ದಿನದ ಸುದ್ದಿ
ಬ್ಯಾಂಕುಗಳಲ್ಲಿ ಕನ್ನಡ..!
- ಎನ್.ಟಿ.ಎರ‍್ರಿಸ್ವಾಮಿ, ವಿಶ್ರಾಂತ ವಿಭಾಗೀಯ ಪ್ರಬಂಧಕರು,ಕೆನರಾ ಬ್ಯಾಂಕ್,ದಾವಣಗೆರೆ
ಮನುಷ್ಯ ಮನುಷ್ಯರ ನಡುವೆ ಉತ್ತಮ ಬಾಂಧವ್ಯ ಏರ್ಪಡಲು, ಒಬ್ಬರು ಮತ್ತೊಬ್ಬರನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಅವರಾಡುವ ಭಾಷೆ ಮಹತ್ತರ ಪಾತ್ರವಹಿಸಬಲ್ಲದು. ಅದು ಸರಳವಾಗಿ, ಸಹಜವಾಗಿ ಇಬ್ಬರಿಗೂ ಅರ್ಥವಾಗುವಂತಿರಬೇಕು. ಅದು ಸಮೂಹದ ಭಾಷೆಯಾದಾಗ, ಸಮಾಜ ಮತ್ತು ಸಂಸ್ಕೃತಿಯನ್ನು ಕಟ್ಟುವಲ್ಲಿಯೂ ಅದು ಪ್ರಭಾವ ಉಂಟು ಮಾಡಬಲ್ಲದು.
ಮಾನವ ವಿಕಾಸದ ಹಾದಿಯಲ್ಲಿ ಭಾಷೆ ಉಂಟು ಮಾಡುವ ಸಂಚಲನವನ್ನು ನಾವು ಯುಗ ಯುಗಗಳಿಂದಲೂ ಗಮನಿಸುತ್ತಾ ಬಂದಿದ್ದೇವೆ. ಹಾಗೆ ನೋಡಿದರೆ ಪ್ರಪಂಚದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿಯೇ ಪ್ರಮುಖವಾದ ಭಾಷೆ ಕನ್ನಡ. ಇಲ್ಲಿನ ನೆಲ-ಜಲ, ಗುಡ್ಡ-ಬೆಟ್ಟ, ಕಾಡು-ಮೇಡು, ಜನ-ಜಾನುವಾರುಗಳ ಮೇಲೆ ಸಾವಿರಾರು ವರ್ಷಗಳಿಂದ ಕನ್ನಡ ಭಾಷೆ ಮಾಡುತ್ತಾ ಬಂದಿರುವ ಮೋಡಿ ಅಮೋಘವಾದುದು.
ಕನ್ನಡಕ್ಕೆ ಯಾವ ರೀತಿಯ ಪ್ರಾಚೀನತೆಯಿದೆಯೋ, ಅದೇ ರೀತಿಯ ಪ್ರಾಚೀನತೆಯೂ ಕರ್ನಾಟಕದ ಬ್ಯಾಂಕಿAಗ್ ಕ್ಷೇತ್ರಕ್ಕೂ ಇದೆ ಎಂಬುದು ಒಂದು ವಿಶೇಷ ಹಾಗೂ ಹೆಗ್ಗಳಿಕೆಯ ಸಂಗತಿ. ದೇಶದಲ್ಲಿಯೇ ಪ್ರಥಮವಾಗಿ ಸಹಕಾರಿ ಬ್ಯಾಂಕುಗಳು. ಖಾಸಗಿ ಬ್ಯಾಂಕುಗಳು, ರಾಷ್ಟ್ರೀಕೃತವಾದ ಬ್ಯಾಂಕುಗಳು, ರಾಷ್ಟ್ರೀಕರಣವಾಗಬಹುದಾದ ಬ್ಯಾಂಕುಗಳು, ಗ್ರಾಮೀಣ ಬ್ಯಾಂಕುಗಳು ಉದಯವಾಗಿದ್ದು ಪ್ರಥಮವಾಗಿ ಕನ್ನಡದ ನೆಲದಲ್ಲಿಯೇ ಎಂಬುದನ್ನು ನಾವು ಮರೆಯಲಾಗದು.
ಹಿಂದೆ ಕನ್ನಡ ಭಾಷೆಯನ್ನು ಬ್ಯಾಂಕುಗಳಲ್ಲಿ ಬಳಸುವ ಬಗ್ಗೆ ಯಾವುದೇ ತಂಟೆ-ತಕರಾರು ಹಾಗೂ ತೊಂದರೆಗಳು ಇರಲಿಲ್ಲ. ಕನ್ನಡ ನೆಲದಲ್ಲಿಯೇ ಹುಟ್ಟಿ ಬೆಳೆದ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ವಿಜಯ ಬ್ಯಾಂಕು, ಕಾರ್ಪೋರೇಷನ್ ಬ್ಯಾಂಕು, ಯಥೇಚ್ಛವಾಗಿ ಕನ್ನಡವನ್ನು ಬಳಸುತ್ತಿದ್ದವು ಎಂಬುದಕ್ಕೆ ಅನೇಕ ಉದಾಹರಣೆಗಳಿವೆ.
ಅದೂ ಅಲ್ಲದೆ ಭಾರತೀಯ ಸ್ಟೇಟ್ ಬ್ಯಾಂಕ್, ಐ.ಸಿ.ಐ.ಸಿ.ಐ. ನಂತಹ ಬ್ಯಾಂಕುಗಳು ಕೂಡ ಪ್ರಾರಂಭಿಕ ಹಂತದಲ್ಲಿ ಕನ್ನಡದಲ್ಲಿಯೇ ಹೆಚ್ಚು ವ್ಯವಹರಿಸುವ ಪರಿಪಾಟವನ್ನು ಹೊಂದಿದ್ದವು ಎಂದರೆ ನಮಗೆ ಆಶ್ಚರ್ಯವಾಗದಿರದು. ಆದರೆ ಖಾಸಗೀಕರಣ, ಆಧುನೀಕರಣ, ಯಂತ್ರೀಕರಣ, ಜಾಗತೀಕರಣದ ಪ್ರಭಾವಕ್ಕೆ ಸಿಲುಕಿದ ಬ್ಯಾಂಕುಗಳು ಹಂತ ಹಂತವಾಗಿ ಸ್ಥಳೀಯ ಭಾಷೆಯಿಂದ ವಿಮುಖವಾಗುವ ಸನ್ನವೇಶ ಎದುರಾಯಿತು.
ಇಂದು ಗಣಕೀಕರಣದ ಉಚ್ಛ್ರಾಯ ಸ್ಥಿತಿಯಲ್ಲಿರುವ ಬ್ಯಾಂಕುಗಳು ಮನುಷ್ಯ-ಮನುಷ್ಯರ ನಡುವೆ ಮಾತನಾಡುವ ಬದಲು ಯಂತ್ರ-ಯಂತ್ರಗಳ ನಡುವೆ ಮಾತನಾಡುವ ಹಂತಕ್ಕೆ ಬಂದು ತಲುಪಿವೆ. ಆ ಯಂತ್ರಗಳ ಭಾಷೆ ಕನ್ನಡವಾಗಿಲ್ಲ, ಬ್ಯಾಂಕಿನವರ ಭಾಷೆಯೂ ಕನ್ನಡವಾಗುತ್ತಿಲ್ಲ, ಬೇರಾವುದೋ ಭಾಷೆ ಅಂದರೆ ಹಿಂದಿ ಮತ್ತು ಇಂಗ್ಲೀಷ್ ಅಲ್ಲಿ ರಾರಾಜಿಸುವಂತಾಗಿದೆ ಎಂಬುದು ಒಂದು ವಿಪರ್ಯಾಸ.
ನಮಗೆಲ್ಲ ತಿಳಿದಿರುವಂತೆ ಬ್ಯಾಂಕುಗಳಲ್ಲಿನ ದೈನಂದಿನ ವ್ಯವಹಾರ ಗ್ರಾಹಕನಿಗೆ ಅರ್ಥವಾಗುವ ಸ್ಥಳೀಯ ಭಾಷೆಯಲ್ಲಿ ನಡೆದಾಗ ಮಾತ್ರ ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ಅವರದೇ ಭಾಷೆಯಲ್ಲಿ ವ್ಯವಹರಿಸಿದಾಗ ಮಾತ್ರ ಹೆಚ್ಚಿನ ಪ್ರಯೋಜನ ಆಗಬಲ್ಲದು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಸರ್ಕಾರದ ಆಡಳಿತ ಭಾಷೆಯೂ ಕನ್ನಡವೇ ಹೌದು. ನೆಲದ ಭಾಷೆಯಲ್ಲಿಯೇ ವ್ಯವಹರಿಸುವುದು ಎಲ್ಲರ ವ್ಯವಹಾರಿಕ ಧರ್ಮವಾಗಬೇಕು. ಇದರಿಂದ ಬ್ಯಾಂಕುಗಳೂ ಹೊರತೇನಲ್ಲ. ಅಲ್ಲದೆ ಕನ್ನಡದ ಭಾಷೆಗೆ ಸಂವಿಧನಾತ್ಮಕ ಚೌಕಟ್ಟಿದೆ. ಎಲ್ಲ 28 ಭಾಷೆಗಳೂ ರಾಷ್ಟç ಭಾಷೆಗಳೇ ಸ್ಥಳೀಯ ಭಾಷೆ ಬಳಕೆಗೆ ಜನರಿಗೆ ಸಂಪೂರ್ಣ ಹಕ್ಕಿದೆ ಎಂಬುದನ್ನು ಸಂವಿಧಾನ ಪ್ರತಿಪಾದಿಸುತ್ತದೆ.
ಈ ನಿಟ್ಟಿನಲ್ಲಿ ದಿಟ್ಟ ಕ್ರಮಗಳನ್ನು ಪ್ರಜೆಗಳು, ಪ್ರಭುಗಳು ಪಾಲಿಸುವ ಅನಿವಾರ್ಯತೆ ಈಗ ಹೆಚ್ಚಾಗಿದೆ. ಆದರೆ ಅದಾಗುತ್ತಿಲ್ಲ. ಬದಲಾಗಿ ಹಿಂದಿ, ಇಂಗ್ಲೀಷುಗಳನ್ನು ಜನರ ಮೇಲೆ ಹೇರಲಾಗುತ್ತಿದೆ ಎಂಬ ಭಾವನೆ ಈಗ ಎಲ್ಲೆಲ್ಲೂ ಒಡಮೂಡಿದೆ. ಬ್ಯಾಂಕುಗಳು ತ್ರಿಭಾಷ ಸೂತ್ರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರಿಜರ್ವ್ ಬ್ಯಾಂಕಿನ ಆದೇಶವಿದ್ದರೂ ಕನ್ನಡದ ಭಾಷೆ ಮೂರನೆಯ ಹಂತಕ್ಕೆ ತಳ್ಳಲ್ಪಡುತ್ತಿದೆ ಎಂದು ಯಾರಿಗಾದರೂ ಅರ್ಥ ಆಗುತ್ತಿದೆ. ಬ್ಯಾಂಕಿನ ಸಿಬ್ಬಂದಿಯದೂ ಕೂಡ ದೊಡ್ಡ ಸಮಸ್ಯೆಯೇ.
ಇತ್ತೀಚಿನ ದಿನಗಳಲ್ಲಿ ಕನ್ನಡಿಗರನ್ನು ಬ್ಯಾಂಕುಗಳಲ್ಲಿ ದುರ್ಬಿನು ಹಾಕಿ ಹುಡುಕುವ ಅಪಾಯ ಎದುರಾಗಿದೆ. ನೂರು ಜನ ಹೊಸದಾಗಿ ನೌಕರಿಗೆ ಸೇರಿದರೆ ಅದರಲ್ಲಿ ಬೆರೆಳೆಣಿಕೆಯಷ್ಟು ಜನ ಮಾತ್ರ ಕನ್ನಡ ಬಲ್ಲವರು. ಉಳಿದ ಬಹುಪಾಲು ಬ್ಯಾಂಕು ನೌಕರಿ ಅನ್ಯ ಭಾಷಿಕರ ಪಾಲಾಗುತ್ತಿವೆ. ಅವರಿಗೆ ಇಲ್ಲಿನ ಸಂಸ್ಕೃತಿ, ನಡೆ-ನುಡಿ, ನೆಲದ, ಇಲ್ಲಿನ ಜನರ ಸಂಪ್ರೀತಿ ಯಾವುದೂ ಬೇಡವಾಗಿದೆ ಎಂಬ ಪರಿಸ್ಥಿತಿ. ಕನ್ನಡದ ಜನರು ಎಚ್ಚೆತ್ತುಕೊಳ್ಳದ ಹೊರತು ಇಂತಹ ಅಪಾಯಗಳಿಗೆ ನಮಗೆ ಉತ್ತರ ಸಿಗದು.
ಕನ್ನಡವನ್ನು ಬ್ಯಾಂಕುಗಳಲ್ಲಿ ಬಳಸದೇ ಇರಲು ಯಾವ ಸಂವಿಧಾನಾತ್ಮಕ ಬಿಕ್ಕಟ್ಟುಗಳೂ ಇಲ್ಲ. ಆದರೆ ಬ್ಯಾಂಕುಗಳಿಗೆ ಹಾಗೂ ಜನರಿಗೆ ಕನ್ನಡ ಬಳಕೆಯ ಬಗ್ಗೆ ಬದ್ಧತೆಯ ಕೊರತೆ ಇದೆ ಎಂದು ನನಗೆ ಅನ್ನಿಸುತ್ತಿದೆ. 40ವರ್ಷಗಳ ಸುದೀರ್ಘ ಬ್ಯಾಂಕ್ ಸೇವೆಯ ಅವಧಿಯಲ್ಲಿ ನಾನು ಕಂಡುಕೊಂಡ ಒಂದು ಸರಳ ಸತ್ಯವೆಂದರೆ ಬ್ಯಾಂಕು ಎಂದಾಕ್ಷಣ ಜನರು ಅನ್ಯ ಭಾಷೆಯ ಕಡೆ ಮುಖಮಾಡಿ ನಿಲ್ಲುವಂತಹುದು ! ನಾವು ಇದರಿಂದ ಹೊರಬರಬೇಕಿದೆ. ಅನೇಕ ಬ್ಯಾಂಕುಗಳು ಕನ್ನಡವನ್ನು ಬಳಸಲು ಹಲವಾರು ಉಪಕ್ರಮಗಳನ್ನೂ ಕೈಗೊಂಡಿವೆ.
ಆದರೆ ಅಂತಹ ಉಪಕ್ರಮಗಳನ್ನು ಸಿಬ್ಬಂದಿ, ಅಧಿಕಾರಿ ಹಾಗೂ ಜನಸಾಮಾನ್ಯರು ಬಳಸದೇ ಹೋದಲ್ಲಿ ಅವು ತುಕ್ಕು ಹಿಡಿಯಬಹುದು ಅಷ್ಟೇ. ಕನ್ನಡವನ್ನು ಬ್ಯಾಂಕುಗಳಲ್ಲಿ ಸುಲಲಿತವಾಗಿ ಬಳಸಲು ಬ್ಯಾಂಕು ಹಾಗೂ ಗ್ರಾಹಕ ಮಹೋದಯರು ಸಮ ಸಮನಾಗಿ ಜವಾಬ್ದಾರಿ ಹೊತ್ತಾಗ ಮಾತ್ರ ಭಾಷೆಯ ಬಳಕೆ ಹಸನಾಗಬಲ್ಲದು.
ಬ್ಯಾಂಕುಗಳಲ್ಲಿ ಕನ್ನಡವನ್ನು ಸಮರ್ಥವಾಗಿ ಬಳಸಲು ಇರುವ ಮಾರ್ಗೋಪಾಯಗಳನ್ನು ಇಲ್ಲಿ ಚಿಂತಿಸಲಾಗಿದೆ.
- ಜನಸಾಮಾನ್ಯರಿಗೆ ಬ್ಯಾಂಕಿನ ಎಲ್ಲ ಸೌಲಭ್ಯಗಳು ಸರಳವಾಗಿ, ಸುಲಭವಾಗಿ ದೊರೆಯುವಂತಾಗಲು ಎಲ್ಲ ಮಾಹಿತಿಯನ್ನು ಕನ್ನಡದಲ್ಲಿಯೇ ಮುದ್ರಿಸಿ ಒದಗಿಸುವುದು.
- ಉಳಿತಾಯ, ಸಾಲ ಮರುಪಾವತಿ, ಡಿಡಿ, ನೆಫ್ಟ್, ಆರ್‌ಟಿಜಿಎಸ್ ಠೇವಣಿ ಮಾಡುವ ಚಲನ್ ಮುಂತಾದವನ್ನು ಕನ್ನಡದಲ್ಲಿಯೂ ಕಡ್ಡಾಯವಾಗಿ ದೊರೆಯುವಂತೆ ಮಾಡುವುದು.
- ಕೃಷಿ ಸಾಲ, ಬಂಗಾರ ಸಾಲ, ಮುದ್ರಾಯೋಜನೆ, ಸಣ್ಣ ವ್ಯಾಪಾರ, ಸ್ವಸಹಾಯ ಸಂಘಗಳಿಗೆ ಕೊಡ ಮಾಡುವ ಸಾಲ ಮುಂತಾದ ಸಾಲ ಯೋಜನೆಗಳ ಅರ್ಜಿ ನಮೂನೆಗಳು ಕನ್ನಡದಲ್ಲಿಯೂ ಮುದ್ರಿಸಿಹಂಚುವುದು.
- ಎಲ್ಲ ಎಟಿಎಂ ಯಂತ್ರಗಳಲ್ಲಿನ ವ್ಯವಹಾರಿಕ ಸೂಚನೆಗಳನ್ನು ಕನ್ನಡದಲ್ಲಿಯೇ ಕಡ್ಡಾಯವಾಗಿ ಪ್ರದರ್ಶಿಸುವುದು.
- ಜನಧನ್ ಖಾತೆ, ಸರಳ ಉಳಿತಾಯ ಖಾತೆ, ಚಾಲ್ತಿ ಖಾತೆ, ಠೇವಣಿ ಖಾತೆಗಳ ಅರ್ಜಿ ನಮೂನೆಗಳನ್ನು ತಪ್ಪದೇ ಕನ್ನಡದಲ್ಲಿ ಮುದ್ರಿಸಿ ಬಳಸುವುದು.
- ಸಾಲ ಮಸೂಲಾತಿಗಾಗಿ ಬ್ಯಾಂಕುಗಳು ನೀಡುವ ತಗಾದೆ ನೋಟೀಸು ಕನ್ನಡದಲ್ಲಿ ನೀಡಿದರೆ ಒಳಿತು. ಇದರಿಂದ ಗ್ರಾಹಕ ತನ್ನದೇ ಭಾಷೆಯಲ್ಲಿ ವಿಷಯ ತಿಳಿಯುವುದರ ಮೂಲಕ ತಕ್ಷಣ ಸ್ವಂದಿಸಲು ಸಾಧ್ಯವಾಗಬಲ್ಲದು.
- ಬ್ಯಾಂಕಿನ ದೈನಂದಿಕ ವ್ಯವಹಾರದಲ್ಲಿ ಬಳಸುವ ಸೀಲುಗಳಲ್ಲಿ ಕನ್ನಡದ ಹೆಸರುಗಳು ಬಳಕೆಯಾಗುವಂತೆ ಕ್ರಮ ವಹಿಸುವುದು.
- ಬ್ಯಾಂಕಿನ ಒಳ ಆವರಣದಲ್ಲಿ ಇರುವ ಎಲ್ಲ ಸೂಚನಾ ಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವುದು.
- ಬ್ಯಾಂಕಿನ ಹೊರ ಆವರಣದಲ್ಲಿ ಇರುವ ದೊಡ್ಡ ಬೋರ್ಡ್ಗಳಲ್ಲಿ ದೊಡ್ಡದಾಗಿಯೇ ಕನ್ನಡವನ್ನು ಬರೆಸುವುದು. ಕಾನೂನಾತ್ಮಕವಾಗಿ ಶೇಕಡಾ60% ಕ್ಕಿಂತ ಹೆಚ್ಚು ಕನ್ನಡವನ್ನು ಅಲ್ಲಿ ಬಳಸಬೇಕೆಂಬುದನ್ನು ಕಡ್ಡಾಯವಾಗಿ ಬಳಸುವುದು.
- ಬ್ಯಾಂಕ್ ಅಧಿಕಾರಿಗಳು, ವ್ಯವಸ್ಥಾಪಕರು ಮುಂತಾದವರ ಪದನಾಮದ ಫಲಕಗಳನ್ನು ಕನ್ನಡದಲ್ಲಿಯೇ ಬರೆಸುವುದು.
- ಅನ್ಯಭಾಷಿಕ ಅಧಿಕಾರಿ / ಸಿಬ್ಬಂದಿ ಇದ್ದಲ್ಲಿ ನಿರ್ದಿಷ್ಟ ಗಡುವಿನ ಒಳಗಾಗಿ ಅವರು ಕನ್ನಡವನ್ನು ಕಡ್ಡಾಯವಾಗಿ ಕಲಿಯುವಂತಹ ವಾತಾವರಣ ನಿರ್ಮಿಸುವುದು.
- ಬ್ಯಾಂಕಿನ ಎಲ್ಲ ಶಾಖೆಗಳಲ್ಲಿ “ಕನ್ನಡ ಘಟಕ / ಕನ್ನಡ ಜಾಗೃತಿ ಸಮಿತಿ” ಯನ್ನು ತೆರೆಯುವುದು. ಘಟಕ/ ಸಮಿತಿಯ ಮೂಲಕ ನಿರಂತರವಾಗಿ ಕನ್ನಡದ ಚಟುವಟಿಕೆಗಳನ್ನು ನಡೆಸುವುದು.
- ಶಾಖೆ ನೀಡುವ ಜಾಹೀರಾತು ಪ್ರಕಟಣೆ, ಹರಾಜು ನೋಟೀಸು ಮುಂತಾದವನ್ನು ಕನ್ನಡದಲ್ಲಿಯೂ ತಪ್ಪದೇ ನೀಡುವುದು.
- ಬ್ಯಾಂಕಿನ ಸಿಬ್ಬಂದಿ ಗ್ರಾಹಕರೊಂದಿಗೆ ಹೆಚ್ಚು ಹೆಚ್ಚಾಗಿ ಕನ್ನಡದಲ್ಲಿಯೇ ವ್ಯವಹರಿಸಬಹುದು /ಮಾತನಾಡಬಹುದು. ಅದರಿಂದ ಗ್ರಾಹಕರಿಗೆ ಬ್ಯಾಂಕಿನ ಬಗ್ಗೆ, ಅಂತಹ ಅಧಿಕಾರಿಯ ಬಗ್ಗೆ ಆತ್ಮೀಯ ಭಾವನೆ ಮೂಡಬಲ್ಲದು.
- ಕನ್ನಡದ ಪತ್ರಕ್ಕೆ ಕನ್ನಡದಲ್ಲಿಯೇ ಉತ್ತರಿಸುವ ಬದ್ಧತೆಯನ್ನು ಬೆಳೆಸಿಕೊಳ್ಳುವುದು. ಅಂತೆಯೇಗ್ರಾಹಕರು ಕೂಡ ಕನ್ನಡದಲ್ಲಿನ ಉತ್ತರಕ್ಕಾಗಿ ಒತ್ತಾಯಿಸುವುದು.
- ಎಲ್ಲ ಸಾಮಾಜಿಕ ಸುರಕ್ಷತಾ ಯೋಜನೆಗಳ ಅರ್ಜಿಗಳನ್ನು ಕನ್ನಡದಲ್ಲಿಯೇ ನೀಡುವುದು.
- ಪಾಸ್‌ಬುಕ್‌ಗಳಲ್ಲಿ ಇರುವ ಮಾಹಿತಿ ಪುಟವನ್ನು ಅಂದರೆ ಪ್ರಥಮ ಪುಟವನ್ನು ಕನ್ನಡದಲ್ಲಿಯೂ ಮುದ್ರಿಸುವುದು.
- ವಹಿವಾಟಿನ ರವಾನೆ ಸಂದೇಶಗಳನ್ನು ಕನ್ನಡದಲ್ಲಿಯೂ ರವಾನಿಸುವುದು.
- ಗ್ರಾಹಕ ಸಭೆ / ಮಾಹಿತಿ ಶಿಬಿರಗಳಲ್ಲಿ ನೀಡುವ ಮಾಹಿತಿ ಕನ್ನಡದಲ್ಲಿಯೇ ನೀಡುವುದು.
- ಆರ್ಥಿಕ ಸಾಕ್ಷರತಾ ಕೇಂದ್ರಗಳು ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಸೂಚಿಸುವುದು.
- “ತಮಗೆ ಸಹಾಯ ಬೇಕೆ” ಕೌಂಟರಿನ ಸಿಬ್ಬಂದಿ ಕನ್ನಡದಲ್ಲಿ ಮಾತನಾಡುವಂತೆ ಕ್ರಮವಹಿಸುವುದು.
- ವಿವಿಧ ಕೌಂಟರುಗಳ ಮಾಹಿತಿ ಕನ್ನಡದಲ್ಲಿ ಬರೆಸುವುದು.
- ಅಂತರ್ಜಾಲದಲ್ಲಿ ಬ್ಯಾಂಕುಗಳು ಪ್ರಚುರಪಡಿಸುವ ಉತ್ಪನ್ನಗಳ ಮಾಹಿತಿಯನ್ನು ಕನ್ನಡದಲ್ಲಿಯೂ ಪ್ರಚುರಪಡಿಸುವುದು.
- ಆರ್‌ಸೆಟಿ ಮತ್ತು ರುಡ್‌ಸೆಟಿ ಸಂಸ್ಥೆಗಳ ಮೂಲಕ ಜಾಗೃತಿ ಶಿಬಿರಗಳನ್ನು ಆಯೋಜಿಸುವುದು.
- ಬ್ಯಾಂಕುಗಳು ದಿನನಿತ್ಯದ ವ್ಯವಹಾರದಲ್ಲಿ ಬಳಸುವ ಇಂಗ್ಲೀಷ್ ಪದಕ್ಕೆ ಸಮಾನಾಂತರ ಕನ್ನಡ ಪದವನ್ನು ಗುರುತಿಸಿ ಬ್ಯಾಂಕ್ ಶಾಖೆಯ ಸೂಚನಾ ಫಲಕದಲ್ಲಿ ಪ್ರತಿನಿತ್ಯ ಪ್ರಚುರಪಡಿಸುವುದು.
- ಹಿಂದಿ ದಿವಸ”ವನ್ನು ಕಡ್ಡಾಯವಾಗಿ ಆಚರಿಸುವಂತೆ ಪ್ರತಿ ನವೆಂಬರ್ ಒಂದರಂದು “ಕನ್ನಡದಿವಸ” ವನ್ನುಬ್ಯಾಂಕಿನ ಪ್ರತಿ ಶಾಖೆಯಲ್ಲೂ ಕಡ್ಡಾಯವಾಗಿ ಆಚರಿಸುವುದು. ಮತ್ತುಅಂದಿನ ಸಭೆಯಲ್ಲಿ ಬ್ಯಾಂಕು / ಶಾಖೆ ಇದುವರೆಗೂ ಕೈಗೊಂಡ ಕನ್ನಡಪರವಾದ ಚಟುವಟಿಕೆಗಳ ವಿಚಾರ ವಿನಿಮಯ ಮಾಡಿಕೊಳ್ಳುವುದು.
ಒಟ್ಟಾರೆ ಬ್ಯಾಂಕುಗಳಲ್ಲಿ ಕನ್ನಡವನ್ನು ಹೆಚ್ಚು ಹೆಚ್ಚಾಗಿ ಬಳಸಲು ವಿಪುಲ ಅವಕಾಶಗಳಿವೆ. ನಾವೆಲ್ಲರೂ ನಮ್ಮ ನಮ್ಮ ಜವಾಬ್ದಾರಿಗಳನ್ನು ಅರಿತು, ಸಮಯ ಸಂದರ್ಭ ಬಂದಾಗಲೆಲ್ಲ ಸುಲಲಿತವಾಗಿ ಬ್ಯಾಂಕುಗಳಲ್ಲಿ ಕನ್ನಡವನ್ನು ಬಳಸಿದ್ದಲ್ಲಿ ಅದು ಇನ್ನೂ ಎತ್ತರದ ಶಿಖರಕ್ಕೆ ಏರಬಲ್ಲದು.
–ಎನ್.ಟಿ.ಎರ‍್ರಿಸ್ವಾಮಿ,
ಕೆನರಾ ಬ್ಯಾಂಕಿನ ವಿಶ್ರಾಂತ ವಿಭಾಗೀಯ ಪ್ರಬಂಧಕರು,
ಅಚ್ಯುತ ಬಡಾವಣೆ, ಜಗಳೂರು – 577528
ದಾವಣಗೆರೆ ಜಿಲ್ಲೆ.
ಮೊ : 9901909672
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ
ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.
ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್. ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.
ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.
ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ
ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್, ಚೇತನ್ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.
ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.
ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


