ಬಹಿರಂಗ
ಒಮ್ಮೆ ಆ ಮಕ್ಕಳ ಕಡೆ ದೃಷ್ಟಿ ಹಾಯಿಸಿ, ಪ್ಲೀಸ್
- ನಾ ದಿವಾಕರ
ಪರೀಕ್ಷೆಯನ್ನು ತೊರೆದೇವು ಹಿಜಾಬ್ ಬಿಡೆವು ಎನ್ನುವ ಹಠಮಾರಿ ಧೋರಣೆ ; ಕಾರಣ ನೂರಾರು; ಮತ ಧರ್ಮ ಶ್ರದ್ಧೆ, ನಂಬಿಕೆ , ಆಚರಣೆ, ಆರಾಧನೆ, ಅಸ್ಮಿತೆ ಇತ್ಯಾದಿ ಇತ್ಯಾದಿ ; ನಂಬಿಕೆ ತೊಟ್ಟವರದೋ ತೊಡಲು ಹೇಳುವವರದೋ ; ಶ್ರದ್ಧೆ ಪೋಷಿತವೋ ಪ್ರೇರಿತವೋ ; ಪ್ರಶ್ನೆ ಹಕ್ಕಿನದೋ ಅಸ್ಮಿತೆಯದೋ ; ಹಕ್ಕು ವ್ಯಕ್ತಿಯದೋ ಸಾಮುದಾಯಿಕವೋ ; ಸ್ವಯಂ ಆಯ್ಕೆಯೋ ಅನಿವಾರ್ಯತೆಯ ಒತ್ತಡವೋ ; ಗೆದ್ದೇಗೆಲ್ಲುವ ಛಲವೋ ಸೋಲಲೊಪ್ಪದ ಆತ್ಮಬಲವೋ ; ಶಿಕ್ಷಣವೋ ಸಂಪ್ರದಾಯವೋ ಬದುಕೋ ಬದುಕಿನ ಹಾದಿಯೋ ; ಸಂವಿಧಾನವೋ ಮತಧರ್ಮವೋ ; ಇಷ್ಟೆಲ್ಲಾ ಪ್ರಶ್ನೆಗಳ ನಡುವೆ ಕರ್ನಾಟಕದ ಮುಸ್ಲಿಂ ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ.
ಈ ಹೆಣ್ಣು ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡದೆ ಸಾಮಾಜಿಕ ನ್ಯಾಯ ಒದಗಿಸಬೇಕಾದ ಜವಾಬ್ದಾರಿ ಇಡೀ ಸಮಾಜದ ಮೇಲಿದೆ. ಆದರೆ ಸರ್ಕಾರದ ಕ್ರೌರ್ಯ, ನ್ಯಾಯಾಂಗದ ಅಸೂಕ್ಷ್ಮತೆ, ಶಿಕ್ಷಣ ಪರಿಚಾರಕರ ಅಮಾನುಷತೆ, ನಾಗರಿಕರ ನಿಷ್ಕ್ರಿಯತೆ ಮತ್ತು ಶಿಕ್ಷಣವಂಚಿತ ಮಕ್ಕಳತ್ತ ನೋಡಿ ಗಹಗಹಿಸುತ ಮುಸಿನಗುವ ಮತಾಂಧತೆ, ಅಧಿಕಾರಸ್ಥರ ಅಮಾನುಷತೆ ಇವೆಲ್ಲವನ್ನೂ ನೋಡುತ್ತಿದ್ದರೆ ನಮ್ಮ ಸಮಾಜ ತನ್ನ ಜವಾಬ್ದಾರಿ, ನೈತಿಕ ಹೊಣೆಯನ್ನು ಅರಿತಿದೆಯೇ ಎಂದು ಅನುಮಾನ ಮೂಡುತ್ತದೆ.
ಪರೀಕ್ಷೆಗೆ ಸಮವಸ್ತ್ರ ಕಡ್ಡಾಯ ಮಾಡುವ ಸರ್ಕಾರದ ಆದೇಶ ಅಮಾನುಷತೆಯ ಪರಾಕಾಷ್ಠೆ ಅಲ್ಲವೇ ? ಹಠಮಾರಿ ಹಸುಳೆಗಳನ್ನೂ ಸಾಂತ್ವನದ ಮಾತುಗಳಿಂದ ಸಂತೈಸಿ ಸರಿದಾರಿಗೆ ತರುವ ತಾಯಿ ಪ್ರೇಮ ಅಧಿಕಾರಸ್ಥರಲ್ಲಿ ಇಲ್ಲದೆ ಹೋದರೆ ಅದನ್ನು ಪ್ರಜಾತಂತ್ರ ಎನ್ನುವುದಾದರೂ ಹೇಗೆ ? ಹೆಣ್ಣುಮಕ್ಕಳು ತೊಡುವ ಒಂದು ತುಂಡು ವಸ್ತ್ರ, ಹಿಜಾಬ್, ಅವರ ಭವಿಷ್ಯದ ಹಾದಿಯನ್ನೇ ಮುಚ್ಚಿಬಿಡಬೇಕೇ ? ಅಥವಾ ಸರ್ಕಾರವನ್ನೇ ಆಶ್ರಯಿಸುವ ಬಡ ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಲಾಭಕೋರ ಉದ್ಯಮಿಗಳನ್ನಾಶ್ರಯಿಸಬೇಕೇ ?
ಒಂದು ಕ್ಷಣ, ಹಲವು ಗಂಟೆಗಳ ಕಾಲ ಹಿಜಾಬ್ ತೆರೆದಿಟ್ಟು ಪರೀಕ್ಷೆ ಬರೆದರೆ, ಧರ್ಮ ನಶಿಸುವುದೇ ? ಅಥವಾ ಸೋತ ಅಪಮಾನದಿಂದ ಬದುಕು ದುರ್ಭರವಾಗುವುದೇ ? ನಂಬಿಕೆ ಶ್ರದ್ಧೆಗೆ ಧಕ್ಕೆ ಉಂಟಾಗುವುದೇ ? ಹಿಜಾಬ್ ಸಾಂವಿಧಾನಿಕ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯದ ದ್ಯೋತಕ. ಶಿಕ್ಷಣ ? ಶಿಕ್ಷಣ ಬದುಕುವ ಹಕ್ಕಿಗೆ ಆಕರ ಅಲ್ಲವೇ ? ತಮ್ಮ ಹಕ್ಕುಗಳಿಗೆ ಹೋರಾಡುವ ಸ್ಥೈರ್ಯ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಲು ಶಿಕ್ಷಣ ಒಂದು ಅಸ್ತ್ರ ಅಲ್ಲವೇ ?
ಬದುಕಿನ ಆಯ್ಕೆಯ ಪ್ರಶ್ನೆ ಎದುರಾದಾಗ ಆದ್ಯತೆಗಳು ವಿವೇಕಯುತವಾಗಿ ನಿಷ್ಕರ್ಷೆಗೊಳಗಾಗಬೇಕಲ್ಲವೇ ? ಸಮುದಾಯದ ಆದ್ಯತೆ ವ್ಯಕ್ತಿಗತ ಆಯ್ಕೆಗೆ ಅಡ್ಡಿಯಾಗಬಾರದಲ್ಲವೇ ? ಮುಂದಿಟ್ಟ ಪ್ರತಿ ಹೆಜ್ಜೆಯೂ ಉಜ್ವಲ ಬದುಕಿನ ಪಂಜುಗಳಾಗುತ್ತವೆ. ಹಿಂದೆ ಸರಿದ ಪ್ರತಿ ಹೆಜ್ಜೆಯೂ ಸಮಾಜವನ್ನು ಅಂಧಕೂಪಕ್ಕೆ ತಳ್ಳುತ್ತದೆ. ಸಮುದಾಯ ಪ್ರಜ್ಞೆಗೆ ಈ ವಿವೇಕ ವಿವೇಚನೆ ಮುಖ್ಯ.
ಇನ್ನು ಹೆಣ್ಣುಮಕ್ಕಳು ಹಿಜಾಬ್ ಧರಿಸಿ ಪರೀಕ್ಷೆ ಬರೆದರೆ ಯಾವ ನ್ಯಾಯದ ಉಲ್ಲಂಘನೆಯಾಗುತ್ತದೆ ?
ಹೆಣ್ಣು ಮಕ್ಕಳು ಧರಿಸುವ ಒಂದು ವಸ್ತ್ರ ಒಂದು ಸಮುದಾಯದ ಅಥವಾ ಸಮಾಜದ ತಪೋಭಂಗ ಮಾಡುತ್ತದೆ ಎನ್ನುವುದಾದರೆ, ಆ ಸಮಾಜ ಎಷ್ಟು ದುರ್ಬಲವಾಗಿರಬೇಕು ಅಥವಾ ಆ ಸಮುದಾಯ ಎಷ್ಟು ವ್ಯಸನಿಯಾಗಿರಬೇಕು ?
ಹಲವಾರು ನ್ಯಾಯಾಂಗದ ಆದೇಶಗಳನ್ನು ಧಿಕ್ಕರಿಸುತ್ತಲೇ, ಉಲ್ಲಂಘಿಸುತ್ತಲೇ ಅಧಿಕಾರಪೀಠವನ್ನಲಂಕರಿಸುವ ಜನಪ್ರತಿನಿಧಿಗಳಿಗೆ, ವಿವೇಚನೆಯೊಂದಿಗೆ ಕೊಂಚ ಮಾನವೀಯ ಮೌಲ್ಯಗಳ ಪರಿಚಯ ಇದ್ದಿದ್ದರೆ, ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ, ಪರೀಕ್ಷೆ ಬರೆಯುವ ಹೆಣ್ಣುಮಕ್ಕಳಿಗೆ ಹಿಜಾಬ್ ಧರಿಸುವ ಅವಕಾಶ ನೀಡಬಹುದಿತ್ತಲ್ಲವೇ ? ಹೆಣ್ಣುಮಕ್ಕಳ ಶಿಕ್ಷಣದ ಹಕ್ಕು ಅವಕಾಶಗಳನ್ನು ಕಸಿದುಕೊಂಡು ಇನ್ನೆಂತಹ ಸಮಾಜವನ್ನು ರೂಪಿಸಲು ಸಾಧ್ಯ ? ಮಾನವೀಯ ಸಂವೇದನೆಯನ್ನೂ ಮೀರಿದ ಆಡಳಿತ ವ್ಯವಸ್ಥೆ ಮಾನವ ಸಮಾಜವನ್ನು ಹೇಗೆ ನಿರ್ವಹಿಸಲು, ರೂಪಿಸಲು ಸಾಧ್ಯ ?
ಈ ಎರಡೂ ಹಠಮಾರಿ ಧೋರಣೆಗಳ ನಡುವೆ ಸಿಲುಕಿ, ನಲುಗಿ, ಶಿಕ್ಷಣ ವಂಚಿತರಾಗಿ,ಭವಿಷ್ಯದ ಹಾದಿಯಿಂದ ವಿಮುಖವಾಗುವ ಹೆಣ್ಣುಮಕ್ಕಳತ್ತ ಒಂದು ಕ್ಷಣವಾದರೂ ತಾಯಿ ಪ್ರೇಮದಿಂದ ದೃಷ್ಟಿ ಬೀರಿದರೆ ಸಾಕಲ್ಲವೇ ? ಏನನ್ನು ಸಾಧಿಸಲು ಹೊರಟಿದ್ದೇವೆ ? ಯಾವುದನ್ನು ರಕ್ಷಿಸಲು ಹೊರಟಿದ್ದೇವೆ ? ಎಂತಹ ಸಮಾಜವನ್ನು ಕಟ್ಟಲು ಹೊರಟಿದ್ದೇವೆ ?
ಹಚ್ಚೇವು ಕನ್ನಡದ ದೀಪ ಎಂದು ನಿತ್ಯ ಹಾಡುವ ನಮಗೆ, ನಮ್ಮ ಪ್ರತಿಷ್ಠೆಗೆ ಬಲಿಯಾಗಿ ಭವಿಷ್ಯದ ನಂದಾದೀಪಗಳು ನಂದಿಹೋಗುತ್ತಿರುವುದು ಕಾಣುತ್ತಿಲ್ಲವೇ ? ಹೆಣ್ಣು ಮಕ್ಕಳ ಘನತೆ ರಕ್ಷಿಸುವ ಒಂದು ವಸ್ತ್ರ ಇಡೀ ಸಮಾಜವನ್ನು ನೈತಿಕವಾಗಿ ಬೆತ್ತಲಾಗಿಸುತ್ತಿದೆಯೇಕೆ ? ಪರೀಕ್ಷೆ ಬರೆಯಲಾಗದೆ ತಮ್ಮ ಮುಂದಿನ ಹೆಜ್ಜೆಗಳನ್ನೇ ಕಾಣದಾಗದೆ ಮೌನಕ್ಕೆ ಜಾರುವ ಆ ಹೆಣ್ಣುಮಕ್ಕಳ ಮೌನವೇದನೆ ಸಂವೇದನಾಶೀಲ ಸಮಾಜವನ್ನು ಬಾಧಿಸಬೇಕಲ್ಲವೇ ?
ವ್ಯಕ್ತಿ ಪ್ರತಿಷ್ಠೆ, ಧರ್ಮ ನಿಷ್ಠೆ, ಮತಶ್ರದ್ಧೆ, ನ್ಯಾಯ ನಿಷ್ಠುರತೆ, ಕಾನೂನು ಬದ್ಧತೆ ಇವೆಲ್ಲವನ್ನೂ ಬದಿಗೊತ್ತಿ ಹೆಣ್ಣು ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವುದು ಸಮಾಜದ ನೈತಿಕ ಜವಾಬ್ದಾರಿ. ಭವಿಷ್ಯದ ಹಾದಿಗಳನ್ನು ಮುಚ್ಚಿ ವರ್ತಮಾನದಲ್ಲಿ ಸಂಭ್ರಮಿಸುವುದು ಕ್ರೌರ್ಯವಷ್ಟೇ ಅಲ್ಲ ಅಪ್ರಬುದ್ಧತೆಯೂ ಹೌದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
~ಯೋಗೇಶ್ ಮಾಸ್ಟರ್, ಚಿಂತಕರು
ಆಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.
ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!
ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!
ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.
ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.
ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.
ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!
ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂತರಂಗ6 days agoಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
-
ದಿನದ ಸುದ್ದಿ6 days agoಅಪರೂಪದ ಲಿವರ್ ಗಡ್ಡೆ | ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನಲ್ಲಿ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ
-
ದಿನದ ಸುದ್ದಿ3 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ಅಂತರಂಗ2 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

