Connect with us

ಅಂಕಣ

ಕತೆ | ಚಿಗುರು ಹುಣ್ಣಿಮೆ

Published

on

~ತೆಲುಗು ಮೂಲ: ಡಾ.ವೇಂಪಲ್ಲಿ ಗಂಗಾಧರ್‌,ಕನ್ನಡಕ್ಕೆ: ಡಾ. ಶಿವಕುಮಾರ್‌ ಕಂಪ್ಲಿ

ಮಳೆಯ ಹನಿಗಳು ಸುರಿಯುತ್ತಲೇ ಇವೆ. ಅರ್ಧ ಕಾಡಿನಲ್ಲೇ ಇರುವ ಈ ನಟ್ಟ ನಡು ಮಧ್ಯಾನ್ಹದಲ್ಲಿ ಹನಿಗಳೇನೋಪಾ. ಎಲ್ಯಾನ ತಟುಗು ನಿಂದ್ರಬೇಕೆಂತಾ… ಸುತ್ತಲೂ ನೋಡಿದೆ. ಕಲ್ಲುಗುಡ್ಡದ ವಿನಾ ಮತ್ತೇನೂ ಕಾಣುತಿಲ್ಲ. ಹಂಗೇ…ಸರ ಸರನೇ ಏರಿ ಗುಡ್ಡದ ಮ್ಯಾಗಳಿಂದ ಕೆಳಾಕ ನೋಡಿದೆ. ನೆಲಕೆ ಅರಿಷಿಣವನ್ನೇ ಚಲ್ಲಿದಂತಿದೆ!

ಚಂಡು ಹೂಗಳ ಹಳದಿ ಬಣ್ಣವು ಹಸುರ ನಡುವೆ ಗೊಂಚಲು ಗೊಂಚಲಾಗಿ ಹರಡಿಕೊಂಡಿದೆ. ನೆಲದ ತುಂಬೆಲ್ಲಾ ಆ ಹೂಗಳ ಪರಿಮಳವೇ… ಸಣ್ಣಗೆ ಹರವಿಕೊಂಡಿದೆ.

ಚಂಡು ಹೂಗಳ ಮೇಲೆ ಮಳೆ ಹನಿಗಳು ಸುರಿಯುತಿದ್ದರೆ ನನ್ನನ್ನು ಹಳೆಯ ಹಳ್ಳಿಯ ಹಾಡುಗಳೆಲ್ಲಾ ಜಲ ಜಲನೇ…ನೀರ ಹರಿವುಗಳಂತೆಯೇ ಕವಿಯುತಿದ್ದವು.

ಗುಡ್ಡದ ಮೇಲಿಂದ ತಣ್ಣಗೆ ಬೀಸೋ… ಗಾಳಿಗೆ ಅಲ್ಲಾಡುತ್ತಾ… ಅಲ್ಲಾಡುತ್ತಾ ಚಂಡು ಹೂವುಗಳು ಮಣ್ಣು ಕಾಣುತ್ತಿವೆ. ಗಿಡಗಳಿಂದ ಕವುಚಿ ಬಿದ್ದು ತೇಲುತಿದ್ದ ಆ… ಹೂ ದಳಗಳು ಮಳೆಯೊಳಗೆ ಹೊರಟ ಪುಟಾಣಿ ದೋಣಿಗಳಂತೆ ಕಣಿವೆಯ ಬಳಿಗೆ ಓಡುತಿದ್ದವು.

“ಈ ಸಲ ಹೂ ಬೆಳೆಯೂ… ಕಡಿಮೆ ಆಗಿದೆ. ಮಳೆ ಗೂಡಾನೂ… ಕಡಿಮೆಯೇ.” ಎಂದುಕೊಂಡು ಗುಡ್ಡ ಇಳಿಯುತ್ತಾ ದೂರಕೆ ನೋಡಿದೆ.

“ ಓ…ಬರ್ತಾ ಅದಾಳಲ್ಲಪ್ಪೋ.. ಹುಡುಗಿ ಶಾಮಲ!”

“ತೋಟದಲ್ಲಿ ಕೊಯ್ದ ಚೆಂಡು ಹೂಗಳ ಪುಟ್ಟಿಯನ್ನು ಶಾಮಲಾಳು ತನ್ನ ನೆತ್ತಿಯ ಮೇಲಿಟ್ಟುಕೊಂಡು ಮಾಲಿಕ ತೋರಿಸಿದ ಜಾಗಕ್ಕೆ ನಡೆಯುತಿದ್ದರೆ… ಆಹಾ… ಆಕೆಯ ನಡಿಗೆಯ ಕಡೆಗೇನೇ…ಹಂಗಾ… ನೋಡಬೇಕೆನಿಸುತ್ತದೆ”

ಆದರೂ ನಮ್ಮ ಅಪ್ಪನಿಗೆ ತಿಳೀದಂತೆಯೇ ಏನಾರ ಮಾಡಬೇಕು.

ತಿಳಿದರೆ ಇನ್ನೇನಕ್ಕಾತಿ!

ಮನಿಯಿಂದ ಹೊರ ದಬ್ಬದೇ ಸುಮ್ಮಕಿರತಾನೇನು?

ಮೊನ್ನೆ ಪೀರಮ್ಮವ್ವನ ಕೂಡ ಆಕಿಯನ್ನು ಕರಕೊಂಡು ಬಾ ಅಂತ ಹೇಳಿಕಳಿಸಿದರೆ ʼ ನಾನು ಅಂತವಳಲ್ಲಪ್ಪೋ… ಅಂತೇಳು ʼ ಎಂದು ಹೇಳಿಕಳಿಸಿದಳಂತೆ.

ಇನ್ನ ಮಾಡೋದೇನೈತಿ?

ಆಕಿಯ ರೂಪವೇ… ನನ್ನನ್ನ ಅದುಮಿ ಅದುಮಿ ಕೊಲ್ಲುತ್ತಿರುವಾಗ ನನ್ನ ಗಂಡುತನವಾದರೂ ಸುಮ್ಮಕಾ ನಿದ್ದಿ ಮಾಡೀತಾ? ಆಕಿನ್ನ ಪಡಕೊ ತನಕ ಆಕಿಯ ರೂಪವೇ ….ಗುರ್ತಿಗೆ ಬಂದು..ಬಂದೂ… ಸಾಯಿಬಡಿತಿರತೈತಿ….

ಮಳೆಹನಿಗಳಲ್ಲಿ ಉಸುರುಗಟ್ಟುವಂತೆ ಮೈಯೆಲ್ಲಾ ಹೂ ಗಂಧದ ಪರಿಮಳವ ತುಂಬಿಕೊಂಡು. ಆ… ತೊಯ್ದ ಬಟ್ಟೆಗಳಲ್ಲಿ ಬಳುಕುತ್ತಾ… ಮೈದೋರುತ್ತಾ…..ಬರುತಿದ್ದರೆ ಆಕಿನಾ..ಮುಟ್ಟದೇ… ಹೆಂಗಿರಲಿ?

ಅವಳ ಮೈ ನನ್ನ ಉಸಿರುಗಟ್ಟಿಸಿದೆ.

ಆಕಿಯ ಹಿಂದೆ ಆ ಕೂಲಿಯ ಹೆಂಗಸರು ಇರದೇ ಇದ್ದರೆ ಆ ಸುದ್ಧಿಯೇ… ಬೇರೆ ಇತ್ತು.

ಅವನೌನ್ ತಪ್ಪಿಸಿಕೊಂಡಳು!

ಅಲ್ಲಾ…

ʼನನ್ನ ನೋಡಿಯೂ ನೋಡದಂಗ ಹೊಕ್ಕಾಳಲ್ಲ…!ʼ

ನಾನೂ…

ಅವಳು ಹ್ವಾದ ಕಡೆಗೇ ತಿಕ್ಕಲೆದ್ದು ನೋಡುತಿರುವೆ.

***

ರಾತ್ರಿ ಮಲಗಿದೆನಾದರೂ ನಿದ್ದಿ ಬರಲಿಲ್ಲ.

ಆಕಿಯ ಆಲೋಚನೆಯೊಳಗೇ ಮುಣುಗಿದ್ದಾಗ ನನ್ನ ಪಕ್ಕಕ್ಕೆ ಬಂದು ಕುಂತ ಸಾಂಬಶಿವ.

ಆ ಮಾತು, ಈ ಮಾತೂ ಮಾತಾಡಿದಮೇಲೆ… ಸಣ್ಣಗೆ ಗುಡಿಸಲುಗಳ ಕಡಿಗೆ ಇರುವ ಶ್ಯಾಮಲ ಸುದ್ದಿಯನ್ನು ತೆಗೆದಿಟ್ಟೆ.

ಸಾಂಬ ಬಿದ್ದು ಬಿದ್ದು ನಗತೊಡಗಿದ.

“ ಹಂಗ್ಯಾಕ್‌ ನಗತೀಯಾ… ನಿನ್ನಾಪ್ನಿ!

ಏನಾನ ಇದ್ದರ ವದರಿ ಬಿಸಾಕು.

ಸುಮಕಾ… ಆ ಪಾಟಿ ನಕ್ಕರೆ ನಾ ನೇನ್‌ ಅನಕಾಬೇಕಲೇ…ಬೆಪ್ಪಗಾ” ಅಂತ ಮುಖ ಗಂಟಾಕಿಕೊಂಡೆ.

ಸಾಂಬ ನನ್ನ ಮಾತನ್ನ ಲೆಕ್ಕಕ್ಕೂ.. ತಗಳದಲೇ.. ನಗುತ್ತಲೇ ಇದ್ದ.

ಸಾಂಬಶಿವ ನಮ್ಮ ಮನಿಮಗ.

ನನಗಿಂತಲೂ ಎರಡು ಮೂರು ವರ್ಷ ದೊಡ್ಡಾನು.

ಇಬ್ಬರೂ ಒಂದೇ ಕುಲದವರು.

ನಾ ಸಣ್ಣವನಿದ್ದಾಗ…..

ನಮ್ಮಪ್ಪರು ಗವಿ ಸಿದ್ದೇಶ್ವರನ ಜಾತ್ರೆಗೆ ಹೋಗಿ ಬರುವಾಗ ಹುಲಿಗೆಮ್ಮನ ಗುಡಿಯ ಛತ್ರದೊಳಗ ಈ…  ಸಾಂಬ ಕಂಡನಂತೆ. “ ಯಾರೂ ದಿಕ್ಕಿಲ್ಲಯ್ಯಾ.. ನಾನೂ ನಿಮ್ಮ ಎತ್ತಿನ ಬಂಡಿ ಜೊತಿಗೇ ಬರ್ತೀನಯ್ಯ…” ಎಂದು ಬೆನ್ನು ಬಿದ್ದನಂತೆ.ಆಗ ಕರಕ ಬಂದು ಬೆಳಸಿದರು. ಆ ಕೆಲಸ ಈ ಕೆಲಸ ಮಾಡಿಸುತ್ತಾ ಸಾಕಿದರು. ಮನುಸಾ ಒಳ್ಳೆಯವನೇ. ಬಲು ಸೌಮ್ಯ. ನಮ್ಮ ಊರಿನೊಳಗಾ ನನಗೆ ಅಗ್ದೀ…ಇಷ್ಟದವ ಕೂಡಾ. ಹೊಲದ ಕಡೆಯೇ ಇದ್ದು ಹೊಲ ಕಾಯುತ್ತಾನೆ. ಬೆಳೆಗೆ ನೀರುಣಿಸುತ್ತಾನೆ. ಯಾವ ಕೆಲಸ ಹಿಡದ್ರೂ… ಅದು ಆಗುವ ತನಕ ಬಿಡಲಾರ.

ಊರೊಳಗ ಎಲ್ಲರೂ ʼ ತಿಕ್ಕ ಸಾಂಬ” ಅಂತಾರೆ. ಯಾರು ಏನಂದ್ರೂ… ಯಾವುದನ್ನೂ ಮನಸಿಗೆ ತಗಳ್ಳಲಾರ.

ಸಾಂಬನ ಕಥೆ ಸಾಂಬನದೇ.ಆತನ್ನ ಕೆಲಸ ಏನೋ.. ಆಟೇ…!

ಸಾಂಬ ಇನ್ನಾ… ನಗುತ್ತಲೇ ಇದ್ದಾನೆ.

ನನಗೆ  ಉರಿಯಿತು.

“ ಥೂ… ನಿನ್ನವೌನ್‌ ನಿಲಸಾ!” ಗದರಿದೆ.

“ ಇರ್ಲಿ ಹೋಗ್‌ ಸಾಮೀ…. ನಿನ್ ಯವಾರ ನನಗೇ ತಿಳೀದೇನು? ಆ ಯವ್ವನ ಸುದ್ದೀ… ತಗದೀ ಅಂದ್ರ ಆ ಗದ್ದಲೇನು ನನಗೆ ಗೊತ್ತಾಗದಾ” ತರಿ…ನಾ..ನಾ…ನಾ.. ಕಣ್ಣೆಗರಿಸುತ್ತಾ ಸ್ವರವೆತ್ತಿದನು ಸಾಂಬ.

“ ಹೌದು.. ಬಿಡಾ ಆಕಿಗೂ ನನಗೂ ದೊಡ್ಡ ರಂಪಾಟ ಐತಿ ” ಅಂದೆ ವ್ಯಂಗ್ಯವಾಗಿ.

“ ಓ…ರಂಪಾಟದ ತನಕಾ ಹೋಗೇತಿ ಅಂದಮ್ಯಾಕ ಕತಿ ದೊಡ್ಡದಾ ಐತಿ ಅನ್ನು, ಇಲ್ನೋಡು ಯಣ್ಣಾ…. ಚೊಲೋತನಂಗ ಸರಿಮಾಡ್ಕಾ!” ಬೀಡಿಗೆ ಬೆಂಕಿ ಇಡುತ್ತಾ ಹೇಳಿದ.

“ ಸರಿ ಮಾಡ್ಕಂಬಾಕ ಹೋಗಲಿಲ್ಲ ಆಂದ್ರ, ನೀ.. ಹೇಳಿ ಸರಿ ಮಾಡಸೋ ಸೂರ” ಎಂದೆ.

ತತ್ತರಗೊಂಡ ಸಾಂಬ “ ಸ್ವಾಮೀ ನಮಪ್ಪಾ… ಏನೋ ಕಣದ ಹತ್ರ, ಹೊಲದ ಹತ್ರ, ಸಿವನೇ ದೇವ್ರೇ ಅಂತಾ, ಬಡವ ನೀ ಮಡಿಗದಂಗಿರು ಅಂದುಕಂಡು, ನಾ…ದುಡಕಂಡಿರೋನು. ನನ್ನನ್ಯಾಕಪೋ ಇರಕಸ್ತೀಯ, ನೋಡಪ್ಪಾ…ನಿನಗ ಸಿಟ್ಟಿದ್ದರ ನಾಕು ಹೊಡದು ಹೊಂಟು ಬಿಡು.ಇಗಾ…ಇಲ್ನೋಡು… ಒಂದು ದೊಡ್ಡ ನಮುಸ್ಕಾರನಪ್ಪೋ” ಎಂದ.

“ ಅಲ್ಲಲೇ ಸಾಂಬಾ ನನಗೇನೋ ಆಕಿದಾ… ಚಿಂತಿ ಹಿಡದು ಬುಟ್ಟಾತಿ. ಆಕಿ ಮನಸು ನೋಡಾನಾ ಅಂದ್ರ …ಎಂಗೈತೋ ಏನೋ ನಾ ಕಾಣೆ!” ಎಂದು ನಿಟ್ಟುಸಿರಿಟ್ಟು ಹೊರಳಿಕೊಂಡೆ.

***

ಬೆಳಕಾಯಿತು.

ಯಾವದೋ ಹಾಡು ಕಿವಿಗೆ ಬಡೀತಿತ್ತು.

“ ರಕ್ಕಸ ನಾಶಕನಿಗೆ ಶರಣೆನ್ನಿರೋ…

ಯದುಕುಲ ನಂದನನಿಗೆ ಶರಣೆನ್ನಿರೋ…

ಬೆಟ್ಟವಾ ಹಿಡಿದೆತ್ತಿ ಭಕುತರ ಭಗುತಾರಾ ಉಳಿಸೀದ…

ಗೋವರ್ಧನ ಸಾಮಿಗೆ ಶರಣು…ಶರಣೆನ್ನಿರೋ..”

ಆ… ದನಿಯನ್ನ, ಎಲ್ಲೋ… ಚಲೋತನಾಗಿ, ಕೇಳಿದಂಗೇ…ಕಾಣುತೈತಿ! ಮನಿ  ಮಾಡಿಯಿಂದ ಇಳಿದು ಕಿಟಕಿ ಹತ್ರ ಬಂದು ಬಗ್ಗಿ ಕೆಳಗೆ ನೋಡಿದೆ. ಹೆಂಸರೆಲ್ಲಾ… ಮಣ್ಣಿನ ಮಡಕೆಗಳಿಟ್ಟುಕೊಂಡು ಸುತ್ತಲೂ ಕುಂತು ಹಾಡುತಿದ್ದಾರೆ. ಹೌದು ಇವರೆಲ್ಲಾ ಚಿಗುರು ಹುಣ್ಣಿಮೆಗಾಗಿ ಮನೆ ಮನೆಗೆ ಬಂದು ಬೀಜಗಳನ್ನು ಎತ್ತಲು ಬಂದವರು.

ಚಿಗುರ ಹುಣ್ಣಿಮಿಯ ಹಾಡೆಂದರೆ ನನಗೆ ಸಣ್ಣವನಿದ್ದಾಗಿನಿಂದಲೂ ಬೊಲು ಖುಷಿ.

ಚಿಗುರ ಹುಣ್ಣಿಮೆಯು ಒಂದು ಸೊಗಸಾದ ಪ್ರಕೃತಿ ಹಬ್ಬ. ಅದು ವಿಶಿಷ್ಟವಾದ ಅಪ್ಪಟ ಮಹಿಳೆಯರ ಹಬ್ಬ.ರಾಯಲ ಸೀಮೆಯ ವೈಭೋಗದ ಹಬ್ಬ.ಕೃಷಿ ಪರವಾದ ಸಂಪ್ರದಾಯವನ್ನು ಸೂಸುವ ಈ ಸಾಂಸ್ಕೃತಿಕ ಹಬ್ಬವು ಪಾರಂಪರಿಕ ಬೀಜಗಳನ್ನು ತಲೆ ತಲೆಮಾರುಗಳಿಂದ ರಕ್ಷಿಸುವ ಮನೆಗೂ ಲೋಕಕ್ಕೂ ಹಂಚುವ ಪೂರ್ವಿಕರ ಪ್ರೀತಿಯ ಹಬ್ಬ.

ಇಲ್ಲಿ ಹುಣ್ಣಿಮೆಗೂ ಮೊದಲು ಮಹಿಳೆಯರು ಮನೆ ಮನೆ ಸುತ್ತಿ ಹನ್ನೆರಡು ಬೀಜಗಳನ್ನು ಸಂಗ್ರಹಿಸುತ್ತಾರೆ. ಹಸುವಿನ ಸಗಣಿ,ಗೋಮೂತ್ರ,ಮಡಕೆಗಳಲ್ಲಿ ಕೆಂಪು ಮಣ್ಣು ,ಕಪ್ಪು ಮಣ್ಣು, ಉಸುಗು ಬೆರಸಿ ಬೀಜಗಳನ್ನು ಬೆಳೆಸುತ್ತಾರೆ.

ಹುಣ್ಣಿಮೆ ಪೂಜೆಯ ದಿನ ಗೊರಚಿಯನ್ನ ಮಾಡಿ  ಗುಲಗಂಜಿಗಳ ಕಣ್ಣನ್ನು ಇಟ್ಟು, ಕಣಗಿಲೆ ಹೂ , ಗರುಕೆ, ಹರಿಷಿಣ ಕುಂಕುಮದೊಂದಿಗೆ ಪೂಜೆಗಳನ್ನು ಮಾಡಿ, ಈ ಮೊದಲು ಮಡಿಕೆಗಳಲ್ಲಿ ಬೆಳೆದ ಬೀಜದ ಸಸಿಗಳನ್ನು ತಲೆಮೇಲೆ ಹೊತ್ತುಕೊಂಡು ಅದ್ದೂರಿಯ ಮೆರವಣಿಗೆಯಲ್ಲಿ ಹತ್ತಿರದ ಕೆರೆ ಅಥವಾ ದೇವಾಲಯಗಳ ನೀರಿನ ಬಾವಿಗಳ ಬಳಿ ಇಟ್ಟು ಪೂಜಿಸುತ್ತಾರೆ.

ಇದು ಮಳೆಯ ಮತ್ತು ಫಲವಂತಿಕೆಗಾಗಿ ದೇವತೆಗಳಿಗೆ ಕೃತಜ್ಞತೆ ಸಲ್ಲಿಸುವ ಹಬ್ಬ. ದುಡಿವ ಭಕ್ತರು ತಮ್ಮ ಭಕಿಯನ್ನು ಪ್ರಕೃತಿಗೆ ಸಮರ್ಪಿಸುವ ಒಂದು ವಿಧಿ ವಿಧಾನ.

ನಾನು ಚಿಕ್ಕಂದಿನಲ್ಲಿ ಬೀಜಗಳ ಎತ್ತಲು ಮನೆ ಮನೆ ತಿರುಗೋ ಹೆಣ್ಣು ಹುಡುಗಿಯರ ಹಿಂದೆಯೇ ತಿರುಗುತಿದ್ದೆ. ನಮ್ಮಮ್ಮ ಬೈತಿದ್ದಳು.

“ ನೀನೇನರಾ… ಹುಡುಗಿಯಾನಾ? ಹಂಗ ಬರತೀ…” ಅಂದು ಸುತ್ತ ಮುತಲವರೆಲ್ಲಾ ನಗಚಾಟಿಕಿ ಮಾಡ್ತಿದ್ರು.

ಈ…. ನೆನಪಿನ ಅಲೆಯೊಳಗ ನಾನು ಮುಳುಗಿರುವಾಗ ದೂರದಿಂದ ಇನ್ನೊಂದು ಹಾಡು ಕೇಳಿಸಿತು…

“ ಪಾಪ ನಿಧಿ ಶಿಶುಪಾಲನು ಬೈಯ್ಯಲು

ಕೋಪ ಕೆರಳಿ ಹತಗೈದ ಮುರಾರಿಗೆ ಶರಣೆನ್ನಿರೋ..

ಹಿಡಿ ಹಿಡಿದು ಸೀಳುವ ಜರಾಸಂಧನ ಮುಗಿಸಿದ

ಲೋಕ ಪಾಲಕ ಗೋಪಾಲನಿಗೆ ಶರಣೆನ್ನಿರೋ”

ಹೌದು ಈ ದನಿ ಆಕಿಯದೇ.. ಹಾಡುವ ಚಿಕ್ಕ ದೊಡ್ಡ ಹೆಣ್ಣು ಮಕ್ಕಳ ಆ… ಗುಂಪಿನಲ್ಲಿ ಈ… ಹುಡುಗಿಯೂ ಇದ್ದಾಳ.

ಚಕ ಚಕನೇ ಮೆಟ್ಟಿಲುಗಳ ಇಳಿಯಬೇಕು ಅನಿಸುತ್ತಿದೆ.

ಆಕಿಯ ಸುದ್ಧಿ ಏನೋ… ನೋಡಬೇಕು.

ಆದರೂ… ಅದು ಆಗದ ಕೆಲಸವೇ….

ನಮ್ಮಪ್ಪ ಅಲ್ಲಿಯೇ ನೋಡಾಕತ್ಯಾನ!

ನಮಮ್ಮ ಮರದೊಳಗೆ ಜೋಳ ತಂದು ಅವರ ಪುಟ್ಟಿಗೆ ಸುರುವಿದಳು. ನಮ್ಮಪ್ಪಪ ಚಂಡು ಹೂವು, ಮಲ್ಲಿಗೆ ಹೂಗಳನ್ನು ತಂದುಕೊಟ್ಟ. ಆ… ಹೆಣ್ಣುಮಕ್ಕಳೆಲ್ಲಾ ಅವುಗಳನ್ನು ತಲಾಕೊಬ್ಬರು ಹಂಚಿಕೊಂಡು ತಮ್ಮ ತಮ್ಮ ಪುಟ್ಟಿಗಳಲ್ಲಿ ಇಟ್ಟುಕೊಂಡರು.

***

ಈಕೆ ಕೊಯ್ದು ತಂದ ದುಂಡು ಚಂಡುಹೂನಂತಹ ಸಂಜೆ ಸೂರ್ಯನ ಹಾಗೆಯೇ ಕುಳಿತಿದ್ದಳು.

ಆಕೆಯ ಬಣ್ಣಕೆ ಚಂಡುಹೂ ಬೆಳಗು ಪಸಂದಾಗಿ ಹೋಲುವಂತಿದೆ.

ಹಂಗೇ… ನೋಡುತ್ತಾ ಹ್ವಾದೆ.

ಅಷ್ಟರೊಳಗೆ ನಮ್ಮ ಸಾಂಬನೂ ಕೂಡ ಚಿಟ್ಟೆಯ ಹಾಗೆ ಅವರೊಳಗೆ ಸೇರಿ ಬೀಜಗಳನ್ನು ಮಣ್ಣ ಮಡಕೆಗಳಿಗೆ  ಹಾಕುತ್ತಾ ತಟ್ಟುತ್ತಾ….ಕುಳಿತ. ಇವನೊಬ್ಬ ಹುಚ್ಚರಾಯ ಅಂದುಕೊಂಡೆ.

ಅವರ ಜೊತೆಗೆ ಹಕ್ಕಿಗೆ ಹಕ್ಕಿಗಳು ಕಲೆತು ಕೊರಳೆತ್ತುವಂತೆಯೇ…..ಸಾಂಬನೂ ಸ್ವರವೆತ್ತಿದನು.

“ಗೋಪಿಕೆಯರ ರಾಜನಿಗೆ ಶರಣೆನ್ನಿರೋ…

ಗೋಪಾಲ ಬಾಲನಿಗೆ ಶರಣೆನ್ನಿರೋ…

ರಾಸಲೀಲೆಗಳ ಕಲಿಸಿದ ರಮಣಿ ರಾಧೆಗೆ ಶರಣೆನ್ನಿರೋ..

ಮುರಳಿಗಾನದ ಮಹಾ ಮಹಿಮನಿಗೆ ಶರಣೆನ್ನಿರೋ”

ಸಾಂಬನ ಹಾಡು ಕೇಳಿ ನನಗೆ ನಗು ತಡೆಯಲಾಗಲಿಲ್ಲ. ಹೆಣ್ಣುಮಕ್ಕಳು ಕೂಡಾ ಅವನ ಜೊತೆಗೂಡಿ ಜಿಂಕೆಗಳಂತೆ ಹೆಜ್ಜೆ ಹಾಕುತಿದ್ದಾರೆ. ನಮ್ಮಪ್ಪ ನಾಲ್ಕು ರೂಪಾಯಿಗಳನ್ನು ತೆಗೆದು ನಗು ನಗುತ್ತಲೇ ಸಾಂಬನ ಕೈಗಳಿಗಿಟ್ಟ.

***

ಸಂಜೆಯಲ್ಲಿ ಸಣ್ಣಕ ಚಾವಡಿ ತಾವಿಂದಾ ಕುರುಬರು, ಬ್ಯಾಡರ ಓಣಿ ದಾಟಿಕೋಂತಾ…ನಾನು ಸುಡಗಾಡ ಬೇಲಿ ದಾರಿ ಹಿಡಿಯೋದೇ ಗುಡಿಸಲ ಹತ್ರಕ್ಕ. ನಾಳೆ ಮುಂಜಾನಿ ಗುಡಾ ಹಂಗಾ ಹೊಂಟು ಅವರನ್ನ ಕೂಲಿ ಕೆಲಸಕ್ಕೆ ಬರ್ರೆಂದು ಕರೀಬೇಕಂತ ಅದೀನಿ. ಅಂದುಕೊಂಡಗಾ.. ಕೆಲಸ ಆತ ಅಂದ್ರ ಆ ಗುಡಿಸಲ ಹತ್ರನಾ.. ಆ ನೆರಕಿಯೊಳಗಾ… ಆಕಿ ಜೊತಿ ಕಲತು ಒಂದು ಗಿಲ್ಲಿನ.. ಗಿಲ್ಲಿಕೊಂಡು ಬರಬೇಕಂತನಾ ಐತಿ.

ಪೀರಮ್ಮವ್ವಗ ಕಡ್ಡಿಪುಡಿ ಕಟ್ಟಿಸಿಕೊಂಡೆ. ಆಯವ್ವನಿಗೆ ಅದಂದ್ರ ಅದೇಟು ಆಸಿನೋ. ಯವಾಗನಾ ನೋಡು ಎಲಿ ಅಡಕಿ ಜೊತಿಗೆ ಸುರಿವಿಕೊಂಡು  ಸ್ವಾಟಿತುಂಬಾ ತುಂಬಿಕೊಂಡು ನಮಲುತಾನಾ ಇರ್ತಾಳ. ಇಕೀನಾ ಹೆಂಗಾನಾ… ಮಾಡಿ ಆ ಹುಡುಗಿತಾಗ ಮಾತಾಡಿ ಬಾ ಅಂತ ಕಳಿಸಿದ್ರಾ…. ಆ ಹುಡುಗಿ ಒಪ್ಪಿಕ್ಯಂತಾಳೋ ಇಲ್ಲೋ…

ಮತ್ತೇ… ನನ್ನ ಚಿಂತಿ ನನಗಾ…

ನಾನು ಗುಡಿಸಲ ಹತ್ರಕ್ಕ ಹೆಜ್ಜಿ ಇಟ್ನೋ ಇಲ್ಲೋ ಅಲ್ಲಿರೋ ನಾಯಿಗುಳು ಬೊವ್…ಅಂತಾನಾ ಮುಗಿಬಿದ್ವು. ದಿಗಿಲು. ಓಡಿ ಹ್ವಾದರಾ… ಬೆನ್ನ ಹತ್ತುತಾವು. ಹೆಂಗ ಮಾಡೋದಪ್ಪಾ…ಅಂತಾ… ಅಡ್ಡಬಿದ್ದು ಸಂದಿ ತೂರಿ ತಡಿಕೆಗಳನ್ನ ದಬ್ಬಲು ಹೋಗಿ ನೀರ ತೊಟ್ಟಿಯೊಳಗೆ ದುಬುಕ್ಕನೇ ಬಿದ್ದೆ!

ತೊಟ್ಟಿಯ ಮುಂದೆ ನಿಂತ ನಾಯಿಗಳು ಬೋ….ವ್… ಎಂದು ವೊದರಾಟ ಏರಿಸಿದವು..

ತಟುಗಾ… ಎದ್ದು ಹಂಗಾ..ಅಣುಕಿ ನೋಡಿದೆ.

ಎದುರಲ್ಲೆ… ಈಕಿ!

ಈಕೀನಾ… ಶ್ಯಾಮಲ.

ತೊಟ್ಟಿಯೊಳಗ ಬಿದ್ದ ನನ್ನ ನೋಡಿ ಬಿದ್ದು ಬಿದ್ದೂ ನಗುತಿದ್ದಾಳೆ!

“ಛೇ” ಹೋಗಿ ಹೋಗಿ ಈಕಿ ಕಣ್ಣಮುಂದೇ ಬಿದ್ನಲ್ಲೋ ಥತ್…ಇವನೌವ್ನ್     ಹಡಿಬಿಟ್ಟಿ ಹೊಲಸು ನಾಯಿಗಳ್ನಾಢ…ಛಾ…” ಬೈಕೊಂಡೆ.

“ ಮೆಲ್ಲಕ ಏಳ್ರೀ ಸಾಮಿ.” ಎಬ್ಬಿಸಲು ಬಂದಳು ಆ ಹುಡುಗಿ. ನಾನೇ ರೋಷದಿಂದ ಗಡಬಡಿಸಿ ಮ್ಯಾಕ ಎದ್ದೆ.

ಅಲ್ಲಿಗೇ ಪೀರಮ್ಮವ್ವ ಗೂಡಾನು ಬಂದಳು.

“ ಏನ್‌ ಸಾಮಿ… ಹೇಳಿ ಕಳಿಸಿದ್ದರೆ ನಾವೇನು ಬರತ್ತಿರಲಿಲ್ಲವೇ…” ಅಂದಳು.

ತಂದಿದ್ದ ಆ ಚೀಟಿಯ ಕಡ್ಡಿಪುಡಿಯನ್ನು ಆಕಿ ಕೈಗೆ ಕೊಡತ್ತಾ “ಅಯ್ಯಾ…ತಟುಗು ನೋಡಿಕ್ಯಂಡು ಹೋಗಾನಾ ಅಂತನಾ ಬಂದನೇಳಬೇ… ಈ ಹಡಬೀ… ನಾಯಿಗಳ ಕಡೀಂದನಾ..ಕಡಕಂಡು ಬಿದ್ದೆ” ಎಂದೆ.

“ ಯಪ್ಪಾ…ಬಂಗಾರದಂತಾ.. ಬಟ್ಟಿಗಳೆಲ್ಲಾ ತೊಯ್ದು ಹೋಗ್ವಾವಲ್ಲೋ ಸಾಮಿ. ತರಾಪ್ಪೋ… ಬಿಸಿಲಿಗೆ ಹಾಕಿ ಅರಿಸಿಕೊಡುತೀನಿ” ಅಂತ ಇಸಗೊಂಡಳು.

ನಾ..ಆ ಹುಡುಗಿಯ ಕಡಿಗೇ ಕಣ್ಣ ಬಡಿಯದಂತೆ ನೋಡಿದೆ.

ಆಕಿ ಹಂಗಾ… ತಲೆಬಗ್ಗಿಸಿಕೊಂಡು ಗಡಿಸಲೊಳಗೆ ಹ್ವಾದಳು.

ಮತ್ತೆ ಸ್ವಲ್ಪೊತ್ತು ಬಿಟ್ಟು ಹೊರಾಗ ಬಂದು ಗಂಗವ್ವನ ಗುಡಿ ಹತ್ರ ಕಾರ್ತೀಕದ ದೀಪ ಹಚ್ಚೋದೈತಿ ಅಂತ ಸರಸರನೆ ಹ್ವಾದಳು.

ನಾ… ಆಕೆಯ ನಡಿಗೆಯ ಗತ್ತನ್ನು ನೋಡುತ್ತುಲೇ ಇದ್ದೆ.

“ ದೀಪಾರತಿ ಯದಕ್ಕವೋ…?”ಪೀರಮ್ಮವ್ವನನ್ನು ಕೇಳಿದೆ.

“ ಗಂಗಮ್ಮ ತಾಯಿಗೆ ಸಾಮಿ. ಆಕಿ ತಣ್ಣಗಿರಬೇಕಲ್ಲ. ಅಲ್ಲೇ ಅಜ್ಜಯ್ಯ ಅದಾನ. ಕೋಲಾಟ, ಭಜನೆ, ತತ್ವಪದ ಎಲ್ಲನೂ ಕಲಿಸುತಾನ. ಪರುವಿಗೆ ನಾವೆಲ್ಲ ಅಲ್ಲಿಗೇ ಹೊಕ್ಕಿವಿ. ಹಟ್ಟಿಯೊಳಗ ಚಿಕ್ಕರು,ದೊಡ್ಡರೂ ಎಲ್ಲಾ… ಅಲ್ಲಿಗೇ ಬರತಾರ. ಬಲು ಚಂದಾಗೈತೆ ಹೊಸ ಮೂರ್ತಿ” ಹೇಳಿದುಳು.

ಮಾತುಗಳ ನಡುವ ನೇತು ಹಾಕಿದ್ದ ಹಲಗಿ ಜಾರಿ ಗುಡಿಸಲ  ಮೂಲೆಗೆ ತಾಗಿದ ಹಂಚಿನ ಮೇಲಿಂದ ನೆಲಕ್ಕ ಜಿಗಿದು ಬಿತ್ತು.

“  ಇದುನ್ನ ಯಾರು ಬಡಿತಾರ ಬೇ…?” ಕೇಳಿದೆ.

“ ನನ್ನ ಮಗ. ಕೊಂಡಯ್ಯ ಹೊಡಿತಾನ ಬಿಡಪ್ಪೋ….” ಗೊಣಗುತ್ತಾ ಅದನ್ನು ಎತ್ತಿಕೊಳ್ಳುತ್ತಾ ಹೇಳಿದಳು. ಹಲಿಗೆಯ ನಾದವೆಂದರೆ ನನಗಿಷ್ಟ ಕಣವ್ವ. ಚಿಗುರು ಹುಣ್ಣಿಮೆಯ ಮೆರವಣಿಗೆಯೊಳಗ ನಾನ್ಯಾವಾಗಲೂ ನೋಡೋದು ಅದ್ನೇ. ಬೆಂಕಿಗೆ ಹಲಗಿ ಕಾಸಿ ಭುಜಕ್ಕೆ ಹಾಕ್ಕೊಂಡು ಗಣಿಗೋಲುಗಳಿಂದ ಸುಮ್ಕಕಾ…ಹೊಡದರೆ ಅದು ಎಬಿಸೋ ನಾದಕ್ಕೆ ಯಾದು ಸಮ ಹೇಳು? ಕಿವಿಗೆ ಆನಂದವೇ ಬುಡು. ರೋಷ, ಆವೇಶಕ್ಕೆ,ಕುಣಿತಕ್ಕೆ ತಕ್ಕನಾದ ನಾದ ಅದು.

ಪೀರಮ್ಮವ್ವನ ಜೊತಿಗೆ ಮಾತಾಡುತ್ತಿರುವಾಗಲೇ ಗಂಗಮ್ಮನ ಗುಡಿ ಒಳಗಿನ ಸದ್ದು ಶುರುವಾಯಿತು. ಆ ಹುಡುಗಿಯ ದನಿ ಕೇಳುತಿದೆ.

“ಹರಿಕೆಯ ಕಟ್ಟಿಕೊಳ್ಳುತೇವೆ ಗಂಗಮ್ಮಾ ತಾಯಿ.

ಬೆಳ್ಳಿ ಮುಖವಾಡ ಮಾಡಿ ನೀಡುತ್ತೇವೆ ಗಂಗಮ್ಮಾ ತಾಯಿ”

ಬೆಳ್ಳಿ ಮೀಸೆಗಳ ಮಾಡಿಸಿಕೊಡುತೇವೆ ಗಂಗಮ್ಮಾ ತಾಯೀ

ಚಂದಾಗಿ ನಮ್ಮನ್ನು ನೋಡು ಗಂಗಮ್ಮಾ ತಾಯಿ..”

ನಾ ಬಂದ ಕೆಲಸ ಇನ್ನ ಕಲಸವಾಗದ ಕೆಲಸ ಅಂತಾ ಅರ್ಥವಾಯಿತು. ನಾ… ಅಲ್ಲಿಂದ ಹೊಂಟೆ. ತಾಯಿ ತನ್ನ ಮಗ ಕೊಂಡಯ್ಯನನ್ನು ಕರಕೊಂಡು ಹೊಂಟಳು. ದೂರದ ಗುಡಿಯಾಗ ಆಕಿಯ ಹಾಡು ಕೇಳುತ್ತಲೇ ಇತ್ತು.

“ ಮತ್ತೆ ತಪ್ಪಿಸಿಕೊಂಡಳು ಇವಳವೌನ್” ಅಂದುಕೊಂಡೆ.

***

ಮನೆಗೆ ಬಂದು ಮಲಗಿದಾಗಲೇ ಆ ಹುಡುಗಿ ನೆನಪಾಗಿದ್ದು. ಅಲ್ಲ….ನೆನಪಲ್ಲ…ನನ್ನ  ನಿದ್ದಿಯ ಗಳಲ ತುಳಿಯುತಿದ್ದಾಳೆ. ಅಂದಕಂಡು ಮನಶ್ಯಾಂತಿಗಾಗಿ ಸಾಂಬನ ಹತ್ತಿರಕ್ಕ ಹ್ವಾದೆ.

“ ಏನ್‌ ಸಾಮಿ.. ಇಟು ರಾತ್ರಿಯೊಳಗಾ… ಬಂದಿರಿ” ಅನ್ನುತ್ತಲೇ ಹಾಸಿಗೆಯಿಂದ ಎದ್ದು ಕುಳಿತ.

“ ಮನಿ ಹತ್ರ ನಿದ್ದಿ ಹತ್ವದೇ..ಬಂದೆ ಬಿಡಾ.. ಆದ್ರೇ… ಆ ನಗೆಚಾಟಿಕೆಯ ಮಾತುಗಳ, ಯಾದೋ ಒಂದು ಕತೆ ಹೇಳೋ…ಪಾ…” ಅಂದೆ ಹಾಸಿಗೆ ಮೇಲೆ ಉರುಳುತ್ತಾ.

ನಿದ್ದೆ ಬರದಾಗಲೆಲ್ಲಾ ಸಾಂಬನ ಹತ್ತರಕ್ಕೆ ಬಂದು ಯಾವುದೋ ಒಂದು ಕತೆ ಕೇಳುತ್ತಾ ನಿದ್ದೆ ಹೋಗೋದು ನನಗ ಹಳೇ  ಚಾಳಿ.

ಸಾಂಬ ಕತೆ ಹೇಳಾಕ ಶುರು ಮಾಡಿದ.

ಹಂಗಾನಂಗಾ…. ಒಂದು ಚೋಳರ  ರಾಜ್ಯ. ಆ ರಾಜ್ಯದ ರಾಜನಿಗೆ ಒಂದು ಸಮಸ್ಯೆ ಬಂದಿತು. ಊರೊಳಗೆ ಬೇವಿನ ಮರ, ಅರಳೀ ಮರ ಕೂಡಿ ಹೆಣಕೊಂಡಿದ್ದವು ಆ…ಮರಗಳ ಹತ್ತಿರ ನಡುರಾತ್ರಿಯಲ್ಲಿ ಯಾವುದೋ ಹೆಣ್ಣು ದೆವ್ವ ಬಂದು ಕುಳಿತು ಬೋರೆಂದು ಅಳುತ್ತಾ ಇರುತ್ತದೆಂದು ಜನ ಬಂದು ಹೇಳಿದರು. ರಾಜನಿಗೆ ಆಶ್ಚರ್ಯವಾಯಿತು. ರಾಜ ಆ… ಹೆಣ್ಣು ದೆವ್ವ ಯಾರೋ, ಅದಕ್ಕೆ ಬಂದ ಕಷ್ಟವೇನೋ ತಿಳಿದುಕೊಳ್ಳಬೇಕು ಎಂದುಕೊಂಡನು.

ಒಂದು ರಾತ್ರಿ ಒಂಟಿಯಾಗಿ ಕುದುರೆಯ ಮೇಲೇರಿ ಆ ಹಾಳು ಬಿದ್ದ ಹಳೆ ಬಾವಿಯ ಮರದ ಕೆಳಗೆ ಬಂದನು. ಸ್ವಲ್ಪ ದೂರವಿರುವಾಗಲೇ ರಾಜನಿಗೆ ಹೆಣ್ಣು ದೆವ್ವದ ಅಳು ಕೇಳಿಸಿತು. ಊರು ಜನ ಹೇಳುವುದು ನಿಜವೇ ಅಂದು ಕೊಂಡು… ಕುದುರೆಯನ್ನು ಅದರ ಮುಂದಕ್ಕೆ ಓಡಿಸಿದನು. ಸಣ್ಣಗೆ ರಾಜನ ಮನವೂ ಕೂಡಾ ಹೆದರಿತು. ಕಾಲುಗಳು ನಡುಗಿದವು. ಆದರೂ  ದೆವ್ವದ ಕಥೆ ಏನೋ  ಎಂದು ನೋಡಬೇಕೆನಿಸಿತು.

ಕುದುರೆ ಓಡತೊಡಗಿತು. ಹೆಣ್ಣು ದೆವ್ವದ ಹತ್ತಿರ ಬಂದು ನಿಂತಿತು. ಉದ್ದನೆಯ ಕಪ್ಪು ಕೂದಲುಗಳನ್ನು ತಲೆತುಂಬಾ ಹರಡಿಕೊಂಡು ಅಳುತ್ತಿರುವ ಹೆಣ್ಣು ದೆವ್ವ ತಲೆಯೆತ್ತಿ ಓಮ್ಮೆಲೇ…..ರಾಜನ ಕಡೆ ನೋಡಿತು!

ರಾಜನಿಗೆ ಅದನ್ನು ನೋಡುವ ಧೈರ್ಯವೆಲ್ಲಿಯದು? ತಲೆ ಬಗ್ಗಿಸಿಕೊಂಡೇ.. ಕೇಳಿದನು.

“ ಹೆಣ್ಣು ದೆವ್ವವೇ… ಏನು ನಿನ್ನ ಸಮಸ್ಯೆ ? ನನ್ನ ರಾಜ್ಯಕ್ಕೆ ಏಕೆ ಬಂದೆ!”

ಹೆಣ್ಣು ದೆವ್ವ ದುಃಖದಿಂದಲೇ ಬಾಯಿ ಬಿಟ್ಟಿತು.

“ ರಾಜನೇ… ತಲೆ ತಲಾಂತರಗಳಿಂದ ನಮ್ಮ ಹೆಣ್ಣುಜಾತಿ ಗಂಡಸರ ಕೈಯೊಳಗೆ ಸಿಕ್ಕು ಮೋಸಹೋಗುತ್ತಿದೆ. ಆದರೂ ನಮ್ಮ ಕಣ್ಣೀರನ್ನ ಯಾರೂ ಅಳಸಲಾಗಲಿಲ್ಲ. ನಮ್ಮ ಕಷ್ಟಗಳು ತೀರಲಿಲ್ಲ” ಎಂದು ಬೋರೆಂದು ಮತ್ತೆ ಅಳತೊಡಗಿತು.

ಆ ಕೆಲಸಕ್ಕೆ ಬಾರದ ರಾಜನಿಗೆ “ದೆವ್ವವಾದರೂ ಹೆಣ್ಣೇ ಅಲ್ಲವೇ?” ಎಂದು ತಿನ್ನೋ ಅನ್ನವ ಹಾಳುಮಾಡೋ…ಬುದ್ಧಿ ಹುಟ್ಟಿತು.

ರಾಜ ಸ್ವಲ್ಪ ಧೈರ್ಯದಿಂದಲೇ “ ನಿನ್ನ ದುಃಖವನ್ನು ನೋಡಲಾಗದು ಬಿಡು. ಆದರೆ ನಾನು ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ” ಎಂದನು.

“ ಇದೇ ಮಾತ ಇಂದಿಗೂ ಕಳಿಂಗ ರಾಜ್ಯದ ಕಡೆಯಿಂದ ಚೋಳ ರಾಜ್ಯದ ತನಕ ಇರುವ ರಾಜರೆಲ್ಲರೂ ಹೇಳಿದರು.  ನನ್ನ ಪಾಡಿಗೆ ನಾನು ಅಳುತ್ತಲೇ ಇರಬೇಕೆಂದರೂ ತಮ್ಮ ಹಾಳು ಬುದ್ಧಿಯಿಂದಲೇ ಅಳು ಆರದಂತೆಯೇ ನೋಡುತಿದ್ದಾರೆಂದು ದೆವ್ವ ವಾಗಿದ್ದರೂ ಈ ಹೆಣ್ಣು ಜನ್ಮವಾಗಿ ಇರಬಾರದೆಂದು ಅದು ಅಳುತ್ತಾ…” ಮಾಯವಾಗಿಹೋಯಿತಂತೆ.

ಸಾಂಬಶಿವಾ ಕಥೆ ಮುಗಿಸಿ ನಗತೊಡಗಿದನು. ಅವನ ನಗು ನೋಡಿ ನನಗೂ ನಗುಬಂದಿತು.

“ ಈ ಕಥೆ ನನ್ನ ಮೇಲೆಯೇ… ಹೇಳಿಯಲ್ಲವೇ ಸಾಂಬ” ಅವನನ್ನು ಕೇಳಿದೆ.

“ ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡಿದ್ನಂತೆ ಹಂಗಾತು ನೋಡಪ್ಪ ನೀನು ಕೇಳೋದು.” ಎಂದನು ಸಾಂಬ.

ನಗುತ್ತಲೇ ನಿದ್ದೆಯೊಳಗೆ ಜಾರಿಹೋದೆನು.

ಮುಂಜಾನೆಯೇ ಅಪ್ಪ ಕರೆಯಾಕ ಹತ್ಯಾರೆಂದು ಹೊಂಟೆ.

ದೊಡ್ಡ ಶರಣಪ್ಪ ಬಂದಿದ್ದಾನೆ.

“ ಆ ಭೂಮಿಗಳ ಪಟ್ಟ ಕಾಗದಗಳನ್ನು ಸ್ವಲ್ಪ ನೋಡು ಎಂದು ಹೇಳಿದ” ಅಪ್ಪ.

ಮಾಡಿಮೇಲೇರಿ ಬೀರುವಿನೊಳಗೆ ಹುಡುಕಿ ಬಟ್ಟೆ ಚೀಲದಲ್ಲಿ ಇಟ್ಟಿದ್ದ ಕಾಗದಗಳ ಕಟ್ಟುಗಳನ್ನು ತಗೊಂಬಂದು ಕೂತೆ. ಒತ್ತೆ ಇಟ್ಟ ಭೂಮಿಗಳು, ಮಾರಿದ ಭೂಮಿಗಳು, ಛತ್ರದ ಹತ್ತಿರದ ಬೀಳು ಭೂಮಿಗಳು ಎಲ್ಲವುಗಳ ಬಗ್ಗೆ ಮಾತಾಡತೊಡಗಿದೆವು.

“ ಕಲ್ಲು ಗುಡ್ಡದ ಕಡೆಯ ಚಂಡು ಹೂ  ತೋಟ ಮಾರೆಂದು “ ಮಾತುಗಳ ಮದ್ಯೆ ಕೇಳಿದ ದೊಡ್ಡ ಶರಣ.

“ ನಿನಗೆ ಎಲ್ಲಿ ಬೇಕಂತಿಯೋ ಅದನ್ನ ತಗ ಹೋಗಾ…” ಎಂದನು ಅಪ್ಪ.

ನಾನೇನೂ ಮಾತಾಡಲಿಲ್ಲ.

“ ಏನ್‌ ತಮ್ಮ …ಸುಮ್ಮಕದೀಯಾ” ಎಂದ ಶರಣಪ್ಪ.

ಅಪ್ಪ ನನ್ನ ಕಡೆ ನೋಡಿದ.

ನಾ ತಲೆಬಾಗಿಸಿಕೊಂಡೆ.

ಇಷ್ಟರೊಳಗೆ ಓಡು ಓಡುತ್ತಲೇ ತೋಟದ ಮನಿಕಡಿಗೆ ಓಬಳೇಸು ಓಡಿ ಬಂದ.

“ ಏನಾ ಏನ್‌ ಸುದ್ದಿ? ಹಿಂಗ್‌ ಓಡಿಬರಕತ್ತಿಯಲ್ಲ.” ಕೇಳಿದ ಆತುರವಾಗಿ.

“ ಅಣಾ! ತ್ವಾಟದ ಹತ್ರ ನಮ್ಮ ಸಾಂಬುನ್ನ ಕರಿ ನಾಗರಾವು ಕಡುದು ಬುಟ್ಟತಿ” ತತ್ತರ ಬಿತ್ತರ ಮಾಡುತ್ತಾ ಹೇಳಿದನವ.

“ ಅಯ್ಯಯ್ಯೋ….ಈಗ ಎಂಗೈತೋ…” ಗಬಕ್ಕನೇ ಎದ್ದು ಕೇಳಿದೆ.

ಓಬಳೇಶ “ ಇನ್ನೆಂಗೈತನ್ನಾ. ಅವನು ಅಲ್ಲೇ ವಿಲವಿಲ ವದ್ದಾಡಿ ಬಿಳಿ ಬುರುಗು ತಂದುಕಂಡು ಹ್ವಾಗಿ ಬಿಟ್ಟಾನೋ” ಅಂದು ಅಳತೊಡಗಿದ.

ಎಲ್ಲರೂ ತೋಟದ ಕಡಿಗೆ ಓಡಿದಿವಿ.

ಆ.. ತೋಟದೊಳಗೆ ಕೆಲಸ ಮಾಡೋರೆಲ್ಲರೂ ಬಂದು ಗುಂಪುಗೂಡಿದ್ದರು.         ಏನೇನೋ ಮಾತಾಡಿಕೊಳ್ಳುತಿದ್ದರು.

ಅಳುತಿದ್ದರು.

ಮುತ್ತಿಕೊಂಡರು.

ಸಾಂಬ ಚೆಂಡು ಹೂ ಗಿಡಗಳ ನಡುವೆಯೇ ಶವವಾಗಿಬಿಟ್ಟಿದ್ದನು. ಶರೀರವೆಲ್ಲಾ ಕರ್ರಗಾಗಿತ್ತು. ಬಾಯೊಳಗಿನ ನೊರೆ ಇನ್ನೂ ಹಸಿಯಾಗಿತ್ತು.

ನನಗೆ ಅಳು ತಡೆಯಲಾಗಲೇ ಇಲ್ಲ.

ನಮಮ್ಮ ಕಣ್ಣು ಸುತ್ತಿ ಬಂದು ಬಿದ್ದುಹೋದಳು.

ಜನರ ಕಡಿಗೆ ನೋಡಿದೆ.

ಪೀರಮ್ಮವ್ವ, ಶ್ಯಾಮಲ ಇನ್ನಾ ಗುಡಿಸಲ ಕೂಲಿಗಳೆಲ್ಲರೂ ಅಳುತಿದ್ದಾರೆ.

ಶರಣಪ್ಪ “ ಎಲ್ಲಾರೂ ಯಾವಾಗೋ ಒಂದು ಸಲ ಹ್ವಾಗಾರೇ ಅಲ್ಲವಾ. ತಟಗು ಹಿಂದೂ ಮುಂದೂ ಅಟೇಯಾ” ವೇದಾಂತ ಹೇಳಿದನು.

ಅಪ್ಪ “ ಮುಂದೇನು ಮಾಡಬೇಕೋ ನೋಡ್ರೀ. ಆ ಕಾರ್ಯಗಳನ್ನು ಎಲ್ಲಾ ಘನವಾಗಿ ಮಾಡಿ. ಇಲ್ಲೇ ಗುಣಿ ತೆಗೆದು ಊತು. ಸಮಾಧಿ ಕಟ್ಟರಿ.” ಎಂದು ಹೇಳಿದನು.

ಕೆಲಸದವರು ರಂಗದೊಳಕ್ಕೆ ಇಳಿದರು.

ನನಗೇನೋ ಅಳುವಿನ ಜೊತಿಗೆ ನೋವು ಬಾಧಿಸುತಿತ್ತು.

ನೋಡಲಾಗದೇ ಹೋದೆ.

ಹಂಗೇ ಅಲ್ಲಿಂದ ಬಂದುಬಿಟ್ಟೆ.

***

ದಿನಗಳು ಕಳೆಯುತ್ತಲೇ ಇವೆ….

ಸಾಂಬನಿಲ್ಲದ ನೋವು ಹಾಗೇ ಇದೆ.

ರಾತ್ರಿಗಳು ನಿದ್ದೆ ಕೂಡಾ ಬಾರದಾದವು. ನನ್ನೊಳಗೆ ನಾನೇ ಕನವರಿಸುತ್ತಿರುವೆ.

ಆ ಚಂಡು ಹೂವಿನ ತೋಟಕ್ಕೂ ಕೂಡಾ ಸರಿಗೆ ಹೋಗಲಾಗಲಿಲ್ಲ. ತೋಟ ಕಾಯುತ್ತಿರುವ ಓಬಳೇಸಿಯೇ.. ಎಲ್ಲಾ ನೋಡಿಕೊಳ್ಳುತಿದ್ದಾನೆ.

ಶರಣನಿಗೆ ಆ ಜಾಗದ ಮೇಲೆ ಕಣ್ಣು ಬಿದ್ದಿದೆ.

ದಿನವೂ ನಮ್ಮ ಮನೆಯ ಕಡೆ ತಿರುಗುತಾ ಇದ್ದಾನೆಂದು ತಿಳಿದಿದೆ.

ಅಮ್ಮನಿಗೆ  “ಆ ಚೆಂಡು ಹೂತೋಟದ ಜಾಗವನ್ನು ಶರಣನಿಗೆ ಮಾರಿದರೆ ನಂದೇನೂ ತಕರಾರಿಲ್ಲ” ಅಂತಾ ಅಪ್ಪನಿಗೆ ಹೇಳೆಂದು ಹೇಳಾನ.

ಅಮ್ಮ ಸುಮ್ಮಗದಾಳ.

“ಮಾರೋದು ನಿನಿಗಿಷ್ಟ ಇಲ್ಲೇನವ್ವಾ?” ಅಂತ ಕೇಳಿದೆ.

“ ಆ ತೋಟ ಅಂದ್ರೆನೇ ನನಗಿಷ್ಟ ಕಣ್‌ ಮಗನೇ. ಅದನ್ನ ಮಾರಬ್ಯಾಡರಪ್ಪಾ…..” ಅಂತ ಕಣ್ಣೀರಿಟ್ಟಳು.

ತಿರಗದಿನ ನಾನೇ ಶರಣಪ್ಪನ ಕಂಡು “ ಆ ತೋಟವನ್ನ ಮಾರೋ ಮಾತೇ ಇಲ್ಲಪ್ಪೋ” ಅಂತ ಕಡ್ಡಿ ಮುರದಂಗ ಹೇಳಿ ಬಂದು ಬಿಟ್ಟೆ.

ಮಧ್ಯಾನ್ಹ ಕಣದ ಕೆಲಸಕ್ಕೆ ಪೀರಮ್ಮವ್ವ ಬಂದಳು. ಈ ತಿಂಗಳ ಒಳಗೇ ʼಚಿಗುರು ಹುಣ್ಣಿಮೆʼ ಹಬ್ಬವೆಂದು ಹೇಳಿದಳು. ಅರ್ಧ ಚೀಲ ಅಕ್ಕಿ, ಹಸಿ ಶೇಂಗಾವನ್ನು ತಗಂಡೋಗು ಎಂದು ನೀಡಿದೆ. ಅಷ್ಟು ದೂರ ಹೋಗಿ ಮತ್ತೆ ಹಿಂದಕ್ಕೆ ಬಂದಳು. ಹಬ್ಬಕ್ಕೆ ನನ್ನನ್ನೂ ಕೂಡಾ ಬಾ ಎಂದು ಹೇಳಿದಳು.

“ ಎದಕ್ಕ ಹೇಳವ್ವೋ..” ಅಂತ ಅಂದೆ.

“ ಹಂಗಂದ್ರ ಎಂಗಯ್ಯೋ. ಮದುವೆಗೆ ಬಂದ ಹುಡುಗ. ಚಿಗುರು ಹುಣ್ಣಿಮಿಯೆಲ್ಲಾ ನಿಮ್ಮದೇ ಅಲ್ಲವಾ. ಶಾಮಲಾ ಕೂಡಾ ಇರ್ತಾಳೆ. ಗಂಗಮ್ಮ ದೇವರ ಮೆರವಣಿಗೆ ಬಲು ಬೇಷಿ ನಡಿತಾತಿ. ಮರೀದಂಗ ಬಾರಯ್ಯೋ” ಅಂತ ಹೇಳಿ ಮಾಯವಾಗಿ ಹೋದಳು.

ಪೀರಮ್ಮವ್ವ ʼಶಾಮಲಾʼ ಅನ್ನೋ ಹೆಸರಿನ ನೆನಪು ಹೇಳೋಸರಿಗೆ ಮತ್ತೆ ಒಡಲೊಳಗೆ ನಿದ್ದೆಹೋಗಿದ್ದ ನರಗಳೆಲ್ಲಾ ಒಂದು ಸಾರ್ತಿ ಜುಮುಕ್ಕು ಅಂದವು.

ಸ್ವಲ್ಪ ಕತ್ತಲಾದಮೇಲೆ ಹೊರಟೆ ʼಅದು ರಾತರಿ ಮಾಡೋ ಹಬ್ಬವಾದ್ದರಿಂದ ಆಕಿ ಸಿಕ್ಕರೂ ಸಿಗುತ್ತಾಳೆ.ʼ ಅನಿಸುತ್ತದೆ.

ಗುಡಿಸಲ ದಾರಿಯ ಕಡೆ ಸಣ್ಣಗೆ ಹೆಜ್ಜೆ ಹಾಕತಿದ್ದೆ.

ಶಾಮಲಳ ಚಲುವು ನೆನಪಾದಂಗೆಲ್ಲಾ… ಹೆಜ್ಜೆಗಳು ಇನ್ನೂ ಜೋರಾಗಿ ಬೀಸತೊಡಗಿದವು.

ಬೆಳುದಿಂಗಳು ಮಲ್ಲಿಗೆ ಹೂಗಳ ಕಂಪನ್ನು ಸೂಸುತ್ತಿದೆ.

ಗಂಗಮ್ಮನ ಗುಡಿಯ ಬಳಿ ದೊಡ್ಡದಾಗಿ ಹಲಗೆಗಳು ಮೊರೆಯುತ್ತಿವೆ.

ಭಜನೇ ಪದಗಳ ಗುರುಸಾಮಿಯ ಏರು ದನಿ ಕೇಳುತ್ತಿದೆ.

ಕಾಲುದಾರಿ ಗುಂಟಾ ಹೆಜ್ಜೆಗಳು ಸರಿದಂಗೆಲ್ಲಾ….

ಯಂಗಾನ ಆಗಲಿ, ಈ… ಸಾರಿ ಆಕಿಯನ್ನ ಅನುಭವಿಸಲೇ ಬೇಕೆಂಬ ಮತ್ತು ಮುರಿದೆದ್ದು ನಡಿಗೆ ವೇಗವನ್ನು ಹೆಚ್ಚಿಸಿದೆ.

ಗುರುಸಾಮಿಯ ದನಿ  “  ಕನ್ನೆ ಹುಡುಗಿಯರೆಲ್ಲಾ ಬಲು ಚಂದವಾಗಿ ಈ ಚಿಗುರು ಹುಣ್ಣಿಮೆಯ ದಿನ ನವಧಾನ್ಯಗಳ ಮೊಳಕೆ ಸಸಿಗಳನ್ನು ಹೊತ್ತಿದ್ದಾರೆ. ತುಂಬಾ ಚನ್ನಾಗಿದೆ. ನೀವು ಪಟ್ಟ ಶ್ರಮವೆಲ್ಲಾ ತಿಳಿದಿದೆ. ನಿಮಗೆ ಒಳ್ಳೆಯ ಗಂಡಂದಿರು ಸಿಗಲಿ ಎಂದು ಆ ಗಂಗಮ್ಮ ತಾಯಿಯ ಸಾಕ್ಷಿಯಾಗಿ ಕೋರಿಕೊಳ್ಳುತ್ತೇನೆ. ನಾನ ಕೊಟ್ಟ ಅಕ್ಕಿಯೊಳಗೆ ಬೆಲ್ಲ, ಕರಿ ಎಳ್ಳು ಕಲೆಸಿದ ಪ್ರಸಾದ ತೆಗೆದುಕೊಳ್ಳಿ. ನಿಮಗಿಷ್ಟವಾದವರಿಗೆ ನೀಡಿರಿ. ಇಲ್ಲಿ ಮಣ್ಣ ಹಣತೆಯೊಳಗೆ ಬೆಳಗೋ ದೀಪಗಳನ್ನು ನಿಮಗಿಷ್ಟವಾದವರಿಗೆ ನೀಡಿ ಆ ಗುಡ್ಡದ ಕೆರಿಯೊಳಗೆ ಬಿಟ್ಟುಬಿಡಿ. ನಿಮ್ಮ ಕೋರಿಕೆ ತೀರುತ್ತದೆ.” ಎಂದದ್ದು ಇನ್ನೂ….ಗಟ್ಟಿಯಾಗಿ ಕೇಳಿಸುತ್ತಿದೆ.

ಭಜನೆ ಪದವು ಮತ್ತೆ ಶುರುವಾಯಿತು. ಗುರುಸಾಮಿ ಹಾಡು ಆರಂಭಿಸಿದನು.

“ ರಾವಣಾ ನಿನ್ನ ಉರುಮೆಯನ್ನು ಸಾಕುಮಾಡಯ್ಯ

ಅಗ್ನಿಯಂತಹ ಸೀತೆಯ ಮೇಲೆ ಮನಸು ನಿನಗೆ ಯಾಕಯ್ಯಾ

ತದ್ದಿಂಕಿ ತಾಂತೈ… ತದ್ದಿನಕ ತಾಂತೈ…”

ಇನ್ನು ಇದೇ ಸರಿಯಾದ ಸಮಯ.

ಅಕೆಯು ಕೂಡಾ ದೀಪ ತೆಗೆದುಕೊಂಡು ಕೆರೆಯ ಕಡೆಗೆ ಹೋಗುತ್ತಿರುತ್ತಾಳೆ. ಆ ಗುಡ್ಡದ ದಾರಿ ಮಧ್ಯೆ ಕಾವಲು ಕಾದು ಮರಗಳ ಕಡೆಗೆ ಎತ್ತಿಕೊಂಡೊಯ್ದರೆ ಆ ಹುಡುಗಿ ಇನ್ನೇನು ಮಾಡ್ತದೆ?

ಅಡ್ಡದಾರಿಯ ಗುಂಟಾ ಜೋರಾಗಿ ನಡೆಯತೊಡಗಿದೆ.

ಬೆಳದಿಂಗಳು ಮಳೆಯಂತೆ ಸುರಿಯುತ್ತಿದೆ.

ಏನಾನ ಆಗಲಿ ಈ ಸಲ ಆ ಹುಡುಗಿಯ ಅಂದವನ್ನ ಅನುಭವಿಸಲೇ ಬೇಕು.

ಮನಸು ಉಕ್ಕಿಹರಿಯುತ್ತಿದೆ.

ಹುಣಿಸಿ ಮರದ ಕಡೆಯಿಂದ ಅಡ್ಡ ತೂರಿ ಕೆರೆಯ ಕಡೆಗೇ ಕಣ್ಣು ನೆಟ್ಟು ಕಾವಲು ಕಾಯತೊಡಗಿದೆ.

ದೂರದಲ್ಲಿ …..

ಹುಡುಗಿಯರು ಕೈಗಳಲ್ಲಿ ದೀಪಗಳನ್ನು ಇಟ್ಟುಕೊಂಡು ಬರುತ್ತಿದ್ದಾರೆ.

ಆ… ಹುಡುಗಿಯೂ ಕೂಡಾ …

ಇವಳವ್ವನ್… ದಾರಿಮೇಲೆ ಈ ದಿನ….! ಅಂದುಕೊಂಡೆ.

ಆಕೆ ಬರತಾ ಅದಾಳ.

ಹತ್ತರಾ… ಇನ್ನಾ ಹತ್ತರಾ…

ದೀಪದ ಬೆಳಕಿನೊಳಗೆ ಆಕೆಯ ಅಂದ ಇನ್ನೂ ಚಲುವಾಗಿ ಉಕ್ಕಿಹರಿಯುತ್ತಿದೆ.

ಹತ್ತರಕ್ಕೆ ಬರಕತ್ಯಾಳ…

ಬರ್ತಾ ಅದಾಳ…

ಕೆರಿ   ಇನ್ನೇನು ತಲುಪಿದಳು ಎಂಬುವುದರೊಳಗೇ ಆಕಿಯ ದಾರಿ ಬದಲಾಯಿತು!

ಆ ಪಕ್ಕದ ಬಾರಿ ಹಣ್ಣಿನ ಪೊದೆಯ ಹತ್ತಿರದ ಗುಡ್ಡದ ಹಾದಿ.

ಆ… ದಾರಿ ಹಿಡಿದಳು!

ನಡಿಗೆ ಜೋರಾಯಿತು.

ಕೈಯೊಳಗಿನ ದೀಪ ಆರಿಹೋಗದಂತಾ ಅವಳು  ನಡಿಗೆಯನ್ನ ಇನ್ನಾ ಜೋರು ಮಾಡಿದಳು.

ಒಂಟಿಯಾಗಿ ಹೋಗುತಿದ್ದಾಳೆ.

ನನಗೇನೂ ಅರ್ಥವಾಗುತ್ತಿಲ್ಲ.

ಆಕೆಯ ಜೊತೆಗೆ ಬಂದ ಹುಡುಗಿಯರೆಲ್ಲಾ ಕೆರೆಯೊಳಗೆ ದೀಪಗಳನ್ನು ಬಿಡುತಿದ್ದಾರೆ.

ನಾನು ಹುಣಿಸೇ ಮರದ ಪೊದೆಯೊಳಗಿಂದ ಮೇಲೆ ಎದ್ದು ಆ ಹುಡುಗಿ ಹೋಗುತ್ತಿರುವ ದಾರಿಯ ಕಡೆಗೆ ಹೊರಟೆ.

ಆಕೆ ಕಲ್ಲು, ಮುಳ್ಳು , ಹಳ್ಳ ಏನನ್ನೂ ನೋಡದಂತೆ ಹೋಗುತಿದ್ದಾಳೆ.

ನಾನೂ ಆಕೆಯ ಹಿಂದೆಯೇ ಹೋಗತೊಡಗಿದೆ.

ಆ ಹುಡುಗಿ ಕಲ್ಲಿನ ಗುಡ್ಡ ಏರಿದಳು.

ನನ್ನ ತಲೆ ಗಿಮಗುಟ್ಟಿ ದಿಕ್ಕು ತಿಳಿಯದಂಗಾತು.

ಆ ಹುಡಗಿಯನ್ನ ಹಿಡಿದು ಅನುಭವಿಸಬೇಕೂ ಅನ್ನೋ ಉರುಕಾಟ ಉರಿಯ ಹಾಗೆ ಏಳತಾ ಇದೆ.

ಗುಂಡಿಗೆ ಕುಣಿದಾಡುತ್ತಿದೆ.

ಆ ಹುಡುಗಿ “ ಬೀಸುವ ಗಾಳಿಯೊಳಗೂ ಕೈಗಳೊಳಗಿನ ದೀಪ ಆರಿಹೋಗದಂತೆ ಏರುತಾನೇ ಅದಾಳ”.

ನನಗೇನೋ ಎಲ್ಲಿಲ್ಲದ ಭಯ ಹಿಡಕೊಂಡಿತು.

ಆದರೂ…. ಏರುತೊಡಗಿದೆ.

ಕಾಲಿಗೆ ನೆಗ್ಗಲಿ ಮುಳ್ಳು ಚುಚ್ಚಿತು.

ಪಕ್ಕದ ಬಂಡೆಯ ಮೇಲೆ ಕುಂತು ಕಿತ್ತೆ. ಮುಳ್ಳಿನ ಜೊತಿಗೆ ರೈತವೂ ಕೂಡಾ ಹೊರಕ್ಕೆ ನುಗ್ಗಿತು!

ಅಷ್ಟೊತ್ತಿಗೇ ಆ ಹುಡುಗಿ ಕಲ್ಲುಗುಡ್ಡವನ್ನ ಇಳಿದಳು.

ಪಕ್ಕದಲ್ಲೇ ಇರೋ ಕಾಡಿನ ಕಡಿಗೆ ಹೊಂಟಳು.

ನಾನೂ ಕುಂಟುತ್ತಾ ಕುಂಟುತ್ತಾ ಇಳಿಯ ಹತ್ತಿದೆ.

ಹುಡುಗಿಯ ಚಂಡು ಹೂಗಳ ವಾಸನಿ ನನ್ನನ್ನು ಸುತ್ತಿಕೊಂಡಿತು.

ಆ ಹುಡುಗಿ ಹೋಗುತಾ…ಹೋಗುತಾ… ನಿಂತುಬುಟ್ಟಳು!

ಎದೆ ಒಡೆದವಳಂತೆ ಅಳತೊಡಗಿದಳು.

ಕೈಯೊಳಗಿನ ದೀಪವನ್ನು ಕೆಳಗೆ ಇಟ್ಟಳು.

ಸಮಾಧಿ!

ನಮ್ಮ ಸಾಂಬನ ಸಮಾಧಿ!

ನನಗೆ ಕಾಲೂ ಕೈಯಿ ಆಡದಾಯಿತು.

ಶಿಲೆಯಂಗೆ ಅಲ್ಲೇ ನಿಂತುಬಿಟ್ಟೆ.

ಆ ಹುಡುಗಿ ಅಳುತ್ತಲೇ ಇದ್ದಳು.

ಕೈಗಳಲ್ಲಿರುವ ಬಳೆಗಳ ಹೊಡೆದುಕೊಂಡಳು.

ಹಣೆಯ ಕುಂಕುಮ ಅಳಿಸಿಕೊಂಡಳು.

ಬಿದ್ದು ಬಿದ್ದು ಅಳತೊಡಗಿದಳು.

ಪೈಟದ ಚುಂಗಿನಿಂದ  ಬೆಲ್ಲದ ಉಂಡೆಯನ್ನು ತೆಗೆದು ತನ್ನ ಇಷ್ಟದವರಿಗೆ ತಿನಿಸುವಂತೆಯೇ…. ಸಮಾಧಿಗೆ ಎಡೆ ಹಿಡಿದಳು!

ನಾನು ನಿಂತಿರುವ ಜಾಗದಲ್ಲೇ ಕುಸಿದು ಕುಂತೆ.

ಮತ್ತೆ ಮಳೆಹನಿಗಳು ಸುರುವಾದವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಅಂಕಣ

ಕೆಪಿಸಿಸಿಯ ನೂತನ ಸಾರಥಿ ಬಿ.ಕೆ. ಹರಿಪ್ರಸಾದ್ ರಾಜಕೀಯ ಪಯಣ

Published

on

ಕರ್ನಾಟಕ ಕಾಂಗ್ರೆಸ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದಾಗಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡ ಬಳಿಕ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಮಹತ್ವದ ಜವಾಬ್ದಾರಿಯನ್ನು ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಿದೆ.

ಈ ನೇಮಕ ಕೇವಲ ಸಂಘಟನಾತ್ಮಕ ಬದಲಾವಣೆಯಲ್ಲ. ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ದಿಕ್ಕು, ಪಕ್ಷದ ಒಳಾಂಗಣ ಸಮತೋಲನ ಮತ್ತು ಭವಿಷ್ಯದ ಚುನಾವಣಾ ತಂತ್ರಗಳಿಗೆ ಇದು ಪ್ರಮುಖ ಸೂಚನೆಯಾಗಿದೆ. ಹಲವು ದಶಕಗಳ ರಾಜಕೀಯ ಅನುಭವ, ಸಂಘಟನಾ ಕೌಶಲ್ಯ ಮತ್ತು ಹೈಕಮಾಂಡ್‌ಗೆ ನಿಕಟ ಸಂಪರ್ಕ ಹೊಂದಿರುವ ಹರಿಪ್ರಸಾದ್ ಅವರು ಈಗ ರಾಜ್ಯ ಕಾಂಗ್ರೆಸ್‌ನ ನೂತನ ಸಾರಥಿಯಾಗಿ ಹೊರಹೊಮ್ಮಿದ್ದಾರೆ.

ಆರಂಭಿಕ ಜೀವನ ಮತ್ತು ಶಿಕ್ಷಣ

ಬಿ.ಕೆ. ಹರಿಪ್ರಸಾದ್ ಅವರು 1954ರ ಜುಲೈ 29ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎ. ಕೆಂಪಯ್ಯ ಹಾಗೂ ತಾಯಿ ಕೆ. ಗುಣಾವತಿ. ಬಾಲ್ಯದಿಂದಲೇ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳತ್ತ ಆಸಕ್ತಿ ಹೊಂದಿದ್ದ ಅವರು ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಬಿ.ಕಾಂ ಪದವಿ ಶಿಕ್ಷಣ ಪಡೆದರು. ವಿದ್ಯಾರ್ಥಿ ಜೀವನದಲ್ಲಿಯೇ ಕಾಂಗ್ರೆಸ್ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡ ಅವರು ಮುಂದೆ ಪೂರ್ಣಾವಧಿ ರಾಜಕಾರಣಿಯಾಗಿ ಬೆಳೆದರು.

ವಿದ್ಯಾರ್ಥಿ ರಾಜಕಾರಣದಿಂದ ರಾಷ್ಟ್ರೀಯ ಮಟ್ಟದ ನಾಯಕತ್ವದವರೆಗೆ

ಹರಿಪ್ರಸಾದ್ ಅವರ ರಾಜಕೀಯ ಬದುಕು ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಸಂಘಟನೆಗಳಿಂದ ಆರಂಭವಾಯಿತು. ಸಂಘಟನಾ ರಾಜಕಾರಣದಲ್ಲಿ ತೋರಿದ ಸಾಮರ್ಥ್ಯದಿಂದ ಅವರು ಶೀಘ್ರದಲ್ಲೇ ಪಕ್ಷದ ಹಿರಿಯ ನಾಯಕರ ಗಮನ ಸೆಳೆದರು.

ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಕಾಂಗ್ರೆಸ್ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಅವರು, ಹಲವು ರಾಜ್ಯಗಳ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಹೈಕಮಾಂಡ್‌ನೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ನಾಯಕರಲ್ಲಿ ಹರಿಪ್ರಸಾದ್ ಪ್ರಮುಖರು ಎಂದು ಪರಿಗಣಿಸಲಾಗುತ್ತದೆ.

ಬಿ.ಕೆ. ಹರಿಪ್ರಸಾದ್ ಅವರು ಹಲವು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 1990ರಿಂದಲೇ ಅವರು ರಾಷ್ಟ್ರೀಯ ರಾಜಕಾರಣದಲ್ಲಿ ಸಕ್ರಿಯ ಪಾತ್ರ ವಹಿಸುತ್ತಾ ಬಂದಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಹಲವು ವಿಷಯಗಳ ಬಗ್ಗೆ ಧ್ವನಿ ಎತ್ತಿದ ಅವರು ಸಂಸತ್ತಿನ ಚರ್ಚೆಗಳಲ್ಲಿ ಗಮನ ಸೆಳೆದಿದ್ದರು.

ಅವರು ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಎನ್‌ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ವಿರುದ್ಧ ಪೈಪೋಟಿ ನಡೆಸಿದ್ದರು. ಸೋಲು ಕಂಡಿದ್ದರೂ ರಾಷ್ಟ್ರೀಯ ರಾಜಕೀಯದಲ್ಲಿ ಅವರ ಸ್ಥಾನಮಾನ ಮತ್ತಷ್ಟು ಬಲವತ್ತಾಯಿತು.

1999ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ಹಿರಿಯ ನಾಯಕ ಅನಂತ್ ಕುಮಾರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಜಯ ಸಾಧಿಸಲು ಸಾಧ್ಯವಾಗದಿದ್ದರೂ ಅವರು ಕಾಂಗ್ರೆಸ್‌ನ ಪ್ರಮುಖ ಮುಖವಾಗಿ ಗುರುತಿಸಿಕೊಂಡರು.

ಸಂಘಟನಾ ರಾಜಕಾರಣದಲ್ಲಿ ಹೆಚ್ಚು ಸಕ್ರಿಯರಾಗಿದ್ದ ಕಾರಣ, ಚುನಾವಣಾ ಗೆಲುವಿಗಿಂತ ಪಕ್ಷ ನಿರ್ಮಾಣದಲ್ಲಿ ಅವರ ಪಾತ್ರವೇ ಹೆಚ್ಚು ಗಮನ ಸೆಳೆಯಿತು.

ಕಾಂಗ್ರೆಸ್ ಸಂಘಟನೆಯಲ್ಲಿ ‘ಟಾಸ್ಕ್ ಮಾಸ್ಟರ್’

ಕಾಂಗ್ರೆಸ್ ಪಕ್ಷದಲ್ಲಿ ಹರಿಪ್ರಸಾದ್ ಅವರನ್ನು ಸಂಘಟನಾ ತಜ್ಞ ಎಂದು ಕರೆಯಲಾಗುತ್ತದೆ. ಪಕ್ಷ ಎದುರಿಸಿದ ಸಂಕಷ್ಟದ ಸಂದರ್ಭಗಳಲ್ಲಿ ಹಲವು ರಾಜ್ಯಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘಟನೆಯನ್ನು ಬಲಪಡಿಸಿದ ಅನುಭವ ಅವರಿಗೆ ಇದೆ.

ಇತ್ತೀಚಿನ ಅವಧಿಯಲ್ಲಿ ಅವರು ಹರಿಯಾಣ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯ ರಾಜಕೀಯದ ಸೂಕ್ಷ್ಮ ಸಮೀಕರಣಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಸಾಧಿಸುವ ಶೈಲಿ ಅವರ ವಿಶೇಷತೆ ಎಂದು ಪಕ್ಷದ ನಾಯಕರು ಹೇಳುತ್ತಾರೆ.

ಕರ್ನಾಟಕ ಕಾಂಗ್ರೆಸ್‌ನಲ್ಲಿ ಹರಿಪ್ರಸಾದ್ ಅವರು ಹಲವು ದಶಕಗಳಿಂದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳ ಸಂದರ್ಭದಲ್ಲೂ ಅವರು ಸಮತೋಲನ ಸಾಧಿಸುವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅವರು, 2022 ರಿಂದ 2023ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸರ್ಕಾರದ ನೀತಿಗಳ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುವ ಮೂಲಕ ಅವರು ಗಮನ ಸೆಳೆದಿದ್ದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ

2026ರಲ್ಲಿ ಕರ್ನಾಟಕ ರಾಜಕೀಯದಲ್ಲಿ ನಡೆದ ನಾಯಕತ್ವ ಬದಲಾವಣೆಯ ಬಳಿಕ ಮುಖ್ಯಮಂತ್ರಿ ಹುದ್ದೆಯನ್ನು ಡಿ.ಕೆ. ಶಿವಕುಮಾರ್ ವಹಿಸಿಕೊಂಡರು. ಇದರ ಪರಿಣಾಮವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಪಕ್ಷದೊಳಗೆ ಹಲವು ನಾಯಕರ ಹೆಸರುಗಳು ಕೇಳಿಬಂದಿದ್ದರೂ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಬಿ.ಕೆ. ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿತು.

ಈ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್ ಸಂಘಟನಾ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿ ಪರಿಗಣಿಸಿದೆ. ಪಕ್ಷದ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಹರಿಪ್ರಸಾದ್ ಅವರ ಅನುಭವ ನೆರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಹಿಂದೆ ಹಲವು ರಾಜಕೀಯ ಕಾರಣಗಳಿವೆ. ಮೊದಲನೆಯದಾಗಿ, ಅವರು ಯಾವುದೇ ಒಂದು ಗುಂಪಿಗೆ ಸೀಮಿತವಾಗದ ನಾಯಕ ಎಂಬ ಚಿತ್ರಣ ಹೊಂದಿದ್ದಾರೆ. ಎರಡನೆಯದಾಗಿ, ಸಂಘಟನಾ ಅನುಭವ ಅಪಾರವಾಗಿದೆ. ಮೂರನೆಯದಾಗಿ, ಹೈಕಮಾಂಡ್‌ಗೆ ಅತ್ಯಂತ ವಿಶ್ವಾಸಾರ್ಹ ನಾಯಕರಲ್ಲಿ ಒಬ್ಬರು. ನಾಲ್ಕನೆಯದಾಗಿ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಾಮರ್ಥ್ಯ ಅವರಿಗಿದೆ ಎಂದು ಕಾಂಗ್ರೆಸ್ ನಾಯಕತ್ವ ನಂಬಿದೆ.

ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಅವರ ಮುಂದಿರುವ ಸವಾಲುಗಳು ಸಣ್ಣದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಸಂಘಟನೆಯನ್ನು ಸದೃಢವಾಗಿಡುವುದು ದೊಡ್ಡ ಜವಾಬ್ದಾರಿ. ಕಾರ್ಯಕರ್ತರ ಅಸಮಾಧಾನ, ಸಚಿವ ಸ್ಥಾನಾಕಾಂಕ್ಷಿಗಳ ಒತ್ತಡ, ಪ್ರಾದೇಶಿಕ ಸಮೀಕರಣಗಳು ಮತ್ತು ಜಾತಿ ಆಧಾರಿತ ರಾಜಕೀಯ ಬೇಡಿಕೆಗಳನ್ನು ಸಮತೋಲನಗೊಳಿಸಬೇಕಾಗಿದೆ.

ಇದರ ಜೊತೆಗೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಕಾಂಗ್ರೆಸ್ ಸಂಘಟನೆಯನ್ನು ನಿರಂತರ ಚಟುವಟಿಕೆಯಲ್ಲಿ ಇರಿಸುವುದು ಅವರ ಪ್ರಮುಖ ಗುರಿಯಾಗಲಿದೆ.

ಹರಿಪ್ರಸಾದ್ ಅವರು ಹೆಚ್ಚು ಪ್ರಚಾರಪ್ರಿಯ ರಾಜಕಾರಣಿಯಲ್ಲ. ಸಂಘಟನೆಯೊಳಗೆ ಕೆಲಸ ಮಾಡುವ ನಾಯಕ ಎಂಬ ಹೆಗ್ಗಳಿಕೆ ಅವರಿಗೆ ಇದೆ. ಕಾರ್ಯಕರ್ತರೊಂದಿಗೆ ನೇರ ಸಂಪರ್ಕ, ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಮತ್ತು ತಾಳ್ಮೆಯ ರಾಜಕೀಯ ಅವರ ಕಾರ್ಯಶೈಲಿಯ ಮುಖ್ಯ ಲಕ್ಷಣಗಳು.

ಅವರ ರಾಜಕೀಯ ಜೀವನದಲ್ಲಿ ಅನೇಕ ಏರಿಳಿತಗಳು ಬಂದಿದ್ದರೂ ಪಕ್ಷದ ಮೇಲಿನ ನಿಷ್ಠೆ ಪ್ರಶ್ನಾತೀತವಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಹಲವು ಬಾರಿ ಅವರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಿದೆ.

ರಾಜಕೀಯದ ಜೊತೆಗೆ ಸರಳ ಜೀವನಶೈಲಿಗೆ ಹೆಸರುವಾಸಿಯಾಗಿರುವ ಹರಿಪ್ರಸಾದ್ ಅವರು ಉಷಾ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅವರಿಗೆ ಒಬ್ಬ ಪುತ್ರಿಯಿದ್ದಾರೆ. ಕುಟುಂಬ ಜೀವನವನ್ನು ರಾಜಕೀಯದಿಂದ ಸಾಧ್ಯವಾದಷ್ಟು ದೂರ ಇಡುವ ನಾಯಕ ಎಂಬ ಹೆಸರನ್ನು ಅವರು ಗಳಿಸಿದ್ದಾರೆ.

ಭವಿಷ್ಯದ ರಾಜಕೀಯ ಪಾತ್ರ

ಕೆಪಿಸಿಸಿ ಅಧ್ಯಕ್ಷ ಸ್ಥಾನ ಹರಿಪ್ರಸಾದ್ ಅವರ ರಾಜಕೀಯ ಜೀವನದ ಮತ್ತೊಂದು ಮಹತ್ವದ ಅಧ್ಯಾಯವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮನ್ವಯ ಸಾಧಿಸುವಲ್ಲಿ ಅವರ ಪಾತ್ರ ನಿರ್ಣಾಯಕವಾಗಲಿದೆ.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮಟ್ಟದ ತಂತ್ರ ರೂಪಿಸುವುದು, ಕಾರ್ಯಕರ್ತರ ಬಲವರ್ಧನೆ, ಚುನಾವಣಾ ಸಿದ್ಧತೆ ಮತ್ತು ಹೈಕಮಾಂಡ್‌ನೊಂದಿಗೆ ಸಮನ್ವಯ ಸಾಧಿಸುವ ಪ್ರಮುಖ ಹೊಣೆಗಾರಿಕೆ ಅವರ ಮೇಲಿದೆ. ಈ ಎಲ್ಲ ಸವಾಲುಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ಭವಿಷ್ಯ ಬಹುಮಟ್ಟಿಗೆ ಅವಲಂಬಿತವಾಗಿದೆ.

ಸುಮಾರು ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಕಾಂಗ್ರೆಸ್ ಸಂಘಟನೆಯಲ್ಲಿ ದುಡಿದಿರುವ ಬಿ.ಕೆ. ಹರಿಪ್ರಸಾದ್ ಇಂದು ಕರ್ನಾಟಕ ಕಾಂಗ್ರೆಸ್‌ನ ಅತ್ಯುನ್ನತ ಸಂಘಟನಾ ಹುದ್ದೆಯನ್ನು ಅಲಂಕರಿಸಿದ್ದಾರೆ. ವಿದ್ಯಾರ್ಥಿ ರಾಜಕಾರಣದಿಂದ ಆರಂಭವಾದ ಅವರ ಪಯಣ ರಾಜ್ಯಸಭೆ, ರಾಷ್ಟ್ರೀಯ ಸಂಘಟನೆ, ವಿಧಾನ ಪರಿಷತ್ ಮತ್ತು ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನವರೆಗೆ ತಲುಪಿದೆ.

ಅನುಭವ, ಸಂಘಟನಾ ಕೌಶಲ್ಯ, ರಾಜಕೀಯ ಪ್ರೌಢಿಮೆ ಮತ್ತು ಪಕ್ಷದ ಮೇಲಿನ ನಿಷ್ಠೆ ಎಂಬ ನಾಲ್ಕು ಅಂಶಗಳು ಅವರ ರಾಜಕೀಯ ವ್ಯಕ್ತಿತ್ವದ ಪ್ರಮುಖ ಗುರುತುಗಳಾಗಿವೆ. ಕರ್ನಾಟಕ ಕಾಂಗ್ರೆಸ್ ಹೊಸ ರಾಜಕೀಯ ಹಾದಿಯಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ, ಬಿ.ಕೆ. ಹರಿಪ್ರಸಾದ್ ಅವರ ನಾಯಕತ್ವ ಪಕ್ಷಕ್ಕೆ ಹೊಸ ಶಕ್ತಿ ತುಂಬುತ್ತದೆಯೇ ಎಂಬುದನ್ನು ರಾಜ್ಯದ ರಾಜಕೀಯ ಕುತೂಹಲದಿಂದ ಗಮನಿಸುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending