. ಪಿಯುಸಿಎಲ್, ಪಿಯುಡಿಆರ್ ಮುಂತಾದ ಸಂಘಟನೆಗಳು ದೇಶಾದ್ಯಂತ ತಮ್ಮ ನೆಲೆ ಕಂಡುಕೊಂಡರೂ, ಎಲ್ಲ ರಾಜ್ಯಗಳಲ್ಲಿ ಪ್ರಾತಿನಿಧ್ಯ ಹೊಂದಿದ್ದರೂ, ಒಂದು ಸಮೂಹ ಚಳುವಳಿಯಂತೆ ರೂಪುಗೊಳ್ಳಲು ಸಾಧ್ಯವಾಗಲಿಲ್ಲ.
ಈ ಸಂದರ್ಭದಲ್ಲಿ ರೂಪುಗೊಂಡ ದಲಿತ ಚಳುವಳಿಗಳು, ಮಹಿಳಾ ಅಂದೋಲನಗಳು ಮತ್ತು ರಾಜಕೀಯ ಹೋರಾಟಗಳು ಮಾನವ ಹಕ್ಕುಗಳನ್ನು ತಮ್ಮ ಹೋರಾಟದ ಒಂದು ಭಾಗವಾಗಿ ಪರಿಗಣಿಸಿದ್ದರೂ, ಮಾನವ ಹಕ್ಕು ರಕ್ಷಣೆಗೆ ಒಂದು ರಾಜಕೀಯ ಸ್ವರೂಪ ನೀಡಲು ಮುಂದಾಗಲಿಲ್ಲ.
ಹಾಗಾಗಿ ಎಲ್ಲ ಚಳುವಳಿಗಳಲ್ಲೂ ಮಾನವ ಹಕ್ಕು ರಕ್ಷಣೆ ಒಂದು ಕಾರ್ಯಸೂಚಿಯಾಗಿ ಬಳಕೆಯಾಗಿತ್ತೇ ಹೊರತು, ಸೈದ್ಧಾಂತಿಕ ತಳಹದಿಯಾಗಿ ರೂಪುಗೊಳ್ಳಲಿಲ್ಲ. ಮಾನವ ಹಕ್ಕುಗಳ ಪರಿಕಲ್ಪನೆ ಎಲ್ಲ ರಾಜಕೀಯ ಮತ್ತು ಸಾಮಾಜಿಕ ಆಂದೋಲನಗಳಲ್ಲಿ ಅಂತರ್ಗತವಾಗಿದ್ದರೂ, ಅಧಿಕಾರ ರಾಜಕಾರಣದ ನೆಲೆಯಲ್ಲಿ ಈ ಪರಿಕಲ್ಪನೆಯೇ ಸಾಪೇಕ್ಷ ನೆಲೆ ಪಡೆಯುವುದನ್ನೂ ಕಂಡಿದ್ದೇವೆ.
ಇಂದು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಕವಿ, ಲೇಖಕ, ಸಾಮಾಜಿಕ ಕಾರ್ಯಕರ್ತ ವರವರರಾವ್ ಈ ಸಾಪೇಕ್ಷತೆಗೆ ಬಲಿಯಾಗುತ್ತಿರುವವರಲ್ಲಿ ಒಬ್ಬರು. ಈ ನಿಟ್ಟಿನಲ್ಲಿ ನೋಡಿದಾಗ ವರವರರಾವ್ ಏಕಾಂಗಿಯಾಗಿ ಕಾಣುವುದಿಲ್ಲ. ಅವರೊಂದಿಗೆ ಪ್ರೊಫೆಸರ್ ಸಾಯಿಬಾಬಾ ಇದ್ದಾರೆ.
ಬದಲಾದ ಭಾರತದಲ್ಲಿ ಇನ್ನೂ ಹೆಚ್ಚು ಕಾರ್ಯಕರ್ತರು ಇವರುಗಳೊಡನೆ ಅನುಭವಿಸುವ ಸಾಧ್ಯತೆಗಳೂ ಇವೆ. ಪ್ರಭುತ್ವ ಪ್ರತಿರೋಧದ ದನಿಗಳನ್ನು ಹತ್ತಿಕ್ಕಲು ಬಳಸಬಹುದಾದ ಎಲ್ಲ ಅಸ್ತ್ರಗಳನ್ನೂ ಇಂದು ಭಾರತದಲ್ಲಿ ಪ್ರಯೋಗಿಸಲಾಗುತ್ತಿದೆ. ಅಧಿಕಾರ ರಾಜಕಾರಣ ಮತ್ತು ಅಧಿಪತ್ಯ ರಾಜಕಾರಣದಲ್ಲಿ ಇಂತಹ ಕ್ರೌರ್ಯಗಳೂ ಸ್ವೀಕೃತವಾಗುವಂತೆ ಸಮೂಹ ಸನ್ನಿ ಸೃಷ್ಟಿಸಲಾಗುತ್ತದೆ.
ಈ ಸಮೂಹ ಸನ್ನಿಗೆ ಮತೀಯವಾದ, ಜಾತಿವಾದ, ಪ್ರಾದೇಶಿಕತೆ, ಭೌಗೋಳಿಕ ದೇಶದ ಪರಿಕಲ್ಪನೆ ಮತ್ತು ದೇಶಭಕ್ತಿ-ಪ್ರೇಮ ಮುಂತಾದ ಅತಿ ಭಾವುಕ ಕಲ್ಪನೆಗಳು ಇವೆಲ್ಲವೂ ನೆರವಾಗುತ್ತವೆ. ಕಳೆದ 50 ವರ್ಷದಲ್ಲಿ ಭಾರತದ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಭಾರತದ ಪ್ರಭುತ್ವ ಮಾನವ ಹಕ್ಕುಗಳಿಗೆ ಎಂದೂ ಸಹ ಮಾನ್ಯತೆ ನೀಡಿಲ್ಲ.
ಸರ್ಕಾರಗಳು ಬದಲಾಗಿವೆ. ಪಕ್ಷಗಳು ಬದಲಾಗಿವೆ. ಹೊಸ ಪಕ್ಷಗಳು ಉದಯಿಸಿವೆ ಆದರೆ ಪ್ರಭುತ್ವದ ಧೋರಣೆಯನ್ನು ಪ್ರಶ್ನಿಸುವ ಯಾವುದೇ ರಾಜಕೀಯ ಪಕ್ಷವನ್ನು ಗುರುತಿಸಲಾಗುವುದಿಲ್ಲ. ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಕಾರ್ಯಕರ್ತರ, ನಾಯಕರ ಹಿತಾಸಕ್ತಿಗಾಗಿ ಮಾನವ ಹಕ್ಕುಗಳ ಸಂಹಿತೆಗಳನ್ನು ಬಳಸಿಕೊಳ್ಳುತ್ತವೆಯೇ ಹೊರತು, ದೇಶದ ಸಾಮಾನ್ಯ ಜನತೆಯ ಸಾಂವಿಧಾನಿಕ, ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗೆ ಕಟಿಬದ್ಧವಾಗಿಲ್ಲ ಎನ್ನುವುದು ಸ್ಪಷ್ಟ.
ಭಾರತದ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾವುದೇ ಆಡಳಿತಾರೂಢ ಪಕ್ಷವೂ ಸಹ ಮಾನವ ಹಕ್ಕು ಉಲ್ಲಂಘನೆಯ ಆರೋಪದಿಂದ ಮುಕ್ತವಾಗಿಲ್ಲ ಎನ್ನುವುದೂ ಗಮನಾರ್ಹ ಸಂಗತಿ. ಮಾನವ ಹಕ್ಕುಗಳ ಪರಿಕಲ್ಪನೆ ಮೂಲತಃ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳಿಗೆ ಸಂಬಂಧಿಸಿದ್ದು ಮತ್ತು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಈ ಹಕ್ಕುಗಳು ಮತ್ತಷ್ಟು ಮಾನ್ಯತೆ ಪಡೆಯುತ್ತವೆ.
ಅಂತಾರಾಷ್ಟ್ರೀಯ ಸಂಹಿತೆಗಳ ಅನುಸಾರ ಪ್ರತಿಯೊಬ್ಬ ಪ್ರಜೆಯ ಜೀವಿಸುವ ಹಕ್ಕನ್ನು ರಕ್ಷಿಸುವುದು ಪ್ರಭುತ್ವದ ಕರ್ತವ್ಯವಾಗಿರುತ್ತದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳ ಬದುಕುವ ಹಕ್ಕು ಕಸಿದುಕೊಳ್ಳುವ ಹಕ್ಕು ಪ್ರಭುತ್ವಕ್ಕೆ ಇರುವುದಿಲ್ಲ. ಹಾಗಾಗಿಯೇ ವಿಶ್ವದ ಬಹುಪಾಲು ರಾಷ್ಟ್ರಗಳು ಮರಣದಂಡನೆಯಂತಹ ಜೀವ ವಿರೋಧಿ ಶಿಕ್ಷೆಯನ್ನು ಬಹಿಷ್ಕರಿಸಿವೆ. ಆದರೆ ಭಾರತ ಇದಕ್ಕೆ ಹೊರತಾಗಿದೆ.
ದುರಂತ ಎಂದರೆ ಭಾರತದಲ್ಲಿ ಯಾವುದೇ ರಾಜಕೀಯ ಪಕ್ಷವೂ ಈ ಕುರಿತು ಯೋಚಿಸಿಯೂ ಇಲ್ಲ. ಅಪರಾಧ, ದಂಡನೆ ಮತ್ತು ಶಿಕ್ಷೆ ಈ ಮೂರು ವಿದ್ಯಮಾನಗಳ ನಡುವೆ ಮಾನವ ಹಕ್ಕುಗಳನ್ನು ರಕ್ಷಿಸುವ ನೈತಿಕ ಹೊಣೆಗಾರಿಗೆ ಆಡಳಿತ ವ್ಯವಸ್ಥೆಯ ಮೇಲಿರುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಶಾಹಿಗಳಿಂದ ಉಂಟಾಗಬಹುದಾದ ಕಾರ್ಯಾಂಗದ ಪ್ರಮಾದಗಳನ್ನು ಶಾಸಕಾಂಗವು ಸರಿಪಡಿಸಬೇಕಾಗುತ್ತದೆ.
ಒಂದು ವೇಳೆ ಶಾಸಕಾಂಗವೂ ಪ್ರಜೆಗಳ ಹಕ್ಕುಗಳನ್ನು ಕಸಿಯಲು ವಾಮ ಮಾರ್ಗಗಳನ್ನು ಅನುಸರಿಸಿದರೆ ನ್ಯಾಯಾಂಗ ತನ್ನ ಸಾಂವಿಧಾನಿಕ ಹೊಣೆಯನ್ನು ನಿಭಾಯಿಸಬೇಕಾಗುತ್ತದೆ. ಇದು ಭಾರತದ ಸಂವಿಧಾನದ ಮೂಲ ಮಂತ್ರವೂ ಆಗಿದೆ. ಸರ್ವೋಚ್ಚ ನ್ಯಾಯಾಲಯ ಈ ನಿಟ್ಟಿನಲ್ಲಿ ಹಲವಾರು ಸಂದರ್ಭಗಳಲ್ಲಿ ತನ್ನ ಮೇರು ಸ್ಥಾನವನ್ನು ಸಾರ್ಥಕಪಡಿಸಿಕೊಂಡಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಶೋಷಣೆಗೊಳಗಾದ, ನ್ಯಾಯವಂಚಿತರಾದ, ಅವಕಾಶವಂಚಿತರಾದ ಜನಸಮುದಾಯಗಳಿಗೆ ನ್ಯಾಯ ದೊರಕಿಸುವಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯ ಯಶಸ್ವಿಯಾಗಿದೆ.
ಆದರೆ ಪ್ರಸ್ತುತ ಸಂದರ್ಭದಲ್ಲಿ ಇವೆಲ್ಲವೂ ಗತ ಇತಿಹಾಸದಂತೆ ಕಾಣುತ್ತಿದೆ. 1975ರ ತುರ್ತುಪರಿಸ್ಥಿಯ ನಂತರ ಭಾರತೀಯ ಪ್ರಭುತ್ವದಲ್ಲಿ ಉಂಟಾದ ಮನ್ವಂತರ ಪ್ರಕ್ರಿಯೆಯನ್ನು ಈ ಹಿನ್ನೆಲೆಯಲ್ಲೇ ನಿಷ್ಕರ್ಷೆ ಮಾಡಬೇಕಾಗುತ್ತದೆ. ಜನಾಂದೋಲನಗಳನ್ನು ಹತ್ತಿಕ್ಕಲು, ಪ್ರಜೆಗಳ ಆಕ್ರೋಶದ ದನಿಗಳನ್ನು ದಮನಿಸಲು, ನಾಗರಿಕ ಸಮಾಜದ ಪ್ರತಿರೋಧವನ್ನು ಮಣಿಸಲು ಪ್ರಭುತ್ವ ಬಳಸುತ್ತಿರುವ ಎಲ್ಲ ಕರಾಳ ಶಾಸನಗಳಿಗೂ ಶಿಲಾನ್ಯಾಸ ಮಾಡಿದ್ದು ಶ್ರೀಮತಿ ಇಂದಿರಾಗಾಂಧಿ ಮತ್ತು ಅವರು ಹೇರಿದ ತುರ್ತುಪರಿಸ್ಥಿತಿ ಎನ್ನುವುದು ಚಾರಿತ್ರಿಕ ಸತ್ಯ. ಇಂದು ಭಾರತದ ಸಾರ್ವಭೌಮ ಪ್ರಜೆಗಳು ಉಸಿರುಗಟ್ಟುವ ವಾತಾವರಣದಲ್ಲಿ ಬದುಕವಂತಾಗಿದ್ದರೆ, ಪ್ರತಿರೋಧ ವ್ಯಕ್ತಪಡಿಸಲೂ ಹಿಂಜರಿಯುವಂತಹ ಸನ್ನಿವೇಶ ಉಂಟಾಗಿದ್ದರೆ ಇದರ ಮೂಲವನ್ನು ತುರ್ತುಪರಿಸ್ಥಿತಿಯಲ್ಲಿ ಗುರುತಿಸಬಹುದು.
45 ವರ್ಷಗಳ ಹಿಂದಿನ ತುರ್ತುಪರಿಸ್ಥಿತಿಯನ್ನು ನೆನೆಯುತ್ತಾ, ಅಂದಿನ ತಮ್ಮ ಹೋರಾಟ, ಸೆರೆವಾಸ, ಚಿತ್ರಹಿಂಸೆಗೊಳಪಟ್ಟ ಸನ್ನಿವೇಶಗಳನ್ನು ರಸವತ್ತಾಗಿ ಬಣ್ಣಿಸುತ್ತಾ, ಪ್ರಜಾತಂತ್ರ ಮತ್ತು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಉಪನ್ಯಾಸ ನೀಡುವ ಪ್ರತಿಯೊಂದು ರಾಜಕೀಯ ಪಕ್ಷವೂ, ಪ್ರತಿಯೊಬ್ಬ ರಾಜಕೀಯ ನಾಯಕನೂ ಒಮ್ಮೆ ಈ 45 ವರ್ಷಗಳಲ್ಲಿ ಭಾರತದ ಶ್ರೇಷ್ಠ ಸಂವಿಧಾನದ ಚೌಕಟ್ಟಿನಲ್ಲೇ ಜಾರಿಗೊಳಿಸುವ ಕರಾಳ ಶಾಸನಗಳತ್ತ ಗಮನಹರಿಸಿದರೆ ನಾಚಿ ತಲೆತಗ್ಗಿಸಬೇಕಾಗುತ್ತದೆ.
ತುರ್ತುಪರಿಸ್ಥಿತಿಯಲ್ಲಿ ಜಾರ್ಜ್ ಫರ್ನಾಂಡಿಸ್ ಮುಂತಾದ ನಾಯಕರು ಅನುಭವಿಸಿದ ಚಿತ್ರಹಿಂಸೆಯನ್ನು ಇಂದಿನ ವರವರರಾವ್ ಅವರ ಪರಿಸ್ಥಿತಿಗೆ ಮುಖಾಮುಖಿಯಾಗಿಸಿ ನೋಡಲು ಆತ್ಮಸಾಕ್ಷಿಯೂ ಇರಬೇಕು, ಆತ್ಮಸ್ಥೈರ್ಯವೂ ಬೇಕಲ್ಲವೇ ? ಬಹುಶಃ ನ್ಯಾಯಾಂಗವೂ ಇಲ್ಲಿ ನಿಷ್ಕರ್ಷೆಗೊಳಗಾಗಬೇಕಿದೆ.
1980ರ ನಂತರ ಭಾರತ ತನ್ನ ಸಮಾಜವಾದಿ ಧೋರಣೆಯನ್ನು ಕೈಬಿಟ್ಟು ನವ ಉದಾರವಾದಿ ಆರ್ಥಿಕ ನೀತಿಗಳನ್ನು ಅನುಸರಿಸಲು ಆರಂಭಿಸಿದ ನಂತರ, ಭಾರತದ ಪ್ರಭುತ್ವದ ಧೋರಣೆಯೂ ಹಂತಹಂತವಾಗಿ ಬದಲಾಗುತ್ತಿರುವುದನ್ನು ಗಮನಿಸಬೇಕಿದೆ. ಇದೇ ಸಂದರ್ಭದಲ್ಲಿ ದೇಶದಲ್ಲಿ ಉಲ್ಬಣಿಸಿದ ಸಿಖ್ ಪ್ರತ್ಯೇಕತಾವಾದ, ಕಾಶ್ಮೀರದ ಉಗ್ರವಾದ ಮತ್ತು ಪ್ರತ್ಯೇಕತಾವಾದ, ಹಿಂದೂ ಮೂಲಭೂತವಾದ ಮತ್ತು ಈ ಮೂರೂ ವಿದ್ಯಮಾನಗಳ ನಡುವೆ ದೇಶದಲ್ಲಿ ತಾರಕಕ್ಕೇರಿದ ಮತೀಯ ಮೂಲಭೂತವಾದ ಆಡಳಿತ ವ್ಯವಸ್ಥೆಯ ಕರಾಳ ಶಾಸನಗಳಿಗೆ ಮಾನ್ಯತೆ ದೊರೆಯಲು ನೆರವಾಗಿದ್ದನ್ನೂ ಅಲ್ಲಗಳೆಯುವಂತಿಲ್ಲ. ಈ ಸಂದರ್ಭದಲ್ಲೇ “ ಅನ್ಯರ ” ಪರಿಕಲ್ಪನೆಗೂ ಸಾರ್ವತ್ರಿಕ ಮಾನ್ಯತೆ ದೊರೆತಿತ್ತು. ಪ್ರಭುತ್ವದ ದಮನಕಾರಿ ನೀತಿಗಳಿಗೆ ಈ ಪರಿಕಲ್ಪನೆ ಪುಷ್ಟಿ ನೀಡಿತ್ತು. ಸಾವು, ಚಿತ್ರಹಿಂಸೆ ಮತ್ತು ಶಿಕ್ಷೆ ಮೂರೂ ಸಹ ಸಾಪೇಕ್ಷ ನೆಲೆಯಲ್ಲಿ ಮಾನ್ಯತೆ ಪಡೆದುಬಿಟ್ಟವು.
ಈ ಮಾನ್ಯತೆಗಾಗಿಯೇ ಭಾರತದ ಪ್ರಭುತ್ವ ಮತ್ತು ಆಡಳಿತಾರೂಢ ರಾಜಕೀಯ ಪಕ್ಷಗಳು ಹಲವಾರು ಭೂತದ ನೆಲೆಗಳನ್ನೂ ಸೃಷ್ಟಿಸಿವೆ. ಈ ನೆಲೆಗಳಲ್ಲಿ ಪ್ರಧಾನವಾಗಿ ಕಾಣುವುದು 1967ರ ನಕ್ಸಲ್‍ಬಾರಿ ಚಳುವಳಿ ಮತ್ತು ಅದರಿಂದ ದೇಶಾದ್ಯಂತ ಉಗಮಿಸಿದ ನೂರಾರು ಹೋರಾಟಗಳು.
ನವ ಉದಾರವಾದ- ಮತೀಯವಾದ ಮತ್ತು ಅಧಿಪತ್ಯ ರಾಜಕಾರಣವನ್ನು ಪ್ರಶ್ನಿಸುವ, ದೇಶದ ಶ್ರಮಜೀವಿಗಳ, ಅವಕಾಶವಂಚಿತರ, ಶೋಷಿತ ಸಮುದಾಯಗಳ ಮತ್ತು ದುರ್ಬಲ ವರ್ಗಗಳ ಮೂಲಭೂತ ಹಕ್ಕುಗಳಿಗಾಗಿ, ಜೀವಿಸುವ ಹಕ್ಕುಗಳಿಗಾಗಿ ಹೋರಾಡುವ ಮತ್ತು ಆಡಳಿತವ್ಯವಸ್ಥೆಯ ಜನವಿರೋಧಿ ನೀತಿಗಳಿಗೆ ಪ್ರತಿರೋಧ ವ್ಯಕ್ತಪಡಿಸುವ ಎಲ್ಲ ದನಿಗಳನ್ನೂ ಈ ಒಂದು ಚಳುವಳಿಯ ಚೌಕಟ್ಟಿನಲ್ಲೇ ನಿಷ್ಕರ್ಷೆ ಮಾಡುವ ಮೂಲಕ, ದನಿಗಳನ್ನು ದಮನಿಸುವ ನೀತಿಗಳಿಗೆ ಸಾರ್ವಜನಿಕ ಮಾನ್ಯತೆ ಪಡೆಯುವಲ್ಲಿ ಆಳುವ ವರ್ಗಗಳು ಯಶಸ್ವಿಯಾಗಿದ್ದವು. ಈ ಸಮೂಹ ಸನ್ನಿಯನ್ನು ಸೃಷ್ಟಿಸಲು ಕಾಶ್ಮೀರದ ಉಗ್ರವಾದ, ಭಯೋತ್ಪಾದನೆ ಮತ್ತು ಹಿಂದುತ್ವ ರಾಜಕಾರಣ ನೆರವಾಗಿದ್ದವು.
1990ರ ನಂತರದಲ್ಲಿ ಭಾರತದ ಜನತಂತ್ರದಲ್ಲಿ ಎರಡು ಚಿಂತನಾವಾಹಿನಿಗಳು ಸ್ಪಷ್ಟವಾಗಿ ಉಗಮಿಸಿದವು. ನವ ಉದಾರವಾದ, ಜಾಗತೀಕರಣ, ಹಣಕಾಸು ಬಂಡವಾಳದ ಅಧಿಪತ್ಯ , ಸಾಂಸ್ಕೃತಿಕ ಮತೀಯ ರಾಜಕಾರಣ ಮತ್ತು ಪ್ರಾದೇಶಿಕ ಹಾಗೂ ಜಾತಿ ರಾಜಕಾರಣ ಈ ಎಲ್ಲವನ್ನೂ ಪ್ರತಿನಿಧಿಸುವ ಒಂದು ವರ್ಗ ಅಧಿಕಾರ ರಾಜಕಾರಣಕ್ಕೆ ಸ್ಪಷ್ಟ ತಳಪಾಯ ನಿರ್ಮಿಸುವಲ್ಲಿ ಯಶಸ್ವಿಯಾದವು.
ಈ ಆಳುವ ವರ್ಗಗಳಿಗೆ ಒತ್ತಾಸೆಯಾಗಿ ನಿಂತಿದ್ದು ಮಾರುಕಟ್ಟೆ ಶಕ್ತಿಗಳು ಮತ್ತು ಭಾರತದ ಕಾರ್ಪೋರೇಟ್ ವಲಯ. 1998ರ ನಂತರದ ಎಲ್ಲ ಚುನಾವಣೆಗಳಲ್ಲೂ ಕಾರ್ಪೋರೇಟ್-ಮಾರುಕಟ್ಟೆ ಶಕ್ತಿಗಳ ಪ್ರಭಾವವನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಬಹುದು. ಬಂಡವಾಳ ವ್ಯವಸ್ಥೆಯ ಶೋಷಕ ನೆಲೆಗಳನ್ನು ಗಟ್ಟಿಗೊಳಿಸಲು ಜನಾಂದೋಲನಗಳನ್ನು ಹತ್ತಿಕ್ಕುವ ಕರಾಳ ಶಾಸನಗಳೂ ಆಳುವ ವರ್ಗಗಳ ಪ್ರತಿನಿಧಿಗಳಲ್ಲಿ ಮಾನ್ಯತೆ ಪಡೆದಿದ್ದವು.
1970-80ರ ದಶಕದಲ್ಲಿ ದೇಶದ ದುಡಿಯುವ ವರ್ಗಗಳೊಡನೆ, ಶ್ರಮಜೀವಿಗಳೊಡನೆ, ಶೋಷಿತ-ಅವಕಾಶವಂಚಿತ ಜನಸಮುದಾಯಗಳೊಡನೆ ಗುರುತಿಸಿಕೊಳ್ಳುತ್ತಿದ್ದ ರಾಜಕೀಯ ಪಕ್ಷಗಳು ಕ್ರಮೇಣ ಈ ಜನಸಮುದಾಯಗಳನ್ನು ತಮ್ಮ ಅಧಿಕಾರ ರಾಜಕಾರಣದ ವಿಸ್ತರಣೆಯ ಕಾಲಾಳುಗಳನ್ನಾಗಿ ಬಳಸಿಕೊಂಡಿದ್ದನ್ನೂ ಗಮನಿಸಬಹುದು. ಈ ಸಂದರ್ಭದಲ್ಲೇ ಅಸಂಖ್ಯಾತ ಜನಾಂದೋಲನಗಳು ನಿಷ್ಕ್ರಿಯವಾಗತೊಡಗಿದವು.
ದಲಿತ ಸಂಘಟನೆಗಳನ್ನೂ ಸೇರಿದಂತೆ ಹಲವು ಚಳುವಳಿಗಳು ಯಾವುದೋ ಒಂದು ರಾಜಕೀಯ ಪಕ್ಷದ ಬಾಲಂಗೋಚಿಗಳಾದವು. ಕಾರ್ಮಿಕ ಸಂಘಟನೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತು ಸ್ವ ಹಿತಾಸಕ್ತಿ ರಕ್ಷಣೆಯ ಗುಂಪುಗಳಾದವು. ರಾಜಕೀಯೇತರ ಚಳುವಳಿಗಳ ಮೂಲಕ ಶೋಷಿತರ ಪರ ದನಿ ಎತ್ತಿದ್ದ ಹಲವಾರು ಸಂಘಟನೆಗಳು ಆಡಳಿತ ವ್ಯವಸ್ಥೆಯ ಕೆಂಗಣ್ಣಿಗೆ ಗುರಿಯಾದವು.
ಈ ವಿಘಟನೆಯ ಫಲವನ್ನು ಜನಾಂದೋಲನಗಳ ನಿಷ್ಕ್ರಿಯತೆಯಲ್ಲಿ ಕಾಣುತ್ತಿದ್ದೇವೆ.
ಕಳೆದ ಆರು ವರ್ಷಗಳಲ್ಲಿ ಕಾರ್ಪೋರೇಟ್-ಮಾರುಕಟ್ಟೆಯ ಶಕ್ತಿಗಳು ದೇಶದ ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವಂತೆಯೇ, ಭಾರತದ ಆಳುವ ವರ್ಗಗಳು ಜನಸಾಮಾನ್ಯರ ಪ್ರತಿರೋಧದ ದನಿಗಳನ್ನು ಹತ್ತಿಕ್ಕಲು ಸಂವಿಧಾನದ ಚೌಕಟ್ಟಿನಲ್ಲೇ ಕರಾಳ ಶಾಸನಗಳನ್ನು ರೂಪಿಸುತ್ತಿವೆ. ಈ ಜನವಿರೋಧಿ ನೀತಿಗಳನ್ನು ವಿರೋಧಿಸುವ ದನಿಗಳನ್ನು ಶಾಶ್ವತವಾಗಿ ಅಡಗಿಸುವ ದುಷ್ಟ ಧೋರಣೆಯನ್ನೂ ಕಾಣುತ್ತಿದ್ದೇವೆ. ಆನಂದ್ ತೇಲ್ತುಂಬ್ಡೆ, ಸುಧಾ ಭರದ್ವಾಜ್, ಸಾಯಿಬಾಬಾ, ಗೌತಮ್ ನವಲಖಾ ಮತ್ತು ವರವರರಾವ್ ಮತ್ತು ಅಸಂಖ್ಯಾತ ಹೋರಾಟಗಾರರು ಈ ದುಷ್ಟ ನೀತಿಗೆ ಬಲಿಯಾಗುತ್ತಿದ್ದಾರೆ.
ರಾಜಕೀಯ ವಲಯದಲ್ಲಿ ಜಾಗೃತವಾಗಿದ್ದ ತಾತ್ವಿಕ-ಸೈದ್ಧಾಂತಿಕ ನೆಲೆಗಳೆಲ್ಲವೂ ಪ್ರಭುತ್ವದ ಚೌಕಟ್ಟಿನಲ್ಲಿ ಬಂದಿಯಾಗಿರುವ ಸಂದರ್ಭದಲ್ಲಿ ಇಂದು ದೇಶದ ಬಹುಸಂಖ್ಯಾತ ಜನತೆ ತಮ್ಮ ಹಕ್ಕುಗಳಿಗಾಗಿ, ಜೀವನೋಪಾಯಕ್ಕಾಗಿ, ಬದುಕುವ ಅವಕಾಶಕ್ಕಾಗಿ ನಿರಂತರ ಹೋರಾಟ ನಡೆಸಬೇಕಾದ ಸನ್ನಿವೇಶವನ್ನು ಎದುರಿಸುತ್ತಿದೆ.
ಹೋರಾಟದ ನೆಲೆಗಳ ಪುನರುತ್ಥಾನದೊಂದಿಗೇ ಅಧಿಕಾರ ರಾಜಕಾರಣದ ಕಾಲಾಳುಗಳಾಗಿರುವ ಅಸಂಖ್ಯಾತ ಶೋಷಿತರನ್ನು ಮತ್ತೊಮ್ಮೆ ಪ್ರತಿರೋಧದ ನೆಲೆಯಲ್ಲಿ ಸಂಘಟಿಸುವ ಹೊಣೆಗಾರಿಕೆ ಜನಾಂದೋಲನಗಳ ಮೇಲಿದೆ. ಶೋಷಣೆಯ ವಿಭಿನ್ನ ಆಯಾಮಗಳನ್ನು ಸಾಪೇಕ್ಷ ನೆಲೆಯಲ್ಲಿ ನೋಡುವ ಧೋರಣೆಯಿಂದ ಜನಾಂದೋಲನಗಳು ಹೊರಬರಬೇಕಿದೆ.
ಸಾವು ಬದುಕಿನ ನಡುವೆ ಸೆಣಸುತ್ತಿರುವ ಕವಿ ವರವರರಾವ್ ಈ ಸಂದರ್ಭದಲ್ಲಿ ಪ್ರಭುತ್ವ ವಿರೋಧಿ ನೆಲೆಯ ಸಂಕೇತವಾಗಿ ಕಾಣುತ್ತಾರೆ. ತೇಲ್ತುಂಬ್ಡೆ , ಸಾಯಿಬಾಬಾ ಮತ್ತಿತರರು ಈ ಸಾಂಕೇತಿಕ ನೆಲೆಯ ಪ್ರತಿನಿಧಿಗಳಾಗಿ ಕಾಣುತ್ತಾರೆ. ಹೋರಾಟದ ನೆಲೆಗಳು ಕರಾಳ ಶಾಸನಗಳ ದಾಳಿಯಿಂದ ನಿಷ್ಕ್ರಿಯವಾಗುತ್ತಿರುವ ದುರಂತ ಸನ್ನಿವೇಶವನ್ನು ಕಾಣುತ್ತಿದ್ದೇವೆ.
ಹಾಗಾಗಿಯೇ ದೇಶದ ಕೈಗಾರಿಕಾ ನೀತಿ, ಕಾರ್ಮಿಕ ನೀತಿ, ಕೃಷಿ ನೀತಿ ಮತ್ತು ಹಣಕಾಸು ನೀತಿ ಎಲ್ಲವೂ ಕಾರ್ಪೋರೇಟ್-ಮಾರುಕಟ್ಟೆ ಶಕ್ತಿಗಳ ಅಣತಿಯಂತೆ ಬದಲಾಗುತ್ತಿವೆ. ಸಮಸ್ತ ರಾಜಕೀಯ ವರ್ಗ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದೆ. ಶ್ರಮಜೀವಿ ವರ್ಗಗಳು ತಮ್ಮ ಮೂಲ ನೆಲೆಯನ್ನೇ ಕಳೆದುಕೊಂಡು ಗತಕಾಲದ ಜೀತಪದ್ಧತಿಗೆ ಒಳಗಾಗುವ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ.
ಕೃಷಿ ಭೂಮಿ, ಬ್ಯಾಂಕಿಂಗ್ ವ್ಯವಸ್ಥೆ, ವಿಮಾ ವಲಯ, ಕಲ್ಲಿದ್ದಲು ನಿಕ್ಷೇಪಗಳು, ವಿಮಾನಯಾನ, ರೈಲು ಮಾರ್ಗಗಳು, ಗಣಿಗಾರಿಕೆ, ಸಾರ್ವಜನಿಕ ಸಾರಿಗೆ, ಸಾರ್ವಜನಿಕ ಉದ್ದಿಮೆಗಳು, ಕೈಗಾರಿಕಾ ವಲಯ , ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರ ಎಲ್ಲವೂ ಖಾಸಗೀಕರಣಕ್ಕೊಳಗಾಗುತ್ತಿರುವ ಸಂದರ್ಭದಲ್ಲೂ ರಾಜಕೀಯ ಪಕ್ಷಗಳು ಅಧಿಕಾರ ರಾಜಕಾರಣದ ಚೌಕಟ್ಟಿನಿಂದ ಹೊರಬರಲಾಗದೆ, ಪ್ರಭುತ್ವದ ದಮನಕಾರಿ ಆಡಳಿತ ನೀತಿಗಳಿಗೆ ಪೂರಕವಾಗಿ ವರ್ತಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ವರವರರಾವ್, ತೇಲ್ತುಂಬ್ಡೆ ಮುಂತಾದ ಸಾಮಾಜಿಕ ಕಳಕಳಿಯುಳ್ಳ ಹೋರಾಟಗಾರರು ಅನಾಥರಂತೆ ಕಾಣುತ್ತಿದ್ದರೆ ಅದಕ್ಕೆ ಕಾರಣ ರಾಜಕೀಯ ಪಕ್ಷಗಳು ಈ ನೆಲೆಯಲ್ಲಿ ಪ್ರಜ್ಞಾಶೂನ್ಯವಾಗಿರುವುದು.
ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಇಂದು ಭಾರತದ ಶೋಷಿತ ದುಡಿಯುವ ವರ್ಗಗಳು ತಮ್ಮ ಅಳಿವು ಉಳಿವಿನ ಸಂಘರ್ಷಕ್ಕೆ ಸಜ್ಜಾಗಬೇಕಿದೆ. ಕಾರ್ಪೋರೇಟ್ ಅಧಿಪತ್ಯಕ್ಕೆ ಶರಣಾಗುತ್ತಿರುವ ರಾಜಕೀಯ ನೆಲೆಗಳಿಂದ ಭಿನ್ನವಾದ ಜನಾಂದೋಲನದ ನೆಲೆಯನ್ನು ಬಲಪಡಿಸುವ ತುರ್ತು ನಮ್ಮ ಮುಂದಿದೆ. ಮಾನವೀಯ ಮೌಲ್ಯಗಳನ್ನೇ ಕಳೆದುಕೊಂಡಿರುವ ಒಂದು ಆಡಳಿತ ವ್ಯವಸ್ಥೆಯಲ್ಲಿ ಈ ದೇಶದ ಬಹುಸಂಖ್ಯಾತ ಜನತೆ ತಮ್ಮ ಬದುಕು ರೂಪಿಸಿಕೊಳ್ಳಬೇಕಿದೆ.
ಪ್ರತಿಯೊಂದು ಪ್ರತಿರೋಧದ ದನಿಯನ್ನೂ ಶಾಶ್ವತವಾಗಿ ದಮನಿಸುವ ಪ್ರಭುತ್ವದ ನೀತಿಯ ನಡುವೆಯೇ, ಶೋಷಿತರ ಹಕ್ಕುಗಳಿಗಾಗಿ ಹೋರಾಡಬೇಕಿದೆ. ಪ್ರಭುತ್ವ ಮತ್ತು ಪ್ರಜೆಗಳ ನಡುವೆ ಒಂದು ಕಾಲಘಟ್ಟದಲ್ಲಿ ಶೋಷಿತರ ಬೆಂಗಾವಲಿನಂತಿದ್ದ ಕೆಲವು ರಾಜಕೀಯ ನೆಲೆಗಳು ಇಂದು ಮರೆಯಾಗಿವೆ. ಶೋಷಿತರ ದನಿಗೆ ದನಿಯಾಗುವ ಬದಲು, ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಶೋಷಿತರ ದನಿಯನ್ನು ಅಸ್ತ್ರದಂತೆ ಬಳಸಿಕೊಳ್ಳುವ ರಾಜಕೀಯ ಪಕ್ಷಗಳ ಮತ್ತು ನಾಯಕರ ವಿಶ್ವಾಸ ದ್ರೋಹದ ವಿರುದ್ಧ ಶೋಷಿತ ಸಮುದಾಯಗಳು ಹೋರಾಡಬೇಕಿದೆ.
ಜನತಂತ್ರದ ಉಳಿವಿಗಾಗಿ, ಗಣತಂತ್ರದ ಉಳಿವಿಗಾಗಿ ಮತ್ತು ಪ್ರಜಾಸತ್ತಾತ್ಮಕ ಸಾಂವಿಧಾನಿಕ ಮೌಲ್ಯಗಳ ಉಳಿವಿಗಾಗಿ ಹೊಸ ನೆಲೆಗಳನ್ನು ಸೃಷ್ಟಿಸಬೇಕಾದ ಅನಿವಾರ್ಯತೆ ಎದುರಾಗಿದೆ. ವರವರರಾವ್ ಈ ಅನಿವಾರ್ಯತೆಯನ್ನು ಪ್ರತಿನಿಧಿಸುವ ಒಂದು ಕ್ಷೀಣ ದನಿಯಾಗಿ ನಮ್ಮ ನಡುವೆ ಉಸಿರಾಡುತ್ತಿದ್ದಾರೆ. “ ದೇಶವೆಂದರೆ ಮಣ್ಣಲ್ಲವೋ ಮನುಜರು ” ಈ ಘೋಷ ವಾಕ್ಯ ನಮ್ಮೊಳಗಿನ ಮಾನವೀಯತೆಯನ್ನು ಜಾಗೃತಿಗೊಳಿಸಿದರೆ ಬಹುಶಃ ನಾವು ವಿಶ್ವಮಾನವತೆಯನ್ನು ಸಾಧಿಸಲು, ಕಾರ್ಪೋರೇಟ್-ಮಾರುಕಟ್ಟೆ ರಾಜಕಾರಣದ ಅಮಾನುಷ ವ್ಯವಸ್ಥೆಯ ವಿರುದ್ಧ ಹೋರಾಡಲು ಸಜ್ಜಾಗಬಹುದು. ಇದು ಜನಾಂದೋಲನಗಳ ಮುಂದಿರುವ ಬೃಹತ್ ಸವಾಲು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Bigg Boss Kannada 13: ಹೊಸ ಥೀಮ್, ಹೊಸ ಸ್ಪರ್ಧಿಗಳು, 24×7 ಲೈವ್; ಕಿಚ್ಚ ಸುದೀಪ್ ಸಾರಥ್ಯದ ಬಿಗ್‌ಬಾಸ್ ಕನ್ನಡ 13ರ ವಿಶೇಷತೆಗಳೇನು?
ಸುದ್ದಿದಿನ,ಬೆಂಗಳೂರು: ಅಂತೂ ಇಂತೂ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ **‘ಬಿಗ್‌ಬಾಸ್ ಕನ್ನಡ ಸೀಸನ್ 13’**ಗೆ ಅಧಿಕೃತ ಚಾಲನೆ ಸಿಗುವ ಸಮಯ ಬಂದಿದೆ. ಈಗಾಗಲೇ ‘ಬಿಗ್‌ಬಾಸ್ ಅಗ್ನಿಪರೀಕ್ಷೆ’ ಮೂಲಕ ಕುತೂಹಲ ಹೆಚ್ಚಿಸಿರುವ ಕಾರ್ಯಕ್ರಮದ ಟಿವಿ ಸೀಸನ್ ಸೆಪ್ಟೆಂಬರ್ 6ರಿಂದ ಆರಂಭವಾಗಲಿದೆ. ಹೊಸ ಸೀಸನ್‌ನಲ್ಲಿ ಮನೆ, ಥೀಮ್, ಸ್ಪರ್ಧಿಗಳ ಆಯ್ಕೆ ಹಾಗೂ ವೀಕ್ಷಣಾ ಅನುಭವದಲ್ಲೂ ಹಲವು ವಿಶೇಷತೆಗಳನ್ನು ಪರಿಚಯಿಸಲಾಗುತ್ತಿದೆ.
ಕಳೆದ 12 ಸೀಸನ್‌ಗಳಂತೆ ಈ ಬಾರಿಯೂ ಕಿಚ್ಚ ಸುದೀಪ್ ಕಾರ್ಯಕ್ರಮದ ನಿರೂಪಕರಾಗಿ ಮುಂದುವರಿಯಲಿದ್ದಾರೆ. ಸತತ 13 ಸೀಸನ್‌ಗಳನ್ನು ನಿರೂಪಣೆ ಮಾಡುತ್ತಿರುವುದು ಬಿಗ್‌ಬಾಸ್ ಇತಿಹಾಸದಲ್ಲೇ ಗಮನಾರ್ಹ ದಾಖಲೆಯಾಗಿದೆ.
ಹೈಲೈಟ್ಸ್: ಸೆಪ್ಟೆಂಬರ್ 6ರಿಂದ ಬಿಗ್‌ಬಾಸ್ ಹವಾ |
|
http://Visit : www.suddidina.com
ಈ ಬಾರಿ ‘Flight’ ಥೀಮ್ ಏಕೆ ವಿಶೇಷ?
ಕಳೆದ ಸೀಸನ್‌ನಲ್ಲಿ ವೀಕ್ಷಕರು ಅರಮನೆ ಮಾದರಿಯ ಬಿಗ್‌ಬಾಸ್ ಮನೆಯನ್ನು ಕಂಡಿದ್ದರು. ಆದರೆ ಈ ಬಾರಿ ಇಡೀ ಕಾರ್ಯಕ್ರಮದ ಕಲ್ಪನೆಯೇ ಬದಲಾಗಿದೆ. ‘Flight’ ಥೀಮ್ ಆಧಾರಿತವಾಗಿ ಸೀಸನ್ 13 ರೂಪಿಸಲಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋದಲ್ಲೂ ಇದರ ಝಲಕ್ ಕಾಣಿಸಿಕೊಂಡಿದೆ.
ವಿಶೇಷವೆಂದರೆ ಫ್ಲೈಟ್ ಥೀಮ್ ಕೇವಲ ಪ್ರೋಮೋಗೆ ಸೀಮಿತವಾಗಿಲ್ಲ. ಬಿಗ್‌ಬಾಸ್ ಮನೆಯ ವಿನ್ಯಾಸದಲ್ಲೂ ಇದೇ ಪರಿಕಲ್ಪನೆಯನ್ನು ಬಳಸಲಾಗಿದೆ. ಹೀಗಾಗಿ ಈ ಬಾರಿ ಮನೆ ಹೇಗೆ ಕಾಣಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಸೆಲೆಬ್ರಿಟಿಗಳ ಜತೆಗೆ ಕಾಮನ್ ಮ್ಯಾನ್ ಎಂಟ್ರಿ
ಬಿಗ್‌ಬಾಸ್ ಕನ್ನಡದ ಪ್ರತಿ ಸೀಸನ್‌ನಲ್ಲೂ ಸ್ಪರ್ಧಿಗಳ ಆಯ್ಕೆ ಪ್ರಮುಖ ಆಕರ್ಷಣೆಯಾಗಿರುತ್ತದೆ. ಈ ಬಾರಿ ಸೆಲೆಬ್ರಿಟಿಗಳ ಜತೆಗೆ ಸಾಮಾನ್ಯ ಜನರಿಗೂ ಅವಕಾಶ ಕಲ್ಪಿಸಲಾಗುತ್ತಿದೆ.
‘ಬಿಗ್‌ಬಾಸ್ ಅಗ್ನಿಪರೀಕ್ಷೆ’ ಮೂಲಕ ಆಯ್ಕೆಯಾಗುವ ಮೂವರು ಸಾಮಾನ್ಯ ಸ್ಪರ್ಧಿಗಳು ಸೀಸನ್ 13ರ ಮನೆಗೆ ಪ್ರವೇಶಿಸಲಿದ್ದಾರೆ. ಇದರಿಂದ ಮನೆಯಲ್ಲಿ ವಿಭಿನ್ನ ಹಿನ್ನೆಲೆಯ ವ್ಯಕ್ತಿಗಳ ನಡುವಿನ ಸಂವಹನ, ಅಭಿಪ್ರಾಯ ಭೇದ ಹಾಗೂ ಹೊಸ ರೀತಿಯ ಸ್ಪರ್ಧೆ ಮೂಡುವ ನಿರೀಕ್ಷೆಯಿದೆ.
ಮನೆಯ ಪ್ರತಿಕ್ಷಣವೂ 24×7 ಲೈವ್
ಈ ಬಾರಿ ವೀಕ್ಷಕರಿಗೆ ಮತ್ತೊಂದು ದೊಡ್ಡ ಸೌಲಭ್ಯ ಸಿಗಲಿದೆ. ಟಿವಿ ಎಪಿಸೋಡ್‌ಗಳಿಗೆ ಮಾತ್ರ ಸೀಮಿತವಾಗದೆ, ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಗ್‌ಬಾಸ್ ಮನೆಯ 24×7 ಲೈವ್ ವೀಕ್ಷಣೆ ಲಭ್ಯವಿರಲಿದೆ.
ಅಂದರೆ ದಿನದ ಎಪಿಸೋಡ್‌ನಲ್ಲಿ ಪ್ರಸಾರವಾಗದ ಮನೆಯೊಳಗಿನ ಹಲವು ಬೆಳವಣಿಗೆಗಳನ್ನೂ ವೀಕ್ಷಕರು ಗಮನಿಸಬಹುದು. ಸ್ಪರ್ಧಿಗಳ ನಡುವಿನ ಮಾತುಕತೆ, ಚಟುವಟಿಕೆಗಳು ಹಾಗೂ ಅನಿರೀಕ್ಷಿತ ಘಟನೆಗಳನ್ನು ಇನ್ನಷ್ಟು ಹತ್ತಿರದಿಂದ ನೋಡುವ ಅವಕಾಶ ಸಿಗಲಿದೆ.
ಪ್ರಸಾರದ ಸಮಯವೂ ಫಿಕ್ಸ್
ಸೆಪ್ಟೆಂಬರ್ 6ರಂದು ಸಂಜೆ 7 ಗಂಟೆಗೆ ಗ್ರ್ಯಾಂಡ್ ಪ್ರೀಮಿಯರ್ ಪ್ರಸಾರವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30ಕ್ಕೆ ಹೊಸ ಸಂಚಿಕೆಗಳು ಪ್ರಸಾರವಾಗಲಿವೆ.
ಇನ್ನು ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ನಡೆಸಿಕೊಡುವ ಶನಿವಾರ ಮತ್ತು ಭಾನುವಾರದ ವಿಶೇಷ ಸಂಚಿಕೆಗಳು ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿವೆ.
ಬಿಗ್‌ಬಾಸ್ ಪ್ರಯಾಣ ಯಾವ ದಿಕ್ಕಿಗೆ?
ಫ್ಲೈಟ್ ಥೀಮ್, ಹೊಸ ಮುಖಗಳು, ಸಾಮಾನ್ಯ ಸ್ಪರ್ಧಿಗಳ ಪ್ರವೇಶ ಮತ್ತು 24×7 ಲೈವ್ ವೀಕ್ಷಣೆಯೊಂದಿಗೆ ಸೀಸನ್ 13 ಕುತೂಹಲ ಮೂಡಿಸಿದೆ. ಈ ‘ಫ್ಲೈಟ್’ನಲ್ಲಿ ಯಾರು ಟೇಕಾಫ್ ಆಗುತ್ತಾರೆ, ಯಾರು ಮಧ್ಯದಲ್ಲೇ ಎಲಿಮಿನೇಟ್ ಆಗುತ್ತಾರೆ ಮತ್ತು ಕೊನೆಯವರೆಗೂ ಯಾರು ಪ್ರಯಾಣ ಮುಂದುವರಿಸುತ್ತಾರೆ ಎಂಬುದೇ ಮುಂದಿನ ದಿನಗಳ ಪ್ರಮುಖ ಪ್ರಶ್ನೆ.

ದಿನದ ಸುದ್ದಿ
ಕುಂದುಕೊರತೆಗಳಿಗೆ ತ್ವರಿತ ಪರಿಹಾರ ನೀಡಲು ಏಕೀಕೃತ ವ್ಯವಸ್ಥೆ; ಶನಿವಾರ ಜನಸಂಪರ್ಕ, ಬುಧವಾರ ಮೂರು ಹಂತದ ಪರಿಶೀಲನೆ
ಬೆಂಗಳೂರು: ಸರ್ಕಾರಿ ಸೇವೆ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆಯಬೇಕಾದ ದಿನಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ಸರ್ಕಾರ ‘ಪ್ರಜಾಸೇವಾ ಅಭಿಯಾನ’ಕ್ಕೆ ಚಾಲನೆ ನೀಡಲು ಸಜ್ಜಾಗಿದೆ. ಸೆಪ್ಟೆಂಬರ್ 5ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹೋಬಳಿಯಿಂದ ಅಭಿಯಾನ ಆರಂಭವಾಗಲಿದ್ದು, ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ಸಾಧ್ಯವಾದಷ್ಟು ಸ್ಥಳದಲ್ಲೇ ಅಥವಾ ನಿಗದಿತ ಕಾಲಮಿತಿಯಲ್ಲಿ ಪರಿಹರಿಸುವ ವ್ಯವಸ್ಥೆ ರೂಪಿಸಲಾಗಿದೆ.
ಇದುವರೆಗೆ ವಿವಿಧ ಇಲಾಖೆ, ಯೋಜನೆ ಅಥವಾ ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆ ಎದುರಾದಾಗ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಸಂಪರ್ಕಿಸಲು ಜನರು ಹಲವು ಬಾರಿ ಕಚೇರಿಗಳಿಗೆ ತೆರಳಬೇಕಾಗುತ್ತಿತ್ತು. ಇದೀಗ ಈ ಅಲೆದಾಟ ಕಡಿಮೆ ಮಾಡಿ ಜನರ ಮನೆ ಬಾಗಿಲಿಗೆ ಆಡಳಿತವನ್ನು ಕೊಂಡೊಯ್ಯುವುದು ಪ್ರಜಾಸೇವೆಯ ಪ್ರಮುಖ ಉದ್ದೇಶವಾಗಿದೆ.
ಹೈಲೈಟ್ಸ್: ಸೆ.5ರಿಂದ ಹೊಸ ಆಡಳಿತ ವ್ಯವಸ್ಥೆಗೆ ಚಾಲನೆ |
|
http://Visit : www.suddidina.com
ಪ್ರತಿ ಶನಿವಾರ ಜನರೊಂದಿಗೆ ನೇರ ಸಂಪರ್ಕ
ಪ್ರತಿ ಶನಿವಾರ ತಾಲ್ಲೂಕು ಅಥವಾ ಹೋಬಳಿ ಮಟ್ಟದಲ್ಲಿ ಪ್ರಜಾಸೇವಾ ಸಭೆಗಳನ್ನು ಪರ್ಯಾಯವಾಗಿ ನಡೆಸಲು ನಿರ್ಧರಿಸಲಾಗಿದೆ. ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕೇಂದ್ರದಲ್ಲಿ ಸಭೆ ನಡೆಯಲಿದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಅಥವಾ ಹೋಬಳಿ ಮಟ್ಟದಲ್ಲಿ ಸಭೆ ಆಯೋಜಿಸಲಾಗುತ್ತದೆ.
ಸಭೆಗಳ ಕುರಿತು ಸಾರ್ವಜನಿಕರಿಗೆ ಕನಿಷ್ಠ 15 ದಿನಗಳ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ. ಮನೆ-ಮನೆಗೆ ಕರಪತ್ರ ವಿತರಿಸುವುದರ ಜತೆಗೆ AI ಆಧಾರಿತ ಕಾಲ್ ಸೆಂಟರ್ ಮೂಲಕ ಸಭೆಯ ದಿನಾಂಕ, ಸ್ಥಳ ಹಾಗೂ ಸಮಯದ ಕುರಿತು ಮಾಹಿತಿ ನೀಡಲಾಗುತ್ತದೆ.
ಗ್ರಾಮ ಒನ್‌ನಲ್ಲೇ ಅರ್ಜಿ ಸಲ್ಲಿಕೆ
ಜನರು ತಮ್ಮ ಅರ್ಜಿ ಹಾಗೂ ಅಹವಾಲುಗಳನ್ನು ಮುಂಚಿತವಾಗಿ ಗ್ರಾಮ ಒನ್ ಕೇಂದ್ರದಲ್ಲಿ ಸಲ್ಲಿಸಬಹುದು. ಸಭಾ ಸ್ಥಳದಲ್ಲಿಯೂ ಗ್ರಾಮ ಒನ್ ಮಳಿಗೆ ಸ್ಥಾಪಿಸಿ ಕಂಪ್ಯೂಟರ್, ಪ್ರಿಂಟರ್ ಮತ್ತು ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಗುತ್ತದೆ.
ಈ ಸಭೆಗಳಲ್ಲಿ ಹೊಸ ಅಹವಾಲುಗಳು ಮತ್ತು ಈಗಾಗಲೇ ದೂರು ದಾಖಲಿಸಿದ್ದರೂ ಪರಿಹಾರವಾಗದ ಅಹವಾಲುಗಳಿಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ. 21 ದಿನಗಳ ಬಳಿಕವೂ ಸಮರ್ಪಕ ಪರಿಹಾರ ಸಿಗದ ಪ್ರಕರಣಗಳನ್ನೂ ಆದ್ಯತೆಯಿಂದ ಪರಿಗಣಿಸಲಾಗುತ್ತದೆ.
ಬುಧವಾರ ಮೂರು ಹಂತದ ಪರಿಶೀಲನೆ
ಪ್ರಜಾಸೇವಾ ಸಭೆಗಳಲ್ಲಿ ಸ್ವೀಕರಿಸಿದ ಅರ್ಜಿ ಮತ್ತು ಅಹವಾಲುಗಳ ಮೇಲೆ ಪ್ರತಿ ಬುಧವಾರ ಮೂರು ಹಂತದ ಪರಿಶೀಲನೆ ನಡೆಯಲಿದೆ. ಬೆಳಗ್ಗೆ 9ರಿಂದ 11ರವರೆಗೆ ತಾಲ್ಲೂಕು ಮಟ್ಟದಲ್ಲಿ, 11ರಿಂದ ಮಧ್ಯಾಹ್ನ 1ರವರೆಗೆ ಉಪವಿಭಾಗ ಮಟ್ಟದಲ್ಲಿ ಹಾಗೂ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಜಿಲ್ಲಾ ಮಟ್ಟದಲ್ಲಿ ಪರಿಶೀಲನೆ ನಡೆಯಲಿದೆ.
ತಾಲ್ಲೂಕಿನಲ್ಲಿ ಬಗೆಹರಿಯದ ಸಮಸ್ಯೆಗಳು ಉಪವಿಭಾಗಾಧಿಕಾರಿಗೆ, ಅಲ್ಲಿಂದ ಜಿಲ್ಲಾಧಿಕಾರಿಗೆ ಮೇಲ್ದರ್ಜೆಗೆ ವರ್ಗಾವಣೆಯಾಗಲಿವೆ. ನಿಗದಿತ ಅವಧಿಯಲ್ಲಿ ಪರಿಹಾರವಾಗದ ಪ್ರಕರಣಗಳು ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರ ಮಟ್ಟಕ್ಕೂ ಸ್ವಯಂಚಾಲಿತವಾಗಿ ಎಸ್ಕಲೇಷನ್ ಆಗುವ ವ್ಯವಸ್ಥೆ ಇರಲಿದೆ.
ಸ್ಥಳದಲ್ಲೇ ಮಂಜೂರಾತಿ, ಆನ್‌ಲೈನ್‌ನಲ್ಲಿ ಸ್ಥಿತಿ
ಅರ್ಹ ಫಲಾನುಭವಿಗಳಿಗೆ ಕೆಲವು ಯೋಜನೆಗಳ ಮಂಜೂರಾತಿ ಪತ್ರವನ್ನು ಸ್ಥಳದಲ್ಲೇ ನೀಡಲು ಅವಕಾಶವಿದೆ. ಅರ್ಜಿ ಅಥವಾ ದೂರು ಯಾವ ಹಂತದಲ್ಲಿದೆ ಎಂಬುದನ್ನು ಸಾರ್ವಜನಿಕರು ನೈಜ-ಸಮಯದ ಸ್ಥಿತಿ ಪರಿಶೀಲನಾ ವ್ಯವಸ್ಥೆಯ ಮೂಲಕ ತಿಳಿದುಕೊಳ್ಳಬಹುದು.
ಇದಲ್ಲದೆ, ಪ್ರತಿ ಸಭೆಯ ಸಂಪೂರ್ಣ ವಿವರ, ಛಾಯಾಚಿತ್ರ, ವೀಡಿಯೋ ಹಾಗೂ ಫಲಾನುಭವಿಗಳ ಅಭಿಪ್ರಾಯಗಳನ್ನು ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತದೆ. ಸಾರ್ವಜನಿಕರು 1902 ಸಹಾಯವಾಣಿ ಅಥವಾ ಅಧಿಕೃತ IPGRS ಪೋರ್ಟಲ್ ಮೂಲಕವೂ ಕುಂದುಕೊರತೆ ದಾಖಲಿಸಬಹುದು.
ಆಡಳಿತಕ್ಕೆ ಹೊಣೆಗಾರಿಕೆ, ಜನರಿಗೆ ಉತ್ತರ
ಪ್ರಜಾಸೇವಾ ಅಭಿಯಾನದ ಯಶಸ್ಸು ಕೇವಲ ಸಭೆ ನಡೆಸುವುದರಲ್ಲಿ ಇಲ್ಲ; ದೂರು ಸ್ವೀಕರಿಸಿ, ಕಾಲಮಿತಿಯಲ್ಲಿ ಪರಿಹರಿಸಿ, ಅದರ ಹೊಣೆಗಾರಿಕೆಯನ್ನು ನಿಗದಿಪಡಿಸುವುದರಲ್ಲಿ ಇದೆ. ಜಿಲ್ಲಾಉಸ್ತುವಾರಿ ಕಾರ್ಯದರ್ಶಿಗಳು, ಅಧಿಕಾರಿಗಳು, ಸಚಿವರು ಹಾಗೂ ಜನಪ್ರತಿನಿಧಿಗಳ ನಿರಂತರ ಮೇಲ್ವಿಚಾರಣೆಯ ಮೂಲಕ ಬಾಕಿ ಪ್ರಕರಣಗಳ ವಿಲೇವಾರಿಗೆ ಒತ್ತು ನೀಡಲಾಗಿದೆ. ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಹೆಚ್ಚಿಸುವ ಈ ವ್ಯವಸ್ಥೆ ಆಡಳಿತದ ಹೊಸ ಮಾದರಿಯಾಗುವ ನಿರೀಕ್ಷೆ ಮೂಡಿಸಿದೆ.

ದಿನದ ಸುದ್ದಿ
Fake Doctors in Karnataka: ಜೀವದ ಜೊತೆ ಚೆಲ್ಲಾಟವಾಡುವ ನಕಲಿ ವೈದ್ಯರು; ದಾಳಿ, ದಂಡ, ಕೇಸ್‌ಗಳ ನಡುವೆಯೂ ಮುಂದುವರಿದ ಜಾಲ
ಸುದ್ದಿದಿನ,ಬೆಂಗಳೂರು: ರಾಜ್ಯದಲ್ಲಿ ಕಳಪೆ ಔಷಧ ಪ್ರಕರಣಗಳು ಚರ್ಚೆಯಲ್ಲಿರುವ ನಡುವೆಯೇ, ವೈದ್ಯಕೀಯ ಕ್ಷೇತ್ರದ ಮತ್ತೊಂದು ಆತಂಕಕಾರಿ ಬೆಳವಣಿಗೆ ಬೆಳಕಿಗೆ ಬಂದಿದೆ. ಕರ್ನಾಟಕದಲ್ಲಿ ಅನಧಿಕೃತವಾಗಿ ವೈದ್ಯಕೀಯ ಸೇವೆ ನೀಡುತ್ತಿರುವ ನಕಲಿ ವೈದ್ಯರ ಹಾವಳಿ ಮುಂದುವರಿದಿದ್ದು, ಕಳೆದ ಮೂರು ವರ್ಷಗಳಲ್ಲಿ ಆರೋಗ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 582 ನಕಲಿ ವೈದ್ಯರ ಪ್ರಕರಣಗಳು ದಾಖಲಾಗಿವೆ. ಇವರಿಗೆ ಸೇರಿದ ಅನಧಿಕೃತ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದ್ದು, ಹಲವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಇತ್ತೀಚೆಗೆ ಕೋನಸಾಗರದಲ್ಲಿ ನಕಲಿ ವೈದ್ಯೆಯೊಬ್ಬರು ನೀಡಿದ ಚುಚ್ಚುಮದ್ದಿನ ಬಳಿಕ ರೈತರೊಬ್ಬರು ಮೃತಪಟ್ಟಿರುವ ಆರೋಪದ ಪ್ರಕರಣ ನಕಲಿ ವೈದ್ಯರ ಜಾಲದ ಅಪಾಯಕಾರಿ ಮುಖವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಅನಧಿಕೃತವಾಗಿ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ, ಕೆಲವರು ಮನೆಯಲ್ಲೇ ಕ್ಲಿನಿಕ್‌ಗಳನ್ನು ನಡೆಸುತ್ತಿರುವುದು ಹಾಗೂ ಪ್ರಯೋಗಾಲಯಗಳನ್ನೂ ನಿರ್ವಹಿಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಹೈಲೈಟ್ಸ್: ನಕಲಿ ವೈದ್ಯರ ವಿರುದ್ಧ ಕಾರ್ಯಾಚರಣೆ ತೀವ್ರ |
|
http://Visit : www.suddidina.com
582 ಪ್ರಕರಣ, 87 ಮಂದಿಗೆ ದಂಡ
ಆರೋಗ್ಯ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಮೂರು ವರ್ಷಗಳ ಅವಧಿಯಲ್ಲಿ 582 ನಕಲಿ ವೈದ್ಯರ ಪ್ರಕರಣಗಳು ದಾಖಲಾಗಿವೆ. ಇವರ ಕ್ಲಿನಿಕ್‌ಗಳನ್ನು ಮುಚ್ಚುವ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 87 ನಕಲಿ ವೈದ್ಯರಿಗೆ ದಂಡ ವಿಧಿಸಲಾಗಿದ್ದು, 128 ಮಂದಿ ಇನ್ನೂ ದಂಡ ಪಾವತಿಸಿಲ್ಲ. ಇದೇ ಅವಧಿಯಲ್ಲಿ 29 ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿವೆ.
ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯ ವ್ಯಾಪ್ತಿಯಲ್ಲಿಯೂ ನೋಂದಣಿ ಅಥವಾ ಅಗತ್ಯ ಪರವಾನಗಿ ಇಲ್ಲದೆ ವೈದ್ಯಕೀಯ ವೃತ್ತಿ ನಡೆಸುತ್ತಿರುವವರ ವಿರುದ್ಧ ದಾಳಿ ನಡೆಸಲಾಗಿದೆ.
ಜಿಲ್ಲೆಗಳಲ್ಲಿ ಸಕ್ರಿಯವಾಗಿರುವ ಜಾಲ
ನಕಲಿ ವೈದ್ಯರನ್ನು ಪತ್ತೆಹಚ್ಚಲು ರಾಜ್ಯ ಸರಕಾರ 2017ರಲ್ಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ವಿಶೇಷ ಪಡೆ ರಚಿಸಿತ್ತು. ಇದರಲ್ಲಿ ಪೊಲೀಸ್ ಇಲಾಖೆ, ಆಯುಷ್ ಅಧಿಕಾರಿಗಳು ಸೇರಿದಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಿದ್ದಾರೆ.
ನಿರಂತರ ದಾಳಿಗಳ ನಡುವೆಯೂ ನಕಲಿ ವೈದ್ಯರ ಜಾಲ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ವಿಶೇಷವಾಗಿ ಸಣ್ಣಪುಟ್ಟ ಗಲ್ಲಿ, ಕೊಳೆಗೇರಿ ಪ್ರದೇಶಗಳಲ್ಲಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಹೆಸರಿನಲ್ಲಿ ಇಂತಹವರು ಕಾರ್ಯನಿರ್ವಹಿಸುತ್ತಿರುವ ಆರೋಪಗಳಿವೆ. ನಗರ ಪ್ರದೇಶಗಳಲ್ಲೂ ಇಂತಹ ಅನಧಿಕೃತ ಕ್ಲಿನಿಕ್‌ಗಳು ಪತ್ತೆಯಾಗುತ್ತಿವೆ.
ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರಕರಣ
ಕಾರ್ಯಾಚರಣೆಯಲ್ಲಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಕಲಿ ವೈದ್ಯರು ಪತ್ತೆಯಾಗುತ್ತಿದ್ದಾರೆ. ಕಲಬುರಗಿ, ರಾಯಚೂರು, ಧಾರವಾಡ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಡಿಮೆ ಹಣದಲ್ಲಿ ಚಿಕಿತ್ಸೆ ಸಿಗುತ್ತದೆ ಎಂಬ ಕಾರಣಕ್ಕೆ ಸಾರ್ವಜನಿಕರು ಅರ್ಹತೆ ಮತ್ತು ನೋಂದಣಿ ಪರಿಶೀಲಿಸದೆ ಇಂತಹವರನ್ನು ಸಂಪರ್ಕಿಸುವುದು ಸಮಸ್ಯೆಗೆ ಕಾರಣವಾಗುತ್ತಿದೆ.
ಕಾನೂನು ಉಲ್ಲಂಘಿಸಿದರೆ ಜೈಲು, ದಂಡ
ಅನಧಿಕೃತವಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿರುವುದು ಪತ್ತೆಯಾದರೆ ಕೆಪಿಎಂಇ ತಿದ್ದುಪಡಿ ಅಧಿನಿಯಮ 2017ರ ಸೆಕ್ಷನ್ 19ರ ಅಡಿಯಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹1 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ನೋಂದಣಿ ಇಲ್ಲದೆ ಖಾಸಗಿ ವೈದ್ಯಕೀಯ ಸಂಸ್ಥೆ ನಡೆಸಿದರೆ ಅದನ್ನು ಮುಚ್ಚಿಸುವ ಕ್ರಮ ಕೈಗೊಳ್ಳಲಾಗುತ್ತದೆ. ನಿಯಮಗಳನ್ನು ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ ದಂಡ ಹಾಗೂ ನೋಂದಣಿ ರದ್ದತಿಯಂತಹ ಕ್ರಮಗಳಿಗೂ ಅವಕಾಶವಿದೆ.
ನಕಲಿ ವೈದ್ಯರ ವಿರುದ್ಧದ ಕಾನೂನು ಕ್ರಮದ ಜತೆಗೆ ಸಾರ್ವಜನಿಕರ ಜಾಗೃತಿಯೂ ಅತ್ಯಂತ ಮುಖ್ಯ. ವೈದ್ಯರನ್ನು ಸಂಪರ್ಕಿಸುವ ಮುನ್ನ ಅವರ ವೈದ್ಯಕೀಯ ನೋಂದಣಿ, ಅರ್ಹತೆ ಮತ್ತು ಕ್ಲಿನಿಕ್‌ನ ಕಾನೂನುಬದ್ಧ ನೋಂದಣಿ ಪರಿಶೀಲಿಸುವುದು ಜೀವ ರಕ್ಷಣೆಯ ಮೊದಲ ಹೆಜ್ಜೆಯಾಗಬಹುದು.
ಸಿಕ್ಕಿಬಿದ್ದ ನಕಲಿ ವೈದ್ಯರು ಅಂಕಿ-ಅಂಶ (2024-2026) |
|
“ನಕಲಿ ಔಷಧಿ ಜಾಲದಂತೆ ನಕಲಿ ವೈದ್ಯರಿಗೂ ಕಡಿವಾಣ ಹಾಕಲಾಗುವುದು. ಅಂಥವರ ಪತ್ತೆಗೆ ಯೋಜನೆ ರೂಪಿಸುತ್ತೇವೆ. ಸಿಕ್ಕಿಬಿದ್ದಲ್ಲಿ ವಿಳಂಬವಿಲ್ಲದೆ ಕಟ್ಟುನಿಟ್ಟಿನ ಕ್ರಮ ವಹಿಸುತ್ತೇವೆ. ಜನರು ಮಾಹಿತಿ ಕೊಟ್ಟರೂ ಕ್ರಮ ವಹಿಸುತ್ತೇವೆ.”
– ಯು.ಟಿ.ಖಾದರ್ ಆರೋಗ್ಯ ಸಚಿವ

-
ದಿನದ ಸುದ್ದಿ5 days agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ6 days agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ5 days agoಇಂಗ್ಲಿಷ್ ಕಲಿಯಲು ಬಂದ ಜಪಾನ್ ಯುವಕ ಜೈಲು ಸೇರಿದ ; 75000 ಪರಿಹಾರ ಪಡೆದ
-
ದಿನದ ಸುದ್ದಿ6 days agoಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
-
ದಿನದ ಸುದ್ದಿ6 days ago₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ
-
ದಿನದ ಸುದ್ದಿ5 days agoಡಾಲಿಯ ಕನಸು ಒಂದೇ ಹೀರೋ ಆಗೋದು
-
ದಿನದ ಸುದ್ದಿ6 days agoತುಂಗಭದ್ರಾದಲ್ಲಿ ನೀರಿನ ಹರಿವು ಕುಸಿತ: ಹರಿಹರದ 24×7 ‘ಜಲಸಿರಿ’ಗೆ ಬ್ರೇಕ್, ನೀರು ಪೂರೈಕೆ ಸಮಯ ಕಡಿತ


