ದಿನದ ಸುದ್ದಿ
ದೇಶ ಸುತ್ತೋರಿಗೆ ರೈಲ್ವೆ ಇಲಾಖೆಯ ಭರ್ಜರಿ ಆಫರ್..!
ಸುದ್ದಿದಿನ ಡೆಸ್ಕ್ : ದೇಶ ಸುತ್ತು ಕೋಶ ಓದು ಎಂಬುದು ಜನಪದರ ನುಡಿಯಂತೆ ಕೋಶ ಓದಿಯಾದರೂ ಸರಿ, ದೇಶ ಸುತ್ತಿಯಾದರೂ ಜ್ಞಾನ ಗಳಿಸಬೇಕು. ಓದೋರಿಗಿಂತ ದೇಶ ಸುತ್ತೋರೇ ಹೆಚ್ಚು ಜನ. ಪ್ರವಾಸ ಕೈಗೊಳ್ಳುವ ಪ್ರವಾಸಿಗರಿಗಾಗಿಯೇ ರೈಲ್ವೆ ಇಲಾಖೆಯು ಕೈಗೆಟುಕುವ ದರದಲ್ಲಿ ಆಕರ್ಷಕ ಪ್ರವಾಸದ ಪ್ಯಾಕೇಜ್ ನೀಡಿದೆ.
ರೈಲು ದೇಶದ ಪ್ರಮುಖ ಪ್ರವಾಸಿ, ಧಾರ್ಮಿಕ ಸ್ಥಳಗಳನ್ನು ಒಳಗೊಂಡಿದೆ. ಪ್ರವಾಸಿಗರ ಬಜೆಟ್ ಗೆ ತಕ್ಕಂತೆ ತಮಗಿಷ್ಟದ ಸ್ಥಳಗಳುಳ್ಳ ಪ್ಯಾಕೇಜ್ ಆಯ್ಕೆ ಮಾಡಿಕೊಂಡು ಪ್ರಕಾರ ವಾಸ ಕೈಗೊಳ್ಳಬಹುದು. ಐಆರ್ಟಿಸಿಟಿಸಿ ಟೂರಿಸಂ ವೆಬ್‌ಸೈಟ್ ಗೆ ಹೋಗಿ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳಬಹುದು. ಈ ಪ್ಯಾಕೇಜ್ ನ ಟಿಕೆಟ್ ಗಳನ್ನು ಆನ್‌ಲೈನ್ ಇಲ್ಲವೇ ರೈಲ್ವೆ ಇಲಾಖೆಯ ಕಚೇರಿಯಲ್ಲಿ ಟಿಕೆಟ್ ಬುಕ್ ಮಾಡಬಹುದು.
ಈ ಪ್ರವಾಸ ಕೈಗೊಳ್ಳುವ ರೈಲಿನಲ್ಲಿ ಬೋರ್ಡಿಂಗ್ ವ್ಯವಸ್ಥೆಯೂ ಲಭ್ಯವಿದೆ. ವಿವಿಧ ನಗರಗಳಲ್ಲಿ ರಾತ್ರಿ ಉಳಿದುಕೊಳ್ಳುವ ಪ್ರವಾಸಿಗರಿಗೆ ಅಕಾಮಡೆಷನ್ ಲಭ್ಯವಿದೆ. ಪ್ರವಾಸಿಗರ ಸುರಕ್ಷತೆಗಾಗಿ ಸ್ಥಳದಲ್ಲಿ ಭದ್ರತಾ ಪಡೆ ನಿಯೋಜಿಸಲಾಗಿರುತ್ತದೆ. ರೈಲಿನಲ್ಲಿ ಬಹುತೇಕ ಸ್ವೀಪರ್ ಕೋಚ್ ಇದೆ. ಪ್ರವಾಸಿಗರು ಬೇಡಿಕೆಯಿಟ್ಟರೆ ಎಸಿ ಕೋಚ್ ವ್ಯವಸ್ಥಯನ್ನು ಮಾಡಲಾಗುತ್ತದೆ.
ಭಾರತ್ ದರ್ಶನ್ ರೈಲಿನ ಪ್ಯಾಕೇಜ್ ಇಲ್ಲಿದೆ
01. ಶ್ರಾವಣ ಸ್ಪೆಷಲ್ ಜ್ಯೋತಿರ್ಲಿಂಗ ಯಾತ್ರೆ ಪ್ಲಸ್ ನೇಪಾಲ್ (WZBD235)
ಇದು 20 ಹಗಲು/ 19 ರಾತ್ರಿಯ ಟ್ರಿಪ್ ಆಗಿದ್ದು, ಇದು ಧಾರ್ಮಿಕ ಸ್ಥಳಗಳ ಪ್ರವಾಸವಾಗಿದೆ. ಆಸ್ತಿಕರಿಗೆ ಇಷ್ಟವಾಗುವಂಥ ಟ್ರಿಪ್ ಆಗಲಿದೆ. *ಎಲ್ಲೆಲ್ಲಿ:* ಪುಣೆ, ನಾಸಿಕ್, ದ್ವಾರಕ, ಸೋಮನಾಥ, ಉಜ್ಜಯಿನಿ, ಅಲಹಾಬಾದ್, ವಾರಾಣಸಿ, ಪಶುಪತಿನಾಥ ( ನೇಪಾಳ), ಪೋಕರ್, ಔರಂಗಾಬಾದ್, ಪರ್ಭಾನಿ, ಪರ್ಲಿ, ಕರ್ನೂಲ್ ಟೌನ್ ಪ್ಯಾಕೇಜ್ ನ ಸ್ಥಳಗಳಾಗಿವೆ.
ನೀವು ಆಯ್ದುಕೊಳ್ಳುವ ಸ್ಥಳಗಳಲ್ಲಿ ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ವ್ಯವಸ್ಥೆ ಇದೆ. ಸ್ವೀಪರ್ ಮತ್ತು tier-3 AC ಕ್ಲಾಸ್ ಕೋಚ್ ವ್ಯವಸ್ಥೆ ಇದೆ. ಬೆಳಗ್ಗೆ ಟಿಫಿನ್, ಮಧ್ಯಾಹ್ನ, ರಾತ್ರಿ ಊಟ ಒದಗಿಸಲಾಗುತ್ತದೆ. ಸ್ಟ್ಯಾಂಡರ್ಡ್ ಪ್ಯಾಕೇಜ್ ಗೆ ₹ 18,900 ಹಾಗೂ ಕಂಫರ್ಟ್ (tier-3 AC) ಪ್ಯಾಕೇಜ್ ಗೆ ₹ 23,100 ದರ ನಿಗದಿ ಮಾಡಲಾಗಿದೆ. ಉಳಿದ ಸೌಲಭ್ಯಗಳು ಎರಡಕ್ಕೂ ಅನ್ವಯವಾಗಲಿವೆ.
O2. ಭಾರತ್ ದರ್ಶನ್ (WZBD234R)
ಇದು 10ಹಗಲು/ 9ರಾತ್ರಿಯ ರಾಜ್ ಕೋಟ್ ನಿಂದ ರತ್ಲಂ ವರೆಗಿನ ಪ್ರವಾಸವಾಗಿದೆ. ಪುರಿ, ಆನಂದ, ವಡೋದರ, ಗೋಧ್ರಾ, ರತ್ಲಂ ಪ್ರವಾಸಿ ಸ್ಥಳಗಳನ್ನೊಳಗೊಂಡಿದೆ. ಇದು ಕಡಿಮೆ ದರದ ಪ್ರವಾಸವಾಗಿದ್ದು, ಯಾತ್ರಾರ್ಥಿಗಳಿಗೆ ಹೇಳಿ ಮಾಡಿಸಿದ ಪ್ರವಾಸವಾಗಿದೆ. ಈ ರೈಲು ಸ್ವೀಪರ್ ಕೋಚ್ ಮಾತ್ರ ಸೌಲಭ್ಯ ಹೊಂದಿದೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಉಪಹಾರ ಮತ್ತು ಊಟದ ವ್ಯವಸ್ಥೆ ಇದೆ. ಒಬ್ಬರಿಗೆ ₹ 9,450 ದರ ನಿಗದಿ ಮಾಡಲಾಗಿದೆ.
03. ದಕ್ಷಿಣ್ ಭಾರತ್ ಯಾತ್ರಾ (NZBD225)
ದಕ್ಷಿಣ ಭಾರತದ ಪ್ರಸಿದ್ಧ ಪ್ರವಾಸ ಸ್ಥಳಗಳ ಟ್ರಿಪ್ ಮಾಡೋರಿಗೆ ಇದು ಬೆಸ್ಟ್ ಪ್ಯಾಕೇಜ್. ಚಂಡೀಗಡ, ಅಂಬಾಲ, ಕುರುಕ್ಷೇತ್ರ, ಕರ್ನಲ್, ಪಾಣಿಪತ್, ದೆಹಲಿ ಕಾಂಟಿನೆಂಟಲ್, ರೆವರಿ, ಅಲ್ವರ್, ಜೈಪುರದೊಂದಿಗೆ ರಾಮೇಶ್ವರ, ಮಧುರೈ, ಕೋವಲಂ, ತಿರುಪತಿ ಸ್ಥಳಗಳನ್ನು ದರ್ಶನ ಮಾಡಬಹುದಾಗಿದೆ. ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ವ್ಯವಸ್ಥೆ ಇದೆ. ಹರ್ಯಾಣ, ಪಂಜಾಬ್, ದೆಹಲಿ, ರಾಜಸ್ಥಾನ ರಾಜ್ಯಗಳ ಜನರಿಗೆ ದಕ್ಷಿಣ ಭಾರತದ ಪ್ರವಾಸದ ಪ್ಯಾಕೇಜ್ ಇಷ್ಟವಾಗಬಹುದು. 12ಹಗಲು, 11 ರಾತ್ರಿಯ ಪ್ರವಾಸದ ಪ್ಯಾಕೇಜ್ ಆಗಿದೆ. ಒಬ್ಬರಿಗೆ ₹ 11,340 ದರ ನಿಗದಿ ಮಾಡಲಾಗಿದೆ.
04. ಆಸ್ತ ಸ್ಪೆಷನ್ (SZBD332)
ಇದು 7 ಹಗಲು, 6 ರಾತ್ರಿಗಳುಳ್ಳ ಯಾತ್ರೆಯ ಪ್ಯಾಕೇಜ್ ಆಗಿದ್ದು, ಕೃಷ್ಣನ ಜನ್ಮಸ್ಥಳ ಹಾಗೂ ಉತ್ತರ ಪ್ರದೇಶ, ಬಿಹಾರ ರಾಜ್ಯದಲ್ಲಿರುವ ಧಾರ್ಮಿಕ ಸ್ಥಳಗಳನ್ನು ದರ್ಶನ ಮಾಡುವ ಆಸಕ್ತಿಯುಳ್ಳವರಿಗೆ ಬೆಸ್ಟ್ ಪ್ಯಾಕೇಜ್ ಆಗಿದೆ. ದೆಹಲಿ, ಅಮೃತಸರ, ಹರಿದ್ವಾರ, ಮತುರಾ, ಅಲಹಾಬಾದ್, ವಾರಾಣಸಿ, ಗಯಾ ಸ್ಥಳಗಳನ್ನು ದರ್ಶನ ಮಾಡಬಹುದು. ಒಬ್ಬರಿಗೆ ₹ 12,325 ದರ ನಿಗದಿ ಮಾಡಲಾಗಿದೆ. ಮದುರೈನಿಂದ ಪ್ರವಾಸ ಆರಂಭವಾಗಲಿದೆ.
05. ಶಿರಡಿ ಸ್ಪೆಷಲ್ (SZBD321)
ಈ ಪ್ಯಾಕೇಜ್ ನ ಹೆಸರೇ ಸೂಚಿಸುವಂತೆ ಇದು ಶಿರಡಿ ಸಾಯಿಬಾಬಾ ದರ್ಶನ ಮಾಡುವ ಆಸಕ್ತರಿಗಾಗಿಯೇ ರೆಡಿ ಮಾಡಿದ ಪ್ಯಾಕೇಜ್ ಆಗಿದೆ. 7ಹಗಲು, 6ರಾತ್ರಿಗಳುಳ್ಳ ಪ್ಯಾಕೇಜ್. ಮದುರೈನಿಂದ ಆರಂಭವಾಗುವ ಪ್ರವಾಸವು, ದಿಂಡಿಗಲ್, ಕರೂರ್, ಎರೋಡ್, ಸೇಲಂ, ಜೋಲರ್ಪೆಟ್ಟಯ್, ಕಾಟಪಡಿ, ಚೆನ್ನೈ ಸ್ಥಳಗಳನ್ನೊಳಗೊಂಡಿದೆ. ಒಬ್ಬರಿಗೆ ₹ 6,615 ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ
ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.
ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಪ್ರಾಚಾರ್ಯರು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರ ಸಹಿಯನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಹುಬ್ಬಳ್ಳಿಯ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರಾದ ರಮೇಶ್ ದೇಸಾಯಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸರ್ಕಾರದಿಂದ ವಿತರಣೆಯಾದ ಟೂಲ್‌ಕಿಟ್‌ಗಳನ್ನು ನಿಯಮಾನುಸಾರ ವಿತರಣೆ ಮಾಡದೆ ವಂಚಿಸಿರುವ ಅಧಿಕೃತ ಮಾಹಿತಿಯ ಆಧಾರದ ಮೇಲೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ, ಮಾಹಿತಿ ಕೋರಲಾಗಿತ್ತು.
ಪ್ರಾಚಾರ್ಯರು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿ ಫಾರ್ ಸಹಿಯೊಂದಿಗೆ ಹಿಂಬರಹ ನೀಡಲಾಗಿರುತ್ತದೆ. ಮಾಹಿತಿ ಅಧಿಕಾರಿ, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿರುವ ಫಾರ್ ಸಹಿಯೇ ಪ್ರಾಚಾರ್ಯರ ಹೆಸರಿನ ಪತ್ರದಲ್ಲಿ ನಮೂದಾಗಿರುತ್ತದೆ. ಸದರಿ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರಾಚಾರ್ಯರೇ ಆಗಿರುತ್ತಾರೆ.
ಹೀಗಿರುವಾಗ ಪಾಚಾರ್ಯರ ಮುದ್ರೆ ಇರುವಲ್ಲಿ ಫಾರ್ ಎಂಬುದಾಗಿ ನಮೂದಿಸಿ ಸಹಿ ಮಾಡಿ, ಮಾಹಿತಿ ಅಧಿಕಾರಿ ಎಂಬ ಮುದ್ರೆಗೆ ಫಾರ್ ಬಳಸದೆ ಸಹಿ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಜಂಟಿ ನಿರ್ದೇಶಕರಿಗೆ ದೂರು ನೀಡಲಾಗಿತ್ತು.
ಆದರೆ ಜಂಟಿ ನಿರ್ದೇಶಕರು, ಕೌಶಲ್ಯ ಅಭಿವೃದ್ದಿ ಮತ್ತು ಉದ್ಯೋಗ ಇಲಾಖೆ, ಹುಬ್ಬಳ್ಳಿ ಇವರಿಗೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


