ಲೈಫ್ ಸ್ಟೈಲ್
ಶಿಯೋಮಿ ರೆಡ್ ಮೀ ನೋಟ್ 5 ‘ ಇಂದು ಮಾರುಕಟ್ಟೆಗೆ
ಅತಿಕಡಿಮೆ ಬೆಲೆಗೆ ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟ ಹಾಗೂ ತಂತ್ರಜ್ಞಾನದ ಮೊಬೈಲ್ ಗಳನ್ನು ಬಿಡುಗಡೆಮಾಡಿ ಖ್ಯಾತಿ ಪಡೆದಿರುವ, ಶಿಯೋಮಿ ಕಂಪನಿ ಇಂದು (ಮೇ14) ತನ್ನ ಹೊಸ ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿನಡೆಸಿದೆ. ಆ ಮೊಬೈಲ್ ಹೇಗಿದೆ ಅದರ ವೈಶಿಷ್ಟ್ಯತೆಗಳೇನು ಎಂದು ತಿಳಿಯಲು ನೀವು ಈ ಬರಹವನ್ನು ಸಂಪೂರ್ಣವಾಗಿ ಓದಲೇ ಬೇಕು.
ಒಳ್ಳೆಯ ಗುಣಮಟ್ಟದ ಮೊಬೈಲ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆ ನಿಗಧಿಪಡಿಸಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಶಿಯೋಮಿ ಕಂಪೆನಿ ಯು, ಈಗಿನ ಟ್ರೆಂಡ್ ಗೆ ಹೊಂದಿಕೊಳ್ಳುವ ಹಾಗೆ ಹೊಸ ತಂತ್ರಜ್ಞಾನದೊಂದಿಗೆ ತನ್ನ ಹೊಸ ಮೊಬೈಲ್ ಪೋನ್’ ಶಿಯೋಮಿ ರೆಡ್ ಮೀ ನೋಟ್ 5 ‘ಅನ್ನು ಇಂದು ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ನೋಟ್ 5 ನ ಚಿತ್ರಗಳು ಸೋರಿಕೆ ಆಗಿದ್ದು, ಮಾರುಕಟ್ಟೆಯಲ್ಲಿ ಈ ಮೊಬೈಲ್ ಇಂದಿನಿಂದ ಸದ್ದು ಮಾಡಲಿದೆ.
ಕೆಲವು ಮೂಲಗಳ ಪ್ರಕಾರ ಶಿಯೋಮಿ ಕಂಪನಿ ಇಂದು ಬೆಳಗ್ಗೆ 11.30 ಕ್ಕೆ ಪತ್ರಿಕಾಗೋಷ್ಟಿಯನ್ನು ಕರೆದಿದೆ, ಸುಮಾರು 12 ಗಂಟೆ ಆಸುಪಾಸಿಗೆ ಕಾರ್ಯಕ್ರಮವು ಆರಂಭಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಆನ್‌ಲೈನ್‌ನಲ್ಲಿ ಶಿಯೋಮಿ ಮೊಬೈಲ್ ನ ಮಾಹಿತಿಗಳು ಮತ್ತು ಅದರ ವೈಶಿಷ್ಟ್ಯಗಳು ಸೋರಿಕೆಯಾಗಿದ್ದು ಅವುಗಳ ಕುರಿತಾದಂಹ ವಿವರಗಳು ಇಲ್ಲಿವೆ.
ಶಿಯೋಮಿ ರೆಡ್ ಮಿ ನೋಟ್ 5 ಮೊಬೈಲ್‌ನ ಹೊರ ವಿನ್ಯಾಸವು ತುಂಬಾ ಆಕರ್ಷಕವಾಗಿದೆ. ಹಳೆಯ ನೋಟ್ 4 ಮೊಬೈಲ್ ಗೆ ಹೋಲಿಸಿದರೆ ಇದರಲ್ಲಿ ನಾವು ತುಂಬಾ ಬದಲಾವಣೆಗಳನ್ನು
ಕಾಣಬಹುದು. ಈ ಮೊಬೈಲ್ 5.99 ಇಂಚು ಅಗಲದ ಸಂಪೂರ್ಣ ಎಚ್‌ಡಿ (1080×2160 ಪಿಕ್ಸೆಲ್) ಪರದೆಯನ್ನು ಹೊಂದಿದ್ದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 636 ಪ್ರೊಸೆಸರ್ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ನೋಟ್ 5 ಅನ್ನು ಎರಡು ರೀತಿಯಲ್ಲಿ ರೂಪಾಂತರಿಸಲಾಗಿದ್ದು ಮೊದಲನೆಯದು 3GB RAM ಮತ್ತು 32 GB ಆಂತರಿಕ ಸಂಗ್ರಹಣೆಯನ್ನು ಹೊಂದಿದ್ದರೆ, ಎರಡನೆಯದು 4 GB RAM ಹಾಗೂ 64 GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಅಲ್ಲದೇ ಇವೆರಡು ಫೋನ್‌ಗಳ ಸಂಗ್ರಹಣೆಯನ್ನು 256 GB ವರೆಗೆ ವಿಸ್ತರಿಸಬಹುದಾಗಿದೆ.
ಈ ಮೊಬೈಲ್‌ನ ಮುಂಬದಿಯ ಕ್ಯಾಮರಾವು 8 ಮೆಗಾಫಿಕ್ಸೆಲ್ ಆಗಿದ್ದು, ಹಿಂಬದಿಯಲ್ಲಿ 16 ಮೆಗಾಫಿಕ್ಸೆಲ್ ಕ್ಯಾಮರಾವನ್ನು ಅಳವಡಿಸಲಾಗಿದೆ. ಈ ಮೂಲಕ ಉತ್ತಮವಾದ ಫೋಟೋವನ್ನು ಕ್ಲಿಕ್ಕಿಸಲು ಈ ಫೋನ್ ನಿಮಗೆ ಸಹಾಯಕವಾಗಲಿದೆ. ಅದಲ್ಲದೇ ಹಿಂಬದಿಯಲ್ಲಿ ಫ್ಲಾಶ್ ಲೈಟ್ ಅನ್ನು ಇದು ಹೊಂದಿದ್ದು, ಹಿಂಬದಿ ಕ್ಯಾಮರಾದಲ್ಲಿ ಡ್ಯುಯಲ್ ಕ್ಯಾಮರಾ ಸಂವೇದಕವನ್ನು ನಾವು ಕಾಣಬಹುದಾಗಿದೆ ಮತ್ತು ಈ ಕ್ಯಾಮರಾಗಳ ಮೂಲಕ 1080P ನಲ್ಲಿ ವೀಡಿಯೊ ರೆಕಾರ್ಡಿಂಗ್ ಅನ್ನು ಕೂಡಾ ಮಾಡಬಹುದಾಗಿದೆ.
ಈ ಮೊಬೈಲ್‌ನಲ್ಲಿ 4100mAh ಬ್ಯಾಟರಿಯನ್ನು ಅಳವಡಿಸಲಾಗಿದೆ ಎನ್ನುವ ವದಂತಿಗಳು ಕೇಳಿಬರುತ್ತಿದ್ದು ಇದುವರೆಗೂ ಅದರ ಕುರಿತು ಮಾಹಿತಿ ಲಭ್ಯವಾಗಿಲ್ಲ. ಇದರಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಕೂಡಾ ಇದ್ದು, ವೈಫೈ, ಜಿಪಿಎಸ್, ಬ್ಲೂಟೂತ್ ಅನ್ನು ಇದು ಹೊಂದಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ಪ್ರೊಕ್ಸಿಮಿಟಿ ಸೆನ್ಸಾರ್, ಅಕ್ಸೆಲೆರೊಮೀಟರ್ ಸೆನ್ಸಾರ್, ಆಂಬಿಯೆಂಟ್ ಲೈಟ್ ಸೆನ್ಸರ್ ಅನ್ನು ನಾವು ಇದರಲ್ಲಿ ನಿರೀಕ್ಷಿಸಬಹುದಾಗಿದೆ.
ಬೆಲೆಗಳ ಕುರಿತಾಗಿ ಹೇಳುವುದಾದರೆ ಶಿಯೋಮಿ ಮೊದಲಿನಿಂದಲೂ ತನ್ನ ಬೆಲೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡು ಬಂದಿದೆ.ಮೂಲಗಳ ಪ್ರಕಾರ ಇದರ ಬೆಲೆಯು 15,400 ಇರಬಹುದು ಎಂದು ಅಂದಾಜಿಸಲಾಗಿದೆ. ಮುಂದಿನ ವಾರದಿಂದ ಆನ್‌ಲೈನ್‌ಗಳಲ್ಲಿ ಈ ಮೊಬೈಲ್ ಲಭ್ಯವಿದ್ದು ನಂತರದ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ಲಭ್ಯವಾಗಲ್ಲಿ.

ದಿನದ ಸುದ್ದಿ
ಶ್ರೀಮಂತಿಕೆಯ ನಡುವೆ ಸರಳ ಬದುಕು: 50 ರೂ. ಹೇರ್‌ಕಟ್ ಹೇಳಿದ ಡಿಕೆಶಿ
ಸುದ್ದಿದಿನ,ಬೆಂಗಳೂರು: ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಆಸ್ತಿ ಮತ್ತು ಸರಳ ಜೀವನಶೈಲಿಯ ಕುರಿತು ನೀಡಿರುವ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಮಾತ್ರವಲ್ಲ, ಸಾರ್ವಜನಿಕರಲ್ಲೂ ಚರ್ಚೆಗೆ ಕಾರಣವಾಗಿದೆ. ಶ್ರೀಮಂತ ರಾಜಕಾರಣಿ ಎಂಬ ಗುರುತಿನ ನಡುವೆಯೂ, ತಾವು ಇಂದಿಗೂ ಹೇರ್‌ಕಟ್‌ಗೆ ಕೇವಲ 50 ರೂ. ಖರ್ಚು ಮಾಡುತ್ತೇನೆ ಎಂದು ಅವರು ಹೇಳಿರುವುದು ಗಮನ ಸೆಳೆದಿದೆ.
ಹೈಲೈಟ್ಸ್ |
|
‘ಎರಡು-ಮೂರು ಪೀಳಿಗೆಗೆ ಸಾಕಾಗುವಷ್ಟು ಆಸ್ತಿ’
ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್, ತಮ್ಮ ಪೂರ್ವಜರು ಮತ್ತು ತಾವು ಸಂಪಾದಿಸಿರುವ ಆಸ್ತಿ ಎರಡು-ಮೂರು ಪೀಳಿಗೆ ಕುಳಿತು ತಿನ್ನುವಷ್ಟು ಇದೆ ಎಂದು ಹೇಳಿದ್ದರು. ಮುಖ್ಯಮಂತ್ರಿ ಸ್ಥಾನವನ್ನು ಹಣ ಸಂಪಾದಿಸುವ ಉದ್ದೇಶಕ್ಕಾಗಿ ಬಳಸಿಕೊಳ್ಳುವುದಿಲ್ಲ. ಬದಲಾಗಿ ಕರ್ನಾಟಕದಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು ಮತ್ತು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುವುದು ತಮ್ಮ ಗುರಿ ಎಂದು ಅವರು ಹೇಳಿದ್ದರು.
ಡಿಕೆ ಶಿವಕುಮಾರ್ ಅವರು ದೇಶದ ಶ್ರೀಮಂತ ಮುಖ್ಯಮಂತ್ರಿಗಳ ಪೈಕಿ ಒಬ್ಬರು ಎಂಬ ವಿಚಾರವೂ ಈ ಹಿಂದೆ ವರದಿಯಾಗಿತ್ತು. ಆದರೆ ತಮ್ಮ ವೈಯಕ್ತಿಕ ಜೀವನಶೈಲಿಯಲ್ಲಿ ದುಂದು ವೆಚ್ಚಕ್ಕೆ ಆದ್ಯತೆ ನೀಡುವುದಿಲ್ಲ ಎಂಬ ಸಂದೇಶವನ್ನು ಅವರು ಇದೀಗ ನೀಡಿದ್ದಾರೆ.
http://Visit : www.suddidina.com
50 ರೂ. ಹೇರ್‌ಕಟ್: ಸರಳ ಬದುಕಿನ ಉದಾಹರಣೆ
ಆ.26ರಂದು ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಡಿಕೆ ಶಿವಕುಮಾರ್ ತಮ್ಮ ಹೇರ್‌ಕಟ್ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. “ನಾನು ನನ್ನ ಹೇರ್‌ಕಟ್‌ಗಾಗಿ 50 ರೂ. ಖರ್ಚು ಮಾಡುತ್ತೇನೆ. ಸರಳ ಜೀವನ ನನಗೆ ಇಷ್ಟ. ದುಂದು ವೆಚ್ಚ ನನಗೆ ಇಷ್ಟವಿಲ್ಲ” ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ.
ದಿಲ್ಲಿಯಲ್ಲಿಯೂ ತಾವು 50 ರೂ. ನೀಡಿ ಹೇರ್‌ಕಟ್ ಮಾಡಿಸಿಕೊಳ್ಳುವುದಾಗಿ ಹೇಳಿರುವ ಅವರು, ಜೀವನ ನಡೆಸಲು ಎಷ್ಟು ಅಗತ್ಯವೋ ಅಷ್ಟನ್ನೇ ಖರ್ಚು ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅವರ ಆಸ್ತಿ ಪ್ರಮಾಣಕ್ಕಿಂತ ಅವರ ವೈಯಕ್ತಿಕ ಖರ್ಚಿನ ಈ ಉದಾಹರಣೆಯೇ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ.
‘ಕಾಂಗ್ರೆಸ್‌ನ ಅಮಿತ್ ಶಾ’ ಹೋಲಿಕೆಗೆ ಡಿಕೆಶಿ ವಿರೋಧ
ಇದೇ ಸಂದರ್ಶನದಲ್ಲಿ ತಮ್ಮನ್ನು ‘ಕಾಂಗ್ರೆಸ್‌ನ ಅಮಿತ್ ಶಾ’ ಎಂದು ಕರೆಯುವುದಕ್ಕೂ ಡಿಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ತಾವು ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತನಾಗಿದ್ದು, ಪಕ್ಷ ನೀಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದೇ ತಮ್ಮ ಕರ್ತವ್ಯ ಎಂದು ಹೇಳಿದ್ದಾರೆ.
ಯುವಜನರ ಶಕ್ತಿ, ಆಲೋಚನೆ ಮತ್ತು ಮಹತ್ವಾಕಾಂಕ್ಷೆಗಳ ಮೇಲೆ ಕಾಂಗ್ರೆಸ್ ನಂಬಿಕೆ ಇಟ್ಟಿದೆ. ಯುವಕರಿಗೆ ಕಲಿಯಲು, ಹೊಸದನ್ನು ಸೃಷ್ಟಿಸಲು ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸುವುದು ತಮ್ಮ ದೃಷ್ಟಿಕೋನ ಎಂದು ಅವರು ಹೇಳಿದ್ದಾರೆ.
2028ರ ಚುನಾವಣೆಯಲ್ಲೂ ವಿಶ್ವಾಸ
2028ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಚುನಾವಣೆಗೆ ಹೋಲಿಸಿದರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯನ್ನೂ ಅವರು ತಿಳಿಸಿದ್ದಾರೆ.
ಅಲ್ಲದೆ, 2029ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಡಿಕೆಶಿ ಅವರ ಇತ್ತೀಚಿನ ಸಂದರ್ಶನವು ಸರಳ ಜೀವನಶೈಲಿಯಿಂದ ಹಿಡಿದು ಕಾಂಗ್ರೆಸ್‌ನ ಭವಿಷ್ಯದ ರಾಜಕೀಯ ಗುರಿಗಳವರೆಗೆ ಹಲವು ವಿಚಾರಗಳನ್ನು ಮುನ್ನೆಲೆಗೆ ತಂದಿದೆ.

ಲೈಫ್ ಸ್ಟೈಲ್
ಅನ್ನ ಜಿಗುಟಾಯಿತಾ? ಬ್ರೆಡ್‌ನ ಈ ಸರಳ ಟ್ರಿಕ್‌ನಿಂದ ಮೆತ್ತಗಾದ ಅನ್ನಕ್ಕೆ ಪರಿಹಾರ!
ಸುದ್ದಿದಿನ: ಅನ್ನ ಬೇಯಿಸುವಾಗ ನೀರು ಹೆಚ್ಚಾಗಿ ಬಿದ್ದು ಮೆತ್ತಗಾಗುವುದು ಅಥವಾ ಹೆಚ್ಚು ಹೊತ್ತು ಬೇಯಿಸಿ ಜಿಗುಟಾಗುವುದು ಸಾಮಾನ್ಯ. ಆದರೆ ಇಂತಹ ಸಂದರ್ಭಗಳಲ್ಲಿ ಅನ್ನವನ್ನು ವ್ಯರ್ಥ ಮಾಡುವ ಅಗತ್ಯವಿಲ್ಲ. ಅಡುಗೆಮನೆಯಲ್ಲಿರುವ ಒಣ ಬ್ರೆಡ್ ತುಂಡೇ ಹೆಚ್ಚುವರಿ ತೇವಾಂಶವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಈ ಸರಳ ತಂತ್ರವನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಯೋಣ.
ಅಕ್ಕಿಯನ್ನು ಅಗತ್ಯಕ್ಕಿಂತ ಹೆಚ್ಚು ಬೇಯಿಸಿದಾಗ ಕಾಳುಗಳು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೀರಿಕೊಳ್ಳುತ್ತವೆ. ಪರಿಣಾಮವಾಗಿ ಅವುಗಳ ಸಹಜ ರಚನೆ ಕಳೆದು, ಮೆತ್ತಗೆ ಹಾಗೂ ಒಂದಕ್ಕೊಂದು ಅಂಟಿಕೊಳ್ಳುವಂತಾಗುತ್ತವೆ. ಹೆಚ್ಚು ನೀರು ಸೇರಿಸುವುದು, ಅಗತ್ಯಕ್ಕಿಂತ ಹೆಚ್ಚು ಸಮಯ ಬೇಯಿಸುವುದು ಮತ್ತು ಅಕ್ಕಿಯ ಪ್ರಕಾರಕ್ಕೆ ಸರಿಯಾದ ನೀರಿನ ಪ್ರಮಾಣ ಬಳಸದಿರುವುದು ಇದಕ್ಕೆ ಪ್ರಮುಖ ಕಾರಣಗಳಾಗಿವೆ.
ಅಕ್ಕಿ ಸಂಪೂರ್ಣವಾಗಿ ಗಂಜಿಯಂತಹ ಹದಕ್ಕೆ ಬರುವ ಮೊದಲು ಸಮಸ್ಯೆಯನ್ನು ಗುರುತಿಸಿದರೆ, ಹೆಚ್ಚುವರಿ ತೇವಾಂಶವನ್ನು ಕಡಿಮೆ ಮಾಡುವ ಮೂಲಕ ಅನ್ನದ ಹದವನ್ನು ಸ್ವಲ್ಪಮಟ್ಟಿಗೆ ಸುಧಾರಿಸಬಹುದು.
http://Visit : www.suddidina.com
ಬ್ರೆಡ್ ತುಂಡು ಹೇಗೆ ಸಹಾಯ ಮಾಡುತ್ತದೆ?
ಅನ್ನದಲ್ಲಿ ನೀರು ಹೆಚ್ಚಾಗಿ ಉಳಿದಿದ್ದರೆ ಮೊದಲು ಸಾಧ್ಯವಾದಷ್ಟು ಹೆಚ್ಚುವರಿ ನೀರನ್ನು ಎಚ್ಚರಿಕೆಯಿಂದ ಬಸಿದು ತೆಗೆಯಬೇಕು. ಬಳಿಕ ಅನ್ನದ ಮೇಲೆ ದಪ್ಪವಾದ, ಸ್ವಲ್ಪ ಒಣಗಿದ ಬ್ರೆಡ್ ತುಂಡನ್ನು ಇರಿಸಿ ಪಾತ್ರೆಯನ್ನು ಮುಚ್ಚಬೇಕು.
ಉರಿಯನ್ನು ತೀರಾ ಕಡಿಮೆ ಮಟ್ಟದಲ್ಲಿಟ್ಟು ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ಬ್ರೆಡ್‌ನ ಒಣ ರಚನೆಯು ಸ್ಪಂಜಿನಂತೆ ವರ್ತಿಸಿ ಅನ್ನದಲ್ಲಿರುವ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಹೆಚ್ಚು ನೀರಾದ ಅನ್ನಕ್ಕೆ ಎರಡು–ಮೂರು ಬ್ರೆಡ್ ತುಂಡು
ಅನ್ನದಲ್ಲಿ ನೀರಿನ ಪ್ರಮಾಣ ಹೆಚ್ಚು ಇದ್ದರೆ ಒಂದು ಬ್ರೆಡ್ ತುಂಡು ಸಾಕಾಗದಿರಬಹುದು. ಅಂತಹ ಸಂದರ್ಭದಲ್ಲಿ ಎರಡು ಅಥವಾ ಮೂರು ಒಣ ಬ್ರೆಡ್ ತುಂಡುಗಳನ್ನು ಅನ್ನದ ಮೇಲೆ ಬೇರೆ ಬೇರೆ ಕಡೆಗಳಲ್ಲಿ ಇರಿಸಬಹುದು. ಕೆಲವು ನಿಮಿಷಗಳ ನಂತರ ಬ್ರೆಡ್ ತುಂಡುಗಳನ್ನು ತೆಗೆದುಹಾಕಬೇಕು.
ಆದರೆ ಬ್ರೆಡ್ ಅನ್ನು ಹೆಚ್ಚು ಹೊತ್ತು ಪಾತ್ರೆಯಲ್ಲೇ ಬಿಡಬಾರದು. ಅದು ಹೆಚ್ಚಿನ ತೇವಾಂಶ ಹೀರಿಕೊಂಡು ಮೆತ್ತಗಾಗಬಹುದು.
ಈ ವಿಧಾನ ಯಾವಾಗ ಪರಿಣಾಮಕಾರಿ?
ಅನ್ನ ಸ್ವಲ್ಪ ಹೆಚ್ಚು ತೇವವಾಗಿದ್ದಾಗ ಅಥವಾ ಕಾಳುಗಳು ತಮ್ಮ ಆಕಾರವನ್ನು ಇನ್ನೂ ಉಳಿಸಿಕೊಂಡಿರುವಾಗ ಈ ತಂತ್ರ ಹೆಚ್ಚು ಉಪಯುಕ್ತ. ಆದರೆ ಅಕ್ಕಿ ಸಂಪೂರ್ಣವಾಗಿ ಬೆಂದು ಒಡೆದು ಗಂಜಿಯಂತಹ ಹದಕ್ಕೆ ಬಂದಿದ್ದರೆ, ಬ್ರೆಡ್ ಅದನ್ನು ಮತ್ತೆ ಉದುರುದುರಾದ ಅನ್ನವನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಬ್ರೆಡ್ ಹೆಚ್ಚುವರಿ ತೇವಾಂಶವನ್ನು ಮಾತ್ರ ಹೀರಿಕೊಳ್ಳುತ್ತದೆ.
ರೈಸ್ ಕುಕ್ಕರ್‌ನಲ್ಲೂ ಬಳಸಬಹುದು
ರೈಸ್ ಕುಕ್ಕರ್‌ನಲ್ಲಿ ಅನ್ನ ಬೇಯಿಸುವಾಗ ಆಕಸ್ಮಿಕವಾಗಿ ನೀರು ಹೆಚ್ಚಾದರೂ ಇದೇ ವಿಧಾನ ಪ್ರಯತ್ನಿಸಬಹುದು. ಮೊದಲು ಅನ್ನ ಸಂಪೂರ್ಣವಾಗಿ ಬೆಂದಿದೆಯೇ ಎಂದು ಪರಿಶೀಲಿಸಿ.
ಕಾಳುಗಳು ಚೆನ್ನಾಗಿದ್ದು ಹೆಚ್ಚುವರಿ ತೇವಾಂಶ ಮಾತ್ರ ಉಳಿದಿದ್ದರೆ, ಒಣ ಬ್ರೆಡ್ ತುಂಡನ್ನು ಮೇಲೆ ಇರಿಸಿ 5 ನಿಮಿಷ ಮುಚ್ಚಿಡಬಹುದು.
ಮುಂದೆ ಅನ್ನ ಜಿಗುಟಾಗದಂತೆ ಏನು ಮಾಡಬೇಕು?
ಪ್ರತಿಯೊಂದು ಬಗೆಯ ಅಕ್ಕಿಗೂ ಬೇಕಾಗುವ ನೀರಿನ ಪ್ರಮಾಣ ಒಂದೇ ಆಗಿರುವುದಿಲ್ಲ. ಆದ್ದರಿಂದ ಅಕ್ಕಿಯ ಪ್ಯಾಕೆಟ್‌ನ ಸೂಚನೆ ಅಥವಾ ನೀವು ಅನುಸರಿಸುವ ಪಾಕವಿಧಾನದ ಪ್ರಕಾರ ನೀರನ್ನು ಅಳೆಯುವುದು ಉತ್ತಮ.
ಅನ್ನ ಬೇಯುವಾಗ ಪದೇಪದೇ ಮುಚ್ಚಳ ತೆರೆಯುವುದನ್ನು ತಪ್ಪಿಸಿ. ಸರಿಯಾದ ಸಮಯದಲ್ಲಿ ಉರಿಯನ್ನು ಆರಿಸಿ, ಅನ್ನವನ್ನು ಅಗತ್ಯಕ್ಕಿಂತ ಹೆಚ್ಚು ಹೊತ್ತು ಒಲೆಯ ಮೇಲಿಡದಿರುವುದು ಕೂಡ ಮುಖ್ಯ.

ಲೈಫ್ ಸ್ಟೈಲ್
ರಕ್ಷಾಬಂಧನದ ಸಿಹಿಗೆ ಮಾರುಕಟ್ಟೆ ಖೋವಾ ಬೇಡ; ಮನೆಯಲ್ಲೇ ಶುದ್ಧ ಮಾವಾ ತಯಾರಿಸಿ!
ಸುದ್ದಿದಿನ: ರಕ್ಷಾಬಂಧನ ಸೇರಿದಂತೆ ಹಬ್ಬಗಳ ಸಮಯದಲ್ಲಿ ಸಿಹಿತಿಂಡಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಗುಲಾಬ್ ಜಾಮೂನ್, ಪೇಡಾ, ಬರ್ಫಿ, ಗುಜಿಯಾ ಸೇರಿದಂತೆ ಹಲವು ಸಿಹಿತಿಂಡಿಗಳ ತಯಾರಿಕೆಯಲ್ಲಿ ಖೋವಾ ಪ್ರಮುಖ ಪದಾರ್ಥವಾಗಿದೆ. ಇದೇ ಕಾರಣಕ್ಕೆ ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಖೋವಾಕ್ಕೆ ಬೇಡಿಕೆಯೂ ಹೆಚ್ಚುತ್ತದೆ.
ಆದರೆ ಮಾರುಕಟ್ಟೆಯಲ್ಲಿ ಸಿಗುವ ಖೋವಾದ ಗುಣಮಟ್ಟದ ಬಗ್ಗೆ ಗ್ರಾಹಕರು ಎಚ್ಚರಿಕೆ ವಹಿಸುವುದು ಅಗತ್ಯ. ಕಲಬೆರಕೆಯ ಖೋವಾದಲ್ಲಿ ಪಿಷ್ಟ, ಕೃತಕ ಕೊಬ್ಬು ಅಥವಾ ಇತರ ಅನಗತ್ಯ ಪದಾರ್ಥಗಳನ್ನು ಬಳಸುವ ಸಾಧ್ಯತೆ ಇರುವುದರಿಂದ, ಸಾಧ್ಯವಾದರೆ ಮನೆಯಲ್ಲೇ ಖೋವಾ ತಯಾರಿಸುವುದು ಉತ್ತಮ ಆಯ್ಕೆಯಾಗಬಹುದು.
http://Visit : www.suddidina.com
ನಿರಂತರವಾಗಿ ಕೈಯಾಡಿಸುವುದೇ ಮುಖ್ಯ
ಹಾಲು ಕುದಿಯುತ್ತಿರುವಾಗ ದಪ್ಪ ಸೌಟಿನಿಂದ ನಿರಂತರವಾಗಿ ಕಲಕುತ್ತಿರಬೇಕು. ವಿಶೇಷವಾಗಿ ಹಾಲು ಗಟ್ಟಿಯಾಗಲು ಆರಂಭಿಸಿದಾಗ ಪಾತ್ರೆಯ ತಳಕ್ಕೆ ಅಂಟದಂತೆ ಎಚ್ಚರಿಕೆ ವಹಿಸಬೇಕು. ಪಾತ್ರೆಯ ಅಂಚಿನಲ್ಲಿ ಶೇಖರವಾಗುವ ಕೆನೆಯನ್ನು ಕೆರೆದು ಮತ್ತೆ ಹಾಲಿನಲ್ಲೇ ಸೇರಿಸುತ್ತಿರಿ.
ಸುಮಾರು 20–25 ನಿಮಿಷಗಳ ಬಳಿಕ ಹಾಲು ಅರ್ಧದಷ್ಟು ಕಡಿಮೆಯಾಗಿ ರಾಬ್ರಿಯಂತೆ ದಪ್ಪವಾಗುತ್ತದೆ. ನಂತರ ಉರಿಯನ್ನು ಮಧ್ಯಮ ಅಥವಾ ಕಡಿಮೆ ಮಟ್ಟಕ್ಕೆ ಇಟ್ಟು ಮತ್ತಷ್ಟು ಕೈಯಾಡಿಸುತ್ತಿರಬೇಕು. ಇನ್ನೂ 10–15 ನಿಮಿಷಗಳಲ್ಲಿ ತೇವಾಂಶ ಕಡಿಮೆಯಾಗಿ ಮಿಶ್ರಣ ಗಟ್ಟಿಯಾಗಲು ಆರಂಭಿಸುತ್ತದೆ.
ಖೋವಾ ಸಿದ್ಧವಾಗುವುದು ಹೇಗೆ ಗೊತ್ತಾಗುತ್ತದೆ?
ಮಿಶ್ರಣವು ಹಿಟ್ಟಿನಂತೆ ಗಟ್ಟಿಯಾಗಿ, ಬಾಣಲೆಯ ತಳವನ್ನು ಬಿಡಲು ಆರಂಭಿಸಿದಾಗ ಖೋವಾ ಸಿದ್ಧವಾಗಿದೆ ಎಂದು ತಿಳಿಯಬಹುದು. ಉರಿ ಆರಿಸಿದ ನಂತರವೂ ಬಾಣಲೆ ಬಿಸಿಯಾಗಿರುವುದರಿಂದ ಒಂದು–ಎರಡು ನಿಮಿಷ ಸೌಟಿನಿಂದ ನಿಧಾನವಾಗಿ ಕೈಯಾಡಿಸಿ ಬಳಿಕ ತಟ್ಟೆ ಅಥವಾ ಬಟ್ಟಲಿಗೆ ವರ್ಗಾಯಿಸಿ.
ತಣ್ಣಗಾದಂತೆ ಖೋವಾ ಇನ್ನಷ್ಟು ಗಟ್ಟಿಯಾಗಿ ಉತ್ತಮ ಹರಳಿನ ಹದ ಪಡೆಯುತ್ತದೆ. ಇದನ್ನು ಪೇಡಾ, ಬರ್ಫಿ, ಗುಲಾಬ್ ಜಾಮೂನ್, ಗುಜಿಯಾ ಸೇರಿದಂತೆ ವಿವಿಧ ಸಿಹಿತಿಂಡಿಗಳಿಗೆ ಬಳಸಬಹುದು.
ಶೇಖರಣೆ ಮತ್ತು ಮುನ್ನೆಚ್ಚರಿಕೆ
ಖೋವಾ ತಯಾರಿಸುವಾಗ ದಪ್ಪ ತಳದ ಪಾತ್ರೆ ಬಳಸುವುದು ಅತ್ಯಗತ್ಯ. ಹಾಲು ಗಟ್ಟಿಯಾಗುವ ಹಂತದಲ್ಲಿ ನಿರಂತರವಾಗಿ ಕಲಕಬೇಕು. ಹೆಚ್ಚಿನ ಉರಿಯಲ್ಲಿ ಹೆಚ್ಚು ಹೊತ್ತು ಇಟ್ಟರೆ ಖೋವಾ ಸುಟ್ಟು ಬಣ್ಣ ಮತ್ತು ರುಚಿ ಬದಲಾಗಬಹುದು.
ಖೋವಾದಲ್ಲಿ ತೇವಾಂಶ ಮತ್ತು ಪೋಷಕಾಂಶ ಹೆಚ್ಚಿರುವುದರಿಂದ ಸಾಮಾನ್ಯ ತಾಪಮಾನದಲ್ಲಿ ಹೆಚ್ಚು ಕಾಲ ಇಡುವುದು ಸೂಕ್ತವಲ್ಲ. ತಯಾರಿಸಿದ ಖೋವಾವನ್ನು ಸ್ವಚ್ಛ, ಗಾಳಿಯೇರದ ಪಾತ್ರೆಯಲ್ಲಿ ಶೀತಲೀಕರಿಸಿ ಇಡುವುದು ಉತ್ತಮ. ದೀರ್ಘಕಾಲ ಸಂಗ್ರಹಿಸಬೇಕಾದರೆ ಫ್ರೀಜರ್ ಬಳಸಬಹುದು. ಬಳಸುವ ಮೊದಲು ಅದರ ವಾಸನೆ, ಬಣ್ಣ ಮತ್ತು ಹದದಲ್ಲಿ ಯಾವುದೇ ಬದಲಾವಣೆ ಆಗಿದೆಯೇ ಎಂಬುದನ್ನು ಪರಿಶೀಲಿಸುವುದು ಅಗತ್ಯ.

-
ಅಂತರಂಗ4 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ6 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ದಿನದ ಸುದ್ದಿ2 days agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ2 days agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ1 day agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
-
ದಿನದ ಸುದ್ದಿ2 days agoಉದ್ದಿಮೆದಾರರಿಗೆ ನೆರವು ಯೋಜನೆ; ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ




