ನೆಲದನಿ
ಕುವೆಂಪು ಕಂಡರಿಸಿದ ಕನ್ನಡತನದ ದಾರ್ಶನಿಕತೆ
- ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಕುವೆಂಪು ಬರಹಗಳಲ್ಲಿ ‘ಕನ್ನಡತನ’ದ ವಿನ್ಯಾಸಗಳು ಹೇಗೆ ಮೈದಾಳಿವೆ ಎಂಬುದನ್ನು ಅವರ ಸಾಹಿತ್ಯಕ ಹಾಗೂ ವೈಚಾರಿಕ ಬರಹಗಳ ಮೂಲಕ ಕಂಡುಕೊಳ್ಳಬಹುದಾಗಿದೆ. ಕನ್ನಡತನ ಎನ್ನುವುದು ಕೇವಲ ನಾಡು ನುಡಿಗಳ ಗಡಿಗಳಿಗೆ ಸೀಮಿತವಾಗಿರುವ ವಿದ್ಯಮಾನವಾಗಿರದೇ, ಅದೊಂದು ವ್ಯಾಪಕ ಗ್ರಹಿಕೆ ಎನ್ನುವುದು ಇವರ ಇಡೀ ಬರಹಗಳ ಮೂಲಕ ಅನಾವರಣಗೊಂಡಿರುವುದನ್ನು ಕಾಣುತ್ತೇವೆ.
ಹಾಗೆಂದರೆ, ಕನ್ನಡತನ ಎನ್ನುವುದು ಸಂಕುಚಿತ ಗಡಿಗಳನ್ನು ಮೀರುವ ಮತ್ತು ಅಂತಹ ಸೀಮಿತ ಗಡಿಗಳನ್ನು ದಾಟುವ ವಿನ್ಯಾಸವನ್ನಾಗಿ ನೋಡುವ ಹಲವು ಸನ್ನಿವೇಶಗಳು ಕುವೆಂಪು ಅವರ ಅಭಿವ್ಯಕ್ತಿಗಳಲ್ಲಿ ಅತ್ಯಂತ ನಿಚ್ಚಳವಾಗಿವೆ. ಉದಾ.ಗೆ ನೀ ಮೆಟ್ಟುವ ನೆಲ, ಅದೆ ಕರ್ನಾಟಕ ನೀನೇರುವ ಮಲೆ ಸಹ್ಯಾದ್ರಿ’ ಎನ್ನುವ ಕವನದ ಸಾಲುಗಳು ಇರಬಹುದು ಇಲ್ಲವೇ ಅನಿಕೇತನ ಕವನ ಇರಬಹುದು ಅಥವಾ ಕನ್ನಡ ನಾಡು ನುಡಿ ಕುರಿತ ಪ್ರತಿಯೊಂದು ಗ್ರಹಿಕೆ ಮತ್ತು ಅಭಿವ್ಯಕ್ತಿಯಲ್ಲಿ ಕನ್ನಡತನದ ನಿರ್ವಚನೆಯನ್ನು ಕಾಣಬಹುದಾಗಿದೆ.
ಅಂದರೆ ಕುವೆಂಪು ಅವರ ‘ಅಭಿವ್ಯಕ್ತಿ’ ಮತ್ತು ‘ಗ್ರಹಿಕೆ’ಗಳಲ್ಲಿ ಕನ್ನಡತನ ಎಂಬ ಸಮೂಹ ಅಸ್ಮಿತೆ ಹೇಗೆ ಅನಾವರಣಗೊಂಡಿದೆ ಹಾಗೂ ಈ ಅಸ್ಮಿತೆಯನ್ನು ಗ್ರಹಿಸುವ ಸ್ವರೂಪಗಳು ಯಾವ ಬಗೆಯಲ್ಲಿ ಇವರ ಸಾಹಿತ್ಯ ಮತ್ತು ವೈಚಾರಿಕ ನಿರೂಪಣೆಗಳಲ್ಲಿ ನೆಲೆಗೊಂಡಿವೆ ಎನ್ನುವುದನ್ನು ನೋಡುವ ಜರೂರಿದೆ. ಮುಖ್ಯವಾಗಿ ಕಾವ್ಯ, ನಾಟಕ ಮತ್ತು ಕಥನ ಎಂಬೀ ಸೃಜನಶೀಲ ಅಭಿವ್ಯಕ್ತಿಗಳು ರೂಪಕ, ಪ್ರತಿಮೆ, ಸಂಕೇತಗಳ ಮುಖೇನ ಕನ್ನಡತನವನ್ನು ನಿರೂಪಿಸಿರುವ ಬಗೆಯನ್ನು ಇಲ್ಲಿ ಕಾಣುತ್ತೇವೆ. ಹಾಗೂ ವಿಮರ್ಶೆ ಮತ್ತು ವೈಚಾರಿಕ ಬರಹಗಳಲ್ಲಿ ಈ ಕನ್ನಡತನದ ವಿನ್ಯಾಸವು ತಿಳಿವಿನ ಬಗೆಗಳಾಗಿ (ಎಪಿಸ್ಟಮಿಕ್ ಮಾಡಲ್ಸ್) ಮೈದಾಳಿವೆ.
ದಿಟ ಸಾಹಿತ್ಯಕ ಮತ್ತು ವೈಚಾರಿಕ ಅಭಿವ್ಯಕ್ತಿಗಳ ಸ್ವರೂಪ ಬದಲಾಗುವುದರಿಂದ ಅವುಗಳ ಮೂಲಕ ಪ್ರತಿಪಾದಿಸುವ ತಿಳಿವಿನ ಸ್ವರೂಪವೂ ಬದಲಾಗುತ್ತದೆ. ಹಾಗಾಗಿಯೇ ಸೃಜನಶೀಲ ಅಭಿವ್ಯಕ್ತಿಗಳಲ್ಲಿ ಮೈದಾಳುವ ಕನ್ನಡತನ ಕುರಿತಾದ ನಿರೂಪಣೆಗಳು ಬಹುತೇಕವಾಗಿ ರೂಪಾತ್ಮಕವಾಗಿವೆ. ಆದರೆ ವೈಚಾರಿಕ ಬರಹಗಳಲ್ಲಿ ಏರ್ಪಡುವ ಈ ಕನ್ನಡತನದ ವಿನ್ಯಾಸ ಜ್ಞಾನ ಮೀಮಾಂಸೆಯ ಆಯಾಮವನ್ನು ಪಡೆದುಕೊಳ್ಳುತ್ತವೆ ಎಂಬುದು ಗಮನಾರ್ಹ.
ಆದರೆ ಈ ಎರಡೂ ಸನ್ನಿವೇಶದಲ್ಲಿಯೂ ಕುವೆಂಪು ಪ್ರತಿಮಾ ವಿಧಾನವನ್ನೇ ಅನುಸರಿಸುತ್ತಾರೆ ಎಂಬುದು ವಿಶೇಷ. ಲೋಕೋಪಯೋಗಿ ಮತ್ತು ಭಾವೋಪಯೋಗಿ ನೆಲೆಗಳನ್ನು ಅತ್ಯಂತ ಖಚಿತವಾಗಿ ನಿರ್ಧರಿಸುವ ಆಯಾಮಗಳು ಇವರ ಸಾಹಿತ್ಯಕ ಮತ್ತು ವೈಚಾರಿಕ ಬರಹಗಳಲ್ಲಿ ಯಥೇಚ್ಛವಾಗಿ ನೆಲೆಗೊಂಡಿವೆ.
ಭಾಷೆ ಮತ್ತು ಭಾಷಿಕ ಪರಿಕರಗಳನ್ನು ಕೇವಲ ಸಾಂಕೇತಿಕ ಪ್ರತಿನಿಧೀಕರಣದ ಮಾದರಿಯನ್ನಾಗಿ ಮಾತ್ರ ಉಪಯೋಗಿಸದೇ, ಅದೊಂದು ಜ್ಞಾನಶಿಸ್ತು, ಸಂವೇದನೆಯ ವಿನ್ಯಾಸ ಹಾಗೂ ಅನುಭವಗಳ ಮಾದರಿಗಳನ್ನು ಗುರುತಿಸುವ ಬಹುಮುಖ್ಯ ನೆಲೆಯೆನ್ನುವುದನ್ನು ಕುವೆಂಪು ಅತ್ಯಂತ ಪರಿಣಾಮಕಾರಿಯಾಗಿ ಗುರುತಿಸಿದ್ದಾರೆ. ಆದ್ದರಿಂದ ಭಾಷೆ ಬಗೆಗಿನ ಗ್ರಹಿಕೆಗಳು ಇವರ ಒಟ್ಟು ಅಭಿವ್ಯಕ್ತಿಯಲ್ಲಿ ಪ್ರಮುಖವಾಗುತ್ತವೆ.
ಇವುಗಳ ಮೂಲಕವೇ ಬದುಕಿನ ವಿವಿಧ ಲಯಗಳನ್ನು ಕಂಡುಕೊಳ್ಳಲೂ ಸಾಧ್ಯ ಅನ್ನುವುದನ್ನು ಕುವೆಂಪು ತೋರಿಸಿಕೊಟ್ಟಿದ್ದಾರೆ. ಕಾಲ-ದೇಶಗಳ ಹಂಗು ಮೀರಿದ ಪ್ರಸ್ತುತತೆ ನೆಲೆಗೊಳ್ಳುವುದು ಇಂತಹ ಭಾಷಿಕ ಕ್ರಾಂತಿಯಿಂದಲೇ ಎಂಬ ವಾಸ್ತವವನ್ನು ನಾವು ಮನಗಾಣುವುದಕ್ಕೆ ಸಾಕ್ಷಿಗಳು ನಮಗೆ ಕುವೆಂಪು ಗ್ರಹಿಕೆ ಮತ್ತು ಅಭಿವ್ಯಕ್ತಿಯಲ್ಲಿ ಲಭ್ಯವಾಗುತ್ತವೆ. ‘ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ? ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ? ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು !’ ಎಂಬೀ ಕವನದ ನಿಲುವು ಯಾವ ಕಾಲ ದೇಶಕ್ಕೂ ಸೀಮಿತಗೊಳ್ಳದೇ ಮನುಜಮತ ಮತ್ತು ವಿಶ್ವಪಥದ ಚಹರೆಗಳಾಗಿ ನೆಲೆಗೊಂಡಿವೆ.
ಸಾಮಾಜಿಕ ಭಾಷಾಶಾಸ್ತ್ರೀಯ ವಿವೇಚನೆಗಳ ಮುಖೇನ ಭಾಷೆ ಮತ್ತು ಸಮಾಜಗಳ ಒಟ್ಟು ಸಂಬಂಧವನ್ನು ವಿಶ್ಲೇಷಿಸಿ ನೋಡಿದರೆ ಕುವೆಂಪು ಅವರ ಭಾಷಿಕ ನಿಲುವುಗಳ ಆಳದಲ್ಲಿ ಹುದುಗಿರುವ ವೈಚಾರಿಕ ಸ್ಥೈರ್ಯ ಹಾಗೂ ನೈತಿಕತೆಯ ಹೊಣೆಗಾರಿಕೆ ನಮಗೆ ಮನನವಾಗುತ್ತದೆ. ಮತಧರ್ಮದ ಪರಿಭಾಷೆ ಒದುಗಿಸುವ ಚಿಂತನಾ ಕ್ರಮ ಬೇರೇನೆ ಸಮಾಜಶಾಸ್ತ್ರೀಯ ವ್ಯಾಖ್ಯಾನಗಳಿಗೆ ಅನುವು ಮಾಡಿಕೊಡುವುದನ್ನು ಕುವೆಂಪು ಅವರು ಮನಗಂಡಿದ್ದರು.
ತತ್ವದರ್ಶನ, ಸಾಂಸ್ಕೃತಿಕ ಮುಖಾಮುಖಿಯ ನಿಲುವುಗಳು ನಮಗೆ ಅರ್ಥವಾಗಲು ಹಾಗೂ ಸಾಂಸ್ಕೃತಿಕ ಅನುಸಂಧಾನದ ಸ್ಪಷ್ಟ ಮಾನದಂಡಗಳು ನಮಗೆ ಲಭ್ಯವಾಗುವುದು ಭಾಷಿಕ ಕ್ರಾಂತಿಯಿಂದ ಎನ್ನುವ ವಾಸ್ತವ ಕುವೆಂಪು ಅವರಿಗೆ ಖಚಿತವಾಗಿತ್ತು.
ಹೊಸ ಪರಿಭಾಷೆ ಮತ್ತು ಹೊಸ ವಿಚಾರಗಳನ್ನು ಏಕತ್ರಗೊಳಿಸುವ ಬಹುದೊಡ್ಡ ವೈಚಾರಿಕ ಕ್ರಾಂತಿಗೆ ಕುವೆಂಪು ಅವರು ಕಾರಣವಾದರು. ಈಗಾಗಲೇ ನೆಲೆನಿಂತಿದ್ದ ಸಮಾಜಶಾಸ್ತ್ರದ ಪರಿಭಾಷೆಯ ಒಳಹುನ್ನಾರವನ್ನು ಅರ್ಥೈಸಿಕೊಳ್ಳಲು ಭಾಷಾಶಾಸ್ತ್ರ ಸಹಾಯ ಮಾಡಬಲ್ಲದು ದಿಟ. ಆದರೆ ಬದುಕಿನ ಸಂಕೀರ್ಣತೆಯನ್ನು ಬಿಡಿಸಿ ನೋಡುವ ನಿರೂಪಣೆಗಳು ಲಭ್ಯವಾಗದೇ ಈ ಒಳಹುನ್ನಾರವನ್ನು ಅರಿಯಲು ಭಾಷಾಶಾಸ್ತ್ರಕ್ಕೆ ಸಾಧ್ಯವೇ ಇಲ್ಲ.
ಆದರೆ ಕುವೆಂಪು ಅವರು ಏಕೆಕಾಲಕ್ಕೆ ಈ ಪರಿಭಾಷೆಗಳ ಚಹರೆಗಳನ್ನು ಬದಲಿಸುವ ಮತ್ತು ಒಳಹುನ್ನಾರಗಳನ್ನು ಖಚಿತವಾಗಿ ತಮ್ಮ ಅಭಿವ್ಯಕ್ತಿಗಳ ಮೂಲಕ ಮಂಡಿಸಿರುವುದನ್ನು ಯಾರಾದರೂ ಗುರುತಿಸಬಹುದು. ಅಲ್ಪಸಂಖ್ಯಾತರು, ಬಹುಸಂಖ್ಯಾತರು, ಮೇಲ್ವರ್ಗಗಳು, ಕೆಳವರ್ಗಗಳು ರೂಢಿಗತವಾಗಿ ಬಳಸುತ್ತಿದ್ದ ಪರಿಭಾಷೆಗಳು ಯಾವ ರೀತಿಯಲ್ಲಿ ಸಾಂಸ್ಕೃತಿಕ ಮತ್ತು ರಾಜಕೀಯ ಯಜಮಾನಿಕೆಯನ್ನು ನಿಭಾಯಿಸುತ್ತಿದ್ದವು ಎನ್ನುವುದನ್ನು ಸೂಚಿಸುವ ಸೂಚಕಗಳಾಗಿ ಒದಗಿ ಬಂದಿರುವುದನ್ನು ಪತ್ತೆಹಚ್ಚುವ ನಿಶಿತಮತಿ ಕುವೆಂಪು ಅವರಲ್ಲಿ ಎದ್ದು ಕಾಣುತ್ತದೆ.
ಭಾಷೆ ಒಂದು ಸಾಮಾಜಿಕ ವಾಸ್ತವವನ್ನು (ಸೋಶಿಯಲ್ ಫ್ಯಾಕ್ಟ್) ಬಿಂಬಿಸುವುದಷ್ಟೆಯಲ್ಲ, ಸಮೂಹಗಳ ಬದುಕು ಹೇಗೆ ಇಂತಹ ಸ್ಥಿತಿಯೊಂದಕ್ಕೆ ಒಗ್ಗಿಕೊಂಡಿವೆ ಎನ್ನುವ ಕಟುಸತ್ಯವನ್ನೂ ಅನಾವರಣಗೊಳಿಸುತ್ತವೆ. ಆದ್ದರಿಂದ ಹೊಸ ಸಾಮಾಜಿಕತೆಯನ್ನು ನೆಲೆಗೊಳಿಸಲು ಹೊಸ ಪರಿಭಾಷೆಗಳ ಅಗತ್ಯವಿದೆ ಎನ್ನುವುದನ್ನು ಕುವೆಂಪು ಅವರು ಬಲವಾಗಿ ನಂಬಿದ್ದರು.
ವೈಜ್ಞಾನಿಕ ದೃಷ್ಟಿ, ವಿಶ್ವಮಾನವತೆ, ಸಾಂಸ್ಕೃತಿಕ ರಾಜಕಾರಣ, ಕಾವ್ಯ, ಕಥನ ಹಾಗೂ ನಾಟಕಗಳು ಇತ್ಯಾದಿ ಸಂಕಥನಗಳು ಕನ್ನಡತನವನ್ನು ನಿರ್ವಚಿಸಲು ಕುವೆಂಪು ಅವರಿಗೆ ಅತ್ಯಂತ ಮುಖ್ಯ ಅಭಿವ್ಯಕ್ತಿ ಮಾದರಿಗಳಾಗುತ್ತವೆ. ಎಲ್ಲವನ್ನೂ ಕನ್ನಡತನ ಮತ್ತು ಕನ್ನಡತನದ ಅಸ್ಮಿತೆಯ ಸ್ವರೂಪವನ್ನು ನಿರ್ವಚಿಸುವ ಬಗೆಯನ್ನಾಗಿಯೇ ಕುವೆಂಪು ಅವರು ನಿರೂಪಿಸಿದ್ದಾರೆ. ಆದ್ದರಿಂದ ಪ್ರತಿಮಾ ವಿಧಾನವನ್ನು ಪರಿಣಾಮಕಾರಿಯಾಗಿ ತಮ್ಮ ಒಟ್ಟು ಅಭಿವ್ಯಕ್ತಿಯಲ್ಲಿ ಬಳಸಿಕೊಳ್ಳಲು ಸಾಧ್ಯವಾಯಿತು.
ಇಲ್ಲವಾದರೆ ಅವರ ಕಾದಂಬರಿಗಳು ಮತ್ತು ಕಾವ್ಯ ವಿಶೇಷವಾಗಿ ರಾಮಾಯಣ ದರ್ಶನಂ ಮಹಾಕಾವ್ಯವು ಇಷ್ಟೊಂದು ವೈಶಿಷ್ಟ್ಯತೆಯನ್ನು ಪಡೆದುಕೊಳ್ಳಲು ಆಗುತ್ತಿರಲಿಲ್ಲ. ತಮ್ಮ ವೈಚಾರಿಕ ಬರಹಗಳು, ವಿಮರ್ಶೆ, ನಾಟಕಗಳು, ಕಥನಗಳು, ಕಾವ್ಯ ಹಾಗೂ ಕವಿತೆಗಳನ್ನು ಅತ್ಯಂತ ವಿಶಿಷ್ಟ ಬಗೆಗಳನ್ನಾಗಿಸುವ ಇರಾದೆಯನ್ನು ಕುವೆಂಪು ಅವರು ಹೊಂದಿರುವುದನ್ನು ಈ ಎಲ್ಲ ವಿನ್ಯಾಸಗಳಲ್ಲಿ ನೋಡುತ್ತೇವೆ.
ಈ ಎಲ್ಲ ಪ್ರಕಾರಗಳ ವೈಶಿಷ್ಟ್ಯತೆಯನ್ನು ಕಂಡರಿಸಲು ಇವರು ಭಾಷೆಯನ್ನೇ ಪ್ರಧಾನ ಮಾನದಂಡವನ್ನಾಗಿ ಬಳಸಿಕೊಂಡಿದ್ದಾರೆ. ಈ ಪ್ರಕ್ರಿಯೆಯ ಮೂಲಕವೇ ಕನ್ನಡತನದ ಚಹರೆಗಳನ್ನೂ ಪತ್ತೆಹಚ್ಚುವುದಕ್ಕೂ ಇವರಿಗೆ ಸಾಧ್ಯವಾಗಿದೆ. ಸಾಮಾಜಿಕತೆ ಮತ್ತು ಕನ್ನಡತನದ ನಡುವಣ ನಂಟಸ್ತಿಕೆಯನ್ನು ರೂಪಿಸುವ ವಿಧಾನವೇ ಅತ್ಯಂತ ಮಾರ್ಮಿಕವಾಗಿದೆ.
ಏಕೆಂದರೆ ಕನ್ನಡದ ಕಾವ್ಯದೊಳಗೆ ಲೋಕದರ್ಶನದ ಮಾದರಿಗಳನ್ನು ಒಡಮೂಡಿಸಲು ಹಾಗೂ ವಿಶ್ವಮಾನವ ಪರಿಕಲ್ಪನೆಯನ್ನು ನೆಲೆಗೊಳಿಸಲು ಹೇಗೆ ಸಾಧ್ಯವಾಯಿತು ಅನ್ನುವುದನ್ನು ಶೋಧಿಸುವುದಕ್ಕೆ ಸಾಕಷ್ಟು ಅವಕಾಶಗಳನ್ನು ಕುವೆಂಪು ಅವರು ಭಾಷಿಕ ಚಲನೆಗಳ ಮೂಲಕವೇ ಅಣಿಗೊಳಿಸಿದ್ದಾರೆ.
ಯಾವುದನ್ನೂ ಇವರು ಕೇವಲ ಒಂದು ನೋಟವನ್ನಾಗಿ ಮಾತ್ರ ಬಿಂಬಿಸದೇ ಅದೊಂದು ಲೋಕಜ್ಞಾನದ ಗ್ರಹಿಕೆಯನ್ನಾಗಿ ಮಂಡಿಸುವ ತವಕವನ್ನು ಹೊಂದಿರುವುದು ನಮಗೆ ಮನವರಿಕೆಯಾಗುತ್ತದೆ. ನೇಗಿಲಯೋಗಿ, ದೇವರು ರುಜು ಮಾಡಿದನು, ಹೀರೆ ಹೂ, ಗೊಬ್ಬರ, ಕಲ್ಕಿ, ಸ್ವರ್ಗ ಬಾಗಿಲು ಯಕ್ಷಪ್ರಶ್ನೆ, ದೇವರು ಮತ್ತು ಪುಜಾರಿ ಇತ್ಯಾದಿ ಕವನಗಳನ್ನು ಪರಿಶೀಲಿಸಿ ನೋಡಬಹುದು.
ಜಲಗಾರ, ಸ್ಮಶಾನ ಕುರುಕ್ಷೇತ್ರಂ, ಶೂದ್ರ ತಪಸ್ವಿ, ರಾಮಾಯಣ ದರ್ಶನಂ ಹಾಗೂ ಕಾನೂರು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಗಳು ಪಠ್ಯಗಳನ್ನೂ ಈ ನೆಲೆಯಲ್ಲಿ ನೋಡುವುದು ಸೂಕ್ತ. ಈ ಎಲ್ಲ ಪಠ್ಯಗಳ ಇಡೀ ಗ್ರಹಿಕೆಯಲ್ಲಿ ಎದ್ದು ಕಾಣುವ ಬಗೆಯೇ ಕನ್ನಡತನದ ಚಹರೆಯಾಗಿದೆ.
ಈ ಚಹರೆ ಏಕಶಿಲಾಘನಾಕೃತಿಯಲ್ಲ ಅದು ಬಹುಳತೆಯ ವಿನ್ಯಾಸ ಎಂಬ ಚಿಂತನೆಯನ್ನೂ ಇಲ್ಲಿ ನೆಲೆಗೊಳಿಸಲಾಗಿದೆ. ನುಡಿಯೊಂದನ್ನು ಏಕಕಾಲಕ್ಕೆ ಸ್ಥಳೀಯತೆ ಮತ್ತು ವಿಶ್ವಾತ್ಮಕತೆಯ ಸಮಾನ ವಿದ್ಯಮಾನವನ್ನಾಗಿ ಬಿಂಬಿಸುವಲ್ಲಿ ಕುವೆಂಪು ಮತ್ತು ಬೇಂದ್ರೆಯವರು ಅತ್ಯಂತ ಪ್ರಮುಖ ಕವಿಗಳಾಗಿದ್ದಾರೆ.
ಕನ್ನಡತನ ಎನ್ನುವುದು ಕೇವಲ ಭಾಷಿಕ ಗುರುತಲ್ಲ ಅದೊಂದು ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಗ್ರಹಿಕೆಗಳ ಮಾದರಿ. ಈ ಗ್ರಹಿಕಾ ಮಾದರಿ ಏಕರೂಪಿಯಾಗಿರದೇ, ಬಹುಳತೆಯಿಂದ ಕೂಡಿರುವ ವಿದ್ಯಮಾನ ಆಗಿರಬೇಕಾಗುತ್ತದೆ. ಈ ಬಹುಳತೆಯ ಚೌಕಟ್ಟಿನೊಳಗೆ ಕನ್ನಡ ನುಡಿಯ ಸಾಮಾಜಿಕ ವಿನ್ಯಾಸವನ್ನು ಅರಿಯುವುದಕ್ಕೆ ಬೇಕಾಗುವ ದಾರಿಗಳನ್ನು ಕುವೆಂಪು ಅವರು ಕಂಡುಕೊಂಡಿರುವುದನ್ನು ಅವರ ಒಟ್ಟು ಬರಹಗಳಲ್ಲಿ ನೋಡುತ್ತೇವೆ.
ನುಡಿ ಬಗೆಗಿನ ಸವಾಲುಗಳನ್ನು ಕುವೆಂಪು ಅವರು ಕೈಗೆತ್ತಿಕೊಂಡಿರುವ ಬಗೆಯೇ ಅತ್ಯಂತ ವಿಶಿಷ್ಟವಾಗಿರುವಂತಹದು. ನುಡಿ ಕುರಿತ ಇವರ ಈ ದಾರ್ಶನಿಕತೆ ಹೊಸ ಸಾಮಾಜಿಕ ವಿನ್ಯಾಸಕ್ಕೆ (ನ್ಯೂ ಸೋಶಿಯಲ್ ಆರ್ಡರ್) ತುಡಿಯುವ ಬಗೆಯಾಗಿದೆ. ಈ ವಿನ್ಯಾಸಗಳು ಸಮಾನತೆ, ಸಹಬಾಳ್ವೆ, ಸಹೋದರತೆ ಹಾಗೂ ಸಾಮಾಜಿಕ-ಸಾಂಸ್ಕೃತಿಕ ನ್ಯಾಯದ ನಿಲುವುಗಳನ್ನೂ ಒಳಗೊಂಡಿರುತ್ತವೆ. ತಳಸಮುದಾಯ ಮತ್ತು ಹೆಣ್ಣು ಮಕ್ಕಳ ಸಾಮಾಜಿಕ ವಿಮೋಚನೆಯ ಹೊಸ ದಾರಿಗಳನ್ನು ಕನ್ನಡತನದ ಹೊಸ ವ್ಯಾಖ್ಯಾಗಳ ಮೂಲಕ ಅಣಿಗೊಳಿಸುವ ದೊಡ್ಡ ಸಾಹಸವನ್ನು ಕುವೆಂಪು ಅವರು ಮಾಡಿದ್ದಾರೆ.
ಇವರಿಗೆ ಕನ್ನಡತನ ಎನ್ನುವುದು ಸಾಮಾಜಿಕ ಒಳಗೊಳ್ಳುವಿಕೆಯ ವಿನ್ಯಾಸವೂ ಆಗಿರುತ್ತದೆ. ಸಮಾಜವೆಂದರೆ ಅದೊಂದು ಬಹುಳತೆಯ ನೋಟಕ್ರಮ ಮತ್ತು ವಿಭಿನ್ನ ಲೋಕದೃಷ್ಟಿಗಳ ಆಗರ ಎಂಬುದನ್ನು ಕುವೆಂಪು ಮನಗಂಡಿದ್ದರು ಹಾಗೂ ಅದನ್ನು ತಮ್ಮ ಸಾಹಿತ್ಯಕ ನಿರೂಪಣೆಗಳ ಮೂಲಕವೂ ಸಾಧಿಸಿ ತೋರಿಸಿದರು. ಈ ಇಡೀ ಪ್ರಕ್ರಿಯೆಯಲ್ಲಿ ಅನುಭವದ ನೆಲೆ ಮತ್ತು ಭಾಷೆಗಳ ನಡುವಣ ಅನುಸಂಧಾನದ ಮಾದರಿಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ. ಹಾಗಾಗಿಯೇ ಗುತ್ತಿ, ತಿಮ್ಮಿ, ಪೀಂಚಲು, ಜಲಗಾರ, ಶಂಭೂಕ, ಏಕಲವ್ಯ ಇವರ ವ್ಯಕ್ತಿತ್ವದ ಮಾದರಿಗಳು ಎಲ್ಲ ಕಾಲದ ಕನ್ನಡತನದ ಸೂಚಕಗಳಾಗಿ ರೂಪುಗೊಂಡಿವೆ.
ಕನ್ನಡತನದ ಅಭಿವ್ಯಕ್ತಿಯಾಗಿ ಭಾಷೆಯನ್ನು ರೂಪಿಸುವುದೆಂದರೆ ಅದು ಕೇವಲ ಭಾಷಿಕ ರಾಜಕಾರಣದ ನಿಲುವು ಮಾತ್ರವಾಗದೆ, ಸಮೂಹಗಳ ಇಡೀ ಬದುಕಿನ ಜ್ಞಾನಮೀಮಾಂಸೆಯೂ ಮತ್ತು ಚಹರೆಯೂ ಆಗಿ ನಿರ್ಮಾಣಗೊಂಡಿರುತ್ತದೆ. ಅಂದರೆ ಭಾಷೆಯೊಂದು ಕೇವಲ ರಾಜಕೀಯ-ಸಾಮಾಜಿಕ ಪ್ರಜ್ಞೆ ಮಾತ್ರವಾಗದೇ, ಸಮೂಹಗಳ ಬದುಕಿನ ಪ್ರಜ್ಞೆ ಮತ್ತು ಅಸ್ತಿತ್ವದ ಮೂಲನೆಲೆಯಾಗುವ ಪ್ರಕ್ರಿಯೆಯು ಏರ್ಪಡುತ್ತದೆ. ಪರಿಣಾಮವಾಗಿ ಭಾಷೆ ಎನ್ನುವುದು ವಿಮೋಚನೆಯ ನೆಲೆಯಾಗಿ ರೂಪುಗೊಳ್ಳುತ್ತದೆ.
ಕುವೆಂಪು ಅಂಥವರ ಸಾಹಿತ್ಯ ಅಭಿವ್ಯಕ್ತಿಯು ಸಾಮಾಜಿಕ ಮತ್ತು ಸಾಂಸ್ಕೃತಿಕ ನ್ಯಾಯದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೇ ಮೈದಾಳಿದೆ. ಹಾಗಾಗಿ ಬ್ರಾಹ್ಮಣ್ಯ ಮತ್ತು ವೈದಿಕ ಆಲೋಚನಾ ಕ್ರಮವನ್ನೇ ತನ್ನ ಒಡಲಲ್ಲಿ ಅಡಗಿಸಿಕೊಂಡಿದ್ದ ಭಾಷಿಕ ವಿನ್ಯಾಸಗಳನ್ನು, ಸಬಾಲ್ಟ್ರನ್ ಸಮೂಹಗಳ ಅಭಿವ್ಯಕ್ತಿಗೆ ಪೂರಕವಾಗಿ ಮರುವಿನ್ಯಾಸಗೊಳಿಸುವ ಒಂದು ದೊಡ್ಡ ಭಾಷಿಕ ತಿರುವು ಕುವೆಂಪು ಅವರ ಸಾಹಿತ್ಯ ಹಾಗೂ ವೈಚಾರಿಕ ಅಭಿವ್ಯಕ್ತಿಯಲ್ಲಿ ಕಾಣುತ್ತೇವೆ.
ಒಂದು ನಿರ್ದಿಷ್ಟ ಸಂಸ್ಕೃತಿ ಇಲ್ಲವೇ ಸಾಮಾಜಿಕ ಅಸ್ಮಿತೆಯ ಸಾಂಕೇತಿಕತೆಯನ್ನು ಪಡೆದುಕೊಂಡಿದ್ದ ಭಾಷೆಯನ್ನು ನಿರಾಕರಿಸುವುದೇ ಒಂದು ಸಾಹಿತ್ಯಕ ಕ್ರಾಂತಿಗೆ ಕಾರಣವಾಗುತ್ತದೆ ಎನ್ನುವುದನ್ನು ಇವರು ನಿರೂಪಿಸಿದ್ದಾರೆ. ಶೂದ್ರ, ದಲಿತ ಇಲ್ಲವೇ ತಳಸಮೂಹಗಳ ಸಾಹಿತ್ಯ ನಿರೂಪಣೆಗಳಿಗೆ ಒಗ್ಗೂವ ಪರಿಭಾಷೆ, ರೂಪಕ, ಪ್ರತಿಮೆಗಳನ್ನು ಹೊಸದಾಗಿ ಸೃಷ್ಟಿಸುವ ಪ್ರತಿಮಾ ವಿಧಾನದ ಸ್ಪಷ್ಟ ಚಹರೆಗಳು ಕುವೆಂಪು ಅವರ ಒಟ್ಟು ಸಾಹಿತ್ಯದಲ್ಲಿ ಮೇಳೈಸಿರುವುದನ್ನು ಯಾರಾದರೂ ಗುರುತಿಸಬಹುದು.
ಅಂದರೆ ಕಾವ್ಯ (ಲಯ), ಕಥೆ-ಕಾದಂಬರಿ (ಕಥನ) ಹಾಗೂ ನಾಟಕ (ಸಂಭಾಷಣೆಗೆ) ಪ್ರಕಾರಗಳಿಗೆ ಹೊಸದಾದ ವೈಚಾರಿಕ ಮೊನಚು ಮತ್ತು ಕಾವ್ಯಮೀಮಾಂಸೆ-ಸೌಂಧರ್ಯ ಮೀಮಾಂಸೆಯನ್ನು ನೆಲೆಗೊಳಿಸುವ ಇರಾದೆಯಿಂದ ಕುವೆಂಪು ಹೊಸ ನುಡಿಗಟ್ಟನ್ನು ಕಟ್ಟಿಕೊಂಡರು. ಇಡೀ ಈ ವಿನ್ಯಾಸಕ್ಕೆ ಒಂದು ತಾತ್ವಿಕ ಪಾತಳಿಯಾಗಿ ಭಾಷೆ ಕುವೆಂಪು ಅವರ ಗ್ರಹಿಕೆ ಮತ್ತು ಅಭಿವ್ಯಕ್ತಿಯಲ್ಲಿ ಕೆಲಸ ಮಾಡಿದೆ.
ಕುವೆಂಪು ಅವರಿಗೆ ಅಭಿವ್ಯಕ್ತಿ ಎನ್ನುವುದು ಕೇವಲ ರಸಾನುಭವದ ವಿದ್ಯಮಾನವಾಗದೇ, ಕ್ರಿಯೆ, ತತ್ವ, ಪ್ರತಿಭಟನೆಯ ಕುರುಹುಗಳನ್ನು ಸೂಚಿಸುವುದೇ ಆಗಿರುತ್ತದೆ. ಮುಂದೆ ದಲಿತ ಬಂಡಾಯದ ಸನ್ನಿವೇಶದಲ್ಲಿ ಚರ್ಚಿಸಿದಂತಹ ಲಿಟರೇಚರ್ ಆಫ್ ಆಕ್ಸನ್ ಹಾಗೂ ಲಿಟರೇಚರ್ ಆಫ್ ಪ್ರೊಟೆಸ್ಟ್ ಎಂಬಂತಹ ಅಭಿವ್ಯಕ್ತಿಯ ಮಾದರಿಗಳು ಅದಾಗಲೇ ಕುವೆಂಪು ಅವರಲ್ಲಿ ಅವತರಿಸಿಬಿಟ್ಟಿದ್ದವು.
ಹಾಗಾಗಿಯೇ ಕುವೆಂಪು ಅವರಿಗೆ ಅಭಿವ್ಯಕ್ತಿ ಎಂಬುದು ಮೂಲಭೂತವಾಗಿ ಸಾಮಾಜಿ-ಸಾಂಸ್ಕೃತಿಕ ತಾರತಮ್ಯಗಳನ್ನೂ ಹಾಗೂ ಅಧಿಕಾರ ಸಂಬಂಧದ ವಿನ್ಯಾಸಗಳನ್ನು ಪ್ರಕಟಿಸುವ ಕುರುಹುವಾಗಿ ಪರಿಣಮಿಸಿತ್ತು. ಮಾತೆಂಬುದು ಜೋತೀರ್ಲಿಂಗ ಎನ್ನುವ ಈ ಹೇಳಿಕೆ ಎನ್ಲೈಟನ್ಮೆಂಟಿನ ರೂಪಕವಾಗಿದೆ (ಬೆಳಕು). ಈ ಗ್ರಹಿಕೆ ಕುವೆಂಪು ಅವರಲ್ಲಿ ಅತ್ಯಂತ ನಿಚ್ಚಳವಾಗಿಯೇ ಒಡಮೂಡಿದೆ.
ಮಾತೆಂಬುದೇ ವಿಮೋಚನೆಯ ಹಾದಿ ಎಂಬುದನ್ನು ಬಲವಾಗಿ ನಂಬಿದ್ದ ಕುವೆಂಪು ಅವರು ಭಾಷೆಯ ಗ್ರಹಿಕೆ (ಅಂತಸ್ಥನೆಲೆ) ಮತ್ತು ಅಭಿವ್ಯಕ್ತಿ (ಅಸ್ಮಿತೆಯ ನೆಲೆ) ಎಂಬೀ ಎರಡೂ ಆಯಾಮಗಳನ್ನು ಬಹಳ ಖಚಿತವಾಗಿ ತಮ್ಮ ಸಾಹಿತ್ಯದಲ್ಲಿ ನೆಲೆಗೊಳಿಸಿದ್ದರು. ಇವರ ಅಭಿವ್ಯಕ್ತಿಯ ಮಾದರಿಗಳು ಪ್ರಕಟಗೊಂಡಿರುವುದು ಪ್ರತಿಮೆ, ರೂಪಕ ಹಾಗೂ ಸಾಂಕೇತಿಕವಾದದ್ದು ಎಂದು ಮೇಲ್ನೋಟದಲ್ಲಿ ಗುರುತಿಸಿದರೂ, ಈ ವಿನ್ಯಾಸವು ಈಗಾಗಲೇ ಹೇಳಿದಂತೆ ಪ್ರತಿಮಾ ವಿಧಾನದ ಮಾದರಿಯಾಗಿದೆ.
ಈ ಮಾದರಿಯನ್ನು ಮೆಟಾನಮಿಕ್-ಮೆಟಾಫರಿಕ್ (ರೋಮನ್ ಯಾಕೋಬ್ಸನ್ ಅವರ ಪರಿಕಲ್ಪನೆಗಳು) ಮಾದರಿಗಳ ಸಹಯೋಗದಿಂದ ನೆಲೆಗೊಂಡ ದೃಷ್ಟಿಕೋನವನ್ನಾಗಿ ಇವರ ಅಭಿವ್ಯಕ್ತಿಯಲ್ಲಿ ನೋಡಬಹುದು. ಈ ಬಗೆಯ ಸಂಕಥನವನ್ನು ಕಟ್ಟುವ ಪ್ರಕ್ರಿಯೆಯು ಅತ್ಯಂತ ಸಂಕೀರ್ಣವಾದದ್ದು ಎಂಬುದು ಇಲ್ಲಿ ಗೋಚರಿಸುತ್ತದೆ.
“ಕಥೆ ನಿನ್ನದಾಡೊಡಂ..ಕೃತಿ ನನ್ನ ದರ್ಶನಂ ಮೂರ್ತಿವೆತ್ತೊಂದಮರ ಕೃತಿಯೆತ್ತಿ” ಹಾಗೂ “ಇತಿಹಾಸಮಲ್ತು, ಕಥೆಯಲ್ತು ಕಥೆ ತಾಂ ನಿಮಿತ್ತಮಾತ್ರಂ” ಎಂಬೀ ಕುವೆಂಪುವರ ಹೇಳಿಕೆಗಳು ಅವರ ಸಾಹಿತ್ಯದ ದಾರ್ಶನಿಕತೆಯನ್ನು ವಿವರಿಸುತ್ತವೆ. ಈ ದಾರ್ಶನಿಕತೆಯ ಆಕೃತಿಯನ್ನು ನಿರ್ಮಿಸಲು ಹೊಸ ಭಾಷೆ ಮತ್ತು ಪರಿಭಾಷೆಯನ್ನು ಕುವೆಂಪು ಅವರು ಅತ್ಯಂತ ಪರಿಣಾಮಕಾರಿಯಾಗಿ ರೂಪಿಸಿ ಬಳಸಿಕೊಂಡರು.
ಕುವೆಂಪು ಅವರೇ ಹೇಳಿಕೊಂಡಂತೆ, ದರ್ಶನ ಮುಖ್ಯವೇ ಹೊರತು ಕತೆಯಲ್ಲ. ಕಥೆ, ಇತಿಹಾಸ, ಬಹಿರ್ಘಟನೆ ಇವೆಲ್ಲ ಜಡವಾದರೆ ದರ್ಶನವೊಂದೇ ಚೈತನ್ಯ. ಜಡವನ್ನು ಚೈತನ್ಯವನ್ನಾಗಿ ಮಾರ್ಪಡಿಸುವ ಈ ಹಂಬಲದಲ್ಲಿ ಭಾಷೆಯನ್ನು ಒಂದು ಪ್ರಮುಖ ಅಸ್ತ್ರವನ್ನಾಗಿಯೇ ಇವರು ಬಳಸಿಕೊಂಡರು ಎನ್ನುವುದು ನನ್ನ ಅಭಿಮತ.
ಅಂದರೆ ಕುವೆಂಪು ಅವರ ಕ್ರಿಟಿಕಲ್ ಡಿಸ್ಕೋರ್ಸಗಳು ಅಂಚಿನ ವ್ಯಕ್ತಿ/ಸಮೂಹಗಳ ಅಸ್ತಿತ್ವ, ಅಸ್ಮಿತೆ, ಸಬಲೀಕರಣವನ್ನು ಕುರಿತು ನಿಗಾವಹಿಸುತ್ತವೆ. ವಸಾಹತುಶಾಹಿ ಹಾಗೂ ವೈದಿಕಶಾಹಿ ಪ್ರಭಾವಕ್ಕೆ ಒಳಗಾಗಿದ್ದ ಪ್ರತಿಯೊಂದು ಸಮುದಾಯವು ಆಯಾ ಪ್ರಭಾವದಿಂದ ಹೊರಬರದೇ, ಅದು ನೆಲೆಗೊಳಿಸಿರುವ ಅಧಿಕಾರ ಸಂರಚನೆಗಳಿಂದ ಪ್ರಭಾವಿತವಾಗಿರುತ್ತದೆ. ಆದ್ದರಿಂದ ವಸಾಹತುಶಾಹಿ/ವೈದಿಕಶಾಹಿಗೆ ಒಳಗಾಗಿದ್ದ ಸಮೂಹಗಳು ಕಿಳರಿಮೆ ಹಾಗೂ ಪರಾವಲಂಬನೆಯಿಂದ ಬಳಲುತ್ತಿರುತ್ತವೆ.
ಹಾಗಾಗಿಯೇ ವಸಾಹತುಶಾಹಿ ಸಂದರ್ಭದಲ್ಲಿ ನೆಲೆಗೊಂಡಿದ್ದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ರಚನೆಗಳು ಇವತ್ತು ವಸಾಹತೋತ್ತರ ಸನ್ನಿವೇಶದಲ್ಲಿಯೂ ನಮ್ಮ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಬದುಕುಗಳನ್ನು ಸೋಂಕಿಸಿರುತ್ತವೆ. ಏಕೆಂದರೆ, ವಸಾಹತುಶಾಹಿ ಅಥವಾ ವೈದಿಕಶಾಹಿ ವಿರೋಧಿ ರಾಷ್ಟ್ರೀಯತೆಯ ಚಹರೆಗಳು ಕೂಡ ಬೂರ್ಜ್ವಾ ಲಕ್ಷಣಗಳನ್ನು ಮೈಗೂಡಿಸಿಕೊಳ್ಳುವ ಹಾಗೂ ಆ ಮುಖೇನ ವಸಾಹತುಶಾಹಿ ಸನ್ನಿವೇಶದಲ್ಲಿ ಅತ್ಯಂತ ಪ್ರಬಲವಾಗಿದ್ದ ಸಾಮಾಜಿಕ ರಾಜಕೀಯ ಅಸಮಾನತೆಗಳು ಮರುಹುಟ್ಟು ಪಡೆಯುತ್ತವೆ ಎಂಬುದನ್ನೂ ಇಲ್ಲಿ ಕಾಣಬಹುದು.
ಈ ಒಟ್ಟು ಬದುಕಿನ ಸಂಕೀರ್ಣತೆಯನ್ನು ಬಿಡಿಸಿ ನೋಡುವ ಒಂದು ತಾತ್ವಿಕ ಚೌಕಟ್ಟನ್ನೊಂದು ಕುವೆಂಪು ಅವರು ಹೇಗೆ ರೂಪಿಸಿದ್ದಾರೆ ಅನ್ನುವುದನ್ನು ಅವರ ಇಡೀ ಅಭಿವ್ಯಕ್ತಿಯ ಮೂಲಕ ನಾವು ಅರಿಯಬಹುದಾಗಿದೆ. ಬದುಕಿನ ಯಾವ ಆಯಾಮವನ್ನು ಸಾಹಿತ್ಯ ಕೃತಿಯ ಮೂಲಕ ಪ್ರಚುರಪಡಿಸಬೇಕು ಎನ್ನುವ ಸಾಂಸ್ಕೃತಿಕ ರಾಜಕಾರಣದ ಸ್ಪಷ್ಟ ಕಲ್ಪನೆ ಕುವೆಂಪು ಅವರಿಗಿತ್ತು. ಸೃಜನಶೀಲ ಅಭಿವ್ಯಕ್ತಿಯ ಮೂಲಕವೇ ಸಮೂಹಗಳ ಎಲ್ಲ ಕಾಲದ ಬದುಕಿಗೂ ಅವಶ್ಯವಾಗುವ ವೈಚಾರಿಕ ಪಾತಳಿಯನ್ನಾಗಿ ಪರಿವರ್ತಿಸಿದ ದಾರ್ಶನಿಕ ಕುವೆಂಪು.
ಈ ಸಾಹಿತ್ಯಕ ಹಾಗೂ ವೈಚಾರಿಕ ನಿರ್ವಹಣೆಯನ್ನು ಭಾಷಿಕ ನಿಲುವುಗಳಿಂದ ಆಗು ಮಾಡಿರುವುದು ಅತ್ಯಂತ ಮಹತ್ವದ ತಿರುವು ಎಂಬುದನ್ನು ನಾವ್ಯಾರೂ ಅಲ್ಲಗಳೆಯುವಂತಿಲ್ಲ. ಅಂದರೆ ಹೊಸ ಜ್ಞಾನ ಸೃಷ್ಟಿಯೆನ್ನುವುದು ಕೇವಲ ಅನುಭವದ ಕ್ರೂಢೀಕರಣವಲ್ಲ ಬದಲಾಗಿ ಅದನ್ನು ಹೊಸ ನುಡಿಗಟ್ಟಿನ ಮೂಲಕ ಕಟ್ಟಿಕೊಡುವ ಬಗೆಯೇ ಮುಖ್ಯ. ಈ ಕೆಲಸವನ್ನು ಕುವೆಂಪು ಅತ್ಯಂತ ಸಮರ್ಥವಾಗಿ ಮಾಡಿರುತ್ತಾರೆ. ಕನ್ನಡ, ಕರ್ನಾಟಕ, ಕನ್ನಡಿಗರು ಎನ್ನುವ ಸಮೀಕರಣದ ಹಿಂದಿನ ಅತೀ ಸರಳೀಕೃತವಾದ ಗ್ರಹಿಕೆಯನ್ನು ಬುಡಮೇಲು ಮಾಡಿದ್ದಾರೆ.
ಈ ದೃಷ್ಟಿಯಿಂದಲೇ ಭಾಷೆ ಎನ್ನುವುದು ವಿಮೋಚನೆಯ ಅಸ್ತ್ರ ಎಂದು ಹೇಳಲಾಗುತ್ತದೆ. ಭಾಷೆ ಮತ್ತು ಭಾಷಿಕರ ಮನಸ್ಥಿತಿಯನ್ನು ಗೋಡೆಗಳ ಸ್ವರೂಪದಲ್ಲಿ ಕಲ್ಪಸಿಕೊಂಡಿರುವ ಸನ್ನಿವೇಶದಲ್ಲಿಯೇ ಅನಿಕೇತನದ ಕಲ್ಪನೆಯನ್ನು ಇವರು ರೂಪಿಸಿದರು. ಅಷ್ಟೆಯಲ್ಲದೇ ಲೌಕಿಕ ಮತ್ತು ಅಲೌಕಿಕ ಪರಿಕಲ್ಪನೆಗಳ ಮೂಲಕ ಬದುಕಿನ ಸಂವೇದನೆಯಲ್ಲಿ ಅಡಗಿಸಿದ್ದ ಡೈಕಾಟಮಿಯನ್ನು ನಿರಾಕರಿಸಿ, ಅವೆರಡನ್ನೂ ಮೇಳೈಸಿಕೊಂಡಿರುವುದೇ ಬದುಕು ಅನ್ನುವ ತಾತ್ವಿಕತೆಯನ್ನು ಇವರ ಸಾಹಿತ್ಯದಲ್ಲಿ ಕಾಣುತ್ತೇವೆ. ಅದಕ್ಕಾಗಿಯೇ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಪೀಠಿಕೆಯಲ್ಲಿ ಹೇಳಿದ “ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ…” ಎಂಬೀ ಮಾತು ಬದುಕಿನ ದೊಡ್ಡ ದರ್ಶನವನ್ನು ಕೊಡುವ ಕೈವಲ್ಯವಾಗಿದೆ. ಆಲೋಚನೆ ಮತ್ತು ಭಾಷೆಗಳ ನಡುವಣ ಸಂಬಂಧದ ವಿಭಿನ್ನ ವಿನ್ಯಾಸಗಳು ಇಲ್ಲಿ ಅತ್ಯಂತ ನಿಚ್ಚಳವಾಗಿಯೇ ಕಾಣುತ್ತವೆ.
ಕಾಲದ ಬಿಕ್ಕಟ್ಟಿಗೆ ಕಾರಣವಾಗಿರುವ ಸಾಮಾಜಿಕ, ಧಾರ್ಮಿಕ, ರಾಜಕೀಯ ವಿದ್ಯಮಾನಗಳು ಕುವೆಂಪು ಅವರ ಸಾಹಿತ್ಯದಲ್ಲಿ ಅಂತರ್ಗತವಾಗಿವೆ ಎನ್ನುವುದನ್ನು ಈ ಭಾಷಿಕ ವಿನ್ಯಾಸಗಳು ಪ್ರತಿಪಾದಿಸುತ್ತವೆ.
ಸಂವೇದನೆ ಮತ್ತು ಅಭಿವ್ಯಕ್ತಿಯ ರೂಪ ಇವುಗಳ ನಡುವೆ ಇರುವ ಭಾಷೆಯ ಪಾತ್ರ ಹೇಗೆ ಬದಲಾಗಬೇಕು ಎನ್ನುವುದನ್ನು ಕುವೆಂಪು ಅವರಲ್ಲಿ ನೋಡಬಹುದು. ಅಂದರೆ ಭಾಷೆಯ ಜವಾಬ್ದಾರಿ, ಸೂಕ್ಷ್ಮತೆ ಹಾಗೂ ಬದ್ಧತೆ ಏನು? ಅದನ್ನು ನಾವು ರೂಪಿಸುವ ಬಗೆ ಯಾವುದು? ಸಮೂಹಗಳ ಬದುಕು ನೆಲೆಗೊಳ್ಳಲು ಭಾಷೆಯ ಪಾತ್ರ ಎಂತಹದು? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರಗಳು ಕುವೆಂಪು ಅವರಲ್ಲಿ ದೊರೆಯುತ್ತವೆ. ಈ ತಾತ್ವಿಕತೆಯನ್ನು ಅರಿಯಲು ಭಾಷೆ ಮತ್ತು ಸಾಹಿತ್ಯಗಳ ನಡುವಣ ಸಂಬಂಧವನ್ನು ಅರಿಯುವುದು ಅವಶ್ಯ. ಸಾಹಿತ್ಯ ಪಠ್ಯ ಸ್ವಭಾವತ ವಿಶಿಷ್ಟವಾಗಿರುವಂತಹದು.
ಇಲ್ಲಿ ಸಾಹಿತ್ಯ ಮತ್ತು ಭಾಷೆಗಳ ನಡುವಣ ವಿಶಿಷ್ಟ ಸಂಬಂಧ ಎಂತಹದು ಎನ್ನುವುದನ್ನು ಅರಿಯುವುದಕ್ಕೆ ಬೇಕಾದ ಇಲ್ಲವೇ ಪರಿಭಾವಿಸುವುದಕ್ಕೆ ಬೇಕಾದ ಅವಕಾಶವೂ ವ್ಯಕ್ತವಾಗುತ್ತದೆ. ಅಂದರೆ ಸಾಹಿತ್ಯದ ಮೂಲಕ ಏರ್ಪಡುವ ಯಾವುದೇ ಬಗೆಯ ಅನುಭವ ಹಾಗೂ ಅರಿವು ಇಲ್ಲವೇ ತಿಳಿವು ನಮಗೆ ಒಂದು ತಾತ್ವಿಕ ವಿನ್ಯಾಸವಾಗಿ ಭಾಷೆಯ ಮೂಲಕವೇ ಲಭ್ಯವಾಗುತ್ತವೆ. ಇಲ್ಲಿ ಭಾಷೆ ಅತ್ಯಂತ ಪ್ರಾಥಮಿಕ ವಿದ್ಯಮಾನವಾಗಿದೆ. ತಿಳಿವೊಂದು ಮೈದಾಳುವ ಸನ್ನಿವೇಶ ಹಾಗೂ ಸಂಬಂಧಗಳು ವಿಭಿನ್ನ ನೆಲೆಯಲ್ಲಿ ಅಸ್ತಿತ್ವದಲ್ಲಿರುತ್ತವೆ.
ಅಂದರೆ ಭಾಷಾಶಾಸ್ತ್ರ ಮತ್ತು ಇತರ ಜ್ಞಾನಶಿಸ್ತುಗಳ ನಡುವಣ ಸಂಬಂಧದಲ್ಲಿ ಈ ವಿನ್ಯಾಸವನ್ನು ಮನಗಾಣಬಹುದು. ಚರಿತ್ರೆ, ಸಮಾಜಶಾಸ್ತ್ರ, ಮಾನವಶಾಸ್ತ್ರ ಮೊದಲಾದ ಈ ಎಲ್ಲ ವಲಯಗಳಲ್ಲಿ ಮೈದಾಳುವ ತಿಳಿವು ಭಾಷೆಯನ್ನೇ ನೆಲೆಯಾಗಿಸಿಕೊಂಡಿರುತ್ತದೆ. ಏಕೆಂದರೆ, ಭಾಷಾಕೇಂದ್ರಿತ ವಾಸ್ತವಗಳು, ಸನ್ನಿವೇಶಗಳು, ನಿರೂಪಣೆ ಮುಂತಾದವುಗಳನ್ನು ಪರಿಶೀಲಿಸುವ ಇಲ್ಲವೇ ವಿಶ್ಲೇಷಿಸುವ ಮೂಲಕವೇ ತಿಳಿವಿನ ಸಾಧ್ಯತೆಯನ್ನು ನಿಚ್ಚಳವಾಗಿ ಅರಿಯಬಹುದು.
ಆದರೆ ದಿನನಿತ್ಯದ ಮಾತುಕತೆ, ಬದುಕಿನ ವ್ಯವಹಾರಗಳು, ಸಾಹಿತ್ಯ ಇಲ್ಲವೇ ಇನ್ನ್ಯಾವುದೇ ಜ್ಞಾನಶಿಸ್ತಿನಷ್ಟು ಸಂಕೀರ್ಣವಾಗಿರುವುದಿಲ್ಲ. ಅಂದರೆ ಯಾವುದೇ ಸಂಕಥನ ಓದು ಮತ್ತು ಭಾಷಾಶಾಸ್ತ್ರಗಳ ನಡುವೆ ಏರ್ಪಡುವಷ್ಟು ಸಂಕೀರ್ಣತೆ, ನಮ್ಮ ದಿನದ ಮಾತುಕತೆಗಳು ಗಹನತೆಯನ್ನು ಪಡೆದುಕೊಳ್ಳದೇ, ಸಹಜಸ್ಥಿತಿಯಲ್ಲಿಯೇ ತಮ್ಮ ಗುರಿ ಉದ್ದೇಶಗಳನ್ನು ಪೊರೈಸುತ್ತವೆ.
ಬದುಕಿನ ಇಂತಹ ಸಹಜ ಮಾತುಕತೆ, ಅನುಭವ ಅಥವಾ ನಿರೂಪಣೆಗಳನ್ನು ಲಿಂಗ್ವಿಸ್ಟಿಕ್ ಪ್ರ್ಯಾಗ್ಮಾಟಿಸಂ ಮತ್ತು ಸಂಕಥನ ವಿಶ್ಲೇಷಣೆಯ ಚೌಕಟ್ಟಿನಲ್ಲಿಟ್ಟು ನೋಡಿದರೆ, ಸಾಹಿತ್ಯ ಪಠ್ಯಗಳಲ್ಲಿರುವ ನಿರೂಪಣೆಗಳಷ್ಟೇ, ಇವು ಕೂಡ ಗಹನವಾಗಿ/ಗಂಭೀರವಾಗಿ ಇರುತ್ತವೆ ಎನ್ನುವ ವಾಸ್ತವವನ್ನು ಮನಗಾಣುತ್ತೇವೆ. ಬದುಕಿನ ದೈನಂದಿನ ದಂದುಗವೇ ಒಂದು ತಾತ್ವಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಪರಿಪ್ರೇಕ್ಷ್ಯದಲ್ಲಿ ನೆಲೆಗೊಂಡು ಪ್ರಕಟಗೊಳ್ಳುತ್ತದೆ. ಆದ್ದರಿಂದ ಸಾಹಿತ್ಯ ಪಠ್ಯಗಳಲ್ಲಿ ಅಡಕವಾಗಿರುವ ಅನುಭವ ವಿಶೇಷವಾಗಿ ನಮ್ಮ ಬದುಕಿನ ದಾರ್ಶನಿಕತೆಯಾಗಿ ಕಾಣುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

-
ದಿನದ ಸುದ್ದಿ3 hours agoಬೆಂಗಳೂರು ಇ-ಕಾಮರ್ಸ್ ಡಾರ್ಕ್ ಸ್ಟೋರ್ಗಳಲ್ಲಿ ಅವಧಿ ಮೀರಿದ ಆಹಾರ, ಔಷಧ ಪತ್ತೆ
-
ದಿನದ ಸುದ್ದಿ3 hours agoಮಧ್ಯಪ್ರಾಚ್ಯದಲ್ಲಿ ಏಳು ತಿಂಗಳಿನಿಂದ ಯುದ್ಧದ ಕಾರ್ಮೋಡ – ಇರಾನ್–ಅಮೆರಿಕ ಸಂಘರ್ಷ ತೀವ್ರ
-
ದಿನದ ಸುದ್ದಿ3 hours agoದಾವಣಗೆರೆ ನಗರಕ್ಕೆ ರಾಜ್ಯಮಟ್ಟದ “ಸ್ವಚ್ಛ ವಾರ್ಡ್ ವಾಯು ಸರ್ವೇಕ್ಷಣೆ 2025” ಪ್ರಶಸ್ತಿಯ ಗರಿ: ರೂ 25.00 ಲಕ್ಷ ನಗದು ಬಹುಮಾನ
-
ದಿನದ ಸುದ್ದಿ3 hours agoಸ್ಕ್ರೀನ್ ಬೆಳಕು, ಸಾಮಾಜಿಕ ಜಾಲತಾಣ – ನಿದ್ರೆಗೆ ಅಡ್ಡಿ, ಆರೋಗ್ಯಕ್ಕೆ ಹಾನಿ
-
ದಿನದ ಸುದ್ದಿ3 hours agoKPSCExam: ಬೆಂಗಳೂರು ಸೇರಿದಂತೆ ಜಿಲ್ಲೆಗಳಲ್ಲಿ ವೈದ್ಯರ ಕೊರತೆ – ತಕ್ಷಣ ನೇಮಕಾತಿ ಅಗತ್ಯ
-
ದಿನದ ಸುದ್ದಿ3 hours agoGold Rate Fall: 24 ಕ್ಯಾರೆಟ್ ಚಿನ್ನದ ದರ ₹104 ಇಳಿಕೆ, ಬೆಳ್ಳಿ ಗ್ರಾಂಗೆ ₹250 ಸ್ಥಿರ
-
ದಿನದ ಸುದ್ದಿ2 hours agoಬೆಂಗಳೂರು ಸೆಪ್ಟೆಂಬರ್ನಲ್ಲಿ 31.9 ಡಿ.ಸೆ. ದಾಖಲೆ – ಹವಾಮಾನ ಇಲಾಖೆ ಎಚ್ಚರಿಕೆ
-
ದಿನದ ಸುದ್ದಿ19 minutes agoEV ನೋಂದಣಿಯಲ್ಲಿ ಕರ್ನಾಟಕದ ಸಾಧನೆ – ಶುದ್ಧ ಚಲನೆಗೆ ಬೆಸ್ಕಾಂ ಮುನ್ನಡೆ

