Connect with us

ಸಿನಿ ಸುದ್ದಿ

“ಎನ್ನು ನಿಂಟೆ ಮೊಯ್ದೀನ್” | ಮೊಯ್ದೀನ್-ಕಾಂಚನಾ ಅಮರ ಪ್ರೇಮ ಕಥೆ

Published

on

  • ರುದ್ರು ಪುನೀತ್ ಆರ್. ಸಿ

ಮೊನ್ನೆ ಸ್ನೇಹಿತರೊಬ್ಬರು “ಎನ್ನು ನಿಂಟೆ ಮೊಯ್ದೀನ್” ಸಿನೆಮಾದ ಬಗ್ಗೆ ಬರೆದಿದ್ದನ್ನು ಬಿ.ಎಂ.ಬಶೀರ್ ರವರು ಶೇರ್ ಮಾಡಿಕೊಂಡಿದ್ದರು. ಅದನ್ನು ಓದುತ್ತಿದ್ದಂತೆ ಇಡೀ ಸಿನೆಮಾದ ಆ ದೃಶ್ಯಗಳು ಕಣ್ಣ ಮುಂದೆಯೇ ಪ್ಲೇ ಆಗುತ್ತಿದ್ದವು. ಅದು ನೈಜ ಕಥೆ ಎಂದು ಗೊತ್ತಾಗುತ್ತಿದ್ದಂತೆ ಕಣ್ಣುಗಳು ತೇವವಾದವು. ಆ ಕ್ಷಣಕ್ಕೆ ಆ ಸಿನೆಮಾ ನೋಡಲೇಬೇಕೆನ್ನಿಸಿತು, ತಕ್ಷಣವೇ Hotstar ನಲ್ಲಿ ಇಡೀ ಸಿನೆಮಾ ನೋಡಿದೆ..

ನಿಜ ಹೇಳ್ತೇನೆ ನಂಗೆ ಮಲೆಯಾಳಿ ಬರೋದಿಲ್ಲ, ಅರ್ಥವೂ ಆಗೋದಿಲ್ಲ. 2015 ರಲ್ಲಿ ರಿಲೀಸ್ ಆಗಿರುವ ಆ ಸಿನೆಮಾಗೆ Hotstar ನಲ್ಲಿ Subtitles ಕೂಡ ಇಲ್ಲ. ಇಡೀ ಸಿನೆಮಾದಲ್ಲಿ ಅವರ ಸಂಬಾಷಣೆ ಏನೇನೂ ಅರ್ಥವಾಗಲಿಲ್ಲ, ನೈಜ ಕಥೆಗೆ ಜೀವ ತುಂಬಿರುವ ಪೃತ್ವಿರಾಜ್ ಮತ್ತು ಪಾರ್ವತಿ ಮೆನನ್ ರ ಅಭಿನಯ ಮತ್ತು ಕಣ್ಣುಗಳಲ್ಲೇ ನಟಿಸಿ ಭಾವನೆಗಳನ್ನು ವ್ಯಕ್ತಪಡಿಸುವ ಈ ಅಮರ ಪ್ರೇಮಕಥೆಯನ್ನು ಅರ್ಥಮಾಡಿಕೊಳ್ಳಲು ನನಗೆ ನಿಜಕ್ಕೂ ಭಾಷೆಯ ಅವಶ್ಯಕತೆ ಬೀಳಲಿಲ್ಲ.

ಇಲ್ಲಿ ಮೊಯ್ದೀನ್ ಮುಸಲ್ಮಾನ ಮತ್ತು ಕಾಂಚನಾ ಹಿಂದೂ ಧರ್ಮದ ಹುಡುಗಿ. ಈ ಲವ್ ಜಿಹಾದ್ ಎನ್ನುವ ರಾಜಕೀಯ ತಂತ್ರ ಆಗ ಇರಲಿಲ್ಲವಾದ್ದರಿಂದ ಅವರ ಪ್ರೇಮಕ್ಕೆ ಲವ್ ಜಿಹಾದ್ ಎನ್ನುವ ಕಳಂಕ ಅಂಟಿಕೊಳ್ಳಲಿಲ್ಲ.. ಮೊಯ್ದೀನ್ ಮತ್ತು ಕಾಂಚನಾಳ ಪ್ರೀತಿಗೆ ಅಡ್ಡವಾಗಿದ್ದು ಧರ್ಮವೇ ಎನ್ನುವುದು ಸತ್ಯ. ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದ ವಿಷಯ ತಿಳಿಯುತ್ತಿದ್ದಂತೆ ಕಾಂಚನಾಳ ಸಂಪ್ರದಾಯಸ್ಥ ತಂದೆ ಮತ್ತು ಚಿಕ್ಕಪ್ಪ ಕಾಂಚನಾಳನ್ನು ಕಾಲೇಜು ಬಿಡಿಸಿ ಗೃಹಬಂದನದಲ್ಲಿ ಇರಿಸುತ್ತಾರೆ.

ಈ ಕಡೆ ಮೊಯ್ದೀನ್ ನ ತಂದೆ ಒಮ್ಮೆ ಬಂದೂಕಿನಿಂದ ಕೊಲ್ಲುವುದಾಗಿ ಯತ್ನಿಸಿ, ಎರಡನೇ ಬಾರಿ ಮೊಯ್ದೀನ್ ನನ್ನು ಚಾಕುವಿನಿಂದ ನಡುರಸ್ತೆಯಲ್ಲಿ ಹಲವು ಬಾರಿ ಇರಿದು, ನನ್ನ ಮಗನನ್ನು ನಾನೇ ಕೊಲೆ ಮಾಡಿದೆ ಎಂದು ಸೀದಾ ಪೊಲೀಸ್ ಠಾಣೆಗೆ ಹೋಗುತ್ತಾರೆ. ಅದೃಷ್ಟವಶಾತ್ ಬದುಕುಳಿದ ಮೊಯ್ದೀನ್ ಕೋರ್ಟ್ ಕಟಕಟೆಯಲ್ಲಿ ನಿಂತು ನನ್ನನ್ನು ಯಾರೂ ಕೊಲೆ ಮಾಡಲು ಯತ್ನಿಸಿಲ್ಲ ನಾನೇ ಬಿದ್ದು ಗಾಯ ಮಾಡಿಕೊಂಡಿದ್ದು ಎಂದು ಹೇಳಿ ತಂದೆಯನ್ನು ಶಿಕ್ಷೆಯಿಂದ ಪಾರುಮಾಡುತ್ತಾರೆ.

ಭೇಟಿಯಾಗುವ ಯಾವ ಅವಕಾಶಗಳು ಇಲ್ಲದಿದ್ದರೂ ಗುಪ್ತ ಪತ್ರಗಳ ಮೂಲಕವೇ ಇವರ ಪ್ರೀತಿಯು ಎರಡು ದಶಕಗಳ ಕಾಲ ಜೀವಂತವಾಗಿತ್ತು. ಆದರೆ ಈ ನಿಷ್ಕಲ್ಮಶ ಪ್ರೀತಿ ಸಾಂಪ್ರದಾಯವಾದಿಗಳಾದ ಎರಡೂ ಕುಟುಂಬದವರಿಗೆ ಕಾಣಲಿಲ್ಲ ಎನ್ನುವುದೇ ನೋವಿನ ಸಂಗತಿ. ಇವರ ಗೊಡವೆಯೇ ಬೇಡ ನಾವಿಬ್ಬರು ಎಲ್ಲಾದರೂ ದೂರ ಹೋಗಿ ಬದುಕೋಣ ಎಂದು ನಿರ್ಧಾರ ಮಾಡಿ, ಊರು ಬಿಟ್ಟು ಹೋಗುವ ಎಲ್ಲಾ ತಯಾರಿ ಮಾಡಿಕೊಂಡು ಒಂದು ದಿನ ರಾತ್ರಿ ಕಾಂಚನಾಳ ಬರುವಿಕೆಗಾಗಿ ಅವರ ಮನೆಯ ತುಸು ದೂರದಲ್ಲೇ ಕಾರಿನಲ್ಲಿ ಕೂತು ಕಾಂಚನಾಳಿಗೆ ಕಾಯುತ್ತ ನಿಂತಿದ್ದ ಮೊಯ್ದೀನ್. ಜೀವಂತವಿದ್ದಾಗ ತಮ್ಮ ಪ್ರೀತಿಗೆ ನಖಶಿಕಾಂತ ವಿರೋಧಿಯಾಗಿದ್ದ ಮೊಯ್ದೀನ್ ನ ತಂದೆ ಕೊನೆಯುಸಿರೆಳೆದಿದ್ದಾರೆ ಎನ್ನುವ ಆ ಕ್ಷಣದ ಸುದ್ದಿಯೂ ಅವತ್ತು ಪಾಪ ಈ ಪ್ರೇಮಿಗಳಿಗೆ ಮುಳುವಾಯಿತು.

ಇತ್ತ ಕಾಂಚನಾಳನ್ನು ಬೇರೆಯವರೊಂದಿಗೆ ಮದುವೆ ಮಾಡಿಸಲು ಪ್ರಯತ್ನಿಸುವ ಅವರ ಮನೆಯವರ ಯಾವ ತಂತ್ರಗಾರಿಕೆಯೂ ಕಾಂಚನಾಳ ಹಠದ ಮುಂದೆ ನಿಲ್ಲೋದಿಲ್ಲ.
ಕೊನೆಗೆ ಈ ದೇಶವೇ ಬಿಟ್ಟು ಎಲ್ಲಾದರೂ ಹೋಗಿ ಬದುಕು ಕಟ್ಟಿಕೊಳ್ಳೋಣ ಎಂದು ಪ್ರೇಮಿಗಳು ನಿರ್ಧರಿಸುತ್ತಾರೆ. ಕಾಂಚನಾಳ ಮಾವನ ಮಗನೂ ಕೂಡ ಕಾಂಚನಾಳನ್ನು ಪ್ರೀತಿಸುತ್ತಿರುತ್ತಾನೆ. ತಮ್ಮ ಪ್ರೀತಿಯ ಬಗ್ಗೆ, ಮೊಯ್ದೀನ್ ನನ್ನು ಬಿಟ್ಟು ಬೇರಾರಿಗೂ ನಾನು ಮನಸ್ಸು ಕೊಡಲಾರೆ ಎಂದು ಎಲ್ಲವನ್ನು ಆತನಲ್ಲಿ ಬಿಡಿಸಿ ಹೇಳಿದಾಗ ಅವರ ಪ್ರೀತಿಯ ಆಳವನ್ನು ಅರ್ಥೈಸಿಕೊಂಡ ಕಾಂಚನಾಳ ಮಾವನ ಮಗ ಅವರನ್ನು ಸಪೋರ್ಟ್ ಮಾಡುತ್ತಾನೆ. ಪಾಸ್ಪೋರ್ಟ್ ಮಾಡಿಸುವುದಕ್ಕಾಗಿ ಆತನೇ ಹೋಗಿ ಕಾಂಚನಾಳ ಫೋಟೋವನ್ನು ಮೊಯ್ದೀನ್ ಗೆ ಕೊಟ್ಟು ಬರುತ್ತಾನೆ.

ಪಾಸ್ ಪೋರ್ಟ್ ಆಫೀಸಿಗೆ ಹೋಗಿ ಪಾಸ್ಪೋರ್ಟ್ ಕಲೆಕ್ಟ್ ಮಾಡಿದ ಕ್ಷಣಕ್ಕೆ ಮೊಯ್ದೀನ್ ಗೆ ಆಗುವ ಸಂತೋಷಕ್ಕೆ ಪಾರವೇ ಇರಲಿಲ್ಲ. ಪಾಸ್ಪೋರ್ಟ್ ಜೇಬಿಗಿಳಿಸಿಕೊಂಡು ದೋಣಿಯಲ್ಲಿ ನದಿ ದಾಟುವ ವೇಳೆ, ಇಡೀ ದೋಣಿ ತುಂಬಾ ಸುಮಾರು ಹತ್ತಿಪ್ಪತ್ತು ಜನರಿದ್ದರೂ, ಆತನ ಮನಸ್ಸು ಮಾತ್ರ ಮಾರನೇ ದಿನ ತಾನು ಮತ್ತು ಕಾಂಚನಾ ದೂರದೂರಿಗೆ ಹೋಗಿ ಸ್ವತಂತ್ರ ಹಕ್ಕಿಗಳಾಗಿ ಯಾರ ಗೊಡವೆಯೂ ಇಲ್ಲದೆ ಬದುಕುವ ಆ ಮುಂಬರುವ ಕ್ಷಣಗಳನ್ನು ಊಹಿಸಿಕೊಳ್ಳುತ್ತಿರುವುದು ಆತನ ಆ ಮುಗ್ದ ನಗು ಹೇಳುತ್ತಿತ್ತು.

ಇತ್ತ ಕಾಂಚನಾ ತನ್ನ ಬಟ್ಟೆ, ಒಡವೆ, ಲಗೇಜುಗಳನ್ನು ಪ್ಯಾಕ್ ಮಾಡುತ್ತಾ, ನಾಳೆ ನನಗೆ ಈ ಪಂಜರದಿಂದ ಮುಕ್ತಿ ಸಿಗುತ್ತದೆ, ನನ್ನ ಇನಿಯನ ಜೊತೆ ನನ್ನಿಚ್ಛೆಯಂತೆ ಸ್ವತಂತ್ರವಾಗಿ ಬದುಕುವ ಅವಕಾಶ ದೊರೆಯುತ್ತದೆ ಎನ್ನುವ ನೂರಾರು ಕನಸುಗಳೊಂದಿಗೆ ಪ್ರತೀ ಕ್ಷಣವನ್ನು ಆನಂದಿಸುತ್ತಾ ನಾಳೆಯನ್ನು ಕಾಯುತ್ತಿರುತ್ತಾಳೆ. ಇವರ ಪ್ರೀತಿಯನ್ನು ಕವಿಗಳು ವರ್ಣಿಸುವ ಹಾಗೆ ವರ್ಣಿಸಲು ನನಗೆ ಪದಗಳು ಸಿಗುತ್ತಿಲ್ಲ. ಆದರೆ ಈ ಸಿನೆಮಾ(ನೈಜ ಕಥೆ)ದ ಬಗ್ಗೆ ಬರೆಯುವಾಗಲೂ ಆ ಮುಕ್ಕತ್ತೆ ಪೆಣ್ಣೆ ಹಾಡು ಮತ್ತು ಸಂಗೀತ ಕಿವಿಯಲ್ಲೇ ಕೇಳಿಸುತ್ತಿದೆ.

ಪ್ರೀತಿ ಎನ್ನುವುದು ಎರಡು ವ್ಯಕ್ತಿಗಳ ನಡುವೆ ಆಗುವಂತದ್ದಲ್ಲ ಅದು ಎರಡು ಮನುಸ್ಸುಗಳ ನಡೆವೆ ಬೆಸೆಯುವಂತದ್ದು..
ಪ್ರೀತಿ ಎನ್ನುವುದು ಧರ್ಮ,ಜಾತಿ,ಮತ,ಪಂಥವನ್ನು ಮೀರಿದ್ದು. ಪ್ರೀತಿಗೆ ಕಣ್ಣಿಲ್ಲ, ಪ್ರೀತಿಗೆ ಬಣ್ಣವೂ ಇಲ್ಲ. ಪ್ರೀತಿಗೆ ಎರಡು ಮನುಸ್ಸುಗಳ ನಡುವೆ ಬೆಸೆದುಕೊಳ್ಳುವ ಒಂದು ಸಣ್ಣ ತರಂಗವಿರುತ್ತೆ, ಅದಕ್ಕೆ ಗಾತ್ರವೂ ಇಲ್ಲ ತೂಕವೂ ಇಲ್ಲ.
ಧರ್ಮ,ಜಾತಿ,ಮತ,ಪಂಥಗಳ ಗೊಡವೆಗಳಿಗೆ ಸಿಕ್ಕಿ ಸಂಪ್ರದಾಯವಾದಕ್ಕೆ ಬಲಿಯಾಗಿರುವ ಆ ಕುಟುಂಬಗಳಿಗೆ ಮೊಯ್ದೀನ್ ಮತ್ತು ಕಾಂಚನಾಳ ನಡುವೆ ಇರುವ ಪ್ರೀತಿ ಎಂತದ್ದು ಎಂದು ತಿಳಿಯುವುದಾದರು ಹೇಗೆ.

ಧರ್ಮ ಮತ್ತು ಸಂಪ್ರದಾಯಕ್ಕೆ ಅಂಟಿಕೊಂಡಿರುವ ಇವರಿಬ್ಬರ
ಕುಟುಂಬಗಳಿಗೆ ಇವರ ನೈಜ ಪ್ರೀತಿ ತಿಳಿಯಲಿಲ್ಲ ನಿಜ ಆದರೆ ಪ್ರಕೃತಿಗೂ ತಿಳಿಯಲಿಲ್ಲವೇ? ಪ್ರಶಾಂತವಾಗಿ ಹರಿಯುತ್ತಿದ್ದ ಆ ನದಿ ದಡದಲ್ಲಿಯೇ ಅಲ್ಲವೇ ಇವರ ಪ್ರೀತಿ ಶುರುವಾಗಿದ್ದು, ದೈಹಿಕವಾಗಿ ದೂರವಿದ್ದರೂ ಪ್ರೀತಿಯನ್ನೇ ಅಲ್ಲವೇ ಈ ಪ್ರೇಮಿಗಳು ಉಸಿರಾಡುತ್ತಿದ್ದಿದ್ದು ಹಾಗಾಗಿ ಆ ಗಾಳಿಗೂ ತಿಳಿಯಲಿಲ್ಲವೇ, ಕಿಟಕಿಯಿಂದ ಆಚೆ ಕೈಹಾಕಿ ಬೀಳುವ ಮಳೆಹನಿಯ ಜೊತೆಯಲ್ಲಿಯೇ ಅಲ್ಲವೇ ಆಕೆ ತನ್ನ ಪ್ರೇಮವೇದನೆಯನ್ನು ಹಂಚಿಕೊಳ್ಳುತ್ತಿದ್ದಿದ್ದು’ ಮಳೆ ಹನಿಗೂ ತಿಳಿಯದಾಯಿತೇ..

ದೋಣಿಯಲ್ಲಿ ನದಿ ದಾಟುವ ವೇಳೆ ವಿಪರೀತ ಗಾಳಿ ಮಳೆಗೆ ದೋಣಿ ಮಗುಚಿ ಬಿದ್ದಿತು. ಮೊಯ್ದೀನ್ ನನ್ನು ಸೇರಿ ಅದರಲ್ಲಿದ್ದ ವೃದ್ಧರು, ಮಕ್ಕಳು, ಮಹಿಳೆಯರು ಈಜು ಬಾರದವರು ನೀರಿನಲ್ಲಿ ಮುಳುಗುತ್ತಿದ್ದರು. ಈಜು ಬರುವವರು ಮುಳುಗುತ್ತಿದ್ದವರನ್ನು ರಕ್ಷಿಸಲು ಮುಂದಾದರು. ಮೊಯ್ದೀನ್ ನೀರಿನಲ್ಲಿ ಮುಳುಗಿ ಅನೇಕರನ್ನು ಹೊರಗೆಳೆದು ತಂದು ದೋಣಿಗೆ ಬಿಟ್ಟರು, ಕೊನೆಯ ಬಾರಿ ಮುಳುಗಿ ಮಗುವೊಂದನ್ನು ಹೊರಗೆಳೆದು ತರುವ ಸಮಯದಲ್ಲಿ ಸುಳಿಗೆ ಸಿಲುಕಿಕೊಂಡ ಮೊಯ್ದೀನ್ ಎಷ್ಟೇ ಕಷ್ಟ ಪಟ್ಟರು ಅದರಿಂದ ತಪ್ಪಿಸಿಕೊಂಡು ಹೊರಬರಲಾಗದೆ ಮುಳುಗಿ ಪ್ರಾಣ ಬಿಟ್ಟರು.

ಇತ್ತ ಮೊಯ್ದೀನ್ ನೀರುಪಾಲಾದ ಸುದ್ದಿ ತಿಳಿದ ಮೊಯ್ದೀನ್ ತಾಯಿಯ ನದಿ ದಡದಲ್ಲಿ ನಿಂತು ಸುರಿಸುತ್ತಿದ್ದ ಕಣ್ಣೀರು ಅದೇ ನದಿ ಸೇರುತ್ತಿತ್ತು, ಮೊಯ್ದೀನ್ ಸ್ನೇಹಿತರ ವೇದನೆ ಮುಗಿಲು ಮುಟ್ಟಿತ್ತು. ಪೊಲಿಟಿಕಲ್ ಆಕ್ಟಿವಿಸ್ಟ್ ಆಗಿದ್ದ ಮೊಯ್ದೀನ್ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದ. ಸುದ್ದಿ ತಿಳಿಯುತ್ತಿದ್ದಂತೆ ಕಾಂಚನಾ ಎದೆ ಒಡೆದುಕೊಂಡು ಅತ್ತಳು, ಗೋಳಾಡಿದಳು, ಅನೇಕ ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದಳು, ಕೊನೆಗೆ ಮೊಯ್ದೀನ್ ನ ತಾಯಿ ಕಾಂಚನಾಳನ್ನು ಭೇಟಿಯಾಗಿ ಆಕೆಯನ್ನು ಸೊಸೆಯಾಗಿ ಸ್ವೀಕರಿಸಿದಳು.

ಕಾಂಚನಾ ತನ್ನ ಅತ್ತೆಯೊಂದಿಗೆ ಗಂಡನ ಮನೆ ಸೇರುವ ಸಮಯ ಕೊನೆಯಲ್ಲಿ ಬರುವ ಆ ಸೀನ್ ನಿಜಕ್ಕೂ ಕಣ್ಣಾಲಿಗಳನ್ನು ಮತ್ತೊಮ್ಮೆ ತೇವಗೊಳಿಸಿತು. ಗಂಡನ ಮನೆಯ ಹೊಸ್ತಿಲು ದಾಟುತ್ತಿದ್ದಂತೆ ಹಿಂದೆ ತಿರುಗಿ ನೋಡುವ ಆ ಸಮಯದಲ್ಲಿ ಕಾಂಚನಾ ಮತ್ತು ಮೊಯ್ದೀನ್ ನ ಆ ನೋವು ತುಂಬಿದ ನಗು ಈಗಲೂ ಕಣ್ಣಮುಂದೆಯೇ ಇದೆ. ಪಾತ್ರಕ್ಕೆ ಜೀವತುಂಬಿದ ಪೃಥ್ವಿರಾಜ್ ಮತ್ತು ಪಾರ್ವತಿ ಮೆನನ್ ರ ನಟನೆಗೆ ಒಂದು ದೊಡ್ಡ ಸಲ್ಯೂಟ್.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

‘ಸಪ್ತ ಸಾಗರದಾಚೆ ಎಲ್ಲೋ – ಸೈಡ್‍ ಬಿ’ ಚಿತ್ರದ ಟಿಕೆಟ್‍ ಮೇಲೆ ಶೆ.20ರಷ್ಟು ಕಡಿತ

Published

on

ಸುದ್ದಿದಿನ ಡೆಸ್ಕ್ : ರಕ್ಷಿತ್‍ ಶೆಟ್ಟಿ ಮತ್ತು ರುಕ್ಷಿಣಿ ವಸಂತ್‍ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್‍ ಬಿ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

ಈ ಮಧ್ಯೆ, ಇನ್ನಷ್ಟು ಹೆಚ್ಚು ಜನರನ್ನು ಚಿತ್ರಮಂದಿರಗಳಿಗೆ ಕರೆತರುವ ನಿಟ್ಟಿನಲ್ಲಿ ಚಿತ್ರತಂಡ ಇಂದಿನಿಂದ ಪ್ರತಿ ಟಿಕೆಟ್‍ ಶೇ. 20ರಷ್ಟು ರಿಯಾಯ್ತಿಯನ್ನು ಚಿತ್ರತಂಡ ಘೋಷಿಸಿದೆ. ಈ ಚಿತ್ರವನ್ನು ಹೇಮಂತ್‍ ರಾವ್ ನಿರ್ದೇಶಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ, ಚೈತ್ರಾ ಆಚಾರ್‍, ಅಚ್ಯುತ್‍ ಕುಮಾರ್‍, ರಮೇಶ್‍ ಅರವಿಂದ್‍ ಮುಂತಾದವರು ನಟಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿದ ಮೊದಲ‌ ಪ್ರೇಕ್ಷಕ ದರ್ಶನ್

Published

on

ಸುದ್ದಿದಿನ ಡೆಸ್ಕ್ : ಸೂರಿ ನಿರ್ದೇಶನದಲ್ಲಿ ಅಭಿಷೇಕ್‍ ಅಂಬರೀಶ್‍ ಅಭಿನಯಿಸಿರುವ ‘ಬ್ಯಾಡ್‍ ಮ್ಯಾನರ್ಸ್’ ಚಿತ್ರವು ಇದೇ ನ.24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಮಧ್ಯೆ, ಇತ್ತೀಚೆಗೆ ಚಿತ್ರತಂಡ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ದರ್ಶನ್‍ ಮತ್ತು ಸುಮಲತಾ ಅಂಬರೀಷ್‍ ಅವರು ಚಿತ್ರವನ್ನು ನೋಡಿದ್ದಾರೆ. ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡಿರುವ ದರ್ಶನ್‍, ಅಭಿ ಬೆನ್ನಿಗೆ ‘ನಿಮ್ಮ‌ಪ್ರೀತಿಯ ದಾಸ’ ಎಂದು ಬರೆದು 5ಕ್ಕೆ 5 ಸ್ಟಾರ್ ಗಳನ್ನ ಕೊಟ್ಟಿದ್ದಾರೆ.

“ಈ ಸಿನಿಮಾದಲ್ಲಿ ನೀವು ರಿಯಲ್ ರೆಬೆಲ್ ಸ್ಟಾರ್‍ನ ನೋಡ್ತೀರಿ. ಹೆಮ್ಮೆಯಾಗ್ತಿದೆ ಎರಡನೇ ಸಿನಿಮಾದಲ್ಲಿ ಈ ಲೆವ್ವೆಲ್ಲಿಗೆ ಅಭಿ ಮಾಗಿರೋದು. ಸಿನಿಮಾ ಬೇರೆ ಲೆವ್ವಲ್ ಇದೆ. ದೊಡ್ಡ ಯಶಸ್ಸು ಇದಕ್ಕೆ ಖಂಡಿತ ಧಕ್ಕಲಿದೆ’ ಎಂದು ಬರೆಯುವ ಮೂಲಕ ದರ್ಶನ್‍ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

10,000 ಅಡಿ ಉದ್ದದ ‘ಘೋಸ್ಟ್’ ಪೋಸ್ಟರ್ ಬಿಡುಗಡೆ

Published

on

ಸುದ್ದಿದಿನ ಡೆಸ್ಕ್ : ಶಿವರಾಜಕುಮಾರ್‍ ಅಭಿನಯದ ‘ಘೋಸ್ಟ್’ ಚಿತ್ರವು ಈಗಾಗಲೇ ನವೆಂಬರ್‌ 17ರಂದು ಜೀ5ನಲ್ಲಿ ಬಿಡುಗಡೆಯಾಗಿದೆ.

ಈ ಚಿತ್ರದ ಪ್ರಮೋಷನ್ಗೆ ಬರೋಬ್ಬರಿ 10 ಸಾವಿರ ಚದರ ಅಡಿಯ ‘ಘೋಸ್ಟ್’ ಪೋಸ್ಟರನ್ನು ಜೀ5 ಬಿಡುಗಡೆ ಮಾಡಿದೆ. ಜಯನಗರದ ಎಂ.ಇ.ಎಸ್ ಗ್ರೌಂಡ್ ನಲ್ಲಿ ‘ಘೋಸ್ಟ್’ ಸಿನಿಮಾದ 10,000 ಅಡಿ ಪೋಸ್ಟರ್ ಅನಾವರಣ ಮಾಡಲಾಗಿದೆ. ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗೆ ಬ್ಯಾನರ್, ಪೋಸ್ಟರ್ ಹಾಕೋದು ಸಹಜ. ಆದರೆ, ಈ ಬಾರಿ ಒಟಿಟಿ ರಿಲೀಸ್‌ಗೆ ಪೋಸ್ಟರ್ ಹಾಕಿ ವಿಭಿನ್ನವಾಗಿ ಪ್ರಚಾರ ಮಾಡಿದೆ ಜೀ ಕನ್ನಡ.

ಸಂದೇಶ್‍ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ಘೋಸ್ಟ್’ ಚಿತ್ರವನ್ನು ಆರ್‍.ಜೆ. ಶ್ರೀನಿ ಬರೆದು, ನಿರ್ದೇಶಿಸಿದ್ದು, ಅರ್ಜುನ್‌ ಜನ್ಯಾ ಸಂಗೀತವಿದೆ. ಶಿವರಾಜಕುಮಾರ್ ಜೊತೆ ಮಲಯಾಳಂ ನಟ ಜಯರಾಮ್‌, ಹಿಂದಿ ನಟ ಅನುಪಮ್‌ ಖೇರ್‌, ಅರ್ಚನಾ ಜೋಯಿಸ್‌, ಸತ್ಯಪ್ರಕಾಶ್‌, ನಿರ್ದೇಶಕ ಎಂಜಿ ಶ್ರೀನಿವಾಸ್‌ ಹಾಗೂ ಇನ್ನಿತರರು ನಟಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending