ದಿನದ ಸುದ್ದಿ
ಸಿಡಿ ಪ್ರಕರಣ | ಸಂತ್ರಸ್ತೆ ಯುವತಿಯನ್ನು ಪೊಲೀಸರಿಗೆ ಪತ್ತೆಹಚ್ಚಲಿಕ್ಕಾಗದಿರುವುದು ನಾಚಿಕೆಗೇಡಿನ ಸಂಗತಿ : ಸಿದ್ದರಾಮಯ್ಯ

ಸುದ್ದಿದಿನ, ಬೆಂಗಳೂರು : ಸಿಡಿ ಪ್ರಕರಣದಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು ಆಗುತ್ತಿರುವುದಕ್ಕೆ ರಾಜ್ಯ ಸರ್ಕಾರ ಮತ್ತು ಪೊಲೀಸರ ವೈಫಲ್ಯವೇ ಕಾರಣ. ಸಿಡಿ ಮಾಧ್ಯಮದಲ್ಲಿ ಕಾಣಿಸಿಕೊಂಡು 26 ದಿನಗಳು ಕಳೆದರೂ ಸಂತ್ರಸ್ತೆ ಯುವತಿಯನ್ನು ಪೊಲೀಸರಿಗೆ ಪತ್ತೆಹಚ್ಚಲಿಕ್ಕಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ದಿನಕ್ಕೊಂದು ತಿರುವು ಪಡೆದು ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿರುವ ಸಿಡಿ ಹಗರಣದ ತನಿಖೆ ತಾರ್ಕಿಕ ಅಂತ್ಯ ಕಾಣಬೇಕಾದರೆ ಸಂತ್ರಸ್ತ ಯುವತಿ ಅಜ್ಞಾತ ಸ್ಥಳದಿಂದ ಹೊರಬಂದು ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಬೇಕು. ಕಾನೂನುಬದ್ಧವಾದ ಅವಳ ಹಕ್ಕನ್ನು ಚಲಾಯಿಸದಂತೆ ತಡೆಯುತ್ತಿರುವವರು ಯಾರು? ಎಂದಿದ್ದಾರೆ.
ಸಿಡಿಯಲ್ಲಿರುವ ಯುವತಿ ಅಜ್ಞಾತ ಸ್ಥಳದಿಂದ ನಿರಂತರವಾಗಿ ತನ್ನ ಹೇಳಿಕೆಗಳ ಸಿಡಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದ್ದಾಳೆ, ತನ್ನ ವಕೀಲನ ಮೂಲಕ ಪೊಲೀಸರಿಗೆ ದೂರು ಕಳುಹಿಸಿಕೊಡುತ್ತಿದ್ದಾಳೆ, ತಂದೆ-ತಾಯಿ ಜೊತೆ ಮಾತನಾಡುತ್ತಿದ್ದಾಳೆ. ಹೀಗಿದ್ದರೂ ಪೊಲೀಸರ ಕೈಗೆ ಮಾತ್ರ ಸಿಗುತ್ತಿಲ್ಲ ಎಂದರೆ ಏನು ಅರ್ಥ?
ಮಾಧ್ಯಮಗಳಲ್ಲಿ ಪ್ರಕಟ/ಪ್ರಸಾರವಾಗಿರುವ ಯುವತಿಯದ್ದೆನ್ನಲಾದ ಹೇಳಿಕೆಗಳನ್ನು ಗಮನಿಸಿದರೆ ಆಕೆಗೆ ರಾಜ್ಯ ಸರ್ಕಾರದ ಮೇಲಾಗಲಿ, ಪೊಲೀಸರ ಮೇಲಾಗಲಿ ನಂಬಿಕೆ ಇಲ್ಲ. ಪೊಲೀಸರು ತನ್ನ ವಿರುದ್ಧವೇ ಸಂಚು ಮಾಡುತ್ತಿದ್ದಾರೆಂಬ ಅರ್ಥದಲ್ಲಿ ಯುವತಿ ಮಾತನಾಡುತ್ತಿದ್ದಾಳೆ. ಗೃಹಸಚಿವರು ಈ ಬಗ್ಗೆ ತಕ್ಷಣ ಗಮನಹರಿಸಬೇಕು.
ರಾಜ್ಯದ ಪೊಲೀಸ್ ಇಲಾಖೆಯೂ ಸೇರಿದಂತೆ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿರುವುದಕ್ಕೆ ಈ ಸಿಡಿ ಹಗರಣ ಸಾಕ್ಷಿ. ಸಾಮಾನ್ಯ ಕುಟುಂಬದಿಂದ ಬಂದಿರುವ ಯುವತಿಯನ್ನು ಇಷ್ಟು ದಿನಗಳ ನಂತರವೂ ಪತ್ತೆ ಹಚ್ಚಲಾಗಿಲ್ಲವೆಂದರೆ ಏನು ಅರ್ಥ? ಆಕೆಯೇನು ವಿಜಯಮಲ್ಯನೋ ಇಲ್ಲವೇ ನೀರವ್ ಮೋದಿಯೋ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಡಿ ಪ್ರಕರಣದಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು ಆಗುತ್ತಿರುವುದಕ್ಕೆ ರಾಜ್ಯ ಸರ್ಕಾರ ಮತ್ತು ಪೊಲೀಸರ ವೈಫಲ್ಯವೇ ಕಾರಣ. ಸಿಡಿ ಮಾಧ್ಯಮದಲ್ಲಿ ಕಾಣಿಸಿಕೊಂಡು 26 ದಿನಗಳು ಕಳೆದರೂ ಸಂತ್ರಸ್ತೆ ಯುವತಿಯನ್ನು ಪೊಲೀಸರಿಗೆ ಪತ್ತೆಹಚ್ಚಲಿಕ್ಕಾಗದಿರುವುದು ನಾಚಿಕೆಗೇಡಿನ ಸಂಗತಿ. 1/5#RameshJarkiholiCDCase
— Siddaramaiah (@siddaramaiah) March 28, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಗಾಂಧಿ ಭಾರತ’ ಕಾರ್ಯಕ್ರಮ

ಸುದ್ದಿದಿನ,ಚನ್ನಗಿರಿ:ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವೇದಿಕೆ ಮತ್ತು ಐ ಕ್ಯು ಎ ಸಿ ವತಿಯಿಂದ ಗುರುವಾರ ‘ಗಾಂಧಿ ಭಾರತ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.’
ಗಾಂಧಿಭಾರತ’ ಕಾರ್ಯಕ್ರಮ ಕರ್ನಾಟಕದಲ್ಲಿ ಮಹಾತ್ಮ ಗಾಂಧೀಜಿಯವರು 1924ರಲ್ಲಿ ಡಿಸೆಂಬರ್ 26,27ರಂದು ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಏಕೈಕ ಸಮ್ಮೇಳನವಾಗಿದ್ದು, ಭಾರತದ ಸ್ವಾತಂತ್ರ್ಯದ ಚಳುವಳಿಯಲ್ಲಿ ಅತೀ ಪ್ರಮುಖವಾದ ಪಾತ್ರವನ್ನು ವಹಿಸಿತ್ತು. ಆ ಕಾರ್ಯಕ್ರಮದವು ನೂರು ವರ್ಷತುಂಬಿದ ನೆನಪಿನ ಭಾಗವಾಗಿ ಮಹಾತ್ಮ ಗಾಂಧೀಜಿಯವರ ಧ್ಯಾನಸ್ಥ ಸ್ಥಿತಿಯ ಭಾವಚಿತ್ರವನ್ನು ಹಾಗೂ ಸಾಮಾಜಿಕ ಸಪ್ತ ಪಾತಕಗಳ ಭಾವಚಿತ್ರವನ್ನು ಅನಾವರಣ ಮಾಡುವುದರ ಮೂಲಕ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಅಮೃತೇಶ್ವರ ಬಿ ಜಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾಲೇಜಿನ ಸಾಂಸ್ಕೃತಿಕ ವೇದಿಕೆ ಸಂಚಾಲಕ
ಷಣ್ಮುಖಪ್ಪ ಕೆ ಎಚ್ ಅವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಜಾಗತಿಕವಾಗಿ ಹಿಂಸೆಯು ವಿಜೃಂಬಿಸುತ್ತಿರುವ ದಿನಮಾನಗಳಲ್ಲಿ ಮಹಾತ್ಮ ಗಾಂಧಿಯವರು ಹೆಚ್ಚು ಹೆಚ್ಚು ನೆನಪಾಗುತ್ತಿದ್ದಾರೆ. ಅವರು ಭಾರತದ ರಾಷ್ಟçಪಿತ ಮತ್ತು ಮಹಾತ್ಮ ಎಂದು ಕರೆಸಿಕೊಳ್ಳುವಲ್ಲಿ ಅವರು ಮಾಡಿದ ತ್ಯಾಗ, ದೇಶ ಸೇವೆ ಮತ್ತು ದೇಶಭಕ್ತಿ ಅದು ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಆಗಿತ್ತು ಎಂದರು.
ಪ್ರಪಂಚದ ಎಲ್ಲಾ ರಾಷ್ಟ್ರಗಳಿಗೂ ಕೂಡ ಮಾದರಿಂಯೇ ಆಗಿದೆ ಪ್ರಸ್ತುತ ಈ ದಿನದ ಕಾರ್ಯಕ್ರಮ ಮಹಾತ್ಮಾ ಗಾಂಧೀಜಿಯವರು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನ ವಹಿಸಿಕೊಂಡ ಕಾರಣಕ್ಕೆ ಅದು ನೂರು ವರ್ಷ ತಲುಪಿದ ಸವಿ ನೆನಪನ್ನು ಸ್ಮರಣೀಯವಾಗಿಸುವಲ್ಲಿ ಈ ದಿನದ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಜಯಕುಮಾರ್ ಐಕ್ಯುಎಸಿ ಸಂಚಾಲಕರು ಕಾರ್ಯಕ್ರಮವನ್ನು ಕುರಿತು ಮಾತನಾಡುತ್ತಾ ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಬದುಕಿನ ಆದರ್ಶಗಳು ಇವತ್ತಿನ ಜಾಗತಿಕ ಮಟ್ಟದ ಯುವ ಸಮೂಹಕ್ಕೆ ಮಾದರಿಯಾಗುವ ಅವಶ್ಯಕತೆ ಇದೆ ಎಂದು ಹೇಳಿದರು.
ಸಹ ಪ್ರಾಧ್ಯಾಪಕಿ ಡಾ. ಮಂಜುಳ ಅವರು ಗಾಂಧಿ ಭಾರತದ ಕಾರ್ಯಕ್ರಮದ ಕುರಿತು ಮಾತನಾಡುತ್ತಾ ಗಾಂಧಿಯವರು ಸ್ವಚ್ಚತೆಗೆ ಹೆಚ್ಚು ಮಹತ್ವಕೊಟ್ಟಿದ್ದು ವಿದ್ಯಾರ್ಥಿಗಳಾದವರು ನಾವು ಬದುಕುವ ಪ್ರದೇಶವನ್ನು ಹಾಗೂ ದೇಶವನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವುದರ ಕುರಿತು ಗಮನ ನೀಡಬೇಕು ಎಂದು ತಿಳಿಸಿದರು.
ಡಾ. ರವಿ ಸಹಾಯಕ ಪ್ರಾಧ್ಯಾಪಕರು ಗಾಂಧೀಜಿಯವರ ಪುಸ್ತಕಗಳನ್ನು ಓದುವುದರ ಜೊತೆಗೆ ಬದುಕಿನಲ್ಲಿ ಅವರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರೊ ಅಮೃತೇಶ್ವರ ಬಿ ಜಿ ಅವರು ಅಧ್ಯಕ್ಷೀಯ ನುಡಿಯನ್ನು ನುಡಿಯುತ್ತಾ “ಮಹಾತ್ಮ ಗಾಂಧಿಯವರು ಭಾರತ ದೇಶಕ್ಕೆ ಸ್ವಾತಂತ್ರ ತರುವಲ್ಲಿ ಇಡೀ ದೇಶದ ನಾಯಕತ್ವವನ್ನು ವಹಿಸುತ್ತಾ ಇಡೀ ಪ್ರಪಂಚಕ್ಕೆ ಜನಪರ ಹೋರಾಟ, ಜನ ಚಳುವಳಿ ಮತ್ತು ಜನಸೇವೆ ಹೀಗಿರಬೇಕು ಎಂಬುದಕ್ಕೆ ಮಹಾತ್ಮ ಗಾಂಧಿ ಆದರ್ಶವಾಗಿದ್ದಾರೆ ಎಂದರು.
ಧೀಮಂತ ವ್ಯಕ್ತಿತ್ವದ ಗಾಂಧಿಯ ಸವಿನೆನಪು ಕರ್ನಾಟಕದ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಅದಕ್ಕೆ ತುಂಬಿದ ನೂರು ವರ್ಷವನ್ನು ಮತ್ತೊಮ್ಮೆ ನಾವು ಸಂಭ್ರಮಿಸುತ್ತ ಇರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಪ್ರತಿಪಾದಿಸಿದರು ಅದರ ಜೊತೆಗೆ ವಿದ್ಯಾರ್ಥಿಗಳಿಗೆ ಗಾಂಧಿಯ ಬದುಕಿನ ಮೌಲ್ಯಗಳನ್ನು ಮೆಲುಕು ಹಾಕಿದರು.
ಈ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಮಹಾತ್ಮ ಗಾಂಧೀಜಿ ಕುರಿತ ರಸಪ್ರಶ್ನೆ ಸ್ಪರ್ಧೆ ಹಾಗೂ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.
ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ದರ್ಶನ ಮತ್ತು ಸಹನ ದ್ವಿತೀಯ ಬಿ ಕಾಂ, ಅಣ್ಣಯ್ಯ ಮತ್ತು ರಮೇಶ್ ನಾಯ್ಕ ಎಂ ಎ ಮತ್ತು ಬಿ ಎ,ಆಕಾಶ್ ಮತ್ತು ಗಿರೀಶ್ ದ್ವಿತೀಯ ಬಿ ಕಾಂ ಇವರಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ಭಾರತದ ಸುಸ್ಥಿರ ಅಭಿವೃದ್ಧಿಗೆ ಮಹಾತ್ಮ ಗಾಂಧೀಜಿ ವಿಚಾರಧಾರೆಯ ಅವಶ್ಯವೇ? ಎಂಬ ವಿಷಯ ಕುರಿತು ವಿದ್ಯಾರ್ಥಿಗಳಾದ ತೇಜಸ್ವಿನಿ ದ್ವಿತೀಯ ಬಿ ಎ, ದರ್ಶನ್ ದ್ವಿತೀಯ ಬಿ ಕಾಂ, ಕಾವ್ಯ ದ್ವಿತೀಯ ಬಿ ಎ ಮಾತನಾಡಿದರು.
ಸೇವಂತಿ ಸ್ವಾಗತಿಸಿದರು. ಕಾವ್ಯ ನಿರೂಪಿಸಿದರು. ಪುಷ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಬೋಧಕ, ಬೋಧಕೇತರ ಸಿಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಹೊಸಪೇಟೆ | ಹಣ ದುರ್ಬಳಕೆ ; ನಿವೃತ್ತ ಪ್ರಾಂಶುಪಾಲ ಡಾ.ಬಿ.ಜಿ.ಕನಕೇಶಮೂರ್ತಿ ವಿರುದ್ಧ ದೂರು

ಸುದ್ದಿದಿನ,ಹೊಸಪೇಟೆ:ನಗರದ ಶ್ರೀ ಶಂಕರ್ ಆನಂದ್‌ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರೇ ಸರ್ಕಾರಿ ಖಾತೆ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಂಡು ವಂಚಿಸಿರುವ ಪ್ರಕರಣವನ್ನು ತನಿಖೆಗೆ ಒಳಪಡಿಸಿ, ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಬಿ.ಜಿ.ಕನಕೇಶಮೂರ್ತಿ ಹಾಗೂ ಸಂಬಂಧಿಸಿದ ಲೆಕ್ಕಾಧಿಕಾರಿಗಳ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸುವಂತೆ ಡಾ.ಕೆ.ಎ.ಓಬಳೇಶ್ ಅವರು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದಾರೆ.
ಮಾಹಿತಿಹಕ್ಕು ಅಡಿಯಲ್ಲಿ ಕಾಲೇಜಿನಿಂದ ದಾಖಲೆಗಳನ್ನು ಪಡೆದು ಪರಿಶೀಲನೆ ಮಾಡಿದ ಸಂದರ್ಭದಲ್ಲಿ 2019-20 ರಿಂದ 30-04-2022 ರವರೆಗಿನ ಲೆಕ್ಕ ತಪಾಸಣಾ ವರದಿಯಲ್ಲಿ ಕಾಲೇಜಿನ ಅಂದಿನ ಪ್ರಾಂಶುಪಾಲರಾಗಿದ್ದ ಡಾ.ಬಿ.ಜಿ.ಕನಕೇಶಮೂರ್ತಿ ಅವರು ಕಂಡಿಕೆ ಸಂಖ್ಯೆ II-ಅ-2 ಮತ್ತು 8 ರಂತೆ ರೂ.8,39,288/- (ಎಂಟು ಲಕ್ಷದ ಮೂವತ್ತೊಂಬತ್ತು ಸಾವಿರದ ಎರಡು ನೂರಾ ಎಂಬತ್ತೆಂಟು ರೂಪಾಯಿ)ಗಳ ಅರೇ ಸರ್ಕಾರಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿರುವ ಬಗ್ಗೆ ಮುಖ್ಯ ಲೆಕ್ಕಾಧಿಕಾರಿಗಳು (ಆಡಿಟ್), ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು ಇವರು ಆಕ್ಷೇಪಣೆಯನ್ನು ವ್ಯಕ್ತಪಡಿಸಿರುವುದು ಕಂಡುಬಂದಿರುತ್ತದೆ.
ಈ ಅಂಶವನ್ನು ಆಧಾರವಾಗಿಟ್ಟುಕೊಂಡು ನಿವೃತ್ತ ಪ್ರಾಂಶುಪಾಲರಾದ ಡಾ.ಬಿ.ಜಿ.ಕನಕೇಶಮೂರ್ತಿ ಅವರು ಹಣ ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಅನುಮಾನ ವ್ಯಕ್ತಪಡಿಸಿ, ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತ ಕಛೇರಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಡಾ.ಕೆ.ಎ.ಓಬಳೇಶ್ ಅವರು ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಭ್ರಷ್ಟಾಚಾರದಲ್ಲಿ ಪುರುಷರನ್ನು ಮೀರಿಸಿದ ಮಹಿಳೆಯರು.!

ಸುದ್ದಿದಿನ,ದಾವಣಗೆರೆ:ಸಮಾನತೆ ಪಡೆದ ಮಹಿಳೆಯರು ಸದ್ಯ ಎಲ್ಲ ರಂಗಗಲ್ಲೂ ಪುರುಷರಿಗೆ ಸಮಾನವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರ್ದುದೈವದ ಸಂಗತಿ ಎಂದರೆ ಪುರಷರನ್ನು ಮೀರಿ ಮಹಿಳಾ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಉಪಲೊಕಾಯಕ್ತನಾಗಿ ನಿಯುಕ್ತಿಯಾದ ಮೇಲೆ ಮಹಿಳಾ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವ ಸಾಕಷ್ಟು ಪ್ರಕರಣಗಳು ನನ್ನ ಗಮನಕ್ಕೆ ಬಂದಿವೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ನೋವಿನಿಂದ ನ್ಯಾ.ಬಿ.ವೀರಪ್ಪ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ, ಗುರುವಾರ ಕರ್ನಾಟಕ ಲೋಕಾಯುಕ್ತ ವತಿಯಿಂದ ಆಯೋಜಿಸಲಾದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ಪ್ರಕರಣಗಳ ವಿಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ವೇಲಾ.ಡಿ.ಕೆ. ಮಾತನಾಡಿ, ಲೋಕಾಯುಕ್ತದಲ್ಲಿ ಅಪರ ನಿಬಂಧಕರಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಸಾಕಷ್ಟು ಪ್ರಕರಣಗಳಲ್ಲಿ ಅಧಿಕಾರಿಗಳು ಕೆಳ ಹಂತದ ಸಿಬ್ಬಂದಿ ನೀಡುವ ವರದಿಗಳಿಗೆ ಕಣ್ಣು ಮುಚ್ಚಿ ಸಹಿ ಮಾಡುತ್ತಾರೆ. ಒಂದು ಕುಟುಂಬಕ್ಕೆ ವಿವಿಧ ರೀತಿಯಲ್ಲಿ ಜೀವಂತ ಸದಸ್ಯರ ಪ್ರಮಾಣ ಪತ್ರ, ವಂಶವೃಕ್ಷದಂತಹ ಪ್ರಮಾಣ ಪತ್ರಗಳ ನೀಡಿರುವುದು ಸಹ ವಿಚಾರಣೆ ವೇಳೆ ಕಂಡುಬಂದಿದೆ. ಇಂತಹ ಪ್ರಮಾಣ ಪತ್ರಗಳ ದುರಪಯೋಗದಿಂದ ಅನರ್ಹರು ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಾರೆ. ಅಧಿಕಾರಿಗಳು ಪ್ರಮಾಣ ಪತ್ರಗಳನ್ನು ನೀಡುವಾಗ ಪರಿಶೀಲನೆ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ನೆರವೇರಿಸಿ, ಪ್ರಾಸ್ತಾವಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ ಇಟ್ನಾಳ್, ಭ್ರಷ್ಟಾಚಾರ ಸೂಚ್ಯಂಕದಲ್ಲಿ 180 ರಾಷ್ಟ್ರಗಳ ಪೈಕಿ ಭಾರತ 85ನೇ ಸ್ಥಾನದಲ್ಲಿದೆ. ರಾಜಕೀಯ ಇಚ್ಚಾಶಕ್ತಿ ಕೊರತೆ, ನೀತಿ ನಿರೂಪಣೆಯಲ್ಲಿ ದೋಷವಿರುವ ಕಾರಣ ಇಂದಿಗೂ ಸಣ್ಣ ಹಾಗೂ ಬೃಹತ್ ಪ್ರಮಾಣದಲ್ಲಿ ಭ್ರಷ್ಟಾಚಾರಗಳು ನಡೆಯುತ್ತಿವೆ. ಕೆಲಸಕ್ಕೆ ಸೇರುವಾಗ ಸಂವಿಧಾನ ಬದ್ದವಾಗಿ ಕರ್ತವ್ಯ ನಿರ್ವಹಿಸುವ ಪ್ರಮಾಣ ಸ್ವೀಕರಿಸಿರುತ್ತೇವೆ. ಇದನ್ನು ಗಮನದಲ್ಲಿ ಇರಿಸಿಕೊಂಡು ಸಾರ್ವಜನಿಕರಿಗೆ ಪಾರದರ್ಶಕ ಹಾಗೂ ತ್ವರಿತವಾಗಿ ಸೇವೆಗಳ ಲಭಿಸುವಂತೆ ಕೆಲಸ ನಿರ್ವಹಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತನಾಡಿ, ಬಹುತೇಕ ಅಧಿಕಾರಿ ಹಾಗೂ ಸಿಬ್ಬಂದಿ ಮಧ್ಯಮ ವರ್ಗ ಹಾಗೂ ಗ್ರಾಮೀಣ ಹಿನ್ನಲೆಯಿಂದ ಸರ್ಕಾರಿ ಕೆಲಸಕ್ಕೆ ಬಂದಿದ್ದೇವೆ. ಜನರು ನಮ್ಮಿಂದ ಉತ್ತಮ ಸೇವೆ ನಿರೀಕ್ಷಿಸುತ್ತಾರೆ. ತ್ವರಿತವಾಗಿ ಸ್ಪಂದಿಸಿ, ನಿಮ್ಮ ಹಂತದಲ್ಲಿಯೇ ಜನರ ಸಮಸ್ಯೆಗಳನ್ನು ಪರಿಹರಿಸುವುದು ಉತ್ತಮ. ಇದರ ಬದಲು ಸಾರ್ವಜನಿಕರು ಮೇಲಿನ ಹಂತಕ್ಕೆ ದೂರು ನೀಡಿ, ಮೇಲಿನವರಿಂದ ನಿರ್ದೇಶನ ಪಡೆದು ಕೆಲಸ ನಿರ್ವಹಿಸುಂತೆ ಆಗಬಾರದು. ಲೋಕಾಯುಕ್ತರ ಭೇಟಿಯನ್ನು ಧನಾತ್ಮಕವಾಗಿ ಸ್ವೀಕರಿಸಿ ಕೆಲಸ ಮಾಡುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳವಾರ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಜರುಗಿದ ಭಯೋತ್ಪಾದಕ ದಾಳಿಯಲ್ಲಿ ಮೃತರಾದ ನಾಗರಿಕರ ಗೌರವಾರ್ಥ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರಾದ ಕೆ.ಎಂ.ರಾಜಶೇಖರ್, ಅರವಿಂದ.ಎನ್.ವಿ., ಮಿಲನ.ವಿಎನ್., ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಪೂರೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಿ : ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಎಚ್ಚರಿಕೆ
-
ದಿನದ ಸುದ್ದಿ7 days ago
‘ವಿದ್ಯಾಸಿರಿ’ ಯೋಜನೆಯಡಿ ವಿದ್ಯಾರ್ಥಿ ವೇತನ ಪರಿಷ್ಕರಣೆಗೆ ಒತ್ತು : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ6 days ago
ಇ-ಸ್ವತ್ತು ಸಮಸ್ಯೆ ಪರಿಹಾರಕ್ಕಾಗಿ ಕಾರ್ಯನಿರ್ವಹಣಾ ಸಮಿತಿ ರಚನೆ
-
ಅಂಕಣ5 days ago
ಕವಿತೆ | ಅವಳೀಗ ಕಾಯುವುದಿಲ್ಲ
-
ದಿನದ ಸುದ್ದಿ6 days ago
ಭಾರತದ ಮೊದಲ ಉಪಗ್ರಹ ಆರ್ಯಭಟ ಉಡಾವಣೆಯಾಗಿ 50 ವರ್ಷ; ನೆಹರು ತಾರಾಲಯದಲ್ಲಿ ವಿಶೇಷ ಕಾರ್ಯಕ್ರಮ
-
ದಿನದ ಸುದ್ದಿ6 days ago
ಜೆಇಇ ಮೇನ್ಸ್ ಫಲಿತಾಂಶ ಪ್ರಕಟ : 24 ವಿದ್ಯಾರ್ಥಿಗಳಿಗೆ ನೂರಕ್ಕೆ ನೂರು ಅಂಕ
-
ದಿನದ ಸುದ್ದಿ6 days ago
ಬಳ್ಳಾರಿ ಪೊಲೀಸ್ ಅಧಿಕಾರಿಗಳ ಪಡಿತರ ಅಕ್ಕಿ ಕಳ್ಳಾಟ : ಠಾಣೆ ಮುಂದೆ ಇದ್ದ ಲಾರಿ ಮಾಯ ; ಈ ಸ್ಟೋರಿ ಓದಿ..!
-
ದಿನದ ಸುದ್ದಿ4 days ago
ಆಸ್ತಿ ಕಲಹವೇ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆಗೆ ಕಾರಣವಾಯ್ತಾ..?