Connect with us

ಭಾವ ಭೈರಾಗಿ

ಕಥೆ | ಕಣ್ಣೀರು

Published

on

ಡಾ.ಶಿವಕುಮಾರ್ ಕಂಪ್ಲಿ
  • ತೆಲುಗು ಮೂಲ:ಶ್ರೀನಿವಾಸ್ ದರೆಗೋನಿ, ಕನ್ನಡಕ್ಕೆ: ಡಾ.ಶಿವಕುಮಾರ್ ಕಂಪ್ಲಿ

ಅದು ನಗರದಿಂದ ದೂರವಿದ್ದ ಇಂಜಿನಿಯರಿಂಗ್ ಕಾಲೇಜು. ಅದರ ಪಕ್ಕದಲ್ಲೇ ಹೈವೇ ಡಾಬ.ಎಂದಿನಂತೆಯೇ ವಿದ್ಯಾರ್ಥಿಗಳ ಗಿಜಿ ಗಿಜಿ ಎನಿಸುವ ಕೇಕೆ ಕೋಲಾಹಲಗಳಿಂದ ತುಂಬಿಕೊಂಡಿತ್ತು.ಸುಜಿತ್ ಮತ್ತು ಆತನ ನಾಲ್ಕು ಜನ ಸ್ನೇಹಿತರು ಡಾಬದ ಒಂದು ಮೂಲೆಯಲ್ಲಿ ಕೂತುಕೊಂಡಿದ್ದಾರೆ.

ಅವರ ಭವಿಷ್ಯತ್ತಿನಂತೆಯೇ… ಬಾಟಲುಗಳು ಖಾಲಿಯಾಗುತ್ತಲಿವೆ.ಬೆರಳನಡುವೆ ಸಿಲುಕಿಕೊಂಡ ಸಿಗರೇಟುಗಳು ಹೊಗೆಗಳನ್ನು ಕಕ್ಕುತ್ತಾ ಬೂದಿಯಾಗುತ್ತಿವೆ.
“ಸುಜು… ಈ ಟ್ರೀಟ್ ಗಳೊಳಗೆ ಮಜವೇ ಹೋಗಿದೆ ಕಣೋ… ..ದಿನಾ… ಕಾಲೇಜಿಗೆ ಬಂದೊಡನೆ ಡಾಬದೊಳಗೆ ಕುಳಿತು ಗುಂಡು ಹಾಕಿ ಮನೆಗೆ ಹೋಗುವುದು … ಮಾಮೂಲಿ ತಾನೇ..! ಮಗಾ.. ಏನೋ ಹೊಸತು ಬೇಕೆಂಬಂತೆ ಮನಸ್ಸು ತಿವಿಯುತ್ತಿದೆ ಅಲ್ಲವೇ? ” ಅಂದನು ರೋಷನ್. “ಮತ್ತೇನೋ… ಹೊಸತು? ಏನ್ ಮಾಡೋಣ?” ಬಾಟಲು ಕೆಳಗಿಡುತ್ತ ಸುಜಿತ್ ಕೇಳಿದ.

“ ನನ್ನ ಹತ್ರ ಕಿಕ್ ನೀಡೋ ಐಡಿಯಾ ಇದೆ.ಕೇಳ್ತೀನಿ ಅಂದ್ರೆ ಹೇಳ್ತೀನಪ್ಪಾ”. ಆಸಕ್ತಿ ಹುಟ್ಟಿಸುವಂತೆ ಮುಂದಕ್ಕೆ ಬಾಗುತ್ತಾ ಹೇಳಿದ ರೋಷನ್. “ಕಿಕ್ ಸಂಗತಿನಾ!? ಮೊದಲು ಹೇಳು.. …ನಾವು ಸ್ವಲ್ಪ ನೋಡೋಣ” ಅಂದ ಸುಜಿತ್.

“ನೋಡ್ರೋ..ಇಲ್ಲಿಂದ ನಾವು ಐದೂ ಜನ ಬೈಕ್ ರೈಡ್ ಮಾಡೋಣ, ಸಿಟಿಗೆ ಹತ್ತಿರದ ರಿಂಗ್ ರೋಡ್ ಕೆಫೆ ಸೇರಬೇಕು ! ಯಾರು ಲಾಸ್ಟೋ.. ಅವನೇ ಲೂಜರ್!.ನಾಳೆಯ ಟ್ರೀಟ್ ಆತನದೇ!! ..ಹಾ..ಸರಿನಾ!?” ಅಂತ ರೋಷನ್ ಎಲ್ಲರ ಮುಖವನ್ನ ನೋಡಿದ.

“ ನಾವು ಈಗಲೇ ಸಖತ್ ಡ್ರಿಂಕ್ಸ ಮಾಡಿದ್ದೇವೆ …! ಇಂತಹ ಪರಿಸ್ಥಿತಿಯಲ್ಲಿ ಬೈಕ್ ರೇಸ್ ಅಂದ್ರೆ ಅಪಾಯಕಾರಿ ಕಣೋ ಮಾಮ!” ಅಂದನು ಖಾದರ್.

“ಅರ್ರೇ..ಖಾದರ ಮಾಮಾ! ನೀನು ಸುಮ್ಮನಿರಪ್ಪಾ. ನನಗೆ ಹೊಸ ಹೊಸ ಕಿಕ್ ಬೇಕು ಅಷ್ಟೇ…ಎಲ್ಲರು ಗಾಡಿ ತಗೀರೋ..!!” ಅಂತ ಉತ್ಸಾಹದಿಂದ ಎದ್ದ ಸುಜಿತ್.
* * *
ಸುಜಿತ್ ಬೈಕ್ ಗೊಯ್ ಗುಟ್ಟುತ್ತ ನುಗ್ಗಿಹೋಯ್ತು.
ಕೈ ಯೊಳಗಿನ ಇಂಪೋರ್ಟೆಡ್ ವಾಚಿನ ಡಿಜಿಟಲ್ ಅಂಕೆಗಿಂತಲೂ ವೇಗವಾಗಿ…
ಗುಂಡಿಗೆಯ ಲಯಕ್ಕಿಂತಲೂ ವೇಗವಾಗಿ ಅದು ಓಡತೊಡಗಿತು…
ಧೋ..ಗುಟ್ಟಿ ಸುರಿವ ಮಳೆಹನಿಗಳ ಚಿಟ ಪಟ ಸದ್ದಾಗತೊಡಗಿತು. ಬೈಕ್ ಇನ್ನಷ್ಟೂ ಜೋರಾಯಿತು.
ಎಣ್ಣೆ ಏರಿಸಿದಮತ್ತು ಅವರ ಬುದ್ದಿಯನ್ನ ಬಾಚಿಕೊಂಡಿತು. ಹೈವೇ ಮೇಲೆ ಭಾರವಾಗಿ ಹೋಗುತ್ತಿದ್ದ ಒಂದೊಂದೂ ವಾಹನವನ್ನೂ … ಓವರ್ ಟೇಕ್ ಮಾಡುತ್ತ… ಹನಿಗಳ ಮಧ್ಯೆ!!! ರಣರಂಗದಲ್ಲಿ ನುಗ್ಗಿ ಖಡ್ಗ ಪ್ರಹಾರ ಮಾಡುತ್ತಿರುವವನಂತೆ ರಸ್ತೆಯಲ್ಲಿ ನುಗ್ಗುತ್ತಿದ್ದ ಸುಜಿತ್.
ದೂರದಲ್ಲಿ ಮಹಿಳೆಯೊಬ್ಬಳು ರಸ್ತೆ ದಾಟುತ್ತಿದ್ದಳು. ಅಷ್ಟರೊಳಗೇ.. ಮಳೆ ಹನಿಯೊಂದು ಕಣ್ಣಿಗೆ ಟಪಕ್ಕನೇ.. ಬಿತ್ತು. ಕಣ್ಣು ರೆಪ್ಪೆ ಪಟ್ಟನೇ ಮುಚ್ಚಿಕೊಂಡಿತು. ಆ… ಒಂದೇ ಕ್ಷಣ!!! ಮುಗುಚಿ ಅಷ್ಟು ದೂರ ಬಿದ್ದ! ಚೇತರಿಸಿಕೊಂಡು ಕಣ್ಣು ಬಿಟ್ಟ !. ಆಗಲೇ ಆತನ ಊಹೆಗೂ ಮೀರಿದ ಅಪಘಾತವಾಗಿಬಿಟ್ಟಿತ್ತು!
***
ವೇಗವಾಗಿ ನುಗ್ಗಿದ ಬೈಕ್ ಆ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮಕ್ಕೆ ಆಕೆ ಹಾಗೇ.. ರಸ್ತೆ ಪಕ್ಕಕ್ಕೆ ಹೊರಳಿ ಬಿದ್ದಳು!!! ರಸ್ತೆ ಅಂಚಿನ ಕಲ್ಲಿಗೆ ಆಕೆಯ ತಲೆ ಬಲವಾಗಿ ಅಪ್ಪಳಿಸಿತು!
ಮುಂದೇನಾಯಿತೋ… ಅರ್ಥವಾಗಲಿಲ್ಲ…?
ಬೈಕ್ ನಿಯಂತ್ರಿಸಲು ಪ್ರಯತ್ನಿಸಿದ್ದೂ..
ತಾನೂ ಬೈಕ್ ನಿಂದ ನೂರಡಿ ದೂರದ ಪೊದೆಯೊಳಗೆ ಎಸೆಯಲ್ಪಟ್ಟಿದ್ದು….
ಆ ಧೋ..ಮಳೆಯೊಳಗೆ ಆತನನ್ನ ಯಾರೂ ನೋಡಲಿಲ್ಲ.
ಮೈ ಕೈಗಳು ಕೆತ್ತಿ ಹೋಗಿ ಭುಜಗಳ ಚರ್ಮ ಸೀಳಿಕೊಂಡು,ನೋವು ನೂರ್ಮಡಿಸುತಿತ್ತು! ಕುಡಿದ ಮತ್ತು ಇಳಿದೇ ಬಿಟ್ಟಿತು.!

ರಸ್ತೆ ಬದಿಯಲ್ಲಿ ರಕ್ತದ ಮಡುವಿನೊಳಗೆ ಆ ಮಹಿಳೆಯ ಜೀವ ಕೊನೆಯುಸಿರೊಳಗೆ ಹೊಯ್ದಾಡುತ್ತಿದೆ. ಎಲ್ಲಿಂದಲೋ ಬಂದ.. ಒಂದು ನಾಲ್ಕೈದು ಜನ ನಿಂತರು.

ಅನತಿದೂರದಲ್ಲೇ… ಶಿಲೆಯಂತೆ ಕುಳಿತ ಸುಜಿತ್.
ಅಷ್ಟರೊಳಗೆ ಇನ್ನೂ ಹತ್ತಾರು ಮಂದಿ ಸೇರಿಕೊಂಡರು.
ಮೆಲ್ಲಗೆ ಕಾಲೆಳೆಯುತ್ತ ಹೋಗಿ ತಾನೂ ಅವರ ಮಧ್ಯೆ ನಿಂತ!.
ಅಂಬುಲೆನ್ಸ ಬಂತು.ಹೋಯಿತು.
ಜನರ ಗುಂಪು ಆತನನ್ನ ಮಳೆಯಲ್ಲಿ ಗಮನಿಸಲೇ ಇಲ್ಲ!!!.
ಮೆಲ್ಲಗೆ ಮುರಿದ ಶಿಲುಬೆಯಂತಹ ಆ ಬೈಕ್ ಬಳಿ ಹೊರಟ.
* * *
ಆಸ್ಪತ್ರೆಯ ವರಾಂಡದೊಳಗೆ ಸುಜಿತ್ ಕುಳಿತಿದ್ದಾನೆ.ಆತನ ಆ ಪರಿಸ್ಥಿತಿ ಮೆದುಳಿಗೂ ಶರೀರಕ್ಕೂ ಸಂಬಂಧವಿಲ್ಲದಂತಾಗಿದೆ.ಮಳೆಯೊಳಗೆ ನೆನೆದು ಮುದ್ದೆಯಾದರೂ… ಬಾಡಿಹೋದ ಕಂಗಳಲ್ಲಿ ಆತ ಏನನ್ನೋ… ನಿಸ್ತೇಜವಾಗಿ ನೋಡುತ್ತಿದ್ದಾನೆ.

ಎರಡು ತುಟಿಗಳ ಮಧ್ಯದಿಂದ ‘ಅಮ್ಮಾ..ಅಮ್ಮಾ..’ ಅಂತ ಹೊರಗೆ ಕೇಳಿಸಲಾರದ ಭಾವವೇನೋ ಮಂದ್ರವಾಗಿ ಹೊರಬರಲು ಪ್ರಯತ್ನಿಸುತ್ತಿದೆ.

“ಓ-ನೆಗೆಟಿವ್ ಬ್ಲಡ್ ಬೇಕಾಗಿದೆ. ಪೇಷಂಟ್ ಬಂಧುಗಳ್ಯಾರಾದರೂ ಇದ್ದಾರಾ..?” ಡಾಕ್ಟರ್ ಕೇಳಿದರು.
“ಬಂಧುಗಳಾರೂ ಇಲ್ಲ ಸರ್. ನಾವು ಕೊಡುತ್ತೇವೆ. ಸರಿಹೋದರೆ ತೆಗೆದುಕೊಳ್ಳಿ” ಅಂತ ಒಂದಿಬ್ಬರು ಮುಂದೆ ಬಂದರು.

ಸುಜಿತ್ ಭಾವ ರಹಿತ ಸ್ಥಿತಿಯೊಳಗೆ ಆದೃಶ್ಯವನ್ನ ಹಾಗೇ ನೋಡುತ್ತಲೇ ಇದ್ದ. “ಕೇಸ್ ಯಾವುದು..?” ಯಾರೋ ಕೇಳಿದರು. “ಲಾರಿ.. ಗುದ್ದಿ ಹೊರಟು ಹೋದಂತಿದೆ ಸಾರ್..
ಸ್ಪಾಟ್’ಗೆ ಸ್ವಲ್ಪ ದೂರದೊಳಗೆ ಇನ್ನೊಂದು ಯಾಕ್ಸಿಡೆಂಟ್ ಆಗಿದೆ. ಡ್ರೈವರ್ ಸ್ಪಾಟ್ ಡೆಡ್!” ಯರೋ ಉತ್ತರಿಸಿದರು.
* * *
“ ಸುಜಿತ್…ಸುಜಿತ್…” ವಸುಧಾ ಅಡಿಗೆ ಮನೆಯಿಂದ ಗಟ್ಟಿಗೆ ಕೂಗುತ್ತಿದ್ದಾಳೆ. ” ಏನು ಇವನು..? ರಾತ್ರಿಯೇ ಬಂದ. ಹೊತ್ತೇರಿದರೂ ಇನ್ನೂ ಎದ್ದಿಲ್ಲವಲ್ಲ” ಎನ್ನುತ್ತ ಸುಜಿತ್ ಕೋಣೆಯೊಳಕ್ಕೆ ಬಂದಳು. ‘ಕಂದಾ..ಸುಜೀ’ ಅಂತ ತಟ್ಟಿ ಎಬ್ಬಿಸಿದಳು. ಬಲವಂತವಾಗಿ ಕಣ್ಣುತೆರೆದ.
ಸುಜಿತ್ ಕಣ್ಣುಗಳು ಅಗ್ನಿಗೋಳದಂತಾಗಿವೆ!
“ಏನೋ ಏನಾಯ್ತು ?, ರಾತ್ರಿಯೆಲ್ಲ ನಿದ್ದೆಗೆಟ್ಟಿಯೇನು?” ಕೇಳಿದಳಾಕೆ.

ಮೌನವಾಗಿಯೇ.. ತಾಯಿ ಕಡೆಗೊಮ್ಮೆ ನೋಡಿದನಾತ.
“ನಾ ಮಾತಾಡುತ್ತಲೇ ಇದ್ದೀನಿ.ನೀ.. ಯಾಕೋ ಮಾತಾಡುತ್ತಿಲ್ಲ?” ಅಂತ ವಸುಧ ಪ್ರೇಮದಿಂದ ಕೂದಲು ನೇವರಿಸಿದಳು.
“ ಏನು ಇಲ್ಲಮ್ಮಾ ಅನ್ನುವಂತೆ ..ತಾಯಿ ಭುಜದ ಮೇಲೆ ಹಾಗೇ ತಲೆಯಾನಿಸಿದ. “ಸರಿ ಟಿಫಿನ್,ಮಾಡುವಂತೆ ಏಳೋ”ಅಂದಳು.
* * *
ಹರಳುರಿದಂತೆ ನಗು ನಗುತ್ತಾ ಕಿಚಾಯಿಸುತ್ತಿದ್ದ ಅದೇ ಹುಡುಗ ಡೈನಿಂಗ್ ಟೇಬಲ್ ಬಳಿ ಯಾಂತ್ರಿಕವಾಗಿ ಟಿಫಿನ್ ಮಾಡುತ್ತಿದದ್ದನ್ನ ನೋಡಿ… “ಏನೋ ಕಂದಾ..ಕಾಲೇಜಿನೊಳಗೆ ಏನಾದ್ರು ಸಮಸ್ಯೆನಾ?, ಸ್ನೇಹಿತರೊಂದಿಗೆ ಗಲಾಟೆ ಮಾಡಿಕೊಂಡೆಯಾ? ಅಂತ ಡೈನಿಂಗ್ ಟೇಬಲ್ ಕುರ್ಚಿಯನ್ನ ಎಳೆದುಕೊಳ್ಳುತ್ತ ಪಕ್ಕದಲ್ಲೇ ಕುಳಿತು ಕೇಳಿದಳು.
“ಏನೂ ಇಲ್ಲ ಮಮ್ಮಿ” ತೇಲಿಸಿ ಉತ್ತರಿಸಿದ.
“ಡ್ಯಾಡಿ ಏನಾದರೂ ಬೈದರಾ?” ಅಂತ ಮತ್ತೆ ಮೆತ್ತಗೆ ಕೇಳಿದಳು.
ಹುಹೂ…
ಮತ್ತೆ ಮೌನವೇ ಉತ್ತರ!
“ಈ ಸೆಮಿಸ್ಟರನೊಳಗೆ ಮಾಕ್ರ್ಸುಗಳೇನಾದರೂ ಕಡಿಮೆ ಬಂದಿವೆಯೇನೋ?”ತುಂಟತನದಿಂದಲೇ ರೇಗಿಸಿದಳು.
“ಸ್ವಲ್ಪತ್ತು ನನ್ನನ್ನ ಹೀಗೇ ಬಿಡು ಮಮ್ಮೀ..ಪ್ಲೀಜ್!” ಅಂದನು ಸುಜಿತ್ ಪ್ರಾರ್ಥಿಸುವಂತೆ..
* * *
ನೀರವವಾದ ಬಾಲ್ಕಾನಿಯ ಬಳಿ ಹೋಗಿ ಹೊರಗಿನ ಶೂನ್ಯವನ್ನು ನೋಡುತ್ತಾ ಒಂಟಿ ಹಕ್ಕಿಯಂತೆಯೇ ಕುಳಿತ.
ಎದುರಲ್ಲಿ ಪ್ರೈಮರಿ ಶಾಲೆ,
ಗೇಟ್ ಬಳಿ ತಾಯಂದಿರು ಮಕ್ಕಳಿಗಾಗಿ ಕಾಯುತ್ತಿದ್ದಾರೆ.
ಗೇಟು ತೆರೆದು ಎರಡು ಹೆಜ್ಜೆ ಇಟ್ಟರೆ ಸಾಕು… ಅಷ್ಟೂ ಜನರ ನಡುವೆ ಆ ಮಕ್ಕಳು ಅವರ ಅಮ್ಮನನ್ನ ಹುಡುಕಿ ಕೊಳ್ಳುತ್ತಾರೆ. ಅವರ ಅಮ್ಮ ಕಂಡೊಡನೇ ‘ಯಾವುದೋ ತಿಳಿಯದ ಬೆಳಕು ಅವರ ಕಣ್ಣೊಳಗೆ. ಓಡೋಡಿ ಬಂದು ಅಮ್ಮಾ … ಅಂತ ಅಪ್ಪಿ ಕೊಳ್ಳುತ್ತಾರೆ.

ಅಮ್ಮಂದಿರು ಅವರ ಬಾಕ್ಸ ತೆರೆದು ಊಟ ಮಾಡಿದ್ದಾರೋ.. ಇಲ್ಲವೋ.. ಅಂತ ಆತುರದಿಂದ ನೋಡುತ್ತಾರೆ. ದಿನ ಅಮ್ಮ ತರುವ ಚಾಕೋಲೇಟ್‍ಗಾಗಿ ಮಕ್ಕಳ ಕಣ್ಣು ಹುಡುಕುತ್ತವೆ… ತಮಗಾಗಿ ಯಾರೂ ನೋಡಲು ಬಾರದ ಮಕ್ಕಳು..ಮೌನದಿಂದ…ಯಾರದೋ ಕೈ ಹಿಡಿದು ಆಟೋ ಕಡೆ ನಡೆಯುತ್ತಿದ್ದಾರೆ.

ಸುಜಿತ್ ಆ ಕಡೆಗೇ ನೋಡುತ್ತಾ ಕುಳಿತ.
ಅಮ್ಮನನ್ನ ಕಂಡ ಮಕ್ಕಳ ಮುಖದೊಳಗಿನ ಆನಂದ. ಒಂಟಿಯಾಗಿ ಹೋಗುತ್ತಿರುವ ಮಕ್ಕಳ ಮುಖದೊಳಗಿನ ಮೌನ,ಕತ್ತಲು-ಬೆಳಕು ಪಕ್ಕ ಪಕ್ಕದಲ್ಲೇ ಹೊರಟಂತಿವೆ.

ಅಮ್ಮ… ಅಮ್ಮನಿಲ್ಲದೇ ಹೋದ್ರೆ…!? ಮನೋಮಂಥನ..
ಅಷ್ಟರೊಳಗೆ ಹಿಂದಿನಿಂದ ಸುಜಿತ್ ಅಮ್ಮ ಬಂದಳು.
“ಹೊಸ ಅವರೆಕಾಯಿ ಸಾಂಬರ್ ಕಣೋ.. ರುಚಿನೋಡಿ ಹೇಳು ಹೇಗಿದೆ? ಅಂತ..” ಎನ್ನುತ್ತ ಅನ್ನ ಕಲಸಿದ ತುತ್ತನ್ನ ಸುಜಿತ್ ಬಾಯೊಳಗಿಟ್ಟಳಾಕೆ.
ಸುಜಿತ್ ಕಣ್ಣ ಕಂಬನಿ.
“ ಏನಾಯ್ತು ಮಗನೇ, ಖಾರ ಜಾಸ್ತಿಯಾಯ್ತಾ..?” ತುಂಬಿದ ಸ್ವರದೊಳಗೆ ನೀರು ಕೊಡುತ್ತಾ ಕೇಳಿದಳಾಕೆ.
ಇಲ್ಲ ಅನ್ನುವಂತೆ ತಲೆಯಾಡಿಸಿದ.
“ ಯಾಕೋ ಮುಂಜಾನೆಯಿಂದ ಏನೂ ಮಾತಾಡುತ್ತಿಲ್ಲ?,ಸರಿಯಾಗಿ ಊಟ ಮಾಡುತ್ತಿಲ್ಲ!. ಏನಾಯ್ತು ನಿಂಗೆ?” ಸಿಡುಕಿನಿಂದಲೇ ಕೇಳಿದಳು ವಸುಧ.

ಏನೂ ಹೇಳಲಾಗದಂತಹ ಭಾವ ಆವರಿಸಿತಾಗ, ಎಲ್ಲವನ್ನೂ ಗಮನಿಸುತ್ತ..ಆಸೆಗಳನ್ನ ತೀರಿಸೋ ಅಮ್ಮ ನನಗಿದ್ದಾಳೆ. ಅಮ್ಮನ ಪ್ರೇಮ ಎಷ್ಟು ದೊಡ್ಡದೋ ನನಗೇ ಗೊತ್ತು. ನನಗೆ ಜ್ವರ ಬಂದ್ರೆ ಅಮ್ಮನಿಗೂ ಜ್ವರ ಏರುತ್ತೆ. ಮನೆಗೆ ಬರುವುದು ಲೇಟಾದರೆ ಅಮ್ಮನಿಗಾಗುವ ಪರದಾಟ, ರಿಜಲ್ಟು ಬಂದರೆ ಅಮ್ಮ ಆಚರಿಸುವ ಖುಷಿಯ ಹಬ್ಬ! ನಾನು ಇಂಜಿನಿಯರಿಂಗಿಗೆ ಬಂದರೂ.. ಈಗಲೂ ಮನೆಗೆ ಬರುವವರೆಗೆ ಎದುರು ನೋಡುವ ಅಮ್ಮ… ಅವೆಲ್ಲಾ ತನಗೇ… ಆಗುವ ಸ್ವಯಂ ಖುಷಿಯ ಆನಂದದ ಅನುಭೂತಿಗಳು.

ಯಾಕೋ ಆ..ಅಮ್ಮನಂತವಳೇ. ನೆನಪಿಗೆ ಬರುತ್ತಿದ್ದಾಳೆ.
ಮತ್ತೆ ಆಕೆಯ ಕುಟುಂಬ..?
ಆಕೆಯ ಮಕ್ಕಳು..??
ಅವರ ಪರಿಸ್ಥಿತಿ? ಏನೇನೋ…!? ತಲೆತುಂಬಾ ಪ್ರಶ್ನೆಗಳೆದ್ದು ಕೋಲಾಹಲವೆಬ್ಬಿಸುತ್ತಿವೆ.
* * *
ಮರುದಿನವೇ ಆಕೆಯ ವಿಳಾಸ ಪತ್ತೆ ಹಚ್ಚಿ ತನ್ನ ಬೈಕ್ ಅವರ ಮನೆ ಮುಂದೆ ನಿಲ್ಲಿಸಿದ. ಮನೆಯ ಒಳಗಿನಿಂದ ಅಳು!!! ಹೃದಯ ಹಿಂಡುವಂತೆ ಕೇಳಿಸುತ್ತಿದೆ. ಮೆಲ್ಲಗೆ ಒಳಗೆ ಹೋದ.

ಹಾಲಿನ ಮಧ್ಯದಲ್ಲಿ ಆಕೆಯ ಮೃತ ದೇಹವನ್ನಿಟ್ಟಿದ್ದಾರೆ!
ಬಹುಶಃ ಪಕ್ಕ ಕುಳಿತವನು ಗಂಡನಿರಬೇಕು. ಕೊನೆಯ ತನಕ ಜೊತೆಯಾಗಿರುತ್ತೇನೆಂದು ಭಾಷೆ ನೀಡಿ ನೆರವೇರಿಸದಾದ ಆತನ ನಿಸ್ಸಹಾಯಕತೆಯನ್ನ ಆತನ ನಿರ್ಜೀವ ಕಣ್ಣುಗಳು ತೋರುತ್ತಿವೆ.

ಅಪ್ಪನ ಭುಜದ ಮೇಲೆ ತಲೆಯಿಟ್ಟ ಮಗಳ ಕಣ್ಣುಗಳು ಅಮ್ಮನನ್ನೇ ನೋಡುತ್ತಿವೆ. ಅಮ್ಮ ಹಾಗೆ ನಿಸ್ತೇಜವಾಗಿ ಮಲಗಿರುವುದನ್ನ ಜೀರ್ಣಿಸಿಕೊಳ್ಳಲಾಗದೇ ಹೋಗಿದ್ದಾಳೆ ಆ ಮಗಳು. ಮನಸ್ಸಿಗೆ ಚೂರಿ ಹಾಕುವಂತಹ ಆಕೆಯ ಸದ್ದಿರದ ಕಣ್ಣೀರ ನದಿಯಲ್ಲಿ ತಾನೂ ಹೆಣವಾಗಿ ತೇಲುವಂತಾಯಿತು.
* * *
ಚಿರನಿದ್ರೆಗೆ ಜಾರಿದ ಆಕೆಯ ಕಣ್ಣೊಳಗೆ ಎಂಥೆಂತಹ ಬಯಕೆಗಳಿದ್ದವೋ! ಎಷ್ಟು ದುಃಖಗಳು,ಎಷ್ಟು ನೋವುಗಳು,ಎಷ್ಟು ಕನಸುಗಳು, ಎಷ್ಟು ನೆನಪುಗಳು, ಎಷ್ಟು ಊಹೆಗಳನ್ನ ತುಂಬಿಕೊಂಡಿದ್ದವೋ… ಎಲ್ಲವನ್ನ ಹಾಗೇ…ಬಿಟ್ಟುಕೊಟ್ಟು ಹೋಗುತ್ತಿದ್ದಾಳೆ.

ಇಲ್ಲ. ಇಲ್ಲ. ನಾನೇ ಆಕೆಯನ್ನ ಜೀವ ಸಮಾಧಿ ಮಾಡಿದೆ!
ಈ ಲೋಕಕ್ಕೆ ಒಬ್ಬ ಅಮ್ಮನನ್ನ ದೂರ ಮಾಡಿದೆ.
ವಯಸ್ಸು, ದುಡ್ಡು ನೀಡಿದ ಮದದಿಂದ ಒಬ್ಬ ಅಮ್ಮನನ್ನ ಬಲಿತೆಗೆದುಕೊಂಡೆ. ಮನಸ್ಸು ದಹಿಸುತ್ತಿದೆ, ತನ್ನ ಮೇಲೆ ತನಗೇ ಭರಿಸಲಾಗದ ಆಕ್ರೋಶ. ಅಂಕೆಗೆ ಬಾರದ ತನ್ನ ಮನಸ್ಸಿನ ಮೇಲೆ ಅಸಹ್ಯ ಭಾವ.

ಆಕೆಯನ್ನ..ಅಮ್ಮಾ .. ಅಂತ ಕರೆಯ ಬೇಕೆನಿಸಿದೆ.. ಆದರೆ ಗಂಟಲೊಳಗಿಂದ ಶಬ್ದವೇ ಏಳುತ್ತಿಲ್ಲ!. ಆ ಶಬ್ದ ತನ್ನ ಗುಂಡಿಗೆಗೆ ಮಾತ್ರ ಕೇಳುತ್ತಿದೆ. ಆ…ಅಮ್ಮನ ಜೀವ ಹೊತ್ತೊಯ್ಯಲಿಕ್ಕಾಗಿ ಬಂದೆರಗಿದ ಹಾಳು ಮುಗಿಲ ಹನಿಗಳಂತೆ. ಮನಸ್ಸು ಕರಗಿ ಸದ್ದಿರದೇ…ಕಣ್ಣೀರ ಕಟ್ಟೆಯೊಡೆಯುತ್ತಿದೆ.

ನಾ..ಏನಾದರೂ ಮಾಡಬೇಕು.
ಹೌದು,
ಇಂತಹ ಅಮ್ಮಂದಿರು ಈ ಲೋಕದಿಂದ ದೂರವಾಗದಂತೆ ಉಳಿಯಲು ಏನಾದರೊಂದು ಇನ್ನು ಮೇಲೆ ನಾನು ಮಾಡಬೇಕು. ಆ ನಿರ್ಧಾರದ ನಂತರ ಸುಜಿತ್ ಮನಸ್ಸಿನೊಳಗೆ ಏನೋ ಪ್ರಶಾಂತತೆ ಮೂಡಿತು.
ನಿರಾಳತೆ ಹುಟ್ಟಿತು.
* * *
ಅದು ಶಿಲ್ಪ ಕಲಾ ವೇದಿಕೆ ..
ಸನ್ಮಾನ ಸಭೆ ನಡೆಯುತ್ತಿದೆ.
ಡಿ.ಜಿ.ಪಿ. ಮಾತಾಡುತ್ತಿದ್ದಾರೆ. “ ರಸ್ತೆಯ ಮೇಲೆ ಅಪಘಾತವಾಗಿ ,ಅಪಘಾತಕ್ಕೀಡಾದವರು ರಕ್ತದ ಮಡುವಿನಲ್ಲೇ ಬಿದ್ದಿದ್ದಾರೆ. ಯಾರೂ ಜವಾಬ್ದಾರಿ ವಹಿಸಿಕೊಳ್ಳುತ್ತಿಲ್ಲ. ಅವರ ದಾರಿಯಲ್ಲಿ ಅವರು ಹೋಗುತ್ತಿದ್ದಾರೆ. ಅಂತವರೊಳಗೇ… ಕೆಲವು ಜನ ಕಾಲೇಜು ವಿದ್ಯಾರ್ಥಿಗಳು ಕೊನೆಯ ಉಸಿರಾಟದಿಂದ ಒದ್ದಾಡುತ್ತಿದ್ದವರನ್ನ ತಕ್ಷಣವೇ ಆಸ್ಪತ್ರೆಗೆ ಸೇರಿಸುತಿದ್ದಾರೆ.

ಕೆಲವರು ಪೋಲೀಸರಿಗೆ,ಕೆಲವರು ಆಸ್ಪತ್ರೆಗೆ ವಿಷಯವನ್ನ ಮುಟ್ಟಿಸಿದರೆ,ಇನ್ನ ಕೆಲವರು ಅವರ ಬಂಧುಗಳನ್ನ ಕರೆತರುವ ಜವಾಬ್ದಾರಿ ವಹಿಸಿಕೊಳ್ಳುತಿದ್ದಾರೆ.ಮತ್ತೆ ಕೆಲವರು ಚಿಕಿತ್ಸೆಗಾಗಿ ಅಗತ್ಯವಾದ ರಕ್ತ,ಔಷಧಿಗಳ ಅಗತ್ಯಗಳನ್ನ ಪೂರೈಸುತ್ತಿದ್ದಾರೆ. ಇವೆಲ್ಲಾ ನಿಮಿಷಗಳೊಳಗೆ ನಡೆದು ಹೋಗುತ್ತವೆ. ಇಂತಹವೆಲ್ಲಾ ಕಥೆಗಳೊಳಗೆ ಕಲ್ಪನೆಗಳೊಳಗೆ ನಡೆಯುವುದು ಅಂದು ಕೊಂಡಿರಲ್ಲವೇ!? ಆದರೆ ಇದು ವಾಸ್ತವ. ಇವುಗಳೆಲ್ಲದರ ಹಿಂದೆ ಇರುವವರು ಒಬ್ಬೇ ಒಬ್ಬ ವ್ಯಕ್ತಿ. ಅಂದರೆ ನೀವು ನಂಬುತ್ತೀರಾ? ಡಿ.ಜಿ.ಪಿ.ಹೇಳುವುದನ್ನ ನಿಲ್ಲಿಸಿದರು.

ಆಡಿಟೋರಿಯಂ ನೊಳಗೆ ಗಾಢವಾದ ನಿಶ್ಯಬ್ದ,
ಎಲ್ಲರೂ ವೇದಿಕೆಯ ಕಡೆ ನೋಡುತ್ತಿದ್ದಾರೆ. ಹೌದು, ಒಬ್ಬ ವ್ಯಕ್ತಿಯೇ!… ಎಷ್ಟೋ ಜನರಿಗೆ ಆತ ಪ್ರಾಣದಾತನಾಗಿದ್ದಾನೆ.
ಈಗ ಆತನನ್ನ ನಿಮ್ಮೆಲ್ಲರಿಗೆ ಪರಿಚಯಿಸುತ್ತಿದ್ದೇನೆ.ಎಂದರು ಡಿ.ಜಿ.ಪಿ. ಅಭಿನಂದನೆ ತುಂಬಿದ ಸ್ವರದಿಂದ.. ಡಿ.ಜಿ.ಪಿ.ಯ ಕಣ್ ಸನ್ನೆಯನ್ನ ಅನುಸರಿಸಿ… ವೇದಿಕೆ ಮೇಲೆ ಎಲ್ಲರ ಮುಂದಕ್ಕೆ ಬಂದನು ಆ ಯುವಕ..
ಆವನೇ ..ಸುಜಿತ್!
ಚಪ್ಪಾಳೆಗಳು ಮಾರ್ಮೊಳಗಿದವು!… ಡಿ.ಜಿ.ಪಿ.ಯವರ ಅಣತಿಯಂತೆ ಸುಜಿತ್ ಗಂಟಲು ಸರಿಪಡಿಸಿಕೊಂಡ.. ಮೈಕ್ ಮುಂದಕ್ಕೆ ಬಂದು “ ಮನುಷ್ಯನ ಪ್ರಾಣದ ಬೆಲೆಯೆಂದರೆ.. ಒಂದು ಬದುಕು..,ಒಂದು ಕುಟುಂಬ,..ಒಂದು..ಸಮಾಜ ಭರಿಸಲಾಗದ ಸಂಬಂಧ !..

ಹೌದು.. ಒಂದು ಪ್ರಾಣ ಹೋದರೆ ಒಂದು ಕುಟುಂಬವೇ ಕೊಚ್ಚಿ ಹೋದಂತೆ, ಒಂದು ಮನೆಯೇ ಕುಸಿದು ಬಿದ್ದಂತೆ.ಒಂದು ಸಮಾಜದ ಹಲವು ಅನುಬಂಧ,ಹಲವು ಆಪ್ಯಾಯತೆಗಳೇ.. ಚದುರಿ ಹೋದಂತೆ. ಇವು ಯಾವವೂ.. ಹಣ ನೀಡಿ ಕೊಳ್ಳುವಂತವಲ್ಲ…
ನಿರ್ಲಕ್ಷ ಬೇಡ…
ಪ್ರಾಣ ತೆಗೆಯುವ ಹಕ್ಕು ಯಾರಿಗೂ ಇಲ್ಲ.

ಹೌದು ನಾನು ಈ ಆಲೋಚನೆ ಮಾಡಿಯೇ…
ಇಂತಹ ದೃಶ್ಯ ನನ್ನ ಮನಸ್ಸಿಗೆ ನಾಟಿಯೇ…
ನಾನು ಈ ಪ್ರಜೆಕ್ಟನ್ನ ಶುರು ಮಾಡಿದೆ. ನನ್ನ ಹಿಂದೆ ಎಷ್ಟೋ ಜನ ಜೊತೆಯಾಗಿ ನಿಂತರು. ಯಾರೂ ರಸ್ತೆಗಳ ಮೇಲೆ ನಿರ್ಲಕ್ಷದಿಂದ ನುಗ್ಗ ಬೇಡಿ. ನಿಮಗೆ ಶಿರಬಾಗಿ ಕೈ ಮುಗಿಯುತ್ತೇನೆ.ಹೋದ ಜೀವ ಮರಳಿ ಬಾರದು.ಈ ಜೀವ ಇರುವತನಕ ಜೀವಗಳನ್ನು ಉಳಿಸುವ ಪ್ರಯತ್ನ ನಮ್ಮದು.
ಒಂದು ನಿರ್ಲಕ್ಷದ ಬೆಲೆಯೇನು..
ಅದೆಷ್ಟು ಗಾಯ ಮಾಡುತ್ತದೋ… ನನ್ನ ಮನಸ್ಸಿಗೇ.. ಗೊತ್ತು.
ಎನ್ನುತ್ತಾ… ಸುಜಿತ್ ಕಣ್ಣು ತುಂಬಿಕೊಂಡನು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ಮತ್ತಿನ ಕುಣಿಕೆ

Published

on

  • ಗುರು ಸುಳ್ಯ

ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ

ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ

ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…

ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ

ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ

ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)

ಕವಿ : ಗುರು ಸುಳ್ಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಮ್ಮ‌ ಪೂರ್ವಿಕ ಶಿವನೂ ; ಅವರ ಡುಬಾಕು ಸನಾತನವೂ..

Published

on

  • ಹರ್ಷಕುಮಾರ್ ಕುಗ್ವೆ

ಲಿಂಗವು ದೇವರಲ್ಲ ಶಿವನು ದೇವರಲ್ಲ
ಶಕ್ತಿಯೂ ದೇವರಲ್ಲ. ಮನುಷ್ಯನ ಕಲ್ಪನೆಯ ಆಳವನ್ನು ಮೀರಿದ ಯಾವ ದೇವರೂ ಇಲ್ಲ. ಅಸಲಿಗೆ ಇಡೀ ಜಗತ್ತನ್ನು ನಡೆಸುವ ದೇವರೆಂಬುದೇ ಇಲ್ಲ.

ಶಿವನು ನಮ್ಮ ಪೂರ್ವಿಕ, ಗೌರಿ ಅತವಾ ಶಕ್ತಿ ನಮ್ಮ ಪೂರ್ವಿಕಳು. ಗಂಗೆ ನಮ್ಮ ಬದುಕು. ಶಿವನ ಕೊರಳಿನ ನಾಗ ನಮ್ಮ ಕುಲ. ಲಿಂಗ ಫಲವಂತಿಕೆಯ ಸಂಕೇತವೂ ಹೌದು, ಶಿವ ಶಕ್ತಿಯರ ಸಮಾಗಮದ ಸಂಕೇತವೂ ಹೌದು. ನಮ್ಮ ಜನರಿಗೆ ಸಂಕೇತಗಳು ಶಕ್ತಿಯಾಗಿದ್ದವು, ಪ್ರೇರಣೆಯಾಗಿದ್ದವು. ಡೊಳ್ಳು ಹೊಡೆದು ಕೇಕೆ ಹಾಕಿದಾಗ ಮಳೆ ಬಂದರೆ, ನಮ್ಮ ಡೊಳ್ಳಿನ ಸದ್ದಿನ ಶಕ್ತಿಯಿಂದಲೇ, ನಮ್ಮ ಕೇಕೆಯಿಂದಲೇ ಮಳೆ ಬಂತು ಎಂದು ನಂಬಿದರು. ಇದನ್ನು primitive magic ಪರಿಕಲ್ಪನೆ ಎನ್ನಲಾಗಿದೆ.‌ ನಮ್ಮ ಬಳ್ಳಾರಿಯ ಸಂಗನಕಲ್ಲಿನಲ್ಲಿ 3000 ವರ್ಷಗಳ ಹಿಂದೆ ಕಲ್ಲು ಬಂಡೆಗಳ ಮೇಲೆ ಕೆತ್ತಿದ ಹೋರಿ ಮತ್ತು ಉದ್ದ ಕೊಂಬಿನ ಕೆತ್ತನೆಗಳು ಸಹ ಇಂತಹ ಒಂದು ಆದಿಮ ಮಾಂತ್ರಿಕ ಶಕ್ತಿಯ ಆಚರಣೆಯಾಗಿದೆ.

ನಂಬಿಕೆಗಳನ್ನು ಸಂಸ್ಕೃತಿಯಾಗಿ, ಪರಂಪರೆಯಾಗಿ ಗ್ರಹಿಸಬೇಕೇ ಹೊರತು ದೇವರಾಗಿ ಅಲ್ಲ. ದೇವ ಎಂಬ ಕಲ್ಪನೆಯೇ ದ್ರಾವಿಡರಲ್ಲಿ ಇರಲಿಲ್ಲ. 50 ಸಾವಿರ ವರ್ಷಗಳಿಂದ ಬಂದ ಲಿಂಗ- ಯೋನಿ ಪೂಜೆ, ಗೌರಿ ಪೂಜೆ, 9,000 ವರ್ಷಗಳಿಂದ ಬಂದ ಬೂಮ್ತಾಯಿ ಪೂಜೆ, ಅರಳಿ ಮರದ ಪೂಜೆ, ಐದು ಸಾವಿರ ವರ್ಷಗಳಿಂದ ಬಂದ ಶಿವನ ಪೂಜೆ, ಗಣಪತಿ ಪೂಜೆ, ನಾಗನ ಪೂಜೆ, 4000 ವರ್ಷಗಳಿಂದ ಬಂದ ಗತಿಸಿದ ಹಿರೀಕರ ಪೂಜೆ, ಇದರ ಮುಂದುವರಿಕೆಯಾಗಿಯೇ 2600 ವರ್ಷಗಳ ಹಿಂದೆ ಬುದ್ದ ಗುರುವು ತೀರಿದ ಬಳಿಕ ಅವನ ಅಸ್ತಿಯನ್ನು ಇಟ್ಟ ಸ್ತೂಪಗಳನ್ನು ಪೂಜಿಸಿದೆವು, ದೂಪ ಹಾಕಿದೆವು..‌. ಇದುವೇ ಈ ನೆಲದ ಪೂಜನ ಸಂಸ್ಕತಿಯಾಗಿತ್ತು.

‘ದೇವ’ ಮತ್ತು ಅಸುರ ಇಬ್ಬರೂ ಬಂದಿದ್ದು ಮಧ್ಯ ಏಷ್ಯಾದಿಂದ ಹೊರಟಿದ್ದ ಆರ್ಯರಿಂದಲೇ. ಅವರಿಗೆ ಪೂಜೆ ಗೊತ್ತಿರಲಿಲ್ಲ. ಯಜ್ಞ ಗೊತ್ತಿತ್ತು, ಹೋಮ ಗೊತ್ತಿತ್ತು. ‘ದೇವ’ ಅತವಾ “ದ-ಏವ” ಕೂಡಾ ಮೂಲದಲ್ಲಿ ಆರ್ಯರ ಪೂರ್ವಿಕ ಕುಲ ನಾಯಕರೇ ಆಗಿದ್ದಾರು.‌.. ಹೀಗಾಗಿಯೇ ಆರ್ಯ ವೈದಿಕರ ದೇವ ಎಂದರೆ ಅವರ ದಾಯಾದಿಗಳಾಗಿದ್ದ ಪಾರ್ಸಿಯನ್ (ಜೊರಾಸ್ಟ್ರಿಯನ್) ಆರ್ಯ ಅವೆಸ್ತನ್ನರಿಗೆ ಕೆಡುಕಿನ ಸಂಕೇತ‌ವಾಗಿತ್ತು. ಹಾಗೇ ಆರ್ಯ ವೈದಿಕರು ಕೆಡುಕು ಎಂದ ಅಸುರ (ಅಹುರ) ಆರ್ಯ ಅವೆಸ್ತನ್ನರ ಪಾಲಿಗೆ “ನಾಯಕ”ನಾಗಿದ್ದ. ಅವರನ್ನು ಅಹುರ ಮಜ್ದಾ ಎಂದು ಕರೆದು ಆರಾದಿಸಿದರು.

ಭಾರತಕ್ಕೆ ಪ್ರವೇಶಿಸಿದ ಬಳಿಕ ಆರ್ಯ ವೈದಿಕರಿಗೆ ಈ ನೆಲದ ಮೊದಲ ನಿವಾಸಿಗಳ ಮೇಲೆ ಯಜಮಾನಿಕೆ ಸ್ತಾಪಿಸಬೇಕಿತ್ತು. ಅದಕ್ಕಾಗಿ ನಮ್ಮಿಂದ ಪೂಜೆಗೊಳ್ಳುತ್ತಿದ್ದ ಪೂರ್ವಿಕರನ್ನು ತಮ್ಮ “ದೇವರು” ಮಾಡಿದರು. ಆ ದೇವರ ಪೂಜೆಗೆ ಅವರೇ ನಿಂತರು. ತಮ್ಮ ಜುಟ್ಟು ಬಿಟ್ಟುಕೊಂಡು ನಮ್ಮ ಜುಟ್ಟು ಹಿಡಿದರು. ನಾವು ಪೂರ್ವಿಕರನ್ನು ಬಿಟ್ಟು ಕೊಟ್ಟು, ಅವರ ಕೈಯಲ್ಲಿ ದೇವರುಗಳ ಪೂಜೆ ನಡೆಯುವಾಗ ನಮ್ಮ ಪೂರ್ವಿಕರಿಗೆ ಗೊತ್ತೇ ಇರದಿದ್ದ ವೇದ ಮಂತ್ರಗಳನ್ನ ಕೇಳಿ ಪುನೀತರಾದೆವು. ಈ ಮಂತ್ರ ಭಾಷೆಯೇ ದೇವರಿಗೆ ಅರ್ಥವಾಗುವುದು ಎಂದು ಪುಂಗಿದ್ದಕ್ಕೆ ತಲೆಯಾಡಿಸಿ ಕೈಮುಗಿದು ಗರ್ಭಗುಡಿಯ ಹೊರಗೆ ಸಾಲಿನಲ್ಲಿ ನಿಂತೆವು.‌ ಮುಂದಿನ 2000 ವರ್ಷಗಳ ಕಾಲ ಗುಲಾಮರಾದೆವು.‌ ಪುರಾಣಗಳನ್ನು ಕೇಳಿದೆವು, ನಂಬಿದೆವು ಮತಿಗೆಟ್ಟೆವು, ಗತಿಗೆಟ್ಟೆವು.

ಇನ್ನೂ ಉಳಿದಿರುವುದೇನು?
ನಾವು ಶಿವನ ವಕ್ಕಲು, ಗೌರಿ- ಗಂಗೆಯರ ಒಕ್ಕಲು. ಅವರು ಇಂದ್ರ ಅಗ್ನಿಯರ ವಕ್ಕಲಾಗಿದ್ದವರು ತಮ್ಮ ದೇವರಿಗೆ ಕಿಮ್ಮತ್ತಿಲ್ಲ ಎಂದರಿತು ಅವರನ್ನೇ ಬಿಟ್ಟರು. ಈಗ ಹೇಳುತ್ತಾರೆ ನಾವೇ ಸನಾತನರು ಎಂದು! ಅವರ ಡುಬಾಕು ಸನಾತನದಲ್ಲಿ ನಮ್ಮತನ ಕಳೆದುಕೊಂಡ “ಶೂದ್ರ ಮುಂಡೇಮಕ್ಕಳಾಗಿ”, ಅವರಿಗಾಗಿ ಬಾಳು ಬದುಕು ಹಾಳುಮಾಡಿಕೊಂಡು, ಅವರ ಹೋಮ ಹವನ ಮಾಡಿಸಿ, ನಮ್ಮ ಉಳಿಕೆ ಕಾಸು ಕಳೆದುಕೊಂಡು, ಗೌರವ ಗನತೆ ಕಳೆದುಕೊಳ್ಳುವುದೇ ಇವತ್ತಿನ ಸನಾತನ!

– ಹರ್ಷಕುಮಾರ್ ಕುಗ್ವೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಗಾಯದ ಬೆಳಕು

Published

on

  • ಕಾವ್ಯ ಎಂ ಎನ್, ಶಿವಮೊಗ್ಗ

ನೋವ ಹಾಡುವುದನ್ನೇ ಕಲಿತೆ
ಬದುಕು ಬಿಕ್ಕಿತು..

ಗಾಯದ ಬೆಳಕು
ಹೊತ್ತಿ ಉರಿದು
ತಮವೆಲ್ಲ ತಣ್ಣಗಾದಾಗ
ಚುಕ್ಕಿಬೆರಳಿಗೆ ಮುಗಿಲು ತೋರಿದೆ
ಕೆಂಡದಂತ ಹಗಲು ನೆತ್ತಿಪೊರೆಯಿತು.

ಅದ್ಯಾವ ಕಾಡು ಮಲ್ಲಿಗೆಯ
ಹಾಡು ಕರೆಯಿತೊ ಏನೊ
ಎದೆ ಹಾದಿಯ ತುಂಬೆಲ್ಲಾ ಬೇಸಿಗೆ.

ಒಡಲು ತುಂಬಿ ಕಡಲು
ಜೀಕಿ ದಡ ಮುಟ್ಟಿದ
ಕಪ್ಪೆಚಿಪ್ಪಿನೊಳಗೆಲ್ಲಾ
ಸ್ವಾತಿ ಮುತ್ತು…

ಓಡುವ ಆಮೆಯಂತ ಗಡಿಯಾರ
ಮೈತುಂಬ ಮುಳ್ಳ ಹೊತ್ತು
ಸಾಗಿಸುತ್ತಿದೆ ಭವದ ಭಾರ.

ನನ್ನ ನಿನ್ನ ರೂಹು ತಿಳಿದ
ಕಾಡು ಗಿಡ ಮರ ಬೆಟ್ಟ ಬಯಲೆಲ್ಲಾ
ಕಥೆ ಕಟ್ಟಿ ಪಿಸುಗುಡುತ್ತಿವೆ
ಉಟ್ಟ ಉಸಿರಿನ ಬಟ್ಟೆ ಕಳಚಿದ ಮೇಲೆ
ಎಲ್ಲವೂ ಬೆತ್ತಲೆ…

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending