Connect with us

ಭಾವ ಭೈರಾಗಿ

ಕತೆ | ಒಂಟಿತನ

Published

on

  • ಮೂಲ: ಬ್ರುನೋ ಶುಲ್ಜ್ , ಕನ್ನಡಕ್ಕೆ: ಸುಭಾಷ್ ರಾಜಮಾನೆ

ನಗೆ ಮತ್ತೊಮ್ಮೆ ಹೊರಗೆ ನಡೆದುಕೊಂಡು ಹೋಗಲು ದೊಡ್ಡ ಬಿಡುಗಡೆಯಂತೆ ಭಾಸವಾಗುತ್ತಿದೆ. ಆದರೆ ನಾನು ಎಷ್ಟೊಂದು ದೀರ್ಘ ಕಾಲದಿಂದ ಈ ಕೋಣೆಯೊಂದಿಗೆ ಬಂಧಿಯಾಗಿದ್ದೆ! ತುಂಬ ಕಹಿಯಾದ ದಿನಮಾನಗಳು. ನೋವಿನ ವರುಷಗಳೊಂದಿಗೆ ಬದುಕಿದೆ.

ಹಳೆಯ ಶಿಶುವಿಹಾರದ ಕೋಣೆಯಲ್ಲಿ ನಾನೇಕೆ ವಾಸವಾಗಿದ್ದೇನೆ ಎಂಬುದನ್ನು ವಿವರಿಸಲಾರೆ. ಬಹುಮಹಡಿ ಮನೆಯ ಹಿಂದಿನ ಕೋಣೆಯಿಂದ ಬಾಲ್ಕನಿಗೆ ಹೋಗಬಹುದಿತ್ತು. ಆ ಜಾಗ ನಮಗೆ ಸೇರಿದ್ದಲ್ಲ ಎಂದು ತಿಳಿದಿದ್ದರೂ ಹಿಂದೊಮ್ಮೆ ಅಪರೂಪವಾಗಿ ಅದನ್ನು ಬಳಸುತ್ತಿದ್ದೆ.

ನಾನಲ್ಲಿಗೆ ಹೇಗೆ ಹೋಗುತ್ತಿದ್ದೆ ಎಂಬುದೇ ನನಗೀಗ ನೆನಪಿಲ್ಲ. ಅದು ಚಂದ್ರನಿಲ್ಲದ ಶುಭ್ರ ವರ್ಣದ ರಾತ್ರಿ. ಆ ಮಂದ ಬೆಳಕಿನಲ್ಲಿ ಪ್ರತಿಯೊಂದನ್ನು ನಾನು ಕಾಣಬಲ್ಲವನಾಗಿದ್ದೆ. ಯಾರೋ ಆಗಷ್ಟೆ ನಿದ್ದೆಯಿಂದ ಎದ್ದು ಹೋಗಿರುವಂತೆ ಹಾಸಿಗೆ ಬಿದ್ದುಕೊಂಡಿತ್ತು. ಜನರು ನಿದ್ದೆಯಲ್ಲಿ ಸ್ಥಬ್ಧವಾಗಿರುವಂತೆ ಅವರ ಉಸಿರಾಟವನ್ನು ಆಲಿಸಿದೆ. ಆದರೆ ಇಲ್ಲಿ ನಿಜವಾಗಿಯೂ ಉಸಿರಾಡುತ್ತಿರುವವರು ಯಾರು? ಇದು ಅಂದಿನಿಂದ ನನ್ನದೇ ಕೋಣೆಯಾಯಿತು.

ಎಷ್ಟೋ ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ನನಗೆ, ಬೇಸರವೂ ಆಗಿದೆ. ಏನನ್ನಾದರೂ ಶೇಖರಣೆ ಮಾಡುವುದರ ಬಗ್ಗೆ ನಾನೇಕೆ ಮುಂಚಿತವಾಗಿಯೇ ಆಲೋಚಿಸುವುದಿಲ್ಲ! ಓಹೋ, ನಿಮಗೆ ಈಗಲೂ ಸಮಯವನ್ನು ನೀಡಿದ್ದರೆ, ನೀವಾದರು ಅದನ್ನು ಮಾಡಬಹುದಿತ್ತು. ಒಳ್ಳೆಯ ಪೌಷ್ಟಿಕವಾದ ಧಾನ್ಯಗಳನ್ನು ಮುಂಬರುವ ಚಳಿಗಾಲದ ದಿನಗಳಿಗಾಗಿ ನಾನು ಕೂಡಿಡಬೇಕಿತ್ತು.

ಹಸಿವಿನ ವರುಷಗಳು ಮುಂದಿವೆ. ಚಳಿಗಾಲದಲ್ಲಿ ಈಜಿಪ್ತಿನ ನೆಲ ಹಣ್ಣುಗಳನ್ನು ಬಿಡುವುದಿಲ್ಲ. ಅಯ್ಯೋ, ದೂರದೃಷ್ಟಿಯುಳ್ಳ ಮನುಷ್ಯ ನಾನಲ್ಲ. ಯಾವತ್ತೂ ನಾನೊಬ್ಬ ಹಗುರ ಹೃದಯದ ಇಲಿಯ ಹಾಗೆ. ನಾನು ನಾಳೆಯ ಚಿಂತೆಯಿಲ್ಲದೆ ಈ ದಿನವಷ್ಟೇ ಬದುಕಿರುವಾತ. ಹಸಿವಿನಿಂದ ಬಳಲುವ ಬುದ್ಧಿಯಲ್ಲಿ ನಂಬಿಕೆ ಇಟ್ಟಿರುವಾತ.

ಒಂದು ಇಲಿಯಂತೆ ಹಸಿವಿನ ಬಗ್ಗೆ ಏನಂತ ಕಾಳಜಿವಹಿಸುವುದು? ಅಂತಹ ದಾರಿದ್ರ್ಯವೇನಾದರೂ ಬಂದರೆ ಕಟ್ಟಿಗೆಯನ್ನೋ ಅಥವಾ ಕಾಗದವನ್ನೋ ಕೊರೆಯುತ್ತೇನೆ. ಅತ್ಯಂತ ಬಡ ಪ್ರಾಣಿಯಾದ ಕಂದು ಬಣ್ಣದ ಇಲಿ ಪುಸ್ತಕದ ತುದಿಯನ್ನು ಕಚ್ಚಿ ತಿನ್ನುವಂತೆ, ಯಾವುದರ ಮೇಲೂ ನನ್ನ ಅಸ್ತಿತ್ವವೇ ಇಲ್ಲ.

ಆದ್ದರಿಂದ ನಾನು ಈ ನಿರ್ಜೀವ ಕೋಣೆಯಲ್ಲಿ ವಾಸಿಸುತ್ತೇನೆ. ಎಷ್ಟೋ ಸಮಯದ ಹಿಂದೆ ಅನೇಕ ನೊಣಗಳು ಸತ್ತು ಬಿದ್ದಿವೆ. ಕಟ್ಟಿಗೆ ಹುಳುವಿನ ಸದ್ದನ್ನು ಕೇಳಲು ನನ್ನ ಕಿವಿಯನ್ನು ಆ ಕಟ್ಟಿಗೆಯ ಸಮೀಪಕ್ಕೆ ಒಯ್ಯುತ್ತೇನೆ. ಸ್ಮಶಾನ ಮೌನ. ಮೇಜಿನ ಮೇಲೆ, ಶೆಲ್ಪಿನ ಮೇಲೆ, ಚೇರುಗಳ ಮೇಲೆ, ಕೊನೆಯಿಲ್ಲದೆ ಓಡಾಡುತ್ತಿರುವ ಇಲಿ. ನಾನು ಕೂಡ ಅದರಂತೆಯೇ ಏಕಾಂಗಿ. ನಾನು ಕೋಣೆ ತುಂಬ ಓಡಾಡಿದಾಗ ಚಿಕ್ಕಮ್ಮಳಾದ ಥೆಕ್ಲಾಳ ಕಂದು ಬಣ್ಣದ ಉದ್ದನೆಯ ನಿಲುವಂಗಿ ನೆಲಕ್ಕೆ ತಾಗುತ್ತಿತ್ತು. ಚುರುಕಾದ, ಕ್ಷಿಪ್ರವಾದ, ಸಣ್ಣದಾದ ಬಾಲವೊಂದು ನನ್ನನ್ನು ಎಳೆಯುತ್ತಿದೆ.

ನಾನೀಗ ಪ್ರಖರ ಸೂರ್ಯನ ಬೆಳಕಿನ ಮೇಜಿನ ಮೇಲೆ ಅಚಲವಾಗಿ, ಹೊರಚಾಚಿದ ಹೊಳಪಿನ ಕಣ್ಣುಗಳೊಂದಿಗೆ ಕೂತಿದ್ದೇನೆ. ಬಾಯಿ ಮುಚ್ಚಿಕೊಂಡು ಕುಳಿತಿರುವ ನಾನು, ಚಟದ ಬಲದಿಂದ ಎಷ್ಟೋ ಹೊತ್ತಿನ ನಂತರ ಬಾಯಾಡಿಸುತ್ತೇನೆ.

ಇದನ್ನೆಲ್ಲ ಒಂದು ರೂಪಕದಂತೆಯೂ ಅರ್ಥ ಮಾಡಿಕೊಳ್ಳಬಹುದು. ನಿಜವಾಗಿಯೂ ನಾನೊಬ್ಬ ನಿವೃತ್ತ ವೇತನದಾರನೇ ಹೊರತು ಒಂದು ಇಲಿಯಂತು ಅಲ್ಲ. ಇದು ನನ್ನ ಅಸ್ತಿತ್ವದ ಭಾಗವಾಗಿ ರೂಪಕಗಳ ಮೇಲೆ ಪರಾವಲಂಬಿ ಆಗುವಂತಾಗಿದೆ. ಆದ್ದರಿಂದ ನಾನು ಸುಲಭವಾಗಿಯೇ ಮೊದಲು ಉಪಮೆಯನ್ನು ಹೊರಹಾಕಲು ಸಾಧ್ಯವಾಗಿದೆ. ಅವುಗಳನ್ನು ಹೊರಹಾಕಿದ ಮೇಲೆ, ನನ್ನ ಕಠಿಣ ದಿನಗಳಿಗೆ ಮತ್ತು ನಿಧಾನವಾಗಿ ನನ್ನ ಇಂದ್ರಿಯಗಳಿಗೆ ಮರಳಬೇಕು.

ನಾನು ಹೇಗೆ ಕಾಣುತ್ತೇನೆ? ಕೆಲವು ಸಲ ನನ್ನನ್ನೇ ನಾನು ಕನ್ನಡಿಯಲ್ಲಿ ನೋಡಿಕೊಳ್ಳುತ್ತೇನೆ. ಇದೊಂದು ವಿಚಿತ್ರವಾದ, ಹಾಸ್ಯಾಸ್ಪದ ಮತ್ತು ನೋವಿನ ಸಂಗತಿ! ಇದನ್ನು ಒಪ್ಪುವುದೇ ಅವಮಾನಕರ. ನಾನು ಯಾವತ್ತೂ ನನ್ನ ಮುಖವನ್ನು ಸಂಪೂರ್ಣವಾಗಿ ನೋಡಿಕೊಂಡಿಲ್ಲ. ಸ್ವಲ್ಪ ದೂರ ಸರಿದರೆ ನಾನು ಕನ್ನಡಿಯೊಳಗೆ, ಅದರ ಕೇಂದ್ರದಲ್ಲೇ ನಿಲ್ಲುತ್ತೇನೆ. ನಮ್ಮ ನೋಟಗಳು ಭೇಟಿಯಾಗುವುದನ್ನೇ ನಿಲ್ಲಿಸುತ್ತವೆ.

ನಾನು ಚಲಿಸಿದರೆ ನನ್ನ ಪ್ರತಿಬಿಂಬವೂ ಚಲಿಸುತ್ತದೆ. ಅದರೆ ಅರ್ಧ ತಿರುಗಿದ ಬೆನ್ನು, ಅದು ನನ್ನ ಬಗ್ಗೆ ತಿಳಿಯದಿದ್ದರೆ, ನನ್ನ ಹಿಂಭಾಗದಲ್ಲಿ ಹಲವು ಕನ್ನಡಿಗಳಿದ್ದಿದ್ದರೆ ಹಿಂದಕ್ಕೆ ಬರುತ್ತಿರಲಿಲ್ಲ. ನಾನಿದನ್ನು ದೂರದಿಂದ ಮತ್ತು ಅಭಿನ್ನವಾಗಿ ಕಂಡಾಗ ನನ್ನೆದೆಯಲ್ಲಿ ನೆತ್ತರು ಸುರಿಯುತ್ತದೆ. ಇದು ನೀನು ಎಂದು ಘೋಷಿಸುತ್ತೇನೆ; ನೀನು ಎಂದಿಗೂ ನನ್ನ ನಂಬಿಕೆಯ ಪ್ರತಿಬಿಂಬ.

ನೀನು ಬಹಳ ವರ್ಷಗಳಿಂದ ನನ್ನ ಜೊತೆಯಲ್ಲಿದ್ದೆ ಮತ್ತು ಈಗ ನನ್ನನ್ನು ಗರುತು ಹಿಡಿಯುತ್ತಿಲ್ಲ! ಓ ದೇವರೇ! ಅಪರಿಚಿತದ ಒಂದು ಬದಿಯನ್ನು ನೋಡುತ್ತಿರುವ, ನನ್ನ ಪ್ರತಿಬಿಂಬ ಅಲ್ಲೇ ನಿಲ್ಲುತ್ತದೆ. ಏನನ್ನೋ ಆಲಿಸುತ್ತಿರುವಂತೆ ಕಾಣುತ್ತದೆ. ಕನ್ನಡಿಯ ಆಳದಿಂದ ಬರುವ ಒಂದು ಶಬ್ದಕ್ಕೆ ಕಾದಂತೆ, ಯಾರಿಗೋ ವಿಧೇಯದಂತೆ, ಮತ್ತೊಂದು ತಾವಿನಿಂದ ಬರುವ ಆಜ್ಞೆಗಾಗಿ ಕಾಯುತ್ತಿರುವಂತೆ ಭಾಸವಾಗುತ್ತಿದೆ.

ಪ್ರಾಯಶಃ ನಾನು ಮೇಜಿನ ಮುಂದೆ ಕೂರುತ್ತೇನೆ. ಹಳದಿ ಬಣ್ಣಕ್ಕೆ ತಿರುಗಿರುವ ವಿಶ್ವವಿದ್ಯಾಲಯದ ನನ್ನ ಟಿಪ್ಪಣಿಯ ಪುಟಗಳನ್ನು ತಿರುವಿ ಹಾಕುತ್ತೇನೆ. ಇದು ನನ್ನ ಏಕೈಕ ಓದು.

ಚಳಿಗಾಲದ ತಣ್ಣನೆಯ ಗಾಳಿ ಕಿಟಕಿಯಿಂದ ಒಳಗೆ ನುಸುಳುತ್ತಿರುವಾಗ ಸೂರ್ಯನ ಬಿಸಿಲಿನಿಂದ ಮಾಸಿ ಹೋಗಿರುವ, ಧೂಳು ಮೆತ್ತಿಕೊಂಡಿರುವ ಪರದೆಯ ಕಡೆ ನನ್ನ ಗಮನ ಹರಿಯುತ್ತದೆ. ಆ ಪರದೆಗೆ ಹಾಕಿರುವ ಸಲಾಕೆಯನ್ನು ನಾನು ತಿರುಗಿಸಲು ಹೋಗುವುದಿಲ್ಲ. ಎಷ್ಟೊಂದು ಹಗುರವಾಗಿದ್ದರೂ ಅಂತರಲಾಗ ಹಾಕಿಕೊಂಡು ಬರಡಾದ ಗಾಳಿ ಬಳಲಿ ಹೋಗಿದೆ.

ಯಾರಾದರೂ ಸಹಜವಾಗಿ ಸೊಗಸಾಗಿ ತನ್ನದೇ ರೀತಿಯಲ್ಲಿ ಕಲ್ಪಿಸಿಕೊಳ್ಳಬಹುದಾದ ಒಂದು ಕಸರತ್ತು ಜರುಗುತ್ತಿದೆ. ಆಯ ತಪ್ಪದಂತೆ ನಿಶ್ಯಬ್ದವಾಗಿ ತುದಿಗಾಲಲ್ಲಿ ನಿಂತುಕೊಂಡರೆ ತಲೆ ಛಾವಣಿಗೆ ತಾಗುತ್ತಿದೆ; ತಲೆ ಮೇಲಕ್ಕೆ ಎತ್ತಿದಂತೆ ಇಡೀ ದೇಹ ಬೆಚ್ಚನೆಯ ಅನುಭವದ ಭ್ರಮೆಯಲ್ಲಿ ತೇಲಾಡುತ್ತದೆ. ಬಾಲ್ಯದ ದಿನಗಳಿಂದಲೂ ಇಡೀ ಕೋಣೆಯನ್ನು ಕಣ್ಣಾಡಿಸುವುದು ನನಗೆ ಪ್ರಿಯವಾದ ಕೆಲಸವಾಗಿದೆ.

ನಾನು ಕುಳಿತುಕೊಂಡು ಮೌನವನ್ನು ಆಲಿಸುತ್ತೇನೆ. ಕೋಣೆಯೆಲ್ಲ ಬಿಳುಚಿಕೊಂಡಿದೆ. ಬಿಳಿಯ ಛಾವಣಿಯಲ್ಲಿ ಕೆಲವು ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಪ್ಲಾಸ್ಟರ್ ತುಣುಕುಗಳು ಕಳಚಿ ಬೀಳುತ್ತವೆ. ಗೋಡೆಯ ಒಳಗೆ ಕೋಣೆ ಇರುವುದನ್ನು ನಾನು ಕಾಣಿಸುವಂತೆ ಮಾಡುತ್ತೇನೆಯೇ? ಇದು ಹೇಗೆ ಸಾಧ್ಯ? ಗೋಡೆಯ ಒಳಗೆ? ನಾನಿದನ್ನು ಬಿಟ್ಟು ಹೋಗುವುದು ಹೇಗೆ? ಮನಸಿದ್ದರೆ ಮಾರ್ಗವಿದೆ; ಗಾಢವಾದ ಸಂಕಲ್ಪ ಎಲ್ಲವನ್ನೂ ಜಯಿಸಬಲ್ಲದು.

ನಾನು ಕೇವಲ ಒಂದು ಬಾಗಿಲನ್ನು ಕಲ್ಪಿಸಿಕೊಳ್ಳುತ್ತೇನೆ. ನಾನು ಬಾಲ್ಯದಲ್ಲಿ ಅಡುಗೆ ಮನೆಯಲ್ಲಿ ಕಂಡಿದ್ದ ಹಳೆಯ ಕಾಲದ ಒಳ್ಳೆಯ ಬಾಗಿಲನ್ನು ಇಷ್ಟಪಡುತ್ತೇನೆ. ಆ ಬಾಗಿಲಿಗೆ ಕಬ್ಬಿಣದ ಹಿಡಿಕೆ ಮತ್ತು ಒಂದು ಅಗುಳಿ ಇರಬೇಕಷ್ಟೇ. ಆ ಕೋಣೆಯಲ್ಲಿ ಗೋಡೆಯೇ ಇರಬಾರದು. ಅದು ಏನು ಮಾಡಿದರೂ ತೆರೆಯದಷ್ಟು ನಂಬಿಕೆಗೆ ಅರ್ಹವಾದ ಬಾಗಿಲು ಆಗಿರಬೇಕು. ಅಂತಹದೊಂದು ಭದ್ರವಾದ ಬಾಗಿಲು ಇರುತ್ತದೆ ಎನ್ನುವುದು ಅದರ ಅಸ್ತಿತ್ವದಿಂದಲೇ ತಿಳಿದು ಬರಬೇಕಷ್ಟೇ.

(ಇಪ್ಪತ್ತನೇ ಶತಮಾನದ ಅತ್ಯಂತ ಪ್ರಭಾವಿ ಲೇಖಕನೆಂದು ಖ್ಯಾತನಾದವನು ಬ್ರುನೋ ಶುಲ್ಜ್. ಈತ ಪೋಲೆಂಡ್ ದೇಶದವನು. ಆತನ ‘ದಿ ಸ್ಟ್ರೀಟ್ ಕ್ರೋಕೊಡೈಲ್ಸ್’(1933) ಮತ್ತು ‘ಸನಟೋರಿಯಮ್ ಅಂಡರ್ ದಿ ಸೈನ್ ಆಫ್ ದಿ ಅವರ್‌ಗ್ಲಾಸ್’(1937) ಎಂಬ ಎರಡೂ ಕಥಾ ಸಂಕಲನಗಳು ಅಭಿಜಾತ ಕೃತಿಗಳೆಂದೇ ಪರಿಗಣಿತವಾಗಿವೆ. ಬ್ರುನೋನ ಕತೆಗಳ ಭಾಷೆಯು ವ್ಯಂಗ್ಯ, ವಿಡಂಬನೆ ಮತ್ತು ರೂಪಕಗಳಿಂದ ಕೂಡಿರುತ್ತದೆ. ಈ ಲೇಖಕ ಮೊದಲ ಓದಿಗೆ ರುಚಿಸಲಾರನೆಂಬುದು ಸತ್ಯವೇ. ಆಧುನಿಕ ಯುರೋಪನ ಸೋಪಜ್ಞೆ ಪ್ರತಿಬೆ ಎಂದೇ ಗುರುತಿಸಲ್ಪಟ್ಟಿರುವ ಬ್ರುನೋ ಅತ್ಯಂತ ಆಳದಿಂದ ಬರೆಯುವ ಹಾಗೂ ಅಷ್ಟೇ ಗಾಢವಾಗಿ ಕಾಡುವ ಲೇಖಕನಾಗಿದ್ದಾನೆ. ಪ್ರಸ್ತುತ ಕತೆಯು ಆತನ ಎರಡನೇ ಕಥಾ ಸಂಕಲನದಲ್ಲಿರುವ ‘ಲೋನ್ಲಿನೆಸ್’ ಕತೆಯ ಅನುವಾದವಾಗಿದೆ.)

(ಅನುವಾದಕರ ವಿಳಾಸ:
ಡಾ. ಸುಭಾಷ್ ರಾಜಮಾನೆ
ಕನ್ನಡ ಸಹಾಯಕ ಪ್ರಧ್ಯಾಪಕ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಬಂಕಾಪುರ, ಹಾವೇರಿ ಜಿಲ್ಲೆ
(ಮೊ:8073397463
rajamanesubash98@gmail.com)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ಮುರುಕುಂಬಿ

Published

on

  • ಡಾ.ಗಿರೀಶ್ ಮೂಗ್ತಿಹಳ್ಳಿ

ನಮ್ಮ ಒಳಗೆ ಬಿಡಲೆ ಇಲ್ಲ
ಚೌರ ಚಹಾ ಮಾಡಲೆ ಇಲ್ಲ
ಎದೆಗೆ ಒದ್ದರು; ಬದಿ ಬದಿಗು ನಕ್ಕರು

ಜಾತಿಪಂಚೆ ಉಟ್ಟುಕೊಂಡು
ನೀತಿನಂಜು ಇಟ್ಟುಕೊಂಡು
ದ್ವೇಷ ಮೆರೆದರು; ಕಟುಸತ್ಯ ಮರೆತರು

ನೂರ ಒಂದು ಕೂಡಿಕೊಂಡು
ಹಟ್ಟಿತನಕ ಅಟ್ಟಿಬಂದು
ಬೆಂಕಿ ಇಟ್ಟರು ; ಕಣ್ಣೀರು ಕೊಟ್ಟರು

ಮುರುಕುಂಬಿ ಮುರುಕರೆಲ್ಲ
ಕಂಬಿ ಹಿಂದೆ ಬಿದ್ದರಲ್ಲ
ಕೆಟ್ಟ ಮನಗಳು; ಕಡುಕೆಟ್ಟ ಜನಗಳು

ಜಾತಿಗೀತಿ ಏನು ಇಲ್ಲ
ಪ್ರೀತಿ ಪ್ರೇಮ ಇರಲಿ ಎಲ್ಲ
ಬಾಳ್ಮೆ ಮಾಡಲು; ಸಹಬಾಳ್ಮೆ ಮಾಡಲು

ಶಾಂತಿಬೆಳಕು ಬುದ್ಧನಿರಲು
ಕ್ರಾಂತಿಕಹಳೆ ಬಸವನಿರಲು
ಅಳಲುಬಾರದು;’ವಿಧಿದಾತ’ನಿರಲು
ಅಳುಕುಬಾರದು. (ಕವಿತೆ-ಡಾ. ಗಿರೀಶ್ ಮೂಗ್ತಿಹಳ್ಳಿ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ‘ಎಳೆ’ ತಂದರೋ..!

Published

on

  • ನವೀನ್ ಸಾಗರ್, ಬೆಂಗಳೂರು

ಸಿನಿಮಾ ಹಾಡುಗಳು ಕವನಗಳು ಎಲ್ಲ ಗದ್ಯಗಳಷ್ಟು ನೇರ ಸಲೀಸು ಅಲ್ಲ. ಹೇಳಬೇಕಿರೊದನ್ನು ಗದ್ಯಗಳ ಹಾಗೆ ಸೀದಾಸಾದಾವಾಗಿ ಕವನಗಳು, ಸಿನಿಗೀತೆಗಳು ಹೇಳುವುದಿಲ್ಲ. ಹಾಗೆ ಹೇಳಿಬಿಟ್ಟರೆ ಅವು ಕವನ/ಹಾಡು/ಪದ್ಯಗಳೇ ಅಲ್ಲ!!!

ಹಾಡು ಅಂದರೆ ಅಲ್ಲಿ ಉಪಮೆಗಳು ಗೂಢಾರ್ಥಗಳು ದ್ವಂದ್ವಾರ್ಥಗಳು(ದ್ವಂದ್ವಾರ್ಥ ಅಂದ್ರೆ ಅಶ್ಲೀಲ ಮಾತ್ರವೇ ಅಲ್ಲ), ಎರಡುಮೂರು ವಿಚಾರಗಳನ್ನು ಹೇಳಬಲ್ಲ ಒಂದೇ ಒಂದು ಸಾಲು, ಇನ್ಯಾವತ್ತೋ ರೆಲೆವೆಂಟ್ ಅನಿಸಬಲ್ಲ ಕಲ್ಪನೆಗಳು ಏನೇನೋ ತುಂಬಿಹೋಗಿರುತ್ತವೆ. ಅದಕ್ಕೊಂದು ಮೂಡ್ ಇರುತ್ತೆ.

ಒಬ್ಬೊಬ್ಬ ಓದುಗನಲ್ಲಿ ಒಂದೊಂದು ಭಾವ ಹುಟ್ಟಿಸಬಲ್ಲ ಶಕ್ತಿ ಕವಿತೆಗಳಿಗಿರುತ್ತದೆ. ನನಗೆ ರೊಮ್ಯಾಂಟಿಕ್ ಅನಿಸುವ ಗೀತೆಯೊಂದು ಇನ್ನೊಬ್ಬನಿಗೆ ವಿರಹಗೀತೆ ಅನಿಸಬಹುದು. ನನಗೆ ಲಾಲಿ ಹಾಡೆನಿಸುವ ಗೀತೆಯೊಂದು ಇನ್ಯಾರಿಗೋ ಜಾಲಿ ಗೀತೆ ಅನಿಸಬಹುದು. ಇನ್ನೊಬ್ರಿಗೆ ಶೋಕಗೀತೆ ಅನಿಸೋ ಗೀತೆಯಲ್ಲಿ ನನಗೇನೋ ತುಂಟತನ ಕಾಣಿಸಬಹುದು. ಸಭ್ಯಗೀತೆ ಅನಿಸುವ ಹಾಡೊಂದು ಸಾಲುಸಾಲಲ್ಲೂ ಡಬಲ್ ಮೀನಿಂಗ್ ತುಂಬ್ಕೊಂಡಿದೆಯಲ್ಲ ಅನಿಸಬಹುದು. ಗ್ರಹಿಕೆ ಮೂಡು ವಯಸ್ಸು ಸಂದರ್ಭ ಇವೆಲ್ಲದರ ಮೇಲೆ ಹಾಡೊಂದು ನಮ್ಮನ್ನು ತಲುಪೋ ಬಗೆ ಬದಲಾಗುತ್ತಾ ಹೋಗುತ್ತದೆ‌. ಅಷ್ಟಾಗಿಯೂ ಅಸಲಿಗೆ ಅದನ್ನು ಬರೆದ ಕವಿಯ ಯೋಚನೆ ನಾವು ಗ್ರಹಿಸಿದ್ದೆಲ್ಲಕ್ಕಿಂತ ಭಿನ್ನವಾಗಿದ್ದಿನ್ನೇನೋ ಇದ್ದರೂ ಇರಬಹುದು.

ಹಲವು ಬಾರಿ ಕವಿಗೆ ತನ್ನ ಗೀತೆ ತಾನಂದುಕೊಂಡ ಭಾವದಲ್ಲೇ ರೀಚ್ ಆಗಿದೆ ಅನ್ನೋ ಖುಷಿ ತೃಪ್ತಿ ಸಿಗುತ್ತದೆ. ಕೆಲವು ಬಾರಿ .. ಅರೆ ಬರೆಯುವಾಗ ನಾನೇ ಹೀಗೊಂದು ಗೂಡಾರ್ಥದ ಬಗ್ಗೆ ಯೋಚಿಸಿರಲಿಲ್ಲ. ಕೇಳುಗ ಇದಕ್ಕೆ ಇನ್ನೊಂದು ಆಯಾಮವನ್ನೇ ಕೊಟ್ಟುಬಿಟ್ಟನಲ್ಲ ಅಂತ ಅಚ್ಚರಿಯಾಗಬಹುದು. ಕೆಲವೊಮ್ಮೆ ತನಗೇ ಗೊತ್ತಿಲ್ಲದ ಅರ್ಥ ಹುಟ್ಟಿಸಿ ತನ್ನನ್ನು ಕೇಳುಗರು ಮೇಲೇರಿಸಿ ಕೂರಿಸಿದಾಗ, ಈ ಕ್ರೆಡಿಟ್ ಬಿಟ್ಟುಕೊಡಲಿಷ್ಟ ಪಡದ ಕರಪ್ಟ್ ಮನಸು.. ಹೌದೌದು ನಾನು ಹೀಗೆ ಎರಡರ್ಥ ಹುದುಗಿಸಿ‌ಈ ಸಾಲು ಬರೆದಿದ್ದೆ ಎಂದು ಧ್ವನಿಗೂಡಿಸುತ್ತದೆ. ಅದೇ ವಿವಾದಕ್ಕೋ ಅವಹೇಳನಕ್ಕೋ ಕಾರಣವಾದರೆ .. ಇಲ್ಲ ನಾನು ಬರೆದದ್ದು ಈ ಅರ್ಥದಲ್ಲಿ ಅಂತ ಸೇಫ್ಟಿ ಮೋಡ್ ಗೂ ಹೋಗುತ್ತದೆ. ಹಾಡು/ಕವಿತೆಗಳಿಗೆ ಈ ವ್ಯಾಖ್ಯಾನದ ಮೂಲಕ ಬಚಾವಾಗುವ ಇಮೇಜ್ ರೂಪಿಸಿಕೊಳ್ಳುವ ಅವಕಾಶವಿರುತ್ತದೆ‌. ಗದ್ಯಗಳಿಗೆ ಆ ಪ್ರಿವೆಲೇಜ್ ಇರೋದಿಲ್ಲ.

ಸಂಭ್ರಮ ಚಿತ್ರದಲ್ಲಿ ಹಂಸಲೇಖ … “ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ಎಳೆ ತಂದರೋ…” ಗೀತೆಯಲ್ಲಿ ” ಎಳೆ” ಪದವನ್ನು ಎರಡರ್ಥ ಬರುತ್ತದೆಂದೇ ಬಳಸಿದರೋ ಬರೆದ ಮೇಲೆ ಎರಡರ್ಥ ಕೇಳುಗರ ಗ್ರಹಿಕೆಗೆ ಬಂತೋ ಎಂಬ ಪ್ರಶ್ನೆಯಂತೆ ಇದು. ಹಂಸ ಲೇಖಾವ್ರು ಪ್ರೀತಿಯ ’ಎಳೆ’ಯ ಬಗ್ಗೆ ಬರೆದಿರಬಹುದು. ಅಥವಾ ಎಳೆದು ತಂದರೋ ಎಂದು ಕೇಳಿಯೂ ಬರೆದಿರಬಹುದು. ಅಥವಾ ಅವರಿಗಿರೋ ಪನ್ ಸೆನ್ಸ್ ಗೆ ಈ ಎರಡೂ ಅರ್ಥ ಬರಲಿ ಅಂತಲೇ ಎಳೆ ಎಂಬ ಪದ ಬಳಸಿರಬಹುದು. ಈ ಥರದ ಸಾಕಷ್ಟು ಉದಾಹರಣೆ ಸಿಗುತ್ತದೆ. ಸಾಹಿತ್ಯ ಗಮನಿಸಲು ಶುರು ಮಾಡಿದಾಗ ಇಂಥ ಖುಷಿ ಅನುಭೂತಿಗಳು ಸಿಗಲಾರಂಭಿಸುತ್ತವೆ. ರಿಸರ್ಚಿನಂಥ ಖುಷಿ

ಹಂಸಲೇಖರ … “ಈ ಹರಯದ ನರಕೊಳಲಲಿ ಇವೆ ಸರಿಗಮ ಹೊಳ್ಳೆಗಳು… ಈ ಮದನನ ಕಿರುಬೆರಳಲಿ ನವಿರೇಳದೆ ಗುಳ್ಳೆಗಳು..” ಈ ಸಾಲು ಕೇವಲ ಕಮರ್ಶಿಯಲ್ ಮ್ಯೂಸಿಕಲ್ ಸಾಂಗ್ ಆಗಿ ನಮ್ಮ ಕಿವಿ ತಲುಪಿದಾಗ ಗುನುಗುವ ಸಾಲಾಗುತ್ತದೆ ಅಷ್ಟೆ. ಅರೆ ಹರಯದ ನರಕೊಳಲು ಅಂದ್ರೆ ಏನು… ಮದನನ ಕಿರುಬೆರಳು ಅಂದ್ರೆ.. ? ಸಾಮಾನಿಗೆ ಇಷ್ಟು ಸಭ್ಯಶೃಂಗಾರರೂಪ ಕೊಟ್ಟು ಹೇಳಿರೋದಾ ಅನಿಸಿದಾಗ.. ಶೃಂಗಾರ ಅಡಗಿರೋ‌ ಸಾಲಾದರೂ ಜೋರಾಗಿ ಹೇಳೋಕೆ ಮನಸು ಹಿಂಜರಿಯುತ್ತದೆ.

ಸಾಹಿತ್ಯ ಅಷ್ಟಾಗಿ ಗಮನಿಸದ ವಯಸ್ಸಲ್ಲಿ… “ಮೈಯ್ಯಲ್ಲಿ ಏಳುತಿದೆ ಮನ್ಮಥ‌ನ ಅಂಬುಗಳು.. ಜುಮ್ ಜುಮ್ ಜುಮ್..” ಅನ್ನೋ ಸಾಲು ಸಂಕ್ರಾಂತಿ ಗೀತೆ ಎಂಬಂತೆ ಬಂದು ಹೋಗುತ್ತಿತ್ತು.

ಆದರೆ ಆನಂತರ ಸಾಹಿತ್ಯವಾಗಿ ಗಮನಿಸಿದಾಗ.‌ ಆಹಾ ರೋಮಾಂಚನವನ್ನು.. ಮೈರೋಮ ನಿಮಿರುವುದನ್ನು ಮನ್ಮಥನ ಬಾಣಕ್ಕೆ ಹೋಲಿಸಿದ್ದಾರಲ್ಲ ಅನಿಸಿ ನಿಜಕ್ಕೂ ಜುಮ್ ಅನಿಸಿತ್ತು. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸಿದರೆ.. ಮೈಯಲ್ಲಿ ಏಳುತಿದೆ ಮನ್ಮಥನ ಅಂಬು ಅಂದ್ರೆ.. ಒನ್ಸಗೇನ್ ಸಾಮಾನಿರಬಹುದಾ ಅನಿಸದಿರದು.

ಸದಾಶಿವಂಗೆ ಅದೇ ಗ್ಯಾನ ಅಂದ್ಕೋಬೇಡಿ..

ನೆನಪಿರಲಿ ಚಿತ್ರದ ಅಜಂತಾ ಎಲ್ಲೋರಾ ಗೀತೆಯಲ್ಲಿ ಬರುವ… “ಮಂದವಾಗಿ ಬಳುಕೋವಂಥ ನಾರಿ ಇವಳ
ಅಂದ ನೋಡಿ ನಿಂತಾಗ..ಚಂದ ನೋಡಿ ನಿಂತಾಗ..
ಯಾರೊ ನೀನು ಎಂದು ಕೇಳುತಾವೆ..
ಇವಳ ಪೊಗರಿನ ಹೃದಯಪಾಲಕಿಯರು..
ನಾಟ್ಯದಂತೆ ನಡೆಯುವಾಗ ಅತ್ತಲಾಡಿ ಇತ್ತಲಾಡಿ…”

ಈ ಸಾಲುಗಳು ತನ್ನ ರಿದಮಿಕ್ ಮ್ಯೂಸಿಕ್ ಹಾಗೂ ಸುಲಲಿತವಾಗಿ ಲಘುಗುರು ಇಟ್ಟು ಬರೆದಂಥ ಪದಗಳ‌ ಆಟದಿಂದ ಮಜವಾಗಿ ಹಾಡಿಸಿಕೊಂಡು ಬಿಡ್ತವೆ. ಆದರೆ ಯಾವತ್ತೋ ಆರಾಮಾಗಿ ಸಾಹಿತ್ಯ ಕೇಳ್ತಾ ಇದ್ದರೆ.. ಆಹಾ ..ಹಂಸಲೇಖರ ರಸಿಕಕಲ್ಪನೆಗಳಿಗೆ ಮಿತಿಯೇ ಇಲ್ಲವಾ ಅನಿಸಿಬಿಡುತ್ತದೆ.

ಯಾರೋ ನೀನು ಎಂದು ಕೇಳುತಾವೆ ಇವಳ “ಪೊಗರಿನ ಹೃದಯ ಪಾಲಕಿಯರು” ಎಂದು ಅವರು ರೆಫರ್ ಮಾಡ್ತಿರೋದು ಆ ಹೆಣ್ಣಿನ ಸ್ತನಗಳ ಬಗ್ಗೆ ಅಂತ ಅರ್ಥವಾದಾಗ ಮತ್ತೊಮ್ಮೆ ಈ ಸಾಂಗ್ ಕೊಡುವ ಅನುಭೂತಿಯೇ ವಿಭಿನ್ನ. “ನಾಟ್ಯದಂತೆ ನಡೆಯುವಾಗ ಅತ್ತಲಾಡಿ ಇತ್ತಲಾಡಿ” ಎಂದು ಮುಂದುವರಿಸಿ ಆ ಸಾಲಿಗೆ ಇನ್ನಷ್ಟು ರಸಿಕತೆ ತುಂಬುತ್ತಾರೆ ಹಂಸ್.

ಗಡಿಬಿಡಿಗಂಡ ಚಿತ್ರದ…. ಮುದ್ದಾಡೆಂದಿದೆ ಮಲ್ಲಿಗೆ ಹೂ ಗೀತೆಯಲ್ಲಿ……. ನಾಯಕಿ”ಎದೆಯ ಸೆರಗ ಮೋಡದಲ್ಲಿ ನೀನೇ ಚಂದ್ರನೀಗ….” ಅಂದರೆ…. ನಾಯಕ” ಹೃದಯ ಮೇರುಗಿರಿಗಳಲ್ಲಿ… ಕರಗಬಹುದೆ ಈಗ” ಅಂತಾನೆ. “ಮುಡಿಯಲಿ ಮಲ್ಲಿಗೆಯ ಮುಡಿದವಳ ಮೊದಲುಮುಡಿಯಬೇಕು.. ಮಡದಿಗೆ ಪ್ರತಿದಿನವೂ ಮೊದಲಿರುಳಿರಬೇಕು…” ಅಂತ ನಾಯಕಿ ತನ್ನನ್ನು ಮೊದಲು ರಮಿಸು ಅಂತ ಒತ್ತಾಯಿಸುತ್ತಿದ್ದರೆ………… ನಾಯಕ ..” ಮನಸಿನ ಮಧುವಿನ ಮಹಲೊಳಗೆ … ಮದನ ಮಣಿಯಬೇಕು… ಸುರತಿಯ ಪರಮಾನ್ನ ಹಿತಮಿತವಿರಬೇಕು” ಅಂತ ಆಕೆಯ ಮೇಲಿರೋ ಮೋಹದ ಜೊತೆಜೊತೆಗೆ ಪ್ರತಿದಿನ ಬೇಡ ಫ್ರೀಡಮ್ಮು ವೀಕ್ಲಿ ಒನ್ಸು ಜುಮ್ ಜುಮ್ಮು” ಅಂತ ದೂರ ಹೋಗೋ ಪ್ರಯತ್ನ ಕೂಡ ಮಾಡುತ್ತಾನೆ.

ಇದು ಕೂಡ ಹೆಣ್ಣು ತನ್ನ ಗಂಡನ್ನು ಸೆಕ್ಸಿಗಾಗಿ ಕರೆಯುವ ಗೀತೆಯೇ ಆದರೂ… ತನ್ನ ಕ್ಲಾಸಿಕಲ್ ಟ್ಯೂನ್ ನಿಂದ ಚೆಂದದ ಪದಜೋಡಣೆಯಿಂದ… ಈ ಹಾಡು ಕೊಂಚವೂ ಅಶ್ಲೀಲ ಅನಿಸೋದೇ ಇಲ್ಲ. ಅಶ್ಲೀಲ ಅನಿಸಿದರೂ ಓಕೆ ಎಂದು ಬರೆದಾಗ.. ರಾತ್ರಿ ಆಯ್ತು ಮಲಗೋಣ ಇಂದು ನಮ್ಮ ಸೋಭಾನ… ಅಥವಾ ಕಾಯಿ ಕಾಯಿ ನುಗ್ಗೇಕಾಯಿ ಮಹಿಮೆಗೆ ರಾತ್ರಿಯೆಲ್ಲ ನಿದ್ದೆಯಿಲ್ಲ ಕಣ್ಣಿಗೆ.. ನೆಲ್ಲಿಕಾಯಿ ಆಸೆಗೆ ಬಿಟ್ಟು ಬಂದೆ ಹಾಸಿಗೆ ಅಂತ ಸ್ವಲ್ಪ ನೇರವಾಗಿಬಿಡುತ್ತಾರೆ ಹಂಸಲೇಖ.

ಇವೆಲ್ಲ ಸಾಹಿತ್ಯವನ್ನು ಗಮನಿಸುವಾಗ ಅರ್ಥವಾಗುತ್ತಾ ಹೋಗುವ ಅಪಾರಾರ್ಥಗಳು. ತೂಗುಮಂಚದ “ಹಮ್ಮನುಸಿರಬಿಟ್ಟಳು ಎಂಬುದು ಅಮ್ಮನುಸಿರ ಬಿಟ್ಟಳು ಎಂದಾಗಿದ್ದು ಅದನ್ನು ಲಾಲಿಹಾಡೆಂದು ತಪ್ಪು ತಿಳಿದುದರ ಪರಿಣಾಮ ಎಂದು ಹಿಂದೊಮ್ಮೆ ಬರೆದಿದ್ದು ನಿಮಗೆ ನೆನಪಿರಬಹುದು.

ಇನ್ನು ಡಬಲ್ ಮೀನಿಂಗೇ ಹುಡುಕಬೇಕು ಅಂದರೆ ಪ್ರತಿ ಗೀತೆಯೂ ಬೇರೆಯೇ ಅರ್ಥ ಕೊಡಬಲ್ಲ ಕೆಪಾಸಿಟಿ ಹೊಂದಿರುತ್ತದೆ. ಅದು ನಾವು ಆ ಗೀತೆಯನ್ನು ಬಿಂಬಿಸೋಕೆ ಹೊರಟಿರುವ ರೀತಿಯ ಮೇಲೆ ಡಿಪೆಂಡು. ಎಂಥ ಸಭ್ಯಸಾಲನ್ನೂ.. ಕವಿಗೇ ಶಾಕ್ ಆಗುವ ಹಾಗೆ ಡಬಲ್ ಮೀನಿಂಗ್ ಆಗಿಸಬಹುದು. ಆ ಉದಾಹರಣೆ ಈ ಬರಹದಲ್ಲಿ ಬೇಡ. ಮುಂದೆಂದಾದರೂ ಬರೆಯೋಣ.

ಇದೆಲ್ಲ ಬರೆಯೋಕೆ ಹೊರಟಿದ್ದಕ್ಕೆ ಪ್ರೇರಣೆ ಅಣ್ಣಯ್ಯ ಚಿತ್ರದ ಒಂದು ಸಾಂಗ್. ಅಣ್ಣಯ್ಯ ಬಂದು ಹೋಗಿ ಇಪ್ಪತ್ತೈದು ವರ್ಷಕ್ಕೂ ಹೆಚ್ಚು ಟೈಮಾಯ್ತು. ರವಿಚಂದ್ರನ್ ಸಿನಿಮಾಗಳು ಸಾಫ್ಟ್ ಪೋರ್ನ್ ಸಿನಿಮಾಗಳಂತೆ ಭಾಸವಾಗುತ್ತಿದ್ದ ನಮ್ಮ ಏಜಿನ ದಿನಗಳವು. ರವಿಚಂದ್ರನ್ ಸಿನಿಮಾಗಳನ್ನು ನೋಡೋದು ಕಾಶೀನಾಥ್ ಸಿನಿಮಾ ನೋಡೋಷ್ಟೇ ಪಾಪ ಎಂಬಷ್ಟು ಮಡಿವಂತಿಕೆ ದಿನಗಳವು. ಆದರೆ ನಮ್ಮ ಪಾಲಿಗೆ ಆಗ ರವಿಮಾಮಾ ಲವ್ ರೊಮ್ಯಾನ್ಸ್ ಶೃಂಗಾರಗಳಿಗೆ ಗಾಡ್. ಆತ ಹೀರೋಯಿನ್ ಎದೆಯ ಮೇಲೆ ಮುಖವಿಟ್ಟು ಒರಗಿದರೆ ನಮಗೆ ರಸಸ್ಫೋಟ ಆಗುತ್ತಿತ್ತು. ಕುತ್ತಿಗೆಗೊಂದು ಮುತ್ತಿಟ್ಟು ತುದಿಬೆರಳುಗಳನ್ನು ಕತ್ತು ಮತ್ತು ಎದೆಯ ನಡುವೆ ಒಮ್ಮೆ ಆಡಿಸಿದ ಅಂದರೆ ಕೊಳಲು ಲಂಬಕೋನವಾಗುತ್ತಿತ್ತು.

ಆತ ಸೆರಗು ಸರಿಸಿ ಹೊಕ್ಕಳಿಗೊಮ್ಮೆ ಮುತ್ತಿಟ್ಟರೆ ಮುಗಿದೇಹೋಯ್ತು ಊರಸ್ನಾಯುಗಳು ಬಿಗಿಯಾಗಿ ಹೋಗುತ್ತಿದ್ದವು. ಅಂದು ಹಂಸಲೇಖ ಗೀತೆಗಳು ರವಿಚಂದ್ರನ್ ನ ಪಿಚ್ಚರೈಸೇಷನ್ನಲ್ಲಿ ಕಳೆದುಹೋಗಿಬಿಡುತ್ತಿದ್ದವು. ಅಥವಾ ಸಾಹಿತ್ಯ ಸಂಗೀತ ಎಲ್ಲದರಾಚೆಗೆ ನಮಗೆ ಆ ರೊಮ್ಯಾನ್ಸೇ ಹೆಚ್ಚು ಆಕರ್ಷಿಸಿಬಿಡುತ್ತಿತ್ತು. ಕ್ಯಾಸೆಟಲ್ಲಿ ಹಾಡುಗಳನ್ನು ಕೇಳಿ ಸಿನಿಮಾಗೆ ಹೋದಾಗ ಗೀತೆಗಳು ಆಡಿಯೋಗಿಂತ ವಿಡಿಯೋವಾಗಿ ತೃಪ್ತಿಕೊಟ್ಟು ಕಳಿಸುತ್ತಿದ್ದವು. ಆದರೆ ಆನಂತರ ಸಾಹಿತ್ಯ ಗಮನಿಸುವ ಮೆಚುರಿಟಿ, ಸಾಹಿತ್ಯದಲ್ಲಿರುವ ಇಮ್ಯಾಜಿನೇಷನ್ ಪವರ್ ಆಸ್ವಾಧಿಸುವ ಮನಸ್ಥಿತಿ ಎಲ್ಲ ಬಂದಾಗ.. ರವಿ ಚಂದ್ರನ್ ಹಂಸಲೇಖರ ಗೀತೆಗೆ ಹತ್ತು ಪರ್ಸೆಂಟಷ್ಟೂ ನ್ಯಾಯ ಸಲ್ಲಿಸಲು ಸಾಧ್ಯವಾಗಿಲ್ಲ ಅನಿಸಿಬಿಟ್ಟಿದೆ. ಹಾಗಂತ ಹಂಸಲೇಖರ ಸಾಹಿತ್ಯಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಿತ್ತಾ? ಖಂಡಿತ ಇಲ್ಲ. ಯಥಾವತ್ ನ್ಯಾಯ ಸಲ್ಲಿಸಲು ಹೋದದ್ದೇ ಆದರೆ ಆ ಸಾಂಗ್ ನ ಪಿಚ್ಚರೈಸೇಷನ್ ಕಾಮಸೂತ್ರವಾಗಿ ಹೋಗುವಷ್ಟು ಹಾಟ್ ಆಗಿಬಿಡುತ್ತಿತ್ತು.

ಆ ಗೀತೆಗಳು ಪಿಚ್ಚರೈಸ್ ಆಗದೆಯೇ ಇಮ್ಯಾಜಿನೇಷನ್ನಲ್ಲೇ ಉಳಿದುಬಿಟ್ಟಿದ್ದರೆ ಎಷ್ಟು ಚೆಂದವಿತ್ತು ಅನಿಸಿದ್ದೂ ಇದೆ. ಸತ್ಯ ಏನಂದರೆ ರವಿಚಂದ್ರನ್ ಸಲ್ಲಿಸಿದಷ್ಟು ನ್ಯಾಯವನ್ನು ಹಂಸಲೇಖರ ಗೀತೆಗೆ ಇನ್ಯಾರೂ ಸಲ್ಲಿಸಲು ಸಾಧ್ಯವಾಗಲಿಲ್ಲ. ರೊಮ್ಯಾಂಟಿಕ್ ಗೀತೆಗಳಲ್ಲಿ ಮಾತ್ರವಲ್ಲ… ಬೇರೆ ಗಂಭೀರ/ಸ್ಯಾಡ್/ಫಿಲಾಸಫಿಕಲ್/ಕ್ರಾಂತಿ ಯಾವ ಗೀತೆಗಳಿಗೂ ವಿಶ್ಯುಯಲಿ ನ್ಯಾಯ ಸಿಕ್ಕಿಲ್ಲ. ಇದು ಹಂಸಲೇಖ ಮಾತ್ರ ಅಲ್ಲ.. ಬಹುತೇಕ ಸಾಹಿತಿಗಳ ಮನಸಿನ ಮೂಲೆಯ ಅಸಮಾಧಾನ ಹಾಗೂ ನೋಡುಗರ ಅಸಂತೃಪ್ತಿ. ಮೊನ್ನೆ ನಾನು ಶೇರ್ ಮಾಡಿಕೊಂಡ ” ಸುಮ್ಮನೆ ಹೀಗೆ ನಿನ್ನನೇ …:” ಎಂಬ ಅಮರ್ ಚಿತ್ರದ ಗೀತೆಯಾದರೂ ಅಷ್ಟೆ. ಅಷ್ಟು ಗಾಢ ಸಾಲುಗಳ ಗೀತೆಗೆ ಅಂಬರೀಶ್ ಪುತ್ರನಿಂದ ಕಲ್ಲುಬಂಡೆಯಂಥ ಅಭಿನಯ. ಇಡೀ ಹಾಡನ್ನು ಲಾಂಗ್ ಶಾಟ್ ಗಳಲ್ಲಿ ತೆಗೆದು ಪ್ರಕೃತಿ ಸೌಂದರ್ಯ ತೋರಿಸಿ ಮುಗಿಸಿದ್ದಾರೆ ನಾಗಶೇಖರ್. ಸಾಹಿತ್ಯಕ್ಕೆ ಸಂಗೀತ ಸಲ್ಲಿಸುವಷ್ಟು ನ್ಯಾಯವನ್ನು ದೃಶ್ಯರೂಪ ಸಲ್ಲಿಸಲು ಸಾಧ್ಯವಿಲ್ಲ. ಬೆಟರ್ ನಾವು ಹಾಡುಗಳನ್ನು ನಮ್ಮ ಇಮ್ಯಾಜಿನೇಷನ್ ಗೆ ತಕ್ಕಂತೆ ಕಣ್ಮುಚ್ಚಿಕೊಂಡು ಮನಸ್ಸಿನೊಳಗೇ ಚಿತ್ರಿಸಿಕೊಂಡುಬಿಡುವುದು.

ಬ್ಯಾಕ್ ಟು ಅಣ್ಣಯ್ಯ ಚಿತ್ರದ ಆ ಸಾಂಗ್ : ಇಷ್ಟು ವರ್ಷದಲ್ಲಿ ಈ ಹಾಡನ್ನು ಕಮ್ಮಿ ಅಂದ್ರೂ ಒಂದು ಸಾವಿರ ಸಲ ಕೇಳಿರುತ್ತೇನೆ. ಹಿಟ್ ಆಲ್ಪಮ್ ಆಗಿರುವ ಅದರ ಕಡಿಮೆ ಪಾಪ್ಯುಲರ್ ಗೀತೆ ಅದು.

“ಅ ಹಾಗೆ ಪ್ರೇಮಿ ಓಹೋ.. ಒ ಹೋಗೆ ಪ್ರೇಮಿ ಆಹಾ…”
ಈ ಹಾಡಿನ ಚಿತ್ರಣ ನಿಮ್ಮನ್ನು ಸಾಹಿತ್ಯ ಗಮನಿಸದಷ್ಟು ಸೆಳೆದುಕೊಳ್ಳುತ್ತದೆ ಕಾರಣ. ರವಿಚಂದ್ರನ್ ಮಧುಬಾಲಾ ಕೆಮಿಸ್ಟ್ರಿ! ಆದರೆ ಅದ್ಯಾಕೋ ಗೀತೆ ತುಂಬ ಅಟ್ರಾಕ್ಟಿವ್ ಅನಿಸಿರಲಿಲ್ಲ. ಕಮಾನು ಡಾರ್ಲಿಂಗ್, ಅಣ್ಣಯ್ಯ ಅಣ್ಣಯ್ಯ ಬಾರೋ, ರಾಗಿ ಹೊಲದಾಗೆ ಖಾಲಿ ಗುಡಿಸಲು ಈ ಗೀತೆಗಳು ಕೊಟ್ಟ ಕಿಕ್ …. ಈ ಅ ಹಾಗೆ ಪ್ರೇಮಿ ಓಹೋ… ಒ ಹೋಗೆ ಪ್ರೇಮಿ ಆಹಾ ಗೀತೆ ನೀಡಿರಲಿಲ್ಲ.

ಹೌದು ನಾನು ಈ ಹಾಡನ್ನು ಕೇಳಿಸಿಕೊಳ್ತಾ ಇದ್ದದ್ದೇ ಹೀಗೆ. ಮೊನ್ನೆಯ ತನಕವೂ…ಆದರೆ ಮೊನ್ನೆ ಯಾಕೋ ಮತ್ತೊಮ್ಮೆ ಕೇಳಿಸಿಕೊಂಡಾಗ.. ಅರೆ ಇಪ್ಪತ್ತೈದು ವರ್ಷ ತಪ್ಪಾಗಿ ತಿಳಿದುಕೊಂಡು ತಪ್ಪಾಗೇ ಹಾಡಿಕೊಂಡೆನಲ್ಲ ಅಂತ ಮೈತುಂಬ ಗಿಲ್ಟು

ಆ ಸಾಂಗ್ ಇರೋದು ಹೀಗೆ…

”ಆಹಾ’ಗೆ ಪ್ರೇಮಿ “ಓಹೋ”
” ಓಹೋ”ಗೆ ಪ್ರೇಮಿ ” ಆಹಾ”

ನನ್ನ ಹಾಗೆ ಅದೆಷ್ಟು ಜನ ಯಾಮಾರಿದ್ದೀರೋ ಗೊತ್ತಿಲ್ಲ. ಅಥವಾ ನಾನೊಬ್ನೇ ಹೀಗೆ ತಪ್ಪಾಗಿ ಕೇಳಿಸಿಕೊಂಡವ್ನೋ ಗೊತ್ತಿಲ್ಲ

ಈ ಗೀತೆಯ ವಿಶೇಷ ಏನಂದ್ರೆ ಹಂಸಲೇಖ. ಆಹಾ ಮತ್ತು ಓಹೋ ಎಂಬ ಎರಡು ಪದಗಳನ್ನೇ ಪ್ರೇಮಿಗಳನ್ನಾಗಿಸಿದ್ದಾರೆ

ಆಹಾಗೆ ಓಹೋ ಪ್ರೇಮಿ… ಓಹೋಗೆ ಆಹಾ ಪ್ರೇಮಿ!
ಅದು ಇಬ್ಬರು ಪ್ರ‍ೇಮಿಗಳ ಹೆಸರು!

ಈಗ ಈ ಹಾಡೊಮ್ಮೆ ಕೇಳಿನೋಡಿ…
ಅದು ಸೌಂಡಾಗೋದೇ ಬೇರೆ ಥರ!

ಅದ್ಯಾಕೆ ಆಹಾ ಓಹೋ ಎಂಬ ಪದಗಳು ಇಲ್ಲಿ ಪಾತ್ರಗಳಾದವು ಅಂತ ಸಿನಿಮಾ ತೆರೆದು ನೋಡಿದೆ. ಈ ಹಾಡು ಆರಂಭವಾಗುವ ಮುನ್ನ ಅಣ್ಣಯ್ಯ ಯಾವುದೋ ಫೈಟಿಂಗಲ್ಲಿ ಒದೆ ತಿಂದು ಬೆನ್ನಿಗೆ ಕಾಶಿ ಕೈಲಿ ಬಿಸಿ ಮಸಾಜ್ ಮಾಡಿಸಿಕೊಳ್ತಾ ಇರ್ತಾನೆ. ಅವನ ಇಮ್ಯಾಜಿನೇಷನಲ್ಲಿ ನಾಯಕಿ ಬಂದು ಕಾಶಿಯ ಬದಲು ಮಸಾಜ್ ಮಾಡ್ತಿರೋ ಹಾಗೆ ಒಂದು ಟ್ವಿಸ್ಟು.. ಇಮ್ಯಾಜಿನೇಷನಲ್ಲೇ ಅವಳೊಂದಿಗೆ ಮಾತಾಡ್ತಾ.. ಆಕೆ ಬಿಸಿ ಶಾಖ ಕೊಟ್ಟಾಗ ಒಮ್ಮೆ ನಾಯಕ ಆಹಾ ಅಂತಾನೆ.. ಇನ್ನೊಮ್ಮೆ ಓಹೋ ಎಂದು ಬಿಗಿಯುಸಿರು ಬಿಡುತ್ತಾನೆ. ಆಗ ಹುಟ್ಟುವ ಹಾಡಿದು. ಡ್ರೀಮ್ ಸಾಂಗ್ ನಲ್ಲಿ ಟೆಕ್ಸ್ಟ್ ಕೂಡ ಬರುತ್ತದೆ ಆಹಾ ಓಹೋ ಅಂತ!

ಸ್ಕ್ರಿಪ್ಟ್ ಜೊತೆ ದೃಶ್ಯರಚನೆ ಜೊತೆ ಗೀತ ಸಾಹಿತಿ ಕನೆಕ್ಟ್ ಆದಾಗ ಇಂಥ ಅದ್ಭುತಗಳು, ಮಜಗಳು, ಕ್ರಿಯೇಟಿವ್ ಐಡಿಯಾಗಳು ಹುಟ್ಟುತ್ತವೆ. ಹಂಸಲೇಖ ಎಲ್ಲೋ ಕೂತು ಹಾಡುಬರೆದುಕೊಟ್ಟು ಸಂಗೀತ ಮಾಡಿಕೊಡ್ತಿರಲಿಲ್ಲ. ಸಿನಿಮಾದೊಂದಿಗೆ ಪ್ರೀ ಪ್ರೊಡಕ್ಷನ್ನಿಂದ ರೀರೆಕಾರ್ಡಿನ ತನಕ ಜರ್ನಿ ಮಾಡ್ತಿದ್ರು ಅನ್ನೋದಕ್ಕೆ ಇದೊಂದು ಸಾಕ್ಷಿ. ಅವರಿಬ್ಬರ ಕಾಂಬಿನೇಷನ್ ಯಾಕೆ ಆ ಪರಿ ಕ್ಲಿಕ್ ಆಗುತ್ತಿತ್ತು ಅನ್ನೋದಕ್ಕೂ ಇದೊಂದು ಪುರಾವೆ. ( ಬರಹ : ನವೀನ್ ಸಾಗರ್ ; ಫೇಸ್ ಬುಕ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಉಸಿರು

Published

on

ಮೂಲ : ಜಲಾಲುದ್ದೀನ್ ರೂಮಿ, ಕನ್ನಡಕ್ಕೆ : ಡಾ.ಎಚ್.ಎಸ್.ಅನುಪಮಾ

ನಾ ಕ್ರೈಸ್ತನಲ್ಲ, ಯಹೂದಿ, ಮುಸಲ್ಮಾನ, ಹಿಂದುವೂ ಅಲ್ಲ ಬೌದ್ಧ, ಸೂಫಿ, ಝೆನ್ ಧರ್ಮದವನೂ ಅಲ್ಲ

ಪಂಥ ಪರಂಪರೆಯವನಲ್ಲ, ಮೂಡಲದವನಲ್ಲ ಪಡುವಣದವನಲ್ಲ, ಕಡಲೊಳಗಿನಿಂದೆದ್ದು ಬಂದವನಲ್ಲ

ನೆಲದಿಂದುದ್ಭವಿಸಲಿಲ್ಲ, ಸಹಜ ಸೃಷ್ಟಿಯಲ್ಲ, ದೈವಿಕವಲ್ಲ ಪಂಚಭೂತಗಳಿಂದಾದವನಲ್ಲ, ನಾ ಎಂಬುದೇ ಇಲ್ಲ

ಇಹದಲೂ ಪರದಲ್ಲೂ ನನ್ನ ಕುರುಹಿಲ್ಲ ಆಡಂ ಈವರ ವಂಶದ ಕುಡಿಯಲ್ಲ

ಯಾವ ವಂಶಾವಳಿಯೂ ನನಗಿಲ್ಲ, ನೆಲೆಯಿರದವ ಕಾಯವಲ್ಲ, ಆತ್ಮವೂ ಅಲ್ಲ, ನಿಶ್ಲೇಷದ ಶೇಷ

ನಾ ಪ್ರೇಮಿಯವ, ಲೋಕವೆರೆಡನೊಂದೇ ಆಗಿ ಕಂಡವ ಕರೆವುದು ಪ್ರೇಮ ನನ್ನ, ಅರಿತುಕೊಳುವುದು ತನ್ನ ತಾ..

ಮೊದಲ, ಕೊನೆಯ, ಹೊರ, ಒಳ
ಎಲ್ಲವೂ ಪ್ರೇಮ, ಪ್ರೇಮ, ಬರೀ ಪ್ರೇಮ
ಅದು ಪ್ರಾಣ, ಅದೇ ಉಸಿರು.

ಉಸಿರಾಡು ಮನುಜ.

(ಈ ಕವಿತೆಯನ್ನು ಲಡಾಯಿ ಪ್ರಕಾಶನ ಗದಗ ಇವರು ಪ್ರಕಟಿಸಿರುವ ‘ಉರಿಯ ಕುಡಿಯ ನಟ್ಟ ನಡುವೆ‘ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ಜಲಾಲುದ್ದೀನ್ ರೂಮಿಯ ಕವಿತೆಗಳನ್ನು ಕನ್ನಡಕ್ಕೆ ಡಾ.ಎಚ್.ಎಸ್. ಅನುಪಮ ಅವರು ಅನುವಾದಿಸಿರುವ ಕೃತಿ ಇದಾಗಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending