ಅಂತರಂಗ
ದ್ವೇಷ ರಾಜಕಾರಣದಿಂದ ಹೊಲಸು ರಾಜಕಾರಣದವರೆಗೆ
ರಾಜಕೀಯೇತರ ಕಾಣದ ಕೈಗಳ ವಿಕೃತಿಗಳಿಗೆ ಸಾಂಸ್ಕೃತಿಕ ರಾಜಕಾರಣದ ಸುಭದ್ರ ಬುನಾದಿ ಇದೆ
- ನಾ ದಿವಾಕರ
ಭಾರತದ ಅಧಿಕಾರ ರಾಜಕಾರಣ ತನ್ನ ಸತ್ವಯುತ ಮೌಲ್ಯಗಳನ್ನು ಕಳೆದುಕೊಂಡು ದಶಕಗಳೇ ಸಂದಿವೆ. 1980ರ ದಶಕದಲ್ಲಿ ಜಾತಿ ರಾಜಕಾರಣ ಪರಾಕಾಷ್ಠೆ ತಲುಪಿದ್ದರೂ, ಆಯಾರಾಂ ಗಯಾರಾಂ ಸಂತತಿಯು ರಕ್ತಬೀಜಾಸುರರಂತೆ ಎಲ್ಲೆಡೆ ಸೃಷ್ಟಿಯಾಗುತ್ತಿದ್ದರೂ, ಅಧಿಕಾರ ರಾಜಕಾರಣ ತನ್ನ ಪೀಠ ಉಳಿಸಿಕೊಳ್ಳಲು ಭಯೋತ್ಪಾದನೆ, ಕೋಮುವಾದ, ಜಾತಿವಾದ, ಮತಾಂಧತೆ ಮುಂತಾದ ಎಲ್ಲ ರೀತಿಯ ವಿಚ್ಚಿದ್ರಕಾರಕ ಧೋರಣೆಗಳನ್ನು ಪೋಷಿಸುತ್ತಿದ್ದಾಗಲೂ, ಎಲ್ಲೋ ಒಂದು ಕಡೆ “ಮೌಲ್ಯಾಧಾರಿತ ರಾಜಕಾರಣ ” ಎಂಬ ಕ್ಷೀಣ ಸ್ವರ ಕೇಳಿಬರುತ್ತಿತ್ತು.
ಈ ಭ್ರಮಾತ್ಮಕ ಪರಿಕಲ್ಪನೆಗೆ ಕರ್ನಾಟಕವೇ ತವರುಮನೆಯಾಗಿತ್ತು ಎಂದರೆ ನಂಬಲಾಗದಷ್ಟು ಮಟ್ಟಿಗೆ ಇಂದು ರಾಜ್ಯ ರಾಜಕಾರಣ ಸಂಪೂರ್ಣ ಬೆತ್ತಲಾಗಿ ನಿಂತುಬಿಟ್ಟಿದೆ. 1960ರ ದಶಕದ ನೈತಿಕ ಮೌಲ್ಯಗಳು 80ರ ದಶಕದ ವೇಳೆಗೆ ಅಧಿಕಾರ ಮೌಲ್ಯಗಳಾಗಿ ಪರಿವರ್ತಿತವಾದವು. ಹೊಸ ಸಹಸ್ರಮಾನದ ಆರಂಭಕ್ಕೆ ಇದು ಮಾರುಕಟ್ಟೆ ಮೌಲ್ಯವಾಗಿ ಬದಲಾಗಿತ್ತು.
ಆತ್ಮನಿರ್ಭರ ಭಾರತದಲ್ಲಿ ಈಗ ಮೂರೂ ಮಾದರಿಯ ಮೌಲ್ಯಗಳು ಅರ್ಥಹೀನವಾಗಿ ಕಾಣುತ್ತಿವೆ. ಹಾಗಾಗಿಯೇ ಇಂದು ಪಕ್ಷಾಂತರ, ಭ್ರಷ್ಟಾಚಾರ, ಹಗರಣಗಳು ಸದ್ದು ಮಾಡುತ್ತಿಲ್ಲ. ಕುದುರೆ ವ್ಯಾಪಾರ ಎನ್ನುವ ಪದಬಳಕೆಯೇ ಇಲ್ಲವಾಗಿದೆ. ಕಾರಣ, ಶಾಸಕರು, ಸಂಸದರು ಮುಕ್ತ ಮಾರುಕಟ್ಟೆಯಲ್ಲಿ ಖುಲ್ಲಂಖುಲ್ಲಾ ಬಿಕರಿಯಾಗುತ್ತಿದ್ದಾರೆ. ಹೀಗೆ ಬಿಕರಿಯಾದ ಅನರ್ಹ ಶಾಸಕರನ್ನೊಳಗೊಂಡ ಸರ್ಕಾರಗಳು ನಮ್ಮ ಸಂವಿಧಾನವನ್ನು ಪ್ರತಿನಿಧಿಸುತ್ತಿವೆ.
ಭಾರತದ ಸಂವಿಧಾನ ಜನಾಂಗೀಯ ಅನುಪಾತ ಆಧಾರಿತ ಪ್ರಾತಿನಿಧ್ಯ ವ್ಯವಸ್ಥೆಯನ್ನು ಸ್ವೀಕರಿಸಿಲ್ಲ. ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧರಾಗಿ ಜನರಿಂದ ಚುನಾಯಿತರಾಗುವ ಪ್ರತಿನಿಧಿಗಳು, ಜಾತಿ-ಮತ-ಕುಲ-ಪಂಥ-ಪಂಗಡ ಈ ಎಲ್ಲ ಅಸ್ಮಿತೆಗಳಿಂದ ಹೊರತಾದ ಸಮಾಜವನ್ನು ಪ್ರತಿನಿಧಿಸುತ್ತಾರೆ.
ಈ ಕನಿಷ್ಠ ಪ್ರಜ್ಞೆಯನ್ನೂ ಕಳೆದುಕೊಂಡಿರುವ ಇಂದಿನ ಜನಪ್ರತಿನಿಧಿಗಳು ಪಕ್ಷ ರಾಜಕಾರಣ ಮತ್ತು ತಮ್ಮ ಪಕ್ಷಗಳ ಸೈದ್ಧಾಂತಿಕ ನೆಲೆಗಳನ್ನೇ ಆಶ್ರಯಿಸಿ ಜನಸಾಮಾನ್ಯರನ್ನು ವಿಂಗಡಿಸಿ, ವಿಭಜಿಸಿ ನೋಡಲಾರಂಭಿಸಿದ್ದಾರೆ. ಮಂಡಲ ಪಂಚಾಯತ್‌ನಿಂದ ಸಂಸತ್ತಿನವರೆಗೆ ಚುನಾಯಿತರಾದ ಯಾವುದೇ ಪ್ರತಿನಿಧಿ ತನ್ನ ಕೌಟುಂಬಿಕ ವಲಯದಿಂದ ಹೊರಗೆ ಕಾಲಿಟ್ಟ ಕೂಡಲೇ ಸಾರ್ವಜನಿಕ ವ್ಯಕ್ತಿತ್ವ ಪಡೆದುಕೊಳ್ಳುತ್ತಾನೆ/ಳೆ. ಅದರೊಂದಿಗೇ ತನ್ನ ಕೌಟುಂಬಿಕ ನೆಲೆಯ ಅಸ್ಮಿತೆಗಳನ್ನೂ, ನಂಬಿಕೆ ಮತ್ತು ಆಚರಣೆಗಳನ್ನೂ, ಮತಶ್ರದ್ಧೆ ಮತ್ತು ಜಾತಿ ನಿಷ್ಠೆಯನ್ನೂ ಕಳೆದುಕೊಳ್ಳಬೇಕಾಗುತ್ತದೆ.
ಪ್ರಜಾಪ್ರಭುತ್ವ ವ್ಯವಸ್ಥೆಯೇ ಧರ್ಮ, ಸಂವಿಧಾನವೇ ಧರ್ಮ ಗ್ರಂಥ ಆಗಬೇಕಾಗುತ್ತದೆ. ಈ ಸಾಂವಿಧಾನಿಕ ಮೌಲ್ಯಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿರುವುದರಿಂದಲೇ ಭಾರತದ ಪ್ರಜಾತಂತ್ರ ಇಂದು ಅವನತಿಯತ್ತ ಸಾಗುತ್ತಿದೆ.
ಸಾರ್ವಜನಿಕರ ನಡುವೆ ಸಂವಿಧಾನವನ್ನು ಪ್ರತಿನಿಧಿಸಬೇಕಾದ ಚುನಾಯಿತ ಪ್ರತಿನಿಧಿಗಳು ತಮ್ಮ ಮನೆಯ ಹೊಸ್ತಿಲಿನಿಂದಾಚೆಗೆ ಆಡುವ ಪ್ರತಿಯೊಂದು ಮಾತಿಗೂ ಸಾರ್ವಜನಿಕ, ಸಾರ್ವತ್ರಿಕ ಮೌಲ್ಯ ಇರುತ್ತದೆ. ಸಾಂವಿಧಾನಿಕ ನೈತಿಕತೆಯನ್ನು ಗೌರವಿಸಿ ಈ ಮೌಲ್ಯಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಂದು ರಾಜಕೀಯ ಪಕ್ಷದ ನೈತಿಕ ಹೊಣೆಯೂ ಆಗಿರುತ್ತದೆ.
ಇದು ಅರಿವಾಗಬೇಕಾದರೆ ಜನಪ್ರತಿನಿಧಿಗಳಿಗೆ ಸಮಾಜದ ನಾಡಿ ಮಿಡಿತ ಅರ್ಥವಾಗಬೇಕು. ಕಾರ್ಪೋರೇಟ್ ಮಾರುಕಟ್ಟೆಯ ಹಣ ಚೆಲ್ಲುವ ಮೂಲಕ ಬಹುಮತ ಗಳಿಸಿದ್ದರೂ, ಕೆಳಸ್ತರದ ದುಡಿಮೆಯ ಜನರು ತಮ್ಮ ಜೀವನೋಪಾಯದ ಮಾರ್ಗಗಳನ್ನು ಸುಗಮಗೊಳಿಸುವ ಒಂದು ಸಮನ್ವಯದ ಸಮಾಜವನ್ನು ಬಯಸಿ ಮತ ನೀಡಿರುತ್ತಾರೆ. ಈ ದುಡಿವ ಜನಗಳ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕಾದರೆ, ಅಸ್ಮಿತೆಗಳ ಚೌಕಟ್ಟಿನಿಂದ ಹೊರಬಂದು ಆಲೋಚನೆ ಮಾಡಬೇಕಾಗುತ್ತದೆ.
ಈ ಶ್ರಮಿಕರ ಮತ್ತು ಶ್ರಮವನ್ನೇ ನಂಬಿ ಬದುಕುವ ಕೋಟ್ಯಂತರ ಕುಟುಂಬಗಳ ನಾಡಿಮಿಡಿತವನ್ನು ಗ್ರಹಿಸದ ಹೊರತು ಈ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲಾಗುವುದಿಲ್ಲ. ಧಾರವಾಡದಲ್ಲಿ ಐದು ಕ್ವಿಂಟಲ್ ಕಲ್ಲಂಗಡಿ ಹಣ್ಣನ್ನು ಮಣ್ಣು ಮಾಡಿದ ಮತಾಂಧರಿಗೆ ಮತೀಯ ಉನ್ಮಾದ ಖುಷಿ ನೀಡಬಹುದು ಆದರೆ ಈ ಕಲ್ಲಂಗಡಿಯ ಹಿಂದೆ ಇರುವ ಕಾಯಕ ಸಮಾಜದಲ್ಲಿ ಅಂಗಡಿಯನ್ನು ಕಳೆದುಕೊಂಡ ಮುಸ್ಲಿಂ ವೃದ್ಧನೊಂದಿಗೇ ನೂರಾರು ಹಿಂದೂ, ದಲಿತ, ಕ್ರೈಸ್ತ ಶ್ರಮಜೀವಿಗಳಿರುತ್ತಾರೆ. ಈ ವಾಸ್ತವವನ್ನು ಅರ್ಥಮಾಡಿಕೊಂಡರೆ ಜನಪ್ರತಿನಿಧಿಗಳು ಇಂತಹ ದುಷ್ಕೃತ್ಯಗಳನ್ನು ಕೂಡಲೇ ಖಂಡಿಸಬೇಕಾಗುತ್ತದೆ.
ಇಂತಹ ವ್ಯವಸ್ಥೆಯಲ್ಲಿ ಒಂದು ಪ್ರಜಾಸತ್ತಾತ್ಮಕ ಸಂವಿಧಾನವನ್ನು ಪ್ರತಿನಿಧಿಸುವ ವ್ಯಕ್ತಿಗಳಿಗೆ ತಮ್ಮ ಸಾರ್ವಜನಿಕ ವ್ಯಕ್ತಿತ್ವದ ಪರಿವೆ, ಪರಿಜ್ಞಾನ ಇರಬೇಕಲ್ಲವೇ ? ಅಸ್ಪೃಶ್ಯತೆ, ಜಾತಿ ತಾರತಮ್ಯ, ಜಾತಿ ದೌರ್ಜನ್ಯ ಮತ್ತು ಮತೀಯ ದ್ವೇಷದ ಸರಕುಗಳನ್ನು ಹೊತ್ತುಕೊಂಡು, ಮತದಾರರ ನಡುವೆ ಅಮೂಲ್ಯ ಮತಗಳನ್ನು ಬಿಕರಿ ಮಾಡುತ್ತಾ, ಕೊನೆಗೆ ಅಧಿಕಾರ ಲಾಲಸೆಗಾಗಿ ತಮ್ಮನ್ನೂ ಬಿಕರಿಗಿಟ್ಟು ಮಾರಿಕೊಳ್ಳುವ ಜನಪ್ರತಿನಿಧಿಗಳಲ್ಲಿ ಈ ಪರಿಜ್ಞಾನವನ್ನು ಅಪೇಕ್ಷಿಸಲಾದೀತೇ ? ಧಾರವಾಡದಲ್ಲಿ ಮಣ್ಣಾದ ಕಲ್ಲಂಗಡಿ ಹಣ್ಣುಗಳು ಈ ದ್ವೇಷ ರಾಜಕಾರಣವನ್ನೇ ಪ್ರತಿನಿಧಿಸುತ್ತವೆ.
ಈ ದ್ವೇಷ ಎಲ್ಲಿಯವರೆಗೆ ಹರಡಲು ಸಾಧ್ಯ ? ಒಂದು ಮಂದಿರಕ್ಕಾಗಿ, ಚಾರಿತ್ರಿಕ ಮಸೀದಿಗಾಗಿ ಗತ ಇತಿಹಾಸವನ್ನೇ ಪಲ್ಲಟಗೊಳಿಸಿ ಸಮಕಾಲೀನ ಸಮಾಜದ ಮನುಜ ಸಂಬಂಧಗಳನ್ನು ಮರುವಿಶ್ಲೇಷಣೆಗೊಳಪಡಿಸುವ ಸಾಂಸ್ಕೃತಿಕ ರಾಜಕಾರಣದ ಪರಿಣಾಮ ಇಂದು ಭಾರತದಲ್ಲಿ ಜನಾಂಗೀಯ ದ್ವೇಷ ಮಡುಗಟ್ಟಿದೆ. ನಿರ್ದಿಷ್ಟ ಮತಶ್ರದ್ಧೆಯನ್ನು ಪ್ರತಿನಿಧಿಸುವ ಮತೀಯ ಸಂಘಟನೆಗಳು, ಧಾರ್ಮಿಕ ನೇತಾರರು, ಮುಸ್ಲಿಂ ಮೌಲ್ವಿಗಳು, ಹಿಂದೂ ಮಠಾಧೀಶರು, ಮಠೋದ್ಯಮಿಗಳು, ಸಾಧು ಸಂತರು ತಮ್ಮದೇ ಆದ ಸಾಂಸ್ಥಿಕ, ಮತ ಕೇಂದ್ರಿತ, ಧರ್ಮ ಕೇಂದ್ರಿತ ಅಸ್ಮಿತೆಗಳನ್ನು ರಕ್ಷಿಸಿಕೊಳ್ಳಲು ಅಧಿಕಾರ ಕೇಂದ್ರಗಳೊಡನೆ ನಿಕಟ ಸಂಪರ್ಕವನ್ನು ಸಾಧಿಸಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ.
ಇದರೊಂದಿಗೇ ಹಿಂದೂ ಧರ್ಮ ರಕ್ಷಣೆಗೆ, ಇಸ್ಲಾಂ ಧರ್ಮ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಹತ್ತು ಹಲವು ಸಂಘಟನೆಗಳು ಇಂದು ದೇಶಾದ್ಯಂತ ಹರಡಿವೆ. ಹರಿದ್ವಾರದಲ್ಲಿ ನಡೆದ ಹಿಂದೂ ಸಂತರ ಸಮ್ಮೇಳನದಲ್ಲಿ ಮುಸಲ್ಮಾನರ ನರಮೇಧಕ್ಕೆ ಕರೆ ನೀಡಿರುವುದನ್ನೂ ಸೇರಿದಂತೆ, ಹಲವು ಧಾರ್ಮಿಕ ನಾಯಕರು, ಸ್ವಾಮೀಜಿಗಳು ಜನವಿರೋಧಿ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಕೆಲವು ಮುಸ್ಲಿಂ ಮತಾಂಧ ಸಂಘಟನೆಗಳೂ ಸಹ ಪ್ರತ್ಯಕ್ಷವಾಗಿ, ಪರೋಕ್ಷವಾಗಿ, ಮತೀಯ ದ್ವೇಷವನ್ನು ಹರಡುವ ಕಾರ್ಯಾಚರಣೆಯಲ್ಲಿ ತೊಡಗಿರುವುದು ಗುಟ್ಟಿನ ಮಾತೇನಲ್ಲ.
ಈ ವಾಸ್ತವವನ್ನು ಒಪ್ಪಿಕೊಂಡೇ ಭಾರತ ಇಂದು ಮತಾಂಧತೆಯ ವಿರುದ್ಧ ಹೋರಾಡಬೇಕಿದೆ. ಅಲ್ಪಸಂಖ್ಯಾತ ಸಮುದಾಯಗಳ ಜೀವನೋಪಾಯಕ್ಕೆ ಸಂಚಕಾರ ತಂದೊಡ್ಡುವ ರೀತಿಯಲ್ಲಿ ವ್ಯಾಪಾರ ನಿಷೇಧ ಹೇರುವ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಇದು ದೇವಾಲಯದ ಆವರಣದಿಂದ ಸಂತೆಮಾಳದವರೆಗೆ, ಜಾತ್ರೆಗಳವರೆಗೆ ಹರಡಿದೆ. ಇದರ ಪರಾಕಾಷ್ಠೆಯನ್ನು ಧಾರವಾಡದ ಕಲ್ಲಂಗಡಿ ಅಂಗಡಿಯ ಧ್ವಂಸದಲ್ಲಿ ಕಂಡಿದ್ದೇವೆ. ದೆಹಲಿಯ ಜೆಎನ್‌ಯು ವಿಶ್ವವಿದ್ಯಾಲಯದ ಹಾಸ್ಟೆಲ್ ಒಂದರಲ್ಲಿ ಮಾಂಸಾಹಾರ ಸೇವಿಸಲು ಅಡ್ಡಿಪಡಿಸಿರುವ ಕೆಲವು ಮತಾಂಧರು ಅಲ್ಲಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವುದು ವರದಿಯಾಗಿದೆ.
ಈ ದುಷ್ಕೃತ್ಯಗಳಲ್ಲಿ ತೊಡಗುವ, ಮುಸ್ಲಿಂ ವ್ಯಾಪಾರಿಗಳಲ್ಲಿ ಭೀತಿ ಉಂಟುಮಾಡುವ ಸಂಘಟನೆಗಳನ್ನು ನಿಯಂತ್ರಿಸುವುದು ಚುನಾಯಿತ ಸರ್ಕಾರದ ಆದ್ಯತೆಯಾಗಬೇಕಿದೆ. ಈ ಸಂಘಟನೆಗಳ ಧ್ಯೇಯ ಯಾವುದೇ ಧರ್ಮ ರಕ್ಷಣೆಯಲ್ಲ ಅಥವಾ ಒಂದು ಸಮುದಾಯದ ಹಿತಾಸಕ್ತಿಗಳ ರಕ್ಷಣೆಯೂ ಆಗಿರುವುದಿಲ್ಲ. ತಮ್ಮ ಸಂಘಟನಾತ್ಮಕ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕೆಲವೇ ಬೆರಳೆಣಿಕೆಯಷ್ಟು ಮಂದಿಯ ಸಂಘಟನೆಗಳು ಸಮಾಜದಲ್ಲಿ ಪ್ರಕ್ಷುಬ್ಧತೆ ಉಂಟುಮಾಡಲು ಈ ರೀತಿಯ ದಾಳಿ ನಡೆಸಲಾಗುತ್ತದೆ.
ಆದರೆ ಈ ದಾಳಿಗಳ ಹಿಂದಿರುವ ಮನಸ್ಥಿತಿಗೆ ಕಳೆದ ಮೂರು ದಶಕಗಳಲ್ಲಿ ನೆಲೆಯೂರಿರುವ ದ್ವೇಷ ರಾಜಕಾರಣವೇ ಆಗಿದೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ತಳಮಟ್ಟದಲ್ಲಿ ಸದಾ ಸಮನ್ವಯ ಮತ್ತು ಸೌಹರ್ದತೆಯಿಂದ ಬದುಕು ಸವೆಸುವ ಶ್ರಮಜೀವಿ ವರ್ಗಗಳ ನಡುವೆ ಜಾತಿ ಮತಗಳ ಗೋಡೆಗಳನ್ನು ಕಟ್ಟುವ ಮೂಲಕ ಸಾಮಾಜಿಕ ವಿಘಟನೆಗೆ ಕಾರಣವಾಗುವುದೇ ಅಲ್ಲದೆ, ಜನಸಾಮಾನ್ಯರಲ್ಲಿ ಅನ್ಯಮತ ದ್ವೇಷ ಮತ್ತು ಅಸೂಯೆಯನ್ನು ಹರಡುವ ಪ್ರಕ್ರಿಯೆಗೆ ದ್ವೇಷ ರಾಜಕಾರಣ ಬುನಾದಿಯಾಗುತ್ತದೆ.
ಈ ವಿಘಟನೆಯ ಪ್ರಕ್ರಿಯೆಯನ್ನು ಮತ್ತು ವಿಧ್ವಂಸಕ ಪ್ರವೃತ್ತಿಯನ್ನು ತಡೆಗಟ್ಟುವುದು ಈ ದೇಶದ ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯವೂ ಆಗಿರುತ್ತದೆ. ಆದರೆ ಇಂತಹ ಪ್ರತಿಯೊಂದು ಘಟನೆ ಸಂಭವಿಸಿದಾಗಲೂ, ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದಾಗಲೂ ಅದನ್ನ ಸಮರ್ಥಿಸುವ ಅಥವಾ ಪ್ರಚೋದಿಸುವ ಹೇಳಿಕೆಗಳನ್ನು ನೀಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.
ರಾಜಕೀಯ ಪಕ್ಷದ ನಾಯಕರು ಮತ್ತು ವಿಶೇಷವಾಗಿ ಜನಪ್ರತಿನಿಧಿಗಳು ತಮ್ಮ ಪ್ರಾತಿನಿಧಿತ್ವವನ್ನು ಒಂದು ಸೀಮಿತ ಜಾತಿ, ಮತದ ಚೌಕಟ್ಟಿಗೆ ಒಳಪಡಿಸಿಕೊಳ್ಳುವುದು ಸಂವಿಧಾನಕ್ಕೆ ದ್ರೋಹ ಬಗೆದಂತಾಗುತ್ತದೆ. ತಮ್ಮ ಪಕ್ಷದ ಸಿದ್ಧಾಂತ, ತಾತ್ವಿಕ ನೆಲೆಗಳು ಮತ್ತು ಅಂತಿಮ ಗುರಿ ಏನೇ ಆಗಿದ್ದರೂ, ಇಂದು ದೇಶದ ಶಾಸನ ಸಭೆಗಳಲ್ಲಿ ಆಸೀನರಾಗಿರುವ ಪ್ರತಿಯೊಬ್ಬ ಜನಪ್ರತಿನಿಧಿಯೂ ಭಾರತದ ಸಂವಿಧಾನಕ್ಕೆ ಬದ್ಧರಾಗಿಯೇ ನಡೆದುಕೊಳ್ಳಬೇಕಲ್ಲವೇ ? ಹಿಂದೂ ಮತ್ತು ಇಸ್ಲಾಂ ಧರ್ಮದ ರಕ್ಷಣೆಯ ಹೆಸರಿನಲ್ಲಿ ಹುಟ್ಟಿಕೊಂಡಿರುವ ಅಸಂಖ್ಯಾತ ಸಂಘಟನೆಗಳು ಇಂದು ಶಸ್ತ್ರಾಸ್ತ್ರಗಳ ಭಂಡಾರವನ್ನೇ ತಮ್ಮ ಬಳಿ ಇಟ್ಟುಕೊಂಡಿವೆ. ಬಹಿರಂಗವಾಗಿಯೇ ಖಡ್ಗ ಝಳಪಿಸುವ, ಲಾಂಗು ಮಚ್ಚುಗಳನ್ನು ವಿತರಿಸುವ ಮತ್ತು ಪ್ರದರ್ಶಿಸುವ, ಹಂಚುವ ಹಾಗೂ ಬಳಸುವ ಮಟ್ಟಿಗೆ ಈ ಮತಾಂಧ ಸಂಘಟನೆಗಳು ಬೆಳೆದು ನಿಂತಿವೆ.
ಈ ವಿಧ್ವಂಸಕತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ವಿಫಲವಾಗಿರುವುದೇ ಅಲ್ಲದೆ, ಅಮಾಯಕ ಸಾರ್ವಜನಿಕರ ಮೇಲೆ ನಡೆಯುವ ಮತಾಂಧರ ದಾಳಿಗಳ ಬಗ್ಗೆ ಮೌನ ವಹಿಸುವ ಮೂಲಕ ಈ ಕೃತ್ಯಗಳಿಗೆ ಪರೋಕ್ಷ ಸಮ್ಮತಿಯನ್ನೂ ನೀಡುತ್ತಿವೆ. ಕಳೆದ ಎರಡು ತಿಂಗಳಲ್ಲೇ ಕರ್ನಾಟಕದಲ್ಲಿ ಐದಾರು ಯುವಕರ ಹತ್ಯೆಗಳು ನಡೆದಿವೆ.
ಪ್ರತಿಯೊಂದು ಘಟನೆಯಲ್ಲೂ ಜಾತಿ-ಮತ-ಧರ್ಮದ ಅಸ್ಮಿತೆಗಳನ್ನು ಕೆದಕುವ ಮೂಲಕ ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿರುವ ಜನಪ್ರತಿನಿಧಿಗಳು, ಈ ಹತ್ಯೆಗಳನ್ನು ಪ್ರಚೋದಿಸುವ ಸಾಮಾಜಿಕ-ಸಾಂಸ್ಕೃತಿಕ ಕಾರಣಗಳನ್ನು ಶೋಧಿಸಲು ಮುಂದಾಗುತ್ತಿಲ್ಲ. ಬದಲಾಗಿ ಪ್ರತಿಯೊಂದು ಹತ್ಯೆಯನ್ನೂ, ದಾಳಿಯನ್ನೂ ತಮ್ಮ ಪಕ್ಷದ ಸೈದ್ಧಾಂತಿಕ ನಿಲುಮೆಗೆ ಅನುಗುಣವಾಗಿ ಸಮರ್ಥಿಸಿಕೊಳ್ಳುವ ಅಥವಾ ವಿರೋಧಿಸುವ ಬೀಸು ಹೇಳಿಕೆಗಳ ಮೂಲಕ ಸಮಾಜದಲ್ಲಿ ಅಶಾಂತಿ ಮತ್ತು ಪ್ರಕ್ಷುಬ್ಧತೆಯನ್ನು ಹೆಚ್ಚಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಚಂದ್ರು ಕೊಲೆ ಪ್ರಕರಣದಲ್ಲಿ ಗೃಹಸಚಿವರ ಅವಸರದ ಹೇಳಿಕೆ ಇದಕ್ಕೊಂದು ನಿದರ್ಶನ. ಮುಸ್ಕಾನ್ ಪ್ರಕರಣದಲ್ಲಿ ಅಲ್‌ಖೈದಾ ಸಂದೇಶವನ್ನು ಆರೆಸ್ಸೆಸ್ ಪಿತೂರಿ ಎಂದು ನಿರಾಧಾರವಾಗಿ ಆರೋಪಿಸುವ ಕಾಂಗ್ರೆಸ್ ಪಕ್ಷದ ವರ್ತನೆಯೂ ಇಲ್ಲಿ ಪ್ರಶ್ನಾರ್ಹವಾಗುತ್ತದೆ. ಈ ಸಂದೇಶದ ಮೂಲವನ್ನು ತಮ್ಮ ವಿರೋಧಿ ಪಕ್ಷಗಳಲ್ಲಿ ಹುಡುಕುತ್ತಾ ದೋಷಾರೋಪಣೆಯಲ್ಲಿ ತೊಡಗುವುದರಿಂದ, ಜಾಗತಿಕ ಭಯೋತ್ಪಾದನೆಯ ರೂವಾರಿ ಸಂಘಟನೆಗಳಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗುತ್ತದೆ. ಈ ಸೂಕ್ಷ್ಮವನ್ನು ಸಹ ಗಮನಿಸಲಾರದಷ್ಟು ನಮ್ಮ ಜನಪ್ರತಿನಿಧಿಗಳು ವಿವೇಕ ಕಳೆದುಕೊಂಡಂತಿದೆ.
ಇಂದು ಹಿಂದೂ ಮತಾಂಧ ಸಂಘಟನೆಗಳು ನಡೆಸುತ್ತಿರುವ ದಾಳಿಗಳ ಹಿಂದೆ ಒಂದು ರಾಜಕೀಯ ಚಿಂತನಾ ವಾಹಿನಿ ಇದೆ. ಇದಕ್ಕೆ ಪ್ರತಿಯಾಗಿ ಮುಸ್ಲಿಂ ಸಂಘಟನೆಗಳು ತಾಳ್ಮೆಯಿಂದಲೇ ಇದ್ದರೂ, ಇಂತಹ ಸನ್ನಿವೇಶದಲ್ಲಿ ಸಮುದಾಯದೊಳಗಿನ ಒಳಗುದಿ, ಅಂತರಿಕ ಕ್ಷೋಭೆ ಯಾವುದೇ ಕ್ಷಣದಲ್ಲಾದರೂ ಸ್ಫೋಟಿಸುವ ಸಾಧ್ಯತೆಗಳಿರುತ್ತವೆ. ರಾಮಮಂದಿರ ವಿವಾದದ ಸಂದರ್ಭದಲ್ಲಿ ಭಾರತ ಇಂತಹ ಸನ್ನಿವೇಶಗಳಿಗೆ ಸಾಕ್ಷಿಯಾಗಿ, ಸಾವಿರಾರು ಜೀವಗಳ ಬಲಿಯಾಗಿದೆ.
ಎರಡೂ ಕಡೆಯ ಮತಾಂಧ ಸಂಘಟನೆಗಳ ಬಳಿ ಅಂತರಿಕ ಕಲಹ ಸೃಷ್ಟಿಮಾಡುವಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳ ಸಂಗ್ರಹವಾಗಿರುವುದು ಸರ್ಕಾರಕ್ಕೂ ತಿಳಿದಿದೆ. ಆದರೆ ಈ ದಿಕ್ಕಿನಲ್ಲಿ ಪ್ರಸ್ತುತ ಸರ್ಕಾರವನ್ನೂ ಸೇರಿದಂತೆ ಯಾವುದೇ ಸರ್ಕಾರವೂ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳದಿರುವುದು ನಾಗರಿಕ ಸಮಾಜವನ್ನು ಸದಾ ಪ್ರಕ್ಷುಬ್ಧತೆಯಲ್ಲಿರುವಂತೆ ಮಾಡಿದೆ.
ಹಿಜಾಬ್ ಆಗಲೀ, ಹಲಾಲ್ ಆಗಲೀ ಅಥವಾ ದೇವಾಲಯಗಳ ಬಳಿ ವ್ಯಾಪಾರ ನಡೆಸುವುದಾಗಲೀ, ಸಾಂವಿಧಾನಿಕ ನೆಲೆಯಲ್ಲಿ ನಿರ್ಧಾರವಾಗಬೇಕಾದ ಈ ವಿವಾದಗಳಲ್ಲಿ ಇಂದು ಹಿಂದೂ ಮತ್ತು ಮುಸ್ಲಿಂ ಮತಾಂಧ ಸಂಘಟನೆಗಳು ನಿರ್ಣಾಯಕವಾಗುತ್ತಿವೆಯೇ ಹೊರತು ಜಾತ್ಯತೀತ ನೆಲೆಯ ವಿವೇಕಯುತ ನಾಗರಿಕ ಸಮಾಜ ಕಂಡುಬರುತ್ತಿಲ್ಲ. ಪರಿಣಾಮ ನಬೀಸಾಬ್‌ನಂತಹ ಅಮಾಯಕ ವ್ಯಾಪಾರಿಗಳು, ಹರ್ಷನಂತಹ ಯುವಕರು ಬಲಿಯಾಗುತ್ತಾರೆ.
ನಾಗರಿಕ ಸಮಾಜದ ಉದಾರವಾದಿ ನೆಲೆಯ, ಜಾತ್ಯತೀತ ಧೋರಣೆಯ ಸಾರ್ವಜನಿಕ ಪ್ರತಿನಿಧಿಗಳಿಗೆ ಇಂತಹ ಒಂದು ಅವಕಾಶವನ್ನು ಕಲ್ಪಿಸುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿರುತ್ತದೆ. ಪಕ್ಷ ರಾಜಕಾರಣ ಕೇವಲ ಅಧಿಕಾರ ಪೀಠವನ್ನು ಅಲಂಕರಿಸುವ ಒಂದು ಸಾಧನ ಮಾತ್ರ. ಇದನ್ನು ಮೀರಿದ ಒಂದು ಸಾಂವಿಧಾನಿಕ ನೈತಿಕತೆ ಎಲ್ಲ ಪಕ್ಷದ ನಾಯಕರಲ್ಲೂ ಇರಬೇಕಾಗುತ್ತದೆ.
ಸಂವಿಧಾನ ಪ್ರತಿಪಾದಿಸುವ ಸಮಾನತೆ, ಸಹಿಷ್ಣುತೆ, ಭ್ರಾತೃತ್ವ ಮತ್ತು ಜಾತ್ಯತೀತೆಯನ್ನು ಕಾಪಾಡುವ ಹೊಣೆ ಪ್ರತಿಯೊಬ್ಬ ಜನಪ್ರತಿನಿಧಿಯ ಮೇಲೆ, ಪಕ್ಷಾತೀತವಾಗಿ, ಇರುತ್ತದೆ. ದುರಂತ ಎಂದರೆ ಪಕ್ಷ ರಾಜಕಾರಣದ ಅಧಿಕಾರ ಮೋಹಕ್ಕೆ ಬಲಿಯಾಗಿರುವ ಭಾರತದ ರಾಜಕಾರಣಿಗಳು ತಮ್ಮ ಈ ನೈತಿಕ ಹೊಣೆಯನ್ನೇ ಮರೆತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಶಾಶ್ವತವಲ್ಲ, ಈ ಅಧಿಕಾರವನ್ನು ಅನುಭವಿಸಲು ಅವಕಾಶ ನೀಡುವ ಪ್ರಜಾಸತ್ತಾತ್ಮಕ ಸಂವಿಧಾನ ಮತ್ತು ಈ ಸಂವಿಧಾನ ಪ್ರತಿಪಾದಿಸುವ ಮೌಲ್ಯಗಳು ಶಾಶ್ವತವಾದದ್ದು. ಈ ಪರಿಜ್ಞಾನ ಎಲ್ಲ ರಾಜಕೀಯ ನಾಯಕರಲ್ಲೂ ಇರಬೇಕಾಗುತ್ತದೆ.
ಇದು ಇಲ್ಲವಾಗಿರುವುದರಿಂದಲೇ ಭಾರತ ಇಂದು ದ್ವೇಷ, ಅಸೂಯೆ, ಮತ್ಸರ, ಮತಾಂಧತೆ, ಜಾತೀಯತೆ ಮತ್ತು ಹಿಂಸೆಯಿಂದ ಕೂಡಿದ ಒಂದು ಅಗ್ನಿಕುಂಡದಲ್ಲಿ ಬೇಯುವಂತಾಗಿದೆ. ಇದಕ್ಕೆ ಯಾರು ಹೊಣೆ ? ನಬೀ ಸಾಬ್ ಅಲ್ಲ, ಮುಸ್ಕಾನ್ ಅಲ್ಲ, ಹರ್ಷನೂ ಅಲ್ಲ, ಚಂದ್ರು ಸಹ ಅಲ್ಲ. ಇವರೆಲ್ಲರೂ ಸ್ಥಾಪಿತ ವ್ಯವಸ್ಥೆಯೊಳಗಿನ ವಿಕೃತಿಗಳಿಗೆ ಬಲಿಯಾದ ಅಮಾಯಕರೇ ಆಗಿದ್ದಾರೆ.
ಈ ಸ್ಥಾಪಿತ ವ್ಯವಸ್ಥೆಯಲ್ಲಿ ನಡೆಯುತ್ತಿರುವ ರಾಜಕೀಯ ಅಪರಾಧೀಕರಣ, ಸಾಂಸ್ಕೃತಿಕ ಪಾತಕೀಕರಣ ಮತ್ತು ಮತ ಧಾರ್ಮಿಕ ಹಿಂಸಾಚರಣೆಗೆ ಈ ದೇಶದ ರಾಜಕೀಯ ವ್ಯವಸ್ಥೆಯೇ ಕಾರಣ ಎನ್ನುವುದು ಸುಸ್ಪಷ್ಟ. ಇದರ ನೇರ ಹೊಣೆಯನ್ನು ಅಧಿಕಾರ ರಾಜಕಾರಣದ ವಾರಸುದಾರರು, ಪಕ್ಷಾತೀತವಾಗಿ ಹೊರಬೇಕಾಗುತ್ತದೆ.
ತಮ್ಮ ಸಾಂವಿಧಾನಿಕ ನೈತಿಕತೆ ಮತ್ತು ಹೊಣೆಗಾರಿಕೆಯನ್ನು ಅರಿತು, ಪ್ರಜಾತಂತ್ರವನ್ನು ಉಳಿಸುವ ಜವಾಬ್ದಾರಿಯೊಂದಿಗೇ, ಸಾರ್ವಜನಿಕ ಬದುಕಿನಲ್ಲಿ ಶಾಂತಿಯುತ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳೂ, ನಾಯಕರೂ ಯೋಚಿಸಿದರೆ ಬಹುಶಃ ಭಾರತ, ಕನಿಷ್ಠ ಪಕ್ಷ ಕರ್ನಾಟಕ “ ಸರ್ವ ಜನಾಂಗದ ಶಾಂತಿಯ ತೋಟ ” ಆಗಲು ಸಾಧ್ಯವಾದೀತು. “ ಸಂವಿಧಾನವನ್ನು ಹೊತ್ತು ತಿರುಗುವ ಚುನಾಯಿತ ಜನಪ್ರತಿನಿಧಿಗಳು ಈ ತೋಟದ ಮಾಲಿಗಳಾದರೆ ಶಾಂತಿ ನೆಲೆಸುತ್ತದೆ ಇಲ್ಲವಾದರೆ ಇರುವ ಹಸಿರೆಲೆಗಳೂ ಮುರುಟಿಹೋಗುತ್ತವೆ.”
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

-
ದಿನದ ಸುದ್ದಿ4 days ago2.5 ಕೋಟಿ ಖರೀದಿಯಲ್ಲಿ ಅವ್ಯವಹಾರ ; ಆಯುಕ್ತೆ ಮಂಜುಶ್ರೀ ಸೇರಿ 6 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಮಾರೋಪ ಸಮಾರಂಭ
-
ಅಂಕಣ3 days agoಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ
-
ದಿನದ ಸುದ್ದಿ3 hours agoನಕಲಿ ಬಿಲ್ಲುಗಳ ಮೂಲಕ ಲಕ್ಷಾಂತರ ರೂಪಾಯಿ ಅವ್ಯವಹಾರ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ನಾಗರಾಜ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ
-
ದಿನದ ಸುದ್ದಿ4 days agoಮಾನಸಿಕ ಆರೋಗ್ಯ ಅರಿವು ಅಗತ್ಯ : ಡಾ. ಪ್ರಭು ಎಂ. ಬಿಸ್ಲೇರಿ
-
ದಿನದ ಸುದ್ದಿ1 day agoನಟ ದಿಲೀಪ್ ರಾಜ್ ಆ ಒಂದು ತಪ್ಪು ಪ್ರಾಣಕ್ಕೆ ಮುಳುವಾಯ್ತು
-
ದಿನದ ಸುದ್ದಿ2 days agoಸಾವಿನಲ್ಲೂ ಒಂದಾದ ಪ್ರೇಮಿಗಳು: ಪ್ರೇಮಿಯ ಪಕ್ಕದಲ್ಲೇ ಪ್ರೇಯಸಿಯ ಅಂತ್ಯಸಂಸ್ಕಾರ!



