ಲೈಫ್ ಸ್ಟೈಲ್
ಪಾರ್ಶ್ವವಾಯು(ಸ್ಟ್ರೋಕ್) ಬಗ್ಗೆ ನಿಮಗೆಷ್ಟು ಗೊತ್ತು..?
ಜನಸಾಮಾನ್ಯರ ಭಾಷೆಯಲ್ಲಿ ಲಕ್ವ, ಪಾರ್ಸಿ, ಪಾರಾಲಿಸಿಸ್ ಎಂದೆಲ್ಲಾ ಕರೆಯಲ್ಪಡುವ ಪಾರ್ಶ್ವವಾಯು ಎಂದರೆ ಮಿದುಳಿಗೆ ರಕ್ತಪೂರೈಕೆಯ ಕೊರತೆಯಿಂದ ಉಂಟಾಗುವ ಅಸ್ವಾಧೀನತೆ. ಅಂದರೆ ಯಾವುದೇ ರಕ್ತನಾಳಗಳ ತೊಂದರೆಯಿಂದ ಮಿದುಳಿಗೆ ರಕ್ತಪೂರೈಕೆಯಲ್ಲಿ ತೊಂದರೆ ಉಂಟಾದರೆ, ಅದು ಆ ನಿರ್ಧಿಷ್ಟ ಜೀವಕಣಗಳ ಕಾರ್ಯಕ್ಷಮತೆಯನ್ನು ಪೂರೈಸಲಾಗದೇ ಸೋತು, ಮಿದುಳಿನ ಆ ನಿರ್ಧಿಷ್ಟ ಭಾಗದಿಂದ ನಿಯಂತ್ರಿಸಲ್ಪಡುವ ದೇಹದ ಭಾಗವೂ ಸ್ವಾಧೀನ ಕಳೆದುಕೊಳ್ಳುವುದು.
ಕಾರಣಗಳು
- ಅಧಿಕ ರಕ್ತದೊತ್ತಡ
- ತಂಬಾಕು, ಧೂಮಪಾನ ಸೇವನೆ
- ಬೊಜ್ಜು
- ಅಧಿಕ ಕೊಲೆಸ್ಟರಾಲ್
- ಮಧುಮೇಹ
ಈ ಸಾಮಾನ್ಯ ಕಾರಣಗಳು ಅಲ್ಲದೇ ಇನ್ನೂ ಅನೇಕ ವಿರಳ ವೈದ್ಯಕೀಯ ಸಂದರ್ಭಗಳಲ್ಲಿ ಪಾರ್ಶ್ವವಾಯು ಉಂಟಾಗುವುದುಂಟು. ಸಾಮಾನ್ಯವಾಗಿ ಈ ಅಪಾಯಕಾರಿ ಅಂಶಗಳು ವಯೋವೃದ್ಧರಲ್ಲಿ ಪಾರ್ಶ್ವವಾಯುವಿಗೆ ಗುರಿಮಾಡುತ್ತವೆ, ಆದರೆ ಯುವ ಜನರಲ್ಲೂ ಇತ್ತೀಚಿನ ದಿನಗಳಲ್ಲಿ ಕಂಡುಬರುವುದನ್ನು ನಂಬಲೇಬೇಕು.
ವಿಧಗಳು
- ರಕ್ತ ತಡೆಗಟ್ಟುವಿಕೆಯ ಪಾರ್ಶ್ವವಾಯು
- ರಕ್ತ ಹೆಪ್ಪುಗಟ್ಟುವಿಕೆ
- ರಕ್ತನಾಳಗಳಲ್ಲಿ ರಕ್ತದ ಹೊರತು ಬೇರೆ ಜೀವಕಣಗಳಿಂದುಂಟಾಗುವುದು
- ರಕ್ತಸಂಚಾರವೇ ಕ್ಷೀಣಗೊಳ್ಳುವುದು
- ರಕ್ತಸ್ರಾವದ ಪಾರ್ಶ್ವವಾಯು
- ಮಿದುಳಿನೊಳಗಿನ ರಕ್ತಸ್ರಾವ
- ಮಿದುಳಿನ ಪದರಗಳ ಮಧ್ಯೆ ಉಂಟಾಗುವ ರಕ್ತಸ್ರಾವ
ರೋಗ ಉಂಟಾಗುವಿಕೆ
ಸಾಮಾನ್ಯವಾಗಿ ಅಂದರೆ 87 ಶೇಕಡಾ ಸಂದರ್ಭಗಳಲ್ಲಿ ರಕ್ತಸಂಚಾರದ ತಡೆಗಟ್ಟುವಿಕೆಯಿಂದ ಉಂಟಾಗುವ ಪಾರ್ಶ್ವವಾಯುಗಳೇ ಹೆಚ್ಚು. ಅದರಲ್ಲಿ, ಮಿದುಳಿಗೆ ಪೂರೈಸಲ್ಪಡುವ ರಕ್ತನಾಳಗಳು ವಿವಿಧ ಕಾರಣಗಳಿಂದ ಒಳಗೆ ತಡೆ ಹೊಂದುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ಈ ಪ್ರಕಾರ ಕಾಲಕ್ರಮೇಣ ಉಂಟಾದರೆ, ಅಧಿಕ ಸಂದರ್ಭಗಳಲ್ಲಿ ತಕ್ಷಣವೇ ಸಂಭವಿಸುವ ರೋಗಶಾಸ್ತ್ರ ಈ ವಿಧದಲ್ಲಿ ಅಡಗಿದೆ.
ಇನ್ನುಳಿದ 13 ಶೇಕಡಾ ಸಂದರ್ಭಗಳಲ್ಲಿ ರಕ್ತಸ್ರಾವದಿಂದ ಪಾರ್ಶ್ವವಾಯುಉಂಟಾಗುತ್ತದೆ. ತಲೆಗೆ ಉಂಟಾಗುವ ಅಪಘಾತಗಳನ್ನು ಹೊರತುಪಡಿಸಿ, ವಿವಿಧ ಕಾರಣಗಳಿಂದ ಸ್ವಾಭಾವಿಕವಾಗಿಯೂ ಉಂಟಾಗುವ ಮಿದುಳಿನ ರಕ್ತಸ್ರಾವದಿಂದ ಈ ರೀತಿಯ ಪಾರ್ಶ್ವವಾಯು ಉಂಟಾಗುವುದುಂಟು.
ರೋಗಲಕ್ಷಣಗಳು
- ಮುಖದಲ್ಲಿ (ಸಾಮಾನ್ಯವಾಗಿ ಬಾಯಿಯ ಒಂದು ಭಾಗ ಒಂದುಕಡೆಗೆ ಸೆಳೆತಕ್ಕೊಳಗಾಗುವುದು).
- ಕೈ, ಕಾಲುಗಳುಗಳಲ್ಲಿ(ಸಾಮಾನ್ಯವಾಗಿ ಒಂದು ಕಡೆಯ ಕೈ ಮತ್ತು ಕಾಲು ಸ್ವಾಧೀನ ಕಳೆದುಕೊಳ್ಳುವುದು) ಜುಮ್ಮೆನಿಸುವುದು.
- ಸ್ವಾಧೀನತೆಯಿಲ್ಲದಿರುವುದು
- ದೃಷ್ಟಿಯಲ್ಲಿ ತೊಂದರೆಯಾಗುವುದು
- ಸರಿಯಾಗಿ ಮಾತನಾಡಲಾಗದಿರುವುದು
- ಕ್ಷಣಿಕ ಮರೆವು ಉಂಟಾಗುವುದು
- ಯಾವುದೇ ಕಾರಣವಿಲ್ಲದ ಅಧಿಕ ತಲೆನೋವು, ತಲೆಸುತ್ತುವುದು.
- ಕಾಲ್ನಡೆತದಲ್ಲಿ ಇದ್ದಕ್ಕಿದ್ದಂತೆ ವಿಕಾರಗೊಳ್ಳುವುದು.
ಈ ಮೇಲಿನ ಲಕ್ಷಣಗಳು ಪಾರ್ಶ್ವವಾಯುವಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳಾದರೆ, ಇನ್ನೂ ಕೆಲವು ವಿರಳ ಸಂದರ್ಭಗಳಲ್ಲಿ ಕಂಡುಬರುವ ಲಕ್ಷಣಗಳು ಈ ಕೆಳಗಿನಂತಿವೆ.
- ಪ್ರಜ್ಞಾಹೀನತೆ
- ನಿಶ್ಯಕ್ತಿಯುಂಟಾಗುವುದು
- ಉಸಿರಾಟದ ತೊಂದರೆ
- ಕೈ, ಕಾಲುಗಳು, ಮುಖ, ಎದೆಯಲ್ಲಿ ನೋವು ಕಾಣಿಸಿಕೊಳ್ಳುವುದು
- ಸ್ನಾಯುಸೆಳೆತಗಳು, ರಸ್ತೆ ಅಪಘಾತಗಳು
ರೋಗ ನಿರ್ಧಾರ
ರೋಗಲಕ್ಷಣಗಳಿಂದಲೇ ಸಾಮಾನ್ಯವಾಗಿ ಪಾರ್ಶ್ವವಾಯುವಿನ ರೋಗನಿರ್ಧಾರವಾಗುತ್ತದೆ. ಆದರೆ ರೋಗದ ಚಿಕಿತ್ಸಾ ನಿಟ್ಟಿನಲ್ಲಿ ನೋಡುವುದಾದರೆ, ಪೂರ್ಣ ರೋಗನಿರ್ಧಾಕ್ಕೆ ಕೆಲವೊಂದು ಪರೀಕ್ಷೆಗಳು ಅವಶ್ಯಕವಾಗುತ್ತವೆ.
- ರಕ್ತಕಣಗಳ ಪರೀಕ್ಷೆ, ರಕ್ತದ ಗ್ಲೂಕೋಸ್ ಪ್ರಮಾಣ
- ಕೊಲೆಸ್ಟರಾಲ್ ಪ್ರಮಾಣ
- ಇಕೊಕಾರ್ಡಿಯೊಗ್ರಫಿ(ಇ.ಸಿ.ಜಿ.)
- ಎದೆಯ ಎಕ್ಸ್ ರೇ
- ತಲೆಯ ಸಿ.ಟಿ.ಸ್ಕ್ಯಾನ್
ಇವಿಷ್ಟು ಎಲ್ಲಾ ಪಾರ್ಶ್ವವಾಯು ರೋಗಿಗಳಲ್ಲಿ ಮಾಡಲೇಬೇಕಾದ ಪರೀಕ್ಷೆಗಳು. ಇದಲ್ಲದೇ ಇನ್ನೂ ವಿವಿಧ ರೋಗಲಕ್ಷಣಗಳಿಗನುಸಾರವಾಗಿ ಎಮ್.ಆರ್.ಐ. ಸ್ಕ್ಯಾನ್ ಸೇರಿದಂತೆ ಬೇರೆ ಬೇರೆ ಪರೀಕ್ಷೆಗಳನ್ನೂ ಮಾಡಬೇಕಾಗುವುದು.
ಆದರೆ ಇಲ್ಲಿ ಪ್ರಮುಖವಾಗಿ ನೆನಪಿಟ್ಟುಕೊಳ್ಳಬೇಕಾದ ಅಂಶವೆಂದರೆ, ರೋಗಿಗೆ ಈ ಮೇಲ್ಕಂಡ ಲಕ್ಷಣಗಳು ಶುರುವಾಗಿ 4.5 ಗಂಟೆಗಳವರೆಗೆ ಮಾತ್ರ ಸರಿಯಾದ ಚಿಕಿತ್ಸೆಯನ್ನು ಸಾಧ್ಯವಾಗುತ್ತದೆ. ಅದಕ್ಕೆ ರೋಗಿಗೆ ಪಾರ್ಶ್ವವಾಯುವಿನ ಲಕ್ಷಣಗಳು ಶುರುವಾದ 45ನಿಮಿಷಗಳಲ್ಲಿ ಸಿ.ಟಿ.ಸ್ಕ್ಯಾನ್ ನ ಪೂರ್ತಿ ವಿಶ್ಲೇಷಣೆ ಮಾಡಿ 1 ಗಂಟೆಯಲ್ಲಿ ಅದಕ್ಕೆ ತಕ್ಕ ಪ್ರತ್ಯೇಕ ಚಿಕಿತ್ಸೆ ಶುರು ಮಾಡಬೇಕಾಗುತ್ತದೆ.
ಚಿಕಿತ್ಸೆ
ಅತೀ ಸಾಮಾನ್ಯವಾಗಿ ರಕ್ತ ಹೆಪ್ಪುಗಟ್ಟುವಿಕೆಯ ಪಾರ್ಶ್ವವಾಯುಗಳು ಕಂಡುಬರುವ ಹಿನ್ನೆಲೆಯಲ್ಲಿ, ರಿಕಾಂಬಿನೆಂಟ್ ಟಿಶ್ಯೂ ಪ್ಲಾಸ್ಮಿನೋಜೆನ್ ಆಕ್ಟಿವೇಟರ್( rtPA) ನ ಪಾತ್ರ ಈ ಪಾರ್ಶ್ವವಾಯುವಿನ ರೋಗಿಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನೂ ರೋಗಿ ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ ರೋಗಿಯ ಪರಿಸ್ಥಿತಿಯ ಅನುಸಾರವಾಗಿ, ನಿರ್ಜಲೀಕರಣ, ಕಡಿಮೆ ಆಮ್ಲಜನಕ, ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ, ರಕ್ತದೊತ್ತಡ ಗಳನ್ನು ಗುರಿಯಾಗಿಸಿ ಚಿಕಿತ್ಸೆ ನೀಡಲಾಗುತ್ತದೆ.
ಆದರೆ, ರಕ್ತ ಹೆಪ್ಪುಗಟ್ಟುವಿಕೆಯ ಪಾರ್ಶ್ವವಾಯು ಶುರುವಾದ 4.5 ಗಂಟೆಗಳಲ್ಲಿ (rtPA)ಚಿಕಿತ್ಸೆ ನೀಡದೇ ಹೋದರೆ ಜೀವನವಿಡೀ ಪಾರ್ಶ್ವವಾಯುವಿಗೆ ಗುರಿಯಾಗಬೇಕಾಗುತ್ತದೆ. ಈ ಚಿಕಿತ್ಸೆ ಕೊಂಚ ದುಬಾರಿಯೇ ಆದರೂ, ಚಿಕಿತ್ಸೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಪಾಶ್ರ್ವವಾಯುವಿನಿಂದ ಮರಳಿ ಸ್ವಾಧೀನ ಪಡೆದುಕೊಳ್ಳಬಹುದು.
ಇನ್ನೂ ರಕ್ತಸ್ರಾವದ ಪಾರ್ಶ್ವವಾಯುಗಳು, ಇನ್ನೂ ಹೆಚ್ಚಿನ (ಸಿ.ಟಿ.ಆಂಜಿಯೋಗ್ರಾಮ್, ಎಮ್.ಆರ್.ಆಂಜಿಯೋಗ್ರಾಮ್ ನಂತಹ) ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. ನಂತರ ರಕ್ತಸ್ರಾವ ಅಧಿಕವಿದ್ದರೆ ಅದನ್ನು ಹೊರಗೆ ತೆಗೆಯಲು ಮತ್ತು ಗಾಯಗೊಂಡ ರಕ್ತನಾಳವನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ಒಳಗಾಗಬೇಕಾಗುತ್ತದೆ. ಇನ್ನೂ ಅತಿ ಲಘು ರಕ್ತ ಸ್ರಾವಗಳು ತಾನಾಗೇ ಮೊಟಕಾಗುತ್ತವೆ. ನಂತರ, ಸ್ವಾಧೀನ ಕಳೆದುಕೊಂಡ ಪ್ರತ್ಯೇಕ ಅಂಗಗಳು ಮರಳಿ ಸ್ವಾಧೀನ ಪಡೆದುಕೊಳ್ಳಲು ಫಿಜಿಯೋಥೆರಪಿಗೆ ಒಳಗಾಗಬೇಕಾಗುತ್ತದೆ.
ಮುನ್ನೆಚ್ಚರಿಕಾ ಕ್ರಮಗಳು
- ಪಾಶ್ರ್ವವಾಯುವಿನ ಲಕ್ಷಣಗಳ ಅರಿವು ಪ್ರತಿಯೊಬ್ಬರಲ್ಲೂ ಇರದು, ಆದರೆ ಅವುಗಳನ್ನು ಅರಿತರೆ ಅಸ್ವಾಧೀನಗೊಂಡ ಒಬ್ಬ ವ್ಯಕ್ತಿಯ ಅಂಗಾಂಗಗಳನ್ನು ಮರಳಿ ಪಡೆಯಲು ಅತ್ಯಂತ ಸಹಕಾರಿಯಾಗುತ್ತದೆ.
- ಪಾಶ್ರ್ವವಾಯುವಿನ ಲಕ್ಷಣಗಳು ಕಂಡ ತಕ್ಣವೇ ತ್ವರಿತಗತಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯುವುದು ಬಹುಮುಖ್ಯವಾಗುತ್ತದೆ.
- ಇನ್ನು ಪಾಶ್ರ್ವವಾಯುವಿಗೆ ಕಾರಣವಾಗುವ ಎಲ್ಲಾ ಅಪಾಯಕಾರಿ ಅಂಶಗಳಿಂದ ದೂರವಿದ್ದರೆ, ಪಾಶ್ರ್ವವಾಯುವಿನ ಜೊತೆಗೆ ಇನ್ನೂ ಹಲವು ಅಸಾಂಕ್ರಾಮಿಕ ರೋಗಗಳಿಂದ ದೂರವಿರಬಹುದು.
-ಡಾ.ಸಂತೋಷ್ ಕೆ. ಬಿ. ಶಿವಮೊಗ್ಗ
santhosh.achar15892@gmail.com

ದಿನದ ಸುದ್ದಿ
ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ | ಭದ್ರಾ ನಾಲೆ ನೀರು ನಿರ್ವಹಣೆ
ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಗುರುವಾರ(ಫೆ.19) ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಾಲೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ನಾಲೆಯುದ್ದಕ್ಕೂ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಅನಧಿಕೃತವಾಗಿ ನೀರು ಎತ್ತುವವರ ಮೋಟಾರ್‌ಗಳನ್ನು ವಶಪಡಿಸಿಕೊಳ್ಳಲಾಗುವುದು.
ಪ್ರಿಪೇಯ್ಡ್ ಆಟೋಗಳನ್ನು ಚಾಲ್ತಿಗೊಳಿಸಿದ್ದು, ಇದಕ್ಕೆ ರೂ.38/-ಶುಲ್ಕ ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶೇಖರ್ ಹೆಚ್.ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಂಕಣ
Indian birthwort: ಪರಮಾತ್ಮನ ಹೆಸರಲ್ಲೇ ಇರುವ ದಿವ್ಯೌಷದ ಈಶ್ವರ ಬಳ್ಳಿ ಬಗ್ಗೆ ಗೊತ್ತೇ?
‘ಈಶ್ವರ’ ಎಂದ ಕೂಡಲೇ ಪರಮಾತ್ಮನನ್ನೆ ನೆನಪಿಸಿಕೊಳ್ಳೋ ನಮಗೆ ಅದೇ ಹೆಸರಿನಲ್ಲಿ ದಿವ್ಯೌಷಧಿ ಇದೆ ಎಂಬುದು ಎಷ್ಟು ಜನರಿಗೆ ತಿಳಿದೀತು? ಹೌದು! ಪರಮಾತ್ಮನ ಹೆಸರಿನಲ್ಲೇ ಒಂದು ಗಿಡಮೂಲಿಕೆ ಇದೆ (Indian birthwort). ಇದರ ವಿಶೇಷತೆ ಏನು? ಅದರಿಂದಾಗುವ ಪ್ರಯೋಜನಗಳೇನು? ಆರೋಗ್ಯದ ಮೇಲೆ ಬೀರುವ ಪ್ರಬಾವಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಈ ಬಳ್ಳಿಯನ್ನು ಹೆಚ್ಚಾಗಿ ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಬಹುದಾಗಿದೆ. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಸಾಮಾನ್ಯವಾಗಿ ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿಯಾಗಿದ್ದು, ಇದರ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇನ್ನೂ ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರುತ್ತದೆ.
ಈಶ್ವರ ಬಳ್ಳಿ (Indian birthwort)ಯ ಪೌರಾಣಿಕ ಹಿನ್ನೆಲೆ:
ನಮ್ಮೆಲ್ಲರಿಗೂ ತಿಳಿದಂತೆ ಶಿವ ಸಮುದ್ರ ಮಂಥನ ಮಾಡುವಾಗ ಹಾಲಾಹಲ (ವಿಷ) ಉತ್ಪತ್ತಿಯಾಯಿತು. ಆ ವಿಷ ಯಾರಿಗೂ ತೊಂದರೆಯಾಗಬಾರದೆಂದು ತಾನೇ ಅದನ್ನು ಕುಡಿದ. ಇದನ್ನು ನೋಡಿದ ಪಾರ್ವತಿ ದೇವಿ ಆ ವಿಷ ತನ್ನ ಪತಿಯ ಹೊಟ್ಟೆ ಸೇರಬಾರದೆಂದು ಆತನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಒಳ ಹೋಗಲಿಲ್ಲ. ವಿಷದ ಪ್ರಭಾವದಿಂದ ಕುತ್ತಿಗೆ ನೀಲ ವರ್ಣವಾಯಿತು. ಶಿವ ನೀಲಕಂಠನಾದ. ಶಿವ ವಿಷ ಕುಡಿದರೂ ಶಿವನಿಗೆ ಏನೂ ಆಗಲಿಲ್ಲ. ವಿಷವನ್ನು ನಿರ್ವಿಷ ಮಾಡುವ ಗುಣ ಶಿವನಿಗಿದ್ದಂತೆ ಈ ಗಿಡಕ್ಕೂ ಇರುವ ಕಾರಣ ‘ಈಶ್ವರ’ ಎಂಬ ಹೆಸರು ಈ ವನಸ್ಪತಿಗೆ ಇಟ್ಟಿದ್ದಾರೆ.
ಇದನ್ನೂ ಓದಿ: ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ
‘ಈಶ್ವರ’ ಬಳ್ಳಿ ಮತ್ತು ಅದರ ಫಲ ನೋಡಲು ಹೇಗಿರುತ್ತದೆ?
ಕೆಲ ‘ಈಶ್ವರ’ ಬಳ್ಳಿಯು ಮರದಂತೆ ಉದ್ದಕ್ಕೆ ಏರುತ್ತದೆ. ಮತ್ತಷ್ಟು ಬಳ್ಳಿಯು ಪೊದೆಯಾಗಿ ಆವರಿಸಿಕೊಳ್ಳುತ್ತದೆ. ಸ್ವಲ್ಪ ಉದ್ದ ಆಯತಾಕಾರದ ಎಲೆಗಳು. ಎಲೆಗಳು ಅಲ್ಲಾಡಿದರೆ ಪರಿಮಳ ಸೂಸುತ್ತದೆ. ಎಲೆಯನ್ನು ಕಿವಿಚಿದರೂ ಪರಿಮಳ ಬರುತ್ತದೆ. ಹೂಗಳು ಬಾಯಿ ತೆರೆದ ಹಕ್ಕಿಗಳಂತೆ ಕಂಡುಬರುತ್ತದೆ. ಫಲಗಳು ಉದ್ದ ಹಾಗೂ ಸ್ವಲ್ಪ ದುಂಡಾಗಿ ಇರುತ್ತದೆ. ಫಲ ಬೆಳೆದು ಒಡೆದಾಗ ತಲೆ ಕೆಳಗಾಗಿ ಬಿಡಿಸಿದ ಪ್ಯಾರಾಚೂಟ್‌ನಂತೆ ಕಾಣುತ್ತದೆ. ಅದರೊಳಗೆ ತೆಳುವಾದ ತ್ರಿಕೋಣಾಕಾರದ ಬೀಜಗಳು ಇರುತ್ತದೆ.
‘ಈಶ್ವರ’ ಬಳ್ಳಿ (Indian birthwort)ಯಿಂದ ಆಗುವ ಪ್ರಯೋಜನಗಳೇನು?
ಭಾರತದ ಎಲ್ಲಾ ಕಡೆ ಕಂಡು ಬರುವ ಈಶ್ವರ ಬಳ್ಳಿಯ ಬೇರು, ಎಲೆಗಳು ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಕ್ರಿಮಿ ಬಾಧೆ, ಕಫ ಬಾಧೆ, ಸ್ತ್ರೀಯರ ಕೆಲವು ತೊಂದರೆಗಳಲ್ಲಿ, ವಿಷ ಚಿಕಿತ್ಸೆಯಲ್ಲಿ ವಿಶೇಷವಾಗಿ ಇದನ್ನು ಉಪಯೋಗಿಸಲ್ಪಡುತ್ತದೆ.
ಜೇಡ, ಚೇಳು, ಇಲಿ ಕಚ್ಚಿದರೆ: ಇದರ 3ಗ್ರಾಂ ಬೇರನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಕುಡಿಸಬೇಕು ಹಾಗೂ ಅದರ ಎಲೆಯನ್ನು ನೀರಲ್ಲಿ ಅರೆದು ಕಚ್ಚಿದಲ್ಲಿಗೆ ಲೇಪಿಸಬೇಕು.
ತಲೆ ನೋವಿಗೆ ರಾಮಬಾಣ: ಈಶ್ವರ ಬಳ್ಳಿಯ ಎಲೆಯಲ್ಲಿ 10 ಗ್ರಾಂ ರಸ ತೆಗೆದು, 3ಗ್ರಾಂ ಅರಿಶಿನ ಪುಡಿ ಸೇರಿಸಿ ಕುಡಿಯುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಗಂಟುನೋವು, ಬಿಳಿ ಮಚ್ಚೆಗಳು: ಈ ಎಲೆಯನ್ನು ನೀರಲ್ಲಿ ಅರೆದು ಗಂಟುನೋವು ಅಥವಾ ಬಿಳಿ ಮಚ್ಚೆಗಳ ಮೇಲೆ ಹಚ್ಚುತ್ತ ಬಂದರೆ ಕ್ರಮೇಣ ವಾಸಿಯಾಗುತ್ತದೆ.
ಕೆಮ್ಮು ಕಫಕ್ಕೆ ಔಷಧಿ: ಇದರ ಎಲೆಯ ಜ್ಯೂಸ್ ತೆಗೆದು 15 ಎಂಎಲ್ ನಷ್ಟು ಕುಡಿಸುವುದರಿಂದ ಕಡಿಮೆಯಾಗುವುದು. ಕೆಲವೊಮ್ಮೆ ಈ ಎಲೆಯ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಕಫ ವಾಂತಿಯಾಗಿ ಕರಗಿ ಹೋಗುತ್ತದೆ. ಕಫ ಜಾಸ್ತಿ ಇರುವಾಗ ಸಾಮಾನ್ಯವಾಗಿ ಅಮೃತಾಂಜನ, ವಿಕ್ಸ್ ಎದೆಗೆ ಹಚ್ಚುತ್ತಾರೆ. ಅದೇ ರೀತಿ ಎಲೆಯನ್ನು ಅರೆದು ಎದೆಗೆ ಹಚ್ಚಬಹುದು.
ಮುಟ್ಟಿನ ದೋಷ ನಿವಾರಣೆ: ಹೆಣ್ಣುಮಕ್ಕಳ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ 10ಗ್ರಾಂ ಈಶ್ವರ ಬೇರಿನ ಕಷಾಯ ಮಾಡಿ (30 ರಿಂದ 40 ಎಂ.ಎಲ್) ಕುಡಿಸಬೇಕು.
ಹೊಟ್ಟೆ ಕ್ರಿಮಿ ಬಾಧೆ: 5-10 ಮಿಲಿ ಎಲೆರಸವನ್ನು 3 ದಿನ ಕುಡಿಯುವುದರಿಂದ ಕಡಿಮೆಯಾಗುವುದು.
ಜ್ವರಕ್ಕೆ ದಿವ್ಯೌಷಧಿ: 5 ಗ್ರಾಂ ಈಶ್ವರ ಬೇರನ್ನು ಕಷಾಯ ಮಾಡಿ ಅದಕ್ಕೆ 1/2 ಚಮಚ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಶರೀರ ಬಿಸಿ ಆಗಿ ಚಳಿಯಿಂದ ಕೂಡಿದ ಜ್ವರವಿದ್ದರೆ ಈಶ್ವರ ಬೇರಿನ ಕಷಾಯದೊಂದಿಗೆ ಈಶ್ವರ ಬೇರಿನ ಎಲೆ ರಸಕ್ಕೆ ಹಿಪ್ಪಿಯನ್ನು ಪುಡಿಮಾಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಸರ್ಪ ಸುತ್ತಿಗೆ ರಾಮಬಾಣ: ಇತ್ತೀಚೆಗೆ ಸರ್ಪ ಸುತ್ತಿಗೆ ಅನೇಕ ಔಷಧಿಗಳಿದ್ದರು ಈಶ್ವರ ಬೇರು ಮತ್ತು ನೀಲಿ ಸೊಪ್ಪನ್ನು ಸೇರಿಸಿ ಅರೆದು ಹಚ್ಚುವುದರಿಂದ ಉರಿ ನೋವು ಕಡಿಮೆಯಾಗುವುದು.
ದೃಷ್ಟಿ ದೋಷ ನಿವಾರಣೆ: ಇದರ ಬೇರನ್ನು ನಯವಾಗಿ ಚೂರ್ಣಮಾಡಿ ಅದಕ್ಕೆ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆ: ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ನಯವಾಗಿ ಚೂರ್ಣಿಸಬೇಕು. ನಂತರ 2 ರಿಂದ 2.5 ಗ್ರಾಂ ಚೂರ್ಣವನ್ನು ಸೇವಿಸಿ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆಯಾಗುತ್ತದೆ.
ಹೀಗೆ ಈಶ್ವರ ಬೇರು (Indian birthwort) ಮತ್ತು ಅದರ ಎಲೆಯಲ್ಲಿ ಅಡಗಿರುವ ದಿವ್ಯೌಷಧಿ ಅಪಾರ. ಅದರಲ್ಲಿ ತೀಕ್ಷ ಗುಣಗಳುಳ್ಳ ಮದ್ದಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಯಾವುದೇ ಔಷಧಿಯಾದರು ಉಪಯೋಗಿಸು ಮುನ್ನ ಒಮ್ಮೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ.




