ಅಂಕಣ
ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ’; ವಿದ್ಯಾರ್ಥಿಗಳ ಕಲರವ
ಸುದ್ದಿದಿನ,ಚನ್ನಗಿರಿ:ಪಟ್ಟಣದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ (ಮಾರ್ಚ್-22) ‘ಜಾನಪದ ಉತ್ಸವ – 2025″ ಅದ್ದೂರಿಯಾಗಿ ನಡೆಯಿತು.
ಜಾನಪದ ತಜ್ಞ, ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ, ಅವರು ಉತ್ಸವಕ್ಕೆ ಚಾಲನೆ ನೀಡಿದರು.
ಎತ್ತಿನ ಬಂಡಿಯಲ್ಲಿ ಅಧ್ಯಾಪಕರು, ಅತಿಥಿಗಳ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ನೀರು ತುಂಬಿದ ಪೂರ್ಣ ಕುಂಭಗಳನ್ನು ಹೊತ್ತು ಅತಿಥಿಗಳನ್ನು ಸ್ವಾಗತಿಸಿದರು.
ಅಂದು ಕಾಲೇಜಿನಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ವರ್ಷದಲ್ಲಿ ಬರುವ ಯುಗಾದಿ, ಸಂಕ್ರಾಂತಿ, ಶಿವರಾತ್ರಿ, ಕ್ರಿಸ್ ಮಸ್, ರಂಜಾನ್, ದಸರಾ, ಭೂಮಿ ಹುಣ್ಣಿಮೆ, ರಾಶಿ ಪೂಜೆ ಸೇರಿದಂತೆ, ಬಳೆಗಾರ, ಕಣಿಹೇಳುವ, ಚೌಕಾಬಾರಾ, ಗುರುಕುಲ, ಆಯುರ್ವೇದ, ಗೋ ಪೂಜೆ ಎಲ್ಲವೂ ಜಾನಪದ ಸಂಸ್ಕೃತಿಯನ್ನು ಪುನರ್ ನಿರ್ಮಾಣಮಾಡಿದ್ದವು.
ಉತ್ಸವದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು, ಪಂಚೆ, ಅಂಗಿ, ಕುರ್ತಾ, ಲಂಗಾದಾವಣಿ, ಸೀರೆ ಉಟ್ಟು ,ಬುರ್ಕಾ, ತೊಟ್ಟು ಸಡಗರ ಸಂಭ್ರಮದಿಂದ ಕುಣಿದಾಡಿದರು.
ರಾಮನವಮಿಯ ಬೆಲ್ಲದ ಪಾನಕ – ಕೋಸಂಬರಿ, ಕ್ರಿಸ್ಮಸ್ ನ ಕೇಕ್, ರಂಜಾನ್ ಹಬ್ಬದ ಇಪ್ತಾರ್ ಕೂಟದ ಫಲಾಹಾರ, ಗಣಪತಿ ಹಬ್ಬದ ಕಡುಬು, ಯುಗಾದಿಯ ಹೋಳಿಗೆ, ಭೂಮಿಪೂಜೆಯ ಪಾಯಸ ಹೀಗೆ ವಿವಿಧ ಬಗೆಯ ತಿಂಡಿತಿನಿಸುಗಳು 30 ಜಿಲ್ಲೆಗಳ ವಿಶೇಷ ಖಾಧ್ಯಗಳು ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದವು.
ವಸ್ತು ಪ್ರದರ್ಶನ
ಸುಮಾರು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಬೀಸು ಕಲ್ಲು, ಒನಕೆ, ಸೌದೆ ಒಲೆ, ಕೊಡಲಿ, ಮಚ್ಚು, ಬರ್ಜಿ, ಚನ್ನೆಮಣೆ, ಕೀಲುಗೊಂಬೆ, ಪಾರಂಪರಿಕ ಔಷಧಿ, ಕುಡುಗೋಲು, ಬಂಡಿ,ನಾಣ್ಯಗಳು,ಸೇರು, ಒಳಕಲ್ಲು, ಶಹನಾಯಿ,ಮಜ್ಜಿಗೆಯ ಕಡೆಗೋಲು, ತಾಳ, ಹಾರ್ಮೊನಿಯಂ, ಗಂಡುಕೊಡಲಿ,ಶಾವಿಗೆ ಒತ್ತು,ಹುತ್ತದ ಮಾದರಿ,ವಿಭಿನ್ನ ಬಗೆಯ ರಂಗವಲ್ಲಿ, ವಿವಿಧ ಧಾನ್ಯದ ರಾಶಿ,ಕಳಸ, ದಸರಾ ಗೊಂಬೆಗಳು, ನವರಾತ್ರಿಯ ಮಾತೃದೇವತೆ, ಕುರಾನ್ ಪ್ರತಿ, ಜಾನಮಾಜ್,ಕ್ರಿಸ್ತನ ಜನನದ ಗೋದರಿ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಮಾದರಿ ಚಿತ್ರಗಳು ವಸ್ತುಪ್ರದರ್ಶನದಲ್ಲಿದ್ದವು.
ದೇಸೀ ಆಟಗಳು
ದೇಸೀ ಆಟಗಳಾದ ಹಗ್ಗ ಜಗ್ಗಾಟ, ಲಗೋರಿ, ಬುಗುರಿ, ಕುಂಟೋಬಿಲ್ಲೆ ಹಾಗೂ ಜನಪದ ನೃತ್ಯ-ಹಾಡು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಂತಸದಿಂದ ಭಾಗವಹಿಸಿದರು.
ಉತ್ಸವದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಬಿ.ಜಿ.ಅಮೃತೇಶ್ವರ ಅವರು ವಹಿಸಿಕೊಂಡಿದ್ದರು. ಹಾಗೂ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಪಕ ಹಾಗೂ ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಷ್ಮುಖಪ್ಪ ಕೆ.ಹೆಚ್, ಐಕ್ಯುಎಸಿ ಸಂಚಾಲಕ ಪ್ರೊ.ವಿಜಯ್ ಕುಮಾರ್, ಉತ್ಸವದ ಕ್ರೀಡೆಗಳ ಆಯೋಜಕ ಹಾಗೂ ದೈಹಿಕ ನಿರ್ದೇಶಕರಾದ ಕಲ್ಲೇಶಪ್ಪ ಎಸ್.ಜಿ ಹಾಗೂ ಕಾಲೇಜಿನ ಎಲ್ಲಾ ಅಧ್ಯಾಪಕರು ಹಾಗೂ ಬೋಧಕೇತರ ಸಿಬಂದಿಗಳು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಜಾನಪದ ಕಲೆ, ಸಂಸ್ಕೃತಿಯು ಹಿಂದಿನಿಂದಲೂ ಮನುಷ್ಯ ಜೀವನದೊಂದಿಗೆ ಸಂಬಂಧ ಹೊಂದಿದ್ದು ಇಂದಿನ ಪೀಳಿಗೆಯ ಮಕ್ಕಳು ಜಾನಪದ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಜನಪದ ಪರಂಪರೆಯ ಪ್ರತೀಕವಾಗಿ ‘ಜನಪದ ಉತ್ಸವ – 2025’ ನಮ್ಮಸಂಸ್ಕೃತಿ ನಮ್ಮ ಹೆಮ್ಮೆ ಹೆಚ್ಚು ಅರ್ಥ ಪೂರ್ಣವಾಗಿ ಮೂಡಿ ಬಂದಿದೆ.
| ಜಾನಪದ ತಜ್ಞ, ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ

ನಮ್ಮ ದೇಶಿ ಸಂಸ್ಕೃತಿಯನ್ನು ಸಂರಕ್ಷಿಸಿ, ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ತಲೆಮಾರುಗಳಿಂದ ಹೊಂದಿರುವ, ಆಯಾ ಪ್ರಾದೇಶಿಕ ಗ್ರಾಮೀಣ ವ್ಯಾಪ್ತಿಯಲ್ಲಿ ಆಚರಣೆಯಲ್ಲಿರುವ ಈ ಮೌಖಿಕ ಪರಂಪರೆಯ ಜಾನಪದ ಸಂಸ್ಕೃತಿಯ ಸೊಗಡುಗಳು ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸುವ ಒಂದು ಅತ್ಯುತ್ತಮ ಪ್ರಯತ್ನ ‘ಜಾನಪದ ಉತ್ಸವ’-2025.
| ಡಾ.ಬಿ.ಜಿ.ಅಮೃತೇಶ್ವರ, ಪ್ರಾಂಶುಪಾಲರು

ಜನಪದರ ಬದುಕು, ಆಧುನಿಕ ಜಾಗತೀಕರಣದ ಕಾಲದಲ್ಲಿ ಹೆಚ್ಚು ಪ್ರಸ್ತುತವಾಗುತ್ತಿದೆ ಅದರ ಸದಾಶಯವನ್ನು ಕಾಲೇಜು ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ನಮ್ಮ ಕಾಲೇಜಿನ ವಿಧ್ಯಾರ್ಥಿಗಳು ಎಲ್ಲಾ ಅಧ್ಯಾಪಕರ ಸಹಾಯದಿಂದ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ಅವರಿಗೆ ಅಭಿನಂದನೆಗಳು.
| ಷಣ್ಮುಖಪ್ಪ ಕೆ ಎಚ್ ,ಕಾರ್ಯಕ್ರಮದ ನಿರ್ದೇಶಕರು, ಸಂಚಾಲಕರು,ಸಾಂಸ್ಕೃತಿಕ ವೇದಿಕೆ

ಅಂಕಣ
ಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಮುನ್ನೋಟ: ಜೀವನಕ್ರಮವಾಗಿ ಪ್ರಜಾಪ್ರಭುತ್ವ
ಪ್ರಜಾಪ್ರಭುತ್ವವು ಕೇವಲ ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲ; ಅದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯುವ ಒಂದು ಉದಾತ್ತ ಜೀವನಕ್ರಮ. ಸೈದ್ಧಾಂತಿಕವಾಗಿ ಪ್ರಜಾಪ್ರಭುತ್ವವು ‘ನಿಷ್ಪಕ್ಷಪಾತ’ ಮನೋಭಾವವನ್ನು ಪ್ರತಿಪಾದಿಸುತ್ತದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವವು ಕೇವಲ ಕಾಗದದ ಮೇಲಿನ ವಾಕ್ಯವಾಗದೆ, ಹುಟ್ಟಿನಿಂದ ಹೇರಲ್ಪಟ್ಟ ಶ್ರೇಣೀಕೃತ ವ್ಯವಸ್ಥೆಯ ಗೋಡೆಗಳನ್ನು ಕೆಡವುವ ಶಕ್ತಿಯಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ದೇಶದ ಅತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಾನಕ್ಕೇರಲು ಸಾಧ್ಯವಿರುವುದು ಈ ವ್ಯವಸ್ಥೆಯ ಅತಿದೊಡ್ಡ ಯಶಸ್ಸು.
ಸಾಮಾಜಿಕ ನ್ಯಾಯ ಮತ್ತು ಸಾಂವಿಧಾನಿಕ ಬಲ
ಸಾಮಾಜಿಕ ನ್ಯಾಯವು ಪ್ರಜಾಪ್ರಭುತ್ವದ ಅಂತರಾತ್ಮವಿದ್ದಂತೆ. ಐತಿಹಾಸಿಕವಾಗಿ ಶೋಷಣೆಗೆ ಒಳಗಾದ ಸಮುದಾಯಗಳಿಂದ ಬಂದ ವ್ಯಕ್ತಿಗಳು ನಾಯಕತ್ವದ ಸ್ಥಾನಕ್ಕೇರುವುದು ಹೊರನೋಟಕ್ಕೆ ಒಂದು ಪವಾಡದಂತೆ ಭಾಸವಾಗಬಹುದು. ಆದರೆ, ವಾಸ್ತವದಲ್ಲಿ ಇದು ಸಂವಿಧಾನ ನೀಡಿರುವ ‘ಮತದಾನದ ಹಕ್ಕು’ ಮತ್ತು ‘ಪ್ರಾತಿನಿಧ್ಯದ ಅವಕಾಶ’ಗಳ ಫಲಶೃತಿಯಾಗಿದೆ. ಪ್ರಜಾಪ್ರಭುತ್ವವು ಕೇವಲ ಬಹುಮತದ ಆಡಳಿತವಲ್ಲ, ಬದಲಿಗೆ ಅಲ್ಪಸಂಖ್ಯಾತ ಮತ್ತು ದಮನಿತ ಧ್ವನಿಗಳಿಗೂ ನೀತಿ ನಿರೂಪಣೆಯಲ್ಲಿ ಸಮಾನ ವೇದಿಕೆ ಕಲ್ಪಿಸುವ ಒಳಗೊಳ್ಳುವಿಕೆಯ (Inclusion) ಪ್ರಕ್ರಿಯೆಯಾಗಿದೆ. ಅಧಿಕಾರವು ಕೆಲವೇ ಜನರ ಕೈಯಲ್ಲಿ ಕೇಂದ್ರಿಕೃತವಾಗದೆ, ವಿಕೇಂದ್ರೀಕರಣದ ಮೂಲಕ ಸಾಮಾನ್ಯ ಜನರಿಗೂ ತಲುಪಿದಾಗ ಮಾತ್ರ ಪ್ರಜಾಪ್ರಭುತ್ವದ ಆಶಯ ಸಾಕಾರಗೊಳ್ಳುತ್ತದೆ.
ನಾಯಕತ್ವದ ನೈತಿಕತೆ ಮತ್ತು ಸಾಂವಿಧಾನಿಕ ಬದ್ಧತೆ
ಪ್ರಜಾಪ್ರಭುತ್ವದ ಅತ್ಯಂತ ನಿರ್ಣಾಯಕ ಅಂಶವೆಂದರೆ ಅಧಿಕಾರವನ್ನು ಪಡೆದವರ ನೈತಿಕ ನಡೆ. ಪ್ರಜಾಪ್ರಭುತ್ವದ ಒತ್ತಾಸೆಯಿಂದ ಅವಕಾಶ ಮತ್ತು ಅಧಿಕಾರವನ್ನು ಪಡೆಯುವ ಪ್ರತಿಯೊಬ್ಬರೂ ಪ್ರಜಾಸತ್ತಾತ್ಮಕ ನಿಲುವುಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುವ ನೈತಿಕತೆಯನ್ನು ಹೊಂದಿರಬೇಕಾಗುತ್ತದೆ. ಅಧಿಕಾರವು ಒಂದು ಸೌಲಭ್ಯವಲ್ಲ, ಅದೊಂದು ಜವಾಬ್ದಾರಿ. ಯಾವ ವ್ಯವಸ್ಥೆಯು ಒಬ್ಬ ವ್ಯಕ್ತಿಯನ್ನು ಸಾಮಾನ್ಯ ಸ್ಥಿತಿಯಿಂದ ನಾಯಕತ್ವದ ಸ್ಥಾನಕ್ಕೆ ಏರಿಸುತ್ತದೆಯೋ, ಅದೇ ವ್ಯವಸ್ಥೆಯ ಮೌಲ್ಯಗಳನ್ನು ಎತ್ತಿಹಿಡಿಯುವುದು ಆ ನಾಯಕನ ಪರಮ ಧರ್ಮ. ಸಾಂವಿಧಾನಿಕ ಆಶಯಗಳಿಗೆ ದ್ರೋಹ ಬಗೆಯದೆ, ವೈಯಕ್ತಿಕ ಹಿತಾಸಕ್ತಿಗಿಂತ ಜನಹಿತವೇ ದೊಡ್ಡದು ಎಂಬ ನಿಲುವು ತಳೆದಾಗ ಮಾತ್ರ ಅಧಿಕಾರಕ್ಕೆ ಸಾರ್ಥಕತೆ ದೊರೆಯುತ್ತದೆ.
ಐತಿಹಾಸಿಕ ಪ್ರೇರಣೆ: ಅಬ್ರಹಾಂ ಲಿಂಕನ್ ಎಂಬ ಮಾದರಿ
ಪ್ರಜಾಪ್ರಭುತ್ವದ ಇತಿಹಾಸವನ್ನು ಚರ್ಚಿಸುವಾಗ ಅಬ್ರಹಾಂ ಲಿಂಕನ್ ಅವರ ಹೆಸರು ಅನಿವಾರ್ಯ. “ಜನರಿಗಾಗಿ, ಜನರಿಂದ, ಜನರಿಗೋಸ್ಕರ” ಎಂಬ ಅವರ ಸರಳ ವ್ಯಾಖ್ಯಾನವು ಜಗತ್ತಿನಾದ್ಯಂತ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಭದ್ರ ಬುನಾದಿ ಹಾಕಿತು. ಒಬ್ಬ ಸಾಮಾನ್ಯ ಹಿನ್ನೆಲೆಯ ವ್ಯಕ್ತಿ ಅಮೆರಿಕದ ಅಧ್ಯಕ್ಷನಾಗಿ ಗುಲಾಮಗಿರಿಯ ವಿರುದ್ಧ ಹೋರಾಡಿದ್ದು, ಪ್ರಜಾಪ್ರಭುತ್ವದ ಗುಣಕ್ಕೆ (Flexibility) ಸಾಕ್ಷಿಯಾಗಿದೆ. ಲಿಂಕನ್ ಅವರ ಹೋರಾಟವು ಮಾನವೀಯತೆ ಮತ್ತು ಸಮಾನತೆಯನ್ನು ಪ್ರಜಾಪ್ರಭುತ್ವದ ಅನಿವಾರ್ಯ ಅಂಗವನ್ನಾಗಿಸಿತು, ಇದು ಇಂದಿಗೂ ಜಾಗತಿಕ ರಾಜಕೀಯಕ್ಕೆ ದಾರಿದೀಪವಾಗಿದೆ.
ಸಿನಿಮಾ, ಸಮಾಜ ಮತ್ತು ರಾಜಕೀಯ ನಾಯಕತ್ವದ ಮನ್ವಂತರ
ತಮಿಳುನಾಡಿನಂತಹ ರಾಜ್ಯಗಳಲ್ಲಿ ರಾಜಕೀಯವು ಯಾವಾಗಲೂ ಸಾಮಾಜಿಕ ನ್ಯಾಯದ ಪ್ರಯೋಗಶಾಲೆಯಾಗಿ ಕಾರ್ಯನಿರ್ವಹಿಸಿದೆ. ದ್ರಾವಿಡ ಚಳವಳಿಯ ಹಿನ್ನೆಲೆಯಲ್ಲಿ ಬೆಳೆದು ಬಂದ ಇಲ್ಲಿನ ರಾಜಕೀಯ ಸಂಸ್ಕೃತಿಯಲ್ಲಿ, ಸಿನಿಮಾ ರಂಗದ ವ್ಯಕ್ತಿಗಳನ್ನು ಕೇವಲ ನಟರನ್ನಾಗಿ ನೋಡದೆ, ತಮ್ಮ ಸಾಮಾಜಿಕ ಆಶೋತ್ತರಗಳನ್ನು ಈಡೇರಿಸುವ ‘ಪ್ರತಿನಿಧಿ’ಗಳಾಗಿ ಜನರು ಸ್ವೀಕರಿಸುತ್ತಾ ಬಂದಿದ್ದಾರೆ. ಇತ್ತೀಚಿನ ವಿದ್ಯಮಾನಗಳಲ್ಲಿ ಸಿ. ಜೋಸೆಫ್ ವಿಜಯ್ (ನಟ ವಿಜಯ್) ಅವರಂತಹ ವ್ಯಕ್ತಿಗಳು ರಾಜಕೀಯ ಪ್ರವೇಶದ ಹಾದಿಯಲ್ಲಿರುವುದು ಈ ಪರಂಪರೆಯ ಮುಂದುವರಿಕೆಯಾಗಿದೆ. ಜನರು ಇಂತಹ ನಾಯಕರಲ್ಲಿ ಒಬ್ಬ ‘ಸ್ಟಾರ್’ಗಿಂತ ಹೆಚ್ಚಾಗಿ, ಶೋಷಿತರ ಪರವಾಗಿ ಧ್ವನಿ ಎತ್ತುವ ಮತ್ತು ಅಧಿಕಾರದ ವಿಕೇಂದ್ರೀಕರಣಕ್ಕೆ ಶ್ರಮಿಸುವ ನಾಯಕತ್ವವನ್ನು ನಿರೀಕ್ಷಿಸುತ್ತಾರೆ.
ಭವಿಷ್ಯದ ಆಶಯ
ಒಟ್ಟಾರೆಯಾಗಿ ಹೇಳುವುದಾದರೆ, ಪ್ರಜಾಪ್ರಭುತ್ವವು ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ತನ್ನನ್ನು ತಾನು ರೂಪಿಸಿಕೊಳ್ಳುತ್ತಿದೆ. ಅಧಿಕಾರವು ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವ ಸಾಧನವಾಗಬೇಕೇ ಹೊರತು, ಅದು ಕೇವಲ ಆಡಳಿತ ನಡೆಸುವ ಅಧಿಕಾರವಲ್ಲ. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಅಧಿಕಾರಸ್ಥರ ನೈತಿಕ ಬದ್ಧತೆಯ ಮೂಲಕ ಮಾತ್ರ ಒಂದು ಸಮಾಜವು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವದ ಯಶಸ್ಸನ್ನು ಸಂಭ್ರಮಿಸಲು ಸಾಧ್ಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಮರ್ಥ್ ಶಾಮನೂರು ಪ್ರಯಾಸದ ಗೆಲುವು ಮತ್ತು ಮುಂದಿನ ಸವಾಲುಗಳು
~ಗೋವರ್ಧನ ನವಿಲೇಹಾಳು
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಖಾಲಿಯಾದ ಈ ಕ್ಷೇತ್ರವು ಕುಟುಂಬದ ರಾಜಕೀಯ ಉತ್ತರಾಧಿಕಾರ, ಅಲ್ಪಸಂಖ್ಯಾತರ ಅಸಮಾಧಾನ ಮತ್ತು ಪಕ್ಷಾಂತರದ ಆರೋಪಗಳ ನಡುವೆ ತೀವ್ರ ಸ್ಪರ್ಧೆಯನ್ನು ಕಂಡಿತು. ಸುಮಾರು 5,708 ಮತಗಳ ಅಂತರದಿಂದ ಗೆದ್ದ ಸಮರ್ಥ್ ಅವರು ಶಾಮನೂರು ಕುಟುಂಬದ ಮೂರನೇ ಪೀಳಿಗೆಯ ಪ್ರತಿನಿಧಿಯಾಗಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಈ ಗೆಲುವು ಕಾಂಗ್ರೆಸ್ಗೆ ಸಂತೋಷದ ಸುದ್ದಿಯಾದರೂ, ಎಸ್ಡಿಪಿಐ ಪಡೆದ ಗಣನೀಯ 18,975 ಮತಗಳು ಮತ್ತು ಬಿಜೆಪಿಯ ತೀವ್ರ ಪೈಪೋಟಿ ರಾಜಕೀಯ ಸಮೀಕರಣಗಳಲ್ಲಿ ಹೊಸ ತಿರುವುಗಳನ್ನು ಸೂಚಿಸುತ್ತವೆ.
ಈ ಉಪಚುನಾವಣೆಯು ಕೇವಲ ಕ್ಷೇತ್ರೀಯ ಘಟನೆಯಾಗಿರದೆ, ಕರ್ನಾಟಕ ರಾಜಕೀಯದಲ್ಲಿ ಅಲ್ಪಸಂಖ್ಯಾತರ ಮತಬ್ಯಾಂಕ್, ಕುಟುಂಬ ರಾಜಕೀಯ ಮತ್ತು ಪ್ರತಿಪಕ್ಷದ ತಂತ್ರಗಳ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಯಿತು. ಶಾಮನೂರು ಕುಟುಂಬದ ದೀರ್ಘಕಾಲದ ಸೇವೆಯನ್ನು ಜನರು ಮೆಚ್ಚಿದ್ದರೂ, ಕಾಂಗ್ರೆಸ್ನಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನಿರಾಕರಣೆಯಿಂದಾಗಿ ಉಂಟಾದ ಅಸಮಾಧಾನವು ಎಸ್ಡಿಪಿಐಗೆ ಅವಕಾಶ ಮಾಡಿಕೊಟ್ಟಿತು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು ತೀವ್ರ ಪ್ರಚಾರ ನಡೆಸಿದ್ದರೂ, ಕಾಂಗ್ರೆಸ್ನ ಅಭಿವೃದ್ಧಿ ಕಾರ್ಯಗಳು ಮತ್ತು ಐದು ಗ್ಯಾರಂಟಿಗಳ ಪ್ರಭಾವವು ಗೆಲುವಿಗೆ ನೆರವಾಯಿತು. ಆದರೆ ಈ ಗೆಲುವು ಸುಲಭವಾಗಿರಲಿಲ್ಲ; ಅದು ಎಲ್ಲಾ ಪಕ್ಷಗಳಿಗೂ ಪಾಠವನ್ನು ಕಲಿಸುತ್ತದೆ.
ಸಮರ್ಥ್ ಶಾಮನೂರು ಅವರ ಮುಂದಿನ ನಡೆ
ಕಿರಿಯ ವಯಸ್ಸಿನಲ್ಲಿ (ದೇಶದ ಎರಡನೇ ಅತಿ ಕಿರಿಯ ಶಾಸಕರಾಗಿ) ಗೆದ್ದ ಸಮರ್ಥ್ ಅವರು ತಮ್ಮ ಅಜ್ಜರ ರಾಜಕೀಯ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿಯಲ್ಲಿದ್ದಾರೆ. ಮುಂದಿನ ನಡೆಯು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೇಂದ್ರೀಕರಣಗೊಳ್ಳಬೇಕು. ದಾವಣಗೆರೆಯಂತಹ ನಗರ-ಗ್ರಾಮೀಣ ಮಿಶ್ರ ಕ್ಷೇತ್ರದಲ್ಲಿ ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಬಲಪಡಿಸುವುದು ಮುಖ್ಯ. ಶಾಮನೂರು ಕುಟುಂಬದ ಹೆಸರು ಅಭಿವೃದ್ಧಿಗೆ ಸಮಾನವಾಗಿದೆ; ಇದನ್ನು ಮುಂದುವರಿಸಿ, ಎಲ್ಲಾ ಸಮುದಾಯಗಳ ನಡುವೆ ಸೇತುವೆಯಾಗಬೇಕು.
ವಿಶೇಷವಾಗಿ ಅಲ್ಪಸಂಖ್ಯಾತರ ಅಸಮಾಧಾನವನ್ನು ನಿವಾರಿಸುವುದು ಅಗತ್ಯ. ಟಿಕೆಟ್ ವಿವಾದದ ನಂತರ ಉಂಟಾದ ಬಿರುಕುಗಳನ್ನು ತುಂಬುವ ಮೂಲಕ ಏಕತೆಯ ಸಂದೇಶ ನೀಡಬೇಕು. ಯುವಕರಾಗಿರುವುದರಿಂದ ಆಧುನಿಕ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಪಾರದರ್ಶಕ ಆಡಳಿತದ ಮೂಲಕ ಹೊಸ ಚಿಂತನೆ ತರಬಹುದು. ರಾಜಕೀಯದಲ್ಲಿ ವೈಯಕ್ತಿಕ ದಾಳಿ ಬದಲು ನಿರ್ಮಾಣಾತ್ಮಕ ವಿಮರ್ಶೆಯನ್ನು ಪ್ರೋತ್ಸಾಹಿಸುವುದು ಅವರ ಯಶಸ್ಸಿಗೆ ಕಾರಣವಾಗುತ್ತದೆ. ಜನಸಂಪರ್ಕವನ್ನು ನಿರಂತರವಾಗಿ ಉಳಿಸಿಕೊಂಡು, ಕ್ಷೇತ್ರದ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತುತಪಡಿಸುವುದು ಅವರ ಮುಂದಿನ ಗುರಿಯಾಗಬೇಕು. ಗೆಲುವು ಕುಟುಂಬದ ಆಸ್ತಿಯಲ್ಲ, ಜನರ ವಿಶ್ವಾಸದ ಫಲ; ಇದನ್ನು ಕಾಯ್ದುಕೊಳ್ಳುವುದು ದೊಡ್ಡ ಸವಾಲು.
ಬಿಜೆಪಿಯ ಮುಂದಿನ ಸವಾಲುಗಳು
ಬಿಜೆಪಿ ಈ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ನ ಒಳಜಗಳಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಪೂರ್ಣವಾಗಿ ಬಳಸಿಕೊಳ್ಳಲು ವಿಫಲವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಮುಂದೆ ಬಿಜೆಪಿಗೆ ಸವಾಲುಗಳು ಹಲವು: ಮೊದಲನೆಯದು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ನಡುವೆ ವಿಶ್ವಾಸಾರ್ಹತೆಯನ್ನು ಕಟ್ಟುವುದು. ಧ್ರುವೀಕರಣದ ತಂತ್ರಗಳು ಸೀಮಿತ ಯಶಸ್ಸು ನೀಡುತ್ತವೆ ಎಂಬುದು ಈ ಫಲಿತಾಂಶ ಸೂಚಿಸುತ್ತದೆ.
ಕ್ಷೇತ್ರದಲ್ಲಿ ಸ್ಥಳೀಯ ನಾಯಕರನ್ನು ಬಲಪಡಿಸುವುದು, ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜನಸಂಪರ್ಕ ಹೆಚ್ಚಿಸುವುದು ಅಗತ್ಯ. ರಾಜ್ಯ ಮಟ್ಟದಲ್ಲಿ ಪ್ರತಿಪಕ್ಷದ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾ, ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವುದು ಮುಂದಿನ ಚುನಾವಣೆಗಳಲ್ಲಿ ನೆರವಾಗುತ್ತದೆ. ಈ ಗೆಲುವು ಕಾಂಗ್ರೆಸ್ಗೆ ಎಚ್ಚರಿಕೆಯಾಗಿದ್ದರೆ, ಬಿಜೆಪಿಗೆ ಕ್ರಿಯಾಶೀಲತೆಯ ಅಗತ್ಯವನ್ನು ತೋರಿಸುತ್ತದೆ.
ಎಸ್ಡಿಪಿಐ ಮುಂದಿನ ಸವಾಲು
ಎಸ್ಡಿಪಿಐ ಈ ಚುನಾವಣೆಯಲ್ಲಿ ಗಮನಾರ್ಹ ಮತಗಳನ್ನು ಪಡೆದು ತನ್ನ ಉಪಸ್ಥಿತಿಯನ್ನು ಸಾಬೀತುಪಡಿಸಿದೆ. ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಂ ಸಮುದಾಯದ ಅಸಮಾಧಾನವನ್ನು ಬಳಸಿಕೊಂಡು ತನ್ನ ಮತಬ್ಯಾಂಕ್ನ್ನು ವಿಸ್ತರಿಸಿದೆ. ಆದರೆ ಇದು ಸವಾಲುಗಳನ್ನೂ ತಂದಿದೆ. ಮುಂದೆ ಎಸ್ಡಿಪಿಐಗೆ ಬ್ರಾಡ್ ಆಪೀಲ್ ಅಗತ್ಯ – ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಆರ್ಥಿಕ-ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಉದ್ಯೋಗದಂತಹ ವಿಷಯಗಳಲ್ಲಿ ಎಲ್ಲರಿಗೂ ಸ್ಪಂದಿಸುವ ಧೋರಣೆ ಬೆಳೆಸಬೇಕು.
ಚುನಾವಣಾ ಅನಿಯಮಗಳ ಆರೋಪಗಳು ಮತ್ತು ಮುಖ್ಯ ಪಕ್ಷಗಳ ನಡುವಿನ ತಂತ್ರಗಳ ನಡುವೆ ಸಿಲುಕದೆ, ಸ್ವತಂತ್ರ ರಾಜಕೀಯವನ್ನು ಬಲಪಡಿಸುವುದು ಮುಖ್ಯ. ದೀರ್ಘಕಾಲದ ಯಶಸ್ಸಿಗೆ ಸಮುದಾಯಗಳ ನಡುವಿನ ಸೇತುವೆಯಾಗುವುದು ಅಗತ್ಯ; ಇಲ್ಲದಿದ್ದರೆ ಮತ ವಿಭಜನೆಯ ಆರೋಪಗಳು ಮುಂದುವರಿಯುತ್ತವೆ.
ಈ ಫಲಿತಾಂಶವು ಭಾರತೀಯ ಜನತಂತ್ರದ ಜೀವಂತತೆಯನ್ನು ತೋರಿಸುತ್ತದೆ. ಗೆಲುವು ಸಂಭ್ರಮಿಸುವುದರ ಜೊತೆಗೆ, ಸೋಲಿನಿಂದ ಪಾಠ ಕಲಿಯುವುದು ಎಲ್ಲಾ ಪಕ್ಷಗಳ ಕರ್ತವ್ಯ. ಸಮರ್ಥ್ ಶಾಮನೂರು ಅವರು ತಮ್ಮ ಯುವಕರ ಉತ್ಸಾಹ ಮತ್ತು ಕುಟುಂಬ ಪರಂಪರೆಯನ್ನು ಸಂಯೋಜಿಸಿ, ಎಲ್ಲಾ ವರ್ಗಗಳ ಜನರ ಸೇವೆಗೆ ಮುಂದಾಗಬೇಕು. ಕಾಂಗ್ರೆಸ್ ಅಂತರ್ಗತ ಏಕತೆಯನ್ನು ಬಲಪಡಿಸಬೇಕು. ಬಿಜೆಪಿ ಮತ್ತು ಎಸ್ಡಿಪಿಐ ತಮ್ಮ ತಂತ್ರಗಳನ್ನು ಪುನರ್ ಪರಿಶೀಲಿಸಿ, ಜನಕೇಂದ್ರಿತ ರಾಜಕೀಯಕ್ಕೆ ಮರಳಬೇಕು.
ದಾವಣಗೆರೆ ದಕ್ಷಿಣದ ಜನರು ಅಭಿವೃದ್ಧಿ ಮತ್ತು ಸಾಮರಸ್ಯವನ್ನು ಬಯಸುತ್ತಾರೆ. ಹೊಸ ಶಾಸಕರು ಈ ನಿರೀಕ್ಷೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ. ರಾಜಕೀಯವು ಸೇವೆಯಾಗಬೇಕೇ ವಿನಾ ಕುಟುಂಬ ಅಥವಾ ಸಮುದಾಯ ದ್ವೇಷದ ಆಟವಾಗಬಾರದು. ಈ ಉಪಚುನಾವಣೆಯ ಪಾಠಗಳು ರಾಜ್ಯದ ಭವಿಷ್ಯದ ಚುನಾವಣೆಗಳಿಗೆ ದಾರಿ ತೋರಿಸುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days ago2.5 ಕೋಟಿ ಖರೀದಿಯಲ್ಲಿ ಅವ್ಯವಹಾರ ; ಆಯುಕ್ತೆ ಮಂಜುಶ್ರೀ ಸೇರಿ 6 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ
-
ದಿನದ ಸುದ್ದಿ5 days agoಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
-
ದಿನದ ಸುದ್ದಿ2 days agoದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಮಾರೋಪ ಸಮಾರಂಭ
-
ದಿನದ ಸುದ್ದಿ6 days agoಸಂಶೋಧಕರಿಂದ ಪಶ್ಚಿಮ ಘಟ್ಟಗಳಲ್ಲಿ ಮೂರು ಅಣಬೆಯ ಹೊಸ ಶಿಲೀಂಧ್ರ ಜಾತಿಗಳ ಪತ್ತೆ
-
ಕ್ರೀಡೆ5 days agoಹಿರಿಯ ಕ್ರಿಕೆಟ್ ಪಟು ಎನ್ಆರ್ಎಚ್ ರಮೇಶ್ ನಿಧನ
-
ಅಂಕಣ20 hours agoಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ
-
ದಿನದ ಸುದ್ದಿ19 hours agoದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ

