ದಿನದ ಸುದ್ದಿ
ಪ್ರಜಾ ಪರಿವರ್ತನಾ ವೇದಿಕೆಯಿಂದ ಮಾ.14 ರಂದು ‘ಮೀಸಲಾತಿ ವಿವಾದ: ವಾಸ್ತವ ಸ್ಥಿತಿಗತಿಗಳು’ ಕುರಿತು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಮಾವೇಶ
ಸುದ್ದಿದಿನ,ಬೆಂಗಳೂರು : ನಗರದ ವಸಂತ ನಗರದಲ್ಲಿನ ಅಂಬೇಡ್ಕರ್ ಭವನದಲ್ಲಿ ಮಾರ್ಚ್ 14 ರಂದು ಭಾನುವಾರ ‘ಮೀಸಲಾತಿ ವಿವಾದ: ವಾಸ್ತವ ಸ್ಥಿತಿಗತಿಗಳು’ ವಿಷಯಕ್ಕೆ ಕುರಿತಂತೆ ರಾಜ್ಯಮಟ್ಟದ ಸಮಾವೇಶವನ್ನು ಪ್ರಜಾ ಪರಿವರ್ತನಾ ವೇದಿಕೆಯು ಆಯೋಜಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಬಂಧುಗಳು ಭಾಗವಹಿಸಬೇಕೆಂದು ವೇದಿಕೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ಮಾನ್ಯರೆ,
ಭಾರತ ಸ್ವಾತಂತ್ರ್ಯ ಪಡೆದು ಸಂವಿಧಾನವನ್ನು ಒಪ್ಪಿ ಜಾರಿಗೊಳಿಸಿದ ದಿನದಿಂದಲೂ ಮೀಸಲಾತಿಯ ವಿರುದ್ಧ ಅಪಸ್ವರಗಳನ್ನು ಮುಂದುಮಾಡುವ ಪರಿಪಾಠವನ್ನು ನಿರಂತರವಾಗಿ ಚಾಲ್ತಿಯಲ್ಲಿ ಇಡಲಾಗಿದೆ. ಇತ್ತೀಚೆಗೆ ಭಾರತದಾದ್ಯಂತ ಮೀಸಲಾತಿಯನ್ನು ವಿರೋಧಿಸುತ್ತಿದ್ದವರು ಸಹ ತಮಗೂ ಮೀಸಲಾತಿಯನ್ನು ನೀಡಬೇಕೆಂದು ಉಗ್ರ ಹೋರಾಟಕ್ಕೆ ಮುಂದಾಗುತ್ತಿದ್ದಾರೆ.
ಕರ್ನಾಟಕದಲ್ಲಿ ಬಲಾಢ್ಯ ಸಮುದಾಯಗಳು ಮಾತ್ರವಲ್ಲದೆ, ಮೀಸಲಾತಿಯನ್ನು ಅನುಭವಿಸುತ್ತಿರುವ ಸಮುದಾಯಗಳೂ ಮೀಸಲಾತಿಯಲ್ಲಿ ತಮ್ಮನ್ನು ಒಂದು ಪ್ರವರ್ಗದಿಂದ ಮತ್ತೊಂದು ಪ್ರವರ್ಗಕಗಕೆ ಸ್ಥಳಾಂತರಿಸಿ ಮೀಸಲಾತಿ ನೀಡುವಂತೆ ಒತ್ತಾಯಿಸುತ್ತಿವೆ. ಇದರಲ್ಲಿ ಧಾರ್ಮಿಕ ಮುಖಂಡರು, ಮಠಾಧೀಶರು, ಜನಪ್ರತಿನಿಧಿಗಳು ಮತ್ತು ಜಾತೀಯ ಸಮುದಾಯಗಳು ಒಗ್ಗಟ್ಟಾಗಿ ಬಲಪ್ರದರ್ಶನದಲ್ಲಿ ತೊಡಗಿವೆ.
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಲು ಅವಕಾಶವಿದೆ. ಅದಕ್ಕೆ ಸಂವಿಧಾನವೂ ಸಹ ಬೆಂಬಲವಾಗಿದೆ. ಆದರೆ ಮೀಸಲಾತಿಯ ಮೂಲ ಆಶಯಗಳು ಇದರಲ್ಲಿ ಕಣ್ಮರೆಯಾಗುತ್ತಿರುವುದು ದುರಂತವೇ ಸರಿ. ಇತ್ತೀಚೆಗಷ್ಟೇ ಮೇಲ್ವರ್ಗದಲ್ಲಿನ ಬಡವರಿಗೆ ಶೇ 10. ಮೀಸಲಾತಿಯನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ವಿಷಯ ಮಂಡಿಸಿ ಯಾವ ವಿರೋಧವೂ ಇಲ್ಲದಂತೆ ಸಂವಿಧಾನಕ್ಕೆ ತಿದ್ದುಪಡಿ ತಂದು ಜಾರಿಗೊಳಿಸಿದೆ. ಇದಕ್ಕೆ ಯಾವುದೇ ರೀತಿಯ ಹೋರಾಟ, ಹಕ್ಕೊತ್ತಾಯ, ಅಧ್ಯಯನ ಸಮಿತಿ ವರದಿ, ವೈಜ್ಞಾನಿಕ ಅಧ್ಯಯನ ಅಥವಾ ಸಾಮಾಜಿಕ ಒತ್ತಡಗಳಾಗಲಿ ಇರಲಿಲ್ಲ. ಆಳುವ ಸರ್ಕಾರದ ಹಿತಾಸಕ್ತಿ ಇದಾಗಿತ್ತು ಎಂಬುದನ್ನು ನೆನಪಿನಲ್ಲಿಡಬೇಕು.
ಮೀಸಲಾತಿಯು ಬಡತನ ನಿರ್ಮೂಲನಾ ಕಾರ್ಯಕ್ರಮವಲ್ಲ. ಅದು ಸಾಮಾಜಿಕ ಆರ್ಥಿಕ ಅಸಮಾನತೆ ಮತ್ತು ಅವಗಣನೆಗೆ ಒಳಪಟ್ಟಿರುವ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಸುವ ಒಂದು ಉಪಕ್ರಮ. ಜಾತಿಗ್ರಸ್ಥವಾಗಿರುವ ಸಮಾಜವನ್ನು ಜಾತಿರಹಿತವಾಗಿ ರೂಪಿಸುವ ಮಹತ್ವಾಕಾಂಕ್ಷೆಯ ತುಡಿತ ಮೀಸಲಾತಿಯ ಅಂತರಂಗದಲ್ಲಿದೆ.
ಈ ಮೂಲಕ ಪ್ರತಿಯೊಬ್ಬರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿಸುವ ಮೂಲಕ ಪ್ರಬುದ್ಧ ಭಾರತವನ್ನು ನಿರ್ಮಿಸುವ ಸಂಕಲ್ಪ ಮೀಸಲಾತಿಯದ್ದಾಗಿದೆ, ಇಂಥ ಆಶಯಗಳನ್ನು ಗೊಂದಲಗೊಳಿಸಿ ಜಾತಿ– ಮತಗಳ ನಡುವೆ ದ್ವೇಷ, ವೈಷಮ್ಯಗಳನ್ನು ಹರಡಿ ಜಾತಿವ್ಯವಸ್ಥೆಯನ್ನು ಮತ್ತಷ್ಟು ಜಟಿಲಗೊಳಿಸುವ ಆಯುಧವನ್ನಾಗಿ ಮೀಸಲಾತಿಯನ್ನು ಬಳಸಲಾಗುತ್ತಿದೆ.
ಪ್ರಸ್ತುತ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟಗಳನ್ನು ನ್ಯಾಯಸಮ್ಮತ ಎಂದು ಭಾವಿಸಿದರೂ ಪ್ರಾಯೋಗಿಕವಾಗಿ ಅಸಂಬದ್ಧವಾಗಿದೆ ಎನ್ನುವುದು ವಾಸ್ತವ ಸತ್ಯ. ಇದು ಅನೇಕರಿಗೆ ಮನವರಿಕೆಯಾಗಿರುವ ಸಾಧ್ಯತೆಯಿದೆ. ಏಕೆಂದರೆ ಸರ್ವೋಚ್ಚ ನ್ಯಾಯಾಲಯವು ‘‘ಇಂದಿರಾ ಸಹಾನಿ’’ ಪ್ರಕರಣದಲ್ಲಿ ಮೀಸಲಾತಿಯ ಪ್ರಮಾಣ ಒಟ್ಟು ಶೇ. 50 ಮೀರಬಾರದು ಎಂಬ ನಿರ್ಬಂಧವನ್ನು ಹೇರಿದೆ.
ಅಗತ್ಯವಿದ್ದರೆ ಕೇಂದ್ರ ಸರ್ಕಾರ ಕ್ರಮಬದ್ಧವಾದ ರೀತಿಯಲ್ಲಿ ಶಾಸನಾತ್ಮಕವಾಗಿ ಮಿತಿಯನ್ನು ಮೀರಿ ಪ್ರಮಾಣವನ್ನು ಹೆಚ್ಚಳಗೊಳಿಸುವ ಅವಕಾಶ ಇದ್ದೇ ಇದೆ. ಸಂವಿಧಾನದ 340ನೇ ವಿಧಿಯನ್ವಯ ಸಮುದಾಯಗಳ ಹಿಂದುಳಿದಿರುವಿಕೆಯನ್ನು ವೈಜ್ಞಾನಿಕ ವಿಧಿ ವಿಧಾನಗಳಿಂದ ದೃಢೀಕರಿಸಿ ನ್ಯಾಯಸಮ್ಮತವಾಗಿ ಅರ್ಹರಾದವರಿಗೆ ಮೀಸಲಾತಿಯನ್ನು ವಿಸ್ತರಿಸುವುದಕ್ಕೆ ಸಾಧ್ಯವಿದೆ.
ಇದು ಸಂವಿಧಾನ ತಿದ್ದುಪಡಿಯ ಮೂಲಕ ಕೇಂದ್ರದ ಮಟ್ಟದಲ್ಲಿಯೇ ಇತ್ಯರ್ಥವಾಗಬೇಕಾದ ವಿಷಯ. ಅಂದರೆ ಸಂವಿಧಾನಾತ್ಮಕವಾಗಿ ಮೀಸಲಾತಿ ಪ್ರಮಾಣ ಹೆಚ್ಚಾದಲ್ಲಿ ಮಾತ್ರ ಮೀಸಲಾತಿಗಾಗಿ ನಡೆಸುತ್ತಿರುವ ಹಕ್ಕೊತ್ತಾಯಗಳು ಫಲಪ್ರದವಾಗುತ್ತವೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ ಆದರೆ ಈ ನಿಟ್ಟಿನಲ್ಲಿ ಯಾವುದೇ ಬಗೆಯ ಹೋರಾಟಗಳೂ ನಡೆಯುತ್ತಿಲ್ಲ.
ಮೀಸಲಾತಿ ವಿವಾದಗಳಿಲ್ಲನ ಮತ್ತೊಂದು ವಿರೋಧಾಭಾಸ ಏನೆಂದರೆ ಬಂಡವಾಳಶಾಹಿ ವ್ಯವಸ್ಥೆಯನ್ನು ಸದೃಢಗೊಳಿಸಿ ತೀವ್ರತರವಾಗಿ ಖಾಸಗೀಕರಣಕ್ಕೆ ಮುಕ್ತಗೊಳಿಸುತ್ತಿರುವುದು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ಒಪ್ಪಿಸಿ ಮೀಸಲಾತಿ ವ್ಯವಸ್ಥೆಗೆ ಅಂತ್ಯ ಹಾಡಲಾಗುತ್ತಿದೆ. ಈಗಾಗಲೇ ಶಿಕ್ಷಣ ಕ್ಷೇತ್ರವನ್ನು ಬಹುಪಾಲು ಖಾಸಗೀ ಬಂಡವಾಳಿಗರ ವ್ಯಾಪಾರೀ ಕ್ಷೇತ್ರವನ್ನಾಗಿಸುವುದು ಸೂರ್ಯ ಸ್ಪಷ್ಟವಾಗಿದೆ.
ಅಳಿದುಳಿದ ಸರ್ಕಾರಿ ವಲಯದಲ್ಲಿಯೂ ನೇಮಕಾತಿಗಳನ್ನು ಮಾಡದೆ ಗುತ್ತಿಗೆ ಹೊರಗುತ್ತಿಗೆ ಪದ್ಧತಿಯನ್ನು ಜಾರಿಗೊಳಸಿಲಾಗಿದೆ. ವಾಸ್ತವ ಸ್ಥಿತಿ ಹೀಗಿರುವಾಗ ಶಿಕ್ಷಣ ಮತ್ತು ಉದ್ಯೋಗಗಳಲ್ಲಿನ ಮೀಸಲಾತಿಗಾಗಿ ಹಂಬಲಿಸುವುದೇ ಬಹುದೊಡ್ಡ ವೈರುಧ್ಯವಾಗಿ ಪರಿಣಮಿಸಿದೆ. ಬೃಹದಾಕಾರದಲ್ಲಿ ವಿಸ್ತಾರವಾಗುತ್ತಿರುವ ಖಾಸಗೀ ಕ್ಷೇತ್ರದಲ್ಲಿ ಮೀಸಲಾತಿಯನ್ನು ಹೊಂದಬೇಕಾದ್ದು ಇಂದಿನ ಅಗತ್ಯ. ಮೀಸಲಾತಿ ಹೋರಾಟಗಳು ಅನಿವಾರ್ಯವಾಗಿ ಖಾಸಗೀ ಕ್ಷೇತ್ರದ ಮೀಸಲಾತಿಗಾಗಿ ಸಂಘಟಿತಗೊಳ್ಳಬೇಕಾದ ತುರ್ತು ಇಂದಿನದಾಗಿದೆ.
ಇದನ್ನೂ ಓದಿ | ಆತ್ಮನಿರ್ಭರ ಭಾರತದ ಆತ್ಮವಂಚಕ ಮುಖಗಳು..!
ಮೀಸಲಾತಿಯ ಹೆಚ್ಚಳ ಮತ್ತು ಖಾಸಗೀ ವಲಯವನ್ನು ಮೀಸಲಾತಿ ತೆಕ್ಕೆಗೆ ಸೇರಿಸಿಕೊಳ್ಳುವುದಕ್ಕಿಂತಲೂ ಬಹುದೊಡ್ಡ ವ್ಯಂಗ್ಯ ಮತ್ತೊಂದಿದೆ. ಅದೇನೆಂದರೆ ಸಂವಿಧಾನದತ್ತವಾಗಿಯೇ ಪರಿಶಿಷ್ಟಜಾತಿ– ಪರಿಶಿಷ್ಟವರ್ಗಗಳು ಹಿಂದುಳಿದ ವರ್ಗಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆಂದು ನಿಗಧಿಯಾಗಿದ್ದ ಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿಗಳಿಸದಿರುವುದು. ಈ ವರ್ಗಗಳಿಗೆಂದು ಶೇ. 50 ಮೀರದಂತೆ ಕರ್ನಾಟಕದಲ್ಲಿ ಒಟ್ಟು ಶೇ. 49.5 ರಷ್ಟು ಮೀಸಲಾತಿಯನ್ನು ನಿಗದಿಪಡಿಸಿದೆ.
ಆದರೆ ಇದರಲ್ಲಿ ಜಾರಿಯಾಗಿರುವ ಪ್ರಮಾಣವೆಂದರೆ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸೇರಿ ಶೇ.12 ಜಾರಿಯಾಗಿದೆ ಇನ್ನೂ ಶೇ. 6 ಖಾಲಿಯಿದೆ. ಇತರೆ ಹಿಂದುಳಿದ ವರ್ಗಗಳಿಗೆ ಶೇ 5 ಜಾರಿಗೊಳಸಿದ್ದು ಖಾಲಿಯಿರುವ ಪ್ರಮಾಣ ಶೇ 22 ಇದೆ. ಧಾರ್ಮಿಕ ಅಲ್ಪಸಂಖ್ಯಾತರಿಗೆ ಜಾರಿಗೊಳಿಸಿರುವುದು ಶೇ 2.5 ಖಾಲಿಯಿರುವುದು ಶೇ 2 ಅಂದರೆ ಮೀಸಲಾತಿಯಲ್ಲಿ ಜಾರಿಯಾಗಿರುವ ಒಟ್ಟು ಪ್ರಮಾಣ ಕೇವಲ ಶೇ. 19.5 ಮಾತ್ರ. ಇನ್ನೂ ಶೇ 30ರಷ್ಟು ಮೀಸಲಾತಿಯೇ ಭರ್ತಿಯಾಗಿರುವುದಿಲ್ಲ. ಈ ಅಂತರ ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ವಿಸ್ತಾರಗೊಳ್ಳುತ್ತದೆ.
ಈ ವಾಸ್ತವ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ಧರ್ಮ, ಜಾತಿ, ಉಪಜಾತಿಗಳ ನಡುವೆ ಮೀಸಲಾತಿ ವಿಷಯವನ್ನು ನೆಪಮಾಡಿ ಅಸಹನೆಯನ್ನು ತುಂಬುತ್ತಿರುವುದು ಯಾವ ನ್ಯಾಯ? ಈ ರೀತಿಯ ಕಟುವಾಸ್ತವಗಳನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕಿದೆ. ನಮ್ಮ ನಡುವಿನ ಸಾಮಾಜಿಕ ಆರ್ಥಿಕ ರಾಜಕೀಯ ವಿದ್ಯಾಮಾನಗಳು ಮಾನವೀಯವಾದ ಮೌಲ್ಯಗಳನ್ನು ಕಳೆದುಕೊಂಡು ಸಮಯಕ್ಕೊಂದು ಸುಳ್ಳನ್ನು ಹೆಣೆದು ದಾರಿತಪ್ಪಿಸುವ ಕೆಲಸವನ್ನು ಮಾಡುತ್ತಿವೆ.
ಆಳುವ ಸರ್ಕಾರಗಳಿಗೆ ಇದೊಂದು ಅಸ್ತ್ರವಾಗಿ ಪರಿಣಮಿಸಿದೆ. ದೇಶದ ಜನತೆಯನ್ನು ಗೊಂದಲದಲ್ಲಿ ದೂಡಿ ಅತಂತ್ರಗೊಳಸಿ ವರ್ಣಾಶ್ರಮ ವ್ಯವಸ್ಥೆಯನ್ನು ಶಾಶ್ವತಗೊಳಿಸುವ ಹುನ್ನಾರದಲ್ಲಿವೆ. ಇನ್ನಾದರೂ ನಾವೆಲ್ಲ ಇದನ್ನು ಅರ್ಥಮಾಡಿಕೊಂಡು ಒಗ್ಗಟ್ಟಾಗಿ ಸಂವಾದ ಸಂಘರ್ಷವನ್ನು ಕಟ್ಟುವ ಮೂಲಕ ಆಳುವ ವ್ಯವಸ್ಥೆಯನ್ನು ಎಚ್ಚರಿಸಬೇಕಾಗಿದೆ.
’ಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿಗೊಳಿಸಿ; ಇಲ್ಲವಾದರೆ ಅಧಿಕಾರವನ್ನು ತ್ಯಜಿಸಿ‘ ಎಂದು ಕೇಳುವ ಸ್ಥಿತಿ ಬಂದಿದೆ. ಜನತಂತ್ರದಲ್ಲಿ ಜನರದ್ದೇ ಪರಮಾಧಿಕಾರ ಎಂಬ ಸತ್ಯವನ್ನು ಸಾಕಾರಗೊಳಿಸೋಣ. ಪ್ರಜಾಪ್ರಭುತ್ವವನ್ನು ಉಳಿಸೋಣ ಎಲ್ಲರೂ ಬನ್ನಿ; ನಿಮ್ಮವರನ್ನೇಲ್ಲ ಕರೆ ತನ್ನಿ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯೋಣ.
–ಪ್ರಜಾ ಪರಿವರ್ತನಾ ವೇದಿಕೆ, ಕರ್ನಾಟಕ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ
ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.
ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್. ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.
ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.
ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ
ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್, ಚೇತನ್ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.
ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.
ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


