ಅಂತರಂಗ
ಸ್ತ್ರೀಕುಲದ ಆಕಾಶದಲ್ಲಿ ಸದಾ ಬೆಳಗುವ ಸೂರ್ಯತೇಜೆ ಸಾವಿತ್ರಿಬಾಯಿ ಫುಲೆ..!

ಎಲ್ಲರಿಗೂ ಅಕ್ಷರದವ್ವನ ಜನುಮ ದಿನಾಚರಣೆಯ ಶುಭಾಶಯಗಳು
- ಸುರೇಶ ಎನ್ ಶಿಕಾರಿಪುರ
ಭಾರತದ ಇತಿಹಾಸದಲ್ಲಿ ಜ್ಯೋತಿಬಾ ಸಾವಿತ್ರಿಬಾಯಿ ಫುಲೆ ದಂಪತಿಗಳದ್ದು ಒಂದು ಅನನ್ಯ ದಾಂಪತ್ಯ. ಅತ್ಯಂತ ಚಿಕ್ಕವಯಸ್ಸಿನ ಹುಡುಗಿ ಸಾವಿತ್ರಿ ಬಾಲ್ಯವಿವಾಹದ ಬಲೆಗೆ ಬಲಿಯಾಗಿ ತನ್ನ ಎಂಟನೇ ವಯಸ್ಸಿನಲ್ಲಿ ಜ್ಯೋತಿಬಾ ಫುಲೆಯವರನ್ನು ಕೈ ಹಿಡಿಯಬೇಕಾಗಿ ಬಂತು. ಬಹುಷಃ ಆಕೆ ಜ್ಯೋತಿಬಾ ಅವರನ್ನಲ್ಲದೇ ಬೇರಾವುದೋ ಪುರುಷನನ್ನು ಮದುವೆಯಾಗಿದ್ದರೆ ಈ ದೇಶದ ಸಂಪ್ರದಾಯವಾದಿ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಆಕೆ ಹೇಳಹೆಸರಿಲ್ಲದಂತೆ ಕಣ್ಮರೆಯಾಗಿಹೋಗುತ್ತಿದ್ದಳು.
ಆಕೆ ಖಂಡಿತವಾಗಿಯೂ ಕೈ ಹಿಡಿದದ್ದು ತನ್ನನ್ನು ಬೆಳಕಿನೆಡೆಗೆ ಕರೆದೊಯ್ಯುವ ತೇಜಸ್ವೀ ಪುರಷನನ್ನು. ಆರ್ಧ್ರ ಹೃದಯಿಯೂ ಮಾನವೀಯನೂ ವಿವೇಕಿಯೂ ಆಗಿದ್ಧ ಜ್ಯೋತಿಬಾ ಫುಲೆ ಎಂಬ ಪ್ರಬುದ್ಧ ಯುವಕ ತಾನು ಸಂಸಾರವೆಂದರೇನು ದಾಂಪತ್ಯವೆಂದರೇನು ಎಂಬ ಬಗ್ಗೆ ಕಲ್ಪನೆಗಳೇ ಇಲ್ಲದ ಆಡಿ ಕುಣಿದು ಬಾಲ್ಯದ ಸುಖಗಳನ್ನು ಅನುಭವಿಸಬೇಕಾಗಿದ್ದ ಎಳೆಯ ಬಾಲೆಯನ್ನು ತಾನು ಮದುವೆಯಾಗಬೇಕಾಗಿ ಬಂದುದಕ್ಕಾಗಿ ಮಮ್ಮಲ ಮರುಗಿದ್ದ ಚಿಂತೆಗೆ ಬಿದ್ದಿದ್ದ ತಾನು ತಪ್ಪಿತಸ್ಥನಲ್ಲದಿದ್ದರೂ ಈ ಪುರುಷಾಧಿಕ್ಯದ ಪಾಪದ ಕೃತ್ಯಕ್ಕೆ ತಾನೂ ಬಲಿಯಾದವನೆಂಬ ಅರಿವು ಆತನಿಗಿದ್ದೇ ಇತ್ತು.
ತನ್ನ ಮಡದಿಯನ್ನು ಆತ ಸಂಸಾರದ ಕೋಟಲೆಗಳಿಗೆ ದಾಂಪತ್ಯದ ಆಕರ್ಷಣೆಗಳಿ ಬಲಿಹಾಕದೇ ಅವಳ ಉದ್ಧಾರಕ್ಕಾಗಿ ಫಣತೊಟ್ಟ. ತನ್ನ ಮುದ್ದು ಹೆಂಡತಿಗೆ ಸ್ವತಃ ಶಿಕ್ಷಣವನ್ನು ನೀಡತೊಡಗಿದೆ. ಕಲಿಕೆಯಲ್ಲಿ ಗಾಂಭೀರ್ಯ ಕಾರುಣ್ಯ ಪ್ರೇಮ ದೂರದೃಷ್ಟಿ ದಿಟ್ಟ ನಿಲುವು ಎಲ್ಲವೂ ಇದ್ದವು. ಹೆಣ್ಣು ಕಲಿತೇ ಕಲಿತಳು ಕಲಿತು ಕಲಿಸುವವಳಾಗಿ ರೂಪುತಳೆದಳು. ಜ್ಯೋತಿಬಾ ಆಕೆಯನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೇರೇಪಿಸಿದರು. ಸಾವಿತ್ರಿಬಾಯಿ ಮಿಚೆಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕ ತರಭೇತಿ ಶಿಕ್ಷಣವನ್ನೂ ಪಡೆದಳು.
ಭಿಡೆ ಎಂಬುವವರ ಮನೆಯಲ್ಲಿ ಆರಂಭವಾದ ಹೆಣ್ಣುಮಕ್ಕಳ ಶಾಲೆಯಲ್ಲಿ ಆಕೆ ಮುಖ್ಯೋಪಾಧ್ಯಾಯಿನಿ ಆದಳು. ಹೆಣ್ಣೊಬ್ಬಳು ಶಿಕ್ಷಕಿಯಾಗುವುದು ಶಿಕ್ಷಣ ನೀಡುವುದು ಹಾಗೂ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದು ಅಂದಿನ ಪುರುಷ ಪ್ರಧಾನ ಜಾತಿ ವ್ಯವಸ್ಥೆಯಲ್ಲಿ ನಿಷಿದ್ಧ ಮತ್ತು ಮಹಾ ಅಪರಾಧ. ಸಂಪ್ರದಾಯವಾದಿಗಳಿಗೆ ಇದು ಆಗಿಬರಲಿಲ್ಲ. ಜ್ಯೋತಿಬಾಳ ನೆಡೆ ಅವರಿಗೆ ತಮ್ಮ ಸನಾತನ ಧರ್ಮಕ್ಕೇ ಇಟ್ಟ ಕೊಡಲಿಯೇಟಿನಂತೆ ಭಾಸವಾಯಿತು.
ಕಲಿಸಲು ಶಾಲೆಗೆ ಹೋಗುವವಳ ಮೇಲೆ ನಿತ್ಯವೂ ಅಡ್ಡಗಟ್ಟಿ ಕೇರಿಗಳ ಇಕ್ಕೆಲದಲ್ಲಿ ನಿತ್ತು ಅವಾಚ್ಯ ಶಬ್ಧಗಳಿಂದ ಬಯ್ಯುವುದು ಕೆಸರು ರಾಡಿ ಸಗಣಿಗಳು ಎರಚುವುದು ಮಣ್ಣು ತೂರುವುದು ಮೊದಲಾದ ವಿಕೃತ ಮಾರ್ಗಗಳ ಮೂಲಕ ಆಕೆಯನ್ನು ಅತೀವವಾಗಿ ಕಾಡುವುದು ಅವಮಾನಿಸುವುದು ಹಲ್ಲೆಗೆ ನೆಡೆಸುವುದು ಇವೆಲ್ಲವನ್ನೂ ಮಾಡಿದರು. ಆಕೆ ಒಮ್ಮೆ ಧೃತಿಗೆಟ್ಟು ತನ್ನಿಂದ ಇದು ಸಾಧ್ಯವಿಲ್ಲವೆಂದು ಪತಿಯ ಬಳಿ ದುಃಖಿಸುತ್ತಾ ಕುಗ್ಗಿ ಕುಸಿದಾಗ ಆತ ಅವಳಲ್ಲಿ ಭರವಸೆ ತುಂಬಿದ ಪ್ರೇರೇಪಿಸಿದ ಹೆಗಲೆಣೆಯಾಗಿ ಅವಳೊಡನೆ ನಿತ್ತ.
ಅದು ಹೂವಿನ ಹಾದಿಯಾಗಿರಲಿಲ್ಲ ಪ್ರತಿ ಹೆಜ್ಜೆಗೆ ವಿಷಜಂತುಗಳು ಎದುರು ನಿಲ್ಲುವ ಕಲ್ಲುಮುಳ್ಳಿನ ಕಠಿಣ ಮಾರ್ಗವಾಗಿತ್ತು. ಹೆಣ್ಣಿಗೆ ಕಾನೂನಿನ ರಕ್ಷಣೆಗಳೇ ಇಲ್ಲದ ಕಾಲದಲ್ಲಿ ಜೀವವನ್ನು ಬೀದಿಯ ದೂರ್ತರ ಎದುರು ನಿತ್ಯವೂ ಸವಾಲಿಗೊಡ್ಡುತ್ತಲೇ ಮತ್ತೆ ಮುನ್ನುಗ್ಗಿದಳು. ದಾರಿಯಲ್ಲಿ ನಿತ್ಯವೂ ಕೆಸರು ಸಗಣಿ ಮಣ್ಣು ಮೆತ್ತಿರುತ್ತಿದ್ದ ಸೀರೆಯನ್ನು ಶಾಲೆಗೆ ಬಂದು ಬಲಾಯಿಸುತ್ತಿದ್ದರು.
ಅದಕ್ಕಾಗೇ ಆಕೆ ಮೊದಲೇ ಮತ್ತೊಂದು ಸೀರೆಯನ್ನು ಬ್ಯಾಗಿನಲ್ಲಿ ಇಟ್ಟುಕೊಂಡು ಬಂದಿರುತ್ತಿದ್ದಳು. ಸಾವಿತ್ರಿಬಾಯಿ ಫುಲೆಯವರ ಬೆನ್ನಿಗಿದ್ದು ಕಾದವ ಗಂಡ ಜ್ಯೋತಿ ರಾವ್. ಆತನ ನೈತಿಕ ಬಲ ತನ್ನೊಳಗಿನ ದಿವ್ಯತೆ ಎರಡರ ಅಮೃತವಾಹಿನಿಯೇ ಆಕೆಯನ್ನು ಉದ್ಧರಿಸಿತು ಆಕೆಯಿಂದ ಸ್ತ್ರೀಕುಲವೇ ಬಿಡುಗಡೆಯ ಮಾರ್ಗದಲ್ಲಿ ಕ್ರಮಿಸತೊಡಗಿತು. ಆಕೆ ಸ್ತ್ರೀಕುಲದ ಆಕಾಶದಲ್ಲಿ ಸದಾ ಬೆಳಗುವ ಸೂರ್ಯತೇಜೆ.
ಸಂಪ್ರದಾಯವಾದಿಗಳು ದಂಪತಿಗಳನ್ನು ಕೊಂದು ಬರಲು ಕಳುಹಿದ್ದ ಕೊಲೆಗಾರರನ್ನೇ ಮಕ್ಕಳಂತೆ ಕಂಡು ಮನಪರಿವರ್ತಿಸಿ ಕೊಲೆಯ ಮಾರ್ಗದಿಂದ ಮನುಷ್ಯ ಮಾರ್ಗದಲ್ಲಿ ಮುನ್ನೆಡೆಸಿದ ದಾರ್ಶನಿಕ ಜೋಡಿ ಇದು. ಸ್ತ್ರೀ ಮತ್ತು ಪುರುಷರನ್ನು ಪ್ರಕೃತಿ ಜೋಡಿಯಾಗಿಸುವುದು ಯಾತಕ್ಕಾಗಿ ಎಂಬ ಪ್ರಶ್ನೆಯನ್ನು ನಾವೆಲ್ಲರೂ ಕೇಳಿಕೊಳ್ಳಲೇ ಬೇಕು. ದಂಪತಿಗಳ ಇಲ್ಲಿಗೆ ನಿಲ್ಲುವುದಿಲ್ಲ ಯುವ ಸಮುದಾಯ ಅವರ ಕಥನವನ್ನು ಓದಿ ತಿಳಿಯಬೇಕು. ತಿಳಿದು ಬದುಕನ್ನು ಬದುಕುವ ರೀತಿಯನ್ನು ಕಂಡುಕೊಳ್ಳಬೇಕು. ಜಢ ಸಂಪ್ರದಾಯಗಳ ಸಂಕೋಲೆಯನ್ನು ಕಿತ್ತೆಸೆದು ಪ್ರಗತಿಗಾಮಿ ಜೀವನ ಮಾರ್ಗದಲ್ಲಿ ಮುನ್ನೆಡೆಯಬೇಕು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಲಕ್ಷ್ಮಿನಾರಾಯಣ ಭಟ್ಟರಿಗೊಂದು ಭಾವ ನಮನ

- ನಾಗರಾಜ ಸಿರಿಗೆರೆ,ಕನ್ನಡ ಅದ್ಯಾಪಕರು,ದಾವಣಗೆರೆ
ನಮಸ್ಕಾರ ಸರ್,
ತಮಗೆ ನೆನಪಿದೆಯ ಸರ್, ಅದು 90ರ ದಶಕ. ನಮ್ಮೂರಿನಲ್ಲಿ ಮೈಸೂರು ಮಲ್ಲಿಗೆಯ ಕವಿ ನರಸಿಂಹಸ್ವಾಮಿಯವರಿಗೆ ಅಭಿನಂದನಾ ಸಮಾರಂಭ. ಅಭಿನಂದನಾ ಭಾಷಣ ಮಾಡಲು ತಮ್ಮನ್ನು ಆಹ್ವಾನಿಸಲು ಮನೆಗೆ ಬಂದಿದ್ದೆ. ಆಗ ತಮ್ಮ ಮಗನ ಮದುವೆ ಸಂಭ್ರಮದಲ್ಲಿದ್ದೀರಿ. ಹಾಗಾಗಿ ತಾವು ಬಾರದೆ, ಮತ್ತೋರ್ವ ಕವಿ ವ್ಯಾಸರಾಯರನ್ನು ಒಪ್ಪಿಸಿ, ಕಳುಹಿಸಿಕೊಟ್ಟಿದ್ದಿರಿ.
ಅಲ್ಲಿಂದ ನನಗೆ ತಮ್ಮೊಡನೆ ಒಂದಿಷ್ಟು ನೇರವಾದ ಒಡನಾಟ ಬೆಳೆದಿತ್ತು. ಅದಕ್ಕೂ ಮೊದಲು ತಮ್ಮ ಭಾವಗೀತೆಗಳ ಮೂಲಕ, ವಿಶೇಷವಾಗಿ `ಭಾವ ಸಂಗಮ”ದ ಮಾಧುರ್ಯದ ಗುಂಗು ತಲೆತುಂಬಿತ್ತು. ಅಲ್ಲಿರುವ ಮಾಸ್ತಿ, ಕುವೆಂಪು, ಅಡಿಗ, ಡಿವಿಜಿಯವರ ಗೀತೆಗಳು ನನ್ನನ್ನು ಭಾವಪರವಶ ಮಾಡಿದ್ದು ಸುಳ್ಳಲ್ಲ. ಒಂದೊಂದು ಗೀತೆಯೂ ಅಮರ ಮಧುರ. ಆಗಿನ್ನು ನಾನು ಬಿ ಎ ತರಗತಿಯ ವಿದ್ಯಾರ್ಥಿ. ತಾವು ಹೊರತಂದ `ಸಮ್ಮಿಲನ’ ಧ್ವನಿ ಸುರಳಿಯ ಪರಿಚಯ ಪತ್ರಿಕೆಯಲ್ಲಿ ಓದಿದ್ದೆ.
ಅದನ್ನು ಖರೀದಿಸಲು ದಾವಣಗೆರೆಯ ಕ್ಯಾಸೆಟ್ ಅಂಗಡಿಗಳನ್ನೆಲ್ಲ ಸುಡು ಬಿಸಿಲಲ್ಲಿ ತಿರುಗಿದ್ದೆ. ಗಾಂಧಿ ಸರ್ಕಲ್ ಮೂಲೆಯ ಕ್ಯಾಸೆಟ್ ಅಂಗಡಿ ಮಾಲಿಕ ನನ್ನ ಕುತೂಹಲ, ಆಸಕ್ತಿಯನ್ನು ಅರಿತು ಆ ಕ್ಯಾಸೆಟ್ಟನ್ನು ನನಗಾಗಿ ತರಿಸಿಕೊಟ್ಟಿದ್ದ. ಅದರಲ್ಲಿ ಕನ್ನಡದ ಹೆಸರಾಂತ ಹತ್ತು ಜನ ಕವಿಗಳ ಕವಿತಾ ವಾಚನ ಅದ್ಬುತ. ಅದರಲ್ಲಿ ಸ್ವತಃ ಪುತಿನ, ಅಡಿಗ, ನರಸಿಂಹಸ್ವಾಮಿಯವರು ತಮ್ಮ ವೃದ್ಧಾಪ್ಯದಲ್ಲೂ ಒಂದೊಂದು ಕವನವನ್ನು ವಾಚಿಸಿದ್ದರು, ತಾವೂ ಸೇರಿದಂತೆ ಜಿ ಎಸ್ ಎಸ್, ಕಂಬಾರ, ನಿಸಾರ್, ಬಿ ಆರ್ ಎಲ್, ಎಚ್ ಎಸ್ ವಿ, ಸಿದ್ಧಲಿಂಗಯ್ಯನವರ ಎರಡೆರಡು ಕವಿತೆಗಳ ವಾಚನದ ಅಪೂರ್ವ ಸಂಗ್ರಹ ಅದು.
ಆ ಧ್ವನಿ ಸುರಳಿಯನ್ನು ನಾನು ನೂರಾರು ಸಲ ಕೇಳಿ, ಆ ಕವಿತೆಗಳೆಲ್ಲ ಬಾಯಿಪಾಠವಾಗಿದ್ದವು. ನಿಮ್ಮನ್ನು ಭೇಟಿಯಾದಾಗಲೆಲ್ಲ ಇದರ ಮುಂದುವರಿದ ಭಾಗವಾಗಿ, ಬೇಂದ್ರೆ, ಕುವೆಂಪು, ಮಾಸ್ತಿ, ಡಿವಿಜಿ, ರಾಜರತ್ನಂ ಮುಂತಾದ ಹಿರಿಯ ತಲೆಮಾರಿನ ಕವಿಗಳ ಧ್ವನಿ ಸಂಗ್ರಹವನ್ನು ಹೊರತನ್ನಿ ಎಂದು ಒತ್ತಾಯಿಸುತ್ತಿದ್ದೆ. ಈ ದಿಗ್ಗಜರ ಕವನ ವಾಚನದ ಶೈಲಿ ಕೇಳಬೇಕೆಂಬ ಹಂಬಲ. (ಆಗ ಈಗಿನಂತೆ ಗೂಗಲ್ ಯೂಟ್ಯೂಬ್ ಗಳು ಇಲ್ಲದ ಕಾಲ).
ಇದನ್ನೂ ಓದಿ |ಕವಿತೆ | ಬೆಳಕು ಕತ್ತಲ ನಡುವೆ
ಆದರೆ ಈ ದಿಗ್ಗಜರ ಕವಿತೆಗಳ ವಾಚನದ ಧ್ವನಿಮುದ್ರಣದ ಹಕ್ಕುಗಳನ್ನು ಆಕಾಶವಾಣಿಯಿಂದ ಪಡೆಯುವುದು ಅಷ್ಟು ಸುಲಭವಿರಲಿಲ್ಲ. ಆದರೆ ತಾವು ಹೇಳಿದ ತಾಂತ್ರಿಕ ಕಾರಣಗಳಿಗಿಂತಲೂ ವ್ಯಾವಹಾರಿಕ ಕಾರಣಗಳು ಹೆಚ್ಚಾಗಿದ್ದವು. ಧ್ವನಿಸುರಳಿಗಳ ಕಾಲ ಮುಗಿದು ಸಿಡಿಗಳ ಕಾಲ ಬಂದಾಗ ತಮ್ಮನ್ನು ಭೇಟಿ ಮಾಡಿ, `ಸಮ್ಮಿಲನ’ ಕ್ಯಾಸೆಟ್ಟನ್ನು ಸಿಡಿಗೆ ಪರಿವರ್ತಿಸಲು ಕೇಳಿಕೊಂಡೆ. ಈಗಲೂ ತಾಂತ್ರಿಕ ಕಾರಣಗಳಿಗಿಂತಲೂ ವ್ಯಾವಹಾರಿಕ ಕಾರಣಗಳೇ ಇದ್ದವು.
ತಾವು ಸಾಹಿತ್ಯ ಅಕಾಡಮಿ ಸದಸ್ಯರಾದಾಗ ಕವಿಗಳ ಕವನ ವಾಚನದ ಧ್ವನಿ ಸುರಳಿಗಳನ್ನು ಹೊರತರುವ ಯೋಜನೆಯನ್ನು ಪ್ರಸ್ತಾಪಿಸಿದಾಗ ಬಹುಸಂಖ್ಯಾತ ಸದಸ್ಯರು `ಇದೊಂದು ವ್ಯಾವಹಾರಿಕ ಯೋಜನೆ’ ಎಂದು ನಿಮ್ಮನ್ನು ಗೇಲಿ ಮಾಡಿದವರುಂಟು. ಆದರೆ ನಮ್ಮಂತಹ ಕಾವ್ಯ ಕುತೂಹಲಿಗಳಿಗೆ, ಶಾಲೆಯಲ್ಲಿ ಪಾಠ ಮಾಡುವ ಕನ್ನಡ ಮೇಷ್ಟ್ರುಗಳಿಗೆ ಆ ಧ್ವನಿ ಸುರುಳಿಯ ಮಹತ್ವ, ಅದು ಎಷ್ಟು ಉಪಯೋಗ ಎಂಬುದು ಅಕಾಡಮಿಕ್ ಬುದ್ಧಿಜೀವಿಗಳಿಗೆ ತಿಳಿಯದೆ ಹೋಯಿತು. (ಆದರೆ ಇತ್ತೀಚಿನ ದಿನಗಳಲ್ಲಿ ಅಕಾಡಮಿಯಿಂದ ಕವಿಗಳ ಕಾವ್ಯ ವಾಚನದ ಯೋಜನೆ ಜಾರಿಗೆ ಬಂದು, ಒಂದಿಷ್ಟು ಕವಿಗಳ ಸಿಡಿಗಳು ಹೊರಬಂದವು.
ಆದರೆ ಅವು ಜನಪ್ರಿಯವಾಗಲಿಲ್ಲ. ಅದಕ್ಕೆ ಕಾರಣ 20-30 ವರ್ಷಗಳ ಹಿಂದಿನ ಕಾವು ಸಾಹಿತ್ಯಕ ವಾತಾವರಣ ಈಗ ಇಲ್ಲದೆ ಇರುವುದು) ಸರ್ ತಮ್ಮದು ಬಹುಮುಖ ಪ್ರತಿಭೆ. ಆಬಾಲ ವೃದ್ಧರಾದಿಯಾಗಿ ತಮ್ಮ ಸಾಹಿತ್ಯ ಅಚ್ಚುಮೆಚ್ಚು. `ಬಾಳ ಒಳ್ಳೇರು ನಮ್ಮ ಮಿಸ್, ಏನ್ ಕೇಳಿದರೂ ಎಸ್ಸೆಸ್, ನಗ್ತ ನಗ್ತಾ ಮಾತಾಡ್ತಾರೆ, ಸ್ಕೂಲಿಗೆಲ್ಲಾ ಫೇಮಸ್’… ಎಂಬ ಬಾಲಾಭಾಷೆಯ ನರ್ಸರಿ ಮಕ್ಕಳ ಶಿಶುಗೀತೆಯಿಂದ ಹಿಡಿದು ಶೂದ್ರಕನ ಮೃಚ್ಛಕಟಿಕದವರೆಗೆ ತಮ್ಮ ಸಾಹಿತ್ಯದ ಹರವು.
ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆ, ಸಾಹಿತ್ಯದಲ್ಲಿ ಅಪಾರ ಒಲವು. ಹಾಗಾಗಿ ಕುಮಾರವ್ಯಾಸ-ಕಾಳಿದಾಸ-ಶರೀಫರಿಂದ ಏಟ್ಸ್, ಇಲಿಯೆಟ್, ಶೇಕ್ಸ್ ಫಿಯರ್ ತನಕ ತಮ್ಮ ಬರಹದ ಜಾಡು. ಕನ್ನಡಿಗರ ಪಾಲಿಗೆ ಅಜ್ಞಾತವಾಸದಲ್ಲಿದ್ದ ಶರೀಫ್ ಸಾಹೇಬರನ್ನು ಮತ್ತು ಅವರ ತತ್ತ್ವಪದಗಳನ್ನು ಮೊದಲ ಸಲ ಹೊರ ಜಗತ್ತಿಗೆ ಪರಿಚಯಿಸಿದ ಕೀರ್ತಿ ತಮ್ಮದು.
ಕನ್ನಡದಲ್ಲಿ ನವ್ಯ ಪರಂಪರೆ ವಿಜೃಂಭಿಸುತ್ತಿದ್ದ ಕಾಲದಲ್ಲಿ ಗೇಯ ಪದ್ಯಗಳನ್ನು ಬರೆದು ಸುಗಮ ಸಂಗೀತ ಲೋಕಕ್ಕೆ ನೀಡಿದ ಕಾಣಿಕೆ ಅನನ್ಯ. `ನಿಂತ ನೀರ ಕಲಕಬೇಡಿ’ , ಎಲ್ಲಿ ಜಾರಿತೋ ಮನವು, ಯಾರು ಜೀವವೆ ಯಾರು ಬಂದವರು, ನಡೆದಿದೆ ಪೂಜಾರತಿ, ಬಾರೆ ನನ್ನ ದೀಪಿಕಾ ಮಧುರ ಕಾವ್ಯ ರೂಪಕ, ಈ ಭಾನುಈ ಚುಕ್ಕಿ ಈ ಹೂವು, ಮಲಗು ಮಲಗೆನ್ನ ಮರಿಯೇ, ಬನ್ನಿ ಭಾವಗಳೆ ಬನ್ನಿ ….. ಹೀಗೆ ಒಂದೇ ಎರಡೇ ನಿಮ್ಮ ಜನಪ್ರಿಯ ಭಾವಗೀತೆಗಳು.
ಬಹಳ ಮುಖ್ಯವಾಗಿ ಹೇಳಲೇಬೇಕಾದ ಸಂಗತಿಯೆಂದರೆ, ತಮ್ಮ `ಸಾಹಿತ್ಯ ರತ್ನ ಸಂಪುಟ’ ಕುರಿತು. ಈ ಸಂಪುಟದಲ್ಲಿರುವ ಮೂವತ್ತೈದಕ್ಕೂ ಹೆಚ್ಚು ಹೊಸಗನ್ನಡ ಸಾಹಿತಿಗಳ ವ್ಯಕ್ತಿಚಿತ್ರಣಗಳ ಶೈಲಿ ಅಪೂರ್ವವಾದುದು. ಸಾಹಿತಿಗಳ ಬಗ್ಗೆ ಸ್ವಾರಸ್ಯಕರವಾದ ಅಪಾರ ಮಾಹಿತಿಗಳನ್ನೊಳಗೊಂಡ ಕೃತಿಕರಂಡ ಇದು.
ಪ್ರತಿ ಸಾಹಿತಿಯ ವ್ಯಕ್ತಿಚಿತ್ರಣದ ಕೊನೆಗೆ ತಾವೇ ಬರೆದ ಅಥವಾ ಇತರೆಯವರು ಬರೆದ ಕವಿತೆಯನ್ನು ದಾಖಲಿಸಿದ್ದೀರಿ. ಆಮೂಲಕ ವ್ಯಕ್ತಿಚಿತ್ರ ಬರಹಕ್ಕೊಂದು ಸುವರ್ಣ ಚೌಕಟ್ಟಿನ ಹೊಸತನವನ್ನು ತೋರಿದ್ದೀರಿ. ಮತ್ತೊಂದು ಸಂಗತಿಯೆಂದರೆ, `ಕನ್ನಡ ಸಾಹಿತ್ಯ ಚರಿತ್ರೆ’ಯನ್ನು ಸಿಡಿ ರೂಪದಲ್ಲಿ ಹೊರತಂದಿರುವುದು. ಇದನ್ನು ಪ್ರಯಾಣ ಮಾಡುವಾಗಲು ಕೇಳುತ್ತಾ, ಕನ್ನಡ ಸಾಹಿತ್ಯದ ಸೊಬಗನ್ನು ಆಸ್ವಾದಿಸಬಹುದು.
ಮರೆತೇ ಹೋಗಿದ್ದ ಇನ್ನಂದು ಸಂಗತಿ: ಹೊಸಗನ್ನಡದ ಮುಂಗೋಳಿ ಎನಿಸಿದ್ದ ಮುದ್ದಣನ ಪತ್ನಿ ಕಮಲಾಬಾಯಿಯವರನ್ನು ತಾವು ಕಂಡಿರುವುದು. ಮುದ್ದಣ-ಮನೋರಮೆ ಕನ್ನಡಿಗರ ಪಾಲಿನ ಅನನ್ಯ ಸರಸ ದಂಪತಿಗಳು. ಆತ ಕ್ಷಯ ರೋಗಕ್ಕೆ ಬಲಿಯಾಗಿ ತನ್ನ 31ನೆಯ ವಯಸ್ಸಿನಲ್ಲಿ (1870-1901) ಇಹಲೋಕ ತ್ಯಜಿಸಿದವನು. ಆದರೆ ಆ ವಯಸ್ಸಿಗೆ ಅಮೂಲ್ಯ ಕಾಣಿಕೆಯನ್ನು ಕನ್ನಡಿಗರಿಗೆ ನೀಡಿರುವುದನ್ನು ಮರೆಯಲಾಗದು. `ಪದ್ಯಂ ವದ್ಯ ಗದ್ಯಂ ಹೃದ್ಯಂ’ ಎಂಬ ನಾಣ್ಣುಡಿ ಕೊಟ್ಟು ಗದ್ಯದ ಆಪ್ತತೆ ಬಗ್ಗೆ ಹೇಳಿದ ಮುದ್ದಣ ಹೊಸ ತಲೆಮಾರಿಗೆ ಕೃತಿಗಳ ಮೂಲಕ ಮಾತ್ರ ಪರಿಚಿತ.
ಆದರೆ ತಾವು ಬಾಲಕರಾಗಿದ್ದಾಗ ಶಿವಮೊಗ್ಗದ ತಮ್ಮ ಮನೆಯ ಹತ್ತಿರ ಮುದ್ದಣನ ಸಂಬಂಧಿಕರ ಮನೆ ಇದ್ದುದರ ಬಗ್ಗೆ ಒಂದು ಲೇಖನದಲ್ಲಿ ಬರೆದಿದ್ದಿರಿ. ಮತ್ತು ಆ ಮನೆಯಲ್ಲಿ ಇದ್ದ ಮುದುಕಿಯನ್ನು ಕುರಿತು ಪ್ರಸ್ತಾಪಿಸಿ, ಆ ಮುದುಕಿಯೇ ಮುದ್ದಣನ ಮಡದಿ ಕಮಲಾಬಾಯಿ ಎಂಬುದನ್ನು ಪತ್ತೆಮಾಡಿ ಉಲ್ಲೇಖಿಸಿದ್ದಿರಿ. ನಿಜಕ್ಕೂ ಇದೊಂದು ಸೋಜಿಗದ ಸಂಗತಿಯಲ್ಲವೇ?
ಹೀಗೆ ತಮ್ಮ ಕನ್ನಡ ಸೇವೆಯ ಬಗ್ಗೆ ಹೇಳುತ್ತಾ ಹೋದರೆ ಪುಟಗಳು ಮೀರಿ ಹೊತ್ತಿಗೆಯಾಗಬಲ್ಲದು. ಅದರೂ ಕೊನೆಯಲ್ಲಿ ಹೇಳಲೇಬೇಕಾದ ಸಂಗತಿ ಎಂದರೆ, ತಮ್ಮ ಅಗಲಿಕೆಯ ಹಿಂದಿನ ದಿನವೆ (ಶುಕ್ರವಾರ, ಮಾರ್ಚ್ ಆರು) ನಾನು ಎಂಟನೆಯ ತರಗತಿ ಮಕ್ಕಳಿಗೆ ತಮ್ಮ ಪರಿಚಯ ಮಾಡಿದ್ದೆ. ತಮ್ಮ `ಸಾಹಿತ್ಯ ರತ್ನ ಸಂಪುಟ’ದಿಂದ ಆಯ್ದ ಡಿವಿಜಿಯವರನ್ನು ಕುರಿತ ` ಸಾರ್ಥಕ ಬದುಕಿನ ಸಾಧಕ’ ಎಂಬ ಪಾಠ ಬೋಧನೆಯ ಸಂದರ್ಭ.
ಹಳ್ಳಿಗಾಡಿನ ಮಕ್ಕಳಿಗೆ ಕವಿಗಳನ್ನು, ಲೇಖಕರನ್ನು ಪರಿಚಯಿಸಬೇಕೆಂದರೆ ಮಕ್ಕಳ ಬೌದ್ಧಿಕ ಮಟ್ಟಕ್ಕೆ ತಕ್ಕಂತೆ ಇರಬೇಕು. ಹಾಗಾಗಿ `ಬಾಳ ಒಳ್ಳೇರು ನಮ್ಮ ಮಿಸ್, ಏನ್ ಕೇಳಿದರೂ ಎಸ್ಸೆಸ್, ನಗ್ತ ನಗ್ತಾ ಮಾತಾಡ್ತಾರೆ, ಸ್ಕೂಲಿಗೆಲ್ಲಾ ಫೇಮಸ್…ಎಂಬ ಶಿಶುಗೀತೆ ಹೇಳಿ, ತಮ್ಮೊಂದಿಗೆ ನಾನು ತೆಗೆಸಿಕೊಂಡಿರುವ ಭಾವಚಿತ್ರವನ್ನು ತೋರಿಸಿದಾಗ ಆ ಮಕ್ಕಳ ಮುಖಗಳಲ್ಲಿ ಅರಳಿದ ಮಂದಹಾಸ ಅವರ್ಣನೀಯ.
ಲಕ್ಷ್ಮಿನಾರಾಯಣ ಭಟ್ ಸರ್, ತಾವು ಒಂದೂವರೆ ವರ್ಷದವರಿದ್ದಾಗಲೇ ತಮ್ಮ ತಂದೆ ತೀರಿದ್ದರು.
ಮುಂದೆ ತಾಯಿಯ ಆಶ್ರಯದಲ್ಲಿ ಬೆಳೆದು, ಮೈಸೂರಿನಲ್ಲಿ ವಾರಾನ್ನದ ವಿದ್ಯಾರ್ಥಿಯಾಗಿ ವಿದ್ಯೆ ಸಂಪಾದಿಸಿದಿರಿ. ಮುಂದೆ ಕನ್ನಡ ಸಾರಸ್ವತ ಲೋಕದಲ್ಲಿ ಮಾಸದ ಹೆಜ್ಜೆ ಗುರುತು ಮೂಡಿಸಿದ ಸಾಧಕರಾಗಿದ್ದೀರಿ. ಯಾರು ಏನೇ ಹೇಳಲಿ, ತಮ್ಮನ್ನು ಕ್ಯಾಸೆಟ್ ಕವಿ ಎಂದು ಗೇಲಿ ಮಾಡಲಿ! ಆದರೆ ತಾವು ಕನ್ನಡಿಗರಿಗೆ ಭಾವಗೀತೆಯ ಗುಂಜಾರವದ ಹುಚ್ಚ್ವನ್ನು ಹಚ್ಚಿಸಿದ್ದು ಮಾತ್ರ ಕರೆ. ಗುರು ಗೋವಿಂದ ಮತ್ತು ಶರೀಫರ ಭಾವೈಕ್ಯದ ತೇರಿಗೆ ಮಿಣೆ ಹಚ್ಚಿ ನಾಡ ತುಂಬ ಎಳೆದಿರಿ. ತಮ್ಮೀ ಕನ್ನಡದ ಕಲಿತನಕೆ ಶರಣು ಶರಣು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಅನಾಥರನ್ನಾಗಿಸದ ಅಂತಿಮ ಸಂಗಾತಿ

- ಅಲ್ಮೆಡಾ ಗ್ಲಾಡ್ ಸನ್
ಒಂಬತ್ತು ವರ್ಷ ವಯಸ್ಸಿನ ಹುಡುಗನೊಬ್ಬನ ತಲೆಗೆ ಶಿಕ್ಷಣವೇ ಹತ್ತುತಿರಲಿಲ್ಲವಾಗಿ ಆತ ಮೂರನೇ ಕ್ಲಾಸಿನಿಂದ ಮೇಲೇರಿರಲಿಲ್ಲ! ಆದರೂ ಆತನ ಮಾನವೀಯ ಸೂಕ್ಷ್ಮ ಸಂವೇದನೆಯ ಉತ್ಕಟತೆ ಎಷ್ಟಿತೆಂದರೆ ದೇವಸ್ಥಾನ, ಮಸೀದಿ, ಚರ್ಚುಗಳ ಮುಂಭಾಗ ಭಿಕ್ಷುಕರ ಮಧ್ಯೆ ತಾನೂ ತಲೆಯ ಮೇಲೆ ಟವಲ್ ಹಾಕಿಕೊಂಡು ಕುಳಿತು ಭಿಕ್ಷೆ ಬೇಡಿ ಬಂದ ಹಣವನ್ನು ಅಲ್ಲಿದ್ದವರಿಗೆಲ್ಲಾ ಹಂಚುತ್ತಿದ್ದ.
ಇದನ್ನರಿತ ಆತನ ಸಂಬಂಧಿಕರು ಚರ್ಮ ಕಿತ್ತು ಬರುವ ಹಾಗೆ ಬಾರಿಸಿ ಕೆಡವುತ್ತಿದ್ದರೆ ಅಲ್ಲಿದ್ದ ಭಿಕ್ಷುಕರೇ ಆತನ ಪರವಾಗಿ ವಕಾಲತ್ತು ಹಾಕಿ ಬೇಡಿದ ಭಿಕ್ಷೆಯನ್ನೆಲ್ಲಾ ಭಿಕ್ಷುಕರಿಗೆ ಹಂಚುತ್ತಿದ್ದಾನೆ ಎಂದು ಶ್ಯೂರಿಟಿ ಕೊಟ್ಟ ಮೇಲೆಯೇ ಏನಾದರೂ ಆಗಿ ಹಾಳಾಗಿ ಹೋಗು ಎಂದು ಕೈ ಚೆಲ್ಲುತ್ತಿದ್ದರು.
ಹುಡುಗ ಮಾತ್ರ ತನ್ನ ಅಪ್ಪ ಪ್ರತಿದಿನ ನೀಡುತ್ತಿದ್ದ ಒಂದು ರೂಪಾಯಿಯಲ್ಲಿ ನೆಲ್ಲಿಕಾಯಿಗಳನ್ನು ಕೊಂಡು ಮಾರಿ, ಅದರಿಂದ ಬಂದ ಹಣದಲ್ಲಿ ಇಡ್ಲಿಯನ್ನೋ, ಚಿತ್ರಾನ್ನವನ್ನೋ ಕೊಂಡು ಜನರಿಗೆ ಹಂಚಿಬಿಡುತ್ತಿದ್ದ. ನೋಡುಗರಿಗೆ ಹುಡುಗನ ವರ್ತನೆಗಳು ವಿಲಕ್ಷಣ ಹಾಗೂ ಅತಿರೇಕವಾಗಿ ಕಾಣುತ್ತಿದ್ದರೂ ಆತನಿಗದು ಸಹಜವಾಗಿತ್ತು.
ಇವನನ್ನು ಹೀಗೆಯೆ ಬಿಟ್ಟರೆ ಕಳ್ಳನೋ, ಸುಳ್ಳನೋ ಆಗುತ್ತಾನೆಂದು ತೀರ್ಮಾನಿಸಿ, ದೆಹಲಿಯಲ್ಲಿ ಧರ್ಮಶಾಸ್ತ್ರ ಅಧ್ಯಯನ ನಡೆಸುತ್ತಿದ್ದ ಅಣ್ಣನ ಬಳಿಗೆ ಕಳುಹಿಸಿದ್ದರು. ಅಲ್ಲಿಯೂ ಇದೇ ವರ್ತನೆ! ಧರ್ಮಗುರುಗಳು ನಿಮ್ಮ ಮಗ ಯಾವ ಕಾರಣಕ್ಕೂ ಓದಲಾರ ಎಂಬ ಪ್ರಶಂಸಾ ಪತ್ರದೊಡನೆ ಆತನನ್ನು ವಾಪಸ್ ಕಳುಹಿಸಿದಾಗಲೂ ಪೋರ ತನ್ನ ಯೋಚನಾ ಕ್ರಮದಿಂದ ವಿಚಲಿತನಾಗಿರಲಿಲ್ಲ.
ಇಂದು ಆತ ನಲವತ್ತೆರೆಡರ ಯುವಕ. ವಿಶೇಷ ಅಂತಃಶಕ್ತಿ, ಧಾರ್ಮಿಕ ಬದ್ಧತೆ, ಇಚ್ಛಾಶಕ್ತಿ ಹಾಗೂ ತಾತ್ವಿಕತೆಯನ್ನು ತನ್ನ ಸರಳ ಬದುಕಿನೊಂದಿಗೆ ಮೇಳೈಸಿಕೊಂಡಿರುವ ಈತನ ನಾಜುಕಿಲ್ಲದ ಮಾತುಗಳು ಒಬ್ಬ ಪ್ರಬುದ್ಧ ಮೌಲ್ವಿಯದ್ದೋ, ಸೂಫಿಸಂತನದ್ದೋ ಎಂದೆನ್ನಿಸದಿರಲಾರದು. ಯಾರಿಗೂ ಬೇಡವಾದ ಸುಮಾರು ಹದಿಮೂರು ಸಾವಿರ ಅನಾಥ ಶವಗಳಿಗೆ ಗೌರವಪೂರ್ಣ ಶ್ರದ್ಧಾಂಜಲಿಯೊಡನೆ ವಿದಾಯ ನೀಡಿದ ಶ್ರೇಷ್ಠ ಕಾಯಕ ರತ್ನ ನಮ್ಮ ಅಯೂಬ್ ಅಹಮದ್.
ಮೈಸೂರು ನಗರ ಇವರನ್ನು ‘ಬಾಡಿಮಿಯಾ ಎಂದೂ ಪ್ರೀತಿಯಿಂದ ಕರೆಯುತ್ತಿದೆ. ಜನಸ್ನೇಹಿ ಅಯೂಬ್ ಬಾಡಿಮಿಯಾ ಎಂದೆನ್ನಿಸಿಕೊಂಡಿದ್ದೇ ರೋಚಕವಾದುದ್ದು. ಯಾವುದೋ ವೈರಾಗ್ಯಕ್ಕೋ, ಭಾವೋದ್ರೇಕಕ್ಕೋ, ಗುರುತಿಸಿಕೊಳ್ಳುವ ಪ್ರವೃತ್ತಿಗೋ ಸಿಲುಕಿ ಅಯೂಬ್ ಈ ಕಾರ್ಯಕ್ಕೊಡ್ಡಿಕೊಂಡವರಲ್ಲ.
ಬದಲಾಗಿ ಎಳವೆಯಲ್ಲೇ ತನ್ನ ಅಪ್ಪ ಪಠಿಸುತ್ತಿದ್ದ ಖುರಾನನಿನ ನುಡಿಮುತ್ತುಗಳನ್ನೆ ಎದೆಯೊಳಗಿಳಿಸಿಕೊಂಡು ಇನ್ಸಾನಿಯಾತ್ ಜಿಂದಾಬಾದ್ ಎಂದು ಹೃದಯದೊಳಗೆ ಬರೆದುಕೊಂಡು ಸಂತೃಪ್ತನಾದ ಯುವಕನೀತ . “ನಮ್ದುಕೆ ಅಪ್ಪಾಜಿನೆ ನಮ್ಗೆ ಗುರುಗಳಿದಂಗೆ. ಚಿಕ್ಕದ್ರಿಂದ ಖುರಾನ್ ಓದಿ ನಮ್ಗೆ ಅರ್ಥ ಹೇಳ್ಕೊಡೊರು. ಖುರಾನ್ ಒಂದ್ಕಡೆ ಹೇಳ್ತೈತೆ, ಮಂದಿ ಬದ್ಕಿದ್ರೂ, ಸತ್ರೂ ಅವರ್ನ ಗೌರವದಿಂದ ನೋಡು ಅಂತ.
ಹಸ್ದವರ್ಗೆ ಊಟ, ಚಳಿಯಲ್ಲಿದ್ದೋರ್ಗೆ ಬಟ್ಟೆ ಕೊಟ್ಟು, ಸತ್ತೋದೊರ್ಗೇ ಗೌರವದಿಂದ ಕಳ್ಸಿಕೊಡು ಅಂತನೇ ಎಲ್ಲಾ ದೇವ್ರು ಹೇಳ್ತಿರೋದು. ನಾವೆಲ್ಲಾ ಭೂಮೀಲಿ ಬಾಡಿಗೆ ಮನೆಯಾಗೆ ಇದೀವಿ. ಯಾರ್ದು ಪರ್ಮನೆಂಟ್ ಇಲ್ಲ. ಹೋಗೊದ್ರೊಳ್ಗೆ ಅಲ್ಲಾ ಮಾಲೀಕ್ದು ಬಾಡಿಗೆ ಕಟ್ಟ್ಬೇಕು. ನಾನು ಅದನ್ನೇ ಮಾಡ್ತಾ ಇದೀನಿ ಅಷ್ಟೇ “ಎಂದು ಹೇಳುವ ಅಯೂಬ್ ಜಿ ‘ಬಾಡಿಮಿಯಾ’ನಾಗಿ ಇಪ್ಪತ್ತೆರಡು ವರ್ಷಗಳಾಗಿವೆ.
“ನಮ್ದು ಚಿಕ್ಕ್ದ್ರಲ್ಲಿ ಯೆಲ್ಡ್ಮೂರು ಸೈಂಕಲ್ ಇಟ್ಟಿದ್ವಿ. ದೊಡ್ಡವನಾದಾಗ ಒಂದು ಸೆಕೆಂಡ್ ಹ್ಯಾಂಡ್ಲು ಕಾರು ಮಡಗ್ಬೇಕು ಅನ್ಸಿತ್ತು” ಎಂದು ತನ್ನ 18ರ ಹರೆಯವನ್ನು ನೆನಪಿಸಿಕೊಂಡ ಅಯೂಬ್ ಕಾರೊಂದನ್ನು ಖರೀದಿ ಮಾಡಲು ಬಸ್ನಲ್ಲಿ ಹೋಗ್ತಿದ್ದಾಗ ಬಂಡಿಪಾಳ್ಯದ ಬಳಿ ಶವವೊಂದು ಬಿದ್ದಿತ್ತಂತೆ. ಸಂಜೆ ತನ್ನ ಕಾರಿನೊಂದಿಗೆ ಮರಳುತ್ತಿದ್ದಾಗಲೂ ಶವ ಅಲ್ಲೇ ಬಿದ್ದಿತ್ತು. “ಖುರಾನ್ ಪ್ರಕಾರ ಯಾವುದೇ ಶವಾ ಬಿದ್ದಿಲ್ರಿ, ನಾವು ಅದ್ರ ಮಕ ನೋಡ್ದೆ, ಶವದ್ ಮೆರವಣಿಗೆಯಲ್ಲಿ ನಾಲ್ಕೆಜ್ಜೆ ಹಾಕ್ದೆ ಮುಂದುಕ್ಕೋಗ್ಬಾರ್ದು.
ನಾನು ಮಕ ನೋಡಿ ಅಲ್ಲಿದ್ದವರ್ಗೆ ‘ಕ್ಯಾ ಸಾಬ್ ಅಭಿ ಐಸಾ ಹೀ ಹೈನಾ? ಅಂತ ಕೇಳ್ದೆ. ‘ಕ್ಯಾ ಕರ್ನಾ ಕೋಹಿ ನಹೀ ಹೈನಾ?’ ಅಂದಾಗ ಛೋಡೊ ಭಾಯ್ ಮೈ ಹೂನಾ? ಅಂತ ಹೇಳ್ಬುಟ್ಟಿದ್ದೇ ಹೆಣ ಎತ್ತ್ಕೊಂದಿ ಕೆ.ಆರ್.ಆಸ್ಪತ್ರೆಗೆ ತಂದಿದ್ದೆ. ಎಲ್ಲರೂ ಹೊಸ ಕಾರ್ ನ ಚಾಮುಂಡಿಗೋ, ದರ್ಗಕ್ಕೋ ತಗೊಂದಿ ಹೋಗ್ತಾರೆ. ಇಲ್ಲ ಅಪ್ಪ-ಅಮ್ಮಂಗೆ ಕುಂದ್ರಿಸ್ಕೊಂದಿ ರೌಂಡ್ ಹೋಗ್ತಾರೆ, ನಾನ್ ಮಾಡಿದ್ದು ನೋಡಿ ನಮ್ಮವ್ರು ನಮ್ಗೆ ದನಕ್ಕೆ ಬಡ್ದಂಗೆ ಬಡ್ದುಬಿಟ್ರು.
ನಂಗೇನಾದ್ರೂ ದಯ್ಯ-ಪಯ್ಯ ಏನಾದ್ರೂ ಹಿಡ್ಕೊಂಡು ಬಿಟ್ರೆ ಅಂತ ಅವರ್ಗೆ ಬಯ್ಯ. ನಾನು,’ ನಾನೇನ್ ತಪ್ಪು ಕೆಲಸ ಮಾಡ್ದೆ? ‘ ಅಂತ ತಲೆ ಕೆರ್ಕಂಡಿ ಮೈಸೂರು ಬೇಡ್ನಕ್ಕೇ ಬೇಡ ಅಂತ ಬೆಂಗಳೂರ್ಗೆ ಹೊಂಟ್ಬಿಟ್ಟೆ. ಒಂದ್ಸಲ ಲಾಲ್ಬಾಗ್ನಲ್ಲಿ ಜನ ಗುಂಪು ಸೇರಿದ್ರು. ನಾನು ಫಿಲಿಂ ಶೂಟಿಂಗ್ ಇರ್ಬೋದು, ಹೀರೊಗೆ ಒಂದ್ಸಲ ಕೈ ಮಿಲಾಯ್ಸ್ಬೋದು ಅಂತ ನುಗ್ಗಿ ಹೋದ್ರೆ ಮತ್ತೆ ಹೆಣ ಬಿದ್ದಿತ್ತು. ನಾನ್ ಹೆದ್ರಿ ‘ಯಾ ಅಲ್ಲಾ ಏನಿದೆಲ್ಲಾ’ ನನ್ ಗಿರಾಚಾರ ನೆಟ್ಗಿಲ್ಲ ಅಂತ ಹೇಳ್ತಿದ್ರುವೇ ಬಾಡಿನ ಬಿಟ್ಟೋಗೋಕೆ ಮನ್ಸಾಗ್ನಿಲ್ಲ.
ಮತ್ತೆ ಹೆಣ ಹೊತ್ತ್ಕೊಂದಿ ಹೊಂಟಾಗ ಅಲ್ಲಿದ್ದ ಮುದುಕ್ರು ನನ್ ಕೈ ಮುಗ್ದು ಮಗಾ ನೀನು ಮಾಡಿದ್ದು ಅಂತಿಂಥಾ ಸಣ್ಣ್ ಕೆಲ್ಸ ಅಲ್ಲಾ, ನಿನ್ಗೆ ಒಳ್ಳೆದಾಗ್ತುದೆ ಅಂತ ಆಶೀವಾರ್ದ ಮಾಡಿದ್ರು ಎಂದು ನೆನಪಿಸಿಕೊಂಡ ಅಯೂಬ್. ತನ್ನ ಬದುಕಿಗಾಗಿ ಬಾಡಿಗೆ ಆಟೋ, ಟ್ಯಾಕ್ಸಿ ಚಾಲನೆ ಮಾಡುತ್ತಾ, ಲಾರಿಗಳಿಗೆ ಹಣ್ಣು-ತರಕಾರಿಗಳನ್ನು ತುಂಬುತ್ತಾ ತನ್ನ ಒಡನಾಡಿಗಳ ಸಂಕಷ್ಟಗಳಿಗೆ ಪ್ರತೀ ಕ್ಷಣ ಮಿಡಿಯುತ್ತಾ ಸಾಗುತ್ತಿದ್ದಾರೆ.
ಮೊದಮೊದಲು ಈ ವಿಶಿಷ್ಟ ಕಾಯಕ ಅಯೂಬ್ ರವರನ್ನು ಅಗ್ನಿಪರೀಕ್ಷೆಗೊಳಿಸಿದ್ದಿದೆ. ಸ್ನೇಹಿತರು, ಸಂಬಂಧಿಕರು ದೂರವಾಗಿ ತಿರಸ್ಕಾರ, ಅನಾಥ ಪ್ರಜ್ಞೆಗಳು ಇನ್ನಿಲ್ಲದಂತೆ ಕಾಡಿದಾಗ ಯಾ ಅಲ್ಲಾ ಏನಿದು ಈ ಥರಾ ಎಕ್ಸಾಮು ತಗೊಂದಿದಿ? ಎಂದು ಅತ್ತದುಂಟು. ಸಣ್ಣ ವಾಹನದಲ್ಲಿ ಹೆಣವನ್ನು ತುಂಬಿ ಒಬ್ಬಂಟಿಯಾಗ ಬರುವಾಗ ಭಯವೆಂಬುದು ದೆವ್ವಗಳಾಗಿ ಕಾಡಿದುಂಟು.
ಆದರೆ ತನ್ನನರಿತ ಹೆತ್ತಪ್ಪ ನೀಡಿದ ನೈತಿಕ ಹಾಗೂ ಧಾರ್ಮಿಕ ಶಕ್ತಿ ಅಯೂಬ್ರನ್ನು ‘ಮೆಸ್ಸಾಯಾ’ನನ್ನಾಗಿಸಿದೆ. ಅನಾಥ ಹೆಣಗಳ ಒಡನಾಡಿಯೆಂದೇ ಗುರುತಿಸಲ್ಪಟ್ಟ ಬಾಡಿಮಿಯಾ ಅಯೂಬ್ ಮಾಡದಿರುವ ಸೇವಾ ಕಾರ್ಯಗಳಿಲ್ಲ. ಮೊದಲೆಲ್ಲಾ ಅರಮನೆ ಮುಂಭಾಗ ಅನ್ನ ಇಲ್ದೆ ಕುಳಿತಿರುವವರಿಗೆ ಅನ್ನ ಕೊಡುತ್ತಿದ್ದರಂತೆ. ಕೆಲವರು ಬಂದು ಇಲ್ಲೇ ಊಟ ಕೊಡಬೇಡಿ ಅರಮನೆಗೆ ಅವಮಾನ ಆಗುತ್ತೆ ಅಂತ ಹೇಳಿದ್ರಂತೆ. ಅದಕ್ಕೆ ನಮ್ಮ ಅಯುಬ್ “ಹರೇ ಬಾಯ್ ನಮ್ದುಕ್ಕೆ ಏನಾದ್ರೂ ಇಲ್ಲಿದು ರಾಜಕುಮಾರ್ ಆಗಿದ್ದಿದ್ರೆ ಇವರನ್ನೆಲ್ಲ ಒಳಗೆ ಕರ್ಕೊಂಡು ಹೋಗಿ ಕುಂದ್ರಿಸಿ ಊಟ ಕೊಡ್ತ್ತಿದ್ದೆ” ಅಂತ ಹೇಳಿ ನಕ್ಕಿದ್ದ ರಂತೆ!
ಫೆಬ್ರವರಿ 22ನೇ ತಾರೀಕು ಅಹಮದ್ ರವರ ಹುಟ್ಟುಹಬ್ಬ. ಆ ದಿನ ಆಯುಬ್ ಜನರಿಗೆ ಒಂದು ಸಂದೇಶವನ್ನು ನೀಡಲಿಕ್ಕೆ ಇಷ್ಟಪಟ್ಟಿದ್ದಾರೆ. “ಅಲ್ಲಾ ಭಾಯ್! ಏನ್ ಘನಂದಾರಿ ಕಾಮ್ ಜೀವನದಲ್ಲಿ ಮಾಡಿಬಿಟ್ಟಿದ್ದೀರಿ ಅಂತ ಹುಟ್ದಬ್ಬ ಸೆಲೆಬ್ರೇಟ್ ಮಾಡ್ತೀರಿ? ಹಾಗೆ ನೋಡಿದರೆ ಒಂದು ವರ್ಷ ವೇಸ್ಟೇಜ್ ಆಗಿ ಇನ್ನೊಂದ್ ವರ್ಷ ವೇಸ್ಟೇಜ್ ಆಗ್ತಾಯಿದೆ.
ಇದಕ್ಕೆ ಹೋಗಿ ಕೇಕ್ ಪಾಕ್ ವೇಸ್ಟೇಜ್ ಎಲ್ಲ ಜನ್ರಿಗೆ ತಿನ್ಸೋ ಬದ್ಲು ಒಬ್ಬ ರೋಗಿದ್ದು ಬಿಲ್ ಕಟ್ಟಿ? ಒಂದು ಬಡ ಮಗಂದು ಸ್ಕೂಲ್ ಫೀಸು ಚುಕ್ತಾ ಮಾಡಿ? ಮೇಲ್ಗಡೆಯವಂದು ಅಕೌಂಟ್ ನಲ್ಲಿ ಒಂದಿಷ್ಟು ಜಮಾ ಮಾಡಿಕೊಂಡು ಬನ್ನಿ? ನಿಮಗೂ ಒಳ್ಳೆಯದಾಗುತ್ತದೆ ಜನರಿಗೂ ಒಳ್ಳೆಯದಾಗುತ್ತದೆ.” ಅಂತ! ಹೇಗಿದೆ ಸಂದೇಶ?
ಈಗ ಸ್ಲಂ ಹಾಗೂ ರೈಲ್ವೆ ಸ್ಟೇಷನ್ಗಳಲ್ಲಿನ ಹಸಿದ ಹೊಟ್ಟೆಗಳನ್ನು ಸಮಾಧಾನಿಸುತ್ತ, ಪಡಿತರಗಳನ್ನು ವಿತರಿಸುತ್ತಿರುವ ಆಯುಬ್ ‘ಇಂಡಿಯಾ ಯುಟಿಲಿಟಿ ಬ್ಯಾಂಕ್’ ಎಂಬುದನ್ನು ಸ್ಥಾಪಿಸಿ ಜನರಿಂದ ಉಪಯೋಗಿಸಲ್ಪಟ್ಟ ಆದರೆ ಚೆನ್ನಾಗಿರುವ ಪದಾರ್ಥಗಳನ್ನು ಸಂಗ್ರಹಿಸಿ ಇಲ್ಲದವರಿಗೆ ಹಂಚುವ ಪ್ರವೃತ್ತಿಯಲ್ಲಿದ್ದಾರೆ. ಅನೇಕ ಬಡ ಹೆಣ್ಣುಮಕ್ಕಳ ಮಾಂಗಲ್ಯಭಾಗ್ಯಕ್ಕೂ ಕಾರಣೀಭೂತರಾಗಿದ್ದಾರೆ.
ತನ್ನ ಮಗಳ ಹೆಸರಿನಲ್ಲಿ ಉಚಿತ ಟೈಲರಿಂಗ್ ತರಬೇತಿಯನ್ನು ನೀಡುತ್ತಿದ್ದಾರೆ. ನೂರಾರು ಕೊರೊನಾ ಹೆಣಗಳನ್ನು ಧೃತಿಗೆಡದೇ ಸಾಗಿಸಿ ‘ವಾರಿಯರ್’ ಎಂದೆನ್ನಿಸಿಕೊಂಡಿದ್ದಾರೆ. ಹಾರ್ಮೋನಿ ಯೂನಿವರ್ಸಿಟಿ ಆಫ್ ಅಮೆರಿಕ ನೀಡಿದ ಗೌರವ ಡಾಕ್ಟರೇಟ್, ಮೈಸೂರು ದಸರಾದಲ್ಲಿ ನ ನಾಗರಿಕ ಸನ್ಮಾನ,ಹತ್ತಾರು ಪ್ರಶಸ್ತಿಗಳು, ಸನ್ಮಾನಗಳು ತನ್ನನರಸಿ ಬಂದರೂ ಹೊನ್ನಶೂಲಕ್ಕೇರದೇ ಮಂದಹಾಸದೊಡನೆ ಪ್ರಶಸ್ತಿಗಳು ಬೇಡ, ದೇವರ ಕೆಲಸಕ್ಕೆ ಕೈ ಜೋಡಿಸಿ ಎನ್ನುವ ಬಾಡಿಮಿಯಾನ ಸುಳ್ಳು, ತಟವಟಗಳಿಲ್ಲದ, ಅನುಕರಣೆಗೂ ಅಸಾಧ್ಯವಾದ ಅಪ್ಪಟ ಅಪರಂಜಿಯ ಬದುಕು ನಮ್ಮೊಡನಿರುವವರನ್ನು ಪ್ರೀತಿಸುವ, ನಮ್ಮನಗಲಿದವರನ್ನೂ ಗೌರವಿಸುವ ಮೌಲ್ಯವೊಂದನ್ನು ಬಿತ್ತುತ್ತಾ ಎಲ್ಲಾ ಧರ್ಮಗಳ ಧರ್ಮಗುರುಗಳನ್ನೂ ವಿಸ್ಮಿತರನ್ನಾಗಿಸಿದೆ.
ಹ್ಯಾಪಿ ಬರ್ತಡೇ ಭಾಯಿ! ನಿಮ್ಮಂತಹ ಹೃದಯವಂತರ ಸಂತತಿ ಇನ್ನೂ ಹೆಚ್ಚಲಿ!!
(21 ಫೆಬ್ರವರಿ ಯ ಫೇಸ್ ಬುಕ್ ಬರಹ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
‘ಪ್ರೀತಿಯಲ್ಲಿ ಗೆದ್ದವ ಚುನಾವಣೆಯಲ್ಲಿ ಗೆದ್ದು ಗದ್ದುಗೆಯೇರಿದ’..!

- ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್
ಜೀವನ ಎಂಬುದು ಕಲಿಕಾ ತೋಟ, ಪ್ರತಿದಿನ ಹೊಸ ಚಿಗುರಿನ ತರಹ ನಮ್ಮ ಸುತ್ತ-ಮುತ್ತಲಿನ ಪರಿಸರದಲ್ಲಿ ನಮ್ಮ ಮಾನಸಿಕ ಸ್ಥಿತಿಗಳಲ್ಲಾ ಹೊಸ ಹೊಸ ಚಿಗುರಿನಿಂದ ಕೂಡಿರುತ್ತವೆ, ಈ ತೆರನಾದ ಕಲಿಕಾ ತೋಟದಲ್ಲಿ ನಮ್ಮಗಳ ಗಿಡವು ಬಹುಪಾಲು ಪ್ರೀತಿ ಎಂಬ ನೀರುಣಿಸುತ್ತಾ ಬೆಳೆಯಲು ಸಹಕಾರಿಯಾಗುತ್ತದೆ, ಜಗತ್ತಿನಲ್ಲಿ ಪ್ರೀತಿ ಇಲ್ಲದ ಮನಸ್ಸು ಇಲ್ಲದಿರುವುದಿಲ್ಲ ಎಂಬುದು ಅಸಾಧ್ಯದ ಮಾತು ಎಂದರೆ ತಪ್ಪಾಗಲಾರದು.
ಇಲ್ಲಿ ಹೇಳಲ್ಹೊರಟಿರುವುದು ಈ ಪ್ರೀತಿ ಬಗೆಗಿನ ಒಂದು ವಿಚಿತ್ರ ಮತ್ತು ಸಚಿತ್ರವಾದ ಸಂಗತಿ ಇದು ಬರಿಯ ಯೌವನದಲ್ಲಿನ ಪ್ರೀತಿಯ ಪರಿಪಾಡು ಎನ್ನಲಾಗದು ಏಕೆಂದರೆ ವೃತ್ತಿಯಲ್ಲಿ ಒಬ್ಬ ವ್ಯವಸಾಯದ ಹಿನ್ನಲೆಯನ್ನೊಳಗೊಂಡ ‘ಸಂಪತ್’ ಎಂಬ ಯುವಕನ ತಂದೆ ಜಮೀನಿನಲ್ಲಿ ಕೆಲಸ ಮಾಡುತ್ತಾ ಯಾರ ಗೋಜಿಗೂ ಹೋಗದೆ ತಾನಾಯ್ತು ತನ್ನ ಪಾಡಾಯ್ತು ಎಂಬ ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಊರಿನಲ್ಲಿ ಕಾಣಿಸಿಕೊಂಡವರು ಇವರಿಗೆ ಮೂರು ಹೆಣ್ಣು ಮಕ್ಕಳೊಟ್ಟಿಗೆ ಜನಿಸಿದ ಸುರ ಸುಂದರ ಸುಪುತ್ರನೇ ಸಂಪತ್ ಎಂಬ ಯುವಕ.
ಇವನನ್ನು ಬಹುಪಾಲು ರಾಜಕುಮಾರನಂತೆ ಸಾಕಿದ್ದರು ಸಂಪತ್ ಕೂಡ ಚಿಕ್ಕಂದಿನಿಂದಲೂ ಅಷ್ಟೆ ಚೂಟಿಯಾದವನು ಶಾಲಾ ಹಂತವಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಹಂತದಲ್ಲಿ ಶಾಲೆಯ ನೆಚ್ಚಿನ ವಿದ್ಯಾರ್ಥಿಯಾಗಿ ತಾಲ್ಲೂಕಿಗೆ ಉತ್ತಮವಾದ ಅಂಕಗಳೊಂದಿಗೆ ಉನ್ನತ ಶ್ರೇಣಿಯೊಂದಿಗೆ ತೇರ್ಗಡೆಯಾಗಿ ಊರಿಗೆ ಕೀರ್ತಿತಂದವನು, ಮುಂದೆ ಪದವಿ ಪೂರ್ವ ಮತ್ತು ಪದವಿ ಹಂತವನ್ನು ಮುಗಿಸಿದ ಸಂಪತ್ ಡಿ,ಇಡಿ ಪದವಿದರನಾಗಿ ಶಿಕ್ಷಕ ವೃತ್ತಿ ಜೀವನಕ್ಕೆ ಕಾಲಿಡಬೇಕಿದ್ದವನಿಗೆ ಸರಕಾರ ಯಾವುದೇ ತರಹದ ಹುದ್ದೆಗಳನ್ನೂ ಕರೆಯದ ಸಂದರ್ಭ ಸಂಪತ್ ಮಾನಸಿಕ ಸ್ಥಿತಿ ಸ್ವಲ್ಪ ಮಟ್ಟಿಗೆ ಏರುಪೇರಾಗಿರುತ್ತದೆ
ಈ ಮಧ್ಯ ಮೊಬೈಲ್ ಎಂಬುದು ಉತ್ತಮವಾದ ಸ್ನೇಹಿತನಾಗಿ ತನ್ನ ಮನಸ್ಸಿಗೆ ಹೊಗ್ಗಿಕೊಡಿರುತ್ತದೆ ಹೀಗಿರುವಾಗ ಒಮ್ಮೆ ಅಚಾನಕ್ ಆಗಿ ಒಂದು ಅಪರಿಚಿತ ಸಂಖ್ಯೆಯಿಂದ ಕರೆ ಬರುತ್ತದೆ ಆದರೆ ಅದು ತಪ್ಪಿದ ಕರೆಯಾಗಿರುತ್ತೆ (ಮಿಸ್ ಕಾಲ್) ಕೆಲಸವಿಲ್ಲದೆ ಖಾಲಿ ಕೂತಿದ್ದ ಸಂಪತ್ಗೆ ಈ ಕರೆ ಒಂದು ಬ್ರೇಕ್ ತರ ಯಾವುದಿರಬಹುದು ಈ ನಂಬರ್ ಎಂದು ಮನಸ್ಸಿನಲ್ಲಿ ಕ್ಯರ್ಯಾಸಿಟಿ ಹುಟ್ಟತೊಡಗಿ ಪಟ್ಟನೆ ಮೊಬೈಲ್ ಎತ್ತಿಕೊಂಡು ಆ ನಂರ್ಗೆ ಕರೆ ಮಾಡಿದಾಗ ಸಂಪತ್ ಮೂಖ ವಿಸ್ಮಿತನಾಗುತ್ತಾನೆ.
ಯಾಕಂದ್ರೆ ಆ ಕರೆಯಲ್ಲಿದ್ದ ಧ್ವನಿ ಸುಂದರ ಸುಮಧುರವಾದ ಕೋಗಿಲೆಗೂ ಮಿಗಿಲಾದ ವಾಯ್ಸ್ ಸಂಪತ್ ಕಿವಿಗಳಿಗೆ ಬೀಳುತ್ತಿದ್ದಂತೆ ತಟ್ಟನೆ ಕಿವಿ ನಿಮಿರಿ ಮನಸ್ಸು ಅಲ್ಲೋಲ ಕಲ್ಲೋಲವಾಗಿ ‘ಲವ್ ಈಸ್ ಬ್ಲೈಂಡ್’ ಅನ್ನೋ ಮಾತಿನಂತೆಯೇ ನಮ್ಮ ಸಂಪತ್ಗೆ ಆ ಮೊದಲ ಕರೆಯ ಹಾಯ್ ಎಂಬ ಮಾತಿನೊಂದಿಗೆ ಪ್ರೇಮಾಕುರವಾಗಿಯೇ ಬಿಡ್ತು.
ಮೊದ ಮೊದಲು ಪ್ರೀತಿ ಇಲ್ಲದಂತೆ ನಟಿಸಿದರೂ ನಂತರದಲ್ಲಿ ಸಂಜುಗೂ ಸಂಪತ್ ಮೇಲಿನ ಪ್ರೇಮ ಸ್ಫೊಟವಾಯ್ತು, ಅಲ್ಲಿಂದ ಶುರುವಾದ ಮೊಬೈಲ್ ಪ್ರೀತಿಯೂ ಒಮ್ಮೆಯೂ ಮುಖ ನೋಡದ ಸಂಜು ಮತ್ತು ಸಂಪತ್ ಇಬ್ಬರು ನೇರ ಭೇಟಿಗಾಗಿ ಒಂದು ದಿನ ಗೊತ್ತುಮಾಡಿಕೊಂಡರು ಅದರಂತೆ ಭೇಟಿ ಮಾಡಿದರು ಅದುವೆ ‘ಕುರುಡು ಪ್ರೀತಿಯ ಮೊದಲ ಭೇಟಿ’, ಇಲ್ಲಿಂದ ಇವರಿಗೆ ಪ್ರತಿದಿನ ಸಂಕಷ್ಟಗಳ ಸರಮಾಲೆ ಶುರುವಾದವು ಅದಾಗಲೆ ಇವರ ಈ ಪ್ರೀತಿ ಇಬ್ಬರ ಮನೆಯಲ್ಲೂ ಗೊತ್ತಾಗಿತ್ತು. ಸಂಪತ್ ಮನೆಯಲ್ಲಿ ಅಷ್ಟು ಕಿರಿಕಿರಿ ಇಲ್ಲವಾದರು ಸಂಜು ಮನೆಯಲ್ಲಿ ಇದೊಂದು ದೊಡ್ಡ ಸಮಸ್ಸೆಯಾಗಿ ಪರಿಣಮಿಸಿತ್ತು. ಅಡೆತಡೆ ಇಲ್ಲದ ಪ್ರೀತಿಗೆ ಸ್ಟೇಟಸ್ ಎಂಬುದು ಅಡ್ಡಿಯಾಗಿ ಪ್ರೇಮಿಗಳನ್ನ ವಿರಹಿಗಳಾಗಿಸಿತ್ತು,
ಇದೆಲ್ಲದರ ಮಧ್ಯೆ ಸಂಪತ್ ಜೊತೆ ಸಂಜು ಕೊನೆವರೆಗೂ ಜೀವಿಸಬೇಕೆಂಬ ಹಂಬಲದಿಂದ ಮನೆಬಿಟ್ಟು ಸಂಪತ್ ಊರಿಗೆ ಬರುವಳು ಮನೆಯಲ್ಲಿ ಮಗಳು ಕಾಣದಿರುವುದ ತಿಳಿದ ಸಂಜುವಿನ ತಂದೆ ವೃತ್ತಿಯಲ್ಲಿ ಪೋಲಿಸ್ ಅಧಿಕಾರಿಯಾಗಿದ್ದ ಅಷ್ಟೇ ಅಲ್ಲದೆ ಇಡೀ ಕುಟುಂಬಕ್ಕೆ ಕುಟುಂಬವೆ ಪೋಲಿಸ್ ಅಧಿಕಾರಿಗಳಾಗಿದ್ದರು ಈ ಅಧಿಕಾರದಿಂದ ಸಂಪತ್ ಮೇಲೆ ಸಂಜುವಿನ ಕಿಡ್ನಾಪ್ ದೂರು ನೀಡಿದರು.
ಈ ವಿಷಯ ತಿಳಿದಂತೆ ಸಂಪತ್ ಜೊತೆ ಇದ್ದ ಊರಿನ ಕೆಲವರು ಪೋಲಿಸ್ ಫ್ಯಾಮಿಲಿ ಸಹವಾಸ ನಮ್ಗಾಕೆ ಏನಾದ್ರೂ ಮಾಡ್ತರೆ ಈ ಪೋಲಿಸ್ ಅವರು ಎನ್ನುತ್ತ, ಸಂಪತ್ಗೆ ಸಹಾಯ ಮಾಡಲು ಯಾರು ಮುಂದೆ ಬರುವುದಿಲ್ಲ ಈ ಪರಿಸ್ಥಿತಿಯಲ್ಲಿ ಸಂಪತ್ ಒಬ್ಬನೇ ಈ ಸಮಸ್ಸೆ ಎದುರಿಸಿದನಾದರು ಅಡೆತಡೆಗಳು ವಿಪರೀತವಾಗಿದ್ದವು,
ಇದೆಲ್ಲದರ ನಡುವೆ ಮತ್ತೆ ಸಂಜು ಮತ್ತು ಸಂಪತ್ ಯಾರಿಗೂ ಗೊತ್ತಾಗದಂತೆ ಸಂಜುವಿನ ಸ್ಟೇಟ್ಮೆಂಟಿನೊಂದಿಗೆ ರಿಜಿಸ್ಟರ್ ಮ್ಯಾರೇಜ್ ಆಗಿ ಊರಿಗೆ ಬಂದರಾದರೂ ಇಲ್ಲಿಗೆ ನೆಮ್ಮದಿ ಬಂದೊದಗಲಿಲ್ಲ ಸಂಪತ್ನ ಮನೆಯವರೆಲ್ಲರೂ ದಿನ ಕಿರಿಕಿರಿ ಮಾಡುತ್ತಾ ಇವನಿಗೆ ಅಂಗಿಸುತ್ತಿದ್ದರು ಈ ನಡುವೆ ಕೆಲಸ ಇಲ್ಲದೇ ಖಾಲಿ ಇದ್ದ ಸಂಪತ್ ಕೂಲಿ ಕೆಲಸಕ್ಕೆ ಹೋಗಲೂ ಶುರುಮಾಡುತ್ತಾನೆ.
ಹೀಗೆ ಸ್ನೇಹಿತರೊಟ್ಟಿಗೆ ಸೇರಿ ಕೆಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿರುವಾಗ ಸರಕಾರ ಗ್ರಾಮ ಪಂಚಾಯ್ತಿ ಚುನಾವಣೆಯ ಅದಿಸೂಚನೆ ಹೊರಡಿಸುವುದು ಊರಿನ ಕೆಲ ಹಿರಿಯರ ಸಲಹೆಯಂತೆ ಸಂಪತ್ ತನ್ನೂರಿನ ಒಂದು ವಾರ್ಡ್ನ ಅಭ್ಯಾರ್ಥಿಯೆಂದು ತೀರ್ಮಾನಿಸಿದರು ಆದರೆ ಅಲ್ಲಿ ಮಹಿಳಾ ಅಭ್ಯಾರ್ಥಿ ಬಂದ ಕಾರಣ ಸಂಜುವಿನ ಹೆಸರು ಕೇಳಿ ಬರುತ್ತದೆ ಇದರಂತೆ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಗೆಲುವು ಕೊಟ್ಟ ಜನತೆ ಮುಂದೆ ಅಧ್ಯಕ್ಷ ಸ್ಥಾನವನ್ನು ಸಂಜುಳನ್ನ ಆಯ್ಕೆ ಮಾಡುತ್ತಾರೆ.
ತಾನು ಮುಖ ನೋಡದೇನೆ ಪ್ರೀತಿಸಿ ಮದುವೆಯಾದ ತನ್ನೊಡತಿಯನ್ನ ಅಧ್ಯಕ್ಷಳನ್ನಾಗಿಸಿ ತನ್ನ ಪ್ರೀತಿಯನ್ನು ಮೇಲ್ಮಟ್ಟಕ್ಕೇರಿಸಿದ ಈ ಯುವಕನ ಸಾಧನೆಯು ಸುಲಭದ ಮಾತಲ್ಲ. ‘ಪ್ರೀತಿಯಲ್ಲಿ ಗೆದ್ದವ ಚುನಾವಣೆಯಲ್ಲಿ ಗೆದ್ದು ಗದ್ದುಗೆಯೇರಿದ’.
ಎಲ್ಲಾ ಕೆಟ್ಟ ಪರಿಸ್ಥಿತಿಗಳಿಗೆಲ್ಲಾ ಸರಿಯದ ಸಮಯಕ್ಕೆ ಉತ್ತರಿಸುತ್ತಾ ಪ್ರೀತಿ ಎಂಬ ಹೆಸರಲ್ಲಿ ಮೋಹಕ್ಕೆ ಬಲಿಯಾಗುವವರಿರುವವರ ಜೊತೆ ಸಂಪತ್ ಮತ್ತು ಸಂಜು ಇಬ್ಬರೂ ತಮ್ಮ ಪ್ರೀತಿಯನ್ನು ಪಡೆಯುವಲ್ಲಿ ಸಕ್ಸಸ್ ಆಗಿದ್ದಾರೆ ಇವರಿಗೀಗ ಸುಂದರವಾದ ಮೂರು ಮಕ್ಕಳು, ಎರಡು ಹೆಣ್ಣು, ಒಂದು ಗಂಡು ಮಗು. ಸಂಪತ್ ಸಂಜು ಸುಖಕರವಾದ ಸಂಸಾರದಲ್ಲಿ ಸಮಾಜ ಸೇವೆಯನ್ನು ಮಾಡಲ್ಹೊರಟ್ಟಿದ್ದಾರೆ ಇವರಿಗೆ ಇವರ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತಾ..
ಇಲ್ಲಿ ಪ್ರೀತಿ, ಪ್ರೇಮ, ಆಸೆ, ಆಕಾಂಕ್ಷೆಗಳು ಅಪ್ಪ, ಅಮ್ಮ, ಕುಟುಂಬದ ಸದಸ್ಯರು ಊರು, ಊರಿನ ಜನರ ಮನಸ್ಥಿತಿ ಇದೆಲ್ಲದರ ನಡುವೆ ತನ್ನ ಒಂದು ಪಾಸಿಟಿವ್ ಥಿಂಕಿಂಗ್ ಎಂಬುದು ಸಂಪತ್ ಎಂಬ ಯುವಕನ ಜೀವನದ ದಿಕ್ಕನ್ನೇ ಸೀರಿಯಸ್ ಆಗಿ ಬದಲಿಸುತ್ತದೆ, ಇರುವ ಕಷ್ಟದ ಜೊತೆ ಬರುತಿದ್ದ ಕಷ್ಟಗಳನ್ನೇಲ್ಲಾ ಎದರಿಸುತ್ತಾ ಬದಲಾದ ಸಂಪತ್, ಪ್ರೀತಿ ಮಾಡಿ ಸಾಯುವ ಕೆಲ ಯುವಕ ಯುವತಿಯರಿಗೆ ಒಂದು ನಿದರ್ಶನವಾಗಿದ್ದಾನೆ ಎಂದು ಹೇಳುತ್ತಾ ಈ ಬರಹಕ್ಕೆ ಪೂರ್ಣವಿರಾಮವನ್ನಿಡುತ್ತಿದ್ದೇನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ನಿತ್ಯ ಭವಿಷ್ಯ7 days ago
ಮೂಲಾ ನಕ್ಷತ್ರದಲ್ಲಿ ಜನಿಸಿದರೆ ಅದರ ಮಹತ್ವ ಹಾಗೂ ಅದರ ಮಾಹಿತಿ..!
-
ದಿನದ ಸುದ್ದಿ6 days ago
‘ಅನುಗ್ರಹ’ ಯೋಜನೆ ರಾಜ್ಯದಲ್ಲಿ ಮರುಜಾರಿಗೊಳಿಸದಿದ್ದರೆ ವಿಧಾನಸಭೆಯಲ್ಲಿ ಹೋರಾಟ : ಸಿದ್ದರಾಮಯ್ಯ ಎಚ್ಚರಿಕೆ
-
ನಿತ್ಯ ಭವಿಷ್ಯ7 days ago
ಸೋಮವಾರ ರಾಶಿ ಭವಿಷ್ಯ : ಕರೆ ಮಾಡಿ ಕಷ್ಟಗಳನ್ನು ಪರಿಹರಿಸಿಕೊಳ್ಳಿ
-
ನಿತ್ಯ ಭವಿಷ್ಯ5 days ago
ಜ್ಯೋತಿಷ್ಯಶಾಸ್ತ್ರ ಅಥವಾ ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು?ಕಂಕಣಬಲ ಕೂಡಿ ಬರಲು ಏನು ಮಾಡಬೇಕು?
-
ಬಹಿರಂಗ3 days ago
ಗಾಳಿಪಟ ವೇಗದ ರಾಜಕುಮಾರ ‘ಬೀರ್ ಚಿಲಾರಾಯ್’..!
-
ನಿತ್ಯ ಭವಿಷ್ಯ5 days ago
ಬುಧವಾರ ರಾಶಿ ಭವಿಷ್ಯ : ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಆತಂಕ ದೂರವಾಗಲಿದೆ
-
ದಿನದ ಸುದ್ದಿ5 days ago
ಕೊಟ್ಟ ಮಾತಿನಂತೆ ನಡೆದ ಡಿ ಬಾಸ್ ದರ್ಶನ್;ಕುದುರೆಯ ತಡಿ ನೀಡಿ, ಎಸ್.ಎಸ್.ಮಲ್ಲಿಕಾರ್ಜುನಗೆ ಕೃತಜ್ಞತೆ
-
ನಿತ್ಯ ಭವಿಷ್ಯ6 days ago
ಈ ಯೋಗ ಇದ್ದರೆ ಖಂಡಿತ ದೊಡ್ಡ ರಾಜಕಾರಣಿ, ಸಮಾಜ ಸೇವಕ, ಜಿಲ್ಲಾಧಿಕಾರಿ(IAS),IPS, ಸಾಹಿತಿಗಳು, ಗಾಯಕರು, ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಆಗುವ ಸಂಭವ