Connect with us

ದಿನದ ಸುದ್ದಿ

ಭಾಷಿಕ ಮೂಲಭೂತವಾದ ಹೆಚ್ಚು ಅಪಾಯಕಾರಿ‌ : ಡಾ.ಎ.ಬಿ. ರಾಮಚಂದ್ರಪ್ಪ

Published

on

ಸುದ್ದಿದಿನ, ದಾವಣಗೆರೆ:ಕನ್ನಡ ಆಡಳಿತ ಭಾಷೆಯಾಗಬೇಕು ಎಂಬುದು ನಮ್ಮೆಲ್ಲರ ಬಹುಕಾಲದ ಬೇಡಿಕೆ. ಆದರೆ ಇವತ್ತಿಗೂ ಕನ್ನಡವನ್ನು ಆಡಳಿತ ಭಾಷೆಯಾಗಿ ಪರಿಪೂರ್ಣವಾಗಿ ತಂದುಕೊಳ್ಳ ಲಕ್ಕೆ ಆಗಿಲ್ಲ ಎಂಬ ಆತಂಕದಲ್ಲಿ ನಾವಿದ್ದೇವೆ ಎಂದು ಪ್ರಾಧ್ಯಾಪಕ ಡಾ.ಎ.ಬಿ ರಾಮಚಂದ್ರಪ್ಪನವರು ಎಚ್ಚರಿಸಿದರು.

ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿರುವ10 ನೇ ದಿನದ ಅಂತರ್ಜಾಲ ಮೂಲಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಡಳಿತ ಭಾಷೆಯಾಗಿ ಕನ್ನಡವನ್ನು ತರಬೇಕು ಎಂದು 1963 ರಿಂದ 2002 ರವರೆಗೂ ಒಟ್ಟು 25 ಸುತೋಲೆಗಳು ಸರ್ಕಾರದಿಂದ ಹೊರಬಿದ್ದಿವೆ. ಆದರೂ ಕೂಡ ಆಡಳಿತ ಭಾಷೆಯಾಗಿ ಕನ್ನಡವನ್ನು ಸಂಪೂರ್ಣವಾಗಿ ಇನ್ನೂ ಒಪ್ಪಿಕೊಂಡಿಲ್ಲ ಕಾರಣಗಳೇನು ಎಂದು ನೋಡಿದಾಗ ಕನ್ನಡ ನೆಲದಲ್ಲೇ ಕನ್ನಡವನ್ನು ಆಡಳಿತ ಭಾಷೆಯಾಗಿ ಮಾಡಲು ಇಷ್ಟೆಲ್ಲಾ ಹೋರಾಟಗಳನ್ನು ಮಾಡಬೇಕಾದ ಸಂದರ್ಭ ಬಂದೊದಗಿದೆ‌ ಎಂದರು.

ಕನ್ನಡ ಇಂದು ಬೇರೆ ಬೇರೆ ಆಯಾಮಗಳ ಗೆ ಎದುರಿಸುತ್ತಿರುವ ಸವಾಲುಗಳು ಏನು ಎಂಬುದನ್ನು ನೋಡಿದಾಗ, ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಕೂಡ ಒಂದು. ಪ್ರಾಚೀನ ಕವಿಗಳು ಕನ್ನಡವನ್ನು ಸಂಭ್ರಮದಿಂದ ಹಾಡಿಹೊಗಳಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯ ಕೂಡ ಆರಂಭಕ್ಕೆ ಅರುಣೋದಯ ಮತ್ತು ನವೋದಯ ಕಾಲಕ್ಕೆ ಅಭಿಮಾನದ ಸಾಧ್ಯತೆಗಳನ್ನು ಪ್ರಧಾನವಾಗಿ ಅಭಿವ್ಯಕ್ತಿಸಿದಂತಹ ಸಾಧ್ಯತೆಯನ್ನು ಗಮನಿಸಬಹುದು ಎಂದು ಹೇಳಿದರು.

ಇವತ್ತು ಕನ್ನಡ ಎದುರಿಸುತ್ತಿರುವ ಸವಾಲುಗಳೇನು?

ವಾಸ್ತವಿಕವಾಗಿ ಜಗತ್ತಿನ ಯಾವುದೇ ಭಾಷೆಗೂ, ಧರ್ಮಕ್ಕೂ ಸಂಬಂಧವಿಲ್ಲ. ಇರಬಾರದು. ಆದ್ದರಿಂದ ಕನ್ನಡವನ್ನು ಒಂದು ಜಾತ್ಯಾತೀತ ಧರ್ಮದಿಂದ ನೋಡುವಂತಹ ಒಂದು ಮನೋಧರ್ಮ ರೂಪಗೊಳ್ಳ ಬೇಕಾಗಿರುವುದು ಬಹಳ ಮುಖ್ಯವಾದುದಾಗಿದೆ.

ಕನ್ನಡವನ್ನು ಯಾವುದೋ ಒಂದು ಜನವರ್ಗಕ್ಕೆ ಕಟ್ಟಾಕಿ ನೋಡುವಂತಹ ಪರಿಕಲ್ಪನೆ ನಮ್ಮ ನಡುವೆ ಇದೆ. ಇದು ಒಂದು ಕಡೆಯಾದರೆ, ಇನ್ನೊಂದೆಡೆ ಕನ್ನಡ ಭಾಷೆಯೆಂದರೆ ರಾಜಕೀಯ ಗಡಿಗೆ ಸೀಮಿತಗೊಳಿಸುವಂತ ಮನಸ್ಸು ನಮ್ಮಗಳ ನಡುವೆ ರೂಪಗೊಳ್ಳುತ್ತಿದೆ. ಹಾಗಾಗಿ ಭಾಷೆಗೂ ರಾಜಕೀಯ ಗಡಿಗೂ ಸಂಬಂಧಗಳನ್ನು ಕಲ್ಪಿಸಬಾರದು ನಮ್ಮ ಕನ್ನಡವನ್ನು ನಾವುಅಭಿವೃದ್ಧಿಗೊಳಿಸಬೇಕಾಗುತ್ತದೆ. ಬೆಳೆಸಬೇಕಾಗುತ್ತದೆ ಎಂಬ ಸವಾಲುಗಳು ನಮ್ಮ ಮುಂದಿವೆ.

ಕನ್ನಡವನ್ನು ಯಾವುದೇ ಧರ್ಮದ ಮೂಲದಿಂದ ನೋಡುವ ಪರಿಕಲ್ಪನೆಯಿಂದ ನಾವು ಬಿಡುಗಡೆಹೊಂದಿ ಬೇಕಾಗಿದೆ. ಇಂದು ನಾವೂ ಬಹು ದೊಡ್ಡ ಸವಾಲನ್ನು ನಾವು ಎದುರಿಸುತ್ತಿದ್ದೇವೆ. ಅದೆಂದರೆ ಮಾಧ್ಯಮದ್ದು. ಕನ್ನಡ ಮಾಧ್ಯಮವಾಗಿ ನಾವು ಇವತ್ತಿಗೂ ಕೂಡಾ ಅದನ್ನು ಸಕ್ರಿಯವಾಗಿ ಜನಮಾನಸದಲ್ಲಿ ಬಿತ್ತಲಿಕ್ಕೆ ಸಾಧ್ಯವಾಗುತ್ತಿಲ್ಲವೆಂಬ ಆತಂಕ ಇತ್ತೀಚಿನ ದಶಮಾನಗಳಲ್ಲಿ ಆರಂಭವಾಗಿದೆ.

ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಇಂಗ್ಲಿಷ್ ಮಾಧ್ಯಮ ಶಾಲೆಗಳೇ ಹೆಚ್ಚಾಗುತ್ತಾ ಇವೆ. ಸರ್ಕಾರಗಳೂ ಕೂಡಾ ಪರೋಕ್ಷವಾಗಿ ಅದಕ್ಕೆ ಸಹಕಾರ ನೀಡುತ್ತಿದ್ದವೆಂದರೆ ತಪ್ಪಾಗಲಿಕ್ಕಿಲ್ಲ.

ಯಾವುದೇ ಭಾಷೆಯ ತಿಳುವಳಿಕೆ ನಮಗೆ ಬೇಕೆಂದಲ್ಲಿ ಇಂಗ್ಲೀಷು ಬೇಕು, ಇನ್ನೊಂದು ಭಾಷೆಯೂ ಬೇಕು. ಅದನ್ನು ಭಾಷೆಯಾಗಿ ಓದಬೇಕೇ ವಿನಃ ಮಾಧ್ಯಮವಾಗಿ ಓದುವುದಲ್ಲ.ಮಾಧ್ಯಮ ಕನ್ನಡದಲ್ಲೇ ಇರಬೇಕು.

ಪ್ರಜಾಪ್ರಭುತ್ವದ ಆಶಯಗಳು ಜನಮನಕ್ಕೆ ತಲುಪಬೇಕಾದರೆ ಶಿಕ್ಷಣ ಕೂಡ ಆಯಾ ಪ್ರದೇಶದ ಮಾತೃಭಾಷೆಯಲ್ಲಿ ಇರಬೇಕು. ಜನರಿಗೆ ಅದು ಅರಿವಿಗೆ ಬರಬೇಕು. ಆ ಕಾರಣಕ್ಕೆ ಕನ್ನಡ ಮಾಧ್ಯಮ ಎನ್ನುವುದು ಹೆಚ್ಚು ಹೆಚ್ಚಾಗಿ ನಮ್ಮಲ್ಲಿ ಸಾಧ್ಯವಾಗಿದೆ ಎಂದರೆ ಅಷ್ಟರ ಮಟ್ಟಿಗೆ ನಾವು ಪ್ರಜಾಪ್ರಭುತ್ವದ ಸಾಧ್ಯತೆಗಳನ್ನು ಯಶಸ್ವಿಗೊಳಿಸುತ್ತಿದ್ದೇವೆಂದೇ ಅರ್ಥ.

ಕನ್ನಡ ಮಾಧ್ಯಮವನ್ನು ನಾವು ಜನರ ನಡುವೆ ಹೊತ್ತೊಯ್ಯುವ ಕ್ರಮ ಹೇಗೆ ಎನ್ನುವುದನ್ನು ನಮ್ಮ ಆಡಳಿತಾರೂಢ ಸರ್ಕಾರಗಳು ಗಂಭೀರವಾಗಿ ಆಲೋಚನೆ ಮಾಡಬೇಕಾದ ಸಂದರ್ಭ ಇವತ್ತು ನಮ್ಮ ಕಣ್ಣೆದುರಿಗೆ ಇದೆ.

ಪ್ರಾದೇಶಿಕ ಭಾಷೆಗಳ ಮತ್ತು ನಮ್ಮ ನಡುವೆ ಒಂದು ದೊಡ್ಡ ತೊಡಕೆಂದರೆ, ಕನ್ನಡ ಎಂದರೆ ಒಂದೇ ಕನ್ನಡವಿಲ್ಲ. ಕನ್ನಡದೊಂದಿಗೆ ಹಲವು ಕನ್ನಡಗಳಿವೆ. ಧಾರವಾಡ ಕನ್ನಡ, ಮಂಗಳೂರು ಕನ್ನಡ, ಮೈಸೂರು ಕನ್ನಡ ಇರಬಹುದು ಇವುಗಳ ನಡುವೆ ಯಾವ ಕನ್ನಡ ಭಾಷೆಯನ್ನು ಆಡಳಿತ ಭಾಷೆಯಾಗಿ ಪ್ರಮಾಣಿಕೃತ ಭಾಷೆಯಾಗಿ ಸ್ವೀಕರಿಸಿದ್ದೇವೆ. ಪ್ರಮಾಣಿಕೃತ ಭಾಷೆಯೆಂದರೆ ಎಲ್ಲಾ ಜನರಿಗೆ ಯಾವ ಭಾಷೆ ಸರಳವಾಗಿ ಸಂವಹನವಾಗಬಲ್ಲದೋ ಅಂತಹದ್ದೊಂದು ಭಾಷೆಯನ್ನು ನಾವು ಪ್ರಮಾಣಿಕೃತ ಭಾಷೆಯೆಂದು ಸ್ವೀಕರಿಸಿದ್ದೇವೆ.

ಇದಕ್ಕಿಂತಲೂ ವಾಸ್ತವವಾಗಿ ಯಾವ ಪ್ರದೇಶದ ಜನರು ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಗೊಂಡಿರುವರೋ ಅವರ ಭಾಷೆಗೆ ಮಾನ್ಯತೆ ಇರುವಂತಹ ಸಾಧ್ಯತಯು ಕೂಡ ಹೆಚ್ಚಾಗಿದೆ. ನಮ್ಮಲ್ಲಿ ಹಲವು ಉಪ ಭಾಷೆಗಳು ಹಲವು ಸಾಮಾಜಿಕ ಭಾಷೆಗಳು ಅವಘನಗೊಳಗಾಗಿದ್ದವೆ. ಯಾವ ಜನಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಗೊಂಡಿದ್ದವೊ ಅವರ ಭಾಷೆಯನ್ನು ಆಸ್ವಾದಿಸುವಂತಹ, ಅದನ್ನೇ ಆಡಳಿತ ಕನ್ನಡವಾಗಿ ಸ್ವೀಕರಿಸುವ ಅಥವಾ ಅದನ್ನು ಪ್ರಮಾಣಿಕೃತ ಕನ್ನಡವಾಗಿ ಸ್ವೀಕರಿಸುವ ರಾಜಕೀಯ ಹುನ್ನಾರವೇ ನಮ್ಮ ನಡುವೆ ಇದೆ.

ಸಾಮಾಜಿಕ ಅಸಮಾನತೆಗಳು, ಆರ್ಥಿಕ ಅಸಮಾನತೆಗಳು, ಪ್ರಾದೇಶಿಕ ಅಸಮಾನತೆಗಳು ಇವು ಭಾಷಿಕ ನೆಲೆಗಳೊಳಗೂ ವ್ಯಕ್ತವಾಗುತ್ತಿರುತ್ತದೆ. ಹಾಗಾಗಿ ಭಾಷಿಕ ನೆಲೆಯ ತಾರತಮ್ಯತೆ ನಮ್ಮಲ್ಲಿ ಇಲ್ಲವಾಗಬೇಕಾದರೆ ನಮ್ಮ ನಡುವಿನ ತಾರತಮ್ಯಗಳನ್ನೂ ನಾವು ಹೋಗಲಾಡಿಸಬೇಕಾಗಿದೆ.

ಭಾಷಿಕ ಮೂಲಭೂತವಾದ ಹೆಚ್ಚು ಅಪಾಯಕಾರಿ. ಭಾಷಿಕ ಮೂಲಭೂತವಾದದ ಬೋನಿನಲ್ಲಿ ಇವತ್ತು ಕನ್ನಡ ನರಳುತ್ತಾ ಇದೆ ಆದ್ರಿಂದ ಬಿಡುಗಡೆಗೊಳಿಸಬೇಕಾದ್ದು ನಮ್ಮೆಲ್ಲರ ಮುಂದಿರುವ ಸವಾಲು.ವಿಶ್ವದ ಜ್ಞಾನವನ್ನು ಕನ್ನಡಕ್ಕೆ ತರುವ ಪ್ರಯತ್ನವನ್ನು ನಾವು ಮಾಡಬೇಕಾಗಿದೆ ಕನ್ನಡವನ್ನು ಒಂದು ಭಾಷೆಯಾಗಿ ಮಾಡಬೇಕಾದರೆ ನಾವು ಭಾಷಿಕ ಮೂಲಭೂತವಾದದಿಂದ ಹೊರಬಂದು ಜಗತ್ತಿನ ಎಲ್ಲಾ ಭಾಷೆಗಳನ್ನು ದಕ್ಕಿಸಿಕೊಳ್ಳಬೇಕಾಗಿದೆ. ಅಲ್ಲಿನ ಅರಿವನ್ನು ನಮ್ಮದಾಗಿ ಮಾಡಿಕೊಳ್ಳಬೇಕಾಗಿದೆ. ಆ ಮುಖೇನ ಕನ್ನಡವನ್ನು ನಾವು ನೀವು ಅಭಿವೃದ್ಧಿಗೊಳಿಸಲು ಸಾಧ್ಯ ಎಂದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ ವಾಮದೇವಪ್ಪ ನವರು ಕನ್ನಡಕ್ಕೆ ಕುತ್ತು ತಂದೊಡ್ಡುತ್ತಿರುವ ಅನ್ಯ ಭಾಷಿಕರ ಮಧ್ಯೆ ಕನ್ನಡ ಸಿಡಿದೇಳುತ್ತದೆ. ಕನ್ನಡ ನಾಡು ವೈಭವದ ನಾಡು. ನಿನ್ನೆಯನು ಮರೆತವನು ಇಂದು ಬದುಕಲಾರ.ನಾಳೆಯನ್ನು ಕಟ್ಟಲಾರ. ನಮ್ಮ ನಾಡು ನುಡಿಯ ಇತಿಹಾಸ ತಿಳಿಯಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಏಕೆಂದರೆ ಕನ್ನಡ ಕಟ್ಟುವ ಕೆಲಸ ನಮ್ಮಿಂದ ಆಗಬೇಕಾಗಿದೆ. ವಿವಿಧತೆಯಲ್ಲಿ ಏಕತೆ ಸಾಧಿಸುವ ನಾವು ಸುಂದರ ಭವ್ಯ ಕನ್ನಡದ ಬೆಳವಣಿಗೆಗೆ ಕಂಕಣಕಟ್ಟಿ ದುಡಿಯೋಣ ಎಂದು ಕರೆಕೊಟ್ಟರು.

ಆರಂಭದಲ್ಲಿ ಎಚ್ಕೆ ಸತ್ಯಭಾಮ ಇವರು ಸರ್ವರನ್ನು ಸ್ವಾಗತಿಸಿದರು ವೇದಿಕೆಯ ಶಾರದಾ ತಂಡದವರು ಸುಗಮ ಸಂಗೀತ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಕೆರೆಗಳ ಸಂರಕ್ಷಣೆ; ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಕ್ರಮ : ಡಿಸಿ ಗಂಗಾಧರಸ್ವಾಮಿ ಜಿ.ಎಂ

Published

on

ಸುದ್ದಿದಿನ,ದಾವಣಗೆರೆ:ಈ ವರ್ಷ ಬರಗಾಲದ ಲಕ್ಷಣಗಳಿರುವುದರಿಂದ ಜಲಚರಗಳ ರಕ್ಷಣೆ ಹಾಗೂ ಕುಡಿಯುವ ನೀರಿನ ಲಭ್ಯತೆಗೆ ಮೊದಲ ಆದ್ಯತೆ ನೀಡಬೇಕು. ಜಿಲ್ಲೆಯ ಕೆರೆಗಳಲ್ಲಿರುವ ನೀರಿನ ಪ್ರಮಾಣದ ಬಗ್ಗೆ ನಿಖರವಾದ ಅಧ್ಯಯನ ನಡೆಸಿ ವರದಿ ನೀಡುವಂತೆ , ಜಿಲ್ಲೆಯ ಕೆರೆಗಳ ಸಂರಕ್ಷಣೆ ಹಾಗೂ ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರುಗಳಿಗೆ ಜಿಲ್ಲಾಧಿಕಾರಿಗಳಾದ ಗಂಗಾಧರಸ್ವಾಮಿ ಜಿ.ಎಂ ಅವರು ಸೂಚನೆ ನೀಡಿದರು.

ಅವರು (ಏ.15) ಕೆರೆಗಳ ಸಂರಕ್ಷಣೆ, ಒತ್ತುವರಿ ತೆರವು ಹಾಗೂ ಮುಂಬರುವ ಬೇಸಿಗೆಯ ಕುಡಿಯುವ ನೀರಿನ ನಿರ್ವಹಣೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಒಟ್ಟು 533 ಕೆರೆಗಳ ಪೈಕಿ ಇನ್ನೂ 20 ಕೆರೆಗಳ ಒತ್ತುವರಿ ತೆರವು ಕಾರ್ಯ ಬಾಕಿ ಇದೆ. ಚನ್ನಗಿರಿ ತಾಲ್ಲೂಕಿನ 5 ಕೆರೆಗಳಾದ ಹರೇಗಂಗೂರು, ಸಾಗರಪೇಟೆ, ದಾಗಿನಕಟ್ಟೆ, ತ್ಯಾವಣಿಗ ಮತ್ತು ಸೂಳೆಕೆರೆ; ಹರಿಹರ ತಾಲ್ಲೂಕಿನ 7 ಕೆರೆಗಳಾದ ಹಿಂಡಸಗಟ್ಟ, ಜಿಗಳಿ, ಹಾಲಿವಾಣ, ಕಮಲಾಪುರ, ಗುಡ್ಡದತುಮ್ಮಿನಕಟ್ಟೆ, ಕುಂಬಳೂರು, ಯಲವಟ್ಟಿ; ದಾವಣಗೆರೆ ತಾಲ್ಲೂಕಿನ ಹೊನ್ನೂರು, ಹದಡಿ, ಮಾಳಗೊಂಡನಹಳ್ಳಿಯ 3 ಕೆರೆಗಳು ಹಾಗೂ ಹೊನ್ನಾಳಿ ತಾಲ್ಲೂಕಿನ ನೆಲಹೊನ್ನೆ, ಬನ್ನಿಕೊಡು, ಕುಂಬಳೂರು, ಸಾಸ್ವೆಹಳ್ಳಿ ಮತ್ತು ಬಲಮುರಿ ಕೆರೆಗಳನ್ನು ಶೀಘ್ರವಾಗಿ ಗುರುತಿಸಿ ತೆರವುಗೊಳಿಸಲು ಕ್ರಮವಹಿಸಬೇಕು. ತೆರವು ಕಾರ್ಯಾಚರಣೆಯನ್ನು ಛಾಯಾಚಿತ್ರ ಮತ್ತು ವಿಡಿಯೋ ಚಿತ್ರೀಕರಣದೊಂದಿಗೆ ಪಾರದರ್ಶಕವಾಗಿ ನಡೆಸಿ ಗ್ರಾಮ ಪಂಚಾಯತಿಗಳಿಗೆ ಅಧಿಕೃತವಾಗಿ ಹಸ್ತಾಂತರಿಸಬೇಕು ಎಂದು ತಿಳಿಸಿದರು.

ಚನ್ನಗಿರಿ ಹಾಗೂ ದಾವಣಗೆರೆ ತಾಲ್ಲೂಕಿನ ಹಲವು ಕೆರೆಗಳಿಗೆ ಕೊಳಚೆ ನೀರು ಸೇರುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಬಳಸುವ ಕೆರೆಗಳ ನೀರಿನ ಮಾದರಿಯನ್ನು ಪ್ರತಿ ತಿಂಗಳು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ವರದಿ ಸಲ್ಲಿಸಬೇಕು. ಯೋಗ್ಯವಾಗಿದ್ದರೆ ಮಾತ್ರ ಕುಡಿಯಲು ಬಳಸಬೇಕು ಎಂದರು.

ಕೆರೆಗಳಲ್ಲಿ ಹೂಳೆತ್ತುವ ಕಾರ್ಯವನ್ನು ಕೇವಲ ರೈತರಿಗೆ ಮಾತ್ರ ಸೀಮಿತಗೊಳಿಸಬೇಕು. ಅಕ್ರಮ ಮಣ್ಣು ಸಾಗಾಟಕ್ಕೆ ಆಸ್ಪದ ನೀಡದಂತೆ ಭೂ-ವಿಜ್ಞಾನ ಇಲಾಖೆ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲು ಹಾಗೂ ಮಣ್ಣಿನ ಮೂಲ ಪದರ ಹಾನಿಯಾಗದಂತೆ ಕ್ರಮವಹಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆರೆಗಳನ್ನು ಒತ್ತುವರಿಯಿಂದ ಶಾಶ್ವತವಾಗಿ ಮುಕ್ತಗೊಳಿಸಲು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಕೆರೆಗಳ ಬಫರ್ ವಲಯದಲ್ಲಿ ಸಸಿಗಳನ್ನು ನೆಟ್ಟು ಜೈವಿಕ ಬೇಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಮುಂಬರುವ ಮಳೆಗಾಲದ ವೇಳೆಗೆ ಸಸಿಗಳನ್ನು ನೆಡಲು ಸಿದ್ಧತೆ ಮಾಡಿಕೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ವ್ಯಾಪ್ತಿಯಲ್ಲಿ ಕೆರೆಗಳ ನೀರಿನ ಸಂಗ್ರಹಣಾ ಮಟ್ಟದ ಕುರಿತು ವಿವರ (ಮಾರ್ಚ್ 31 ಅಂತ್ಯಕ್ಕೆ)

ಪೂರ್ಣ ತುಂಬಿದ ಕೆರೆಗಳು: ಜಿಲ್ಲೆಯ ಒಟ್ಟು 08 ಕೆರೆಗಳು ಶೇ. 100 ರಷ್ಟು ಭರ್ತಿಯಾಗಿವೆ.

ಶೇ. 51 ರಿಂದ ಶೇ. 99 ರಷ್ಟು: ಒಟ್ಟು 47 ಕೆರೆಗಳಲ್ಲಿ ಉತ್ತಮ ನೀರಿನ ಸಂಗ್ರಹವಿದೆ.

ಶೇ. 31 ರಿಂದ ಶೇ. 50 ರಷ್ಟು: ಸುಮಾರು 164 ಕೆರೆಗಳು ಅರ್ಧದಷ್ಟು ನೀರಿನ ಮಟ್ಟವನ್ನು ಹೊಂದಿವೆ.

ಶೇ. 1 ರಿಂದ ಶೇ. 30 ರಷ್ಟು: ಜಿಲ್ಲೆಯ ಗರಿಷ್ಠ ಅಂದರೆ 250 ಕೆರೆಗಳಲ್ಲಿ ಕನಿಷ್ಠ ಪ್ರಮಾಣದ ನೀರು ಸಂಗ್ರಹವಾಗಿದೆ.

ಶೂನ್ಯ ಮಟ್ಟ (ತುಂಬಿರದ ಕೆರೆಗಳು): ಪ್ರಸ್ತುತ ಜಿಲ್ಲೆಯ 64 ಕೆರೆಗಳಲ್ಲಿ ನೀರಿನ ಸಂಗ್ರಹವಿಲ್ಲದೆ ಖಾಲಿಯಾಗಿವೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರಣ್ಣನವರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್‌, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರುಗಳು, ಬೃಹತ್‌ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು , ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಯೋವೃದ್ಧರ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಅಧ್ಯಯನ

Published

on

ಸುದ್ದಿದಿನ,ದಾವಣಗೆರೆ:ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ವಯೋವೃದ್ಧರ ಕುರಿತು ಬುಧವಾರ ಸಾಮಾಜಿಕ ಸಮೀಕ್ಷೆ ನಡೆಸಿದರು.

ನಗರದ ತರಳಬಾಳು ಬಡಾವಣೆಯ ಆಯೂಷ್ ಚಾರಿಟೇಬಲ್ ಟ್ರಸ್ಟ್ ನ ಆರೈಕೆ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದರು. ಸಂದರ್ಶನದ ವೇಳೆ ವೃದ್ಧರ ಸಮಸ್ಯೆಗಳನ್ನು ಆಲಿಸಿದ ಕೆಲ ವಿದ್ಯಾರ್ಥಿಗಳು ಭಾವುಕರಾದರು.

ಈ ಸಂದರ್ಭದಲ್ಲಿ ವಿಭಾಗದ ಅಧ್ಯಾಪಕರುಗಳಾದ ಡಾ. ಶಿವಣ್ಣ ಹೆಚ್. ಎಸ್, ಡಾ. ಸುರೇಶ್ ಹೆಚ್. ಎನ್, ಡಾ. ಮಾದನಾಯ್ಕ ಹೆಚ್ ಇವರು ಮಾರ್ಗದರ್ಶನ ನೀಡಿದ್ದು, ಪ್ರಾಂಶುಪಾಲರಾದ ಬಸವರಾಜ್ ಬಿ ತಹಸೀಲ್ದಾರ್ ಮತ್ತು ಆಶ್ರಮದ ಅರ್ಜುನ್, ವಿರೇಶ್ ಅವರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಮಾನತೆಯ ಸಮಾಜ ನಿರ್ಮಾಣಕ್ಕೆ ಸಂವಿಧಾನವೇ ಭದ್ರ ಬುನಾದಿ: ಗಂಗಾಧರಸ್ವಾಮಿ ಜಿ.ಎಂ

Published

on

ಸುದ್ದಿದಿನ,ದಾವಣಗೆರೆ:ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟಿರುವ ಮಹಾನ್ ಶಕ್ತಿ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ಅಭಿಪ್ರಾಯಪಟ್ಟರು.

ಅವರು ಇಂದು (ಎ.14) ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ದಾವಣಗೆರೆ ಮಹಾನಗರ ಪಾಲಿಕೆ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಪಾಟಿಸಿ ನಂತರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

3000 ವರ್ಷಗಳ ಇತಿಹಾಸವಿರುವ ನಮ್ಮ ಸಮಾಜದಲ್ಲಿ, ಬ್ರಿಟಿಷರ ಆಳ್ವಿಕೆಯ ನಂತರವೂ ದೇಶದ ಸಮಗ್ರ ಜನತೆಗೆ ಸಮಾನತೆಯನ್ನು ಕಲಿಸಿಕೊಟ್ಟವರು ಬಾಬಾಸಾಹೇಬ್ ಅಂಬೇಡ್ಕರ್. ಮನುಷ್ಯನಿಗೆ ಮೆದುಳು ಮತ್ತು ಆತ್ಮ ಎಷ್ಟು ಮುಖ್ಯವೋ, ದೇಶಕ್ಕೆ ಸಂವಿಧಾನವು ಅಷ್ಟೇ ಮುಖ್ಯ. ವಿಶೇಷವಾಗಿ 32ನೇ ವಿಧಿಯು ಸಂವಿಧಾನದ ಆತ್ಮವಿದ್ದಂತೆ ,ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದಿದ್ದು, ಅವರ ಬೌದ್ಧಿಕ ಸಾಮರ್ಥ್ಯವೇ ಇಂದಿನ ಸಂವಿಧಾನಕ್ಕೆ ಬಲ ತುಂಬಿದೆ ಎಂದು ಅವರು ವಿವರಿಸಿದರು.

ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದಕ್ಕಷ್ಟೇ ಶಿಕ್ಷಣ ಪಡೆಯಬಾರದು. ಬದಲಾಗಿ, ಸ್ವತಂತ್ರ ಆಲೋಚನೆ ಮತ್ತು ಸಮಾಜದ ಹಕ್ಕುಗಳನ್ನು ಕಾಪಾಡಿಕೊಳ್ಳುವ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಅಂಬೇಡ್ಕರ್ ಮತ್ತು ಅಬ್ದುಲ್ ಕಲಾಂ ಅವರಂತಹ ಮಹನೀಯರು ನಮಗೆ ಪ್ರೇರಣೆಯಾಗಬೇಕು. ಬದ್ಧತೆ ಮತ್ತು ಪ್ರಯತ್ನವಿದ್ದರೆ ಯಾರೂ ಏನನ್ನು ಬೇಕಾದರೂ ಸಾಧಿಸಬಹುದು ಎಂದು ತಿಳಿಸಿದರು.

ನಾವೆಲ್ಲರು ಸಂವಿಧಾನವನ್ನು ಕಡ್ಡಾಯವಾಗಿ ಓದಿ ತಿಳಿದುಕೊಳ್ಳಬೇಕು, ಕನಿಷ್ಠ 12 ರಿಂದ 18 ರವರೆಗಿನ ಪರಿಚ್ಛೇದಗಳನ್ನು ಕಡ್ಡಾಯವಾಗಿ ತಿಳಿದುಕೊಂಡಿರಬೇಕು. ಹಿಂದೆ ವಚನಕಾರರು ರಚಿಸಿದ ವಚನೆಗಳೆ ಸಂವಿಧಾನದ ಆಶಯಗಳು ಆಗಿವೆ, ವಿದೇಶಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಇಲ್ಲ, ಆದರೆ ಭಾರತದಲ್ಲಿ ಸ್ವಾತಂತ್ರ್ಯ ನಂತರ ಮಹಿಳೆಯರಿಗೆ ಸಮಾನತೆಯನ್ನು ಕಲ್ಪಿಸಲಾಗಿದೆ, ಜಿಲ್ಲೆಯ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ವೈಚಾರಿಕ ಜಾಗೃತಿ ಮೂಡಿಸಲು ಅಂಬೇಡ್ಕರ್, ಬಸವಣ್ಣ ಮತ್ತು ಗಾಂಧೀಜಿಯವರ ತತ್ವಗಳ ಬಗ್ಗೆ ಉಪನ್ಯಾಸಗಳನ್ನು ಹಮ್ಮಿಕೊಳ್ಳಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲ್ ರಾವ್ ಅವರು “ಶಿಕ್ಷಣವು ಸಮಾಜದ ಪ್ರಗತಿಗೆ ಪ್ರಮುಖ ಅಸ್ತ್ರ”. ಕಡು ಬಡತನ ಮತ್ತು ಸಾಮಾಜಿಕ ಅಸಮಾನತೆಯ ನಡುವೆಯೂ ಅಂಬೇಡ್ಕರ್ ಅವರು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಬದಲಾವಣೆ ತಂದರು. ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದಾದ ಭಾರತದ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ಅವರ ಶ್ರಮವನ್ನು ನಾವು ಮರೆಯುವಂತಿಲ್ಲ, ಸಂವಿಧಾನವು ಕೇವಲ ಕಾನೂನಿನ ದಾಖಲೆಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಬದುಕಿನ ಸ್ಫೂರ್ತಿ ಎಂದರು.

ಸಮಾಜದಲ್ಲಿನ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ಬಾಬಾಸಾಹೇಬರು ಪಟ್ಟ ಶ್ರಮ ಹಾಗೂ ಅವರು ಬರೆದ ‘ಜಾತಿ ವಿನಾಶ’ ಕೃತಿಯ ಮಹತ್ವದ ಬಗ್ಗೆ ತಿಳಿಸಿದರು. ಹುಲಿ ಹಾಲಿನ್ನು ಕುಡಿದವನು ಎಷ್ಟು ಬಲಶಾಲಿಯಾಗಿರುತ್ತೇನೋ ಶಿಕ್ಷಣ ಪಡೆದವನು ಅಷ್ಟೇ ಬಲಶಾಲಿಯಾಗುತ್ತಾನೆ. ಪ್ರತಿಯೊಬ್ಬರೂ ಶಿಕ್ಷಣಕ್ಕೆ ಒತ್ತು ನೀಡಿ, ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವಂತೆ ಕರೆ ನೀಡಿದರು.

ಚುನಾವಣೆ ನೀತಿ ಸಂಹಿಗೆ ಜಾರಿಯಲ್ಲಿರುವ ಹಿನ್ನೆಲೆಯ್ಲಲಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು, ಇದೇ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯನ್ನು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಅವರು ಬೋದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬೆಳ್ಳಿರಥಕ್ಕೆ ಚಾಲನೆ ನೀಡಿದರು. ಬೆಳ್ಳಿ ರಥವು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಗಾಂಧಿವೃತ್ತ ಜಯದೇವ ವೃತ್ತದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೇಖರ್ ಹೆಚ್.ಟಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಮಹಾನಗರ ಪಾಲಿಕೆ ಆಯುಕ್ತೆ ಮತ್ತು ಉಪಕಾರ್ಯದರ್ಶಿ ಮಮತ ಗೌಡರ್, ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending